ಕಾದಂಬರಿ : ಕಾಲಗರ್ಭ – ಚರಣ 7

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)

ಮಾರನೆಯ ದಿನ ಗೆಳೆಯನಿಂದ ವಿಷಯ ತಿಳಿದು ನೀಲಕಂಠಪ್ಪನವರು ”ಗಂಗೂ ವಯಸ್ಸಿನಲ್ಲಿ ಚಿಕ್ಕವನಾದರೂ ಆಲೋಚನೆಯಲ್ಲಿ ಹಿರಿತನ ತೋರಿದ್ದಾನೆ” ಎಂದರು. ಹಾಗೇ ಹಿಂದಿನ ದಿನ ತಮ್ಮ ಮನೆಯಲ್ಲಿ ಯೋಚಿಸಿಕೊಂಡದ್ದನ್ನು ಗೆಳೆಯನೊಂದಿಗೆ ಹಂಚಿಕೊಂಡರಾದರೂ ಏನೇ ಆಗಲಿ ಮತ್ತೊಂದು ಸಾರಿ ಅಳಿಯನೊಂದಿಗೆ ಮಾತನಾಡುತ್ತೇನೆಂದರು.

ಇದೆಲ್ಲ ಆದ ಮೂರುದಿನಗಳೊಳಗೆ ನೀಲಕಂಠಪ್ಪನವರ ಮನೆಯಲ್ಲೇ ಎಲ್ಲರೂ ಸೇರುವುದೆಂದು ತೀರ್ಮಾನವಾಯಿತು. ಅದರಂತೆ ಬೆಳಗ್ಗೆ ಹತ್ತು ಗಂಟೆಗೆಲ್ಲ ತಮ್ಮ ವೈಯಕ್ತಿಕ ಕೆಲಸಕಾರ್ಯಗಳನ್ನು ಮುಗಿಸಿ ಎಲ್ಲರೂ ಬಂದರು. ನೀಲಕಂಠಪ್ಪನವರದ್ದೇ ಸಾರಥ್ಯ. ಅವರು ಮೊದಲು ಕೇಳಿದ್ದೇ ಮಾದೇವಿ ಮತ್ತು ಚಂದ್ರಿಕಾರನ್ನು. ಅವರಿಬ್ಬರೂ ಗುರುಹಿರಿಯರು ಎಲ್ಲಿ ಮತ್ತು ಹೇಗೆ ನಿರ್ಧರಿಸುತ್ತಾರೋ ಅದಕ್ಕೆ ತಾವಿಬ್ಬರೂ ಬದ್ಧರೆಂದು ಸ್ಪಷ್ಟವಾಗಿ ತಮ್ಮ ನಿಲುವನ್ನು ತಿಳಿಸಿದರು. ಜಗದೀಶಪ್ಪನವರು ”ಮಾವಾ ನೀವು ಮೊದಲು ಹೇಳಿದಂತೆ ಲಗ್ನಪತ್ರಿಕೆ ಕಾರ್ಯ ಈ ಮನೆಯಲ್ಲೇ ಮಾಡೋಣ. ಇನ್ನು ಮದುವೆಯ ಜಾಗದ ಬಗ್ಗೆ ಮಹೇಶಪ್ಪ ಮತ್ತು ಸುಬ್ಬಣ್ಣ, ಗಂಗಾಧರಪ್ಪನವರು ಹೇಳಲಿ” ಎಂದರು.

”ಲಗ್ನಪತ್ರಿಕೆ ಮಾಡುವ ಸ್ಥಳದ ಬಗ್ಗೆ ನಮ್ಮದೇನೂ ತಕರಾರಿಲ್ಲ. ಆದರೆ ಮದುವೆಯ ಛತ್ರಗಳು ಕಡಿಮೆ ಅವಧಿಯಲ್ಲಿ ದೊರಕುವುದು ಕಷ್ಟ. ಒಂದು ವೇಳೆ ಸಿಕ್ಕಿದರೂ ಸಮಯದ ಅಭಾವದಿಂದ ಉಳಿದ ವ್ಯವಸ್ಥೆಯನ್ನೆಲ್ಲಾ ಒಟ್ಟಾಗಿ ಕಂಟ್ರಾಕ್ಟ್ ಕೊಡಬೇಕಾಗುತ್ತದೆ. ಅದು ಸರಿ ಹೋಗುವುದಿಲ್ಲ. ಇಲ್ಲವೇ ದೂರದ ದಿನಾಂಕ ನಿರ್ಧಾರ ಮಾಡಿದರೆ ಛತ್ರಕ್ಕೆ ಅಡ್ವಾನ್ಸ್ ಕೊಟ್ಟು ಕಾಯಬೇಕು. ಎಂದನು ಮಹೇಶ.
ಅವನ ಮಾತನ್ನು ಕೇಳಿದ ಜಗದೀಶಪ್ಪ ಬೇಡಬೇಡ ಶುಭಸ್ಯಶೀಘ್ರಂ ಎಂದಾದರೆ ಒಳ್ಳಿತೆಂಬ ಬಯಕೆ ನನ್ನದು. ಅದಕ್ಕೇನಾದರೂ ಉಪಾಯವಿದ್ದರೆ ಹುಡುಕಿ” ಎಂದರು.

ಅದುವರೆಗೂ ಎಲ್ಲರ ಮಾತುಗಳನ್ನು ಆಲಿಸುತ್ತಾ ಮೌನವಾಗಿ ಕುಳಿತಿದ್ದ ಸುಬ್ಬಣ್ಣ ”ಇದನ್ನು ನಾನು ನನ್ನ ಅಭಿಪ್ರಾಯವೆಂದು ಹೇಳುತ್ತೇನೆ. ದಯವಿಟ್ಟು ತಪ್ಪು ತಿಳಿದುಕೊಳ್ಳಬೇಡಿ. ನಿಮಗಿಷ್ಟವಾದರೆ ಸರಿ ಇಲ್ಲವಾದರೆ ನಿಮ್ಮ ತೀರ್ಮಾನಕ್ಕೆ ನಾನು ಬದ್ಧ ಹೇಳಲೇ?” ಎಂದನು.

”ಅಯ್ಯೋ ಅದಕ್ಯಾಕೆ ಅಷ್ಟೊಂದು ಸಂಕೋಚ, ಇಲ್ಲಿ ಎಲ್ಲರೂ ತಮ್ಮತಮ್ಮ ಮನದಾಳದ ಮಾತುಗಳನ್ನು ಹೇಳಿಕೊಳ್ಳಲೆಂದೇ ಸೇರಿರುವುದು. ಯಾರೂ ಹೆಚ್ಚು ಕಡಿಮೆಯಂತಿಲ್ಲ. ವಯಸ್ಸಿನಿಂದ ಹಿರಿಯನಾದ್ದರಿಂದ ಜವಾಬ್ದಾರಿ ಹೊತ್ತು ಇಲ್ಲಿ ನಾನು ಕುಳಿತಿದ್ದೇನೆ ಅಷ್ಟೇ. ಹೇಳು ಸುಬ್ಬೂ” ಎಂದರು ಗಂಗಾಧರಪ್ಪನವರು.

”ನೀವಿಬ್ಬರೂ ಬಾಲ್ಯದ ಗೆಳೆಯರು. ನೀವಿಬ್ಬರೂ ವಾಸವಿರುವ ಮನೆಗಳೇ ಸಾಕಷ್ಟು ವಿಶಾಲವಾಗಿವೆ. ಅದಕ್ಕಿಂತ ಹೆಚ್ಚಾಗಿ‌ ಈ ಊರಿನ ಅನೇಕರು ಬೇರೆಬೇರೆ ಕಡೆ ತಮ್ಮ ಬದುಕನ್ನು ಕಟ್ಟಿಕೊಳ್ಳುವ ಆಸೆಯಿಂದ ಪಟ್ಟಣ ಸೇರಿದವರು ಮಾರಿದ ಅಕ್ಕಪಕ್ಕದ ಮನೆಗಳನ್ನೇ ನೀವಿಬ್ಬರೂ ಪೈಪೋಟಿಗೆ ಬಿದ್ದವರಂತೆ ಖರೀದಿಸಿ ನಿಮ್ಮದಾಗಿಸಿಕೊಂಡಿದ್ದೀರಿ. ಅವುಗಳ ರಿಪೇರಿ ಕಾರ್ಯ ಮುಗಿದು ಬಣ್ಣ ಬಳಿದುಕೊಂಡು ಅಲಂಕಾರಗೊಂಡು ಬಾಡಿಗೆದಾರರಿಗಾಗಿ ಕಾಯುತ್ತಾ ಕುಳಿತಿವೆ. ಇದರಿಂದಾಗಿ ಇಡೀ ಓಣಿಯೇ ನಿಮ್ಮಗಳದ್ದಾಗಿದೆ. ಉದ್ದಕ್ಕೂ ಚಪ್ಪರ ಹಾಕಿಸಿ ಮಂಟಪ ಕಟ್ಟಿ ಓಲಗ ಊದಿಸಿಬಿಡಿ. ಬಂದವರಿಗೆ ಉಳಿದುಕೊಳ್ಳಲು ಎಲ್ಲಾ ರೀತಿಯಲ್ಲಿ ಅನುಕೂಲ ಹೊಂದಿರುವ ಮನೆಗಳು ಇದ್ದಾವಲ್ಲ. ಕೆಲಸಕಾರ್ಯಗಳಿಗೆ ಸಹಾಯಕರಾಗಿ ನಮ್ಮ ಒಕ್ಕಲು ಮಕ್ಕಳೇ ಇದ್ದಾರೆ. ಹಿರಿಯರು ಬದುಕಿಬಾಳಿದ ಮನೆ. ಇದಕ್ಕಿಂತ ಉತ್ತಮ ಜಾಗ ಬೇಕೇ? ಅಲ್ಲದೆ ಮದುವೆಗೆ ಹೊರಗಿನಿಂದ ಸಂಬಂಧ ಬೆಳೆಸಿದವರ್‍ಯಾರೂ ಇಲ್ಲಿಲ್ಲ. ಎಲ್ಲಾ ನಮ್ಮವರೇ. ನೀವೇನು ಹೇಳುತ್ತೀರಿ?” ಎಂದನು ಸುಬ್ಬಣ್ಣ.

ಅವನ ಮಾತುಗಳನ್ನು ಕೇಳಿದ ಎಲ್ಲರೂ ಒಂದರೆಕ್ಷಣ ಸ್ತಬ್ಧರಾಗಿಬಿಟ್ಟರು. ನಂತರ ಸಾವರಿಸಿಕೊಂಡು ನೀಲಕಂಠಪ್ಪನವರು ” ಭೇಷ್ ಸುಬ್ಬಣ್ಣಾ ! ನಮಗ್ಯಾರಿಗೂ ಹೊಳೆಯದ ಆಲೋಚನೆ ನಿನ್ನ ತಲೆಗೆ ಬಂದಿದೆ. ಇದಕ್ಕೆ ಕಾರಣ ನೀನು ಬೆಳೆಸಿಕೊಂಡ ಸಂಸ್ಕಾರ. ಇದಕ್ಕಿಂತ ಹೆಚ್ಚಿನದೇನು ನಾನು ಹೇಳಲಾರೆ. ಹೇಳಿ ನಿಮಗೆಲ್ಲರಿಗೂ ಒಪ್ಪಿಗೆಯಾ? ಮನೆಗಳ ಯಜಮಾನಿತಿಯರೂ ಸೇರಿದಂತೆ” ಎಂದು ಕೇಳಿದರು.

‘ಓ..ನಮಗೆಲ್ಲರಿಗೂ ಒಪ್ಪಿಗೆ ಇದೆ. ಮಹೇಶ ಹೇಳಿದಂತೆ ಛತ್ರಕ್ಕಾಗಿ ಪರದಾಟ ತಪ್ಪುತ್ತದೆ. ಇಲ್ಲಿ ನಮ್ಮಕೈ ನಮ್ಮಬಾಯಿ, ರೈತಾಪಿ ಜನರ ಸಹಾಯವೂ ಸಿಗುತ್ತದೆ. ಗುರುಗಳಿಗೆ ಹೇಳಿ ದಿನಾಂಕ ನಿಗದಿಪಡಿಸಿ ಲಗ್ನಪತ್ರಿಕೆಯನ್ನು ಬರೆಸಿಬಿಡೋಣ. ಕುಟುಂಬದವರೆಲ್ಲರನ್ನೂ ಆಹ್ವಾನಿಸಿಬಿಡಿ’ ಎಂದರು ಒಕ್ಕೊರಲಿನಿಂದ.

”ಆಯಿತು ಇದಕ್ಕೂ ಮೊದಲು ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರೋಣ. ಇದು ಗುರುಗಳ ಆದೇಶ. ಯಾವತ್ತು ಹೊರಡೋಣ ಗಂಗಾಧರಪ್ಪ?’ ಎಂದು ಕೇಳಿದರು ನೀಲಕಂಠಪ್ಪ.

”ಎಲ್ಲರು ಹೋಗಬೇಕಲ್ಲವಾ, ಜಮೀನಿನ ಕಡೆ ಏನಾದರೂ ವ್ಯವಸ್ಥೆಮಾಡಿ ಹೋಗಿ ಬಂದು ಬಿಡೋಣ”. ಎಂದ ಮಹೇಶ.
”ಈಗೆಲ್ಲವೂ ಸುಸೂತ್ರವಾಯಿತಲ್ಲ. ಅಡುಗೆ ರೆಡಿಯಿದೆ. ಇವತ್ತು ಎಲ್ಲರಿಗೂ ಇಲ್ಲೇ ಊಟ. ಬೆಳಗ್ಗೆಯೇ ಗೌರಳಿಗೆ ಹೇಳಿದ್ದಾಗಿದೆ” ಎಂದರು ಬಸಮ್ಮ.

ಊಟಕ್ಕೆ ಕುಳಿತಾಗ ಗಂಗಾಧರಪ್ಪ ”ಏನು ಬಸಕ್ಕಾ, ಅಳಿಯ ಬಂದಿದ್ದಾರೆಂದು ಅವರ ಜೊತೆಗೆ ಗೆಳೆಯರಿಗೂ ವಿಶೇಷ ಮಾಡಿದ ಹಾಗಿದೆ. ನೀವು ಬಡಿಸುತ್ತಿರುವ ಐಟಂಗಳನ್ನು ನೋಡಿ ಹೇಳಿದೆ” ಎಂದರು.

”ಹ್ಹೆ..ಹ್ಹೆ ಅಂಥದ್ದೇನಿಲ್ಲ ಅಣ್ಣ, ಚಿತ್ರಾನ್ನ, ಒಂದೆರಡು ಪಲ್ಯ, ಕೋಸಂಬರಿ, ಪಾಯಸ, ಬೇಳೆಸಾರು, ಅನ್ನ, ಹಪ್ಪಳ ಸಂಡಿಗೆ, ಮೊಸರು ಅಷ್ಟೇ” ನಿದಾನವಾಗಿ ಊಟಮಾಡಿ ಎಂದರು ಬಸಮ್ಮ.

”ನಿಮ್ಮ ಮನೆಯಲ್ಲಿರುವ ಹಳೆಯಕಾಲದ ಗಂಗಳಗಳನ್ನು ನೋಡಿದರೆ ಸಂತೋಷವಾಗುತ್ತದೆ ಅಕ್ಕಾ. ಎಷ್ಟು ಫಳಫಳಾಂತ ಹೊಳೆಯುತ್ತಿವೆ ನೋಡಿ, ಮಕ್ಕಳ ಕಾಲಕ್ಕೆ ಸಾಕಷ್ಟು ಆಧುನಿಕ ಸೌಕರ್ಯ ಸವಲತ್ತುಗಳನ್ನು ಬಳಸಿಕೊಂಡಿದ್ದೀರಿ. ಆದರೂ ಈ ಗಂಗಳಗಳು, ಪಾಯಸ ಹಾಕಿರುವ ಬಟ್ಟಲುಗಳು, ಚಿಕ್ಕಚಿಕ್ಕ ತಟ್ಟೆಗಳಲ್ಲಿ ಹಪ್ಪಳಸಂಡಿಗೆ, ನೀರುಕುಡಿಯಲು ಭಾರವೆನಿಸದ ಮಿಳ್ಳೆಗಳು”
ಅವರ ಮಾತನ್ನು ಮಧ್ಯದಲ್ಲೇ ತಡೆಯುತ್ತಾ ” ನಿಮ್ಮ ಮನೆಯಲ್ಲೂ ಇವೆಲ್ಲ ಇದ್ದಾವಲ್ಲ ಅಣ್ಣ” ಎಂದರು ಬಸಮ್ಮ.
”ಇವೆ ಇಷ್ಟೊಂದು ಸಂಖ್ಯೆಯಲ್ಲಿ ಇಲ್ಲ. ಅಲ್ಲವೇ ಗೌರಾ?” ಎಂದು ತಮ್ಮ ಹೆಂಡತಿಯನ್ನು ಕೇಳಿದರು.
”ಹೂ..ನಮ್ಮ ಮನೆಯ ಸೈನ್ಯಕ್ಕಿಂತ ಗಂಗೂ ಮನೆಯ ಸೈನ್ಯ ಚಿಕ್ಕದು. ಆದ್ದರಿಂದಲೇ ಇಂಥಹ ಹಳೆಯ ಸಾಮಾನುಗಳೂ ಕಡಿಮೆಯೇ ಎಂದು ತಮಾಷೆ ಮಾಡಿದರು ” ನೀಲಕಂಠಪ್ಪ.

ಹೀಗೇ ಗೆಳೆಯರ ಮಾತುಕತೆಗಳನ್ನು ಕೇಳುತ್ತಾ ಊಟಮಾಡುತ್ತಿದ್ದ ಮಹೇಶ ”ಅಪ್ಪಯ್ಯಾ ನನಗೆ ಬಹಳ ವರ್ಷಗಳಿಂದ ನಿಮ್ಮನ್ನೊಂದು ಪ್ರಶ್ನೆ ಕೇಳಬೇಕೆಂದು ಅಂದುಕೊಂಡರೂ ಅದಕ್ಕೆ ಗಳಿಗೆ ಕೂಡಿಬರಲಿಲ್ಲ. ಈಗ ಕೇಳಬೇಕೆನ್ನಿಸಿದೆ ಕೇಳಲೇ?” ಎಂದ.
”ಅದೇನಯ್ಯಾ ಅಂಥಾ ಪ್ರಶ್ನೆ? ”ಎಂದರು ನೀಲಕಂಠಪ್ಪ.
”ನೀವು ಹೀಗೆ ನಮ್ಮ ಅಪ್ಪನನ್ನು ಗಂಗೂ ಅಂತ ಬಹಳ ಆತ್ಮೀಯವಾಗಿ ಕರೆಯುತ್ತೀರಿ. ಅದರಲ್ಲಿ ತುಂಬ ಆಪ್ತತೆ ಕಂಡುಬರುತ್ತದೆ. ಆದರೆ ನಮ್ಮಪ್ಪ ನಿಮ್ಮನ್ನು ಗೆಳೆಯಾ ಎಂದೇ ಕರೆಯುತ್ತಾರಲ್ಲಾ ಏಕೆ?” ಎಂದನು ಮಹೇಶ.

”ಓಹೋ ! ಅದಾ ನಾನು ಮದುವೆಯಾದ ಹೊಸದರಲ್ಲಿ ‘ನೀಲಾ’ ಅಂತ ಜಪಮಾಡುತ್ತಿದ್ದುದನ್ನು ಕಂಡು ನಿಮ್ಮಮ್ಮ ದುಸುಮುಸು ಅಂತ ಅನ್ನುತ್ತಿದ್ದಳು. ನನಗೆ ಮೊದಮೊದಲು ಕಾರಣ ತಿಳಿಯಲಿಲ್ಲ. ಅನಂತರ ಗೊತ್ತಾಯಿತು. ನನ್ನ ಗೆಳೆಯನನ್ನು ಅವಳ ಮುಂದೆ ನಿಲ್ಲಿಸಿ ನೋಡು ‘ಇವನೇ ನನ್ನ ಫ್ರೆಂಡ್ ನೀಲಾ’ ಅಂತ ಖಾತರಿಪಡಿಸಿದೆ. ಅಂದಿನಿಂದ ಏಕೋ ಆ ರೀತಿ ಕರೆಯುವುದನ್ನು ಬಿಟ್ಟು ‘ಗೆಳೆಯ’ ಅಂತ ಕರೆಯಲಾರಂಭಿಸಿದೆ. ಅದರಲ್ಲೂ ಆಪ್ತತೆಯಿದೆ ಮಗಾ ಆದರೆ ಅವನು ಮಾತ್ರ ನನ್ನನ್ನು ಮೊದಲಿನಂತೆಯೇ ‘ಗಂಗೂ’ ಎಂದೇ ಕರೆಯುತ್ತಾನೆ” ಎಂದು ನಕ್ಕರು. ಹೀಗೇ ಒಬ್ಬರಿಗೊಬ್ಬರು ಹಳೆಯ ನೆನಪುಗಳನ್ನು ಕೆದಕುತ್ತಾ ಊಟ ಮುಗಿಸಿ ಹೊರಗಿನ ಹಾಲಿನಲ್ಲಿ ಬಂದು ಕುಳಿತರು. ಅವರುಗಳ ಮುಂದೆ ತಾಂಬೂಲದ ಹರಿವಾಣವನ್ನಿಟ್ಟು ನೀವು ಹಾಕಿಕೊಳ್ಳುತ್ತಿರಿ ನಾವು ಊಟ ಮಾಡಿ ಬರುತ್ತೇವೆ ಎಂದು ಹೆಂಗಸರೆಲ್ಲ ಒಳಗೆ ಸರಿದರು.

ಮಹೇಶ ಮತ್ತು ಸುಬ್ಬು ಅಡಿಕೆಯ ಚೂರುಗಳನ್ನು ಅಲ್ಲಿಯೇ ಇದ್ದ ಕೊಬ್ಬರಿ ಚೂರಿನೊಂದಿಗೆ ಬೆರೆಸಿ ಬಾಯಿಗೆ ಹಾಕಿಕೊಳ್ಳುತ್ತಾ ಹಿರಿಯರ ಅಪ್ಪಣೆ ಪಡೆದು ತಮ್ಮ ವಾಹನವೇರಿ ಹೊಲದ ಕಡೆಗೆ ಹೊರಟರು.

ತಾಂಬೂಲವನ್ನಿಟ್ಟಿದ್ದ ಹರಿವಾಣದತ್ತ ನೋಡಿದ ಜಗದೀಶ. ಅದರಲ್ಲಿ ಅನೇಕ ಖಾನೆಗಳಿದ್ದು ಕಲಾತ್ಮಕವಾಗಿ ತಯಾರಿಸಲಾಗಿತ್ತು. ಲವಂಗ, ಏಲಕ್ಕಿ, ಡೈಮಂಡ್ ಸಕ್ಕರೆಹರಳುಗಳು, ತುರಿದ ಕೊಬ್ಬರಿ, ಸೇರಿಸಿ ತಯಾರಿಸಿದ್ದ ಅಡಿಕೆಪುಡಿ, ಸುಣ್ಣದ ಪುಟ್ಟ ಡಬ್ಬಿ, ಶುಭ್ರವಾಗಿ ಜೋಡಿಸಿದ್ದ ವೀಳ್ಯದೆಲೆಗಳು ಜೊತೆಗೆ ಪ್ರತ್ಯೇಕವಾಗಿರಿಸಿದ್ದ ಕೊಬ್ಬರಿ ಚೂರುಗಳು, ಒಂದಿಷ್ಟು ಬೇರೆಬೇರೆ ಆಕಾರದ ಬೆಳ್ಳಿಯ ಹಲ್ಲು ಚುಚ್ಚುವ ಕಡ್ಡಿಗಳು, ಎಲ್ಲವೂ ಅಲಂಕಾರಿಕವಾಗಿದ್ದವು. ತಾನು ಮದುವೆಯಾಗಿ ಆ ಮನೆಗೆ ಅಳಿಯನಾಗಿ ಬಂದಾಗಿನಿಂದಲೂ ಎಷ್ಟೋ ಸಾರಿ ತಾಂಬೂಲದ ಆ ಹರಿವಾಣವನ್ನು ನೋಡಿದ್ದರೂ ಇಷ್ಟೊಂದು ಕೂಲಂಕುಷವಾಗಿ ಗಮನಿಸಿರಲಿಲ್ಲ. ಅದಕ್ಕೆ ಕಾರಣ ಆತನ ಪತ್ನಿ ಕಾತ್ಯಾಯಿನಿ ವೀಳ್ಯವನ್ನು ತಯಾರಿಸಿ ಮಡಿಸಿ ಕೊಡುತ್ತಿದ್ದು ಅವನದನ್ನು ಸೇವಿಸಿದ್ದ. ಅವಳ ಬಾಯಿಂದ ತಾಂಬೂಲದ ಬಗ್ಗೆ ನಮ್ಮಪ್ಪ ಹಾಗೆ ಹೇಳುತ್ತಿದ್ದರು, ಹೀಗೆ ಹೇಳುತ್ತಿದ್ದರು ಎಂಬುದನ್ನು ಕೇಳುತ್ತಲೇ ಬಂದಿದ್ದ. ಅವನಿಗೆ ಅದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕೆಂಬ ಕುತೂಹಲವಾಯಿತು. ತಡಮಾಡದೆ ಮಾವನಿಗೆ ತನ್ನ ಕುತೂಹಲ ತಣಿಸಲು ಕೋರಿದ.

ಜಗದೀಶನ ಕೋರಿಕೆಯನ್ನು ಕೇಳಿ ನೀಲಕಂಠಪ್ಪನವರಿಗೆ ಮನಸ್ಸಿನಲ್ಲಿ ಸಂತಸವಾಯಿತು. ಆದರೂ ಅಯ್ಯೋ ಅದೆಲ್ಲ ತಿಳಿದುಕೊಂಡು ಏನಾಗಬೇಕಾಗಿದೆ ಎಂದು ಉದಾಸೀನ ತೋರದೆ ಏನೋ ಅಸಕ್ತಿ ತೋರಿದರಲ್ಲಾ ಎಂದು ”ಗಂಗೂ ನಿನಗೂ ಗೊತ್ತಲ್ಲವಾ ನೀನೇ ಹೇಳು” ಎಂದು ತಮ್ಮ ಗೆಳೆಯನಿಗೆ ಪ್ರಶ್ನೆಯನ್ನು ವರ್ಗಾಯಿಸಿದರು.

”ಬೇಡಪ್ಪಾ ನಿನ್ನಷ್ಟು ವಿವರವಾಗಿ ಹೇಳಲು ನನಗೆ ಬರುವುದಿಲ್ಲ. ಅಲ್ಲದೆ ನೀನು ಬಿಡು ಯಾರಾದರು ಏನಾದರೂ ಕೇಳುತ್ತಾರೋ ಎಂಬ ನಿರೀಕ್ಷೆಯಲ್ಲೆ ಇರುತ್ತೀಯಾ. ನನಗೆಲ್ಲವೂ ತಿಳಿದಿದೆ ಎಂದು ತೋರಿಸಿಕೊಳ್ಳುವ ಒಂದು ಚಿಕ್ಕ ಅವಕಾಶವನ್ನೂ ಕಳೆದುಕೊಳ್ಳುವುದಿಲ್ಲ. ಹೂಂ ಪ್ರಾರಂಭವಾಗಲಿ ನಿನ್ನ ಪ್ರವರ” ಎಂದು ಗೆಳೆಯನನ್ನು ಛೇಡಿಸಿದರು ಗಂಗಾಧರಪ್ಪ.

”ಹೂಂ ಅನ್ನು ಅನ್ನು ನೀನಲ್ಲದೆ ಮತ್ತಾರಿಗೆ ಹೀಗೆಲ್ಲ ನನ್ನನ್ನು ಚುಡಾಯಿಸಲು ಸ್ವಾತಂತ್ರ್ಯವಿದೆ” ಎನ್ನುತ್ತಾ ತಮಗೆ ತಾಂಬೂಲ ಸೇವನೆ ಬಗ್ಗೆ ತಿಳಿದದ್ದನ್ನು ಹೇಳಲು ಪ್ರಾರಂಭಿಸಿದರು.
”ಭಾರತೀಯ ಸಂಪ್ರದಾಯದಲ್ಲಿ ತಾಂಬೂಲಕ್ಕೆ ಗೌರವದ ಸ್ಥಾನ ಕೊಡಲಾಗಿದೆ. ಪೂಜೆ, ವ್ರತ, ಶುಭಸಮಾರಂಭಗಳಲ್ಲಿ, ನಿಶ್ಚಿತಾರ್ಥ, ಮದುವೆ, ಇವುಗಳಲ್ಲಿ ತಾಂಬೂಲದ ಮಹತ್ವವಿದೆ. ಹಿಂದೆ ರಾಜರುಗಳು ಯುದ್ಧದ ಸಂದರ್ಭಗಳಲ್ಲಿ ರಣವೀಳ್ಯವೆಂದು ಇದನ್ನು ನೀಡಲಾಗುತ್ತಿತ್ತು. ಭೋಜನವಾದ ನಂತರ ಎಲೆ ಅಡಿಕೆ ಸಹಿತ ವೀಳ್ಯವನ್ನು ಸೇವಿಸುವುದು ಒಂದು ಪದ್ಧತಿಯಾಗಿದೆ. ಜೊತೆಗೆ ಮನೆ ಬಂದ ಅತಥಿಗಳಿಗೆ ಮೊದಲು ಕುಡಿಯಲು ಬಾಯಾರಿಕೆಗೆ ಪಾನೀಯವಿತ್ತು ಭೋಜನಾನಂತರ ತಾಂಬೂಲ ನೀಡುವುದು ರೂಢಿಯಾಗಿ ಇಂದಿನವರೆಗೂ ನಡೆದುಕೊಂಡು ಬಂದಿದೆ. ನಮ್ಮ ಪೂರ್ವಜರು ಕಾರ್ಯಕ್ರಮಗಳಿಗೆ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿ ಕಳಿಸುತ್ತಿರಲಿಲ್ಲ. ತಾಂಬೂಲ ಸಹಿತ ಅವರಿಗೆ ಆಹ್ವಾನ ನೀಡಿ ಆಮಂತ್ರಿಸಲಾಗುತ್ತಿತ್ತು. ಈ ಪದ್ಧತಿ ಈಗಲೂ ಅತ್ಯಂತ ಹಿರಿಯರು ಮತ್ತು ಆತ್ಮೀಯರಿಗೆ ಆಮಂತ್ರಣ ನೀಡುವಾಗ ಆಚರಣೆಯಲ್ಲಿದೆ.

ಸೇವಿಸುವ ತಾಂಬೂಲದಲ್ಲಿ ವೀಳ್ಯದೆಲೆಯ ಪಾತ್ರ ಮಹತ್ವದ್ದು. ಎಲೆಯ ತುದಿಯಲ್ಲಿ ಲಕ್ಷ್ಮೀದೇವಿಯ ವಾಸ, ಅದರ ಬಲಭಾಗದಲ್ಲಿ ಬ್ರಹ್ಮ,ಮಧ್ಯದಲ್ಲಿ ಸರಸ್ವತಿ, ಎಡಭಾಗದಲ್ಲಿ ಪಾರ್ವತಿ, ಅದರ ದಂಟಿನಲ್ಲಿ ವಿಷ್ಣು, ಹಿಂಭಾಗದಲ್ಲಿ ಚಂದ್ರ ಎಲ್ಲ ಅಂಚುಗಳಲ್ಲಿ ಪರಶಿವನು ಇರುತ್ತಾನೆಂದು ನಂಬಿಕೆ. ತಾಂಬೂಲ ಸೇವಿಸುವಾಗ ಅದರ ತುದಿ ಮತ್ತು ತೊಟ್ಟನ್ನು ತೆಗೆದು ಹಾಕಿಕೊಳ್ಳುತ್ತಾರೆ. ಏಕೆಂದರೆ ಅದರ ತೊಟ್ಟಿನಲ್ಲಿ ದರಿದ್ರಲಕ್ಷ್ಮಿ ಮತ್ತು ಅಹಂಕಾರ ದೇವತೆಗಳು ಇರುತ್ತಾರೆಂದು ನಂಬಿಕೆ. ಎಲೆಯ ಮಧ್ಯಭಾಗದಲ್ಲಿ ಮನ್ಮಥನ ವಾಸವಂತೆ. ಹೀಗೆ ಎಲ್ಲ ದೇವತೆಗಳು ಇರುವುದರಿಂದ ವೀಳ್ಯದೆಲೆ ತಾಂಬೂಲಕ್ಕೆ ತುಂಬ ಮಹತ್ವ ಕೊಟ್ಟಿದ್ದಾರೆ.

ತಾಂಬೂಲವನ್ನು ಕೊಡುವುದು, ತೆಗೆದುಕೊಳ್ಳುವುದು ಗೌರವಯುತವಾಗಿರಬೇಕು. ಅದರಲ್ಲೂ ಫಲಸಹಿತ ತಾಂಬೂಲ, ಪೂರ್ಣಫಲತಾಂಬೂಲ, ಸಾಮೂಹಿಕ ತಾಂಬೂಲ ಎಂದು ವಿವಿಧ ರೀತಿಗಳುಂಟು. ಕನಿಷ್ಠವೆಂದರೆ ಎರಡು ವೀಳ್ಯದೆಲೆ, ಎರಡು ಅಡಿಕೆ, ಫಲಗಳು, ತೆಂಗಿನಕಾಯಿ, ಯಥಾಶಕ್ತಿ ದಕ್ಷಿಣೆಯಿಟ್ಟು ಕೊಡಬೇಕು. ಇಷ್ಟು ತಿಳಿದುಕೊಂಡರೆ ಸಾಕು. ಈಗ ಯಾವುದೂ ಹೆಚ್ಚಿಗೆ ಯಾವುದೂ ಕಡಿಮೆಯಿಲ್ಲದಂತೆ ತಾಂಬೂಲದ ಪರಿಕರಗಳನ್ನು ಹಾಕಿ ಒಂದು ಬೀಡಾ ತಯಾರಿಸಿದ್ದೇನೆ. ತೆಗೆದುಕೊಳ್ಳಿ, ತಿಂದು ಆನಂದಿಸಿ” ಎಂದು ಮಾತನಾಡುತ್ತಲೇ ತಯಾರಿಸಿದ್ದ ಬೀಡಾವನ್ನು ಅಳಿಯನಿಗಿತ್ತರು ನೀಲಕಂಠಪ್ಪ.

ಊಟ ಮುಗಿಸಿ ಬಂದ ಹೆಣ್ಣುಮಕ್ಕಳು ತಾಂಬೂಲದ ಹರಿವಾಣದತ್ತ ನೋಡಿ ”ಇದೇನು ಮಾತನ ಭರದಲ್ಲಿ ಅದರಲ್ಲಿರಿಸಿದ್ದ ಎರಡು ಕವಳಿಗೆ ವೀಳ್ಯದೆಲೆಯನ್ನು ಮೂರೇಜನ ಖಾಲಿ ಮಾಡಿದ್ದೀರಾ? ನೀವೇನು ತಾಂಬೂಲವೆಂದು ಹಾಕಿಕೊಂಡಿರೋ ಅಥವಾ ಹಸುಗಳು ಸೊಪ್ಪು ತಿನ್ನುವಂತೆ ಮೆದ್ದುಬಿಟ್ಟಿರೋ?” ಎಂದು ಟೀಕಿಸಿದರು ಬಸಮ್ಮ.

”ಮಾರಾಯ್ತೀ, ನಮ್ಮ ಅಳಿಯಂದಿರು ತಾಂಬೂಲದ ಮಹತ್ವದ ಬಗ್ಗೆ ತಿಳಿದುಕೊಳ್ಳಬೇಕೆಂಬ ಉತ್ಸುಕತೆ ತೋರಿದರು. ಅವರಿಗೆ ಅದರ ಬಗ್ಗೆ ವಿವರವಾಗಿ ಹೇಳುತ್ತಲೇ ನಾನು ಒಂದೆರಡು ಹೆಚ್ಚಿಗೆ ಬೀಡಾ ಮಾಡಿ ಹಾಕಿಕೊಂಡಿರಬಹುದು. ಅವರಿಗೂ ಎರಡು ಮಾಡಿಕೊಟ್ಟೆ. ಉಳಿದದ್ದು ಎದುರಿಗೆ ಕುಳಿತಿದ್ದಾನಲ್ಲಾ ನನ್ನ ಗೆಳೆಯ ಅವನು ಲೆಕ್ಕವಿಡಲಾರದೆ ತಿಂದಿರಬಹುದು” ಎಂದು ನಗುತ್ತಾ ಹೇಳಿದರು ನೀಲಕಂಠಪ್ಪ. ಅವರ ಹೇಳಿಕೆಗೆ ಅಲ್ಲಿದ್ದವರು ದನಿಗೂಡಿಸಿದರು. ಬಾಯಿತುಂಬ ಕವಳ ತುಂಬಿಕೊಂಡು ಮಾತನಾಡಲಾಗದೆ ಸುಮ್ಮನೆ ಕುಳಿತಿದ್ದ ಗಂಗಾಧರಪ್ಪನವರ ಕಡೆ ಕಣ್ಣು ಹಾಯಿಸುತ್ತ ಮುಖದ ತುಂಬ ನಗೆ ಚೆಲ್ಲುತ್ತಾ ತಾಂಬೂಲದ ಹರಿವಾಣವನ್ನೆತ್ತಿಕೊಂಡು ಹೆಣ್ಣುಮಕ್ಕಳೆಲ್ಲ ಅಲ್ಲಿಂದ ನಿರ್ಗಮಿಸಿದರು.

ಅಳಿಯ, ಮಗಳು, ಮತ್ತು ಗೆಳೆಯರ ಮನೆಯವರನ್ನೆಲ್ಲ ಬೀಳ್ಕೊಟ್ಟು ಒಳಬಂದರು ನೀಲಕಂಠಪ್ಪ. ಅಲ್ಲಿ ನಿಂತಿದ್ದ ದೇವಿಯನ್ನು ನೋಡಿದವರೇ ”ಕೂಸೇ ಒಂದು ಲೋಟ ನೀರು ತಂದುಕೊಡಮ್ಮಾ, ಕುಡಿದು ಸ್ವಲ್ಪ ಹೊತ್ತು ಹಾಗೇ ಅಡ್ಡಾಗುತ್ತೇನೆ” ಎಂದು ತಮ್ಮ ರೂಮಿನ ಕಡೆ ನಡೆದರು.

ಅಡುಗೆ ಮನೆಗೆ ಹೋಗಿ ನೀರನ್ನು ತುಂಬಿಸಿಕೊಂಡು ಜೊತೆಗೆ ಒಂದು ಮಿಳ್ಳೆಯನ್ನೂ ಹಿಡಿದು ತಾತನ ರೂಮಿಗೆ ಬಂದು ದೇವಿ ಅವರ ಕೈಗಿತ್ತಳು.

ಮೊಮ್ಮಗಳು ತಾವು ನೀರು ಕುಡಿದು ಕೊಟ್ಟ ಖಾಲಿಮಿಳ್ಳೆಯನ್ನು ಕೈಯಲ್ಲಿಡಿದೇ ನಿಂತದ್ದನ್ನು ಕಂಡು ”ಏನು ಕೂಸೇ ಇವತ್ತು ಈ ಔತಣಕೂಟದಿಂದ ಜಮೀನಿನ ಕಡೆ ಹೋಗುವುದು ನಿನಗೆ ತಪ್ಪಿಹೋಯಿತೆಂದು ಬೇಸರವಾಯ್ತೇ?” ಎಂದು ಕೇಳಿದರು ನೀಲಕಂಠಪ್ಪ.
”ಅದು ಹಾಗಲ್ಲ ತಾತ, ನಾನು ಇನ್ನುಮೇಲೆ ಜಮೀನಿನ ಕಡೆ ಹೋಗುವುದಕ್ಕಿಂತ ಗುರುತರವಾದ ಜವಾಬ್ದಾರಿ ಹೊತ್ತರೆ ಹೇಗೆಂದು ಯೋಚಿಸುತ್ತಿದ್ದೇನೆ” ಎಂದಳು ದೇವಿ.

”ಏನೆಂದೆ ಕೂಸೇ, ಮನೆಯ ಜವಾಬ್ದಾರಿ ತೆಗೆದುಕೊಂಡು ಮಕ್ಕಳುಮರಿ ಮಾಡಿಕೊಂಡು ಗೃಹಲಕ್ಷ್ಮಿ ಪಟ್ಟ ಕಟ್ಟಿಕೊಳ್ಳುತ್ತೀ ಏನು?’
”ಅದು ಬಿಡಿ ತಾತ, ನೀವೆಲ್ಲ ತಯಾರಿ ನಡೆಸಿದ್ದೀರಿ ಅದಾಗುತ್ತೆ. ನಾನೀಗ ಹೇಳಲು ಬಂದಿರುವುದು ಬೇರೇನೇ, ಬಹಳ ಹಿಂದೆ ನಾನು ಪಿ.ಯು.ಸಿ., ಸೇರಬೇಕೆಂದು ಓಡಾಡುತ್ತಿದ್ದಾಗ ಈ ಹಳ್ಳಿಯಲ್ಲೇ ಇದ್ದು ಏನನ್ನಾದರೂ ಕಲಿ, ಕಲಿಸು, ಸ್ವಸಹಾಯ ಸಂಘದ ಬಗ್ಗೆ ಪ್ರಸ್ತಾಪಿಸಿದ್ದಿರಿ ನೆನಪಿದೆಯಾ? ” ಎಂದಳು ದೇವಿ.

”ಹಾ..ಹಾಂ..ನೀನು ದಿನಾ ಮೈಸೂರಿಗೆ ಕಾಲೇಜಿಗೆಂದು ಹೋಗಿಬರುವುದು ಅಷ್ಟಾಗಿ ನಮಗಿಷ್ಟವಿರಲಿಲ್ಲ. ಅದಕ್ಕೆ ಹಾಗೆ ಹೇಳಿದ್ದೆವು. ಆದರೆ ನಿಮ್ಮ ಅಪ್ಪ, ಅಮ್ಮನನ್ನು ಒಪ್ಪಿಸಿ ಅನುಕೂಲ ಮಾಡಿಕೊಂಡು ಹೋಗಿಬಂದೇ ಪದವಿ ಗಳಿಸಿದೆ, ಕಂಪ್ಯೂಟರ್ ತರಬೇತಿ, ಗಾಡಿ ಓಡಿಸುವುದು ಎಲ್ಲವನ್ನೂ ಕಲಿತೆ. ಮದುವೆಯ ಕಾರಣದಿಂದ ನಿನ್ನನ್ನು ಕೆಲಸಕ್ಕೂ ಕಳಿಸಲಿಲ್ಲ. ಊರು, ಮನೆ, ಭೂಮಿತಾಯನ್ನು ಬಿಡಬಾರದೆಂಬ ದೃಷ್ಟಿಯಿಂದ ಸೂಕ್ತ ವರನಿಗಾಗಿ ಹುಡುಕಾಟ ನಡೆಸಿದ್ದೆವು. ಈಗ ಎಲ್ಲವೂ ಸಮವಾಗುವ ಸೂಚನೆ ಸಿಕ್ಕಿದೆ. ಈಗ ನೀನು ಸಂಘ, ಸಂಸ್ಥೆ ಅಂತ ನಿಂತರೆ ಕೂಸೇ ಪರಿಣಾಮವೇನು?” ಎಂದು ಪ್ರಶ್ನಿಸಿದರು.

”ಏನು ಪರಿಣಾಮ, ನಾನು ಕೇಳಬಹುದೇ?” ಎಂದು ರೂಮಿನೊಳಕ್ಕೆ ಬಂದರು ಬಸಮ್ಮ.
”ಅದೇ ನಾವು ನಮ್ಮ ಕೂಸು ಮೆಟ್ರಿಕ್ ಪಾಸಾಗಿ ಕಾಲೇಜಿಗೆ ಸೇರಬೇಕೆಂದಾಗ ಹೇಳಿದ್ದೆವಲ್ಲ ಇಲ್ಲೇ ಇದ್ದು ಸ್ವಸಹಾಯಸಂಘ ಬಗ್ಗೆ ಈಗದನ್ನು ಈಕೆ ಮಾಡಲು ಹೊರಟಿದ್ದಾಳೆ” ಎಂದು ಚುಟುಕಾಗಿ ವಿಷಯ ತಿಳಿಸಿದರು ನೀಲಕಂಠಪ್ಪ.

”ನನ್ನ ಪ್ರಕಾರ ಮಾಡುವುದೊಳ್ಳೆಯದೇ, ನಾವು ನಮ್ಮ ಬದುಕು ಮುಗಿಸಿ ಒಂದುದಿನ ಮರೆಯಾಗಿ ಹೋಗುವುದಕ್ಕಿಂತ ಇನ್ನೊಬ್ಬರಿಗೂ ಒಂದು ಬದುಕಿನ ದಾರಿ ತೋರಿದರೆ ನಮ್ಮ ನಂತರವೂ ನಾವು ಬದುಕಿರುತ್ತೇವೆ. ಏಕೆಂದರೆ”

ಅವರ ಮಾತನ್ನು ಮಧ್ಯದಲ್ಲೇ ತುಂಡರಿಸುತ್ತಾ ”ಹೋಲ್ಡಾನ್, ಅಜ್ಜೀ ತಲೆಮಾರಿನಿಂದ ಬೇಕಾದಷ್ಟು ಜನಕ್ಕೆ ನೆರಳಾಗಿದ್ದೀರಿ. ಬದುಕನ್ನು ಕಟ್ಟಿಕೊಟ್ಟಿದ್ದೀರಿ. ಇದೇನು ಮಹಾ” ಎಂದಳು.

”ಹ್ಹಾ..ಹ್ಹಾ.. ಇಷ್ಟೊಂದು ಓದಿದ್ದರೂ ಸಾಮಾನ್ಯ ತಿಳಿವಳಿಕೆ ಇಲ್ಲವಲ್ಲ ಪುಟ್ಟೀ, ಅದೆಲ್ಲಾ ನಮ್ಮ ಸ್ವಾರ್ಥದ್ದು, ನಮ್ಮ ಬದುಕಿಗೆ ಬೇರೆಯವರನ್ನು ಬಳಸಿಕೊಂಡೆವು ಅಷ್ಟೇ. ಅವರು ಮಾಡಿದ ಕೆಲಸಕ್ಕೆ ಕೂಲಿ ಕೊಟ್ಟಿದ್ದೇವೆ, ಕೊಡುತ್ತಿದ್ದೇವೆ. ಅವರು ಎಲ್ಲೋ ಹೊರಟುಹೋಗಬಾರದೆಂದು ನೆಲೆ ಒದಗಿಸಿ ಕಟ್ಟಿಹಾಕಿಕೊಂಡಿದ್ದೇವೆ. ಈಗ ನೀನು ಮಾಡಲು ಹೊರಟಿರುವುದು ಪ್ರಾರಂಭದಲ್ಲಿ ಸಹಾಯ ಒದಗಿಸಿದಂತಾದರೂ ಕ್ರಮೇಣ ಅವರದರಲ್ಲಿ ನುರಿತು ತಾವೇ ಸ್ವತಂತ್ರವಾಗಿ ಜೀವನ ರೂಪಿಸಿಕೊಳ್ಳಬಹುದು” ಎಂದರು ಬಸಮ್ಮ.

”ನೋಡಿದೆಯಾ ಕೂಸೇ, ನಮ್ಮ ಮನೆಯ ಐನ್‌ಸ್ಟೀನ್ ಮಾತುಗಳನ್ನು. ಅವಳನ್ನು ಬಿಟ್ಟಿದ್ದರೆ ನನ್ನನ್ನೇ ಮೀರಿಸಿಬಿಡುತ್ತಿದ್ದಳೇನೋ ”ಎಂದು ಹೇಳಿದರು ನೀಲಕಂಠಪ್ಪ.

ಈ ಕಾದಂಬರಿಯ ಹಿಂದಿನ ಚರಣ ಇಲ್ಲಿದೆ: https://www.surahonne.com/?p=40527

(ಮುಂದುವರಿಯುವುದು)
ಬಿ.ಆರ್.ನಾಗರತ್ನ, ಮೈಸೂರು

9 Responses

  1. MANJURAJ H N says:

    ಕೌಟುಂಬಿಕ ಅನ್ಯೋನ್ಯತೆ, ಹಿಂದಿನ ಕಾಲದಲಿ ಬಳಸುತಿದ್ದ ಪರಿಕರಗಳು (ಗಂಗಾಳ, ಹರಿವಾಣ…..),
    ಸಂಭಾಷಣೆಗಳಲಿ ಅಡಗಿದ ಪ್ರೀತ್ಯಾದರ, ಪಾತ್ರಗಳ ಸಹಜ ನಡೆ, ಕತೆಯ ಓಟ ಎಲ್ಲವೂ
    ಸಹಜ ಸುಂದರವಾಗಿದೆ ಮೇಡಂ. ನಾನು ಕಾದಂಬರಿಯನು ಪೂರ್ತ ಓದಿದ್ದರೂ ಹೀಗೆ ಈ ರೀತಿಯಲಿ
    ಧಾರಾವಾಹಿ ರೂಪದಲಿ ಓದುವುದು ಇನ್ನಷ್ಟು ಚೆಂದವೆನಿಸಿತು. ಹೊರಗೆ ಮಳೆಗಾಲದ ಆಪ್ಯಾಯಮಾನತೆ,
    ನನ್ನೊಳಗೆ ಕುಳು ಕುಳು ಚಳಿಯೊಂದಿಗೆ ಗರಿಗೆದರಿದ ನೆಪಗಳ, ನೆನಪುಗಳ ಪರವಶತೆ – ಎರಡೂ
    ಹಿತ ತರುತಿದೆ. ಹಾಗಾಗೇ ಇದನು ಬರೆಸುತಿದೆ……..ಶುಭವಾಗಲಿ ಮೇಡಂ.

  2. Hema Mala says:

    ಗ್ರಾಮೀಣ ಪರಿಸರದ ಮದುವೆಯ ಸಿದ್ಧತೆಗಳು, ಸಂಭ್ರಮ….ಸೊಗಸಾಗಿದೆ.

  3. ನಯನ ಬಜಕೂಡ್ಲು says:

    ಸ್ನೇಹ, ಬಾಂಧವ್ಯ, ಸಂಬಂಧ ಗಳ ಸೊಗಡನ್ನು ಸೊಗಸಾಗಿ ಬಿಚ್ಚಿಡುತ್ತದೆ ಕಥೆ

  4. ಧನ್ಯವಾದಗಳು ನಯನ ಮೇಡಂ

  5. ಶಂಕರಿ ಶರ್ಮ says:

    ಹಳೆಯ ಕಾಲದ ಗಂಗಾಳದ ಸೊಗಸು, ಅಚ್ಚುಕಟ್ಟಾಗಿ ವೀಳ್ಯದೆಲೆ ತಿನ್ನುವ ಸೊಗಸು, ಗೆಳೆಯರ ಆತ್ಮೀಯತೆ, ಗ್ರಾಮೀಣ ಪರಿಸರದಲ್ಲಿ ಮದುವೆ ಸಿದ್ಧತೆ, ಮನೆ ಮಗಳು…ಮದುಮಗಳು ಸ್ವಸಹಾಯ ಸಂಘ ಕಟ್ಟುವ ಸಿದ್ಧತೆ.. ಎಲ್ಲವೂ ಸಹಜ, ಸರಳ ನಿರೂಪಣೆಯೊಂದಿಗೆ ಖುಷಿಕೊಟ್ಟಿತು ನಾಗರತ್ನ ಮೇಡಂ.

  6. Padma Anand says:

    ಕಥೆಯ ಓಘದೊಂದಿಗೆ ಹಾಸುಹೊಕ್ಕಾಗಿ ಮೂಡಿ ಬಂದಿರುವ ತಾಂಬೂಲದ ವರ್ಣನೆ, ಬಸಮ್ಮನವರ ಯಜಮಾನಿಯ ಗರ್ವವಿರದ ಸಾತ್ವಿಕ ನಡುವಳಿಕೆ ಮುಂತಾದ ಸಕಾರಾತ್ಮಕ ವಿಷಯಗಳಿಂದ ಎಂದಿನಂತೆ ಈ ಕಂತೂ ಮುದ ನೀಡಿತು.

  7. ಧನ್ಯವಾದಗಳು ಪದ್ಮಾ ಮೇಡಂ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: