ಗೌರಿ ಗಣೇಶಂ ಭಜೇ

Share Button

ಜಿಟಿಜಿಟಿ ಮಳೆಯು ಸುರಿದು ಕೆಲವು ಕಡೆ ಅವನಿ, ಕೆರೆಕಟ್ಟೆ, ನದಿಗಳೆಲ್ಲಾ ಸಂಭ್ರಮದಿ ಕೂಡಿದೆ. ಮತ್ತೆ ಕೆಲವು ಕಡೆ ಈಗ ಮಳೆ ಶುರುವಾಗಿದೆ. ಇನ್ನೂ ಕೆಲವು ಕಡೆ ಮಳೆ ಹೆಚ್ಚಾಗಿ ಅವಘಡ ಸಂಭವಿಸಿದೆ. ಇನ್ನೂ ಕೆಲವು ಕಡೆ ಮಳೆಯ ಸುಳಿವಿಲ್ಲ. ಇದು ಏನೇ ಇದ್ದರೂ ಹಬ್ಬಗಳು, ಪೂಜಾ ವ್ರತಗಳು ಮಾತ್ರ ನಿಂತಿಲ್ಲ. ಕಾರಣ ಎಲ್ಲದಕ್ಕೂ ನಾವು ದೇವರನ್ನು ಬೇಡುತ್ತೇವೆ. ಒಳ್ಳೆಯದು ಆದರೆ ಖುಷಿ ಪಡುತ್ತೇವೆ. ಕೆಟ್ಟದಾದರೆ ಒಳ್ಳೆಯದು ಮಾಡು ಎಂದು ಆರಾಧಿಸುತ್ತೇವೆ.

ಶ್ರಾವಣದ ಹರಿಕಥಾ ಶ್ರವಣವೆಲ್ಲಾ ಮುಗಿದಿರಲು, ಭಾದ್ರಪದಕ್ಕೂ ಮುಂದುವರೆದ ಮಳೆಯು ನೋಡನೋಡುತ್ತಾ ಹಬ್ಬಗಳ ಸಾಲಿಗೆ ನಮ್ಮ ಗಣನಾಥ ಮತ್ತು ಗೌರಿಯ ಹಬ್ಬವನ್ನೂ ಕೂಡಾ ಹೊತ್ತು ತರುತಿದೆ.ಸೌಭಾಗ್ಯ ಗೌರಿ,ಸಂಪದ್ಗೌರಿ,ಮಂಗಳಗೌರಿ ಲಾವಣ್ಯ ಗೌರಿ, ತ್ರಿಲೋಚನಾ ಗೌರಿ ಇಂತಹ ಅದೆಷ್ಟೇ ಗೌರಿ ವ್ರತಗಳು ಬಂದರೂ ಎಲ್ಲರೂ ಏಕಕಾಲದಲ್ಲಿ ಆಚರಿಸುವ ಸ್ವರ್ಣ ಗೌರಿ ವ್ರತವು ಬಹಳ ಪ್ರಸಿದ್ಧಿಯನ್ನು ಪಡೆದುಕೊಂಡಿದೆ.ಇದನ್ನು ಸಾಮಾನ್ಯವಾಗಿ ಮಹಿಳೆಯರೇ ಆಚರಿಸಿದರೂ ಕೂಡಾ ಜಗದ ಸಂರಕ್ಷಕಿಯಾದ ಈ ವ್ರತದಲ್ಲಿ ಪತಿಪತ್ನಿ ಸಮೇತರಾಗಿ ಪೂಜಿಸುವುದು ಉಂಟು.

ಸೃಷ್ಟಿ, ಸ್ಥಿತಿ,ಲಯ ಕಾರ್ಯಗಳಲ್ಲಿ ಒಂದಾದ ಲಯಕರ್ತ ನಮ್ಮ ಮಹಾದೇವನ ಅರ್ಧಾಂಗಿಯಾದ ತಾಯಿ ಗೌರಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಲಾಗುತ್ತದೆ. ಶಿವನ ಮನದನ್ನೆ ಮಹಾದೇವಿಯು ರಕ್ಕಸರ ಸಂಹಾರಕಾರ್ಯವನ್ನು ಮಾಡುವಾಗ ಕೃಷ್ಣಬಣ್ಣದ ಕಾಳಿಯಾಗುವಳು,ವಿದ್ಯಾಪ್ರಧಾನ ಮಾಡುವಾಗ ಶ್ಯಾಮಲವರ್ಣದ ಶ್ಯಾಮಲಾಂಬಿಕೆ ಆಗುವಳು, ಸೌಭಾಗ್ಯ,ಸೌಮಂಗಲ್ಯ ಕರುಣಿಸುವಾಗ ಸಂಪಿಗೆ ಹೂವಿನ ಬಣ್ಣದಿಂದ ಅಥವಾ ಶುಭ್ರವರ್ಣದ ಸಂಪಿಗೆಯ ಬಣ್ಣವನ್ನು ತಾಳಿ ಗೌರಿಯಾಗುವಳು. ಗೌರೀ ಎಂದರೆ ಗೌರವರ್ಣದವಳು ಎಂದರ್ಥ. “ಚಾಂಪೇಯ ಗೌರಾರ್ಧ ಶರೀರಕಾಯೈ ಕರ್ಪೂರಗೌರಾರ್ಧ ಶರೀರಕಾಯ” ಎಂಬ ಸಾಲುಗಳನ್ನು ಶಂಕರಭಗವತ್ಪಾದರ ವರ್ಣನೆಯ ಶ್ಲೋಕದಲ್ಲಿ ನಾವು ನೋಡುತ್ತೇವೆ.

ಹಲವಾರು ನಾಮಾಂಕಿತಗಳಿಂದ ಪೂಜಿಸುವ ದೇವಿಯನ್ನು ಈ ಹಬ್ಬದಲ್ಲಿ ಅಥವಾ ಗೌರೀ ದೇವಿಯನ್ನು ಪೂಜಿಸುವುದು ದಾಂಪತ್ಯ ಸೌಭಾಗ್ಯಕ್ಕಾಗಿ. ಲಕ್ಷ್ಮಿಯನ್ನು ಸಂಪತ್ತಿಗಾಗಿ, ಸರಸ್ವತಿಯನ್ನು ವಿದ್ಯೆಗಾಗಿ ಪೂಜಿಸುತ್ತೇವೆ. ಹಾಗೆಯೇ ಗೌರಿಯನ್ನು ಅನುರೂಪನಾದ ಪತಿಯನ್ನು ಪಡೆಯುವುದಕ್ಕಾಗಿ ಮತ್ತು ಪತಿಯ ಪ್ರೇಮವನ್ನು ಶಾಶ್ವತವಾಗಿ ಪಡೆಯುವುದಕ್ಕಾಗಿ, ಹಾಗೂ ಮಾಂಗಲ್ಯ ಭಾಗ್ಯಕ್ಕಾಗಿ ಈ ತಾಯಿಯನ್ನು ನಾವು ಪೂಜಿಸುತ್ತೇವೆ. ” ವಿದ್ಯಾಕಾಮಸ್ತು ಗಿರಿಶಂ ದಾಂಪತ್ಯಾರ್ಥಂ ಉಮಾಂ ಸತೀಂ” ಎನ್ನುವ ಸಾಲುಗಳನ್ನು ಭಾಗವತದಲ್ಲಿ ನಾವು ನೋಡಬಹುದು. ಈಗಲೂ ಸಹಾ ಮದುವೆಯಲ್ಲಿ ಮಾಂಗಲ್ಯ ಧಾರಣೆಗಿಂತ ಮೊದಲು ಗೌರಿ ಪೂಜೆಯನ್ನು ಮಾಡುವುದನ್ನು ನೋಡುತ್ತೇವೆ. ಅಲ್ಲಿಂದ ಒಂದು ಕನ್ಯೆಯ ಗೌರೀಪೂಜೆ ವಿಧಿವತ್ತಾಗಿ ಪ್ರಾರಂಭವಾಗುತ್ತದೆ……”ಸರ್ವ ಮಂಗಳ ಮಾಂಗಲ್ಯೇ……..” ಈ ಶ್ಲೋಕದಲ್ಲಿ ಸಹಾ ನಾವು ಸೌಭಾಗ್ಯವನ್ನೇ ಬೇಡುತ್ತೇನೆ.

ನಾರಾಯಣನ ಸಹೋದರಿ ಎಂದೇ ಕರೆಯಿಸಿಕೊಳ್ಳುವ ಸ್ವರ್ಣಗೌರಿ ವ್ರತವನ್ನು ಭಾದ್ರಪದ ಮಾಸದ ಶುಕ್ಲಪಕ್ಷದ ತದಿಗೆಯಂದು ಆಚರಿಸುತ್ತೇವೆ. ಅಂದು ಸೂರ್ಯೋದಯ ಸಮಯದಲ್ಲಿ ತೃತೀಯ ಇರಬೇಕು. ಏಕೆಂದರೆ ಗಣನಾಯಕನ ಪೂಜೆಗೆ ನಿಯತವಾಗಿರುವ ಚತುರ್ಥಿ ತಿಥಿಯ ಯೋಗವು ಈ ತಾಯಿಗೆ ತುಂಬಾ ಇಷ್ಟ. ಆದ್ದರಿಂದ ತೃತೀಯದ ಜೊತೆ ಚತುರ್ಥಿ ಯೋಗವಿದ್ದರೆ ಅಂದೇ ಆಚರಿಸಬೇಕು. ಗೌರಿಗೆ ಗಣಯೋಗವು ಪ್ರಶಸ್ತವಾದುದು.

ಗೌರಿಯನ್ನು ಪ್ರತಿಮೆ ಅಥವಾ ಅರಿಶಿಣ, ಶುದ್ಧವಾದ ಮರಳು ಅಥವಾ ಮಣ್ಣಿನಿಂದ ಮೂರ್ತಿಮಾಡಿ ಅದರಲ್ಲಿ ದೇವಿಯನ್ನು ಆವಾಹನೆ ಮಾಡಿ,ಪ್ರಾಣ ಪ್ರತಿಷ್ಠಾಪನೆ ಮಾಡಿ ಪೂಜಿಸುವುದನ್ನು ನಾವು ನೋಡುತ್ತಿದ್ದೇವೆ. ತಾಯಿಯನ್ನು ಚಿನ್ನದ ಮೂರ್ತಿಯಲ್ಲಿ ಪೂಜಿಸಲಾಗದವರು ,ಅರಿಶಿಣವೂ ಕೂಡಾ ಅದೇ ಬಣ್ಣವನ್ನು ಚೆಲ್ಲವುದರಿಂದ ಸಾಮಾನ್ಯವಾಗಿ ಅರಿಶಿಣದ ಗೌರಿಯನ್ನು ಪೂಜಿಸುವುದನ್ನು ನೋಡುತ್ತೇವೆ. ಅರಿಶಿಣದ ಬಟ್ಟೆಯಲ್ಲಿ ಮರಳನ್ನು ಕಟ್ಟಿ ಪೂಜಿಸುವುದನ್ನು ನೋಡುತ್ತೇವೆ. ಜೊತೆಗೆ ಹದಿನಾರು ಗಂಟುಗಳುಳ್ಳ ದಾರವು ಮುಖ್ಯವಾಗಿ ಈ ವ್ರತದ ಪೂಜೆಗೆ ಇರಲೇಬೇಕು.

ಎಲ್ಲಾ ತರಹದ ಪುಷ್ಪಗಳಿಂದ ದೇವಿಯನ್ನು ಇಂದು ಪೂಜಿಸುವುದು ಪದ್ಧತಿ. ಪಾದ್ಯ, ಅರ್ಘ್ಯ, ಆಚಮನ, ಮಧುಪರ್ಕ, ಪಂಚಾಮೃತಸ್ನಾನ, ಶುದ್ಧೋದಕ ಸ್ನಾನ, ವಸ್ತ್ರ,ಆಭರಣ, ಯಜ್ಞೋಪವೀತ,ಗಂಧ,ಅಕ್ಷತೆ….. ಹೀಗೆ ಶೋಡಶೋಪಚಾರಗಳಿಂದ ಪೂಜಿಸಿ ಧ್ಯಾನಿಸುವರು.ಹಾಗೆಯೇ ದಾರವನ್ನು ಪೂಜಿಸುವಾಗ ಸ್ವರ್ಣಗೌರಿ,ಮಹಾಗೌರಿ, ಕಾತ್ಯಾಯಿನಿ, ಕೌಮಾರಿ, ಭದ್ರಾ, ವಿಷ್ಣು ಸೋದರಿ,ಮಂಗಳದೇವತಾ,ರಾಕೇಂದುವದನಾ, ಚಂದ್ರಶೇಖರ ಪ್ರಿಯಾ, ವಿಶ್ವೇಶ್ವರ ಪತ್ನಿ, ದಾಕ್ಷಾಯಿಣಿ, ಕೃಷ್ಣವೇಣಿ, ಲೋಲೇಕ್ಷಣಾ, ಮೇನಕಾತ್ಮಜ, ಸ್ವರ್ಣಗೌರಿ ಎಂಬ ಹೆಸರಿನಿಂದ ದಾರ ಪೂಜಿಸುವುದು. ಅಷ್ಟೋತ್ತರ,ಸಹಸ್ರನಾಮಾವಳಿಯಿಂದ ಅರ್ಚಿಸಿ, ಧೂಪ, ದೀಪ,ನೈವೇದ್ಯ,ತಾಂಬೂಲ,ಫಲ,ದಕ್ಷಿಣೆ,ಅರ್ಘ್ಯ, ನೀರಾಜನ ,ಪುಷ್ಪಾಂಜಲಿ ನಮಸ್ಕಾರಗಳನ್ನು ಸಮರ್ಪಿಸಲೇಬೇಕು. ಹರಿದ್ರಾನ್ನವನ್ನು ತಮ್ಮ ಯಥಾಶಕ್ತಿ ನೈವೇದ್ಯ ಮಾಡಿ ಪ್ರಾರ್ಥಿಸಿ, ನಮಸ್ಕರಿಸಿದ ನಂತರ ಮುತ್ತೈದೆಯರಿಗೆ ಬಾಗಿಣ ನೀಡಿ ಆಶಿರ್ವಾದ ಪಡೆಯುವುದು ವಾಡಿಕೆ.

ಈ ಹಬ್ಬದಲ್ಲಿ ಮರದ ಬಾಗಿಣಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತವೆ.ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಮೊದಲು ಮೊರಗಳನ್ನು ತಂದರೆ ಒಂದು ಬಾಗಿಣ ಕೊಟ್ಟು ಮತ್ತೊಂದನ್ನು ಉಳಿಸಿಕೊಳ್ಳುವುದು ಪದ್ದತಿ ಇದೆ. ಆದರೆ ಈಗ ಆ ಮೊರವನ್ನು ತಂದರೆ, ಕೊಟ್ಟರೆ ಯಾರೂ ಬಳಸುವವರೇ ಇಲ್ಲ. ಹಸಿ ಬಿದಿರನ್ನು ಉಪಯೋಗಿಸಿ ಹೆಣೆದ ಬಾಗಿಣದ ಮೊರಗಳು ಬೇಗ ಹುಳುಹಿಡಿದು ಇಟ್ಟ ಬಳಿಯೇ ಹಾಳಾಗಿರುವುದನ್ನು ನಾವು ನೋಡುತ್ತೇವೆ. ಅದರ ಕಡೆಗೆ ಗಮನಿಸಿ ಬಿಸಿಲಲ್ಲಿ ಇಟ್ಟು ಒಣಗಿಸಿಡುವ ವೇಳೆಗೆ ಪೌಡರ್ ಉದುರಲು ಪ್ರಾರಂಭಿಸುತ್ತದೆ. ಹಾಗಾಗಿ ಬಳಕೆಗೆ ಬರುವಂತಹ ತಟ್ಟೆ, ಪ್ಲಾಸ್ಟಿಕ್ ಬುಟ್ಟಿ ಈ ರೀತಿಯದ್ದು ಅದಕ್ಕೆ ಪರ್ಯಾಯವಾಗಿ ಬಂದಿರುವುದನ್ನು ನಾವು ಕಾಣಬಹುದು. ನಮ್ಮ ಸಂಪ್ರದಾಯ,ಆಚಾರ ವಿಚಾರಗಳಿಗೆ ಸ್ವಲ್ಪ ಧಕ್ಕೆ ಬಂದರೂ ವಾಸ್ತವದ ಕಡೆ ಗಮನಹರಿಸಬೇಕಾದ ಪರಿಸ್ಥಿತಿಯೂ ಬಂದಿದೆ. ಒಂದು ಕಡೆ ಸುಂದರವಾದ ಮೊರಗಳನ್ನು ಹೆಣೆಯುವವರನ್ನೂ
ಪ್ರೋತ್ಸಾಹಿಸಬೇಕಾಗಿದೆ. ಆದರೆ ಈಗಿನ ಎಳೆ ಬಿದಿರುಗಳು ಬೇಗ ಹುಳು ಹಿಡಿದು ಹಾಳಾಗುತ್ತಿವೆ. ಅದರ ಬದಲಿಗೆ ಒಳ್ಳೆಯ ಬಿದಿರಿನಿಂದ ಈಗಿನ ಜಾಯಮಾನಕ್ಕೆ ಹೊಂದುವಂತಹ ವಿಧವಿಧ ವಿನ್ಯಾಸಗಳ ತಟ್ಟೆಯಾಕಾರದ ಬುಟ್ಟಿಗಳು ಮಾರುಕಟ್ಟೆಗೆ ಬಂದರೆ ಅದರಲ್ಲಿ ಬಾಗಿಣಕೊಡಲು ಅಭ್ಯಂತರವಿಲ್ಲ ಎಂಬುದು ನನ್ನ ಭಾವನೆ. ಏಕೆಂದರೆ ಮೊರದ ಆಕಾರಕ್ಕೆ ಬದಲಾಗಿ ವಿನ್ಯಾಸ ಬದಲಾಗಿರುತ್ತದೆ ಅಷ್ಟೇ…


ಕಾಲ ಬದಲಾದಂತೆ ಆಯಾ ತಲೆಮಾರುಗಳಿಗೆ ಹೊಂದಿಕೊಂಡು ಹೋಗಲೇ ಬೇಕಲ್ಲವೇ. ಹಾಗೆಯೇ ರಾಸಾಯನಿಕ ಬಣ್ಣಗಳಿಲ್ಲದ ಮಣ್ಣಿನ ಅಥವಾ ಅರಿಶಿಣದ ಮೃತ್ತಿಕೆಗಳನ್ನು ಬಳಸಿ.. ಪರಿಸರವನ್ನು ರಕ್ಷಿಸೋಣ. ಪರಿಸರದ ನೀರು ಅತ್ಯಮೂಲ್ಯ…..ಪರಿಸರ ಜವಾಬ್ದಾರಿ ನಮ್ಮೆಲ್ಲರ ಜವಾಬ್ದಾರಿ ನಾವೆಲ್ಲ ಕೈಜೋಡಿಸೋಣ. ಏನಂತೀರಿ…?

“ಶೋಭನಾರ್ಥಂ ಪುನರಾಗಮನಾಯ ಚ” ಎಂಬ ಭಾವನೆಯಿಂದ ದೇವಿಯನ್ನು ಬೀಳ್ಕೊಡುವ. ಮಂಗಳದ್ರವ್ಯಗಳೊಂದಿಗೆ ಗುಡಾನ್ನ,ಘೃತಾನ್ನ,ದಧ್ಯನ್ನ,ಹುಳಿಯನ್ನ,ಪಾಯಸ,ಪರಮಾನ್ನದ ಪಂಚ ಪಕ್ವಾನ್ನಗಳು, ಮಂಗಳವಾದ್ಯ, ಆರಾಧನೆದೊಂದಿಗೆ ಉದ್ವಾಸನೆಯನ್ನು ಸಮಾಪ್ತಿಗೊಳಿಸಲಾಗುತ್ತದೆ. ಈ ಬಾರಿ ಗಣೇಶ ಚತುರ್ಥಿ ಆಚರಣೆ ಕೂಡಾ ಅಂದೇ ಬಂದಿರುವುದರಿಂದ ಗಣಪನ ಆರಾಧನೆ ಕೂಡಾ ವಿಜೃಂಭಣೆಯಿಂದ ಮಾಡಲಾಗುತ್ತದೆ.

“ತ್ವಮೇವ ಕೇವಲಂ ಕರ್ತಾಸಿ, ತ್ವಮೇವ ಕೇವಲಂ ಹರ್ತಾಸಿ, ತ್ವಮೇವ ಸರ್ವಂ ಖಲಿದ್ವಂ ಬ್ರಹ್ಮಾಸಿ,ತ್ವಂ ಸಾಕ್ಷಾದಾತ್ಮಾಸಿ ನಿತ್ಯಂ,ತ್ವಂ ಬ್ರಹ್ಮಾ ವಿಷ್ಣುಸ್ತ್ವಂ ರುದ್ರಸ್ತ್ವ ಮಿಂದ್ರಸ್ತ್ವಂ ವಾಯುಸ್ತ್ವಂ ಸೂರ್ಯಸ್ತ್ವಂ ಚಂದ್ರಮಾಸ್ತ್ವಂ ಬ್ರಹ್ಮ ಭೂಭ್ರುವಸ್ಸುವರೋಂ
” …… ಎಂದು ಗಣಪತ್ಯಥರ್ವಶೀರ್ಷ್ಮಹೋಪನಿಷತ್ ಸಾರುತ್ತದೆ. ಪುರಾಣೇತಿಹಾಸ ಆಗಮಗಳು ಗಣಪ ಸ್ವರೂಪ, ರೂಪ, ಮಹಿಮೆ, ಉಪಾಸನೆ ಇತ್ಯಾದಿಗಳು ಗಣಪನ ಮಹಿಮೆಯನ್ನು ಹೇಳಿವೆ. ಗಣಪ ಸರ್ವ ಜನಕ್ಕೂ ಸಲ್ಲುವ ಸರಳ ದೇವನು. “ಗಣಾನಾಂ ತ್ವಾಂ ಗಣಪತಿಂ ಹವಾಮಹೇ, ಕವಿಂ ಕವೀನಾಂ ಉಪಮಶ್ರವಸ್ತಂ. ಜೇಷ್ಠರಾಜಂ ಬ್ರಹ್ಮಾಣಂ ಬ್ರಹ್ಮಣಸ್ಪತ ಆನ:ಶೃಣ್ವನ್ ಊತಿಭಿ:ಸೀದ ಸಾಧನಂ ” ಎಂದು ಋಗ್ವೇದವು ಸಾರುವುದು. ಇಂತಹ ಸ್ಥಾನವನ್ನು ಗಣನಾಥನಿಗೆ ಕೊಟ್ಟಿರುವುದರಿಂದಲೇ ನಾವು ಅವನಿಗೆ ಅಗ್ರ ಪೂಜೆಯನ್ನು ಸಲ್ಲಿಸುತ್ತೇವೆ.

ಶ್ರದ್ಧಾ ಭಕ್ತಿಯಿಂದ ಹಬ್ಬದ ಆಚರಣೆ ನಡೆಯುತ್ತದೆ. ಗೌರಿದೇವಿಯನ್ನು ಮಂಗಳವಾರ ,ಶುಕ್ರವಾರ ,ಶನಿವಾರ, ಸೋಮವಾರಗಳಲ್ಲಿ ವಿಸರ್ಜಿಸುವುದಿಲ್ಲ . ಮಂಗಳವಾರದಲ್ಲಿ ಗೌರಿ ಮತ್ತು ಗಣೇಶ ಇಬ್ಬರಲ್ಲಿ ಯಾರೊಬ್ಬರನ್ನು ವಿಸರ್ಜಿಸುವುದಿಲ್ಲ . ಗಣೇಶನ ವಿಸರ್ಜನೆಗೆ ಶುಕ್ರವಾರ ನಿಶಿದ್ಧವಾದ ದಿನವೇನು ಅಲ್ಲ. ಆದರೆ ಗೌರಿ ಗಣೇಶ ಹಬ್ಬದ ಪೂಜೆಯು ಒಟ್ಟಿಗೆ ಬಂದಿರುವಾಗ ಇಬ್ಬರನ್ನು ಒಟ್ಟಿಗೆ ವಿಸರ್ಜಿಸುವ ವಾಡಿಕೆ ಇದೆ. ದಿನಶುದ್ಧಿಯನ್ನು ನೋಡಿ ಗೌರಿಯನ್ನು ಎಂದು ವಿಸರ್ಜನೆ ಮಾಡುತ್ತಾರೋ ಗಣೇಶನನ್ನು ಅಂದೇ ವಿಸರ್ಜನೆ ಮಾಡುತ್ತಾರೆ. ಆಗ ಗೌರಿ ದೇವಿಯ ಪ್ರತಿಷ್ಠೆಯಾದ ನಂತರ ಯಾವ ದಿನವು ವಿಷಮ ದಿನವಾಗಿರುತ್ತದೋ, ದಿನಶುದ್ಧಿಯೂ ಆಗಿರುತ್ತದೋ ಅಂದೇ ಇಬ್ಬರಿಗೆ ವಿಸರ್ಜನೆ. ಆದ್ದರಿಂದ ದಿನ ನಿಯಮ ವಾರ ನಿಯಮ ಇವು ಗಳಲ್ಲಿ ಗೌರಿದೇವಿಗೆ ಹೆಚ್ಚು ಪ್ರಾಮುಖ್ಯ, ಮಂಗಳವಾರ ಶುಕ್ರವಾರ ಪ್ರಯಾಣ ನಿಷೇಧ ಮುಂತಾದ ನಿಯಮಗಳು ಹೆಂಗಸರಿಗೆ
ವಿಶೇಷವಾಗಿ ಅನ್ವಯಿಸುತ್ತದೆ.

ಸಕಲ ಸೌಭಾಗ್ಯವನ್ನು ಈ ಹಬ್ಬ ಕರುಣಿಸಲಿ. ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.

-ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ, ಮೈಸೂರು

8 Responses

  1. ಗೌರಿ ಗಣೇಶ ಹಬ್ಬದ ಸಾಂದರ್ಭಿಕ ಲೇಖನ ಚೆನ್ನಾಗಿ ದೆ..

  2. Vijayasubrahmanya says:

    ಒಳ್ಳೆಯ ವಿಸ್ತಾರವಾದ ಉಪಕೃತ ಬರಹ.

  3. ನಯನ ಬಜಕೂಡ್ಲು says:

    ಸುಂದರ ಬರಹ

  4. ಡಾ. ಕೃಷ್ಣಪ್ರಭ ಎಂ says:

    ಚಂದದ ಬರಹ

  5. ಉತ್ತಮವಾದ ಲೇಖನ

  6. ಶಂಕರಿ ಶರ್ಮ says:

    ಗೌರೀ ಗಣೇಶ ಹಬ್ಬವನ್ನು ಸ್ವಾಗತಿಸುವ ಸುಂದರ ಲೇಖನ.

  7. ಸುಚೇತಾ says:

    ಮಾಹಿತಿಪೂರ್ಣ ಬರಹ..

  8. Padma Anand says:

    ಗೌರಿ ಹಬ್ಬದ ಆಚರಣೆಯ ವಿವರಗಳೊಂದಿಗೆ ಪರಿಸರ ಜಾಗೃತಿಯ ಬಗ್ಗೇಯೂ ನೆನಪಿಸುವ ಚಂದದ ಲೇಖನ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: