ಸಮಕಾಲೀನ ಮೌಲ್ಯಗಳಿಗೂ ಸ್ಪಂದಿಸುವ ಕೃತಿ : “ಗೌರಿ ಕಲ್ಯಾಣ”

Share Button

ತೆಲುಗಿನಲ್ಲಿ ಪುಟ್ಟಗಂಟಿ ಗೋಪಿಕೃಷ್ಣರ  “ಗೌರಿ ಕಳ್ಯಾಣಂ” ಕಾದಂಬರಿಯನ್ನು  ಕನ್ನಡಕ್ಕೆ ಅನುವಾದಿಸಿರುವವರು ಶ್ರೀಮತಿ ಟಿ.ಎಸ್.ಲಕ್ಷ್ಮೀದೇವಿಯವರು. ತೆಲುಗು ಮನೆ ಮಾತಾಗಿರುವ ಲಕ್ಷ್ಮೀದೇವಿಯವರು ಕನ್ನಡ ಸಾಹಿತ್ಯದ ಶ್ರೀಮಂತಿಕೆಗೆ ಅನನ್ಯ ಕೊಡುಗೆ ಸಲ್ಲಿಸಿರುವ ಹಿರಿಯ ಸಾಹಿತಿಗಳಾದ ದಿ.ಟಿ.ಎಸ್.ವೆಂಕಣ್ಣಯ್ಯನವರ ಸೋದರ  ದಿ.ತ.ಸು. ಶಾಮರಾಯರ ಮಗಳು.  ಹೀಗಾಗಿ ಕನ್ನಡ ಭಾಷಾ ಶ್ರೀಮಂತಿಕೆ ಇವರಿಗೆ ಸಹಜವಾಗಿ ಮೈಗೂಡಿದೆ.  ಈ ಕೃತಿಯ ಓದು ಒಂದು ಅನುವಾದ  ಎಂದೆನಿಸದೇ ಸುಲಲಿತ  ಶೈಲಿಯ  ನೈಜ ಓಘದಿಂದ ಕೂಡಿ ಕೈಗೆತ್ತಿಕೊಂಡ  ಪುಸ್ತಕದ ಓದನ್ನು  ಒಂದೇ ಉಸುರಿಗೆ ಓದಿ ಮುಗಿಸಿವಷ್ಟರಮಟ್ಟಿಗೆ ಸ್ವಾರಸ್ಯಕರವಾಗಿ  ಕೌತುಕದಿಂದ ಓದಿಸಿಕೊಂಡು ಹೋಗುತ್ತದೆ. ವಿಜಯನಗರದ ಕೃಷ್ಣದೇವರರಾಯನ  ಕಾಲದ ಒಂದು ಪ್ರೇಮಕಥೆ  ಕಾದಂಬರಿಯ ಕಥಾವಸ್ತು. ಜನಸಾಮಾನ್ಯರಾದ  ಶಿವ ಮತ್ತು ಗೌರಿಯರ ಅನುಪಮ ಪ್ರೇಮವು ಗೌರಿಯ ತಂದೆಯ ಕಡು ವಿರೋಧವನ್ನೂ ಎದುರಿಸಿ  ಪ್ರೇಮಿಗಳು ಒಂದಾಗುವುದನ್ನು ಸಾಧ್ಯವಾಗಿಸುತ್ತದೆ.  ಈ ಪ್ರೇಮಿಗಳಿಬ್ಬರ ನೆರವಿನಿಂದಲೇ ಕೃಷ್ಣದೇವರಾಯನು ಕೂಡ ತನ್ನ ಮಹತ್ವಾಕಾಂಕ್ಷೆಯ ಕಟಕಪ್ರಾಂತ್ಯದೊಂದಿಗಿನ ಯುದ್ಧವೊಂದನ್ನು ಗೆದ್ದು, ತಾನು ಪ್ರೇಮಿಸಿದ್ದ ರಾಜಕುಮಾರಿ ತುಕ್ಕಾದೇವಿಯನ್ನು ವರಿಸುತ್ತಾನೆ. ಹೀಗೆ ಶ್ರೀಸಾಮಾನ್ಯರಾದ ಪ್ರೇಮಿಗಳಿಬ್ಬರ ಹಾಗೂ ಸಾಮ್ರಾಟನ ಪ್ರೇಮಕಥೆಯೂ ಕಾದಂಬರಿಯಲ್ಲಿ ಸಮಾನಾಂತರವಾಗಿ ಹೆಣೆದುಕೊಂಡು ಬಂದಿದೆ. ಇದರಲ್ಲಿ “ವಾಸ್ತವಕ್ಕಿಂತ ಕಲ್ಪನೆಯೇ ಹೆಚ್ಚು ಕೆಲಸ ಮಾಡಿದೆಯೆಂದು ಮೂಲ ಕಥೆಗಾರರು ಹೇಳಿಕೊಂಡಿದ್ದಾರೆ” ಎಂದು ಲೇಖಕಿ ಮೊದಲಿಗೇ ತಿಳಿಸಿದ್ದಾರೆ.

“ಅದು ಕ್ರಿ.ಶ. 1513 ರಲ್ಲಿ ನಡೆದ ಪ್ರಸಂಗ” ಎಂಬ ಶೀರ್ಷಿಕೆಯಿಂದ ಪ್ರಾರಂಭವಾಗುವ ಪ್ರಥಮ ಅಧ್ಯಾಯವು ಶ್ರೀಶೈಲ ಕ್ಷೇತ್ರಕ್ಕೆ ಸೇರಿದ ದಟ್ಟವಾದ ಕಾಡಿನಲ್ಲಿನ ಜಲಪಾತದ ಬಳಿಯಲ್ಲಿ ಶಿವ ಮತ್ತು ಗೌರಿಯರು ಪ್ರತಿ ಹುಣ್ಣಿಮೆಯಂದು ಸಂಧಿಸುವ ಸ್ಥಳಕ್ಕೆ ಹೊರಟಿರುವ ವರ್ಣನೆಯೊಂದಿಗೆ ಆರಂಭವಾಗುತ್ತದೆ. ಕಾಡಿನ ನಡುವಿನ ದಾರಿಯಲ್ಲಿ ದರೋಡೆಕೋರರು ಶಿವನ ಮೇಲೆ ದಾಳಿ ಮಾಡುತ್ತಾರೆ. ಯಾತ್ರಾರ್ಥಿಗಳನ್ನು ದೋಚುವುದೇ ಅವರ ಕಾಯಕ. ಈ ಕುರಿತು ಶಿವ ಗೌರಿಗೆ ಹೇಳುತ್ತಾ ” ಈಗ ದಿನಗಳು ಹಿಂದಿನಂತಿಲ್ಲ, ಗೌರೀ….ಎಲ್ಲಿ ನೋಡಿದರೂ ಹಿಂಸಾಚಾರವೇ. ಮಾನವನು ನೆಮ್ಮದಿಯಿಂದ ಬದುಕುವುದು ಮರೀಚಿಕೆಯಾಗಿದೆ. ಯುದ್ಧದ ಕಾರ್ಮೋಡ ಎಲ್ಲೆಡೆ ಕವಿಯುತ್ತಿದೆ” ಎನ್ನುತ್ತಾ ಜನರಿಗೆ  ನೆಮ್ಮದಿಯಿಲ್ಲದಿರುವುದರ ಕುರಿತು ಹೇಳುವ ಮಾತುಗಳ ಪರಿಸ್ಥಿತಿಯು ಇಂದಿಗೂ ಅನ್ವಯಿಸುವಾಗ;  ಮಾನವನ ದುರಾಸೆ ಕ್ರೌರ್ಯ ಪ್ರಕ್ಷುಬ್ಧತೆಯ  ವಿದ್ಯಮಾನವು ಶತಶತಮಾನಗಳ ಹಿಂದಿನ ಆ ಕಾಲದಲ್ಲೂ ಇತ್ತಲ್ಲವೇ ಎಂದು ವಿಸ್ಮಯಪಡುವಂತಾಗುತ್ತದೆ.

ಮುಂದೆ ಶಿವನು ತಿರುಪತಿಗೆ ದೇವತಾ ದರ್ಶನಕ್ಕೆ ಬರುತ್ತಾನೆ. ಆಗ ಅವನಿಗೆ ಜನಸಾಮಾನ್ಯರಂತೆ ಮಾರುವೇಷದಲ್ಲಿದ್ದ ಕೃಷ್ಣದೇವರಾಯನೊಂದಿಗೆ ಸ್ನೇಹವುಂಟಾಗುತ್ತದೆ. ರಾಯನಿಗೆ ಶ್ರೀಶೈಲ ತೋರಿಸಲು ಶಿವನು ಅವನೊಂದಿಗೆ ಹೊರಡುತ್ತಾನೆ. ಈ ತೀರ್ಥಯಾತ್ರೆಯ ಸಂದರ್ಭದಲ್ಲಿ ಮಾರ್ಗಮಧ್ಯದಲ್ಲಿ ಹಲವಾರು ಪುಣ್ಯಕ್ಷೇತ್ರಗಳು, ನದಿಗಳು ಬರುತ್ತವೆ. ಅವುಗಳೊಂದೊಂದರ ಮಹತ್ವವನ್ನು, ಅವುಗಳಿಗೆ ಸಂಬಂಧಿಸಿದ ಪೌರಾಣಿಕ ಪ್ರಸಂಗಗಳನ್ನು ಶಿವನು ಕೃಷ್ಣದೇವರಾಯನಿಗೆ ವಿವರಿಸುವ ಪರಿ, ಒಬ್ಬ ಪರಿಣತ  ಪ್ರವಾಸಿ ಮಾರ್ಗದರ್ಶಿಯ  ವರ್ಣನೆಯಂತಿದೆ ಎಂದು ಮುನ್ನುಡಿಕಾರರಾದ ಕವಿ ಬಿ.ಆರ್.ಲಕ್ಷ್ಮಣರಾವ್ ಕೂಡ ಅಭಿಪ್ರಾಯಪಡುತ್ತಾರೆ.

ರಾಜನೆಂದರಿಯದೆ ತನ್ನ ಸ್ನೇಹಿತ ಎಂದು ಭಾವಿಸಿರುವ ಶಿವನು ಕೃಷ್ಣದೇವರಾಯನಿಗೆ, ವಿಜಯನಗರದರಸನ ರಾಣೀವಾಸದ ರಾಣಿಯರ ಕುರಿತು ಪ್ರಶ್ನಿಸುತ್ತಾನೆ. ತಾನು ಪರಾಭವಗೊಳಿಸಿದವರ ಕುಮಾರಿಯರನ್ನು ವರಿಸುತ್ತಿದ್ದುದು, ಕೆಲವರು ಸೋತ ರಾಜರು ರಾಜನ ಖಡ್ಗಕ್ಕೇ ತಮ್ಮ ಮಗಳನ್ನು ವಿವಾಹ ಮಾಡಿಕೊಟ್ಟಿದ್ದನ್ನೆಲ್ಲ ಮಾರುವೇಷದ ರಾಯನು ಶಿವನಿಗೆ ವಿವರಿಸುತ್ತಾನೆ. ಅವರಿಗೆಲ್ಲ ಪ್ರತ್ಯೇಕವಾದ ಅಂತಃಪುರ, ದಾಸಿಯನ್ನಿರಿಸಿದ್ದ ರಾಜ, ಅವರಲ್ಲಿ ಹಲವರನ್ನು ವಿವಾಹದ ದಿನ ಮಾತ್ರ ನೋಡಿರುತ್ತಾನೆ.  ಮತ್ತೆ ಹಲವರು ಕೊಡುಗೆಯಾಗಿ ಬಂದಿರುವವರನ್ನು ವಿವಾಹವೂ ಆಗಿರುವುದಿಲ್ಲವಾದರೂ, ಅವರೆಲ್ಲರನ್ನೂ ಪರಪುರುಷರ ಸಂಸರ್ಗದಿಂದ ತಪ್ಪಿಸಲು ನಪುಂಸಕರನ್ನು ಸಂರಕ್ಷಣೆಗಾಗಿ ನೇಮಿಸಿರುತ್ತಾನೆ. ಇಬ್ಬರು ಮಾತ್ರವೇ ರಾಜನ ಪ್ರಿಯ ಪತ್ನಿಯರು. ಇದನ್ನೆಲ್ಲ ಕೇಳಿದ ಶಿವನು “ಅದು ಹೆಣ್ಣುಮಕ್ಕಳ ಕಾಮನೆಗಳನ್ನು ನಿರ್ಲಕ್ಷಿಸಿದಂತಲ್ಲವೇ? ಮದುವೆಯಾದ ಹೆಣ್ಣನ್ನು ಸುಖಪಡಿಸುವುದು ಕೂಡ ಗಂಡಸಿನ ಧರ್ಮವಲ್ಲವೇ?” ಎಂದು ಪ್ರಶ್ನಿಸಿದ್ದು ರಾಜನಿಗೆ ತನ್ನ ಅದುವರೆಗಿನ  ತಪ್ಪಿನ ಅರಿವಾಗಿಸುತ್ತದೆ. ಪಶ್ಚಾತ್ತಾಪಪಡುತ್ತಾನೆ. ಮುಂದೆ ಸಂಧಾನಕ್ಕಾಗಿ ಕಟಕಪ್ರಾಂತ್ಯದ ಪ್ರತಾಪರುದ್ರನು ತನ್ನ ಮಗಳು ತುಕ್ಕಾದೇವಿಯನ್ನು ಮದುವೆ ಮಾಡಿಕೊಡಬೇಕಾದ ಸಂದರ್ಭದಲ್ಲಿ  ಕೃಷ್ಣದೇವರಾಯನು ವಿವಾಹದ ಕುರಿತು ರಾಜಕುಮಾರಿಯ ಮನದಿಂಗಿತವನ್ನು ತಿಳಿದೇ ಮುಂದುವರಿಯಬಯಸುತ್ತಾನೆ.  ಯುದ್ಧದಿಂದಾಗಿ ಅಮಾಯಕ ಸೈನಿಕರ ಪ್ರಾಣಹಾನಿಯ ಕುರಿತ ವಿಷಾದದ ಚಿಂತನೆಯೂ ಕಾದಂಬರಿಯಲ್ಲಿ ಅಲ್ಲಲ್ಲಿ ಪ್ರಸ್ತಾಪಿತವಾಗಿದೆ. ರಾಜ್ಯಾಡಳಿತದಲ್ಲಿ ಮಹಾಮಂತ್ರಿ, ಸೇನಾಧಿಪತಿಗಳ   ಅಭಿಪ್ರಾಯದಂತೆಯೇ ಜನಸಾಮಾನ್ಯರ ಅಭಿಪ್ರಾಯವನ್ನೂ ಪರಿಗಣಿಸಬೇಕೆಂಬ ಚಿಂತನೆಯೂ ಇದೆ.

ಶಿವನೊಂದಿಗಿನ ತನ್ನ ಮಗಳ ವಿವಾಹ ತಪ್ಪಿಸಲು ಗೌರಿಯ ತಂದೆ ಕುತಂತ್ರದಿಂದ ಮಗಳನ್ನು ಕಟಕಪ್ರಾಂತ್ಯದ ರಾಜಕುಮಾರಿ ತುಕ್ಕಾ ದೇವಿಯ ಸಖಿಯಾಗಿ ಕಳಿಸಿರುತ್ತಾನಾದರೂ, ಗೌರಿಗೂ ರಾಜಕುಮಾರಿಗೂ ಉತ್ತಮ ಸ್ನೇಹ ಬಾಂಧವ್ಯವೇರ್ಪಡುತ್ತದೆ.  ಎರಗಲು ಸಿದ್ಧವಾಗಿದ್ದ ಹಸಿದ ಚಿರತೆಗಳನ್ನೆದುರಿಸುವುದು, ತುಂಬಿದ ನದಿಯನ್ನು ತೆಪ್ಪದಲ್ಲಿ ದಾಟುವಾಗ ಮೊಸಳೆಗಳಿಂದ ಪಾರುಮಾಡಿದ್ದು_ ಹೀಗೆ ಸಾಹಸಮಯ ಪ್ರವೃತ್ತಿಯ  ಗೌರಿ ಕೊನೆಗೆ ತುಕ್ಕಾದೇವಿಯ ನಿರ್ದೇಶನದಂತೆ ರಹಸ್ಯ ಮಾರ್ಗದಲ್ಲಿ ಸಾಗಿಬಂದು ರಾಜಕುಮಾರಿಯ ಸಂದೇಶವನ್ನು ಕೃಷ್ಣದೇವರಾಯನಿಗೆ ತಲುಪಿಸುವುದರಲ್ಲೂ ಯಶಸ್ವಿಯಾಗುತ್ತಾಳೆ. ಅದರಂತೆಯೇ ತುಕ್ಕಾದೇವಿಯಾದರೂ ಸೆರೆಯಾಗಿದ್ದ ಶಿವನನ್ನು ತಾನೇ ನಿರ್ಧಾರ ತೆಗೆದುಕೊಂಡು ಬಿಡಿಸುವುದು, ರಾಯ ನೊಂದಿಗಿನ ಯುದ್ಧದಲ್ಲಿ ತನ್ನ ತಂದೆ ಅಣ್ಣನ ಪ್ರಾಣಕ್ಕೆ ಹಾನಿಯಾಗಬಾರದೆಂಬ ಷರತ್ತನ್ನು  ವಿಧಿಸುವುದು, ಅವನೆಡೆಗಿನ ತನ್ನ ಪ್ರೇಮವನ್ನು ಅಭಿವ್ಯಕ್ತಿಸುವುದು_ಹೀಗೆ ಸಖಿಯರಿಬ್ಬರೂ ಆತ್ಮಪ್ರತ್ಯಯದಿಂದ  ಕೂಡಿದ ವ್ಯಕ್ತಿತ್ವವುಳ್ಳವರಾಗಿ ಕಾದಂಬರಿಯಲ್ಲಿ ಬಿಂಬಿತರಾಗಿದ್ದಾರೆ. ತನ್ಮೂಲಕ ಸ್ತ್ರೀ  ಚೈತನ್ಯದ ಅಂತ:ಸತ್ವವನ್ನು ಎತ್ತಿ ಹಿಡಿಯಲಾಗಿದೆ.


ಲಕ್ಷ್ಮೀದೇವಿಯವರ ಸುಲಲಿತ ಭಾಷಾ ಶೈಲಿ, ಲವಲವಿಕೆಯ ನಿರೂಪಣೆ, ಮೂಲ ಕೃತಿ ಎಂಬಂತಹ ಭಾವನೆಯಿಂದ ಓದಿಸಿಕೊಂಡು ಹೋಗುತ್ತದೆ.  ಕೃತಿಯನ್ನು “ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ” ಯ ಪ್ರಕಾಶಕರಾದ ದಿ.ಛಾಯಾಪತಿಯವರು ಪ್ರಕಟಿಸಿದ್ದಾರೆ. ಅವರ ಮಗಳು ಪ್ರತಿಭಾ ಮುರಳಿ ತಂದೆಯವರ ಪ್ರಕಾಶನದ ಸಾರಥ್ಯ ಪಡೆದು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಹುಡುಕಿದರೂ ತಪ್ಪು ಸಿಗದಂತಹ   ಮುದ್ರಣ, ಸುಂದರ ಮುಖಪುಟ ಎಂದು ಮುದ್ದಾದ ಪುಸ್ತಕ ನೋಡುತ್ತಲೇ ಕೈಗೆತ್ತಿಕೊಳ್ಳುವಂತಿದೆ. ಟಿ.ಎಸ್.ಲಕ್ಷ್ಮೀದೇವಿಯರಿಂದ ಇಂತಹ ಇನ್ನಷ್ಟು ಅನುವಾದದ ಪುಸ್ತಕಗಳು ಬರಲಿ.

-ಕೆ.ಆರ್.ಉಮಾದೇವಿ ಉರಾಳ.

ಶೀರ್ಷಿಕೆ : “ಗೌರಿ ಕಲ್ಯಾಣ”
ತೆಲುಗಿನಿಂದ ಕನ್ನಡಕ್ಕೆ : ಟಿ.ಎಸ್.ಲಕ್ಷ್ಮೀದೇವಿ

ಪ್ರಥಮ ಮುದ್ರಣ : 2020
ಬೆಲೆ : 120ರೂ

4 Responses

  1. ಕೆ.ಆರ್.ಉಮಾದೇವಿ ಉರಾಳ says:

    ಲೇಖನವನ್ನು ಅಂಗೀಕರಿಸಿ ಪ್ರಕಟಿಸಿರುವುದಕ್ಕಾಗು ಧನ್ಯವಾದಗಳು

  2. ಪುಸ್ತಕ ಪರಿಚಯ..ಚೆನ್ನಾಗಿ ಮೂಡಿಬಂದಿದೆ.. ಧನ್ಯವಾದಗಳು..

  3. ನಯನ ಬಜಕೂಡ್ಲು says:

    ಚೆನ್ನಾಗಿದೆ

  4. ಶಂಕರಿ ಶರ್ಮ says:

    ವಿಮರ್ಶಾತ್ಮಕ ಪುಸ್ತಕ ಪರಿಚಯವು ಚೆನ್ನಾಗಿ ಮೂಡಿಬಂದಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: