ಹದಿನಾರು ಮುಖದ ಚಾವಡಿ

Share Button

ಕಾಲಚಕ್ರವನ್ನು ಸುಮಾರು ವರ್ಷ ಹಿಂತಿರುಗಿಸಿ …

ಹೆಡತಲೆ ಎಂಬೊಂದು ಊರು….ಊರಿಗೊಬ್ಬ ರಾಜ ಭೀಮಣ್ಣ ನಾಯಕ…ಆತನಿಗೊಬ್ಬಳು ರಾಣಿ…ಅವರಿಗೆ 16 ಹೆಣ್ಣು ಮಕ್ಕಳು. ಎಲ್ಲಾ ಹೆಣ್ಣು ಮಕ್ಕಳನ್ನು ಯುಕ್ತ ವಯಸ್ಸಿಗೆ ಮದುವೆ ಮಾಡಿಕೊಟ್ಟು, ಮಗಳಂದಿರು ಹಾಗೂ ಅಳಿಯಂದಿರೊಂದಿಗೆ ಆಗಾಗ್ಗೆ ಕುಶಲೋಪರಿ ನಡೆಸುತ್ತಾ  ಮನೆಮಂದಿಯೆಲ್ಲ ಒಟ್ಟಾಗಿ ಸಂಭ್ರಮಿಸುವ ಆಸೆ ರಾಜನಿಗೆ. ಆಗ ಎದುರಾದದ್ದು ಒಂದು ಸಮಸ್ಯೆ. ರಾಜನಿಗೆ ತನ್ನ ಯಾವ ಮಗಳ ಗಂಡ ಯಾರು ಎಂಬ ಗೊಂದಲವಾಗುತ್ತಿತ್ತಂತೆ. ಮೇಲಾಗಿ, ಆಗಿನ ಕಾಲದ ಪದ್ಧತಿಯಂತೆ, ಅತ್ತೆಯಾದವಳು ತನ್ನ ಅಳಿಯಂದಿರ ಮುಖವನ್ನು ನೋಡುವಂತಿಲ್ಲ.

ರಾಜ-ರಾಣಿ, ಎಲ್ಲಾ ಮಗಳಂದಿರು ಮತ್ತು ಅಳಿಯಂದಿರು  ಅಂದರೆ ಒಟ್ಟು 1+1+16+16 = 34 ಜನ  ಏಕ ಕಾಲದಲ್ಲಿ ಕೂರುವ ಆಸನ ವ್ಯವಸ್ಥೆಯಿರಬೇಕು,ರಾಜನಿಗೆ ಎಲ್ಲರೂ ಕಾಣಿಸಬೇಕು, ರಾಣಿಗೆ ತನ್ನ ಮಗಳಂದಿರು ಮಾತ್ರ ಕಾಣಿಸಬೇಕು. ಪ್ರತೀ ಹೆಣ್ಣುಮಗಳೂ ತನ್ನ  ಗಂಡನ ಜತೆ ಅನುಕ್ರಮವಾಗಿ ಕೂರಬೇಕು. ಇಂತಹ ಚಾವಡಿಯನ್ನು ವಿನ್ಯಾಸಗೊಳಿಸಬೇಕೆಂದು ರಾಜನು ಸೂಚಿಸಿದಾಗ, ಅಂದಿನ ಹೊಯ್ಸಳ ವಾಸ್ತುಶಿಲ್ಪಿಗಳು ರಚಿಸಿದ  ಅದ್ಭುತ ಸಭಾಂಗಣವೇ ‘ಹದಿನಾರು ಮುಖದ ಚಾವಡಿ’. ಈ ಚಾವಡಿಗೆ, ನಾಲ್ಕೂ ಮೂಲೆಗಳಿದ್ದು, 16 ಕಂಭಗಳಿವೆ. ಪ್ರತಿ ಕಂಭಕ್ಕೆ ತಾಗಿಕೊಂಡಂತೆ ಇಬ್ಬರು ಕೂರುವಂತ ಕಲ್ಲಿನ ಸೋಫಾ  ಇದೆ. ಚಾವಡಿಯ ಮಧ್ಯ ಭಾಗದಲ್ಲಿಯೂ ವಿಶೇಷ ಕೆತ್ತನೆಯುಳ್ಳ ಕಂಭಗಳಿವೆ.

ಅಲ್ಲಿನ ಅರ್ಚಕರು ನಮಗೆ ವಿವರಿಸಿದಂತೆ, ರಾಜ ಕೂರುತ್ತಿದ್ದ ಜಾಗದಿಂದ ನೋಡಿದರೆ  ಇಡೀ ಸಭಾಂಗಣ ಕಾಣಿಸುತ್ತದೆ. ರಾಣಿ ಕೂರುತ್ತಿದ್ದ ಜಾಗದಿಂದ ನೋಡಿದರೆ, ಪ್ರತೀ ಸೋಫಾದ   ಅರ್ಧ ಭಾಗ ಕಾಣಿಸುತ್ತದೆ. ಅಂದರೆ ರಾಣಿಗೆ ತನ್ನ ಮಗಳಂದಿರು ಮಾತ್ರ ಕಾಣಿಸುತ್ತಿದ್ದರು ಎಂದಾಯಿತು. ಎಂಥಹಾ ಸೃಜನಶೀಲ ವಾಸ್ತು ವಿನ್ಯಾಸ!

 

 

ಹದಿನಾರು ಮುಖದ ಚಾವಡಿ’ ಇರುವುದು ಹೆಡತಲೆ ಲಕ್ಷ್ಮೀಕಾಂತ ದೇವಾಲಯದಲ್ಲಿ. ಹಿಂದೆ ಇದು ಕೌಂಡಿನ್ಯ ಋಷಿಗಳು ತಪಸ್ಸನ್ನಾಚರಿಸುತ್ತಿದ್ದರಂತೆ. ಅಸುರನೊಬ್ಬ ಅವರಿಗೆ ಕಿರುಕುಳ ಕೊಡುತ್ತಿದ್ದ ಕಾರಣ ಅವರು ಲಕ್ಷ್ಮೀಕಾಂತ ಸ್ವಾಮಿಯ ಮೊರೆ ಹೊಕ್ಕರಂತೆ. ಅಸುರ ನಿಗ್ರಹವಾಗಿ ಆತನ ತಲೆ ಎಡಭಾಗಕ್ಕೆ ಬಿತ್ತಂತೆ. ಹೀಗಾಗಿ ಊರಿಗೆ ಎಡತಲೆ ಎಂಬ ಹೆಸರಾಯಿತು, ಕಾಲಾಂತರದಲ್ಲಿ ಅದು  ‘ಹೆಡತಲೆ’ ಆಯಿತು. ಅಸುರನ ಹೆಮ್ಮರದಂತಹ ಕಾಲು ಬಿದ್ದ ಜಾಗ ‘ಹೆಮ್ಮರಗಾಲ’ವಾಯಿತು. ಹೆಮ್ಮರಗಾಲ ಎಂಬ ಊರು ಹೆಡತಲೆಯಿಂದ 1-2 ಕಿ.ಮಿ ದೂರದಲ್ಲಿದೆ. ಅಲ್ಲಿಯೂ ಕೌಂಡಿನ್ಯರಿಂದ ಸ್ಥಾಪಿತವಾದ ಸಂತಾನ ಗೋಪಾಲಸ್ವಾಮಿಯ ದೇವಾಲಯವಿದೆ. ಹೀಗಿದೆ ಸ್ಥಳಪುರಾಣ ಅಥವಾ ದಂತಕಥೆ.

ಇಲ್ಲಿ ಅಚ್ಚುಕಟ್ಟಾದ, 3 ಗರ್ಭಗುಡಿಯನ್ನು ಹೊಂದಿದ ದೇವಾಲಯವಿದೆ. ಹಾಗಾಗಿ ಇದಕ್ಕೆ ತ್ರಿಕುಟಾಚಲವೆಂಬ ಹೆಸರೂ ಇದೆ. ಇಲ್ಲಿನ  ಆಂಡಾಳ್ ಅಮ್ಮನವರ ವಿಗ್ರಹದ ಶಿಲ್ಪ ತುಂಬಾ ಸೊಗಸಾಗಿದೆ. ಅರ್ಚಕರು ವಿವರಿಸುವಂತೆ,ದೀಪ ಆರತಿಯ ತಟ್ಟೆಯನ್ನು ಅಮ್ಮನವರ ಹಣೆಯಿಂದ ಕೆಳಗೆ ನಿಧಾನವಾಗಿ ಸರಿಸಿದಾಗ, ಮೂರ್ತಿಯ ಕಣ್ಣುಗಳು ತುಂಬಾ ಕಾಂತಿಯುತವಾಗಿ, ನೈಜವಾಗಿ   ಕಾಣಿಸುತ್ತವೆ.

ಹೊಯ್ಸಳರ ಕಾಲದಲ್ಲಿ ಅದೆಷ್ಟು ಚಿಕ್ಕ-ದೊಡ್ಡ ದೇವಾಲಯಗಳನ್ನು ಕಟ್ಟಿದ್ದರೋ? ಪ್ರಖ್ಯಾತವಾದ ಕೆಲವು ದೇವಸ್ಥಾನಗಳನ್ನು  ಬಿಟ್ಟರೆ, ಇಂಥಹ ವಿಶಿಷ್ಟ ದೇವಾಲಯಗಳ ಬಗ್ಗೆ ಲಭ್ಯವಿರುವ  ಮಾಹಿತಿ ಕಡಿಮೆ.

ಹೆಡತಲೆಗೆ ಹೋಗುವ ದಾರಿ:  ಮೈಸೂರಿನಿಂದ ಹೊರಟು ನಂಜನಗೂಡು ದಾರಿಯಾಗಿ, ಚಾಮರಾಜನಗರದ ಕಡೆಗೆ ಬಸ್ ಅಥವಾ ರೈಲ್ ನಲ್ಲಿ ಪ್ರಯಾಣಿಸಿ, ಬದನವಾಳು ಎಂಬಲ್ಲಿ ಇಳಿಯಬೇಕು. ಅಲ್ಲಿಂದ ಸುಮಾರು 5 ಕಿ.ಮಿ. ದೂರದ ಹಳ್ಳಿ ರಸ್ತೆಯಲ್ಲಿ ಸಾಗಬೇಕು.  ಕಾರಿನಲ್ಲೂ ಹೋಗಬಹುದು.

ಹೇಮಮಾಲಾ.ಬಿ.

2 Responses

  1. Ghouse says:

    It is a real piece of art.

  2. savithri .s.bhat says:

    ಸುಂದರ ಜಾಗ. ನೋಡಬೇಕೆನ್ನಿಸುತ್ತಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: