ಥೀಮ್ : ನೆನಪಿನ ಜೋಳಿಗೆ
ಒಳ್ಳೆಯ ಹಾಗೂ ತಮಾಷೆಯ ನೆನಪುಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಚಿಕ್ಕಂದಿನ ನೆನಪುಗಳೇ ನಮ್ಮ ಜೋಳಿಗೆಯೊಳಗೆ ತುಂಬಿರುವುದು ಹೆಚ್ಚು. ಆ ಮುಗ್ಧ ಮನಸ್ಸಿನಲ್ಲಿ ನೆಲೆ ನಿಂತ ನೆನಪುಗಳು ಸದಾ ಹಸಿರು.. ಅಷ್ಟೇ ಆಪ್ತ. ಅವುಗಳನ್ನು ಮೆಲುಕು ಹಾಕುವುದೆಂದರೆ ಬೆಲ್ಲ ತಿಂದಷ್ಟು ರುಚಿ. ಹಾಗೆಯೇ ಕೆಲವೊಮ್ಮೆ ಕೆಟ್ಟ ನೆನಪುಗಳೂ ಕಾಡದೆ ಇರುವುದಿಲ್ಲ…ಹಾಂ…ಸದ್ಯಕ್ಕೆ ಬಿಟ್ಟು ಬಿಡೋಣ ಅವುಗಳನ್ನು ಅಲ್ಲವೇ?
ಹೌದು.. ಆರೋಗ್ಯಕರವಾದ ಬೆಲ್ಲವನ್ನು ಹಿಚುಕಿ ಮೆತ್ತಗೆ ಮಾಡಿ ತುಪ್ಪ ಬೆರೆಸಿ ತಿಂದರೆ ಮುಗಿಯಿತು, ಅದೇ ಚಾಕಲೇಟ್. ಅದು ಕೂಡ ಯಾವಾಗ ಬೇಕೆಂದರೆ ಆಗ ಸಿಗುವಂತಹುದಲ್ಲ. ಪೂರ್ತಿ ವರ್ಷಕ್ಕೆ ಆಗುವಷ್ಟು ತಂದಿಡುವ, ವರ್ಷವಾಗುತ್ತಾ ಬಂದು ಹಳೆಯದಾಗಿ ಆಗಲೇ ದ್ರವರೂಪಕ್ಕೆ ತಿರುಗುತ್ತಿರುವ ಹಳೆಯ ಬೆಲ್ಲದ ಹಂಡೆಗೆ ಕೈ ಹಾಕಿ (ಕದ್ದು?) ತೆಗೆದು ತಿಂದರೆ ಅದರ ಮಜವೇ ಬೇರೆ. ಮಳೆಗಾಲದಲ್ಲಿ, ಬೇಯಿಸಿ ಒಣಗಿಸಿದ ಹಲಸಿನ ಬೀಜದ ಸಾಂತಾಣಿ, ಕೆಂಡದಲ್ಲಿ ಸುಟ್ಟ ಹಲಸಿನ ಹಪ್ಪಳ, ಅದರ ಜೊತೆಗೆ ಸ್ವಲ್ಪ ತೆಂಗಿನ ತುರಿ ನಮ್ಮ ಕೈಗೆ ಸಿಕ್ಕರೆ ಅದೇ ಆ ದಿನದ ವಿಶೇಷ ಖಾದ್ಯ!
ಇನ್ನು, ಶಾಲೆಗೆ ಹೋಗಲು ಯಾರ ಒತ್ತಾಯವೂ ಬೇಡ. ಒಂದು ಮೈಲು ದೂರದಲ್ಲಿರುವ ಪ್ರೈಮರಿ ಶಾಲೆಗೆ ಹೋಗುತ್ತಿದ್ದ ಅಕ್ಕ ಜೊತೆಗೆ ವಯಸ್ಸಿಗೆ ಮೊದಲೇ ಹೋಗಲು ಪ್ರಾರಂಭ. ನಡೆದು ಹೋಗುವ ದಾರಿಯಲ್ಲಿರುವ ಮನೆ ಮಕ್ಕಳು ನಮ್ಮೊಡನೆ ಸೇರಿ ಗುಂಪಾಗಿ ಶಾಲೆಗೆ ಪಯಣ. ಒಮ್ಮೆಯಂತೂ, ಒಂದು ಮನೆಯಲ್ಲಿ ಇರುವ ಮಕ್ಕಳಿಗೆ ಬೆಳಗ್ಗಿನ ಊಟ ಆಗಿರಲಿಲ್ಲ. ಆದ್ದರಿಂದ, ಅವರ ಅಂಗಳದಲ್ಲಿ ಕಾದು ನಿಲ್ಲುವ ಪ್ರಮೇಯ ಬಂತು. ಅಲ್ಲಿದ್ದ ಬೆಳ್ಳಗಿನ ಬೊಳ್ಳು ಹೆಸರಿನ ನಾಯಿ ನನ್ನ ಕಾಲಿಗೆ ಕಚ್ಚಿಯೇ ಬಿಟ್ಟಿತು! ಅಬ್ಬಾ… ಅದನ್ನು ನೆನೆಸಿದರೆ ಈಗಲೂ ಎದೆ ನಡುಗುತ್ತದೆ. ಅದರ ಗಾಯದ ಗುರುತು ಆ ಭಯಂಕರ ಕ್ಷಣದ ನೆನಪನ್ನು ನಿರಂತರ ಹಸಿರಾಗಿರಿಸಿದೆ ಮಾರಾಯ್ರೆ!.
ಮಾವು ಬೆಳೆಯುವ ಕಾಲದಲ್ಲಿ, ದಾರಿಯಲ್ಲಿ ಬಿದ್ದು ಸಿಕ್ಕಿದ ಮಿಡಿಯನ್ನು ಕಲ್ಲಿನಿಂದ ಜಜ್ಜಿ ತುಂಡು ಮಾಡಿ ಹಂಚಿ ತಿಂದರೆ ಅದ್ಭುತ ರುಚಿ! ಬಿದ್ದ ಮಾವಿನ ಹಣ್ಣನ್ನು ಕೈಯಲ್ಲಿ ಒರೆಸಿ ಅಲ್ಲೇ ತಿಂದು ಬಂದರೂ ಯಾವ ಕಾಯಿಲೆಯೂ ಕಾಡದು. ಗೇರುಹಣ್ಣು ಬಿಡುವ ಸಮಯವಾದರೆ, ಅದರ ಹಸಿಬೀಜವನ್ನು ಕಲ್ಲಲ್ಲಿ ಅರೆದು, ಅದರೊಳಗೆ ಇರುವ ತಿರುಳನ್ನು ತಿಂದು, ಮರುದಿನ ಎಲ್ಲರ ತುಟಿಗಳಲ್ಲೂ ಕೆಂಪನೆ ಬೊಬ್ಬೆ ಬಂತೆಂದರೆ ತೆಂಗಿನ ಎಣ್ಣೆ ಹಚ್ಚಿ ಉಪಶಮನ. ತರಕಾರಿ ತೋಟದಲ್ಲಿರುವ ಸೌತೆ, ಅಲಸಂಡೆ, ತೊಂಡೆ ಇತ್ಯಾದಿಗಳ ಮಿಡಿಗಳು ಮನೆಯವರ ಕಣ್ಣು ತಪ್ಪಿಸಿ ಹೊಟ್ಟೆ ಸೇರುತ್ತವೆ. ಅದರಲ್ಲೂ, ತೊಂಡೆಯ ಎಳೆ ಮಿಡಿಗಳನ್ನು ತಿಂದರೆ ಮಾತು ಬಾರದು ಎಂಬ ಎಚ್ಚರಿಕೆಯ ಮಾತು ನೆನಪಾಗಿ ಆಸೆಯಾದರೂ ಹೆದರಿಕೆಯಿಂದ ತಿನ್ನದೆ ಬಿಟ್ಟದ್ದುಂಟು.
ಇನ್ನು, ಲಂಬಾಣ, ಗೋರಂಟೆ, ರತ್ನಗಂಧಿ ಇತ್ಯಾದಿ ಹೂಗಳ ಮೊಗ್ಗುಗಳನ್ನು ಬಾಳೆ ನಾರಿನಲ್ಲಿ ಕಟ್ಟಿ, ಬಾಳೆ ಎಲೆ ಒಳಗಡೆ ಗಟ್ಟಿಯಾಗಿ ಸುತ್ತಿಟ್ಟು, ಮರುದಿನ ಮುಡಿದರೆ, ಯಕ್ಷಗಾನದ ತಟ್ಟಿ ಕಿರೀಟದಂತೆ ತಲೆ ಮೇಲೆ ಕಂಡಿರಬಹುದು ಎಂಬುದು ನನ್ನ ಇಂದಿನ ಊಹೆ. ದಪ್ಪ ಕೂದಲಿನ್ನು ತುದಿ ವರೆಗೆ ನೇಯ್ದು, ಗಟ್ಟಿ ಜಡೆಯ ತುದಿಗೆ ಹಾಕಿದ ಪ್ರೀತಿಯ ರಿಬ್ಬನ್ ಮತ್ತೊಂದು ಹೂವಾಗಿ ನಲಿದರೆ ಅದೇ ಸುಂದರ ವೇಷ.
ಸ್ಲೇಟಿನಲ್ಲಿ ಬರೆಯಲು ಬಿಳಿ ಬಣ್ಣದ ಹೊಸಕಡ್ಡಿಯು ಸಿಕ್ಕಿದರೆ ಬೆಣ್ಣೆಕಡ್ಡಿ ಎನ್ನುವ ದುಪ್ಪಟ್ಟು ಸಂಭ್ರಮ. ಅದು ಸಣ್ಣದಾಗುತ್ತಾ ಬಂದಂತೆ, ಬಿದಿರ ಓಟೆಯಲ್ಲಿ ಸಿಕ್ಕಿಸಿ, ಕಡ್ಡಿಯ ಕೊನೆ ಉಸಿರಿನ ತನಕ ಉಪಯೋಗ. ಸ್ಲೇಟು ಉಜ್ಜಲು ಬೇಕಾದಷ್ಟು ನೀರಿದ್ದರೂ, ಗುಡ್ಡದಿಂದ ತಂದ ನೀರುಕಡ್ಡಿಯ ಹುಲ್ಲಿನ ನೀರಿನಿಂದ ಉಜ್ಜಿದರೆ ಅದೇ ಶ್ರೇಷ್ಠ!
ಮಳೆಗಾಲದಲ್ಲಿ, ಮನೆ ಬಳಿ ಇರುವ ಹಳ್ಳ, ತೋಡುಗಳಲ್ಲಿ ಹರಿಯುವ ಕೆಂಪಗಿನ ನೀರು, ಅದರಲ್ಲಿ ತೇಲುತ್ತಾ ಸಾಗುವ ತೆಂಗಿನ ಕಾಯಿ, ಮರದ ಟೊಂಗೆಗಳನ್ನು ಅನುಸರಿಸಿ ನೋಡುತ್ತಾ ತಾಸುಗಟ್ಟಲೆ ಮೈಮರೆತು ಮನೆಯವರಿಂದ ಬೈಗಳು. ಗಡಿಯಾರ ಇಲ್ಲದ ಮನೆಯಲ್ಲಿ ಬೆಳಗಿನ ಸೂರ್ಯನ ಬೆಳಕು ಮನೆಯೊಳಗೆ ಬೀಳುವ ಜಾಗದ ಗುರುತೇ ಗಂಟೆ ಹೇಳುತ್ತದೆ. ಮಳೆಗಾಲದಲ್ಲಿ ಇದು ಕೂಡಾ ಇಲ್ಲವೆನ್ನಿ. ಆಗ, ಮುಂಜಾನೆ ಶಾಲೆಗೆ ಹೋದರೆ, ಶಾಲೆಯ ಬೀಗ ತೆಗೆಯಲು ಇನ್ನೂ ಒಂದು ತಾಸು ತಡ!
ಇಂತಹ ನೆನಪುಗಳು ಸಾವಿರಾರು… ಇದು ಒಬ್ಬರದೇನಲ್ಲ, ನಮ್ಮೆಲ್ಲರದೂ ಹೌದು. ಇಂದ್ರಜಾಲಕನ ಚೀಲದಿಂದ ಹೊರಬರುವ ಹೂಗಳಂತೆ, ನಮ್ಮ ನೆನಪಿನ ಜೋಳಿಗೆಯಿಂದ ಹೊರಬರುವ ಸಂಗತಿಗಳ ಜೊತೆಗೇ, ನಾವೂ ಆಯಾ ಕಾಲದಲ್ಲೇ ವಿಹರಿಸುತ್ತಿರುತ್ತೇವೆ… ಮಾನಸಿಕವಾಗಿ. ಗತಕಾಲದ ಪ್ರೈಮರಿ ಶಾಲೆ ಮಕ್ಕಳಾಗಿಯೇ ಇರುತ್ತೇವೆ! ಅದೇ ಜೀವನ ಚೆಂದ… ಅದೇ ಜೀವನದ ಆನಂದ… ಏನಂತಿರಿ?
–ಶಂಕರಿ ಶರ್ಮ, ಪುತ್ತೂರು.
ಬಹಳ ಸುಂದರ ನೆನಪುಗಳು ಮತ್ತೆ ಮರುಕಳಿಸುವಂತೆ ಮಾಡಿತು ನಿಮ್ಮ ಬರಹ
ಧನ್ಯವಾದಗಳು..ಸೋದರಿ ನಯನಾ ಅವರಿಗೆ.
ಬಾಲ್ಯದ ನೆನಪನ್ನು ಜೋಳಿಗೆಯೊಳಗಿಂದ ಉಣಬಡಿಸಿರುವ ರೀತಿ ಚೆನ್ನಾಗಿ ಮೂಡಿಬಂದಿದೆ ಶಂಕರಿ ಮೇಡಂ…
ಧನ್ಯವಾದಗಳು… ಸೋದರಿ ನಾಗರತ್ನ ಅವರಿಗೆ.
ಹೌದು ಅಂತೀನಿ
ಧನ್ಯವಾದಗಳು… ಸೋದರಿ ವಿದ್ಯಾ ಅವರಿಗೆ.
ಹೌದಕ್ಕ ಚಂದದ ನೆನಪಿನಂಗಳ
ಧನ್ಯವಾದಗಳು… ಸೋದರಿ ಆಶಾ ಅವರಿಗೆ.