ಸಾಹಿತ್ಯ ದಾಸೋಹಿಗಳ “ಸಾಹಿತ್ಯ ಶತಕ”
ಸಾಹಿತ್ಯ ದಾಸೋಹ ಎನ್ನುವ ಹೆಸರು ಹನ್ನೆರಡನೇ ಶತಮಾನದ ಶರಣ ಪರಂಪರೆಯನ್ನು ನೆನಪಿಸಿದರೆ ಸಾಹಿತ್ಯ ದಾಸೋಹಿಗಳೆಲ್ಲ ಸೇರಿ ಹೊರ ತಂದಿರುವ “ಸಾಹಿತ್ಯ ಶತಕ” ಸಂಚಿಕೆಯಲ್ಲಿಯ ಶತಕ ಎನ್ನುವ ಪದ ಶತಕಗಳ ರೂಪದಲ್ಲಿ ತಮ್ಮ ಅನ್ನಿಸಿಕೆಯನ್ನು ದಾಖಲಿಸಿರುವ ಸೋಮೇಶ್ವರನಂತಹ ಕವಿವರರನ್ನು ನೆನಪಿಸುತ್ತದೆ. ದಾಸೋಹಂ ಎನ್ನುವ ಸಂಸ್ಕೃತ ಪದದ ಅರ್ಥ ನಿನ್ನ ಅಂದರೆ ಭಗವಂತನ ದಾಸ, ಅಡಿಯಾಳು ಎಂದು. ಇದು ಕನ್ನಡಕ್ಕೆ ಬಂದು ದಾಸೋಹ ಎಂದಾದಾಗ ಅದು ಮೊದಲಿನ ಅರ್ಥವನ್ನು ಕಳೆದುಕೊಂಡಿತು. ವೃತ್ತಿಯೊಂದರಿಂದ ಹಣ ಸಂಪಾದಿಸಿ ಶಿವಭಕ್ತರಿಗೆ ಊಟೋಪಚಾರ ಮಾಡುವುದು ಎಂದಾಯಿತು. ಈ ಊಟೋಪಚಾರಕ್ಕೆ ಎರಡು ಶರತ್ತುಗಳಿದ್ದವು. ಒಂದನೆಯದು ಊಟೋಪಚಾರಕ್ಕಾಗಿ ಬಳಸಿದ ಹಣ ವ್ಯಕ್ತಿಯ ಸ್ವಯಾರ್ಜನೆ ಆಗಿರಬೇಕು. ಎರಡನೆಯದು ಊಟ, ಉಪಚಾರ ಶಿವಭಕ್ತರಿಗೆ ಮಾತ್ರ ಎಂಬುದಾಗಿತ್ತು. ಇಂಥ ದಾಸೋಹದ ಕಲ್ಪನೆ ಪ್ರಾಸಂಗಿಕವಾಗಿ ಹಲವಾರು ಆಯಾಮಗಳನ್ನು ಪಡೆಯುತ್ತಾ ಬಂದಿದೆ. ಅರ್ಪಣ ಮನೋಭಾವದಿಂದ ಯಾವುದನ್ನು ಜನಹಿತಕ್ಕಾಗಿ ಕೊಡುಗೆಯಾಗಿ ಕೊಟ್ಟರೂ ಅದೆಲ್ಲವೂ ದಾಸೋಹ ಎಂಬ ಪರಿಕಲ್ಪನೆಯ ಪರಿಧಿಯ ಒಳಗೇ ಬರುತ್ತದೆ
ಹೆಚ್ಚಾಗಿ ಅನ್ನ ದಾಸೋಹ, ಜ್ಞಾನ ದಾಸೋಹಗಳನ್ನು ಜನ ಬಹಳ ಗಂಭೀರವಾಗಿ ಪರಿಗಣಿಸಿದ್ದಾರೆ. ಹೀಗೆ ಭಾವಿಸಿದುದರ ಒಂದು ಮುಖ ಮೈಸೂರಿನಲ್ಲಿ ಜಾಗೃತ ಆಗಿರುವ ನಮ್ಮ ಸಾಹಿತ್ಯ ದಾಸೋಹ. ಶರಣರ ದಾಸೋಹದಂತೆ ಇದೂ ವಿಶಿಷ್ಟವಾದದ್ದು. ಇಲ್ಲೂ ಎರಡು ಶರತ್ತುಗಳಿವೆ: ಒಂದನೆಯದು ಯಾವುದಾದರೊಂದು ಹೊಸದಾದ, ಸ್ವಂತದ್ದಾದ ಬರೆವಣಿಗೆಯೊಂದಿಗೆ ಸಾಹಿತ್ಯ ದಾಸೋಹಕ್ಕೆ ಬರಬೇಕು; ಎರಡನೆಯದು ಬಂದವರು ಊಟ ಮಾಡಿಕೊಂಡೇ ತೆರಳಬೇಕು. ಈ ಸಾಹಿತ್ಯ ದಾಸೋಹವಾದರೋ ಮುಕ್ತವಾದದ್ದು. ಬರೆಯುವವರು ಮತ್ತು ಅನ್ನದಾತರು ಯಾರು ಬೇಕಾದರೂ ಆಗಿರಬಹುದು ಎನ್ನುವ ಆಶಯದಿಂದ ಶಿವಭಕ್ತರ ಅನ್ಬ ಮತ್ತು ಜ್ಞಾನ ದಾಸೋಹದ ಅರ್ಥವ್ಯಾಪ್ತಿಯನ್ನು ಹಿಗ್ಗಿಸಿದೆ.
ಶರಣರ ದಾಸೋಹದ ಹಿನ್ನೆಲೆಯಲ್ಲಿರುವ ತಾತ್ತ್ವಿಕ ಸಂಗತಿ ವ್ಯಕ್ತಿ ಯಾವುದಾದರೊಂದು ಸಾಮಾಜಿಕ ವೃತ್ತಿಯನ್ನು ಅನುಸರಿಸಿ ದುಡಿದು ಸಂಪಾದಿಸಿದುದರಲ್ಲಿ ಅಗತ್ಯ ಇರುವ ಸಾಮಾಜಿಕರಿಗೆ ಊಟವನ್ನು ಕೊಡಬೇಕು ಎನ್ನುವುದು. ಸಾಮಾಜಿಕರ ಹಸಿವು, ಸಮಾಜಕ್ಕೆ ಅಗತ್ಯವಾದ ವೃತ್ತಿಯ ಅನುಸರಣೆ ದಾಸೋಹದ ಕಾಳಜಿ. ಇದಕ್ಕೆ ಸಮಾನಾಂತರವಾದದ್ದು ವೈಯಕ್ತಿಕ ಮಾನಸಿಕ ಹಸಿವು, ಅದನ್ನು ಸಾಮಾಜಿಕರ ಮನ್ನಣೆಯ ಮೂಲಕ ಹಿಂಗಿಸಿಕೊಳ್ಳುವುದು. ಪ್ರತಿಯೊಬ್ಬರಿಗೂ ತಮ್ಮನ್ನು ಇತರರು ಗಮನಿಸಬೇಕು, ಗಮನಿಸಿದುದು ಅನುಕಂಪ, ಕರುಣೆ ಆಗಿರದೆ ಗೌರವಾದರದ ಗಮನಿಸುವಿಕೆ ಆಗಿರಬೇಕು ಎನ್ನುವ ಅನ್ನಿಸಿಕೆ ತೀವ್ರವಾಗಿರುತ್ತದೆ. ಸಾಹಿತ್ಯ ದಾಸೋಹ ಕೂಟವು ಈ ಅನ್ನಿಸಿಕೆಯನ್ನು ಮರ್ಯಾದಿಸುವ ಸೂಕ್ತವಾದ ವೇದಿಕೆ. ಇಲ್ಲಿ ಯಾರು, ಹೇಗೆ ತಮ್ಮನ್ನು.ಅಭಿವ್ಯಕ್ತ ಪಡಿಸಿಕೊಳ್ಳಬೇಕು ಎನ್ನುವುದನ್ನು ಘೋಷಿಸುವ ಅಥವಾ ಸೂಚಿಸುವ ಚೌಕಟ್ಟು ಇಲ್ಲ. ಎಲ್ಲರಿಗೂ, ಎಲ್ಲಾ ಪ್ರಕಾರದ ಸಾಹಿತ್ಯಾಸಕ್ತಿಗೆ ಸುಸ್ವಾಗತ. ಇದನ್ನು ಬಿಂಬಿಸುವ ಒಂದು ಕಾರ್ಯಕ್ರಮ 18-2-2024ರಂದು ಮೈಸೂರಿನ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಸಾಹಿತ್ಯ ದಾಸೋಹದ ಶತಕ (ಮಾಸಿಕ) ಕೂಟದ ಅಂಗವಾಗಿ ಸಾಹಿತ್ಯ ಶತಕ ಸಂಚಿಕೆಯ ಬಿಡುಗಡೆಯ ಕಾರ್ಯಕ್ರಮ.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಬೆಂ. ಶ್ರೀ. ರವೀಂದ್ರ ಅವರು ಗ್ರಾಮ ಮತ್ತು ನಗರ ಚೌಕಟ್ಟಿನೊಳಗಿನ ಜನಸಾಮಾನ್ಯ ಮಧ್ಯಮ ವರ್ಗದ ವಿದ್ಯಾವಂತರ ಸಾಹಿತ್ಯಕ ಚಟುವಟಿಕೆಯ ಇತಿಹಾಸವನ್ನೇ ಸಮೀಕ್ಷೆ ಮಾಡಿದರು. ಶ್ರೀಮತಿ ಪದ್ಮ ಮತ್ತು ಶ್ರೀ ಆನಂದ ಅಂತಹವರ ಮುಂದಾಳ್ತನದಲ್ಲಿ ಸಾಹಿತ್ಯ ಸಂಭ್ರಮ ವೈಭವದ ರೂಪವನ್ನು ಪಡೆಯಲು ಹೇಗೆ ಸಾಧ್ಯ ಆದೀತು ಎನ್ನುವುದನ್ನು ವಿವೇಚಿಸಿದರು. ಅದಕ್ಕೆ ಪೂರಕವಾದದ್ದು ಕೈಗೂಡಿಸುವ ಸಾಹಿತ್ಯಾಸಕ್ತರ ಮನಸ್ಥಿತಿ ಎನ್ನುವುದಕ್ಕೆ ನೆರೆದಿರುವ ಸಭಿಕರೇ ಸಾಕ್ಷಿ ಎಂದರು. ಸಾಮಾನ್ಯವಾಗಿ ಪ್ರತಿ ತಿಂಗಳ ಕೊನೆಯ ಭಾನುವಾರದಂದು ಪೂರ್ವ ನಿಗದಿತ ಸ್ಥಳದಲ್ಲಿ ನಡೆಯುವ ಸಾಹಿತ್ಯ ದಾಸೋಹದಲ್ಲಿ ಸರಾಸರಿ 40 ಮಂದಿ ಇರುತ್ತಾರೆ. ಸುಮಾರು ಅಷ್ಟೇ ಸಂಖ್ಯೆಯಲ್ಲಿ ಸಾಹಿತ್ಯ ಶತಕ ಸಂಚಿಕೆಯ ಬರಹಗಾರರು ಇದ್ದಾರೆ. ಬರುವವರೆಲ್ಲರೂ ಕೂಟ ತಮ್ಮದು ಎಂದೇ ಭಾವಿಸುತ್ತಾರೆ. ಸಾಹಿತ್ಯ ಶತಕ ಸಂಚಿಕೆಯೆ ಬಿಡುಗಡೆಯ ಸಂಭ್ರಮವೂ ಹಾಗೆಯೇ ಇತ್ತು. ಎಲ್ಲರೂ ತಮ್ಮ ಮನೆಯ ಮಗ ಅಥವಾ ಮಗಳ ಮದುವೆಗೆ ಬಂದಿದ್ದಾರೇನೋ ಎನ್ನುವ ಸಂತೋಷದಲ್ಲಿದ್ದರು. ಅದು ಎಲ್ಲರ ಮುಖದ ಮೇಲೆ ಮಿನುಗುತ್ತಿತ್ತು.
ಕಾರ್ಯಕ್ರಮದ ಒಂದು ಮುಖ್ಯ ಭಾಗ ಸಾಹಿತ್ಯ ಸಂಚಿಕೆಯ ವಸ್ತು ಮತ್ತು ವಿನ್ಯಾಸವನ್ನು ಪರಿಚಯಿಸುವುದು.ಈ ಜವಾಬ್ದಾರಿಯನ್ನು ನಿರ್ವಹಿಸಿದ ಶ್ರೀ ಮೊರಬದ ಮಲ್ಲಿಕಾರ್ಜುನ ಅವರು ಕನ್ನಡ ಸಾಹಿತ್ಯದ ಪರಂಪರೆಯ ಹಾದಿಯಲ್ಲಿ ಈ ಸಂಚಿಕೆ ಒಂದು ಹೆಜ್ಜೆ ಎನ್ನುವುದನ್ನು ಗುರುತಿಸಿದರು. ಹನ್ನೆರಡನೇ ಶತಮಾನದ ದಾಸೋಹದ ಸಾಮಾಜಿಕ ಕಳಕಳಿ ಎಲ್ಲರ ಬರೆಹಗಳಲ್ಲಿ ಎದ್ದು ಕಾಣುತ್ತದೆ ಎನ್ನುವುದಕ್ಕೆ ಕೆಲವು ಉದಾಹರಣೆಗಳನ್ನು ಮುಂದುಮಾಡಿದರು. ಗದ್ಯ ಮತ್ತು ಪದ್ಯದ ಎಲ್ಲ ಸತ್ವವನ್ನು ಸಂಚಿಕೆ ಪ್ರಕಾಶಪಡಿಸುತ್ತಿದೆ ಎನ್ನುವುದಕ್ಕೆ ಕೆಲವು ಬರೆಹಗಳ ತಲೆಬರಹಗಳನ್ನು ಹೆಸರಿಸಿದರು, ಕೆಲವು ಬರೆಹಗಳು ಹೊಸ ವಿನ್ಯಾಸವನ್ನು ಹೊಂದಿರುವುದನ್ನು ಗಮನಕ್ಕೆ ತಂದರು. ಸಂಚಿಕೆಗೆ ಮುನ್ನುಡಿ ಬರೆದ ಶ್ರೀ ರಾಜಣ್ಣ ಅವರು ಸಂಚಿಕೆಯ ಪ್ರತಿಯೊಂದು ಬರೆಹದ ಉತ್ತಮಾಂಶಗಳನ್ನು ಎಲ್ಲರ ಗಮನಕ್ಕೆ ತಂದು ಬರೆಹಗಾರರಿಗೆ ಮತ್ತಷ್ಟು ಬರವಣಿಗೆಯಲ್ಲಿ ತೊಡಗಿಕೊಳ್ಳಲು ಸ್ಫೂರ್ತಿ ನೀಡಿದರು. ಸಂಚಿಕೆಯ ಸಂಪಾದಕರಾದ ಶ್ರೀಮತಿ ಕೆರೋಡಿ ಲೋಲಾಕ್ಷಿ ಅವರು ಸಂಪಾದಕರ ಮತ್ತು ಬರೆಹಗಾರರ ಜವಾಬ್ದಾರಿ ಉತ್ತಮ ಸಾಹಿತ್ಯವನ್ನು ಲೋಕಕೆ ಅರ್ಪಣೆ ಮಾಡುವಾಗ ಎಷ್ಟು ಗುರುತರವಾದದ್ದು ಎಂಬುದರ ಸಮಾಲೋಚನೆ ಮಾಡಿದರು.
ಸಾಹಿತ್ಯದ ಒಂದು ಮುಖ ಗಂಭೀರ, ಇನ್ನೊಂದು ಮುಖ ಲಘು. ಗಂಭೀರವಾದುದನ್ನು ಲಘುವಾಗಿಸಿ ಮನಸ್ಸನ್ನು ನಿರ್ಮಲವಾಗಿಸಿಕೊಳ್ಳ ಬೇಕು.. ಆಗ ಹೊಸ ಜವಾಬ್ದಾರಿಯುತ ಸಾಹಿತ್ಯ ಹೊರಹೊಮ್ಮುತ್ತದೆ. ಲಘುವಾದುದನ್ನು ಗಂಭೀರವಾಗಿಸಿ ಅದರಲ್ಲಿ ಮುನ್ನಡೆಯ ಬದುಕಿಗೆ ಮಾರ್ಗದರ್ಶನದ ಬೆಳಕನ್ನು ಕಾಣಬೇಕು. ಈ ಎರಡೂ ಕೆಲಸಗಳನ್ನು ಹಾಸ್ಯ ಭಾಷಣ ಮಾಡುತ್ತದೆ. ಕಾರ್ಯಕ್ರಮದಲ್ಲಿ ಅದರ ರೂವಾರಿಯಾದದ್ದು ಶ್ರೀ ಎಂ.ಎಸ್. ನರಸಿಂಹಮೂರ್ತಿಯವರು.. ಇದ್ದಕ್ಕಿದ್ದಂತೆ ಬಂದ ಮೊಮ್ಮಗನಿಗೆ ಇದ್ದುದನ್ನು ನೀಡಿ ದಿನವೂ ನೀಡುತ್ತಿದ್ದ ನಾಯಿಗೆ ಬಿಸಿ ಅಡಿಗೆ ಮಾಡಿ ಉಣಬಡಿಸುವ ಅಜ್ಜಿ; ಸಭಿಕರನ್ನೆಲ್ಲಾ ಹಸು ಕುರಿ ಮೇಕೆಗಳಾಗಿ ಕಾಣುತ್ತಿರುವ ಬ್ಯಾಂಕ್ ಮ್ಯಾನೇಜರ್ ಇಂತಹವರನ್ನು ಕೇಂದ್ರವಾಗಿಟ್ಟುಕೊಂಡಿದ್ದ ಹಾಸ್ಯಪ್ರಸಂಗಗಳು ಶ್ರೀ ನರಸಿಂಹಮೂರ್ತಿಯವರು ಲಘುವಾದದ್ದನ್ನು ಗಂಭೀರವಾಗಿಸಿದ, ಗಂಭೀರವಾದುದನ್ನು ಲಘುವಾಗಿಸಿದ ನಗೆ ಚಟಾಕಿಗಳು, ನಗೆಬಾಂಬುಗಳು.
ಹೀಗೆ ಇತಿಹಾಸ, ಸಾಹಿತ್ಯ ಪರಂಪರೆ, ವರ್ತಮಾನದ ಲಘಿಮೆ ಗರಿಮೆ, ಭವಿಷ್ಯತ್ತಿನ ಮಾನವಿಕ ಕಾಳಜಿ – ಇವನ್ನೆಲ್ಲಾ ಒಳಗೊಂಡಿರುವ ಸಾಹಿತ್ಯ ಶತಕ ಸಂಚಿಕೆಯಂತೆ. ವೈವಿಧ್ಯಮಯವಾಗಿದ್ದ ಕಾರ್ಯಕ್ರಮ ಸಭಿಕರ ವರ್ಣರಂಜಿತ ವಸ್ತ್ರಗಳಂತೆ ಭೂರಿ ಭಕ್ಷ್ಯ ಭೋಜ್ಯಗಳ ಔತಣದಿಂದಲೂ ವರ್ಣ ರಂಜಿತ ಆಗಿತ್ತು. ಬಣ್ಣಗಳ ಚಿತ್ತಾರ ಮೂಡುವುದಕ್ಕೆ ಮೂಲದ ಬಿಂದುಗಳಂತೆ ಶ್ರೀಮತಿ ಪದ್ಮ ಆನಂದ್, ಶ್ರೀ ಎಂ.ಆರ್. ಆನಂದ್, ಮುಕ್ತಕ ಅಕಾಡೆಮಿಯ ಅಧ್ಯಕ್ಷ ಶ್ರೀ ಎಸ್. ರಾಮಪ್ರಸಾದ, ಸವಿಗನ್ನಡ ಪತ್ರಿಕೆಯ ಸಂಪಾದಕರಾದ ಶ್ರೀ ರಂಗನಾಥ್ ಮೈಸೂರು, ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್, ಸ್ನೇಹ ಸಿಂಚನ ಟ್ರಸ್ಟಿನ ನಿರ್ವಾಹಕರಾದ ಶ್ರೀಮತಿ ಲತಾ ಮಃನ್, ಶ್ರೀ ಮೋಹನ್ ಹಾಗೂ ಅವರ ಮತ್ತಿತರ ಸಹಯೋಗಿಗಳು, ಸಂಚಿಕೆಯ ಸಂಪಾದಕರಾದ ಕೆರೋಡಿ ಲೋಲಾಕ್ಷಿ, ಸಹವರ್ತಿಗಳಾದ ಶ್ರೀಮತಿ ಕೆ.ಟಿ. ಶ್ರೀಮತಿ, ಶ್ರೀಮತಿ ಸುಮತಿ ಸುಬ್ರಹ್ಮಣ್ಯ ಮತ್ತಿತರರು ಇದ್ದರೆ ಚಿತ್ತಾರದ ರಂಗುಗಳ ರಂಗುರಂಗಾದ ವಿನ್ಯಾಸಗಳು ಸಾಹಿತ್ಯದಾಸೋಹ ಕೂಟದ ಎಲ್ಲಾ ಸದಸ್ಯರು ಎಂದೇನೂ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ!.
–ಕೆ.ಎಲ್. ಪದ್ಮಿನಿ ಹೆಗಡೆ
ಅಚ್ಚುಕಟ್ಟಾದ ನಿರೂಪಣೆಯೊಂದಿಗೆ ಸಾಹಿತ್ಯ ದಾಸೋಹಗಳ ಸಾಹಿತ್ಯ ಶತಕದ ಸಮಾರಂಭದ…ಅನಾವರಣ ಮಾಡಿರುವ ನಿಮಗೆ ನನ್ನ ಹೃತ್ಪೂರ್ವಕವಾದ ಧನ್ಯವಾದಗಳು ಮೇಡಂ
ಕಾರ್ಯಕ್ರಮದ ಕುರಿತು ಸುಂದರ ಬರಹ
ಸಮಾರಂಭವನ್ನು ಕುರಿತ ಅನ್ನಿಸಿಕೆಯನ್ನು ಪ್ರಕಟಿಸಿದ ಹೇಮಮಾಲಾ ಮೇಡಂಗೆ, ಅದನ್ನು ಆಸ್ವಾದಿಸಿದ ಬಿ.ಆರ್. ನಾಗರತ್ನ ಮೇಡಂಗೆ. ನಯನ ಬಜಕೂಡ್ಲು ಮೇಡಂಗೆ ಅನಾಮಿಕ ಓದುಗರಿಗೆ ಹೃತ್ಪೂರ್ವಕ ಧನ್ಯವಾದಗಳು
ಸಾಹಿತ್ಯ ಶತಕ ದಾಸೋಹ ಕಾರ್ಯಕ್ರಮದ ವಿಶ್ಲೇಷಣಾತ್ಮಕ ಲೇಖನವು ಚೆನ್ನಾಗಿದೆ.
ಡಾ. ಪದ್ಮಿನಿ ಹೆಗಡೆ ಮೇಡಂ ಅವರಿಗೆ ಧನ್ಯವಾದಗಳು. ನಾನೂ ಈ ಕಾರ್ಯಕ್ರಮದಲ್ಲಿ ಉಪಸ್ಥಿತನಿದ್ದೆ. ಮೊದಲಿನಿಂದ ಕೊನೆಯವರೆಗೂ ಉತ್ತಮ ಕೇಳುಗನಾಗಿದ್ದೆ. ನರಸಿಂಹಮೂರ್ತಿಯವರ ನಗೆಭಾಷಣ ನನ್ನನ್ನು ಆಕರ್ಷಿಸಿತು. (ಅವರು ಹಳೆಯ ಜೋಕುಗಳಿಗೆ ಸಿದ್ಧ ಪ್ರಸಿದ್ಧರಾಗಿದ್ದರೂ ನಾನು ಮರೆತು ಕೇಳಿದ್ದರಿಂದ ಮನಸ್ಸು ಪ್ರಫುಲ್ಲಗೊಂಡಿತು.)
ಸಾಹಿತ್ಯ ಶತಕ ಕೃತಿ ಬಿಡುಗಡೆ, ಸಾಹಿತ್ಯ ದಾಸೋಹದಲ್ಲಿ ನಿಮಗ್ನರಾದ ಬರೆಹಗಾರರಿಗೆ ಸನ್ಮಾನ, ಶ್ರೀಮತಿ ಪದ್ಮಾ ಮತ್ತು ಶ್ರೀ ಆನಂದರ ಇಡೀ ಕುಟುಂಬದ ಸಂಪೂರ್ಣ ತೊಡಗಿಸಿಕೊಳ್ಳುವಿಕೆ. . . . . . .ಎಲ್ಲವೂ ನನಗೆ ಇಷ್ಟವಾಯಿತು. ನಿಜ. ಕುಟುಂಬವೊಂದರ ಆಪ್ತೇಷ್ಟರ ಖಾಸಗೀ ಕಾರ್ಯಕ್ರಮದಲ್ಲಿ ಲಭಿಸುವ ಪ್ರೀತಿ-ಆದರ-ಅಭಿಮಾನ-ವಿಶ್ವಾಸಗಳು ಸಿಕ್ಕವು. ಇದೇ ತಾನೇ ಸಾಹಿತ್ಯದ ನಿಜದಂತರಾಳ. ಸಹೃದಯತೆಯೇ ತಾನೇ ಕವಿತ್ವದ ಬಂಡವಾಳ !
ಕೆಲವರು ಹೊಸ ಬರೆಹಗಾರರು ನನಗೆ ಪರಿಚಯವಾದರು. ಅದರಲ್ಲೂ ಪ್ರಮುಖವಾಗಿ ಸುರಹೊನ್ನೆಯ ಸಂಪಾದಕರಾದ ಶ್ರೀಮತಿ ಹೇಮಮಾಲ ಮೇಡಂ ಅವರನ್ನು ನಾನು ನೋಡಿರಲಿಲ್ಲ. ನೋಡಿ ಮಾತಾಡಿದ ಖುಷಿ ನನ್ನದಾಯಿತು. ಹಾಗೆಯೇ ಇನ್ನೂ ಕೆಲವು ಕವಿ, ಕವಯಿತ್ರಿಯರು ಪರಿಚಿತರಾದರು. ಶ್ರೀಮತಿ ಬಿ ಆರ್ ನಾಗರತ್ನ ಮೇಡಂ ಅವರನ್ನು ಮಾತಾಡಿಸಿ ತುಂಬ ದಿವಸಗಳಾಗಿದ್ದವು. ಇದು ಕೈಗೂಡಿತು. ಹೀಗೆ ಸಾಹಿತ್ಯ ದಾಸೋಹವು ಅನ್ನದಾಸೋಹದ ಜೊತೆಗೆ ಸಹೃದಯ ದಾಸೋಹವನ್ನೂ ಸಾರ್ಥಕವಾಗಿ ಉಣಬಡಿಸಿದ ಧನ್ಯತೆಯನ್ನು ಅನುಭವಿಸಿತು. ಪದ್ಮಿನಿ ಮೇಡಂ ಅವರ ಅನಿಸಿಕೆ ರೂಪದ ಬರೆಹವನ್ನು ಓದಿದ ಮೇಲೆ ಇದನ್ನು ಬರೆಯಲು ಪ್ರೇರಣೆಯೊದಗಿತು. ಬರೆದ ಮತ್ತು ಪ್ರಕಟಿಸಿದ ಇಬ್ಬರಿಗೂ ಅಭಿನಂದನೆ ಮತ್ತು ಧನ್ಯವಾದ.
ನಿಮ್ಮೆಲ್ಲರ ಆದರ, ಅಙಿಮಾನ, ಅಂತಃಕರಣಗಳಿಗೆ ಮನಸ್ಸು ಮೂಕವಾಗಿದೆ. ಆತ್ಮತೃಪ್ತಿಗಾಗಿ ಪ್ರಾರಂಭಿಸಿದ ಮೈಸೂರು ಸಾಕಷ್ಟು ದಾಸೋಹ ಇಷ್ಟೊಂದು ಜನರ ಪ್ರೀತಿ ಗಳಿಸಿದೆ ಎಂದರೆ ಅದಕ್ಕೆ ಕಾರಣ ಬಳಗದ ಸದಸ್ಯರ ಬದ್ಧತೆ, ಸಾಹಿತ್ಯಾಸಕ್ತರ ಸಹೃದಯತೆಯೇ ಕಾರಣ ಎಂಬುದು ನನ್ನ ಬಲವಾದ ನಂಬಿಕೆ.
ಲೇಖನಕ್ಕಾಗಿ ಆಹ್ವಾನ ನೀಡಿ ಪ್ರಕಟಿಸಿದ ಸಂಪಾದಕಿ ಹೇಮಮಾಲಾ ಅವರಿಗೆ, ಲೇಖನವನ್ನು ರಸವತ್ತಾಗಿ ಬರೆದ ಪ್ದ್ಮೋ. ಪದ್ಮಿನಿ ಮೇಡಂ ಅವರಿಗೆ,, ಮೆಚ್ಚಿ ಹರಸಿದ ಆತ್ಮೀಯ ಓದುಗರಾದ ನಾಗರತ್ನ, ನಯನ ಬಜ್ಲಗೂಡು, ಶಂಕರಿ ಶರ್ಮ, ಡಾ.ಮಂಜುರಾಜ್ ಎಲ್ಲರಿಗೂ ಹೃತ್ಪೂರ್ವಕ ವಂದನೆಗಳು.
ಧನ್ಯವಾದಗಳು ಪದ್ಮಾ ಮೇಡಂ ನಿಮ್ಮ ಸಹೃದಯತೆಗೆ ನಮ್ಮ ದೊಂದು ನಮನ ವಷ್ಷೇ..ಅದರಲ್ಲಿ ನಮಗೂ ಒಳಿತಾಗಿದೆ ಒಳ್ಳೆಯ ಸ್ನೇಹವೃಂದ..ಜ್ಞಾನಿಗಳ..ಒಡನಾಟ..ಬರಹಕ್ಕೊಂದು ವೇದಿಕೆ…ಹೊಸಹೊಸ ವಿಚಾರಗಳ ಸೆಲೆ..ಹಾಗೇ ನಮ್ಮ ನ್ನು ನಾವು ತಿದ್ದುಪಡಿ ಮಾಡಿಕೊಳ್ಳುವ ಬಗೆ..ಅದನ್ನು ಬಹಳ. ಅಪ್ತವಾಗಿ ಬರದಿರುವ ..ಪದ್ಮಿನಿ ಮೇಡಂ..ಸಹೃದಯತೆಗೆ ಪ್ರಕಟಿಸಿದ ಗೆಳತಿ ಹೇಮಾಗೆ ಮತ್ತೊಂದು ನಮಸ್ಕಾರ..
ಧನ್ಯವಾದಗಳು.
ಮೖಸೂರು ಸಾಹಿತ್ಯ ದಾಸೋಹದ ಶತಕ ಸಂಚಿಕೆಯ ಅಚ್ಚುಕಟ್ಟಾದ ವರದಿಯಾಗಿಸಿ ಕಾರ್ಯಕ್ರಮದ ಬಗ್ಗೆ ತಮ್ಮ ಅಭಿಪ್ರಾಯವನ್ನು ದಾಖಲಿಸುವ ಮೂಲಕ ಓದುಗರ ಮನದಾಳದ ಪ್ರತಿಕ್ರಿಯೆ ನೀಡಿದ ಶ್ರೀಮತಿ ಪದ್ಮಿನಿ ಮೇಡಮ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಇದಕ್ಕೆ ಕಾರಣಕರ್ತರಾದ ಶ್ರೀಮತಿ ಪದ್ಮಾ ಮತ್ತು ಆನಂದ್ ದಂಪತಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಅಭಿವಂದನೆಗಳು
ಧನ್ಯವಾದಗಳು.