ಎಲ್ಲಿಗೆ ಪಯಣ?
ಮನೆಯ ಎಲ್ಲ ಕೆಲಸಗಳನ್ನು ಮುಗಿಸಿ ಮಾರನೆಯ ಬೆಳಗಿನ ಉಪಾಹಾರಕ್ಕೆ ಪರಿಕರಗಳನ್ನು ಅಣಿಮಾಡಿದ್ದರು ಪಾರ್ವತಿ. ನೀರುತುಂಬಿದ ಜಗ್ಗು, ಲೋಟಗಳನ್ನು ಹಿಡಿದು ತಮ್ಮ ರೂಮಿಗೆ ಬಂದರು. ಗಂಡ ಶಿವರಾಮುವಿನ ಸುಳಿವೇ ಇಲ್ಲ. ಇಷ್ಟು ಹೊತ್ತಿನಲ್ಲಿ ಎಲ್ಲಿ ಹೋದರೆಂದುಕೊಳ್ಳುತ್ತಾ ಬಾತ್‌ರೂಮಿನ ಕಡೆ ಕಣ್ಣಾಡಿಸಿದರು.ಊಹುಂ, ಅಲ್ಲಿ ಬಾಗಿಲು ಹೊರಗಿನಿಂದ ಬೋಲ್ಟ್ ಹಾಕಿದೆ. ಹಾಗಾದರೆ ಹಾಲಿನಲ್ಲಿ ಟಿ.ವಿ.ನೋಡುತ್ತಿದ್ದಾರಾ? ಅಲ್ಲಿ ಮಕ್ಕಳು ಸೊಸೆಯಂದಿರು ಸೇರಿ ಏನೊ ಮಾತುಕತೆಯಲ್ಲಿ ತೊಡಗಿರುವಂತಿದೆ. ಅವರುಗಳಿರುವಾಗ ಅವರ ಮಧ್ಯೆ ಅನಗತ್ಯವಾಗಿ ಮೂಗುತೂರಿಸುವ ಅಭ್ಯಾಸ ಅವರಿಗಿಲ್ಲ. ಅವರೇನಾದರೂ ಕರೆದರಷ್ಟೇ ಹೋಗುತ್ತಾರೆ. ಹಾಗಿದ್ದರೆ ಹೊರಗಿನ ಅಂಗಳದಲ್ಲಿ ಅಡ್ಡಾಡುತ್ತಿರಬಹುದೇ? ಹಿರಿಮಗ ಗೌತಮ್ ಆಗಲೇ ಮುಂದಿನ ಗೇಟಿಗೆ ಬೀಗಹಾಕಿ ಬಾಗಿಲನ್ನು ಭದ್ರಪಡಿಸಿ ಬಂದದ್ದನ್ನು ನಾನೇ ನೊಡಿದೆ.ಹೀಗೇ ಯೋಚಿಸುತ್ತಾ ಅತ್ತಿತ್ತ ದೃಷ್ಟಿ ಹರಿಸಿದರು.ತಮ್ಮ ರೂಮಿನ ಇನ್ನೊಂದು ಕಡೆಯ ಬಾಗಿಲು ಸ್ವಲ್ಪ ತೆರೆದಿದ್ದುದು ಕಾಣಿಸಿತು. ಹೊರಗಿದ್ದ ಜಾಗದಲ್ಲಿ ಶಥಪಥ ತಿರುಗುತ್ತಿದ್ದ ಗಂಡನನ್ನು ಕಂಡರು. ಅರೇ! ಇವರಿಗೇನಾಯಿತು ಹೊರಗಿನ ಲೈಟು ಹಾಕಿಕೊಳ್ಳದೆ ಹೀಗೆ !ಆಗಲೇ ರಾತ್ರಿ ಹನ್ನೊಂದರ ಮೇಲಾಗಿದೆ.ಎಂದುಕೊಂಡು ರೂಮಿನ ಮುಂಭಾಗಿಲನ್ನು ಭದ್ರಪಡಿಸಿ ಅವರತ್ತ ನಡೆದು ಲೈಟನ್ನು ಹಾಕಿದರು.ಓರೆ ಮಾಡಿದ್ದ ಬಾಗಿಲನ್ನು ಪೂರ್ತಿ ತೆರೆದು ಹೊರಾಂಗಣಕ್ಕೆ ಕಾಲಿಟ್ಟರು.
ಹತ್ತಿದ ಬೆಳಕು, ಹೆಜ್ಜೆ ಸದ್ದು ಬಂದವರ್‍ಯಾರೆಂದು ತಿಳಿಯಿತು ಶಿವರಾಮುವಿಗೆ. ”ಪಾರೂ ಕೆಲಸವೆಲ್ಲ ಮುಗಿಯಿತಾ?ನಿನಗೂ ಸಾಕಾಗಿರಬಹುದು.ಮಲಗು, ನಾನು ಇನ್ನೂ ಸ್ವಲ್ಪ ಹೊತ್ತು ಅಡ್ಡಾಡಿ ಬರುತ್ತೇನೆ” ಎಂದರು.
ಗಂಡನ ಮಾತನ್ನು ಕೇಳಿದ ಪಾರ್ವತಿ ”ಹೂ..ನೀವು ಹೇಳಿದಂತೆ ಬೆಳಗಿನಿಂದ ಬಿಡುವಿಲ್ಲದ ಕೆಲಸಗಳಿಂದ ಆಯಾಸವೇನೊ ಆಗಿದೆ.ಆದರೆ ನಿದ್ರೆ ಬರುವ ಸೂಚನೆ ಕಂಡುಬರುತ್ತಿಲ್ಲ. ಅಲ್ಲಾ ನಮ್ಮ ಮಕ್ಕಳ ಆಲೋಚನೆ, ಚಿಂತನೆ ಎತ್ತ ಸಾಗಿದೆ?ಇದಕ್ಕೋಸ್ಕರ ನಾವು ನಮ್ಮ ಹಿರಿಯರಿಂದ ದೊರಕಿದ್ದಂತಹ ಸಕಲ ಸವಲತ್ತುಗಳನ್ನೂ ಬಿಟ್ಟು ನಗರಕ್ಕೆ ಬಂದು ಮಕ್ಕಳನ್ನು ಬೆಳೆಸಿ, ಓದಿಸಿ, ಅವರಿಗೆ ನೌಕರಿ ಸಿಕ್ಕಿದಮೇಲೆ ಜೊತೆಗಾತಿಯರನ್ನು ತಂದು ಅವರಿಗೆ ವಿವಾಹ ಮಾಡಿಸಿ, ಅವರಿಗಾದ ಮಕ್ಕಳನ್ನೂ ನಮ್ಮ ಮಡಿಲಿನಲ್ಲಿ ಹಾಕಿಕೊಂಡು ಬೆಳೆಸಿದೆವು.ಈಗ ನೋಡಿದರೆ ನಮ್ಮನ್ನು ಗಂಟುಮೂಟೆ ಕಟ್ಟಿ ಹೊರಡಲು ಸಿದ್ಧರಾಗಿ.ನಾವೆಲ್ಲ ಏರ್ಪಾಡುಗಳನ್ನು ಮಾಡಿದ್ದೇವೆ. ಅಲ್ಲಿ ನೀವು ಅರಾಮವಾಗಿ ಇರಬಹುದು ಎಂದು ಹೇಳುತ್ತಿದ್ದಾರೆ.ಹೋಗಲಿ ಇವರು ಹೇಳಿದಂತೆ ಕೇಳುವುದು ಬೇಡ ನಾವು ಬದುಕಿದ್ದ ನಮ್ಮ ಕಿತ್ತನಳ್ಳಿಯ ಮನೆಗೆ ಹಿಂತಿರುಗಿ ನಮಗೆ ತಿಳಿದಂತೆ ಇರುವಷ್ಟು ದಿವಸ ಕಾಲಹಾಕೋಣ ಎಂದು ಅವರಿಗೆ ಹೇಳಿ ಅಂದರೆ ನೀವು ಅತಿಯಾದ ಸ್ವಾಭಿಮಾನಿ.ಬಾಯನ್ನು ಬಿಮ್ಮಗೆ ಬಿಗಿದುಕೊಂಡಿದ್ದೀರ.ನಾನು ಏನು ಮಾಡಿ ಸಾಯಲಿ.ನಮ್ಮ ಮಗಳು ನಾನೇ ಹಡೆದದ್ದು, ಮದುವೆ ಮಾಡಿಕೊಟ್ಟದ್ದೇ ಆಯ್ತು, ಒಂದು ದಿನಕ್ಕಾದರೂ ಅವಳ ಕಷ್ಟಸುಖದಲ್ಲಿ ಭಾಗಿಯಾಗಲೇ ಇಲ್ಲ. ಏನೋ ಯಾವಾಗಲೋ ಅಪರೂಪಕ್ಕೆ ಇಲ್ಲಿಗೆ ಬಂದಾಗ ಅವಳಿಗೆ ಊಟ ಉಪಚಾರ, ಅದೂ ಸೊಸೆಯಂದಿರ ಕಣ್ಗಾವಲಿನಲ್ಲಿ.ಈಗ ಅವಳ ಮನೆಯಲ್ಲಿದ್ದ ಒಟ್ಟು ಕುಟುಂಬದವರೆಲ್ಲ ಬೇರೆಬೇರೆ ಆಗುತ್ತಿದ್ದಾರೆ. ಅಳಿಯದೇವರಿಗೂ ವರ್ಗಾವಣೆಯಾಗಿದೆಯಂತೆ. ಬೆಂಗಳೂರಿನಲ್ಲಿ ಬೇರೆ ಮನೆಮಾಡಿ ಇಬ್ಬರು ಮಕ್ಕಳವಿದ್ಯಾಭ್ಯಾಸ, ಮನೆಯ ಸಂಸಾರ ನಡೆಸುವುದು, ಅದೂ ಒಬ್ಬರ ದುಡಿಮೆಯಿಂದ ತುಂಬ ಕಷ್ಟವೆಂದು ಪೇಚಾಡಿಕೊಳ್ಳುತ್ತಿದ್ದಳು. ಅವಳನ್ನು ಅನುಕೂಲವಂತರ ಮನೆಗೆ ಕೊಟ್ಟು ಮದುವೆ ಮಾಡೋಣವೆಂದರೆ ನಮ್ಮಲ್ಲಿರುವ ಸಂಪನ್ಮೂಲಗಳ ಮಿತಿಯಲ್ಲಿ ಆಗ ಅದು ಸಾಧ್ಯವಾಗಲಿಲ್ಲ. ಈಗಲಾದರೂ ಅವಳಿಗೆ ಸ್ವಲ್ಪ ಸಹಾಯ ಮಾಡೋಣವೆಂದರೆ ನಮ್ಮಲ್ಲಿರುವ ಅಲ್ಪ ಉಳಿತಾಯದ ಹಣ ನಮ್ಮ ಕೊನೆಯ ಕಾಲದವರೆಗೆ ಆಪದ್ಧನವಾಗಿರಲಿ, ಎಲ್ಲವನ್ನೂ ಖಾಲಿಮಾಡಿ ಬರಿಗೈ ದಾಸರಾಗೋದು ಬೇಡವೆನ್ನುತ್ತೀರಾ. ಇನ್ನು ನನ್ನ ಗಂಡುಮಕ್ಕಳೋ ಅವರ ಹೆಂಡತಿಯರೂ ಕೈತುಂಬ ಸಂಪಾದಿಸುತ್ತಿದ್ದಾರೆ. ಆದರೂ ಇದ್ದೊಬ್ಬ ತಂಗಿಗೆ ಒಂದಿಷ್ಟು ಸಹಾಯ ಮಾಡುವ ಬುದ್ಧಿಬೇಡವೇ? ಇವೆಲ್ಲವನ್ನು ಬಾಯಿಬಿಟ್ಟು ಅವರಿಗೆ ಹೇಳಬೇಕೇ? ” ಎಂದು ಭಾವುಕರಾಗಿ ಉಮ್ಮಳಿಸಿ ಬಂದ ದುಃಖದಿಂದ ಹೊರಗೆ ಸದ್ದಾಗದಂತೆ ತಮ್ಮ ಸೆರಗನ್ನು ಬಾಯಿಗಡ್ಡವಿಟ್ಟು ಬಿಕ್ಕಳಿಸಿದರು.
ಅದುವರೆಗೂ ತುಟಿ ಎರಡು ಮಾಡದೆ ಕೇಳಿಸಿಕೊಳ್ಳುತ್ತಿದ್ದ ಶಿವರಾಮು ಹೆಂಡತಿಯ ಭುಜವನ್ನು ಹಿಡಿದು ಹಾಗೇ ಹೊರಾಂಗಣದಿಂದ ನಿಧಾನವಾಗಿ ನಡೆಸುತ್ತಾ ರೂಮಿನೊಳಕ್ಕೆ ಕರೆತಂದರು.ಬಾಗಿಲನ್ನು ಭದ್ರಪಡಿಸಿ ಅವರನ್ನು ಮಂಚದಮೇಲೆ ಕೂಡ್ರಿಸಿ ತಾವೂ ಅವರಿಗೆದುರಾಗಿ ಕುಳಿತರು.ಹೆಂಡತಿಯ ಆಂತರ್ಯದಲ್ಲಿ ಹುದುಗಿದ್ದ ದುಮ್ಮಾನ ಕಣ್ಣೀರಾಗಿ ಹರಿಯುತ್ತಿದ್ದುದನ್ನು ತಡೆಯುವ ಪ್ರಯತ್ನ ಮಾಡದೆ ಮಗುವನ್ನು ರಮಿಸುವಂತೆ ಮೃದುವಾಗಿ ಬುಜವನ್ನು ತಟ್ಟುತ್ತಾ ಅವರನ್ನೇ ನೋಡುತ್ತಿದ್ದರು. ಹಾಗೇ ಮನಸ್ಸಿನೊಳಗೆ ಅಡಗಿ ಕುಳಿತಿದ್ದ ತಮ್ಮ ನೆನಪಿನ ಸುರುಳಿಯನ್ನು ಬಿಚ್ಚಿಮರುದರ್ಶನ ಮಾಡತೊಡಗಿದರು.
ಶಿವರಾಮು ಬೆಂಗಳೂರಿನ ಸಮೀಪದಲ್ಲಿ ಸುಮಾರು ಹನ್ನೆರಡು ಕಿ.ಮೀ. ದೂರದಲ್ಲಿದ್ದ ಕಿತ್ತನಹಳ್ಳಿಯ ರೈತಾಪಿ ಕುಟುಂಬದ ವೀರಣ್ಣ, ಚನ್ನಮ್ಮ ದಂಪತಿಗಳ ಏಕಮಾತ್ರ ಸಂತಾನ. ವೀರಣ್ಣನವರಿಗೆ ಹಿರಿಯರಿಂದ ವಂಶಪಾರಂಪರ್ಯವಾಗಿ ನಾಲ್ಕು ಎಕರೆ ಭೂಮಿ ಮತ್ತು ಒಂದು ಮನೆಯನ್ನು ಹೊಂದಿದ್ದರು. ಅವರು ತಮ್ಮ ಕುಲಕಸುಬಾದ ವ್ಯವಸಾಯವನ್ನೇ ಮುಂದುವರಿಸಿಕೊಂಡು ಬಂದಿದ್ದರು. ಹೇಗಾದರೂ ತಮ್ಮ ಮಗನನ್ನು ಓದಿಸಿ ವಿದ್ಯಾವಂತನನ್ನಾಗಿ ಮಾಡಿ ಅವನು ಸರ್ಕಾರಿ ನೌಕರಿ ಮಾಡುವಂತಾಗಬೇಕೆಂಬ ಅಭಿಲಾಷೆಯಿಂದ ಅಲ್ಲೇ ಶಾಲೆಗೆ ಸೇರಿಸಿದ್ದರು. ಶಿವರಾಮು ಪ್ರಾಥಮಿಕ ಶಿಕ್ಷಣ ಪೂರೈಸಿದ ನಂತರ ಊರಿನಿಂದಲೇ ಬೆಂಗಳೂರಿಗೆ ಓಡಾಡಿಕೊಂಡೇ ಬಿ.ಕಾಂ., ಪದವಿ ಗಳಿಸಿದರು.
ನಂತರ ಹಲವಾರು ಕಡೆಗಳಲ್ಲಿ ಕೆಲಸಕ್ಕಾಗಿ ಪ್ರಯತ್ನಿಸಿದರು.ಸರಿಯಾದ ಅವಕಾಶ ಸಿಗಲಿಲ್ಲ. ಅಪ್ಪನೊಡನೆ ಬೇಸಾಯಕ್ಕೆ ಇಳಿದರು.ಜೊತೆಗೆ ಸಣ್ಣ ಉಳಿತಾಯ ಮತ್ತು ಜೀವವಿಮಾ ಏಜೆಂಟರಾಗಿ ನೋಂದಣಿ ಮಾಡಿಸಿಕೊಂಡು ಸ್ವಲ್ಪ ಹೆಚ್ಚಿನ ಸಂಪಾದನೆಗೂ ಪ್ರಯತ್ನಿಸಿದರು. ಇದರಿಂದಾಗಿ ಅವರಿಗೆ ಬೆಂಗಳೂರಿನಲ್ಲಿ ಅನೇಕ ಜನರ ಪರಿಚಯವಾಯಿತು.ಅವರಲ್ಲೊಬ್ಬರು ಪರಿಚಿತರಾದ ರಾಮಚಂದ್ರ ಎನ್ನುವ ಅಡ್ವೋಕೇಟ್. ಅವರ ಕಛೇರಿಯಲ್ಲಿಯೇ ಶಿವರಾಮುವಿಗೆ ಅಕೌಂಟೆಂಟಾಗಿ ಕೆಲಸ ಸಿಕ್ಕಿತು. ಸ್ವಲ್ಪ ಮಟ್ಟಿಗೆ ಇದರಿಂದ ಆರ್ಥಿಕ ಭದ್ರತೆ ಉಂಟಾಯಿತು.ಪೋಷಕರು ಅವರಿಗೆ ಪಾರ್ವತಿಯೆಂಬ ವಧುವನ್ನು ಮದುವೆ ಮಾಡಿಸಿ ಸಂಸಾರವಂದಿಗರನ್ನಾಗಿ ಮಾಡಿದರು.ಅವರಿಗೆ ಮೊದಲ ಮಗು ಗಂಡಾಯಿತು.ಗೌತಮನೆಂದು ಹೆಸರಿಟ್ದರು.ಎರಡನೆಯ ಹೆರಿಗೆಯಲ್ಲಿ ಪಾರ್ವತಿ ಅವಳಿ ಮಕ್ಕಳಿಗೆ ಜನ್ಮ ಕೊಟ್ಟಳು.ಒಂದು ಗಂಡು ಗಂಭೀರ, ಇನ್ನೊಂದು ಹೆಣ್ಣು ಮಗು ಗಗನ. ಮೂರು ಮಕ್ಕಳ ಜವಾಬ್ದಾರಿಯ ಜೊತೆ ಶಿವರಾಮು ತಮ್ಮ ನೌಕರಿ, ಊರಿನಲ್ಲಿ ತಂದೆಗೆ ಸಾಧ್ಯವಾದ ಸಹಾಯ, ಜಮೀನಿನ ನಿಗಾ ಎಲ್ಲವನ್ನೂ ನಿಭಾಯಿಸುತ್ತಿದ್ದರು.ಅವರ ಮಕ್ಕಳೂ ಜವಾಬ್ದಾರಿ ಅರಿತವರಂತೆ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದರು. ಹೆಚ್ಚಿನ ತರಗತಿಗಳಿಗೆ ಹೋದಂತೆ ಅವರಿಗೆ ಪ್ರತಿದಿನ ಬೆಂಗಳೂರಿಗೆ ಹೋಗಿಬರಬೇಕಾದ ಅನವಾರ್ಯತೆಯಿತ್ತು. ಹಿರಿಯ ಮಗ ಗೌತಮ್ ಪಿ.ಯು.ಸಿ., ಮುಗಿಸಿ ಇಂಜಿನಿಯರಿಂಗ್ ಸೇರಬೇಕೆನ್ನುವಹಂಬಲ ಹೊಂದಿದ್ದ. ಅಷ್ಟರಲ್ಲಿ ಶಿವರಾಮುವಿನ ಹಿರಿಯರು ದೈವಾಧೀನರಾದ್ದರಿಂದ ಮಗ ”ಅಪ್ಪಾ ಹೀಗೆ ಎಲ್ಲರೂ ಹಳ್ಳಿಯಿಂದ ನಗರಕ್ಕೆ ದಿನಾ ಓಡಾಡುವ ಬದಲು ನಮ್ಮ ಜಮೀನನ್ನು ಯಾರಿಗಾದರೂ ಪಾಲಿಗೆ ಕೊಟ್ಟು, ಮನೆಯನ್ನೂ ಬಾಡಿಗೆಗೆ ನೀಡಿ ಬೆಂಗಳೂರಿನಲ್ಲೇ ವಾಸವಿದ್ದರೆ ಓದುವುದಕ್ಕೂ ನಿಮ್ಮ ಕೆಲಸಕ್ಕೂ ಅನುಕೂಲ. ಆದ್ದರಿಂದ ಬೆಂಗಳೂರಿನಲ್ಲೇ ವಾಸಿಸುವುದೊಳ್ಳೆಯದು” ಎಂದು ಅಭಿಪ್ರಾಯ ವ್ಯಕ್ತಪಡಿಸಿದ.
ಮಕ್ಕಳ ಒತ್ತಾಯವನ್ನು ತಾವು ಕೆಲಸ ಮಾಡುತ್ತಿದ್ದ ಅಡ್ವೋಕೇಟ್ ರಾಮಚಂದ್ರರವರಲ್ಲಿ ಪ್ರಸ್ತಾಪಿಸಿದರು. ಅವರು ”ನಾನು ಕಟ್ಟಿಸಿರುವ ಹೊಸ ಮನೆಗೆ ವಾಸಕ್ಕೆ ಹೋಗುತ್ತಿರುವುದರಿಂದ ನಮ್ಮ ಆಫೀಸಿನ ಕೆಳಹಂತದಲ್ಲಿದ್ದ ಮನೆ ಖಾಲಿಯಾಗುತ್ತದೆ.ಅಲ್ಪಸ್ವಲ್ಪ ದುರಸ್ಥಿ ಮಾಡಿಸಿಕೊಂಡು ನೀವು ಅಲ್ಲಿಯೇ ವಾಸಮಾಡಬಹುದು.ಇದರಿಂದ ನನ್ನ ಆಫೀಸಿಗೇನು ತೊಂದರೆಯಾಗುವುದಿಲ್ಲ. ಜೊತೆಗೆ ನಾನಿಲ್ಲದಿದ್ದರೂ ನನ್ನ ಆಫೀಸಿನ ಆಗುಹೋಗುಗಳನ್ನೂ ನೀವು ಗಮನಿಸಬಹುದಾಗಿದೆ.ಅದಕ್ಕಾಗಿ ನೀವು ಯಾವುದೇ ಬಾಡಿಗೆ ಕೊಡಬೇಕಾಗಿಲ್ಲ” ಎಂದು ಅನುಮತಿ ನೀಡಿದರು.
ಯಾವ ಘಳಿಗೆಯಲ್ಲಿ ಆ ಮನೆಗೆ ಕಾಲಿಟ್ಟರೋ ಶಿವರಾಮು ಕುಟುಂಬಕ್ಕೆ ಎಲ್ಲವೂ ಅನುಕೂಲಕರವಾಯಿತು.ಗಂಡು ಮಕ್ಕಳಿಬ್ಬರೂ ಅಲ್ಲಲ್ಲಿ ಕೆಲವು ಟ್ಯೂಷನ್ ಹೇಳಿ ತಮ್ಮ ಮೇಲಿನ ಖರ್ಚುವೆಚ್ಚಗಳಿಗೆ ದಾರಿಮಾಡಿಕೊಂಡರು.ಓದನ್ನೂ ಮುಂದುವರಿಸಿದರು. ಹಿರಿಯ ಮಗ ಗೌತಮ್ ವನ ಇಷ್ಟದಂತೆಯೇ ಇಂಜಿನಿಯರಾದರೆ, ಕಿರಿಯ ಮಗ ಗಂಭೀರ ಎಂ.ಕಾಂ., ಮಾಡಿ ಬ್ಯಾಂಕಿನಲ್ಲಿ ಅಧಿಕಾರಿಯಾಗಿ ಉದ್ಯೋಗಸ್ಥನಾದ. ಮಗಳು ಗಗನಳಿಗೆ ಪಿ.ಯು.ಸಿ.ಪೂರೈಸುವ ಹೊತ್ತಿಗೆ ಕಂಕಣ ಬಲ ಕೂಡಿಬಂದು ಅವಳಿಗೆ ವಿವಾಹವನ್ನೂ ಮಾಡಿದರು.ಇಬ್ಬರು ಗಂಡು ಮಕ್ಕಳೂ ನೌಕರಿ ಮಾಡುವ ಹೆಣ್ಣುಗಳನ್ನೇ ಆಯ್ಕೆ ಮಾಡಿಕೊಂಡು ಮದುವೆಯಾದರು.ತಂದೆಯವರಿಗೆ ಅಕೌಂಟೆಂಟ್ ನೌಕರಿಯಿಂದ ನಿವೃತ್ತರಾಗುವಂತೆ ಮಾಡಿ ನೆಮ್ಮದಿಯಾಗಿರಲು ಕೋರಿದರು. ಆದರೂ ಶಿವರಾಮು ಸಣ್ಣ ಉಳಿತಾಯ ಮತ್ತು ಜೀವವಿಮಾ ಏಜೆಂಟರ ಕೆಲಸವನ್ನು ಮುಂದುವರಿಸಿಕೊಂಡು ಕಾಲಕಳೆಯುತ್ತಿದ್ದರು.ಅಡ್ವೋಕೇಟ್ ರಾಮಚಂದ್ರರವರು ಆ ಕಟ್ಟಡವನ್ನೇನೂ ಕೂಡಲೇ ಕೆಡವಿ ಹೊಸದಾಗಿ ಕಟ್ಟುವ ಆಲೋಚನೆಯಿಲ್ಲವೆಂದು ಹೇಳಿ ಶಿವರಾಮು ಅಲ್ಲಿಯೇ ವಾಸವಿರಲು ಅನುಮತಿಸಿದರು.
ಶಿವರಾಮು ತಮ್ಮ ಹೆಣ್ಣುಮಗಳ ಮದುವೆ, ಅವಳಿಗೆ ಬಾಣಂತನ, ಗಂಡುಮಕ್ಕಳ ವಿದ್ಯಾಭ್ಯಾಸ, ಅವರ ಮದುವೆ ಎಲ್ಲ ಖರ್ಚುವೆಚ್ಚಗಳನ್ನು ನಿರ್ವಹಿಸಲು ಪೂರ್ವಜರ ಕಿತ್ತನಹಳ್ಳಿಯ ಮನೆ, ಮತ್ತು ಜಮೀನನ್ನು ಬ್ಯಾಂಕಿಗೆ ಅಡಮಾನ ಮಾಡಿ ಸಾಲ ಪಡೆದಿದ್ದರು.ಸಮಯಕ್ಕೆ ಸರಿಯಾಗಿ ಕಂತುಗಳನ್ನು ಕಟ್ಟಲು ಅವರಿಗೆ ಸಾಧ್ಯವಾಗದೇ ಆ ಆಸ್ತಿ ಕ್ಯಬಿಟ್ಟು ಹೋಗುವ ಹಂತಕ್ಕೆ ಬಂದಿತ್ತು.ಶಿವರಾಮು ಮೊದಲಿಂದಲೂ ಅತ್ಯಂತ ಸ್ವಾಭಿಮಾನಿ.ತಮ್ಮ ಮಕ್ಕಳಿಗೆ ತಾವು ಮಾಡಿದ್ದೆಲ್ಲ ತಮ್ಮ ಕರ್ತವ್ಯವಾಗಿತ್ತು.ಈಗ ಮಕ್ಕಳು ದುಡಿಯುತ್ತಿರುವಾಗ ಅದಕ್ಕೆ ಪ್ರತಿಫಲವಾಗಿ ಅವರಿಂದ ಹಿಂದಕ್ಕೆ ಸಹಾಯ ಕೇಳುವುದು ಅವಮಾನವೆಂದು ಭಾವಿಸಿದ್ದರು.ಹಾಗಾಗಿ ಜಮೀನು ಮತ್ತು ಮನೆಯನ್ನು ತಮ್ಮಲ್ಲಿರುವ ಸಂಪನ್ಮೂಲಗಳಿಂದ ಹಿಂದಕ್ಕೆ ಪಡೆಯುವುದು ಅಸಾಧ್ಯವೆಂಬ ತೀರ್ಮಾನಕ್ಕೆ ಬಂದಿದ್ದರು. ಆದರೆ ಗಂಡು ಮಕ್ಕಳಿಬ್ಬರೂ ಸೇರಿ ಬ್ಯಾಂಕಿಗೆ ಕಟ್ಟಬೇಕಾಗಿದ್ದ ಬಾಕಿ ಹಣವನ್ನು ತಾವೇ ತುಂಬಿ ಸ್ವತ್ತುಗಳನ್ನು ತಮ್ಮ ವಶಕ್ಕೆ ಪಡೆದುಕೊಂಡರು.ಆ ಜಮೀನಿನಲ್ಲಿ ಸ್ದಲ್ಪ ಭಾಗವನ್ನು ತೊಟವನ್ನಾಗಿ ಮಾಡಿ ಮನೆಯನ್ನು ಆಧುನೀಕರಣಗೊಳಿಸಿ ಯಾರಿಗೋ ಬಾಡಿಗೆಗೆ ಕೊಟ್ಟಿದ್ದರು.ಈ ವಿಷಯದಲ್ಲಿ ಶಿವರಾಮು ಯಾವುದೇ ಸಲಹೆಯನ್ನೂ ನೀಡಲಿಲ್ಲ. ಕಾರಣ ಅದು ಈಗ ಮಕ್ಕಳ ಸ್ವತ್ತು.ಅದನ್ನು ಅವರು ಹೇಗೆ ಅನುಕೂಲವೊ ಹಾಗೆ ಮಾಡಿಕೊಳ್ಳುತ್ತಿದ್ದಾರೆ.ನಾನು ಮೂಗು ತೂರಿಸುವ ಅಗತ್ಯವಿಲ್ಲ ಎಂದು ಸುಮ್ಮನಿದ್ದರು.ಆದರೆ ಪಾರ್ವತಿಯ ಆಲೋಚನೆಯೇ ಬೇರೆ.ಮಕ್ಕಳನ್ನು ಬೆಳೆಸಿ ಉತ್ತಮಸ್ಥಿತಿಗೆ ತಂದವರು ನಾವು. ಅವರಿಂದ ಹಳ್ಳಿಯ ಆಸ್ತಿಯನ್ನು ಹಿಂದಕ್ಕೆ ಕೇಳುವುದರಲ್ಲಿ ಯಾವ ತಪ್ಪೂ ಇಲ್ಲ. ನಮ್ಮ ವೃದ್ಧಾಪ್ಯದಲ್ಲಿ ಅವರು ತಮ್ಮಿಚ್ಛೆಯನ್ನೂ ಪೂರ್ತಿ ಮಾಡಬೇಕೆಂದು ಹೇಳುತ್ತಿದ್ದರು.ಶಿವರಾಮುವಿಗೂ ಪಾರ್ವತಿಗೂ ಈ ವಿಷಯವಾಗಿ ಮಕ್ಕಳು ಮನೆಯಲ್ಲಿಲ್ಲದಿದ್ದಾಗ ಅನೇಕ ಬಾರಿ ಚರ್ಚೆಗಳಾಗುತ್ತಿದ್ದವು.ಶಿವರಾಮು ಯಾವುದಕ್ಕೂ ಜಗ್ಗಿರಲಿಲ್ಲ.
ನೆನಪಿನ ಸುರುಳಿಯಿಂದ ವಾಸ್ತವಕ್ಕೆ ಹಿಂದಿರುಗಿ ಶಿವರಾಮು ಹೆಂಡತಿಗೆ ಸಮಾಧಾನ ಹಾಳುತ್ತಾ ”ಪಾರೂ ಇನ್ನೆಷ್ಟು ಅಳುತ್ತೀಯೇ? ನಾವಿಲ್ಲಿಗೆ ಬಂದದ್ದು ಯಾರಿಗಾಗಿ?ಮಕ್ಕಳಿಗಾಗಿ ಅಲ್ಲವೇ?ಅವರುಗಳನ್ನು ನಾವಲ್ಲದೆ ಬೇರೆಯವರು ನೋಡಿಕೊಳ್ಳುತ್ತಾರೆಯೆ?ಅದೆಲ್ಲವೂ ನಮ್ಮ ಆದ್ಯ ಕರ್ತವ್ಯವಾಗಿತ್ತು.ಮಾಡಿದೆವು. ಹಳ್ಳಿಯನ್ನು ಬಿಟ್ಟು ಇಲ್ಲಿಗೆ ಬರದಿದ್ದರೆ ಇಷ್ಟೆಲ್ಲ ಸಾಧ್ಯವಾಗುತ್ತಿತ್ತೇ? ಹಿರಿಯ ಸೊಸೆ ರಾಧಾ ಮನೆಗೆ ಬಂದಾಗ ಅವಳು ಮನೆಯಲ್ಲಿ ಉಪಯೋಗಿಸಬಹುದಾದ ಹಲವು ಯಂತ್ರಗಳನ್ನು ತಂದು ಪರಿಚಯಿಸಿದಳು.ಅವುಗಳನ್ನು ಹೇಗೆ ಬಳಸುವುದೆಂಬುದನ್ನೂ ಕಲಿಸಿದಳು.ಆದರೆ ಅವಳೇನೂ ಅಡುಗೆ ಮನೆಗೆ ಕಾಲಿಡಲಿಲ್ಲ. ಆದರೂ ಆ ಯಂತ್ರಗಳು ನಿನಗೆ ಸಹಾಯಕವಾದವು.ಅದೇ ಕಿರಿಯ ಸೊಸೆ ಗೀತಾ ಬಂದಾಗ ನೀನೇ ಅಯ್ಯೋ ಎಲ್ಲಾ ಅವಳೇಎಲ್ಲವನ್ನೂ ಮಾಡಿಬಿಡುತ್ತಾಳೆ.ನನಗೇನೂ ಉಳಿಸವುದೇ ಇಲ್ಲ ಎಂದಿದ್ದೆ.ಇನ್ನು ಅವರ ಇಬ್ಬರು ಮಕ್ಕಳು, ನಮ್ಮ ಮೊಮ್ಮಕ್ಕಳ ಲಾಲನೆ ಪಾಲನೆ ಮಾಡುವಾಗಲೂ ನಿನ್ನ ಕೊಸರಾಟಗಳು ಇದ್ದದ್ದೇ.ಈಗ ಮಕ್ಕಳಿಬ್ಬರೂ ತಮ್ಮ ಬದುಕನ್ನು ಕಟ್ಟಿಕೊಳ್ಳುವುದಲ್ಲದೆ ಇನ್ನೂ ವಿಸ್ತರಿಸಿಕೊಳ್ಳಲು ಹೊರಟಿದ್ದಾರೆ.ನಮ್ಮ ಮಕ್ಕಳ ಅಭ್ಯುದಯ ನಮಗೆ ಸಂತೋಷವಲ್ಲವೇ.ಅದಕ್ಕೆ ತಕ್ಕಂತೆ ನಮ್ಮ ಆಲೋಚನೆಗಳನ್ನು ಹೊಂದಿಸಿಕೊಳ್ಳೋಣ.ಇನ್ನು ನೀನು ನಮ್ಮ ಹಳ್ಳಿಯ ಮನೆಯಲ್ಲಿ ನೆಲೆಸುವ ಕನಸನ್ನು ಮರೆತುಬಿಡು.ಆ ವಿಷಯವೇನಾಯಿತೆಂಬುದು ನಿನಗೆ ಗೊತ್ತಿದೆ.ಮತ್ತೆ ಅದನ್ನು ಬ್ಯಾಂಕಿನಿಂದ ನಾನೇ ಬಿಡಿಸಿಕೊಳ್ಳಲಾಗದ್ದಕ್ಕೆ ನನಗೆ ವಿಷಾದವಿದೆ.ಆದರೆ ಮತ್ತೆ ಅದನ್ನು ಮಕ್ಕಳಿಂದ ನನಗೆ ಹಿಂದಕ್ಕೆ ಕೊಡಿ ಎಂದು ನಾನು ಕೇಳಲಾರೆ. ಇನ್ನು ನಮ್ಮ ಮಗಳು ಗಗನಳಿಗೆ ನಾವು ಆಪದ್ಧನವೆಂದು ಕೊನೆಯ ಕಾಲಕ್ಕೆ ಉಳಿಸಿರುವ ಮೊತ್ತದಲ್ಲಿಯೇ ಅಲ್ಪಸ್ವಲ್ಪ ಹಣವನ್ನೂ ಅವಳಿಗೆ ನೆರವಾಗಲೆಂದು ಕೊಡಲು ತೀರ್ಮಾನಿಸಿದ್ದೇನೆ. ಅದಕ್ಕಾಗಿಯೂ ನಾನು ನನ್ನ ಗಂಡು ಮಕ್ಕಳ ಬಳಿ ಕೈ ಚಾಚುವುದಿಲ್ಲ. ನಮ್ಮ ಇಬ್ಬರು ಮಕ್ಕಳು ಮತ್ತು ಸೊಸೆಯಂದಿರು ನಮ್ಮನ್ನು ಎಂದೂ ಅಗೌರವವಾಗಿ ಕಂಡಿಲ್ಲ. ನಮಗೆ ಖಾಯಿಲೆ, ಕಸಾಲೆ ಬಂದಾಗ ಚೆನ್ನಾಗಿ ಶುಶ್ರೂಷೆ ಮಾಡಿ ನೋಡಿಕೊಂಡಿದ್ದಾರೆ. ನಮ್ಮನ್ನು ಪ್ರವಾಸಿ ತಾಣಗಳಿಗೆ ಹೋಗಿಬರುವಂತೆ ಏರ್ಪಾಡು ಮಾಡಿ ಕಳುಹಿಸಿದ್ದಾರೆ.ತಾವುಗಳು ಹೋಗುವಾಗಲೂ ಕೆಲವು ಸ್ಥಳಗಳಿಗೆ ನಮ್ಮನ್ನೂ ಒಟ್ಟಿಗೆ ಕರೆದುಕೊಂಡು ಹೋಗಿ ಸುತ್ತಾಡಿಸಿ ಬಂದಿದ್ದಾರೆ.ಅದೃಷ್ಟವಶಾತ್ ದೀರ್ಘಕಾಲ ನಿಲ್ಲುವಂಥಹ ಖಾಯಿಲೆಗಳು ಸದ್ಯಕ್ಕೆ ನಮ್ಮನ್ನು ಕಾಡಿಲ್ಲ. ಈಗವರು ನಮ್ಮನ್ನು ಎಲ್ಲಿಯೇ ಬಿಟ್ಟರೂ ಕಾಲಹಾಕಲು ಏನೂ ತೊಂದರೆಯಿಲ್ಲ. ನಿನ್ನ ಅನಾವಶ್ಯಕ ಚಿಂತೆಗಳನ್ನು ಬಿಟ್ಟು ಸ್ವಸ್ಥವಾಗಿ ಮಲಗು.ಈ ಮನೆಯಲ್ಲಿ ವಾಸದ ಋಣ ಮುಗಿಯುವ ಸಮಯ ಬಂದಿದೆ ಅಷ್ಟೇ.ಇನ್ನೆಲ್ಲೋ ಭಗವಂತ ದಾರಿ ತೋರುತ್ತಾನೆ”ಎಂದು ಸಮಾಧಾನ ಹೇಳಿ ಲೈಟಾರಿಸಿ ಹಾಸಿಗೆಯ ಮೇಲೆ ಅಡ್ಡಾದರು ಶಿವರಾಮು.
ಆಲೋಚನೆಗಳಿಂದ ಮುಕ್ತರಾಗಿ ಮಲಗಿದ್ದ ಹಿರಿಯರಿಗೆ ಬೆಳಗ್ಗೆ ಎಚ್ಚರವಾದಾಗ ಎಂದಿಗಿಂತ ತಡವಾಗಿತ್ತು.ಗಡಿಬಡಿಸಿಕೊಂಡು ಎದ್ದು ರೂಮಿನಿಂದ ಹೊರಬಂದರು.ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಸಿದ್ಧರಾಗಿ ಹೊರಗೆ ಹೊರಡುವ ತಯಾರಿ ನಡೆಸುತ್ತಿದ್ದರು.ಅದನ್ನು ಕಂಡು ಇಬ್ಬರೂ ಅವರನ್ನು ಕೇಳುವುದೇ ಬಿಡುವುದೇ ಎಂಬ ಜಿಜ್ಞಾಸೆಯಿಂದ ಒಬ್ಬರಮುಖವನ್ನು ಒಬ್ಬರು ನೋಡಿಕೊಂಡರು.ತಕ್ಷಣವೇ ಗೆಲುವಾಗಿ ಪಾರ್ವತಿ ದೊಡ್ಡ ಸೊಸೆ ರಾಧಾಳ ಕಡೆ ತಿರುಗಿ ”ಅಮ್ಮಾ ರಾಧಾ, ನಾವು ಎದ್ದಿದ್ದು ತಡವಾಯ್ತು. ರಾತ್ರಿಯೇ ನಿಮ್ಮ ಪ್ರೊಗ್ರಾಂ ಬಗ್ಗೆ ತಿಳಿಸಿದ್ದರೆ ಬೇಗ ಎದ್ದು ನಿಮಗೇನಾದರೂ ಬೇಕಾಗಿದ್ದನ್ನು ಮಾಡಿಕೊಡುತ್ತಿದ್ದೆ” ಎಂದರು.
”ಅತ್ತೇ, ತಲೆಕೆಡಿಸಿಕೊಳ್ಳಬೇಡಿ, ನಮ್ಮ ಪ್ರೊಗ್ರಾಂ ಧಿಢೀರನೆ ಫಿಕ್ಸ್ ಆಯಿತು.ನೀವು, ಮಾವ ಆರಾಮವಾಗಿ ಸ್ನಾನ ಪೂಜೆ ಮುಗಿಸಿ ಏನುಬೇಕೋ ಮಾಡಿಕೊಳ್ಳಿ, ಇಲ್ಲ ಒಂದು ಫೋನ್ ಮಾಡಿದರೆ ಮೆಸ್ಸಿನಿಂದ ಬಸವ ತಿಂಡಿ ತಂದುಕೊಡುತ್ತಾನೆ. ಇವತ್ತು ಕೆಲಸದ ಬಂಗಾರಿ ಬರಲ್ಲ. ಉಳಿದೆಲ್ಲ ಕೆಲಸಗಳನ್ನೂ ಮಾಡಿ ಮುಗಿಸಿದ್ದೇವೆ. ರಾತ್ರಿಗೂ ಅಷ್ಟೆ, ನಮಗಾಗಿ ಕಾಯಬೇಡಿ.ಬರುವುದಾದರೆ ಮೊದಲೆ ಫೋನ್ ಮಾಡುತ್ತೇವೆ. ಅಲ್ಲಿಯ ಕೆಲಸ ಮುಗಿಸಿದ ನಂತರ ಬರುತ್ತೇವೆ” ಎಂದು ಹೇಳಿದಳು ಹಿರಿಯ ಸೊಸೆ ರಾಧ. ”ಆ ನಂತರ ನಿಮ್ಮನ್ನು ಕರೆದುಕೊಂಡು ಹೋಗಿ ಅಲ್ಲಿ ಬಿಟ್ಟು ಬರುತ್ತೇವೆ” ಎಂದು ಸೇರಿಸಿದಳು ಅಲ್ಲಿಯೆ ಇದ್ದ ಚಿಕ್ಕ ಸೊಸೆ ಗೀತಾ. ಮೊಮ್ಮಕ್ಕಳು ಏನಾದರೂ ಹೇಳುತ್ತಾರೇನೋ ಎಂದು ಅವರೆಡೆಗೆ ತಿರುಗಿದರು ಪಾರ್ವತಿ. ಊಹುಂ..ಅವರಾಗಲೇ ತಮ್ಮ ವಾಟರ್‌ಬಾಟಲ್ ಹಿಡಿದು ಕಾರಿನೆಡೆಗೆ ಹೊರಡುವ ತರಾತುರಿಯಲ್ಲಿದ್ದರು. ಮತ್ತೇನು ಹೊರಡುವಾಗ ಕೆದಕುವುದು. ಬಂದನಂತರ ಹೇಗೂ ಅವರೇ ಹೇಳುತ್ತಾರಲ್ಲ ಎಂದುಕೊಂಡು ಅವರನ್ನು ಬೀಳ್ಕೊಟ್ಟು ಒಳಗೆ ಬಂದರು.
ಸ್ನಾನಪೂಜಾದಿಗಳನ್ನು ಮುಗಿಸಿದರು. ”ಪಾರೂ, ನೀನೇನೂ ಮಾಡಲು ಹೋಗಬೇಡ.ಬಸವನಿಗೆ ಫೋನ್‌ಮಾಡಿದ್ದೇನೆ ಅವನು ಇಡ್ಲಿ, ಒಡೆ, ಉಪ್ಪಿಟ್ಟನ್ನು ಕಳಿಸಿಕೊಡಲು ಹೇಳಿದ್ದೇನೆ. ಮೆಸ್ಸಿನ ಹುಡುಗ ಎಲ್ಲಿಗೋ ಹೋಗಿದ್ದಾನಂತೆ.ತಾನೇ ತರುತ್ತಾನೆ. ನಮ್ಮ ಜೊತೆ ಏನೋ ಮಾತನಾಡಬೇಕಂತೆ ” ಎಂದರು ಶಿವರಾಮು.
”ಅಯ್ಯೋ ಆ ಬಾಯಾಳಿ ಬಸವನೇ, ಅವನು ಮಾಡುವ ತಿಂಡಿಗಳು ರುಚಿಕರವಾಗಿರುತ್ತವೆ. ಅದರಲ್ಲಿ ಎರಡು ಮಾತಿಲ್ಲ. ಆದರೆ ಅವನ ಮಾತುಗಳು ಕೆದಕಿ ಕೆದಕಿ ಕೇಳುವ ಬುದ್ಧಿ ನನಗೆ ಹಿಡಿಸೊಲ್ಲ. ಮಕ್ಕಳಿದ್ದರೆ ಅವನು ಅವರಮುಂದೆ ಬಾಯಿಬಿಡಲ್ಲ. ಅವರುಗಳಿಲ್ಲದ್ದು ಗೊತ್ತಾಗಿರಬೇಕು. ಮಾತಾಡುವಾಗ ಎಚ್ಚರಿಕೆಯಾಗಿರಿ” ಎಂದರು ಪಾರ್ವತಿ.
”ನನಗೆ ಗೊತ್ತಲ್ಲವೇ, ನೀನೂ ಬಾಯಿಬಿಡಬೇಡ ” ಎಂದು ಹೇಳುತ್ತಿದ್ದಂತೆ ಹೊರಗಡೆ ಕಾಲಿಂಗ್‌ಬೆಲ್ ಸದ್ದಾಯಿತು. ಬಾಗಿಲು ತೆರೆದು ಶಿವರಾಮು ”ಬಾಪ್ಪಾ ಬಸವಾ ಚೆನ್ನಾಗಿದ್ದೀಯಾ?” ಎಂದು ಅವನನ್ನು ಸ್ವಾಗತಿಸಿದರು.
”ನಾನು ಚೆನ್ನಾಗಿದ್ದೀನಿ ಅಪ್ಪಾವರೇ ” ಎಂದು ತನ್ನ ಕೈಯಲ್ಲಿದ್ದ ಟಿಫನ್‌ಬಾಕ್ಸ್‌ಗಳನ್ನು ಹಿಡಿದು ತನ್ನದೇ ಮನೆಯೆಂಬಂತೆ ಸಲೀಸಾಗಿ ಊಟದ ಕೋಣೆಗೆ ನಡೆದನು. ಷೆಲ್ಫ್‌ನಲ್ಲಿದ್ದ ತಟ್ಟೆಗಳಲ್ಲಿ ಒಂದೆರಡನ್ನು ತೆಗೆದು ಮೇಜಿನಮೇಲಿಟ್ಟು, ಲೋಟಗಳಿಗೆ ನೀರು ತುಂಬಿಸಿ ಇಟ್ಟ.ಏನೂ ಮಾತನಾಡದೆ ಅವನು ಮಾಡುತ್ತಿದ್ದುದನ್ನು ನೋಡುತ್ತಾ ಇದ್ದ ಶಿವರಾಮು ”ಬಸವಾ ಅಲ್ಲಿಟ್ಟು ಹೋಗು, ನಾವೇ ಬಡಿಸಿಕೊಳ್ಳುತ್ತೇವೆ”ಎಂದರು.
”ಏ.. ಅದೆಂಗಾಯ್ತದೆ, ನಾನೇನು ಹೊಸಬನೇ? ಇಪ್ಪತ್ತು ವರ್ಷಗಳಿಂದ ನನಗೆ ಈ ಮನೆಯ ನಂಟಿದೆ.ನಮ್ಮಪ್ಪನ ಜೊತೆ ನಿಮ್ಮನೆಗೆ ಬರುತ್ತಿದ್ದೆ.ಈಗ ನನ್ನನ್ನು ಕೈಹಿಡಿದು ನಡೆಸಿದ್ದೀರಿ.ಅದನ್ನು ಮರೆತುಬಿಡಲೇ, ಬನ್ನಿ ಕೂಡ್ರಿ, ಅಮ್ಮಾ ನೀವೂ ಬನ್ನಿ, ಇಡ್ಲಿ ಒಡೆ ಬಿಸಿಬಿಸಿ ಇವೆ ಈಗ ತಿಂದರೆ ಚೆನ್ನ.ಉಪ್ಪಿಟ್ಟು ಮುಗಿದಿತ್ತು.ಮಾಡಿ ತರಲು ತಡವಾಗುತ್ತೆಂದು ಬಂದುಬಿಟ್ಟೆ.ಕೆಂಚ ತಯಾರು ಮಾಡುತ್ತಿದ್ದಾನೆ. ಬೇಕಿದ್ದರೆ ಕಳುಹಿಸಿಕೊಡುತ್ತೇನೆ ”ಎಂದ ಬಸವ.
ಈ ಪುಣ್ಯಾತ್ಮ ಬಡಪೆಟ್ಟಿಗೆ ಒಪ್ಪುವುದಿಲ್ಲ ಎಂದು ಬಿಸಿಬಿಸಿಯಾದ ತಿಂಡಿ ತಿನ್ನುವುದೇ ಉತ್ತಮವೆಂದು ಇಬ್ಬರು ಕುಳಿತು ತಿಂಡಿ ತಿಂದರು.ಅವರ ತಟ್ಟೆಗಳನ್ನು ತಾನೇ ಎತ್ತಿ ಸಿಂಕಿನಲ್ಲಿ ಹಾಕಿ ಕಾಫಿಯನ್ನು ಬೆರೆಸಿ ಅವರಿಬ್ಬರಿಗೂ ಕೊಟ್ಟು ತಾನೂ ಒಂದು ಲೋಟದಲ್ಲಿ ಹಿಡಿದು ಹಾಲಿಗೆ ಬಂದು ಅವರಿಗೆದುರಾಗಿ ಕುಳಿತನು.
”ಅಲ್ಲಾ ನೀವು ಮನೆ ಖಾಲಿ ಮಾಡುತ್ತೀರಂತೆ.ನಿಮ್ಮ ದೊಡ್ಡ ಮಗನ ಕುಟುಂಬ ಪರದೇಶಕ್ಕೆ ಹೊರಟಿದ್ದಾರಂತೆ.ಚಿಕ್ಕ ಮಗ ಸೊಸೆಗೆ ಅದ್ಯಾವುದೋ ದೂರದ ಗುಜರಾತಿಗೆ ವರ್ಗಾವಣೆಯಾಗಿದೆಯಂತೆ. ನಾನು ಕಂಡಂಗೆ ನೀವು ನಿಮ್ಮ ಮಗಳ ಮನೆಗೆ ಹೋಗಿ ಇರುವುದು ಅಷ್ಟಕಷ್ಟೇ.ಮಕ್ಕಳ ಜೊತೆಯೇ ನಿವೂ ಹೋಗುತ್ತೀರೇನು?” ಎಂದು ಪ್ರಶ್ನಿಸಿದ ಬಸವ.
”ಈ ವಯಸ್ಸಿನಲ್ಲಿ ದೂರದೂರಿಗೆ ಅಥವಾ ಪರದೇಶಕ್ಕೆ ಹೋಗಿ ಇರಲಾಗುತ್ತಾ ಬಸವ. ಮಕ್ಕಳೇನೋ ನಮಗಾಗಿ ವ್ಯವಸ್ಥೆ ಮಾಡಿದ್ದಾರೆ. ನಾವು ಅಲ್ಲಿರುತ್ತೇವೆ. ಏಕೆ ನಿನಗೇನೂ ಹೇಳಲಿಲ್ಲವೇ ಅವರು?” ಎಂದು ಮರು ಪ್ರಶ್ನೆ ಹಾಕಿದರು.
”ಅಪ್ಪಾವರೇ ನನಗೆ ಯಾರೇನೂ ಹೇಳಲಿಲ್ಲ. ಮನೆ ಖಾಲಿಮಾಡುವ ವಿಷಯ ನಿಮ್ಮ ಕಾರ್‌ಡ್ರೈವರ್ ರಾಜು ಹೇಳಿದ. ಈ ಮನೆಯಲ್ಲಿ ನೀವಿಬ್ಬರೇ ನಮ್ಮ ಕಷ್ಟಸುಖ ವಿಚಾರಿಸಿ, ಹೋದದ್ದು ಬಂದದ್ದು ತಿಳಿದು ಸಹಾಯ ಮಾಡ್ತಿದ್ದೋರು.ನಿಮ್ಮ ಮಕ್ಕಳೇನಿದ್ದರೂ ತಿಂಡಿ, ಊಟ ಬೇಕಾದಾಗ ಅರ್ಡರ್ ಮಾಡಿ ತರಿಸಿಕೊಳ್ಳುತ್ತಿದ್ದರು.ಕೇಳಿದ್ದಕ್ಕಷ್ಟೇ ಉತ್ತರ. ಹೆಚ್ಚು ಮಾತಿಲ್ಲ. ಚೆನ್ನಾಗಿ ತಿಂಡಿ ಮಾಡುತ್ತೇನೆಂದು ಅವರ ಕೆಲವು ಸ್ನೇಹಿತರಿಗೂ ರೆಕಮೆಂಡ್ ಮಾಡಿದ್ದರು.ಇದರಿಂದಾಗಿ ಚಿಕ್ಕಪುಟ್ಟ ಸಮಾರಂಭಗಳಿಗೂ ಊಟ, ತಿಂಡಿ ಸಪ್ಲೈ ಮಾಡುತ್ತಿದ್ದೆ.ಅದು ಬಿಡಿ, ಈಗ ಎಲ್ಲಿ ಇರಿಸುತ್ತಾರಂತೆ ನಿಮ್ಮನ್ನು.ಈಗಿನ ಕಾಲದಲ್ಲಿ ತಂದೆತಾಯಿಗಳನ್ನು ವೃದ್ಧಾಶ್ರಮಕ್ಕೆ ಸೇರಿಸುವುದು ಸಾಮಾನ್ಯ. ನೀವು ಇಲ್ಲಿ ಸ್ವತಂತ್ರವಾಗಿದ್ದು ನಿಮ್ಮದೇ ಕೈಬಾಯಿ ಅಂತ ಇದ್ದೋರು.ಅಲ್ಲಿರಲು ಆಗುತ್ತೆಯೇ? ಜೈಲಿದ್ದ ಹಾಗಿರುತ್ತೆ. ಅದನ್ನು ನೆನೆಸಿಕೊಂಡರೇ ನನಗೆ ದುಃಖವಾಗುತ್ತೆ.ಅದಕ್ಕೆ ನನಗೊಂದು ಆಲೋಚನೆ ಬಂದಿದೆ.ನೀವೇನೂ ತಿಳಿದುಕೊಳ್ಳಲ್ಲ ಅಂದರೆ ಹೇಳ್ತೀನಿ” ಎಂದ ಬಸವ.
”ಅದೇನು ಹೇಳು ಬಸವಾ ”ಎಂದರು ಶಿವರಾಮು.
”ಏನಿಲ್ಲ, ನಮ್ಮ ಮನೆಯ ಹಿಂದುಗಡೆ ಇರುವ ಔಟ್‌ಹೌಸ್ ಖಾಲಿಯಾಗಿದೆ.ರಿಪೇರಿ ಮಾಡಿಸಿ ಬಣ್ಣ ಮಾಡಿಸಿದ್ದೇನೆ. ನೀವು ಅಲ್ಲಿಗೆ ಬಂದುಬಿಡಿ. ನಾವು ನಿಮ್ಮನ್ನು ನೋಡಿಕೊಳ್ಳುತ್ತೇವೆ. ನಮಗೆ ಮನೆಯ ಹಿರಿಯರಂತೆ ನೀವಿರಿ. ನಿಮ್ಮ ಮಕ್ಕಳನ್ನು ಒಪ್ಪಿಸಿ. ಕಾಣದ, ಕೇಳದ ಕಡೆ ಏಕೆ ಹೋಗುತ್ತೀರಿ”ಎಂದ ಬಸವ.
”ಬಸವಾ ನಾವು ಮಕ್ಕಳನ್ನು ಹೀಗೆ ಮಾಡಿ, ಹೀಗೆ ನಮ್ಮನ್ನಿರಿಸಿ ಎಂದು ನಿರ್ದೇಶಿಸುವ ಕೆಲಸವನ್ನು ನಾನ್ಯಾವತ್ತೂ ಮಾಡಿಲ್ಲ. ಈಗ ಮಾಡುವುದೂ ಸಾಧ್ಯವಿಲ್ಲ. ನಮ್ಮ ಮಕ್ಕಳುಮಾಡಲಿರುವ ವ್ಯವಸ್ಥೆಯನ್ನು ನಾವು ಈಗಾಗಲೆ ಒಪ್ಪಿಕೊಂಡಾಗಿದೆ.ಅವರಿರಿಸಿದಲ್ಲಿ ಇರುತ್ತೇವೆ. ಮಕ್ಕಳೇನು ಈಗ ದೂರ ಹೋದರೆ ಅಲ್ಲಿಯೇ ಇದ್ದು ಬಿಡುತ್ತಾರೆಯೇ?ಕೆಲವು ವರ್ಷಗಳ ನಂತರ ಹಿಂದಕ್ಕೆ ಬರುತ್ತಾರೆ.ಅಲ್ಲಿಯವರೆಗೆ ನಾವಿದ್ದರೆ ಮತ್ತೆ ಒಂದೇ ಸೂರಿನಡಿಯಲ್ಲಿ ಎಲ್ಲರೂ ಒಟ್ಟಿಗೆ ಇರಬಹುದು.ಈಗ ನಾವು ಅಡ್ಡ ಮಾತನಾಡಿ ನಮ್ಮ ಮಕ್ಕಳನ್ನು ಹೊರಗಿನವರ ಮುಂದೆ ಚಿಕ್ಕವರನ್ನಾಗಿ ಮಾಡುವುದು ನಮಗಿಷ್ಟವಿಲ್ಲ. ನೀನು ನಮ್ಮ ಬಗ್ಗೆ ಇಟ್ಟುಕೊಂಡ ವಿಶ್ವಾಸಕ್ಕೆ ನಾವು ಕೃತಜ್ಞರು,ನಿನ್ನ ಆಸೆಯನ್ನು ನಮ್ಮ ಮುಂದೆ ಹೇಳಿದಂತೆ ಬೇರೆಯವರಲ್ಲಿ ಬಾಯಿಬಿಡಬೇಡ.ಇದೇ ನಮ್ಮ ಕೋರಿಕೆ ಬಸವ” ಎಂದು ಮುಂದೆ ಮಾತು ಬೆಳೆಸಲು ಅವಕಾಶ ನೀಡದಂತೆ ತಿಂಡಿಯ ಬಿಲ್ಲು ಎಷ್ಟಾಯಿತೆಂದು ಕೇಳಿ ಹಣವನ್ನಿತ್ತು ಧನ್ಯವಾದ ಹೇಳಿದರು ಶಿವರಾಮು.
ಬಸವನನ್ನು ಕಳುಹಿಸಿ ಬಾಗಿಲು ಹಾಕಿ ಒಳಬಂದ ಶಿವರಾಮು ಪಾರೂ ನಾನು ಮಾತನಾಡುತ್ತಿದ್ದಾಗ ನೀನು ಮಧ್ಯೆ ಬಾಯಿ ಹಾಕದ್ದಕ್ಕೆ ಥ್ಯಾಂಕ್ಸ್ ” ಎಂದರು.
”ಹು ಅದೇನೋ ಸರಿ, ಅವನು ಹೇಳಿದಂತೆ ವೃದ್ಧಾಶ್ರಮವೆಂದರೆ ಸೆರೆಮನೆ ಹೌದೇ? ನನಗ್ಯಾಕೋ ಅದನ್ನು ಊಹಿಸಿಕೊಂಡರೇ ಭಯವಾಗುತ್ತೆ.ನಮ್ಮ ಹುಡುಗರೂ ಏನೆಂದು ಬಾಯಿಬಿಡುತ್ತಿಲ್ಲ. ನೀವೂ ಏನೂ ಕೇಳಲ್ಲ ಅನ್ನುತ್ತೀರ.ಶಿವನೇ ಈ ವಯಸ್ಸಿನಲ್ಲಿ ನಮಗೇನು ತಂದಿಟ್ಟೆಯಪ್ಪಾ” ಎಂದು ಹಲುಬಿದರು.
”ಏ ಪಾರ್ವತಿ ಹೆದರಬೇಡವೇ, ಬಸವ ಹೇಳಿದಂತೇನೂ ಅಲ್ಲಿರುವುದಿಲ್ಲ. ನನ್ನ ಗೆಳೆಯ ಸಂಜೀವಯ್ಯ ಇದ್ದಾನಲ್ಲ. ಅವನನ್ನು ನೀನೂ ನೋಡಿದ್ದೀಯೆ.ಅವನು ತನ್ನ ಹೆಂಡತಿಯೊಡನೆ ತಾನೇ ಸ್ವಯಿಚ್ಛೆಯಿಂದ ಮಕ್ಕಳಿಗೆ ತಿಳಿಸಿಯೇ ವೃದ್ಧಾಶ್ರಮ ಸೇರಿಕೊಂಡಿದ್ದಾನೆ. ಅಲ್ಲಿ ವ್ಯವಸ್ಥೆ ತುಂಬ ಚೆನ್ನಾಗಿದೆಯಂತೆ.ಸಮವಯಸ್ಕರೊಡನೆ ಒಡನಾಟ, ವೆಳೆಗೆ ಸರಿಯಾಗಿ ಉಟೋಪಚಾರ, ವಾಕಿಂಗ್, ಓದಲಿಕ್ಕೆ ಲೈಬ್ರರಿ, ಸಾಯಂಕಾಲ ಸಾಮೂಹಿಕ ಪ್ರಾರ್ಥನೆ, ಬಂಧುಗಳು ಬಂದು ಭೇಟಿಯಾಗಲು ಅನುಕೂಲ. ನಾವೂ ಬಂಧುಗಳಲ್ಲಿ ಸಮಾರಂಭಗಳಿಗೆ ಹೋಗಿ ಬರಲು ಅವಕಾಶ. ಎಲ್ಲವೂ ಉಂಟು.ಟೆನ್ಶನ್ ಇಲ್ಲ ಆರಾಮವಾಗಿದ್ದೇವೆ ಕಣಯ್ಯಾ ಎಂದು ಫೋನ್ ಮಾಡಿದಾಗೆಲ್ಲ ಹೇಳಿದ್ದ. ನೀವೂ ಇಲ್ಲಿಗೆ ಬಂದುಬಿಡಿ. ಎಷ್ಟು ವರ್ಷ ಮಕ್ಕಳ ಸೇವೆಮಾಡಿಕೊಂಡಿರುತ್ತೀರಿ ನಮಗೇ ಅಂತ ಸ್ವಲ್ಪ ಜೀವನ ಬೇಕಲ್ಲವಾ ಎಂದೆಲ್ಲ ಹೇಳಿದ್ದ.ಏನೇ ಆದರೂ ನಾನು ನಿನ್ನ ಜೊತೆಗಿರುತ್ತೇನಲ್ಲಾ ಎಂದು ತಮ್ಮ ವೈಯಕ್ತಿಕ ಕಾಗದ ಪತ್ರಗಳಾದ ಬ್ಯಾಂಕಿನ, ಪೋಸ್ಟಾಫೀಸಿನ ಪಾಸ್ ಬುಕ್ಕುಗಳನ್ನು ತಮ್ಮ ಬಟ್ಟೆ ಬರೆಯ ಅಡಿಯಲ್ಲಿ ತಮ್ಮ ಸೂಟ್ಕೇಸಿನಲ್ಲಿ ಇರಿಸಿದರು.
ಪಾರೂ ನಮ್ಮಿಬ್ಬರ ಬಟ್ಟೆಬರೆ, ಅಗತ್ಯಕ್ಕೆ ತಕ್ಕಂತೆ ಇವೆ. ಇನ್ನು ಒಡವೆ ನಿನ್ನ ಮೈಮೇಲಿರುವುದಷ್ಟೇ. ಸುಮಾರು ವಿಷಯಗಳಲ್ಲಿ ಗೊಣಗಾಡುವ ಸ್ವಭಾವ ಒರುವ ನೀನು ಇದರ ವಿಷಯದಲ್ಲಿ ಅತಿಯಾದ ವ್ಯಾಮೋಹ ಬೆಳೆಸಿಕೊಳ್ಳದ್ದು ಈಗ ಉಪಯೋಗಕ್ಕೆ ಬಂತುನೋಡು” ಎಂದರು ಶಿವರಾಮು.
”ಅದೆಲ್ಲಾ ಸರಿಕಣ್ರೀ, ನೀವು ಸಣ್ಣ ಉಳಿತಾಯ ಮತ್ತು ಎಲ್.ಐ.ಸಿ.ಏಜೆಂಟ್ ಕೆಲಸವನ್ನು ನಾವು ಹೋದಕಡೆಯೂ ಮಾಡಲು ಸಾಧ್ಯಾನಾ. ನಿಮಗೆ ಗಾಡಿ ತೆಗೆದುಕೊಂಡು ಹೊರಗೆಲ್ಲ ಗ್ರಾಹಕರನ್ನು ಹುಡುಕಿ ಹೋಗಲು ಬಿಡುತ್ತಾರಾ?”ಎಂದು ಕೇಳಿದರು ಪಾರ್ವತಿ.
”ಹ್ಹೊ ಹೊ. ನಾನು ನಿನಗಿಂತ ಒಂದು ಹೆಜ್ಜೆ ಮುಂದೆ.ಇದನ್ನೆಲ್ಲಾ ಮೊದಲೇ ಆಲೋಚಿಸಿ ನಮಗೆ ಸ್ಥಳ ಬದಲಾವಣೆಯ ಸೂಚನೆ ಸಿಕ್ಕ ಕೂಡಲೇ ನಮ್ಮ ಗಗನಳಿಗೆ ಈ ಕೆಲಸವನ್ನೆಲ್ಲ ಹೇಳಿಕೊಟ್ಟು ಅವಳ ಹೆಸರಿಗೇ ಲೈಸೆನ್ಸ್ ಕೊಡಿಸಿದ್ದೇನೆ. ಅದೆಲ್ಲವನ್ನೂ ಇನ್ನು ಮುಂದೆ ಅವಳೇ ಮುಂದುವರಿಸುತ್ತಾಳೆ.ಅದರಿಂದ ಅವಳಿಗೂ ನಾಲ್ಕ ಕಾಸು ಸಂಪಾದನೆಯಾಗುತ್ತೆ” ಎಂದರು ಶಿವರಾಮು.
”ಓ ನನಗೆ ಈ ಸಂಗತಿ ಗೊತ್ತೇ ಇಲ್ಲ, ಅಪ್ಪಾ ಮಗಳು ಗುಟ್ಟುಗುಟ್ಟಾಗಿ ಮಾಡಿಕೊಂಡಿದ್ದೀರಿ.ಒಳ್ಳೆಯದಾಯ್ತು ಬಿಡಿ” ಎಂದರು ಪಾರ್ವತಿ.
ಹೀಗೇ ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತಾ ಎರಡು ಸೂಟ್‌ಕೇಸಗಳನ್ನು ಪ್ಯಾಕ್ ಮಾಡಿಟ್ಟರು.ಒಂದೆರಡು ಸಣ್ಣ ಕೈಚೀಲಗಳನ್ನೂ ತೆಗೆದಿಟ್ಟುಕೊಂಡರು.ಅಷ್ಟರಲ್ಲಿ ಶಿವರಾಮುವಿನ ಮೊಬೈಲ್ ರಿಂಗಾಯಿತು. ”ಅಪ್ಪಾ ನಾನು ಗೌತಮ್ ”ಎಂದ ಮಗ.
”ಹೂ ಗೊತ್ತಾಯಿತು ಹೇಳಪ್ಪಾ, ನೀವು ಎಷ್ಟೊತ್ತಿಗೆ ಬರುತ್ತೀರಾ?” ಎಂದು ಕೇಳಿದರು.
” ಅಪ್ಪಾ ನಾವು ಇವತ್ತು ಬರುವುದಿಲ್ಲ. ನಾಳೆ ರಾತ್ರಿ ಒಂಬತ್ತು ಗಂಟೆ ಹೊತ್ತಿಗೆ ನಾನೊಬ್ಬನೇ ಬರುತ್ತೇನೆ. ನಾಡಿದ್ದು ನಾವೆಲ್ಲರೂ ಹೊರಡಬೇಕಾಗುತ್ತದೆ. ನಿಮ್ಮ ಸಾಮಾನುಗಳನ್ನೆಲ್ಲ ಪ್ಯಾಕ್ ಮಾಡಿಟ್ಟಿರಿ.ಮತ್ತೇನಾದರೂ ಉಳಿದರೆ ನಾನೇ ತಂದುಕೊಡುತ್ತೇನೆ. ಮಿಕ್ಕ ಮನೆಯ ಸಾಮಾನುಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡೋಣ.ಅಮ್ಮನಿಗೂ ಹೇಳಿ.ವಾಚ್ಮನ್‌ಗೆ ಫೋನ್ ಮಾಡಿದ್ದೇನೆ ಜೋಪಾನ” ಎಂದು ಉತ್ತರಕ್ಕೆ ಕಾಯದೇ ಫೋನ್ ಕಟ್ ಮಾಡಿದ.
”ಪಾರೂ ಇವತ್ಯಾರೂ ಇಲ್ಲಿಗೆ ಬರೋಲ್ಲ” ಎಂದು ಮಗ ಹೇಳಿದ ವಿಷಯವನ್ನು ಚುಟುಕಾಗಿ ತಿಳಿಸಿ ನಾವು ಸಿದ್ಧಮಾಡಿಕೊಂಡಿದ್ದು ”ಒಳ್ಳೆಯದೇ ಆಯ್ತು.ನಡಿ ಮಧ್ಯಾನ್ಹ ಒಂದುಗಂಟೆಯಾಗುತ್ತಾ ಬಂತು. ಹೊಟ್ಟೆಗೇನಾದರೂ ಸಿಂಪಲ್ಲಾಗಿ ಮಾಡು” ಎಂದರು ಶಿವರಾಮು.
”ಈ ಮನೆಯ ಋಣವಂತೂ ಮುಗಿದಂತಾಯಿತು.ಎಲ್ಲಿಗೆ ಹೋಗಬೇಕು ಅಂತೇನಾದರೂ ಹೇಳಿದನಾ?ನನ್ನದು ಕೆಲಸಬೊಗಸೆ ಮಾಡಿದ ಕೈ ಆಶ್ರಮದಲ್ಲಿ ಹೇಗಿರಬೇಕೋ ಕಾಣೆ.ಸುಮ್ಮನೆ ಕೂತುಕೂತು ದೇಹಕ್ಕೆ ರೋಗಗಳೇನಾದರೂ ಆವರಿಸಿಕೊಂಡರೇನು ಮಾಡುವುದು.ಎಷ್ಟು ಆಲೋಚಿಸಿದರೂ ಹೊಳೆಯುತ್ತಿಲ್ಲ. ಅನ್ನ ತಿಳಿಸಾರು ಮಾಡಲೇ?ಮೊಸರಿದೆ. ಬೆಳಗ್ಗೆ ತಿಂದಿರುವ ತಿಂಡಿ ಇನ್ನೂ ಅರಗೇ ಇಲ್ಲ” ಎಂದರು.
”ಏನಾದರೂ ಮಾಡು ಪಾರು, ಹೇಗಿದ್ದರೂ ಇಬ್ಬರೂ ಹೇಗೂ ರಾತ್ರಿ ಊಟ ಮಾಡುವುದನ್ನು ಬಿಟ್ಟಿದ್ದೇವೆ. ಏನಾದರು ಹಣ್ಣು ಹಾಲು ತೆಗೆದುಕೊಳ್ಳೋಣ. ತೊಂದರೆಯಿಲ್ಲ” ಎಂದು ಹೇಳುತ್ತಾ ಟಿ.ವಿ. ರಿಮೋಟ್ ಹಿಡಿದು ಹಾಲಿನಲ್ಲಿದ್ದ ಸೊಫಾದ ಮೇಲೆ ಕುಳಿತರು ಶಿವರಾಮು.
ರಾತ್ರಿ ಕಳೆದು ಮುಂಜಾನೆ ಪಕ್ಷಿಗಳ ಕಲರವದೊಂದಿಗೆ ಎಚ್ಚರಗೊಂಡ ಶಿವರಾಮು ಕರದರ್ಶನ ಮಾಡಿ ಪಕ್ಕಕ್ಕೆದೃಷ್ಟಿ ಹಾಯಿಸಿದರು. ಮಡದಿಯು ಎದ್ದು ಹೋಗಿದ್ದು ತಿಳಿದು ಅಲಾರಂ ಇಟ್ಟುಕೊಳ್ಳಬೇಕಾಗಿತ್ತು, ಎರಡು ದಿನಗಳಿಂದ ಬೆಳಗಿನ ವಾಕಿಂಗ್ ಕೂಡ ಹೋಗಿಲ್ಲವೆಂಬುದು ನೆನಪಾಯ್ತು.ಇವತ್ತು ಸಂಜೆಯಾದರೂ ಸ್ವಲ್ಪ ಹೋಗಬೇಕು ಎಂದುಕೊಂಡು ರೂಮಿನಿಂದ ಹೊರಬಂದರು.
ತುಪ್ಪದಬತ್ತಿ, ಅಗರಬತ್ತಿಗಳ ಸುವಾಸನೆ ಮೂಗಿಗೆ ಬಡಿಯಿತು. ”ಓ ಆಗಲೆ ಇವಳ ಸ್ನಾನ ಪೂಜೆಯು ಮುಗಿದಂತಿದೆ.ಮನೆಯೂ ಸ್ವಚ್ಛವಾದಂತಿದೆ.ಬಂಗಾರಿ ಕೆಲಸಕ್ಕೆ ಬಂದಿರಬೇಕು.ಪಾರು ರಾತ್ರಿ ಸರಿಯಾಗಿ ನಿದ್ರೆ ಮಾಡಿಲ್ಲವೆಂದೆನ್ನಿಸುತ್ತಿದೆ.ಎಷ್ಟು ಹೇಳಿದರೂ ಇವಳು ಮನಸ್ಸನ್ನು ನೆಮ್ಮದಿಯಾಗಿಟ್ಟುಕೊಳ್ಳುವುದಿಲ್ಲ. ಇನ್ನು ನಾನು, ಮೇಲ್ನೋಟಕ್ಕೆ ತಹಬಂದಿಗೆ ತಂದುಕೊಂಡರೂ ಅಂತರಂಗದಲ್ಲಿ ಮುಂದೇನೆಂದು ಚಡಪಡಿಸುತ್ತಿರುತ್ತೇನೆ. ಭಗವಂತನ ಇಚ್ಚೆ ಏನಿದೆಯೋ ನೊಡೋಣ” ಏನೇ ಬಂದರೂ ನಿಭಾಯಿಸುವ ಶಕ್ತಿ ನೀಡೆಂದು ಪ್ರಾರ್ಥಿಸಿ ”ಬಂಗಾರಿ ಬಂದಳೇನೆ ಪಾರು?ನನ್ನನ್ನು ಬೇಗ ಎಬ್ಬಿಸಬಾರದಿತ್ತೇ?” ಎಂದು ಹೆಂಡತಿಯನ್ನು ಕೇಳಿದರು.
”ಓ ನೀವು ಎದ್ದಿದ್ದೀರಾ? ಬನ್ನಿ. ಬಂಗಾರಿ ಇವತ್ತೂ ಕೆಲಸಕ್ಕೆ ಬರೋಲ್ಲವಂತೆ ವಾಚ್‌ಮನ್ ಹೇಳಿದ.ಆಕೆ ಬರದಿದ್ದಾಗ ಅವಳ ಕೆಲಸಗಳನ್ನು ಮಾಡಿಕೊಡುವ ಕೆಂಚ, ಕರಿಯ, ಮುನಿಯ ಇದ್ದಾರಲ್ಲ ಅವರುಗಳೇ ಗತಿ.ಕರಿಯ ಮನೆಗುಡಿಸಿ ಒರೆಸಿಕೊಟ್ಟ, ಸ್ನಾನ ಪೂಜೆ ಮುಗಿಸಿ ಬನ್ನಿ. ನೆನ್ನೆ ಮಿಸ್ಸಾದ ಉಪ್ಪಿಟ್ಟನ್ನು ಇವತ್ತು ತಯಾರಿಸಿದ್ದೇನೆ” ಎಂದಳು.
ತನ್ನ ಹೆಂಡತಿಯ ಬಾಯಲ್ಲಿ ಮನೆ ಕಸಗುಡಿಸಿ ಒರೆಸುವ ರೊಬೋ ಕರಿಯ, ಡಿಷ್ವಾಷರ್ ಕೆಂಚ, ವಾಷಿಂಗ್ ಮೆಷಿನ್ಗೆ ಮುನಿಯ ಎಂಬ ಅನ್ವರ್ಥ ನಾಮಗಳನ್ನು ಕೇಳಿ ನಗುತ್ತಾ ಸ್ನಾನ ಮಾಡಲು ನಡೆದರು. ಸ್ನಾನ ಪೂಜೆ ಮುಗಿಸಿ ಹೆಂಡತಿಯ ಜೊತೆ ಬೆಳಗಿನ ಉಪಾಹಾರ ಮುಗಿಸಿ ಕಾಫಿ ಕುಡಿದು ಪಾರೂ ”ನೀನೂ ನನ್ನಜೊತೆ ಬಾ, ಮನೆಯನ್ನೆಲ್ಲ ಒಂದು ಸುತ್ತು ಹಾಕೋಣ” ಎಂದರು.ಇಬ್ಬರೂ ಒಳಗೆ ಹೊರಗೆಲ್ಲಾ ಅಡ್ಡಾಡಿದರು.ಇಪ್ಪತ್ತೈದು ವರ್ಷಕ್ಕೂ ಹೆಚ್ಚು ಕಾಲ ಅಲ್ಲಿ ವಾಸವಿದ್ದರು.ಅವರ ಬದುಕನ್ನು ಕಟ್ಟಿಕೊಳ್ಳಲು ನೆರಳು ನೀಡಿದ ತಾಣವದು. ಹಳೆಯ ನೆನಪುಗಳನ್ನೆಲ್ಲ ಮೆಲುಕು ಹಾಕಿದರು. ಮೇಲಿನ ಅಂತಸ್ಥಿನಲ್ಲಿದ್ದ ಕಛೇರಿಗೆ ಉದ್ಯೋಗಿಗಳು ಬರಲಾರಂಭಿಸಿದ್ದರಿಂದ ಅವರುಗಳಿಂದ ಬರಬಹುದಾದ ಪ್ರಶ್ನೆಗಳನ್ನು ತಪ್ಪಿಸಲು ಮನೆಯೊಳಕ್ಕೆ ಸರಿದರು.ಆ ದಿನದ ಪೇಪರ್ ಪಠನ ಮುಗಿಸಿ ಎತ್ತಿಟ್ಟರು.ಟಿ.ವಿ.ಯಲ್ಲಿ ಅವರಿಗಿಷ್ಟವಾದ ಯಾವುದೂ ಕಾರ್ಯಕ್ರಮ ಇಲ್ಲದ್ದರಿಂದ ಅಫ್ ಮಾಡಿದರು. ಅಷ್ಟರಲ್ಲಿ ಕಾಲಿಂಗ್‌ಬೆಲ್ ಸದ್ದಾಯಿತು. ”ಪಾರೂ ನೋಡು ಮತ್ತೆ ಬಸವ ಏನಾದರೂ ಬಂದನೇ?” ಎಂದರು.ಬಾಗಿಲು ತೆರೆದ ಪಾರ್ವತಿ ”ಅರೆ ಗೌತಮ್ ರಾತ್ರಿ ಒಂಬತ್ತರ ಹೊತ್ತಿಗೆ ಬರುತ್ತೇನೆಂದಿದ್ದೆ ”ಎಂದು ಮಗನನ್ನು ಒಳಕ್ಕೆ ಕರೆದರು.
”ಅಡುಗೆಗೆ ಇಟ್ಟಾಯಿತೆ ಅಮ್ಮಾ” ಎಂದ ಗೌತಮ್.
”ಇಲ್ಲ ಈಗ ಇಡೋಣವೆಂದಿದ್ದೆ ಏಕೆ?”ಎಂದರು ಪಾರ್ವತಿ.
”ಅದೆಲ್ಲಾ ಏನೂ ಬೇಡಿ, ರಾಧಾ, ಗೀತಾ, ಗಗನ ಎಲ್ಲರೂ ಸೇರಿ ಅಡುಗೆ ಮಾಡಿ ನಿಮಗೆಂದು ಕಳುಹಿಸಿದ್ದಾರೆ.ಇದನ್ನು ಒಳಗೆ ತೆಗೆದಿಡಿ” ಎಂದು ಬ್ಯಾಗಿನಲ್ಲಿದ್ದುದನ್ನು ತಾಯಿಯ ಕೈಯಲ್ಲಿಟ್ಟ.
”ಇವರೇನಾದರೂ ಮಗಳು ಗಗನಳ ಮನೆಗೆ ಹೋಗಿದ್ದಾರಾ?ನಮ್ಮನ್ನೂ ಕರೆದಿದ್ದರೆ ಹೋಗಿ ಬರಬಹುದಾಗಿತ್ತು.ಮತ್ತೆಲ್ಲಿಗೆ ಕರೆದೊಯ್ಯುತ್ತಾರೋ?ಎಲ್ಲವೂ ಅಯೋಮಯವಾಗಿದೆ” ಎಂದು ಯೋಚಿಸುತ್ತಾ ಬ್ಯಾಗನ್ನು ಕೊಂಡೊಯ್ದು ಒಳಗಿಟ್ಟರು.
ತಾಯಿ ಅತ್ತ ಹೋದೊಡನೆ ಗೌತಮ್ ತಂದೆಯ ಬಳಿ ಕುಳಿತು ”ಅಪ್ಪಾ ನಿಮ್ಮೊಡನೆ ಒಂದೆರಡು ವಿಷಯ ಮಾತನಾಡಬೇಕು. ನಿಮ್ಮನ್ನು ಕರೆದೊಯ್ಯುವ ವ್ಯವಸ್ಥೆಯ ಬಗ್ಗೆ ” ಎಂದನು.
”ಹೇಳು ಗೌತಮ್, ನಿಮ್ಮ ಯಾವುದೇ ವ್ಯವಸ್ಥೆಗೆ ನಮ್ಮಿಬ್ಬರ ಸಮ್ಮತಿಯಿದೆ.ಸಂಕೋಚವಿಲ್ಲದೆ ಹೇಳು” ಎಂದರು ಶಿವರಾಮು.
”ಅದು ಗೊತ್ತು, ನಿಮ್ಮ ಸ್ವಾಭಿಮಾನದ ಪರಿಚಯ ನನಗೆ ಚೆನ್ನಾಗಿಯೇ ಗೊತ್ತು. ಅದರೂ ನಾವು ಮಾಡುವ ಹೊಸ ವ್ಯವಸ್ಥೆಗೆ ಯಾವುದೇ ತಕರಾರಿಲ್ಲದೆ ನೀವು ಒಪ್ಪಿಗೆ ನೀಡುತ್ತೇವೆಂದು ಆಶ್ವಾಸನೆ ಕೊಡಬೇಕೆಂದು ಕೇಳುತ್ತಿದ್ದೇನೆ”ಎಂದನು ಗೌತಮ್.
”ಹೇಳಿದೆನಲ್ಲಾ ಗೌತಮ್ ಇದರಲ್ಲಿ ಸ್ವಾಭಿಮಾನದ ಪ್ರಶ್ನೆ ಎಲ್ಲಿ ಬಂತು. ನಮ್ಮ ಆಶ್ವಾಸನೆ ನಿನಗಿದೆ”
”ನಮ್ಮ ಹಳ್ಳಿಯಲ್ಲಿರುವ ಜಮೀನಿನ ಮತ್ತು ಮನೆಯಲ್ಲಿ ಮಾಡಿರುವ ಮಾರ್ಪಾಡುಗಳ ಬಗ್ಗೆ ನಿಮಗೆ ತಿಳಿದದ್ದೇ ಆಗಿದೆ.ಅದನ್ನು ನಿಮಗೆ ತೋರಿಸೋಣವೆಂದು ಎಷ್ಟೋ ಸಾರಿ ಕರೆದರೂ ನೀವು ನಮ್ಮೊಡನೆ ನೋಡಲು ಬರಲೇ ಇಲ್ಲ. ಈಗ ಆ ಮನೆಯಲ್ಲೇ ನಿಮ್ಮಿಬ್ಬರನ್ನೂ ವಾಸ್ತವ್ಯ ಮಾಡಿಸುವ ವ್ಯವಸ್ಥೆ ಮಾಡಿದ್ದೇವೆ. ಅಲ್ಲಿ ನೀವಿಬ್ಬರೇ ಅಲ್ಲ. ಗಗನಳ ಸಂಸಾರವೂ ಇರುತ್ತದೆ.ಭಾವ ಸದಾಶಿವರವರಿಗೆ ಬೆಂಗಳೂರಿಗೆ ವರ್ಗಾವಣೆ ಆಗಿರುವುದರಿಂದ ಬೇರೆ ಮನೆ ಮಾಡುವ ಗೋಜಿಗೆ ಹೋಗಬೇಡಿ.ಇಲ್ಲೇ ಇರಿ.ಓಡಾಡಲು ಸಾಧ್ಯವೆಂದು ಒಪ್ಪಿಸಿದ್ದೇವೆ. ಮಕ್ಕಳೂ ಒಪ್ಪಿದ್ದಾರೆ.ಮೊದಲಿಗಿಂತ ಈಗ ನಮ್ಮೂರಿಗೆ ಹೆಚ್ಚಿನ ಬಸ್ ಸಂಚಾರ ಸೌಕರ್ಯ ಚೆನ್ನಾಗಿದೆ.ಗಗನಳಿಗೂ ಈ ವ್ಯವಸ್ಥೆಯಿಂದ ಸಂತೋಷವಾಗಿದೆ.ಜಮೀನು ಮನೆಯ ಮೇಲಿನ ಬ್ಯಾಂಕ್ ಸಾಲವನ್ನು ನೀವು ತೀರಿಸಿದರೇನು, ನಾವು ತೀರಿಸಿದರೇನು. ಅದನ್ನು ಮಾಡಿದ್ದು ನೀವು ನಮ್ಮ ಅನುಕೂಲಕ್ಕಾಗಿಯೇ ತಾನೇ.ನೀವೇನೂ ದುಂದು ವೆಚ್ಚ ಮಾಡಿಲ್ಲ. ಈಗ ಅದು ನಿಮ್ಮದೇ ಆಗಿದೆ.ನಿಮ್ಮ ಕೊನೆಯ ದಿನಗಳ ವರೆಗೆ ನಿಮ್ಮದಾಗಿರುತ್ತದೆ. ನಂತರ ಮನೆಯನ್ನು ಗಗನಳಿಗೆ ಅರಿಶಿನ ಕುಂಕುಮಕ್ಕೆಂದು ನೀವೇ ವಿಲ್ ಬರೆದುಬಿಡಿ. ನಾವಿಬ್ಬರೂ ಈ ವ್ಯವಸ್ಥೆಯ ಬಗ್ಗೆ ವಿಚಾರಮಾಡಿ ಒಮ್ಮತದ ತಿರ್ಮಾನಕ್ಕೆ ಬಂದಿದ್ದೇವೆ. ನಿಮಗೆ ಸರ್‌ಪ್ರೈಸ್ ಕೊಡಬೇಕೆಂದು ಯಾರೂಇಲ್ಲಿಯವರೆಗೆ ಬಾಯಿಬಿಡಲಿಲ್ಲ. ನಾವು ಹಳ್ಳಿಯಲ್ಲಿರುವ ನಿಮ್ಮ ಬಾಲ್ಯದ ಗೆಳೆಯರಾದ ಚಾಮಯ್ಯನವರನ್ನು ಇದರಲ್ಲಿ ಸೇರಿಸಿಕೊಂಡೇ ಅವರ ಸಲಹೆಯನ್ನು ಪಡೆದು ಇದನ್ನು ಮಾಡಿದ್ದೇವೆ. ಕಳೆದ ಒಂದು ತಿಂಗಳಿಂದ ನಾವು ಬೇರೆಡೆ ಹೋಗುತ್ತಿದ್ದೇವೆಂದು ತಿಳಿದು ನೀವು ನಿಮ್ಮ ಭವಿಷ್ಯಕ್ಕೆ ಮುಂದೇನು ಎಂದು ಚಡಪಡಿಸುತ್ತಿರುವುದನ್ನು ನನಗೆ ನೋಡಲಾಗುತ್ತಿಲ್ಲ. ಅಮ್ಮನೂ ತಳಮಳಿಸುತ್ತಿದ್ದಾಳೆ. ಆದರೆ ನೀವು ನಮ್ಮನ್ನು ವಿಚಾರಿಸಲು ನಿಮಗೆ ಮೊದಲಿನಿಂದ ಬೆಳೆಸಿಕೊಂಡಿರುವ ಸ್ವಾಭಿಮಾನ ಅಡ್ಡಬಂದಿತ್ತು. ಅದಕ್ಕೆ ನಾನೇ ಗುಟ್ಟನ್ನು ರಟ್ಟು ಮಾಡಿಬಿಟ್ಟೆ.ಮೊದಲೇ ತಿಳಿಸಲಿಲ್ಲ ಎಂದು ಬೇಜಾರು ಮಾಡಿಕೊಳ್ಳಬೇಡಿ. ಕ್ಷಮಿಸಿ ”ಎಂದನು ಗೌತಮ್.
”ಅದೆಲ್ಲ ಸರಿ ಮಗಾ, ನಮ್ಮಿಬ್ಬರ ಸಾಮಾನುಗಳನ್ನು ಪ್ಯಾಕ್ ಮಾಡಿಕೊಳ್ಳಲು ಏಕೆ ತರಾತುರಿ ಮಾಡಿದಿರಿ” ಕೇಳಿದರು ಶಿವರಾಮು.
”ಅದಾ ಮನೆಯ ಸಾಮಾನು ಸರಂಜಾಮುಗಳಲ್ಲಿ ನಿಮಗೆ ಅಗತ್ಯವಾಗಿ ಯಾವುದು ಬೇಕೋ ಅವುಗಳನ್ನು ವಿಂಗಡಿಸಿ ಗಂಭೀರ್ ತೆಗೆದುಕೊಂಡು ಹೋಗುವುದೆಂದು ತೀರ್ಮಾನ ಮಾಡಿದ್ದೆವು.ನಮ್ಮ ಆವಶ್ಯಕತೆಗಾಗಿ ನಾವು ಪ್ಯಾಕ್ ಮಾಡುವಾಗ ನಿಮಗೆ ತೊಂದರೆಯಾಗದಿರಲೆಂದು ಏರ್ಪಾಟು ಮಾಡಲಾಗಿದೆ” ಎಂದನು ಗೌತಮ್.
ಬ್ಯಾಗಿನಲ್ಲಿದ್ದ ಪಾತ್ರೆಗಳನ್ನು ಅಡುಗೆ ಮನೆಗಿಟ್ಟು ಬಂದ ಪಾರ್ವತಿ ಅಲ್ಲಿಯೇ ನಿಂತು ಅಪ್ಪ ಮಗನ ಸಂಭಾಷಣೆಯನ್ನು ಪೂರ್ತಿ ಕೇಳಿಸಿಕೊಂಡಿದ್ದರು.ತಡೆಯಲಾಗದೇ ಮಗನನ್ನು ಪ್ರೀತಿಯಿಂದ ಅಪ್ಪಿಕೊಂಡರು.ಅವರ ವ್ಯವಸ್ಥೆಗೆ ತಮ್ಮ ಸಂಪೂರ್ಣ ಸಮ್ಮತಿ ಸೂಚಿಸುವಂತೆ ಅವನ ಹೆಗಲು ತಟ್ಟಿದರು.ಅವರ ಕಣ್ಣಲ್ಲಿ ಆನಂದ ಭಾಷ್ಪಗಳು ಹೊರಬಂದವು. ”ಅಳಬೇಡಿ ಅಮ್ಮಾ, ಹೆತ್ತವರನ್ನು ಅರ್ಥಮಾಡಿಕೊಳ್ಳದಷ್ಟು ದಡ್ಡರಲ್ಲವಮ್ಮಾ ನಿಮ್ಮ ಮಕ್ಕಳು. ನೀವೇ ಕಲಿಸಿದ ಸಂಸ್ಕೃತಿ ನಮ್ಮದು.ಈಗ ಕಣ್ಣೊರೆಸಿಕೊಳ್ಳಿ. ಹಳ್ಳಿಯ ಮನೆಯಲ್ಲಿ ಎಲ್ಲರೂ ಸೇರಿದ್ದಾರೆ. ನಿಮ್ಮನ್ನು ಎದುರುಗೊಳ್ಳಲು ತಯಾರಿ ನಡೆಸಿದ್ದಾರೆ.ಈಗ ಊಟಮುಗಿಸಿ ಸ್ವಲ್ಪ ರೆಸ್ಟ್ ತೆಗೆದಕೊಳ್ಳಿ.ನಂತರ ಹೊರಡೊಣ ನಿಮ್ಮ ಮನೆಗೆ ” ಎಂದನು ಗೌತಮ್.
ಮಕ್ಕಳು ಬೇರೆ ಕಡೆಗೆ ಹೋಗುವವರಿದ್ದಾರೆಂದು ತಿಳಿದುಬಂದಾಗಿನಿಂದ ಹಲವಾರು ರೀತಿಯ ಆಲೋಚನೆಗಳ ಸುಳಿಯಲ್ಲಿ ಒದ್ದಾಡುತ್ತಿದ್ದ ಹಿರಿಯ ಜೀವಗಳಿಗೆ ಮಕ್ಕಳು ತೆಗೆದುಕೊಂಡ ನಿರ್ಧಾರ ಅಮೃತಪಾನ ಮಾಡಿದಷ್ಟು ಸಂತಸ ತಂದಿತ್ತು. ಅಂತೂ ಎಲ್ಲಿಗೆ ಪಯಣವೆಂಬ ಪ್ರಶ್ನೆಗೆ ಉತ್ತರ ದೊರಕಿತ್ತು ಮರಳಿ ತಮ್ಮದೇ ಗೂಡಿಗೆ ಎಂದು.
–ಬಿ.ಆರ್.ನಾಗರತ್ನ, ಮೈಸೂರು
ಸೊಗಸಾಗಿದೆ ಕಥೆ
ಸೊಗಸಾದ ವಿವರಣೆ. ಭಾವನಾತ್ಮಕ ಬರಹ. ನಿಮ್ಮ ಸಾಹಿತ್ಯದ ಚಟುವಟಿಕೆಗಳು ಸದಾ ಹೀಗೇ ನಿರಂತರವೀಗಿ ಸಾಗಲಿ
ಧನ್ಯವಾದಗಳು ನಯನ ಮೇಡಂ
ಧನ್ಯವಾದಗಳು ಸಾಹಿತ್ಯ ಸಹೃದಯರಿಗೆ
ಬಹಳ ಸೊಗಸಾದ ಕಥೆ ನಾಗರತ್ನ ಮೇಡಂ. ಅಂತೂ ಗೌತಮ್ ನಮಗೂ ಸರ್ಪ್ರೈಸ್ ಕೊಟ್ಟುಬಿಟ್ಟ ಅನ್ನಿ!
ಧನ್ಯವಾದಗಳು ಶಂಕರಿ ಮೇಡಂ
ಚಂದವಾದ ಕಥೆ
ಕಥೆ ಓದುತ್ತಾ ಕಣ್ಣಲ್ಲಿ ನೀರು ಬಂತು
ಧನ್ಯವಾದಗಳು ಗಾಯತ್ರಿ ಮೇಡಂ
ಸೊಗಸಾದ, ಪಾಸಿಟಿವ್ ಸಂದೇಶ ಕೊಡುವ ಕತೆ ಇಷ್ಟವಾಯಿತು ಗೆಳತಿ
ಧನ್ಯವಾದಗಳು ಗೆಳತಿ ಹೇಮಾ ಹಾಗೇ ನಮ್ಮ ಬರಹಗಳಿಗೆ ಅವಕಾಶಮಾಡಿಕೊಡುವ ಪ್ರೋತ್ಸಾಹ ನೀಡುತ್ತಾ ಬಂದಿರುವ ನಿಮಗೆ ವಂದನೆಗಳು ಹೇಮಾ…
ಭಾವನಾತ್ಮಕ ಸರ್ಪ್ರೈಸ್ ಕಥೆ!
ಧನ್ಯವಾದಗಳು ಪದ್ಮಿನಿ ಮೇಡಂ