ಅಂತ್ಯ ಸಂಸ್ಕಾರಕ್ಕೆ ಅಡ್ವಾನ್ಸ್ ಬುಕಿಂಗ್ !

Share Button


ಸೂರ್ಯ ಮುಳುಗುತ್ತಿದ್ದ. ಸ್ಕಾಟ್‌ಲ್ಯಾಂಡಿನಲ್ಲಿ ನೆಲೆಸಿದ್ದ ಮಗನ ಮನೆಯಲ್ಲಿ ಕುಳಿತು ಟಿ.ವಿ. ನೋಡುತ್ತಿದ್ದೆ. ರಾತ್ರಿ ಹತ್ತಾಗಿತ್ತು. ಇಲ್ಲಿ ಜುಲೈ ತಿಂಗಳಿನಲ್ಲಿ ಮುಂಜಾನೆ ನಾಲ್ಕಕ್ಕೇ ಉದಯಿಸುವನು ರವಿ, ರಾತ್ರಿ ಹತ್ತಕ್ಕೆ ನಿರ್ಗಮಿಸುವನು. ಹಾಗಾಗಿ ರಾತ್ರಿ ಹತ್ತಕ್ಕೆ ಮುಳುಗುತ್ತಿರುವ ಭಾಸ್ಕರನನ್ನು ನೋಡುತ್ತಿರುವಾಗ, ಟಿ.ವಿ.ಯಲ್ಲಿ ವಿಚಿತ್ರವಾದ ಜಾಹಿರಾತೊಂದು ಕಣ್ಣಿಗೆ ಬಿತ್ತು ಬನ್ನಿ, ನಿಮ್ಮ ಅಂತ್ಯ ಸಂಸ್ಕಾರಕ್ಕೆ ಇಂದೇ ರಿಜಿಸ್ಟರ್ ಮಾಡಿ, ಎಂದು ಅರವತ್ತು ದಾಟಿದ ಮಹಿಳೆಯೊಬ್ಬಳು ಹೇಳುತ್ತಿದ್ದಳು. ಮುಂದಿನ ವಿವರಗಳನ್ನು ಕೇಳಿ ಬೆಚ್ಚಿ ಬಿದ್ದೆ. ನಿಮಗೆ ಯಾವ ಬಗೆಯ ಶವ ಸಂಸ್ಕಾರ ಬೇಕು? ಸುಡುವುದೋ ಅಥವಾ ಹೂಳುವುದೋ? ಸುಡುವುದಾದರೆ ಕ್ರಿಮೆಟೋರಿಯಮ್ ನಲ್ಲಿಯೋ ಅಥವಾ ಕಟ್ಟಿಗೆ ಉರಿಸಿಯೋ? ಹೂಳುವುದಾದರೆ ಸಮಾಧಿಯ ಮೇಲೆ ಎಂತಹ ಕಲ್ಲನ್ನು ನೆಡಬೇಕು, ಅದರ ಮೇಲೆ ಏನು ಬರೆಯಬೇಕು? ಶವ ಪೆಟ್ಟಿಗೆ ಎಂತಹದ್ದಾಗಿರಬೇಕು? ನಿಮ್ಮ ಶವದ ಮೆರವಣಿಗೆಯನ್ನು ಯಾವ ಕಾರಿನಲ್ಲಿ ಮಾಡಬೇಕೆಂದು ಬಯಸುತ್ತೀರಾ? ಮರ್ಸಿಡಿಸ್ ಬೆಂಜ್ ಅಥವ ಮತ್ಯಾವ ಕಾರಿನಲ್ಲಿ? ಇಲ್ಲವೇ ಕುದುರೆ ಸಾರೋಟಿನಲ್ಲಿ? ಮೆರವಣಿಗೆಯಲ್ಲೆಷ್ಟು ಕಾರು ಹಿಂಬಾಲಿಸಬೇಕು? ಹೂವಿನ ಅಲಂಕಾರ ನೀವೇ ಆರಿಸಿ. ನಿಮ್ಮ ಬದುಕಿನ ಪರಿಚಯವನ್ನು ಮಾಡಲು ನಿಮ್ಮ ಬಯೋಡೇಟಾ ಹಾಗು ಫೋಟೋಗಳನ್ನು ಕೊಟ್ಟರೆ ಒಂದು ಕಿರುಚಿತ್ರವನ್ನು ತಯಾರಿಸಿ ಅಂದು ಪ್ರದರ್ಶಿಸುತ್ತೇವೆ. ಚರ್ಚ್‌ನಲ್ಲಿ ಪಾದ್ರಿಯಿಂದ ನಿಮ್ಮ ಆತ್ಮಕ್ಕೆ ಶಾಂತಿ ಲಭಿಸಲು ಪ್ರಾರ್ಥನೆ ಸಲ್ಲಿಸುತ್ತೇವೆ. ಶವಸಂಸ್ಕಾರದ ನಂತರ ಭೋಜನ ವ್ಯವಸ್ಥೆಯಿರುವುದು. ಹದಿನೆಂಟು ವರ್ಷದ ಕೆಳಗಿನ ಮಕ್ಕಳಿಗೆ ಉಚಿತ. ಜೊತೆಗೆ ನಿಮ್ಮ ಶವ ಸಂಸ್ಕಾರದ ವಿಡಿಯೋ ಮಾಡಿ ಉಚಿತವಾಗಿ ನಿಮ್ಮ ಮನೆಯವರಿಗೆ ತಲುಪಿಸುತ್ತೇವೆ. ಅಂತ್ಯಸಂಸ್ಕಾರದ ಬೆಲೆ ಕೆಳಕಂಡಂತಿವೆ – ಪ್ರೀಮಿಯಮ್ ದರ 3,580 ಪೌಂಡ್‌ಗಳು, ಎರಡನೇ ದರ್ಜೆಯದು 2,580 ಪೌಂಡ್‌ಗಳು, ಮೂರನೆಯ ದರ್ಜೆಯದು1,580 ಪೌಂಡ್‌ಗಳು. ಆಯ್ಕೆ ನಿಮ್ಮದು. ಒಟ್ಟಿಗೇ ಹಣ ಪಾವತಿ ಮಾಡಿದಲ್ಲಿ ಶೇಕಡಾ ಇಪ್ಪತ್ತು ಪ್ರತಿಶತ ರಿಯಾಯಿತಿ ನೀಡಲಾಗುವುದು. ಇಲ್ಲವಾದರೆ ಪ್ರತೀ ತಿಂಗಳೂ ನಿಯಮಿತವಾಗಿ ಕಂತು ಕಟ್ಟಬಹುದು.

ಇದನ್ನೆಲ್ಲಾ ಕೇಳಿದ ಮೇಲೆ ಮನಸ್ಸು ಗಲಿಬಿಲಿಗೊಂಡಿತ್ತು. ಅಬ್ಬಾ, ಆಧುನಿಕ ಜಗತ್ತಿನ ಜಾಹಿರಾತುಗಳನ್ನು ಕಂಡು ಬೆಚ್ಚಿ ಬಿದ್ದೆ. ಬಾಲ್ಯದಲ್ಲಿ ಹುಟ್ಟು ಹಬ್ಬ, ತಾರುಣ್ಯದಲ್ಲಿ ವಿವಾಹ ಮಹೋತ್ಸವ, ವಯಸ್ಸಾದ ಮೇಲೆ ಷಷ್ಟಿ ಅಂತೆಲ್ಲಾ ಆಚರಣೆಗಳ ಬಗ್ಗೆ ಕೇಳಿದ್ದೆ. ಅಂತಹ ಶುಭ ಸಮಾರಂಭಗಳಿಗೆ ಜನರು ಹಣ ಹೊಂದಿಸಿ, ಸಂಭ್ರಮ ಸಡಗರದಿಂದ ವ್ಯವಸ್ಥೆ ಮಾಡುವುದನ್ನು ಕಂಡಿದ್ದೆ. ಆದರಿಲ್ಲಿ ತಮ್ಮ ಸಾವಿನ ನಂತರ ಜರುಗುವ ಅಂತ್ಯ ಸಂಸ್ಕಾರಕ್ಕೂ ಸ್ವತಃ ವ್ಯವಸ್ಥೆ ಮಾಡುವುದನ್ನು ಕೇಳಿ ಮನಸ್ಸು ಮುದುಡಿತ್ತು.
ಪಕ್ಕದ ಮನೆಯಲ್ಲಿದ್ದ ಮಾರಿಯಾ ಬಳಿ ಅಂತಿಮ ಸಂಸ್ಕಾರದ ಜಾಹೀರಾತಿನ ಬಗ್ಗೆ ವಿಚಾರಿಸಿದೆ. ಅವಳ ಉತ್ತರ ಹೀಗಿತ್ತು – ಹೌದು, ನಮ್ಮ ಸಮಾಜದಲ್ಲಿ, ಹದಿನೆಂಟರ ಬಳಿಕ ಮಕ್ಕಳು ಬೇರೆ ಹೋಗಿ ಬದುಕು ಕಟ್ಟಿಕೊಳ್ಳುವರು. ಮನೆಯಲ್ಲಿ ನಾವಿಬ್ಬರೇ, ಇಬ್ಬರೂ ವಯಸ್ಸಾದವರು. ಯಾರಿಗೆ ಜವರಾಯನ ಕರೆ ಮೊದಲು ಬರುವುದೋ ಗೊತ್ತಿಲ್ಲ. ಇಷ್ಟು ದಿನ ಬದುಕಿ ಬಾಳಿನ ನಮಗೆ ಗೌರವಯುತವಾದ ಅಂತ್ಯ ಸಂಸ್ಕಾರ ಬೇಕಲ್ಲ, ಹಾಗಾಗಿ ನಾವು ಈ ಫ್ಯೂನರಲ್ ಸರ್ವಿಸಸ್ ನವರ ಬಳಿ ಹಣ ಕಟ್ಟಿ ನಮ್ಮ ಅಂತ್ಯ ಸಂಸ್ಕಾರ ಹೇಗಿರಬೇಕೆಂದು ತಿಳಿಸುತ್ತೇವೆ. ನಮ್ಮ ಮಕ್ಕಳು ಅತಿಥಿಗಳಂತೆ ಬಂದು ತಂದೆ ತಾಯಿಯರ ಅಂತ್ಯಸಂಸ್ಕಾರಕ್ಕೆ ಹಾಜರಾಗುತ್ತಾರೆ. ಅವರ ವಾದವೂ ಸರಿಯಾಗಿತ್ತು, ಆದರೆ ಭಾರತೀಯಳಾದ ನನಗೆ ಈ ಸಂಗತಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಹಿಂದೆ ಕಾಲೇಜಿನಲ್ಲಿ ಓದುತ್ತಿರುವಾಗ ಇತಿಹಾಸದ ತರಗತಿಯಲ್ಲಿ ಪದ್ಮ ಮೇಡಂ ಈಜಿಪ್ಟ್ ದೇಶದ ಪಿರಮಿಡ್ಸ್ ಬಗ್ಗೆ ಹೇಳುತ್ತಿದ್ದುದು ನೆನಪಾಯಿತು. ಸಿಂಹಾಸನವನ್ನು ಏರಿದ ಫ್ಯಾರೋಗಳು (ಚಕ್ರವರ್ತಿಗಳು) ಮಾಡುವ ಮೊದಲ ಕೆಲಸ ತಮ್ಮ ಸಮಾಧಿಯನ್ನು ಕಟ್ಟಲು ರಾಜ್ಯದ ಭಂಡಾರದಲ್ಲಿದ್ದ ಧನಕನಕವನ್ನೆಲ್ಲಾ ಖಾಲಿ ಮಾಡಿ ಭವ್ಯವಾದ ಪಿರಮಿಡ್ಡನ್ನು ನಿರ್ಮಿಸುವುದು. ತಮ್ಮ ಮರಣಾನಂತರ ಪರಲೋಕಕ್ಕೆ ಹೋಗಲು ಸರ್ವ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದರು. ಮೊದಲಿಗೆ ಶವವನ್ನು ಕೊಳೆಯದಂತೆ ಸಂರಕ್ಷಿಸುವುದು, ಅಲ್ಲಿ ಪರಲೋಕಕ್ಕೆ ಪಯಣ ಬೆಳೆಸಲು ಒಂದು ಚಿನ್ನದ ದೋಣ ಅಥವಾ ಬೆಳ್ಳಿಯ ದೋಣಿ ಹಾಗೂ ಅದರೊಟ್ಟಿಗೇ ತಾವು ನಿತ್ಯ ಬಳಸುವ ವಸ್ತುಗಳನ್ನೂ ಶೇಖರಿಸಿಡುತ್ತಿದ್ದರು. ಇವರ ಸಾಮ್ರಾಜ್ಯ ಪತನವಾಗಲು ಈ ಪಿರಮಿಡ್‌ಗಳೂ ಒಂದು ಕಾರಣವಾಗಿರಬಹುದೇ? ಇಂದಿಗೂ ಈಜಿಪ್ಟ್‌ನಲ್ಲಿ ಈ ಅದ್ಭುತವಾದ ಪಿರಮಿಡ್‌ಗಳನ್ನು ನೋಡಲು ದೇಶ ವಿದೇಶಗಳಿಂದ ಪ್ರವಾಸಿಗರು ಆಗಮಿಸುವರು. ಇನ್ನು ನಮ್ಮ ನಾಡಿನಲ್ಲಿರುವ ಜಗತ್ತಿನ ಏಳು ಅದ್ಭುತಗಳಲ್ಲೊಂದಾದ ತಾಜ್ ಮಹಲ್ ಸಹ ಒಂದು ಗೋರಿಯೇ ಅಲ್ಲವೇ? ಮೊಗಲ್ ಚಕ್ರವರ್ತಿ ಶಹಜಹಾನ್ ತನ್ನ ಪ್ರಿಯತಮೆ ಮುಮ್ತಾಝ್‌ಮಹಲ್‌ಗಳಿಗಾಗಿ ನಿರ್ಮಿಸಿರುವ ಭವ್ಯವಾದ ಸ್ಮಾರಕ.

ನಮ್ಮ ನಾಡಿನ ಸಂಸ್ಕೃತಿಯ ಬಗ್ಗೆ ಕಣ್ಣು ಹಾಯಿಸಿದೆ. ಕೆಲವು ಸಾಧು ಸಂತರು ತಮ್ಮ ಜೀವಿತಾವಧಿ ಮುಕ್ತಾಯವಾದ ನಂತರ ಯಾವ ರೀತಿಯ ಸಮಾಧಿ ಮಾಡಬೇಕೆಂದು ತಮ್ಮ ಶಿಷ್ಯರಿಗೆ ಆದೇಶಿಸುವುದುಂಟು. ಈ ಜಗತ್ತು ಪಂಚಭೂತಗಳಿಂದ ಆಗಿರುವುದರಿಂದ ನಮ್ಮ ಶರೀರವೂ ಪಂಚಭೂತಗಳಿಂದಲೇ ಆಗಿದೆ ಎಂಬ ನಂಬಿಕೆ ಇವರದು. ಹಾಗಾಗಿ ಕೆಲವು ಪಂಗಡಕ್ಕೆ ಸೇರಿದವರು ಶವವನ್ನು ಕಟ್ಟಿಗೆಯ ರಾಶಿಯ ಮೇಲಿಟ್ಟು ಸುಡುವ ಪದ್ಧತಿ ಜಾರಿಯಲ್ಲಿದೆ. ನಂತರ ಚಿತಾಭಸ್ಮವನ್ನು ಯಾವುದಾದರೂ ನದೀ ತೀರದಲ್ಲಿ ವಿಸರ್ಜಿಸುವರು. ಮತ್ತೆ ಕೆಲವರು ಈ ಶರೀರವು ಮಣ್ಣಿನಿಂದಲೇ ಬಂದಿರುವುದರಿಂದ ಮಣ್ಣಿಗೇ ಹಿಂತಿರುಗಿಸುವುದು ಎಂಬ ನಂಬಿಕೆಯಿಂದ ಮಣ್ಣು ಮಾಡುವ ಪದ್ಧತಿಯಿದೆ. ಈ ವ್ಯವಸ್ಥೆಯಿಂದ ಅಳಿವಿನಂಚಿನಲ್ಲಿರುವ ಅರಣ್ಯವೂ ಉಳಿಯುವುದು ಹಾಗೂ ಭೂಮಿಯ ಫಲವತ್ತತ್ತೆಯೂ ಹೆಚ್ಚುವುದು. ಇನ್ನೂ ಕೆಲವರು ಮೃತದೇಹಗಳನ್ನು ಸುಡುವುದು ಅಥವಾ ಮಣ್ಣು ಮಾಡುವ ಬದಲು ಪಕ್ಷಿಗಳಿಗೆ ಆಹಾರವಾಗಲಿ ಎಂದು ಶವಗಳನ್ನು ಎತ್ತರವಾದ ಕೋಡುಗಲ್ಲಿನ ಮೇಲಿಟ್ಟು ಬರುವರು. ಇನ್ನು ಕೆಲವು ವಯಸ್ಸಾದವರು ಹುಟ್ಟು ಸಾವಿನ ಬಂಧನದಿಂದ ಮುಕ್ತಿ ಪಡೆಯಲು ಕಾಶಿಗೆ ಹೋಗಿ ವಿಶ್ವನಾಥನ ಸನ್ನಿಧಿಯಲ್ಲಿ ಕೊನೆಯುಸಿರೆಳೆಯವುದೂ ಉಂಟು. ಮತ್ತೆ ಕೆಲವರು ಕಾಶಿಯಲ್ಲಿ ಆತ್ಮತರ್ಪಣ ಎಂಬ ಆಚರಣೆಯನ್ನು ವಿಧಿವತ್ತಾಗಿ ಮಾಡುವರು. ತಮ್ಮ ನಿಧನಾನಂತರ ಮಾಡುವ ಕ್ರಿಯೆಗಳನ್ನು ಜೀವಿತಾವಧಿಯಲ್ಲೇ ಕಾಶಿಯಲ್ಲಿ ಮಾಡಿ ಮುಗಿಸಿದರೆ ಮುಂದೆ ಮಕ್ಕಳು ಅವರ ತಿಥಿ ಅಥವಾ ಶ್ರಾದ್ಧವನ್ನು ಮಾಡುವ ಅಗತ್ಯವಿಲ್ಲ ಎಂಬ ನಂಬಿಕೆ ಇವರದು.

PC: Internet


ಹಿಂದೂಗಳಲ್ಲಿ ಕುಟುಂಬದ ಹಿರಿಯರು ತಮ್ಮ ಸಾವಿನ ನಂತರ ಅಂತ್ಯ ಸಂಸ್ಕಾರಕ್ಕೆ ತಮ್ಮ ಗಂಡು ಮಕ್ಕಳನ್ನು ನೆಚ್ಚಿಕೊಳ್ಳುತ್ತಾರೆ. ತಮ್ಮ ಚಿತೆಗೆ ಅಗ್ನಿಸ್ಪರ್ಶ ಮಾಡಲು ಅಥವಾ ಮಣ್ಣು ಮಾಡಲು ಮಗನೇ ಬೇಕು ಎಂದು ಹಂಬಲಿಸುತ್ತಾರೆ. ಇಲ್ಲವಾದರೆ ತಮ್ಮ ಆತ್ಮ ಸ್ವರ್ಗ ಸೇರಲು ಅಸಾಧ್ಯ ಎಂಬ ನಂಬಿಕೆ ಇವರದು. ಆದಿ ಗುರು ಶಂಕರರು ಸನ್ಯಾಸ ಸ್ವೀಕರಿಸುವ ಮೊದಲು ತಮ್ಮ ತಾಯಿಗೆ ಕೊಟ್ಟ ಮಾತಿನಂತೆ ಅವರ ಅಂತ್ಯಕ್ರಿಯೆಯನ್ನು ಜರುಗಿಸುತ್ತಾರೆ. ಸನ್ಯಾಸಿಯಾದವನು ತನ್ನ ಪೂರ್ವಾಶ್ರಮದ ಬಂಧುಗಳನ್ನು ಮರೆತುಬಿಡಬೇಕು ಎಂಬ ಕಟ್ಟಲೆಯಿದ್ದರೂ, ತಾಯಿಗಿಂತ ದೊಡ್ಡ ದೇವರಿಲ್ಲ ಎಂದು ನಂಬಿದವರು ಶಂಕರರು. ಮೃತರಾದ ಕುಟುಂಬದ ಹಿರಿಯರಿಗೆ ಪ್ರೀತಿ, ಗೌರವ, ಕೃತಜ್ಞತೆಯನ್ನು ತೋರಿಸಲು ಇರುವ ಕೊನೆಯ ಅವಕಾಶ ಇದು. ಅಂತ್ಯ ಸಂಸ್ಕಾರದ ವಿಧಿಗಳನ್ನು ಸರಿಯಾದ ಕ್ರಮದಲ್ಲಿ ಆಚರಿಸದಿದ್ದರೆ ಇವರ ಆತ್ಮಕ್ಕೆ ಸದ್ಗತಿ ದೊರೆಯಲಾರದು ಎಂಬ ನಂಬಿಕೆ ಇವರಲ್ಲಿ ಮನೆ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಕೆಲವರು ನೇತ್ರ ದಾನ, ಶರೀರದ ಅಂಗಾಂಗಗಳ ದಾನವನ್ನು ಮಾಡಿ ಮಾನವೀಯತೆಯನ್ನು ಮೆರೆಯುವರು, ಇನ್ನೂ ಕೆಲವರು ಮೆಡಿಕಲ್ ಕಾಲೇಜುಗಳಿಗೆ ತಮ್ಮ ದೇಹವನ್ನು ದಾನ ಮಾಡುವರು, ವಿದ್ಯಾರ್ಥಿಗಳು ಶರೀರದ ಅಂಗರಚನೆಯನ್ನು ಕಲಿಯಲಿ ಎಂಬ ಸದುದ್ದೇಶ ಇವರದು.

ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ ಎಂದೆಲ್ಲಾ ಹೇಳುವಾಗ ಎಲ್ಲರೂ ತತ್ವಜ್ಞಾನಿಗಳ ಹಾಗೆ ಪೋಸ್ ಕೊಡುವರು ಅಲ್ಲವೇ? ಆದರೆ ತಮ್ಮದೇ ಸಾವನ್ನು ಸಂಭ್ರಮಿಸಲು ಸಾಧ್ಯವೇ? ಎಲ್ಲರೂ ಒಂದಲ್ಲಾ ಒಂದು ದಿನ ಸಾಯಲೇಬೇಕು ಎಂಬ ತತ್ವವನ್ನು ಉಪದೇಶಿಸುವವರು ತಾವು ಸಾಯುವ ಕಲ್ಪನೆಯನ್ನೂ ಮಾಡಲಾರರು. ತಾನು ಸತ್ತ ಮೇಲೆ ನಡೆಸುವ ವಿಧಿ ವಿಧಾನಗಳ ಬಗ್ಗೆ ಹೇಗೆ ತಾನೆ ನಿರ್ಧರಿಸಲು ಸಾಧ್ಯ ನೀವೇ ಹೇಳಿ?

ಡಾ.ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ.

10 Responses

  1. Anonymous says:

    ಹೃದಯಸ್ಪರ್ಶಿ ಯಾದಂತಹ…ಉತ್ತಮ ಮಾಹಿತಿ ಯುಳ್ಳ ಲೇಖನ…ಸೊಗಸಾದ ನಿರೂಪಣೆ… ಧನ್ಯವಾದಗಳು ಗಾಯತ್ರಿ ಮೇಡಂ.

  2. ನಯನ ಬಜಕೂಡ್ಲು says:

    ಸತ್ತ ಮೇಲೆ ತಮ್ಮ ಶವ ಸಂಸ್ಕಾರ ಹೇಗೆ ನಡೆಯಬೇಕು ಅನ್ನುವುದನ್ನು ಮೊದಲೇ ನಿರ್ಧರಿಸುವ ಪದ್ಧತಿ ಕುತೂಹಲಕಾರಿಯಾಗಿದೆ.

  3. Thanks Hema mam for giving a suitable title to my article n adding a right picture

  4. ಶಂಕರಿ ಶರ್ಮ says:

    ಪದ್ಧತಿ ವಿಚಿತ್ರವಾದರೂ ಕುತೂಹಲಕಾರಿಯಾಗಿದೆ. ವಿವರಣಾತ್ಮಕ ಲೇಖನ ಸೊಗಸಾಗಿದೆ.

  5. Kusuma says:

    Very informative. Great narration.

  6. ನಿರ್ಮಲಾ says:

    ತುಂಬಾ ಚೆನ್ನಾಗಿ ಮೂಡಿ ಬಂದಿದೆ.

  7. Padmini Hegade says:

    ಮುಂಚೆಯೇ ಹಣ ಡೆಪಾಸಿಟ್‌ ಮಾಡಿದರೆ ಭಾರತದಲ್ಲೂ ಅಂತ್ಯ ಸಂಸ್ಕಾರವನ್ನು ಮಾಡಿಸಿಕೊಡುವ ವ್ಯವಸ್ಥೆ ಇದೆ. ಅಷ್ಟೊಂದು ಪ್ರಚಲಿತ ಆಗಿಲ್ಲ. ಘಟಶ್ರಾದ್ಧ ಎನ್ನುವ ಕಲ್ಪನೆಯೂ ನಮ್ಮಲ್ಲಿ ಇದೆ. ಅಂತ್ಯಸಂಸ್ಕಾರವನ್ನು ಕುರಿತ ಭಾವನಾತ್ಮಕ ಚಿಂತನೆ ಚೆನ್ನಾಗಿದೆ.

  8. Sameena Anjum says:

    Very interesting article mam

  9. ಸಮತಾ ಆರ್ says:

    ಹದಿನೆಂಟು ವರ್ಷದ ಕೆಳಗಿನ ಮಕ್ಕಳಿಗೆ ಉಚಿತ ಅನ್ನುವ ಸಾಲು ಮನಸ್ಸು ಕಲಕಿತು, ಆ ರೀತಿಯ ಉಚಿತ ಸೌಲಭ್ಯ ಯಾರಿಗೂ,ಎಂದಿಗೂ ಬಾರದಿರಲಿ

  10. Thank you dear friends for your response

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: