ಮಲೆನಾಡಿನ ಕವಿ ಉಪ್ಪುಕಡಲಿನ ರವಿ

Share Button

ಕನ್ನಡ ಪ್ರೀತಿಯ ರಹದಾರಿಗಳು: ಮಲೆನಾಡಿನ ಕವಿ ಉಪ್ಪುಕಡಲಿನ ರವಿ ಎಂದು ಪ್ರಖ್ಯಾತರಾದ ಪ್ರೊ: ಎಸ್.ವಿ. ಪರಮೇಶ್ವರ ಭಟ್ಟರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮಾಳೂರಿನವರು. ಕನ್ನಡದ ಪ್ರಾಚೀನ ಕಾವ್ಯ-ಪ್ರಕಾರ, ಛಂದೋ ಪ್ರಬೇಧಗಳಾದ ಸಾಂಗತ್ಯ, ತ್ರಿಪದಿ, ವಚನ, ಏಳೆಗಳನ್ನು ಹೊಸಗನ್ನಡ ಕಾವ್ಯರೂಪದಲ್ಲಿ ಪುನರುಜ್ಜೀವನಗೊಳಿಸಿದ ಪ್ರಯೋಗಶೀಲರು. ದೇಸಿಯ ಅನನ್ಯತೆಯನ್ನು ಉಳಿಸಿದ ಸಾಹಸಿಗರು. ಜನಪ್ರಿಯ ಪ್ರಕಾರಗಳಾದ ಗಾದೆ ಮತ್ತು ಒಗಟುಗಳನ್ನು ಆಧುನಿಕ ಸ್ವತಂತ್ರ ಕಾವ್ಯಕೃತಿಗಳನ್ನಾಗಿಸಿ ಜನಪದ ಸಾಹಿತ್ಯಕ್ಕೆ ಆಧುನಿಕ ಕಾವ್ಯದ ಜೊತೆ ಜೊತೆಗೆ ಮನ್ನಣೆ ತಂದುಕೊಟ್ಟವರು.

ಕನ್ನಡವನ್ನು ಪ್ರೀತಿಸಲು ಎಸ್.ವಿ.ಪಿ. ಯವರು ನೀಡಿದ ರಹದಾರಿಗಳು ನೂರಾರು. ತರಗತಿಗಳಲ್ಲಿ ಸ್ವಲ್ಪ ಸಮಯವನ್ನು ತಮ್ಮ ಗುರುಗಳಾದ ಟಿ.ಎಸ್.‌ ವೆಂಕಣ್ಣಯ್ಯ, ಕುವೆಂಪು, ಡಿ.ಎಲ್.‌ ನರಸಿಂಹಾಚಾರ್. ತೀನಂಶ್ರೀ ಮೊದಲಾದವರ ಕೃತಿ, ವಿಚಾರ ಮತ್ತು ವ್ಯಕ್ತಿ ವೈಶಿಷ್ಟ್ಯಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲು ಮೀಸಲಾಗಿಡುತ್ತಿದ್ದರು. ಈ ಎಲ್ಲ ಮಹನೀಯರು ವಿದ್ಯಾರ್ಥಿಗಳಿಗೆ ಮಾನಸ-ಗುರುಗಳಾಗುವಂತೆ ವಿದ್ಯಾರ್ಥಿಗಳನ್ನು ಕನ್ನಡದ ರಸಲೋಕದಲ್ಲಿ ವಿಹಾರ ಮಾಡಿಸುತ್ತಿದ್ದರು. ಆ ಕಾಲದ ಸುಪ್ರಸಿದ್ಧ ಸಾಹಿತಿಗಳಾದ ಬೇಂದ್ರೆ, ಕಾರಂತ, ಮಾಸ್ತಿ, ರಾಜರತ್ನಂ, ಗೋಪಾಲಕೃಷ್ಣ ಅಡಿಗ, ನಿಸಾರ್‌ ಅಹಮದ್, ಹಾಮಾನಾ, ಹಂಪನಾ, ಅನಂತಮೂರ್ತಿ, ದೇವುಡು ನರಸಿಂಹಶಾಸ್ತ್ರಿ ಮುಂತಾದವರ ವಿಶೇಷ ಉಪನ್ಯಾಸಗಳನ್ನು ವಿಶ್ವವಿದ್ಯಾನಿಲಯದ ಆವರಣದಲ್ಲಿ ಏರ್ಪಡಿಸಿ ಕನ್ನಡದ ಮನಸ್ಸುಗಳೊಂದಿಗೆ ಸಂವಹನವನ್ನು ಸಾಧ್ಯವಾಗಿಸುತ್ತಿದ್ದರು. ರೂಪಕಗಳ ಸರಮಾಲೆ, ಗುರು-ಪರಂಪರೆಯ ಸಂಬಂಧದ ಅನುಭವಗಳು, ನೂರಾರು ಸ್ವಾನುಭವದ ತುಣುಕುಗಳೊಂದಿಗಿನ ಅವರ ವಿಷಯ ಮಂಡನೆ ತರಗತಿಯನ್ನೂ ಮತ್ತು ಇವರನ್ನು ಕಂಡಿರದ, ಕೇಳಿರದ ಸಾಮಾನ್ಯರ ಹಾಗೂ ಅಸಾಮಾನ್ಯರ ಸಭೆಯನ್ನೂ ಮಂತ್ರಮುಗ್ಧವಾಗಿಸುತ್ತಿತ್ತು. ಕನ್ನಡದ ಬಗೆಗಿನ ಅಭಿಮಾನವನ್ನು ವಿಶಾಲವಾಗಿ ಹಬ್ಬುವ ವೃಕ್ಷವನ್ನಾಗಿಸುತ್ತಿತ್ತು.

ಎಸ್.ವಿ.ಪಿ. ಯವರು ಹಾಲನ ಗಾಥಾ ಸಪ್ತಸತಿ, ಕಾಳಿದಾಸನ ಎಲ್ಲಾ ಕೃತಿಗಳು, ಭಾಸ ಹರ್ಷ ಭವಭೂತಿ ಭರ್ತೃಹರಿಯೇ ಮೊದಲಾದವರ ಕೃತಿರತ್ನಗಳನ್ನು ಕನ್ನಡದ ಹೃದಯಕ್ಕೆ ಹತ್ತಿರವಾಗಿಸಿದರು. ಮುದ್ದಣನ ಶ್ರೀರಾಮಪಟ್ಟಾಭಿಷೇಕ, ಅದ್ಭುತರಾಮಾಯಣಗಳನ್ನು ಸಂಪಾದಿಸಿ ಕರಾವಳಿಯ ಅಲಕ್ಷಿತ ಕವಿ ಮುದ್ದಣನಿಗೆ ಕರ್ನಾಟಕದಾದ್ಯಂತ ಹೆಸರು ತಂದುಕೊಟ್ಟರು. “ಪಲಂಚವಿ” ಪ್ರಕಾಶನವನ್ನು ಆರಂಭಿಸಿ ಪುಸ್ತಕಗಳನ್ನು ಸಹೋದ್ಯೋಗಿಗಳ ಸಹಕಾರದೊಂದಿಗೆ ಸಾಲ ಮಾಡಿಯಾದರೂ ಪ್ರಕಟಿಸಿದರು. ತಮ್ಮ ಸಹೋದ್ಯೋಗಿಗಳು, ಶಿಷ್ಯರು, ತಮ್ಮ ಸಂಪರ್ಕಕ್ಕೆ ಬಂದ ಅಭಿಮಾನಿಗಳು ತಮ್ಮ ತಮ್ಮ ಸ್ವಂತ ಕೃತಿಗಳನ್ನು ಪ್ರಕಟಿಸಲು ಉತ್ತೇಜನ ನೀಡಿದರು. ಗ್ರಂಥ ಪ್ರಕಟಣೆ, ಗ್ರಂಥ ಬಿಡುಗಡೆ ಎಸ್.ವಿ.ಪಿ. ಅವರಿಗೆ ನಿತ್ಯೋತ್ಸವ ಆಗಿತ್ತು. ಅದಕ್ಕಾಗಿ ಅವರು ಅಕ್ಷರಶಃ ತಮ್ಮ ತನು ಮನ ಧನಗಳನ್ನು ವಿನಿಯೋಗಿಸಿದರು.

ಕನ್ನಡ ಪುಸ್ತಕಗಳನ್ನು ಹೆಗಲಿಗೆ ಏರಿಸಿ ಸಹೋದ್ಯೋಗಿಗಳು ಮತ್ತು ವಿದ್ಯಾರ್ಥಿಗಳೊಂದಿಗೆ ಮನೆ ಮನೆಗೆ, ಅಂಗಡಿ ಅಂಗಡಿಗೆ ಕಾಲ್ನಡಿಗೆಯಲ್ಲಿ ಹೋಗಿ ಪುಸ್ತಕಗಳನ್ನು ಮಾರಾಟ ಮಾಡಿದರು. “ಮನೆ ಮನೆಗೆ ಕನ್ನಡ ಸರಸ್ವತಿ”ಯನ್ನು ಕರೆದೊಯ್ದು ಪ್ರತಿಷ್ಠಾಪಿಸಿದರು. ಯಕ್ಷಗಾನ ತಾಳಮದ್ದಳೆಗಳನ್ನು, ಬಯಲಾಟಗಳನ್ನು ಏರ್ಪಡಿಸಿ ಕನ್ನಡ ಜನಪದದ ಶ್ರೀಮಂತ ಸಂಸ್ಕೃತಿಯ, ವೈಚಾರಿಕ ಮೌಖಿಕ ಪರಂಪರೆಯ ದಿಗ್ದರ್ಶನ ಮಾಡಿಸಿದರು. ಕರಾವಳಿಯ ಉದ್ದಕ್ಕೂ ಕನ್ನಡ ಪರಿಸರವನ್ನು ನಿರ್ಮಿಸಿದರು. ಕನ್ನಡ ಸಾಹಿತ್ಯ ಸಂಸ್ಕೃತಿಯ ವಿಜಯಪತಾಕೆಯನ್ನು ಹಾರಿಸಿದರು. ಅದೊಂದು ರೀತಿಯ ಬುದ್ಧನ ಶಾಂತಿ-ಜೈತ್ರಯಾತ್ರೆ ಆಗಿತ್ತು. ಕನ್ನಡ ಎನ್ನುವ ಮಂತ್ರ, ಸಾಹಿತ್ಯ, ಮಾತು, ಬದುಕು, ಸಂಸ್ಕೃತಿಗಳೇ ಅವರ ಜೈತ್ರಯಾತ್ರೆಯ ಗೆಲುವಿನ ಶಸ್ತ್ರಾಸ್ತ್ರಗಳಾಗಿದ್ದವು.

ಇಂದ್ರಚಾಪ: ಎಸ್.ವಿ.ಪಿ, ಯವರ “ಇಂದ್ರಚಾಪ”‌ “ಒಂದನೆಯ ನೂರು”ವಿನಿಂದ “ಹನ್ನೆರಡು ನೂರು”ವಿನ ವಿಭಾಗಗಳಲ್ಲಿ 1200 ಮುಕ್ತಕಗಳನ್ನೊಳಗೊಂಡ “ಕಾವ್ಯದ ಮಾತು, ನವ ಸುಭಾಷಿತ, ಸುಂದರ ಸಾಮತಿ, ಅನ್ಯ ಭಾಷೆಯ ಸೂಕ್ತಿ, ಮುನ್ನಿನಾರ್ಯರ ಮಾತು, ಗಾದೆಯ ಮಾತಿನ ಸಾಂಗತ್ಯ, ಹಾಸ್ಯದ ರಸ ಜೇನು, ಚೆನ್ನ ಕನ್ನಡದ ಶೃಂಗಾರ”; ಮುಖ್ಯವಾಗಿ ”ದಟ್ಟೈಸಿದ ಕಟು ಜೀವನಾನುಭವ ಸಾರ”. ಬಗೆ ಬಗೆಯ ಕಷ್ಟ ಕೋಟಲೆಗಳಲ್ಲಿ ನೊಂದು, ಬೆಂದು ಪರಿಪಕ್ವವಾದ ಅವರ ಅನುಭಾವವೇ ಅವರ ಕೃತಿ ”ಇಂದ್ರಚಾಪ”. ಒಂದರ್ಥದಲ್ಲಿ “ಇಂದ್ರಚಾಪ” ಅವರ ಆತ್ಮಚರಿತ್ರೆ, ಜೀವನದರ್ಶನ.

ಜೀವನ-ಗತಿ: “ಇಂದ್ರಚಾಪ-ಜೀವನ”ಕ್ಕೆ ಎರಡು ಮುಖ: ಒಂದು ಖಾಸಗಿಯಾದದ್ದು, ಇನ್ನೊಂದು ಸಾಮುದಾಯಿಕವಾದದ್ದು. ಸಾಮುದಾಯಿಕವಾದುದರಲ್ಲಿ ಕುಟುಂಬವೂ ಸೇರಿಕೊಂಡಿರುತ್ತದೆ, ಸಮಾಜವೂ ಇರುತ್ತದೆ. ವ್ಯಕ್ತಿಗೆ ಬದುಕಿನ ಏಳುಬೀಳುಗಳು ತನ್ನವರಿಗಾಗಿ ತಾನೇನು ಮಾಡಬೇಕು ಎಂಬುದನ್ನು ಕಂಡುಕೊಳ್ಳಲು ಸಾಧನ ಆಗುವಂತೆ ವೈಯಕ್ತಿಕವಾಗಿ ಶಾಂತವಾದ ಮನಃಸ್ಥಿತಿಯನ್ನು ಇರಿಸಿಕೊಳ್ಳಲೂ ಸಹ ಸಾಧನವಾಗುತ್ತದೆ. ಇದು ಎಸ್.ವಿ.ಪಿ. ಅವರ ಜೀವನದಲ್ಲಿ ಅಕ್ಷರಶಃ ಸತ್ಯ. ಅಣ್ಣ‌, ಅಕ್ಕ, ತಮ್ಮ, ತಂಗಿಯರನ್ನು ಮಾತ್ರವಲ್ಲದೆ ದೊಡ್ಡಪ್ಪ, ಚಿಕ್ಕಪ್ಪರಂದಿರನ್ನೂ ಮತ್ತು ಅವರೆಲ್ಲರ ಮಕ್ಕಳು, ಆ ಮಕ್ಕಳ ಕುಟುಂಬದವರನ್ನೂ, ಅವರ ಸಂಬಂಧಿಕರನ್ನೂ ಹಾಗೆಯೇ ಅವರೆಲ್ಲರ ಸ್ನೇಹಿತರ ಮಕ್ಕಳು. ಬಂಧು ಬಾಂಧವರು, ಅವರ ಕುಟುಂಬ ವರ್ಗದವರೆಲ್ಲರನ್ನೂ ತಮ್ಮವರೆಂದು ಭಾವಿಸಿ ಅವರೆಲ್ಲರ ದುಃಖ ದುಮ್ಮಾನಗಳೂ ತಮ್ಮದೆಂದೇ ಒದ್ದಾಡಿಕೊಂಡ ಉದಾರ ಸ್ಪಂದನೆಯ ಕವಿ-ಹೃದಯಿಗರು ಎಸ್.ವಿ.ಪಿ.

ಬಿಸಿಲು ಮಳೆಹನಿಗಳ ಚೆಲ್ಲಾಟದ ಪ್ರತಿರೂಪವಾದ ಸುಂದರ ಕಾಮನಬಿಲ್ಲೇ ಇಂದ್ರಚಾಪ. ಆಕಾಶದ ಆ ತುದಿಯಿಂದ ಈ ತುದಿಯವರೆಗೆ ಬಾಗಿದ ಕಾಮನಬಿಲ್ಲಿನ ದಾರಿಯಲ್ಲಿ ಇಂದ್ರ ಸ್ವರ್ಗದಿಂದ ಭೂಮಿಗೆ ಇಳಿದು ಬರುತ್ತಾನೆ, ತನ್ನ ಸ್ವರ್ಗೀಯ ವೈಭವವನ್ನು ಭೂಮಿಗೆ ಧಾರೆಯೆರೆದು ಕೊಡುತ್ತಾನೆ ಎಂಬ ಒಂದು ಸುಂದರ ಭಾವನೆ ಜನಪದರಲ್ಲಿ ಇದೆ. ಪ್ರಾಕೃತಿಕ ವಿದ್ಯಮಾನವಾದ ಕಾಮನಬಿಲ್ಲು=ಇಂದ್ರಚಾಪ ಸೌಂದರ್ಯವನ್ನು ಆಸ್ವಾದಿಸುವ ಸಹೃದಯಿಗರಿಗೆಲ್ಲ ಮಕ್ಕಳು ದೊಡ್ಡವರು ಎಂಬ ಅಂತರವಿಲ್ಲದೆ ಉಲ್ಲಾಸವನ್ನು ಮೂಡಿಸುತ್ತದೆ. ನೋಡುವವರಿಗೆ ಗೊತ್ತು ಅದು ಒಂದು ಕ್ಷಣದಲ್ಲಿ ಅರಳಿ ಮಧುರವಾದ ಕಂಪನ್ನು ಬೀರಿ ಮುಂದಿನ ಕ್ಷಣದಲ್ಲಿ ಬಾಡಿ ಹೋಗುವ ಮಲ್ಲಿಗೆಯಂತೆ ಮನಾಕರ್ಷಕ ಎಂದು. ಆದರೂ ಅದರ ಸೊಬಗಿಗೆ ಮರುಳಾಗದಿರಲಾರರು. ಬದುಕೂ ಹಾಗೆಯೇ. ಯಾರಿಗೆ ಅದರ ಅರಿವಿರುತ್ತದೆಯೋ ಅವರು ಎಲ್ಲದರಲ್ಲಿಯೂ ಅದರದರದೇ ಆದ ಮಾರ್ಗದರ್ಶಕ ಬೆಳಕು ಇರುವುದನ್ನು ಕಾಣಬಲ್ಲರು. ಆ ಬೆಳಕಿನಲ್ಲಿ ತಮ್ಮ ಬದುಕನ್ನು ಹಿತವಾಗಿ ಇರಿಸಿಕೊಳ್ಳ ಬಲ್ಲರು. ಇದಕ್ಕೆ ಒಂದು ಚೆಂದದ ಅಭಿವ್ಯಕ್ತಿ ಎಸ್.ವಿ.ಪಿ. ಯವರ ವ್ಯಕ್ತಿತ್ವ:

ಮನವೆ ಬಾನಂಗಳ ದುಗುಡವೆ ಮಳೆಮೋಡ
ಕವಿಗಣ ಸೂಕ್ತಿಯೇ ದಿನಪ
ಮೂಡಿತು ಮಳೆ ಬಿಸಿಲಿನ ಮೇಳದೊಳು ನೋಡ
ಕವಿತೆಯ ಇಂದ್ರಚಾಪ
(2, ನಾಲ್ಕನೆಯ ನೂರು, ಪು.63)

ಎಸ್.ವಿ.ಪಿ. ಯವರ ವೈಯಕ್ತಿಕ ಜೀವನ ಸುಖಕರವಾಗಿರಲಿಲ್ಲ. ಹೆಂಡತಿ ಸಮಾಧಾನ ಸ್ಥಿತಿಯಲ್ಲಿದ್ದಾಗ ಅವರು ಪಡೆದದ್ದು ನಾಲ್ಕು ಮಕ್ಕಳು. ಆ ಮಕ್ಕಳನ್ನು ಇವರೇ ತಾಯಿಯೂ ಆಗಿ, ತಂದೆಯೂ ಆಗಿ ಹಾಗೆಯೇ ಸ್ನೇಹಿತನೂ ಆಗಿ ನೋಡಿಕೊಳ್ಳುವುದು ಅವರಿಗೆ ಅನಿವಾರ್ಯ ಆಗಿತ್ತು. ಹಾಗೆಯೇ ಮಾನಸಿಕ ಅಸ್ವಸ್ಥತೆಯಿಂದ ತೊಳಲಾಡುತ್ತಿದ್ದ ಹೆಂಡತಿಗೆ ಶುಶ್ರೂಷಕಿ, ಮಾನಸಿಕ ಆಪ್ತ ಸಲಹೆಗಾರ್ತಿ, ಹಿತವಂತ ಸ್ನೇಹಿತೆ, ಮಮತೆಯ ಅಮ್ಮ ಮತ್ತೆ ಬಾಳ ಸಂಗಾತಿ ಎಲ್ಲವೂ ಆಗಿರಬೇಕಾಗಿತ್ತು. ಅದು ಅವರ ಕರ್ತವ್ಯವೂ ಆಗಿತ್ತು. ಇವನ್ನೆಲ್ಲಾ ನಿಭಾಯಿಸುತ್ತಿದ್ದ ಅವರಿಗೆ ತನ್ನನ್ನು ತಾನೇ ಸಾಂತ್ವನಗೊಳಿಸಿಕೊಳ್ಳಬೇಕು ಎಂಬುದು ಸುಸ್ಪಷ್ಟವಾಗಿತ್ತು. ಅದನ್ನು ಅವರು ಎರಡು ರೀತಿಯಲ್ಲಿ ನಿರ್ವಹಿಸಿದರು: 1. ತಮ್ಮ ಬದುಕಿನಲ್ಲಿ ವಿಧಿಯ ಪಾತ್ರ ಇರುವುದನ್ನು ಒಪ್ಪಿಕೊಳ್ಳುವ ಹಾಗೆ ಪುರುಷ ಪ್ರಯತ್ನಕ್ಕೂ ಮಹತ್ವ ಇದೆ ಎಂದು ಗುರುತಿಸಿಕೊಂಡರು. 2. ತಮ್ಮ ಪುರುಷ ಪ್ರಯತ್ನದ ಗತಿಗೆ ಕಾವ್ಯರಚನೆ ಮತ್ತು ಹಾಸ್ಯ ತನ್ನ ಸ್ವಭಾವ, ಸಾಮರ್ಥ್ಯಕ್ಕೆ ಸೂಕ್ತವಾದದ್ದು ಎಂದು ಕಂಡುಕೊಂಡರು. ಸಂಶೋಧನೆ, ಬೋಧನೆ, ಕಾವ್ಯರಚನೆಗಳನ್ನು ಜೀವನ-ವ್ರತವನ್ನಾಗಿ ಸ್ವೀಕರಿಸಿದರು.

ಎಸ್.ವಿ.ಪಿ. ಕನ್ನಡ ಸಂಸ್ಕೃತಿ, ಸಾಹಿತ್ಯದ ವಿದ್ಯಾರ್ಥಿಯಾಗಿ ಸ್ನಾತಕ ಮತ್ತು ಸ್ನಾತಕೋತ್ತರ ಮಟ್ಟದಲ್ಲಿ ಕನ್ನಡವನ್ನು ಅದರ ವಿವಿಧ ಆಯಾಮಗಳಲ್ಲಿ ಅಧ್ಯಯನ ಮಾಡಿದರು. ಕನ್ನಡ ದಿಗ್ಗಜರಾದ ಕುವೆಂಪು, ತೀನಂಶ್ರೀ, ಟಿ. ಎಸ್‌. ವೆಂಕಣ್ಣಯ್ಯ, ವಿ, ಸೀತಾರಾಮಯ್ಯನಂಥವರ ಮಾರ್ಗದರ್ಶನದಲ್ಲಿ ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಪಂಡಿತರಾದರು. ಕವಿಯಾಗಿ ಅರಳಿದರು. ಕನ್ನಡ ಅಧ್ಯಾಪಕರಾಗಿ ಸ್ನಾತಕ ಮತ್ತು ಸ್ನಾತಕೋತ್ತರ‌ ವಿದ್ಯಾರ್ಥಿಗಳೊಂದಿಗೆ ತಾವೂ ಸಂಶೋಧನಾತ್ಮಕ ಅಧ್ಯಯನ, ಅಧ್ಯಾಪನ ಮಾಡಿದರು. ಭಾಸ, ಕಾಳಿದಾಸ, ಭವಭೂತಿ ಮೊದಲಾದ ಮಹಾಕವಿಗಳ ನಾಟಕ, ಕಾವ್ಯಗಳನ್ನೆಲ್ಲ ಕನ್ನಡಕ್ಕಿಳಿಸಿ ಕನ್ನಡ ಸಾರಸ್ವತ ಲೋಕಕ್ಕೆ ಅಮೂಲ್ಯ ಕೊಡಿಗೆ ಕೊಟ್ಟರು. ಸ್ವಾನುಭವವನ್ನು ಕನ್ನಡ ಸಾಹಿತ್ಯ ಕ್ಷೇತ್ರವನ್ನು ಸಮೃದ್ಧಗೊಳಿಸಲು ಮೀಸಲಿಟ್ಟರು.

ಸಾಂಸ್ಕೃತಿಕ ನೆಲೆಗಟ್ಟು: ಎಸ್.ವಿ.ಪಿ.ಯವರ ತಂದೆಯ ಆರೋಗ್ಯ ಕೆಟ್ಟಾಗ ತಂದೆಯೊಂದಿಗೆ ಕುಂದಾಪುರದ ಸಮುದ್ರ ತಡಿಯಲ್ಲಿ ಕೆಲ ಕಾಲ ಉಳಿದಿದ್ದರು. ಅಲ್ಲಿಯೇ ಅವರಿಗೆ “ನೆಲ ಜಲ ಮುಗಿಲಿನ ಮೇಳದ ಚೆಲುವನು| ಅರಿವರೆ ಕೊನೆ ಮೊದಲೆಲ್ಲಿ” ಎಂಬುದರ ಅರಿವುಂಟಾಯಿತು. ಕಾವ್ಯದ ಮೂಲ ಭಾವವಾದ ಸೌಂದರ್ಯೋಪಾಸನೆಯ ಬೀಜಾಂಕುರವಾಯಿತು.ಭೂಮಿಯಲ್ಲಿ, ನೀರಿನಲ್ಲಿ ಮತ್ತು ಆಕಾಶದಲ್ಲಿ ಅರಳುವ ಸೌಂದರ್ಯದ ವೈವಿಧ್ಯತೆಯೂ ಅಪಾರ. ಅದನ್ನು ಬೆರಳು ಮಡಚಿ ಹೇಳಲಾಗುವುದಿಲ್ಲ. ಈ ಸೂಕ್ಷ್ಮವನ್ನು ಅರಿತವನು ಎಸ್.ವಿ.ಪಿ. ಯವರಂತೆ ಸೃಷ್ಟಿಯ ಸೊಬಗಿನ ಭವ್ಯತೆಯನ್ನೂ ದೈವಿಕತೆಯನ್ನೂ ಮತ್ತು ಸಹಜತೆಯನ್ನೂ ಭಾವಿಸಬಲ್ಲ, ಬೆರಗಿನಿಂದ ಕಣ್ಣರಳಿಸಬಲ್ಲ.                                                                                                        

ಮುಂದಿನ ವಿದ್ಯಾಭ್ಯಾಸಕ್ಕೆಂದು ಮೈಸೂರಿಗೆ ಬಂದ ಎಸ್.ವಿ.ಪಿ. ಅಲ್ಲಿಯ ಅನುಭವವನ್ನು ತಮ್ಮ ಮಲೆನಾಡಿನ ಹಳ್ಳಿಯ ಜೀವನಾನುಭವದೊಂದಿಗೆ ಸಮನ್ವಯಿಸಿಕೊಂಡರು. ಕಾಡಿನ ಮರ ಮರಗಳನ್ನು ಒಂದನ್ನೂ ಬಿಡದೆ ಮಾತಾಡಿಸುತ್ತ ನಾಗರಿಕತೆಯನ್ನು ಕಾಡಿಗೆ ವರದಿ ಮಾಡುತ್ತಿದ್ದರು; ಪ್ರಾಕೃತಿಕ, ಮಾನವಿಕ ಸಂಬಂಧಗಳನ್ನು ಒಟ್ಟೈಸಿ ಜೀವನಾನುಭವವನ್ನು ವಿಸ್ತರಿಸಿಕೊಳ್ಳುತ್ತಿದ್ದರು. ಅವರಿಗೆ ಈ ಕಾವ್ಯ, ಆ ನಾಟ್ಯ, ಈ ಚಿತ್ರ ಎಂದು ಮನಸ್ಸನ್ನು ಬಿಡಿ ಬಿಡಿಯಾಗಿ ಹರಿದಾಡಲು ಬಿಡುವುದು ಇಷ್ಟವಾಗುತ್ತಿರಲಿಲ್ಲ. ಸ್ವಾಭಾವಿಕವಾಗಿ ಒಂದೆಡೆ ಮೇಳೈಸುವ ಮತ್ತು ನೂರ್ಮಡಿ ಮೋದವನ್ನು ಕೊಡುವ ಗಿರಿ, ಕಾಡು ಮೇಡು, ತೊರೆ, ಗಿಡ ಮರ ಬಳ್ಳಿಗಳನ್ನು ಏಕಾಗ್ರವಾಗಿ ಭಾವಿಸಿ ವಾಸ್ತವ ಸೌಂದರ್ಯಾಸ್ವಾದನೆಗೆ ಸೂಕ್ತ ನೆಲೆಗಟ್ಟನ್ನು ಕಂಡುಕೊಳ್ಳುವುದೇ ಸರಿಯಾದದ್ದು ಎನ್ನುತ್ತಿದ್ದರು. 

ನಗರದ ಉಪವನದ ಮೆಲುಗಾಳಿ, ಮೆಲ್ಲಗೆ ಹಿತವಾಗಿ ಅಪ್ಪಿಕೊಳ್ಳುವ ಬಿಸಿಲು, ಮಾತಾಡುವ ಗಿಳಿಯ ಚಂದದ, ಇಂಪಾದ ಯೋಗಕ್ಷೇಮದ ಮಾತುಗಳೂ ಸಹ ಅವರಿಗೆ ಪ್ರಿಯವಾಗುತ್ತಿದ್ದವು. ಅಲ್ಲಿಯ ಮಾನವ ವಿರಚಿತ ಪ್ರಕೃತಿ ಸೌಂದರ್ಯವೂ ಅವರನ್ನು ಮುದಗೊಳಿಸುತ್ತಿತ್ತು. ಮಳೆಗಾಲ ಅವರಲ್ಲಿ ಸಂತೋಷವನ್ನು ಉಕ್ಕೇರಿಸುತ್ತಿತ್ತು. ಅವರಿಗೆ “ಮಳೆಯ ಪ್ರತಿಯೊಂದು ಹನಿಯೂ ಕಾಡಿನಲ್ಲಿ ಘಂ ಎಂದು ಅರಳುವ ಹೂವಾಗಿ” ತೋರಿಬರುತ್ತಿತ್ತು, ತನ್ನೆಡೆಗೆ ಕೈ ಬೀಸಿ ಕರೆಯುವಂತೆ ಭಾಸವಾಗುತ್ತಿತ್ತು:

ಸೃಷ್ಟಿಯ ಚೆಲುವನು ನೋಡಿ ಆನಂದಿಸು
ಕಷ್ಟವ ಮರೆತಿಲ್ಲಿ ಸುಖಿಸು
ಪುಷ್ಟಿಯ ತುಷ್ಟಿಯ ಪಡೆದು ಸಂತೋಷಿಸು
ದೃಷ್ಟಿ ವೈಶಾಲ್ಯವ ಗಳಿಸು
(89. ನಾಲ್ಕನೆಯ ನೂರು, ಪು.80}

ಇದು ಎಸ್.ವಿ.ಪಿ. ತಮ್ಮ‌ ಸೌಂದರ್ಯಾನುಭವಕ್ಕೆ ನೀಡಬಯಸಿದ ಆಯಾಮ.

ಎಸ್.ವಿ.ಪಿ. ಯವರು ಮನಸ್ಸು ಸಂತೃಪ್ತಿಯಾಗುವಂತೆ ಪ್ರಾಕೃತಿಕ ಸೌಂದರ್ಯ-ರಸವನ್ನು ಸವಿದರು. ಸುಂದರ ಕಾವ್ಯ ಪ್ರಪಂಚದ ಸೊಗಸನ್ನು ಆಸ್ವಾದಿಸಿ ನಲಿದಾಡಿದರು. ಮನೆಯಲ್ಲಿ, ಮಠದಲ್ಲಿ, ನಾಡಿನಲ್ಲಿ, ಬೀಡಿನಲ್ಲಿ, ಮತ್ತೆ ಎಲ್ಲೆಲ್ಲಿಯೂ “ಇಂದ್ರಚಾಪದ ಭವ್ಯತೆಯ ಪೀಯೂಷ”ವನ್ನು ಕುಡಿದು ಸೌಂದರ್ಯಮತ್ತರಾದರು. ಕಾಮಿಗಳಿಗೆ ಸ್ತ್ರೀಯರು, ಜಿಪುಣರಿಗೆ ಹಣ, ಸನ್ಯಾಸಿಗಳಿಗೆ ಚಿರಶಾಂತಿ ಅಮೃತವಾಗಿರಬಹುದು; ಕಲಾಭಿಜ್ಞರಿಗಾದರೋ ಕಾವ್ಯವೇ ಅಮೃತ ಎಂಬುದು ಅವರ ನಿಲುವು.

ಬುಧರ ವಿಚಾರಿತ ರಮಣೀಯ ಕಾರ್ಯವು
ಜಗದೊಳು ಶೋಭಿಸುವಂತೆ
ವರ್ಣನೆ ಸ್ಥಿತಿಗನುಗುಣವಿಹ ಕಾವ್ಯವು
ಜಗದೊಳು ಶೋಭಿಪುದಲ್ತೆ
(69, ಏಳನೆಯ ನೂರು, ಪು.136)

ಎಂಬುದು ಎಸ್.ವಿ.ಪಿ. ಯವರ ಗ್ರಹಿಕೆ. ಅವರಿಗೆ ಕಾವ್ಯವು ರಮಣೀಯವೂ ಆಗಿರಬೇಕಿತ್ತು, ವೈಚಾರಿಕವೂ ಆಗಿರಬೇಕಿತ್ತು. ಹಾಗೆಯೇ ಅದು ವಾಸ್ತವಿಕ ನೆಲೆಗಟ್ಟುಳ್ಳ ಸ್ಥಿತಿಯ ವರ್ಣನೆಯೂ ಆಗಿರಬೇಕಿತ್ತು.

ಗುಣವುಂಟು ದೋಷವುಂಟೆಲ್ಲದರೊಳು ನೋಡು
ಇದರಿಂದಲಾಗಿದೆ ಸೃಷ್ಟಿ
ಗುಣವಿದು ದೋಷವಿದೆಂದು ನಿರ್ಣಯ ಮಾಡು
ವುದೆ ಎಲ್ಲ ಕಲೆಗಳ ದೃಷ್ಟಿ
(40. ನಾಲ್ಕನೆಯ ನೂರು, ಪು,70)

ಕಾವ್ಯವನ್ನು ಕಾವ್ಯ ರಚನಾ ಕೌಶಲ್ಯಕ್ಕಾಗಿಯೇ ಮೆಚ್ಚಬೇಕು, ಅದೇ ಕಾವ್ಯದ ಉದ್ದೇಶ ಎಂದು ಅವರು ಭಾವಿಸಿರಲಿಲ್ಲ. ಅವರಿಗೆ ನಡಾವಳಿಯ, ಸ್ಥಿತಿಗತಿಯ ಗುಣಾವಗುಣಗಳನ್ನು ರಸಿಕ ಓದುಗರ ಅರಿವಿಗೆ ತಂದು ಬದುಕಿಗೆ ಸದಾಶಯದ ತಿರುವನ್ನು ನೀಡುವುದೇ ಕಾವ್ಯದ ಉದ್ದೇಶ. ಪ್ರಯೋಜನ, ಮೌಲ್ಯ ಆಗಿತ್ತು. ಇದು ಅವರ ಕಾವ್ಯ ಸಿದ್ಧಾಂತ.

ಸಹಜವಾಗಿ ಅವರು ಸಾಹಿತ್ಯವು ತಮ್ಮ ಬದುಕಿನ ಸಂಜೀವಿನಿ, ತಾರಕ ಶಕ್ತಿ ಎಂದು ದೃಢವಾಗಿ ನಂಬಿದ್ದರು. ಆತ್ಮವಿಶ್ವಾಸದಿಂದ “ರಸ ಋಷಿ ಕುವೆಂಪು, ಕನ್ನಡದ ಕಣ್ವರಾದ ಬಿಎಂಶ್ರೀ ಮತ್ತು ತೀನಂಶ್ರೀ, ರತ್ನಾಭಿದೇಯ ಜಿ.ಪಿ. ರಾಜರತ್ನಂ, ಸಕ್ಕರೆಯಂಗಿಯ ಕಹಿಗುಳಿಗೆಗಳ ಚುಟುಕು ಸರದಾರ ದಿನಕರ ದೇಸಾಯಿ, ಬಹು ಶ್ರುತಜ್ಞ ವಿ. ಸೀತಾರಾಮಯ್ಯ, ಕನ್ನಡದ ಓಜ ವೆಂಕಟರಾಮಪ್ಪ, ಆಚಾರ್ಯ ಟಿ.ಎಸ್.‌ ವೆಂಕಣ್ಣಯ್ಯ, ಅತುಳ ಕೋವಿದ ನರಸಿಂಹಾಚಾರ್ಯ”ರೇ ಮೊದಲಾದ ಸಾಹಿತ್ಯ ಪುರುಷೋತ್ತಮರಿಂದ ಶೋಭಿಸುತ್ತಿದ್ದ ಕಾವ್ಯ ಸಾಮ್ರಾಜ್ಞಿಯ ಓಲಗಶಾಲೆಯನ್ನು ಪ್ರವೇಶಿಸಿದರು.

ರಮಣೀಯವಾದೊಂದು ರತ್ನಭೂಷಣದಿಂದೆ
ಭಾಮಿನಿ ಶೋಭಿಸುವಂತೆ
ಧ್ವನಿರಮ್ಯವಾದೊಂದೆ ಪದವನ್ನಿಟ್ಟುದರಿಂದೆ
ಕವಿವಾಣಿ ಶೋಭಿಪುದಲ್ತೆ
(20, ನಾಲ್ಕನೆಯ ನೂರು, ಪು.66)

ಎಂಬುದನ್ನು ಹೃದ್ಗತ ಮಾಡಿಕೊಂಡರು. ಅನೇಕ ಅರ್ಥಪೂರ್ಣ ಕಾವ್ಯಗಳನ್ನು ಸೊಗಸಾಗಿ ರಚಿಸಿದರು.

ಕಲ್ಪನೆಯೊಳು ನಿನಗೇತರ ಬಡತನ
ಸಂಕಲ್ಪ ಭವ್ಯವಾಗಿರಲಿ
ಶಿಲ್ಪದ ಚಿತ್ರದ ಕಾವ್ಯದ ಸಿರಿತನ
ಕಲ್ಪಾಂತ ದಿವ್ಯವಾಗಿರಲಿ
(48, ಒಂಬತ್ತನೆಯ ನೂರು, ಪು.172)

ಎಂಬುದು ಎಸ್.ವಿ.ಪಿ. ಯವರ ಕಾವ್ಯಸೃಷ್ಟಿಯ ಭವ್ಯ ಮುನ್ನೋಟ. ಅವರು ಭೂಮಿ ಆಕಾಶಗಳನ್ನು ಬೆಸೆಯುವ, ತಳಮಟ್ಟ ಶೋಧಿಸುವ ಸತ್ಯಗ್ರಹಿಕೆಗೆ ಮತ್ತು ಒಳಿತಿಗೆ ಪೂರಕವಾಗುವ ವ್ಯಾಪಕ ಕಲ್ಪನೆ, ಅದರ ಸೂಕ್ತ ಶಬ್ದ ಚಿತ್ರ, ನುಡಿ ಶಿಲ್ಪಗಳಲ್ಲಿ ಕಲ್ಪದ ಅಂತ್ಯದ ವರೆಗೂ ಉಳಿಯುವ “ಇಂದ್ರಚಾಪದಂತಹ ವರ್ಣರಂಜಿತ, ಮನಾಕರ್ಷಕ, ಭೂಮಿ ಮತ್ತು ಸ್ವರ್ಗಗಳನ್ನು ಬೆಸೆಯುವ” ಕಾವ್ಯದ ಶ್ರೀಮಂತಿಕೆಯನ್ನು ಮತ್ತು ಭವ್ಯತೆಯನ್ನು ತಮ್ಮ ಕೃತಿಗಳಲ್ಲಿ ಕಾಣ ಬಯಸುತ್ತಿದ್ದರು.

ಪ್ರೊ: ಎಸ್.ವಿ. ಪರಮೇಶ್ವರ ಭಟ್ಟ

ಗೆಲುವಿನ ಗುಟ್ಟು: ವೃತ್ತಿ, ಪ್ರವೃತ್ತಿ ಎರಡೂ ಒಂದೇ ಆದ ಅದ್ಯಯನ, ಅಧ್ಯಾಪನದೊಂದಿಗೆ ಅವರ ಹಿತಾನುವರ್ತಿಯಾದ ಸತಿಯೂ ಸಂಗಾತಿಯಾಗಿದ್ದಾಗ ಮಳೆಗಾಲದ ದಿನದ ಇಂದ್ರಚಾಪದಂತೆ ಬಾಳಿಗೆ ಹೊಸ ಬಣ್ಣವಿತ್ತು. ಅವರ ಹೆಂಡತಿಯ ಆರೋಗ್ಯದಲ್ಲಿ ಭಯಾನಕ, ಆತಂಕಕಾರೀ ಏರುಪೇರಾದಾಗ ಬೆಳಕು ಇದ್ದರೂ ಮುತ್ತಿ ಆಕ್ರಮಿಸುತ್ತಿರುವ ಕತ್ತಲನ್ನು ನಿವಾರಿಸುವ ದಾರಿ ಕಾಣದೆ ಕಂಗಾಲಾದರು. ನಿವಾರಣೋಪಾಯ ಕಾಣದೆ ತೊಳಲಾಡಿದರು. ”ಗ್ರಹಚಾರ ಕೆಟ್ಟಿತೆ, ವಿಧಿ ಶಾಪವಿಟ್ಟಿತೆ, ದೈವಕೆ ಬಂದಿತೆ ಸಿಟ್ಟು” ಎಂದು ಒದ್ದಾಡಿದರು. ಮುರಿದ ಮನೆಯನ್ನು ಎಷ್ಟು ಬೇಕಾದರೂ ಭವ್ಯವಾಗಿ ಕಟ್ಟಬಹುದು, ಹೆಂಡತಿಯ ಮುರಿದ ಮನಸ್ಸನ್ನು ಆಹ್ಲಾದಕರವಾಗುವಂತೆ ಒಗ್ಗೂಡಿಸುವುದು ಹೇಗೆ ಎಂದು ಚಿಂತಾಕ್ರಾಂತರಾದರು. ಒಳಗೆ ಹೊರಗೆ ಭದ್ರಕವಚದಂತೆ ತೀವ್ರವಾಗಿ ಆವರಿಸಿರುವ ಕಾಳ ಕತ್ತಲೆಯನ್ನು ತೊಲಗಿಸಿ ಮನಸ್ಸು, ಬುದ್ಧಿ, ಹೃದಯಗಳನ್ನು ಬೆಳಗು ಎಂದು ದೇವರನ್ನು ಬೇಡಿಕೊಂಡರು.

ಕೊನೆಗೆ ನೋವೇ ಬದುಕಿನ ಹೆಗ್ಗುರುತು; ಸುಖವು ಇದ್ದರೂ ಅದು ಎಲ್ಲರಿಗೂ ದೊರಕುವುದಿಲ್ಲ; ಇನ್ನೊಬ್ಬರ ನೋವನ್ನು ಕಂಡಾಗ ನಮಗೆ ಸುಖವಿದ್ದರೂ ಅದು ಸುಖವಾಗಿ ತೋರುವುದಿಲ್ಲ; ನೋವನ್ನು ಉಂಡು ಉಂಡು ನಾವು ಮರಣ ಹೊಂದುತ್ತೇವೆಯೇ ವಿನಾ ನೋವು ನಿವಾರಣೆಯಾಗುವುದಿಲ್ಲ ಎಂಬ ಕಟು ವಾಸ್ತವಕ್ಕೆ ಶರಣಾದರು. ನೋವು ಸಹ್ಯವಾದದ್ದೇ; ಸಹಿಸಿಕೊಳ್ಳಲಾಗದ ದುರದೃಷ್ಟ ಎಂಬುದು ಇಲ್ಲವೇ ಇಲ್ಲ ಎಂದು ನೋವನ್ನು ನುಂಗಿಕೊಂಡರು. “ಬಿಡು ನೀನು ಮುಂದೇನು ಎನುವ ಪಲ್ಲವಿಯನು, ನಿಲ್ಲಿಸೀ ಹಾಳು ಕರಕರೆಯ” ಎಂದು ಮನಸ್ಸಿಗೆ ಕೊರಗಬೇಡ ಎಂದು ಆದೇಶಿಸಿದರು. ಮೋಡ ಇರುವುದರಿಂದ ಸೂರ್ಯ ಮರೆಯಾಗಿದ್ದಾನೆ, ಕೆಲ ಕಾಲದನಂತರ ಆಚೆಗೆ ಬಂದೇ ಬರುತ್ತಾನೆ; ಹಾಗೆಯೇ ಬಾಳ ಸೂರ್ಯನೂ ಸಹ ಎಂದು ಮನಸ್ಸಿಗೆ ಸಮಾಧಾನ ಹೇಳಿಕೊಂಡರು. ಭರವಸೆಯ ಬೆಳಕಿಂಡಿಯನ್ನು ತೆರೆದಿಟ್ಟರು. 

ಮುಳುಗಿಸಬಹುದು ನೀ ನಗೆಯ ವಾಹಿನಿಯೊಳು 
ಹೆರರಿತ್ತ ಕಿರುಕುಳಗಳನು, 
ಬೆಳೆಯಿಸಬಹುದು ನೀನೀ ನೀರ 
ನೆರವೊಳು ನಲುಮೆಯ ಗಿಡ ಬಳ್ಳಿಗಳನು
(7, ಐದನೆಯ ನೂರು, ಪು.84)

ಎಂದು ತಮ್ಮನ್ನು ತಾವೇ ಪುನರ್ರೂಪಿಸಿಕೊಂಡ ಅವರನ್ನು ಸಮಾಧಾನ ಪಡಿಸಿದ ಒಂದು ಸಂಗತಿ ಅವರ ಹಾಸ್ಯಪ್ರಜ್ಞೆ:

ಚೆಂದುಟಿ ಹವಳವು ಸುಲಿಪಲ್ಲು ಧವಳವು
ನೀಲವು ಕುಟಿಲ ಕುಂತಲವು
ಕಂಗಳು ಕಾಳವು ಕದಪು ಸುಪೀತವು
ಅದ್ಭುತ ವರ್ಣ ಸಂಗಮವು
(27, ಐದನೆಯ ನೂರು, ಪು.88)

ಕಾಮನಬಿಲ್ಲಿನಲ್ಲಿರುವ ಒಂದಕ್ಕೊಂದು ತದ್ವಿರುದ್ಧ ಆದ ವಿವಿಧ ಬಣ್ಣಗಳಂತೆ ಇರುವ ತಮ್ಮ ಬದುಕಿನ ವಿಡಂಬನೆಯನ್ನು ಮಾಡಿಕೊಂಡು ಸುಖಿಸಿದರು!

ಅವರ ಮನಸ್ಸಿನ ನೆಮ್ಮದಿಗೆ ಸಹಕರಿಸಿದ ಮತ್ತೊಂದು ಸಂಗತಿ ಅವರ ಕರ್ಮ ಸಿದ್ಧಾಂತ. ದೋಣಿಯನ್ನು ನಡೆಸುವ ಅಂಬಿಗರು ದೋಣಿ ಸರಾಗವಾಗಿ ಮುಂದಕ್ಕೆ ಹೋಗಲು ಅನುಕೂಲಕರವಾಗಿ ಗಾಳಿ ಬೀಸಬೇಕು ಎಂದುಕೊಂಡರೂ ಹುಟ್ಟುಹಾಕುವುದನ್ನು ನಿಲ್ಲಿಸುವುದಿಲ್ಲ; ಹಾಗೆಯೇ ನಾವೂ ಸಹ ಮಾಡಬೇಕಾದ ಕೆಲಸ ಕಾರ್ಯಗಳನ್ನು ತಪ್ಪದೇ ಮಾಡಬೇಕು; ಫಲಾಫಲಗಳು ಏನಾದರಾಗಲಿ ಸದಾಶಯವೇ ತನ್ನ ಊರುಗೋಲಾಗಿರಲಿ ಎಂದು ದೃಢ ನಿಶ್ಚಯ ಮಾಡಿದರು. “ಹುಲಿ ಕರಡಿಗಳಿಂದ ಸಾಮು ಮಾಡಿಸಬೇಕು, ಹೊಡಿ ಮೂರು ಲಾಗವೆನಬೇಕು” ಎಂಬುದನ್ನು ಮನವರಿಕೆ ಮಾಡಿಕೊಂಡರು. ಸ್ವಪ್ರಯತ್ನದಿಂದ ಜೀವನ ಬುಡ ಮೇಲಾಗದಂತೆ ನೋಡಿಕೊಳ್ಳಬೇಕೆಂದು ನಿರ್ಧರಿಸಿದರು. “ಯೋಚಿಸಿ ಯೋಜನೆಯೊಂದನು ಹೊಂದಿಸು, ಅದರಂತೆ ಬಾಳನು ನಡೆಸು” ಎಂದು ಹೇಳಿಕೊಂಡ ಎಸ್.ವಿ.ಪಿ. ಹೊಳೆಯಲ್ಲಿ ಕಸಕಡ್ಡಿಗಳು ತೇಲಿಹೋಗುವಂತೆ ತಮ್ಮ ಬದುಕು ಆಗಬಾರದು ಎಂದು ನಿರ್ಣಯಿಸಿದರು. “ಬದುಕಿದ್ದನು ಎಂತೆಂಬುದು ಎಮಗದೆ ಮುಖ್ಯವು. ಸತ್ತನು ಹೇಗೆ ಎಂಬುದೇಕೆ? ಬದುಕಿದುದಲ್ಲದೆ ಸಾವಿನ ವಿವರವು ನಾಳೆಯ ಚರಿತೆಗೆ ಬೇಕೆ” ಎಂದು ವಿವೇಚಿಸಿದರು. “ಅತಿ ಮಾನದೊಳು ಹತನಾದನು ಕುರುರಾಯ, ಮಿತದೊಳು ನೆಗಳ್ವುದು ವಿಹಿತ” ಎಂದು ಅತಿರೇಕದ ನಡಾವಳಿಯನ್ನು ನಿಷೇಧಿಸಿಕೊಂಡರು.

ಕೊಳೆ ಹೋಗಿ ಕಸ ಕೊಚ್ಚಿ ಹೊಸ ನೀರು ಬರುವುದು
ತರುವುದು ತಂಪನು ನೆಲಕೆ
ಮಳೆ ಬಿಸಿಲುಗಳಾಡಿ ಹರುಷವನೆರೆವುದು
ಇಂದ್ರಚಾಪವು ಮೂಡಿ ಮನಕೆ
(92, ಮೂರನೆಯ ನೂರು, ಪು.61)

ಮಳೆ ನೀರು ಕಶ್ಮಲಗಳನ್ನೆಲ್ಲ ಕೊಚ್ಚಿಕೊಂಡು ಹೋಗಿ ಭೂಮಿ ಆಕಾಶಗಳೆರಡನ್ನೂ ಸ್ವಚ್ಛವಾಗಿಸುತ್ತದೆ, ಪರಿಸರವನ್ನು ಸುಂದರವಾಗಿಸುತ್ತದೆ. ಕಾಮನಬಿಲ್ಲು ಮೂಡಿ ಮನೋ ಭೂಮಿಕೆಯನ್ನು ಸಹ ಸುಂದರವಾಗಿಸುತ್ತದೆ. ಇಂಥ ಮಳೆಗಾಲದ ಎಣಿಕೆಯ ಲೆಕ್ಕವೇ ತನ್ನ ಸಂತೋಷವನ್ನು ಅರ್ಥೈಸಲು ಸೂಕ್ತ ಮತ್ತು ಯೋಗ್ಯವಾದ ಮಾನದಂಡ ಎಂದು ತರ್ಕಿಸಿದರು. “ಕವಿದ ಕತ್ತಲೆಯನು ಕಂಡು ಮನದೊಳು ಬೆಂದು ಹಿಡಿಶಾಪ ಹಾಕುವ ಬದಲು ಹಣತೆಯನೊಂದನು ಹೇಗಾದರೂ ತಂದು ಹಚ್ಚಿಡುವುದು ಮೇಲು ಮೊದಲು” ಎಂದು ಬದುಕಿನ ತಿರುವುಗಳಿಗೆ ಸ್ವಲ್ಪವಾದರೂ ದಾರಿ ತೋರುವ ಹಣತೆಯ ದೀಪವನ್ನು ಹಚ್ಚಿದರು.  

ಅವರ ಮನಸ್ಸಮಾಧಾನಕ್ಕೆ ಧಾವಿಸಿ ಬಂದದ್ದು ವಾಸ್ತವಿಕವಾಗಿ ಕಾವ್ಯ ರಚನೆಯೇ:

ಕಾವ್ಯವೊಂದನು ಕವಿ ವಿರಚಿಸುವನು
ಲಾಲಿಪರುತ್ತಮರದನು
ಗಿಡವು ಹೂ ಬಿಡುವುದು ಹೂವಿನ ಕಂಪನು
ಸವಿವನು ಒಯ್ದು ಮಾರುತನು
(15, ನಾಲ್ಕನೆಯ ನೂರು, ಪು.65)

ಗಿಡ ಕಂಪುಳ್ಳ ಪುಷ್ಪವನ್ನು ಅರಳಿಸುತ್ತದೆ, ಸುಗಂಧ ಹರಡುತ್ತದೆ; ಅದು ತನ್ನ ಪರಿಮಳವನ್ನು ತಾನೇ ಆಸ್ವಾದಿಸಿ ಸುಮ್ಮನಾಗಿ ಬಿಡುವುದದಿಲ್ಲ. ಬದಲಿಗೆ ಗಾಳಿಗೆ ಅದನ್ನು ಒಡ್ಡುತ್ತದೆ. ಅದನ್ನು ಗಾಳಿ ಮೊದಲು ತಾನು ಆಸ್ವಾದಿಸಿ ತನ್ನದಾಗಿಸಿಕೊಳ್ಳುತ್ತದೆ. ಆನಂತರ ಬೇರೆ ಕಡೆಗೂ ಹರಡುತ್ತದೆ. ಇದನ್ನು‌ ಭಾವಿಸುವ ಗಿಡ ಹೂ ಅರಳಿಸುತ್ತಲೇ ಇರುತ್ತದೆ. ಎಂದಿಗೂ ಹೂವರಳಿಸುವುದನ್ನು ನಿಲ್ಲಿಸುವುದೇ ಇಲ್ಲ. ಹಾಗೆಯೇ ತಾನೂ ಎಂದು ಕಾವ್ಯ ಸೃಷ್ಟಿಯಲ್ಲಿ, ಸೃಜನಶೀಲ ಕಾವ್ಯಾತ್ಮಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಕಾವ್ಯ-ರಸಿಕರ ಜಗತ್ತಿಗೆ ತಮ್ಮನ್ನು ಸಂಪೂರ್ಣವಾಗಿ ತೆರೆದುಕೊಂಡರು. ಕಾವ್ಯಸಮುದ್ರದ ರತ್ನಗಳನ್ನೆಲ್ಲ ಹೆಕ್ಕಿ ಹೆಕ್ಕಿ ತೆಗೆದು ಕನ್ನಡ ಸರಸ್ವತಿಯ ಕಂಠಾಭರಣ ಮಾಡಿದರು.

“ಸರ್ವನಾಮವ ತಿಳಿದಾವನು ಬಳಸುವನಾತನು ಜಗವನೆ ಗೆಲುವ, ನಾನು ಎಂಬೆಡೆಯೊಳು ನೀನು ಎಂಬುದನಿಟ್ಟು ನುಡಿವುದೆ ಗೆಲುವಿನ ಗುಟ್ಟು” (20, ಒಂಬತ್ತನೆಯ ನೂರು, ಪು.166). ನಾನು ಎಂಬ ಅಹಂನ ಕೇಂದ್ರದಿಂದ ಮೊದಲು ಹೊರಗೆ ಬರಬೇಕು; ದೈವ ಶರಣಾಗತಿ, ಪ್ರಕೃತಿ ಪ್ರೇಮ, ಒಡನಾಡಿಗಳೊಂದಿಗಿನ ಸ್ನೇಹ ಸಂಬಂಧಗಳ ಅರ್ಥವಂತಿಕೆಯನ್ನು ಹೃದಯವೇದ್ಯ ಆಗಿಸಿಕೊಳ್ಳಬೇಕು; ಆಗ ಒಬ್ಬನ ಬದುಕು ಯಾವಾಗಲೂ ಯಶಪದ ಎಂಬ ಅರಿವಿನೊಂದಿಗೆ ಬದುಕನ್ನು ಗೆಲ್ಲುವ ರಹಸ್ಯ ಕಂಡುಕೊಂಡರು 

ಟಿಪಿಕಲ್‌ ಭಾರತೀಯ: ಪ್ರೊಫೆಸರ್‌ ಎಸ್.ವಿ. ಪರಮೇಶ್ವರ ಭಟ್ಟರು ಟಿಪಿಕಲ್‌ ಭಾರತೀಯರು. ಅವರು ಕರ್ಮಸಿದ್ಧಾಂತದಲ್ಲಿ ಎಷ್ಟು ನಂಬಿಕೆಯನ್ನು ಇಡುತ್ತಾರೆಯೋ ಅಷ್ಟೇ ಪುರುಷ ಪ್ರಯತ್ನದಲ್ಲಿ ಮತ್ತು ದೈವ ಕಾರುಣ್ಯದಲ್ಲಿಯೂ ನಂಬಿಕೆ ಇಡುತ್ತಾರೆ. ಇರುವುದನ್ನು ಇರುವ ಹಾಗೆ ಮೊದಲು ಸ್ವೀಕರಿಸಿ ಇರುವ ಪರಿಸ್ಥಿತಿಯನ್ನು “ಪುರುಷ ಪ್ರಯತ್ನ”ದ ಮೂಲಕ ಸಂತೋಷದ ಭಾವನ್ನಾಗಿ ರೂಪಾಂತರಿಸಿಕೊಳ್ಳುತ್ತಾರೆ. ಅದನ್ನೇ ದೈವಕಾರುಣ್ಯ ಎಂದು ಭಾವಿಸುತ್ತಾರೆ. ಅದೇ ಅವರ ಮತ್ತು ಎಲ್ಲರ ಬದುಕಿನ ಗೆಲುವಿನ ಗುಟ್ಟು, “ವರ್ಣರಂಜಿತ ಇಂದ್ರಚಾಪದ ಸೊಗಸಿನ ರಟ್ಟು”!

ವೈಯಕ್ತಿಕ ಕೆಲವು ಮಾಹಿತಿಗಳು: 1914ರ ಫೆಬ್ರುವರಿ 8ರಂದು ಶಿವಮೊಗ್ಗ ಜಿಲ್ಲೆಯ ಶೃಂಗೇರಿ ವಿದ್ಯಾರಣ್ಯಪುರದಲ್ಲಿ ಸದಾಶಿವರಾಯರು ಮತ್ತು ಲಕ್ಷ್ಮೀಯವರ ಪುತ್ರರಾಗಿ ಜನಿಸಿದ ಪರಮೇಶ್ವರ ಭಟ್ಟರು ಪ್ರೊ. ಎಸ್‌.ವಿ.ಪಿ. ಎಂದೇ ಖ್ಯಾತರಾಗಿದ್ದರು. ತೀರ್ಥಹಳ್ಳಿಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ಪರಮೇಶ್ವರಭಟ್ಟರು ಬೆಂಗಳೂರಿನಲ್ಲಿ ಎಂ.ಎ ಪದವಿ ಪಡೆದರು. ಬಳಿಕ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ನಂತರ ವಿಭಾಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಭಟ್ಟರು 60ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಕವನ ಸಂಕಲನಗಳು: ರಾಗಿಣಿ 1940  ಗಗನಚುಕ್ಕಿ 1946 ಅಂಚೆಯ ಪೆಟ್ಟಿಗೆ 1965 ಇಂದ್ರಗೋಫ 1970 ಸಂಜೆ ಮಲ್ಲಿಗೆ 1990 ಹನಾರ(ನೀಳ್ಗವನ)

ಏಳೆ: ತುಂಬೆ ಹೂವು 1968  ತ್ರಿಪದಿ:  ಸುರಗಿ ಸುರಹೊನ್ನೆ 1967 ಸಾಂಗತ್ಯ: ಇಂದ್ರಚಾಪ 1965 ಚಂದ್ರವೀಧಿ 1966 ಕೃಷ್ಣಮೇಘ 1970  ಚಿತ್ರಪಥೆ 1972 ಮಳೆಬಿಲ್ಲು 1995 ವಚನ: ಉಪ್ಪುಕಡಲು 1970  ಪಾಮರ 1974  ಉಂಬರ 1980

ಗದ್ಯ ಸಾಹಿತ್ಯ: ಅಕ್ಕಮಹಾದೇವಿ 1941 ಭಾವಗೀತೆ 1956 ಸೀಳುನೋಟ 1963 ಭಾಷಣಗಳು 1970 ಲೇಖನಗಳು 1971 ಮುನ್ನುಡಿಗಳು 1972 ಕಾಳಿದಾಸನ ಕೃತಿಗಳು 1990 ಬದುಕು ಬೆಳಕು 1996  ರಸ ಋಷಿ ಕುವೆಂಪು 2001 ಕಣ್ಣಾಮುಚ್ಚಾಲೆ, ಮೊದಲಾದವು. 

ಅನುವಾದ ಗ್ರಂಥಗಳು: ಕನ್ನಡ ಕಾಳಿದಾಸ ಮಹಾಸಂಪುಟ, ಕನ್ನಡ ಬುದ್ಧ ಚರಿತೆ, ಕನ್ನಡ ಅಮರ ಶತಕ, ಕನ್ನಡ ಕವಿ ಕೌಮುದಿ, ಕನ್ನಡ ಭಾಸ ಮಹಾಸಂಪುಟ, ಕನ್ನಡ ಗಾಥಾಸಪ್ತಶತಿ, ಕನ್ನಡ ಭರ್ತೃಹರಿಯ ಶತಕತ್ರಯ, ಕನ್ನಡ ಗೀತ ಗೋವಿಂದ, ಕನ್ನಡ ಹರ್ಷ ಮಹಾಸಂಪುಟ.

ವಿಮರ್ಶೆಗಳು: ರಸಋಷಿ ಕುವೆಂಪು, ಬದುಕು-ಬೆಳಕು ಸ್ಮೃತಿಗಳು 

ಸಂಪಾದಿತ ಕೃತಿಗಳು: ಮುದ್ದಣನ ಶ್ರೀರಾಮ ಪಟ್ಟಾಭಿಷೇಕಂ, ಅದ್ಭುತ ರಾಮಾಯಣ..

ಪ್ರಶಸ್ತಿಗಳು: ಪರಮೇಶ್ವರಭಟ್ಟರ ಸಾಹಿತ್ಯ ಕ್ಷೇತ್ರದ ಕೊಡುಗೆಗೆ 1970ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರ, 1997ರಲ್ಲಿ ಚಾವುಂಡರಾಯ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಪ್ರಶಸ್ತಿ, 1970ರಲ್ಲಿ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, 89-90ರ ಸಾಲಿನಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ದೊರೆತಿದ್ದು, ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವವನ್ನು ಹೊಂದಿದ್ದರು.

 -ಪದ್ಮಿನಿ ಹೆಗಡೆ

4 Responses

  1. ನಯನ ಬಜಕೂಡ್ಲು says:

    ಸಮಗ್ರ ಮಾಹಿತಿಗಳನ್ನ ಒಳಗೊಂಡ ವ್ಯಕ್ತಿ ಪರಿಚಯ

  2. ಅಬ್ಬಾ…ಉತ್ತಮ ಮಾಹಿತಿಯನ್ನು ಒಳಗೊಂಡ ವ್ಯಕ್ತಿ ಪರಿಚಯ. ಧನ್ಯವಾದಗಳು ಮೇಡಂ…

  3. ಶಂಕರಿ ಶರ್ಮ says:

    ಪ್ರಖ್ಯಾತ ಲೇಖರಾದ ಪ್ರೊ: ಎಸ್.ವಿ. ಪರಮೇಶ್ವರ ಭಟ್ಟರ ಸಮಗ್ರ ಕೃತಿಗಳ ಪರಿಚಯದ ಜೊತೆಗೆ ಅವರನ್ನೂ ಪರಿಚಯಿಸಿದ ಪ್ರಬುದ್ಧ ಲೇಖನ.

  4. Padmini Hegde says:

    ಪ್ರೀತಿಯಿಂದ ಪ್ರಕಟಿಸಿದ ಹೇಮಮಾಲಾ ಮೇಡಂಗೆ, ಫ್ರೀತಿಯಿಂದ ಆಸ್ವಾದಿಸಿದ ನಯನ ಬಜಕೂಡ್ಲು ಮೇಡಂಗೆ, ಬಿ.ಆರ್.‌ ನಾಗರತ್ನ ಮೇಡಂಗೆ, ಶಂಕರಿ ಶರ್ಮ ಮೇಡಂಗೆ ಅನಾಮಿಕ ಓದುಗರಿಗೆ ಹೃತ್ಪೂರ್ವಕ ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: