ಲೋಕೋಭಿನ್ನರುಚಿಃ
ಮೇಲಿನ ಶೀರ್ಷಿಕೆ ಸ್ವಲ್ಪ ವಿಚಿತ್ರವೆನಿಸಬಹುದು. ಲೋಕೋಕ್ತಿ ಬಹಳ ಹಳೆಯದಾದರೂ ಇಂದಿಗೂ ಹಲವಾರು ಕಡೆ ಪ್ರಸ್ತುತ. ಇದರ ಸ್ಥೂಲ ಅರ್ಥ ಬಹಳ ಸ್ಪಷ್ಟ. ಎಲ್ಲಾ ಜನರ, ಸಾಹಿತಿಗಳ, ರಾಜಕಾರಣಿಗಳ, ವಿದ್ಯಾರ್ಥಿಗಳ, ಯೋಚನಾಲಹರಿ ವಿಭಿನ್ನವಾಗಿರುತ್ತದೆ. ಅಷ್ಟೇಕೆ ಇಬ್ಬರು ಒಟ್ಟಿಗೆ ವಾಯುವಿಹಾರಕ್ಕೆ ಹೊರಟರೆ ಯಾವುದೋ ಒಂದು ವಿಷಯಕ್ಕೆ ಪ್ರಾರಂಭವಾದ ಒಂದು ವಾದ, ವಿವಾದ ತಾರಕಕ್ಕೇರಿ ಹೊಡೆದಾಟದವರೆಗೆ ಹೋಗುವುದನ್ನು ನಾವು ದಿನನಿತ್ಯ ನೋಡುತ್ತೇವೆ. ಇದು ಇಬ್ಬರ ನಡುವೆ ಇರುವ ಭಿನ್ನರುಚಿ ಅಥವಾ ಯೋಚನಾಲಹರಿಯ ಪರಿಣಾಮ.
ಭಿನ್ನರುಚಿಯ ಬಗ್ಗೆ ಸ್ಪಷ್ಟತೆ ಬೇಕಾದರೆ ಒಂದು ಚಿಕ್ಕ ಉದಾಹರಣೆಯೊಂದಿಗೆ ವಿವರಿಸಬಹುದು. ಒಂದು ಸಣ್ಣ ತೋಟದಲ್ಲಿ ತರತರಹದ ಹೂವು ಬಿಟ್ಟಿದೆ ಎಂದರೆ ಅದರ ಬಗೆಗಿನ ವಿವಿಧ ಜನರ ಅಭಿಪ್ರಾಯ ಸಂಗ್ರಹ ಬಹಳ ರೋಚಕವಾದದ್ದು.ತೋಟದ ಮಾಲೀಕ ಚಿಂತಿಸುತ್ತಾನೆ, ಬಹಳ ಸಂತೋಷಪಟ್ಟು ನನ್ನ ಶ್ರಮಕ್ಕೆ ದೇವರು ತಕ್ಕ ಪ್ರತಿಫಲ ನೀಡಿದ್ದಾನೆ ಎನ್ನುತ್ತಾನೆ. ಅದೇ ದಾರಿಯಲ್ಲಿ ಸಾಗುವ ಓರ್ವ ಸುಂದರ ಯುವತಿ ತನ್ನ ಮುಡಿಗೆ ಏರಿಸಿದರೆ ಸುಂದರವಾಗಿ ಕಾಣುವ ಕನಸು ಕಾಣುತ್ತಾಳೆ. ವರ್ತಕ ಅದನ್ನು ನೋಡಿ ಅದರ ಬೆಲೆ ನಿಗದಿಸಿ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆಯ ಕನಸು ಕಾಣುತ್ತಾನೆ. ಅದೇ ಕವಿ ಹೂವುಗಳನ್ನು ನೋಡಿ ತನ್ಮಯನಾಗಿ ಒಂದು ಕವಿತೆಯನ್ನೇ ಬರೆಯುತ್ತಾನೆ. ಹೂ ಮಾರುವ ಹೆಣ್ಣುಮಗಳು ಪೋಣಿಸಿ ಮಾರಿದರೆ ತನ್ನ ಆದಾಯ ಹಾಗೂ ಲಾಭ ದ್ವಿಗುಣವಾಗುವುದರಲ್ಲಿ ಯಾವ ಸಂಶಯವೂ ಇಲ್ಲ ಎಂಬ ಕನಸು ಕಾಣುತ್ತಾಳೆ. ಓರ್ವ ಪ್ರೇಮಿಯಂತೂ ಅದನ್ನು ತನ್ನ ಪ್ರೇಯಸಿಗೆ ನೀಡಿದರೆ ಆಗುವ ಆನಂದದಲ್ಲಿ ಕನಸು ಕಾಣುತ್ತಾನೆ. ಅದೇ ಓರ್ವ ಪ್ರಕೃತಿ ಪ್ರೇಮಿ ಹಾಗೂ ಪರಿಸರವಾದಿ ಹೂವಿನ ಸುಂದರವನ್ನು ಆಸ್ವಾದಿಸಿ ಪರಿಸರದ ಉಳಿವಿಗೆ ಶ್ರಮಿಸಿದ ಮಾಲೀಕನನ್ನು ಮನಸಾರೆ ಶ್ಲಾಘಿಸುವನು.
ದೇವಾಲಯದ ಅರ್ಚಕನಂತೂ ಈ ಹೂವು ದೇವರ ಮೇಲಿಟ್ಟರೆ ಎಷ್ಟು ಸುಂದರವಾಗಿ ಕಾಣಬಹುದು ಎಂಬ ಕನಸು ಕಾಣುತ್ತಾನೆ. ಊರಿನ ರಾಜನಿದ್ದರೆ ಅರಮನೆಯ ಸಿಂಗಾರಕ್ಕೆ ಹೂವು ಬಲುಚೆನ್ನ ಎಂದು ಯೋಚಿಸುತ್ತಾನೆ. ಇನ್ನು ಸನ್ಯಾಸಿಯಾದರೋ ನಿರ್ವಕಾರ ಭಾವನೆಯಿಂದ ಪುಷ್ಪವನ್ನು ನೋಡಿ ಮುಂದೆ ಸಾಗುತ್ತಾನೆ. ಹೀಗೆ ಹೂವಿನ ಆಯಸ್ಸು ಕೇವಲ ಒಂದು ದಿನವಾದರೂ ಅದರ ಬಗೆಗಿನ ಯೋಚನಾ ಲಹರಿಗಳು ಹಲವಾರು. ಇದನ್ನೇ ಲೋಕೋಭಿನ್ನರುಚಿಃ ಎನ್ನುವುದು.
ವಿಜ್ಞಾನಿಯ ಪುಷ್ಪಗಳ ಅವಲೋಕನ ನಿಜಕ್ಕೂ ಕೌತುಕಮಯ. ಅವನು ಎಸಳುಗಳ ವಿನ್ಯಾಸ, ಬಣ್ಣ, ಆಕಾರ, ಸಂಖ್ಯೆ ಎಲ್ಲವನ್ನು ಕೂಲಂಕುಶವಾಗಿ ಅಭ್ಯಸಿಸುತ್ತಾನೆ. ಜಗತ್ತಿನ ಅತ್ಯಂತ ಪ್ರಸಿದ್ಧ ಫಿಜೋನಸ್ಕಿ ಸರಣಿ ಇದಕ್ಕೆ ಅತ್ಯುತ್ತಮ ಉದಾಹರಣೆ. ಜಗತ್ತಿನ ಶೇಕಡ ೯೯ ಭಾಗ ವಿವಿಧ ಪುಷ್ಪಗಳ ವಿನ್ಯಾಸ ಈ ಸರಣಿಯನ್ನು ಅನುಸರಿಸಿವೆ ಎಂದರೆ ಆಶ್ಚರ್ಯವಲ್ಲವೇ? ಜೇನುಹುಳುಗಳು ಪುಷ್ಪಗಳಲ್ಲಿ ಮಕರಂದದ ಪರಿಮಾಣ ಹಾಗೂ ಅವುಗಳ ಗುಣಮಟ್ಟ ಪರಿಶೀಲಿಸಿ ಹೀರುತ್ತವೆ.ಪ್ರಪಂಚದ ವಿವಿಧ ಜನಗಳ, ಜನಾಂಗಗಳ ರುಚಿಗಳಿಗನುಗುಣವಾಗಿ ಬಟ್ಟೆ, ತಿಂಡಿತಿನಿಸುಗಳು ನೃತ್ಯ, ಮನರಂಜನೆ ಇತ್ಯಾದಿ ಎಲ್ಲವೂ ಭಿನ್ನ.
ಇನ್ನೂ ನಮ್ಮನ್ನೇ ಉದಾಹರಿಸಿದರೆ ನಮ್ಮ ಬಗ್ಗೆ ಉಳಿದವರ ಭಾವನೆ ನಿಜಕ್ಕೂ ಆಶ್ಚರ್ಯಕರ; ನಮ್ಮ ಬಗ್ಗೆ ಕೆಲವರು ಪ್ರೀತಿಯ ದ್ವೇಷದ, ತಾತ್ಸಾರ ಭಾವನೆ, ಅಹಂಕಾರಿ, ನಿರ್ವಿಕಾರ, ಕೋಪಿಷ್ಠ ಸರಳ ಹೀಗೆ ಅನೇಕ ಅಭಿಪ್ರಾಯ ಹೊಂದಿರುತ್ತಾರೆ. ಇದರಲ್ಲಿ ಯಾವ ತಪ್ಪೂ ಇಲ್ಲ. ಇದು ಅವರವರಿಗೆ ಸೇರಿದ ಭಾವನೆ ಅಷ್ಟೇ.
ಗಂಗಾವತಿ ಪ್ರಾಣೇಶ್‌ರವರ ದೃಷ್ಟಿಯಲ್ಲಿ ಕಲ್ಲಿನ ಬಗ್ಗೆ ಭಿನ್ನ ರುಚಿ ಸುಂದರವಾಗಿದೆ. ಅವರ ಮಾತಿನಲ್ಲೇ ಹೇಳುವುದಾದರೆ, ಹೆಚ್ಚು ಪೆಟ್ಟು ತಿಂದ ಕಲ್ಲುಗಳೇ ಮೂರ್ತಿಗಳಾಗುತ್ತವೆ. ಪೆಟ್ಟಿಗೆ ಅಂಜಿ ಉದ್ದಕ್ಕೆ ಮಲಗುವ ಕಲ್ಲುಗಳೇ ಪಾವಟಿಗೆ, ಮೆಟ್ಟಿಲುಗಳಾಗುತ್ತವೆ. ಆದರೆ ಇಂದು ಮೆಟ್ಟಿಲುಗಳಾಗುವ ಯೋಗ್ಯತೆ ಇಲ್ಲದವರಿಗೂ ಪೂಜೆ ನಡೆಯುತ್ತಿದೆ.’ ಕಲ್ಲಿನ ಬಗ್ಗೆ ಅವರ ಭಿನ್ನ ದೃಷ್ಟಿಕೋನ ನಿಜಕ್ಕೂ ಚರ್ಚೆಗೆ ಅರ್ಹ ಅಲ್ಲವೇ? ತ.ಸು. ಶಾಮರಾಯರಮೂರು ತಲೆಮಾರು’ ಪುಸ್ತಕದಲ್ಲಿ ಸಭೆ’ಯ ಬಗ್ಗೆ ಅವರ ದೃಷ್ಟಿಕೋನ ಬಿರುಸಾದರೂ ನಿಜಕ್ಕೂ ಕಹಿಸತ್ಯ. ಅವರ ಮಾತಿನಲ್ಲೇ ಹೇಳುವುದಾದರೆಸಭೆ ಎಂದರೆ ಒಂದು ಮಾನವ ಜೀವಿಗಳ ಮೂಸಿಯಂ. ಗಿಳಿಯಂತೆ ಮಾತನಾಡುವುದರಿಂದ ಹಿಡಿದು, ಹಾವಿನಂತೆ ಬುಸುಗುಟ್ಟುವವರು, ಕೋತಿಯಂತೆ ಚಂಚಲ ಮನಸ್ಸಿನವರು, ನರಿಯಂತೆ ಉಪಾಯಗಾರರು, ಹುಲಿಯಂತೆ ಆರ್ಭಟಿಸುವವರು ಇರುತ್ತಾರೆ. ಇಂಥಹ ಭಿನ್ನ ಸ್ವಭಾವದವರು ಏಕತ್ರಯವಾದಾಗ ತಿಕ್ಕಾಟ, ಗೊಣಗಾಟಗಳು ಸ್ವಾಭಾವಿಕದಷ್ಟೇ. ಇವರ ದೃಷ್ಟಿಕೋನ ಹಲವಾರು ಸಭೆ ಸಮಾರಂಭಗಳಲ್ಲಿ ನಾವು ನಿತ್ಯ ಅವಲೋಕಿಸುತ್ತೇವೆ ಅಲ್ಲವೇ? ಭಿನ್ನರುಚಿಯ ಯೋಜನಾಲಹರಿ ಸಾಹಿತಿಗಳಿಗೆ, ವ್ಯಾಖ್ಯಾನಕಾರರಿಗೆ ಪುರಾಣಕೋಶ ಅಭ್ಯಸಿಸಿದ ವಿದ್ವಾಂಸರುಗಳಿಗೆ ಹೊರತಲ್ಲ. ಒಂದು ಉತ್ತಮ ಉದಾಹರಣೆ ರಾಮಾಯಣ ಹಾಗೂ ಮಹಾಭಾರತದಲ್ಲಿ ಬರುವಗುಡಾಕೇಶ’ ಎಂಬ ಪದ. ಮಹಾಭಾರತದಲ್ಲಿ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹಲವಾರು ಬಾರಿ ಅರ್ಜುನನ್ನು ಸಂಬೋಧಿಸಿ ಗುಡಾಕೇಶಿ’ ಎನ್ನುತ್ತಾನೆ.ಗುಡಾಕ’ ಎಂದರೆ ಸಂಸ್ಕೃತದಲ್ಲಿ ನಿದ್ದೆ ಎಂದರ್ಥ. ಕೃಷ್ಣನ ಅಣತಿಯ ಮೇರೆಗೆ ಅರ್ಜುನ ಧರ್‍ಮರಕ್ಷಣೆಗಾಗಿ ನಿದ್ದೆಯನ್ನೂ ಮರೆತನಂತೆ. ಕೃಷ್ಣ ಆಗಾಗ್ಗೆ ನಿದ್ದೆ ಮಾಡಲು ಜ್ಞಾಪಿಸಿದರೂ ಅರ್ಜುನ ನೀನು ವಹಿಸಿದ ಧರ್‍ಮರಕ್ಷಣೆ ಕಾರ್‍ಯ ಮುಗಿಯುವವರೆಗೂ ನಿದ್ದೆ ಮಾಡೆನು ಎಂದನಂತೆ. ಹೀಗಾಗಿ ಅವನಿಗೆ ‘ಗುಡಾಕೇಶಿ’ ಎಂಬ ಹೆಸರು ಬಂತು. ಆದರೆ ಪುರಾಣಕೋಶದ ವ್ಯಾಖ್ಯಾನಕಾರರು ಹಾಗೂ ವಿದ್ವಾಂಸರು ಇದನ್ನು ಒಪ್ಪಲಿಲ್ಲ. ಅವರುಗುಡಾಕೇಶಿ’ ಎಂದರೆ ರಾಮಾಯಣದ ಲಕ್ಷ್ಮಣ ಎಂದು ವಾದಿಸುತ್ತಾರೆ. ಅವರ ವಾದಕ್ಕೆ ಸಾಕಷ್ಟು ಪುರಾವೆಯನ್ನು ನೀಡುತ್ತಾರೆ. ಲಕ್ಷ್ಮಣ, ರಾಮ ಸೀತೆಯೊಂದಿಗೆ ಹನ್ನೆರಡು ವರ್ಷ ವನವಾಸಕ್ಕೆ ಹೋದಾಗ ಅಣ್ಣ, ಅತ್ತಿಗೆಯ ರಕ್ಷಣೆ ಹೊತ್ತಿದ್ದ ಲಕ್ಷ್ಮಣ ಹನ್ನೆರಡು ವರ್ಷ ನಿದ್ದೆ ಮಾಡಲಿಲ್ಲ. ನಿದ್ರಾದೇವಿಯ ಉಪಾಸನೆಯಿಂದ ಅದನ್ನು ತನ್ನ ಪತ್ನಿ ಊರ್ಮಿಳಿಗೆ ಅದನ್ನೂ ವರ್ಗಾಯಿಸಿದ್ದ. ಅಲ್ಲದೆ ರಾಮ, ರಾವಣರ ಯುದ್ಧದ ಸಂದರ್ಭದಲ್ಲಿ ಇಂದ್ರಜಿತು ಒಂದು ವರವನ್ನು ಪಡೆದಿದ್ದ. ಯಾರು ಹನ್ನೆರಡು ವರ್ಷ ಬ್ರಹ್ಮಚರ್‍ಯೆಯನ್ನು ಪಾಲಿಸುವರೋ ಅಂಥವರಿಂದ ತನಗೆ ಮರಣ ಬರಲಿ ಎಂದು. ಹಾಗೇ ಲಕ್ಷ್ಮಣನಿಂದ ಹತನಾದ. ಇದರಿಂದ ವಿದ್ವಾಂಸರು, ವ್ಯಾಖ್ಯಾನಕಾರರು ಲಕ್ಷ್ಮಣನೇಗುಡಾಕೇಶಿ’ ಎಂದು ವಾದಿಸುತ್ತಾರೆ. ಒಟ್ಟಿನಲ್ಲಿ ಇದು ನಿಲ್ಲದ ವಾದವಾಗಿದೆ.
ಹೀಗೆ ಲೋಕೋ ಭಿನ್ನರುಚಿ ನಿಜಕ್ಕೂ ಒಂದು ಆಸಕ್ತಿದಾಯಕ ಚರ್ಚಾವಸ್ತು ಅಲ್ಲವೇ? ನೀವೇನಂತೀರಿ?
-ಕೆ. ರಮೇಶ್
ನಿಮ್ಮ…ಲೋಕೋ ಭಿನ್ನ ರುಚಿ…ಎನ್ನುವ ಲೇಖನ ಕ್ಕೆ ನಾವು ಹೇಳುವುದಿಷ್ಟೇ…ಉತ್ತಮ ಮಾಹಿತಿಯನ್ನು ಒಳಗೊಂಡಿದೆ ಸಾರ್ ……ಎಂದು…
ಧನ್ಯವಾದಗಳು ಮೇಡಂ
ಸುಂದರ ಲೇಖನ ಸರ್. ಅಭಿರುಚಿಗಳು, ಯೋಚನೆಗಳು ವಿಭಿನ್ನ ಅನ್ನುವುದನ್ನು ಸೊಗಸಾಗಿ ವಿವರಿಸಿದ್ದೀರಿ.
ಧನ್ಯವಾದಗಳು ಮೇಡಂ
ಪ್ರತಿಯೊಬ್ಬರ ಯೋಚನೆಗಳು, ಅಭಿರುಚಿಗಳು ವಿಭಿನ್ನವೇ ಹೌದು! ಕೌತುಕಮಯವಾದ ವಿಚಾರವನ್ನು ಹೊತ್ತ ಸೊಗಸಾದ ಲೇಖನ.
ಧನ್ಯವಾದಗಳು ಮೇಡಂ