ಶುಕೋದ್ಯಾನದಲ್ಲೊಂದು ಅಧ್ಯಯನ

Share Button

ಅದೊಂದು ಪವಿತ್ರವಾದ , ಆಕರ್ಷಣೀಯವಾದ ಸ್ಥಳ.  ವಿಶಾಲವಾದ ದ್ವಾರ. ದ್ವಾರದಲ್ಲಿ ಶಿಸ್ತು ಪಾಲಿಸಲು ವಿವರಿಸುವ ಸೆಕ್ಯೂರಿಟಿಗಳು ಪ್ರೀತಿಯಿಂದ ಗೈಡ್ ಮಾಡುವರು.  ಹೊರಗಿನಿಂದ ನೋಡಲು ದೇಗುಲದ ಛಾಯೆಹೊಂದಿರುವ ಈ ವನದಲ್ಲಿ ಒಳಹೊಕ್ಕರೆ ಎಡಕ್ಕೆ ತಿರುಗಿದರೆ ಶ್ರೀ ಅವಧೂತ ದತ್ತಪೀಠ, ಧ್ಯಾನಮಂದಿರ,ಯೋಗಮಂದಿರ, ಕಛೇರಿ ಹೀಗೆ ಸಿಮೆಂಟ್ ಕಟ್ಟಡಗಳು ಆಕರ್ಷಿಸುತ್ತವೆ.  ಬಲಕ್ಕೆ ತಿರುಗಿದರೆ ವಾಹನಗಳನ್ನು ನಿಲ್ಲಿಸಲು ವ್ಯವಸ್ಥೆ, ಹೀಗೆ…ಒಂದಲ್ಲಾ ಒಂದು ರೀತಿಯಿಂದ ಮೊಟ್ಟ ಮೊದಲೇ ಅನೇಕ ಶಿಸ್ತಿನ ಮೂಲಕ ಕಣ್ಮನ ಸೆಳೆಯುತ್ತದೆ.

ಹಾಗೆ ಹತ್ತು ಹೆಜ್ಜೆ ಮುನ್ನಡೆದರೆ ‘ಶುಕವನಕ್ಕೆ ದಾರಿ’ ಎಂಬ ಬಾಣದ ಗುರುತು ಕಂಡುಬರುತ್ತದೆ.  ಒಳಸರಿದರೆ ನನ್ನನ್ನು ಮಂತ್ರಮುಗ್ಧವಾಗಿಸಿದ್ದು ಅಲ್ಲಿನ ನಿಸರ್ಗ.  ಬಲಗಡೆ ತಿರುಗಿದರೆ ಎಲ್ಲರಿಗೂ ಕಾಣಸಿಗುವುದು ನಾವೇ ಪಂಚರಂಗಿ ಗಿಳಿಯಾಗುವ ಫೋಟೋ ಸ್ಥಳ.  ಅದೆಷ್ಟು ಅದ್ಭುತವಾಗಿ ಬಣ್ಣ ಬಣ್ಣದ ರೆಕ್ಕೆಯ ಎರಡು ಪ್ರತಿರೂಪಗಳನ್ನು ಅಲ್ಲಿ ಕಟ್ಟಿಸಿದ್ದಾರೆ. ಬರುವ ಯಾರೇ ಆಗಲಿ ಮೊದಲು ಅಲ್ಲಿ ಫೋಟೋ ತೆಗೆಯಿಸಿಕೊಂಡು ತಾವೇ ಶುಕವಾದಂತಹ ಅಥವಾ ಪಕ್ಷಿಯಾದಂತಹ ಅನುಭವವನ್ನು ಪಡೆಯದೆ ಮುಂದೆ ಹೋಗಲಾರರು.  ಆದರೆ ಫೋಟೋ ತೆಗಿಸಿಕೊಳ್ಳುವಾಗ ನೀವು ಯಾವ ಭಂಗಿಯಲ್ಲಿ ನಿಂತು ಫೋಟೋ ತೆಗೆಸಿಕೊಳ್ಳುವಿರಿ ಎಂಬುದು ಮುಖ್ಯ. ನಿಮ್ಮ ಬಟ್ಟೆಯೂ ಮುಖ್ಯ. ಮಂತ್ರದಂಡದ ದೇವತೆಯೂ ಆಗಬಹುದು, ಪಕ್ಷಿಯೂ ಆಗಬಹುದು.

ಹಾಗೆ ಮುಂದೆ ಹೋಗಿ ಒಳಸರಿದರೆ ಮತ್ತೊಂದು ಲೋಕವೇ ತೆರೆದುಕೊಳ್ಳುತ್ತದೆ.  ಆಕಾಶದೆತ್ತರಕ್ಕೆ ಬೆಳೆದ ಮರಗಳಿಗೆ ಬಳ್ಳಿಗಳನ್ನು ಹಬ್ಬಿಸಲಾಗಿದೆ.  ನೆಲದ ತುಂಬೆಲ್ಲಾ ಕೆಲವರು ಹುಲ್ಲು ಹಾಸುಗಳನ್ನು ಬೆಳೆದರೆ ಇಲ್ಲಿ ವೀಳ್ಯದೆಲೆಯ ಬಳ್ಳಿಯನ್ನು ನೆಲದ ತುಂಬಾ ಹರಡಿರುವಂತೆ ಬೆಳೆದಿದ್ದಾರೆ.  ನಡೆಯಲು ಮಾಡಿರುವ ಜಾಗದ ಹೊರತು ಮಧ್ಯೆ ಎಲ್ಲೂ ನಡೆಯುವಂತಿಲ್ಲ ಮತ್ತು  ಕೀಳುವಂತಿಲ್ಲಾ.
ಈ ದ್ವಾರದೊಳಗೆ ಹಾಗೆ ಮುನ್ನಡೆದರೆ ನಮಗೆ ಕಾಣಸಿಗುವುದು ವಾಲ್ಮೀಕಿ,ಬುದ್ದ, ಕೃಷ್ಣ, ಆಂಜನೇಯ,ಗಣಪತಿ ಹೀಗೆ ಹಲವಾರು ದೇವರ ವಿಗ್ರಹಗಳ ಪ್ರತಿಮೆಯನ್ನು ಸುತ್ತಲೂ ಇಡಲಾಗಿದೆ.  ಹಾಗೇ ಬಣ್ಣಬಣ್ಣದ ದೊಡ್ಡ ದೊಡ್ಡ ಗಿಳಿಗಳ ಗೊಂಬೆಗಳನ್ನು ಇಟ್ಟು ನೋಡುಗರಿಗೆ  ಮತ್ತು ಮಕ್ಕಳಿಗೆ ಸಂತಸದ ವಾತಾವರಣವನ್ನು ಮೂಡಿಸುತ್ತದೆ.  ಸಾಮಾನ್ಯವಾಗಿ ಮಕ್ಕಳು ತುಂಬಾ ಎಂಜಾಯ್ ಮಾಡುವಂತಹ ವಾತಾವರಣ ಇದಾಗಿದೆ.

ಅಲ್ಲಲ್ಲೇ ಕಲ್ಲಿನ ಮಂಟಪಗಳನ್ನು ಕಾಣಬಹುದು.  ಅದಕ್ಕೆ ವಿಶೇಷವಾಗಿ ಹಲವಾರು ಹೂವಿನ ಬಳ್ಳಿಗಳನ್ನು ಹಬ್ಬಿಸಲಾಗಿದೆ. ಅದು ಲತಾ ಮಂಟಪದ ರೀತಿ ಕಂಗೊಳಿಸುತ್ತದೆ.  ನಾವು ಶುಕಗಳನ್ನು ಕಾಣುವ ಮೊದಲು ಒಂದು ಸುಂದರ, ತನ್ಮಯತೆಯ ಪ್ರಕೃತಿತಾಣವನ್ನು ನೋಡಿದಂತಹ ಅನುಭವವನ್ನು ಕಟ್ಟಿ ಕೊಡುತ್ತದೆ. 

ಅಲ್ಲಿಂದ ಸ್ವಲ್ಪ ಮುಂದೆ ಹೋದರೆ ಗಿಳಿಗಳ ಶಬ್ಧ ನಮ್ಮನ್ನು ಸ್ವಾಗತಿಸುತ್ತದೆ.  ಸಾಮಾನ್ಯವಾಗಿ ನಾನು ನಮ್ಮಲ್ಲಿ ಕಂಡುಬರುವ ಪುಟ್ಟ ಪುಟ್ಟ ಹಸಿರು ಮತ್ತು ಪಂಚರಂಗಿ ಗಿಳಿಯನ್ನು ನೋಡಿದ್ದೆ. ಅವುಗಳ ಪುಟ್ಟ ಗಂಟಲ ಶಬ್ಧ ಒಂದು ರೀತಿಯ ಮುದಕೊಡುತ್ತಿತ್ತು.  ಆದರೆ ಇಲ್ಲಿ ಒಳಸರಿದಂತೆ ನನಗೆ ಕೇಳಿಸಿದ ಶಬ್ಧಕ್ಕೆ ಸ್ಥಬ್ದಳಾಗಿದ್ದೆ.  ಹಾಗೇ ಕತ್ತೆತ್ತಿ ನೋಡಿದರೆ ರಣಹದ್ದುಗಳ ಗಾತ್ರದ ಗಿಳಿಗಳು ಕಾಗೆಗಿಂತಲೂ ಕೆಟ್ಟ ಶಬ್ಧವನ್ನು ಮಾಡುತ್ತಿದ್ದವು.  ನನ್ನ ಕಲ್ಪನೆಯ ಮುದ್ದು ಮಾತಿನ ಅರಗಿಣಿಗೂ ದೊಡ್ಡಗಾತ್ರದ ಮರಗಿಣಿಗೂ ಬಹಳವೇ ವ್ಯತ್ಯಾಸ ಅನಿಸಿತು.

ನಾನು ಶುಕಗಳನ್ನು ವರ್ಣಿಸಿ, ವಿವರಿಸಿದರೆ ಚಂದವಲ್ಲ. ಹೋಗಿ ನೋಡಿಯೇ ಆನಂದಿಸಬೇಕು.  ನಾನು ಹತ್ತೋ ಇಪ್ಪತ್ತೋ ಇರುತ್ತದೆ ಅಂದುಕೊಂಡೆ. ಅಲ್ಲ. ಕಣ್ಣಿಗೆ ತೃಪ್ತಿ ಕೊಡುವಷ್ಟು ಶುಕಗಳು ಇವೆ. ಶುಕವೆಂದರೇನು..?, ಸಾಮಾನ್ಯವಾಗಿ ನಾವು ನೀವು ನೋಡುವಂತಹ ಶುಕವಲ್ಲ. ನಮ್ಮೊಳಗೇ ಇದ್ದು ಮುದ್ದು ಮುದ್ದು ಮಾತುಕಲಿಯುವ ಶುಕವೂ ಅಲ್ಲ.

ವಿಭಿನ್ನ ಗಾತ್ರದ,ಕಣ್ಣನ್ನು ಮುದಗೊಳಿಸುವ, ನೋಡಿದಷ್ಟೂ ಅದರ ಗರಿಗಳನ್ನು ನೇವರಿಸಲು ಆಸೆಯಾಗುವಂತಹ , ಅಲ್ಲದೇ ಅನೇಕ ಪಕ್ಷಿಗಳನ್ನು ನೆನಪಿಸುವ , ….ಅಂದರೆ, ನಾವು ಇಲ್ಲಿ ಕೋಗಿಲೆಯ ರೀತಿಯ,ಮರಕುಟಿಗದ ರೀತಿಯ, ತಲೆಯಲ್ಲಿ ಶಿಖೆಯನ್ನು ಹೊಂದಿರುವ ಅನೇಕ ರೀತಿಯ ಗಿಳಿಗಳನ್ನೂ, ವಿಭಿನ್ನ ಗಾತ್ರದ ಗಿಳಿಗಳನ್ನೂ, ಅನೇಕ ಕಲರ್ ಕಾಂಬಿನೇಷನ್ ಇರುವ ಸುಂದರವಾದ ಗಿಳಿಗಳನ್ನೂ, ಬೇರೆ ಬೇರೆ ದೇಶದ ಗಿಳಿಗಳನ್ನೂ ನೋಡಿ ಕಣ್ತುಂಬಿಸಿಕೊಳ್ಳಬಹುದು.

ಆದರೆ  ತುಂಬಾ ಹತ್ತಿರದಿಂದ ನೋಡಿ ಗಿಳಿಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಕಣ್ಣುಗಳನ್ನು ಕಿರಿದು ಮಾಡಿಯೇ ನೋಡಬೇಕು.  ಏಕೆಂದರೆ ಅವುಗಳನ್ನು ಸಣ್ಣ ಜಾಲರಿಯ ಮೂಲಕ ನೋಡಬೇಕು.  ಮಾತನಾಡಿಸುವ ನೆಪದಲ್ಲಿ ನಾವು ಕೈಗಳನ್ನು ಒಳತೂರಿಸುತ್ತೇವೆ, ಆಗ ಅವು ತಮ್ಮ ಬಲಿಷ್ಠ ಚುಂಚಿನಿಂದ ಕುಕ್ಕಬಹುದು ಎಂತಲೋ ಅಥವಾ ನಾವೂ ಕೂಡ ಮುಟ್ಟಿ ತೊಂದ್ರೆ ಕೊಡುವೆವು ಎಂತಲೋ ಸಣ್ಣ ಜಾಲರಿಯಪರದೆಯಿಂದಲೇ ನೋಡುವ ಭಾಗ್ಯ ನಮ್ಮದು.  ಪ್ರತೀ ಜೋಡಿಗಿಳಿಗಳಿಗೂ ದೊಡ್ಡ ಕೇಜ್ ಇಟ್ಟಿದ್ದಾರೆ. ಅವುಗಳಿಗೆ ಆಡಲು ಅಲ್ಲಲ್ಲೇ ದೊಡ್ಡ ರಿಂಗ್ ಗಳನ್ನು ಜೋತುಹಾಕಲಾಗಿದೆ.  ಕೆಲವುಕಡೆಗಳಲ್ಲಿ ಎಳನೀರನ್ನು ಬುರುಡೆಯ ಸಮೇತ ನೇತುಹಾಕಲಾಗಿದೆ.  ನಮಗೆಲ್ಲಿಯೂ ಆ ಶುಕಗಳ ಮಲಮೂತ್ರಗಳ,ಅಥವಾ ತಿಂದುಬಿಟ್ಟ ಪದಾರ್ಥಗಳ ಕೊಳೆತವಾಸನೆ ಬರುವುದಿಲ್ಲ.  ಅಷ್ಟರಮಟ್ಟಿಗೆ ಸ್ವಚ್ಛತೆ ಕಾಪಾಡಿದ್ದಾರೆ. 

ಮತ್ತೊಂದು ನನಗೆ ಅನುಭವಕ್ಕೆ ಬಂದದ್ದು ಇಲ್ಲಿ ಗಿಳಿಗಳು ಮೃದುವಾದ ಶಬ್ಧವನ್ನು ಮಾಡುವುದಿಲ್ಲ . ಬಹಳವೇ ಕರ್ಕಶವಾದ ಶಬ್ಧವನ್ನು ಮಾಡಿ ನಮ್ಮನ್ನು ಹೊರಗೆ ಅಟ್ಟಿ ಬಿಡುತ್ತವೆ.(ಇದು ನನ್ನ ಅನುಭವ ಅಷ್ಟೇ.) ಅದೊಂದು ಶಬ್ಧದ ಹೊರತಾಗಿ ಬಹಳವೇ ಸುಂದರವಾದ ಸ್ಥಳ. ಒಂದು ನಿಸರ್ಗದ ಮಧ್ಯದಲ್ಲಿನ ಆಶ್ರಮದ ಅನುಭವ ಬರುವುದರಲ್ಲಿ ಅನುಮಾನವಿಲ್ಲ. 

ಅಲ್ಲಿಂದ ಹಾಗೇ ಸುತ್ತುವರಿದರೆ ಸ್ವಚ್ಛಂದವಾಗಿ ಹಾರುವ ಗಿಳಿಗಳನ್ನು ಪಂಜರದಿಂದ ಹೊರಗೆ ನೋಡಬಹುದು.  ಅದು ಒಂದು ಪೋಟೋ ಸ್ಪಾಟ್.  ಜನರು ಬಹಳ ಹತ್ತಿರದಿಂದ ನೋಡುವ, ಮುಟ್ಟುವ, ಫೋಟೋ ತೆಗಿಸಿಕೊಳ್ಳುವ ವ್ಯವಸ್ಥೆ ಇದೆ. ಸ್ವಲ್ಪ ದುಡ್ಡು ಕೊಟ್ಟರೆ ಗಿಳಿಗಳನ್ನು ನಮ್ಮ ಹೆಗಲಮೇಲೆ, ಕೈಮೇಲೆ ಕೂರಿಸುತ್ತಾರೆ.  ಇದೊಂದು ಚಂದದ ಅನುಭವ. 

PC : Internet

ಶುಕದರ್ಶನ ಮುಗಿಸಿ ಹೊರಬಂದರೆ ಕೇವಲ ಇಪ್ಪತ್ತೈದು ರೂಪಾಯಿ ಕೊಟ್ಟು ಟಿಕೆಟ್ ತಗೊಂಡು ಒಳಗೆ ಹೋದರೆ ನಾನಾರೀತಿಯ ಕುಬ್ಜಗಿಡಗಳ ಸುಂದರ ಬೋನ್ಸಾಯ್ ಗಾರ್ಡನ್ ನಮ್ಮನ್ನು ಕೈಬೀಸಿ ಕರೆಯುತ್ತದೆ.  ಬಹಳವೇ ಅಚ್ಚುಕಟ್ಟಾದ ವ್ಯವಸ್ಥೆ, ಅಲಂಕಾರಿಕವಾಗಿ ಬೆಳೆಯಿಸಿದ ಬೋನ್ಸಾಯ್ ಗಿಡಗಳು ನಮ್ಮನ್ನು ಆಕರ್ಷಿಸದೇ ಇರವು.  ಎತ್ತರದ ಗಿಡಗಳ ನಡುವೆ ಈ ಗಿಡಗಳು ತಮ್ಮ ಇರುವಿಕೆಯನ್ನು ಬಲಪಡಿಸುತ್ತವೆ.  “ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು” ಎನ್ನುವ ಹಾಗೆ ಕುಬ್ಜದಿಂದೇ ಚಿಗುರೊಡೆದು ನಿಂತ ಗಿಡಗಳು ತನ್ನ ಮೂಲ ರೂಪವನ್ನು ಎಂದೂ ಬಿಡೆವು ಎಂಬರೀತಿ ಬೆಳೆದ ಅವುಗಳನ್ನು ನೋಡಿ ನಾವು ಕಲಿಯುವುದು ಬಹಳವೇ ಇದೆ.

ಮನೆಯಲ್ಲಿ ಬೋನ್ಸಾಯ್ ಗಿಡಗಳನ್ನು ಬೆಳೆಯುವ ಆಸಕ್ತರಿಗೆ ಇದು ಒಂದು ರೀತಿಯಲ್ಲಿ ಮಾರ್ಗದರ್ಶನ ಕೂಡಾ ಆಗಬಹುದು. ಅಲ್ಲಲ್ಲೇ ಲತಾ ಮಂಟಪಗಳು, ಸಾವಿರಾರು ಹೂದಾನಿಗಳು, ಔಷಧೀಯ ಸಸ್ಯಗಳು, ಹಸಿರೆಲೆಯ ಮಂಟಪ, ಪಗೋಡಗಳು ಹೀಗೆ ಅನೇಕ ರೀತಿಯಿಂದ ಕಂಗೊಳಿಸುವಂತೆ ಬೋನ್ಸಾಯ್ ಗಾರ್ಡನ್ ನ್ನು ನಿರ್ಮಿಸಿದ್ದಾರೆ. ಒಮ್ಮೆ ನೀವು ಭೇಟಿ ಕೊಡಲೇಬೇಕಾದ ಸ್ಥಳವಿದು.

ಶುಕವನವನ್ನೆಲ್ಲಾ ಸುತ್ತಿ ಹೊರ ಬಂದರೆ ನಮಗೆ ಕಾಣಸಿಗುವುದು ಒಂದು ಅದ್ಭುತವಾದ ದೇವಾಲಯ. ಇದರ ಬಗ್ಗೆ ಮುಂದೆ ತಿಳಿಯೋಣ.

ಅಂದಹಾಗೆ ಇಷ್ಟು ಹೊತ್ತು ಹೇಳಿದ ಶುಕವನದ ಮಾಹಿತಿ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ , ಮೈಸೂರು.

-ಸಿ ಎನ್ ಭಾಗ್ಯಲಕ್ಷ್ಮಿ ನಾರಾಯಣ

11 Responses

  1. ಶುಕೋದ್ಯಾಯನ..ಮಾಹಿತಿಯನ್ನು ಒಳಗೊಂಡ ಲೇಖನ..
    ಚೆನ್ನಾಗಿದೆ ಸೋದರಿ ಲಕ್ಷ್ಮಿ

  2. ನಯನ ಬಜಕೂಡ್ಲು says:

    Nice

  3. Maltesh Hubli says:

    ಸವಿಸ್ತಾರ ಲೇಖನ

  4. Anonymous says:

    ಧನ್ಯವಾದಗಳು ಪ್ರಕಟಣೆಗಾಗಿ

  5. ಶುಕವನದ ಮಾಹಿತಿಯನ್ನು ವಿಸ್ತಾರವಾಗಿ ನೀಡಿದ್ದಕ್ಕೆ ವಂದನೆಗಳು
    ಈಗ ನಾವು ಭೇಟಿ ನೀಡಲೇ ಬೇಕೆಂಬ ಆಸೆ ಉಂಟಾಗುವಂತಿದೆ ಲೇಖನ ಇದೆ

  6. ಶಂಕರಿ ಶರ್ಮ says:

    ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಶುಕವನ ಹಾಗೂ ಕುಬ್ಜ ಗಿಡಗಳ ಉದ್ಯಾನದ ವರ್ಣನೆಯು ಹಲವಾರು ವರ್ಷಗಳ ಹಿಂದೆ ಇವುಗಳನ್ನೆಲ್ಲಾ ನೋಡಿದ ನೆನಪು ಮರುಕಳಿಸುವಂತೆ ಮಾಡಿತು.

  7. Krishnaprabha M says:

    ಶುಕವನದ ಬಗ್ಗೆ ಸವಿವರ ಮಾಹಿತಿ ನೀಡಿರುವಿರಿ

  8. Padmini Hegde says:

    ಬರವಣಿಗೆ, ವಿಷಯ ನಿರೂಪಣೆ ಚೆನ್ನಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: