ರಾಧಾ ತತ್ತ್ವ: ರಾಧಾ ದರ್ಶನಂ
ಮಾರ್ಚ್ ತಿಂಗಳಲ್ಲಿ ಜನಿಸಿದ ಪುರೋಹಿತ ತಿರುನಾರಾಯಣ ಐಯ್ಯಂಗಾರ್ ನರಸಿಂಹಾಚಾರ್ ಅವರ ಶ್ರೀಹರಿಚರಿತೆ ಬಳಸಿದ ಛಂದಸ್ಸಿನಿಂದ, ದ್ವಾಪರಯುಗದ ಕೃಷ್ಣನನ್ನು ವರ್ತಮಾನಕ್ಕೆ ಪ್ರಸ್ತುತಗೊಳಿಸುವ ಆಶಯದಿಂದ ಅನುಸರಿಸಿದ ಕೃಷ್ಣಕಥೆಯ ನಡಿಗೆಯಿಂದ, ಎಷ್ಟು ವಿಶೇಷವಾದದ್ದು ಆಗಿದೆಯೋ ಕೃಷ್ಣನನ್ನು ರಾಧಾಕೃಷ್ಣನನ್ನಾಗಿ ಪರಿಭಾವಿಸಿದ ರೀತಿಯಿಂದಲೂ ವಿಶೇಷವಾದದ್ದು ಆಗಿದೆ. ಇದು ಅವರ ವೈಷ್ಣವ ಸಂಪ್ರದಾಯಕ್ಕೆ ಅನುಗುಣವಾದ ಗ್ರಹಿಕೆ ಎಂಬುದು ನಿಜವಾದರೂ ಅದನ್ನು ಸಂಗೀತದ ಮೂಲಭೂತ ಸಿದ್ಧಾಂತದ ವ್ಯಾಪ್ತಿಯೊಳಗೆ ಅಡಕವಾಗಿಸಿ ವೈಷ್ಣವ ಸಂಪ್ರದಾಯದ ತಾತ್ತ್ವಿಕ ಗ್ರಹಿಕೆಗೆ ಹೊಸ ಆಯಾಮವನ್ನು ಕೊಟ್ಟಿರುವುದು ಅತ್ಯಂತ ವಿಶೇಷವಾದದ್ದು.
ರಾಧೆಯ ಪರಿಕಲ್ಪನೆ: ಪು.ತಿ.ನ. ಅವರ “ಶ್ರೀಹರಿಚರಿತೆ”ಯ ಒಂದು ಪ್ರಮುಖವಾದ ಉಲ್ಲಾಸ (ಅಧ್ಯಾಯ) ರಾಧಾ ದರ್ಶನಂ. ಇದು ಶ್ರಿಹರಿಚರಿತೆಯ 14ನೇ ಉಲ್ಲಾಸ. ಅದರ ಪ್ರಾರಂಭದಲ್ಲಿ ಪು.ತಿ.ನ. ರಾಧೆ ಯಾರು ಎನ್ನುವ ಪ್ರಶ್ನೆಯನ್ನು ಮುಂದುಮಾಡಿದ್ದಾರೆ. ಭಾಗವತವಾಗಲೀ, ಹರಿವಂಶವಾಗಲೀ ರಾಧೆಯನ್ನು ಕುರಿತು ವಿಶೇಷವಾಗಿ ಏನನ್ನೂ ಹೇಳುವುದಿಲ್ಲ ಎನ್ನುವುದನ್ನು ಗಮನಕ್ಕೆ ತರುತ್ತಾರೆ. ಆದರೂ ಅವರಿಗೆ ಜಯದೇವ ಮತ್ತು ಮಧ್ಯಕಾಲೀನ ಭಾರತದ ಭಕ್ತಿಪಂಥ ಚಿತ್ರಿಸುವ ರಾಧೆ ಗಮನಾರ್ಹ ಎನ್ನಿಸಿದೆ. ಚೈತನ್ಯ ಪಂಥ ಮತ್ತು ವಲ್ಲಭ ಪಂಥಗಳು ರಾಧೆಗೆ ಪರಮ ವಾಸ್ತವತೆಯ ಮೌಲ್ಯವನ್ನು ನೀಡಿವೆ.
ಶಕ್ತಿಯೇ ಮೂಲಾಧಾರ; ತ್ರಿಮೂರ್ತಿಗಳಾದ ಬ್ರಹ್ಮ ವಿಷ್ಣು, ಈಶ್ವರರಿಗಿಂತ ಶಕ್ತಿಗೇ ಮಿಗಿಲಾದ ಸ್ಥಾನ;. ತ್ರಿಮೂರ್ತಿಗಳು ಭಿನ್ನ ಆಗುವುದು ಅವರವರ ಕರ್ಮ, ಧರ್ಮಗಳಿಂದಾಗಿ; ವಿಷ್ಣುವಿನ ಪೂರ್ಣಾವತಾರಿಯಾದ ಕೃಷ್ಣನ ಪಾತ್ರವು ಆದರ್ಶ ಪ್ರೇಮಿ, ಸಖ, ಮಾರ್ಗದರ್ಶಿ, ಜಗದ್ಗುರು, ಪರದೈವ, ನಿಷ್ಕಾಮಕರ್ಮಿಯಾಗಿ ಒಂದು ಮಾದರಿಯನ್ನು ನಿರ್ಮಿಸಿಕೊಡುವುದು; ಈ ಪಾತ್ರದ ಇನ್ನೊಂದು ಮುಖ ರಾಧೆ; ರಾಧೆ ವಯಸ್ಸು, ಸಮುದಾಯ ಇತ್ಯಾದಿ ಗಡಿರೇಖೆಗಳನ್ನು ಮೀರಿದ ಸೀಮಾರಹಿತ ಮತ್ತು ಸೀಮಾತೀತ ಪ್ರೇಮಕ್ಕೆ ಒಂದು ಪ್ರತೀಕ; ಈ ಭಕ್ತಿ ಕೃಷ್ಣನಿಗೆ ಕೊಳಲು ನುಡಿಸುವ ಸೆಳೆತವಾದರೆ, ರಾಧೆಗೆ ಮೈಮರೆತು ರಾಸಲೀಲೆಯಲ್ಲಿ ಭಾಗಿಯಾಗುವ ತುಡಿತ ಎಂದು ಕೃಷ್ಣ, ರಾಧೆಯರನ್ನು ಶಾಕ್ತಪಂಥವು ಅರ್ಥೈಸುತ್ತದೆ.
ವ್ರಜದ ಗೋಪಿಯರಲ್ಲಿ ಒಬ್ಬಳಾದ ರಾಧೆ ಜನಿಸಿದ್ದು ರಾವಲ್‌ನಲ್ಲಿ, ಬೆಳೆದದ್ದು ಬರ್ಸಾನಾದಲ್ಲಿ; ಅವಳಿಗೆ ಮತ್ತು ಕೃಷ್ಣನಿಗೆ ತಾವಿಬ್ಬರೂ ಪರಸ್ಪರರಿಗಾಗಿಯೇ ಜನಿಸಿದ್ದೇವೆ ಎಂಬುದು ಗೊತ್ತಿತ್ತು; ವ್ರಜದ ವೃಂದಾವನದಲ್ಲಿ ಅವರಿಬ್ಬರ ಪ್ರೀತಿ ಅರಳಿತು; ಅದ್ಭುತ ರಾಸಲೀಲೆ ಘಟಿಸಿದುದು ಇಲ್ಲಿಯ ಯಮುನಾ ದಂಡೆಯಲ್ಲಿ; ಅವಳಲ್ಲಿ ಕಾಣುವ ಪ್ರೀತಿಯ ಉತ್ತುಂಗ ಇತರ ಗೋಪಿಯರಲ್ಲಿ ಕಾಣುವುದಿಲ್ಲ; ಆಕೆಯ ಕೃಷ್ಣ-ಪರ ಭಕ್ತಿಪರವಶತೆಯನ್ನು ಇತರ ಗೋಪಿಯರ ಭಕ್ತಿಪರವಶತೆಯೊಂದಿಗೆ ಹೋಲಿಸಲು ಆಗುವುದಿಲ್ಲ ಎನ್ನುತ್ತದೆ ಬ್ರಹ್ಮವೈವರ್ತ ಪುರಾಣ.
ರಾಧಾ ಮತ್ತು ಕೃಷ್ಣ ಅಭಿನ್ನರು ಎಂಬ ಭಕ್ತಿಪಂಥಗಳ ನಿಲುವಿಗೆ ಮೂಲ ಆಧಾರ ಪುರಾಣಗಳು ಪರಿಕಲ್ಪಿಸುವ ರಾಧೆಯೇ. ಅವು ಲಕ್ಷ್ಮಿ ಮತ್ತು ರಾಧೆಯರಿಬ್ಬರೂ ಶ್ರೀಮಾತೆ, ಆದಿಮಾತೆಯರೇ; ಲಕ್ಷ್ಮಿಯಂತೆ ರಾಧೆಯೂ ಸೌಂದರ್ಯ, ಸಂಪತ್ತು, ಯಶಸ್ಸು, ಪ್ರೇಮಗಳ ಸಾಕಾರರೂಪ; ನಾರಾಯಣನ ಅಂದರೆ ವಿಷ್ಣುವಿನ (ಶ್ರೀಕೃಷ್ಣನ) ಶಕ್ತಿ ಸ್ವರೂಪಿಯರೇ; ವಿಷ್ಣುವಿನ ಅವತಾರ ಆದ ಶ್ರೀಕೃಷ್ಣನ ಪ್ರಿಯತಮೆಯರಾದ ರುಕ್ಮಿಣಿ ಮತ್ತು ರಾಧೆಯರಿಬ್ಬರೂ ಲಕ್ಷ್ಮಿಯ ಅವತಾರವೇ ಎನ್ನುತ್ತವೆ.
ಚೈತನ್ಯ ಚರಿತಾಮೃತವು ದೈವದ ಪರಿಪೂರ್ಣತೆಯು ಸ್ತ್ರೀತ್ವವನ್ನು ಅತ್ಯಾವಶ್ಯಕವಾಗಿ ಒಳಗೊಳ್ಳುತ್ತದೆ; ಆ ಸ್ತ್ರೀತ್ವವೇ ರಾಧೆ; ರಾಧೆ ಶಕ್ತಿ, ಕೃಷ್ಣ ಪರಮ ಶಕ್ತ; ಬೆಂಕಿ ಮತ್ತು ಅದರ ಶಾಖದಂತೆ, ಅಗ್ನಿ ಮತ್ತು ಅದರ ಕಿಡಿಗಳಂತೆ, ಕಸ್ತೂರಿ ಮತ್ತು ಅದರ ಪರಿಮಳದಂತೆ ಅವರಿಬ್ಬರೂ ಅಪ್ರತ್ಯೇಕಿತರು; ಪ್ರೀತಿಯ ವಿನಿಮಯದ ಸ್ವರೂಪವನ್ನು ಮನಗಾಣಿಸುವುದಕ್ಕಾಗಿ ಅವರು ಬೇರೆ ಬೇರೆ ರೂಪವನ್ನು ತಳೆದಿದ್ದಾರೆ ಎನ್ನುತ್ತದೆ. ದೇವರು ಪ್ರೀತಿಯ ಸಂದೇಶವನ್ನು ಸಾರುವುದಕ್ಕಾಗಿ ಸ್ತ್ರೀ ಪುರುಷ ಎಂದು ಎರಡು ಆಗುತ್ತಾನೆ ಎನ್ನುವುದರ ಅರ್ಥ ಇಡೀ ಜಗತ್ತಿನಲ್ಲಿ ಪ್ರೀತಿಗೆ ಅಷ್ಟೊಂದು ಪ್ರಾಮುಖ್ಯತೆ ಇದೆ; ಪ್ರೀತಿಸುವ ಮತ್ತು ಪ್ರೀತಿಸಲ್ಪಡುವ ಮೂಲಭಾವ ದೇವರಿಂದಲೇ ನಮಗೆ ದೊರೆತದ್ದು ಎಂದು ಸಾಂಖ್ಯರ ಪರಮ ವಾಸ್ತವತೆ ಪ್ರಕೃತಿ ಮತ್ತು ಪುರುಷ ಎನ್ನುವ ಪರಿಕಲ್ಪನೆಯನ್ನು ಪಂಡಿತ ದಾಸ ಅವರು ವ್ಯಾಖ್ಯಾನಿಸುತ್ತಾರೆ.
ವೈಷ್ಣವ ಸಂಪ್ರದಾಯವು ರಾಧೆ ಕೃಷ್ಣನ ಸಾರಶಕ್ತಿ; ನಮ್ಮ ಒಳಗೆ ಮತ್ತು ಹೊರಗೆ ಇರುವ ಪ್ರಪಂಚದ ಪಾರಮಾರ್ಥಿಕ ಶಕ್ತಿ-ಚೈತನ್ಯ; ಭೌತಿಕ ಜಗತ್ತಿನಲ್ಲಿ ದೊರೆಯುವ ಸುಖ ಸಂತೋಷಗಳ ಮೂಲ ಆಕರ, ಕೃಷ್ಣ ತನ್ನ ಸಂತೋಷವನ್ನುಅಭಿವ್ಯಕ್ತ ಪಡಿಸುವ ಮಧ್ಯವರ್ತಿ, ಪರಿಪೂರ್ಣ ಪ್ರೀತಿ-ಭಾವದ ಪ್ರತೀಕ ಆದ ಹ್ಲಾದಿನೀ ಶಕ್ತಿ; ಇದೇ ನಮ್ಮ ದೇಹದೊಳಗಿನ ಕುಂಡಲಿನೀ ಶಕ್ತಿ; ರಾಧೆಯನ್ನು ಉಪಾಸಿಸುವ ಮಂತ್ರ “ಓಂ ವೃಷಭಾನುಜಾಯೇ ವಿದ್ಮಹೇ ಕೃಷ್ಣಪ್ರಿಯಾಯೈ ಧೀಮಹಿ ತನ್ನೋ ರಾಧಾ ಪ್ರಚೋದಯಾತ್” ಎಂದು ರಾಧೆಯನ್ನು ಪರಿಕಲ್ಪಿಸುತ್ತದೆ.
ನಿಂಬಾರ್ಕ ಸಂಪ್ರದಾಯವು ರಾಧೆಯನ್ನು ಪರಮಾತ್ಮನಿಗಾಗಿ ತುಡಿಯುವ ಜೀವಾತ್ಮ ಎಂದೂ, ಆಕೆಯ ನಡೆಯನ್ನು ಪರಮಾತ್ಮನೊಂದಿಗೆ ಸಂಯೋಗ ಹೊಂದುವ ಆಧ್ಯಾತ್ಮಿಕ ಪ್ರಗತಿ ಎಂದೂ ತಿಳಿಯುತ್ತದೆ; ರಾಧೆ ಕೃಷ್ಣನ ಸಖಿ ಮತ್ತು ಆತ್ಮಸಂಗಾತಿ; ರಾಧೆಯ ಅಪಾರವಾದ ಭಕ್ತಿಯುತ ಪ್ರೀತಿ ಪರಬ್ರಹ್ಮನೊಂದಿಗೆ ಸಾಯುಜ್ಯ ಪಡೆಯ ಬಯಸುವ ಪ್ರತಿಯೊಬ್ಬ ಭಕ್ತನ ಪ್ರತಿಬಿಂಬವೇ ಆಗಿದೆ; ರಾಧೆಯ ಮೌನ ಧ್ಯಾನ, ಮೂಕ ಭಕ್ತಿ, ಶುದ್ಧ ಕರ್ಮಗಳೇ ಆಕೆಯ ವ್ಯಕ್ತಿತ್ವವನ್ನು ದೈವಿಕ ಆಗಿಸಿವೆ; ಕೃಷ್ಣ ಲೋಕಮೋಹಕ ಆಗಿದ್ದರೆ ರಾಧೆ ಕೃಷ್ಣಮೋಹಕಿ ಎಂದು ಅರ್ಥ ಮಾಡಿಕೊಳ್ಳುತ್ತದೆ. ಆಧ್ಯಾತ್ಮಿಕ ಪ್ರಪಂಚದಲ್ಲಿ ಎಲ್ಲಾ ಜೀವಾತ್ಮರಿಗೆ ವೈವಿಧ್ಯಮಯ ಪ್ರೀತಿಯುತ ಸಂಬಂಧಗಳನ್ನು ಹೊಂದಲು ಮುಕ್ತ ಅವಕಾಶ ಇದೆ. ಈ ಪ್ರಪಂಚ ಪರಬ್ರಹ್ಮ ಕೇಂದ್ರಿತ. ಇಲ್ಲಿ ಶ್ರೇಷ್ಠವಾದ ಪ್ರೀತಿಯುತ ಸಂಬಂಧ ಹೇಗಿರುತ್ತದೆ ಎಂಬುದನ್ನು ಜೀವಾತ್ಮರಿಗೆ ಮನಗಾಣಿಸುವುದಕ್ಕಾಗಿ ಪರಬ್ರಹ್ಮ ರಾಧೆ ಮತ್ತು ಕೃಷ್ಣ ಎಂದು ಎರಡಾಗಿ ಲೌಕಿಕ ಪ್ರಪಂಚದಲ್ಲಿ ವ್ಯಕ್ತಗೊಳ್ಳುತ್ತದೆ ಎಂದು ರಾಧಾ ಕೃಷ್ನರ ನಡುವಿನ ಅನುಬಂಧವನ್ನು ಬ್ರಹ್ಮವೈವರ್ತ ಪುರಾಣವು ವಿವರಿಸುತ್ತದೆ.
ಬೃಹತ್ ಗೌತಮೀಯ ತಂತ್ರವು ಕೃಷ್ಣನ ಮೂರು ವಿಧದ ಪ್ರೀತಿಪಾತ್ರ ಪತ್ನಿಯರಲ್ಲಿ ಒಬ್ಬಳು ಅದೃಷ್ಟ ದೇವತೆ ಲಕ್ಷ್ಮೀ, ಇನ್ನೊಬ್ಬಳು ಕೃಷ್ಣನ ಅಷ್ಟ ಮಹಿಷಿಯರು. ಮೂರನೆಯವಳು ವ್ರಜದ ಗೋಪಿಯರು; ವ್ರಜದ ಗೋಪಿಯರು ಪ್ರೇಮರಸವನ್ನು ವೃದ್ಧಿಸಲು ಸಹಾಯಕರು; ಅವರಲ್ಲಿ ನೃತ್ಯ ಮತ್ತಿತರ ರಸಗಳ ಮಾಧುರ್ಯವನ್ನು ಸವಿಯಲು ಪೂರಕ ಆಗುವ ವಿವಿಧ ಭಾವೋದ್ದೀಪನೆ, ಭಾವಪರವಶತೆಗಳ ಗುಚ್ಛವೇ ಇದೆ ಎಂದು ಕೃಷ್ಣನನ್ನು ಚಿತ್ರಿಸುತ್ತದೆ. ಸಾಮಾಜಿಕ ಕಟ್ಟುಪಾಡುಗಳು, ನಿರೀಕ್ಷೆಗಳು ಮತ್ತು ನಿರ್ಬಂಧಗಳಿಂದ ಜಿಗುಪ್ಸೆಗೊಂಡು ನಿಜವಾದ ಮಾನವೀಯ ಬದುಕಿಗಾಗಿ, ಬದುಕಿನ ಜೀವಂತಿಕೆಗಾಗಿ ತೀವ್ರವಾಗಿ ಹಂಬಲಿಸಿದ, ಹಂಬಲಿಸುವ ಮಾನವರ, ಭಕ್ತರ ಪ್ರತೀಕ ರಾಧೇ; ಪ್ರೇಮಿಷ್ಠ ಕೃಷ್ಣನನ್ನು ತೀವ್ರ ರಕ್ತಿಯಿಂದ ಭಾವಿಸುತ್ತ ಭಕ್ತ ಮುಕ್ತಿಯನ್ನು ಪಡೆದುದಕ್ಕೂ ರಾಧೆ ಒಂದು ಸಂಕೇತ ಎಂದೇ ವಿದೇಶೀ ಲೇಖಕರು ಸಹ ರಾಧೆಯನ್ನು ಅರ್ಥೈಸುತ್ತಾರೆ.
ಮೊದಲು ಕೃಷ್ಣನ ಕೊಳಲ ಸಂಗೀತಕ್ಕೆ ಕಿವಿಗೊಟ್ಟ ರಾಧೆ ಅನಂತರ ಅವಳೇ ಅವನ ಸಂಗೀತ ಆದಳು, ಅವನೊಂದಿಗೆ ಸಮರಸಗೊಂಡಳು ಎನ್ನುತ್ತದೆ ಪಂಡಿತ ದಾಸರ “ರಾಧಾ-ಮಹಾವಿದ್ಯಾ” ಎನ್ನುವ ಲೇಖನ. ಕೃಷ್ಣನೊಂದಿಗಿನ ರಾಧೆಯ ಈ ಅನುಬಂಧವನ್ನು ಸ್ವಕೀಯ ರಸ, ಪರಕೀಯರಸ ಎನ್ನುವ ಎರಡು ರೀತಿಗಳಲ್ಲಿ ಅರ್ಥಮಾಡಿಕೊಳ್ಳಬಹುದು. ಸ್ವಕೀಯ ಎಂದರೆ ಕೃಷ್ಣ ತನ್ನ ವಿವಾಹಿತ ಪತಿ ಎನ್ನುವ ಭಾವದಲ್ಲಿ ಕೃಷ್ಣನೊಂದಿಗೆ ಭಕ್ತಿಬಂಧವನ್ನು ಸಾಧ್ಯವಾಗಿಸಿಕೊಳ್ಳುವುದು. ಪರಕೀಯ ಎಂದರೆ ನಿತ್ಯವಾದ ಮಾನಸಿಕವಾದ ಪ್ರೀತಿಯ ಭಕ್ತಿಬಂಧವನ್ನು ಕೃಷ್ಣನಲ್ಲಿ ಸ್ಥಾಪಿಸಿಕೊಳ್ಳುವುದು. ಗೌಡೀಯ ಸಂಪ್ರದಾಯದವರು ಪರಕೀಯ ರಸವು ಪ್ರೀತಿಯ ಅಭಿವ್ಯಕ್ತಿಯ ಅತ್ಯುತ್ತಮ ರೂಪವೆಂದೂ, ಅದು ಮಾತ್ರ ಮುಕ್ತಿ-ಸಾಧನವೆಂದೂ ಪರಿಗಣಿಸುತ್ತಾರೆ. ಇವೆಲ್ಲಾ ಮೂಡಿಸುವ ರಾಧೆಯ ಪರಿಕಲ್ಪನೆ ಪು.ತಿ.ನ. ಅವರ ಶ್ರೀಹರಿಚರಿತೆಯ ರಾಧಾ ದರ್ಶನಂ, ರಾಧಾಕೃಷ್ಣ ಸಂಗತಿ ಮತ್ತು ರಾಧಾಕೃಷ್ಣ ಮಿಲನಂ ಉಲ್ಲಾಸಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ಪೂರಕವಾಗುತ್ತದೆ.
ಷೋಡಶಿ: ಶ್ರೀಹರಿಚರಿತೆಯಲ್ಲಿ ರಾಧೆಯ ಪ್ರವೇಶ ಆಗುವುದು ಹಲವಾರು ಷೋಡಶಿಯರಲ್ಲಿ ಒಬ್ಬಳಾಗಿ. ಕೃಷ್ಣ ಬಾಂಢೀರ ವೃಕ್ಷದಡಿಯಲ್ಲಿ ಎಲ್ಲಾ ಗೋಪ ಗೋಪಿಯರೊಂದಿಗೆ ವನಭೋಜನ ಮಾಡಿದ್ದಾನೆ. ಆನಂತರ ಅದ್ಭುತವಾಗಿ ಕೊಳಲು ನುಡಿಸಿದ್ದಾನೆ. ಅದನ್ನು ಆಸ್ವಾದಿಸಿದ ಎಲ್ಲಾ ಗೋಪ ಗೋಪಿಯರಿಗೆ ಚಿಕ್ಕವನಿದ್ದಾಗ ತನ್ನ ವಿನೋದದ ಆಟ ಪಾಟ ಚೇಷ್ಟೆಗಳಿಂದ ತಮ್ಮ ಒಲವನ್ನು ಸೂರೆಗೊಂಡವನು ಈಗ ತಮ್ಮನ್ನು ಅತಿಶಯಗೊಳಿಸಿ ಧರೆಗಿಳಿಸಿ ಬೇರೆಯವರನ್ನಾಗಿಸಿದ್ದಾನೆ, ಇದು ದೈವದ ಒಲುಮೆಯೇ ಎಂದೆನ್ನಿಸಿದೆ. ಷೋಡಶಿಯವರದು ಮಾತ್ರ ಸ್ವಲ್ಪ ವಿಭಿನ್ನ ಮನಸ್ಥಿತಿ. ಷೋಡಶಿಯರ ಮನಸ್ಸಿನ ತುಂಬ ಕೃಷ್ಣನ ಕೊಳಲಗಾನ. ಮಾಗಿಯಲ್ಲಿ ಎಲೆ ಉದುರಿಸಿ ಬರಲಾದ ಮರ ಇದ್ದಕ್ಕಿದ್ದಂತೆ ಮಾರನೆಯ ದಿನವೇ ಚೆಂದಳಿರನ್ನು ತಳೆದ ಹಾಗೆ ಗೋಪಕನ್ಯಾ ಸಮೂಹದ ಮನಸ್ಥಿತಿ ಬದಲಾಗಿಹೋಗಿತ್ತು. ಅವರ ಮನಸ್ಸು ಅರಳಿದ ಹೃದಯದ ಸೌರಭದ ಮಾರ್ಗ ಹಿಡಿದು ಕಾತರದಿಂದ ವೇಣುಧರ ಕೃಷ್ಣನ ಕಡೆಗೆ ಹರಿಯಿತು ಎಂದು ಷೋಡಶಿಯರನ್ನು ವರ್ಣಿಸಿ “ಶ್ರೀಕೃಷ್ಣನಾದ ಸರ್ವಹೃದ್ಯ ಷೋಡಶೀ ಚಿತ್ತಚೋರ” ಎಂದು ವರ್ಣನೆಗೊಂದು ಅಂತ್ಯವನ್ನು ಕೊಡುತ್ತಾರೆ ಪು.ತಿ.ನ.
ಗೋಪಿಯರು ಬಯಸಿದುದು ಹೃತ್ ಚಕ್ರದಲ್ಲಿ ಕುಂಡಲಿನೀ ಶಕ್ತಿಯನ್ನು ಸ್ಥಿತಗೊಳಿಸಿದ ನಾದಯೋಗಿಯನ್ನು, ಪರಮಾನಂದನನ್ನು; ಹೃದಯದೊಳಗೆ ಹೊಕ್ಕಿಬಿಡುವ, ನಿರ್ಮಲವಾದ ಮನಸ್ಸು ಇರುವ, ತನ್ನಲ್ಲಿ ಇರುವುದನ್ನು ಹಂಚಿಕೊಳ್ಳುವ, ಬಾಲ ಸೂರ್ಯನಂತೆ ಹೊಳೆಯುವ ಕೃಷ್ಣನನ್ನು. ಅವರು ಕೃಷ್ಣ ತನ್ನ ಕೊಳಲಿನ ಇಂಚರದಿಂದ ತಮ್ಮ ಮನಸ್ಸು ಎಂಬ ವಾದ್ಯವನ್ನು ನುಡಿಸುತ್ತ ನಗೆ-ಬೆಳಗಿನ ಕುಡಿನೋಟಗಳನ್ನು ತಮ್ಮೊಳಗೆ ಚೆಲ್ಲಿದುದನ್ನು ನೆನೆಯುತ್ತಾ ಹರಿಚಿಂತೆಯಲ್ಲಿ ಮುಳುಗಿಹೋಗಿದ್ದಾರೆ. ಅವರಿಗೆ ತಾವು ಬಯಸಿದ ಕೃಷ್ಣ ಮತ್ತು ತಮ್ಮ ನಡುವಿನ ಆಕರ್ಷಣೆ, ಬಂಧ ನಾದಾತ್ಮಕ; ಮುರಲಿಯ ಸುಷಿರದಿಂದ ಧುಮುಕಿದ ಸ್ವರಗಳೇ ತಾವು ಎಂದು ತೋರುತ್ತಿದೆ.
ಇಂಥ ಮನದನ್ನನೇ ಪತಿಯಾಗಲಿ ಎಂದು ಹೂ ಮುಡಿಯದೆ, ಕಣ್ಣುಗಳಿಗೆ ಕಾಡಿಗೆ ಹಚ್ಚದೆ, ಮೈಗೆ ಅಂಗರಾಗ ಪೂಸಿಕೊಳ್ಲದೆ, ಹಾಲು ಕುಡಿಯದೆ, ತುಪ್ಪ ತಿನ್ನದೆ ಮಾಗಿಯ ಛಳಿಯಲ್ಲಿ, ಬೆಳಗಿನ ಜಾವದಲ್ಲಿ, ಇಬ್ಬನಿಯಿಂದ ತೊಯ್ದ ಮರಳಿನ ಮೇಲೆ ಬರಿಗಾಲಿನಲ್ಲಿ ನಡೆದು ಬಂದು ಯಮುನೆಯ ನೀರಿನಲ್ಲಿ ನಿಂತು ಕಾತ್ಯಾಯನಿಯ ಜಪ ಮಾಡುವ ಹರಕೆ ಹೊತ್ತಿದ್ದಾರೆ ಷೋಡಶಿ-ಗೋಪಿಯರು. ಆದರೆ ಅವರಲ್ಲೊಬ್ಬಳಲ್ಲಿ ಮಾತ್ರ ʼನೈಸರ್ಗಿಕ ಆವೇಗ ಮತ್ತು ಅಸಹಜ ಸೆಳೆತ ಅಲ್ಲದ, ದೇಹ-ಪ್ರಕೃತಿಯಿಂದ ಮತ್ತು ದೈಹಿಕ ಸಮಾಗಮದಿಂದ ಪಡೆದ ಸುಖಾನುಭವ ಅಲ್ಲದ, ಸತ್ ಚಿತ್ ಗಳ ಆಕರ್ಷಣೆಗೆ ತಾನೇ ಒಳಪಟ್ಟು ʼಸತ್ʼನ ಮಿಲನದಾನಂದವನ್ನು ಉಂಟುಮಾಡುವ ಸಾನ್ನಿಧ್ಯ, ಸಾಯುಜ್ಯ ತನ್ನದಾಗಲಿ ಎನ್ನುವ ಮಹಾ-ಕಾಮವನ್ನು ಕೃಷ್ಣ ಮೂಡಿಸಿದ್ದಾನೆ. ಅವಳೇ ರಾಧಾ ರಮಣಿ ಎಂದು ಪು.ತಿ.ನ. ಷೋಡಶಿಯರಲ್ಲಿ ಒಬ್ಬಳಾಗಿದ್ದ ರಾಧೆಯನ್ನು ಪ್ರತ್ಯೇಕವಾಗಿ ಪರಿಚಯಿಸುತ್ತಾರೆ.
ರಾಧಾರಮಣಿ: ಈ ರಾಧೆ ನವ ತರುಣಿ; ಅವಳ ಕೌಮಾರ್ಯ-ಕೋಶದಲ್ಲಿ ತಾರುಣ್ಯ ಇದುವರೆವಿಗೂ ನಿದ್ದೆ ಮಾಡುತ್ತಿತ್ತು; ಈಗ ಎಚ್ಚೆತ್ತಿದೆ, ಕಣ್ಣು ಬಿಟ್ಟಿದೆ; ಇನ್ನೂ ನಿದ್ದೆಯ ಮಬ್ಬು ಎಂದೇನೂ ಅಲ್ಲ; ಸರಿಯಾಗಿಯೇ ಎಚ್ಚರಗೊಂಡಿದೆ; ಅದು ಜಾಗೃತ ಆಗಿರುವುದು ಮಾತ್ರ ಇಂದ್ರಿಯ ಪ್ರಪಂಚಕ್ಕೆ. ಪು.ತಿ.ನ. ಅವರ ಇಂದ್ರಿಯಗ್ರಾಹ್ಯ ಪ್ರಪಂಚ ಬಹಳ ಸುಂದರವಾದದ್ದು; ಅದರಿಂದ ಪಡೆಯುವ ಅರಿವು, ಅದಕ್ಕೆ ವ್ಯಕ್ತಿ ತೋರುವ ಪ್ರತಿಕ್ರಿಯೆ ಸಹಜವಾಗಿ ಸೌಂದರ್ಯಾಭಿವ್ಯಕ್ತಿಯೇ. ಇದಕ್ಕೆ ಹೊಂದಿಕೊಂಡಂತೆ ಶ್ರೀಹರಿಚರಿತೆಯಲ್ಲಿ ರಾಧೆಯ ವರ್ಣನೆ ಇದೆ. ಅವಳು ಸದಾ ಕನ್ಬಡಿಯಲ್ಲಿ ತನ್ನನ್ನು ನೋಡಿಕೊಳ್ಳುತ್ತಿರುತ್ತಾಳೆ. ತನ್ನ ಬಿಂಬವನ್ನು ನೋಡಿ ನೋಡಿ ಆನಂದ ಪಡುತ್ತಿದ್ದಾಳೆ. ಅವಳ ಬಹುಪಾಲು ಸಮಯ ತನ್ನನ್ನು ಅಲಂಕರಿಸಿಕೊಳ್ಳುವುದರಲ್ಲೇ ಕಳೆದುಹೋಗುತ್ತಿದೆ. ಉಡುಗೆಗಳನ್ನು ಬದಲು ಮಾಡಿ ಮಾಡಿ ನೋಡಿಕೊಳ್ಳುತ್ತಿದ್ದಾಳೆ. ತೊಟ್ಟುಕೊಂಡ ಆಭರಣಗಳನ್ನು ಕಳಚುತ್ತಾಳೆ, ಹೊಸ ರೀತಿಯಲ್ಲಿ ತೊಟ್ಟುಕೊಂಡು, ಬದಲು ಮಾಡಿ ತೊಟ್ಟುಕೊಂಡು ನೋಡಿಕೊಳ್ಳುತ್ತಾಳೆ. ಬಗೆ ಬಗೆಯಾಗಿ ಜಡೆ ಹೆಣೆದುಕೊಳ್ಳುತ್ತಾಳೆ, ಹೆಣೆದುಕೊಂಡದ್ದು ಸರಿಯಿಲ್ಲ ಎಂದು ಬಿಚ್ಚುತ್ತಾಳೆ. ಹೊಸ ಬಗೆಯಲ್ಲಿ ಹೆಣೆದುಕೊಳ್ಳುತ್ತಾಳೆ. ಕುರುಳನ್ನು ತಿದ್ದುತ್ತಾಳೆ, ತೀಡುತ್ತಾಳೆ, ಕನ್ನಡಿಯಲ್ಲಿ ಇಣುಕುತ್ತಾಳೆ. ಮತ್ತೆ ಮತ್ತೆ ತಿದ್ದುತ್ತಾಳೆ. ಸಿಂಗರಿಸಿಕೊಳ್ಳುವುದರಲ್ಲೇ ಮಗ್ನಳಾಗಿ ಉಳಿದುದೆಲ್ಲವನ್ನೂ ಮರೆಯುತ್ತಾಳೆ.
ರಾಧೆ ಕನಸು ಕಾಣುತ್ತ ಮೈಮರೆತಿದ್ದಾಳೆ. ಅವಳ ಎದೆಯ ಗೂಡಿನ ಹಕ್ಕಿ ಈಗ ರೆಕ್ಕೆ ಬಿಚ್ಚಿ ಹಾರಾಡತೊಡಗಿದೆ. ಆ ಸ್ವಾತಂತ್ರ್ಯದ ಸಂತೋಷವನ್ನು ಕಣ್ಣು ಮುಚ್ಚಿ ಅನುಭವಿಸುತ್ತಿದ್ದಾಳೆ. ಅವಳ ಸಂತೋಷ, ಆನಂದ, ಸುಖಾನುಭವವನ್ನು ವ್ಯಕ್ತ ಪಡಿಸಲು ಅವಳಿಗೆ ಮಾತೇ ಬೇಕಿಲ್ಲ. ಒಂದು ಓರೆನೋಟ, ನೃತ್ಯದ ಮೆಲುಗತಿಯೇ ಸಾಕು. ಅದನ್ನು ವ್ಯಕ್ತಪಡಿಸಿಬಿಡುತ್ತದೆ. ಅವಳ “ಸ್ವಾತಂತ್ರ್ಯ”ದ ಗ್ರಹಿಕೆ ರೂಢಿಗತ ಬದುಕಿನಲ್ಲಿ ಅರುಚಿಯನ್ನು ತೋರುತ್ತಿದೆ, ಹೊಸದರ ಬಗೆಗಿನ ಒಲವನ್ನು ಎತ್ತಿ ತೋರುತ್ತಿದೆ. ಅವಳ ಮನಸ್ಸು ಎಲ್ಲಾ ರೀತಿಯಲ್ಲೂ ನಿರ್ಬಂಧಗಳನ್ನು ನಿರಾಕರಿಸುತ್ತಿದೆ. ಏನೇ ಎಡರು ತೊಡರುಗಳು ಬಂದರೂ ಅವುಗಳನ್ನೆಲ್ಲ ಎದುರಿಸಿ ಕಳೆಯುತ್ತೇನೆ ಎನ್ನುವ ಧೈರ್ಯ, ಚಾತುರ್ಯ ಎದ್ದು ಕುಣಿಯುತ್ತಿವೆ. ಹೊಸಲೋಕ ತೆರೆದುಕೊಳ್ಳುತ್ತಿದೆ. ಇದಕ್ಕೆ ಕಾರಣ ಅವಳ ಜೊತೆಗೆ ಜೇನು ಸುರಿಸುವ ಮಾರ ಇದ್ದಾನೆ, ಅವಳು ಮಧುವಿಗೆ ಆಕರವಾಗಿ ತನ್ನನ್ನು ತೆರೆದುಕೊಳ್ಳುತ್ತಿದ್ದಾಳೆ. ಇದು ಪು.ತಿ.ನ. ಅವರ ರಾಧೆಯ ವರ್ಣನೆಯೂ ಹೌದು, ಷೋಡಶಿಯ ವರ್ಣನೆಯೂ ಹೌದು.
ನಾದದ ಪರಿಭಾಷೆಯಲ್ಲಿ ರಾಧೆ: ತಂತ್ರ ಪಂಥದಲ್ಲಿ ಷೋಡಶಿಯೇ ಪರಮವಾಸ್ತವತೆ. ಅವಳು ತ್ರಿಪುರ ಸುಂದರಿ. ಧೈರ್ಯ, ಯಶಸ್ಸು, ಆನಂದಗಳ ಸಾಕಾರ. ಕಾಮೇಶ್ವರನ ಅಪಾರವಾದ ಮತ್ತು ಸೀಮಾತೀತವಾದ ಶಕ್ತಿಯ ಕೇಂದ್ರ, ಸೌಂದರ್ಯದ ಅಧಿದೇವಿ. ಈಕೆಯ ಉಪಾಸನೆ ಈಕೆಯ ಕೌಮಾರ್ಯದ ಉಪಾಸನೆಯಿಂದಲೇ ಆರಂಭವಾಗುತ್ತದೆ. ಸುನಾದದಂತೆ ಕೇಳಿಬರುವ ಮಂತ್ರೋಚ್ಚಾರಣೆ ಉಪಾಸನೆಯ ಒಂದು ಮುಖ್ಯ ಭಾಗ. ದೇವಿಯ ಭಾವವನ್ನು ಅವಾಹಿಸಿಕೊಳ್ಳುತ್ತಾ ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ, ಆನಂದಮಯ ಕೋಶಗಳ ಆವರಣಗಳನ್ನು ಕಳೆದುಕೊಳ್ಳುತ್ತ ಇಚ್ಛೆ, ಜ್ಞಾನ, ಕ್ರಿಯೆಗಳ ಸಾಧ್ಯತೆಗಳನ್ನು ವಿಸ್ತರಿಸಿಕೊಳ್ಳುತ್ತ ಉಪಾಸಕ(ಕಿ) ಅಂತಿಮವಾಗಿ ಶಕ್ತಿ ಶಕ್ತಗಳೆರಡರ ಪರಿಪೂರ್ಣ ಏಕತೆಯಾಗುತ್ತಾನೆ(ಳೆ). ಇದಕ್ಕೆ ಪು.ತಿ.ನ. ನಾದೋಪಾಸನೆಯ ಭಾಷೆಯ ತೊಡಿಗೆಯನ್ನು ತೊಡಿಸಿದ್ದಾರೆ.
ಕೃಷ್ಣ ಭಾಂಡೀರ ವೃಕ್ಷದ ಅಡಿಯಲ್ಲಿ ಮುರಳಿಯನ್ನು ನುಡಿಸಿದ್ದಾನೆ. ಅಲ್ಲಿ ಇದ್ದವರೆಲ್ಲ ಪರಮ ವಾಸ್ತವತೆಯಾದ ನಾದಬ್ರಹ್ಮನ ಅನುಭಾವಕ್ಕೆ ತಮ್ಮನ್ನು ತೆರೆದುಕೊಳ್ಳುವಂತೆ ಮಾಡಿದ್ದಾನೆ. ಅವರಲ್ಲಿ ನಾದರಸೋತ್ಪತ್ತಿಯಾಗಿದೆ. ಆ ಸಂದರ್ಭದಲ್ಲಿ ರಾಧೆಯೂ ಇದ್ದಳು. ಕೊಳಲಗಾನ ಅವಳನ್ನು ಹರಿಹೃದಯೆಯನ್ನಾಗಿಸಿತ್ತು. ಅವಳ ಅಂತರಂಗ ಬಹಿರಂಗಗಳೆರಡೂ ಹರಿಯ ಬಗೆಗಿನ ಒಲವಿನಂತೆ ಕೆಂಪು ಕೆಂಪು! ಮುರಳೀನಾದ ಮತ್ತು ಅದು ಕರೆದೊಯ್ದ ಅನುಭಾವ ಲೋಕ ಈಗ ಮರೆಯಾಗಿವೆ. ಆದರೆ ಅವಳಲ್ಲಿ ನಾದ(ಬ್ರಹ್ಮ) ಜಾಗೃತಿಯನ್ನು ಉಂಟುಮಾಡಿದೆ. ಈಗ ಅವಳೇ ಕೊಳಲು ಆಗಿದ್ದಾಳೆ. ಅವಳೇ ಜ್ಞಾನಸೂರ್ಯ, ಮೌನಾಕಾಶದ ರಸಾಕರವೂ ಆಗಿದ್ದಾಳೆ. ಇದು ರಾಧೆ ಕೃಷ್ಣನೊಡನೆ ಸಂಲಗ್ನಗೊಳ್ಳುವ ಆರಂಭದ ಮನಸ್ಥಿತಿ.
ಮೌನದಲ್ಲಿ ತನ್ನನ್ನು ಮುದ್ದಿಸುತ್ತಿರುವ ಕೊಳಲಿನ ನಾದದ ಲಲ್ಲೆಗೆ ಕೊರತೆ ಉಂಟಾಗಬಾರದು ಎನ್ನುವಂತೆ ರಾಧೆ ಸಖಿಯರ ಜೊತೆ ನೀರಿಗಾಗಲೀ, ತೋಪಿಗಾಗಲೀ ಹೋಗುತ್ತಿಲ್ಲ. ನಾದದ ಸವಿಯ ಗುಂಗಿನಲ್ಲಿ ಮನೆಯಲ್ಲಿಯೇ ಇದ್ದಾಳೆ. ಭಾಂಡೀರ ವೃಕ್ಷದ ತಲದಲ್ಲಿ ಮೂಡಿಬಂದ ವೇಣುಧ್ವನಿ ಪುನಃ ಪುನಃ ಹಗಲಲ್ಲಿಯೇ, ಎಚ್ಚರವಾಗಿರುವಾಗಲೇ ಕಣ್ಣ ಮುಂದೆ ಹೊಂಗನಸಾಗಿ ಕುಣಿಯುತ್ತಿದೆ. ʼನೀನು ಅತಿ ಚೆಲುವೆ, ಮೂರೂ ಜಗತ್ತು ನಿನಗೆ ಒಲಿದಿವೆ, ನಿನಗೆ ಸರಿಸಮರಾದವರು ಯಾರೂ ಇಲ್ಲ, ನಿನ್ನ ಕಾಲು ಹಿಡಿದು ನಿನ್ನ ಒಲುಮೆಯ ಭಿಕ್ಷೆಯನ್ನು ಬೇಡುತ್ತಿರುವ ಈ ಸುಂದರನನ್ನು ನೀನು ಬಲ್ಲೆಯಾʼ ಎಂದು ಆ ವೇಣು ಧ್ವನಿ ಕಿವಿಯಲ್ಲಿ ಉಸುರುವುದಲ್ಲದೆ ಹೊಳೆಯುವ ಮೂರ್ತಿಯ ಚಿತ್ರವೊಂದನ್ನು ಬಿಡಿಸುತ್ತಿದೆ. ಅದು ಮಾಧವ ಎಂದು ಅದನ್ನು ಮನಸ್ಸಿನ ಕಣ್ಣಲ್ಲಿ ಸೆರೆ ಹಿಡಿದಿಟ್ಟುಕೊಂಡಿದ್ದಾಳೆ. ಕನ್ನಡಿಯಲ್ಲಿ ಆ ಬಿಂಬದ ಪಕ್ಕದಲ್ಲಿ ತನ್ನ ಬಿಂಬವನ್ನೂ ಇಟ್ಟಿದ್ದಾಳೆ. ಎರಡೂ ಬಿಂಬಗಳನ್ನೂ ಪರೀಕ್ಷಿಸಿದ್ದಾಳೆ. ತಾನು ಕೃಷ್ಣನಂತೆ ಅತ್ಯುನ್ನತ ಸ್ಥಲವನ್ನು ತಲುಪಿಲ್ಲ ಎಂಬುದನ್ನು ಕಂಡಿದ್ದಾಳೆ. ಇದು ರಾಧೆಯ ಹರಿಜಾಗೃತಿಯ ಮೊದಲ ಹಂತ.
ಮುರಲೀ ನಾದ ರಾಧೆಯ ಕಿವಿಯಲ್ಲಿ “ಕೃಷ್ಣನ ನೆಲೆ ನಿನ್ನಲ್ಲೇ, ಅಲ್ಲಿಯೇ ಅವನು ಸುಖಿ, ಅವನು ಅಲ್ಲಿಂದ ಕದಲುವುದಿಲ್ಲʼ ಎಂದು ಘೋಷಿಸುತ್ತದೆ. ಕೇಳಿಬರುತ್ತಿರುವುದು ಭ್ರಮೆಯಿರಬಹುದೇ ಎಂದು ಪರೀಕ್ಷಿಸಿದ್ದಾಳೆ. ಇಂಥ ಧ್ವನಿ ತನ್ನಂತೆ ಇತರರಿಗೂ ಕೇಳಿಬಂದಿರಬಹುದು ಎಂದುಕೊಳ್ಳುತ್ತಾಳೆ. ಹೊಳೆಯ ಹರಿವಿನ ತುಟ್ಟತುದಿ ಕಡಲು. ಕಡಲನ್ನು ಸೇರಿದ ಮೇಲೆ ಹೊಳೆ ಕಡಲಿನದಾಗುತ್ತದೆಯೇ ವಿನಹ ಕಡಲು ಹೊಳೆಯದಾಗುವುದಿಲ್ಲ; ಆಕಾಶದಲ್ಲಿ ನೂರು ಮಿಂಚುಗಳು ಮೂಡಿ ಕಾರ್ಮುಗಿಲನ್ನು ಹೊಳೆಯಿಸುತ್ತವೆ. ಹಾಗೆಯೇ ನೂರು ಜೀವಗಳು ಕೃಷ್ಣನ ಒಲವಿನಿಂದ ಹೊಳೆಯುತ್ತವೆ; ಶ್ರೀಹರಿ ಎಲ್ಲರವನು; ತಾನು ಅವನವಳು ಆಗಿದ್ದರೂ ಅವನು ಅವಳವನು ಮಾತ್ರವೇ ಆಗಲಾರ ಎಂದು ತರ್ಕಿಸಿದ್ದಾಳೆ. ಇದು ಎರಡನೆಯ ಹಂತ.
ಮುರಲಿಯಿಂದ ಧುಮ್ಮಿಕ್ಕಿದ ತನಿಸ್ವರದೊಂದಿಗೆ ಮುರಲೀಧರನ ಕುಡಿನೋಟ, ಕೃಪಾಕಟಾಕ್ಷದ ಹೊಳಪು ತನ್ನನ್ನು ತಾಕಿದುದು ನಿಜ; ಅದು ನಿನಗೆ ಒಲಿದಿದ್ದೇನೆ ಎನ್ನುವ ಮೋಹಕ ನುಡಿ ಆಗಿದ್ದಿರಬಹುದು; ಅವನ ಮುರಳೀ ವಾದನದ ಒಂದು ಚಾತುರ್ಯವೂ ಆಗಿದ್ದಿರಬಹುದು; ಅದು ನಿಜವಾದದ್ದು ಆಗಿದ್ದರೆ ನೇರವಾಗಿ ಕೃಷ್ಣ ತಾನಿದ್ದಲ್ಲಿಗೇ ಏಕೆ ಬರುವುದಿಲ್ಲ ಎಂದು ಕೇಳಿಕೊಂಡಿದ್ದಾಳೆ. ಕೃಷ್ಣ ಹತ್ತಿರದಲ್ಲಿದ್ದಾನೆ ಎಂಬ ಭಾವದಿಂದ ಅವಳ ಮುಖ ಕೆಂಪೇರಿದೆ. ಅವಳ ಎದೆ ಜೋರಾಗಿ ಢವಗುಟ್ಟುತ್ತಿದೆ. ಅವನ ಪ್ರೌಢ ಮುರಳೀವಾದನ ಅವನು ಬಾಲನೂ ಅಲ್ಲ, ದುರ್ಬಲ ಭಾವವುಳ್ಳವನೂ ಅಲ್ಲ ಎನ್ನುವ ಗ್ರಹಿಕೆಯನ್ನು ಅವಳಲ್ಲಿ ಮೂಡಿಸಿದೆ. ಇದು ಮೂರನೆಯ ಹಂತ.
ಎಲ್ಲರಂತೆ ಇಲ್ಲ ಕೃಷ್ಣ ಎನ್ನುವ ವಿಸ್ಮಯ ಒಂದು ಕಡೆ, ಇಡೀ ಆಕಾಶವನ್ನು ಆವರಿಸಿರುವ ಸೂರ್ಯನನ್ನು ಯಾರಾದರೂ ತಮ್ಮವನು ಎಂದುಕೊಳ್ಳಲು ಸಾಧ್ಯವೇ ಎನ್ನುವ ಚಿಂತನೆ ಇನ್ನೊಂದು ಕಡೆ. ತನ್ನ ಒಲವನ್ನು ಅರಿಯದ ಕಠಿಣ, ನಿರ್ದಯಿ, ದಾಕ್ಷಿಣ್ಯರಹಿತ ಆದ ಕೃಷ್ಣ ತನ್ನವನು ಆಗುವುದು ಹೇಗೆ ಎನ್ನುವ ಒದ್ದಾಟ ಮತ್ತೊಂದು ಕಡೆ. ಶ್ರೀಹರಿಯ ಲೋಭದ ಕೊರಗಿನಲ್ಲಿ ಏಕಾಂತದಲ್ಲಿ ಕೇವಲ ಕೃಷ್ಣಮಾನಸೆ ಆಗಿದ್ದಾಳೆ. ಇದು ಉತ್ಕಟತೆಯ ಹಂತ.
ಪ್ರೇಮಿಷ್ಠ ನಾದಯೋಗಿ(ನಿ): ಪು.ತಿ.ನ. ಅವರಿಗೆ ಕೃಷ್ಣ ಕೇವಲ ಮುರಲೀಧರ ಅಲ್ಲ; ಅವನ ಮುರಲೀವಾದನ ಅವನು ಒಲವಿನ ಪ್ರತೀಕ ಎನ್ನುವುದನ್ನು ಪ್ರಕಾಶ ಪಡಿಸುವ ಮಧ್ಯವರ್ತಿ. ಅವರಿಗೆ ರಾಧೆ ಎನ್ನುವ ಗೋಪಿಯ ಕೃಷ್ಣನ ಬಗೆಗಿನ ಉತ್ಕಟ ಪ್ರೀತಿಯನ್ನು ಜೀವಾತ್ಮ ಮತ್ತು ಪರಮಾತ್ಮರ ನಡುವಿನ ಆತ್ಮೀಯ ಬಂಧವನ್ನಾಗಿ ವಿವರಿಸುವ ಉದ್ದೇಶ ಇರುವುದು ರಾಧಾದರ್ಶನಂ ಉಲ್ಲಾಸದಲ್ಲಿ ಕಾಣುತ್ತದೆ. ಅದಕ್ಕೆ ಪೂರಕವಾಗಿ ಅವರು ಒಲವಿನ ಸ್ವರೂಪವನ್ನು ಗಮನಿಸುತ್ತಾರೆ. ʼಒಲವು ಇದ್ದಾಗ ಬೇಕು ಬೇಕು ಎನ್ನುವ ದುರಾಸೆ, ಇಲ್ಲ ಇಲ್ಲ ಎನ್ನುವ ಕೊರಗು, ನಾನೇ ಮಿಗಿಲು ಎನ್ನುವ ಸಣ್ಣತನದ ಅಹಂಕಾರ, ನಾನೇನೂ ಅಲ್ಲ ಎನ್ನುವ ದೈನ್ಯತೆ ಇವೆಲ್ಲಾ ಭಂಗಗೊಳ್ಳುತ್ತವೆ. ಸ್ವಕೇಂದ್ರದಲ್ಲಿ ಕುಳಿತುಬಿಟ್ಟಿರುವ ಜೀವಾತ್ಮನ ಸ್ವಾರ್ಥಗ್ರಂಥಿಯನ್ನು ಒಲವು ಬೇಧಿಸುತ್ತದೆ. ಅಲ್ಲಿಂದ ಜೀವಾತ್ಮನನ್ನು ಹೊರಹಾಕುತ್ತದೆ, ನಿಸ್ವಾರ್ಥದ ಆಸರೆಗೆ ಒಯ್ಯುತ್ತದೆ. ಆ ಆಸರೆಯೇ ದೇವರು. ಪ್ರೇಮದ ಮೂಲದಲ್ಲಿ(ನೆಲೆಯಲ್ಲಿ) ಎಲ್ಲರ ಅಂತಃಕರಣದ ಸಿಂಹಾಸನದಲ್ಲಿ ರಾರಾಜಿಸುವ ಈ ದೇವರು ಭವ್ಯನಾದವನು, ಅವನೇ ಹರಿ, ರಾಧಾಮನೋರಮಣ, ವ್ರಜಕನ್ಯೆಯ ವರ; ರಾಧಾರೂಪಿಯಾಗಿರುವ ಎಲ್ಲ ಜೀವಾತ್ಮರನ್ನು ತನ್ನೆಡೆಗೆ ಸೆಳೆಯುವ ಪುರುಷೋತ್ತಮ, ಭಕ್ತರ ಇಷ್ಟದೈವ ಎಂದು ಪು.ತಿ.ನ. ದೇವರ ಬಗ್ಗೆ ಹೊಸ ವ್ಯಾಖ್ಯಾನವನ್ನು ಮಾಡಿ ಅದನ್ನು ಕೃಷ್ಣನೊಂದಿಗೆ ಸಮೀಕರಿಸಿದ್ದಾರೆ.
ಬಾಹ್ಯದಲ್ಲಿ ಕಾಣುವ ಕೃಷನದು ಎಲ್ಲರಿಗೂ ಇರುವ ಪ್ರಾಕೃತಿಕ ರೂಪವೇ. ಜ್ಞಾನಿಗಳಿಗೆ ಕಾಣುವವನು ಜಗತ್ತಿಗೇ ಪ್ರಭುವಾಗಿರುವ ಏಕೈಕ ದೈವ ಆಗಿದ್ದರೆ ಅನನ್ಯವಾದ ಪ್ರೀತಿಯಿಂದ ಅವನನ್ನೇ ಬಯಸುವ ಅವನಂತಹುದೇ ಮನಸ್ಸು ಇರುವವರಿಗೆ ಕಾಣುವವನು ಬೇರೆ ಕಡೆ ದುರ್ಲಭವಾಗಿರುವ ವಿಶಿಷ್ಟವಾದ ಪ್ರೀತಿ-ರುಚಿಯ ಸಂತೋಷಾನುಭವವನ್ನು ದೊರಕಿಸಿಕೊಡುವ ಅಂತರ್ಯಾಮಿ. ಪ್ರೇಮಿಷ್ಠರಿಗಾದರೋ ಪ್ರತ್ಯೇಕವಾದ ವ್ಯಕ್ತಿ; ಅವರು ಭಾವಿಸಿದ ರೂಪಗಳಲ್ಲೆಲ್ಲ ಅವರಿಗೆ ದೊರೆಯುವ ಅನೇಕ-ರೂಪಿ. ಇಂಥ ಪರಮ ಮೌಲ್ಯನಿಧಿಗೆ ಒಲಿಯುವವರ ಆಂತರ್ಯದೊಳಗೆ ಆನಂದ-ನಿಧಿಯ ನಿಕ್ಷೇಪವೇ ಇರುತ್ತದೆ. ಆದರೆ ಅದು ಅವರಿಗೆ ಅಜ್ಞಾತವಾಗಿದ್ದು ಲಭ್ಯವಾಗಿರುವುದಿಲ್ಲ. ಅದನ್ನು ಪಡೆಯುವುದಕ್ಕಾಗಿ ಅವರು ಅನುಭವಿಸುವ ಒದ್ದಾಟ, ವಿರಹಗಳೇ ಅವರು ಮಾಡುವ ತಪಸ್ಸು, ಅವರನ್ನು ಅವರು ಬಯಸಿದ ಎಡೆಗೆ ಕರೆದೊಯ್ಯುವ ದಿವ್ಯಶಕ್ತಿ. ಹೀಗೆ ಕೃಷ್ಣನ ಮತ್ತು ರಾಧೆಯರಂತಹ ಪ್ರೇಮಿಷ್ಠರ ವ್ಯಕ್ತಿತ್ವವನ್ನು ಅರ್ಥೈಸುವ ಪು.ತಿ.ನ. ರಾಧೆಯ ಒದ್ದಾಟವನ್ನು ಬೆಳಕಿಗಾಗಿ, ಸುಂದರವಾದ ಪ್ರಪಂಚಕ್ಕಾಗಿ, ಬರಿಯ ವ್ಯವಹಾರವಾಗಿಬಿಡದ ಬದುಕಿಗಾಗಿ ವಾಸ್ತವತೆಯ ವ್ಯವಸ್ಥಿತ ಬದುಕಿಗಾಗಿಯ ತಪಸ್ಸು ಎಂದು ವಿವರಿಸುತ್ತಾರೆ.
ಪು.ತಿ.ನ. ಅವರಿಗೆ ಸೃಷ್ಟಿ ತತ್ತ್ವ ಆದ ಕೃಷ್ಣ ಯಾವತ್ತೂ ಶ್ರೀ ಸಹಿತನಾದ ಕೃಷ್ಣನೇ (ಶ್ರೀಹರಿಯೇ); ಸೃಷ್ಟಿಯು ಸೌಂದರ್ಯ-ತತ್ತ್ವರಹಿತವಾದದ್ದಲ್ಲ; ಅದು ವ್ಯವಹಾರವೂ ಅಲ್ಲ; ವ್ಯವಹಾರ ಅಸಂತೋಷಕರವಾದದ್ದು. ಅಲ್ಲಿ ಯಾಂತ್ರಿಕ ಅಚ್ಚುಕಟ್ಟುತನ ಇದ್ದೀತು ಅಷ್ಟೇ. ಸೃಷ್ಟಿ ಯಾವ ಕ್ಷೇತ್ರದಲ್ಲಿಯೇ ಆಗಿರಲಿ ಅದು ಚೆಂದಾದದ್ದೇ. ಸೃಷ್ಟಿಸುವವನಿಗೆ ಅದು ಸಂತೋಷಕರವಾದದ್ದೇ. ಇದಕ್ಕೆ ಒಂದು ಪ್ರತೀಕವಾಗಿ ಪು.ತಿ.ನ. ಕೃಷ್ಣನ ವೇಣುವಾದನವನ್ನು ಪರಿಭಾವಿಸಿದ್ದಾರೆ. ಅವರ ರಾಧೆಗೆ ವೇಣುಸ್ವನವು ಕಿವಿಯಲ್ಲಿ ಹೊಕ್ಕು ಹೇಳುವುದು ಚೆಲುವೆ ನೀನು, ಜಗತ್ತು ಜಗತ್ತುಗಳೆಲ್ಲ ನಿನಗೆ ಒಲಿದಿರುವುದು, ನಿನಗೆ ನಾನು ಒಲಿದಿರುವುದು ನೀನು ಕಡು ಚೆಲುವೆ ಎಂದು. ಅವಳು ಕೊಡವನ್ನು ಸೊಂಟದಲ್ಲಿಟ್ಟುಕೊಂಡು ಯಮುನೆಯ ದಡಕ್ಕೆ ಹೋಗುವುದು ಗೋವಿಂದ ಎನ್ನುವ ದೇವರು ಬನದ ಭಾಂಡೀರದ ದಾರಿ ಹಿಡಿದು ಸುಳಿದಾಡಬಹುದು ಎಂಬ ನಿರೀಕ್ಷೆಯಿಂದ, ಅಪೇಕ್ಷೆಯಿಂದ. ಭಾಂಡೀರ ಕೃಷ್ಣನ ನಾದಯೋಗ ಸಿದ್ಧಿಯ ಕೇಂದ್ರ; ನಾದಯೋಗದ ಸಿದ್ಧಿಯನ್ನು ಎಲ್ಲ ಗೋಪೀ ಗೋಪರಿಗೆ ಅನುಭವಗಮ್ಯವಾಗಿಸಿದ ಕ್ಷೇತ್ರ. ಭಾಂಡೀರದ ಬಳಿಯಲ್ಲಿಯೇ ಕೃಷ್ಣನನ್ನು ಹುಡುಕುವ, ಕಾಣಲು ಬಯಸುವ ರಾಧೆ ಕೃಷ್ಣನಂತೆ ನಾದಯೋಗ ತಪಸ್ವಿನಿ.
ಪು.ತಿ.ನ. ಅವರಿಗೆ ಕೃಷ್ಣನ ಆಕರ್ಷಣೆಯ ರಹಸ್ಯ ಅವನ ನಿರ್ವ್ಯಾಜ ಪ್ರೇಮ. ಅದು ಸಂದರ್ಭೋಚಿತವಾಗಿ ಬೇರೆ ಬೇರೆ ರೂಪಗಳನ್ನು ಪಡೆಯುತ್ತದೆ. ಅವನು ಕೊಳಲಿನ ಮೂಲಕ ನಾದಯೋಗಿಯಾದ, ತನ್ನನ್ನು ಪ್ರೀತಿಯಿಂದ ಬೆಳೆಸಿದ ವ್ರಜನಿವಾಸಿಗಳಿಗೆಲ್ಲ ನಾದರಸಾನುಭೂತಿ ಉಂಟಾಗುವಂತೆ ಮಾಡಿದ; ಯುವ ಗೋಪಿಯರಿಗೆ ದೈಹಿಕ ಕಾಮವನ್ನು ದೈವಕಾಮವನ್ನಾಗಿಸುವ ದಾರಿ ತೋರಿಸಿದ; ತನಗೆ ಮಾತ್ರ ಕೃಷ್ಣ ಪತಿಯಾಗಬೇಕು ಎಂದು ಹಂಬಲಿಸಿದ ರಾಧೆಗೆ ತಂತ್ರಪಂಥದ ಮಾರ್ಗದಲ್ಲಿ ಸತಿಪತಿ ಭಾವ ಬ್ರಹ್ಮಾನಂದವಾಗುವುದರ ಅನುಭವ ದೊರೆಯುವಂತೆ ಮಾಡಿದ, ಅವಳನ್ನು ಮುಕ್ತಾತ್ಮಳನ್ನಾಗಿಸಿದ.
ರಾಧಾದರ್ಶನದ ಅರ್ಥ: ಪು.ತಿ.ನ. ಶ್ರೀಹರಿಚರಿತೆಯ 14ನೇ ಉಲ್ಲಾಸವನ್ನು ʼರಾಧಾ ದರ್ಶನʼ ಎಂದಿದ್ದಾರೆ. ಇದರ ಅರ್ಥ ಕೃಷ್ಣನಿಗೆ ರಾಧೆಯ ದರ್ಶನ ಆಯಿತು, ಕೃಷ್ಣ ರಾಧೆಯನ್ನು ಪ್ರತ್ಯೇಕವಾಗಿ ನೋಡಿದ ಎಂದಲ್ಲ. ಅಥವಾ ರಾಧೆ ಕೃಷ್ಣನನ್ನು ಪ್ರತ್ಯೇಕವಾಗಿ ನೋಡಿದಳು ಎಂದಲ್ಲ. ಅವರು ಪರಸ್ಪರ ಏಕಾಂತದಲ್ಲಿ ಸಂಧಿಸಿದರು ಎಂದೂ ಅಲ್ಲ. ಅದರ ಅರ್ಥ ರಾಧೆ ಪಡೆದ ದರ್ಶನ, ಒಳನೋಟ, ಬೋಧೆ; ರಾಧೆಯಿಂದ ನಮಗೆ ಆದ, ಆಗುವ, ಆಗಬೇಕಾದ ಬೋಧೆ, ನಾವು ಪಡೆಯಬೇಕಾದ, ಪಡೆಯುವ ಒಳನೋಟ ಎಂದು. ಪು.ತಿ.ನ. ರಾಧೆಯನ್ನು”ಹರಿತಪ್ತೆ ಅತುಲ ಪ್ರೇಮಮಯಿ ಮುದಾಕರೆ”; “ಶ್ರೀಹರಿಯೊಲವ ಸೂರೆಗೊಂಡ ಹೆಣ್ಣು| ರಾರಾಜಿಪಳು ಹರಿಭಕ್ತಮಾನಸದೊಳುಜ್ವಲ ತರುಣಿ|…..ಭೂಲೋಕದೊಳು…| ಕಾಮದುತ್ಕಟತೆಯನು ತುಸ ಕೊರೆಯಾಗದೊಲು ತಳೆದವರಾರ್| ರಾಧೆಯ ಹೊರತು ಕೊನೆವರೆಗು|…..ಮಿಕ್ಕವರಿಗಸದಳಮಾಯ್ತು ದಿವ್ಯಕಾಮವನಿದನು ಜೀವಕಾಮದೊಳಡಗಿಸದೆ ಕಾಪಿಡಲು” ಎಂದು ನಿರೂಪಿಸುತ್ತಾರೆ. ಇದರ ವಿಸ್ತೃತ ಭಾಗ ಮತ್ತು ತುಟ್ಟತುದಿ ರಾಸಕ್ರೀಡೆ ಎಂದೂ ಅವರು ಮುಂದೆ ತಮ್ಮ ಶ್ರೀಹರಿಚರಿತೆಯಲ್ಲಿ ನಿರೂಪಿಸುತ್ತಾರೆ.
-ಪದ್ಮಿನಿ ಹೆಗಡೆ
ಉತ್ತಮ ಲೇಖನ ಸೊಗಸಾದ ನಿರೂಪಣೆ… ಧನ್ಯವಾದಗಳು ಪದ್ಮಿನಿ ಮೇಡಂ
ಮಾಹಿತಿಗಳ ಕಣಜ.
ಅತ್ಯುತ್ತಮ ಲೇಖನ ಮೇಡಂ
ಪಂಡಿತ ಪಾಮರರಿಬ್ಬರಿಗೂ
ಹೃದಯಕಿಳಿವ ರಾಧಾ ಮಾಧವಾಮೃತ !
ಎಲ್ಲ ಕಾಲದ ಪ್ರಸ್ತುತ !!
ನಿಮ್ಮ ಬರೆಹ ಓದುವುದೆಂದರೆ
ವಿದ್ವಜ್ಜನರ ಮುಂದೆ ಕುಳಿತು
ರಸಕಾವ್ಯದ ಪಾಠ ಆಲಿಸಿದಂತೆ….
ಧನ್ಯವಾದಗಳು ಮೇಡಂ
ನಿಮ್ಮೊಳಗೆ ನೆಲೆಸಿದ ಶಾರದೆಗೆ
– ಮಂಜುರಾಜ್
ರಾಧಾ ಮಾಧವರ ಪ್ರೇಮಮಯ ಜೀವನ ಸಾರವನ್ನು ಉಣಬಡಿಸುವ ಪ್ರೌಢ ಲೇಖನ ಬೇರೊಂದೇ ಲೋಕಕ್ಕೆ ಕರೆದೊಯ್ಯಿತು.
ರಾಧಾ ಕೃಷ್ಣರ ಉತ್ಸೃಷ್ವ ರಸಕಾವ್ಯ ಸವಿದಂತಾಯಿತು.
ಅರ್ಥಪೂರ್ಣವಾದ ಫೋಟೋಗಳೊಂದಿಗೆ ಲೇಖನ ಪ್ರಕಟಿಸಿದ ಸದಭಿರುಚಿಯ ಹೇಮಾಮಾಲಾ ಮೇಡಂಗೆ ಹೃತ್ಪೂರ್ವಕ ಧನ್ಯವಾದಗಳು.
ಅಕ್ಜರಾಸ್ಥೆಯಿಂದ ಲೇಖನವನ್ನು ಓದಿ ಕಲಾತ್ಮಕವಾಗಿ ಸ್ಪಂದಿಸಿರುವ ಬಿ.ಆರ್. ನಾಗರತ್ನ ಮೇಡಂಗೆ, ಮಂಜುರಾಜ್ ಸರ್ ಅವರಿಗೆ, ಪದ್ಮ ಆನಂದ್ ಮೇಡಂಗೆ, ಶಂಕರಿ ಶರ್ಮ ಮೇಡಂಗೆ, ಅನಾಮಿಕ ಓದುಗರಿಗೆ ಹೃತ್ಪೂರ್ವಕ ವಂದನೆಗಳು.
ಧನ್ಯವಾದಗಳು