ಸೀತಾಪಹರಣ

Share Button
Rukminimala

ರುಕ್ಮಿಣಿಮಾಲಾ, ಮೈಸೂರು.

 

ಸೀತೆಯನ್ನು ರಾವಣ ಅಪಹರಿಸಿ ಅಶೋಕವನದಲ್ಲಿರಿಸಿದನು. ಅಲ್ಲಿ ರಾವಣ ಸೀತೆಯನ್ನು ಚಿನ್ನದ ಒಡವೆ ತೋರಿಸಿ ವಶಪಡಿಸಿಕೊಳ್ಳಲು ಹೋದಾಗ ಅವರಿಬ್ಬರಲ್ಲಿ ನಡೆದ ಮಾತುಕತೆ.

ರಾವಣ: ಜಾನಕಿ, ಇದೋ ಸಮಗ್ರ ದಾನವರಾಜ್ಯದ ನಿರ್ಮಾತೃವೆನಿಸಿದ ಈ ದಶಗ್ರೂವನು ನಿನ್ನಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ. ಮುಖವೆತ್ತಿ ನನ್ನಲ್ಲಿ ಮಾತಾಡು. ನಿನ್ನನ್ನೇ ಹಗಲಿರುಳು ನೆನೆದು ಹಂಬಲಿಸುವ ನನ್ನ ಮೇಲೆ ಅನುಗ್ರಹ ತೋರು. ನಿನ್ನ ಕುರಿತು ಕೇಳಿದಾಗಲೇ ನನಗೆ ಅತ್ಯಂತ ಆಸೆ ಉಂಟಾಗಿತ್ತು. ನನ್ನ ಮನಸ್ಸು ಪೂರ್ಣವಾಗಿ ನಿನ್ನಲ್ಲೇ ಸೇರಿ ಹೋಗಿದೆ. ನನ್ನ ವೈಭವವನ್ನು ನೀನೇ ನೋಡಿರುವೆ. ದೇವ, ದಾನವ, ಮಾನವರೆಲ್ಲರೂ ನನಗೆ ಸರಿಮಿಗಿಲೆನಿಸಿದವರಿಲ್ಲ. ಪುಷ್ಪಕವಿದೆ. ಎಲ್ಲಿಗೆ ಬೇಕೋ ಅಲ್ಲಿಗೆ ನಿರಾಯಾಸವಾಗಿ ಹೋಗಿ ಬರಬಹುದು. ಲೋಕಲೋಕಗಳ ಸುಂದರಿಯರಲ್ಲಿ ಯಾರು ಯಾರು ಅತ್ಯಂತ ಲಾವಣ್ಯವತಿಯರೆಂದು ಪ್ರಸಿದ್ಧರೋ ಅವರೆಲ್ಲರೂ ನಿನ್ನ ಮುಂದೆ ಸೂರ್ಯನ ಮುಂದಿನ ದೀಪಗಳಂತೆ. ಬೇಕಿದ್ದರೆ ಹೇಳು. ಈ ಹತ್ತೂ ತಲೆಗಳಲ್ಲಿ ನಿನ್ನನ್ನು ಹೊತ್ತು ಓಲೈಸುತ್ತೇನೆ. ನನ್ನ ಲಂಕೆಯ ಸಕಲ ಸೌಭಾಗ್ಯವೂ ನಿನ್ನದು. ಹೆಚ್ಚೇಕೆ? ಈ ಲಂಕೇಶ್ವರನೇ ನಿನ್ನವನು. ಯಾವುದು ಬೇಕು ಹೇಳು. ಸಂತೋಷದಿಂದ ತರಿಸಿಕೊಡುತ್ತೇನೆ. ನನಗೆ ಬೇಕಾದ ಐಶ್ವರ್ಯವಿದೆ. ಅಧಿಕಾರವಿದೆ, ನಿತ್ಯ ಯೌವನವಿದೆ. ಈ ಎಲ್ಲ ಸೌಭಾಗ್ಯಕ್ಕೆ ನಿನ್ನ ದಯೆಯೊಂದೇ ಇನ್ನೂ ಪ್ರಾಪ್ತಿಯಾಗದಿರುವುದು. ಸೀತಾ! ಏಕೆ ಚಿಂತೆ? ಅರಣ್ಯವಾಸದ ಆ ದೀನತೆಗೂ ಇಲ್ಲಿಯ ವೈಭವಕ್ಕೂ ಎಷ್ಟೊಂದು ಅಂತರವಿದೆ! ಯಾವ ಲೋಕದ ವಸ್ತ್ರಾಲಂಕಾರಗಳು ಬೇಕು? ಇದೋ ಇಲ್ಲಿದೆ ಆರಿಸಿಕೊ. ಇಷ್ಟೂ ಸೀರೆಗಳಲ್ಲಿ ಯಾವುದು ನಿನ್ನ ಮನಸ್ಸಿಗೆ ಒಪ್ಪಿಗೆಯಾಗಿದೆ ಅದನ್ನು ತೆಗೆದುಕೊ. ಯಾರು ನಿನ್ನ ಸೇವೆ ಮಾಡಬೇಕು ಹೇಳು! ನಿರಾಭರಣೆಯಾಗಿ ನೆಲ ನೋಡುತ್ತ ಚಿಂತಿಸುತ್ತಿರುವ ದೀನತೆ ಏಕೆ? ಜಾನಕಿ! ಸಂಕೋಚ ಪಡಬೇಡ. ಮಾತಾಡು ಸೀತಾ! ಇಷ್ಟು ಬೇಡುತ್ತಿರುವ ಈ ದಾನವ ಸಾಮ್ರಾಟನಲ್ಲಿ ಒಂದು ಮಾತನ್ನಾದರೂ ಆಡು. ನನ್ನಲ್ಲಿ ಕೋಪವೇ? ಸ್ತ್ರೀಯರ ಚಿತ್ತ ಎಂದಿಗೂ ಕಠಿಣವಲ್ಲ.

 

ಸೀತೆ: ಎಲೈ ದಾನವನೇ! ನಿನ್ನ ವೃಥಾಲಾಪ ಕೇಳಿ ಸಾಕಾಯಿತು. ಮನಸ್ಸಿಗೆ ಬಂದುದೆಲ್ಲವನ್ನೂ ಹರಟಿರುವೆ. ನಿನಗೆ ನಾಚಿಕೆ ಇಲ್ಲವೆ? ನಾನು ಶ್ರೀರಾಮನ ಪತ್ನಿ. ನನ್ನ ನೆರಳನ್ನು ಕೂಡ ಬಲವಂತವಿಲ್ಲದೆ ಸ್ಪರ್ಶಿಸಲಾರೆ. ನಿನಗೆ ಎಷ್ಟು ಐಶ್ವರ್ಯವಿದ್ದರೇನು? ಉತ್ತಮ ಸ್ತ್ರೀಯರಾರೂ ಅದಕ್ಕೆ ಮನಸೋಲರಾರರು. ನಮ್ಮ ಅಯೋಧ್ಯೆಯಲ್ಲಿ ಯಾವುದಕ್ಕೂ ಕಡಿಮೆ ಇರಲಿಲ್ಲ. ಆದರೆ ಪತಿಯ ಜತೆಯಲ್ಲಿರುವುದೇ ಹೆಣ್ಣಿನ ಕರ್ತವ್ಯ ಎಂದು ಬಗೆದು ನಾನು ವನವಾಸಕ್ಕೆ ಬಂದವಳು. ಇಹಲೋಕದ ಯಾವ ಭೋಗಭಾಗ್ಯಗಳಿರಲಿ ಅದು ಕೇವಲ ನಶ್ವರವಾದುದು. ಎಲ್ಲಕ್ಕೂ ಅಧಿದೇವತೆ ಹೆಣ್ಣೆಂದು ಅರಿತ ನೀನು ಆಕೆಯು ಹೆರವರ ಭೋಗ ಸಾಧನವಲ್ಲ ಎಂಬುದನ್ನು ತಿಳಿದು ಕೊಳ್ಳಲಿಲ್ಲ. ಯಾವ ದೇವರಿಂದ ಯಾವುದೇ ವರ ಪಡೆದಿದ್ದರೂ ಮೃತ್ಯುವನ್ನು ಮೀರಲು ಸಾಧ್ಯವಾಗದು. ಲೋಕಲೋಕಗಳನ್ನು ಗೆದ್ದು ಕೈಲಾಸವನ್ನೆತ್ತಿ ಮೆರೆದಿರುವ ನೀನು ನನ್ನನ್ನು ಕದ್ದೇ ತಂದಿರುವೆ. ಶ್ರೀರಾಮನ ಸಮ್ಮುಖದಲ್ಲಿ ನಿನ್ನ ಶೌರ್ಯ ತೋರಿಸಲು ನಿನಗೆಲ್ಲಿದೆ ಶಕ್ತಿ? ನೈತಿಕ ಧೈರ್ಯವೆಲ್ಲಿದೆ? ಏಕಪತ್ನೀವ್ರತಸ್ಥನಾದ ಆ ನನ್ನ ಸ್ವಾಮಿಯನ್ನು ನಿನ್ನಂಥ ಕಾಮಿ ನೀಚ ಏನು ತಾನೆ ಮಾಡಬಲ್ಲನು? ನೀತಿಬಾಹಿರನಾದ ನೀನು ಕ್ಷುಲ್ಲಕರಿಗಿಂತಲೂ ಕಡೆ. ಹೇಡಿಗಳಲ್ಲಿ ಮೊದಲನೆಯವ. ನನ್ನನ್ನು ಕದ್ದು ತಂದು ದ್ರೋಹಿಯಾಗಿರುವೆ. ನಿನ್ನಲ್ಲಿ ಎಷ್ಟು ಸಂಪತ್ತಿದ್ದರೇನು? ಅದು ನನಗೆ ನಿರುಪಯುಕ್ತ. ಬಹುದೊಡ್ಡ ಸಾಮ್ರಾಟ ನೀನಾಗಿರಬಹುದು. ಅದಕ್ಕೆ ತಕ್ಕಂತೆ ನಡೆಯಲಾರದ ನೀನು ನಾಶವಾಗುವ ಕಾಲ ದೂರವಿಲ್ಲ. ಪರಸ್ತ್ರೀಯರನ್ನು ಕೆಡಿಸುವುದರಲ್ಲಿಯೇ ನಿನ್ನ ಪರಾಕ್ರಮವನ್ನು ತೋರಿಸುತ್ತಿರುವ ನೀನು ಹಾಳಾಗಿ ಹೋಗು. ನನ್ನ ಸಮ್ಮುಖದಲ್ಲಿ ನಿನ್ನ ಬೆಡಗನ್ನು ತೋರಿಸಲು ಬಂದೆಯಲ್ಲ! ನಿನ್ನ ಮುಖಕ್ಕೆ ಬೆಂಕಿ ಬೀಳಲಿ. ಈ ವೈಭವ ಮಣ್ಣುಪಾಲಾಗಲಿ. ಮರ್ಯಾದೆ ಮೀರಿ ಸತ್ತು ಬದುಕಿರುವ ನೀನೂ ಒಬ್ಬ ಪುರುಷನೇ? ಇಷ್ಟು ದಿವಸಗಳು ಕಳೆದುವು. ಇನ್ನೂ ನನ್ನನ್ನು ಅರ್ಥ ಮಾಡಿಕೊಳ್ಳದ ನೀನು ಅವಿವೇಕಿ, ನೀಚ, ಅಧಮ, ಕಟುಕ, ಹೇಡಿ! ನನ್ನ ಕಣ್ಣೆದುರಿನಿಂದ ಅತ್ತ ತೊಲಗು!

 

(ವಿ.ಸೂ: ಮಕ್ಕಳಿಗೆ ಏಕಪಾತ್ರಾಭಿನಯ ಮಾಡಲು ಅನುಕೂಲವಾಗುವಂತೆ ಎರಡು ಪಾತ್ರಗಳ ನಡುವಿನ ಸಂಭಾಷಣೆಯ ರೂಪದಲ್ಲಿ ಇದನ್ನು ಬರೆಯಲಾಗಿದೆ.)

 

– ರುಕ್ಮಿಣಿಮಾಲಾ, ಮೈಸೂರು

 

1 Response

  1. Rama Prasad.N says:

    ಮಕ್ಕಳು ಪಾತ್ರ ಮಾಡುವುದು ಕಷ್ಟ
    ಅಲ್ವ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: