ಪುಸ್ತಕ ಪರಿಚಯ ‘ಗೀತರೂಪಕ’ : ಶ್ರೀ ಗಜಾನನ‌ ಈಶ್ವರ ಹೆಗಡೆ

Share Button

ಮುನ್ನುಡಿ
ಹಿರಿಯರಾದ ಶ್ರೀ ಗಜಾನನ‌ ಈಶ್ವರ ಹೆಗಡೆಯವರು ಈಗಾಗಲೆ ಶ್ರೀಕಲ್ಪ, ರಸರಾಮಾಯಣ, ಲೋಕಶಂಕರ, ಸಮಾಜಮುಖಿ, ದಾರಿಯ ತಿರುವಿನ ದೀಪಗಳ ಚಿತ್ತಾರ ಕೃತಿಗಳ ಮೂಲಕ ತಮ್ಮ ಸೃಜನಶಕ್ತಿಯ ಸ್ವರೂಪದರ್ಶನದ ಬಗೆ ಯಾವುದು‌ ಎಂಬುದನ್ನು ಅನಾವರಣಗೊಳಿಸಿದ್ದಾರೆ. ಬಹುಕಾಲದ ನಿಡುಬಾಳಿನ ಚಿಂತನೆಯ ಫಲಗಳು ಇದೀಗ ಬ್ರಹ್ಮಕಮಲಗಳಾಗಿ ಅರಳಿವೆಯೇನೋ ಎಂಬಂತೆ ಈ ಕೃತಿಗಳು ಒಡಮೂಡಿವೆ. ಹೆಗಡೆಯವರು ತಮ್ಮ ‘ರಸರಾಮಾಯಣ’ ಕೃತಿಗೆ‌ ‘ಎದೆಯ ಮೊಗ್ಗರಳಿ’ ಎಂಬ ಉಪಶೀರ್ಷಿಕೆಯನ್ನು ಕೊಟ್ಟಿದ್ದಾರೆ. ಸರಳ ಸುಂದರ ಭಾವಗೀತೆಗಳಿಂದ ಕೂಡಿದ ಈ ಕೃತಿಯ ಪ್ರತಿಯೊಂದು ಕವನ ಕುಸುಮವೂ ಎದೆಯ ಮೊಗ್ಗರಳಿ ಮಧುದ್ರವಿಸಲಿ ಎಂಬ ಸಾಲನ್ನು ಭರತವಾಕ್ಯವೆಂಬಂತೆ ಒಳಗೊಂಡಿದೆ. ಇದು‌ ಅತ್ಯಂತ ಧ್ವನಿಪೂರ್ಣ ಪ್ರಕ್ರಿಯೆ. ಕವಿ ತನಗೂ, ಓದುಗರಿಗೂ ಈ ಮೂಲಕ ಕಿವಿಮಾತು ಹೇಳುತ್ತಿದ್ದಾರೆ. ಸಾಹಿತ್ಯಕೃತಿಗಳಿಂದ ಆಗಬೇಕಾದದ್ದೇನು‌ ಎಂಬುದನ್ನು ಪರೋಕ್ಷವಾಗಿ ಸೂಚಿಸಿದ್ದಾರೆ. ಇದು‌ ಅವರ‌ ಎಲ್ಲ ಕೃತಿಗಳಿಗೂ ಅನ್ವಯಿಸುತ್ತದೆ.

ಕಾವ್ಯ ಹೆಗಡೆಯವರ‌ ಅಭಿವ್ಯಕ್ತಿ ಮಾಧ್ಯಮದ ಸಹಜ ಗತಿ. ಅವರ ಬಹುತೇಕ ಕೃತಿಗಳು ಇದೇ ಪ್ರಕಾರದಲ್ಲಿವೆ. ಅವರ ಗದ್ಯ ಹಾಗೂ ಗದ್ಯ ಬರೆಹದ ಶೀರ್ಷಿಕೆಗಳೂ ಕಾವ್ಯದ ಸಂಸರ್ಗಕ್ಕೆ ಒಳಗಾಗಿವೆ. ಅಷ್ಟು ಮಾತ್ರವಲ್ಲ, ತಮ್ಮ ಬದುಕಿನ ಅನುಭವಗಳ ಅಭಿವ್ಯಕ್ತಿಯನ್ನೂಕಾವ್ಯಮಯವಾಗಿಯೇ‌ಅವರು ದಾಖಲಿಸಿದ್ದಾರೆ. ಕುತೂಹಲಕ್ಕಾಗಿ ‘ದಾರಿಯ ತಿರುವಿನ ದೀಪಗಳ ಚಿತ್ತಾರ’ ಕೃತಿಯ ‘ತೆರೆದ ಬಾಗಿಲು’ ಲೇಖನದ‌ ಒಂದಷ್ಟು ವಿವರಗಳನ್ನು ಗಮನಿಸಬಹುದು. 1967-68 ನೆಯ ವರ್ಷ. ನಾನು ಅಂತಿಮ ಬಿ.ಎ. ಪರೀಕ್ಷೆಗೆ ಬರೆದ‌ ಅನಂತರವೂ ಶಿವಮೊಗ್ಗೆಯ ಗಾರ್ಡನ್‌ ಏರಿಯಾದಲ್ಲಿದ್ದ ಹೋಟೆಲ್ ಪ್ರವಾಸಿಯಲ್ಲಿ ಸಪ್ಲೈಯರ್ ಆಗಿ ಮುಂದುವರೆದಿದ್ದೆ. ಅಲ್ಲಿಗೆ ದಿನವೂ ಡಾ. ಪಂಚಾಕ್ಷರಿ, ನೆಹರೂ ಕಾಲೇಜಿನ ಪ್ರಿನ್ಸಿಪಾಲರು‌ ಊಟಕ್ಕೆ ಬರುತ್ತಿದ್ದರು. . . .ಒಂದು ದಿನ ಅವರೊಂದಿಗೆ‌ ಇನ್ನಿಬ್ಬರು ಹಿರಿಯರು‌ ಊಟಕ್ಕೆ ಬಂದರು. ಬಂದವರಲ್ಲಿ‌ ಒಬ್ಬರು ಡಾ. ಜವರೇಗೌಡರು, ಮೈಸೂರಿನ ಕನ್ನಡ‌ ಅಧ್ಯಯನ ಸಂಸ್ಥೆಯ ಮುಖ್ಯಸ್ಥರು. ಇನ್ನೊಬ್ಬರು ಶಿವಮೊಗ್ಗದ ಗಣ್ಯರು…. ನಾನು ಬಡಿಸಲು ಬಂದಾಗ ಡಾ. ಪಂಚಾಕ್ಷರಿಯವರು ‘ಸರ್,ಈತ ಕನ್ನಡ‌ ಐಚ್ಛಿಕ ವಿದ್ಯಾರ್ಥಿ… ‘ ಎಂದು ನನ್ನನ್ನು ಡಾ. ಜವರೇಗೌಡರಿಗೆ ಪರಿಚಯಿಸಿದರು… ಅವರು ನನ್ನನ್ನು ‘ನಿಮ್ಮ ಹೆಸರೇನು?’ ಎಂದು ಕೇಳಿದರು. ‘ಗಜಾನನ’ ಎಂದೆ. ‘ಯಾರ ಮಗ?’ ಬೇಂದ್ರೆಯವರು ಹೀಗೇ ಒಮ್ಮೆ ಕೇಳಿದ್ದರು. ಅವರಿಗೆ ಉತ್ತರಿಸಿದಂತೆ ಇವರಿಗೂ ‘ಪಾರ್ವತಿಯ ಮಗ’ ಎಂದು ಉತ್ತರಿಸಿದೆ.

ಈ ಪ್ರಸಂಗವನ್ನು‌ಇಲ್ಲಿ ನೆನಪಿಸಿಕೊಳ್ಳಲು ಒಂದು‌ ಉದ್ದೇಶವಿದೆ. ವಾಸ್ತವದಲ್ಲಿ ಗಜಾನನ ಹೆಗಡೆಯವರು ‘ಪಾರ್ವತಿಯ ಮಗ’ ಮಾತ್ರವಲ್ಲ, ‘ಈಶ್ವರ ಪುತ್ರ’ರೂ ಹೌದು. ಇವರಿಗೆ ತಂದೆ ತಾಯಿ, ಅತೆ, ಮಾವ, ಬಂಧು ಬಳಗವೆಂದರೆ ಇನ್ನಿಲ್ಲದ‌ ಆಪ್ತಭಾವ. ಇವರು‌ ಎಲ್ಲವನ್ನು‌ಈಶ್ವರ ಸಂಪ್ರೀತಿ, ಈಶ್ವರಪೂಜೆಯೆಂದೇ ಬದುಕನ್ನು ನಡೆಸುತ್ತಾ ಬಂದವರು. ಈಶ್ವರನಿಗೋ ಬಿಲ್ವ ತ್ರಿದಳವೆಂದರೆ ಇನ್ನಿಲ್ಲದ ಪ್ರೀತಿ. ಆದ್ದರಿಂದ ಕೃತಿಮುಖೇನ‌ ಈಶ್ವರಾರ್ಚನೆ ಮಾಡಬೇಕೆಂದೇನೋ ಹೆಗಡೆಯವರು ಪ್ರಸ್ತುತ ಮೂರು ಸೊಗಸಾದ ರೂಪಕಗಳ ಮೂಲಕ ಬಿಲ್ವ ತ್ರಿದಳವನ್ನು ಸಮಾಜಮುಖಿ ಸದಾಶಿವನಿಗೆ ಸಮರ್ಪಿಸುತ್ತಿದ್ದಾರೆ.

ಓಂ ಮರುಳಸಿದ್ಧ, ಶಿವರಾಗಿಣಿ, ಶ್ರೀರಾಮ ಚಂದನ – ಇವು ಮೂರು ಸುಂದರ ಕೃತಿರತ್ನಗಳು. ಬದುಕಿನ‌ ಉನ್ನತಿಕೆಯನ್ನು ಸಾಧಿಸಿದ ಚೈತನ್ಯಗಳನ್ನು ಗಾಯನ, ನರ್ತನಗಳ ಮೂಲಕ ದರ್ಶಿಸುವ ಅಪೂರ್ವ ಸಾಹಿತ್ಯ-ರೂಪಕಗಳು. ಹೆಗಡೆಯವರು 1970 ರಿಂದ 1998 ರ ವರೆಗೆ ಸಿರಿಗೆರೆಯ ಎಂ.ಬಿ.ಆರ್. ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಆ ಸಂದರ್ಭದಲ್ಲಿ ಹಿರಿಯ ಜಗದ್ಗುರುಗಳಾಗಿದ್ದ ಶ್ರೀ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಅಂತಃಕರಣದ ಸವಿಯನ್ನು‌ ಉಂಡಿದ್ದಾರೆ. ಪೂಜ್ಯರ‌ ಆದೇಶ ಮತ್ತು‌ ಆಶಯದಿಂದ ನಿರ್ಮಾಣವಾದ ‘ತರಳಬಾಳು’ ನಗರದಲ್ಲಿ ಹಲವಾರು ವರ್ಷ‌ ಇವರು ವಾಸವಾಗಿದ್ದರು. ಅಲ್ಲಿಯ ಬದುಕು ಬಾಳು ಹೇಗಿತ್ತು‌ ಎಂಬುದನ್ನು ‘ನನ್ನ ಬಾಳ ಬೆಳಗಿದ ಬೆಳಕು’ ಲೇಖನದಲ್ಲಿ ಚಿತ್ರವತ್ತಾಗಿ ಬಣ್ಣಿಸಿದ್ದಾರೆ:

”ದಕ್ಷಿಣೋತ್ತರ ಕರ್ನಾಟಕದ ವಿವಿಧ ಸಾಂಸ್ಕೃತಿಕ ಹಿನ್ನೆಲೆಯ ದಲಿತ, ಕುರುಬ, ಬ್ರಾಹ್ಮಣ, ಜಂಗಮ‌ ಎಂಬಿತ್ಯಾದಿ ಭೇದವಿಲ್ಲದೆ‌ ಒಂದೇ ಕಂಬದಿಂದ ಬೆಳಗಿದ ದೀಪ ಎಲ್ಲ ಮನೆಗಳ ಬೆಳಕಾಯಿತು. ಒಂದೇ ತೊಟ್ಟಿಯ ನಲ್ಲಿಯಿಂದ ಸುರಿದ ನೀರು‌ ಎಲ್ಲರ ದಾಹ ತಣಿಸಿತು. ಜವಾನ, ಪ್ರಾಚಾರ್ಯ ಎಂಬ ವ್ಯತ್ಯಾಸವಿಲ್ಲದೆ‌ ಎಲ್ಲರ ಮಕ್ಕಳು ಅಲ್ಲಿ ಕೂಡಿ ಆಡಿ ವರ್ಧಿಸಿದರು. ತಮ್ಮ ತಮ್ಮ ಬಗೆಯಲ್ಲಿ ಸಾರ್ಥಕ ಬದುಕನ್ನು ಕಂಡುಕೊಂಡರು. ತರಳಬಾಳು ಎಂಬುದು ಮರುಳಸಿದ್ಧರ ಒಂದು ಆಶೀರ್ವಚನ ಮಾತ್ರ‌ ಅಲ್ಲ, ಅದೊಂದು‌ ಆದರ್ಶ, ದರ್ಶನ, ಬದುಕು ಪಡೆಯಬೇಕಾದ‌ ಅನುಭೂತಿ. ತರಳಬಾಳು ನಗರ‌ ಒಂದು ಕನಸು ನನಸಾದ ಮಂಟಪ. ಮಂಟಪದ ಕಾಲು, ಕೀಲುಗಳ ಬಂಧಕ್ಕೆ ಪರಮಪೂಜ್ಯರ‌ ಅನುಭಾವದ‌ ಅಂಟಿನ ಬೆಸುಗೆ ಸೇರಿತ್ತು. ಮಹತ್ತಿನಿಂದಲೇ ಮಹತ್ತು‌ ಎನ್ನುವುದು‌ ಎಲ್ಲ ಕಾಲದ ಸತ್ಯ.

‘ಓಂ ಮರುಳಸಿದ್ಧ‘ ಈ ಎಲ್ಲ ಕಾಲದ ಸತ್ಯಕ್ಕೆ ಮೂಲ ಕಾರಣವಾಗಿದ್ದ ಚೈತನ್ಯವನ್ನು ಕುರಿತ ನೃತ್ಯರೂಪಕ. ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರು ಸಕಲ ಜೀವಾತ್ಮರಿಗೆ ಲೇಸ ಬಯಸುವ ಸರ್ವಸಮಾನತೆಯ ಸಮಾಜದ ಕನಸು ಕಾಣುತ್ತಿದ್ದಾಗ ಮರುಳಸಿದ್ಧನಂತಹ ನಿಜಸಾಧಕರು‌ ಅದಕ್ಕೆ ಸ್ಪಷ್ಟ ಸಾಕ್ಷ್ಯಗಳನ್ನು ಒದಗಿಸಿದರು ಎಂಬುದು ಗಮನಿಸಬೇಕಾದ ಸಂಗತಿ. ಮಾದಿಗ ಸಮುದಾಯದಲ್ಲಿ ಜನಿಸಿದ ಮರುಳಸಿದ್ಧ ಎಲ್ಲ ಬಗೆಯ ಕೀಳರಿಮೆಯನ್ನು ಕಿತ್ತೊಗೆದು ಸಮಾಜದಲ್ಲಿ ತಾಂಡವವಾಡುತ್ತಿದ್ದ ಕ್ರೌರ್ಯಕ್ಕೆ ತಡೆಯೊಡ್ಡುತ್ತಾನೆ. ಜಾತಿಭೇದವನ್ನು ಮೀರಿ ನಿಲ್ಲುತ್ತಾನೆ. ‘ಒಲಿದರ ಮದುವೆಗೆ ಜಯಮಕ್ಕೆ’ ಎನ್ನುತ್ತಾನೆ. ರೇವಣಸಿದ್ಧರನ್ನು ಗುರುವಾಗಿ ಸ್ವೀಕರಿಸಿ ನಿಜಶರಣನಾಗುತ್ತಾನೆ. ಮಾಯೆಯನ್ನು ಮೀರುತ್ತಾನೆ, ಗೆಲ್ಲುತ್ತಾನೆ. ಶರಣತತ್ತ್ವಗಳನ್ನು ಸಾರುತ್ತಾನೆ. ಅಕ್ಕಮಹಾದೇವಿಯನ್ನು‌ ಅನುಗ್ರಹಿಸುತ್ತಾನೆ. ತೆಲುಗುಬಾಳು ಸಿದ್ಧನನ್ನು ಹರಸುತ್ತಾನೆ. ತರಳಬಾಳು ಪೀಠದ ಸಿದ್ಧಪುರುಷನಾಗಿ ವಿಶ್ವಬಂಧು ಮರುಳಸಿದ್ಧನೆನಿಸಿಕೊಳ್ಳುತ್ತಾನೆ.

ಈ ಎಲ್ಲವನ್ನು ಹೆಗಡೆಯವರು ಸುಭಗ ಶೈಲಿಯ ಪದ್ಯಗಳಲ್ಲಿ ಸೊಗಸಾಗಿ ನಿರೂಪಿಸಿದ್ದಾರೆ. ಅವರ ಶೈಲಿಯ ಲವಲವಿಕೆಯನ್ನು ಕೆಲವು ಸಾಲುಗಳಲ್ಲಿ ಗಮನಿಸಬಹುದು:

ಸುಳಿ ಸುಳಿದು ಬಂದ ಹಾಗೆ ತಂಗಾಳಿ
ಉರಿ ಬೇಗೆಯಲಿ ಬಂದಾನ
ಮಹಿಮ ಮರುಳ ಬಯಲ ಗಂಧವಾಗಿ
ಉಬ್ಬುಬ್ಬಿಕುಣಿವಕ್ರೌರ್ಯತಡೆದಾನ
ದಾಸ್ಯವೇ ನಮ್ಮ ತತ್ತ್ವದೊಳಗಿಲ್ಲ
ಇದ್ದರದು ಶಿವಾರ್ಪಿತವಷ್ಟೆ
ದೇಹತೇಜದ ಗೊಂಬೆ
ಕಣ್ಣುಕರುಣೆಯ ದೀಪ
ಅರ್ಥ ಮಾತಿನದಾಸ
ಇವನು ಶಿವಸಿದ್ಧ

ಸ್ತ್ರೀ ಪುರುಷರು ಸೇರಿಯೆ ಸಂಸಾರವು
ಮೇಲು ಕೀಳು ಅತಿ ನೀಚ ನಂಬಿಕೆಯು
ಸ್ವಾತಂತ್ರ್ಯದಛಲ ಹಿರಿ ಬದುಕಿನ ಬಲ
ಸರ್ವ ಸಮಾನತೆ ದಿನ ಜಪಿಸಲಿ ಮನ


ಈ ಎಲ್ಲ ಸಾಲುಗಳು ‘ಓಂ ಮರುಳಸಿದ್ಧ’ ರೂಪಕದ ಭಾವ ಶ್ರೀಮಂತಿಕೆಯನ್ನು ಹೆಚ್ಚಿಸಿವೆ ಮತ್ತು ಹೆಗಡೆಯವರ ಸೂಕ್ಷ್ಮಾವಲೋಕನಕ್ಕೆ ಸಾಕ್ಷಿಯಾಗಿವೆ. ಸಹಜವಾಗಿಯೆ ಈ ರೂಪಕವನ್ನು ಗಮನಿಸುವಾಗ ಶರಣರ ವಚನಗಳು, ದಾಸರ ಕೀರ್ತನೆಗಳು, ಶೂನ್ಯಸಂಪಾದನೆ, ಪ್ರಭುಲಿಂಗಲೀಲೆ, ಯಶೋಧರಚರಿತೆ ಮುಂತಾದ ಕೃತಿಗಳ ನೆನಪಾಗುತ್ತವೆ. ಆ ಎಲ್ಲ ಕೃತಿಗಳ ವಾರಸುದಾರ ನಾನು ಎಂಬ ಹೆಮ್ಮೆಯಿಂದಲೆ ಹೆಗಡೆಯವರು ಮುನ್ನಡೆದಿದ್ದಾರೆ. ತತ್ತ್ವಚಿಂತನೆಯಲ್ಲಿ‌ ಇವರದು ಮುಕ್ತವಾದ ಮನಸ್ಸು. ಶರಣರ‌ ಅಷ್ಟಾವರಣ, ಪಂಚಾಚಾರ, ಷಟ್ಸ್ಥಲಗಳನ್ನು ತುಂಬ ಆಪ್ತವಾಗಿ ವಿವರಿಸಿದ್ದಾರೆ. ನಿಜವಾದ ಶ್ರದ್ಧೆ, ಬದ್ಧತೆ ರೂಪಕದ ನಿರ್ವಹಣೆಯಲ್ಲಿ‌ಎದ್ದುಕಾಣುತ್ತದೆ. ರೂಪಕ‌ಒಂದು ಪ್ರಬುದ್ಧಕೃತಿಯಾಗಿ ಹೊರಹೊಮ್ಮಿದೆ.

‘ಶಿವರಾಗಿಣಿ’ ಅಕ್ಕಮಹಾದೇವಿಯನ್ನು ಕುರಿತ‌ ಒಂದು ಪುಟ್ಟ ಸುಂದರ ರೂಪಕ. ಅಕ್ಕ ತನ್ನ ಬದುಕು ಮತ್ತು ನಿಲುವುಗಳ ಮೂಲಕ ಮಹಿಳಾ ಸಮುದಾಯಕ್ಕೆ ದಿಟ್ಟತನವನ್ನು ತಂದುಕೊಟ್ಟವಳು. ಆದ್ದರಿಂದಲೇ ಈ ರೂಪಕ ಹನ್ನೆರಡನೆಯ ಶತಮಾನದ ಸ್ತ್ರೀಯರ ಸ್ಥಿತಿಗತಿಗಳ ಚಿತ್ರಣದ ಮೂಲಕ ಆರಂಭವಾಗುತ್ತದೆ. ನಂತರ ಅಕ್ಕನ ಜನನ, ಬಾಲ್ಯ, ಮರುಳಸಿದ್ಧರ ಅನುಗ್ರಹ, ತಾರುಣ್ಯ, ಕೌಶಿಕನ ಒಲವು, ಸಂಬಂಧದ ಸಂದಿಗ್ಧತೆ, ಬಿಡುಗಡೆ, ಶರಣ ಸಂದೋಹದ‌ ಒಡನಾಟ, ಶ್ರೀಶೈಲದೆಡೆಗೆ ಪಯಣ ಈ ಎಲ್ಲವನ್ನು ತೀವ್ರಗತಿಯ‌ ಓಘದಲ್ಲಿ ಚಿತ್ರಿಸಿದ್ದಾರೆ. ಹೆಗಡೆಯವರ ಚಿತ್ರಕ ಶಕ್ತಿ ಅಪೂರ್ವವಾದದ್ದು. ಅಕ್ಕನ ಜನನ ಸಂದರ್ಭವನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ ಎಂಬುದನ್ನು ಕೆಳಗಿನ ಸಾಲುಗಳಲ್ಲಿ ಕಾಣಬಹುದಾಗಿದೆ:

ಧರ್ಮವೆಂಬರು ಕರ್ಮವೆಂಬರು
ಹೆಣ್ಣ ಕಂಡರೆ‌ ಇಲ್ಲ ಬದ್ಧರು
ಶರಣಮಾರ್ಗದಿ ಜ್ಯೋತಿ ಝಗ್ಗನೆ
ಬೆಳಗಿತೊ ಉಡುತಡಿಯ ತೊಟ್ಟಿಲು


‘ರಸರಾಮಾಯಣ’ದಲ್ಲಿ ಹೆಗಡೆಯವರು ರಾಮಾಯಣ ಮಹಾಕಾವ್ಯದ‌ ಎಲ್ಲ ಮಾನವೀಯ ಸೂಕ್ಷ್ಮಗಳನ್ನೂ ಭಾವಗೀತೆಗಳ ರೂಪದಲ್ಲಿ ದಾಖಲಿಸಿದ್ದಾರೆ. ಅಲ್ಲಿಯ‌ ಒಂದೊಂದು ಕವನವೂ ಒಂದೊಂದು ಜೇಂಗೊಡ. ಕವಿಯ‌ ಎದೆಯ ಮೊಗ್ಗರಳಿ ಅಲ್ಲಿ ಮಧು ಸೃಷ್ಟಿಯಾಗಿದೆ. ಆ ಮಧುವನ್ನು ರಸಿಕರಿಗೆ ಆಪ್ಯಾಯಮಾನವಾಗುವಂತೆ‌ ಉಣಬಡಿಸಬೇಕು ಎಂಬ ವಾಂಛೆ 90 ರ ದಶಕದಲ್ಲಿಯೇ ಕವಿಯ ಮನಸ್ಸಿನಲ್ಲಿ ಗೂಡು ಕಟ್ಟಿತ್ತು. ಅದರ‌ಒಂದು ಮುಖವಾಗಿ ‘ಶ್ರೀರಾಮ ಚಂದನ’ ರೂಪಕ ಆಗಲೇ ರೂಪುಗೊಂಡಿತು‌ ಎನ್ನುವುದು ಹೌದಾದರೂ ತನ್ನದೇ‌ ಆದ ವಿಶೇಷತೆಯಿಂದ ಈಗಲೂ ಗಮನಾರ್ಹ. ‘ಶ್ರೀರಾಮ ಚಂದನ’ ರಾಮಾಯಣದ ಬಾಲಕಾಂಡದ ಕಥಾ ಭಾಗವನ್ನು ಒಳಗೊಂಡಿದೆ. ಹಾಗೆ ನೋಡಿದರೆ ಬಾಲಕಾಂಡ ರಾಮಾಯಣದ ಸುಖ ಕಥನದ‌ ಏರು ಪಯಣವನ್ನು‌ ಅಭಿವ್ಯಕ್ತಿಸುತ್ತದೆ. ರಾಮನ ಜನನದಿಂದ ಪರಶುರಾಮ ದರ್ಶನದ ವರೆಗಿನ ಈ ಕಥನ ರಾಮ, ದಶರಥ, ಅರಮನೆಯ ಪರಿವಾರ ಹಾಗೂ ಅಯೋಧ್ಯೆಯ ಜನತೆಯ ಸಂತೋಷವನ್ನು ಕ್ಷಣಕ್ಷಣಕ್ಕೂ ಹೆಚ್ಚಿಸುತ್ತಾ ಹೋಗುತ್ತದೆ. ರಾಮನ ವ್ಯಕ್ತಿತ್ವವನ್ನು ರೂಪಿಸುವ, ಗಟ್ಟಿಗೊಳಿಸುವ, ವ್ಯಾಪಕಗೊಳಿಸುವ ವಿಶ್ವಾಮಿತ್ರರ ಪ್ರಯತ್ನ‌ ಇಲ್ಲಿ ಹಾಸುಹೊಕ್ಕಾಗಿದೆ. ಶ್ರೀ ದೇರಾಜೆ ಸೀತಾರಾಮಯ್ಯನವರು ಬಾಲಕಾಂಡದ ಕಥೆಯನ್ನೇ ಹೊಸ ದೃಷ್ಟಿಯಿಂದ ವಿಶ್ಲೇಷಿಸಿ ವಿಶ್ವಾಮಿತ್ರರನ್ನು ‘ರಾಮರಾಜ್ಯದ ರೂವಾರಿ’ ಎಂದು ಕರೆದು ಕೃತಿ ರಚಿಸಿದ್ದಾರೆ. ಹೆಗಡೆಯವರ ಈ ರೂಪಕ ಆ ಕೃತಿಗೆ ವ್ಯಾಖ್ಯೆ ಬರೆದಂತಿದೆ.


ಬಾಲರಾಮ ಸೀತಾರಾಮನಾಗುವ, ರಾಮ ಪರಶುರಾಮ-ಸತ್ವವನ್ನು ಒಳಗೊಳ್ಳುವ, ತಾಟಕಿ ಸಂಹಾರ, ಅಹಲ್ಯೋದ್ಧಾರ ಮುಂತಾದ‌ ಎಲ್ಲ ಸಂದರ್ಭಗಳು ಶ್ರೀರಾಮ-ವ್ಯಕ್ತಿತ್ವದ ಶ್ರೀಗಂಧ ಪರಿಮಳವನ್ನು ಸೂಸುವ ಸುಂದರ ಸನ್ನಿವೇಶಗಳಾಗಿವೆ. ಈ ರೂಪಕದ ಕೊನೆಯಲ್ಲಿ ಪರಶುರಾಮ ಮನದುಂಬಿ ರಾಮನಿಗೆ ಹೇಳುತ್ತಾನೆ:

ಎರಗಿದೆ ನಿನ್ನಯ ಗುಣಕೆ
ಎರಗಿದೆ ನಿನ್ನಯ ವಿವೇಕಕೆ
ಎರಗಿದೆ ನಿನ್ನಯ ಬಲಕೆ
ಎರಗಿದೆ ನಿನ್ನಯ ಚೆಲುವಿಗೆ


ಈ ಮಾತು‌ ಇಂತಹ ಚೈತನ್ಯಗಳ ಬಗ್ಗೆ ಕೃತಿ ರಚಿಸಿರುವ ಶ್ರೀ ಗಜಾನನ‌ ಈಶ್ವರ ಹೆಗಡೆಯವರಿಗೂ ಹೆಚ್ಚು ಅರ್ಥಪೂರ್ಣವಾಗಿ‌ ಅನ್ವಯವಾಗುತ್ತದೆ. ಗುಣ, ವಿವೇಕ, ಬಲ, ಚೆಲುವು ಅಕ್ಷಯವಾಗಲಿ ಎಂದು ಆಶಿಸುವೆ.

-ಪ್ರೊ. ಮೊರಬದ ಮಲ್ಲಿಕಾರ್ಜುನ , ಮೈಸೂರು

4 Responses

  1. MANJURAJ H N says:

    ಚೆನ್ನಾಗಿದೆ ಗುರುಗಳೇ, ಧನ್ಯವಾದಗಳು….

  2. ಕೃತಿಯ ಪರಿಚಯ ಅಚ್ಚುಕಟ್ಟಾಗಿ ಬಂದು ಆ ಕೃತಿ ಯನ್ನು ಓದಬೇಕೆನ್ನುವಂತಿದೆ.. ಧನ್ಯವಾದಗಳು..
    ಸಾರ್

  3. ಶಂಕರಿ ಶರ್ಮ says:

    ಅಪರೂಪದ ಪುಸ್ತಕವೊಂದರ ವಿಮರ್ಶಾತ್ಮಕ ಪರಿಚಯವು ಚೆನ್ನಾಗಿದೆ.

  4. ಪದ್ಮಾ ಆನಂದ್ says:

    ಹಿರಿಯ ಕವಿಯ ಚಂದದ ಪುಸ್ತಕದ ಸುಂದರ ಪರಿಚಯಕ್ಕಾಗಿ ಅಭಿನಂದನೆಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: