ಸಾಮಾನ್ಯರಾದ ಅಸಾಮಾನ್ಯರು

Share Button

ಪಕ್ಕದ ಮನೆಯ ಶ್ರೀದೇವಿ ತನ್ನ ಎರಡು ವರ್ಷದ ಮಗ ಆರವ್‌ಗೆ ಚಂದಮಾಮನನ್ನು ತೋರಿಸಿ ಊಟ ಮಾಡಿಸುತ್ತಿದ್ದರೆ, ಬಾಲ ಚಂದ್ರಮನಂತೆ ಮುಖವನ್ನರಳಿಸಿ “ಆಂ” ಎಂದು ಬಾಯಿಬಿಟ್ಟು ಅಮ್ಮ ಕೊಟ್ಟ ತುತ್ತನ್ನು ಬಾಯೊಳಗಿಟ್ಟು ಜಗಿಯುತ್ತಾ, ಜಗಿಯುತ್ತಾ ಮುಖವನ್ನರಳಿಸಿದಾಗ, ಆ ಮೊಗದಲ್ಲಿ ಶಶಿಧರನ ಕಾಂತಿಯು ಪ್ರತಿಬಿಂಬಿಸಲು, ಅಮ್ಮ ಶ್ರೀದೇವಿಯ ಮೊಗವೂ, ಮಗ ಊಟ ಮಾಡಿದ ಸಂತೃಪ್ತಿಯಿಂದ ಚಂದ್ರಮುಖಿಯ ಮೊಗದಂತಾಯಿತು.

ತ್ರೇತಾಯುಗದಲ್ಲಿ ಶ್ರೀರಾಮಚಂದ್ರನಿಗಾಗಿ ಕೈಕೇಯಿಯು ನೀರು ತುಂಬಿದ ತೊಟ್ಟಿಗೆ ಆಕಾಶದ ಚಂದ್ರನನ್ನು, ಚಂದ್ರನ ಪ್ರತಿಬಿಂಬವನ್ನು ಕರೆತಂದು ಮಗನನ್ನು ʼಶ್ರೀರಾಮಚಂದ್ರಾʼ ಎಂದು ಮುದ್ದಿಸಿದಂದಿನಿಂದ, ಇಂದಿನ ಶ್ರೀದೇವಿಯ ತನಕ ಬಹುಶಃ ಚಂದಮಾಮನನ್ನು ತೋರಿಸದ ತಾಯಿಯಿಲ್ಲ, ಅದನ್ನು ನೋಡಿ ಚಂದ್ರಮನಂತೆ ಮೊಗದ ತುಂಬಾ ನಗೆಯ ಬೆಳದಿಂಗಳನ್ನು ಚಲ್ಲದ ಕಂದನಿಲ್ಲ.

ನನ್ನ ಮಗಳೂ ಚಿಕ್ಕವಳಿದ್ದಾಗ ಚಂದಮಾಮನನ್ನು ನೋಡಿ ಊಟ ಮಾಡಿದರೂ, ನಂತರ ಕೇಳಿದ – ಯಾಕಮ್ಮಾ, ಚಂದಮಾಮ ಬರ್ತಾ ಬರ್ತಾ ಚಿಕ್ಕವನೂ, ದೊಡ್ಡವನೂ ಆಗ್ತಾ ಇರ್ತಾನೆ, ಒಂದು ದಿನ ತುಂಬಾ ದೊಡ್ಡೋನಾದ್ರೆ, ಒಂದು ದಿನ ಇರೋದೇ ಇಲ್ಲ, – ಅಂತ ಕೇಳಿದಾಗ, ವಿಜ್ಞಾನದ ವಿದ್ಯಾರ್ಥಿಯಾದ ನಾನು ಮಗುವಿಗೆ ತಿಳಿಯುವಂತೆ ಸರಳವಾಗಿ ವೈಜ್ಞಾನಿಕವಾಗಿಯೂ ತಿಳಿಹೇಳಲಾಗದೆ, ಅಜ್ಜಿಯ ಕಥೆಯನ್ನೂ ಹೇಳಲಿಚ್ಚಿಸದೆ, ಇನ್ನೇನೇನೋ ಹೇಳಿ ಮಾತು ಮರೆಸಿ ಅವಳ ಕುತೂಹಲವನ್ನು ಚಿವುಟಿ ಹಾಕಿದ್ದನ್ನು ನೆನೆಸಿಕೊಂಡರೆ, ಪಾಪಪ್ರಜ್ಞೆ ಇನ್ನೂ ಕಾಡುತ್ತದೆ.  ಮಕ್ಕಳಿಗೆ ರೋಚಕ ಕಥೆಗಳು ಇಷ್ಟವಾಗುತ್ತವೆಂಬ ಸಾಮಾನ್ಯ ಜ್ಞಾನವೂ ನನಗಿಲ್ಲದಿದ್ದುದು ವಾಸ್ತವ ಸತ್ಯ.

ಇರಲಿ, ನಮ್ಮ ವಿಜ್ಞಾನಿಗಳು ಹಗಲಿರುಳೆನ್ನದೆ ಕಷ್ಟಪಟ್ಟು, ಇಷ್ಟಪಟ್ಟು, ಖಗೋಳ ಶಾಸ್ತ್ರದ ಅಧ್ಯಯನ, ಅಭ್ಯಾಸಗಳನ್ನು ಸತತವಾಗಿ ಮಾಡಿ ಅದರ ಫಲವಾಗಿ ಅವರುಗಳು ಕಳುಹಿಸಿದ ರಾಕೆಟ್‌, ನಮ್ಮ ಹೆಮ್ಮೆಯ ʼವಿಕ್ರಮʼ ಚಂದ್ರನ ಮೇಲ್ಮೈ ಮೇಲೆ ಮೃದುವಾಗಿ ಇಳಿದಾಗ ಅವರುಗಳಿಗೆ ಆದ ರೋಮಾಂಚನವನ್ನು ನೆನೆಸಿಕೊಂಡರೇ ಮೈನವಿರೇಳುವುದು. 

ಅದರಲ್ಲೂ ಚಂದ್ರಯಾನ-2, ಕೊನೆಯ ಕ್ಷಣದಲ್ಲಿ ವಿಫಲಗೊಂಡಾಗ ಉಂಟಾದ ಭೀತಿಯಲ್ಲೇ ʼಮರಳಿ ಯತ್ನವ ಮಾಡುʼ ಎಂಬಂತೆ, ʼಚಂದ್ರಯಾನ-3ʼನ್ನು ಕೈಗೆತ್ತಿಕೊಂಡು, ಹಿಂದೆ ಆಗಿರಬಹುದಾದ ತಪ್ಪು ಒಪ್ಪುಗಳನ್ನು ಸರಿಪಡಿಸಿಕೊಂಡು ಕಳುಹಿಸಿ, ವಿಜ್ಞಾನಿಗಳೊಂದಿಗೆ, ದೇಶವಾಸಿಗಳೆಲ್ಲರೂ, ಲೋಕದ ಆಸಕ್ತರೆಲ್ಲರೂ ಉಸಿರು ಬಿಗಿಹಿಡಿದು ಕುಳಿತು ಕ್ಷಣ ಕ್ಷಣವನ್ನೂ ವೀಕ್ಷಿಸಿವಂತೆ ಮಾಡಿದ ವಿಜ್ಞಾನ ಲೋಕಕ್ಕೆ ಸಾಮಾನ್ಯ ಜನರಾದ ನಾವು ಹೇಗೆ ಕೃತಜ್ಞತೆ ಅರ್ಪಿಸಬಹುದು? ಚಂದ್ರನ ದಕ್ಷಿಣ ಭಾಗದಲ್ಲಿ ರಾಕೆಟ್‌ ಇಳಿಸಿದ ಪ್ರಪಂಚದ ಮೊದಲಿಗರು ನಾವು, ಭಾರತೀಯರು ಎಂಬ ವಿಕ್ರಮವನ್ನು ಸಾಧಿಸಿದ ʼವಿಕ್ರಮʼನ ಬಗ್ಗೆ ಎಷ್ಟು ಹೆಮ್ಮೆ ಪಟ್ಟರೂ ಸಾಲದು. 

ಈ ʼವಿಕ್ರಮʼನ ಜಯದ ಕುರಿತಾಗಿ, ಹಲವಾರು ವಿಜ್ಞಾನಿಗಳು, ಇತಿಹಾಸಕಾರರು, ಲೇಖಕರು ಇಂಚು ಇಂಚನ್ನೂ ಸವಿಸ್ತಾರವಾಗಿ ಖಂಡಿತಾ ದಾಖಲಿಸಿರುತ್ತಾರೆಂಬುದರಲ್ಲಿ ಎರಡನೆಯ ಮಾತೇ ಇಲ್ಲ. 

ಆದರೆ ನಾನು ಗಮನಿಸಿದ ಒಂದು ಸರಳ ಸತ್ಯ ಎಂದರೆ ಅಸಾಮಾನ್ಯರಾದ ಅವರುಗಳೂ ನಮ್ಮಂತೆ ಸಾಮಾನ್ಯರಲ್ಲಿ ಸಾಮಾನ್ಯರಾಗಿ ನಡೆದುಕೊಂಡ ಪರಿ.

ಇಡೀ ವಿಶ್ವದ ಗಮನವೇ ತಮ್ಮ ಮೇಲೆ ಇದೆ ಎಂದು ಅರಿತಿದ್ದರೂ ಅವರುಗಳು ತಮ್ಮ ಗುರಿ ಸಾಧನೆಯಾಗುತ್ತಿರುವ ಅಮೃತಘಳಿಗೆಯಲ್ಲಿ, ಚಿಕ್ಕ ಮಗು ಸಂಜೆಯಾಗುತ್ತಿದ್ದಂತೆ ಬರುವ ಚಂದಮಾಮನಿಗಾಗಿ ಕಾಯುವಂತೆ ತಾವೂ ಕಾಯುತ್ತಿದ್ದ ರೀತಿ.

ಮಾನಸಿಕ ನೆಮ್ಮದಿಗಾಗಿ, ʼವಿಕ್ರಮʼ ಭೂಮಿಯನ್ನು ಬಿಟ್ಟು ಹೊರಟ ನಂತರ ಅವರಲ್ಲಿ ಕೆಲವರು ತಿರುಪತಿಗೆ ಹೋಗಿ ದೇವರ ಪೂಜೆ ಮಾಡಿಸಿದ್ದು ಕೆಲವು ನಾಸ್ತಿಕರ ಟೀಕೆಗೆ ಗುರಿಯಾದರೂ ಅದು ಒಂದು ರೀತಿಯ ಒತ್ತಡ ನಿವಾರೋಣಪಾಯ ಎಂದೇ ಬಣ್ಣಿಸಬಹುದೇನೋ!

ನಮ್ಮ ಜನರೂ ಅಷ್ಟೆ. ಸೂರ್ಯ ಚಂದ್ರರಲ್ಲಿ ದೇವರನ್ನು ಕಾಣುತ್ತಾ, ಗ್ರಹಗತಿಗಳ ಲೆಕ್ಕಾಚಾರ ಹಾಕುತ್ತಾ ವಿಭಿನ್ನವಾದ ವಾದಗಳನ್ನೇ ಮಂಡಿಸುತ್ತಿದ್ದವರೂ ಚಂದ್ರಯಾನ-3 ರ ಸಫಲತೆಗಾಗಿ ಆಸ್ತಿಕರು, ನಾಸ್ತಿಕರು ಎಂಬ ಭೇದ ಭಾವಗಳಿಲ್ಲದೆ ಒಂದಾಗಿ, ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಕೈಗೊಂಡದ್ದು, ಪ್ರಾರ್ಥಿಸಿದ್ದು, ಆಶಿಸಿದ್ದು, ನಮ್ಮ “ವಿಭಿನ್ನತೆಯಲ್ಲಿ ಏಕತೆ”ಯ ಅಪರೂಪದ ಸಂಸ್ಕೃತಿಗೆ ಸಾಕ್ಷೀಭೂತವಾದದ್ದೂ ಸಹ ಹೆಮ್ಮೆಯ ಸಂಗತಿಯೇ ಹೌದು.

ಇತ್ತೀಚಿನ, ʼನಾವು ಮುಂದುವರೆದವರುʼ ಎಂದು ಹೇಳಿಕೊಳ್ಳುವ ಸ್ರ್ತೀಜನಾಂಗ ನಮ್ಮ ಸಂಸ್ಕೃತಿಯನ್ನು ಕೀಳಾಗಿ ಕಾಣುತ್ತಾ ಅನ್ಯರ ಅಂಧಾನುಕರಣೆಯನ್ನು ಮಾಡುತ್ತಿರುವುದನ್ನು ನೋಡುತ್ತಿರುವ ಈ ದಿನಗಳಲ್ಲಿ, ನಮ್ಮ ಹೆಮ್ಮೆಯ ʼವಿಕ್ರಮʼನನ್ನು ʼಚಂದ್ರಯಾನ-3ʼರಲ್ಲಿ ಚಂದ್ರನಲ್ಲಿಗೆ ಕಳುಹಿಸುವಲ್ಲಿ ಅತ್ಯಂತ ಉನ್ನತ ಮಟ್ಟದಲ್ಲಿ ಕಾರ್ಯಗೈದ ಮಹಿಳಾ ವಿಜ್ಞಾನಿಗಳೂ ತಮ್ಮತನವ ಬಿಡದೆ ಸೀರೆ, ಕುಂಕುಮ ಹೂವುಗಳಿಂದ ಶೋಭಿತರಾದದ್ದನ್ನು ಕಂಡಾಗ, ಅವರುಗಳ ಮೊಗದಲ್ಲಿ ಚಂದ್ರನ ತೇಜಸ್ಸಿನಂತೆ ಕಂಗೊಳಿಸುತ್ತಿದ್ದ ಆತ್ಮವಿಶ್ವಾಸವನ್ನು ಕಂಡಾಗಲೂ ಸಹ ಅತ್ಯಂತ ಹೆಮ್ಮೆ ಎನ್ನಿಸಿದ್ದು ಸುಳ್ಳಲ್ಲ.  ಹಾಗೆಯೇ ಅದು ನಮ್ಮ ಸಂಸ್ಕೃತಿಯ ಬೇರಿನ ಆಳದ ಶಕ್ತಿಯ ಅರಿವನ್ನೂ ಮಾಡಿಸಿಕೊಟ್ಟಿತು. 

ಎಷ್ಟೇ ದೊಡ್ಡ ಸಾಧಕರಾಗಲೀ, ಅವರ ಮನದೊಳಗೊಂದು ಮಗುವಿನ ಮನವಿರುತ್ತದೆ.  ಸಾಮಾನ್ಯರಲ್ಲಿ ಸಾಮಾನ್ಯರಂತೆ, ಸಣ್ಣ ಪುಟ್ಟ ಆಸೆಗಳಿರುತ್ತವೆ.  ಏನಾದರೂ ಮಹತ್ತಾದುದನ್ನು ಸಾಧಿಸಿದಾಗ ಮನಸ್ಸುಗಳು ಮಕ್ಕಳ ಮನಸ್ಸುಗಳಾಗಿ ಸಂಭ್ರಮಿಸುತ್ತವೆ ಎಂಬದಕ್ಕೆ ನಮ್ಮ ವಿಜ್ಞಾನಿಗಳು ʼವಿಕ್ರಮʼ ಚಂದ್ರನ ಸ್ಪರ್ಶ ಮಾಡಿದಾಗ ರೋಮಾಂಚನಗೊಂಡ ರೀತಿ, ಮಾಧ್ಯಮಗಳಲ್ಲಿ ಕಾಣಿಸಲು ಮುಗಿಬಿದ್ದ ಪರಿಯನ್ನು ನೋಡಿದಾಗ ಮನುಷ್ಯ ಎಷ್ಟೇ ಭೌತಿಕವಾಗಿ ಬೆಳೆದು ಮಹತ್ತರವಾದ ಸಾಧನೆಗೈದರೂ, ಜೀವನದ ಸಣ್ಣಪುಟ್ಟ ಸಂತೋಷಗಳಿಗೆ ಮನತೆರೆದುಕೊಳ್ಳುವುದನ್ನು ನೋಡಿ ಆಶ್ಚರ್ಯವಾಯಿತು.

ಹಾಗೇ ಅದನ್ನು ನೋಡಿದಾಗ ಚಿಕ್ಕಂದಿನಲ್ಲಿ ಓದಿದ, ವರ್ಕ್‌ ವೈಲ್‌ ಯು ವರ್ಕ, ಪ್ಲೇ ವೈಲ್‌ ಯು ಪ್ಲೈ, ದಟ್‌ ಈಸ಼್ ದ ವೇ ಟುಬಿ ಹ್ಯಾಪಿ ಅಂಡ್‌ ಗೇʼ ಎಂಬಂತೆ, ವರ್ಷಾನುಗಟ್ಟಲೆ, ಉಸಿರು ಬಿಗಿ ಹಿಡಿದು ಕೆಲಸ ಮಾಡಿ, ಅದ್ಭುತವಾದುದನ್ನು ಸಾಧಿಸಿದಾಗ ಸಂತೋಷಪಟ್ಟ ಪರಿಯನ್ನು ನೋಡಿದಾಗ ಟಿವಿಯ ಮುಂದೆ ಸ್ಥಾಪಿತರಾಗಿದ್ದ ನಮಗೂ ಚಪ್ಪಾಳೆ ತಟ್ಟಿ ಸಂಭ್ರಮಿಸುವಂತೆ ಆಯಿತು, ಒಬ್ಬರನ್ನೊಬ್ಬರು ಅಭಿನಂದಿಸುವಂತೆ ಆಯಿತು.

ಇಷ್ಟಲ್ಲದೆ ನಮ್ಮ ಡಿವಿಜಿಯವರು ತಮ್ಮ ಕಗ್ಗದಲ್ಲಿ ʼಋಷಿವಾಕ್ಯದೊಡನೆ, ವಿಜ್ಞಾನ ಕಲೆ ಮೇಳವಿಸೆ ಜಸವು ಜನಜೀವನಕೆ-ಮಂಕುತಿಮ್ಮʼ ಎಂದು ಹೇಳಿದ್ದಾರೆಯೇ!

ಅದೇನೇ ಇರಲಿ, ಇನ್ನು ಮುಂದಿನ ದಿನಗಳಲ್ಲಿ ಅಮ್ಮಂದಿರು ಮಕ್ಕಳಿಗೆ, ನೀರಿನ ತೊಟ್ಟಿಯಲ್ಲೋ, ಮನೆಯ ಅಂಗಳದ ಬಾವಿಯಲ್ಲೋ ಚಂದ್ರನ ಬಿಂಬವನ್ನು ತೋರಿಸಿ ಸಮಾಧಾನಿಸುವುದ ಬಿಟ್ಟು, – ಮುಂದಿನ ರಜಾ ದಿನಗಳಲ್ಲಿ ಚಂದಮಾಮನ ಊರಿಗೇ ಹೋಗೋಣ – ಎಂದು ಹೇಳುತ್ತಾ, ಮೊಮ್ಮು ಉಣ್ಣಿಸುವ ದಿನಗಳು ಹತ್ತಿರದಲ್ಲೇ ಇದೆಯೇನೋ! ನಮ್ಮ ವಿಜ್ಞಾನಿಗಳು ತಮ್ಮ ಅಗಾಧ ಬುದ್ಧಿಮತ್ತೆ ಮತ್ತು  ಕಠಿಣ ಪರಿಶ್ರಮದಿಂದ ಸಾಧಿಸಿಯೇ ಬಿಡುವ ದಿನಗಳು ದೂರವಿರಲಾರದು. 

ಜೈ ವಿಜ್ಞಾನ, ಜೈ ಚಂದಮಾಮ!

-ಪದ್ಮಾ ಆನಂದ್, ಮೈಸೂರು

10 Responses

  1. ತುಂಬಾ ಭಾವಪೂರ್ಣವಾಗಿ ವಿಜ್ನಾನಿಗಳ ಕಾರ್ಯದಕ್ಷತೆ ಗೆ ಗೌರವಸಲ್ಲಿಸುತ್ತಾ ಅದರೊಳಗೆ..ಪುರಾಣದಂಶ..ಹಾಗೂ ತಮ್ಮ ಅನುಭವ.. ಹಾಗೇ ಮುಂದಿನ ಆಶಯ ವ್ಯಕ್ತ ಪಡಿಸಿರುವ.
    ಲೇಖನ ಮನಕ್ಕೆ ಮುದ ಕೊಟ್ಟಿತು..ಪದ್ಮಾ ಮೇಡಂ

  2. ಶಂಕರಿ ಶರ್ಮ says:

    ನಮ್ಮ ವಿಕ್ರಮನ ವಿಕ್ರಮಕ್ಕೆ ಹಾಗೂ ಅದರ ಗೆಲುವಿನ ಹಿಂದೆ ಅನವರತ ದುಡಿದ ಸರಳ, ಮಗು ಮನದ ನಮ್ಮ ಹೆಮ್ಮೆಯ ವಿಜ್ಞಾನಿಗಳಿಗೆ ಮತ್ತೊಮ್ಮೆ ಬಹು ದೊಡ್ಡ ನಮನಗಳನ್ನು ಅರ್ಪಿಸಿದ ಲೇಖನ ಬಹಳ ಚೆನ್ನಾಗಿದೆ ಮೇಡಂ.

  3. ನಯನ ಬಜಕೂಡ್ಲು says:

    ಸೊಗಸಾಗಿದೆ

  4. ಚಂದ್ರಯಾನ 3 ರ ಬಗ್ಗೆ ವಿಜ್ಞಾನದ ಜೊತೆ ಜೊತೆಗೆ ಸಾಹಿತ್ಯದ ಲೇಪನವನ್ನು ಮಾಡಿರುವ ಲೇಖನ ಚೆನ್ನಾಗಿ ಮೂಡಿ ಬಂದಿದೆ

  5. Padma Anand says:

    ಲೇಖನವನ್ನು ಪ್ರಕಟಿಸಿದ “ಸುರಹೊನ್ನೆ” ಗೆ ವಂದನೆಗಳು.

  6. ಸುಚೇತಾ says:

    ಚೆನ್ನಾಗಿದೆ ಮೇಡಂ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: