ಕನಕದಾಸರನ್ನು ನೆನೆಯುತ್ತಾ..
ಬಾಡಾದಿ ಕೇಶವನ ಭಕ್ತ ಕನಕ ದಾಸಪರಂಪರೆಯಲ್ಲಿ ಸೇರಿರುವುದೇ ಒಂದು ಅನುಪಮ. “ಕನಕದಾಸರ ಪಾದವನುಜ ಸ್ಮರಿಸುವ, ಮನುಜರೇ ಪರಮ ಧನ್ಯರು ” ದಾಸರ ಬಗೆಗಿನ ಒಂದೊಳ್ಳೆ ಉಕ್ತಿಯನ್ನು ಮತ್ತೊರ್ವ ದಾಸರಷ್ಟೇ ನೀಡಬಲ್ಲರು. ಇವರು ಹೇಳಿದಂತೆ ಕನಕದಾಸರನ್ನು ಅನವರತ ನೆನೆಯಲೇ ಬೇಕು. ಅಂದರೆ ವ್ಯಕ್ತಿಯೊಳಗಿನ ವ್ಯಕ್ತಿತ್ವವನ್ನು ಪ್ರೀತಿಸುವ ಮನ ನಮ್ಮದಾಗಬೇಕು.
ಕಾಗಿನೆಲೆಯ ತಿಮ್ಮ ಕೇಶವನ ದಯೆಯಿಂದ ಕನಕನಾಗಿದ್ದು ಎಲ್ಲರಿಗೂ ತಿಳಿದ ಇತಿಹಾಸವೇ. ಕನಕದಾಸರು ಹೆಸರಿಗೆ ತಕ್ಕಂತೆ ಪುಟವಿಟ್ಟ ಚಿನ್ನ. ಧರ್ಮಾಭಿಮಾನಿ ದೇವತೆಯ ಸ್ವರೂಪ ಎಂದೇ ಕರೆಯಿಸಿಕೊಳ್ಳುವ ದಾಸರು ಕೊನೆಯವರೆಗೂ ಧರ್ಮವನ್ನು ಕಾಪಾಡಿಕೊಂಡು ಜೀವಿಸಿದವರು.ಹುಟ್ಟು ಸಾಧಕರಾದ ಕನಕಕರು ತಿರುಪತಿ ತಿಮ್ಮಪ್ಪನ ಒಕ್ಕಲಿನಲ್ಲಿ ಜನಿಸಿ, ಹರಿಹರ ಅಬೇಧವನ್ನು ಹೇಳುವ ಭಾಗವತ ಸಂಪ್ರದಾಯದಲ್ಲಿ ಬೆಳೆದು, ಶಿವನ ಆರಾಧಕರಾಗಿ, ನಂತರ ವಿಷ್ಣುವಿನ ಆರಾಧಕರಾಗಿ , ಇಬ್ಬರನ್ನೂ ಒಪ್ಪಿ ಅಪ್ಪಿ ಆರಾಧಿಸಿ, ಯೋಗ್ಯರಾದ ಇವರು ಯೋಗಮಾರ್ಗದಲ್ಲಿ ಚಲಿಸಿ ಭಗವಂತನ ಸಾಕ್ಷಾತ್ಕಾರ ಪಡೆದವರು. ಅನೇಕ ವಿಚಾರಗಳು ಮತ್ತು ಅವರೊಳಗಿನ ವಿಶಿಷ್ಟ ಶ್ರದ್ಧೆ ಅವರ ಬದುಕನ್ನು ತಿಮ್ಮನಿಂದ ಕನಕನತ್ತ ಒಯ್ದು ಎರಡು ವಿಶೇಷ ಶಕ್ತಿಗಳೆಂದರೆ ಅತಿಶಯೋಕ್ತಿಯಲ್ಲ.
ಉತ್ತಮ ಸ್ಥಿತಿಯನ್ನು ನಿರಾಕರಿಸಿ ಸಂತನಾಗಿ ಜೀವನವನ್ನು ಸಾರ್ಥಕ ಪಡಿಸಿಕೊಂಡ ಕನಕರು ದಾಸರಾದುದೇ ಒಂದು ವಿಶೇಷ. ನೂರಾರು ಕೀರ್ತನೆಗಳನ್ನು ನಮಗೆ ನೀಡಿ, ಜೀವನದ ಮಜಲುಗಳಿಗೆ ಮೆಟ್ಟಿಲಾದವರು. ಇವರ ಒಂದೊಂದು ಕೀರ್ತನೆಗಳೂ ನಮ್ಮ ಬದುಕನ್ನು ಬದಲಿಸಿ ಸನ್ಮಾರ್ಗದಲ್ಲಿ ನಡೆಸಿಕೊಂಡು ಹೋಗುತ್ತವೆ. “ಜಗತ್ತಿನ ಸ್ವಾಮಿಯಾದ ಭಗವಂತನ ಅನುಗ್ರಹ ಸಂಪಾದನೆಗೆ ಯಜ್ಞ ದೃಷ್ಟಿಯಿಂದ ಮಾಡುವ ಕರ್ತವ್ಯವೇ ಸಾಧನೆ ಎನಿಸುವುದು. ಇದೇ ಪರಮಾತ್ಮನ ಪೂಜೆಯಾಗುವುದು” ಎನ್ನುವಲ್ಲಿ ಅವರೆಷ್ಟು ಭಗವಂತನನ್ನು ನಂಬಿದ್ದರು ಎಂದು ಅರ್ಥವಾಗುತ್ತದೆ.
ಭೂಮಿಯ ಸಾಮಾನ್ಯ ಮನುಷ್ಯನಾಗಿದ್ದವರು ಆಗಸದೆತ್ತರಕ್ಕೆ ಏರುವುದೆಂದರೆ ಅದು ಸುಲಭದ ಮಾತಲ್ಲ. ಕನಕದಾಸರು ತಮ್ಮ ಸಾಧನೆಯ ಕಥೆಯನ್ನು ‘ಹರಿಭಕ್ತಿಸಾರ’ ದಲ್ಲಿ ಹೇಳಿಕೊಂಡಿದ್ದಾರೆ. ಒಂದೊಂದು ಕೀರ್ತನೆಯೂ ಸಮಾಜದ ಓರೆಕೋರೆಗಳನ್ನುತಿದ್ದುವಂತಹ ಕೀರ್ತನೆಗಳಾದರೆ,ಕೃತಿಗಳಲ್ಲೂ ಕೂಡಾ ಜ್ಞಾನದ ಕಣ್ಣನ್ನು, ದೇಹವನ್ನು ಸಾಧನಕ್ಕೆ ಮೀಸಲಿಡೆಂದು ನಿವೇದಿಸುತ್ತಾರೆ.ಎಲ್ಲವೂ ದೈವೀಶಕ್ತಿಯ ಪ್ರಭಾವವನ್ನು ಪ್ರತಿಬಿಂಬಿಸುತ್ತದೆ.
ಭಕ್ತಿಯ ಉಕ್ತಿಗೆ ಕನಕದಾಸರೊಬ್ಬರೇ ಸರಳ ಉದಾಹರಣೆ. ನಮಗೆಲ್ಲಾ ಶ್ರೇಷ್ಠರಾದವರಲ್ಲಿ ನಾವು ಶರಣಾಗತರಾಗುತ್ತೇವೆ. ಅಂತಹ ಶ್ರೇಷ್ಠ ಶರಣಾಗತಿ ದೇವರಲ್ಲಿ ಮಾತ್ರ ಮಾಡಬಹುದು ಎಂದು ಒತ್ತಿ ಹೇಳುತ್ತಾರೆ. ಭಕ್ತಿಯ ಹಾದಿಯನ್ನು ಸುಲಭೀಕರಿಸುತ್ತಾರೆ. ತಿರುಳ್ಗನ್ನಡದ ನಾಡಲ್ಲಿ ಜನಿಸಿದ ಇವರು ಕನ್ನಡಿಗರ ನಡೆನುಡಿಗಳನ್ನು ಕಂಡಮೇಲೆ ಎಲ್ಲರೂ ಆಡುವ ಭಾಷೆಯ ಸೊಗಡನ್ನು ಬಳಸಿರುವುದು ಶ್ಲಾಘನೀಯ. ಪಡೆನುಡಿ, ನಾಣ್ಣುಡಿ, ನುಡಿಯ ನಡಿಗೆ,ನಗೆಮಾತು,ಅಲಂಕಾರ ಎಲ್ಲದರಲ್ಲೂ ಕನ್ನಡದ ಜಾನಪದ ಬಳಕೆಯಾಗಿರುವುದು ವಿಶೇಷ. ಅವರ ಕೃತಿಗಳಲ್ಲಿ ಜನಸಾಮಾನ್ಯರ ಜೀವನ, ವೃತ್ತಿ- ಪ್ರವೃತ್ತಿಗಳು, ವ್ಯವಸಾಯ, ಕೈಗಾರಿಕಾ, ವಾಣಿಜ್ಯ ವ್ಯವಹಾರ, ಜನರ ವೇಷ, ಅಡಿಗೆ ಊಟ,ಹಬ್ಬ ಹರಿದಿನ,ಉತ್ಸವ ಮೊದಲಾದ ವಿಶೇಷ ಸಂಗತಿಗಳನ್ನು ನೋಡಬಹುದು. ಒಬ್ಬ ಕವಿಯಾಗಿ ಜೀವಿಸಿ,ಸಂಚರಿಸಿ,ಅನುಭವಿಸಿ, ಸಮಾಜದ ಅಂಧತ್ವವನ್ನು ದೂರಮಾಡುವ ಪಾತ್ರದಲ್ಲಿ ಕನಕದಾಸರು ಉತ್ತಮರಾಗಿ ನಿಲ್ಲುವುದನ್ನು ನಾವು ಕಾಣಬಹುದು.
ಕನಕದಾಸರು ವಿಶ್ವಮಾನವ ಧರ್ಮಕ್ಕೆ ಸೇರಿದವರು. ಧರ್ಮ ಮತ್ತು ಅಧರ್ಮವನ್ನು ಮನುಷ್ಯ ಮಾತ್ರ ತಿಳಿಯಬಲ್ಲನು. ಹಾಗಾಗಿ ಮನುಷ್ಯ ಯಾವಾಗಲೂ ಧರ್ಮದಿಂದ ನಡೆಯಬೇಕು ಎನ್ನುವ ಮಾತು ನನಗೆ ಬಹಳ ಹಿಡಿಸಿತು.
ಕುಲದ ಕಟ್ಟಳೆ, ಜಾತಿ,ಮತ, ಪಂಥ,ಮೇಲು- ಕೀಳು, ವರ್ಣವ್ಯವಸ್ಥೆ,ಕಾಯಕದ ಸ್ಥಾನ, ಹುಟ್ಟಿನಿಂದ ಕುಲದ ತೀರ್ಮಾನ, ಚಾರಿತ್ರ್ಯದಿಂದ ಕುಲದ ತೀರ್ಮಾನ ಎಂಬಿವೀ ಸಂಗತಿಗಳ ಚರ್ಚೆಯಲ್ಲಿ ಕನಕದಾಸರಲ್ಲೂ,ಬಸವೇಶ್ವರರಲ್ಲೂ ಕ್ರಾಂತಿಕಾರಕ ನಿಲುವುಗಳನ್ನು ನೋಡುತ್ತೇವೆ. ಅದೇನೇ ಇದ್ದರೂ ಇಬ್ಬರ ತತ್ವವೊಂದೇ ವೈಚಾರಿಕತೆ. ಇಬ್ಬರೂ ಮೇಲಾಗಿ ಸಮಾಜಮುಖಿಯ ಕೆಲಸಗಳತ್ತ ಮುಖಮಾಡಿದವರು.
“ಕಾಗಿನೆಲೆಯ ಆದಿಕೇಶವ”ನ ನಾಮಾಂಕಿತದಿಂದ ಕವನಗಳನ್ನು ರಚಿಸಿದ್ದಾರೆ. ಇವರ ಕಾವ್ಯ ಸಂಪತ್ತು ಕನ್ನಡ ಸಾಹಿತ್ಯಕ್ಕೇ ಮೀಸಲಾಗಿರದೆ ಸಂಗೀತ ಕ್ಷೇತ್ರದಲ್ಲೂ ಪ್ರಮುಖ ಕೊಡುಗೆಯನ್ನು ನೀಡಿದ್ದಾರೆ. ಪಂಚರತ್ನ ಕೀರ್ತನೆಯಲ್ಲಿ ಶ್ರೀಹರಿಯ ಪಂಚ ರೂಪಗಳಾದ ನಾರಾಯಣ….ಶ್ರೀರಾಮ… ಶ್ರೀಕೃಷ್ಣ… ಗೋವಿಂದ…ಕೇಶವರ ನಾಮ ಸ್ಮರಣೆಯ ಮೂಲಕ ಸಮಸ್ತ ದುರಿತದಿಂದ ಪಾರಾಗುವ ಸರಳ ಉಪಾಯವನ್ನು ಸೊಗಸಾದ ಸಂಗೀತದಲ್ಲಿ ಕಟ್ಟಿಕೊಟ್ಟಿದ್ದಾರೆ.
“ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ”
“ಬಾಗಿಲನು ತೆರೆದು ಸೇವೆಯನು ಕೊಡೋ ಹರಿಯೇ”
“ತಲ್ಲಣಿಸದಿರು ಕಂಡ್ಯ ತಾಳು ಮನವೇ”
“ಶ್ರೀರಾಮ ಎನ್ನಿರೋ”…… “ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ನಿಮ್ಮೊಳಗಿಹನಾರಮ್ಮ”
”ನೀ ಮಾಯೆಯೊಳಗೋ ಎನ್ನೊಳು ಮಾಯೆಯೋ”
“ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ”
“ಬದುಕಿದೆನು ಬದುಕಿದೆನು ಭವ ಎನಗೆ ಇಂಗಿತೋ”
“ಈಶ ನಿನ್ನ ಚರಣ ಭಜನೆ ಆಶೆಯಿಂದ ಮಾಡುವೆನು”
…..ಇಂತಹ ಮುಂತಾದ ಗೀತೆಗಳು ಇಂದಿಗೂ ಜನಮಾನಸದಲ್ಲಿ ಸದಾಕಾಲ ಮನೆಮಾಡಿ ನಿಲ್ಲುತ್ತವೆ.
ಉಡುಪಿಯ ಕೃಷ್ಣನ ಕಣ್ಣಾರೆ ಕಂಡ ಸ್ಥಳ ಒಂದು ‘ಕನಕನ ಕಿಂಡಿ ‘ಎಂದೇ ಹೆಸರಾದುದು ಅವಿಸ್ಮರಣೀಯ. ಬಾಡಾದಿಕೇಶವನ ಕೃಪೆಯಿಂದ ಕನಕದಾಸರು ಕರುನಾಡ ದಾಸಪರಂಪರೆಯಲ್ಲಿ ದಾಸ ಶ್ರೇಷ್ಠರಾಗಿ ಸೇರಿದ್ದೇ ಒಂದು ಸಾರ್ಥಕ. ನಾಡಿನಾಚೆಗೂ ಅವರ ಕೀರ್ತಿ ಹಬ್ಬಿದೆ. ಅವರನ್ನು ನೆನೆಯುವ ನಾವೇ ಪುಣ್ಯವಂತರು.
-ಚ.ನಾ.ಭಾಗ್ಯಲಕ್ಷ್ಮಿನಾರಾಯಣ
ಧನ್ಯವಾದಗಳು ಮೇಡಂ
ಮಾಹಿತಿಪೂರ್ಣ ಸಾಂದರ್ಭಿಕ ಲೇಖನ ಧನ್ಯವಾದಗಳು ಸೋದರಿ ಭಾಗ್ಯಲಕ್ಷ್ಮಿ…
ಕನಕದಾಸರ ಕುರಿತ ವಿಸ್ತೃತ ಲೇಖನವು ಮಾಹಿತಿಪೂರ್ಣವಾಗಿದೆ….ಧನ್ಯವಾದಗಳು ಮೇಡಂ.
Nice