ಮಹಾಪರಾಕ್ರಮಿ ಬಲಭೀಮ

Share Button

ಬಲವಾದ ದೇಹದಾರ್ಡ್ಯ ಇರುವವರನ್ನ, ಕಠಿಣ ಕೆಲಸ ಮಾಡುವವರನ್ನ, ಅತಿಭಾರ ಎತ್ತುವವರನ್ನ, ಮಿತಿಮೀರಿ ಉಣ್ಣುವವರನ್ನ ಅಲ್ಲದೆ ಶುಚಿ, ರುಚಿಯಾಗಿ ಅಡುಗೆ ಮಾಡಿ ಗುಟ್ಟಾಗಿ ಮುಚ್ಚಿಟ್ಟು ಹೋಗುವವರನ್ನೂ ಭೀಮಸೇನನಿಗೆ ಹೋಲಿಸಿ ಹೇಳುವ ವಾಡಿಕೆಯಿದೆ, ಯಾಕೆ?… ಏನು ಆ ಕತೆ?  ನೋಡೋಣ.

ಮಹಾಭಾರತ ಕತೆಯಲ್ಲಿರುವ ಪಂಚಪಾಂಡವರಲ್ಲಿ ದ್ವಿತೀಯನಾಗಿಯೂ ಶೋಭಿಸುತ್ತಾನೆ ಈ ನಮ್ಮ ಪುರಾಣ ಪುರುಷ.  ಭೀಮನೆಂದರೆ ಭಯಂಕರನಾದ, ಮಹಾಬಲಶಾಲಿಯಾದ, ವಿಶಾಲಕಾಯ ಉಳ್ಳವನೆಂದರ್ಥ.

ಭೀಮನ ಜನನ:  ಈತನು ಪಾಂಡು ಚಕ್ರವರ್ತಿ ಹಾಗೂ ಕುಂತಿದೇವಿಯರ ಪುತ್ರನಾಗಿ ಶೋಭಿಸಿದರೂ ಪಂಚಪಾಂಡವರು ವಿವಿಧ ದೇವತೆಗಳ ಶಕ್ತಿಯಿಂದ ಭೂಮಿಗೆ ಇಳಿದವರು. ಭೀಮಸೇನನು ವಾಯುವಿನ ಅಂಶದಿಂದ ಜನಿಸಿದವ. ಪಾಂಡು ಚಕ್ರವರ್ತಿಯು ಕುಂತಿ’ ಮತ್ತು ಮಾದ್ರಿ’ ಎಂಬ ಇಬ್ಬರು ಪತ್ನಿಯರನ್ನು ಹೊಂದಿದ್ದರೂ  `ಕಿಂದಮ’ ಋಷಿಯ ಶಾಪದಿಂದಾಗಿ ಆತನು ಮಡದಿಯರೊಂದಿಗೆ ಸಮಾಗಮಕ್ಕೆ ಆಸ್ಪದವಿಲ್ಲದಾಗುತ್ತದೆ. ಇನ್ನು ಮಕ್ಕಳ ಭಾಗ್ಯವೆಲ್ಲಿಯದು? ಇದರಿಂದಾಗಿ ಕಡುನೊಂದ ಪಾಂಡು ವನವಾಸಕ್ಕೆಂದು ಶತಶೃಂಗ ಪರ್ವತಕ್ಕೆ ತೆರಳುತ್ತಾನೆ. ಪತಿಯೊಂದಿಗೆ ಪತ್ನಿಯರೂ ಜೊತೆಗೆ ಹೋಗುತ್ತಾರಷ್ಟೇ. ಋಷಿಯ ಶಾಪ, ಸಂತಾನಹೀನತೆಯ ದುಃಖವೂ ಸೇರಿ ಪಾಂಡು ಜರ್ಝರಿತನಾಗುತ್ತಾನೆ. ಹೀಗಿರುಲು ಕುಂತಿಗೆ ತನ್ನ ಬಾಲ್ಯದಲ್ಲಿ ದೂರ್ವಾಸ ಮುನಿಗಳ ಸತ್ಕಾರದಿಂದಾಗಿ ದೊರೆತ ‘ವರ’ ನೆನಪಿಗೆ ಬರುತ್ತದೆ. ಅದೂ… ಬಯಸಿದಾಗ ಪುತ್ರ ಸಂತತಿಯ ಭಾಗ್ಯ…! ಪಾಂಡುವಿಗೆ ವಿಷಯ ತಿಳಿಸುತ್ತಾಳೆ. ಅವನ ಅನುಮತಿಯಂತೆ ಯಮಧರ್ಮನಿಂದ ಯುಧಿಷ್ಠಿರನನ್ನೂ,  ವಾಯುವಿನಿಂದ ಭಿಮಸೇನನನ್ನೂ,  ಇಂದ್ರನಿಂದ ಅರ್ಜುನನನ್ನೂ ಪಡೆಯುತ್ತಾಳೆ.

ಭೀಮನಿಗೆ ಕೆಲವಾರು ಹೆಸರುಗಳು: ಅವುಗಳಲ್ಲಿ ವೃಕೋದರ, ವಾಯುಪುತ್ರ, ಲಪವನಜ, ಅನಿಲಸುತ, ವಲಲ ಮೊದಲಾದವುಗಳು ಮುಖ್ಯವಾದವುಗಳು. ಭೀಮಸೇನನ ಜನನವು ಸಿಂಹರಾಶಿಯಲ್ಲಿ ಗುರುವೂ, ತುಲಾರಾಶಿಯಲ್ಲಿ ಸೂರ್ಯನೂ ಮಖಾ ನಕ್ಷತ್ರದಲ್ಲಿ ಚಂದ್ರನೂ ಸೇರಿದ ಶ್ರಾವಣ ಮಾಸ ತ್ರಯೋದಶಿ  ಶುಭಮುಹೂರ್ತದಲ್ಲಾಗಿ ಅಂದಿನ ಎಲ್ಲ ದೇಶದ ರಾಜರಿಗೂ ಮನಸ್ಸಿನಲ್ಲಿ ಭೀತಿಯುಂಟಾಗಿ ಅದರಿಂದ ಮೂತ್ರಸ್ರಾವವಾಯಿತಂತೆ.  ಬಾಲಕ ಭೀಮನನ್ನು ಕುಂತಿ ಆಡಿಸುತ್ತಿದ್ದಾಗ ಅವನು ಬಿದ್ದು ಬಂಡೆಯೇ ಪುಡಿಯಾಯ್ತಂತೆ!

ಬಾಲ್ಯದಲ್ಲಿ ಎಲ್ಲ ಪಾಂಡವ ಕೌರವರೂ ಕೃಪಾಚಾರ್ಯರಿಂದ ಬಿಲ್ಲುವಿದ್ಯೆ ಕಲಿತರೆ ಮುಂದೆ ಹೆಚ್ಚಿನ ವಿದ್ಯೆಗಳನ್ನು ದ್ರೋಣಾಚಾರ್ಯರಿಂದ ಕಲಿಯುತ್ತಾರೆ. ಬಾಲ್ಯಾವಸ್ಥೆಯಲ್ಲಿದ್ದಾಗ ಹುಡುಗರೆಲ್ಲ ಆಟದ ಬಯಲಲ್ಲಿ ಸೇರಿದಾಗ ಅಲ್ಲಿ ಭೀಮನು ಪ್ರತ್ಯಕ್ಷನಾದರೆ ಉಳಿದವರು ಸೋಲುವುದು ಶತಸಿದ್ಧವಾಗಿತ್ತು. ಇದರಿಂದಾಗಿ ದುರ್ಯೋಧನನಿಗೆ ಭೀಮನ ಮೇಲೆ ಮತ್ಸರ ಅಂಕುರಿಸಿತು. ಮುಂದೆ ಅದು ಪಾಂಡವರೆಲ್ಲರ ಮೇಲೆ ವಿಸ್ತರಿಸಿತು. ಭೀಮನನ್ನು ಕೊಂದು ಮುಗಿಸಬೇಕೆಂದು ದುರ್ಯೋಧನನು ಹಲವಾರು ಬಗೆಗಳಲ್ಲಿ ಯೋಚಿಸಿ ಶಕ್ತಿಯಿಂದ ಸಾಧ್ಯವಿಲ್ಲದುದನ್ನು ಯುಕ್ತಿಯಿಂದ

ಮಾಡಬೇಕೆಂದು ಕುಯುಕ್ತಿ ಉಪಯೋಗಿಸುತ್ತಾನೆ. ಈ ರೀತಿಯಲ್ಲಿ ಕೌರವನು ಭೀಮನನ್ನು ಹಸ್ತಿನಾವತಿಯ ಕೋಟಿತೀರ್ಥದ ಬಳಿ ನಿರ್ಮಿಸಿರುವ ಕ್ರೀಡಾಗೃಹಕ್ಕೆ ಒಯ್ದು ಅತಿವಾತ್ಸಲ್ಯವನ್ನು ತೋರಿಸಿ ವಿಷಯುಕ್ತ ಭಕ್ಷ್ಯಗಳನ್ನು ತಿನ್ನಿಸಿ ಮೂರ್ಛಿತನಾದ ಭೀಮನನ್ನು ಗಿಡಬಳ್ಳಿಗಳಿಂದ ಸುತ್ತಿ ನದಿಗೆ ಎಸೆದು ಏನು ಅರಿಯದವನಂತೆ ಅರಮನೆಗೆ ತೆರಳುತ್ತಾನೆ. ತಾನೊಂದು ಬಗೆದರೆ ದೈವ ಇನ್ನೊಂದು ಬಗೆಯಿತು. ಇಲ್ಲಿ ಮೋಸ, ವಂಚನೆಗೆ ದೈವ ಸಹಾಯವಿಲ್ಲ ಎಂಬ ನೀತಿ ಸಾಬೀತಾಗುತ್ತದೆ. ಭೀಮನ ದೇಹವು ನಾಗಲೋಕಕ್ಕೆ ಹೋಗಿ ನಾಗಗಳು ವಾಸುಕಿಗೆ ತಿಳಿಸುತ್ತವೆ. ಅವುಗಳ ಸಮೂಹದಲ್ಲಿದ್ದ ‘ಆರ್ಯಕ’ನೆಂಬ ಸರ್ಪರಾಜನು ತಾನು ಭೀಮನ ತಾಯಿ ಕುಂತಿಯ ಮುತ್ತಾತನೆಂದು ವಿಶದೀಕರಿಸಿದ್ದಲ್ಲದೇ, ಒಂದು ಸಾವಿರ ಅನೆಗಳ ಶಕ್ತಿಯುಳ್ಳ ಅಮೃತ ತುಂಬಿರುವ ಕೊಡವನ್ನಿತ್ತು ಹಸ್ತಿನಾವತಿಗೆ ಕಳಿಸುತ್ತಾನೆ. ದುರ್ಯೋಧನನ ಉಪಟಳದಿಂದ ಭೀಮನು ನಾಶ ಹೊಂದುವುದಕ್ಕೆ ಬದಲಾಗಿ ಮತ್ತೂ ವಿಜೃಂಭಿಸುತ್ತಾನೆ. ಮುಂದೆ ಪಾಂಚಾಲೆ ದ್ರೌಪದಿಯನ್ನು ವಿವಾಹ ಪದ್ಧತಿಯಂತೆ ಗೆದ್ದು ತಂದವನು ಅರ್ಜುನನಾದರೂ ಕುಂತಿಯ ಅಪ್ಪಣೆಯಂತೆ ಆಕೆ ಐವರಿಗೂ ಪತ್ನಿಯಾಗುತ್ತಾಳೆ.

ಭೀಮ ಪ್ರತಿಜ್ಞೆ: ಕೌರವ-ಯುಧಿಷ್ಠಿರರ ಪಗಡೆಯಾಟದಲ್ಲಿ ಶಕುನಿಯ ಕುಟಿಲೋಪಾಯದಿಂದ ಯುದಿಷ್ಠಿರ ಸೋತು ಆಟದ ನಿಯಮದಂತೆ ಆಸ್ತಿ-ಪಾಸ್ತಿ, ಸಹೋದರರು, ಪತ್ನಿ ದೌಪದಿ ಎಲ್ಲವೂ ಕೌರವನ ಪಾಲಾಗುತ್ತದೆ. ತುಂಬಿದ ಸಭೆಗೆ ದೌಪದಿಯನ್ನೆಳೆದೊಯ್ದು ಅಪಮಾನ, ಮಾನಭಂಗ ಮಾಡಲೆತ್ನಿಸಿದಾಗ ಅಕ್ಷಯಾಂಬರವನಿತ್ತು ಶ್ರೀಕೃಷ್ಣ ಕಾಪಾಡುತ್ತಾನೆ. ”ಎಳೆದೊಯ್ದ ದುಶ್ಯಾಸನ ಕರುಳನ್ನು ಬಗೆದು ‘ದೌಪದಿ, ಬಾ ತೊಡೆಯೇರು’ ಎಂದು ಬೊಗಳಿದ ಕೌರವನ ತೊಡೆಯನ್ನು ಮುರಿಯುತ್ತೇನೆ” ಎಂದು ಭೀಮನು ಭೀಕರ ಪ್ರತಿಜ್ಞೆಯನ್ನು ಮಾಡುತ್ತಾನೆ.

ಇದಕ್ಕೂ ಹಿಂದೆ ಪಾಂಡವರನ್ನು ಅರಗಿನ ಮನೆಯಲ್ಲಿ ಸುಡಬೇಕೆಂದು ಸಂಚು ಹೂಡಿದಾಗ ವಿದುರನಿಂದ ವಿಷಯ ತಿಳಿದ ಭೀಮನು ಅಲ್ಲಿಂದ ಸಹೋದರರನ್ನೂ ತಾಯಿಯನ್ನೂ ಪಾರು ಮಾಡಿ ಭೀಮನೇ ಆರಗಿನ ಮನೆಗೆ ಬೆಂಕಿ ಹಾಕಿ ಅವರೆಲ್ಲ ಕಾಡಿಗೆ ತೆರಳುತ್ತಾರೆ. ಅಲ್ಲಿ ‘ಹಿಡಿಂಬನೆಂಬ ರಾಕ್ಷಸನನ್ನು ಕೊಂದು ವ್ಯಾಸರ ಅಪ್ಪಣೆಯಂತೆ ಹಿಡಿಂಬೆಯನ್ನು ಮದುವೆಯಾಗುತ್ತಾನೆ.

ಅರಣ್ಯವಾಸ ಕಾಲದಲ್ಲಿ ಬಕಾಸುರ, ಕಿಮ್ಮೀರ, ಜಟಾಸುರ ಮೊದಲಾದ ರಾಕ್ಷಸರನ್ನು ಕೊಂದು ಮಾನವರಿಗೆ ಅವರಿಂದಾಗುವ ಉಪಟಳವನ್ನು ನೀಗುತ್ತಾನೆ. ದ್ರೌಪದಿಯ ಸ್ವಯಂವರ ನಂತರ ಕ್ಷತ್ರಿಯರು ಪಾಂಡವರನ್ನು ಪ್ರತಿಭಟಿಸಲು ಇವನು ಶಲ್ಯನನ್ನು ಸೋಲಿಸಿದನು. ರಾಜಸೂಯ ಯಾಗಕಾಲದಲ್ಲಿ ಜರಾಸಂಧನನನ್ನು ಗೆದ್ದುಕೊಂಡನು. ರಾಜಸೂಯ ಯಾಗಕಾಲದಲ್ಲೇ ‘ಮಯ’ನು ಬಿಂದು ಸರೋವರದಿಂದ ಗದೆಯನ್ನು ಇವನಿಗೆ ಕೊಟ್ಟನು. ಅಜ್ಞಾತವಾಸ ಕಾಲದಲ್ಲಿ ವಲಲನೆಂಬ ಹೆಸರಿನಿಂದ ವಿರಾಟನಗರಿಯಲ್ಲಿ ಅಡುಗೆ ಭಟ್ಟನಾಗಿದ್ದು, ಕೌರವನ ಜೀಮೂತನನ್ನೂ ವಿರಾಟನ ಮೈದುನನಾದ ಕೀಚಕನನ್ನೂ ಕೊಂದನು. ದಕ್ಷಿಣ ಗೋಗ್ರಹಣದಲ್ಲಿ ಕೌರವನನ್ನು ಗೆದ್ದನು.ಯುದ್ದದಲ್ಲಿ ಕೌರವರನ್ನೆಲ್ಲ ಕೊಂದನು. ಹದಿನೆಂಟು ದಿನ ನಡೆದ ಮಹಾಭಾರತ ಯುದ್ಧದಲ್ಲಿ ಹದಿನಾಲ್ಕನೆಯ ದಿನ ದ್ರೋಣನ ಎಂಟು ರಥಗಳನ್ನು ಮುರಿದು ಆತನ ವ್ಯೂಹವನ್ನು ಭೇದಿಸಿ ಒಳನುಗ್ಗಿದನು. ಕರ್ಣನ ಸೇನಾಪತಿಯಾಗಿದ್ದ ಕ್ಷೇಮದೂರ್ತಿಯನ್ನು ಕೊಂದನು. ಭೀಮನು ತನ್ನ ಪ್ರತಿಜ್ಞೆಯಂತೆ ಮಹಾಭಾರತ ಯುದ್ಧದಲ್ಲಿ ದುಶ್ಯಾಸನನ ಕರುಳನ್ನು ವೀರರ ಮುಂದೆಯೇ ಹೊರಗೆಳೆದು ಆತನ ರಕ್ತಪಾನ ಮಾಡಿದನು, ಸಾರಥಿ ಶಲ್ಯನ ವಧೆಯಾದ ಮೇಲೆ ದುರ್ಯೋದನನು ಮಡುವಿನಲ್ಲಿ ಅಡಗಿರಲು ಹೊರಗೆಳೆದು ತಂದು ಅವನ ತೊಡೆಗಳನ್ನು ಮುರಿದು ಕೊಂದನು. ಭೀಮನ ಆಯುಧ ಗಧೆ.  ಶಂಖದ ಹೆಸರು ಪ್ರೌಂಡ್ರ. ಭೀಮನು ಬಲರಾಮನಿಂದ ಖಡ್ಡಯುದ್ಧ, ಗದಾಯುದ್ಧ,ರಥಯುದ್ಧಾದಿಗಳನ್ನು ಕಲಿತಿದ್ದನು.

ಮಕ್ಕಳು:  ಭೀಮಸೇನನಿಗೆ ಧರ್ಮಪತ್ನಿಯಾಗಿ ದ್ರೌಪದಿಯಿದ್ದರೆ; ಹಿಡಿಂಬೆ, ಜಲಂಧರೆ, ಕಾಶಿ ಎಂಬ ಪತ್ನಿಯರಿದ್ದರು. ದ್ರೌಪದಿಯಲ್ಲಿ ಶ್ರುತಸೋಮನೂ ಜಲಂಧರೆಯಲ್ಲಿ ಶರ್ವತ್ರಾತ ಎಂಬವನೂ ಹಿಡಿಂಬೆಯಲ್ಲಿ ಘಟೋತ್ಕಚನೂ ಕಾಶಿ ಎಂಬವಳಿಗೆ ಸರ್ವಗ ಎಂಬ ಮಕ್ಕಳೂ ಇದ್ದರು.

ನಿರ್ಯಾಣ: ಯುದ್ಧವೆಲ್ಲ ಮುಗಿದ ಮೇಲೆ ಮಹಾಪ್ರಸ್ಥಾನ ಕಾಲದಲ್ಲಿ ತಮ್ಮಂದಿರೆಲ್ಲ ಬಿದ್ದ ಮೇಲೆ ಭೀಮಸೇನನು ನೆಲಕ್ಕೊರಗಿ ಸ್ವರ್ಗಸ್ಥನಾದನು, ಇಂತಹ ಮಹಾಪುರುಷ ಮಹಾಪರಾಕ್ರಮಿ ಬಲಭೀಮನು ಪಂಚಮ ವೇದವೆಂದು ಕರೆಯಲ್ಪಡುವ ಮಹಾಪುರಾಣವಾದ ಮಹಾಭಾರತದಲ್ಲಿ ಆಚಂದ್ರಾರ್ಕ ಮಿನುಗುವ ಶಕ್ತಿವಂತ ತಾರೆ.

-ವಿಜಯಾಸುಬ್ರಹ್ಮಣ್ಯ ಕುಂಬಳೆ.

4 Responses

  1. Anonymous says:

    ಧನ್ಯವಾದಗಳು. ಹೇಮಮಾಲಾ ಹಾಗೂ ಸುರಹೊನ್ನೆ ಓದುಗ ಬಳಗಕ್ಕೆ.

  2. ಎಂದಿನಂತೆ ಪುರಾಣ ಕಥೆ ಓದಿಸಿಕೊಂಡು ಹೋಯಿತು… ಮೇಡಂ.

  3. ನಯನ ಬಜಕೂಡ್ಲು says:

    ಭೀಮನ ಬಗ್ಗೆ ಗೊತ್ತಿದ್ದರೂ ಕೆಲವೊಂದು ಅಪರೂಪದ ವಿಚಾರಗಳೂ ಇವೆ.

  4. ಶಂಕರಿ ಶರ್ಮ says:

    ಅತುಲ ಪರಾಕ್ರಮಿ ಭೀಮಸೇನನ ಸಂಕ್ಷಿಪ್ತ ಕಥೆಯು ಬಹಳಷ್ಟು ಅಪರೂಪದ ವಿಷಯಗಳನ್ನು ಹೊಂದಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: