ಕಾದಂಬರಿ : ಕಾಲಗರ್ಭ – ಚರಣ 4
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
”ಹೋಗಿ ತಾತಾ ನೀವೊಬ್ಬರು, ಕೂಸನ್ನೂ ಚಿವುಟುತ್ತೀರಾ, ತೊಟ್ಟಿಲನ್ನೂ ತೂಗುತ್ತೀರಾ” ಎಂದು ಹುಸಿಮುನಿಸು ತೋರುತ್ತಾ ”ಇದೇನು ಇಷ್ಟು ಹೊತ್ತಿನಲ್ಲಿ ಊಟಮಾಡಿ ಮಲಗುತ್ತಿದ್ದವರು ಮಹೀ ಮನೆಯಿಂದ ಬರುತ್ತಿದ್ದೀರಿ?” ಎಂದು ಪ್ರಶ್ನಿಸಿದಳು.
”ಹೂ..ಈಗಲೂ ಅದೇ ಕೆಲಸ ಮಾಡಲು ನಮ್ಮ ಮನೆಗೆ ಹೊರಟೆ. ಸ್ವಲ್ಪ ವ್ಯತ್ಯಾಸವಷ್ಟೇ, ನನ್ನ ಗೆಳೆಯನ ಮನೆಯಲ್ಲಿ ಊಟ ಮತ್ತು ನಮ್ಮ ಮನೆಯಲ್ಲಿ ನಿದ್ದೆ. ನಿನ್ನ ಅಮ್ಮ , ಅಜ್ಜಿ ಎಲ್ಲಾರು ಅಲ್ಲೆ ಇದ್ದಾರೆ ಹೋಗು ನನಗಿಂತ ಅವರುಗಳಿಗೇ ನಿನ್ನ ಉತ್ತರವನ್ನು ಹೇಳು” ಎಂದು ನಸುನಗುತ್ತಾ ನಡೆದರು ನೀಲಕಂಠಪ್ಪ.
”ಹೂಂ..ಇವತ್ತು ನನಗೆ ಉಳಿಗಾಲವಿಲ್ಲ” ಎಂದುಕೊಂಡು ಮನೆಯ ಬಾಗಿಲಿಗೆ ಬರುವುದಕ್ಕೂ ಒಳಗಿನಿಂದ ಮಹೇಶನ ತಾಯಿ ಬರುವುದು ಒಂದೇ ಆಯಿತು.
”ದೇವಿ..ಬುಟ್ಟಿಯನ್ನು ನೀನೇ ತಂದುಬಿಟ್ಟೆಯಾ? ತೋಟದ ಮನೆಯಲ್ಲಿಟ್ಟಿದ್ದರೆ ಸುಬ್ಬಣ್ಣ ಹೇಗೂ ಒಂದುಸಾರಿ ಸಂಜೆಗೆ ಹೋಗುತ್ತಿದ್ದ. ಅವನೇ ತರುತ್ತಿದ್ದ” ಎಂದರು. ಅಷ್ಟರಲ್ಲಾಗಲೇ ಗೌರಮ್ಮನವರ ಹಿಂದೆಯೇ ನಿಂತಿದ್ದ ಮಂಗಳಮ್ಮ ”ಅಕ್ಕಾ ನಾನೇ ದೇವಿಗೆ ಬುಟ್ಟಿ ತರಲು ಹೇಳಿದ್ದು. ಅದರಿಂದ ಅವಳು ನೇರವಾಗಿ ಇಲ್ಲಿಗೇ ಬರುತ್ತಾಳೆ ” ಅಂತ. ದೇವಿಯ ಕೈಯಿಂದ ಬುಟ್ಟಿಯನ್ನು ತೆಗೆದುಕೊಂಡು ಇನ್ನೊಂದು ಕೈಯಿಂದ ಅವಳ ತೋಳನ್ನು ಹಿಡಿದು ಜೊತೆಯಲ್ಲೇ ಅವಳನ್ನು ಒಳಗೆ ಕರೆದುಕೊಂಡು ಹೋದರು.
ಗೌರಮ್ಮನವರು ಮುಂಭಾಗಿಲು ಭದ್ರಪಡಿಸಿ ಬಂದವರೇ ”ಶಾರದೇ ದೇವಿ ಬಂದಳು ನೋಡು” ಎಂದು ಕೂಗಿದರು. ದೇವಿಯು ಅತ್ತ ಕಣ್ಣಾಡಿಸಿದಳು. ತಾತ ಆಗಲೇ ಹೇಳಿದಂತೆ ಅಮ್ಮ, ಅಜ್ಜಿ ಇಬ್ಬರೂ ನಡುಮನೆಯಲ್ಲಿ ಹಾಸಿದ್ದ ಜಮಖಾನೆಯ ಮೇಲೆ ಆಸೀನರಾಗಿದ್ದಾರೆ. ತಾಂಬೂಲದ ತಟ್ಟೆ ಅವರಿಬ್ಬರ ಮಧ್ಯೆ ಇತ್ತು. ಬೆಳಗ್ಗೆ ನಾನೂ ಮಂಗಳಕ್ಕನ ಜೊತೆ ಜಮೀನಿನ ಕಡೆಗೆ ಮಹೇಶನಿಗೆ ಊಟದ ಬುತ್ತಿ ತೆಗೆದುಕೊಂಡು ಹೊರಟಾಗ ಕಳಕಳಿಯುಳ್ಳ ಅಮ್ಮ ನನಗೆ ಎಚ್ಚರಿಕೆ ಹೇಳಿದ್ದರು. ಆದರೆ ಅವರು ಇಲ್ಲಿಯೇ ಊಟ ಮಗಿಸಿ ಪಟ್ಟಾಂಗ ಹೊಡೆಯುತ್ತಾ ಕುಳಿತಿದ್ದಾರೆ ಅಜ್ಜಿಯ ಜೊತೆ. ಆಹಾ ! ಎಲ್ಲರೂ ಸರಿಯಾಗಿದ್ದಾರೆ ಎಂದುಕೊಂಡಳು. ಹಾಗೇ ಏನು ಗೊತ್ತಿಲ್ಲದವಳಂತೆ ”ಓಹೋ ! ನೀವಿಬ್ಬರೂ ಇಲ್ಲಿಯೇ ಇದ್ದೀರಾ? ಹಾಗಾದರೆ ಚೆನ್ನಾಗಿ ಕೇಳಿಸಿಕೊಳ್ಳಿ ನನಗೂ ಮಹೀಗೂ ಮದುವೆಯ ತಯಾರಿ ಮಾಡಿಕೊಳ್ಳಿ. ಅದನ್ನು ಈ ಮನೆಯ ಹಿರಿಯರಿಗೂ ತಿಳಿಸಿಬಿಡಿ” ಎಂದು ಹೇಳಿ ಅವರೆಲ್ಲ ಕೂಗುತ್ತಿದ್ದರೂ ಉತ್ತರಿಸದೆ ಎದುರಿಗಿದ್ದ ತನ್ನ ಮನೆಯ ಕಡೆಗೆ ದೌಡಾಯಿಸಿದಳು ಮಾದೇವಿ.
ಆ ದಿನ ಸಂಜೆಗೆ ಮಹೇಶ ಮನೆಗೆ ಬಂದೊಡನೆ ವಿಷಯ ಮೊದಲೇ ತಿಳಿದಿದ್ದರೂ ಮತ್ತೆ ಅವನ ಬಾಯಿಂದಲೂ ಕೇಳಿ ಸಂತಸಪಟ್ಟರು.
ಇಬ್ಬರ ಒಪ್ಪಿಗೆಯು ಸಿಕ್ಕಿದ್ದು ಎರಡೂ ಕುಟುಂಬದ ಹಿರಿಯರ ಉತ್ಸಾಹ ಹರೆಯದವರನ್ನೂ ಮೀರಿಸುವಂತಾಯಿತು. ಯಾವಾಗ ಭೇಟಿಯಾಗುತ್ತೇವೋ ಎಂಬ ಹಪಾಹಪಿಯಿಂದಲೇ ಗೆಳೆಯರಿಬ್ಬರೂ ಆ ರಾತ್ರಿಯನ್ನು ಕಳೆದರು. ಮುಂಜಾನೆ ಎಲ್ಲರಿಗಿಂತ ಮುಂಚೆ ಎದ್ದು ಪ್ರಾತಃವಿಧಿಗಳನ್ನು ಮುಗಿಸಿ ಒಬ್ಬರಿಗೊಬ್ಬರು ಫೋನಿನಲ್ಲೇ ವಿಷಯ ವಿನಿಮಯ ಮಾಡಿಕೊಂಡರು. ತಾವಿಬ್ಬರೂ ಜಮೀನಿನ ಹತ್ತಿರ ಹೋಗಿ ಬರುತ್ತೇವೆಂದು ಹೇಳಿ ಹೊರಟರು.
ಇವರಿಬ್ಬರ ಸ್ವಭಾವಗಳ ಅರಿವಿದ್ದ ಎರಡು ಮನೆಯ ಹೆಂಗಸರು ‘ಆಹಾ.. ನಮಗೆ ಗೊತ್ತಿಲ್ಲವೇ, ನಮ್ಮ ದೇವರ ಸತ್ಯ’ ಎಂದುಕೊಂಡರು. ಎಷ್ಟೋ ವರ್ಷಗಳಿಂದ ಜಮೀನಿನ ಕೆಲಸ ಕಾರ್ಯಗಳಲ್ಲಿ ತೊಡಗಿದ್ದವರು ಈಗ ಮಕ್ಕಳ ಕಾಲಕ್ಕೆ ಎಲ್ಲವನ್ನೂ ನಿಗಾವಹಿಸಲು ಅವರಿಗೇ ಬಿಟ್ಟಿದ್ದರು. ದಿನವೂ ಸಂಜೆಗೊಮ್ಮೆ ಇಬ್ಬರು ಭೇಟಿಯಾಗಿ ಮಾತಕತೆಯಾಡಿ ಮನೆಗೆ ಹಿಂತಿರುಗುತ್ತಿದ್ದವರು ಇವತ್ತು ಇಷ್ಟು ಬೇಗ ಜಮೀನಿನ ಕಡೆಗೆ ಹೊರಟಿದ್ದಾರೆ. ಅದೂ ಸ್ನಾನ, ಪೂಜಾದಿಗಳನ್ನು ಮಾಡುವ ಮೊದಲೇ ‘ಇದು ವಾಕಿಂಗ್ ಅಂತೆ’ ಎಂದು ಮುಸಿಮುಸಿ ನಕ್ಕರು. ‘ಆದಷ್ಟೂ ಬೇಗ ಬನ್ನಿ’ ಎಂದು ಎಚ್ಚರಿಕೆಯ ಮಾತನ್ನೂ ಹೇಳಿದರು.
ಬೆಳಗ್ಗೆ ಬೆಳಗ್ಗೇನೆ ಜಮೀನಿಗೆ ಇಬ್ಬರೂ ಯಜಮಾನರ ಆಗಮನ ಅಲ್ಲಿ ಕೆಲಸದಲ್ಲಿದ್ದ ವಕ್ಕಲುಮಕ್ಕಳಿಗೆ ಅಚ್ಚರಿ ತಂದಿತು. ಕೇಳಬೇಕೆಂದವರು ಬೇಡ ಎಲ್ಲೋ ಶಿವನ ಗುಡಿಗೆ ಬಂದಿರಬೇಕು, ಏನೋ ಕಾರಣ ಇರಬೇಕು ಎಂದುಕೊಂಡು ಮೌನವಾಗಿ ಬದಿಗೆ ಸರಿದು ಹೋದರು. ಇದ್ಯಾವುದರ ಪರಿವೇ ಇಲ್ಲದಂತೆ ಇಬ್ಬರೂ ಗೆಳೆಯರು ಶಿವಾಲಯದ ಮುಂದಿದ್ದ ಕಲ್ಲುಬೆಂಚಿನ ಮೇಲೆ ಕುಳಿತರು.
ಇಷ್ಟು ವರ್ಷಗಳು ಗೆಳೆಯರಾಗಿದ್ದವರು ಈಗ ಮಕ್ಕಳ ದೆಸೆಯಿಂದಾಗಿ ಬೀಗರಾಗುತ್ತಿದ್ದೇವೆಂದು ಒಬ್ಬರಿನ್ನೊಬ್ಬರ ಹೆಗಲು ಬಳಸಿ ತಮಗಾದ ಸಂತೋಷವನ್ನು ಹಂಚಿಕೊಂಡರು. ”ಗಂಗೂ, ಮದುವೆ ಕೆಲಸ ಕಾರ್ಯಗಳನ್ನು ಪ್ರಾರಂಭಿಸುವುದಕ್ಕೆ ಮುಂಚೆ ನಾವ್ಯಾಕೆ ನಮ್ಮ ಮನೆದೇವರಾದ ಮಂಜುನಾಥಸ್ವಾಮಿಯ ಸನ್ನಿಧಿಗೊಮ್ಮೆ ಹೋಗಿ ಬರಬಾರದು. ಅಲ್ಲಾ ನೀವೂ ಮಂಜುನಾಥನಿಗೆ ನಡೆದುಕೊಳ್ಳುತ್ತೀರಲ್ಲಾ? ಅದಕ್ಕೇ ಒಟ್ಟಾಗಿ ಹೇಳಿದೆ” ಎಂದರು ನೀಲಕಂಠಪ್ಪ.
”ಶ್ರಿಶೈಲದ ಮಲ್ಲಿಕಾರ್ಜುನಸ್ವಾಮಿ ನಮ್ಮ ಮನೆದೇವರಾದರೂ ನಾವು ಅಲ್ಲಿಗೆ ನೇರಭಕ್ತರಲ್ಲ. ತಲೆಮಾರಿನಿಂದ ಯಾರ ಜೊತೆಯಲ್ಲಾದರೂ ಹೋಗಬೇಕು. ಕೆಲವರು ಇದನ್ನು ನಿರ್ಲಕ್ಷಿಸಿ ಇದು ಯಾವುದೋ ಕಾಲದಲ್ಲಿ ಮಾಡಿರುವ ಶಾಸ್ತ್ರ ಎಂದು ತಾವೇ ಹೋಗಿ ಬಂದರಂತೆ. ಹಾಗೆ ಹೋದವರು ಅನೇಕ ಸಂಕಷ್ಟಕ್ಕೆ ಒಳಗಾದರಂತೆ. ವಿಚಾರಿಸಿದಾಗ ನೀವು ರೂಢಿಗತವಾಗಿದ್ದ ಪದ್ಧತಿಯನ್ನು ಮೀರಿ ನಡೆದುದಕ್ಕೆ ಹೀಗಾಯಿತು ಎಂದರಂತೆ. ಹೋದವರು ಕೊನೆಗೆ ಏನೋ ತಪ್ಪೊಪ್ಪಿಗೆ ಕಟ್ಟಿಕೊಂಡು ಪ್ರಾಯಶ್ಚಿತ್ತ ಮಾಡಿಕೊಂಡರಂತೆ. ಇದನ್ನು ತಿಳಿದಿದ್ದ ನನ್ನ ಅಪ್ಪ, ಅಮ್ಮ ‘ತಲೆ ಗಟ್ಟಿಯಿದೆ ಅಂತ ಕಲ್ಲಿಗೆ ಚಚ್ಚಿಕೊಳ್ಳುವುದು ಏಕೆ’ ಎಂದು ಮೊದಲಿನಿಂದಲೂ ಬಂದ ರೀತಿ ರಿವಾಜು. ಅಲ್ಲಿಯೂ ಶಿವಪ್ಪನೇ ಇಲ್ಲಿಯೂ ಶಿವಪ್ಪನೇ ಅಂದುಕೊಂಡು ಧರ್ಮಸ್ಥಳ, ನಂಜನಗೂಡಿಗೆ ನಡೆದುಕೊಂಡು ಬಂದಿದ್ದರು. ನಾನೂ ಅದನ್ನೆ ಮುಂದುವರೆಸಿಕೊಂಡು ಬಂದಿದ್ದೇನೆ. ಹೋಗಿಬರುವ ಮೊದಲು ನಮ್ಮಬ್ಬರಿಗೂ ಗುರುಗಳಾದ ಬಸವರಾಜಪ್ಪನವರಿಗೆ ಮಕ್ಕಳ ಜಾತಕಗಳನ್ನು ತೋರಿಸೋಣ. ಮದುವೆಗೆ ಶುಭ ಮುಹೂರ್ತಗಳನ್ನು ಗೊತ್ತ್ತುಮಾಡಿಕೊಳ್ಳೋಣ. ಮನೆಯವರೊಡನೆ ಚರ್ಚಿಸಿ ಆನಂತರ ಯಾವುದು ಸೂಕ್ತವೆಂದು ತೀರ್ಮಾನಿಸಬೇಕು ಅಲ್ಲವೇ?” ಎಂದರು ಗಂಗಾಧರಪ್ಪ.
”ಹೌದು ಗಂಗೂ, ನನ್ನ ಬುದ್ಧಿಗಿಷ್ಟು. ಅದಕ್ಕೇ ನಮ್ಮನೆಯವಳು ಯಾವಾಗಲೂ ನನ್ನನ್ನು ಅವಸರದ ಆಂಜನೇಯಾ ಅಂತ ಅಣಕಿಸುತ್ತಾಳೆ. ಇರಲಿ ಬಿಡು, ಗುರುಗಳೂ ಇತ್ತೀಚೆಗೆ ಹೆಚ್ಚಾಗಿ ಮಗನ ಮನೆಯಲ್ಲೇ ಇರುತ್ತಾರೆಂದು ಕೇಳಿದ್ದೆ. ಅದೇ ನಂದೀಶನ ಮನೆಯಲ್ಲಿ. ಅವನೂ ಅದೆಲ್ಲೋ ಹೊರನಾಡಲ್ಲಿರುವ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಅರ್ಚಕನಾಗಿದ್ದಾನೆಂದು ಗುರುಗಳೇ ಹೇಳಿದ್ದರು. ಇಲ್ಲಿರುವ ಅವರ ಮಗಳು ಗಿರಿಜಾಳನ್ನು ಕೇಳಿದರೆ ಯಾವುದೂ ಸರಿಯಾಗಿ ಗೊತ್ತಾಗುತ್ತೆ. ಪಾಪ ಗುರುಗಳ ಹೆಂಡತಿ ಹೋದಮೇಲೆ ಅವರು ಹೆಚ್ಚು ಓಡಾಟಕ್ಕೆ ಸೀಮಿತರಾಗಿಬಿಟ್ಟಿದ್ದಾರೆ. ಆ ಊರು ಈ ಊರೆಂದು ತಿರುಗಾಡುತ್ತಿರುತ್ತಾರೆ” ಎಂದರು ನೀಲಕಂಠಪ್ಪ.
”ಹ್ಹೆ..ಹ್ಹೆ..ಪೆದ್ದಪ್ಪ ! ಅಂಗೈಯಲ್ಲಿ ಅರಮನೆಯಿರುವಾಗ ಯಾವ ಮೂಲೆಯಲ್ಲಿದ್ದರೂ ಜಾಲಾಡಿಬಿಡಬಹುದು. ಅವರ ಮೊಬೈಲ್ ನಂಬರ್ ನನ್ನ ಹತ್ತಿರವಿದೆ. ವಿಚಾರಿಸಿಯೇ ಮುಂದುವರೆಯೋಣ. ಈಗ ಸದ್ಯಕ್ಕೆ ಮನೆಗೆ ಹೊಗೋಣ ನಡೆ, ಇಲ್ಲೇ ಇದ್ದರೆ ಮನೆಯಲ್ಲಿ ಮಂಗಳಾರತಿ ಗ್ಯಾರಂಟಿ” ಎಂದು ಕುಳಿತಲ್ಲಿಂದ ಎದ್ದರು. ಹಾಗೇ ಶಿವನಿಗೆ ನಮಸ್ಕರಿಸುತ್ತಾ ”ಅಪ್ಪಾ ಕರುಣಾಮಯಿ, ನಮ್ಮಿಚ್ಛೆಯಂತೆ ನಾವು ಬಂಧುಗಳಾಗಲು ವೇದಿಕೆ ಸಿದ್ಧಪಡಿಸಿಕೊಟ್ಟೆ. ಮುಂದಾಗುವ ಕಲ್ಯಾಣಕಾರ್ಯಕ್ಕೂ ಯಾವುದೇ ವಿಘ್ನ ಬರದಂತೆ ಆಶೀರ್ವಾದ ಮಾಡು ಸ್ವಾಮಿ” ಎಂದು ಇಬ್ಬರು ಪ್ರಾರ್ಥನೆ ಸಲ್ಲಿಸಿ ಮನೆಯ ದಾರಿ ಹಿಡಿದರು.
ಸ್ವಲ್ಪ ದೂರ ಹೋದರೋ ಇಲ್ಲವೋ ಎದುರಿಗೆ ಬಸವರಾಜಪ್ಪನವರೇ ಬಂದರು. ಗೆಳೆಯರಿಗೆ ಪರಮಾಶ್ಚರ್ಯ ! ”ಗುರುಗಳೇ ಅಡ್ಡಬಿದ್ದೆವು, ನೆನೆದವರ ಮನದಲ್ಲಿ ಎಂಬಂತೆ ನೀವು ಬಂದಿರಿ” ಎಂದರು.
ಅವರಿಬ್ಬರಿಗೂ ಪ್ರತಿವಂದಿಸುತ್ತಾ ”ಏನು ಜಿಗರಿ ದೋಸ್ತುಗಳು ಬೆಳಗ್ಗೆ ಬೆಳಗ್ಗೇನೆ ಮೀಟಿಂಗ್ ಮುಗಿಸಿ ಮನೆಗೆ ಹೊರಟಹಾಗಿದೆ. ಅಂದಹಾಗೆ ನನ್ನನ್ನು ಯಾತರಲ್ಲಿ ನೆನೆಸಿದಿರಪ್ಪಾ? ಕೊಳಗದ ನೀರಲ್ಲೋ? ಹಂಡೆಯಲ್ಲೋ? ಅಥವಾ ನಿಮ್ಮ ಜಮೀನಿನಲ್ಲಿರುವ ಕಲ್ಯಾಣಿಯಲ್ಲೋ?” ನಗೆ ಚಟಾಕಿ ಹಾರಿಸಿದರು ಬಸವರಾಜಪ್ಪ.
ಅವರ ಹಾಸ್ಯಪ್ರಜ್ಞೆಯ ಅರಿವಿದ್ದ ಗೆಳೆಯರು ”ಅದೂ..ಅದೂ..ಹಾದಿಬೀದಿಯಲ್ಲಿ ಹೇಳುವಂತಹ ಮಾತಲ್ಲಾ ಗುರುಗಳೇ. ನೀವು ಯಾವಾಗ ಊರಿಗೆ ಬಂದಿದಿ? ಇಲ್ಲೆಷ್ಟು ದಿನ ಇರುತ್ತೀರಾ? ಇದೇನು ಹೀಗೆ ಕೇಳ್ತಾರೇ ಅಂತ ತಪ್ಪು ತಿಳಿಯಬೇಡಿ” ಎಂದರು.
”ಅಯ್ಯೋ ಅದರಲ್ಲಿ ತಪ್ಪು ತಿಳಿಯುವಂಥದ್ದೇನು. ಒಂದು ತಿಂಗಳಂತೂ ಇಲ್ಲೇ ಇರುತ್ತೇನೆ. ಆನಂತರ ನಮ್ಮ ಬಂಧುಬಳಗದವರ ಜೊತೆಯಲ್ಲಿ ಕಾಶಿ, ರಾಮೇಶ್ವರ ಯಾತ್ರೆಗೆ ಹೊರಟಿದ್ದೇನೆ ”ಎಂದರು.
”ಹಾಗಾದರೆ ನಾವು ಇವತ್ತೇ ಸಂಜೆಗೆ ನಿಮ್ಮ ಮನೆಗೆ ಬರಬಹುದೇ?” ಎಂದು ಕೇಳಿದರು.
”ಧಾರಾಳವಾಗಿ ಶಿಷ್ಯೋತ್ತಮರೇ ಬನ್ನಿ, ಸದಾ ನಿಮ್ಮಿಬ್ಬರಿಗೆ ಸ್ವಾಗತ. ಇಲ್ಲೊಬ್ಬರ ಮನೆಯಲ್ಲಿ ಶಾಂತಿಪೂಜೆಗೆ ಒಪ್ಪಿಕೊಂಡಿದ್ದೇನೆ, ಅದಕ್ಕೇ ಹೊರಟೆ, ಬರಲೇ?” ಎಂದು ಮುಂದೆ ನಡೆದರು ಬಸವರಾಜಪ್ಪನವರು.
”ಗುರುಗಳು ಇಲ್ಲೇ ಸಿಕ್ಕಿದ್ದು ಶುಭಶಕುನ ಗಂಗೂ, ಸಂಜೆಗೆ ಅವರಲ್ಲಿಗೆ ಹೋಗಿ ಬಂದುಬಿಡೋಣ” ಎಂದರು ನೀಲಕಂಠಪ್ಪ.
”ಹೂ..ಗೆಳೆಯಾ, ಮಗನ ಜಾತಕ ಎಲ್ಲಿದೆಯೋ ಹುಡುಕಿ ತೆಗೆಯಬೇಕು. ನೀನೂ ಮೊಮ್ಮಗಳ ಜಾತಕ ತೊಗೊಂಡು ಬಾ” ಎಂದು ತಮ್ಮ ಮನೆಯ ಕಡೆಗೆ ತಿರುಗಿದವರನ್ನು ”ಗಂಗೂ ಇಷ್ಟು ದಿವಸ ಕನ್ಯಾನ್ವೇಷಣೆ ನಡೆಸುತ್ತಿರುವಾಗ ಜಾತಕ ತೋರಿಸಿಯೇ ಇಲ್ಲವೇ?ಅಹ್ಹಹ್ಹಾ ನನ್ನ ಹತ್ತಿರ ರೈಲು ಬಿಡಬೇಡ’ ”ಎಂದು ನಗೆಚಟಾಕಿ ಹಾರಿಸುತ್ತಾ ತಮ್ಮ ಮನೆಯ ಕಡೆ ನಡೆದರು ನೀಲಕಂಠಪ್ಪ.
”ಬರಬೇಕು..ಬರಬೇಕು, ನೆನ್ನೆಯೇ ಎಲ್ಲರೆದುರಿಗೇ ವಿಷಯ ತಿಳಿದಿದ್ದರೂ ನಿಮ್ಮ ಗೆಳೆಯರ ಜೊತೆ ಮತ್ಯಾವುದಪ್ಪಾ ಬೆಳಗ್ಗೇನೇ ರಹಸ್ಯ ಮಂತ್ರಾಲೋಚನೆ?” ಎಂದು ತಮ್ಮ ಪತಿಯನ್ನು ಛೇಡಿಸಿದರು ಬಸಮ್ಮ. ಹೆಂಡತಿಯ ಮಾತಿಗೆ ಉತ್ತರವನ್ನೇ ಕೊಡದೇ ನೀಲಕಂಠಪ್ಪನವರು ಬಟ್ಟೆ ಬದಲಾಯಿಸಿಕೊಂಡು ”ಸ್ನಾನಕ್ಕೆ ನೀರು ಸಿದ್ಧವಾಗಿದೆಯಾ ಕೂಸೇ?” ಎಂದು ಕೇಳುತ್ತಾ ಬಚ್ಚಲು ಮನೆಯತ್ತ ನಡೆದರು. ಅವರಿಬ್ಬರ ಸ್ವಭಾವದ ಅರಿವಿದ್ದ ಶಂಕರ, ಶಾರದೆ, ಮಾದೇವಿ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡು ನಿಶ್ಶಬ್ಧವಾಗಿ ನಕ್ಕರು. ಆಗ ಮಾದೇವಿ ”ಅಪ್ಪಾ ಇನ್ನೊಂದು ಸ್ವಲ್ಪ ಹೊತ್ತು ತಾತನ ಪೂಜೆ ಮುಗಿಸಿ ಬರಲಿ, ಊಟಕ್ಕೆ ಸಮಯವಾಗುವರೆಗೆ ಈ ಲೌಬರ್ಡ್ಸ್‌ಗಳ ಸಂಭಾಷಣೆ ಹೇಗಿರುತ್ತದೆ ಗೊತ್ತಾ?’ ”ಎಂದು ಪಿಸುಗುಟ್ಟಿದಳು. ಮಗಳ ಮಾತಿಗೆ ”ಅದು ನಿನಗಿಂತ ಮೊದಲಿನಿಂದಲೂ ನನಗೂ ಗೊತ್ತು. ಸದ್ಯಕ್ಕೆ ಅದನ್ನು ನೀನೇ ಕೇಳಿಸಿಕೋ. ಜಮೀನಿನ ಕೆಲಸಕ್ಕೆ ಹೊತ್ತಾಯಿತು ನಾನಿನ್ನು ಬರುತ್ತೇನೆ ಎಂದು ಹೊರಟನು” ಶಂಕರಪ್ಪ.
ಅಲ್ಲಿಯೇ ಇದ್ದ ಶಾರದೆ ”ನಾನೂ ಅಡುಗೆ ಮನೆಯಲ್ಲಿ ಕೆಲಸ ಮುಗಿಸಬೇಕು ಬರುತ್ತೇನೆ ” ಎಂದು ಅತ್ತ ನಡೆದಳು. ತಾತನ ಪೂಜೆಗಿನ್ನೇನಾದರು ಬೇಕಾಗಿದೆಯೇನೋ ಎಂದು ನೋಡಲು ಮಾದೇವಿ ದೇವರ ಕೋಣೆಯತ್ತ ಹೆಜ್ಜೆ ಹಾಕಿದಳು.
ಸ್ನಾನ ಪೂಜಾದಿಗಳನ್ನು ಪೂರೈಸಿ ಮಗುಟ ಬದಲಿಸಿ ದಿನನಿತ್ಯದ ಮಡಿಬಟ್ಟೆಯನ್ನು ತೊಟ್ಟು ಕೋಣೆಯಿಂದ ಹೊರಬಂದರು ನೀಲಕಂಠಪ್ಪ. ಅದನ್ನು ಗಮನಿಸಿದ ಬಸಮ್ಮ ”ಊಟ ಮಾಡುತ್ತೀರೇನು? ಶಾರದೆಗೆ ಸಿದ್ಧ ಪಡಿಸಲು ಹೇಳಲೇ?” ಎಂದು ಕೇಳಿದರು.
”ಏನು ನಾನೊಬ್ಬನೇ, ನೀವುಗಳು?” ಕೇಳಿದರು ನೀಲಕಂಠಪ್ಪ.
”ನಾವು ಪ್ರತಿದಿನದಂತೆ ಬೆಳಗ್ಗೆ ಗಂಜಿ ಕುಡಿದಿದ್ದೇವೆ. ನೀವು ಮಾತ್ರ ಪ್ರಯಾಣಕ್ಕೆ ಟಿಕೆಟ್ ಬುಕ್ ಮಾಡಿಸಿ ಟ್ರೈನಿಗೆ ಲೇಟಾಗುತ್ತೇನೋ ಅನ್ನುವಂತೆ ಗೆಳೆಯರೊಡನೆ ಓಟ ಕಿತ್ತವರು. ಹಸಿವಾಗಿರಬಹುದೂಂತ ಕೇಳಿದೆ” ಎಂದರು ಬಸಮ್ಮ.
ಹೌದಲ್ಲವಾ ಬಹುತೇಕ ರೈತಾಪಿ ಜನರ ಮನೆಯಲ್ಲಿ ಹಬ್ಬಹರಿದಿನಗಳಲ್ಲಿ ನೆಂಟರಿಷ್ಟರು ಬಂದಾಗ ಮಾತ್ರ ಬೆಳಗಿನ ಹೊತ್ತು ತಿಂಡಿ ಮಾಡುವ ಅಭ್ಯಾಸ. ಅದೂ ಏನು ಇತ್ತೀಚೆಗೆ ಇಡ್ಲಿ, ಅಕ್ಕಿತರಿ ಉಪ್ಪಿಟ್ಟು, ರೊಟ್ಟಿ, ಮಿಕ್ಕಂತೆ ಬೆಳಗ್ಗೆ ರಾಗಿ ಅಂಬಲಿ ಇಲ್ಲವೇ ಎಲ್ಲ ಕಾಳುಗಳನ್ನು ಹುರಿದು ಪುಡಿಮಾಡಿ ಅದರಿಂದ ತಯಾರಿಸಿದ ಗಂಜಿ ಕುಡಿಯುವುದು. ಮಧ್ಯಾನ್ಹ ಹನ್ನೆರಡರ ನಂತರ ಪುಷ್ಕಳ ಭೋಜನ. ಸಂಜೆಗೆ ಜಮೀನಿನ ಕೆಲಸ ಮುಗಿಸಿ ಹಿಂದಿರುಗಿ ಬಂದನಂತರ ಸ್ನಾನ, ಪೂಜೆ ಮತ್ತೆ ಬಿಸಿಬಿಸಿ ಊಟ. ಮೇಲೆ ಚೆನ್ನಾಗಿ ಕಾಯಿಸಿದ ಹಾಲು, ಬೇಕಾದರೆ ಬೆಲ್ಲ ಹಾಕಿಕೊಳ್ಳಬಹುದು. ಇವತ್ತು ನಾನು ಬೆಳಗ್ಗೆ ಗೆಳೆಯನೊಡನೆ ಹೋಗುವ ಅವಸರದಲ್ಲಿ ಬೆಳಗಿನ ಕ್ರಮ ತಪ್ಪಿತು. ಪಾಪ ನನ್ನಾಕೆ ಮಾತುಮಾತಿಗೂ ನನ್ನನ್ನು ರೇಗಿಸಿ ಕಾಲೆಳೆದರೂ ಅವಳ ಅಂತರಂಗದಲ್ಲಿ ಪ್ರೀತಿ, ಕಾಳಜಿಗೆ ಕೊರತೆಯಿಲ್ಲ. ಹೂ ಅದು ನನಗೂ ಅವಳ ಬಗ್ಗೆ ಇಲ್ಲವೇ, ಅದಕ್ಕೇ ನನ್ನ ಮೊಮ್ಮಗಳು ಅದಿನ್ನೂ ಕೂಸು ಅದೆಂಥದ್ದೋ ‘ಲೌಬರ್ಡ್ಸ್’ ಅಂತ ಅಡ್ಡ ಹೆಸರಿಟ್ಟು ಆಗಾಗ್ಗೆ ಕರೆಯುತ್ತಾಳೆ. ಅವರಜ್ಜಿ ಕೆನ್ನೆ ಕೆಂಪಾಗುವಂತೆ ಮಾಡುತ್ತಾಳೆ. ಆ ಕೂಸೂ ಇಷ್ಟರಲ್ಲೇ ಮದುವೆಯಾಗಿ ಹೋಗಿಬಿಡುತ್ತಾಳೆ. ಎಲ್ಲಿಗೆ ಹೋಗ್ತಾಳೆ ಎದುರು ಮನೆಯಲ್ಲೇ ಇರ್‍ತಾಳೆ. ಬೇಕೆನ್ನಿಸಿದಾಗ ಹೋಗಬಹುದು. ನಮ್ಮ ಮನೆಯ ಹುಡುಗಿಯನ್ನು ಕೊಟ್ಟಿದ್ದೇವೆಂದು ಪದೇಪದೆ ಎಡತಾಕುವುದೂ ಸಭ್ಯತನವಲ್ಲ. ಗೆಳೆತನಕ್ಕೂ ಬೀಗತನಕ್ಕೂ ಅಂತರವಿದ್ದೇ ಇರುತ್ತದೆ. ಹಾಗಿದ್ದರೇ ಮರ್ಯಾದೆ. ಈಗಲೂ ನನಗೆ ನಂಬಲಾಗುತ್ತಿಲ್ಲ. ನನ್ನ ಒಂದೇ ಒಂದು ಆಲೋಚನೆ ಇಷ್ಟುಬೇಗ ನೆರವೇರುತ್ತೇಂತ ಅಂದುಕೊಂಡಿರಲಿಲ್ಲ. ಭಗವಂತಾ ನಿನ್ನ ನಿರ್ಣಯದ ಮುಂದೆ ನಾವೆಷ್ಟರವರು, ನೀನೇ ನನ್ನ ಬಾಯಿಂದ ಆ ಮಾತು ಹೊರಡಿಸಿದವನು. ಹೀಗೆ ಯೋಚನಾಲಹರಿ ಹರಿಸುತ್ತಿದ್ದವರಿಗೆ ‘ರೀ’ ಎಂಬ ಕರೆ ವಾಸ್ತವಕ್ಕೆ ಎಳೆತಂದಿತು ನೀಲಕಂಠಪ್ಪನವರನ್ನು.
ಈ ಕಾದಂಬರಿಯ ಹಿಂದಿನ ಚರಣ ಇಲ್ಲಿದೆ: https://www.surahonne.com/?p=40414
(ಮುಂದುವರಿಯುವುದು)
–ಬಿ.ಆರ್.ನಾಗರತ್ನ, ಮೈಸೂರು
ಕಾದಂಬರಿ ಸೊಗಸಾಗಿ ಓದಿಸಿಕೊಂಡು ಹೋಗುತ್ತಿದೆ…
ಪ್ರಕಟಿಸಿ ಪ್ರೋತ್ಸಾಹ ನೀಡಯತ್ತಿರುವುದಕ್ಕೆ ಹಾಗೇ ಓದಿ ಪ್ರತಿಕ್ರಿಯೆ ನೀಡಿರುವುದಕ್ಕೆ ಧನ್ಯವಾದಗಳು ಗೆಳತಿ ಹೇಮಾ
ಕಥಾಹಂದರವು ಇನ್ನಿಲ್ಲದಂತೆ ಸೊಗಸಾಗಿದೆ ನಾಗರತ್ನ ಮೇಡಂ! ಕಾಲಗರ್ಭದೊಳಗೆ ಇನ್ನೇನೆಲ್ಲಾ ಅಡಗಿವೆಯೋ… ಕಾತರದಿಂದ ಕಾಯುವಂತಿದೆ!
ನಿಮ್ಮ… ಪ್ರತಿಕ್ರಿಯೆಗೆ..ಧನ್ಯವಾದಗಳು…ಶಂಕರಿ ಮೇಡಂ..
ಕಾದಂಬರಿಯ ಪ್ರತಿ ಸಾಲು ನವಿರಾಗಿದೆ.
ಧನ್ಯವಾದಗಳು ನಯನ ಮೇಡಂ
ಸೊಗಸಾಗಿ ಓದಿಸಿಕೊಳ್ಳುತ್ತಿದೆ.
ಧನ್ಯವಾದಗಳು ಪದ್ಮಾ ಮೇಡಂ