ಕಥೆ : ತಲ್ಲಣ….ಭಾಗ 2

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)

ಮಾರನೆಯ ದಿನ ಎಂದಿಗಿಂತ ಮುಂಚಿತವಾಗಿ ಎದ್ದು ವಾಕಿಂಗ್, ಸ್ನಾನ, ಪೂಜಾದಿಗಳನ್ನು ಮುಗಿಸಿ ತಿಂಡಿ ತಿಂದು ಕ್ಲಿನಿಕ್ಕಿಗೆ ನಡೆದರು ಜಯಂತ್. ಅದನ್ನು ಗಮನಿಸಿದ ರಜನಿ ತನ್ನ ಗಂಡನ ಸೇವಾನಿಷ್ಠೆಗೆ ಮನದಲ್ಲಿಯೇ ಮೆಚ್ಚಿಕೊಂಡು ಈ ದಿನವಾದರೂ ಆ ವ್ಯಕ್ತಿ ರಾಘವರ ಸಮಸ್ಯೆಗೆ ಪರಿಹಾರ ನೀಡು ದೇವರೇ ಎಂದುಕೊಂಡು ತನ್ನ ಕೆಲಸಗಳಲ್ಲಿ ನಿರತಳಾದಳು.

ಕ್ಲಿನಿಕ್ ಬಾಗಿಲು ತೆರೆದು ಸ್ವಚ್ಛಗೊಳಿಸಿ ಗೋಡೆಗೆ ಹಾಕಿದ್ದ ದೇವರ ಫೋಟೋ ಒರೆಸಿ ಮುಂದಿದ್ದ ದೀಪ ಹಚ್ಚಿ ಹೂ ಇಡುತ್ತಿದ್ದ ಅಟೆಂಡರ್ ಕಮಲಮ್ಮ ಡಾಕ್ಟರ್ ಬಂದದ್ದು ನೋಡಿ ಇಷ್ಟು ಬೇಗ ಬಂದಿದ್ದಾರಲ್ಲಾ ಎಂದುಕೊಂಡು ”ಇನ್ನೂ ಹತ್ತುಗಂಟೆಯಾಗಿಲ್ಲ, ಇನ್ನೂ ದೇವಪ್ಪನೂ ಬಂದಿಲ್ಲ, ಯಾರಾದರೂ ಬೇಗ ಬರುತ್ತೇವೆಂದು ಫೋನ್ ಮಾಡಿದ್ರಾ ಸರ್?” ಎಂದು ಕೇಳಿದಳು.

”ಹೂ..ಕಮಲಮ್ಮ, ದೇವಪ್ಪ ಬಂದರೆ ನನ್ನ ರೂಮಿಗೆ ಕಳಿಸು” ಎಂದು ಮಾತು ಬೆಳೆಸದೆ ಒಳನಡೆದು ತಮ್ಮ ಕುರ್ಚಿಯಮೇಲೆ ಕುಳಿತರು. ಕಣ್ಣು ಗೋಡೆಯ ಮೇಲಿದ್ದ ಗಡಿಯಾರದತ್ತ ಚಲಿಸಿತು. ಅಯ್ಯೋ ಇನ್ನೂ ಒಂಬತ್ತೂವರೆ ಎಂದು ತನ್ನವಸರಕ್ಕೆ ತಾನೇ ನಗುತ್ತಾ ಟೇಬಲ್ ಮೇಲಿದ್ದ ಆ ದಿನದ ಪೇಪರನ್ನು ಕೈಗೆತ್ತಿಕೊಂಡರು.

ಹತ್ತು ನಿಮಿಷವಾಗಿರಬಹುದು ”ಸರ್” ಎನ್ನುವ ಕರೆಯೊಂದು ಅವರನ್ನು ತಲೆಯೆತ್ತುವಂತೆ ಮಾಡಿತು. ಬಾಗಿಲಲ್ಲಿ ದೇವಪ್ಪ ನಿಂತಿದ್ದ. ಅವನಿಗೂ ಡಾಕ್ಟರ್ ಬೇಗ ಬಂದಿದ್ದಾರೆಂಬ ಅಭಿಪ್ರಾಯ ಮುಖದಲ್ಲಿ ಎದ್ದು ಕಾಣುತ್ತಿತ್ತು. ”ಹಾ ದೇವಪ್ಪ, ನನ್ನ ಪೇಷೆಂಟೊಬ್ಬರು ಫೋನ್ ಮಾಡಿದ್ದರು. ಅವರೇ ರಾಘವ, ಬಂದರೆ ಒಳಕ್ಕೆ ಕಳುಹಿಸು. ಅವರು ಹೊರಗೆ ಹೋಗುವವರೆಗೂ ಬೇರೆ ಯಾರಿಗೂ ಅಪಾಯಿಂಟ್‌ಮೆಂಟ್ ಕೊಡಬೇಡ. ನಂತರ ನಾನೇ ನಿನ್ನನ್ನು ಕರೆಯುತ್ತೇನೆ” ಎಂದರು.

‘ಓ,, ಅವರಾ ಸಾರ್, ತಿಳಿಯಿತು ಬಿಡಿ” ಎಂದು ತಲೆ ಅಲ್ಲಾಡಿಸುತ್ತಾ ತನ್ನ ಜಾಗದತ್ತ ನಡೆದ. ಅವನು ಹೋಗಿ ಸಮಾರು ಐದುನಿಮಿಷ ಆಗಿರಬಹುದು, ಮತ್ತೆ ಬಂದವನೇ ”ಸಾರ್ ಆ ರಾಘವ ಅನ್ನುವವರ ಹೆಂಡತಿಯೆಂದು ಹೇಳುತ್ತಾ ಒಬ್ಬರು ಬಂದಿದ್ದಾರೆ, ಕಳುಹಿಸಲೇ?”

ಅದನ್ನು ಕೇಳಿದ ಡಾ.ಜಯಂತ್ ಅಚ್ಚರಿಯಿಂದ ‘ಕಳಿಸು’ ಎಂದರು. ಇವರ್‍ಯಾಕೆ ಇಲ್ಲಿಗೆ ಬಂದರು? ಅಥವಾ ರಾಘವರೇ ಮತ್ತೆ ಹಿಂಜರಿಕೆಯಿಂದ ಬಾರದೆ ಇವರನ್ನು ಕಳುಹಿರಬಹುದೇ ಅಂದುಕೊಳ್ಳುವಷ್ಟರಲ್ಲಿ ”ಮೇ ಐ ಕಮಿನ್ ಸಾರ್ ”ಎಂಬ ಹೆಣ್ಣುಮಗಳೊಬ್ಬರ ಧ್ವನಿ ಅವರ ಆಲೋಚನೆಗೆ ವಿರಾಮ ಹಾಕಿ ಬಾಗಿಲೆಡೆಗೆ ತಿರುಗುವಂತೆ ಮಾಡಿತು. ಬಂದಿದ್ದಾಕೆ ಸುಮಾರು ಐವತ್ತರ ಆಸುಪಾಸಿನ ಲಕ್ಷಣವಾದ ಗೃಹಿಣಿ. ಸರಳವಾಗಿ ಅಲಂಕರಿಸಿಕೊಂಡಿದ್ದ ಆಕೆ ಉತ್ಸಾಹದ ಚಿಲುಮೆಯಂತೆ ಕಂಡರು. ತಕ್ಷಣವೇ ಜಯಂತ್ ”ಮಿ.ರಾಘವರವರು ಬರಬೇಕಾಗಿತ್ತು. ಅವರು ಹುಷಾರಾಗಿದ್ದಾರೆ ತಾನೇ? ನೀವು ಬಂದದ್ದು ಕಂಡು ನನಗೆ ಅನುಮಾನವಾಯಿತು. ಬನ್ನಿ ಬನ್ನಿ” ಎಂದು ಆಕೆಯನ್ನು ಸ್ವಾಗತಿಸಿದರು.

ಡಾಕ್ಟರರ ಮಾತಿಗೆ ಆ ಮಹಿಳೆ ನಗುತ್ತಾ ”ಗಾಭರಿಯಾಗಬೇಡಿ ನಿಮ್ಮ ಪೇಷೆಂಟ್ ರಾಘವರು ಗಟ್ಟಿಮುಟ್ಟಾಗಿದ್ದಾರೆ. ನೆನ್ನೆ ರಾತ್ರಿ ಅವರಣ್ಣನಿಂದ ಫೋನ್ ಬಂದಿತ್ತು. ಅನಿವಾರ್ಯವಾಗಿ ಹೋಗಬೇಕಾಗಿದ್ದುದರಿಂದ ಊರಿಗೆ ಹೋದರು. ಇದೇ ಸುಸಮಯವೆಂದು ನಾನು ನಿಮ್ಮಲ್ಲಿಗೆ ಭೇಟಿಯಾಗಲು ಬಂದೆ. ಅವರು ಊರಿನಲ್ಲಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ”ಎಂದರು.

‘ಏಕೆ? ಅವರು ನಿಮ್ಮನ್ನು ಹೊರಗಡೆ ಸ್ವತಂತ್ರವಾಗಿ ಹೋಗಲು ಬಿಡುವುದಿಲ್ಲವೇ?’
”ಹ್ಹೆ,,ಹ್ಹೆ,, ಹಾಗೇನಿಲ್ಲ. ನಾನು ಬ್ಯಾಂಕಿನಲ್ಲಿ ಉದ್ಯೋಗಿಯಾಗಿದ್ದೇನೆ. ನಾನು ಹೊರಗೆ ಹೋಗಲು ಅವರೇನೂ ಅಡ್ಡಿಪಡಿಸುವುದಿಲ್ಲ. ಆದರೆ ನಾನೊಬ್ಬಳೇ ಯಾವುದೇ ಖಾಯಿಲೆಯೂ ಇಲ್ಲದೆ ಡಾಕ್ಟರರ ಹತ್ತಿರ ಹೋಗುವುದು ಅವರಿಗಿಷ್ಟವಿಲ್ಲ. ನನ್ನ ಮೇಲೆ ಹೆಂಡತಿ ಏನೇನೋ ದೂರು ಹೇಳಿಬಿಡುತ್ತಾಳೆ ಎಂಬ ಅನುಮಾನ ಅವರಿಗಿದೆ, ಮೊದಲು ಅವರು ಹೀಗಿರಲಿಲ್ಲ. ವರುಷಗಳುರುಳುತ್ತಾ ಹೀಗೆ ಆಗಿದ್ದಾರೆ. ಈಗಲೂ ಅಷ್ಟೇ ನಾನಿಲ್ಲಿಗೆ ಬಂದದ್ದನ್ನು ನೀವು ಅವರಿಗೆ ಹೇಳುವುದಿಲ್ಲವೆಂದರೆ ನಾನು ನಿಮ್ಮೊಂದಿಗೆ ಕೆಲವು ಸಂಗತಿಗಳನ್ನು ತಿಳಿಸುತ್ತೇನೆ” ಎಂದಳು.

”ಖಂಡಿತ ಹೇಳುವುದಿಲ್ಲ. ನಾನೇ ನಿಮ್ಮ ಮನೆಯ ವಿಳಾಸಕ್ಕೆ ಪತ್ರ ಕಳುಹಿಸಿ ನಿಮ್ಮನ್ನು ಕರೆಸಬೇಕೆಂದಿದ್ದೆ’. ”ಎಂದರು ಡಾಕ್ಟರ್.
”ಒಳ್ಳೆಯದೇ ಆಯ್ತು, ನನಗೂ ಹೇಳಲೇಬೇಕಾದ ವಿಷಯಗಳಿವೆ”
‘ಹೇಳಿ.ಸಂಕೋಚಬೇಡ’
”ನನ್ನ ಹೆಸರು ಶಾಂಭವಿ, ನಮ್ಮೂರು ತುಮಕೂರಿನ ಸಮೀಪದ ಒಂದು ಸಣ್ಣಹಳ್ಳಿ. ನಾವು ಮಧ್ಯಮ ವರ್ಗದ ಕುಟುಂಬದವರು. ಹಾಗೇ ನನ್ನ ಗಂಡನದ್ದೂ ಕೂಡ. ಅವರ ಒಡಹುಟ್ಟಿದವರು ಒಂಭತ್ತು ಮಂದಿ. ಇವರು ಮಧ್ಯದವರು. ಎಲ್ಲರೂ ತಕ್ಕಮಟ್ಟಿಗೆ ಓದಿಕೊಂಡು ಕೆಲಸಗಳಲ್ಲಿದ್ದಾರೆ. ಅವರಲ್ಲಿ ಕೆಲವರಾಗಲೇ ನಿವೃತ್ತಿಯ ಅಂಚಿಗೆ ತಲುಪಿದ್ದಾರೆ. ನಮ್ಮನ್ನು ಹೊರತು ಪಡಿಸಿ ಮಿಕ್ಕೆಲ್ಲಾ ದಂಪತಿಗಳಿಗೆ ಮಕ್ಕಳಾಗಿವೆ”.
”ಮಧ್ಯೆ ಬಾಯಿ ಹಾಕುತ್ತೇನೆಂದು ತಪ್ಪು ಭಾವಿಸಬೇಡಿ. ನಿಮಗೆ ಮಕ್ಕಳಾಗದೆ ಇರಲು ಕಾರಣ? ವೈಜ್ಞಾನಿಕವಾಗಿ ಈಗ ಇಂತಹ ಸಮಸ್ಯೆಗೆ ಹಲವಾರು ರೀತಿಯ ಅನುಕೂಲಗಳು ಬಂದಿವೆ. ನ್ಯೂನತೆಯನ್ನು ಸರಿಪಡಿಸಲಾಗದಂತಹ ಸಮಸ್ಯೆಯೇನಾದರೂ ಇದೆಯೇ?” ಎಂದು ಪ್ರಶ್ನಿಸಿದರು ಡಾ.ಜಯಂತ್.


”ಏನಂತ ಹೇಳಲಿ ಡಾಕ್ಟರ್, ನಮ್ಮ ಮದುವೆಯಾಗಿ ಹತ್ತು ವರ್ಷವಾದರೂ ಸಂತಾನ ಭಾಗ್ಯವಾಗಲಿಲ್ಲ. ನಾವಿಬ್ಬರೂ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಂಡೆವು. ನನ್ನಲ್ಲಿ ಯಾವ ದೋಷವೂ ಇಲ್ಲವೆಂದು ಹೇಳಿದರು. ನನ್ನವರಿಗೆ ಕೆಲವು ರೀತಿಯ ಚಿಕಿತ್ಸೆ ಪಡೆಯಿರೆಂದು ಸಲಹೆ ನೀಡಿದರು. ನನ್ನವರು ವೈದ್ಯರ ನಿರ್ದೇಶನದಂತೆ ಸ್ಪಂದಿಸಲಿಲ್ಲ. ಸುಮ್ಮನಿದ್ದುಬಿಟ್ಟರು. ಕಾಲ ಸರಿದಂತೆ ಅವರು ಕುಟುಂಬದವರ, ಬಂಧುಗಳ ಸಮಾರಂಭಗಳಿಗೆ ಹೋಗುವುದನ್ನೇ ನಿಲ್ಲಿಸಿದರು. ತಾವು ಕೆಲಸ ಮಾಡುತ್ತಿದ್ದ ಬ್ಯಾಂಕಿನ ನೌಕರಿಯಿಂದ ಸ್ವಯಂ ನಿವೃತ್ತಿ ಪಡೆದುಕೊಂಡರು. ತಮ್ಮ ಸ್ನೇಹಿತರೊಬ್ಬರು ನಡೆಸುತ್ತಿದ್ದ ಟ್ಯುಟೋರಿಯಲ್ ಸೇರಿಕೊಂಡರು. ಅಂದಿನಿಂದ ಅವರಲ್ಲಿ ತುಂಬ ಬದಲಾವಣೆಗಳಾದವು. ಅವರ ಕೋಪತಾಪ, ಅನುಮಾನ ಪ್ರಕೃತಿ ಹೆಚ್ಚಾಯಿತು. ಹಿತೈಷಿಗಳು ಕೆಲವರು ಅವರಿಗೆ ಒಂದು ಮಗುವನ್ನು ದತ್ತು ತೆಗೆದುಕೊಳ್ಳಿರೆಂದು ಸಲಹೆ ನೀಡಿದರು. ಅದರ ಕಾಲ್ಗುಣದಿಂದ ನಿಮಗೂ ಸ್ವಂತ ಮಕ್ಕಳಾಗಬಹುದು. ಎಷ್ಟೋ ಜನರಿಗೆ ಹೀಗಾಗಿದೆ ಎಂದು ಹೇಳಿದರು. ನಾನು ನನ್ನ ಪತಿಯನ್ನು ಇದಕ್ಕೆ ಒಪ್ಪಿಸಲು ಹಲವಾರು ರೀತಿಯಲ್ಲಿ ಪ್ರಯತ್ನ ಮಾಡಿದೆ. ಅದಕ್ಕವರು ಕೆಂಡಾಮಂಡಲವಾಗಿ ”ಇನ್ನೊಮ್ಮೆ ಈ ಮಾತನ್ನು ನನ್ನೆದುರಿಗೆ ಎತ್ತಬೇಡ” ಎಂದು ಅಬ್ಬರಿಸಿದರು. ಅಷ್ಟೇ ಅಲ್ಲದೆ ಡಾಕ್ಟರೇ ಯಾರಾದರೂ ನಮ್ಮ ಮನೆಗೆ ತಮ್ಮ ಮಕ್ಕಳ ಮುಂಜಿ, ನಿಶ್ಚಿತಾರ್ಥ,ವಿವಾಹ ಮೊದಲಾದ ಶುಭ ಸಮಾರಂಭಗಳಿಗೆ ಕರೆಯಲು ಬಂದಾಗ, ಮತ್ತು ಅವರ ಒಡ ಹುಟ್ಟದವರೇ ಮಕ್ಕಳ ಮಂಗಳ ಕಾರ್ಯಗಳಿಗೆ ಇವರನ್ನು ಆಹ್ವಾನಿಸಿದಾಗ ಅವರನ್ನು ವಿಚಿತ್ರ ರೀತಿಯಲ್ಲಿ ಸಂದೇಹದ ಪ್ರಶ್ನೆ ಮಾಡಲು ಪ್ರಾರಂಭಿಸಿದರು. ಬಂದವರ ಬೀಗರ ಹಿನ್ನೆಲೆಯ ಬಗ್ಗೆ ಸರಿಯಾಗಿ ವಿಚಾರಿಸಿದ್ದೀರಾ? ಗೊತ್ತಾಗಿರುವ ಹುಡುಗ, ಅಥವ ಹುಡುಗಿ ಗುಣ ನಡತೆಯ ಬಗ್ಗೆ ಅನುಮಾನದ ಆರೋಪ ಮಾಡುತ್ತಿದ್ದರು. ಅವರಲ್ಲಿ ಯಾವ್ಯಾವುದೋ ದುರಭ್ಯಾಸಗಳಿರಬಹುದು. ಅದರ ಬಗ್ಗೆ ಅವರ ಸಹೋದ್ಯೋಗಿಗಳಿಂದ ಯಾ ಮಿತ್ರವರ್ಗದಿಂದ ತಿಳಿಯಬೇಕಾಗಿತ್ತು ಎಂದೆಲ್ಲ ಕೇಳಿ ಬಂದವರಿಗೆ ತುಂಬ ಮುಜುಗರ ಉಂಟುಮಾಡುತ್ತಿದ್ದರು. ಕೆಲವು ಸಾರಿ ತಾವೇ ಅನಾಮಧೇಯ ಪತ್ರಗಳನ್ನು ಬರೆದು ಸಂಬಂಧಗಳು ಹಳಸಿಕೊಳ್ಳುವಂತಹ ಪ್ರಸಂಗವನ್ನು ತಂದೊಡ್ಡಿದ್ದಾರೆ. ಪುಣ್ಯಕ್ಕೆ ನಮ್ಮ ಸಂಬಂಧಿಕರಿಗೆ ಇವರೇ ಆ ಪತ್ರಗಳನ್ನು ಬರೆದಿದ್ದೆಂದು ತಿಳಿದಿಲ್ಲ. ಆದರೆ ನನಗೆ ಇವೆಲ್ಲವೂ ಗೊತ್ತು. ಅವುಗಳನ್ನು ಗುಟ್ಟಾಗಿ ನಾಶಮಾಡಿದ್ದೇನೆ. ಯಾರಾದರೂ ತಮ್ಮ ಮಕ್ಕಳ ಬಗ್ಗೆ ಹೆಮ್ಮೆಯಿಂದ ಮಾತನಾಡಿದರೆ ಸಾಕು , ಅವರು ಹೋದನಂತರ ”ಆಹಾ ! ಸೀಮೆಗಿಲ್ಲದ ಮಕ್ಕಳನ್ನು ಹೆತ್ತಿದ್ದಾರೆ. ಯಾವಾಗ ನೋಡಿದರೂ ಅವರುಗಳ ಗುಣಗಾನ ಮಾಡುತ್ತಲೇ ಇರುತ್ತಾರೆ. ಆ ಮಾತುಗಳನ್ನು ಕೇಳುತ್ತಿದ್ದರೆ ತಲೆಚಿಟ್ಟು ಹಿಡಿಯುತ್ತದೆ. ಈಗಿನ ಕಾಲದಲ್ಲಿ ಪುಣ್ಯವಂತ ಮಕ್ಕಳು ತಮ್ಮ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳುವಂತಿದ್ದರೆ ಈಪಾಟಿ ವೃದ್ಧಾಶ್ರಮಗಳು ಹುಟ್ಟಿಕೊಳ್ಳುತ್ತಲೇ ಇರಲಿಲ್ಲ. ಅವರಿಗೆ ಈಗಲ್ಲ ವೃದ್ಧರಾದಾಗ ತಿಳಿಯುತ್ತದೆ. ಅಬ್ಬಾ ! ನಮಗಂತೂ ಮಕ್ಕಳೇ ಇಲ್ಲದ್ದರಿಂದ ಆ ತಾಪತ್ರಯವಿಲ್ಲ” ಎಂದು ತಮಗೆ ತಾವೇ ಸಮರ್ಥನೆ ಮಾಡಿಕೊಂಡು ನೆಮ್ಮದಿ ಪಡೆಯುತ್ತಿದ್ದರು. ಅಥವಾ ವಿಕೃತ ಆನಂದವನ್ನು ಅನುಭವಿಸುತ್ತಿದ್ದರು. ಈ ಅಭ್ಯಾಸ ದಿನಗಳೆದಂತೆ ಮುಂದುವರೆಯುತ್ತಾ ಯಾವ ಮಟ್ಟಕ್ಕೆ ಮುಟ್ಟಿದೆಯೆಂದರೆ ಡಾಕ್ಟರೇ, ಅವರು ರಾತ್ರಿ ಹೊತ್ತು ಸರಿಯಾಗಿ ನಿದ್ರೆ ಮಾಡುವುದಿಲ್ಲ. ಯಾವಾವಾಗಲೋ ಎದ್ದು ಕುಳಿತು ಎಲ್ಲ ಕೋಣೆಗಳಲ್ಲಿ ಸುತ್ತುಹಾಕಿ ಲೈಟುಗಳನ್ನು ಹಾಕುವುದು, ತಮ್ಮ ಡೈರಿಯಲ್ಲಿ ಏನನ್ನೋ ಬರೆಯುವುದು, ಅದನ್ನು ಹೊಡೆದು ಹಾಕುವುದು, ಮಧ್ಯೆ ಮಧ್ಯೆ ”ಛೇ ವೇಸ್ಟ್” ಎಂದು ಹೇಳಿಕೊಳ್ಳುವುದು. ಮುಷ್ಟಿಯನ್ನು ಬಿಗಿ ಹಿಡಿದು ಅವುಡುಗಚ್ಚುವುದು, ಹೀಗೆಲ್ಲಾ ಮಾಡುತ್ತಿರುತ್ತಾರೆ. ನಮ್ಮಿಬ್ಬರ ನಡುವೆ ದೈಹಿಕ ಸಂಪರ್ಕ ನಿಂತುಹೋಗಿ ಐದುವರ್ಷಕ್ಕೂ ಹೆಚ್ಚು ಕಾಲವಾಗಿದೆ. ನಾನು ಬೇರೆ ಯಾರೊಡನೆಯಾದರೂ ಸಲುಗೆಯಿಂದ ಮಾತನಾಡುವುದನ್ನೂ ಅವರು ಸಹಿಸುವುದಿಲ್ಲ. ದೈಹಿಕವಾಗಿ ನನ್ನನ್ನು ಹೊಡೆದು ಬಡಿದು ಹಿಂಸಿಸುವುದಿಲ್ಲ. ಆದರೆ ತಮ್ಮನ್ನು ತಾವೇ ನಿಂದಿಸಿಕೊಳ್ಳುತ್ತಾರೆ. ಅವರು ವಿದ್ಯಾವಂತರು, ಜ್ಞಾನವುಳ್ಳವರು ಹೀಗೇಕೆ ನಡೆದುಕೊಳ್ಳುತ್ತಾರೆ ಎನ್ನಿಸುತ್ತದೆ. ಅವರಿಗೆ ಮಾನಸಿಕವಾಗಿ ಏನೊ ಸಮಸ್ಯೆಯುಂಟಾಗಿರಬಹುದು. ಆದರೆ ವೈದ್ಯರಲ್ಲಿಗೆ ಹೋಗುವುದಿಲ್ಲ. ನಾನು ಬಹಳ ಒತ್ತಾಯ ಮಾಡಿದ್ದಕ್ಕೆ ನಿಮ್ಮಲ್ಲಿಗೆ ಬಂದಿದ್ದಾರೆ. ಆದರೇನು ತಮ್ಮಮುಂದೆಯೂ ಏನನ್ನೂ ಹೇಳಿಕೊಂಡಿಲ್ಲ ಎಂಬುದು ತಿಳಿಯಿತು. ನಾನೇ ನಿಮ್ಮ ಬಳಿಗೆ ಬರಬೇಕೆಂದಿದ್ದೆ. ಅದಕ್ಕೆ ಈಗ ಅವಕಾಶ ಸಿಕ್ಕಿತು. ಆಫೀಸಿಗೆ ರಜೆಹಾಕಿ ಬಂದಿದ್ದೇನೆ. ಅವರ ವಿಚಿತ್ರ ನಡವಳಿಕೆಗಳು ಅತಿರೇಕಕ್ಕೆ ಹೋಗುವ ಮುನ್ನ ಹೇಗಾದರೂ ಅವರ ಬಾಯಿಬಿಡಿಸಿ ಸಮಸ್ಯೆಗೆ ಸೂಕ್ತ ಪರಿಹಾರ ನೀಡಲು ನಮ್ಮಲ್ಲಿ ಸೆರಗೊಡ್ಡಿ ಬೇಡುತ್ತೇನೆ” ಎಂದು ತಮ್ಮ ಕಣ್ಣೀರನ್ನು ಒತ್ತಿಕೊಂಡರು.

ಇದೆಲ್ಲವನ್ನೂ ಸಾವಕಾಶವಾಗಿ ಆಲಿಸಿದ ಡಾ.ಜಯಂತ್‌ರವರಿಗೆ ಮನದ ಯಾವುದೋ ಮೂಲೆಯಲ್ಲಿ ಬೆಳಕೊಂದು ಗೋಚರವಾದಂತಾಯಿತು. ”ದುಃಖಿಸಬೇಡಿ ತಾಯಿ, ನಿಮ್ಮವರ ಸಮಸ್ಯೆ ಅಷ್ಟೇನೂ ಗನಹವಾದದ್ದಲ್ಲ. ಹಾಗೆಂದು ಅದನ್ನು ಉದಾಸೀನ ಮಾಡುವಂತೆಯೂ ಇಲ್ಲ. ಮೇಲಿಂದಮೇಲೆ ಅವರನ್ನು ಇಲ್ಲಿಗೆ ಹೋಗುವಂತೆ ಪ್ರೇರೇಪಿಸುತ್ತಿರಿ. ಮಿಕ್ಕಿದ್ದನ್ನು ನನಗೆ ಬಿಡಿ. ಸಂಪರ್ಕಕ್ಕಾಗಿ ನಿಮ್ಮ ಮೊಬೈಲ್ ನಂಬರ್ ನನಗೆ ಕೊಟ್ಟಿರಿ. ಅಪ್ಪಿತಪ್ಪಿಯೂ ನೀವಿಲ್ಲಗೆ ಬಂದಿರುವ ವಿಚಾರವನ್ನು ನಿಮ್ಮವರಿಗೆ ತಿಳಿಯದಂತೆ ಕಾಪಾಡಿಕೊಳ್ಳುತ್ತೇನೆ” ಎಂದು ಭರವಸೆ ನೀಡಿ. ಶಾಂಭವಿಯವರ ಫೋನ್ ನಂಬರ್ ಪಡೆದುಕೊಂಡು ಅವರನ್ನು ಬೀಳ್ಕೊಂಡರು.

ಮತ್ತೊಂದುವಾರ ಕಳೆಯಿತು. ರಾಘವರ ಪತ್ತೆಯಿಲ್ಲ. ಅವರ ಪತ್ನಿ ಶಾಂಭವಿಯವರೇ ನಾಳೆ ನಾಳಿದ್ದರಲ್ಲಿ ಅವರು ನಿಮ್ಮನ್ನು ಭೇಟಿಯಾಗಬಹುದು. ನಾನು ಸಾಮ,ದಾನ,ಭೇದ,ದಂಡ ಎಲ್ಲ ಚತುರೋಪಾಯಗಳನ್ನು ಮಾಡಿ ಅವರನ್ನು ಒಪ್ಪಿಸಿದ್ದೇನೆ. ಅದರಲ್ಲಿ ದಂಡವೆಂದರೆ ಅವರನ್ನು ದಂಡಿಸುವುದಲ್ಲ ನನ್ನನ್ನೇ ದಂಡಿಸಿಕೊಂಡಿದ್ದೇನೆಂಬ ಮಾರ್ಮಿಕವಾದ ಸಂದೇಶ ಕಳುಹಿಸಿದ್ದರು. ಅದರಂತೆ ಒಂದು ದಿನ ಪೇಷೆಂಟುಗಳೆಲ್ಲ ಖಾಲಿಯಾಗಿ ಸಂದರ್ಶನದ ಸಮಯ ಮುಗಿದು ಮನೆಗೆ ಊಟಕ್ಕೆ ಹೊರಡಬೇಕೆನ್ನುವಷ್ಟರಲ್ಲಿ ಡಾಕ್ಟರರ ಮೊಬೈಲ್ ಶಬ್ದಮಾಡಿತು. ನಂಬರ್ ನೋಡಿದರೆ ರಾಘವರದ್ದೇ. ತಡಮಾಡದೆ ”ಹಲೋ” ಎಂದರು ಡಾ.ಜಯಂತ್.
ಆ ಕಡೆಯಿಂದ ”ಡಾಕ್ಟರೇ ನಾನು ರಾಘವ, ನಿಮ್ಮ ಕ್ಲಿನಿಕ್ಕಿನ ಹೊರಗಡೆ ಇದ್ದೇನೆ. ಪೇಷೆಂಟುಗಳೆಲ್ಲ ಹೋಗಲೆಂದು ಕಾಯುತ್ತಿದ್ದೆ. ಈಗ ಬರಬಹುದೇ? ನಿಮಗೆ ತೊಂದರೆಯಾಗುತ್ತದೆಯೇ?” ಎಂದು ಕೇಳಿದರು.

ಅವರಾಗಿಯೇ ಬಂದಿದ್ದಾರೆ, ಈ ಅವಕಾಶವನ್ನು ಕಳೆದುಕೊಳ್ಳಬಾರದು ಎಂದುಕೊಂಡು ”ಬನ್ನಿ ಬನ್ನಿ” ಎಂದು ದೇವಪ್ಪನಿಗೂ ಸೂಕ್ಷ್ಮವಾಗಿ ವಿಷಯ ತಿಳಿಸಿ ಅವರು ಬಂದತಕ್ಷಣ ಒಳಕ್ಕೆ ಕಳುಹಿಸಲು ಹೇಳಿದರು. ಅವರ ಸೂಚನೆಯಂತೆ ರಾಘವರು ಬಂದ ಕೂಡಲೇ ಚಪ್ಪಲಿ ಹೊರಗಡೆ ಬಿಟ್ಟು ಒಳಕ್ಕೆ ಹೋಗಿ ”ಡಾಕ್ಟರು ನಿಮಗೇ ಕಾಯುತ್ತಿದ್ದಾರೆ” ಎಂದು ಅವರನ್ನು ಕಳುಹಿಸಿಕೊಟ್ಟ.
ಒಳಗೆ ಬಂದ ರಾಘವ ಜಯಂತ್‌ಗೆ ನಮಸ್ಕರಿಸಿ ಏನೇನೋ ಕೆಲಸಗಳ ಒತ್ತಡದಿಂದ ಬರಲಾಗಲಿಲ್ಲ. ಎಂದು ದೈನ್ಯತೆಯೇ ಮೂರ್ತಿವೆತ್ತಂತೆ ಮೈಯೆಲ್ಲವನ್ನು ಹಿಡಿಯಾಗಿಸಿ ಹೇಳಿಕೊಂಡರು.

”ಪರವಾಗಿಲ್ಲ ರಾಘವರೇ..ಬನ್ನಿ ಕುಳಿತುಕೊಳ್ಳಿ” ತಮ್ಮ ಮುಂದುಗಡೆಯಿದ್ದ ಕುರ್ಚಿಯ ಕಡೆಗೆ ಕೈತೋರಿದರು ಡಾ.ಜಯಂತ್.
ಸ್ವಲ್ಪ ಹೊತ್ತು ಬಂದವರು ಏನೂ ಮಾತನಾಡಲಿಲ್ಲ. ಡಾಕ್ಟರರು ರಾಘವರನ್ನೇ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಅವರ ಹೆಂಡತಿ ಶಾಂಭವಿಯವರು ಹೇಳಿದ್ದಂತೆ ತಮ್ಮೆರಡೂ ಕೈಗಳನ್ನು ಮಡಿಚುವುದು, ತೆಗೆಯುವುದು, ಮುಷ್ಟಿಮಾಡಿ ಒಂದರೊಳಗೊಂದು ಹಾಕುತ್ತಾ ಅತ್ತಿತ್ತ ನೋಡುತ್ತಾ ಏನೊ ಹೇಳಲು ತೀವ್ರ ಪ್ರಯತ್ನ ಪಡುತ್ತಿದ್ದರು.

”ಹಲೋ..ರಾಘವಾ‌ ಅವರೇ ನನಗೇನೋ ಆಗಿದೆ ಎಂದು ಹೇಳಿಕೊಂಡು ನೀವು ಕ್ಲಿನಿಕ್ಕಿಗೆ ಬಂದಿದ್ದೀರಿ. ಈ ರೀತಿ ತಮಗೆ ತಾವೇ ಅರಿತುಕೊಂಡು ಇಲ್ಲಿಗೆ ಬರುವವರ ಸಂಖ್ಯೆ ಬಹಳ ಕಡಿಮೆ. ನೀವು ಬುದ್ಧಿವಂತರು, ಕಾಣಲಿಕ್ಕೂ ಸ್ಮಾರ್ಟಾಗಿದ್ದೀರಿ, ಆದರೆ ಯಾವುದೋ ಚಿಂತೆಯಲ್ಲಿ ಅದ್ದಿ ತೆಗೆದಂತೆ ಗೋಚರಿಸುತ್ತದೆ. ದಯವಿಟ್ಟು ಮನಸ್ಸುಬಿಚ್ಚಿ ನನ್ನೊಡನೆ ಮಾತನಾಡಬಹುದು. ಅದೇನೆಂದು ಹೇಳಿ ಸಂಕೋಚಬೇಡ” ಎಂದು ಅವರನ್ನು ಹುರಿದುಂಬಿಸಿದರು ಡಾಕ್ಟರ್.

”ಅದೇ ವಿಷಯ ಡಾಕ್ಟರೇ ಬದುಕಿನಲ್ಲಿ ಮಕ್ಕಳು ಆವಶ್ಯಕವಾಗಿ ಬೇಕೇ ಬೇಕಾ?” ಎಂದು ಕೇಳಿದರು.
”ಬೇಕೇಬೇಕೆಂದೇನಿಲ್ಲ, ಏಕೆ ನಿಮಗೆ ಮಕ್ಕಳೆಂದರೆ ಇಷ್ಟವಿಲ್ಲವೇ?”
”ಹೂಂ..ಯಾರಿಗಿಷ್ಟವಿಲ್ಲ.. ಬರಿ ಇಷ್ಟಪಟ್ಟರೆ ಸಾಕೇ, ಅವರನ್ನು ಪಡೆಯಲು ಪುಣ್ಯ ಪಡೆದಿರಬೇಕಲ್ಲವೇ? ಅದನ್ನು ದೇವರು ನನ್ನಿಂದ ಕಿತ್ತುಕೊಂಡು ಬಿಟ್ಟಿದ್ದಾನೆ” ಎಂದರು.
”ಅದೇನೂ ಸಮಸ್ಯೆಯೇ ಅಲ್ಲ. ಈಗಿನ ಕಾಲದಲ್ಲಿ ಆ ಭಗವಂತನೇ ನಮಗೆ ಬೇರೆ ಮಾರ್ಗಗಳನ್ನು ಕೊಟ್ಟಿದ್ದಾನೆ. ಅಂತಹುದರಲ್ಲಿ ನೀವೇಕೆ ಇಂತಹ ನಿರ್ಧಾರಕ್ಕೆ ಬಂದಿರಿ? ವೈದ್ಯರ ಹತ್ತಿರ ಪರೀಕ್ಷೆ ಮಾಡಿಸಿಕೊಳ್ಳಬೇಕಿತ್ತು. ಅದಕ್ಕೆಲ್ಲ ಚಿಕಿತ್ಸೆಗಳಿವೆ ಪಡೆದುಕೊಳ್ಳಬಹುದು. ಸಮಸ್ಯೆಗೆ ಪರಿಹಾರಗಳಿವೆ” ಎಂದು ಕಕ್ಕುಲತೆ ತೋರುತ್ತಾ ಹೇಳಿದರು ಡಾ.ಜಯಂತ್.

”ಹಾಗೆ ಸುಮ್ಮನಿಲ್ಲ ಎಲ್ಲಾ ಪರೀಕ್ಷೆಗಳನ್ನೂ ಮಾಡಿಸಿದೆವು. ನನ್ನಾಕೆಗೆ ಯಾವುದೇ ದೋಷವಿಲ್ಲವಂತೆ. ದೋಷವಿರುವುದು ನನಗೆ. ಚಕಿತ್ಸೆ ಮಾಡಿಸಿಕೊಂಡರೂ ಪೂರ್ಣ ಭರವಸೆ ಕೊಡುವ ಬದಲು ಯಶಸ್ವಿಯಾಗಬಹುದು ಅಥವಾ ಆಗದೆಯೂ ಇರಬಹುದೆಂದು ಅಡ್ಡಗೋಡೆಯಮೇಲೆ ದೀಪವಿಟ್ಟಂತೆ ಹೇಳಿಬಿಟ್ಟರು. ಕೆಲಸ ಬೊಗಸೆ ಬಿಟ್ಟು ಅಲೆಯುವುದು ಇಷ್ಟವಿಲ್ಲದೆ ನಾನು ಸುಮ್ಮನಾಗಿಬಿಟ್ಟೆ. ನನ್ನ ಹೆಂಡತಿಗೂ ಬೇಕಾದರೆ ವಿಚ್ಛೇದನ ನೀಡುತ್ತೇನೆ ನೀನು ಬೇರೆ ವಿವಾಹವಾಗಬಹುದು ಅಂತ ಹೇಳಿದೆ. ಆಕೆ ನನ್ನ ಮಾತಿಗೊಪ್ಪದೆ ನನ್ನೊಡನೆಯೇ ಉಳಿದುಕೊಂಡಿದ್ದಾಳೆ. ಪಾಪ ಒಂದು ದಿನವೂ ನನ್ನನ್ನು ಹಂಗಿಸಿ ಮಾತನಾಡಿಲ್ಲ ತುಂಬ ಸದ್ಗುಣಿ. ಆದರೆ ನಮ್ಮ ಸುತಮುತ್ತಲಿನ ಜನರು ಸುಮ್ಮನಿರಬೇಕಲ್ಲ, ನಮಗೆ ಕಂಡಾಗಲೆಲ್ಲ ಬೇಕಾಬಿಟ್ಟಿ ಉಪದೇಶ ಕೊಡುತ್ತಿರುತ್ತಾರೆ. ಅದರಲ್ಲೂ ಮಕ್ಕಳನ್ನು ಹೆತ್ತವರಂತೂ ಯಾವಾಗ ನೋಡಿದರೂ ತಮ್ಮ ಮಕ್ಕಳ ವಿದ್ಯಾಭ್ಯಾಸ, ಸಾಧನೆ, ಕೀರ್ತಿ, ಕೆಲಸ, ಸಂಪಾದನೆ, ಅವರ ವೈವಾಹಿಕ ಜೀವನ, ಒಂದೇ ಎರಡೇ ಹೇಳುವುದರಲ್ಲೇ ತೃಪ್ತಿ ಕಾಣುತ್ತಿರುತ್ತಾರೆ. ಕೇಳಿಕೇಳಿ ಕಿವಿ ತೂತು ಬಿದ್ದೋಗಿದೆ ಎಂದು ಹೇಳುತ್ತಿದ್ದಂತೆ ಆವೇಶಕ್ಕೊಳಗಾದವರಂತೆ ಏರುಧ್ವನಿಯಲ್ಲಿ ಮಾತನಾಡುತ್ತಿದ್ದವರು ಒಮ್ಮೆಗೇ ಮುಖಮುಚ್ಚಿಕೊಂಡು ದುಃಖಿಸತೊಡಗಿದರು. ಮಧ್ಯೆ ಮಧ್ಯೆ ನಾನು ಒಬ್ಬ ನಿಷ್ಪ್ರಯೋಜಕ, ಒಂದು ಮಗುವನ್ನು ಕೊಡದ ಷಂಡ, ಪ್ರೀತಿ, ವಿಶ್ವಾಸ, ಕರುಣೆ, ಅಕ್ಕರೆ ಎಲ್ಲವನ್ನೂ ತೊರೆದ ಬರೀ ಉಸಿರಾಡುತ್ತಿರುವ ದೇಹ ಮಾತ್ರವಾಗಿದ್ದೇನೆ. ನನಗೇಕೆ ಹೀಗಾಗುತ್ತಿದೆ ಅರ್ಥವಾಗುತ್ತಿಲ್ಲ. ಇದರಿಂದ ನನಗೆ ಬಿಡುಗಡೆ ಬೇಕೆನ್ನಿಸುತ್ತಿದೆ ಆದರೆ ಸಾಧ್ಯವಾಗುತ್ತಿಲ್ಲ. ನೀವೇ ನನ್ನನ್ನು ಕಾಪಾಡಬೇಕು ಡಾಕ್ಟರೇ” ಎಂದು ಕಣ್ಣು ಮೂಗು ಒರೆಸಿಕೊಳ್ಳುತ್ತಾ ಕೈಮುಗಿದು ಬೇಡಿದರು.

ಅವರ ಈ ಸ್ಥಿತಿಯನ್ನು ನೋಡಿ ಡಾಕ್ಟರಿಗೆ ಕೆಲವು ದಿನಗಳ ಹಿಂದೆ ಶಾಂಭವಿಯವರ ಮಾತುಗಳನ್ನು ಕೇಳಿದಾಗ ಹೊಳೆದ ಬೆಳಕಿನ ಕಿರಣ ಈಗ ನಿಚ್ಚಳವಾದಂತಾಯಿತು. ಎಲ್ಲಕ್ಕೂ ತಾಳೆಹಾಕುತ್ತಾ ವೈದ್ಯರ ಬಳಿ ಚಿಕಿತ್ಸೆ ಪಡೆದೂ ಗುಣವಾಗುವ ಭರವಸೆಯೇ ಇಲ್ಲದ ರಾಘವರಿಗೆ ಅವರಿಗೆ ಅರಿವಿಲ್ಲದಂತೆ ಕೀಳರಿಮೆಯ ಮನೋಭಾವನೆ ಆವರಿಸಿಕೊಂಡಿದೆ. ಅದರಿಂದಲೇ ಅವರು ತಮಗಿಲ್ಲದ್ದನ್ನು ಮತ್ತೊಬ್ಬರಲ್ಲಿ ಕಂಡಾಗ ಅಸೂಯೆ ತಾನಾಗಿಯೇ ಮೂಡುತ್ತದೆ. ಅವರುಗಳ ಸಂತೋಷವನ್ನು ಸಹಿಸಿಕೊಳ್ಳದೆ ಅವರಿಗೇನಾದರೂ ತೊಂದರೆಯಾಗುವಂತೆ ನಡೆದುಕೊಂಡು ವಿಕೃತ ಸಂತೋಷಪಡುವುದು ಪ್ರಾರಂಭವಾಗಿಬಿಟ್ಟಿದೆ. ಒತ್ತಡ ಹೆಚ್ಚಾಗಿ ಮಾನಸಿಕ ನೆಮ್ಮದಿ ಕಳೆದುಕೊಂಡು ತಮ್ಮಲ್ಲೇ ವಿಚಿತ್ರವಾಗಿ ನಡೆದುಕೊಳ್ಳುತ್ತಾರೆ. ರೇಷಿಮೆಯ ಹುಳು ತಾನೇ ನಿರ್ಮಿಸಿಕೊಂಡ ಗೂಡಿನೊಳಗೆ ಬಂದಿಯಾಗಿ ಒದ್ದಾಡುವಂತಾಗಿದೆ ಅವರ ಸ್ಥಿತಿ. ಗೂಡನ್ನು ಒಡೆದು ಹೊರಕ್ಕೆ ಬರಬೇಕೆಂದು ಮನಸ್ಸು ಹವಣಿಸುತ್ತಿದೆ. ಈ ತುಡಿತ ಒಳ್ಳೆಯ ಲಕ್ಷಣ. ನನ್ನ ಕೆಲಸ ಮುಂದೆ ಸುಲಭ ಎಂದುಕೊಂಡರು.

”ಡಾಕ್ಟರೇ..ಡಾಕ್ಟರೇ..”ಎಂಬ ಕರೆ ಜಯಂತ್‌ರವರನ್ನು ಎಚ್ಚರಿಸಿತು. ”ಹಾ..ರಾಘವರೇ ನಿಮ್ಮದೇನೂ ದೊಡ್ಡ ಸಮಸ್ಯೆ ಅಲ್ಲವೇ ಅಲ್ಲ. ನಾನು ಹೇಳಿದಂತೆ ನೀವು ನಡೆದುಕೊಂಡರೆ ಸಾಕು, ಪರಿಹಾರವಾಗುತ್ತೆ. ನೀವು ನನ್ನ ಮಾತನ್ನು ನಂಬಿ ಖಂಡಿತ ಸಮಸ್ಯೆಯಿಂದ ಹೊರಬರುತ್ತೀರಿ. ಎಲ್ಲರಂತಾಗುತ್ತೀರಿ’.” ಎಂದು ನಗುತ್ತಾ ಭರವಸೆ ನೀಡಿದರು ಡಾ.ಜಯಂತ್.
”ಖಂಡಿತಾ ಸರ್ ನೀವು ಹೇಳಿದಂತೆಯೇ ಕೇಳುತ್ತೇನೆ”
”ಈಗೆಲ್ಲ ಚಿಂತೆ ಬಿಟ್ಟು ನೆಮ್ಮದಿಯಾಗಿ ಮನೆಗೆ ಹೊರಡಿ. ನಾನೇ ಫೋನ್ ಮಾಡಿದಾಗ ಮತ್ತೆ ಬನ್ನಿ” ಎಂದು ತಾವು ಕುಳಿತಲ್ಲಿಂದ ಎದ್ದು ಬಂದು ರಾಘವರ ಹೆಗಲಮೇಲೆ ಆತ್ಮೀಯತೆಯಿಂದ ಕೈಯಿಟ್ಟು ಅವರನ್ನು ಅಪ್ಪಿಕೊಂಡು ಹಾಗೇ ಬಾಗಿಲವರೆಗೂ ಜೊತೆಯಲ್ಲಿ ಬಂದು ಬಿಳ್ಕೊಟ್ಟರು ಡಾ.ಜಯಂತ್.

ಹೊರಡುವಾಗ ಹಿಂದಿರುಗಿ ಡಾಕ್ಟರರತ್ತ ಕೈಬೀಸಿ ನಡೆದರು ರಾಘವ.
ಇದಾದ ನಂತರ ಶಾಂಭವಿಯವರಿಗೆ ವಿಷಯ ತಿಳಿಸಿ ಅಂದಿನಿಂದ ರಾಘವರ ವಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಅವರಲ್ಲೇನಾದರೂ ಬದಲಾವಣೆಗಳಾಗುತ್ತಿದ್ದರೆ ಅವರನ್ನು ಮತ್ತೆ ಮತ್ತೆ ಕ್ಲಿನಿಕ್ಕಿಗೆ ನಾಲ್ಕಾರು ಬಾರಿ ಹೋಗಿಬರುವಂತೆ ಅವರನ್ನು ಒತ್ತಾಯಿಸಿ. ತಮಗೆ ವಿಷಯ ತಿಳಿಸುವಂತೆ ಹೇಳಿದರು ಡಾಕ್ಟರರು.

ಹೀಗೆ ಆಗಾಗ ಬಂದುಹೋಗಿ ಮನಬಿಚ್ಚಿ ಮಾತನಾಡುತ್ತಾ ಡಾಕ್ಟರರಲ್ಲಿ ರಾಘವರಿಗೆ ಆತ್ಮೀಯತೆ ಬೆಳೆಯತೊಡಗಿತು. ಜೊತೆಗೆ ಅವರೊಳಗೇ ಮಡುಗಟ್ಟಿ ಕುಳಿತಿದ್ದ ಕೀಳರಿಮೆಯ ಭಾವನೆ ಹೊರಬಂದು ಮನಸ್ಸು ತಿಳಿಯಾಗುವಂತೆ ಜಯಂತ್‌ರವರು ಅವರಿಗೆ ಭರವಸೆಯ ನುಡಿಗಳನ್ನಾಡುತ್ತಲೇ ಆರು ತಿಂಗಳುಗಳು ಕಳೆದು ಹೋದವು. ಈಗ ಯಾವುದೇ ಒತ್ತಾಯವೂ ಇಲ್ಲದೆ ತಾವೇ ಆಗಾಗ ಡಾಕ್ಟರನ್ನು ಕಾಣಲು, ಮಾತನಾಡಲು ರಾಘವರು ಬರತೊಡಗಿದರು. ಅವೆಲ್ಲವೂ ಸಾಮಾನ್ಯ ಮಾತುಕತೆಯಲ್ಲಿ ಮುಕ್ತಾಯವಾಗುತ್ತಿದ್ದವು. ಅವರಲ್ಲಿ ಯಾವುದೇ ಉದ್ವೇಗ, ಒತ್ತಡ ಕಂಡುಬರುತ್ತಿರಲಿಲ್ಲ.

ಒಂದು ದಿನ ದಿಢೀರನೆ ರಾಘವರು ತಮ್ಮ ಪತ್ನಿ ಶಾಂಭವಿಯೊಡನೆ ಡಾಕ್ಟರರ ಮನೆಗೇ ಆಗಮಿಸಿದರು. ಅವರನ್ನು ಕಂಡು ಆಶ್ಚರ್ಯವಾಯಿತು, ಅಷ್ಟೇ ಸಂತೋಷವೂ ಉಂಟಾಯಿತು. ಅವರನ್ನು ಬರಮಾಡಿಕೊಂಡು ಉಭಯಕುಶಲೋಪರಿಯಾದ ನಂತರ ರಾಘವರು ”ಡಾಕ್ಟರೇ ಮುಂದಿನ ವಾರ ಬಿಡುವು ಮಾಡಿಕೊಂಡು ತಾವು ದಂಪತಿಗಳಿಬ್ಬರೂ ನಮ್ಮ ಮನೆಗೆ ಬರಬೇಕೆಂದು ಆಹ್ವಾನಿಸುತ್ತಿದ್ದೇವೆ. ದಯವಿಟ್ಟು ಇಲ್ಲವೆನ್ನದೆ ನಮ್ಮ ಕರೆಯನ್ನು ಮನ್ನಿಸಬೇಕು” ಎಂದರು.

”ಏನು ವಿಶೇಷ ಕೇಳಬಹುದೇ?” ಎಂದು ಪ್ರಶ್ನಿಸಿದರು ಜಯಂತ್‌ರವರ ಪತ್ನಿ ರಜನಿ.
”ಮೇಡಂ, ನಾನು ಮತ್ತು ಶಾಂಭವಿ ಇಬ್ಬರೂ ಸೇರಿ ನಮ್ಮ ಮನೆಯಲ್ಲೇ ಪುಟ್ಟ ಮಕ್ಕಳಿಗಾಗಿ ಒಂದು ಮಾಂಟೆಸರಿ ಶಾಲೆ ಪ್ರಾರಂಭಿಸುತ್ತಿದ್ದೇವೆ. ನಮ್ಮದೇ ಇನ್ನೊಂದು ಮನೆಯಿತ್ತು. ಅದನ್ನು ಬಾಡಿಗೆಗೆ ಕೊಟ್ಟಿದ್ದೆವು. ಅದನ್ನು ಖಾಲಿಮಾಡಿಸಿ ಅಗತ್ಯಕ್ಕೆ ತಕ್ಕಂತೆ ಆಧುನೀಕರಿಸಿದ್ದೇವೆ. ಈ ಶಾಲೆಯಲ್ಲಿ ಕೆಲಸ ಮಾಡಲು ತರಬೇತಿಯಿರುವ ಟೀಚರ್, ಮಕ್ಕಳನ್ನು ನೋಡಿಕೊಳ್ಳಲು ಆಯಾ ಎಲ್ಲವನ್ನೂ ಗೊತ್ತುಮಾಡಿಕೊಂಡಿದ್ದೇವೆ. ಶಾಲೆ ನಡೆಸಲು ಅನುಮತಿಯನ್ನೂ ಪಡೆದುಕೊಂಡಿದ್ದೇವೆ. ಪತ್ನಿ ಶಾಂಭವಿ ಕೆಲಸದಿಂದ ಸ್ವಯಂನಿವೃತ್ತಿ ಪಡೆದಿದ್ದಾಳೆ. ಈ ಶಾಲೆಯ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾಳೆ. ನನ್ನದು ಟ್ಯುಟೋರಿಯಲ್ ಕೆಲಸ ದಿನವೆಲ್ಲಾ ಇರುವುದಿಲ್ಲ. ಬಿಡುವಿನ ವೇಳೆಯಲ್ಲಿ ನಾನೂ ಇಲ್ಲಿಯೇ ಬಂದು ಮಕ್ಕಳೊಡನೆ ಕಾಲಕಳೆಯುತ್ತೇನೆ. ಇಳಿ ವಯಸ್ಸಿನಲ್ಲಿ ನಾವು ಯಾವುದಾದರೂ ಮಗುವನ್ನು ದತ್ತು ತೆಗೆದುಕೊಂಡರೂ ಅದನ್ನು ಸಂಭಾಳಿಸುವುದು ರೂಢಿಯಿಲ್ಲದ ನಮಗೆ ಕಷ್ಟವಾಗುತ್ತದೆ. ಆದ್ದರಿಂದ ಆ ಆಲೋಚನೆಯನ್ನು ಕೈಬಿಟ್ಟು ಈ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದ್ದೇವೆ. ನಮಗೂ ಹೇಗೂ ಶಾಲೆಯ ಮಕ್ಕಳೊಡನೆ ಒಡನಾಟ ದೊರೆಯುತ್ತದೆ. ಅವರೊಡನೆ ಬೆರೆತು ನಮ್ಮ ಕೊರತೆಯೂ ನೀಗುತ್ತದೆ. ಇದೆಲ್ಲಕ್ಕೂ ಕಾರಣ ನಿಮ್ಮೊಡನೆ ಸಮಾಲೋಚನೆ, ಪಡೆದ ಸಲಹೆ. ಆದ್ದರಿಂದ ನೀವೇ ಇದನ್ನು ನಿಮ್ಮ ಹಸ್ತದಿಂದಲೇ ಪ್ರಾರಂಭಿಸಬೇಕೆಂಬುದು ನಮ್ಮ ಅಭಿಲಾಷೆ. ಖಂಡಿತ ಬರುತ್ತೀರಿ ತಾನೇ” ಎಂದು ಮುದ್ರಿಸಿದ್ದ ಕರೆಯೋಲೆಯನ್ನು ನೀಡಿ ಆಹ್ವಾನಿಸಿದರು. ರಾಘವರ ಮುಖದಲ್ಲಿ ಸಂತೋಷ, ಆತ್ಮ ವಿಶ್ವಾಸ ಎದ್ದು ಕಾಣುತ್ತಿತ್ತು. ಮನಸ್ಸನ್ನಾವರಿಸಿದ್ದ ತಲ್ಲಣ ಶಾಂತವಾಗಿತ್ತು. ಸಾಮಾನ್ಯ ಹೃದಯವಂತ ಮನುಷ್ಯರಾಗಿ ಬದಲಾಗಿದ್ದರು. ಗುಪ್ತವಾಗಿ ಕಾಡುತ್ತಿದ್ದ ಸಮಸ್ಯೆ ಪರಿಹಾರವಾಗಿತ್ತು.

ಡಾ.ಜಯಂತ್ ಶಾಂಭವಿಯವರ ಕಡೆ ನೋಟ ಬೀರಿ ಮುಗುಳ್ನಕ್ಕರು. ಆಕೆ ಕೃತಜ್ಞತೆಯಿಂದ ತಲೆ ಬಾಗಿಸಿದರು. ಡಾಕ್ಟರ್ ಮತ್ತು ರಜನಿ ಖಂಡಿತಾ ಬರುತ್ತೇವೆಂದು ಹೇಳಿದಾಗ ರಾಘವ ದಂಪತಿಗಳಿಬ್ಬರೂ ಕರಜೋಡಿಸಿ ತೃಪ್ತಿಯಿಂದ ಹಿಂದಿರುಗಿದರು.

(ಮುಗಿಯಿತು)
-ಬಿ.ಆರ್ .ನಾಗರತ್ನ, ಮೈಸೂರು

21 Responses

  1. ನಯನ ಬಜಕೂಡ್ಲು says:

    ಸೊಗಸಾದ ಕಥೆ. ಕಥೆಯ ಅಂತ್ಯ ತುಂಬಾ ಚೆನ್ನಾಗಿತ್ತು. ಸಮಸ್ಯೆಗೆ ಎಷ್ಟು ಒಳ್ಳೆಯ ಪರಿಹಾರ… ಬ್ಯೂಟಿಫುಲ್

  2. ನಯನ ಬಜಕೂಡ್ಲು says:

    ನಾಗರತ್ನ ಮೇಡಂ, ಎಷ್ಟು ಚಂದ ಬರೀತೀರಿ ನೀವು. ನಿಮ್ಮ ಬೇರೆ ಕತೆಗಳನ್ನೂ ನಮ್ಮ ಸುರಹೊನ್ನೆಯಲ್ಲಿ ಹಾಕಿ ಪ್ಲೀಸ್

  3. ನಯನ ಮೇಡಂ ನಿಮ್ಮ ಸಹೃದಯತೆಯ ಅಭಿಪ್ರಾಯ..ಜೊತೆಗೆ ಪ್ರೋತ್ಸಾಹ ದ ನೆಡಿಗಳಿಗೆ ನನ್ನ ಹೃತ್ಪೂರ್ವಕವಾದ ಧನ್ಯವಾದಗಳು..

  4. Padmini Hegde says:

    ಕಥೆ ಸೊಗಸಾಗಿದೆ

  5. Hema says:

    ತಲ್ಲಣಿಸುತ್ತಿರುವ ಮನಸ್ಸಿಗೆ ಯಾವಕಾಲಕ್ಕೂ ಪ್ರಸ್ತುತ ಎನಿಸುವ ಸಂದೇಶವನ್ನು ಬಿಂಬಿಸಿದ ಸೊಗಸಾದ ಕಥಾವಸ್ತು ಹಾಗೂ ನಿರೂಪಣೆ. ಕತೆ ಇಷ್ಟವಾಯಿತು.

  6. ನಿಮ್ಮ ಪ್ರೋತ್ಸಾಹ ಹಾಗೂ ಪ್ರತಿ ಕ್ರಿಯೆಗೆ ನನ್ನ ಅನಂತ ಧನ್ಯವಾದಗಳು ಗೆಳತಿ ಹೇಮಮಾಲಾ.

  7. chanchala says:

    ಮನಸ್ಸಿಗೆ ಅಂತ್ಯ ಸಮಾಧಾನ ಕೊಟ್ಟಿತು, ಸುಂದರವಾದ ಮನೋವೈಜ್ಞಾನಿಕ ಕಥೆ, ಇಷ್ಟ ಆಯಿತು ಗೆಳತಿ

  8. ಧನ್ಯವಾದಗಳು ಗೆಳತಿ ಚಂಚಲಾ

  9. Padma Anand says:

    ಅಬ್ಬಾ, ಕುತೂಹಲದ ತಲ್ಲಣ ಅತ್ಯಂತ ಸಮಾಧಾನದಿಂದ ಶಾಂತವಾಯಿತು. ಸಮಸ್ಯೆಗೆ ನೀಡಿದ ಪರಿಹಾರ, ಅದನ್ನು ಅತ್ಯಂತ ಸಮಂಜಸವಾಗಿ ಹೆಣೆದಿರುವ ರೀತಿ, ಇದನ್ನು ಖಂಡಿತಾ ಒಂದೊಳ್ಳೆಯ ಕಥೆಯ ಸಾಲಿನಲ್ಲಿ ನಿಲ್ಲಿಸುತ್ತದೆ. ತುಂಬು ಮನದ ಅಭಿನಂದನೆಗಳು.

  10. ತುಂಬು ಹೃದಯದಿಂದ ಧನ್ಯವಾದಗಳು… ಪದ್ಮಾಮೇಡಂ..

  11. Padma Venkatesh says:

    ಮನಸ್ಸಿನ ತಲ್ಲಣವನ್ನು ಸಮಾಧಾನದಿಂದ ಅಡಗಿಸಿದ ಕಥಾ ನಿರೂಪಣೆ ತುಂಬಾ ಚೆನ್ನಾಗಿದೆ. ಅಭಿನಂದನೆಗಳು, ರತ್ನಮ್ಮಾ.

  12. ಶಂಕರಿ ಶರ್ಮ says:

    ಮನದ ತಲ್ಲಣವನ್ನು ತಣಿಸಿದ ಕಥೆಯ ಮುಕ್ತಾಯವು ಸಾರ್ವಕಾಲಿಕ ಸತ್ಯವನ್ನು ತೆರೆದಿಟ್ಟಿದೆ…ಸೊಗಸಾದ ಮನೋವೈಜ್ಞಾನಿಕ ಕಥೆಗಾಗಿ ಧನ್ಯವಾದಗಳು… ನಾಗರತ್ನ ಮೇಡಂ.

  13. ಧನ್ಯವಾದಗಳು ಗೆಳತಿ ಪದ್ಮಾ ವೆಂಕಟೇಶ್

  14. ಸುಚೇತಾ says:

    ಕಥೆ ಚೆನ್ನಾಗಿತ್ತು. ಧನ್ಯವಾದಗಳು ಮೇಡಂ.

  15. ಧನ್ಯವಾದಗಳು ಗೆಳತಿ ಸುಚೇತಾ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: