ಪಾರಿವಾಳದ ಜೀವನ ಪ್ರೀತಿ
ಅಂದೊಮ್ಮೆ ಪರೀಕ್ಷಾ ಮೇಲ್ವಿಚಾರಣೆಯ ನಿಮಿತ್ತ ಕಾಲೇಜಿನ ಕೊಠಡಿಯೊಂದರಲ್ಲಿ ಇದ್ದೆ. ವಿದ್ಯಾರ್ಥಿ ವಿದ್ಯಾರ್ಥಿನಿಯರೆಲ್ಲಾ ಬಗ್ಗಿಸಿದ ತಲೆ ಎತ್ತದೆ ಬರೆಯುವುದರಲ್ಲಿ ಮಗ್ನರಾಗಿದ್ದರು. ಅತ್ತಿತ್ತ ನೋಡಲೂ ಆಸ್ಪದವಿಲ್ಲದ ಕಾರಣ ಕೆಲವರು ಪ್ರಶ್ನ ಪತ್ರಿಕೆಯನ್ನೇ ಮತ್ತೊಮ್ಮೆ ಉತ್ತರ ಪತ್ರಿಕೆಯಲ್ಲಿ ಅಚ್ಚೊತ್ತುತ್ತಿದ್ದರೆ, ಮತ್ತೆ ಕೆಲವರು ಅವರವರ ತಯಾರಿಗನುಗುಣವಾಗಿ ಉತ್ತರವನ್ನು ಬರೆಯುತ್ತಿದ್ದರು. ಆ ಸಮಯದಲ್ಲಿ ಅಲ್ಲಿದ್ದ ಮೌನವನ್ನು ಮುರಿಯುವಂತೆ ಪಾರಿವಾಳವೊಂದು ಕೊಠಡಿಯಿಂದ ಹೊರಗೆ, ಹೊರಗಿನಿಂದ ಒಳಗೆ ಹಾರುತ್ತಾ ಇರುವುದನ್ನು ಗಮನಿಸಿದೆ. ಪುರುಸೊತ್ತಿಲ್ಲದೆ, ಮಾಡಲು ಇನ್ನೇನೂ ಕೆಲಸವಿಲ್ಲವೇನೋ ಎಂಬಂತೆ ಹಾರಾಡುತ್ತಿದ್ದ ಪಾರಿವಾಳವನ್ನು ಕಂಡು, ಅರೇ! ಇದಕ್ಕಿನ್ನೇನೂ ಉದ್ಯೋಗ ಇಲ್ವಾ? ಈ ಚುಮು ಚುಮು ಛಳಿಯಲ್ಲಿ ಮನೆಯಲ್ಲಿರಲು ಅವಕಾಶ ಸಿಕ್ಕಿದ್ದರೆ ನಾನಂತೂ ಸುಖವಾಗಿ ನಿದ್ದೆ ಮಾಡ್ತಿದ್ದೆ. ಇದ್ಯಾಕೆ ಹೀಗೆ ಹಿಂದೆ ಮುಂದೆ ತಿರುಗುತ್ತಿದೆ ಎಂದೆನಿಸಿತು. ಆದರೆ ಮರುಕ್ಷಣವೇ ಬೇರೊಂದು ಆಲೋಚನೆ ಬಂತು. ಮನುಷ್ಯರ ಹೊರತಾಗಿ ಬೇರೆ ಯಾವುದೇ ಪ್ರಾಣಿಯೂ ಪ್ರಕೃತಿಗೆ ವಿರುದ್ಧವಾಗಿ ಹಾಗೂ ಬೇಡದ ಕೆಲಸದಲ್ಲಿ ಕಾಲ ಕಳೆಯುವುದಿಲ್ಲ. ಹಾಗಾಗಿ ಈ ಹಾರಾಟಕ್ಕೂ ಏನೋ ಅರ್ಥವಿರಬೇಕೆಂದು ಮನಸ್ಸು ಹೇಳಿತು. ಅದು ಎಲ್ಲಿಂದ , ಯಾವ ಕಾರಣಕ್ಕೆ ಹಾರುತ್ತಿದೆ ಎಂದು ಕೊಂಚ ಗಮನಿಸುವ ಮನಸ್ಸಾಯಿತು. ಕಾಲೇಜಿನ ಕಟ್ಟಡ ಹಳೆಯದು ಹಾಗೂ ದೊಡ್ಡ ದೊಡ್ಡ ಕೊಠಡಿಗಳಲ್ಲಿ ಎತ್ತರದಲ್ಲಿ ದೊಡ್ಡದಾದ ಗವಾಕ್ಷಿಗಳು. ಅಲ್ಲಿಂದ ಹೊರಗೆ ಮತ್ತೆ ಗವಾಕ್ಷಿಗೆ ಈ ಪಾರಿವಾಳ ಹಾರುತ್ತಿದೆ. ಹಾಗಿದ್ದರೆ ಅಲ್ಲೇನಿರಬಹುದು ಎಂದು ನಿರುಕಿಸಿ ನೋಡಿದರೆ ಅಲ್ಲಿ ಮತ್ತೊಂದು ಪಾರಿವಾಳ ಕುಳಿತಿದೆ! ಕ್ಷಣಾರ್ಧದಲ್ಲಿ ನನಗೆ ಎಲ್ಲಾ ಅರ್ಥವಾಯಿತು. ಆ ಜೋಡಿ ಪಾರಿವಾಳಗಳ ಮಧ್ಯೆ ಜರುಗಿರಬಹುದಾದ, ಮಾತಿಲ್ಲದ ಮೌನದ ಸಂವೇದನೆಗಳನ್ನು ಮನಸ್ಸು ಊಹಿಸಿಕೊಳ್ಳತೊಡಗಿತು.
ಪ್ರಕೃತಿಯ ನಿಯಮಕ್ಕೊಳಪಟ್ಟು ಒಂದನ್ನೊಂದು ಮೆಚ್ಚಿ, ಆರಿಸಿ, ಒಪ್ಪಿಕೊಂಡ ಗಂಡು- ಹೆಣ್ಣು ಪಾರಿವಾಳಗಳ ಜೋಡಿ ಅದಾಗಿತ್ತು. ಗಂಡು ಹೆಣ್ಣನ್ನು ಕುರಿತು ” ನೀನು ನಮ್ಮ ವಂಶವನ್ನು ಮುಂದುವರಿಸಬೇಕು. ನಂತರದಲ್ಲಿ ನೀನು ಮಾಡಬೇಕಾದ ಕೆಲಸ ಬಹಳ ಇರುವುದರಿಂದ ಈಗ ಸ್ವಲ್ಪ ಆರಾಮಾಗಿರು. ನಮ್ಮ ಮರಿಗಳಿಗೆ ಹಾಗೂ ನಿನಗೆ ರಕ್ಷಣೆ ನೀಡುವಂಥ, ಅನುಕೂಲವಾದ ಮನೆಯೊಂದನ್ನು ಆದಷ್ಟು ಬೇಗ ನಾನು ಕಟ್ಟಿಕೊಡುತ್ತೇನೆ. ನೀನಿಲ್ಲೆ ಇರು, ಇಗೋ ಬಂದೆ” ಎನ್ನುತ್ತಾ ಹಾರಿ ಹೋಗುವ ಪಾರಿವಾಳ, ಮರಳಿ ಬರುವಾಗ ತನ್ನ ಕೊಕ್ಕಿನಲ್ಲಿ ಒ೦ದು ಕಡ್ಡಿಯನ್ನೋ, ನಾರನ್ನೋ ತರುತ್ತಿತ್ತು. ಪ್ರತಿಯೊಂದು ಕಡ್ಡಿಯನ್ನು ಆರಿಸಿ, ಕೊಕ್ಕಿನಲ್ಲಿ ಹಿಡಿದು, ಹಿಂದೆ ಮುಂದೆ ಮಾಡುತ್ತಾ, ಸಮತೋಲನಕ್ಕೆ ತಂದುಕೊಂಡು ಜತನದಿಂದ ತಂದು, ಅರ್ಧ ನಿರ್ಮಾಣವಾಗಿರುವ ಗೂಡಿಗೆ ತೂರಿಸಿ, ಪರೀಕ್ಷಿಸಿ ನೋಡಿ- ಅಬ್ಬಬ್ಬಾ, ಒಂದೇ ಎರಡೇ- ಒಂದರ ಹಿಂದೆ ಮತ್ತೊಂದು ಕ್ರಿಯೆ, ಎಲ್ಲವೂ ಪೂರ್ವ ನಿರ್ಧರಿತವಾದಂತೆ ನಡೆದೇ ಇತ್ತು. ಗಂಡಿನ ಈ ಜವಾಬ್ದಾರಿಯನ್ನು, ಬದ್ಧತೆಯನ್ನು ಪ್ರಮಾಣೀಕರಿಸುವಂತೆ ಪರೀಕ್ಷಾರ್ಥವಾಗಿಯೋ, ಸಾಕ್ಷೀಭಾವದಲ್ಲಿಯೋ ಹೆಣ್ಣು ಪಾರಿವಾಳ ತಣ್ಣಗೆ ಕುಳಿತಿತ್ತು. ನೋಡು ನೋಡುತ್ತಿದ್ದಂತೆ ಮೂರು ಗಂಟೆಗಳ ಪರೀಕ್ಷೆ ಮುಗಿದು ಉತ್ತರ ಪತ್ರಿಕೆಗಳನ್ನು ಕಛೇರಿಯಲ್ಲಿ ಕೊಟ್ಟು ಮನೆಗೆ ಹೊರಟರೂ ಮನಸ್ಸಿನ ಮೂಲೆಯಲ್ಲಿ ಆ ಪಾರಿವಾಳ ಬಡಿದೆಬ್ಬಿಸಿದ್ದ ತರಂಗಗಳು ಮಾತ್ರ ನನ್ನ ಯೋಚನಾಲಹರಿಗೆ ಆಹಾರ ನೀಡುತ್ತಲೇ ಇದ್ದವು. ಮನಸ್ಸು ಎಲ್ಲಿಂದ ಎಲ್ಲಿಗೋ ಹರಿದಾಡುತ್ತಲಿತ್ತು.
ಅಲ್ಲಾ, ಯಕಶ್ಚಿತ್ ಒಂದು ಪಾರಿವಾಳಕ್ಕೆ ಜೀವನದ ಬಗ್ಗೆ ಇಷ್ಟು ಆಸಕ್ತಿ, ಬದ್ಧತೆ, ಪ್ರೀತಿ ಇದ್ದರೆ, ನಮಗೆ- ಜೀವವಿಕಾಸದ ತುತ್ತತುದಿಯಲ್ಲಿದ್ದೇವೆಂದು ಬೀಗುವ ಮನುಷ್ಯರಿಗೆ ಎಷ್ಟಿರಬೇಡ! ನಾಳಿನ ನಮ್ಮ ಬದುಕಿನ ಬಗೆಗೆ, ಭವ್ಯ ಭವಿಷ್ಯದ ಬಗೆಗೆ ಆ ಪಾರಿವಾಳದಷ್ಟೇ ಜತನದಿಂದ ನಾವು ತಯಾರಿ ನಡೆಸುತ್ತಾ ಇದ್ದೇವೆಯಾ? ನನಗೇನೋ ನಮ್ಮ, ನಮ್ಮ ಮಕ್ಕಳ ಜೀವನ ಶೈಲಿಯನ್ನು ನೋಡಿದರೆ ಹಾಗೆನ್ನಿಸುವುದಿಲ್ಲ. ಸಣ್ಣ ಇರುವೆಯಿಂದ ಹಿಡಿದು ಎಲ್ಲಾ ಜೀವಿಗಳೂ ಭದ್ರ ಬದುಕನ್ನು ಕಟ್ಟಿಕೊಳ್ಳಲು ಹವಣಿಸುವುದು ಮಾತ್ರವಲ್ಲ, ಅದಕ್ಕಾಗಿ “ದುಡಿಯುತ್ತವೆ”. ನಮ್ಮನ್ನು- ಮನುಷ್ಯರನ್ನು- ಹೊರತುಪಡಿಸಿ ಬೇರಾವ ಜೀವಿಯೂ ಇಂದು ಕಷ್ಟ ಪಡದೆ ನಾಳೆಯ ಸುಖವನ್ನು ಅರಸುವುದಿಲ್ಲ! ನಮ್ಮ ಎಲ್ಲಾ ನೋವಿನ, ಸಂಕಟದ ಮೂಲವನ್ನು ಹುಡುಕುವಾಗ ಇಲ್ಲೆಲ್ಲೋ ಉತ್ತರದ ಕುರುಹು ಕಾಣುವುದಿಲ್ಲವೇ? ನಮ್ಮ ಹಿಂದಿನ ಪೀಳಿಗೆಗಳು ಪ್ರಕೃತಿಯನ್ನು ನೋಡಿ ಹೀಗೆ ಬದುಕುವುದನ್ನು ಕಲಿತಿದ್ದ ಕಾರಣ ನೆಮ್ಮದಿಯನ್ನು ಅವರ ಜೀವನದ ಅವಿಭಾಜ್ಯ ಅಂಗವಾಗಿಸಿಕೊಂಡಿದ್ದರು. ಈಗಿನವರು “ಹಾರ್ಡ್ ವರ್ಕ್” ಬದಲಿಗೆ ನಾವು ” ಸ್ಮಾರ್ಟ್ ವರ್ಕ್” ಮಾಡುತ್ತೇವೆ ಎಂದು ಬೀಗುತ್ತಾ ದಿನೇ ದಿನೇ ಜೀವನದಲ್ಲಿ ಐಶಾರಾಮವಾಗಿ ಇದ್ದಂತೆ ಮೇಲ್ನೋಟಕ್ಕೆ ಕಂಡರೂ ಒಳಗೆಲ್ಲೊ ಗೆದ್ದಲಿನಂತೆ ತಮ್ಮತನವನ್ನೇ ತಿಂದುಹಾಕುವ ವಿಚಿತ್ರ ನೋವನ್ನು ಅನುಭವಿಸುತ್ತಿದ್ದಾರೆ. ಖಾಲಿತನ, ಅರ್ಥವಾಗದ, ಮಾತುಗಳಲ್ಲಿ ವಿವರಿಸಲಾಗದ ಸಂಕಟ ಇವೆಲ್ಲಾ ಸೇರಿ ಮನುಷ್ಯನ ಬದುಕು ಟೊಳ್ಳು ಮರದಂತೆ ಯಾವಾಗಾದರೂ, ಎಲ್ಲಿಯಾದರೂ ಒಂದು ಸಣ್ಣ ಗಾಳಿಯ ಹೊಡೆತಕ್ಕೆ ಉರುಳಿ ಬೀಳುವಂತಿದೆ.
ಮನಸ್ಸು ಯಾಕೋ ಮತ್ತೆ ಗಿರಕಿ ಹೊಡೆಯುತ್ತಾ ಆ ಪಾರಿವಾಳದತ್ತ ವಾಲಿತು. ಅಷ್ಟೆಲ್ಲಾ ಕಷ್ಟಪಟ್ಟು ಗೂಡು ಕಟ್ಟಿದ ಮೇಲೆ, ಹೆಣ್ಣು ಅದನ್ನು ಪರೀಕ್ಷಿಸಿ, ಗಂಡನ್ನೂ ಅದು ಕಟ್ಟಿದ ಗೂಡನ್ನೂ ಒಪ್ಪಿ ತನ್ನದಾಗಿಸಿಕೊಂಡು, ಅವೆರಡೂ ಮಿಲನ ಹೊಂದಿ, ಅದರ ಫಲವಾಗಿ ಮೊಟ್ಟೆ ಇಟ್ಟು- ಅಬ್ಬಬ್ಬಾ ಎಷ್ಟೊಂದು ಹಂತಗಳು! ಜೀವನದ ಸಂಭ್ರಮವೇ ಹಾಗೆ. ಪ್ರತಿ ಹೆಜ್ಜೆಯನ್ನೂ ಸಂಪೂರ್ಣ ಆಸಕ್ತಿ, ಆಸ್ಥೆಯಿಂದ ಪ್ರೀತಿಸಿ ಅದೇ ಒಂದು ಉಪಾಸನೆ ಎಂಬ ಭಾವದಿಂದ ನಡೆಸಿದಾಗ ಮಾತ್ರ ಆನಂದ ಪಡೆಯಲು ಸಾಧ್ಯ. ಆದರೆ ನಾವು ಹಾಗೆ ಮಾಡುತ್ತಾ ಇದ್ದೇವೆಯಾ? ಇಲ್ಲವಾದಾಗ ಖುಷಿಯಾಗಿರಲು ಹೇಗೆ ಸಾಧ್ಯ?
ಗೂಡುಕಟ್ಟಿ, ಮೊಟ್ಟೆಯಿಟ್ಟು, ಕಾವುನೀಡಿ ಮೊಟ್ಟೆಯಿಂದ ಹೊರಬಂದ ಮರಿಗಳಿಗೆ ತುತ್ತಿಟ್ಟು ದೊಡ್ಡದಾಗಿಸುವ ಯಾವ ಹಂತದಲ್ಲಿ ಯಾದರೂ ದುಷ್ಟ ಶಕ್ತಿಯೊಂದು ಹದ್ದು- ಹಾವಾಗಿ ಕಾಡಿ ಕರುಳಿನ ಕುಡಿಯನ್ನೇ ಇನ್ನಿಲ್ಲದಂತೆ ಮುಗಿಸಿಬಿಡುವ ಅಪಾಯ, ಆಪತ್ತು ಸಣ್ಣದೇನು? ಜೀವನದ ಕನಸುಗಳನ್ನೆಲ್ಲಾ ಸರ್ವನಾಶ ಮಾಡಿಬಿಡಬಲ್ಲ ಅಂತಹ ಒಂದೊಂದು ಘಟನೆಯ ನಂತರವೂ ಏನು ಮಾಡುತ್ತವೆಂದು ನಾವು ನೋಡಿಲ್ಲವೇ? ಆ ಕಿತ್ತು ತಿನ್ನುವ ನೋವಿನ ಘಟನೆಗೆ ಮೂಕ ಸಾಕ್ಷಿಯಾಗಿ ಮತ್ತೆ ಅಷ್ಟೇ ಶ್ರದ್ಧೆಯಿಂದ, ಜೀವನ ಪ್ರೀತಿಯಿಂದ ಒಂದೊಂದೇ ಕಡ್ಡಿ, ನಾರುಗಳನ್ನು ಆರಿಸಿ ತಂದು ಬದುಕು(ಗೂಡು) ಕಟ್ಟಿಕೊಳ್ಳಲು ಆರಂಭಿಸುತ್ತವೆ. ಬದುಕು ಕೇವಲ ಸುಖದ ಸುಪ್ಪತ್ತಿಗೆಯಲ್ಲ, ಸೋಲು- ಸಂಭ್ರಮಗಳ, ನೋವು- ನಲಿವಿನ ಸರಮಾಲೆ. ಅವುಗಳಲ್ಲಿ ಒಂದನ್ನು ಆರಿಸಿಕೊಂಡು ಮತ್ತೊಂದನ್ನು ತಿರಸ್ಕರಿಸುವ ಸ್ವತಂತ್ರ ತನಗಿಲ್ಲ ಎಂಬ ಸತ್ಯವನ್ನು ಆ ಪಾರಿವಾಳ ಅರ್ಥಮಾಡಿಕೊಂಡಂತೆ ನಾವೇಕೆ ಅರಿತಿಲ್ಲ? ಜೀವನದ ಒಂದು ಸಣ್ಣ ಸೋಲು, ಹಿನ್ನಡೆ ನಮ್ಮನ್ನೇಕೆ ಇನ್ನಿಲ್ಲದಂತೆ ಕುಗ್ಗಿಸಿಬಿಡುತ್ತದೆ? ಪ್ರಾಯಶಃ ನಮ್ಮ ಜೀವನದಲ್ಲಿ
” ಯಶಸ್ಸಿನ” ಸೌಧ ಸುಭದ್ರವಾಗಿರಬೇಕಾದರೆ ಈ ಮೂರು ಆಧಾರಸ್ತಂಭಗಳನ್ನು ಸರಿಯಾದ ನೆಲೆಯಲ್ಲಿ ನಿಲ್ಲಿಸಬೇಕು. ಅವು ಯಾವುದೆಂದರೆ-
1. ಆಪತ್ತು, ಸಂಕಷ್ಟ ಬಂದಾಗ ಅದನ್ನು ನಾವೆಷ್ಟು ಧನಾತ್ಮಕವಾಗಿ, ಧೈರ್ಯದಿಂದ ಸ್ವೀಕರಿಸಬಲ್ಲೆವು?
2. ಯಾವುದೇ ನೋವಿನ ತೀವ್ರತೆ ನಮ್ಮನ್ನು ಕಾಡುವ ಸಮಯದ ಅವಧಿ ಎಷ್ಟು?( ಕೆಲವರು ಒಂದು ಘಂಟೆಯೊಳಗೆ ದುಃಖ ಮರೆತರೆ, ಮತ್ತೆ ಹಲವರಿಗೆ ಅದೇ ದುಃಖ ಹರಿಯಲು ತಿಂಗಳು ಬೇಕಾಗುತ್ತದೆ).
3. ಸುನಾಮಿಯಂಥ ವಿನಾಶಕಾರಿ, ಘಾತಕ ಘಟನೆಯ ನಂತರವೂ ಮುಂದಿನ ಬದುಕನ್ನು ಕಟ್ಟಿ ಕಾದಿಟ್ಟುಕೊಳ್ಳುವ ಸಾಮರ್ಥ್ಯ ನಮ್ಮಲ್ಲಿ ಎಷ್ಟಿದೆ?
ಹೀಗೆ ಯೋಚಿಸುತ್ತಾ ಮನೆ ತಲುಪಿದ್ದೇ ಗೊತ್ತಾಗಲಿಲ್ಲ. ಆದರೆ ಒಂದು ಯೋಚನೆಯ ಸೆಳಹು ಮೂಡಿಬಂತು. ಹದಿನೈದು ನಿಮಿಷಗಳಲ್ಲಿ ಒಂದು ಪಾರಿವಾಳದ ಹಾರಾಟ ನಮ್ಮಲ್ಲಿ ಇಷ್ಟು ಬಗೆಯ ಯೋಚನೆಯನ್ನು ಹುಟ್ಟಿ ಹಾಕಬಹುದಾದರೆ, ನಾವು ನಮ್ಮ ಒಳಗಣ್ಣಿನಿಂದ ಪ್ರಕೃತಿಯನ್ನೂ ಅದರ ಆಗುಹೋಗುಗಳನ್ನೂ ಆಳವಾಗಿ ಗಮನಿಸದರೆ ಇನ್ನೆಷ್ಟು ಸತ್ಯದರ್ಶನವಾಗಬಲ್ಲದೇನೋ! ಇಷ್ಟಕ್ಕೂ ಜೀವನ ಜ್ಞಾನದಲ್ಲಿ ನಮ್ಮನ್ನು ಹಿಂದಿಕ್ಕಿದ ನಮ್ಮ ಹಿರಿಯರು, ದಾರ್ಶನಿಕರು ಮಾಡಿದ್ದು ಇದನ್ನೇ ಅಲ್ಲವೇ! ನಮ್ಮ ಮುಂದಿನ ಪೀಳಿಗೆಗೆ ಬದುಕಿನಲ್ಲಿ ಕೇವಲ ಅಂಕಗಳನ್ನು, ಹಣವನ್ನು ಗಳಿಸುವುದನ್ನು ಕಲಿಸುವ ಬದಲು, ಈ ಜೀವನದರ್ಶನ ಮಾಡಿಸಿದರೆ ಮನುಕುಲ ಇನ್ನಷ್ಟು ಸುಖವಾಗಿ ಬದುಕಬಹುದು.
–ಡಾ.ರೂತ್ ಶಾಂತಕುಮಾರಿ, ಮೈಸೂರು
ಚಂದವಿದೆ
ತುಂಬಾ ಚೆನ್ನಾಗಿದೆ. ಉತ್ತಮ ಸಂದೇಶವಿದೆ
ಒಂದು ಪಾರಿವಾಳದ ಮೂಲಕ ಜೀವನ ದರ್ಶನ ಮಾಡಿಸುವ ಈ ಲೇಖನ ನಮ್ಮಲ್ಲಿ ಚಿಂತನೆಗಳ ಮಹಾಪೂರವನ್ನೇ ಹರಿಸುವಂತಿದೆ ವಂದನೆಗಳು
ವಾವ್ ಪಾರಿವಾಳದ ಮೂಲಕ ನಮ್ಮ ನ್ನು ಚಿಂತನೆಗೆ ಹಚ್ಚವಂತಹ ಲೇಖನ.. ವಂದನೆಗಳು ಮೇಡಂ
ಬರಹ ಚೆನ್ನಾಗಿದೆ.
ಪ್ರಕೃತಿಯಲ್ಲಿ ಹುದುಗಿರುವ ಅನಂತ ವಿಶೇಷ ಸತ್ಯಗಳನ್ನು ಅರಿಯಲು ಒಳಗಣ್ಣು ತೆರೆಯುವ ಅವಶ್ಯಕತೆಯನ್ನು ಒತ್ತಿ ಹೇಳುವ ಲೇಖನ ಆತ್ಮೀಯವೆನಿಸಿತು.
ಪಕ್ಷಿಗಳ ಸಹಜ ಚಟುವಟಿಕೆಗಳನ್ನು ಮನುಷ್ಯರ ಭಾವನಾಲೋಕಕ್ಕೆ ತಾಳೆ ಹಾಕಿ, ಸೊಗಸಾಗಿ ಪ್ರಬಂಧ ಹೊಸೆದ ಚಾಣಾಕ್ಷತೆ ಇಷ್ಟವಾಯಿತು ಮೇಡಂ.
ನನ್ನ ಮನದಲ್ಲಿ ಮೂಡಿದ ಭಾವನೆಗಳ ವ್ಯಕ್ತರೂಪ ಈ ಬರಹ. ಮೆಚ್ಚಿದ ಎಲ್ಲ ಸ್ನೇಹಿತರಿಗೂ ಆತ್ಮೀಯ ವಂದನೆಗಳು.
ಪಾರಿವಾಳದ ಹಾರಾಟ, ಜೀವನದ ಸತ್ಯದರ್ಶನದ ಹುಡುಕಾಟಕ್ಕೆ ನಾಂದಿ ಹಾಡಿ, ಮನವನ್ನು ಚಿಂತನೆಗೆ ಹಚ್ಚಿದ ಪರಿ ಸೊಗಸಾಗಿ ಮೂಡಿ ಬಂದಿದೆ.