‘ಮಳೆಗಾಲ’ದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ
ನಿಮಗೆ ಬೇಸಿಗೆಕಾಲ….., ಮಳೆಗಾಲ….., ಚಳಿಗಾಲ….., ಈ ಮೂರರಲ್ಲಿ ಯಾವ ಕಾಲವನ್ನು ಆಯ್ಕೆ ಮಾಡಿಕೊಳ್ಳುತ್ತೀರಿ? ಎಂಬ ಪ್ರಶ್ನೆಗೆ ಹೆಚ್ಚಾಗಿ ಸ್ಪಂದಿಸುವವರೇ ಮಳೆಗಾಲವನ್ನು! ಏಕೆಂದರೆ ಈ “ಮಳೆಗಾಲ” ಎಂದರೆ ಮೈ-ಮನಗಳಿಗೆಲ್ಲ ರೋಮಾಂಚನ…..!, ಏನೋ ಒಂದು ರೀತಿಯ ಖುಷಿ….. ಮಕ್ಕಳಿಂದ ಹಿಡಿದು, ದೊಡ್ಡವರ ವರೆಗೆ ಮಳೆ ಬೀಳುವಾಗ ವರ್ಣಿಸಲದಳ ಅನುಭವ ನೀಡುತ್ತದೆ!.
ಈ “ಪ್ರಕೃತಿ” ಒಂದು ರೀತಿ ನವ ವಧುವಿನಂತೆ ಸಿಂಗಾರಗೊಂಡಿರುತ್ತದೆ….. ಮೋಡ ಕವಿದ, ಹಿತಕರವಾದ ವಾತಾವರಣ….. ದೂರದಲ್ಲಿ ಎಲ್ಲೋ ಕಾಮನಬಿಲ್ಲು ಕಾಣಿಸುತ್ತದೆ…. ಒಮ್ಮೊಮ್ಮೆ ತುಂತುರು ಮಳೆ….. ಒಮ್ಮೊಮ್ಮೆ ಜಡಿ ಮಳೆ…. ಹೀಗೆ ಮಳೆಯ ವೈಭವ ಆಕಾಶ- ಮುಗಿಲನ್ನು ಒಂದು ಮಾಡುತ್ತದೆ!ಚಲನಚಿತ್ರಗಳಲ್ಲಿರುವ ಅನೇಕ ಮಳೆಯ ಹಾಡುಗಳು ಒಮ್ಮೆಲೆ ನೆನಪಾಗುತ್ತವೆ!. ಜೊತೆಗೆ ನಾವು ಬಾಲ್ಯದಲ್ಲಿ ಇದ್ದಾಗ ಮಳೆ ಜೊತೆ ಆಟವಾಡಿದ ಪರಿಯು ನೆನಪಾಗುತ್ತದೆ! ಇನ್ನೇನು ಹಬ್ಬಗಳು ಸಾಲು ಸಾಲಾಗಿ ಬರುತ್ತದೆ. ಹರ್ಷವನ್ನು ಹೆಚ್ಚಿಸುತ್ತದೆ.
ಹಿತಕರವಾದ ಮಳೆಯೊಂದಿಗೆ….. ನಾವು ದನ ಕರುಗಳನ್ನು ಹೊಲ-ಗದ್ದೆಗಳಿಗೆ ಮೇಯಿಸಲು ಹೋದಾಗ…….. ಮಳೆ ಬಂದಾಗ ಮಳೆ ರಕ್ಷಣೆಗೆ ಗೊರಗು, ಗೋಣಿಚೀಲ, ಪ್ಲಾಸ್ಟಿಕ್ ಚೀಲ, ಛತ್ರಿ, ಎಲ್ಲಾ ಪರಿಕರಗಳೂ ಇದ್ದರೂ ನೆನೆದುಕೊಂಡೇ ಮನೆಗೆ ಸೇರುತ್ತಿದ್ದೆವು. ಜೊತೆಗೆ ದೊಡ್ಡವರ ಹತ್ತಿರ ಬೈಸಿಕೊಳ್ಳುತ್ತಿದ್ದೆವು. ಇದು ಮಾಮೂಲು ಆಗಿತ್ತು. ಮಳೆಯ ಭಾವಗೀತೆಗಳು, ಜಾನಪದ ಗೀತೆಗಳು, ಕೂಡ ಮೈಮನಗಳಿಗೆ ಪುಳಕ ನೀಡುತ್ತದೆ. ಕವಿ ಮನಸ್ಸುಗಳು ಮಳೆಯ ಬಗ್ಗೆ ರಸ ಕಾವ್ಯವನ್ನೇ ಬರೆದುಬಿಡುತ್ತಾರೆ!. ಪ್ರೇಮಿಗಳ ಪಾಲಿಗೆ ಮಳೆಗಾಲ ಬಲು ಹಿತಕರವಾಗಿರುತ್ತದೆ!
ರಾಜ್ಯಾದ್ಯಂತ ಈಗ ಮುಂಗಾರು ಮಳೆ ಚುರುಕುಗೊಂಡಿದೆ. ಮಳೆಯಿಂದ ಆತಂಕಗೊಂಡಿದ್ದ ನಮ್ಮ ರೈತ ನೆಮ್ಮದಿಯಾಗಿ ನಿಟ್ಟುಸಿರು ಬಿಟ್ಟಿದ್ದಾನೆ. ಏಕೆಂದರೆ ಇದೇ ಸಮಯದಲ್ಲಿ ಕಳೆದ ವರ್ಷ ಹೆಚ್ಚು ಮಳೆಯಾಗಿ ಎಲ್ಲಾ ನದಿಗಳು ತುಂಬಿ ಹರಿಯುತ್ತಿದ್ದವು. ಆದರೆ ಈಗ ಸ್ವಲ್ಪ ತಡವಾಗಿ ಮಳೆರಾಯನ ಆಗಮನ….. ಹಲವು ಕಡೆ ಭೂಮಿಗೆ ಅಮೃತ ಸಿಂಚನ ಮೂಡಿಸಿದಂತಾಗಿದೆ. ಇದು ಒಂದೆಡೆಯಾದರೆ, ಮತ್ತೊಂದೆಡೆ ಪ್ರವಾಹದಿಂದ ಹಲವರ ಜೀವನ ತತ್ತರಿಸಿದೆ. ನಗುನಗುತಾ ನಲಿ ನಲಿ…… ಏನೇ ಆಗಲಿ… ಏರುಪೇರಿನ ಜೀವನ….. ಎಂಬ ಹಾಡು ನೆನಪಾಗುತ್ತದೆ
ಸಹಜ ಮಳೆ ಹೆಚ್ಚಳದಿಂದಾಗಿ ನದಿಗಳಿಗೆ ಹರಿದು ಬರುವ ನೀರಿನ ಮಟ್ಟವು ಕೂಡ ತೀರ್ವ ರೀತಿಯಲ್ಲಿ ಹೆಚ್ಚಾಗಿರುವುದರಿಂದ ಪ್ರವಾಹದ ರೂಪದಲ್ಲಿ ನದಿಗಳಿಗೆ ನೀರನ್ನು ಬಿಡುವುದು ಅನಿವಾರ್ಯವಾಗಿದೆ. ನದಿಗೆ ನೀರನ್ನು ಬಿಡಲೇಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ನೀರಾವರಿ ಇಲಾಖೆಯವರು ಮುಂಚಿತವಾಗಿ ನದಿಗೆ ನೀರು ಬಿಡುವಾಗ ಮಾಧ್ಯಮಗಳಲ್ಲಿ ಅಂದರೆ ಆಕಾಶವಾಣಿಯಲ್ಲಿ…. ಪತ್ರಿಕೆಗಳಲ್ಲಿ….. ದೂರದರ್ಶನಗಳಲ್ಲಿ… ಮುನ್ನೆಚ್ಚರಿಕೆ ಮಾಹಿತಿಯನ್ನು ನೀಡುತ್ತಾರೆ. ಆದರೂ ಕೂಡ ಅನಕ್ಷರಸ್ಥ ಅಕ್ಕ ಪಕ್ಕ ದ ಗ್ರಾಮಸ್ಥರು, ರೈತರು ನದಿಗೆ ನೀರು ಬಿಟ್ಟಿರುವುದನ್ನು ಗಮನಿಸದೆ ತಮ್ಮ ಹೊಲ-ಗದ್ದೆಗಳಿಗೆ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಅನೇಕ ದುರಂತಗಳನ್ನು ಕೂಡ ಎದುರಿಸುತ್ತಾರೆ.
ತಮ್ಮ ಊರಿನ ಅಕ್ಕಪಕ್ಕ ಹರಿಯುವ ನದಿಗಳಲ್ಲಿ ನೀರು ಹರಿಯುವುದನ್ನು ನೋಡಲೆಂದೇ ಹೋಗುತ್ತಾರೆ ಅಂತಹ ಸಂದರ್ಭದಲ್ಲಿ ತಮ್ಮ ಚೇಷ್ಟೆಗಳನ್ನು ಪ್ರಾರಂಭಿಸುತ್ತಾರೆ. ನೀರಿನ ಹತ್ತಿರಕ್ಕೆ ಹೋಗುವುದು ಸೆಲ್ಫಿ ತೆಗೆದುಕೊಳ್ಳುವುದು. … ಸೇತುವೆ ಮೇಲೆ ನೀರು ಹರಿಯುತ್ತಿದ್ದಾಗ ಯಾರು ಇಲ್ಲದ ಸಮಯದಲ್ಲಿ ಅಂತಹ ನೀರಿನ ಮೂಲಕ ಹಾಯ್ದುಕೊಂಡು ಹೋಗುವುದು….. ವಾಹನ ಚಲನೆ ಮಾಡುವುದು …. ಈಜು ಹೊಡೆಯುವುದು….. ಜೊತೆಗೆ ತಮ್ಮ ಸ್ನೇಹಿತರೊಟ್ಟಿಗೆ ನೀರಿನಲ್ಲಿ ಆಟವಾಡುವುದು. … ಇದರಿಂದಾಗಿ ಈಗಾಗಲೇ ಅನೇಕ ದುರಂತಗಳು ಸಂಭವಿಸಿವೆ. ಅವು ಪುನರಾವರ್ತನೆಯಾಗದಂತೆ ನಮ್ಮ ದೊಡ್ಡವರು, ಯುವಜನತೆ ಅಕ್ಕಪಕ್ಕದ ರೈತರು, ಗ್ರಾಮಸ್ಥರು ಎಚ್ಚರಿಕೆವಹಿಸಿ, ಸದಾ ಮುನ್ನೆಚ್ಚರಿಕೆಯಿಂದ ಇರಲೇಬೇಕು. ಬೆಂಕಿಯೊಂದಿಗೆ, ನೀರಿನೊಂದಿಗೆ ಯಾವಾಗಲೂ ನಾವು ಸರಸವಾಡಬಾರದು. ಅದರಿಂದ ಯಾವತ್ತಿದ್ದರೂ ದುರಂತ ಕಟ್ಟಿಟ್ಟ ಬುತ್ತಿ.
ನಮ್ಮ ಕಾಳಿಹುಂಡಿ ಗ್ರಾಮದ ಪಕ್ಕದಲ್ಲಿಯೇ ಕಪಿಲ ನದಿ ಹರಿಯುತ್ತದೆ. ಬೀಚನಹಳ್ಳಿ ಡ್ಯಾಮ್ ನಿಂದ ಅತಿ ಹೆಚ್ಚು ನೀರನ್ನು ಬಿಟ್ಟಾಗ ನದಿಯಲ್ಲಿ ಆ ಜಲಧಾರೆಯನ್ನು ನೋಡಲು ಎರಡು ಕಣ್ಣು ಸಾಲದು. ಇದೇ ರೀತಿ ರಾಜ್ಯದ ಇನ್ನಿತರ ಜಲಾಶಯಗಳು ತುಂಬಿ ಹರಿಯುತ್ತಿವೆ. ನದಿಯ ಎರಡು ಪಾತ್ರಗಳಲ್ಲೂ ಎಲ್ಲಿ ನೋಡಿದರೂ ನೀರೇ ನೀರು.ಕೇರಳ, ಕೊಡಗು ಇನ್ನಿತರ ಪ್ರದೇಶಗಳಲ್ಲಿ ಈಗ ಹೆಚ್ಚು ಮಳೆ ಆಗುತ್ತಿರುವುದರಿಂದ ಜಲಾಶಯ ಆಗಲೇ ಬರ್ತೀಯಾಗಿದೆ.ಜೊತೆಗೆ ಕಪಿಲಾ ನದಿಯ ವಿಶೇಷತೆ ಎಂದರೆ (ಕಬಿನಿ ಜಲಾಶಯ) ರಾಜ್ಯದಲ್ಲಿ ಮೊದಲು ತುಂಬುತ್ತದೆ. ಈ ಮೂಲಕ ಕಪಿಲಾ ನದಿಯು ಟಿ ನರಸೀಪುರದಲ್ಲಿ ಕಾವೇರಿ ನದಿಯೊಂದಿಗೆ ಸೇರಿ ತನ್ನ ವೇಗವನ್ನು ಹೆಚ್ಚಿಸಿಕೊಳ್ಳುತ್ತದೆ.
ಮಳೆಗಾಲ ಬಿಟ್ಟು ಬೇರೆ ಕಾಲದಲ್ಲಿ ನಾವು ನದಿಯನ್ನು ಹಾಯ್ದುಕೊಂಡು ನಮ್ಮ ಊರಿನಿಂದ ಆ ಕಡೆ ಇದ್ದ ಗದ್ದೆಗೆ ಹೋಗುತ್ತಿದ್ದ ನೆನಪು, ನದಿಯಲ್ಲಿ ನಮಗೆ ಇಷ್ಟ ಬಂದಂತೆ ಸ್ನಾನ ಮಾಡುವ, ನದಿ ಮಧ್ಯದಲ್ಲಿದ್ದ ಅಪಾರ ಮರುಳು ರಾಶಿಯಲ್ಲಿ ನಾವು ಕುಣಿದಿದ್ದೇ ಕುಣಿದಿದ್ದು…. ಇವೆಲ್ಲಾ ಮನದಲ್ಲಿ ಮೂಡುತ್ತದೆ!
ಮಳೆಗಾಲದ ಸಂದರ್ಭದಲ್ಲಿ ನಾವು ಎಷ್ಟು ಮುನ್ನೆಚ್ಚರಿಕೆ ವಹಿಸಿದರೂ ಸಾಲದಾಗಿದೆ. ನಾನು ಮೊದಲೇ ಹೇಳಿದಂತೆ ಊರಿನ ಅಕ್ಕಪಕ್ಕ ಹರಿಯುವ ನದಿಯ ಎರಡು ಪಾತ್ರಗಳಲ್ಲೂ… ನಮ್ಮ ಜೊತೆ ಜಾನುವಾರುಗಳನ್ನೂ ಕೂಡಾ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಇಂತಹ ಸಮಯದಲ್ಲಿ ಅನೇಕ ಗ್ರಾಮಸ್ಥರು ನದಿಯಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಈಜಿ ಸಾಹಸ ಪ್ರದರ್ಶನ ಮಾಡುತ್ತಾರೆ. ಇದು ಸಲ್ಲದು ಜೊತೆಗೆ ಸೇತುವೆ ಮುಳುಗಿದ ಮೇಲು ಕೂಡ ಅದರಲ್ಲಿ ಹೋಗುವ ಪ್ರಯತ್ನ ಮಾಡುತ್ತಾರೆ. ಸೇತುವೆಯ ಎರಡು ಕಡೆ ನೀರು ಕೊಲ್ಲಿಗಳ ಮೂಲಕ ಗ್ರಾಮವನ್ನು ಕೂಡ ಪ್ರವೇಶಿಸಬಹುದು. ತಗ್ಗು ಪ್ರದೇಶಗಳಲ್ಲಿರುವ ಮನೆಗಳು, ಜಮೀನುಗಳಲ್ಲಿ ಕೆಲಸ ಮಾಡುವ ಗ್ರಾಮಸ್ಥರು ಮಳೆಗಾಲದ ವರೆಗೆ ರಾತ್ರಿ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ನಮ್ಮ ಯುವಜನತೆ ಸೆಲ್ಫಿ ಹುಚ್ಚಿನಿಂದಾಗಿ ನದಿಗಳ ನೀರಿನ ಆಸು ಪಾಸು ಡ್ಯಾಮ್ಗಳಲ್ಲಿ…. ಸೇತುವೆಯ ಅಕ್ಕಪಕ್ಕ….. ಅಪಾಯಕಾರಿ ಸ್ಥಳದಲ್ಲಿ…. ಫೋಟೋ ತೆಗೆದುಕೊಳ್ಳಲು ಹೋಗಿ ಏಷ್ಟೋ ದುರಂತಗಳು ಸಂಭವಿಸಿವೆ.
ಇನ್ನೂ ಈ ಮಳೆಗಾಲದ ಸಂದರ್ಭದಲ್ಲಿ ಮಿಂಚು ಗುಡುಗು ಸಮೇತ ಮಳೆ ಬರುವಾಗ……. ನಾವು ರಸ್ತೆಯಲ್ಲಿ ವಾಹನ ಚಾಲನೆ ಮಾಡುವಾಗ….. ಅನೇಕ ಬೃಹತ್ ಮರಗಳು ಬೀಳಬಹುದು. ಜೊತೆಗೆ ಮಿಂಚು ಕೂಡ ಸಂಭವಿಸಬಹುದು. ವಿದ್ಯುತ್ ತಂತಿಗಳು ಮರದ ಮೂಲಕ ಶಾಕ್ ನೀಡಬಹುದು. ಇದರ ಬಗ್ಗೆ ನಿಗಾ ಇಡಬೇಕು. ಜೊತೆಗೆ ನಗರ ಪ್ರದೇಶಗಳಲ್ಲಿ ಚರಂಡಿಯ ಮೂಲಕ ಮಳೆಯ ನೀರು ರಸ್ತೆಯ ಮೇಲೆಲ್ಲಾ ಹರಿಯುವುದರಿಂದ ಅಲ್ಲಿ, ಎಲ್ಲಿ ಮ್ಯಾನ್ ಹೋಲ್ ಅಥವಾ ಇನ್ನಿತರ ಗುಂಡಿಗಳು ಇರುತ್ತವೆ ಎನ್ನುವುದು ಗೊತ್ತಾಗುವುದಿಲ್ಲ. ಮುಖ್ಯವಾಗಿ ದ್ವಿಚಕ್ರ ಸವಾರದಾರರು ಎಚ್ಚರ ವಹಿಸಬೇಕು.
ಮಳೆ ಹೆಚ್ಚಾಗಿ ಬರುವುದರಿಂದ ಹಲವು ರಸ್ತೆಗಳಿಗೆ ಹೊಂದಿಕೊಂಡಂತೆ ಇರುವ ಗುಡ್ಡಗಳು ಕೂಡ ಕುಸಿಯಬಹುದು….. ಬೃಹತ್ ಮರಗಳು ನೆಲಕ್ಕುರುಳಬಹುದು. ವಾಹನ ಸವಾರದಾರರು ಮಳೆಗೆ ಸಂಪೂರ್ಣ ರಕ್ಷಣಾ ಸಾಮಗ್ರಿಗಳನ್ನು ತಮ್ಮ ಜೊತೆಯಲ್ಲಿ ಇಟ್ಟುಕೊಳ್ಳಬೇಕು.
ಈ ಮಳೆಗಾಲದ ಸಮಯದಲ್ಲಿ ನಾವು ಪ್ರವಾಸ ಮಾಡುವುದನ್ನು ಕಡ್ಡಾಯವಾಗಿ ನಿಲ್ಲಿಸೋಣ. ಒಂದು ವೇಳೆ ಹೋದರೆ ಪ್ರವಾಸದಲ್ಲಿ ಬಹಳ ನಾವು ಎಚ್ಚರಿಕೆಯಿಂದ ಕಾರ್ಯಕ್ರಮಗಳನ್ನು ಆಯೋಜಿಸಿ, ನೀರಿನ ಸ್ಥಳ ಇನ್ನಿತರ ಕಡೆ ಎಚ್ಚರಿಕೆ ವಹಿಸಬೇಕು. ತಂದೆ -ತಾಯಿಗಳಲ್ಲಿ ಒಂದು ಮನವಿ ಎಂದರೆ……. ಈ ಸಮಯದಲ್ಲಿ ಮಕ್ಕಳಿಗೆ ರಜೆ ಕೂಡ ಇರುವುದರಿಂದ ಜೊತೆಗೆ ಶನಿವಾರ ಭಾನುವಾರದಂದು ತಮ್ಮ ಸ್ನೇಹಿತರ ಜೊತೆ ಪ್ರವಾಸದ ನೆಪದಲ್ಲಿ ಅಪಾಯಕಾರಿ ಸ್ಥಳಗಳಿಗೆ ಹೋಗಿ ದುರಂತ ಸಂಭವಿಸಿರುವ ಅನೇಕ ಉದಾಹರಣೆಗಳು ಈಗಾಗಲೇ ನಡೆದಿವೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಮಕ್ಕಳ ಜೊತೆಯಲ್ಲಿ ಪೋಷಕರು ಇದ್ದರೆ ಒಳ್ಳೆಯದು. ಪ್ರಕೃತಿಯ ಆ ನೀರಿನ ಸೌಂದರ್ಯವನ್ನು ನಾವು ದೂರದಿಂದಲೇ ನೋಡಿ ಸಂಭ್ರಮಿಸೋಣ.
ಇನ್ನೊಂದು ಅತಿ ಮುಖ್ಯ ವಿಷಯವೆಂದರೆ ಮಳೆ ಬಂದಾಗ ಮಿಂಚು ಗುಡುಗು ಹೆಚ್ಚಾದಾಗ ವಿದ್ಯುತ್ ಕಂಬಗಳ ತಂತಿಗಳು ನೆಲಕ್ಕೆ ಬಿದ್ದಿರುತ್ತವೆ. ಇಂತಹ ಸಮಯದಲ್ಲಿ ಜಾನುವಾರುಗಳು, ನಾವುಗಳು ಎಚ್ಚರಿಕೆ ವಹಿಸಬೇಕು. ವಿದ್ಯುತ್ ಪ್ರವಹಿಸಿ ಜೀವಕ್ಕೆ ಹಾಗುವ ಅನಾಹುತವನ್ನು ತಪ್ಪಿಸೋಣ.
ಹಲವು ಕಡೆ ನಾಲೆಗಳು ಒಡೆಯುವ ಸಂದರ್ಭವೂ ಕೂಡ ಒದಗಬಹುದು. ಜೊತೆಗೆ ಹಂಚಿನ ಮನೆಗಳು, ಮಣ್ಣಿನ ಮನೆಗಳು ಕುಸಿಯಬಹುದು. ಮನೆಯೊಳಗೆ ನೀರು ಪ್ರವೇಶಿಸಿದಂತೆ ಎಚ್ಚರವಹಿಸಬೇಕು. ಕಾಡಂಚಿನ ಗ್ರಾಮಗಳಲ್ಲಿ….. ಗುಡ್ಡಗಾಡಿನ ಪ್ರದೇಶದಲ್ಲಿ….. ಅಥವಾ ಹಳ್ಳಿಗಳಲ್ಲಿ ಶಾಲಾ ಮಕ್ಕಳು ಒಂದು ಕಡೆಯಿಂದ ಮತ್ತೊಂದು ಊರಿನ ಶಾಲೆಗೆ ಹೋಗುವಾಗ ಅವರು ಮಳೆಯಲಿ ನೆನೆಯದಂತೆ ನೋಡಿಕೊಳ್ಳಬೇಕು.ಈ ಮಳೆಗಾಲದ ವಾತಾವರಣದಲ್ಲಿ ಅನೇಕ ರೋಗರುಜಿನೆಗಳೂ ಬರುತ್ತವೆ. ನೀರು ಕೂಡ ಕಲುಷಿತ ವಾಗಿರುತ್ತದೆ. ನೀರನ್ನು ಕುಡಿಯುವಾಗ ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು.
ಈಗ ಪರಿಸ್ಥಿತಿ ಹೇಗಾಗಿದೆ ಎಂದರೆ……. ಮಳೆ ಬಂದರೂ ಕಷ್ಟ! ಬರದಿದ್ದರೂ ಕಷ್ಟ!!. ಎರಡೂ ಸಮ ಪ್ರಮಾಣದಲ್ಲಿ ಬರಬೇಕು. ಬರದಿದ್ದರೆ ಬರ, ಬಂದರೆ ಪ್ರವಾಹ ಕೂಡ ನಾವು ಎದುರಿಸಬೇಕು. ಆದರೆ ನಾವು ಅಂತಹ ಸಂದರ್ಭದಲ್ಲಿ ನಾವು ಏನೆಲ್ಲಾ ಮುನ್ನೆಚ್ಚರಿಕೆ ಕ್ರಮ ವಹಿಸುತ್ತೇವೆ ಅದು ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ತಾಲೂಕಿನ ಆಡಳಿತ….. ಜಿಲ್ಲಾಡಳಿತ…… ಸದಾ ಎಚ್ಚರಿಕೆಯ ಸಂದೇಶವನ್ನು ಜೊತೆಗೆ ಸಂತ್ರಸ್ತರಿಗೆ ಪರಿಹಾರವನ್ನು ಕೂಡ ನೀಡಲು ತಯಾರಾಗಿದೆ.
ಈ ಸುಂದರ ಪ್ರಕೃತಿ ತನ್ನ ದಿನಚರಿಯನ್ನು ಚಾಚು ತಪ್ಪದೇ ವರ್ಷಪೂರ್ತಿ ನಡೆಸುತ್ತಲೇ ಬರುತ್ತದೆ. ಆದರೆ ಮಾನವನ ಅತಿಬುದ್ದಿವಂತಿಕೆಯಿಂದಾಗಿ ಪ್ರಕೃತಿ ಈಗ ಹೆಚ್ಚಾಗಿ ಮುನಿಸಿಕೊಂಡಿದೆ!. ಅದರಿಂದಾಗಿ ಮಳೆ ಬರುವ ಕಾಲದಲ್ಲಿ ಬಿಸಿಲು….. ಬಿಸಿಲಿದ್ದಕಾಲದಲ್ಲಿ ಮಳೆ…… ಚಳಿಯಲ್ಲಿ ವ್ಯತ್ಯಾಸ. ಇಡೀ ವಾತಾವರಣವೇ ವ್ಯತ್ಯಾಸವಾಗಿದೆ.ಇದರಿಂದಾಗಿ ರೈತರು ಬೆಳೆಯುವ ಬೆಳೆಗಳ ಮೇಲು ಕೂಡ ತೀರುವ ಪರಿಣಾಮ ಬೀರಿ, ಆರ್ಥಿಕತೆಯ ನಷ್ಟ ಉಂಟು ಮಾಡುತ್ತಿದೆ. ಅದರಿಂದಾಗಿ ರೈತರು ಕೂಡ ಬದಲಿ ವ್ಯವಸ್ಥೆಗಳನ್ನು ಈ ನಿಟ್ಟಿನಲ್ಲಿ ಕೈಗೊಳ್ಳಬೇಕು.
ಆದುದರಿಂದ ಮತ್ತೊಮ್ಮೆ ಎಲ್ಲರಲ್ಲೂ ಮನವಿ ಎಂದರೆ……… ಈ ಮಳೆಗಾಲದ ಸಂದರ್ಭದಲ್ಲಿ ನಾವು ಅಕ್ಕಪಕ್ಕದವರನ್ನು ಕೂಡ ಜಾಗೃತಗೊಳಿಸಿ, ನಮ್ಮೊಂದಿಗೆ ಜಾನುವಾರುಗಳ ಬಗ್ಗೆಯೂ ಕೂಡ ಗಮನ ಹರಿಸಿ ಈ ಮಳೆಗಾಲದ ವಾತಾವರಣವನ್ನು ಅನುಭವಿಸೋಣ.
-ಕಾಳಿಹುಂಡಿ ಶಿವಕುಮಾರ್ ಮೈಸೂರು.
ಮಾಹಿತಿಯನ್ನು ಒಳಗೊಂಡ ಲೇಖನ ..ಚೆನ್ನಾಗಿ ಬಂದಿದೆ ಸಾರ್ ಧನ್ಯವಾದಗಳು.
ಸಹಜ. ಮಳೆಗಾಲ, ಅದರ ಸಹಜ ವರ್ಣನೆ, ಸಹಜ ಮುನ್ನೆಚ್ಚರಿಕೆಯ ಕಳಕಳಿ! ಚೆನ್ನಾಗಿದೆ!
Very nice
ಮಳೆಗಾಲವನ್ನು ಆನಂದದಿಂದ ಅನುಭವಿಸುವುದರ ಜೊತೆಗೇ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳ ಬಗ್ಗೆ ಕಳಕಳಿಯ ಲೇಖನ ಸಕಾಲಿಕವಾಗಿದೆ.
ಮಳೆಗಾಲ ಕುರಿತ ಲೇಖನ ಸಮಯೋಚಿತವಾಗಿ ಮೂಡಿ ಬಂದಿದೆ.