ಪಿಂಕ್ ರಿಕ್ಷಾ- ಹೆಣ್ಣಿಗೆ ಶ್ರೀರಕ್ಷೆ
ಇತ್ತೀಚೆಗೆ ಗುಜರಾತಿನ ಅಹಮದಾಬಾದಿನಲ್ಲಿ ನಡೆದ ಭಾರತೀಯ ವಿಜ್ಞಾನ ಸಮ್ಮೇಳನದಲ್ಲಿ ಭಾಗವಹಿಸುವ ಸದವಕಾಶ ನನ್ನದಾಯಿತು. ಈ ಸಂದರ್ಭದಲ್ಲಿ ಗುಜರಾತಿನ ನರ್ಮದಾ ಜಿಲ್ಲೆಯ ಏಕತಾ ನಗರದಲ್ಲಿರುವ ಸರ್ದಾರ್ ವಲ್ಲಭ ಭಾಯಿ ಪಟೇಲರ 182 ಮೀಟರ್ ಎತ್ತರದ ಮೂರ್ತಿಯನ್ನು ಸಂದರ್ಶಿಸಲೆಂದು ಹೋಗಿದ್ದಾಗ, ಅಲ್ಲಿ ಸಾಲಾಗಿ ನಿಂತಿದ್ದ ಕೇವಲ ಮಹಿಳೆಯರೇ ಚಲಾಯಿಸುವ ಗುಲಾಬಿ ರಿಕ್ಷಾಗಳು ಮನ ಸೆಳೆದವು. ಆತ್ಮನಿರ್ಭರ ಭಾರತವನ್ನು ಪ್ರತಿನಿಧಿಸುವ, ಕಣ್ಣುಗಳಲ್ಲಿ ಆತ್ಮವಿಶ್ವಾಸ ತುಂಬಿಕೊಂಡ ಈ ಮಹಿಳೆಯರನ್ನು ಕಂಡಾಗ ಮನಸ್ಸಿಗೆ ಖುಷಿ ಅನ್ನಿಸಿತು. ರಿಕ್ಷಾ ಚಾಲನೆಯ ತರಬೇತಿ ನೀಡಿ, ಅನೇಕ ಮಹಿಳೆಯರಿಗೆ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿರುವ ಅಲ್ಲಿನ ಸರಕಾರದ ಈ ನಡೆ ಅನುಕರಣೀಯ.ಬುಡಕಟ್ಟು ಜನಾಂಗಕ್ಕೆ ಸೇರಿದ ಹಲವು ಮಹಿಳೆಯರು ಕೂಡಾ ರಿಕ್ಷಾ ಚಾಲಕಿಯರಾಗಿ ದುಡಿಯುತ್ತಿರುವುದು ನಿಜವಾಗಿಯೂ ಸಂತಸದ ವಿಷಯ. ಈ ಗುಲಾಬಿ ರಿಕ್ಷಾಗಳು- ಇ-ರಿಕ್ಷಾಗಳು ಅಂದರೆ ವಿದ್ಯುಚ್ಛಕ್ತಿ ಚಾಲಿತ ರಿಕ್ಷಾಗಳು. ಈ ರಿಕ್ಷಾಗಳಿಗೆ ಒಂದು ದಿನಕ್ಕೆ 5 ರಿಂದ 6 ಯೂನಿಟ್ ವಿದ್ಯುತ್ ಸಾಕು. ಘಂಟೆಗೆ 100ರಿಂದ 120 ಕಿಲೋಮೀಟರ್ ದೂರ ಕ್ರಮಿಸುವ ಸಾಮರ್ಥ್ಯ ಹೊಂದಿವೆ. ಈ ಇ- ರಿಕ್ಷಾಗಳಲ್ಲಿ ಜಿಪಿಎಸ್ ತಂತ್ರಜ್ಞಾನವನ್ನುಹಾಗೆಯೇ ಪ್ಯಾನಿಕ್ ಬಟನ್ ಗಳನ್ನು ಅಳವಡಿಸಲಾಗಿದೆ.ಈ ಇ-ರಿಕ್ಷಾಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಜಾಲತಾಣವನ್ನು ಜಾಲಾಡಿಸಿದಾಗ ದೊರೆತ ಮಾಹಿತಿಗಳ ಸಂಕ್ಷಿಪ್ತರೂಪವೇ ಈ ಕಿರುಲೇಖನ.
ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರವಾಗಿಯೇ ಇರುವುದು ನಮ್ಮ ಪ್ರಜಾಪ್ರಭುತ್ವ.ಮಹಿಳೆಯರ ಸುರಕ್ಷಿತ ಪ್ರಯಾಣಕ್ಕಾಗಿ ಭಾರತ ಸರಕಾರವು ಕೈಗೊಂಡ ಯೋಜನೆಗಳಲ್ಲೊಂದು ಈ ಗುಲಾಬಿ ರಿಕ್ಷಾಗಳ ಪರಿಕಲ್ಪನೆ. ಮಹಿಳೆಯರಿಂದ, ಮಹಿಳೆಯರಿಗಾಗಿ, ಮಹಿಳೆಯರಿಗೋಸ್ಕರ ಗುಲಾಬಿ ಬಣ್ಣದ ಇ- ರಿಕ್ಷಾಗಳು. ಈ ಇ-ರಿಕ್ಷಾಗಳ ಸಾರಥಿಯರು ಮಹಿಳೆಯರೇ, ಯಾತ್ರಿಕರು ಮಹಿಳೆಯರೇ. ಆತ್ಮವಿಶ್ವಾಸದ ಮುಗುಳುನಗೆ ಈ ಮಹಿಳೆಯರ ಮುಖದಲ್ಲಿ. ಮಹಿಳಾ ಸಬಲೀಕರಣ/ಸಶಕ್ತೀಕರಣ ಕೇವಲ ಪುಸ್ತಕಗಳ ಸಾಲುಗಳಲ್ಲಿ, ಭಾಷಣಗಳ ಸಾಲುಗಳಾಗಿ ಉಳಿದಿಲ್ಲ. ಮಹಿಳಾ ಸಬಲೀಕರಣ, ಮಹಿಳೆಯರ ಸಂರಕ್ಷಣೆ ಆದ್ಯ ಕರ್ತವ್ಯವೆಂದು ಮನಗಂಡು ನಮ್ಮ ದೇಶದ ಹಲವು ರಾಜ್ಯಗಳಲ್ಲಿ ಪ್ರಚಲಿತವಿರುವ ವ್ಯವಸ್ಠೆಯೇ ಈ ಗುಲಾಬಿ ರಿಕ್ಷಾಗಳು.
ಮಹಿಳಾ ಪ್ರಯಾಣಿಕರ ಮೇಲೆ ಟ್ಯಾಕ್ಸಿ ಚಾಲಕರು ಎಸಗುತ್ತಿದ್ದ ಲೈಂಗಿಕ ದೌರ್ಜನ್ಯವನ್ನು ಮನಗಂಡು, 2010 ರಲ್ಲಿಯೇ ಗುಲಾಬಿ ರಿಕ್ಷಾಗಳನ್ನು ಗುರ್ಗಾಂವ್ ನಲ್ಲಿ ಪ್ರಾರಂಭಿಸಿದ್ದರೂ ಉತ್ತಮ ಸ್ಪಂದನೆ ಸಿಗದೆ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿರಲಿಲ್ಲ.2012 ರಲ್ಲಿ ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಇಡಿಯ ದೇಶವನ್ನೇ ಬೆಚ್ಚಿ ಬೀಳಿಸಿತೆಂದರೆ ಅತಿಶಯೋಕ್ತಿಯಾಗಲಾರದು. ಗುಲಾಬಿ ರಿಕ್ಷಾಗಳನ್ನು ಮೊತ್ತಮೊದಲಾಗಿರಸ್ತೆಗಳಿಗೆ ಇಳಿಯುವಂತೆ ಮಾಡಿದ್ದು ಜಾರ್ಖಂಡಿನ ಪೋಲೀಸರು. ನೋಡಿದ ಕೂಡಲೇ ಗುರುತು ಹಿಡಿಯಲು ಸಾಧ್ಯವಾಗುವಂತಹ ಗುಲಾಬಿ ಬಣ್ಣದ ಮೇಲ್ಮೈಯುಳ್ಳ ರಿಕ್ಷಾಗಳನ್ನು ಪರಿಚಯಿಸುವ ಸಂಕಲ್ಪವು ಕಾರ್ಯರೂಪಕ್ಕೆ ಬಂದದ್ದು ರಾಂಚಿಯಲ್ಲಿ. ಅದೂ 2013 ರಲ್ಲಿಯೇ. ಈ ರಿಕ್ಷಾಗಳಲ್ಲಿ ಜಿಪಿಎಸ್ ತಂತ್ರಜ್ಞಾನ ಹಾಗೂ ಪ್ಯಾನಿಕ್ ಬಟನ್ ನ್ನು ಅಳವಡಿಸಲಾಯಿತು. ಮಹಿಳಾ ರಿಕ್ಷಾ ಚಾಲಕಿಯರು ನಿರೀಕ್ಷಿತ ಪ್ರಮಾಣದಲ್ಲಿ ಮುಂದೆ ಬರದ ಕಾರಣ, ಸರ್ಕಾರ ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸುವ ಪುರುಷ ಚಾಲಕರಿಗೆ ಗುಲಾಬಿ ರಿಕ್ಷಾಗಳಲ್ಲಿ ಮಹಿಳಾ ಪ್ರಯಾಣಿಕರನ್ನು ಕರೆದೊಯ್ಯಲು ಪರವಾನಿಗೆ ನೀಡಲಾಯಿತು. ಸಾಕಷ್ಟು ಮಹಿಳಾ ಪ್ರಯಾಣಿಕರ ಅಲಭ್ಯತೆಯಿಂದ ಗುಲಾಬಿ ಆಟೋರಿಕ್ಷಾಗಳು ಫಲಕಾರಿಯಾಗಲಿಲ್ಲ.
ವೀ ಕೇರ್- ನಿಮ್ಮ ಕಾಳಜಿ ನಮಗಿದೆ ಅನ್ನುವ ಉದ್ದೇಶದಿಂದ ಭುವನೇಶ್ವರದಲ್ಲಿ ಪಿಂಕ್ ರಿಕ್ಷಾಗಳನ್ನು ಪುರುಷ ಚಾಲಕರನ್ನಿಟ್ಟುಕೊಂಡೇ ಆರಂಭಿಸಲಾಗಿತ್ತು.2017 ರಲ್ಲಿ ಈ ಗುಲಾಬಿ ರಿಕ್ಷಾಗಳುಗುಜರಾತಿನ ಸೂರತ್ ನಲ್ಲಿ ರಸ್ತೆಗಿಳಿದವು. ಮಹಿಳಾ ಸಬಲೀಕರಣದ ಭಾಗವಾಗಿ, ಮಹಿಳೆಯರಿಂದ ಮಹಿಳೆಯರಿಗಾಗಿ ಪ್ರಾರಂಭವಾದ ಈ ಯೋಜನೆಯಲ್ಲಿ ಮಹಿಳಾ ಚಾಲಕರಿಗೆ ರಿಕ್ಷಾ ಖರೀದಿಗಾಗಿ ಕೇವಲ 7 ಶೇಕಡಾ ಬಡ್ಡಿದರದಲ್ಲಿ ಸಾಲ ಹಾಗೂ ಕೇಂದ್ರ ಸರಕಾರದಿಂದ 25 ಶೇಕಡಾ ಸಬ್ಸಿಡಿಯನ್ನು ನೀಡಲಾಯಿತು. ಈ ಗುಲಾಬಿ ರಿಕ್ಷಾಗಳು ಅಸ್ಸಾಮ್, ದೆಹಲಿ, ಒಡಿಶಾ, ಗೋವಾ, ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ಕೂಡಾ ಪರಿಚಯಿಸಲ್ಪಟ್ಟಿವೆ.ಮಹಾರಾಷ್ಟ್ರ ಸರಕಾರವು 2024 ರ ಜನವರಿ ತಿಂಗಳಿನಲ್ಲಿ ಹತ್ತು ಮೆಟ್ರೋಗಳಲ್ಲಿ ಗುಲಾಬಿ ರಿಕ್ಷಾಗಳನ್ನು ಅನುಷ್ಠಾನಕ್ಕೆ ತರುವ ಬಗ್ಗೆ ನಿರ್ಧರಿಸಿದೆ.
ಮನೆಯಿಂದ ಹೊರಗೆ ಬಂದು, ಪಿಂಕ್ ರಿಕ್ಷಾಗಳಲ್ಲಿ ಚಾಲಕಿಯರಾಗಿ, ತುಂಬು ಆತ್ಮವಿಶ್ವಾಸದ ಜೊತೆಗೆ ಆರ್ಥಿಕ ಸಬಲತೆ ಹೊಂದಿ ಬದುಕು ಕಟ್ಟಿಕೊಂಡ ಎಲ್ಲಾ ಸಹೋದರಿಯರಿಗೆ ಶುಭಾಶಯ. (ಸಂಗ್ರಹ)
–ಡಾ. ಕೃಷ್ಣಪ್ರಭ ಎಂ, ಮಂಗಳೂರು
ಅಪರೂಪದ ಮಾಹಿತಿ. ಚೆನ್ನಾಗಿದೆ
ಧನ್ಯವಾದಗಳು ನಯನಾ
ನಮಗೆ ಹೊಸ ವಿಷಯ. ಒಂದೆರಡು ಬಾರಿ ರಿಕ್ಷಾ ಚಾಲಕರು ಜಬರ್ದಸ್ತ್ ಮಾಡಿದಾಗ ಹೆಣ್ಣುಮಕ್ಕಳು ರಿಕ್ಷಾ ಚಲಾಯಿಸಬೇಕಿತ್ತು ಅನಿಸಿದ್ದಿದೆ.
ನಿಜಕ್ಕೂ ಪಿಂಕ್ ರಿಕ್ಷಾ ಮಹಿಳೆಯರಿಗೆ ಸ್ವಂತಕ್ಕೆ ಉದ್ಯೋಗ ಮತ್ತು ಭರವಸೆ ನೀಡಬಲ್ಲ ಗೌರವದ ಕಾಯಕ.
ಮಹಿಳಾ ಸಬಲೀಕರಣದ ಮಾತುಗಳು ಕೇವಲ ಕಡತದಲ್ಲಿ ಉಳಿಯದೇ ಸಾಕಾರಗೊಂಡಿವೆ ಇಲ್ಲಿ. ನಿಜವಾಗಿಯೂ ಸಂತಸವಾಗುತ್ತದೆ
ಚಂದದ. ಮಾಹಿತಿ
ಧನ್ಯವಾದಗಳು
ಉತ್ತಮ ಮಾಹಿತಿ ಯನ್ನು ಒಳಗೊಂಡ ಲೇಖನ ಮೇಡಂ ಚೆನ್ನಾಗಿ ಪಡಿಮೂಡಿದೆ..
ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡಂ
‘ಗುಲಾಬಿ’ಯಂತಹ ಚೆಂದದ ಬರಹ..
ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು
ನಿಮ್ಮ ಲೇಖನದಿಂದಾಗಿ ಮೊತ್ತ ಮೊದಲ ಬಾರಿ ಇ-ಪಿಂಕ್ ರಿಕ್ಷಾ ಬಗ್ಗೆ ತಿಳಿದು ಬಹಳ ಖುಶಿಯಾಯಿತು. ಲೇಖನ ಆತ್ಮೀಯವೆನಿಸಿತು.
ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡಂ
ಮಾಹಿತಿ. ಚೆನ್ನಾಗಿದೆ