ಜಮ್ಮು ಕಾಶ್ಮೀರ : ಹೆಜ್ಜೆ 4

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಶ್ರೀನಗರದಿಂದ ಎಂಭತ್ತು ಕಿ.ಮೀ. ದೂರದಲ್ಲಿರುವ ಗಾಂಡರ್‌ಬಾಲ್ ಜಿಲ್ಲೆಯಲ್ಲಿರುವ ಸೋನೋಮಾರ್ಗ್ ಎಂಬ ಚೆಲುವಾದ ಗಿರಿಧಾಮದ ಕಡೆ ಹೊರಟೆವು. ಸೋನೋಮಾರ್ಗ್ ತಲುಪಿದಾಗ ಅಲ್ಲಿ ಹಿಮಪಾತವಾಗುತ್ತಿತ್ತು. ನಮ್ಮ ಜೊತೆಯಲ್ಲಿದ್ದ ಗಿರಿಜಕ್ಕನಿಗೆ ಹಿಮಪಾತ ನೋಡುವುದೆಂದರೆ ಖುಷಿಯೋ ಖುಷಿ. ವಾಹನ ನಿಲ್ಲಿಸಿ ಮರಳಿನಂತಿದ್ದ ಹಿಮವನ್ನು ಬೊಗಸೆ ತುಂಬಾ ತುಂಬಿಸಿಕೊಂಡು ಎಲ್ಲರ ಮೇಲೂ ಎರಚತೊಡಗಿದಳು, ಉಳಿದವರೂ ಅವಳಂತೆಯೇ ಹಿಮದ ಉಂಡೆಗಳನ್ನು ಮಾಡಿ ಎಸೆದಾಡಿದರು. ಸೋನೋಮಾರ್ಗ್‌ನಲ್ಲಿ ಆದ ಹಿಮಪಾತ ಎಲ್ಲರಲ್ಲೂ ಉಲ್ಲಾಸ, ಲವಲವಿಕೆ ಮೂಡಿಸಿತ್ತು. ಬೇಸಿಗೆಯಲ್ಲಿ ಹೊಂಬಣ್ಣದ ಹೂಗಳನ್ನು ತನ್ನ ಮೈತುಂಬಾ ಅರಳಿಸಿ ನಿಲ್ಲುವ ಕಣ ವೆಯಾದ್ದರಿಂದ, ಈ ಸ್ಥಳಕ್ಕೆ ಸೋನೋಮಾರ್ಗ್ ಎಂದು ಹೆಸರಿಸಿದ್ದಾರೆ. ರಮಣೀಯವಾದ ಈ ಕಣಿವೆಯನ್ನು ಸಿಂಗರಿಸಿರುವ ಹಿಮಗಿರಿಗಳು, ಹಾಲ್ನೊರೆಯಂತೆ ಹರಿಯುವ ಸಿಂಧೂ ನದಿ, ನೀಲವರ್ಣದ ಆಗಸ ಎಲ್ಲರ ಕಣ್ಮನ ಸೆಳೆಯುವುವು. ಸಾಹಸಿ ಪಯಣಿಗರಿಗೆ, ‘ವೈಟ್ ರಿವರ್ ರ್‍ಯಾಫ್ಷಿಂಗ್‘ ಲಭ್ಯ. ನಾವು ದಡದಲ್ಲಿ ನಿಂತು ಆ ಯುವಜನರ ಕೇಕೆ, ಚೀರಾಟವನ್ನು ನೋಡುತ್ತಾ ನಿಂತೆವು. ದೋಣಿ ಏರುವ ಧೈರ್ಯ ಬರಲಿಲ್ಲ.

ಇತಿಹಾಸದ ಪುಟಗಳಲ್ಲಿ ಇಣುಕಿದರೆ, ಸೋನೋಮಾರ್ಗ್ ಟಿಬೆಟ್ ಮೂಲಕ ಚೈನಾ, ಗಲ್ಫ್ ರಾಷ್ಟ್ರಗಳಿಗೆ ಪ್ರಮುಖ ವ್ಯಾಪಾರದ ಮಾರ್ಗವಾಗಿದ್ದುದು ಕಂಡುಬರುವುದು. ನಮ್ಮವರು ಉತ್ಪಾದಿಸುತ್ತಿದ್ದ ರೇಷ್ಮೆಗೆ ವಿಶ್ವದೆಲ್ಲೆಡೆ ಬಹಳ ಬೇಡಿಕೆ ಇತ್ತು. ಹಾಗಾಗಿ ರೇಷ್ಮೆಯನ್ನು ರಫ್ತು ಮಾಡುತ್ತಿದ್ದ ಈ ಮಾರ್ಗಕ್ಕೆ, ‘ಸಿಲ್ಕ್ ರೂಟ್‘ ಎಂದೇ ನಾಮಕರಣ ಮಾಡಿದ್ದರು. ಆಗ ನನಗೆ ನೆನಪಾಗಿದ್ದ ಪ್ರಸಂಗ – ಶೇಕ್ಸ್‌ಪಿಯರ್ ವಿರಚಿತ ನಾಟಕ, ಮರ್ಚೆಂಟ್ ಆಫ್ ವೆನಿಸ್. ವೆನಿಸ್‌ನ ಶ್ರೀಮಂತ ವ್ಯಾಪಾರಿ ಆಂಟೋನಿಯೋವಿನ ಹಡಗುಗಳು ಸಮುದ್ರದಲ್ಲಿ ಮುಳುಗಿದಾಗ, ಅವನ ಗೆಳೆಯನ ಉದ್ಗಾರವೇನು ಗೊತ್ತೆ, ‘ಸಪ್ತ ಸಮುದ್ರಗಳೆಲ್ಲಾ ರೇಷಿಮೆ ವಸ್ತ್ರ ಹೊದ್ದು ಸಾಂಬಾರ ಪದಾರ್ಥಗಳ ಪರಿಮಳ ಬೀರುತ್ತಿವೆ’ ಒಂದಾನೊಂದು ಕಾಲದಲ್ಲಿ ನಮ್ಮ ನಾಡು ರೇಷ್ಮೆ ಹಾಗೂ ಸಾಂಬಾರದ ಪದಾರ್ಥಗಳಿಗೆ ಹೆಸರುವಾಸಿಯಾಗಿತ್ತು ಎಂಬ ಮಾಹಿತಿ ಇಲ್ಲಿ ದಾಖಲಾಗಿದೆ.

ಚಾರಣಿಗರ ಸ್ವರ್ಗ ಎಂದೇ ಪ್ರಖ್ಯಾತವಾಗಿರುವ ಸೋನೋಮಾರ್ಗ್ ವರ್ಷದ ಆರು ತಿಂಗಳು ಮಾತ್ರ ಪ್ರವಾಸಿಗರಿಗೆ ತೆರೆದಿರುವುದು. ಎಲ್ಲಿ ನೋಡಿದರೂ ಸ್ಫಟಿಕದಂತೆ ಶುಭ್ರವಾಗಿ ನೀಲಮಣ ಯಂತೆ ಕಂಗೊಳಿಸುವ ಸರೋವರಗಳು ಕಾಣುತ್ತವೆ. ಅವುಗಳಲ್ಲಿ ಪ್ರಮುಖವಾದವು ವಿಶಾನ್‌ಸರ್, ಕಿಶಾನ್‌ಸರ್, ಗಡ್‌ಸರ್. ಸತ್‌ಸರ್ ಹಾಗೂ ಗಂಗಾಬಾಲ್ ಸರೋವರಗಳು. ಹಾದಿಯಲ್ಲಿ ಬರ್‌ಚಸ್, ಫರ್, ಪೈನ್, ಆಲ್‌ಪೈನ್ ಇತ್ಯಾದಿ ಕೋನಿಫೆರಸ್ ಜಾತಿಗೆ ಸೇರಿದ ಮರಗಳು ದಟ್ಟವಾಗಿ ಬೆಳೆದಿವೆ. ಈ ಅರಣ್ಯದ ಮಧ್ಯೆ ಹರಿಯುತ್ತಿದ್ದ ನೀಲಗ್ರಾಡ್ ನದಿಯನ್ನು ತೋರಿಸಿ ನಮ್ಮ ಗೈಡ್ ಹೇಳಿದ ಮಾತುಗಳು ಈಗಲೂ ಕಿವಿಯಲ್ಲಿ ಪ್ರತಿಧ್ವನಿಸುತ್ತಿವೆ ”ಈ ನದಿಯ ನೀರು ಅಮೃತದಂತೆ, ಎಲ್ಲಾ ಬಗೆಯ ರೋಗ ರುಜಿನಗಳನ್ನೂ ಗುಣಪಡಿಸುವ ಅದ್ಭುತವಾದ ಶಕ್ತಿ ಈ ನೀರಿಗಿದೆ”. ಗಿರಿಶಿಖರಗಳಲ್ಲಿ ಜನಿಸಿ ಹಲವು ಬಗೆಯ ಔಷಧೀಯ ಸಸ್ಯಗಳ ಮಧ್ಯೆ ಹರಿಯುವ ನದಿಯಲ್ಲಿ ಇಂತಹ ಸಂಜೀವಿನಿ ಶಕ್ತಿ ಖಂಡಿತವಾಗಿ ಇರಲು ಸಾಧ್ಯ ಅಲ್ಲವೇ?

PC :Internet


ನಮಗೆ ೮,೯೬೦ ಅಡಿ ಎತ್ತರದಲ್ಲಿರುವ ತಾಜ್‌ವಾಸ್ ಗ್ಲೇಸಿಯರ್ ನೋಡುವ ತವಕ, ಸುಮಾರು ಮೂರು ಕಿ.ಮೀ. ಚಾರಣ ಮಾಡಲು ಸಿದ್ಧವಿದ್ದವರು ಪರ್ವತದ ಮೇಲಿರುವ ಗ್ಲೇಸಿಯರ್ ನೋಡಲು ಹೊರಟೆವು, ಮೊದಲ ಅರ್ಧ ಕಿ.ಮೀ ಕಡಿದಾದ ಹಾದಿಯಿತ್ತು, ನಂತರದ ಹಾದಿ ಅಷ್ಟೇನೂ ದುರ್ಗಮವಾಗಿರಲಿಲ್ಲ, ಬೆಟ್ಟವನ್ನು ಸುತ್ತಿಬಳಸಿ ನಡೆದಿದ್ದೆವು, ಸುತ್ತಲಿನ ನಿಸರ್ಗದ ಚೆಲುವನ್ನು ಬಣ್ಣಿಸಲು ಪದಗಳು ಸಾಲುತ್ತಿಲ್ಲ. ಹಚ್ಚ ಹಸಿರಾದ ಹುಲ್ಲುಗಾವಲು, ಬೆಳ್ಳಿಯಂತೆ ಹೊಳೆಯುವ ಪರ್ವತಗಳ ಸಾಲು, ಸರೋವರಗಳು ನಮ್ಮ ಚಾರಣದ ಆಯಾಸವನ್ನು ಮರೆಸಿದ್ದವು. ನಮ್ಮನ್ನು ನೋಡಿದ ಮಳೆರಾಯ, ತಾನೂ ನಮ್ಮ ಜೊತೆಗೂಡಿದ, ನಮ್ಮ ಬಟ್ಟೆಯೆಲ್ಲಾ ತೊಯ್ದು ತೊಪ್ಪೆಯಾದವು. ಕೆಲವರು ಕುದುರೆಗಳ ಮೇಲೆ ಸವಾರಿ ಮಾಡುತ್ತಾ, ಸ್ನೋಪಾಯಿಂಟ್ ತಲುಪಿದರು. ಇಲ್ಲಿ ವರ್ಷದ ೩೬೫ ದಿನವೂ ಹಿಮ ಇರುವುದರಿಂದ ಸ್ನೋ ಪಾಯಿಂಟ್ ಎಂದು ಕರೆಯಲಾಗಿದೆ. ಇಲ್ಲಿಂದ ತಾಜ್‌ವಾಸ್ ಗ್ಲೇಸಿಯರ್ ಕಂಡು ಬರುವುದು. ಅಬ್ಬಾ, ಏನು ಇದರ ಭವ್ಯತೆ, ಸೌಂದರ್ಯ! ಹಿಮವನ್ನು ಹೊದ್ದು ನಿಂತಿರುವ ಗಿರಿಶಿಖರಗಳು, ಕಣ ವೆಗಳಲ್ಲಿ ಹಿಮ ಕರಗಿ ಹರಿಯುವ ನದಿಗಳೂ ಹೆಪ್ಪುಗಟ್ಟಿದ್ದವು. ಸದಾ ಚಲನಶಿಲಳಾಗಿರುವ ಗಂಗೆ ಶಿವನ ಧ್ಯಾನ ಮಾಡುತ್ತಾ ತಪಗೈಯುತ್ತಿರುವ ಹಾಗೆ ಭಾಸವಾಗಿತ್ತು. ಆದರೆ ಎಷ್ಟು ಹೊತ್ತು ಹಾಗೆ ನಿಂತಾಳು, ಅವಳ ಸಹಜ ಗುಣವಾದ ಚಲನಶೀಲತೆಯನ್ನು ಬಿಟ್ಟು. ಹಿಮಾಲಯದ ಗಿರಿಶಿಖರಗಳ ಮಧ್ಯೆ ನರ್ತಿಸುತ್ತಾ ಇಳಿದು ಬರುವ ಗಂಗೆಯ ಮೋಹಕ ಸೌಂದರ್ಯವನ್ನು ಕಂಡವರೇ ಬಲ್ಲರು. ದ.ರಾ.ಬೇಂದ್ರೆಯವರ ಗಂಗಾವತರಣ ಕವನದ ಸಾಲುಗಳು ನೆನಪಾದವು, ”ಇಳಿದು ಬಾ ತಾಯಿ ಇಳಿದು ಬಾ / ಹರನ ಜಡೆಯಿಂದ ಹರಿಯ ಅಡಿಯಿಂದ / ಋಷಿಯ ತೊಡೆಯಿಂದ ನುಸುಳಿ ಬಾ / ದೇವದೇವರನು ತಣಿಸಿ ಬಾ”

ಈ ಗ್ಲೇಸಿಯರ್‌ನಿಂದ ಹರಿದು ಬರುವ ನೀರು ಸಿಂಧೂ ನದಿಯನ್ನು ಸೇರುವುದು. ಈ ಸ್ಥಳದ ಅಪ್ರತಿಮ ಸೌಂದರ್ಯವನ್ನು ಕಂಡ ಪಾಶ್ಚಿಮಾತ್ಯರು, ಆಲ್ಪ್ಸ್‌ಆಫ್ ಕಾಶ್ಮೀರ್ ಎಂದು ಕರೆದರು. ನಮ್ಮ ನಾಡಿನ ಉತ್ತರದಲ್ಲಿರುವ ಪರ್ವತಶ್ರೇಣಿ ಹಿಮಾಲಯವು ದೇವಾನುದೇವತೆಗಳ ಆಲಯವಿದ್ದಂತೆ, ಯೂರೋಪಿನ ರಮಣೀಯವಾದ ಪರ್ವತ ಶ್ರೇಣಿ ಆಲ್ಪ್ಸ್ ಪಾಶ್ಚಿಮಾತ್ಯರ ದೇವಾನುದೇವತೆಗಳ ತವರೂರಾಗಿದೆ. ತಾಜ್‌ವಾಸ್ ಗ್ಲೇಸಿಯರ್‌ನ ಸೌಂದರ್ಯವನ್ನು ಮೆಲುಕು ಹಾಕುತ್ತಾ ಸೋನೋಮಾರ್ಗ್‌ಗೆ ಹಿಂದಿರುಗಿದೆವು. ಜಗಕ್ಕೇ ಒಡೆಯನಾದ ಅಮರನಾಥನ ಯಾತ್ರೆ ಶ್ರಾವಣದ ಪೂರ್ಣಿಮೆಯಂದು ಆರಂಭವಾಗುವುದು ಇಲ್ಲಿಂದಲೇ. ನಮ್ಮ ನೆರೆಯ ರಾಷ್ಟ್ರವಾದ ಪಾಕಿಸ್ತಾನ ೧೯೯೯ ರಲ್ಲಿ ನಡೆಸಿದ ಕಾರ್ಗಿಲ್ ಯುದ್ಧದ ನಂತರ ತಾಯ್ನಾಡಿನ ರಕ್ಷಣೆಗಾಗಿ ಭಾರತದ ಮಿಲಿಟರಿ ಪಡೆ ಇಲ್ಲಿಯೇ ಶಾಶ್ವತವಾಗಿ ಒಂದು ಶಿಬಿರವನ್ನು ಹಾಕಿದೆ. ತಮ್ಮ ಕುಟುಂಬದವರನ್ನು ಬಿಟ್ಟು ಹಿಮಾಚ್ಛಾದಿತ ಗಿರಿಶಿಖರಗಳ ಮಧ್ಯೆ ನಿಂತು ಗಡಿ ಪ್ರದೇಶವನ್ನು ಸದಾ ಎಚ್ಚರದಿಂದ ಕಾಯುತ್ತಿರುವ ವೀರ ಯೋಧರಿಗೆ ನಮ್ಮದೊಂದು ಸಲಾಂ.

(ಮುಗಿಯಿತು)
ಈ ಬರಹದ ಹಿಂದಿನ ಹೆಜ್ಜೆ ಇಲ್ಲಿದೆ:  https://www.surahonne.com/?p=39034

– ಡಾ.ಗಾಯತ್ರಿ ದೇವಿ ಸಜ್ಜನ್ , ಶಿವಮೊಗ್ಗ

11 Responses

  1. Hema says:

    ಲೇಖನ ಸರಣಿ ಚೆನ್ನಾಗಿ ಮೂಡಿಬಂತು.

    • ವಂದನೆಗಳು ಹೇಮ ಮೇಡಂ
      ನಮ್ಮಂತಹ ಲೇಖಕರನ್ನು ಪ್ರೋತ್ಸಾಹಿಸಿ ಲೇಖನಗಳನ್ನು ಪ್ರಕಟಣೆ ಮಾಡಿದ್ದೀರಾ

  2. Anonymous says:

    ಲೇಖನ ಚೆನ್ಬಾಗಿದೆ ಮೇಡಂ

  3. VEERASHEKAR. C says:

    Wonderful discrption, Mam

  4. ಬಿ.ಆರ್.ನಾಗರತ್ನ says:

    ಗಾಯತ್ರಿ ಮೇಡಂ.. ಜಮ್ಮು ಕಾಶ್ಮೀರ ದ ಬಗೆಯಪ್ರವಾಸ ಕಥನ ನಾಲ್ಕು ಕಂತುಗಳಲ್ಲಿ ಬರೆದ ಲೇಖನ… ನಿಜವಾಗಲೂ ನಾವು ನಿಮ್ಮ.. ಜೊತೆ… ಹೆಜ್ಜೆ ಹಾಕಿದಂತೆ ಕಣ್ಣಿಗೆ ಕಟ್ಟುವಂತೆ ಸೊಗಸಾಗಿ ನಿರೂಸಣೆ ಒಕ್ಕಣೆಗೊಂದು ಸಲಾಮ್

  5. Harish NS says:

    Very free flowing article madam

  6. ನಯನ ಬಜಕೂಡ್ಲು says:

    Nice

  7. ಶಂಕರಿ ಶರ್ಮ says:

    ಕಾಶ್ಮೀರದ ಸೋನೋಮಾರ್ಗ್ ನಲ್ಲಿ, ನಮ್ಮ ಹೆಜ್ಜೆಯು ನಿಮ್ಮ ಹೆಜ್ಜೆಯೊಡನೆ ಸೇರಿ ನಡೆಯಿತು. ಸೊಗಸಾದ ಪ್ರವಾಸ ಲೇಖನ…ಧನ್ಯವಾದಗಳು ಗಾಯತ್ರಿ ಮೇಡಂ.

  8. ಜ್ಞಾನೇಶ್. ಎಂ says:

    ಸೊನೋಮಾರ್ಗ್ ನಲ್ಲಿ ಅದ್ಯಾರೋ ಗಿರಿಜಕ್ಕ ಯಪ್ಪಾ ಕ್ಷಮಿಸಿ ನಿಮ್ ಅಕ್ಕ ಅನ್ನಿಸುತ್ತೆ ದಯಮಾಡಿ ಕ್ಷಮಿಸಿ , ಆ ಅಕ್ಕ ಮರಳಿನ ಉಂಡೆ ತರಹ ಹಿಮದ ಉಂಡೆ ಮಾಡಿ ಎಲ್ಲರಮೇಲೂ ಸುರಿದಿದ್ದು , ಚಲನಶೀಲ ಗಂಗೆ, ಆಲ್ಫ್ಸ್ ಆಫ್ ಕಾಶ್ಮೀರ ಅತ್ಯದ್ಭುತ ಮೇಡಂ .

  9. Padma Anand says:

    ಕಾಶ್ಮೀರಿ ಕಣಿವೆಗಳ ಬಗ್ಗೆ ಅತ್ಯಂತ ಸೊಗಸಾಗಿ, ಮಾಹಿತಿಪೂರ್ಣವಾಗಿ ಲೇಖನಗಳ ಸರಮಾಲೆಯನ್ನು ಕಟ್ಟಿಕೊಟ್ಟ ನಿಮಗೂ ದೊಡ್ಡ ಸಲಾಂ

  10. ತಮ್ಮೆಲ್ಲರ ಸಹೃದಯ ಪ್ರತಿಕ್ರಿಯೆಗಳಿಗೆ ಹೃದಯಪೂರ್ವಕ ವಂದನೆಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: