ಇಡ್ಡಲಿಗೆ ಎಂಬ ದಿವಿನಾದ ಕೊಡುಗೆ !

Share Button

ನಮ್ಮೆಲ್ಲರ ಅಚ್ಚುಮೆಚ್ಚಿನ ಅಂತರ್ಜಾಲ ಪತ್ರಿಕೆಯಾಗಿರುವ ‘ಸುರಹೊನ್ನೆ’ಯು ದೋಸೆಯನ್ನು ಕುರಿತ ಥೀಮ್ ಕೊಟ್ಟಿತ್ತು. ಈ ಥೀಮ್ ಬರೆಹ ನನ್ನನ್ನು ಆಕರ್ಷಿಸಿದ್ದರಿಂದ ನೆನಪುಗಳ ಮೀಟುಗೋಲಲ್ಲಿ ಬರೆದೇ ಬಿಟ್ಟೆ. ‘ದೋಸೆಯಾಸೆ’ ಎಂದು ಹೆಸರನ್ನೂ ಕೊಟ್ಟೆ; ಪ್ರಕಟವೂ ಆಯಿತು. ಈ ಲಲಿತ ಪ್ರಬಂಧಕ್ಕೆ ಅಪಾರ ಜನಮೆಚ್ಚುಗೆಯೂ ದೊರೆಯಿತು. ಆದರೆ ನನಗೆ ದೋಸೆಯಷ್ಟೇ ಇಡ್ಲಿಯೂ ಪ್ರಿಯ. ಹಾಗಾಗಿ ಅಪರಾಧೀ ಭಾವವೊಂದು ಕಾಡಲು ಶುರುವಿಟ್ಟಿತು. ‘ಇಡ್ಲಿಯನ್ನು ಕುರಿತು ಬರೆಯಬೇಕಿತ್ತಲ್ಲವೇ?’ ಎಂದು ನನ್ನಲ್ಲೇ ಕೇಳಿಕೊಂಡೆ. ಹಾಗಾಗಿ ಇದು ನಿಮ್ಮ ಕಣ್ಣ ಮುಂದಿದೆ.

ದೋಸೆ ಎಂದ ಕೂಡಲೇ ಇಡ್ಲಿಯೂ ಇಡ್ಲಿ ಎಂದ ಕೂಡಲೇ ದೋಸೆಯೂ ನೆನಪಾಗಿ, ನೆಪವಾಗಿ, ನಲ್ಮೆಯ ಭಾವಗಳ ಮೀಟುವುದು ಸುಳ್ಳಲ್ಲ. ಯಾವ ಜನ್ಮದಲ್ಲಿ ಇವೆರಡು ಅಕ್ಕತಂಗಿಯರಾಗಿದ್ದವೋ ಗೊತ್ತಿಲ್ಲ. ಇವೆರಡರ ಹುಟ್ಟಿನ ಮೂಲ ಒಂದೇ ಆದರೂ ಸ್ವಲ್ಪ ವ್ಯತ್ಯಾಸವಿದೆ. ಇಬ್ಬರಿಗೂ ಅಕ್ಕಿಯೂ ಬೇಕು; ಉದ್ದಿನಬೇಳೆಯೂ ಬೇಕು. ಆದರೆ ಒಟ್ಟಿಗೆ ರುಬ್ಬಿಟ್ಟರೆ ದೋಸೆ; ಬೇರೆ ಬೇರೆ ರುಬ್ಬಿಟ್ಟು ಆನಂತರ ಕಲೆಸಿಟ್ಟರೆ ಇಡ್ಲಿ! ಆಹಾ, ಎಂಥ ಬಂಧ ಅನುಬಂಧವಿದು! ಜಗತ್ತಿನಲ್ಲಿ ಇನ್ನಾವುದೂ ಇಂಥ ವಿಶೇಷದಿಂದ ಕೂಡಿಲ್ಲವೆಂದರೆ ಉತ್ಪ್ರೇಕ್ಷೆಯಾಗದು! ದೋಸೆಹಿಟ್ಟು ಅಂದರೆ ಅದರ ಸಂಪಣವನ್ನು ಸಿದ್ಧಪಡಿಸಿ ದೋಸೆ ಮಾಡುವ ಹಲವರಿಗೆ ಇಡ್ಲಿ ಕೈ ಕೊಡುತ್ತದೆಂಬುದೇ ಸೋಜಿಗ. ಈ ವಿಚಾರದಲ್ಲಿ ಇಡ್ಲಿಯದೊಂದು ಜನ್ಮರಹಸ್ಯ! ದೋಸೆಯು ತಯಾರಾಗುವಾಗ ನಮಗೆ ಗೊತ್ತಾಗುತ್ತದೆ. ಹಿಟ್ಟು ತೆಳ್ಳಗಾಯಿತೇ? ಗಟ್ಟಿಯಾಯಿತೇ? ಏನಾದರೂ ಪರಿಹಾರಕ್ಕೆ ಅವಕಾಶವಿದೆ. ಆದರೆ ಇಡ್ಲಿಯದು ಹಾಗಲ್ಲ. ಇದೊಂಥರ ಪರೀಕ್ಷೆ ಬರೆದ ಮೇಲೆ ಫಲಿತಾಂಶಕ್ಕಾಗಿ ಕಾತರದಿಂದ ಕಾಯುವಂತೆ. 

ಇಡ್ಲಿಯು ಹಬೆಯಲ್ಲಿ ಬೇಯುವುದರಿಂದ ಎಣ್ಣೆ ಬೆಣ್ಣೆ ಬೇಡುವ ದೋಸೆಗಿಂತಲೂ ಆರೋಗ್ಯಕಾರಿ. ಆದರೆ ಇಡ್ಲಿಪಾತ್ರೆಯಲಿ ಮುಚ್ಚಿಟ್ಟು ಇಂತಿಷ್ಟು ನಿಮಿಷವೆಂದು ಲೆಕ್ಕ ಹಾಕಿದ ಮೇಲೆಯೇ ಸ್ಟವ್ ಆಫ್ ಮಾಡಿ, ಒಂದಷ್ಟು ಗಳಿಗೆ ಬಿಟ್ಟು ಮುಚ್ಚಳ ತೆಗೆದು ನೋಡಬೇಕು. ಆಗಲೇ ಅದರ ಬಂಡವಾಳ ಗೊತ್ತಾಗುವುದು! ಒಮ್ಮೆಯಾದಂತೆ ಇನ್ನೊಮ್ಮೆ ಆಗುವುದಿಲ್ಲ! ಎಲ್ಲ ರೀತಿಯ ಅಡುಗೆಗಳನ್ನೂ ಮಾಡಿ, ಅಭೂತಪೂರ್ವವಾಗಿ ಬಡಿಸಿ, ಸತ್ಕರಿಸುವ ನಮ್ಮ ಕುಟುಂಬಮಿತ್ರರೊಬ್ಬರಿಗೆ ಇಡ್ಲಿ ಮಾಡಲು ಬರುವುದಿಲ್ಲ! ಹಲವು ಸಲ ಪ್ರಯತ್ನಿಸಿ, ಸೋತು, ಇದೀಗ ಒಂದು ತೀರ್ಮಾನಕ್ಕೆ ಬಂದಿದ್ದಾರೆ; ಸೋಲನ್ನು ಕಾಯಾ ವಾಚಾ ಮನಸಾ ಒಪ್ಪಿಕೊಂಡಿದ್ದಾರೆ. ಇದೊಂದು ನನಗೆ ಒದಗಿ ಬರಲಿಲ್ಲವೆಂದು ಅಲವತ್ತುಕೊಳ್ಳುತ್ತಾರೆ. ‘ಚೆನ್ನಾಗಿ ಇಡ್ಲಿ ಮಾಡುವವರ ಮನೆಗೆ ಹೋಗಿ ತಿನ್ನುವುದೇ ಸರಿ’ ಎಂಬ ಅಂತಿಮ ನಿರ್ಧಾರಕ್ಕೆ ಬಂದಿದ್ದಾರೆ. ಅಂದರೆ ನೋಡಲು ಸರಳವಾಗಿಯೂ ಸುಭಗವಾಗಿಯೂ ಕಾಣುವ ಇಡ್ಲಿಯನ್ನು ಹದವಾಗಿ ಮಾಡುವ ಕಲೆ ಎಲ್ಲರಿಗೂ ಒಲಿದಿಲ್ಲ; ಒಲಿಯುವುದಿಲ್ಲ ಕೂಡ. ನಾನು ದೋಸೆ ಮಾಡಿಕೊಂಡಿದ್ದೇನೆಯೇ ವಿನಾ ಇಡ್ಲಿಗೆ ಕೈ ಹಾಕಿಲ್ಲ. ನನ್ನಾಕೆ ಎರಡರಲ್ಲೂ ಫೇಮಸ್ಸು. ಅವಳ ಕೈಯ ಇಡ್ಲಿಯನ್ನು ನಮ್ಮೆಲ್ಲ ಕುಟುಂಬಮಿತ್ರರು ಸೇವಿಸಿ ತುಂಬಾನೇ ಹೊಗಳುತ್ತಾರೆ. ಥರಾವರೀ ಇಡ್ಲಿಯಿಂದಾಗಿ ನಾನು ಸಂತೃಪ್ತ. ಮೊದಲ ದಿನದ ಇಡ್ಲಿಯ ಮೃದುತ್ವ ಅದ್ಭುತ. ಎರಡನೆಯ ದಿನ ಇಡ್ಲಿ ಹಿಟ್ಟು ಮಿಕ್ಕಿದರೆ ಆಗ ನಮ್ಮನೆಯಲ್ಲಿ ಮಸಾಲೆ ಇಡ್ಲಿ. ನನಗೆ ಚಟ್ನಿ ಇದ್ದರೆ ಸಾಕು. ಆದರೆ ತುಪ್ಪ ಇಲ್ಲದೇ ಇಡ್ಲಿ ತಿನ್ನಲಾರೆ. ತುಪ್ಪವಿಲ್ಲದ ಇಡ್ಲಿಯನ್ನು ತಿನ್ನುವುದೆಂದರೆ ಪೆನ್ನಿಲ್ಲದೆ ಪರೀಕ್ಷೆ ಬರೆದಂತೆ; ಗನ್ನಿಲ್ಲದೆ ಯುದ್ಧಕ್ಕೆ ಹೋದಂತೆ! ಬಹು ಬೇಗ ನಿಸ್ತೇಜನಾಗುತ್ತೇನೆ. ಹಾಗಾಗಿ ಈಗೀಗ ನನ್ನ ಈ ವಾಂಛಲ್ಯವನ್ನು ಮನಗಂಡ ಸತೀ ಶಿರೋಮಣಿಯು ಹೊಟೆಲಿಗೆ ಹೊರಡುವುದೆಂದು ಖಾತ್ರಿಯಾದ ಕೂಡಲೇ ಒಂದು ಪುಟ್ಟಡಬ್ಬಿಯಲ್ಲಿ ಮನೆಯಿಂದಲೇ ತುಪ್ಪವನ್ನು ತಂದಿರುತ್ತಾಳೆ. ಸಪ್ಲೆ ಮಾಡುವವರು ‘ಬೆಣ್ಣೆ ಬೇಕಾ ಸಾರ್’ ಅನ್ನುತ್ತಾರೆ. ಆದರೆ ನಾನು ತುಪ್ಪ ಪ್ರಿಯ; ನನ್ನಾಕೆಯು ಬೆಣ್ಣೆ ಪ್ರಿಯೆ! ಜೊತೆಗೆ ಮೊಸರಿನಲ್ಲಿ ಇಡ್ಲಿ ತಿನ್ನುವುದು ಅವಳ ಇಷ್ಟದ ಕೆಲಸ. ಹೀಗೇ ನಾವಿಬ್ಬರಿದ್ದರೂ ಹಲವು ಪ್ರಯೋಗಗಳನ್ನು ಇಡ್ಲಿಯ ವಿಚಾರದಲ್ಲಿ ನಡೆಸುತ್ತಿರುತ್ತೇವೆ. ರವೆ ಇಡ್ಲಿಯನ್ನು ನಾನು ಸಂಜೆಯ ವೇಳೆಗೆ ಇಷ್ಟಪಡುತ್ತೇನೆ. ಯಾಕೋ, ಬೆಳಗ್ಗೆಯ ವೇಳೆಗೆ ನನಗದು ಒಗ್ಗುವುದಿಲ್ಲ. ಮೈಸೂರಿನ ಇಲವಾಲದ ಬಳಿಯಿರುವ ಆಶೀರ್ವಾದ್ ಗ್ರ್ಯಾಂಡ್‌ನಲ್ಲಿ ರವೆ ಇಡ್ಲಿ ತಿನ್ನುವುದು ನಿಜಕ್ಕೂ ಸ್ವರ್ಗಸಮಾನ. ಚಟ್ನಿ ಮತ್ತು ಸಾಗು ಇದರ ಸೂಪರ್ ಕಾಂಬಿನೇಷನ್ನು. ಭಾಗ್ಯಲಕ್ಷ್ಮಿ ಇಡ್ಲಿತರಿಯಿಂದ ಮಾಡಿದ್ದನ್ನು ತಿಂದು ಬೇಸರವಾದ ಮೇಲೆ ಒಮ್ಮೊಮ್ಮೆ ಕುಸುಬಲ ಅಕ್ಕಿಯನ್ನು ನೆನೆಸಿ ಮಾಡುವ ಇಡ್ಲಿ ನನಗೆ ಬಲು ಇಷ್ಟವಾಗುತ್ತದೆ. ಕೆಲವರಿಗೆ ತರಿತರಿಯಾದ ಅಂದರೆ ನುಣುಪಲ್ಲದ ಇಡ್ಲಿ ಇಷ್ಟವಾದರೆ, ಇನ್ನು ಕೆಲವರಿಗೆ ನೈಸ್ ಇಡ್ಲಿ ಇಷ್ಟ. ಮೈಸೂರಿನ ಕುವೆಂಪುನಗರದಲ್ಲಿರುವ ಹೊಟೆಲ್ ಹರಿಹರದಲ್ಲಿ ನೈಸ್ ಇಡ್ಲಿಯನ್ನು ಕೆಂಪುಬಣ್ಣದ ನೀರು ಚಟ್ನಿಯೊಂದಿಗೆ ತಿನ್ನುವುದೇ ಸೊಗಸು. ಬಿದಿರ ಬುಟ್ಟಿಯಲಿಟ್ಟು ಬೇಯಿಸುವ ಚಿಬ್ಬಲು ಇಡ್ಲಿಯನು ಇಲ್ಲಿ ಸವಿದರೆ, ಸ್ವರ್ಗ ಬೇರೆಲ್ಲೂ ಇಲ್ಲ; ಇಡ್ಲಿ ಮತ್ತು ದೋಸೆಯಲ್ಲೇ ಅಡಗಿದೆ ಎಂಬ ತೀರ್ಮಾನಕ್ಕೆ ಬಂದಿದ್ದೇನೆ.

PC: Internet

ಹಬೆಯಲ್ಲಿ ಬೇಯುವುದರಿಂದ ಇಡ್ಲಿಯು ಒಂಥರಾ ಪವಿತ್ರ ಪತಿವ್ರತೆ! ಸಾಮಾನ್ಯವಾಗಿ ಪ್ರಯಾಣ ಕಾಲದಲ್ಲಿ ಬೆಳಗಿನ ತಿಂಡಿಯಾಗಿ ಇಡ್ಲಿಯನ್ನು ತಿನ್ನುವವರೇ ಬಹಳ. ಇಡ್ಲಿ ಮತ್ತು ಸಾಂಬಾರ್ ಒಂಥರಾ ಅನ್ಯೋನ್ಯ ದಂಪತಿಯೇ ಸರಿ; ಆದರೆ ಸಾಂಬಾರ್ ರುಚಿಯಾಗಿ ಇರಬೇಕಷ್ಟೇ. ಹೊಟೆಲಿನ ಇಡ್ಲಿಯೊಂದಿಗೆ ಕೊಡುವ ಸಾಂಬಾರು ವಿಶೇಷವಾಗಿರುತ್ತದೆ. ಸ್ವಲ್ಪ ಸಿಹಿ ಮುಂದಿದ್ದರೆ ಬೊಂಬಾಟ್ ಟೇಸ್ಟು. ಅಂದರೆ ಸಣ್ಣೀರುಳ್ಳಿಯನ್ನೋ ಸಿಹಿಗುಂಬಳವನ್ನೋ ಸಾಂಬಾರ್‌ಗೆ ಜೊತೆಗೂಡಿಸಿದಾಗ ಇಂಥ ಸಿಹಿಯೊಡಗೂಡಿದ ರುಚಿ ತಂತಾನೇ ನಮ್ಮ ಜಿಹ್ವೆಯನ್ನು ಜಾಗೃತಗೊಳಿಸುವುದು. ಅದರಲ್ಲೂ ಸಿಂಗಲ್ ಇಡ್ಲಿ ಸಾಂಬಾರ್ ಎಂಬುದು ಒಂಥರಾ ಎಂಟ್ರೆನ್ಸ್ ಎಕ್ಸಾಮಿದ್ದಂತೆ. ಆ ಹೊಟೆಲಿನ ಯೋಗ್ಯತೆಯನ್ನು ಪರೀಕ್ಷೆ ಮಾಡುವ ಸಾಮಾನ್ಯ ವಿಧಾನ. ಇದು ಹಿಡಿಸಿದರೆ ಮುಂದೆ ದೋಸೆಗೋ ರೈಸ್ ಐಟಮ್ಮಿಗೋ ಆರ್ಡರ್ ಶುರು. ಒಟ್ಟಿನಲ್ಲಿ ಇಡ್ಲಿಯೆಂಬುದು ಬದುಕಿನ ಬೃಹತ್ ಹೊತ್ತಗೆಯ ಮುನ್ನುಡಿ ಮತ್ತು ಪರಿವಿಡಿ ಇದ್ದಂತೆ. ಇಡ್ಲಿಯಿಂದಲೇ ಹೊಟೆಲೋದ್ಯಮವಾಗಲೀ ಫಾಸ್ಟ್ ಫುಡ್‌ಗಳಾಗಲೀ ತಲೆ ಎತ್ತಿ ನಿಲ್ಲುವಂಥಾಗುವುದು. ಹೊಟೆಲಿನ ಮಾಲೀಕರಿಗೆ ಇಡ್ಲಿಯೇ ಭಗವಂತನ ವರಪ್ರಸಾದ. ಇಡ್ಲಿಸಾಂಬಾರು ಚೆನ್ನಾಗಿಲ್ಲದಿದ್ದರೆ ಇನ್ನಾವ ಐಟಮ್ಮೂ ಮೂವಾಗುವುದಿಲ್ಲ! ಜನ ಆಮೇಲೆ ತಿರುಗಿಯೂ ನೋಡುವುದಿಲ್ಲ. ಹಾಗಾಗಿ ಇಡ್ಲಿಯು ನಮ್ಮ ಆಹಾರ ಜಗತ್ತಿನ ಅನಭಿಷಿಕ್ತ ದೊರೆ ಮತ್ತು ದೊರೆಸಾನಿ. 

ನಾನಂತೂ ಇತ್ತೀಚೆಗೆ ಹೊಳೆನರಸೀಪುರದ ಎರಡು ಹೊಟೆಲುಗಳ ಇಡ್ಲಿಯನ್ನು ಭಯಂಕರ ಇಷ್ಟಪಡುವವನಾಗಿ ಬಿಟ್ಟಿದ್ದೇನೆ. ನರಸೀಪುರದ ವಾಸವು ನನಗೆ ಇಂಥ ಅನುಭೂತಿಯಿಂದ ಸಹ್ಯವಾಗಿದೆ; ಸುಂದರವಾಗಿದೆ; ಸಂತೋಷಭರಿತವಾಗಿದೆ. ಹಳೆಯ ಕಾಲದ ಕಟ್ಟಡದಲ್ಲೇ ನಡೆಯುತ್ತಿರುವ ವಾಸವಿ ಹೊಟೆಲಿನ ಇಡ್ಲಿ ಮತ್ತು ಗಟ್ಟಿಚಟ್ನಿಗೆ ಫಿದಾ ಆಗಿಬಿಟ್ಟಿದ್ದೇನೆ. ಅದರಲ್ಲೂ ನಾನು ತಿಂದು ಬರುವಾಗ ಅಲ್ಲಿನ ಸಪ್ಲೈಯರಿಗೆ ಟಿಪ್ಸು ಕೊಡುವುದರಿಂದ ಅವರು ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ತಟ್ಟೆಯಲ್ಲಿ ಗಟ್ಟಿಚಟ್ನಿಯು ಇನ್ನೂ ಸ್ವಲ್ಪ ಉಳಿದಿರುವಾಗಲೇ ತಂದು ಬಡಿಸಿ, ‘ಸಾಕಾ?’ ಎನ್ನುತ್ತಾರೆ. ಪಾರ್ಸೆಲ್ ತರುವಾಗ ನಾನು ಮೆಲ್ಲಗೆ ‘ಸಾಂಬಾರ್ ಬೇಡ; ಚಟ್ನಿ ಜಾಸ್ತಿ ಬೇಕು’ ಎಂದರೆ ಮರು ಮಾತಾಡದೆ, ನಾನು ಕೊಟ್ಟ ಡಬ್ಬಿಗೆ ಚಟ್ನಿಯನ್ನು ತುಂಬಿ, ಹಾಗೇ ಓರೆಮಾಡಿ ನನಗೆ ತೋರಿಸಿ, ಕಣ್ಣಲ್ಲೇ ‘ಸಾಕೇ?’ ಎಂದು ಕೇಳುತ್ತಾರೆ. ಇದೆಲ್ಲ ಐದಾರು ಸೆಕೆಂಡಿನಲ್ಲಿ ನಡೆಯುವ ಕಣ್ಕಟ್ಟು ಮಾಟ ಕೂಟ. ನಾನು ಸಾಕೆಂದು ತಲೆ ಅಲ್ಲಾಡಿಸಿದರೆ ಮುಚ್ಚಳ ಮುಚ್ಚುತ್ತಾರೆ. ಸುಮ್ಮನೆ ನಿಂತಿದ್ದರೆ ಇನ್ನೊಂದು ಸ್ವಲ್ಪ ತುಂಬುತ್ತಾರೆ. ನಾನು ‘ಚಟ್ನಿಪ್ರಿಯ’ ಎಂಬುದು ಅಲ್ಲಿನ ಎಲ್ಲ ಸಪ್ಲೈಯರಿಗೂ ಗೊತ್ತಾಗಿಬಿಟ್ಟಿದೆ. ‘ಪಂಕ್ತಿಭೇದ ಮಾಡಬಾರದೆಂದು’ ನಾನು ಮರಳುವಾಗ ಅಲ್ಲಿದ್ದ ಮೂವರಿಗೂ ಟಿಪ್ಸು ಕೊಟ್ಟು ಬಿಡುತ್ತೇನೆ. ಇದರಿಂದ ನನಗೆ ಆ ಹೊಟೆಲಿನಲ್ಲಿ ರಾಜೋಪಚಾರ. ನನ್ನ ಹೆಸರು ಅವರಿಗೆ ಗೊತ್ತಿಲ್ಲದಿದ್ದರೂ ‘ರಾಜ್ ಉಪಚಾರ’ ಸಾಂಗವಾಗಿ ನಡೆಯುತ್ತಿದೆ. ಇದು ನನ್ನ ಅದೃಷ್ಟವೇ ಸರಿ. 

ಇನ್ನೊಂದು ಹೊಟೆಲಿದೆ. ಅದು ಉತ್ತರಾದಿಮಠದ ಎದುರು ಇರುವ ಹೊಟೆಲ್ ಗುರುರಾಘವೇಂದ್ರ. ಇವರು ಬಾಗಿಲು ತೆಗೆದಿರುವುದಕಿಂತ ಬಾಗಿಲು ಮುಚ್ಚಿರುವ ದಿವಸಗಳೇ ಹೆಚ್ಚು. ಅದು ಯಾವಾಗ ಓಪನಾಗುತ್ತದೋ ಯಾವಾಗ ಕ್ಲೋಸಾಗುತ್ತದೋ ಬಹುಶಃ ಅದರ ಮಾಲೀಕರಿಗೂ ಗೊಂದಲವೇ. ಇಲ್ಲಿನ ಇಡ್ಲಿಯದೇ ಬೇರೆ ರುಚಿ. ಇವರು ಕೊಡುವ ಕೆಂಪು ಚಟ್ನಿ ನನಗೆ ಪ್ರಿಯ. ಎರಡು ಇಡ್ಲಿ ತಿಂದ ಮೇಲೆ ಅರ್ಧ ರೈಸುಬಾತು ಹಾಕಿಸಿಕೊಳ್ಳುತ್ತೇನೆ. ಅದೇನು ಅದ್ಭುತವೆಂದರೆ ಬರೆಯಲು ಪದಗಳೇ ಸಿಗುವುದಿಲ್ಲ! ಯಾವ ಸಮಯದಲ್ಲೂ ಇಲ್ಲಿನ ಬಾತು ನೆನಪಿಸಿಕೊಂಡರೂ ನನ್ನ ಬಾಯಲ್ಲಿ ಸಲೈವಾ ಹೆಡೆಯಾಡುತ್ತದೆ! ‘ತಿಂದು ಎಷ್ಟು ದಿನವಾಯಿತು!’ ಎಂಬ ವಿಷಾದ ಬೆರೆತ ಮನೋಧರ್ಮ ಏರ್ಪಟ್ಟು, ‘ಸಾಧ್ಯವಾದರೆ ಈ ವಾರದಲ್ಲಿ ಒಮ್ಮೆ ಹೋಗಿ ತಿನ್ನಬೇಕು’ ಎಂಬ ಮಹದಾಸೆ ಮೂಡುತ್ತದೆ. 

ಇಲ್ಲಿಯೇ ಹೇಳಿ ಬಿಡಬೇಕು. ಹಲವರು ಇಡ್ಲಿಯ ಸಂಪಣ ಮಾಡುವಾಗ ಸೀಮೇಅಕ್ಕಿ ಹಾಕುತ್ತಾರೆ. ಇದು ನನಗೆ ಸುತರಾಂ ಇಷ್ಟವಾಗುವುದಿಲ್ಲ. ಇಂಥ ಇಡ್ಲಿಯನ್ನು ತಿನ್ನುವಾಗಲೇ ಗೊತ್ತಾಗಿಬಿಡುತ್ತದೆ. ಅದರ ರಚನೆ, ಸ್ವರೂಪದಲ್ಲೇ ನಾನು ಕಂಡು ಹಿಡಿದು ಬಿಡುತ್ತೇನೆ. ಎಷ್ಟೋ ಫಾಸ್ಟ್ ಫುಡ್‌ನಲ್ಲಿ ಇಂಥವು ನನಗೆ ಸಿಕ್ಕಿ, ಭ್ರಮನಿರಸನಗೊಂಡು, ದುಃಖದಿಂದ ಮರಳಿದ್ದೇನೆ. ಏನೇನೋ ಹಾಕಿ, ಇಡ್ಲಿಯ ಪಾತಿವ್ರತ್ಯವನ್ನು ಹಾಳು ಮಾಡಿಡುವ ಲಂಪಟರೆಂದು ಜರಿದಿದ್ದೇನೆ. ಆದರೂ ಎಷ್ಟೋ ಕಡೆ ಇಡ್ಲಿಯನ್ನು ತಿಂದಿರುವೆನಾದರೂ ಇನ್ನೂ ಅನ್ವೇಷಣೆಯ ಬುದ್ಧಿ ಬಿಟ್ಟಿಲ್ಲ. ಅಲ್ಲೆಲ್ಲೋ ‘ಇಡ್ಲಿ ಸೂಪರು’ ಎಂಬ ಮಾಹಿತಿ ಮತ್ತು ವರ್ತಮಾನ ಬಂದರೆ ಹೋಗಿ ತಿಂದು ಬರೋದೇ! ನನಗೆ ಊರು ನೋಡಬೇಕೆಂಬ ಆಸೆಯಾಗಲೀ ಪ್ರೇಕ್ಷಣೀಯ ಸ್ಥಳಗಳನ್ನು ಸುತ್ತಬೇಕೆಂಬ ಹಂಬಲವಾಗಲೀ ರವಷ್ಟೂ ಇಲ್ಲ. ಆದರೆ ಒಂದು ಹೊಟೆಲು, ಅಲ್ಲಿ ಸಿಗುವ ಇಡ್ಲಿ, ದೋಸೆ, ರೈಸುಬಾತು. ಅದಕಾಗಿ ಅಲ್ಲಿಗೇ ಹೋಗಿ ರುಚಿ ನೋಡಿ, ಸವಿದು ಆನಂದಪಡುವ ಆಸೆ ಮತ್ತು ದುರಾಸೆಗಳೆರಡೂ ತುಂಬಾ ಇವೆ. ಪ್ರಯಾಣ ನನಗೆ ಇಷ್ಟವಾಗದಿದ್ದರೂ ತಿನ್ನುವ ಆಸೆಗಾಗಿ ಹೊರ ಹೋಗಲು ತುದಿಗಾಲಲ್ಲಿ ಕಾದಿರುತ್ತೇನೆ. ಇದೊಂದನ್ನು ಬಿಟ್ಟಂತೆ ಇನ್ನಾವ ಹಟವೂ ಚಟವೂ ನನಗಿಲ್ಲ!

ಸಂಪಣವು ಹುದುಗಲೆಂದು ಕೆಲವರು ಅಡುಗೆ ಸೋಡಾ ಬೆರೆಸುತ್ತಾರೆ. ಇದು ಅಪಾಯಕಾರಿ. ಮಲ್ಲಿಗೆ ಇಡ್ಲಿಗೆ ಇರುವ ಕಡುಬಿಳಿ ಬಣ್ಣವನ್ನು ಕುರಿತು ನನ್ನದೇ ಆದ ತಕರಾರಿದೆ. ಅದು ಮೃದುವಾಗಿ ಮತ್ತು ನಯವಾಗಿ ಬರಲು ಅಸಿಡಿಟಿಯನ್ನು ತಾತ್ಕಾಲಿಕವಾಗಿ ಶಮನಗೊಳಿಸುವ ಉದ್ದೇಶದಿಂದ ಮಾರುಕಟ್ಟೆಯಲಿ ಸಿಗುವ ‘ಫ್ರೂಟ್ ಸಾಲ್ಟ್ ಇನೊ / ಎನೊ’ (ENO) ಬಳಸುತ್ತಾರೆಂಬ ಪ್ರತೀತಿ. ಹಾಗಾಗಿ ಮಲ್ಲಿಗೆ ಇಡ್ಲಿಯು ಪರಿಚಯವಾದ ದಿನಗಳಲ್ಲಿ ಮೈಸೂರು ದಸರಾ ವಸ್ತುಪ್ರದರ್ಶನದ ಮಳಿಗೆಯೊಂದರಲ್ಲಿ ತಿಂದಿದ್ದು ಬಿಟ್ಟರೆ ಇನ್ನು ಅದರ ಸಹವಾಸಕ್ಕೆ ಹೋಗಿಲ್ಲ. ಯಾಕೋ ಅದು ನನಗೆ ಒಗ್ಗಲೇ ಇಲ್ಲ. ‘ಇಡ್ಲಿಯಂತಿದೆ; ಆದರೆ ಇಡ್ಲಿಯಲ್ಲ’ ಎಂದು ತೀರ್ಮಾನಿಸಿ ದೂರವಾಗಿದ್ದೇನೆ. ಫಾಸ್ಟ್‌ಫುಡ್‌ನವರು ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಶೀಟು ಬಳಸುವುದನ್ನು ನೋಡಿ ಮಂಕಾಗುತ್ತೇನೆ. ಏಕೆಂದರೆ ಅದು ಕ್ಯಾನ್ಸರ್‌ಕಾರಕ. ಇಡ್ಲಿ ಪ್ಲೇಟಿಗೆ ಒಂಚೂರು ಜಿಡ್ಡು ಸವರಿದರೆ ಸಾಕು. ಆದರೆ ಅವರು ಎಲ್ಲಿಂದ ತಂದಾರು? ಹಲವರು ಖೋರಾ ಲಾಂಗ್ ಕ್ಲಾತ್‌ನಿಂದ ತಯಾರಿಸಿದ ಬಟ್ಟೆ ಅಥವಾ ಖಾದಿ ಬಟ್ಟೆ ಬಳಸುವರು. ಬಟ್ಟೆಯನ್ನು ಹಾಕಿ, ತೆಗೆದು ಅದನ್ನು ತೊಳೆದು ಮತ್ತೆ ಹಾಕಲು ಸಮಯ ಬೇಕಾಗುವುದರಿಂದ ಇಂಥ ಅಡ್ಡದಾರಿಯನ್ನು ಕಂಡುಕೊಂಡಿದ್ದಾರೆ. ಇದರಿಂದಾಗಿಯೇ ನಾವು ಆರೋಗ್ಯ ಕಳೆದುಕೊಳ್ಳುವ ಭೀತಿ ಇದ್ದೇ ಇದೆ. ಆದರೆ ತಿನ್ನುವಾಗ ಇವನ್ನೆಲ್ಲ ನೆನಪಿಸಿಕೊಳ್ಳಬಾರದು. ಶುಚಿ ಮತ್ತು ರುಚಿಗಷ್ಟೇ ಗಮನ ಕೊಡಬೇಕು. ಕೆಲವೊಮ್ಮೆ ಅನಿವಾರ್ಯವಾದಾಗ ಮತ್ತು ಜರೂರಿದ್ದಾಗ ಮಾತ್ರ ಫಾಸ್ಟ್ ಫುಡ್ಡಿಗೆ ಮೊರೆ ಹೋಗುತ್ತೇವೆ ಎಂಬುದು ಎಲ್ಲರಿಗೂ ವೇದ್ಯವಾಗಿರುವ ಸಂಗತಿ. ಹಾಗಾಗಿ, ಹಸಿವೆ ನೀಗಿಸಲಷ್ಟೇ ಅಂಥವು. ತೀರಾ ಕುಸುಬಿಷ್ಟೆ ತೆಗೆಯುವುದಾದರೆ ಅಂಥವರು ಅಲ್ಲಿಗೆ ಹೋಗಲೇಬಾರದು ಅಲ್ಲವೇ? ಅತಿಯಾಡಿದರೆ ಕೆಲವೊಮ್ಮೆ ಆಹಾರ ಸಿಕ್ಕುವುದಿಲ್ಲ. ತಿನ್ನುವ ಒಂದೆರಡು ಇಡ್ಲಿಗಾಗಿ ಮನೆಗೆ ಬಂದು ಸಂಪಣ ತಯಾರಿಸಲು ಸಾಧ್ಯವಾಗುವುದೇ? ಕಾಲಾಯ ತಸ್ಮೈ ನಮಃ ಎಂದಂತೆ, ಇಂಥವನ್ನೆಲ್ಲಾ ‘ಓಂ ಶ್ರೀ ಇಗ್ನೋರಾಯಾ ನಮಃ’ ಎಂದು ನಿಸೂರಾಗಬೇಕು. ಮಸೂರ ಹಿಡಿದು ಹುಡುಕತೊಡಗಿದರೆ ನಮ್ಮ ಕೈಯಲ್ಲೇ ನೂರಾರು ಕ್ರಿಮಿಕೀಟ, ಬ್ಯಾಕ್ಟೀರಿಯಾಗಳು ಜೀವಿಸುವುದನ್ನು ಕಂಡು ಕೋವಿಡ್ ಸಮಯದಲ್ಲಿ ವ್ಯಸನ ಅಂಟಿಸಿಕೊಂಡಂತೆ, ಪದೇ ಪದೇ ಕೈ ತೊಳೆಯುತ್ತಿರಬೇಕಾಗುತ್ತದೆ. ಕೊನೆಗದು ಮನೋರೋಗವಾಗಿ ಪರಿಣಮಿಸಿ, ನಮ್ಮನ್ನೇ ನಾವು ನಂಬದಂಥ ದುಃಸ್ಥಿತಿಗೆ ಹೋಗುತ್ತೇವೆ. ಆಗಾಗ ಹೀಗೆ ಬೀದಿಬದಿಯಲ್ಲಿ ತಿನ್ನಬೇಕೆಂಬುದು ನನ್ನ ಪಾಲಿಸಿ. ರೋಗನಿರೋಧಕ ಶಕ್ತಿ ಹೆಚ್ಚಾಗುವುದೇ ಇಂಥ ಸಂದರ್ಭದಲ್ಲಿ! 

ಅದೆಷ್ಟೇ ರುಚಿಯಿರಲಿ, ಕೆಲವರು ಬೀದಿ ಬದಿಯ ಫಾಸ್ಟ್‌ಫುಡ್ಡಿನಲ್ಲಿ ತಿನ್ನುವುದಿಲ್ಲ. ಇಂಥವರು ಸ್ಟಾಂಡರ್ಡ್ ಅನ್ನು ಮೇನ್‌ಟೇನ್ ಮಾಡುವಂಥ ಕೃತಕ ಬುದ್ಧಿಜೀವಿಗಳು! ನನ್ನೊಬ್ಬ ಸ್ನೇಹಿತರು ಇಂಥವರು. ‘ಹೊರಗಡೆ ತಿನ್ನಬೇಡಿ ಎಂದು ಡಾಕ್ಟರರು ಹೇಳಿದ್ದಾರೆ’ ಎಂದು ನನ್ನ ಜೊತೆ ಬಂದರೂ ತಿನ್ನದೇ ಸುಮ್ಮನಿದ್ದರು. ಆಮೇಲೆ ನಾನು ತಿಂದು ಕೈ ತೊಳೆಯಲು ಹೋದಾಗ ಇಡ್ಲಿ, ವಡೆ ಕಟ್ಟಿಸಿಕೊಂಡು ಕಾರಿನಲ್ಲಿ ಇಟ್ಟರು. ‘ಇದೇನಿದು?’ ಎಂದಾಗ ವೈದ್ಯರ ಮಾತನ್ನು ಪಾಲಿಸುತ್ತಿರುವೆ; ‘ಹೊರಗಡೆ ತಿನ್ನಬೇಡಿ ಎಂದರಲ್ಲಾ; ಅದಕ್ಕಾಗಿ ಪಾರ್ಸೆಲ್ ತೊಗೊಂಡೆ’ ಎಂದರು! ಅವರ ಜೋಕಿಗೆ ನಗಬೇಕೋ? ಸೂಡೋ ಸಹವಾಸಕ್ಕೆ ಅಳಬೇಕೋ? ತಿಳಿಯದೇ ಕಂಗಾಲಾದೆ.

ಇಡ್ಲಿ ದೋಸೆಗಳು ಯಾವತ್ತೂ ರಾಮಲಕ್ಷ್ಮಣರಿದ್ದಂತೆ. ಜೊತೆಯಲ್ಲೇ ಠಿಕಾಣಿ. ಕೇಶಿರಾಜನ ಶಬ್ದಮಣಿದರ್ಪಣವನ್ನು ಪಾಠ ಮಾಡುವಾಗ ಏಕವಚನ ಮತ್ತು ಬಹುವಚನಗಳ ಜೊತೆಗೆ ಅವನು ಹೇಳುವ ದ್ವಿವಚನಕ್ಕೆ ಉದಾಹರಣೆಗಳನ್ನು ಪಟ್ಟಿ ಮಾಡುತಿದ್ದೆ. ಭೀಮಾರ್ಜುನರ್, ಲವಕುಶರ್, ನಕುಲ ಸಹದೇವರ್, ಕಣ್ಗಳ್, ಕಿವಿಗಳ್, ಕಾಲ್ಗಳ್ ಎಂದು ಮುಂತಾಗಿ ಅವನ ಪ್ರಯೋಗಗಳನ್ನು ಹೇಳುತಿದ್ದೆ. ‘ನೀವೊಂದಷ್ಟು ಹೇಳಿ’ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದಾಗ ಮಹಿಳಾ ವಿದ್ಯಾರ್ಥಿಯೊಬ್ಬಳು ‘ಇಡ್ಲಿ-ದೋಸೆ, ಉಪ್ಪಿಟ್ಟು-ಅವಲಕ್ಕಿ, ಚಪಾತಿ-ಪೂರಿ, ಪಲಾವು-ರೈಸ್‌ಬಾತು, ಕಾಫಿ-ಟೀ’ ಎಂದು ಒದರಿದಳು. ಈ ದಿಕ್ಕಿನಲ್ಲಿ ನಾನು ಆಲೋಚಿಸಿರಲೇ ಇಲ್ಲ! ಕೇಶಿರಾಜ ಕೇಳಿಸಿಕೊಂಡಿದ್ದರೆ ಮೂರ್ಛೆ ಹೋಗುತ್ತಿದ್ದುದು ಖಂಡಿತ! ಅಷ್ಟರಮಟ್ಟಿಗೆ ಇಡ್ಲಿ ದೋಸೆಯದು ಅನ್ಯೋನ್ಯ ಬಾಂಧವ್ಯ. ಅದರಲ್ಲೂ ಹೊಟೆಲಿನಲ್ಲಿ ಬೆಳಗಿನ ವೇಳೆ ಇಡ್ಲಿದೋಸೆಗಳದೇ ರಾಜ್ಯಭಾರ. ಸಾಮಾನ್ಯವಾಗಿ ಸಿಂಗಲ್ ಇಡ್ಲಿ ಸಾಂಬಾರ್ ತಿಂದೇ ದೋಸೆಯ ವೆರೈಟಿಗಳಿಗೆ ಮನಸಾಗುವ ಮಂದಿಗೆ ಚೆನ್ನಾಗಿ ಗೊತ್ತು: ಹಬೆಯಲ್ಲಿ ಬೆಂದ ಇಡ್ಲಿಗೇ ಪ್ರಥಮ ಪ್ರಾಶಸ್ತ್ಯ ಕೊಡಬೇಕೆಂದು. ಯಾರೋ ವಾಟ್ಸಾಪಿನಲ್ಲಿ ಕಳಿಸಿದ್ದರು: ‘ಹಬೆಯಲ್ಲಿ ಬೆಂದ ಇಡ್ಲಿಗೇನು ಗೊತ್ತು? ಕಾದ ಕಾವಲಿಯಲ್ಲಿ ಸುಟ್ಟು ಗರಿಗರಿಯಾದ ದೋಸೆಯ ಕಷ್ಟ?’ ಎಂದು. ನಾನು ಇಡ್ಲಿ ದೋಸೆಗಳ ಕಂಪನ್ನು ಆಸ್ವಾದಿಸಿದವನೇ ವಿನಾ ಕಂಪೇರ್ ಮಾಡಿ ನೋಡಿದವನೇ ಅಲ್ಲ. ‘ಎಲಾ! ಇವರೇಕೆ? ಇಷ್ಟು ಅನ್ಯೋನ್ಯವಾಗಿದ್ದು ಗ್ರಾಹಕರ ಅನುಗ್ರಹದಿಂದ ಉಜ್ವಲ ಬದುಕು ನಡೆಸುತ್ತಿರುವ ಈ ಜೋಡಿಗಳ ನಡುವೆ ವೈಷಮ್ಯ ತಂದಿಟ್ಟು ಸೌಹಾರ್ದತೆಗಳನ್ನು ಹಾಳುಗೆಡಹುವ ಆಲೋಚನೆ ತುರುಕುತ್ತಿದ್ದಾರೆ?’ ಎಂದು ಸಿಟ್ಟೇ ಬಂತು. ದೋಸೆಯ ಕಷ್ಟವನ್ನು ಅರಿಯಲು ಹೀಗೆ ಹೇಳಿದ್ದಾರೆಂದುಕೊಂಡರೂ ‘ಇಡ್ಲಿಯದೇನು ಸುಖ ಬಾಳೇ?’ ಅಟಲೀಸ್ಟು ದೋಸೆಯಾದರೋ ತನ್ನ ಕಾವನ್ನು ಹೊರ ಹಾಕಲು ಸಾಧ್ಯವಿದೆ. ರಂಧ್ರಗಳ ಮೂಲಕ ತನ್ನ ಸುಡುತಾಪವನ್ನು ಕಡಮೆ ಮಾಡಿಕೊಳ್ಳಬಹುದಾಗಿದೆ. ಆದರೆ ‘ಪಾಪ, ಇಡ್ಲಿಯದು?’ ಇಡ್ಲಿಪಾತ್ರೆಯೊಳಗೆ ಅದರಲೂ ಕುದಿವ ನೀರಲೇ ಬಾಳು ನಡೆಸಬೇಕು. ಹಬೆಯ ತೀಕ್ಷ್ಣತೆಯಲೇ ತನ್ನನ್ನು ಹದಗೊಳಿಸಿಕೊಳ್ಳಬೇಕು. ಇಲ್ಲದಿದ್ದರೆ ಅರ್ಧಂಬರ್ಧ ಬೆಂದು ಯಾತಕ್ಕೂ ಬೇಡವೆಂದು ಕಲಗಚ್ಚಿಗೇ ನೇರ ಹೊರಡಬೇಕು! ‘ಇನ್ನು ಬೆಂದಾಯಿತು, ಹೊರಬರೋಣ’ ವೆಂದರೆ ಬಿಸಿಯಾಗಿಯೇ ಇರಲೆಂದು ಮುಚ್ಚಳ ಮುಚ್ಚಿಟ್ಟೇ ಜೈಲಲಿ ಕೂಡಿ ಹಾಕುವರು. ಹಾಗಾಗಿ ದೋಸೆಯಷ್ಟೇ ಅಥವಾ ದೋಸೆಗಿಂತಲೂ ಒಂದು ಕೈ ಮಿಗಿಲು ಇಡ್ಲಿಯದು ಬೆಂದು ಬಸವಳಿದ ಬದುಕೇ. ಇನ್ನು ಹಾಗೆ ಹದವಾಗಿ ಸಿದ್ಧವಾದ ಇಡ್ಲಿಯನ್ನು ಸಾಂಬಾರಿನಲ್ಲಿ ನೆನೆ ಹಾಕಿ ಎರಡೂ ಚಮಚೆಗಳಿಂದ ಚಕಚಕನೇ ಅಂಗಾಂಗ ಕೊಯ್ದು, ಶೇಪ್‌ಲೆಸ್ ಮಾಡಿ, ತಿನ್ನುವ ಪರಿ ಬೇರೆ. ಹಿಂದೆ ಮುಂದೆ ಸುಟ್ಟದೋಸೆಗೂ ಬೆಂದು ಬಸವಳಿದ ಇಡ್ಲಿಗೂ ಯಾವತ್ತೂ ನಂಟಿದ್ದೇ ಇದೆ. ದೋಸೆ ಕಾರ್ನರ್ ಎಂದೂ ದೋಸಾ ಪಾಯಿಂಟ್ ಎಂದೂ ಬೋರ್ಡು ಹಾಕಿಕೊಳ್ಳುವ ಹೊಟೆಲಿನವರು ಅದು ಯಾಕೋ ಇಡ್ಲಿ ಕಾರ್ನರ್, ಇಡ್ಲಿ ಪಾಯಿಂಟ್ ಎಂದು ಹಾಕಿಕೊಳ್ಳುವುದೇ ಇಲ್ಲ. ಹಾಕಿಕೊಂಡವರು ತುಂಬಾನೇ ಕಡಮೆ. ಇದಕ್ಕಾಗಿ ನಾನು ವ್ಯಸನ ಪಟ್ಟಿದ್ದೇನೆ.

ಇನ್ನು ಇಡ್ಲಿಯ ಚರಿತ್ರೆಯತ್ತ ಕಣ್ಣು ಹಾಯಿಸಿದರೆ ಇದರ ಪ್ರಾಚೀನತೆಯು ಅಚ್ಚರಿ ತರಿಸುವಂಥದು. ಹಿಂದಿನ ಕಾಲದಿಂದಲೂ ಇಡ್ಲಿಗೆ ಸಮ್ಮಾನ ಗೌರವಗಳು ಲಭಿಸಿವೆ. ಕನ್ನಡದ ಮೊತ್ತ ಮೊದಲ ಗದ್ಯಗ್ರಂಥವೆನಿಸಿದ ವಡ್ಡಾರಾಧನೆಯು ಕ್ರಿ ಶ ೮೫೦ ರಿಂದ ೯೦೦ ರೊಳಗೆ ರಚಿತವಾದ ಹಳಗನ್ನಡ ಕೃತಿ. ಇದು ಹತ್ತೊಂಬತ್ತು ಜೈನಯತಿಗಳ ಕತೆಗಳಿಂದ ಕೂಡಿದೆ. ಇದರ ಕರ್ತೃ ಶಿವಕೋಟ್ಯಾಚಾರ್ಯ ಎಂದಿದ್ದು, ಇದೀಗ ನೂತನ ಶೋಧದ ಪ್ರಕಾರ ಬ್ರಾಜಿಷ್ಣು ಎನ್ನುವವ ಬರೆದದ್ದು ಎಂದಾಗಿದೆ. ಇದರಲ್ಲಿರುವ ಭದ್ರಬಾಹು ಭಟ್ಟಾರರ ಕತೆಯಲ್ಲಿ ಜೈನಯತಿ ಶಿವಗುಪ್ತಾಚಾರ್ಯರು ರಾಜನ ಅರಮನೆಯಲ್ಲಿ ಆತಿಥ್ಯ ಸ್ವೀಕರಿಸುವ ಹೊತ್ತಿನಲ್ಲಿ ನಮ್ಮ ಇಡ್ಲಿಯ ಪ್ರಸ್ತಾಪ ಬರುತ್ತದೆ. ಆಚಾರ್ಯರು ಊಟಕ್ಕೆ ಕೂಡುತ್ತಾರೆ. ಮಹಾರಾಣಿ ಮತ್ತು ಮಹಾರಾಜರಿಬ್ಬರೂ ಅತಿಥಿಗಳಿಗೆ ಬಡಿಸುತ್ತಾರೆ. ‘ಬಟ್ಟಾರರ್ಗರಸಂ ತಾನೇ ಬಡಿಸಲ್ತು, ರಾಜಾನ್ನದ ಕೂೞುಂ, ಪೆಸರತೊವ್ವೆಯುಂ, ಬೆಣ್ಣೆಗಾಸಿದಾಮೋದ ಸುಗಂಧ ಪರಿಮಳನಾರ್ಪ ತುಪ್ಪಮುಂ, ಪಲವು ತೆಱದ ಪಲ್ಲೆಗಳುಂ, ಪೂರಿಗೆ ಇಡ್ಡಲಿಗೆ ಸೋದಿಗೆ ಲಾವಣಿಗೆ ಘೃತಪೂರಂ ಲಡ್ಡುಗೆ ಮಂಡಗೆ ಮೊದಲಾಗೊಡೆಯ ಪದಿನೆಂಟುಂ ತೆಱದ ಭಕ್ಷ್ಯರೂಪಂಗಳುಮಂ, ನಾನಾ ಪ್ರಕಾರದ ಪಾನಗಳುಮಂ ಭಟ್ಟಾರರ್ಗೆ ಬಡಿಸಿದಂತೆ, ಬ್ರಹ್ಮಯ್ಯಂಗೆ ಮಹಾದೇವಿ ಬಡಿಸಿದೊಡೆ……..’ ಎಂದು ಬರುತ್ತದೆ. ಏನೇ ಇರಲಿ, ಇಡ್ಲಿಯು ನಮ್ಮ ದಕ್ಷಿಣ ಭಾರತೀಯರು ಜಗತ್ತಿಗೆ ಕೊಟ್ಟ ಕೊಡುಗೆ. ಫರ್ಮಂಟೇಷನ್ ಅಂದರೆ ಹುದುಗುವಿಕೆಯನ್ನು ಕಂಡು ಕೊಟ್ಟವರು ಇಂಡೋನೇಷ್ಯಾದವರು ಎಂದು ಚರಿತ್ರೆ ಹೇಳುತ್ತದೆ. ಇದೇನೂ ಬೇರೆ ದೇಶವಲ್ಲ; ಈ ದೇಶದ ಹೆಸರಿನಲ್ಲೂ ಇಂಡಿಯಾ ಮತ್ತು ಏಷ್ಯಾ ಇದೆ! ಎಂದು ನಾನು ಸಮಾಧಾನಿತನಾಗಿದ್ದೇನೆ. ಸಂಸ್ಕೃತದಲ್ಲಿ ಇಡ್ಲಿಯನ್ನು ‘ಸ್ವೇದನಾ’ ಎಂದು ಕರೆಯಲಾಗಿದೆ; ಅಡೆ ಅಥವಾ ಹಬೆಯಲ್ಲಿ ಬೆಂದದ್ದು ಎಂಬ ಅರ್ಥದಲ್ಲಿ. ಒಟ್ಟಿನಲ್ಲಿ ಇಡ್ಲಿಯ ಪದನಿಷ್ಪತ್ತಿಯನ್ನು ತಿಳಿಯುವುದಾದರೆ ಅಡೆ>ಅಡ್ಡೆ>ಅಡ್ಡೆಲಿ>ಅಡ್ಡೆಲಿಕಾ>ಇಡ್ಡೆಲಿಕಾ>ಇಡ್ಡೆಲಿಗೆ>ಇಡ್ಡೆಲಿ>ಇಡ್ಲಿ ಎಂದಾಗಿರಬೇಕೆಂದು ಭಾಷಾವಿಜ್ಞಾನಿಗಳು ಅಭಿಪ್ರಾಯಿಸಿದ್ದಾರೆ. ಮೊದಲ ಧ್ವನಿಮಾ ‘ಅ’ ಎಂಬುದು ‘ಇ’ ಧ್ವನಿಮಾ ಆಗಿ ಯಾವಾಗ ಬದಲಾಯಿತೋ? ತಿಳಿಯಲಾಗಿಲ್ಲ. ಅಡೆದೋಸೆ ಎಂಬ ಪದ ಚಾಲ್ತಿಯಲ್ಲಿರುವುದು ನಿಮಗೆ ಗೊತ್ತೇ ಇದೆ. ಉದ್ದಿನಬೇಳೆಯ ಜೊತೆ ಕಡಲೇಬೇಳೆ, ಹೆಸರುಬೇಳೆ, ತೊಗರಿಬೇಳೆಗಳನ್ನೂ ಸೇರಿಸಿ ಹುದುಗಿಸುವ ರೀತಿಯಿದು. ಇದೇನೇ ಇರಲಿ, ವಡ್ಡಾರಾಧನೆಯಲ್ಲಿ ‘ಇಡ್ಡಲಿಗೆ’ ಎಂದೇ ಪ್ರಯೋಗವಾಗಿದೆ. ಅಂತೆಯೇ ಕ್ರಿ ಶ 1020 ರಲ್ಲಿ ರಚಿತವಾದ ಚಾವುಂಡರಾಯನ ‘ಲೋಕೋಪಕಾರ’ ಎಂಬ ಶಾಸ್ತ್ರಕೃತಿಯಲ್ಲಿ ಇಡ್ಲಿಯ ಸಂಪಣವನ್ನು ವಿವರಿಸಲಾಗಿದೆ. ಕ್ರಿ ಶ 1130 ರ ಆಸುಪಾಸಿನಲ್ಲಿ ರಚಿತವಾದ ಮೂರನೇ ಸೋಮೇಶ್ವರನ ‘ಮಾನಸೋಲ್ಲಾಸ’ ದಲ್ಲಿ ‘ಇಡ್ಡಲಿ’ ಮಾಡುವ ವಿಧಾನವು ವರ್ಣಿತವಾಗಿದೆ. ಹದಿನೈದನೇ ಶತಮಾನದಲ್ಲಿದ್ದ ಮೂರನೆಯ ಮಂಗರಸನ ‘ಸೂಪಶಾಸ್ತ್ರ’ (ಸೂಪ ಎಂದರೆ ಅಡುಗೆಯ ಕಲೆ) ಸಹ ಇಡ್ಡಲಿಯ ಪ್ರಸ್ತಾಪವಿದೆ. ‘ಹಿರಿದು ಹಸನಾದಿಡ್ಡಲಿಗೆ ಪಾಕಕ್ಕೆಂದು…..’ ಮತ್ತು ‘ಬೇಗದಿಂದೆಡೆಮಾಡಿದಿಡ್ಡಲಿಗೆ……’ ಎಂದೂ ಬಳಸಲಾಗಿದೆ. ಇನ್ನು ಹತ್ತನೆಯ ಶತಮಾನದ ಸಂಸ್ಕೃತ ಆಯುರ್ವೇದ ವೈದ್ಯ ಕೃತಿ ‘ಚಕ್ರದತ್ತಸಂಹಿತಾ’ ದಲ್ಲಿ ಇಡ್ಲಿಯ ಚಿಕಿತ್ಸಕ ಗುಣವನ್ನು ಶ್ಲಾಘಿಸಲಾಗಿದೆ. ಹುಡುಕಿದರೆ ಇನ್ನೂ ಇಂಥ ಹತ್ತು ಹಲವು ಇಡ್ಲಿಯ ಚರಿತ್ರೆಯು ನಮಗೆ ದಕ್ಕಬಹುದು. ಅನಾದಿಕಾಲದಿಂದಲೂ ನಮ್ಮವರು ಇಡ್ಲಿಯ ರುಚಿಯನ್ನು ಕಂಡವರೇ ಎಂಬುದು ಇದರಿಂದ ವಿದಿತ.

ಅನಾರೋಗ್ಯದಿಂದ ಚೇತರಿಸಿಕೊಳ್ಳಲು ವೈದ್ಯರು ಇಡ್ಲಿಯನ್ನೇ ಶಿಫಾರಸು ಮಾಡುವರು. ಜಿಡ್ಡಿನ ಅಂಶ ಇಲ್ಲದಿರುವುದೇ ಇದಕ್ಕೆ ಕಾರಣ. ಈ ಸಂದರ್ಭದಲ್ಲಿ ನನಗೊಂದು ಗಾಬರಿ ತರಿಸುವ ಪ್ರಸಕ್ತಿ ಎದುರಾಗಿತ್ತು. ನಮ್ಮ ಮನೆಗೆ ಬಂದ ಕಿರಿಯ ಮಿತ್ರರೊಬ್ಬರು ನನ್ನ ಒತ್ತಾಯದ ಮೇರೆಗೆ ಬೆಳಗಿನ ಉಪಾಹಾರ, ಅಂದು ನಮ್ಮ ಮನೆಯಲ್ಲಿ ಮಾಡಿದ್ದ ಇಡ್ಲಿ, ಚಟ್ನಿ ಮತ್ತು ಸಾಂಬಾರನ್ನು ಸವಿದರು. ‘ಇಂಥ ಇಡ್ಲಿಯನ್ನು ನಾನು ತಿಂದಿರಲಿಲ್ಲ’ ಎಂದು ಮೆಚ್ಚಿದ ಅವರು ಮರುಗಳಿಗೆಯೇ ‘ನಾವೆಲ್ಲಾ ಹುಶಾರು ತಪ್ಪಿದಾಗ ಮಾತ್ರ ಇಡ್ಲಿಯನ್ನು ತಿನ್ನುವವರು ಎಂದಂದು, ನಮಗೆ ಇಡ್ಲಿ ಏನಿದ್ದರೂ ನಾನ್‌ವೆಜ್ ಜೊತೆಗೆ!’ ಎಂಬ ಡೈಲಾಗು ಹೇಳಿದರು. ನನಗೆ ಶಾಕ್ ಆಯಿತು. ನಾವೆಲ್ಲಾ ಇಡ್ಲಿಗೆ ರಾಜಮನ್ನಣೆ ನೀಡಿದರೆ ಅವರು ರಾಜವೈದ್ಯ ಮನ್ನಣೆ ನೀಡಿದರಲ್ಲಾ ಎಂದು ಚಕಿತನಾದೆ. ಇರಲಿ, ದೋಸೆ ಕುರಿತ ಲೇಖನದಲ್ಲಿ ಹೇಳಿದಂತೆ, ಲೋಕೋಭಿನ್ನರುಚಿಃ ಇದ್ದಂತೆ, ‘ತಿನ್ನೋಭಿನ್ನರುಚಿಃ’ ಎಂದುಕೊಂಡೆ. 

ಇಡ್ಲಿಯು ಒಂಥರಾ ಜನಸ್ನೇಹಿ. ಬಹು ಬೇಗ ಹೊಂದಿಕೊಂಡು ಬಿಡುತ್ತದೆ. ಉಳಿದರೆ ಮಾರನೆಯ ದಿನ ಇಡ್ಲಿಯುಪ್ಪಿಟ್ಟಾಗುತ್ತದೆ; ಹಿಟ್ಟು ಉಳಿದರೆ ಅವರೆಕಾಳು, ಕಾಳುಮೆಣಸು ಸೇರಿಸಿಕೊಂಡು ಮಸಾಲೆ ಇಡ್ಲಿಯಾಗುತ್ತದೆ. ಕೊತ್ತಂಬರಿ ಮತ್ತು ಈರುಳ್ಳಿಯನ್ನು ಬಳಸಿಕೊಂಡು ಪಡ್ಡುವಾಗುತ್ತದೆ. ಬಟನ್ ಇಡ್ಲಿ, ಫ್ಲೋಟಿಂಗ್ ಇಡ್ಲಿ, ಮಿನಿ ಇಡ್ಲಿಯಾಗಿ ನಾನಾ ವೇಷ ತಾಳುತ್ತದೆ. ಬಾಳೆಯೆಲೆಯಲ್ಲಿ ಸುತ್ತಿಕೊಂಡು ಹಬೆಯಲ್ಲಿ ಬೆಂದು ಖಾರದ ಕಡುಬಾಗುತ್ತದೆ. ಇನ್‌ಸ್ಟಂಟ್ ಇಡ್ಲಿ ಮಿಕ್ಸ್ ಆಗಿ, ಯಾವಾಗ ಬೇಕೆಂದರೆ ಆಗ ಅವತರಿಸುತ್ತದೆ. ಸಿರಿಧಾನ್ಯಗಳ ಜೊತೆ ಸೇರುತ್ತದೆ. ಡ್ರೈಫ್ರೂಟ್ಸ್ ಇಡ್ಲಿ, ಓಟ್ಸ್ ಇಡ್ಲಿ, ತರಕಾರಿ ಇಡ್ಲಿ, ರಾಗಿ ಇಡ್ಲಿ ಹೀಗೆ ‘ಉದರನಿಮಿತ್ತಂ ಬಹುವಿಧ ಇಡ್ಲಿ ಸಂಪಣಂ; ನಯನ ಮನೋಹರ ದೃಶ್ಯ ವೈಭವಂ; ನಾಲಗೆಗೆ ಸುಲಭ ಮಿತ್ರಂ; ಜೀರ್ಣಕೆ ನಿರಾಯಾಸಂ!’ ಎಂದೇ ನಾನು ಉದ್ಗರಿಸುತ್ತಿದ್ದೇನೆ. ಬೆಳಗಿನ ಉಪಾಹಾರಕ್ಕೆ ಹೆಚ್ಚು ಮಂದಿ ನೆಂಟರಿಷ್ಟರು ಆಗಮಿಸುತ್ತಾರೆಂದರೆ ಹೆಣ್ಣುಮಕ್ಕಳಿಗೆ ಇರುವ ಸುಲಭೋಪಾಯವೇ ಇಡ್ಲಿಗೆ ನೆನೆಸುವುದು! ಏಕೆಂದರೆ ಒಂದೇ ಸಲಕ್ಕೆ ಅಧಿಕ ಸಂಖ್ಯೆಯಲ್ಲಿ ಇಡ್ಲಿ ಸಿದ್ಧವಾಗುತ್ತದೆ. ಎಲ್ಲರ ತಟ್ಟೆಗೂ ಒಂದಷ್ಟನ್ನು ಬಡಿಸಿ, ತಿನ್ನುವುದರೊಳಗೆ ಇನ್ನೊಂದು ಒಬ್ಬೆ ತಯಾರಿಸಿ ಬಡಿಸಲು ಅನುಕೂಲಕಾರಿ. ಮದುವೆ ಮನೆಗಳಲ್ಲಿ, ಔತಣ ಕೂಟಗಳಲ್ಲಿ ಈ ಇಡ್ಲಿ ಚಟ್ನಿ ಸಾಂಬಾರಿನದೇ ಆಧಿಪತ್ಯ. ದೋಸೆ ಬರೆಯುವುದಕಿಂತ ಇಡ್ಲಿಯು ಸುಲಭದ ಮೆನು. ಅಡುಗೆಯ ಭಟ್ಟರಿಗೂ ಸರಬರಾಜು ಮಾಡುವವರಿಗೂ ಕೊನೆಗೆ ಪಟ್ಟಾಂಗ ಹೊಡೆಯುತ್ತಾ ಚಕಚಕನೆ ತಿಂದು ತೇಗುವವರಿಗೂ!

ಆದರೆ ನನ್ನದೊಂದು ತಕರಾರಿದೆ: ಇಡ್ಲಿಯು ಬೆಳ್ಳಗೇ ಇರಬೇಕು; ಉದ್ದಿನ ಜೊತೆ ಮಾತ್ರ ಅದರ ದಾಂಪತ್ಯ ಬೇಕು. ಇದು ಬಿಟ್ಟು ಇಡ್ಲಿಯ ಪಾವಿತ್ರ್ಯವನ್ನು ಹಾಳುಗೆಡವಿ, ಅದರ ಮಾನಭಂಗ ಮಾಡುವ ಆಧುನಿಕರ ವರಸೆ ನನಗೆ ಸುತರಾಂ ಇಷ್ಟವಿಲ್ಲ; ಈ ವಿಷಯದಲ್ಲಿ ನಾನು ಕಡು ಸಾಂಪ್ರದಾಯಿಗ. ಕೇವಲ ಅಕ್ಕಿ ಮತ್ತು ಉದ್ದಿನಬೇಳೆಯೊಂದಿಗೆ ಸೇರಿ ಸಂಪಣವಾದ ಇಡ್ಲಿಯನ್ನು ಹೇಗೆ ಬೇಕಾದರೂ ತಿನ್ನಲಿ. ಚಟ್ನಿಪುಡಿ ಸವರಿಕೊಂಡು ಪುಡಿ ಇಡ್ಲಿಯಾಗಿಸಿಕೊಳ್ಳಲಿ; ಸಾಂಬಾರಿನಲ್ಲೇ ತಿನ್ನಲಿ; ಗಟ್ಟಿ ಚಟ್ನಿಯೊಂದಿಗೆ ಬಾಡಿಸಿಕೊಳ್ಳಲಿ; ನೀರು ಚಟ್ನಿಯೊಂದಿಗೆ ನೆನೆಸಿಕೊಂಡು ನುಂಗಲಿ. ಆದರೆ ಹೀಗೆ ಇನ್ನೇನೋ ಸುಡುಗಾಡು ಸೇರಿಸಿ, ಇಡ್ಲಿಯ ಬಣ್ಣವನ್ನೂ ರುಚಿಯನ್ನೂ ಅದರ ಶುದ್ಧ ಸ್ವಾದವನ್ನೂ ಹಾಳು ಮಾಡುವ ವ್ಯಭಿಚಾರ ಮಾತ್ರ ನನಗೆ ಸಿಟ್ಟೇ ತರಿಸುತ್ತದೆ. ಜನರಿಗೆ ಹೊಸದು ಬೇಕೆಂದು ಹೀಗೆ ಪ್ರಯೋಗ ಮಾಡುತ್ತಾರೋ? ಹೊಸದು ಮಾಡಿ ಜನರನ್ನು ಸೆಳೆದು ದುಡ್ಡು ಮಾಡುತ್ತಾರೋ? ಪಾಪ, ಇಡ್ಲಿಯು ಒಂಥರಾ ಸಾತ್ವಿಕ ಸಂತ. ಏನು ಮಾಡಿದರೂ ಹರಾ ಶಿವಾ ಎನ್ನುವುದಿಲ್ಲ; ‘ನೀನಿಟ್ಟಂಗೆ ಇರುತೀನಿ ಸಿವಾ!’ ಎಂದು ಹಬೆಯಲ್ಲಿ ಬೆಂದು ಪಕ್ವವಾಗುತ್ತದೆ; ತಣ್ಣೀರಿನಲ್ಲಿ ನೆನೆದು ರುಬ್ಬುಗುಂಡಿನಲ್ಲಿ ಸವೆದು ಸಂಪಣವಾಗುವ ಹಿಟ್ಟು ಕುದಿವ ನೀರಲ್ಲಿ ಮಿಂದು ಮಡಿಯುಟ್ಟು, ಹದವಾಗಿ ಘನವಾಗುವ ಇಡ್ಲಿಯು ನಮ್ಮ ಬದುಕಿಗೇ ಸಂಕೇತ. ‘ಬೆಂದರೆ ಬೇಂದ್ರೆ ಆದಾರು’ ಎಂಬ ಮಾತಿನಂತೆ ‘ಹಬೆಯಲಿ ಬದುಕಿದರೆ ಇಡ್ಲಿಯಾದಾರು’ ಎಂಬ ಮಾತನ್ನೂ ಸೇರಿಸಬಹುದು. ಯಾವ ಗುಣ ವಿಶೇಷಗಳೂ ಇಲ್ಲದ ಇಡ್ಲಿಯು ಸರಳ ಮತ್ತು ಸ್ವಾಭಾವಿಕ ಸಂತಾನ; ಯಾರ ಜೊತೆಗೆ ಸೇರಿಕೊಳ್ಳುತ್ತದೋ ಅದರ ರುಚಿ ತಂತಾನೇ ಸನ್ನಿಧಾನ! ರುಚಿಯಾದವರ ಜೊತೆ ಸೇರಿದರೆ ನಾವೂ ರುಚಿಗೊಳ್ಳುತ್ತೇವೆ ಎಂಬ ಸಂದೇಶವನ್ನು ಸಾರುವಂತಿದೆ ಇಡ್ಲಿಯ ಜೀವನ. ದೋಸೆಯನ್ನಾದರೂ ಏನನ್ನೂ ನಂಚಿಕೊಳ್ಳದೇ ಹಾಗೆಯೇ ಬಾಯಿಗೆ ಹಾಕಿಕೊಳ್ಳಬಹುದು. ಆದರೆ ಇಡ್ಲಿಯದು ಹಾಗಲ್ಲ; ದಾಂಪತ್ಯ ನಡೆಸಲು ಇನ್ನೊಬ್ಬರು ಬೇಕೇ ಬೇಕೆಂದಂತೆ, ಇಡ್ಲಿಯು ಸಾರ್ಥಕವಾಗಲು ಚಟ್ನಿಯೊಂದಿಗೋ ಸಾಂಬಾರಿನೊಂದಿಗೋ ಸೇರಲೇಬೇಕು. ನಾನಂತೂ ಸೊಗಸಾದ ಚಟ್ನಿಯಿಲ್ಲದಿದ್ದರೆ ಇಡ್ಲಿ ಅದೆಷ್ಟು ಸೂಪರಾಗಿದ್ದರೂ ತಿನ್ನಲಾರೆ. ‘ಇಡ್ಲಿಗೆ ಚಟ್ನಿಯೇ ಭೂಷಣ!’ ಎಷ್ಟೋ ಕಡೆ ಚಟ್ನಿ ಚೆನ್ನಾಗಿರುವುದಿಲ್ಲವೆಂದು ಅಂಥ ಹೊಟೆಲಿಗೆ ಹೋಗುವುದನ್ನೇ ಬಿಟ್ಟಿದ್ದೇನೆ. ಏಕೆಂದರೆ ಬುದ್ಧಿವಂತರು ಹೃದಯವಂತರೂ ಆಗಿದ್ದರೆ ಮಾತ್ರ ಸಸ್ನೇಹ ಸಾಧ್ಯ! ಆಗಷ್ಟೇ ಜೀವ ಜೀವನ ಸಾರ್ಥಕ. ‘ಎಂಥವರ ಜೊತೆ ಸೇರಿದರೆ ನಾವು ಧನ್ಯರಾಗುತ್ತೇವೆ’ ಎಂಬ ಪಾಠವನ್ನು ಇಡ್ಲಿಯಿಂದ ಕಲಿಯಬಹುದೆಂಬುದು ನನ್ನ ಅಭಿಮತ. 

ಮೈಸೂರಿನ ನಮ್ಮ ಬಡಾವಣೆಯ ಸಹ ನಿವಾಸಿಯೊಬ್ಬರು ನಮ್ಮ ಮನೆಯ ಗ್ರೈಂಡರಿನಲಿ ಹದವಾಗಿ ರುಬ್ಬಿದ ಇಡ್ಲಿಹಿಟ್ಟನ್ನು ಬಳಸಿದ ಮೇಲೆ ಫಿದಾ ಆಗಿಬಿಟ್ಟರು. ಅವರು ಮಿಕ್ಸಿಯಲ್ಲಿ ರುಬ್ಬಿಕೊಂಡು ಇಡ್ಲಿ ಮಾಡುತಿದ್ದರು. ಗ್ರೈಂಡರಿನ ಟೇಸ್ಟು ಸಿಕ್ಕ ಮೇಲೆ ವಾರಕ್ಕೊಮ್ಮೆ ನಮ್ಮ ಮನೆಗೇ ಬಂದು ನೆನೆಸಿದ ಅಕ್ಕಿ, ಉದ್ದುಗಳನು ತಂದು, ಇಡ್ಲಿಗೆ ರುಬ್ಬಿಕೊಂಡು ಹೋಗುತಿದ್ದರು. ಕೊನೆಗೆ ಅವರೇ ಒಂದು ಗ್ರೈಂಡರ್ ಕೊಂಡುಕೊಂಡರು. ಮಿಕ್ಸಿಯ ಬ್ಲೇಡು ಕತ್ತರಿಸುವ ರೀತಿಗೂ ಗ್ರೈಂಡರು ರುಬ್ಬಿ ಕೊಡುವ ರೀತಿಗೂ ವ್ಯತ್ಯಾಸವಿದೆಯೆಂದು ತಿಳಿದರು. ಅವರ ಮನೆಯ ಪಡ್ಡು ನನಗೆ ಪ್ರಿಯ. ಅದರಲ್ಲೂ ಅದಕ್ಕೆ ಕಡಲೆಕಾಯಿ ಮತ್ತು ಟೊಮ್ಯಾಟೊಕಾಯಿ ಬಳಸಿ ತಯಾರಿಸುವ ಕೆಂಪು ಚಟ್ನಿಯು ನನ್ನ ನಾಲಗೆಗೆ ಖಾರವೆನಿಸಿದರೂ ಪಡ್ಡುವಿನ ರುಚಿಯನ್ನು ಹೆಚ್ಚಿಸುತ್ತದೆ. ಹೀಗೆ ‘ಏನ್ ಗುರುವೇ ಸಮಾಚಾರ ಅಂದರೆ ಇಡ್ಲಿ ದೋಸೆಯದೇ ಬೆಳಗಿನ ಆಚಾರ’ ಎನ್ನುವಂತೆ, ನಮ್ಮ ಬಾಳುವೆಯ ಬಹುತೇಕ ರಸಗಳಿಗೆಯು ಇಡ್ಲಿ ದೋಸೆಗಳಿಂದಲೇ ತುಂಬಿರುವುದು ಸುಳ್ಳಲ್ಲ. ಎಲ್ಲ ವಯೋಮಾನದವರಿಗೂ ಹೊಂದುವ ಆರೋಗ್ಯಕ್ಕೆ ಸುಖದಾಯಕವಾಗಿರುವ ಇಡ್ಡಲಿಯು ನಮ್ಮ ಭಾರತೀಯ ಮೂಲದ್ದು, ಅದರಲ್ಲೂ ದಕ್ಷಿಣ ಭಾರತದ್ದು ಎಂದರೆ ಈ ಮೂಲಕ ಕನ್ನಡಿಗರ ಪೆರ್ಮೆ ದಶದಿಕ್ಕುಗಳಲ್ಲೂ ಹರಡಿದೆ ಎಂದೇ ಅರ್ಥ.

ಪ್ರತಿ ವರುಷ ಮಾರ್ಚ್ ತಿಂಗಳ ಮೂವತ್ತರಂದು ‘ವಿಶ್ವ ಇಡ್ಲಿ ದಿನ’ ವನ್ನು ಆಚರಿಸಲಾಗುತ್ತದೆ. ನಾನಂತೂ ವಾರಕ್ಕೊಮ್ಮೆಯಾದರೂ ಇಡ್ಲಿ ತಿಂದು ಶುಭದಿನವನ್ನು ಪ್ರಾರಂಭಿಸುತ್ತೇನೆ. ಇನ್ನು ನನ್ನ ಮಡದಿಯಂತೂ ನಮ್ಮ ಮನೆಗೆ ಮಾತ್ರವಲ್ಲದೇ, ಅಕ್ಕಪಕ್ಕದವರಿಗೂ ಸಂಪಣವನ್ನು ಧಾರಾಳವಾಗಿ ಕೊಡುತ್ತಿರುತ್ತಾಳೆ. ಬದುಕಲ್ಲಿ ಇನ್ನೇನಿದೆ; ಹಂಚಿಕೊಂಡು ತಿನ್ನುವುದರಲಿ ಸುಖವಿದೆ ಎಂಬ ತತ್ತ್ವನಿಷ್ಠೆ ಅವಳದು. ಗ್ರೈಂಡರಿನಲ್ಲಿ ರುಬ್ಬಿ ಇಡ್ಡಲಿ ಮಾಡುವುದಲ್ಲದೇ, ಒರಳುಕಲ್ಲಿನಲ್ಲಿ ನೀರು ಹಾಕಿಕೊಳ್ಳದೇ ಕಾಯಿಚಟ್ನಿ ಸಹ ಕೈಯಲ್ಲಿ ರುಬ್ಬಿ, ಡೆಡ್ಲೀ ಕಾಂಬಿನೇಷನ್ ಸಿದ್ಧಪಡಿಸಿ, ನನಗೆ ಕೊಟ್ಟು, ಉಳಿದವರಿಗೆ ಕೊಟ್ಟು ಬರಲು ಸನ್ನದ್ಧವಾಗುತ್ತಾಳೆ. ಅದಿಲ್ಲವಾದರೆ ಇಡ್ಲಿ ಹಿಟ್ಟನ್ನೇ ಧಾರಾಳ ದಾನ ಮಾಡಿ ಅವರ ಫೀಡುಬ್ಯಾಕು ನಿರೀಕ್ಷಿಸುತ್ತಾಳೆ. ಪ್ರತಿ ಸಲ ಇಡ್ಲಿ ಮಾಡುವಾಗಲೂ ಇದೇ ಮೊದಲ ಬಾರಿಗೆಂಬಂತೆ ಕಾತರದಿಂದ ಕಾಯುತ್ತಾಳೆ. ‘ಏಕೆಂದರೆ ಇಡ್ಲಿಯೇ ಹಾಗೆ; ಕೂಗುವ ತನಕ ಕಾಗೆಯೋ ಕೋಗಿಲೆಯೋ ಗುಟ್ಟು ಬಿಟ್ಟು ಕೊಡದ ಬೇಗೆ!’ ಒಂದು ಒಬ್ಬೆ ಆಗುವ ತನಕ ಇಂದು ಹೇಗಾಗುವುದೋ? ಗಟ್ಟಿಯಾಯಿತೋ? ‘ತಿನ್ನಬಲ್’ ಆದರೆ ಸಾಕು;  ಅಕಸ್ಮಾತ್ ಒರಟಾದರೆ ಉಪಾಹಾರಕ್ಕೆ ಇನ್ನೇನು ಹೊಂಚುವುದು? ಎಂಬಿತ್ಯಾದಿ ದಿಗಿಲು ಬೆರೆತ ಆತಂಕಗಳು ಮನೆ ಮಾಡಿರುತ್ತವೆ. ಮೃದುವಾಗಿ ಆಗಿದೆಯೆಂದು ಗೊತ್ತಾದ ಮೇಲೆ ನಿರಾಳವಾಗುತ್ತದೆ, ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ನು ಪಡೆದು ಪಾಸಾದಂತೆ. ಇದಾವ ಗೋಜೂ ಬೇಡವೆಂದು ನಾನು ಒಮ್ಮೊಮ್ಮೆ ಹೊಟೆಲು ಬಾಗಿಲು ತೆಗೆವ ಸಮಯಕ್ಕೇ ಹೋಗಿ, ಇಬ್ಬರಿಗಾಗುವಷ್ಟು ಇಡ್ಲಿಯನ್ನು ಹಾಟ್‌ಬಾಕ್ಸಿಗೆ ಹಾಕಿಸಿಕೊಂಡು, ಗಟ್ಟಿ ಚಟ್ನಿಗಾಗಿಯೇ ತೆಗೆದುಕೊಂಡು ಹೋಗಿದ್ದ ಡಬ್ಬಿಯನಿಟ್ಟು ಮುಂಚೆಯೇ ಭಕ್ಷೀಸು ಕೊಟ್ಟು ಕಾಯುತ್ತೇನೆ. ತುಂಬ ಪ್ರೀತಿ ಮತ್ತು ಗೌರವಗಳಿಂದ ಅವರು ತುಂಬಿಸಿ, ಕೈಗಿಡುತ್ತಾರೆ. ‘ಸಾಂಬಾರ್ ಬೇಡ’ ಎಂಬ ಡೈಲಾಗನ್ನು ಪ್ರತಿ ಸಲ ಹೇಳುವುದು ಬೇರೆಯೇ ಕಾರಣಕ್ಕೆ! ಅಂದರೆ ಸಾಂಬಾರಿಗೆ ಬದಲು ಇನ್ನೊಂದು ಸ್ವಲ್ಪ ಚಟ್ನಿಯನ್ನೇ ಹಾಕಿಬಿಡಿ ಎಂದದು ಒಳಾರ್ಥ. ‘ಮನೆಗೆ ತಂದ ಪಾರ್ಸೆಲನ್ನು ‘ನರಸೀಪುರದ ಕಟ್ಟೆ ಹೊಸಳ್ಳಿಯಿಂದ ತಂದ ಹಸುವಿನ ಬೆಣ್ಣೆ ಕಾಯಿಸಿದ ತುಪ್ಪ’ವನ್ನು ಸವರಿಕೊಂಡು, ಗಟ್ಟಿಚಟ್ನಿಯೊಂದಿಗೇ ಸೇವನೆ ಶುರು ಮಾಡಿದೆನೆಂದರೆ ಅದು ಹೇಗೋ ನಾಕ್ಲು ಇಡ್ಲಿ ಮುಗಿದೇ ಹೋಗುತ್ತದೆ. ದುರಾಸೆಗಾಗಿ ನಾನು ಐದನೆಯ ಇಡ್ಲಿ ತಿಂದು ಸುಸ್ತಾಗಿ ಹೋಗುತ್ತೇನೆ. ಅದಾದ ಮೇಲೆ ಅರ್ಧ ಲೋಟ ಮೊಸರು ಕುಡಿದು ಕುಳಿತೆನೆಂದರೆ ಅದೊಂದು ಪರಮಾನಂದದ ಗಳಿಗೆ. ಮರುಕ್ಷಣವೇ ‘ಇಡೀ ದಿನದ ಸೌಭಾಗ್ಯವೆಲ್ಲ ಮುಗಿದೇ ಹೋಯಿತಲ್ಲ’ ಎಂಬ ವ್ಯಥೆ ಶುರುವಾಗುತ್ತದೆ. ತಿಂದದ್ದನ್ನು ಹಿತವಾಗಿ ನೆನಪಿಸಿಕೊಂಡು, ‘ಇನ್ನೊಮ್ಮೆ ಯಾವಾಗ ಇಂಥ ಇಡ್ಲಿಯನ್ನು ತಿನ್ನುವ ಯೋಗ ಬಂದೀತು?’ ಎಂಬ ನಿರೀಕ್ಷೆಯಲ್ಲೇ ಕಾಲೇಜಿಗೆ ಸಿದ್ಧವಾಗುತ್ತೇನೆ. ಆಗ ಅನ್ನಿಸುತ್ತದೆ: ಬದುಕಿನ ಸವಿ ಇರುವುದು ಸಿದ್ಧತೆಯಲ್ಲೇ ವಿನಾ ಬದುಕಿನಲ್ಲಲ್ಲ ಎಂದು! ಒಟ್ಟಿನಲ್ಲಿ ಇಡ್ಲಿ ದೋಸೆಗಳು ಕೇವಲ ಹೊಟೆಲಿನ ಉದ್ಯಮವನ್ನು ಬೆಳಸುವುದರ ಜೊತೆಗೆ ನಮ್ಮಂಥ ಇಡ್ಲಿ ದೋಸೆ ಅಭಿಮಾನಿಗಳನ್ನೂ ಜೊತೆಗೂಡಿಸಿದೆ. ಇಡ್ಲಿ ಲವರ್ಸ್ ಎಂಬ ವಾಟ್ಸಾಪ್ ಗುಂಪೇ ಇದೆ. ಹಾಗಂತ ಫೇಸ್‌ಬುಕ್ ಗ್ರೂಪಿದೆ. ಎಲ್ಲೇ ಶುಚಿರುಚಿಯಾದ ಇಡ್ಲಿ ದೋಸೆಗಳ ಮಾಹಿತಿ ದೊರೆತರೂ ಲೊಕೇಶನ್ ಸಮೇತ ಗುಂಪಿಗೆ ಬಂದು ಬೀಳುತ್ತದೆ; ಜೊತೆಗೆ ಹೋಗಿ ತಿಂದು ಬಂದವರ ಹಿಮ್ಮಾಹಿತಿಯೊಂದಿಗೆ. ವಿಶ್ವ ಆರೋಗ್ಯ ಸಂಸ್ಥೆಯು ‘ಜಗತ್ತಿನ ಹತ್ತು ಅತ್ಯುತ್ಕೃಷ್ಟ ಆಹಾರಗಳ ಪೈಕಿ ಇಡ್ಲಿಯೂ ಒಂದು’ ಎಂದಿರುವುದು ನಮ್ಮ ಕಿರೀಟಕ್ಕೆ ಲಭಿಸಿದ ಇನ್ನೊಂದು ಗರಿ. ಇದು ನಮ್ಮ ಆರೋಗ್ಯಕರ ಅಡುಗೆಗೆ ಸಿಕ್ಕ ಪ್ರಶಸ್ತಿಯೆಂದೇ ತಿಳಿಯಬೇಕು. ನೀವೂ ಇಡ್ಲಿಪ್ರಿಯರಾಗಿದ್ದರೆ ನನ್ನೆಲ್ಲ ತುಡಿತ ಮಿಡಿತಗಳು ಖಂಡಿತಾ ಅರ್ಥವಾಗುತ್ತದೆಂಬ ನಂಬುಗೆ ನನ್ನದು!

ಡಾ. ಹೆಚ್ ಎನ್ ಮಂಜುರಾಜ್, ಹೊಳೆನರಸೀಪುರ

33 Responses

  1. Hema Mala says:

    ಎಷ್ಟು ಸೊಗಸಾಗಿ ಬರೆಯುತ್ತೀರಿ,..ದೋಸೆ ಆಯ್ತು, ಇಡ್ಲಿ ಆಯ್ತು, ನಾವೇನು ತಪ್ಪು ಮಾಡಿದ್ವಿ, ನಮ್ಮ ಬಗ್ಗೆಯೂ ಬರೀರಿ ಅಂತಾ ಪರಾಠಾ, ಚಪಾತಿ, ಪೂರಿ …..ಮೊದಲಾದುವುಗಳು ಗಲಾಟೆ ಮಾಡ್ತಾ ಇವೆ!

    • MANJURAJ H N says:

      ಖಂಡಿತಾ ಮೇಡಂ, ನಿಮ್ಮ ಇಂಥ ನಿರಂತರ ಪ್ರೋತ್ಸಾಹವಿದ್ದರೆ
      ಬರೆಯುವೆ. ಕೆಲಸದೊತ್ತಡದ ನಡುವೆ ಇಂಥ ಬರೆವಣಿಗೆಯ ಗೊಡವೆ!
      ನಾನೇ ಕಂಡುಕೊಂಡ ರಿಲಾಕ್ಸಿಂಗು; ವಗ್ಗರಣೆಗೆ ಹಾಕಿದ ಪರಿಮಳದ ಇಂಗು!!

      ನಿಮ್ಮ ಶ್ಲಾಘನೆಗೆ ನಾನು ಆಭಾರಿ; ಅನಂತ ಧನ್ಯವಾದ. ಸುರಹೊನ್ನೆಯ ಪರಿಮಳ
      ಹೀಗೆ ಎಲ್ಲರ ಬರೆಹಗಳ ಜೊತೆಗೆ, ಹಲವನ್ನೂ ಹಲವರನ್ನೂ ಆವರಿಸುತ್ತಿದೆ;
      ನಮ್ಮೆಲ್ಲರನು ಒಗ್ಗೂಡಿಸುತಿದೆ. ಇಂಥ ಕನ್ನಡದ ಕನ್ನಡಿ ಅದರ ಸಾರಥ್ಯ ವಹಿಸಿರುವ
      ನಿಮ್ಮ ನಿಮ್ಮ ಈ ನುಡಿ – ನೂರಾನೆಯ ಬಲ; ವಿಶಾಲದಾಗಸದಲಿ ಹಾರಾಡುವ ಹಕ್ಕಿಬಲ.

      ಕೃತಜ್ಞತೆಗಳು.

  2. ತುಂಬಾ ತುಂಬಾ ಆಪ್ತವಾಗಿ ಮೂಡಿಬಂದಿದೆ ಸಾರ್..ನಿಮ್ಮ ಫೇವರೇಟ್ ಇಡ್ಲಿ..ಲೇಖನ.. ಬಣ್ಣಿಸಲು ಪದಗಳೇ ಇಲ್ಲ ಎನ್ನುವ ಷ್ಟು..ಇಡ್ಲಿ ದೋಸೆ ತಿನ್ನಲು..ಬಯಸದವರೇ..ನನ್ನ. ದೃಷ್ಟಿಯಿಂದ.. ಅದರ ರುಚಿ ತಿಳಿಯದವರು…ಎಂದು.

    • MANJURAJ H N says:

      ಹೌದಾ ಮೇಡಂ, ಪ್ರತಿಕ್ರಿಯೆಗೆ ಧನ್ಯವಾದಗಳು.
      ಸುರಹೊನ್ನೆಯ ಎಲ್ಲ ಸಹೃದಯರಿಗೆ ದೋಸೆ – ಇಡ್ಲಿಯ ಕೊಡುಗೆ !

      ಧನ್ಯೋಸ್ಮಿ.

  3. ಮಹೇಶ್ವರಿ ಯು says:

    ತುಂಬಾ ಸೊಗಸಾದ ಬರಹ. ಮಾಹಿತಿ ಪೂಣ೯ ವೂ ಆಗಿರುವುದು ಮತ್ತೊಂದು ವಿಶೇಷ.

  4. ನಯನ ಬಜಕೂಡ್ಲು says:

    ಚಂದದ ಲೇಖನ

    • MANJURAJ H N says:

      thank you madam…….

    • ಸಮತಾ ಆರ್ says:

      ಇಡ್ಲಿ ಮಹಿಮೆ ಅಪರಂಪಾರ… ಇಡ್ಲಿಗೂ ಈ ಲೇಖನ ಬರೆದವರಿಗೂ ಜೈ ಹೋ…

      • Manjuraj H N says:

        ಧನ್ಯವಾದಗಳು. ನಿಮ್ಮ ಲಲಿತ ಪ್ರಬಂಧದಲ್ಲು ಇಡ್ಲಿಯ ಬರೆಹವಿದೆ. ಓದಿದೆ.

  5. ನಾಗರಾಜ ಬಿ.ನಾಯ್ಕ says:

    ಲೇಖನ ಓದಲು ತುಂಬಾ ತುಂಬಾ ಖುಷಿ ಕೊಟ್ಟಿತು. ಇಡ್ಲಿ ಕುರಿತಾದ ವಿಶಿಷ್ಟ ಅನುಭವ ಬರಹವಾಗಿ ಆಪ್ತವಾಗಿ ನಮ್ಮಲ್ಲಿ ಉಳಿಯಿತು. ಲೇಖನದ ವಿವರ ಸುಂದರವಾಗಿ ಮೂಡಿಬಂದಿದೆ.

    • MANJURAJ H N says:

      ಧನ್ಯವಾದಗಳು ಸರ್‌, ನಿಮ್ಮ ಮೆಚ್ಚುಮಾತಿಗೆ.

  6. ಶಂಕರಿ ಶರ್ಮ says:

    ಇಡ್ಲಿಯ ಪುರಾಣೇತಿಹಾಸಗಳು ಜಬರ್ದಸ್ತಾಗಿ ಮೂಡಿಬಂದಿವೆ. ಪೂರ್ತಿ ಓದಿದ ಬಳಿಕ, ಮೃದುವಾದ ಇಡ್ಲಿಯನ್ನು ಗಟ್ಟಿ
    ಚಟ್ಣಿಯೊಂದಿಗೆ ತಿಂದು ಮೊಸರು ಕುಡಿದಷ್ಟೇ ಖುಷಿಯಾಯಿತು.

  7. ಲಘುಲಾಸ್ಯದ ಗಂಭೀರ ಇಡ್ಡಲಿಗೆ ಪುರಾಣ.ಇಡ್ಲಿ ತಿನ್ನಬೇಕೆನ್ನಿಸಿತು.ಏನೇ ಆಗಲಿ…ನಿಮ್ಮ ಮನೆ ಇಡ್ಲಿ ಲಾಜವಾಬ್!

  8. Anonymous says:

    ಅತ್ಯಂತ ಸೊಗಸಾಗಿದೆ. ವಿಸ್ತಾರವಾಗಿ ಬರೆದಿದ್ದೀರಿ ಸರ್. ಇಡ್ಲಿಯ ಹಿಂದೆಯೂ ಇಷ್ಟೊಂದು ರೋಚಕತೆ ಸೃಷ್ಟಿಸಿದಕ್ಕೆ ಧನ್ಯವಾದಗಳು ಸರ್

    • Manjuraj H N says:

      ನಿಮಗೂ ಧನ್ಯವಾದ, ಪ್ರತಿಕ್ರಿಯೆಗೆ ನಾನು ಆಭಾರಿ

  9. Dr.sartaj P.H says:

    ತುಂಬಾ ಸೊಗಸದ ಲೇಖನ . ಇಡ್ಲಿ ಮಾತು ದೋಸೆ ಬಗ್ಗೆ ನಿಮ ಅನುಭವ ತುಂಬಾ ಇಷ್ಟ ವಾಯಿತು ನಾವು ಹೊಳೆನರಸೀಪುರ ಕ್ಕೆ ಬರಬಹುದ ಇಡ್ಲಿ ಸವಿಯಲು.

  10. Rekhashree says:

    ತುಂಬಾ ಚೆನ್ನಾಗಿದೆ ನಾನಗೂ ಇಡ್ಲಿ ಚಟ್ನಿ ಅಂದರೆ ಪ್ರಾಣ ಇಡ್ಲಿಗೆ ಸಂಬಂಧಿಸಿದ ವಿಚಾರವೆಲ್ಲವೂ ನನಗೆ ನೂರುಪಟ್ಟು ಅನ್ವಯಿಸುತ್ತದೆ ನಿಮ್ಮ ಲೇಖನವನ್ನು ಇಡ್ಲಿ ಲೇಖನವನ್ನು ಮೊದಲಿನಿಂದ ಕೊನೆವರೆಗೂ ಮುಗುಳ್ನಗೆಯಿಂದಲೇ ಓದಿ ಮುಗಿಸಿದ್ದೀನೆ ನಿಮ್ಮ ಇಡ್ಲಿ ಲೇಖನಕ್ಕೆ ಅನಂತ ಧನ್ಯವಾದಗಳು

    • Manjuraj H N says:

      ಓ ಮೇಡಂ, ನೀವೂ ಓದಿದಿರಾ? ತುಂಬ ಖುಷಿಯಾಯಿತು.
      ಧನ್ಯವಾದಗಳು

  11. Padma Anand says:

    ಸೊಗಸಾದ ಬರಹ. ನಿಮ್ಮ ಬರಹವನ್ನು ನೋಡಿ ಇನ್ನು ಮುಂದೆ ಇಡ್ಇಲಿಗಳು ಇನ್ನಷ್ಟು ಹೆಚ್ಚಾಗಿ ಉಬ್ಬಬಹುದು, ನನ್ನನ್ನು ಇಷ್ಡೊಂದು ಇಷ್ಟಪಡುವುದಲ್ಲದೇ, ಎಷ್ಡೊಂದು ಚೆನ್ನಾಗಿ ಎಲ್ಲರೊಂದಿಗೆ ಹಂಚಿಕೊಂಡಿದ್ದಾರಲ್ಲ ಅಂತ.

  12. Anonymous says:

    ಈ ಪ್ರಬಂಧ ಓದುತ್ತಾ ಇದ್ದರೆ ಬಾಯಲ್ಲಿ ನಿರೂರುತ್ತೆ,, ಇಡ್ಡಲಿ ತಿಂದ ಹಾಗೆ ಅನಿಸುತ್ತೆ

  13. chaya joshi n says:

    ತುಂಬಾ ಸೊಗಸಾದ ಶೈಲಿ. ಚಟ್ನಿ ಡಬ್ಬಿಯನ್ನು ಒರೆಮಾಡಿ ತೋರಿಸಿ,ಕಣ್ಣಲ್ಲೇ ಸಾಕೇಎಂದು ತೋರಿಸುವುದು/. ತುಂಬಾ ಸೂಕ್ಷ್ಮವಾಗಿ ಗಮನಿಸಿ ಬರೆದಿದ್ದೀರಿ…ಈಗಲೇ ಇಡ್ಲಿ ತಿನ್ನುವ ಆಸೆ ಆಗಿದೆ ನನಗೆ.

    • Manjuraj H N says:

      ಹೌದು…….ಲವಲೇಶವೂ ಉತ್ಪ್ರೇಕ್ಷೆಯಿಲ್ಲ. ಇದ್ದುದನು ಇದ್ದಂತೆ
      ಬರೆದಿರುವೆ, ಸದ್ದಿಲ್ಲದಂತೆ !

      ನಿಮ್ಮ ಸೂಕ್ಷ್ಮ ಸಂವೇದನಾಶೀಲ ಓದುವಿಕೆಗೆ ನಾನು ಆಭಾರಿ. ಧನ್ಯವಾದಗಳು

  14. ಹೊಳೆ ನರಸೀಪುರಕ್ಕೆ ನಾವು ಯಾವಾಗ ಬರಬೇಕು ಇಡ್ಲಿ ಮತ್ತು ಗಟ್ಟಿ ಚಟ್ನಿ ತಿನ್ನಲು..

    • Manjuraj H N says:

      ಮಂಗಳವಾರ ಹೊರತುಪಡಿಸಿ………

      ಬೆಳಗ್ಗೆ 7 ರಿಂದ 8.30 ರೊಳಗೆ (ಹೊಟೆಲಿಗಾದರೆ)

  15. VP PRASANNA KUMAR says:

    ಸರ್, ಇಡ್ಲಿ ಯಾರಿಗೆ ತಾನೆ ಇಷ್ಟವಾಗದು ಹೇಳಿ ಸರ್, ನನಗೆ ಕೆ ಆರ್ ನಗರದ ಶ್ರೀ ಸುದರ್ಶನ್ ಹೋಟೆಲಿನ ಇಡ್ಲಿ ಸಾಂಬಾರ್ ಎಂದರೆ ಬಹಳ ಇಷ್ಟ ಸರ್, ಬೆಳಗಿನ ಜಾವ ನಡಿಗೆ ಮುಗಿಸಿ ಬಹಳಷ್ಟು ಮಂದಿ ಇಲ್ಲಿಗೆ ಬಂದು ಇಡ್ಲಿ ಸಾಂಬಾರ್ ಸವಿಯುವರು, ಹೊಳೆನರಸೀಪುರದ ವಾಸವಿ ಹೋಟೆಲ್ ನಲ್ಲೂ ನಾನು ಇಡ್ಲಿ ಚಟ್ನಿಯ ರುಚಿ ಅನುಭವಿಸಿರುವೆ, ಹೊಳೆನರಸೀಪುರದಲ್ಲಿ ಇನ್ನೊಂದು ಸಣ್ಣ ಹೋಟೆಲ್ ಇದೆ ಸರ್, ಹೆಸರು ನೆನಪಿಗೆ ಬರುತ್ತಿಲ್ಲ, ಅಲ್ಲಿ ಕೇವಲ ಇಡ್ಲಿ ಚಟ್ನಿ ವಡೆ ಮತ್ತು ರೈಸ್ ಬಾತ್ ಇವೆರೆಡೆ ಲಭ್ಯ ಅಲ್ಲಿ, ಬೆಳಿಗ್ಗೆ 10 ಗಂಟೆಗೆ ಬಹುತೇಕ ಹೋಟೆಲ್ ನ ವ್ಯವಹಾರ ಮುಗಿದು ಮುಚಲ್ಪಡುತ್ತೆ, ಮತ್ತೆ ತೆರೆಯುವುದು ಮಾರನೆಯ ದಿನವೇ, ಹೆಚ್ಚು ಮಂದಿ ಬಂದು ಮನೆಗೆ ಪಾರ್ಸಲ್ ತೆಗೆದುಕೊಂಡು ಹೋಗುತ್ತಾರೆ, ಪೇಟೆ ಬೀದಿ ಕೊನೆಯಲ್ಲಿ ಅಂಗಡಿ, ಒಮ್ಮೆ ಭೇಟಿ ಮಾಡಿ ನೋಡಿ ಸರ್, ಅಂತೂ ಇಡ್ಲಿ ಬಗ್ಗೆ ಇಷ್ಟರ ಮಟ್ಟಿಗೆ ಇತಿಹಾಸ ಇದೆ ಅಂತ ನನಗೆ ಗೊತ್ತೇ ಇರಲಿಲ್ಲ, ಧನ್ಯವಾದಗಳು ಸರ್

    • Manjuraj H N says:

      ಧನ್ಯವಾದಗಳು ಮೈ ಡಿಯರ್‌ ಪ್ರಸನ್ನ……….

      ನೀವು ಹೇಳಿದ ಸ್ಥಳವೂ ಗೊತ್ತಿದೆ. ಇನ್ಮೇಲೆ ಪ್ರಯತ್ನಿಸುವೆ.
      ದೀರ್ಘವಾದ ನಿಮ್ಮ ಪ್ರತಿಕ್ರಿಯೆಗೆ ನಾನು ಆಭಾರಿ. ನಿಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯೂ ಓದಿದ್ದೀರಲ್ಲ! ಖುಷಿಯಾಯಿತು.

  16. ಎಚ್ ಎಸ್ ಸತ್ಯನಾರಾಯಣ says:

    ಆಹಾ ಎದ್ದು ಹೋಗಿ ಎರಡು ಪ್ಲೇಟು ಇಡ್ಲಿ ತಿಂದು ಬರೋಣ ಅಂತ ಆಸೆ ಆಗೋಯ್ತು.

    • Manjuraj H N says:

      ಸತ್ಯಣ್ಣ, ಎರಡು ಪ್ಲೇಟಾ ! ಅಂದರೆ ನಾಲಕ್ಕು ಇಡ್ಡಲಿಯಾ!!
      ತಿನ್ನು, ತಿನ್ನು…..ನನ್ನನ್ನು ನೆನಪಿಸಿಕೊಂಡು ತಿನ್ನು.

      (ನಾನೂ ಇಲ್ಲಿ ನಿನ್ನನ್ನು ನೆನಸಿಕೊಂಡೇ ಕೆಲವೊಂದನ್ನು ತಿನ್ಬೆ!!)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: