ಅವಿಸ್ಮರಣೀಯ ಅಮೆರಿಕ – ಎಳೆ 67

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಭೂ ವಿಜ್ಞಾನ, ರತ್ನ, ವಜ್ರ, ಛಾಯಾಚಿತ್ರ, ಚಿಟ್ಟೆ, ಸಂಶೋಧನಾ  ವಿಭಾಗಗಳು…..

ಈ ವಿಭಾಗದಲ್ಲಿರುವ 3,00,000 ವಿಶೇಷವಾದ ವಿವಿಧ ಕಲ್ಲುಗಳು ಮತ್ತು ಅದಿರುಗಳ ಮಾದರಿಗಳು, 15,000 ರತ್ನಗಳು, 3,50,000 ಖನಿಜಗಳ ಮಾದರಿಗಳು, 45,000 ಉಲ್ಕಾ ಶಿಲೆಗಳ ಸಮಗ್ರ ಸಂಗ್ರಹ ಇತ್ಯಾದಿಗಳು ನಿಜಕ್ಕೂ ಅದ್ವಿತೀಯ!

ಈ ವಿಭಾಗವು ಅತ್ಯಂತ ಬಿಗಿ ಸುರಕ್ಷಣೆಯಿಂದ ಕೂಡಿದೆ…ಯಾಕೆ ಗೊತ್ತೇ? ಇಲ್ಲಿವೆ, ಕೋಟ್ಯಾಂತರ ಬೆಲೆಬಾಳುವ ವಜ್ರ, ರತ್ನ, ಚಿನ್ನದ ಅದಿರುಗಳ ಭಂಡಾರಗಳು! ಇಂತಹುಗಳ ಮೇಲೆ ಯಾರಿಗೆ ವ್ಯಾಮೋಹವಿಲ್ಲ ಹೇಳಿ? ಹಾಗೆಯೇ  ನಮ್ಮಂತಹ ಹೆಂಗೆಳೆಯರು ಇಷ್ಟ ಪಡುವಂತಹ ಅತ್ಯಂತ ಸುಂದರ, ಮನಮೋಹಕ ವಿಭಾಗ ಕೂಡಾ ಹೌದು! ಮೊತ್ತ ಮೊದಲಾಗಿ ಗಾಜಿನ ಕಪಾಟಿನೊಳಗಡೆ ಫಳಫಳನೆ ಹೊಳೆಯುತ್ತಾ ಕುಳಿತಿರುವ ಚಿನ್ನದ ವಿಭಾಗದತ್ತ ಹೋಗೋಣ‌…..

ನಮ್ಮಲ್ಲಿಯ ಚಿನ್ನದ ಅಂಗಡಿಯೊಳಗೆ ನುಗ್ಗಿದ ಅನುಭವ. …ಆದರೆ ಇಲ್ಲಿ ತೋರಿಸುವವರು ಯಾರೂ ಇಲ್ಲ. ಪ್ರತಿಯೊಂದು ವಸ್ತುವಿನ ಮುಂಭಾಗದಲ್ಲೂ ಅದರ ಬಗ್ಗೆ ಸಂಪೂರ್ಣ ವಿವರಗಳಿರುವ ಲೋಹದ ಪುಟ್ಟ ಗುರುತು ಪಟ್ಟಿಯನ್ನು ಲಗತ್ತಿಸಿರುವರು. ಜಗತ್ತಿನಾದ್ಯಂತ ಚಿನ್ನದ ಗಣಿಗಳಲ್ಲಿ ಲಭಿಸಿರುವ ಅತ್ಯಂತ ಅಪರೂಪದ ಅದಿರುಗಳ ಸಂಗ್ರಹವನ್ನು ನೋಡುವಾಗ ಬಹಳ ಸೋಜಿಗವೆನಿಸುತ್ತದೆ. ಈ ವರೆಗೆ ಚಿನ್ನದ ಆಭರಣ ಅಥವಾ ಅದರ ಶುದ್ಧ ರೂಪವನ್ನು ಮಾತ್ರ ನೋಡಿದ್ದ ನನಗೆ ಬಹಳ ಅಚ್ಚರಿಯೆನಿಸಿತು. ದೊಡ್ಡ ಗುಂಡು ಕಲ್ಲೊಂದು ಪೂರ್ತಿ ಫಳಫಳಿಸುತ್ತಿದೆ. ಇನ್ನೊಂದೆಡೆ ಕತ್ತರಿಸಿದ ವಿವಿಧಾಕಾರದ ಭಾಗಗಳು ಚಿನ್ನದ ಹಾಳೆಗಳಂತೆ ಹೊಳೆಯುತ್ತಿವೆ. ಇವುಗಳನ್ನೆಲ್ಲಾ ನೋಡುತ್ತಾ, ಅವುಗಳ ಚರಿತ್ರೆಗಳನ್ನು ವೀಕ್ಷಿಸುತ್ತಾ ನಿಂತವಳು ಅದಾಗಲೇ ಮನೆಯವರಿಂದ ಬೇರ್ಪಟ್ಟಿದ್ದೆ, ಆದರೂ ಗಾಬರಿಯೇನೂ ಆಗಲಿಲ್ಲ ಬಿಡಿ…  ಮೊದಲೇ ನಿಶ್ಚಯಿಸಿದಂತೆ, ಎರಡು ತಾಸುಗಳಲ್ಲಿ ಎಲ್ಲರೂ ಮುಂಭಾಗದ ಹಜಾರದಲ್ಲಿ ಸೇರುವುದಿತ್ತು. …ನಾನು ನನ್ನದೇ ಲೋಕದಲ್ಲಿ ವಿಹರಿಸುತ್ತಾ ಆರಾಮವಾಗಿ ನೋಡುತ್ತಾ ನಡೆದೆ… ಬನ್ನಿ.. ನೀವೂ ನನ್ನ ಜೊತೆ..

ಚಿನ್ನದ ಭಂಡಾರದ ಪಕ್ಕದಲ್ಲಿ ಭೂ ಗರ್ಭದಿಂದ ತೆಗೆದ ಖನಿಜಗಳು ತಮ್ಮ ನಿಜ ರೂಪದಲ್ಲಿ ನಿಶ್ಚಿಂತೆಯಿಂದ ಕುಳಿತಿವೆ.. ತಮ್ಮ ಭೂತ ಕಾಲವನ್ನು ನೆನೆಯುತ್ತಾ. ಕಂಡು ಕೇಳರಿಯದ, ವಿಚಿತ್ರಾಕಾರದ ಕಲ್ಲುಗಳು ತಮ್ಮೊಡಲಲ್ಲಿ ಅತ್ಯಂತ ಸೊಗಸಿನ ಬಣ್ಣಗಳಿಂದ ಕೂಡಿದ ಖನಿಜಗಳನ್ನು ಹುದುಗಿಸಿಕೊಂಡು ಖುಷಿಯಿಂದ ಸ್ವಾಗತಿಸುತ್ತಿವೆ… ನೂರಾರು ವರುಷಗಳ ಇತಿಹಾಸಗಳನ್ನು ನಮ್ಮ ಮುಂದೆ ಬಿಚ್ಚಿಡುತ್ತಾ…! ಕೆಲವು ಬಹು ಚಂದದ ಆಕೃತಿಗಳನ್ನು ಒಳಗೊಂಡಿದ್ದರೆ, ಇನ್ನು ಕೆಲವು ದಟ್ಟ ಹಸಿರು, ಕೆಂಬಣ್ಣ, ನೀಲಿ, ದಟ್ಟ ಕಂದು, ಕಪ್ಪು ಇತ್ಯಾದಿ ಬಣ್ಣಗಳನ್ನು ತನ್ನ ಒಡಲು ಬಗೆದು ತೋರಿಸುತ್ತಾ  ಬೀಗುತ್ತಿವೆ…ಇದೆಲ್ಲವನ್ನೂ ನೋಡುತ್ತಿದ್ದವಳು ಆಗಾಗ ಕೈಗಡಿಯಾರದತ್ತ ಕಣ್ಣು ಹಾಯಿಸಲು ಮರೆಯಲಿಲ್ಲವೆನ್ನಿ. ನೋಡಿ, ಇನ್ನೂ ಸಮಯವಿದೆ.. ಬನ್ನಿ ಮುಂದಕ್ಕೆ ಹೋಗೋಣ…

ಇದೋ.. ಇದು ಅತ್ಯಂತ ಬೆಲೆ ಬಾಳುವ ವಿಭಾಗ. ಹೌದು, ರತ್ನ, ವಜ್ರ ವೈಢೂರ್ಯಗಳನ್ನು ಕಣ್ತುಂಬಿಕೊಳ್ಳೋಣ..

ಈ ವಿಭಾಗದಲ್ಲಿ ಮಾತ್ರ ಕಾವಲು ಭಟರ ಪಹರೆಯಿದೆ… ಭಯಂಕರ ಬಂದೋಬಸ್ತು!  ,  ಹಜಾರದ ನಟ್ಟ ನಡುವಿನಲ್ಲಿ, ಅತ್ಯಂತ ಬಲಿಷ್ಠವಾದ ಗುಂಡು ನಿರೋಧಕ ಗಾಜಿನ ಪೆಟ್ಟಿಗೆಯೊಳಗಿರುವ, ಬಹು ನಿಧಾನವಾಗಿ ನಿರಂತರ ಸುತ್ತುತ್ತಿರುವ ಪುಟ್ಟ ಸಮತಲದ ಮೇಲೆ ಕಡು ನೀಲಿ ಬಣ್ಣದಿಂದ ಸೂರ್ಯನೋಪಾದಿ ಮಿನುಗುತ್ತಿದೆ…ಸಂಗ್ರಹಾಲಯದಲ್ಲಿ ಮಾತ್ರವಲ್ಲ, ಜಗತ್ತಿನಲ್ಲಿಯೇ ಅತ್ಯಂತ ಬೆಲೆಬಾಳುವ, ಹೆಸರಾಂತ ವಜ್ರಗಳಲ್ಲೊಂದಾದ ಹೋಪ್ ವಜ್ರ (Hope Diamond)!!  ಇದರ ಬೆಲೆಯು ಸುಮಾರು 350 ಮಿಲಿಯ ಡಾಲರ್ ಎಂದು ಅಂದಾಜಿಸಲಾಗಿದೆ! ಇದಕ್ಕೆ ಎಲ್ಲಾ ಕಡೆಗಳಿಂದಲೂ ದಟ್ಟ ಬೆಳಕಿನ ಕಿರಣಗಳು ಬೀಳುವ ವ್ಯವಸ್ಥೆ ಮಾಡಲಾಗಿದೆ. ಇದರಿಂದಾಗಿ ಅದರ ಉಜ್ವಲ ಹೊಳಪು ಅದ್ವಿತೀಯವಾಗಿ ಹೊರಹೊಮ್ಮುತ್ತಿದೆ.  

ಇದನ್ನು ನೋಡಿದಾಗ  ನಾನು ಬಹಳ ಆನಂದಪಟ್ಟದ್ದೇನೋ ನಿಜ. ಆದರೆ, ಅದರ ಕೆಳಗಡೆಗೆ ಬರೆದಿರುವ ವಿವರಗಳನ್ನು ಓದುವಾಗ ನಿಜಕ್ಕೂ ಸಿಟ್ಟು  ಮತ್ತು ಬೇಸರವಾದುದು ಸುಳ್ಳಲ್ಲ. ನಮ್ಮ ದೇಶದಲ್ಲಿ ಇರಬೇಕಾಗಿದ್ದ  ನಮ್ಮ ಈ ಅತ್ಯಪೂರ್ವ ವಜ್ರವು ಅಮೆರಿಕದ ವಸ್ತು ಸಂಗ್ರಹಾಲಯದಲ್ಲಿ ನೋಡಬೇಕಾದ ದೌರ್ಭಾಗ್ಯ ನನ್ನದಾಗಿತ್ತು. 45.52 ಕ್ಯಾರೆಟ್ ಹಾಗೂ 9.104ಗ್ರಾಂ ತೂಕದ ಈ ವಜ್ರವು ನಮ್ಮ ದೇಶದ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ವಜ್ರದ ಗಣಿಯಲ್ಲಿ ದೊರಕಿದುದಾಗಿದೆ. ನಮ್ಮ ದೇಶವು ಬ್ರಿಟಿಷರಿಂದ ಆಳುತ್ತಿದ್ದ ಕಾಲವಾಗಿತ್ತದು.  ಅಂದರೆ, 1666ರ ಸಮಯ (17ನೇ ಶತಮಾನ)…ಇಲ್ಲಿ ಇದು ಗೋಲ್ಕೊಂಡ ವಜ್ರವೆಂದು ಖ್ಯಾತಿ ಪಡೆದಿತ್ತು. ಬ್ರಿಟಿಷರ ಕೈ ಸೇರಿದ ವಜ್ರವನ್ನು ಫ್ರೆಂಚ್ ವ್ಯಾಪಾರಿಯೊಬ್ಬ ಖರೀದಿಸಿದ. ಅವನು ಅದನ್ನು ತುಂಡರಿಸಿ, ಒಂದು ತುಂಡನ್ನು ಫ್ರಾನ್ಸಿನ 14ನೇ ಕಿಂಗ್ ಲೂಯಿಸ್ ಗೆ ಮಾರಿದ. 1792ರಲ್ಲಿ ಇದು ಕದಿಯಲ್ಪಟ್ಟು , ಆ ನಂತರದ ಹಲವಾರು ವರ್ಷಗಳು ಈ ವಜ್ರವು ಹಲವಾರು ಒಡೆಯರ ಕೈ ಸೇರುತ್ತಾ, ಜಗವಿಡೀ ಸುತ್ತುತ್ತಿತ್ತು. 1839ರಲ್ಲಿ Hope ಎನ್ನುವ ಬ್ಯಾಂಕಿಂಗ್ ಕುಟುಂಬದವರ  ಪಾಲಾದಾಗ, ಅದಕ್ಕೆ ಕುಟುಂಬದ ಹೆಸರಾದ ಹೋಪ್ ಎಂಬ ಹೆಸರನ್ನು ಇಡಲಾಯಿತು. ಕೊನೆಯದಾಗಿ ನೂಯಾರ್ಕಿನ ವಜ್ರ ವ್ಯಾಪಾರಿಯೊಬ್ಬರು 1949ರಲ್ಲಿ  ಇದನ್ನು ಖರೀದಿಸಿದರು. ಬಳಿಕ  ಈ ವ್ಯಾಪಾರಿಯು ಈ ಅಮೂಲ್ಯ ವಜ್ರವನ್ನು ಸಂಗ್ರಹಾಲಯಕ್ಕೆ 1958ರಲ್ಲಿ ದಾನ ರೂಪವಾಗಿ ಕೊಟ್ಟುಬಿಟ್ಟರು. ಆನಂತರ, ಇದು ಈ ಸಂಗ್ರಹಾಲಯದಲ್ಲಿ ರಾಜನಂತೆ ಮೆರೆಯುತ್ತಾ ಇಲ್ಲೇ ಶಾಶ್ವತವಾಗಿ ಉಳಿದುಬಿಟ್ಟಿದೆ.  ಇದನ್ನು ನೋಡಿ ನಾನು ಹೊಟ್ಟೆ ಉರಿಸಿಕೊಂಡದ್ದು ಮಾತ್ರವಲ್ಲದೆ, ಮೆಲ್ಲನೆ ಅದನ್ನೆತ್ತಿಕೊಂಡು ನಮ್ಮ ದೇಶಕ್ಕೆ ತರುವ ಮನಸ್ಸಾದುದು ಸುಳ್ಳಲ್ಲ!


ಇದೇ ಹಜಾರದಲ್ಲಿ ಎಲ್ಲಾ ಕಡೆಗಳಲ್ಲಿ ಗಾಜಿನ ಕಪಾಟುಗಳಲ್ಲಿ ಮಿರಮಿರನೆ ಮಿಂಚುತ್ತಾ ನಮ್ಮನ್ನು ಕರೆಯುತ್ತಿದ್ದವು…ವಿವಿಧ ಬಣ್ಣಗಳ ಸಾವಿರಾರು ರತ್ನಗಳು, ವಜ್ರಗಳು. ಇವುಗಳ ಕಣ್ಣು ಕೋರೈಸುವ ಹೊಳಪು ನಮ್ಮನ್ನು ಕಣ್ಣೆವೆ ಮುಚ್ಚದಂತೆ ಮಾಡಿಬಿಟ್ಟಿತ್ತು. ಅಷ್ಟರೊಳಗೆ ನಮ್ಮ ಮನೆಯವರೆಲ್ಲರೂ ಅಲ್ಲಿಗೆ ಬಂದು ತಲಪಿದುದರಿಂದ ಇನ್ನೂ ಹೆಚ್ಚು ಸಮಾಧಾನದಿಂದ ವೀಕ್ಷಿಸುತ್ತಾ, ಮಗಳ ವೀಕ್ಷಕ ವಿವರಣೆಯ ಸವಿಯನ್ನು ಆಸ್ವಾದಿಸುತ್ತಾ  ಮುಂದುವರಿದೆವು… ಛಾಯಾಚಿತ್ರಗಳ ವಿಭಾಗಕ್ಕೆ.

ಛಾಯಾಚಿತ್ರಗಳ ಲಕ್ಷಗಟ್ಟಲೆ ಸಂಗ್ರಹವಿರುವ ಈ ವಿಭಾಗದ ಗೋಡೆ ತುಂಬಾ ಇರುವ ಫೋಟೋಗಳು ಅತ್ಯಂತ ಸುಂದರ. ಇಲ್ಲಿರುವ, ಅತ್ಯದ್ಭುತ ನೆರಳು ಬೆಳಕಿನ ಸಂಯೋಜನೆಯ ಕಪ್ಪು ಬಿಳುಪು ಹಾಗೂ ವರ್ಣಚಿತ್ರಗಳು, ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ಹಾಗೂ  ಅತ್ಯಂತ ಶ್ರೇಷ್ಟ ಗುಣಮಟ್ಟದ ಜಗತ್ತಿನ ಆಯ್ದ ಛಾಯಾಚಿತ್ರಗಾರರ ಆಯ್ದ ಫೋಟೋಗಳಾಗಿವೆ. ಒಂದು ಚಿತ್ರದ ಮುಂದೆ ನಿಂತು ಬಿಟ್ಟರೆ ಮುಂದೆ ಸರಿಯಲು ಮನಸ್ಸೇ ಬಾರದು!! ಉತ್ಕೃಷ್ಟ ಗುಣಮಟ್ಟದ ಫೋಟೋಗಳು ಮನಸ್ಸನ್ನು ತುಂಬಿದವು. ಈ ವಿಭಾಗದಲ್ಲಿ ಕುಳಿತುಕೊಳ್ಳಲು ಆರಾಮಾಸನವಿದ್ದುದು ಸುತ್ತಾಡಿ ಆಯಾಸಗೊಂಡ ನಮಗೆ ಸ್ವಲ್ಪ ವಿಶ್ರಾಂತಿಯನ್ನು ನೀಡಿತು.      

ಮುಂದೆ…ಅಲ್ಲೇ ಪಕ್ಕದಲ್ಲಿರುವ ಚಿಟ್ಟೆಗಳ ವಿಭಾಗವು ಪುಟ್ಟ ಮಕ್ಕಳಿಗೆ ಹೇಳಿ ಮಾಡಿಸಿದಂತಿದೆ.

ಕಟ್ಟಡದ ಒಳಗಡೆಗೆ ಕೃತಕ ಗುಹೆ ರಚಿಸಿ, ಅದರೊಳಗಿರುವ ಗಾಜಿನ ಗೂಡುಗಳಲ್ಲಿಯೂ ಕೃತಕ ಪುಟ್ಟ ಕಾಡನ್ನು ನಿರ್ಮಿಸಿ, ಅದರಲ್ಲಿ  ಜೀವವಿಲ್ಲದ ವಿವಿಧ ರೀತಿಯ, ಕಣ್ಸೆಳೆಯುವ ಬಣ್ಣಗಳ ಅಸಂಖ್ಯಾತ ಚಿಟ್ಟೆಗಳನ್ನು ತೆಪ್ಪಗೆ ಮಲಗಿಸಿದ್ದಾರೆ… ಅಲ್ಲದೆ, ಪ್ರತಿಯೊಂದರ ಚರಿತ್ರೆಯನ್ನು ಅಲ್ಲಿ ನಮೂದಿಸಲಾಗಿದೆ.  ಇಲ್ಲಿರುವ ಕೃತಕ ತೊರೆ, ಕಲ್ಲಿನ ಹಾಸುಗಳು, ಗಿಡ ಮರಗಳು ಮತ್ತು ಜೀರಂಡೆಯ ತೀಕ್ಷ್ಣ ಸದ್ದು ನಮಗೆ ದಟ್ಟ ಕಾಡಿನೊಳಗಿರುವ ಅನುಭವವನ್ನು ನೀಡುತ್ತದೆ. ಇಲ್ಲಿದ್ದ ಹತ್ತಾರು ಪುಟ್ಟ ಮಕ್ಕಳು ಕುಣಿದಾಡುತ್ತಾ ಎಲ್ಲವನ್ನೂ ಆನಂದದಿಂದ ನೋಡುತ್ತಿದ್ದುದು ಖುಶಿಕೊಟ್ಟಿತು.

ಈ ವಸ್ತು ಸಂಗ್ರಹಾಲಯದಲ್ಲಿ  ಒಟ್ಟು 7 ಸಂಶೋಧನಾ ವಿಭಾಗಗಳಿವೆ… ಅವುಗಳೇ ಮಾನವ ಶಾಸ್ತ್ರ, ಸಸ್ಯ ಶಾಸ್ತ್ರ , ಕೀಟ ಶಾಸ್ತ್ರ, ಕಶೇರುಕ ಮತ್ತು ಅಕಶೇರುಕ ಪ್ರಾಣಿ ಶಾಸ್ತ್ರ, ಖನಿಜ ಶಾಸ್ತ್ರಗಳು ಹಾಗೂ ಪ್ಯಾಲಿಯೊ ಜೀವಶಾಸ್ತ್ರ. ಈ ಪ್ಯಾಲಿಯೊ ಜೀವಶಾಸ್ತ್ರದಲ್ಲಿ ಭೂಗರ್ಭದಲ್ಲಿ ಲಭಿಸಿದ ಮಾಹಿತಿ ಅಥವಾ ವಸ್ತುಗಳ ಅಧ್ಯಯನವನ್ನು ಜೀವಶಾಸ್ತ್ರದ ಅಧ್ಯಯನದ ಜೊತೆಗೂಡಿಸಿ ರೂಪಿಸಲಾಗುತ್ತದೆ. ಉದಾಹರಣೆಗೆ, ಲಭಿಸಿದ ಡೈನೋಸಾರ್ ಗಳ ಎಲುಬಿನಿಂದ ಅಧ್ಯಯನ..ಇತ್ಯಾದಿ.

ಏಳು ಗಂಟೆಯ ವರೆಗೆ   ಸಂಗ್ರಹಾಲಯದೊಳಗೆ ಸುತ್ತಾಡಿ ಹೊರ ಹೊರಟಾಗ ಸಂಜೆ ಸೂರ್ಯ ಇನ್ನೂ ಪ್ರಖರವಾಗಿ ಉರಿಯುತ್ತಿದ್ದ.  ಹಾಗೆಯೇ ರಸ್ತೆ ಪಕ್ಕ ನಡೆಯುತ್ತಾ,  ಪಟ್ಟಣದ ಶಾಂತ, ಸುಂದರ ಸಂಜೆಯನ್ನು ಆಸ್ವಾದಿಸುತ್ತಾ, ಕಾಲುದಾರಿ ಪಕ್ಕದ ಪೊದೆ ಗಿಡಗಳಲ್ಲಿಯ ಹೂಗಳನ್ನು ಆಘ್ರಾಣಿಸುತ್ತಾ ನಿಧಾನವಾಗಿ ಕಾರಿನ ಬಳಿಗೆ ಬಂದು, ರಾತ್ರಿಯೂಟಕ್ಕಾಗಿ ಸಾಗಿದೆವು. ನಮ್ಮ ದೇಶದ ಪರಿಚಿತ ಹೆಸರುಗಳು ದೂರ ದೇಶದಲ್ಲಿ ಎಷ್ಟೊಂದು ಅಪ್ಯಾಯಮಾನವಲ್ಲವೇ? ಹೌದು…ಅದಕ್ಕಾಗಿ ಹುಡುಕಿದಾಗ ಸಿಕ್ಕಿದುದೇ ಜ್ಯೋತಿ ಇಂಡಿಯನ್ ಕ್ರುಸೈನ್ ಎನ್ನುವ ಹೋಟೆಲ್. ಆದರೆ, ನಿಮ್ಮ ಹಾಗೆ ನಾನೂ  ಅಂದುಕೊಂಡಂತೆ ಅನ್ನ, ಸಾಂಬಾರು ಸಿಗಬಹುದೆಂಬ ಆಸೆ ಕನಸಾಗಿಯೇ ಉಳಿಯಿತು! ವಸತಿಗೃಹ ಸೇರಿದ ನಮ್ಮನ್ನು ನಿದ್ರಾದೇವಿ ತನ್ನ ಮಡಿಲಿನೊಳಕ್ಕೆ ಸೆಳೆದುದು ಗಮನಕ್ಕೇ ಬರಲಿಲ್ಲ…!!

(ಮುಂದುವರಿಯುವುದು…..)

ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ:    https://www.surahonne.com/?p=38835

-ಶಂಕರಿ ಶರ್ಮ, ಪುತ್ತೂರು.                  

                     

4 Responses

  1. ಎಂದಿನಂತೆ ಪ್ರವಾಸ ಕಥನ… ಓದಿಸಿಕೊಂಡು ಹೋಯಿತು.. ನಿಮ್ಮೊಡನೆ ನಾವೂ ಸುತ್ತು ಹಾಕಿದೆವು..ಮೇಡಂ.. ಧನ್ಯವಾದಗಳು..

    • ಶಂಕರಿ ಶರ್ಮ says:

      ಪ್ರೀತಿಯಿಂದ ಓದಿ ಮೆಚ್ಚುಗೆಯ ನುಡಿಗಳನ್ನಾಡಿದ ನಾಗರತ್ನ ಮೇಡಂ ಅವರಿಗೆ ಧನ್ಯ ನಮನಗಳು.

  2. ನಯನ ಬಜಕೂಡ್ಲು says:

    ಸಾಕಷ್ಟು ಮಾಹಿತಿಗಳನ್ನು ಒಳಗೊಂಡ ಬರಹ.

    • ಶಂಕರಿ ಶರ್ಮ says:

      ಪ್ರೀತಿಯಿಂದ ಓದಿ ಮೆಚ್ಚುಗೆಯ ನುಡಿಗಳನ್ನಾಡಿದ ನಯನಾ ಮೇಡಂ ಅವರಿಗೆ ವಂದನೆಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: