ಸ್ತ್ರೀ ವಾದಿ ಗಾಂಧೀಜಿ
ವಸಾಹತುಶಾಹಿ ಮತ್ತು ಸ್ತ್ರೀವಾದದ ಎಳೆ: ಬ್ರಿಟಿಷರ ವಸಾಹತುಶಾಹಿಯಿಂದಾಗಿ ಹತ್ತೊಂಬತ್ತನೇ ಶತಮಾನದಲ್ಲಿ ಸಾಂಪ್ರದಾಯಿಕ ಜೀವನ ರೀತಿಗೆ ಬಹುಮಟ್ಟಿಗೆ ನಿರ್ಣಾಯಕವಾಗಿ ವಿದಾಯ ಹೇಳಬೇಕಾಗಿ ಬಂದ ಕಾಲಘಟ್ಟವನ್ನು ನಮ್ಮ ದೇಶದ ದೃಷ್ಟಿಯಿಂದ ಆಧುನಿಕ ಎನ್ನಬಹುದು. ವಸಾಹತುಶಾಹಿಯೊಂದಿಗೆ ರಾಷ್ಟ್ರೀಯತಾ ಸಿದ್ಧಾಂತ, ಪ್ರಜಾಪ್ರಭುತ್ವ, ಮುಕ್ತ ಮಾರುಕಟ್ಟೆ, ಸಮಾಜವಾದ, ಸ್ತ್ರೀವಾದ ಮುಂತಾದ ಸಾಂಸ್ಥಿಕ ಪರಿಕಲ್ಪನೆಗಳೂ ನಮ್ಮ ದೇಶವನ್ನು ಪ್ರವೇಶ ಮಾಡಿದವು. ನಮ್ಮ ದೇಶದ ಬಹುಭಾಗ ಬ್ರಿಟಿಷರ ಆಡಳಿತ ವಲಯ ಆಗಿದ್ದುದರಿಂದ ನಾವು ಈ ಪರಿಕಲ್ಪನೆಗಳಿಗೆ ತೋರಿದ ಪ್ರತಿಕ್ರಿಯೆ ಸಹಜವಾಗಿ ರಾಜಕೀಯವೇ. ಈ ಕಾಲಘಟ್ಟದಲ್ಲಿ ಕೆಲವು ವರ್ಗದ ಸ್ತ್ರೀಯರು ತಮ್ಮ ಇರುವಿಕೆಯನ್ನು ಸಾರ್ವಜನಿಕ ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಿದ್ದರು. ಆದರೆ ಅವರು ಸಾಮುದಾಯಿಕ ಅನನ್ಯತೆ ಮತ್ತು ಪ್ರಜಾಸತ್ತಾತ್ಮಕ ಪೌರತ್ವ, ಮೂಢನಂಬಿಕೆ ರಹಿತ ವಿವೇಚನಾಯುತ ಧಾರ್ಮಿಕ ನಂಬಿಕೆ ಮತ್ತು ಸಾಂಸ್ಕೃತಿಕ ವಿಶಿಷ್ಟತೆಗಳ ಪ್ರತಿಪಾದನೆ, ಕಾರ್ಮಿಖರ ಹಕ್ಕುಗಳು, ಸ್ತ್ರೀ ಪುರುಷರ ಸಮಾನ ಶಿಕ್ಷಣ, ಗ್ರಾಮೀಣ ಬಡತನವೇ ಮೊದಲಾದ ಸಮಸ್ಯೆಗಳನ್ನೂ ಅವುಗಳಿಗೆ ಕಂಡುಕೊಳ್ಳಬಹುದಾದ ಪರಿಹಾರವನ್ನು ಕುರಿತು ಬಹುಮಟ್ಟಿಗೆ ಅನಾಮಿಕರಾಗಿಯೇ ಪತ್ರಿಕಾ ಮಾಧ್ಯಮದಲ್ಲಿ ಚರ್ಚಿಸುತ್ತಿದ್ದರು.
ಭಾರತೀಯ ಸಮಾಜ ಮತ್ತು ಸ್ತ್ರೀವಾದ: ಕ್ರೈಸ್ತ ಮಿಷನರಿಗಳು ಭಾರತೀಯರಿಗೆ ಧರ್ಮ ಎಂಬುದೇ ಇಲ್ಲ, ಇರುವುದು ಮೂಢನಂಬಿಕೆ ಅಂಧವಿಶ್ವಾಸ ಅಶ್ಲೀಲತೆಗಳನ್ನು ಒಳಗೊಂಡಿರುವ ರೂಢಿ ಪದ್ಧತಿ ಆಚರಣೆಗಳು ಅಷ್ಟೇ ಎಂದು ನಮ್ಮ ಧಾರ್ಮಿಕ ಬದುಕಿನಮೇಲೆ ಧಾಳಿ ಮಾಡುತ್ತಿದ್ದರು, ಜನರನ್ನು ಮರುಳು ಮಾಡಿ ಕ್ರೈಸ್ತ ಮತಧರ್ಮಕ್ಕೆ ಮತಾಂತರಿಸುತ್ತಿದ್ದರು. ಬ್ರಿಟಿಷ್ ಶಿಕ್ಷಣ ಪದ್ಧತಿ ಜಾರಿಗೆ ಬಂದುದರಿಂದಾಗಿ ರೂಢಿಗತ ಉತ್ಪಾದನಾ ವ್ಯವಸ್ಥೆಯ ಮೇಲೆ ಗಧಾಪ್ರಹಾರ ಉಂಟಾಯಿತು. ರೂಢಿಗತ ವೃತ್ತಿನಿರತ ಕುಟುಂಬಗಳು ತಮ್ಮ ಸ್ತ್ರೀಸದಸ್ಯರೊಂದಿಗೆ ಬೀದಿಪಾಲಾದವು. ಪರಸ್ಪರ ಅವಲಂಬಿತ ಆಗಿದ್ದ ಆರ್ಥಿಕ ವ್ಯವಸ್ಥೆ,ಯೊಂದಿಗೆ ಪರಂಪರಾಗತವಾದ ಧಾರ್ಮಿಕ ಮತ್ತು ಕೌಟುಂಬಿಕ ವ್ಯವಸ್ಥೆಯೂ ಬುಡಮೇಲಾಯಿತು. ಕುಟುಂಬ ಕೇಂದ್ರಿತವಾಗಿಯೇ ತಮ್ಮ ಇರುವಿಕೆಯನ್ನು ಸ್ಥಾಪಿಸಿಕೊಳ್ಳ ಬೇಕಾಗಿದ್ದ ಅಸಂಖ್ಯಾತ ಸ್ತ್ರೀಯರ ಬದುಕು ಅತಂತ್ರವಾಯಿತು. ಇದರೊಂದಿಗೆ ಸ್ತ್ರೀ ಅಸಮಾನತೆಯ ಬಗೆ ಬಗೆಯ ನೆಲೆಗಳು, ಬಗೆ ಬಗೆ ರೂಪದ ದೌರ್ಜನ್ಯ, ಅಸ್ಪೃಷ್ಯತೆಯ ಪ್ರಶ್ನೆಗಳು ತಲೆಯೆತ್ತಿದವು. ಇವುಗಳಿಗೆಲ್ಲ ಸಾಧ್ಯವಾದ ಮಟ್ಟಿಗೆ ಅತ್ಯುತ್ತಮ ಪರಿಹಾರವನ್ನು ಸ್ತ್ರೀಕೇಂದ್ರಿತವಾಗಿಯೇ ಕಂಡುಕೊಳ್ಳುವ ಅನಿವಾರ್ಯತೆ ಉಂಟಾಯಿತು. ವಸಾಹತುಶಾಹಿಯ ಪ್ರಭಾವ ಪ್ರದೇಶದಿಂದ ಪ್ರದೇಶಕ್ಕೆ ಮಾತ್ರವಲ್ಲದೆ ಸಮುದಾಯಗಳ ವರ್ಗ, ಜಾತಿಗೆ ಅನುಗುಣವಾಗಿಯೂ ಭಿನ್ನವಾಗಿತ್ತು. ಅದಕ್ಕೆ ಅನುಗುಣವಾಗಿಯೇ ಸ್ತ್ರೀ ಅನನ್ಯತೆಯನ್ನು ಎತ್ತಿಹಿಡಿಯಬೇಕಾಗಿತ್ತು. ಇದು ಭಾರತೀಯ ಸ್ತ್ರೀವಾದದ ಮುಖ್ಯ ಎಳೆ.
ಸ್ತ್ರೀ ಸುಧಾರಣೆ ಮತ್ತು ಗಾಂಧೀಜಿ: ವಸಾಹತುಶಾಹಿಯಿಂದಾಗಿ ಬ್ರಿಟಿಷ್ ವ್ಯವಸ್ಥೆ ಒಪ್ಪುವ ರೀತಿಗೆ ನಾವು ತಲೆಬಾಗಬೇಕಾಯಿತು. ಎಲ್ಲರೂ ಈ ಅನಿವಾರ್ಯತೆಯನ್ನು ಒಪ್ಪಿಕೊಳ್ಳಲಿಲ್ಲ. ರೂಢಿಗತವಾಗಿಯೇ ಬದುಕುವ ಪ್ರಯತ್ನ ಮಾಡುವವರು ಬಹಳ ಮಂದಿ ಇದ್ದರು. ಇದರಿಂದಾಗಿ ಸಮಾಜ ಭಾರತೀಯ ಮತ್ತು ಪಾಶ್ಚಾತ್ಯ ಎಂದು ಎರಡು ಮುಖವಾಗಿ ವಿಭಜಿತಗೊಂಡಿತು. ಪಾಶ್ಚಾತ್ಯ ಮುಖದಲ್ಲಿ ಮನೆಯಾಚೆಗಿನ ನಡಾವಳಿಯಲ್ಲಿ ಧರಿಸುವ ಉಡುಪಿನಿಂದ ಹಿಡಿದು ಭಾಷೆ, ಸಂಪರ್ಕ, ಶಿಕ್ಷಣ, ಉದ್ಯೋಗ, ತರಬೇತಿ, ಉತ್ಪಾದನೆ ಮತ್ತು ವಿತರಣೆಯೇ ಮೊದಲಾದ ಸಮಸ್ತ ಸಂಗತಿಗಳೂ ಭಾರತೀಯ ಎನ್ನುವುದಕ್ಕಿಂತ ವಿಭಿನ್ನವಾದದ್ದು ಆಗಿಬಿಟ್ಟಿತು. ಭಾರತೀಯ ಎನ್ನುವುದು ಮನೆಯೊಳಗಿನ, ಖಾಸಗಿಯಾದ, ಆಯಾಯಾ ಸಮುದಾಯಗಳಿಗೇ ಸೀಮಿತವಾದ ಆಚಾರ-ವಿಚಾರ ಸಂಹಿತೆ ಆಯಿತು. ಅವನ್ನೆಲ್ಲಾ ಕಡ್ಡಾಯವಾಗಿ ಅನುಸರಿಸಿಕೊಂಡು ಹೋಗಬೇಕಾದ ಜವಾಬ್ದಾರಿ, ಹೊಣೆಗಾರಿಕೆ ಸ್ತ್ರೀಯರದು ಎಂದು ವಿಚಾರವಂತರೂ ತಿಳಿಯುತ್ತಿದ್ದರು. ಪುರುಷರು ಬದಲಾದ ಆಡಳಿತ ವ್ಯವಸ್ಥೆಯಿಂದಾಗಿ ತಮ್ಮ ಆಚಾರ ವಿಚಾರಗಳಲ್ಲಿ ಬದಲಾವಣೆ ತಂದುಕೊಂಡರೂ ಸ್ತ್ರೀಯರು ಹಾಗೆ ಮಾಡಬಾರದು ಎಂಬುದು ಇಡೀ ಪುರುಷಸಮುದಾಯದ ನಿಲುವು ಆಗಿತ್ತು. ಪುರುಷರು ಸಾಧ್ಯವಾದ ಮಟ್ಟಿಗೂ ಸ್ತ್ರೀಯರು ಮನೆಯಿಂದಾಚೆಗೆ ಬಾರದಂತೆ ನೋಡಿಕೊಳ್ಳುತ್ತಿದ್ದರು. ಸ್ತ್ರೀಯರಿಗೆ ಶಿಕ್ಷಣ ಪಡೆಯಲು, ಸಾಮಾಜಿಕವಾಗಿ ಸ್ವತಂತ್ರವಾಗಿ ಓಡಾಡಲು, ತಮ್ಮದೇ ಆದ ಉದ್ಯೋಗವನ್ನು ರೂಢಿಸಿಕೊಳ್ಳುವುದೇ ಮುಂತಾದ ಸ್ತ್ರೀ ಅನನ್ಯತೆಯ ಸಾಧ್ಯತೆಗಳನ್ನೆಲ್ಲಾ ಪ್ರತಿಬಂಧಿಸಿದರು. ಈ ದೃಷ್ಟಿಯಿಂದ ಭಾರತೀಯ ಸ್ತ್ರೀವಾದದ ಮುಖ್ಯವಾದ ಅಂಶ ಸ್ತ್ರೀಯರ ಪರಿಸ್ಥಿತಿಯಲ್ಲಿ ಸುಧಾರಣೆ ಆಗಬೇಕೆಂಬುದೇ ಆಯಿತು.
ಸ್ತ್ರೀಯರ ಸುಧಾರಣೆಯನ್ನು ಬಯಸಿದವರಲ್ಲಿ ಗಾಂಧೀಜಿಯವರೂ ಒಬ್ಬರು. ಭಾರತದ ಸಾರ್ವಜನಿಕ ವಲಯಕ್ಕೆ ಗಾಂಧೀಜಿಯವರ ಪ್ರವೇಶ ಆಗುವ ವೇಳೆಗೆ ಜಾಗೃತ ವಿದ್ಯಾವಂತ ಸುಧಾರಕರು ಸಾಂಸ್ಕೃತಿಕ ಪುನರುಜ್ಜೀವನವನ್ನು ಸಾಧ್ಯಗೊಳಿಸಲು ಹೋರಾಡುತ್ತಿದ್ದರು. ಅವರದು ಸ್ತ್ರೀಯರು ಅಸಹಾಯಕರು, ಅವರಿಗೆ ರಕ್ಷಣೆ ಪೋಷಣೆ ಆಲಂಬನೆ ನೀಡಿ ಮೇಲಕ್ಕೆತ್ತಬೇಕು, ಅವರ ಕಣ್ಣೀರು ಒರೆಸಬೇಕು ಎನ್ನುವ ಅನುಕಂಪದ ದೃಷ್ಟಿಕೋನ. ಇದರೊಂದಿಗೆ ಭಾರತ ಬ್ರಿಟಿಷ್ ವ್ಯವಸ್ಥೆಯಿಂದ ಸಂಪೂರ್ಣವಾಗಿ ಸ್ವತಂತ್ರ ಆಗಬೇಕು ಎನ್ನುವ ಸ್ವಾತಂತ್ರ್ಯ ಹೋರಾಟವೂ ಬಹುಮುಖಿಯಾಗಿ ಆರಂಭವಾಗಿತ್ತು. ಇದಕ್ಕೆ ಪರ್ಯಾಯವಾಗಿ ಬ್ರಿಟಿಷ್ ವ್ಯವಸ್ಥೆಯ ಚೌಕಟ್ಟಿನೊಳಗೇ ಸ್ತ್ರೀಯರ ಸ್ಥಿತಿಗತಿಯನ್ನೂ ಒಳಗೊಂಡಂತೆ ಎಲ್ಲ ಮುಖದ ಜನಜೀವನವನ್ನು ಎಲ್ಲಾ ರೀತಿಯಲ್ಲೂ ಸುವ್ಯವಸ್ಥಿತಗೊಳಿಸಬಹುದು ಎಂದು ಭಾವಿಸುವವರಿಂದ ಆ ದಿಕ್ಕಿನಲ್ಲಿಯೂ ಸುಧಾರಣಾ ಕಾರ್ಯ ಚುರುಕಾಗಿತ್ತು.
ಬ್ರಿಟಿಷ್ ಶಿಕ್ಷಣ ಪದ್ಧತಿಯಿಂದಾಗಿ ಅನೇಕ ಭಾರತೀಯರು ತಮ್ಮ ಕೂಪ ಮಂಡೂಕ ಸ್ಥಿತಿಯನ್ನು ಕೊಡವಿಕೊಂಡು ಎಲ್ಲ ಮುಖದ ಪಾಶ್ಚಾತ್ಯ ತಿಳುವಳಿಕೆಗೆ ತಮ್ಮನ್ನು ತೆರೆದುಕೊಂಡರು. ಅವರಿಗೆ ಢಾಳಾಗಿ ಎದ್ದು ಕಾಣಲಾರಂಭಿಸಿದ ಪುರುಷ-ಸ್ತ್ರೀ ಎನ್ನುವ ವ್ಯತ್ಯಾಸದಿಂದ ಹಿಡಿದು ಸಮಾಜದ ಎಲ್ಲಾ ಸಮುದಾಯಗಳ ನಡುವಿನ ವ್ಯತ್ಯಾಸಗಳು ಸಹಿಸಲಾಗದ್ದು ಎಂದಾಯಿತು. ಈ ಹಿಂದೆ ಇದ್ದ ಹೊಂದಾಣಿಕೆಯ ಬದುಕಿನ ಜಾಗದಲ್ಲಿ ತಂತಮ್ಮ ಗುಂಪು, ಜಾತಿ, ಸಮುದಾಯಗಳಿಗೆ ಹೇಗಾದರೂ ಸ್ಥಾನ ದೊರಕಿಸಿಕೊಳ್ಳಬೇಕು ಎನ್ನುವ ತೀವ್ರವಾದ ಸ್ಪರ್ಧೆಗೆ ಅವರು ಇಳಿದರು. ಇದನ್ನು ವಿರೋಧಿಸುವವರು ಬಡವರ ಮತ್ತು ಸ್ತ್ರೀಯರ ಮೇಲಿನ ಶೋಷಣೆ, ಮೇಲು-ಕೀಳು ಎನ್ನುವ ಅಸ್ಪೃಷ್ಯತೆಯೇ ಮೊದಲಾದ ಅಧಿಕಾರ-ರಾಜಕೀಯ, ಸಾಮಾಜಿಕ ಆರ್ಥಿಕ ವ್ಯವಸ್ಥೆಗಳು ಜನಜೀವನದ ಒಂದು ಸ್ವಾಭಾವಿಕ ಅವಿಭಾಜ್ಯ ಅಂಗ ಎನ್ನುವುದನ್ನು ಶ್ರುತಿ ಸ್ಮೃತಿಗಳಿಂದ ಸಮರ್ಥಿಸುವ ನಿಲುವಿನವರೂ ಬಲವಾಗಿಯೇ ಕಾರ್ಯೋನ್ಮುಖ ಆಗಿದ್ದರು. ಇಂಥ ವಿಪರೀತದ ಪರಿಸ್ಥಿತಿಯಲ್ಲಿ ಸ್ತ್ರೀಯರ ಸ್ಥಿತಿಗತಿಗಳಲ್ಲಿಯ ಸುಧಾರಣೆ ಒಂದು ಪಂಥಾಹ್ವಾನವೇ ಆಗಿತ್ತು.
ರಾಜಕೀಯವು ರಾಜಶಾಹಿಯ ಮುಖ್ಯಾಂಶಗಳನ್ನೆಲ್ಲಾ ಒಳಗೊಂಡ ತೋರಿಕೆಯ ಪ್ರಜಾಸತ್ತಾತ್ಮಕತೆ ಆಗಿತ್ತು. ಸಾಮಾಜಿಕ ಜೀವನದ ಸ್ವಾಯತ್ತತೆಗೆ ಈ ವ್ಯವಸ್ಥೆಯಲ್ಲಿ ಜಾಗವಿರಲಿಲ್ಲ. ಎಲ್ಲವೂ ಆಡಳಿತಾಂಗದ ಒಪ್ಪಿಗೆಯ ಮುದ್ರೆಯೊಂದಿಗೆ ಮಾನ್ಯ ಆಗಬೇಕಾಗಿತ್ತು. ಆಡಳಿತದ ವಿವರಗಳು ಜನಸಮುದಾಯಗಳ ವಿವಿಧ ಸ್ವರೂಪಕಾತ್ಮಕತೆಗಳನ್ನು ಒಳಗೊಂಡಿದ್ದರೂ ಸಾಮಾನ್ಯತೆಯ ಏಕರೂಪಕ್ಕೆ ಒಳಪಟ್ಟಿತ್ತು. ಜನಪ್ರಾತಿನಿಧ್ಯದ ಮಾತನ್ನಾಡುತ್ತಲೇ ಆಡಳಿತ ಸರ್ವಾಧಿಕಾರಿ ಆಗಿತ್ತು. ಅದು ಹೇಳಿದುದೇ ಕಾನೂನು! ಅದರ ಕಾರ್ಯಾಚರಣೆಯೆಲ್ಲವೂ ನೈತಿಕವೇ, ಜನೋದ್ಧಾರದ ಆಶಯವುಳ್ಳದ್ದೇ! ವಾಸ್ತವವಾಗಿ ಇದಕ್ಕೆ ಆಡಳಿತ ವರ್ಗದ ಸುಖ ಸೌಕರ್ಯಗಳ ಹೊರತಾಗಿ ಹೆಚ್ಚು ವಿಶೇಷವಾದ ಗೊತ್ತುಗುರಿಗಳಿರಲಿಲ್ಲ. ಇಂಥ ರಾಜಕೀಯ ವ್ಯವಸ್ಥೆಯಿಂದ ನ್ಯಾಯಯುತವಾದ ರಾಜಕೀಯ ಪ್ರಾತಿನಿಧ್ಯ ಸ್ತ್ರೀಯರನ್ನೂ ಒಳಗೊಂಡಂತೆ ಎಲ್ಲರಿಗೂ ದೊರೆತು ಅವರ ರಾಜಕೀಯ ಸ್ಥಾನಮಾನಗಳು ಔನ್ನತ್ಯವನ್ನು ಪಡೆಯುತ್ತವೆ ಎಂಬುದನ್ನು ನಿರೀಕ್ಷಿಸುವುದು ಕಷ್ಟಸಾಧ್ಯದ ಮಾತಾಗಿತ್ತು. ಇಂಥ ಸಂಕೀರ್ಣ ಕಾಲಘಟ್ಟದಲ್ಲಿ ಗಾಂಧೀಜಿ ಸ್ವಾತಂತ್ರ್ಯ ಹೋರಾಟ ಮತ್ತು ಭಾರತೀಯ ನೆಲೆಯ ರಾಷ್ಟ್ರದ ಪುನರ್ರೂಪಿಸುವಿಕೆಯ ಕಾರ್ಯ ಯೋಜನೆಯನ್ನು ಕೈಗೆತ್ತಿಕೊಂಡರು. ವಿದೇಶೀ ತುಳಿಯುವಿಕೆಯಿಂದ ಪಾರಾಗಿ ಪಡೆಯ ಬಹುದಾದ ಸ್ವಾತಂತ್ರ್ಯವು ಬಡತನ, ಅಸ್ಪೃಷ್ಯತೆ ಮತ್ತು ಸ್ತ್ರೀ ಅಸಮಾನತೆಗಳ ನಿವಾರಣೆಯಾದ ಹೊರತೂ ಅರ್ಥಪೂರ್ಣವಾದದ್ದು ಆಗಿರುವುದಿಲ್ಲ ಎಂದು ಗಾಂಧೀಜಿ ಸ್ಪಷ್ಟವಾಗಿ ಸಾರಿದರು.
ಗಾಂಧೀಜಿ ಮತ್ತು ನಾಯಕತ್ವ: ಯೋಚನೆ, ಭಾವನೆ, ಕ್ರಿಯೆಗಳಿಗೆ ನಿರ್ದಿಷ್ಟ ಮುಖವೇ ಇಲ್ಲದ ಕಾಲಘಟ್ಟದಲ್ಲಿ ನಾಯಕತ್ವ ವಹಿಸಿಕೊಳ್ಳುವವನು ನೈತಿಕ ಧೈರ್ಯ ಸ್ಥೈರ್ಯಗಳನ್ನು ಉಳ್ಳವನು ಆಗಿರಬೇಕಾಗಿತ್ತು. ಎಲ್ಲರ ಘನತೆಯನ್ನು ಎತ್ತಿ ಹಿಡಿಯುವ ಸಮಾನತೆಯನ್ನು ಪ್ರತಿಪಾದಿಸಬೇಕಾಗಿತ್ತು. ಎಲ್ಲರ ನಡುವಿನ ಸಾಮರಸ್ಯತೆ, ಹೊಂದಾಣಿಕೆ ಮತ್ತು ಪೂರಕತೆಗಳ ಸಂಬಂಧವನ್ನು ಪ್ರತಿಷ್ಠಾಪಿಸಬೇಕಾಗಿತ್ತು. ಬದಲಾದ ಜಾಗತಿಕ ರಾಜಕೀಯ ಮನಸ್ಥಿತಿಗನುಗುಣವಾಗಿ ಪ್ರಜಾಸತ್ತಾತ್ಮಕತೆಯನ್ನು ಎಲ್ಲ ಸಂಗತಿಗಳಲ್ಲಿ ಅನ್ವಯಿಸುವ ಕೌಶಲ್ಯ ಹೊಂದಿರ ಬೇಕಾಗಿತ್ತು. ಸಂಪ್ರದಾಯವನ್ನು ಗೌರವಿಸುತ್ತಲೇ ವಿಜ್ಞಾನ ತಂತ್ರಜ್ಞಾನವೇ ಮೊದಲಾದ ಹೊಸ ಆವಿಷ್ಕಾರಗಳಿಗೆ ವಿವೇಚನಾತ್ಮಕವಾಗಿ ಬಾಗಿಲನ್ನು ತೆರೆದಿಡಬೇಕಾಗಿತ್ತು. ಇಂಥ ಹತ್ತು ಹಲವು ಸಂಗತಿಗಳನ್ನು ದಕ್ಷಿಣ ಆಫ್ರಿಕಾ ಮತ್ತು ಭಾರತದಲ್ಲಿಯ ಬದುಕಿನ ರೀತಿನೀತಿಗಳಿಂದ ಅರ್ಥಮಾಡಿಕೊಳ್ಳುತ್ತಾ, ಸ್ವಂತ ಬದುಕಿನಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾ ಗಾಂಧೀಜಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡು ನಾಯಕರಾಗಿ ಹೊರಹೊಮ್ಮಿದರು.
ಬಹಳ ಸೂಕ್ಷ್ಮವಾಗಿ ಎಲ್ಲವನ್ನೂ ಗಮನಿಸುತ್ತಿದ್ದ ಗಾಂಧೀಜಿ ಇಡೀ ಬದುಕಿಗೆ ಅಹಿಂಸೆ ಸತ್ಯಾಗ್ರಹ ಎನ್ನುವ ನಿರ್ದಿಷ್ಟ ಚೌಕಟ್ಟನ್ನು ಪರಿಕಲ್ಪಿಸಿದರು. ಅದರೊಳಗೆ ಮಾನವೀಯವಾದ ಎಲ್ಲಾ ಬದಲಾವಣೆಗಳನ್ನು ಅಡಕಗೊಳಿಸಬಹುದಾದ ಸಾಧ್ಯತೆಯನ್ನು ಭಾವಿಸಿದರು. ಅದರಲ್ಲಿ “ಸತ್ಯಂ ವದ, ಧರ್ಮಂ ಚರ: ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ ನ ಅಪ್ರಿಯಂ ಸತ್ಯಂ ಬ್ರೂಯಾತ್; ಧೃ ಧಾರಣ ಇತಿ ಧರ್ಮಃ; ಉದ್ಧರೇತ್ ಆತ್ಮನಾ ಆತ್ಮಾನಾಂ” ಎನ್ನುವ ಸಾರವನ್ನು ಅಡಕಗೊಳಿಸಿದರು. ಸನ್ಮಾರ್ಗದಲ್ಲಿ ಇರಿಸಬಹುದಾದ ಎಲ್ಲಾ ಮಾನವೀಯ ನಡೆವಳಿಕೆಗೆ ಜಾಗವನ್ನು ಕಲ್ಪಿಸಿದರು. ಸ್ತ್ರೀ ಪುರುಷ ಅಸಮಾನತೆ, ಮೇಲು ಕೀಳು ಮನೋಭಾವ, ಅಮಾನವೀಯ ಮನಸ್ಥಿತಿ ಇವುಗಳಿಗೆ ಕೊನೆ ಹಾಡುವುದನ್ನು ತಮ್ಮ ಸ್ವಾತಂತ್ರ್ಯ ಹೋರಾಟದ ಪ್ರಮುಖ ಅಂಶವನ್ನಾಗಿಸಿಕೊಂಡರು.
ಗಾಂಧೀಜಿ ತಮ್ಮ ಸಂಪ್ರದಾಯ ಬದ್ಧತೆಯಲ್ಲಿ ಭಾರತೀಯತೆಯ ಮಣ್ಣಿನ ಕಂಪನ್ನು ಹೊಂದಿದ್ದರು. ಇದರಿಂದ ಜನಸಾಮಾನ್ಯ ಸ್ತ್ರೀ ಪುರುಷರಿಗೆ ಈತ ತಮ್ಮವನು ಎಂಬ ಭಾವ ಸಹಜವಾಗಿ ಹುಟ್ಟಿತು. ಗಾಂಧೀಜಿ ಸಂಪ್ರದಾಯವನ್ನು ಸತ್ಯ ಮತ್ತು ಅಹಿಂಸೆಯ ನೆಲೆಗಟ್ಟಿನಲ್ಲಿ ಅರ್ಥೈಸಿದರು. ಬದುಕನ್ನು ಯಾವುದು ಮುನ್ನಡೆಸುವುದೋ ಅದನ್ನು ಸತ್ಯ ಎಂದು ತಿಳಿದರು. ಅವರಿಗೆ ಸತ್ಯ ಪ್ರತಿಪಾದನೆಯ ಒಂದು ರೂಪ ಸ್ವಾತಂತ್ರ್ಯ ಹೋರಾಟ; ಸ್ವಾತಂತ್ರ್ಯದ ಒಂದು ರೂಪ ಸ್ತ್ರೀ-ಪುರುಷ ಸಮಾನತೆ; ಮಾನವೀಯತೆಯೇ ಸತ್ಯ, ಅಹಿಂಸೆ, ಸತ್ಯಾಗ್ರಹಗಳ ಸ್ವರೂಪ, ಸೂಕ್ತತೆ ಮತ್ತು ಸೂಕ್ಷ್ಮತೆಯನ್ನು ನಿರ್ಧರಿಸುವ ಮಾನದಂಡ. ತಮ್ಮ ಪರಿಕಲ್ಪನೆಯ ಸ್ವತಂತ್ರ ಬದುಕನ್ನು ವಾಸ್ತವ ಸಂಗತಿಯಾಗಿಸಲು ಗಾಂಧೀಜಿ ಜನರ ಸ್ವಂತಿಕೆಯನ್ನು ಅಭಿವ್ಯಕ್ತ ಪಡಿಸುವ ಸತ್ವಯುತ ಅಂಶಗಳನ್ನು ಪ್ರಕಾಶಕ್ಕೆ ತರಬಯಸಿದರು. ಸಮಾಜವನ್ನು ವಿಸ್ತರಿಸಿದ ಒಂದು ಕೂಡುಕುಟುಂಬ ಎಂದು ಪರಿಕಲ್ಪಿಸಿಕೊಂಡರು. ಭಾರತೀಯ ಕೂಡುಕುಟುಂಬದಲ್ಲಿ ಸ್ತ್ರೀಯರ ಪ್ರೀತಿ ವಾತ್ಸಲ್ಯಗಳ ಆತ್ಮಬಲವೇ ಪ್ರಧಾನ, ದೈಹಿಕ ಬಲ ಅಪ್ರಧಾನ. ಅಪ್ರಾಮಾಣಿಕತೆ, ಮುಚ್ಚುಮರೆಯ ಸೋಗಲಾಡಿತನ, ಸಮಯಸಾಧಕತೆ ಮುಂತಾದ ವಿದ್ರೋಹಿ ಅಂಶಗಳಿಗೆ ಅಲ್ಲಿ ಸ್ಥಳಾವಕಾಶ ಇಲ್ಲ. ಇಂಥ ಸಮಾಜ ಸಹಜವಾಗಿ ಮಾನವೀಯ ಮತ್ತು ಸ್ತ್ರೀತ್ವ-ಸಮಾಜ (ಫೆಮಿನೈನ್). ಇಂಥ ಸಮಾಜವನ್ನಾಗಿ ದೇಶವನ್ನು ರೂಪಿಸುವ, ರೂಢಿಸುವ ಉದ್ದೇಶವನ್ನು ಗಾಂಧೀಜಿ ಹೊಂದಿದ್ದರು. ಇದು ಸ್ತ್ರೀಯರಿಗಂತೂ ಸಹಜ ಸಾಧ್ಯತೆ ಎಂದು ಸ್ತ್ರೀತ್ವದ ಹೆಚ್ಚುಗಾರಿಕೆಯನ್ನು ಗುರುತಿಸಿದುದು ಗಾಂಧೀಜಿಯ ಸ್ತ್ರೀವಾದದ ಒಂದು ಪ್ರಮುಖ ಹೆಜ್ಜೆ.
ಸ್ವಾತಂತ್ರ್ಯ ಹೋರಾಟ ಮತ್ತು ಕುಂದುಕೊರತೆಗಳ ನಿವಾರಣೆ: ಗಾಂಧೀಜಿ ಸ್ತ್ರೀಯರ ಸಮಸ್ಯೆಗಳನ್ನು ಸ್ತ್ರೀ ಎಂಬ ಲಿಂಗವಾಚಕವಾಗಿ ಗಮನಿಸದೆ ಒಟ್ಟಾರೆ ಸಾಮಾಜಿಕ ಕೊರತೆಗಳು ಎಂದು ಅರ್ಥೈಸಿದರು. ಅವರಿಗೆ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿ ತಮ್ಮ ಸಾಧ್ಯತೆ, ಸಾಮರ್ಥ್ಯಗಳನ್ನೆಲ್ಲಾ ನಿಷ್ಫಲವಾಗಿಸಿಕೊಳ್ಳುತ್ತಿರುವ ಸ್ತ್ರೀ ಸಮೂಹದ ಆತ್ಮ-ಜಾಗೃತಿಯ ಬಗ್ಗೆ ಅಪಾರ ಕಾಳಜಿ. ಸ್ತ್ರೀಯರು ಆತ್ಮನಿರೀಕ್ಷಣೆ ಮಾಡಿಕೊಳ್ಳದೆ ಇರುವುದರಿಂದ ತಮ್ಮ ಘನತೆ ಏನೆಂಬುದನ್ನು ಗುರುತಿಸಲಾರದೇ ಹೋಗಿದ್ದಾರೆ ಎಂಬುದು ಅವರ ಗ್ರಹಿಕೆ. ಅದನ್ನು ಸ್ತ್ರೀ ಸಮೂಹಕ್ಕೆ ಮನವರಿಕೆ ಮಾಡಿಕೊಡುವುದು ಮತ್ತು ಅದಕ್ಕೆ ಗರಿಷ್ಠ ಪ್ರಮಾಣದ ವ್ಯಾಪ್ತಿಯನ್ನು ಕೊಡುವುದು ಅವರ ಸ್ವಾತಂತ್ರ್ಯ ಹೋರಾಟದ ಉದ್ದೇಶಗಳಲ್ಲಿ ಒಂದು. ಇದಕ್ಕೆ ಪೂರಕವಾಗಿ ಪುರುಷ ಪ್ರಧಾನ ಸಮಾಜದ ಧೋರಣೆಗಳನ್ನು, ರೀತಿ ನೀತಿಗಳನ್ನು ಅವರು ವಿಮರ್ಶಿಸಿದರು, ತಮ್ಮ ಸಮಕಾಲೀನ ಸುಧಾರಕರಿಗಿಂತ ವಿಭಿನ್ನ ಆದರು.
ಸ್ತ್ರೀಸಮೂಹವನ್ನು ಅಪಮಾನಿಸುವ ಬಾಲ್ಯವಿವಾಹ, ಕಡ್ಡಾಯ ಮದುವೆ, ವೈಧವ್ಯ ವ್ರತ ಪಾಲನೆ, ಪಾತಿವ್ರತ್ಯದ ಪರಿಕಲ್ಪನೆ, ಸ್ತ್ರೀಯರ ಶೀಲದ ಬಗೆಗಿನ ಅತಿಯಾದ ಕಾಳಜಿ, ಪರ್ದಾ ಪದ್ಧತಿ, ವೇಷ್ಯಾಪದ್ಧತಿಗಳನ್ನು ವಿರೋಧಿಸಿದರು. ಕಡ್ಡಾಯವಾಗಿ ಯಾವನೋ ಒಬ್ಬನೊಂದಿಗೆ ಮದುವೆಯಾಗಬೇಕಾಗಿದ್ದ ನಿರ್ಬಂಧ ವರದಕ್ಷಿಣೆಯ ಪೀಡೆ, ಅಕಾಲ ವೈಧವ್ಯ, ವೈಧವ್ಯದ ಚಿತ್ರಹಿಂಸೆಗಳಾಗಿ ಸ್ತ್ರೀಯರಿಗೆ ಬದುಕಿದ್ದಾಗಲೇ ನರಕದರ್ಶನ ಮಾಡಿಸುತ್ತಿದ್ದವು; ಸಾಮರಸ್ಯತೆಯ ಬದುಕನ್ನು ಕೌಟುಂಬಿಕ ನೆಲೆಯಿಂದ ಸಾಮಾಜಿಕ ನೆಲೆಗೆ, ಅಲ್ಲಿಂದ ಇಡೀ ವಿಶ್ವದ ನೆಲೆಗೆ ವಿಸ್ತರಿಸಿ ಪರಮ ವಾಸ್ತವತೆಯ ದರ್ಶನವನ್ನು ಪಡೆಯುವ ಮಧ್ಯವರ್ತಿ ಗೃಹಸ್ಥಾಶ್ರಮ ಎಂಬ ತಿಳುವಳಿಕೆಗೆ ಎಲ್ಲಿಯೂ ಆಸ್ಪದವೇ ಇಲ್ಲದಂತಾಗಿಸಿತ್ತು.
ತಮ್ಮ ಮನೆಯ ಸ್ತ್ರೀಯರು ಲೈಂಗಿಕವಾಗಿ ಪವಿತ್ರರಾಗಿರಬೇಕೆಂದು ಒತ್ತಾಯಿಸುತ್ತ ಪುರುಷ-ಪರ ಸಮಾಜ ವೇಷ್ಯಾಪದ್ಧತಿಯನ್ನು ಹೇಗೆ ಮರ್ಯಾದಿಸಲು ಸಾಧ್ಯ ಎಂಬುದು ಗಾಂಧೀಜಿಯವರ ವಿವೇಚನಾತ್ಮಕ ಪ್ರಶ್ನೆ. ಸತಿಗೆ ಮಾತ್ರ ಪತಿಯ ಬಗ್ಗೆ ಅಚಲ ನಿಷ್ಠೆ ಇದ್ದರೆ ಸಾಲದು, ಪತಿಗೂ ಸತಿಯ ಬಗ್ಗೆ ನಿಷ್ಠೆ ಇರಬೇಕು; ಸ್ತ್ರೀ ಪುರುಷರಿಬ್ಬರೂ ಅತ್ಯಾವಶ್ಯಕವಾಗಿ ತಿಳಿಯಬೇಕಾದದ್ದು ಕಾಮ ಮತ್ತು ಭೋಗ ಎರಡೇ ಜೀವನದ ಅರ್ಥ ಮತ್ತು ಮೌಲ್ಯ ಅಲ್ಲ; ಅವರ ಅನನ್ಯತೆಯನ್ನು ಸಾಧಿಸುವ ಎಲ್ಲಾ ಕಾರ್ಯ ಚಟುವಟಿಕೆಗಳೂ ಜೀವನದ ಅರ್ಥವಂತಿಕೆಯನ್ನು ಹೆಚ್ಚಿಸುತ್ತವೆ; ಪ್ರಸ್ತುತದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ತನು ಮನ ಧನಗಳೊಂದಿಗೆ ಭಾಗಿಯಾಗುವುದು ಅರ್ಥಪೂರ್ಣ ಬದುಕು ಎಂದು ವಾಸ್ತವದ ಅರಿವನ್ನು ಗಾಂಧೀಜಿ ಮೂಡಿಸಬಯಸಿದರು. ಅನಿವಾರ್ಯ ಕಾರಣಗಳಿಂದಾಗಿ ಪರದೆಯನ್ನು ಸರಿಸಿ ಮನೆಯಿಂದ ಹೊರಗೆ ಬಂದು ದುಡಿಯುವ ಸ್ತ್ರೀಯರು ಕುಲೀನರನ್ನು ನೋಡಿ ತಮ್ಮ ದುಸ್ಥಿತಿಗೆ ಮರುಗದಂತೆ ಮಾಡಿದುದು, ದೇಶದ ಪುನರ್ನಿರ್ಮಾಣ ಕಾರ್ಯದಲ್ಲಿ ತಮಗೂ ಗಂಭೀರ ಸ್ಥಾನ ಇದೆಯೆಂದು ಒಟ್ಟಾರೆ ಸ್ತ್ರೀ ಸಮೂಹ ತಮ್ಮ ಬಗ್ಗೆ ಹೆಮ್ಮೆ ಪಡುವಂತೆ ಮಾಡಿದುದು ಗಾಂಧೀಜಿಯವರ ಈ ನಿಲುವೇ.
ಸ್ತ್ರೀಯರ ಬುದ್ಧಿ ಮೊಣಕಾಲಿನ ವರೆಗೆ, ಸ್ತ್ರೀಯರು ಅಬಲೆಯರು, ಸ್ತ್ರೀಯರು ಚಿನ್ನ ಮತ್ತಿತರ ಭೋಗವಸ್ತುಗಳಲ್ಲಿಯೇ ಆಸಕ್ತರು, ಅವರಿಗೆ ಗೊತ್ತಿರುವುದು ಲೈಂಗಿಕತೆ ಅಷ್ಟೇ ಮುಂತಾದ ಸಾಮಾಜಿಕ ಧೋರಣೆಯನ್ನು ಗಾಂಧೀಜಿ ಪ್ರಶ್ನಿಸಿದರು. ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಪದ್ಧತಿಗಳನ್ನೂ, ನಿಲುವುಗಳನ್ನೂ ನಿರ್ಮೂಲನ ಮಾಡಲು ಪುರುಷರೇ ಮುಂಚೂಣಿಯಲ್ಲಿ ಇರಬೇಕು ಎಂದು ಕರೆಕೊಟ್ಟರು. ಸ್ತ್ರೀಯರನ್ನು ಸುಪ್ತವಾಗಿರುವ ಸಾಮರ್ಥ್ಯ ಸಾಧ್ಯತೆಗಳುಳ್ಳ ಶಕ್ತಿಕೇಂದ್ರ ಎಂದು ನಿರೂಪಿಸಿದರು. ವಾಸ್ತವವಾಗಿ ಸ್ತ್ರೀಯರು ನೈತಿಕವಾಗಿ ಮತ್ತು ಅಹಿಂಸಾತ್ಮಕ ನಡಾವಳಿಗಳಿಂದ ಪುರುಷರಿಗಿಂತ ಹೆಚ್ಚು ಬಲಿಷ್ಠರು ಎಂದರು. ಸ್ತ್ರೀ ಪುರುಷ ಎಂಬ ಭೇದವೇ ಅನಾಗರಿಕ ಎಂದ ಗಾಂಧೀಜಿ ಮೊದಲಿಗೆ ಮನೆಯೊಳಗೆ ಸ್ತ್ರೀ ಪುರುಷ ಸಮಾನತೆಯನ್ನು ಎತ್ತಿಹಿಡಿದರು. ಸ್ತ್ರೀಯಾಗಲೀ ಪುರುಷನಾಗಲೀ ಪರಸ್ಪರರನ್ನು ಗೌರವಾಭಿಮಾನಗಳಿಂದ ಕಂಡು, ಪರಸ್ಪರರ ಕಾರ್ಯಗಳ ಯಶಸ್ಸಿಗೆ ಸಹಕರಿಸಿ ಬದುಕನ್ನು ಹಿತವಾಗಿಸಿಕೊಳ್ಳಬೇಕು ಎಂದರು.
ಸ್ತ್ರೀಯ ಕಾರ್ಯಕ್ಷೇತ್ರ ಮನೆಯ ಒಳಗೆ, ಪುರುಷನದು ಮನೆಯ ಹೊರಗೆ, ಸ್ತ್ರೀ ಪುರುಷನ ಕಾರ್ಯಕ್ಷೇತ್ರಕ್ಕೆ ಕಾಲಿಡಬಾರದು ಎನ್ನುವುದನ್ನು ಗಾಂಧೀಜಿ ವಿರೋಧಿಸಿದರು. ಕಾರ್ಯಕ್ಷೇತ್ರದ ವಿಭಜನೆ ಇರುವುದು ಅನುಕೂಲಕ್ಕಾಗಿ ಮಾತ್ರ; ಬಹುಜನ ಹಿತಾಯ ಬಹುಜನ ಸುಖಾಯ ಎಂಬುದು ಭಾರತೀಯ ಚಿಂತನೆಯ ಒಂದು ಮುಖ್ಯಾಂಶ; ಸ್ತ್ರೀಪುರುಷರಿಬ್ಬರ ಚಿಂತನೆ ಮತ್ತು ಕೆಲಸಕಾರ್ಯಗಳು ಸಾಧ್ಯವಾದಷ್ಟೂ ವಿಸ್ತಾರವಾದ ವ್ಯಾಪ್ತಿಯನ್ನು ಹೊಂದಿರಬೇಕು; ಸ್ತ್ರೀ ಪುರುಷರಿಬ್ಬರೂ ಕೂಡಿಯೇ ಕುಟುಂಬದ ಮತ್ತು ಸಮಾಜದ ಅಭಿವೃದ್ಧಿಯ ಕಾರ್ಯಗಳನ್ನು ನಿರ್ವಹಿಸಬೇಕು; ಆಸ್ತಿಯಲ್ಲಿ ಗಂಡು ಮಕ್ಕಳಿಗೆ ದೊರೆಯುವಷ್ಟೇ ಪಾಲು ಹೆಣ್ಣುಮಕ್ಕಳಿಗೂ ದೊರೆಯಬೇಕು; ಗಂಡನ ಸಂಪಾದನೆ ಅವನ ಸ್ವಂತದ್ದಲ್ಲ, ಅದಕ್ಕೆ ಹೆಂಡತಿ ಸಮಾನ ಹಕ್ಕುದಾರಳು, ಅವಳ ಸಹಕಾರವಿಲ್ಲದಿದ್ದರೆ ಅವನಿಗೆ ಸಂಪಾದಿಸಲು ಆಗುತ್ತಿರಲಿಲ್ಲ ಎಂದರು.
ದುರದೃಷ್ಟವಶಾತ್ ಸ್ತ್ರೀಯರಿಗೆ ಪುರುಷರ ದಬ್ಬಾಳಿಕೆಯಲ್ಲಿ ಮಾತೇ ಮರೆತುಹೋಗಿದೆ; ತಮಗೊಂದು ವ್ಯಕ್ತಿತ್ವ ಇದೆ, ತಾವು ತಲೆಯೆತ್ತಿ ಘನತೆಯಿಂದ ಬದುಕಬೇಕಾದ ಅವಶ್ಯಕತೆಯಿದೆ ಎಂಬುದರ ಕಲ್ಪನೆಯೇ ಅವರಿಗೆ ಇಲ್ಲವಾಗಿದೆ; ವಾಸ್ತವವಾಗಿ ಸ್ತ್ರೀಯರು ತಮ್ಮ ಅತಿಶಯವಾದ ದುಃಖ-ಕಷ್ಟ-ಸಹಿಷ್ಣುತೆ, ಅಪರಿಮಿತ ಪ್ರೀತಿಸುವಿಕೆ ಇವುಗಳಿಂದ ಇಡೀ ವಿಶ್ವವನ್ನೇ ಭಾವನಾತ್ಮಕವಾಗಿ ಬೆಸೆಯಬಲ್ಲ ವ್ಯಕ್ತಿತ್ವವುಳ್ಳವರು; ಅವರ ಮಾತೃಭಾವಕ್ಕೆ ಯಾವ ಅಡೆತಡೆಯೂ ಇಲ್ಲ. ಅವರ ತ್ಯಾಗಕ್ಕೆ ಇತಿಮಿತಿಯೇ ಇಲ್ಲ; ಅವರ ಈ ಸ್ವಾಭಾವಿಕತೆಯ ಬುದ್ಧಿಪೂರ್ವಕ ವ್ಯಾಪಕ ಪ್ರಕಟಣೆಗೆ ಸರಿಯಾದ ಮಾರ್ಗೋಪಾಯ ರೂಪುಗೊಂಡಿಲ್ಲ ಎಂದು ಗಾಂಧೀಜಿ ವಿಷಾದಿಸಿದರು. ಸ್ತ್ರೀಯರದು ಗೌರವಾದರದ ಸ್ವಾಭಿಮಾನದ ಬದುಕು ಆಗಬೇಕೆಂದು ಆಶಿಸಿದರು. ಕುಟುಂಬದ ಉತ್ತಮ ನಿರ್ವಹಣೆಗಾಗಿ, ಸಮಾಜದ ಉತ್ತಮ ಆರೋಗ್ಯಕ್ಕಾಗಿ, ವೈಯಕ್ತಿಕವಾಗಿ ಸಾಹಿತ್ಯದ ಕಲಾತ್ಮಕ ರಸಾತ್ಮಕ ಅಂಶಗಳನ್ನು ಆಸ್ವಾದಿಸಲು, ಧಾರ್ಮಿಕ ಆಧ್ಯಾತ್ಮಿಕ ಮಾರ್ಗದರ್ಶನಗಳ ಮೌಲ್ಯವನ್ನು ಮನನ ಮಾಡಿಕೊಳ್ಳಲು, ಸಾಮಾಜಿಕ ಅವಶ್ಯಕತೆಗಳನ್ನು ಪೂರೈಸುವ ಗೃಹೋದ್ಯಮಗಳನ್ನು ಬೆಳೆಸಲು ಮತ್ತು ಆರ್ಥಿಕವಾಗಿ ಸ್ವಾವಲಂಬಿಯಾಗಿರಲು ಸ್ತ್ರೀಯರು ಪುರುಷರಂತೆ ಉತ್ತಮ ವಿದ್ಯಾವಂತರು ಆಗಬೇಕೆಂದು ಸ್ತ್ರೀ ಶಿಕ್ಷಣವನ್ನು ಬೆಂಬಲಿಸಿದರು. ಸುಧಾರಣೆ ವೈಯಕ್ತಿಕ ನೆಲೆಯಿಂದಲೇ ಆರಂಭವಾಗಬೇಕು ಎಂದು ಗಾಂಧೀಜಿಯವರು ಬದುಕನ್ನು ಸೀಮಿತಗೊಳಿಸುವ, ಸಂಕುಚಿತಗೊಳಿಸುವ ಎಲ್ಲಾ ಆವರಣಗಳು ಮತ್ತು ನಿರ್ಬಂಧಗಳಿಂದ ಹೊರಬರಲು ಸ್ತ್ರೀಯರಿಗೆ ಕರೆಕೊಟ್ಟರು. ಅವರ ಪ್ರೇರಣೆ ಪ್ರೋತ್ಸಾಹಗಳಿಂದ ಮಹಿಳಾಮಣಿಗಳು ನೆಲದಿಂದ ಮೇಲೆದ್ದು ಬಂದರು.
ಭಾರತೀಯ ಸಾರ್ವಜನಿಕ ಜೀವನವನ್ನು ವಿಸ್ತೃತವಾದ ಕೂಡುಕುಟುಂಬದಲ್ಲಿನ ಜೀವನರೀತಿ ಎಂದು ಗಾಂಧೀಜಿ ಪರಿಕಲ್ಪಿಸಿದ್ದರು. ಸಾವಿರಾರು ಸ್ತ್ರೀಯರು ತಾವು ಕೌಟುಂಬಿಕ ಪರಿಸರದಲ್ಲಿ ರೂಪಿಸಿಕೊಂಡಿದ್ದ ಪರಸ್ಪರ ಪೂರಕ ಮತ್ತು ಆತ್ಮೀಯ ಬಂಧುತ್ವವನ್ನೇ ಸಾರ್ವಜನಿಕ ಜೀವನದಲ್ಲಿಯೂ ಭಾವಿಸಿದರು. ಗಾಂಧೀಜಿ ಬಂಕಿಮ ಚಂದ್ರ ಚಟರ್ಜಿಯವರಂತೆ ದೇಶವನ್ನು ಮಾತೃಭೂಮಿ ಎಂದು ಪರಿಕಲ್ಪಿಸಿದ್ದರು. ಇದು ಭಾರತೀಯರಿಗೆ ತಮ್ಮನ್ನು ಬೌದ್ಧಿಕವಾಗಿ ಹಣ್ಣುಗಾಯಿ ನೀರುಗಾಯಿ ಮಾಡುತ್ತಿದ್ದ ಬ್ರಿಟಿಷರ ಆಕ್ರಮಣವನ್ನು ಎದುರಿಸುವ ಪ್ರಬಲ ಅಸ್ತ್ರ ಆಯಿತು. ಮಾತೃಭಾವ ಜೊತೆಗಾರರನ್ನು ಅತ್ಯಂತ ಬಲಿಷ್ಠವಾಗಿ ಬೆಸೆಯಬಲ್ಲ ಭಾವನಾತ್ಮಕ ಸಂಬಂಧ. ಗಾಂಧೀಜಿ ಸ್ತ್ರೀಯರ ಸಹನೆ ತ್ಯಾಗ ಸಂಯಮ ಶ್ರದ್ಧೆ ಬದ್ಧತೆ ನಿಷ್ಕಲ್ಮಶ ನಿರ್ವ್ಯಾಜ ಪ್ರೀತಿಯುತ ಮಾತೃತ್ವದ ಘನತೆಯನ್ನು ಎತ್ತಿಹಿಡಿದರು. ಭಾರತದಾದ್ಯಂತ ಬಲಿಷ್ಠ ಭಾವನಾತ್ಮಕ ಸಂಬಂಧವನ್ನು ಬೆಸೆದರು. ಇದು ಸ್ತ್ರೀಪುರುಷ ಸಮಾನತೆಯನ್ನು ಐಚ್ಛಿಕವಾಗಿ ಸಾಧಿಸುವಲ್ಲಿ ಅತ್ಯಂತ ಗಟ್ಟಿ ಹೆಜ್ಜೆಯೂ ಆಯಿತು, ಅಹಿಂಸಾತ್ಮಕವಾಗಿ ಹೋರಾಡುವ ಕೆಚ್ಚು ಧೈರ್ಯ ಸ್ಥೈರ್ಯಗಳೂ ಆದವು.
ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟದ ಮುಖ್ಯಭಾಗ ಅಹಿಂಸಾತ್ಮಕ ಸತ್ಯಾಗ್ರಹ ಚಳುವಳಿ. ಅವುಗಳ ಯಶಸ್ಸಿನ ಆಧಾರ ಇಡೀ ದೇಶದ ಸ್ತ್ರೀ ಪುರುಷರಿಬ್ಬರ ಸಹಭಾಗಿತ್ವ. ಚಳುವಳಿಗಳಲ್ಲಿ ನೇರವಾಗಿ ಭಾಗಿಯಾಗುವುದು ಎಷ್ಟು ಮುಖ್ಯವೋ ಭಾಗಿಯಾದವರ ಹಿಂದೆ ನಿಂತು ಹೃತ್ಪೂರ್ವಕವಾಗಿ ಹೋರಾಟಗಾರರನ್ನು ಎಷ್ಟೇ ಕಷ್ಟವಾದರೂ ಬೆಂಬಲಿಸುವುದು ಅಷ್ಟೇ ಮುಖ್ಯ. ಇದನ್ನು ಗ್ರಹಿಸಿದ್ದ ಗಾಂಧೀಜಿ ಸ್ತ್ರೀ ಸಮೂಹದಿಂದ ಈ ಎರಡೂ ಮುಖದಲ್ಲಿ ಚಳುವಳಿಯಲ್ಲಿ ಭಾಗಿಯಾಗುವಿಕೆಯನ್ನು ನಿರೀಕ್ಷಿಸಿದರು. ಸ್ತ್ರೀಯರು ಅದನ್ನು ಹುಸಿಗೊಳಿಸಲಿಲ್ಲ. ಸತ್ಯಾಗ್ರಹ, ಅಸಹಕಾರ ಚಳುವಳಿಗಳಲ್ಲಿ ಕಮಲಾ ದೇವಿ ಚಟ್ಟೋಪಾಧ್ಯಾಯ, ಸರೋಜಿನಿ ನಾಯಿಡು, ಕನಕಲತ ಬರುವಾ, ಉಮಾಬಾಯಿ ಕುಂದಾಪುರ್, ಬೇಗಂ ರೊಯೇಕಾ ಮುಂತಾದವರು ನಾಯಕತ್ವ ವಹಿಸಿದರು. ಅವರ ನೇತೃತ್ವದಲ್ಲಿ ಸಹಸ್ರಾರು ಸ್ತ್ರೀಯರು ಗ್ರಾಮ, ನಗರ ಎಂಬ ಭೇದವಿಲ್ಲದೆ ಪೋಲೀಸರ ದಬ್ಬಾಳಿಕೆಯನ್ನು ಸಹಿಸಿದರು, ಲಾಟಿಯ ಪೆಟ್ಟಿಗೆ ಮೈಯೊಡ್ಡಿದರು, ಪೋಲೀಸರ ಗುಂಡೇಟಿಗೂ ಎದೆಯೊಡ್ಡಿದರು.
ಗಾಂಧೀಜಿಗೆ ಸತ್ಯದ ಗ್ರಹಿಕೆಯ ನೆಲೆಯಲ್ಲಿ ವ್ಯಕ್ತಿ ಸ್ವಾವಲಂಬಿ ಆಗಿರುವುದೇ ನಿಜವಾದ ಅರ್ಥದಲ್ಲಿ ಸ್ವಾತಂತ್ರ್ಯ. ಈ ದಿಕ್ಕಿನಲ್ಲಿ ಗಾಂಧೀಜಿ ಸ್ತ್ರೀಯರ ಆತ್ಮಸ್ಥೈರ್ಯವನ್ನು ಕಾರ್ಯಪಟುತ್ವವನ್ನು ಜಾಗೃತಗೊಳಿಸಿದರು. ಅವರ ಅರಿವಿನ ಕ್ಷೇತ್ರವನ್ನು ವಿಸ್ತರಿಸಿದರು, ಅವರ ಸ್ವಾಭಿಮಾನವನ್ನು ಎಚ್ಚರಿಸಿದರು, ಅವರ ಸಾಮರ್ಥ್ಯಕ್ಕೆ ಬಹುಮುಖಿ ವ್ಯಾಪ್ತಿಯನ್ನು ಕಲ್ಪಿಸಿಕೊಟ್ಟರು. ಸ್ತ್ರೀಯರು ತಂತಮ್ಮ ಗ್ರಾಮದ ಆಡಳಿತಾಂಗದಲ್ಲಿ ಮಾತ್ರವಲ್ಲದೆ ಅಮ್ಮು ಸ್ವಾಮಿನಾಥನ್, ಮುತ್ತುಲಕ್ಷ್ಮಿ ರೆಡ್ಡಿ, ರುಕ್ಮಿಣಿ ಸ್ವಾಮಿನಾಥನ್ ಮುಂತಾದವರಂತೆ ರಾಷ್ಟ್ರ ರಾಜಕಾರಣದಲ್ಲೂ ಯಶಸ್ವಿಯಾಗಿ ಕಾಲೂರಿ ನಿಲ್ಲುವ ಧೈರ್ಯ ತೋರುವಂತೆ ಮಾಡಿದರು. ಸ್ವತಂತ್ರ ಭಾರತ ನಿರ್ಮಾಣದ ಕನಸನ್ನು ನನಸಾಗಿಸಲು ಸ್ತ್ರೀಯರು ದೇಶದಾದ್ಯಂತ ಆಲ್ ಇಂಡಿಯಾ ಕಾನ್ಫೆರೆನ್ಸ್, ವುಮೆನ್ ಇಂಡಿಯಾ ಅಸೋಸಿಯೇಷನ್, ಭಾರತ್ ಸ್ತ್ರೀ ಮಂಡಲ್ ಮುಂತಾದ ಸಂಸ್ಥೆಗಳನ್ನು ಕಟ್ಟಿ ತಮ್ಮನ್ನು ಒಂದುಗೂಡಿಸಿಕೊಂಡರು. ದೇಶ ಸ್ವತಂತ್ರವಾದ ನಂತರ ಈ ಸಂಸ್ಥೆಗಳನ್ನು ಸ್ವಾತಂತ್ರ್ಯೋತ್ತರ ಸ್ತ್ರೀ-ಸಮಸ್ಯೆಗಳಿಗೆ ಸ್ಪಂದಿಸಲು ಜೀವಂತವಾಗಿರಿಸಿದರು. ಪಂಡಿತ ರಮಾಬಾಯಿ, ರಮಾದೇವಿ ರಾನಡೆ ಮೊದಲಾದವರು ಸ್ತ್ರೀಯರಿಗಾಗಿ ಶಾರದಾ ಸದನ, ಸೇವಾ ಸದನ, ಆರ್ಯ ಮಹಿಳಾ ಸಮಾಜದಂತಹ ಅನಾಥಾಲಯ, ಶಾಲಾ ಕಾಲೇಜು, ಶೈಕ್ಷಣಿಕ ತರಬೇತಿ ಕೇಂದ್ರಗಳೇ ಮೊದಲಾದವುಗಳನ್ನು ಸ್ವಾತಂತ್ರ್ಯ ಹೋರಾಟದ ಭಾಗವಾಗಿ ನಿರ್ವಹಿಸಿದರು. ತಮ್ಮ ಸಾಮಾನ್ಯವಾದ ಅಥವಾ ವಿಧವಾ ಜೀವನವನ್ನು ಸಮಾಜಸೇವಾ ಜೀವನವನ್ನಾಗಿಸಿಕೊಂಡರು, ಸಹಸ್ರಾರು ದುರ್ಬಲ ಸ್ತ್ರೀಯರನ್ನು ಸಬಲರನ್ನಾಗಿಸಿದರು.
ಗಾಂಧೀಜಿಗೆ ಸತ್ಯ ಎಂದಿಗೂ ಬದಲಾಗದ ನಿಯಮ. ಪ್ರೀತಿಯ ಸಾಕಾರವೇ ಅಹಿಂಸೆ. ಇದನ್ನು ಆಧರಿಸಿದ ಸಮಾಜದ ನಿರ್ಮಾಣವೇ ಅವರ ಸ್ವಾತಂತ್ರ್ಯಹೋರಾಟದ ಅಂತಿಮ ಫಲ. ಈ ಸಮಾಜ ಮಾನವೀಯ ಮೌಲ್ಯಾಧಾರಿತ ನಿಷ್ಪಕ್ಷಪಾತ ಭೇದಭಾವ ರಹಿತ ಸಾಮಾಜಿಕ ರಾಜಕೀಯ ಆರ್ಥಿಕ ಸಮಾನತೆಯುಳ್ಳದ್ದು; ನಿರ್ವ್ಯಾಜ ಪ್ರೀತಿ ಕಾಳಜಿ ಸಹಕಾರ ಸೌಹಾರ್ದತೆಗಳ ಆಚಾರ ವಿಚಾರಗಳುಳ್ಳದ್ದು. ಇವೆಲ್ಲಾ ಸ್ತ್ರೀತ್ವದ ಪರಮ ಲಕ್ಷಣಗಳು ಆಗಿರುವುದರಿಂದ ಇಂಥ ಸ್ತ್ರೀತ್ವ-ಸಮಾಜದ ನಿರ್ಮಾಣಕಾರ್ಯದ ಮುಂಚೂಣಿಯಲ್ಲಿ ಸ್ತ್ರೀಯರೇ ಇರುತ್ತಾರೆ ಎಂದು ಸ್ತ್ರೀಯರಿಗೆ ಪ್ರಮುಖ ಸ್ಥಾನವನ್ನು ಕಲ್ಪಿಸಿದರು, ಪುರುಷ ಪ್ರಧಾನ ಸಮಾಜ ರಚನೆಯನ್ನು ತಿರಸ್ಕರಿಸಿದರು.
ಸಮಕಾಲೀನ ಸ್ತ್ರೀವಾದ ಮತ್ತು ಗಾಂಧೀಜಿ: ಇಂದು ಸ್ತ್ರೀವಾದಿಗಳು ಒಟ್ಟಾರೆಯಾಗಿ ರೂಢಿಗತವಾದ ಸ್ತ್ರೀತ್ವವನ್ನು ನಿರಾಕರಿಸುತ್ತಾರೆ, ತಾವೂ ಪುರುಷರಂತೆ ಎಂದು ಪುರುಷತ್ವವನ್ನು ಪ್ರತಿಷ್ಠಾಪಿಸುತ್ತಾರೆ. ಇದು ಇತರರ ಮೇಲೆ ಅಧಿಕಾರವನ್ನು ಸ್ಥಾಪಿಸುವ, ಮೇಲು ಕೀಳುಗಳು ಅಂತರ್ಗತ ಆಗಿರುವ ಪುರುಷಪ್ರಧಾನ ಸಮಾಜಕ್ಕಿಂತ ಭಿನ್ನ ಸಮಾಜವನ್ನು ನಮ್ಮದನ್ನಾಗಿಸುವುದಿಲ್ಲ. ಇಂಥ ಸಮಾಜದಲ್ಲಿ ಶೋಷಕರಿಗೆ ಲಿಂಗಸೂಚನೆ ಇರುವುದಿಲ್ಲ ಅಷ್ಟೇ. ಗಾಂಧೀಜಿಯವರ ಸ್ವರಾಜ್ಯವಾದರೋ ಸರ್ವಸಮಾನತೆಯ ಕುಟುಂಬ-ಸಮಾಜ-ರಾಜ್ಯ. ಇದರಲ್ಲಿ ಪ್ರತಿಯೊಬ್ಬರೂ ಅವರವರ ಬದುಕಿನ ಸ್ವತಂತ್ರ ನಿರ್ದೇಶಕರು. ಪ್ರತಿಯೊಬ್ಬರಿಗೂ ಅವರವರು ಭಾವಿಸುವ ಕರ್ತವ್ಯಗಳನ್ನು ಮಾಡಲು ಮಾತ್ರ ಹಕ್ಕಿದೆಯೇ ವಿನಾ ಪ್ರತ್ಯೇಕವಾಗಿ ಯಾವ ಸವಲತ್ತೂ ಇರುವುದಿಲ್ಲ. ಅವರ ಹಕ್ಕಿನ ಮೂಲ ಸತ್ಯಗ್ರಹಿಕೆ, ಅಹಿಂಸಾತ್ಮಕ ಸಾಧನೋಪಾಯಗಳು. ಇಲ್ಲಿ ಸ್ತ್ರೀವಾದಿಗಳು ಬಯಸಿದಂತೆ ಸ್ತ್ರೀ ಪುರುಷ ಎಂಬ ಪ್ರತ್ಯೇಕತೆಯೇ ಇಲ್ಲ; ಯಾರೂ ಯಾರ ಮೇಲೂ ದಬ್ಬಾಳಿಕೆ ನಡೆಸುವ ಮಾತೇ ಇಲ್ಲ; ಇರುವುದು ಪರಸ್ಪರ ವಿಚಾರ ವಿನಿಮಯ, ತಂತಮ್ಮ ಸಾಧ್ಯತೆಯ ನೆಲೆಯಲ್ಲಿ ಇಡೀ ಸಮುದಾಯಕ್ಕೆ ಹಿತವಾಗುವ ಕಾರ್ಯಾಚರಣೆಯಲ್ಲಿ ತೊಡಗಿಕೊಳ್ಳುವಿಕೆ ಮಾತ್ರ. ಗಾಂಧೀಜಿ ಪರಿಕಲ್ಪಿಸಿದ ಈ ಸಮಾಜ ಪುರುಷತ್ವ ಸೂಚಕ ಎಂದೆನ್ನುವ ಯಾವುದೇ ರೀತಿಯ ದಬಾವಣೆಯನ್ನು ನಿರಾಕರಿಸುವುದರಿಂದ ಇದು ಒಂದರ್ಥದಲ್ಲಿ ಸ್ತ್ರೀವಾದಿಗಳುಬಯಸಿದ ಸ್ತ್ರೀವಾದೀ ಸಾಮಾಜಿಕತೆ, ಆರ್ಥಿಕತೆಯೇ ಮೊದಲಾದವುಗಳನ್ನು ಒಳಗೊಳ್ಳುವ ಪುನರ್ರೂಪಿತ ವಾಸ್ತವತೆ. ಆದರೆ ಇದು ಸ್ತ್ರೀ ವಾಚಕವೂ ಅಲ್ಲ, ಪುರುಷವಾಚಕವೂ ಅಲ್ಲ, ಲಿಂಗನಿರಪೇಕ್ಷವಾಗಿದ್ದು ಪ್ರಚಲಿತ ಸ್ತ್ರೀವಾದಕ್ಕಿಂತ ಒಂದು ಹೆಜ್ಜೆ ಮುಂದಿರುವ ಸ್ತ್ರೀತ್ವ ಕುಟುಂಬ-ಸಮಾಜ-ರಾಜ್ಯ.
ಗಾಂಧೀಜಿ ಸ್ತ್ರೀ ಸಮಾನತೆಯನ್ನು ಸ್ತ್ರೀಯ ಘನತೆಯುತ ವ್ಯಾಪಕ ಅಸ್ತಿತ್ವ ಎಂದು ಆಗಿನ ಕಾಲಕ್ಕೆ ಹೊಸತು ಎನ್ನಬಹುದಾದ ರೀತಿಯಲ್ಲಿ ಪರಿಕಲ್ಪಿಸಿದರು, ತಾವು ಕಟ್ಟಿದ ಫೀನಿಕ್ಸ್, ಸಬರಮತಿ, ವಾರ್ಧಾ ಮುಂತಾದ ಆಶ್ರಮಗಳಲ್ಲಿ ಜಾರಿಗೆ ತಂದರು. ಸ್ತ್ರೀಯರನ್ನು ಅವರ ಒಟ್ಟಾರೆ ದುಸ್ಥಿತಿಯಿಂದ ಪಾರು ಮಾಡುವ ಸಮಸ್ಯೆಗೆ ಪರಿಹಾರ ಆಗುವ ಮಾರ್ಗವನ್ನು ಅನುಸರಿಸುವುದರಲ್ಲಿ ಸ್ತ್ರೀಯರನ್ನು ನಾಯಕಿಯರನ್ನಾಗಿಸಿದರು. ಇದು ಮಾನವ ವಿಕಾಸದ ಹಂತದಲ್ಲಿ ಸ್ತ್ರೀಯರು ಹೊಂದಿರುವ ಸ್ಥಾನ ಎಂದು ಗುರುತಿಸಿದರು. ಇದು ಮಹಿಳಾ ಚಳುವಳಿಗೆ, ಸ್ತ್ರೀಯರ ಸ್ಥಾನಮಾನದ ಸುಧಾರಣಾ ಇತಿಹಾಸಕ್ಕೆ ಗಾಂಧೀಜಿಯ ಪ್ರಮುಖ ಮತ್ತು ವಿಶಿಷ್ಟ ಕೊಡಿಗೆ.
ಸುಂದರ ಗೌರವ: ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ ಎನ್ನುವುದೊಂದು ಸ್ತ್ರೀಯರ ಅದ್ಭುತ ವ್ಯಕ್ತಿತ್ವವನ್ನು ಎತ್ತಿಹಿಡಿಯುವ ಸೂಕ್ತಿ. ಇದನ್ನು ಆಧರಿಸಿ ಕೆಲವರು ಸಹಜವಾಗಿಯೇ ನಮ್ಮ ದೇಶದಲ್ಲಿ ಸ್ತ್ರೀ-ಸಮಾನತೆ ಜೀವನದ ಅವಿಭಾಜ್ಯ ಅಂಗ ಎಂದು ವಾದಿಸುತ್ತಾರೆ. ಆದರೆ ಇದು ವಾಸ್ತವ ಅಲ್ಲ. ಜನಸಾಮಾನ್ಯರು ಸ್ತ್ರೀಯರನ್ನು ಬಹುಮಟ್ಟಿಗೆ ಸ್ವಂತ ಆಸ್ತಿ ಅಥವಾ ಭೋಗವಸ್ತುವನ್ನಾಗಿಯೇ ಪರಿಗಣಿಸುತ್ತಾರೆ. ಅವರಿಗೆ ಸ್ತ್ರೀಯರು ಅರ್ಥಪೂರ್ಣವಾದ ಬದುಕಿನ ಗಮನಾರ್ಹ ಅಂಗ ಎಂದೆನ್ನಿಸುವುದಿಲ್ಲ. ಈ ನೆಲೆಯಲ್ಲಿ ಒಟ್ಟಾರೆ ಸ್ತ್ರೀಯರ ಮಹತ್ವವನ್ನು ಮನಗಾಣಿಸುವ ಪ್ರಯತ್ನಕ್ಕೆ ತನ್ನದೇ ಆದ ಇತಿಹಾಸವಿದೆ. ಸ್ತ್ರೀಯರನ್ನು ಸಾರ್ವಜನಿಕ ವಲಯದಲ್ಲಿ ಪುರುಷರೊಂದಿಗೆ ಒಳಗೊಳ್ಳಬೇಕಾದ ಅವಶ್ಯಕತೆಯನ್ನು ಮೊಟ್ಟಮೊದಲಿಗೆ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಚಿಂತಕರು ಮನಗಂಡರು, ತಾವು ಗಮನಿಸಿದ ದಿಕ್ಕಿನಲ್ಲಿ ಸ್ತ್ರೀಯರಲ್ಲಿ ಜಾಗೃತಿಯನ್ನು ಮೂಡಿಸಲು ಕಾರ್ಯೋನ್ಮುಖ ಆದರು. ಬ್ರಿಟಿಷರ ಆಡಳಿತದ ಅವಧಿಯಲ್ಲಿ ಮುಂಚೂಣಿಗೆ ಬಂದ ಸ್ತ್ರೀಯರ ಸ್ಥಾನಮಾನವನ್ನು ಉನ್ನತೀಕರಿಸುವ ಪ್ರಶ್ನೆಗೆ ಬ್ರಹ್ಮಸಮಾಜ, ಆರ್ಯ ಸಮಾಜ, ರಾಮಕೃಷ್ಣ ಪರಮಹಂಸರ ಆಶ್ರಮ ಮುಂತಾದವುಗಳು ತಮ್ಮದೇ ಆದ ರೀತಿಯಲ್ಲಿ ಉತ್ತರಿಸಿದ್ದವು. ರಾಮಕೃಷ್ಣ ಪರಮಹಂಸರು ತಮ್ಮ ಪತ್ನಿ ಶಾರದಾಮಣಿದೇವಿಯನ್ನು ದೇವಿಯಾಗಿಯೇ ಆರಾಧಿಸಿ, ದೈನಂದಿನ ಜೀವನದಲ್ಲಿ ಅವರು ಅಸಂಖ್ಯಾತ ಸ್ತ್ರೀ-ಪುರುಷ ಸಂತ್ರಸ್ತರಿಗೆ ಮಾರ್ಗದರ್ಶಕಿಯಾಗುವಂತೆ ಪುನರ್ರೂಪಿಸಿದ್ದರು. ಶಾರದಾಮಣಿದೇವಿಯವರ ಘನತೆಯುತ ಅನನ್ಯತೆಯನ್ನು ಎತ್ತಿಹಿಡಿದಿದ್ದರು. ಈ ಸಾಧ್ಯತೆ ವೈಯಕ್ತಿಕವಾದದ್ದು ಮತ್ತು ಆಧ್ಯಾತ್ಮಿಕವಾದದ್ದು. ಇದಕ್ಕೆ ಸಾಮಾಜಿಕ ಮತ್ತು ರಾಜಕೀಯ ಆಯಾಮವನ್ನು ಸಾರ್ವತ್ರಿಕವಾಗಿ ಕೊಟ್ಟದ್ದು ಗಾಂಧೀಜಿಯವರ ವಿಶೇಷತೆ. ಗಾಂಧೀಜಿ ಬಯಸಿದಂತೆ ಇಂದು ಸ್ತ್ರೀಯರೇ ತಮ್ಮ ಘನತೆಯ ಧ್ವಜವನ್ನು ಹಾರಿಸುವ ದಾರಿಯಲ್ಲಿ ಸಾಗುತ್ತಿರುವುದು ಗಾಂಧೀಜಿಗೆ, ರಾಮಕೃಷ್ಣ ಪರಮಹಂಸ ಪರಂಪರೆಗೆ ಸಂದ ಸುಂದರ ಗೌರವ!
–ಕೆ.ಎಲ್. ಪದ್ಮಿನಿ ಹೆಗಡೆ
ಅಬ್ಭಾ…ನಿಮ್ಮಂತವರು..ಗುರುಗಳಾಗಿರುವುದು…ಅವರಿಂದ ಪಾಠಕೇಳಿದ ವರು…ಧನ್ಯರು..ಸೊಗಸಾದ ನಿರೂಪಣೆ ಯೊಂದಿಗೆ ಮಾಹಿತಿ ಪೂರ್ಣ ಲೇಖನ… ಧನ್ಯವಾದಗಳು ಮೇಡಂ..
ಸುಧೀರ್ಘವಾದ ವಿಚಾರ ಪೂರ್ಣವಾದ ಸ್ತ್ರೀವಾದ ಬಗ್ಗೆ ಇರುವ ಲೇಖನ
ಗಾಂಧೀಜಿಯವರ ಆಲೋಚನೆಗಳನ್ನು ಚಿಂತನೆಗಳನ್ನು ಸಮರ್ಪಕವಾಗಿ ಮಂಡಿಸಿರುವುದು ಅಭಿನಂದನೀಯ ವಂದನೆಗಳು
ಮಾಹಿತಿಪೂರ್ಣ
ಪೂಜ್ಯ ಗಾಂಧೀಜಿವರ ಚಿಂತನೆಗಳ ಸಾರವನ್ನು ಅತ್ಯಂತ ಸಮರ್ಥವಾಗಿ ಹಿಡಿದಿಟ್ಟ ಲೇಖನವು ಮಾಹಿತಿಪೂರ್ಣವಾಗಿದೆ.
ಗಾಂಧೀಜಿಯವರ ಸ್ತ್ರೀಪರ ಚಿಂತನೆ ಮತ್ತು ಕಾರ್ಯಯೋಜನೆಯ ಎಳೆಗಳನ್ನು ಮೆಚ್ಚಿಕೊಂಡ ಸಹೃದಯಿ ಬಿ,ಆರ್, ನಾಗರತ್ನ ಮೇಡಂಗೆ, ಗಾಯತ್ರಿ ಸಜ್ಜನ್ ಮೇಡಂಗೆ, ನಯನ ಬಜಕೂಡ್ಲು ಮೇಡಂಗೆ, ಶಂಕರಿ ಶರ್ಮ ಮೇಡಂಗೆ ಪ್ರಕಟಿಸಿದ ಹೇಮಾಮಾಲಾ ಮೇಡಂಗೆ, ಅನಾಮಿಕ ಓದುಗರಿಗೆ ಹೃತ್ಪೂರ್ವಕ ಧನ್ಯವಾದಗಳು