ಕಾದಂಬರಿ : ಕಾಲಗರ್ಭ – ಚರಣ 6

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)

ರೂಮಿನಲ್ಲಿ ನೆಪಮಾತ್ರಕ್ಕೆ ಒಂದು ಪುಸ್ತಕ ಹಿಡಿದು ಕುಳಿತಿದ್ದ ಮಾದೇವಿಯ ಕಿವಿಗೆ ಹಾಲಿನಲ್ಲಿ ಆಡುತ್ತಿದ್ದ ಎಲ್ಲಾ ಮಾತುಗಳೂ ಕೇಳಿಸಿದವು. ಸುಬ್ಬು ಮತ್ತು ಚಂದ್ರಳ ಪರಿಶೀಲನೆ ಫಟ್ ಎಂದು ಮುಗಿಯಿತು. ಆದರೆ ತಮ್ಮಿಬ್ಬರ ಲೆಕ್ಕಾಚಾರ ಸ್ವಲ್ಪ ಹೆಚ್ಚು ಕಾಲ ತೆಗೆದುಕೊಂಡಿತು. ಅವರ ತೀರ್ಮಾನ ಕೇಳುವವರೆಗೆ ದೇವಿಗೆ ಒಂದೊಂದು ನಿಮಿಷವೂ ಗಂಟೆಯಷ್ಟು ದೀರ್ಘವಾಗಿ ಭಾಸವಾಯಿತು. ಒಂದುವೇಳೆ ಹೊಂದಾಣಿಕೆಯ ಲೆಕ್ಕ ಕೂಡಿಬರದಿದ್ದರೆ ಜಾತಕಗಳಲ್ಲಿ ವಿಪರೀತವಾದ ನಂಬಿಕೆ ಇಟ್ಟಿರುವ ಅಜ್ಜಿ, ಅಪ್ಪ, ಅಮ್ಮ, ಮಹೇಶನ ತಾಯಿ ಪ್ರಸ್ತಾಪವನ್ನು ನಿರಾಕರಿಸಿಬಿಟ್ಟರೆ ತಾತ, ಮಹೇಶನ ತಂದೆಯವರು ಏನು ಮಾಡುತ್ತಾರೆ. ದೇವರೇ ಹಾಗಾಗದಿರಲಿ ಎಂದು ಮನಸಿನಲ್ಲೇ ದೇವರನ್ನು ಪ್ರಾರ್ಥಿಸಿದಳು. ಮೊದಲೆಲ್ಲಾ ಈ ಜಾತಕದ ಸೂತಕ ಎರಡೂ ಮನೆಗಳಲ್ಲಿ ಅಷ್ಟಾಗಿರಲಿಲ್ಲ. ಅಜ್ಜಿಯ ಹೇಳಿಕೆಯ ಪ್ರಕಾರ ತನ್ನ ಏಳು ಜನ ಅತ್ತೆಯರ ಮತ್ತು ಮಹೇಶನ ಮೂರುಜನ ಸೋದರಿಯರ ಮದುವೆಯ ವೇಳೆಯಲ್ಲಿ ಸಂಬಂಧ ಬೆಳೆಸಲು ಬಂದವರಲ್ಲಿ ಬಹುತೇಕರು ಜಾತಕದ ಜಾಡಿಗೆ ಜೋತುಬಿದ್ದಿದ್ದರಂತೆ. ಆಗ ಮಕ್ಕಳುಗಳು ಹುಟ್ಟಿದ ದಿನಾಂಕ, ವರ್ಷ, ಜನಿಸಿದ ವೇಳೆಯಷ್ಟನ್ನೇ ಗುರುತು ಹಾಕಿಸಿಕೊಂಡಿದ್ದ ಇಬ್ಬರೂ ಗೆಳೆಯರೂ ಇದೇ ಗುರುಗಳ ಕೈಯಿಗೆ ಆ ವಿವರಗಳನ್ನು ಕೊಟ್ಟು ಜಾತಕಗಳನ್ನು ಬರೆಯಿಸಿದರಂತೆ. ತನ್ನಪ್ಪ ಹುಟ್ಟಿದಾಗಲೂ ಇದೇ ರೀತಿಯಾಗಿತ್ತಂತೆ. ಮಹೇಶನ ಮನೆಯಲ್ಲೂ ಅಷ್ಟೇ. ಆ ನಂತರ ಎರಡೂ ಕುಟುಂಬಗಳಲ್ಲಿ ಹುಟ್ಟಿದ ಮಕ್ಕಳಿಗೆ ಜಾತಕ ಬರೆಸಿಟ್ಟಿದ್ದಾರೆ. ಹೂಂ ಇದೆಷ್ಟರ ಮಟ್ಟಿಗೆ ನಿಜವಾಗುತ್ತೋ..ಅದರಲ್ಲಿಯೂ ಶಿವಭಕ್ತರಾದ ನಾವು ಇದೆಲ್ಲವನ್ನೂ ತಳ್ಳಿಹಾಕಬೇಕು. ನನ್ನ ತಾತನವರ ಬಾಯಲ್ಲಿ ಎಷ್ಟೋ ಬಾರಿ ಬಸವಣ್ಣನವರ ವಚನಗಳನ್ನು ಕೇಳಿದ್ದುಂಟು. ಅದೇ ”ಎಮ್ಮವರು ಬೆಸಗೊಂಡರೆ ಶುಭಲಗ್ನವೆನ್ನಿರಯ್ಯಾ, ರಾಶಿಕೂಟ ಋಣಸಂಬಂಧ ಉಂಟೆಂದು ಹೇಳಿರಯ್ಯಾ, ಚಂದ್ರಬಲ ತಾರಾಬಲವುಂಟೆಂದು ಹೇಳಿರಯ್ಯಾ, ನಾಳಿನ ದಿನಕ್ಕಿಂದಿನ ದಿನ ಲೇಸೆಂದು ಹೇಳಿರಯ್ಯಾ, ಕೂಡಲಸಂಗಮದೇವನ ಪೂಜಿಸಿದ ಫಲ ನಿಮ್ಮದಯ್ಯಾ” ಈಗ ಹೆಚ್ಚಾಗಿ ನಂಬದಿದ್ದರೂ ಲೋಕಾರೂಢಿಗೆ ತಲೆಬಾಗಿದ್ದಾರೆ.

ಆಹಾ ಅದೆಂತದ್ದೋ ಸರ್ಪದೋಷವಂತೆ ! ಅದಕ್ಕೆ ಪೂಜೆಗೆ ಮರೆಹೋದರಾಯಿತು. ಅದಕ್ಯಾಕೆ ಚಿಂತೆ ಮಾಡಬೇಕು. ಏನಾದರಾಗಲಿ ನನ್ನ ಅಂತರಂಗದಲ್ಲಿ ಮೊದಲಿನಿಂದಲೂ ಆರಾಧಿಸಿಕೊಂಡು ಬಂದಿರುವ ಮಹೇಶನನ್ನು ಕೈಹಿಡಿಯುವ ಕಾಲ ಕೂಡಿಬಂದಿದೆ ಎಂದವಳ ಮನಹಿಗ್ಗಿತು. ಅದು ನಿರಾಸೆಯಾಗಬಾರದು..ಒಂದುವೇಳೆ ಹಿರಿಯರೇನಾದರೂ ತೆಗೆದರೆ ಹಠಮಾಡಿಯಾದರೂ ಅವರನ್ನು ಒಪ್ಪಿಸಬೇಕು. ಹೀಗೇ ಆಲೋಚನೆಯ ಲಹರಿಯಲ್ಲಿ ಮುಳುಗಿರುವಾಗಲೇ ಹೊರಗಡೆಯಿಂದ ದೇವೀ ಗುರುಗಳು ಕರೆಯುತ್ತಿದ್ದಾರೆ ಬಾರಮ್ಮಾ ಎಂಬ ಕೂಗು ಅವಳನ್ನು ವಾಸ್ತವಕ್ಕೆ ಕರೆತಂದಿತು.

ತಕ್ಷಣ ತನ್ನೆಲ್ಲ ಆಲೋಚನೆಗಳಿಗೆ ವಿರಾಮ ಹಾಕಿ ರೂಮಿನಿಂದ ಹೊರಬಂದಳು ಮಾದೇವಿ.ಗುರುಗಳ ಪಾದಕ್ಕೆ ನಮಸ್ಕರಿಸಿ ಅವರ ಮುಂದೆ ನಿಂತಳು. ಅವರು ಮಂತ್ರಾಕ್ಷತೆಯನ್ನು ಹಾಕಿ ಅವಳಿಗೆ ಶುಭಾಶೀರ್ವಾದ ಮಾಡಿದರು. ನಾನು ಬಂದ ಕೆಲಸವಾಯಿತು, ನಾನಿನ್ನು ಬರಲೇ?.. ಎಂದವರು ಒಂದು ಮಾತು ಮರೆತೆ ಎಂದರು.

ಇಬ್ಬರೂ ಗೆಳೆಯರು ‘ಏನು ಗುರುಗಳೇ?’ ಎಂದು ಕೇಳಿದರು.
‘ನೀವು ಯಾವ ರೀತಿಯ ಮದುವೆ ಮಾಡುತ್ತೀರಿ?’ ಎಂದು ಕೇಳಿದರು.
‘ಅಂದರೆ ! ನೀವು ಹೇಳಿದ್ದು ನಮಗರ್ಥವಾಗಲಿಲ್ಲ’ ಎಂದು ಪ್ರಶ್ನಿಸಿದರು ಅಲ್ಲಿದ್ದವರೆಲ್ಲರೂ.
‘ಅಂದರೆ ಸಾಂಪ್ರದಾಯಕ ರೀತಿಯಲ್ಲೇ ಮೂರುದಿನದ ಮದುವೆಯಾ? ಅಥವಾ ವಚನ ಮಾಂಗಲ್ಯದ ರೀತಿ ಸರಳ ಮದುವೆಯಾ?’ ಎಂದು ವಿವರಿಸಿದರು.

”ಛೆ..ಛೆ..ಅದೆಂಗಾಗ್ತದೆ ಗುರುಗಳೇ, ಇಬ್ಬರು ಮನೆಯವರ ಆಲೋಚನೆಗಳು ತಮಗೆ ಗೊತ್ತು. ನಾವು ಊರಿಗೆ ಹಿರಿಯನೆನ್ನಿಸಿಕೊಂಡವರು, ಊರವರೆಲ್ಲರ ಹಾರೈಕೆಗಳೂ ಬೇಕು. ಹಾಗೇ ಅವರೆಲ್ಲರಿಗೂ ಊಟೋಪಚಾರಗಳನ್ನು ಮಾಡಲೇಬೇಕು. ವಚನ ಮಾಂಗಲ್ಯವೆಂದರೆ ಅತಿ ಸರಳವಾಯ್ತು. ಅದಾಗದು” ಎಂದರು.
”ಆಯಿತು, ನಿಮ್ಮಿಚ್ಛೆಯಂತೆ, ಲಗ್ನಪತ್ರಿಕೆ ಬರೆಸುವಾಗ ಮೊದಲೇ ತಿಳಿಸಿ” ಎಂದು ಹೇಳಿ ಹೊರಡಲನುವಾದರು.

ಅದನ್ನರಿತವರಂತೆ ಬಸಮ್ಮನವರು ಮಾದೇವಿಯನ್ನು ಕಣ್ಣೋಟದಿಂದಲೇ ಕರೆದು ಅವಳ ಕೈಯಲ್ಲಿ ಕೇಸರಿ, ಬೆಲ್ಲ ಬೆರೆಸಿ ಕಾಯಿಸಿಟ್ಟಿದ್ದ ಹಾಲನ್ನು ಬೆಳ್ಳಿ ಲೋಟದಲ್ಲಿ ಹಾಕಿ ಗುರುಗಳಿಗೆ ಕೊಡಲು ಹೇಳಿದರು. ಹಾಗೆಯೇ ಫಲತಾಂಬೂಲ ಮತ್ತು ಕಾಣಿಕೆಯನ್ನಿಟ್ಟು ಸಿದ್ಧಪಡಿಸಿದ್ದ ತಟ್ಟೆಯನ್ನು ಮನೆಗಳ ಹಿರಿಯರು ಇಬ್ಬರೂ ಗೆಳೆಯರ ಕೈಗಿತ್ತರು. ಗುರುಗಳು ಹಾಲನ್ನು ಕುಡಿದ ನಂತರ ಗೆಳೆಯರು ಅವರಿಗೆ ಗೌರವ ಸಮರ್ಪಿಸಿ ನಮಸ್ಕರಿಸಿದರು. ತಮ್ಮ ಚೀಲದಲ್ಲಿ ಅವನ್ನಿರಿಸಿಕೊಂಡು ಮತ್ತೊಮ್ಮೆ ಎಲ್ಲರಿಗೂ ಶುಭಕೋರಿ ಗುರುಗಳು ಅಲ್ಲಿಂದ ನಿರ್ಗಮಿಸಿದರು.

”ಗೆಳೆಯ ನೀವುಗಳೂ ಯೋಚಿಸಿ, ನಾನು ನಮ್ಮವರೊಡನೆ ಆಲೋಚಿಸುತ್ತೇನೆ. ಏನೇ ಆಗಲಿ ಸುಗ್ಗಿಯ ಕಾಲ ಬರುವಷ್ಟರಲ್ಲಿ ಮಂಗಳಕಾರ್ಯಗಳನ್ನು ಮಾಡಿ ಮುಗಿಸಬೇಕು. ಈ ಅಂಶವನ್ನು ಗಮನದಲ್ಲಿಟ್ಟುಕೋ, ನಿನ್ನ ಅಳಿಯನನ್ನು ಕರೆಸು. ಅವನೊಡನೆಯೂ ಮಾತನಾಡಿ ದಿನಾಂಕ ನಿಗದಿಪಡಿಸೋಣ” ವೆಂದು ಹೇಳಿ ತಮ್ಮ ಪತ್ನಿ ಗೌರಮ್ಮ ಮತ್ತು ಮಂಗಳಾರೊಂದಿಗೆ ತಮ್ಮ ಮನೆಗೆ ಹೊರಟರು ಗಂಗಾಧರಪ್ಪನವರು.

”ಮಗಳೇ ಕಾತ್ಯಾಯಿನಿ, ಅಳಿಯಂದಿರಿಗೆ ಹೇಳು ಒಂದೆರಡು ದಿನ ಬಿಡುವು ಮಾಡಿಕೊಂಡು ಬರಲಿ. ಎಲ್ಲ ವಿಚಾರಗಳನ್ನು ಮಾತನಾಡಿ ಅಂತಿಮಗೊಳಿಸೋಣ. ಲಗ್ನಪತ್ರಿಕೆ ಕೆಲಸ ಮನೆ ಮಟ್ಟಿಗೆ ಸಾಕು. ನಮ್ಮ ಎರಡೂ ಮನೆಯ ಸೈನ್ಯವೇ ಸಾಕಷ್ಟು ದೊಡ್ಡದಿದೆ. ಖರ್ಚುವೆಚ್ಚಗಳ ಕಡೆ ತಲೆಕೆಡಿಸಿಕೊಳ್ಳುವುದು ಬೇಡ. ಆಕೆಯೇನೂ ಬೇರೆಯವಳೇ, ಅವಳೂ ನಮ್ಮ ಮೊಮ್ಮಗಳೇ. ಈ ಕೂಸಿನ ಜೊತೆ ಇನ್ನೊಂದು ನಮ್ಮ ಕೂಸು ಅಷ್ಟೇ‌” ಎಂದರು ನೀಲಕಂಠಪ್ಪನವರು.

ತನ್ನವರ ಮಾತನ್ನು ಕೇಳಿ ಬಸಮ್ಮನವರಿಗೆ ಸಂತಸವಾಯಿತು. ”ದೇವರು ನಿಮ್ಮನ್ನು ನೂರು ವರ್ಷ ಚೆನ್ನಾಗಿ ಇಟ್ಟಿರಲಿ. ನನ್ನ ಮನದಲ್ಲಿನ ಮಾತನ್ನೆ ನೀವಾಡಿದಿರಿ. ಕಾತ್ಯಾ ನಿನ್ನ ಮಗಳಿಗೆ ಒಡವೆ ವಸ್ತ್ರ, ಅಳಿಯನಾಗುವವನಿಗೆ ಕೊಡಮಾಡುವ ಬಟ್ಟೆಬರೆ, ಚೈನು, ಮತ್ತೇನು ಕೊಡಬೇಕೋ ಹೇಳಿಬಿಡಿ, ಸಜ್ಜು ಮಾಡಿಕೊಳ್ಳೋಣ,”ಎನ್ನುವಷ್ಟರಲ್ಲಿ,
”ಹಾ..ಹಾ..ತಡೆಯಿರಿ ಅತ್ತೆ, ನನ್ನ ಮಗಳ ಮದುವೆ, ನಾನೇನೂ ಮಾಡಬಾರದೇ? ನೀವೇ ಎಲ್ಲಾ ತೀರ್ಮಾನಿಸಿದರೆ ಹೇಗೆ” ಎಂಬ ಧ್ವನಿ ಕೇಳಿ ಅಲ್ಲಿದ್ದವರೆಲ್ಲ ಒಂದುಕ್ಷಣ ತಬ್ಬಿಬ್ಬಾದರು.

”ಅರೆ ! ಜಗದೀಶಪ್ಪಾ ನೀವ್ಯಾವಾಗ ಬಂದಿರಿ?” ಎಂದು ಕೇಳಿದರು ನೀಲಕಂಠಪ್ಪ.
”ಮಾತಿನ ಭರದಲ್ಲಿ ಮುಳುಗಿದ್ದ ನಿಮಗೆ ನಾನು ಬಂದದ್ದೂ ತಿಳಿಯಲಿಲ್ಲ. ಅಲ್ಲದೆ ಮುಂಭಾಗಿಲು ತಳ್ಳಿದೆ ಅಷ್ಟೇ, ಚಿಲಕ ಹಾಕಿರಲಿಲ್ಲ. ದೇವಿ ನನ್ನನ್ನು ನೋಡಿದಳು. ಅವಳಿಗೆ ಹೇಳಬೇಡವೆಂದು ಸನ್ನೆ ಮಾಡಿದ್ದೆ” ಎಂದೆನ್ನುತ್ತಾ ಅಲ್ಲಿ ಹಾಸಿದ್ದ ಜಮಖಾನೆಯ ಮೇಲೆ ಕುಳಿತರು.

”ಮಾವ, ಕಾತ್ಯಾಯಿನಿಯನ್ನು ಇಲ್ಲಿಗೆ ಕಳುಹಿಸಿಕೊಟ್ಟ ಮೇಲೆ ಯಾಕೋ ಮನಸ್ಸು ತಡೆಯಲಿಲ್ಲ. ಮನೆಯಲ್ಲಿ ಅಪ್ಪನನ್ನು ಗಮನಿಸಿಕೊಳ್ಳಲು ಅಮ್ಮ ಮತ್ತು ಚಂದ್ರಾಳಿಗೆ ಹೇಳಿ ಬಂದುಬಿಟ್ಟೆ. ಈಗ ಹೇಳಿ ಜಾತಕ ಕೂಡಿಬಂತೇ? ಬಂದೇ ಇರುತ್ತೆ, ಇಲ್ಲದಿದ್ದರೆ ನೀವೆಲ್ಲ ಮುಂದಿನ ಮಾತುಗಳನ್ನು ಹೇಗೆ ಆಡುತ್ತಿದ್ದಿರಿ. ನನಗೆ ಚಂದ್ರಳು ಸುಬ್ಬುವನ್ನು ಪ್ರೀತಿಸುತ್ತಿರುವ ವಿಷಯದಲ್ಲಿ ಸ್ವಲ್ಪ ಗುಮಾನಿಯಿತ್ತು. ಮಹೇಶನ ಮದುವೆ, ದೇವಿಯ ಮದುವೆಗಾಗಿ ಎರಡೂ ಕಡೆಯವರು ಬೇರೆಬೇರೆ ಕಡೆ ಪ್ರಯತ್ನ ಮಾಡುತ್ತಿದ್ದುದನ್ನು ನೋಡಿ ಅವರದ್ದಾಗಲಿ, ಆನಂತರ ಈ ವಿಷಯ ಪ್ರಸ್ತಾಪಿಸೋಣ ಎಂದುಕೊಂಡಿದ್ದೆ. ಈ ಅಂತರದಲ್ಲಿ ಅಪ್ಪನಿಗೆ ಆರೋಗ್ಯದಲ್ಲಿ ಏರುಪೇರಾಯಿತು. ಆ ಕಡೆ ಗಮನ ಕೊಡಬೇಕಾಗಿ ಬಂತು. ಏನು ಮಾಡುವುದೆಂದು ತಾಕಲಾಟವಾಗಿತ್ತು. ಈಗ ಇಲ್ಲಿ ನಡೆದಿರುವ ಸಂಗತಿ ನಿಮ್ಮೆಲ್ಲರಿಗಿಂತ ನನ್ನ ಮನಸ್ಸಿಗೇ ಹೆಚ್ಚು ತಂಪೆರೆದಿದೆ. ಇರುವ ಇಬ್ಬರು ಮಕ್ಕಳಲ್ಲಿ ನನ್ನ ಮಗ ಆಗಲೇ ನೊಗಹೊತ್ತು ಮನೆಯ ಜವಾಬ್ದಾರಿ ತೆಗೆದುಕೊಂಡವನೆ. ಇನ್ನು ಮಗಳ ಬದುಕು ಕಟ್ಟಿಕೊಡುವುದಕ್ಕೆ ನಾನಾಗಲೇ ಸಜ್ಜಾಗಿದ್ದೇನೆ. ನೀವೆಲ್ಲ ಯಾವ ಸ್ಥಳದಲ್ಲಿ ಮದುವೆ ಮಂಟಪವನ್ನು ನಿಶ್ಚಯಿಸುತ್ತೀರೋ ಅದಕ್ಕೆ ನನ್ನ ಆಕ್ಷೇಪವೇನೂ ಇಲ್ಲ. ಆದರೆ ಗಂಡಿನವರು ಏನು ಕೇಳುತ್ತಾರೋ ಕೊಡುವುದು ಬಿಡುವುದು ಅದನ್ನು ನನಗೆ ಬಿಟ್ಟುಬಿಡಿ. ಉಟೋಪಚಾರದಲ್ಲಿ ನನ್ನದೊಂದು ಪಾಲನ್ನು ತೆಗೆದುಕೊಳ್ಳಲೇಬೇಕು. ನಮ್ಮ ಮನೆಯಲ್ಲಿ ಮಗಳಿಗೆ ಮಂಗಲಸ್ನಾನ ಮಾಡಿಸಿ ಬಂಧುಬಳಗದವರೊಂದಿಗೆ ಇಲ್ಲಿಗೇ ಬಂದುಬಿಡುತ್ತೇವೆ. ಇದಕ್ಕೆ ನಿಮ್ಮ ಒಪ್ಪಿಗೆ ಬೇಕು. ಲಗ್ನಪತ್ರಿಕೆಯನ್ನು ಈ ಮನೆಯಲ್ಲೇ ಮಾಡೋಣ. ಅದಕ್ಕೆ ನನ್ನ ತಕರಾರಿಲ್ಲ. ಮಿಕ್ಕೆಲ್ಲ ನಾನು ಹೇಳಿದಂತೆ ಕೇಳಬೇಕು. ಇದು ನನ್ನ ಕರ್ತವ್ಯ. ಬೇರೆ ಕಡೆಯಾಗಿದ್ದರೆ ಮಾಡುತ್ತಿರಲಿಲ್ಲವೇ?” ಎಂದರು ಜಗದೀಶ.

ಅಳಿಯನ ಜವಾಬ್ದಾರಿಯುತ ಮಾತುಗಳನ್ನು ಕೇಳಿ ಬಸಮ್ಮನವರಿಗೆ ಹೃದಯ ತುಂಬಿಬಂತು. ನಮಗೆ ಸಿಕ್ಕಿರುವ ಅಳಿಯಂದಿರೆಲ್ಲ ಒಳ್ಳೆಯವರೇ, ಸುತ್ತಮುತ್ತಲಿನ ಫಾಸಲೆಯಲ್ಲಿರುವವರೇ, ಎಲ್ಲರ ವೃತ್ತಿಯೂ ವ್ಯವಸಾಯವೇ. ಆದರೆ ಅವರ್‍ಯಾರೂ ದಾಂಪತ್ಯದಲ್ಲಿ ನಮ್ಮ ಹಾಗೆ ಮತಿಗೇಡಿಗಳಾಗದೇ ಕೇವಲ ಒಂದೆರಡು ಮಕ್ಕಳೇ ಸಾಕು ಎಂದುಕೊಂಡು ಅವರಿಗೇ ವಿದ್ಯಾಬುದ್ಧಿ ಕಲಿಸಿ ನೆಲೆಗಳನ್ನು ಒದಗಿಸಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿದ್ದಾರೆ. ಈ ಮಕ್ಕಳದ್ದೇ ಕೊನೆಯ ಮದುವೆ. ವಿಷಯ ತಿಳಿದಿದ್ದರೂ ಸಹನೆಯಿಂದ ಕಾದಿದ್ದಾರೆ. ಹೀಗೇ ಆಲೋಚನಾಲಹರಿಯನ್ನು ಹರಿಬಿಟ್ಟಿದ್ದಾಗ ಅಳಿಯ ಜಗದೀಶನ ಕರೆ ಅವರನ್ನು ಎಚ್ಚರಿಸಿತು.

”ಅತ್ತೇ..ಅತ್ತೇ.. ನನ್ನ ಹೇಳಿಕೆಗೆ ಯಾವುದೇ ಉತ್ತರವಿಲ್ಲ. ಮಾವನವರು ತಪಸ್ಸಿಗೆ ಕುಳಿತಂತೆ ಮೌನವಾಗಿದ್ದಾರೆ” ಎಂದು ಕೇಳಿದ.
”ಹಾಗೇನಿಲ್ಲ ಅಳಿಯಂದಿರೇ, ನಮ್ಮಗಳ ಉತ್ಸಾಹದಲ್ಲಿ ನಾವು ಮಾತನಾಡಿಬಿಟ್ಟೆವು. ತಪ್ಪು ತಿಳಿಯಬೇಡಿ. ಅಲ್ಲದೆ ನಾವೆಷ್ಟು ಪುಣ್ಯ ಮಾಡಿದ್ದೆವು ಇಂಥಹ ಅಳಿಯಂದಿರನ್ನು ಪಡೆಯುವುದಕ್ಕೆ ಎಂಬ ಆಲೋಚನೆಯಲ್ಲಿದ್ದೆ ಅಷ್ಟೇ” ಎಂದರು ಬಸಮ್ಮ.

ಅಲ್ಲಯವರೆಗೆ ಮೌನವಾಗಿ ಕುಳಿತು ಎಲ್ಲವನ್ನೂ ಆಲಿಸುತ್ತಿದ್ದ ನೀಲಕಂಠಪ್ಪನವರು ”ಗಂಗೂ ಹತ್ತಿರ ಮಾತನಾಡಿ ಎಲ್ಲವನ್ನೂ ವಿವರವಾಗಿ ಹೇಳುತ್ತೇನೆ. ಬೇಸರಮಾಡಿಕೊಳ್ಳಬೇಡಿ ಅಳಿಯಂದಿರೇ, ಎಲ್ಲವೂ ನಿಮ್ಮಿಷ್ಟದಂತೆಯೇ ಆಗಲಿ” ಎಂದರು.
‘ಸರಿ, ಕಾತ್ಯಾಯಿನಿ ನಾವು ಇನ್ನು ಹೊರಡೋಣವೇ?’
‘ಅಯ್ಯೋ ! ಇದೇನು ಅವಸರ, ಕಾಫಿ ಟೀ ಏನೂ ಆಗಲೇ ಇಲ್ಲ’ ಎಂದರು ಬಸಮ್ಮ.
”ಅದೆಲ್ಲ ಬೇಡಿ ಅತ್ತೆ, ಮನೆಯಲ್ಲಿ ಅಪ್ಪನ ಸಂಗತಿ ನಿಮಗೇ ಗೊತ್ತಲ್ಲವಾ, ಆ ಡೆಂಗ್ಯೂ ಜ್ವರ ಅವರನ್ನು ಹಿಂಡಿ ಹಿಪ್ಪೇಕಾಯಿ ಮಾಡಿದೆ. ಇನ್ನೂ ಸುಸ್ತು, ಮೈಕೈ ನೋವು ಹೋಗಿಲ್ಲ. ಅವರ ಸೇವೆಯಲ್ಲಿ ಅಮ್ಮನೂ ಸೋತ್ತಿದ್ದಾರೆ. ಪಾಪ ಪುಟ್ಟಿ ಒಬ್ಬಳೇ ಮನೆಯಲ್ಲಿ. ಡಾಕ್ಟರ್ ಏನೂ ಹೆದರಬೇಡಿ, ವಯಸ್ಸಾಗಿದೆಯಲ್ಲಾ ಅದಕ್ಕೇ ಚೇತರಿಕೆ ನಿಧಾನ, ಬೇರೆ ಏನೂ ಕಂಪ್ಲೇಂಟಿಲ್ಲವಲ್ಲ ಎಂದು ಧೈರ್ಯ ತುಂಬುತ್ತಿದ್ದಾರೆ. ಅದೊಂದು ಸಮಾಧಾನ. ಈ ಸುದ್ಧಿ ಕೇಳಿದರೆ ಅವರಿಗೆ ಖುಷಿಯಾಗುತ್ತದೆ” ಎಂದ ಜಗದೀಶ.
‘ಆಯಿತು, ಒಂದು ಲೋಟ ಹಾಲಾದರೂ ಕುಡಿದು ಹೋಗಿ. ಬಲವಂತ ಮಾಡುವುದಿಲ್ಲ’ ಎಂದರು ಬಸಮ್ಮ.

‘ಹೌದು ಮಾವಾ ನೀವೇನಾದರೂ ಹಾಗೇ ಹೋದಿರೆಂದರೆ ನಮ್ಮ ಅಳಿಯಂದಿರು ಏನೂ ತಿನ್ನದೆ, ಕುಡಿಯದೆ ಹಾಗೇ ಹೋದಿರೆಂದು ತಾತನ ಮುಂದೆ ನೂರು ಸಾರಿ ಹೇಳಿ ಪೇಚಾಡಿಕೊಳ್ಳುತ್ತಾರೆ. ತೆಗೆದುಕೊಳ್ಳಿ ಹಾಲನ್ನು ಕುಡಿಯಿರಿ. ನಿಧಾನವಾಗಿ ಗಾಡಿ ನಡೆಸಿಕೊಂಡು ಇಲ್ಲಿಂದ ಒಂದೆರಡು ಫರ್ಲಾಂಗ್ ದೂರ ಇರುವ ನಿಮ್ಮ ಮನೆಗೆ ಜೋಪಾನವಾಗಿ ತಲುಪಿ ಕೂಡಲೇ ಫೋನ್ ಮಾಡಿರಿ. ಮರೆಯಬೇಡಿ‌’ ಎಂದಳು ದೇವಿ.

‘ಅಜ್ಜ ಅಜ್ಜಿಯರನ್ನು ಕೆಣಕದಿದ್ದರೆ ನಿನಗೆ ದಿನ ಮುಗಿಯುವುದಿಲ್ಲ ಅಂತನ್ನಿಸುತ್ತದೆ. ಮಗಳನ್ನು ಆಕ್ಷೇಪಿಸಿದಳು’ ಶಾರದೆ.
‘ಹಾಗನ್ನಬೇಡಿ ಶಾರದಕ್ಕಾ, ಇಂತಹ ಸೂಕ್ಷ್ಮತೆಗಳು ಮಕ್ಕಳಲ್ಲಿ ಇರಬೇಕು. ಅದರಲ್ಲೂ ಹೆಣ್ಣುಮಕ್ಕಳಿಗೆ ಹೆಚ್ಚಿಗೆ ಇರಬೇಕು. ನನ್ನ ಮಗಳಿಗೆ ಅಷ್ಟೊಂದಿಲ್ಲ. ದೇವಿಯ ಜೊತೆ ಇದ್ದರೆ ಅವಳೂ ಕಲಿಯಬಹುದು. ಅದಕ್ಕೇ ನನಗೆ ಈ ಸಂಬಂಧಗಳ ಒಡಂಬಡಿಕೆ ಹೆಚ್ಚು ಮುದ ಕೊಟ್ಟಿರುವುದು’. ಎಂದು ಹೃದಯ ತುಂಬಿ ನುಡಿದನು ಜಗದೀಶ.

ಶಾರದೆ ಕಾತ್ಯಾಯಿನಿಗೆ ಕುಂಕುಮ ಕೊಟ್ಟು ತಂಬೂಲವಿತ್ತಳು. ಅದನ್ನು ಗೌರವಾದರಗಳಿಂದ ಸ್ವೀಕರಿಸಿ ಗಂಡನೊಡನೆ ಹೊರಟಳು.
ಗೆಳೆಯನ ಮನೆಯಿಂದ ಬಂದ ಗಂಗಾಧರಪ್ಪ ಮನೆಯ ಬಾಗಿಲ ಬೀಗ ತೆಗೆದು ಒಳಹೊಕ್ಕವರೇ ಮುಂಬಾಗಿಲನ್ನು ಭದ್ರ ಪಡಿಸಿದರು. ಹಾಗೇ ”ಗೌರಾ, ಮಂಗಳಮ್ಮ ಸ್ವಲ್ಪ ಇಲ್ಲಿ ಬನ್ನಿ, ಮಹೇಶ, ಸುಬ್ಬು ಮನೆಗೆ ಬರುವುದರೊಳಗಾಗಿ ಒಂದೆರಡು ಮಾತುಗಳನ್ನಾಡುವುದಿದೆ”. ಎಂದರು.

ಅವರುಗಳೂ ಬಂದ ನಂತರ ಎಲ್ಲವನ್ನೂ ಒಟ್ಟಿಗೆ ಮಾತನಾಡಬಹುದಿತ್ತಲ್ಲ ಎಂದು ಮನದಲ್ಲಿ ಅಂದುಕೊಂಡರೂ ಏನೂ ಮಾತನಾಡದೆ ಹಾಲಿನಲ್ಲಿದ್ದ ಕುರ್ಚಿಯಮೇಲೆ ಕುಳಿತಿದ್ದ ಗಂಡನಿಗೆ ಎದುರಾಗಿ ಕಂಬ ಒರಗಿಕೊಂಡು ಕುಳಿತರು ಗೌರಮ್ಮ ಮತ್ತು ಮಂಗಳಮ್ಮ.

” ಗೌರಾ, ಸುಬ್ಬುವಿನ ಹೆಂಡತಿಯಾಗುವವಳಿಗೆ ಒಡವೆಗಳನ್ನು ಮಾಡಿಸಿದ್ದೀಯಾ? ಏನೇನು ಕೊಡಬೇಕೆಂದಿದ್ದೀಯೆ? ನನ್ನ ಮನಸ್ಸಿಗನ್ನಿಸಿದ್ದನ್ನು ನಾನು ಹೇಳಿಬಿಡುತ್ತೇನೆ ಕೇಳು. ನಮ್ಮ ಮಗ ಮಹೇಶನ ಹೆಂಡತಿಗೆ ಏನು ಕೊಡುತ್ತೀಯೋ ಅಷ್ಟೇ ಪ್ರಮಾಣದ್ದನ್ನು ಅವಳಿಗೂ ಕೊಡಬೇಕು. ಸುಬ್ಬು ನಮ್ಮ ಮಗನಿದ್ದಂತೆ ಎಂದು ಬಾಯಿಮಾತಿಗನ್ನುವುದಲ್ಲ, ಅದರಂತೆ ಸ್ಥಾನಮಾನಗಳನ್ನೂ ನೀಡಬೇಕು. ಏನಂತೀಯೆ? ಇಲ್ಲವಾದರೆ ಹೇಳು ಮೈಸೂರಿಗೋ, ಬೆಂಗಳೂರಿಗೋ ಹೋಗಿ ತಂದುಬಿಡೋಣ. ಈಗೇನು ಹಣವಿದ್ದರೆ ಕಣ್ಣಿಗೆ ಬೇಕಾದ್ದು ಪೇಟೆಯಿಂದ ತರಬಹುದು. ಚಿನ್ನಾಚಾರಿಯ ಮನೆಗೆ ಉಡಿಕೆ ನಡೆಯಬೇಕಾಗಿಲ್ಲ” ಎಂದರು ಗಂಗಾಧರಪ್ಪ.

ಗೌರಮ್ಮ ಬಾಯಿ ತೆರೆಯುವುದಕ್ಕೆ ಮೊದಲೇ ಮಂಗಳಾ ”ಅಯ್ಯಾ, ಗೌರಕ್ಕ ನಿಮಗಿಂತಲೂ ಒಂದೆಜ್ಜೆ ಮುಂದೆ. ಮಹೇಶಪ್ಪನ ಲಗ್ನಕ್ಕೆಂದು ಹೆಣ್ಣು ನೋಡುವುದಕ್ಕೆ ಪ್ರಾರಂಭಿಸಿದಾಗಲೇ ತಮ್ಮ ಹೆಣ್ಣು ಮಕ್ಕಳಿಗೆ ಏನೇನು ಕೊಟ್ಟಿದ್ದರೋ, ಅದೇ ಮಾಂಗಲ್ಯದ ಸರ, ಓಲೆಝುಮುಕಿ, ನಾಲ್ಕುಬಳೆ, ದಿನವೂ ಹಾಕಿಕೊಳ್ಳಲು ಒಂದೆರಡು ಸಾದಾ ಓಲೆಗಳು, ಎಲ್ಲವನ್ನೂ ಮಾಡಿಸಿದ್ದಾರೆ. ಅದೇ ಸಮಯದಲ್ಲಿ ನನ್ನ ಮಗನಿಗೆ ಹೆಂಡತಿಯಾಗಿ ಬರುವವಳಿಗೂ ಎಲ್ಲವನ್ನೂ ಸಿದ್ಧಪಡಿಸಿಕೊಂಡಿದ್ದಾರೆ. ಸುಬ್ಬುವಿಗೆ ಅವರಪ್ಪನಿಂದ ಬಂದಿರುವ ಭೂಮಿಯ ಜೊತೆ ಜೊತೆಯಲ್ಲಿ ಒಂದಿಷ್ಟು ನಗವು ಬಂದಿತ್ತು. ಅದು ನಿಮಗೂ ಗೊತ್ತು. ಅಲ್ಲಿಯ ಜಮೀನಿಗೆ ಬೆಲೆ ಕಟ್ಟಿಸಿ ಅಲ್ಲಿಯವರಿಗೇ ಮಾರಿ ಬಂದಿದ್ದುದನ್ನು ಇಲ್ಲಿ ವಿನಿಯೋಗಿಸಿ ಇಲ್ಲಿಯೇ ಒಂದಿಷ್ಟು ಭೂಮಿ, ಮತ್ತು ಒಂದು ಸಣ್ಣಮನೆಯನ್ನು ನೀವೇ ಸುಬ್ಬುವಿನ ಹೆಸರಲ್ಲಿ ತೆಗೆದಿರಿಸಿದ್ದೀರಿ. ಇನ್ನು ನಗವನ್ನು ಗೌರಕ್ಕ ಕೆಡಿಸಲು ಬಿಡಲೇ ಇಲ್ಲ. ಅವು ನನ್ನವಾಗಿಯೇ ಉಳಿದಿವೆ. ನನ್ನ ಯಾವ ಜನ್ಮದ ಪುಣ್ಯವೋ ನೀವುಗಳು ಆಸರೆಯಿತ್ತು ಕೈಹಿಡಿದು ಎತ್ತದಿದ್ದರೆ ನಾವಿನ್ನೂ ಹಿಂದಿನ ಮನೆಯಲ್ಲಿ ಜೀತದಾಳುಗಳಾಗಿ ಇರುತ್ತಿದ್ದೆವು” ಎಂದು ಸೆರಗನ್ನು ಕಣ್ಣಿಗೆ ಒತ್ತಿಕೊಂಡಳು.

”ಅಳಬೇಡಮ್ಮ ಮಂಗಳಾ, ಆ ಕೆಟ್ಟ ಹಿಂದಿನ ದಿನಗಳನ್ನು ಏಕೆ ನೆನೆಸಿಕೊಳ್ಳುತ್ತೀ. ನಮ್ಮದೇನಿದೆ ಎಲ್ಲ ಆ ಭಗವಂತನ ಇಚ್ಛೆಯಾಗಿತ್ತು. ನಾವೇನು ತಾಯಿಮಗನನ್ನು ಕೂಡಿಸಿ ಊಟ ಹಾಕುತ್ತಿದ್ದೇವೆಯೇ? ಆಯಿತು ಬಿಡು. ಗೌರಾ ನಿನ್ನ ಮುಂದಾಲೋಚನೆಗೆ ನನ್ನದೊಂದು ಶರಣು ಕಣೇ. ಇವನ್ನೆಲ್ಲ ಹುಡುಗರ ಮುಂದೆ ಮಾತನಾಡುವುದು ಬೇಡವೆಂದು ಕೇಳಿದೆ ಅಷ್ಟೇ. ಆಯಿತು ಇನ್ನು ನೀವು ನಿಮ್ಮ ಕೆಲಸ ನೋಡಿ. ನಾನು ಇನ್ನೂ ಸ್ವಲ್ಪ ಹೊತ್ತಾದ ಮೇಲೆ ಸ್ನಾನಮಾಡಿ ಪೂಜೆಗೆ ಹೋಗುತ್ತೇನೆ” ಎಂದು ಹೇಳಿ ತಮ್ಮ ರೂಮಿನತ್ತ ನಡೆದರು.

ಸಂಜೆಯ ಕಸಗುಡಿಸಿ ಮುಂಬಾಗಿಲ ಹೊಸ್ತಿಲಿನ ಬಳಿ ಅಕ್ಕಪಕ್ಕದಲ್ಲಿದ್ದ ಗೂಡುಗಳಲ್ಲಿನ ದೀಪಗಳನ್ನು ಹಚ್ಚಿಟ್ಟು ಒಳಗೆ ಪೂಜೆಗೆ ಅಣಿಮಾಡಿದಳು ಮಂಗಳಾ.

ಜಮೀನಿನಿಂದ ಕೆಲಸ ಮುಗಿಸಿ ಬಂದ ಸುಬ್ಬು ಮತ್ತು ಮಹೇಶ ತಮ್ಮೊಡನೆ ಹೊತ್ತು ತಂದಿದ್ದ ತರಕಾರಿ ಚೀಲವನ್ನು ಒಳಗಿಟ್ಟು ಗಂಗಾಧರಪ್ಪನವರ ಪೂಜೆ ಮುಗಿಯುವವರೆಗೂ ಹೊರಗಿನ ವೆರಾಂಡಾದಲ್ಲೇ ಕುಳಿತಿದ್ದರು. ನಂತರ ತಾವೂ ಸ್ನಾನ ಪೂಜಾದಿಗಳನ್ನು ಮಗಿಸಿ ಊಟವಾದ ಮೇಲೆ ವಾಡಿಕೆಯಂತೆ ಆ ದಿನದ ಕೆಲಸಕಾರ್ಯಗಳು, ಪೇಟೆಯ ವ್ಯವಹಾರ ಎಲ್ಲವನ್ನೂ ತಂದೆಗೆ ವರದಿ ಒಪ್ಪಿಸಿದ್ದಾಯಿತು. ನಾಳೆಯ ಕೆಲಸ, ಬೇಕುಬೇಡಗಳ ಬಗ್ಗೆ ಚರ್ಚಿಸಿದ್ದಾಯಿತು. ಎಲ್ಲವೂ ಮುಗಿದ ಮೇಲೆ ಗಂಗಾಧರಪ್ಪ ಮಧ್ಯಾನ್ಹ ಗುರುಗಳು ಬಂದದ್ದು, ಎರಡೂ ಜಾತಕಗಳನ್ನು ಪರಿಶೀಲನೆ ಮಾಡಿ ಸಲಹೆ ನೀಡಿದ್ದು ಇತ್ಯಾದಿ ವಿವರಗಳನ್ನು ಚಾಚೂ ತಪ್ಪದಂತೆ ಮಹೇಶ ಮತ್ತು ಸುಬ್ಬುವಿಗೆ ಹೇಳಿದರು. ಲಗ್ನಪತ್ರಿಕೆಯ ಕಾರ್ಯ ಮತ್ತು ವಿವಾಹಗಳನ್ನು ಹೇಗೆ ಮಾಡಿದರೆ ಸೂಕ್ತವೆಂಬ ಪ್ರಶ್ನೆಯನ್ನು ಅವರಿಬ್ಬರ ಮುಂದಿಟ್ಟರು.

”ಅಪ್ಪಯ್ಯಾ ಈ ವಿಷಯದಲ್ಲಿ ನೀವೆಲ್ಲರೂ ಅಂದರೆ ನಿಮ್ಮ ಸ್ನೇಹಿತರು ಅದೇ ನನಗೆ ಹೆಣ್ಣುಕೊಡಲು ಸಿದ್ಧವಾಗಿರುವ ಮಾವ, ಸುಬ್ಬುಗೆ ಹೆಣ್ಣುಕೊಡಲಿರುವ ಜಗದೀಶಪ್ಪನವರು, ಮೇಲಾಗಿ ಓದಿರುವ ಆಧುನಿಕ ಮನೋಭಾವದ ಹುಡುಗಿಯರು ತಮ್ಮ ಮದುವೆಯ ಬಗ್ಗೆ ಏನೇನು ಕನಸುಗಳನ್ನು ಕಟ್ಟಿಕೊಂಡಿರುತ್ತಾರೋ ಅವನ್ನೆಲ್ಲ ಪರಿಗಣಿಸಿ ಆದಷ್ಟು ಬೇಗ ಎಲ್ಲರಿಗೂ ಅನುಕೂಲವೆನ್ನಿಸುವ ಒಂದುದಿನ ಗೊತ್ತುಪಡಿಸಿ” ಎಂದು ಹೇಳಿದ ಮಹೇಶ.

ಮಗನ ಮಾತಿನಲ್ಲಿದ್ದ ಸತ್ಯತೆಯನ್ನು ಅರಿತ ಗಂಗಾಧರಪ್ಪನವರು ”ಹೌದು ಮಗಾ, ನಾಳೆಯೇ ನನ್ನ ಸ್ನೇಹಿತನ ಹತ್ತಿರ ಮಾತನಾಡಿ ದಿನ ನಿರ್ಧರಿಸಿ ಹೇಳುತ್ತೇನೆ” ಎಂದರು. ಅಲ್ಲಿಗೆ ಈ ವಿಚಾರವಾಗಿ ಮತ್ತೇನೂ ಮಾತನಾಡುವುದಿಲ್ಲವೆಂದು ಎಲ್ಲರೂ ಮಲಗಲು ತಮ್ಮತಮ್ಮ ಕೊಠಡಿಗಳಿಗೆ ತೆರಳಿದರು.

ಈ ಕಾದಂಬರಿಯ ಹಿಂದಿನ ಚರಣ ಇಲ್ಲಿದೆ:  https://www.surahonne.com/?p=40492
(ಮುಂದುವರಿಯುವುದು)

ಬಿ.ಆರ್.ನಾಗರತ್ನ, ಮೈಸೂರು

9 Responses

  1. ನಯನ ಬಜಕೂಡ್ಲು says:

    ಬಹಳ ಸುಂದರವಾಗಿ ಸಾಗುತ್ತಿದೆ ಕಾದಂಬರಿ

  2. ನಿಮ್ಮ ಪ್ರೀತಿಯ… ಪ್ರತಿಕ್ರಿಯೆ ಗೆ ಹೃತ್ಪೂರ್ವಕವಾದ ಧನ್ಯವಾದಗಳು.. ನಯನಮೇಡಂ.

  3. ಪ್ರಕಟಣೆಗಾಗಿ ಧನ್ಯವಾದಗಳು ಗೆಳತಿ… ಹೇಮಾ

  4. MANJURAJ H N says:

    ಹೀಗೇ ಸಾಗಲಿ; ದೋಣಿ ದಡ ಸೇರಲಿ.

  5. ಖಂಡಿತ ಸಾರ್…ಸಹೃದಯ ಪ್ರ ತಿಕ್ರಯೆಗೆ ವಂದನೆಗಳು.

  6. ಶಂಕರಿ ಶರ್ಮ says:

    ಮದುವೆ ನಿಶ್ಚಿತಾರ್ಥ ಬಹಳ ಚೆನ್ನಾಗಿ ಮೂಡಿಬಂದಿದೆ ನಾಗರತ್ನ ಮೇಡಂ. ನಿಮ್ಮ ಸಹಜ, ಸರಳ ನಿರೂಪಣೆ ಇಷ್ಟವಾಗುತ್ತದೆ.

  7. Padma Anand says:

    ಸುಲಲಿತವಾಗಿ ಓದಿಸಿಕೊಂಡು ಧಾಪುಗಾಲು ಹಾಕುತ್ತಾ ಮುಂದುವರೆಯುತ್ತಿರುವ ಚಂದದ ಕಾದಂಬರಿ.

  8. ನಿಶ್ಚಿತಾರ್ಥದ ಮಾತುಕತೆಯ ಷ್ಟೇ ..ನೆಡೆದಿದೆ …ಅದರ ಕಾರ್ಯ ಇನ್ನೂ ಮುಂದಿದೆ..ಶಂಕರಿ ಮೇಡಂ.. ಓದಿ…ಪ್ರತಿಕ್ರಿಯಿಸುವ… ನಿಮಗೆ …ಧನ್ಯವಾದಗಳು..

  9. ನಿಮ್ಮ.. ಸಹೃದಯ.. ಪ್ರತಿ ಕ್ರಿಯೆಗೆ..ಧನ್ಯವಾದಗಳು ಪದ್ಮಾ ಮೇಡಂ..

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: