ಜ್ಞಾನದ ಮುಳ್ಳು !
ಸಂಪಾದನೆ ಎಂದ ಕೂಡಲೇ ನೆನಪಾಗುವುದು ದುಡ್ಡು, ಆಸ್ತಿ, ಸಂಪತ್ತು! ಇದೆಲ್ಲ ಬದುಕಲು ಬೇಕು ನಿಜ. ಲೌಕಿಕ ಅಗತ್ಯಗಳು. ಶಿವ ಕೊಟ್ಟ ಜೋಳಿಗೆ ಎಂದು ನೇತು ಹಾಕಿದರೆ ಹೊಟ್ಟೆ ತುಂಬುವುದಿಲ್ಲ! ನಾಲ್ಕಾರು ಮನೆಗೆ ಅಲೆದು ಭಿಕ್ಷೆ ಕೇಳಬೇಕು. ಕೊಟ್ಟರೆ ಉಂಟು; ಇಲ್ಲದಿದ್ದರೆ ಇಲ್ಲ. ಸಂಪಾದನೆ ಮಾಡೋ ಗಂಡಸು ಅಂತ ಹಿಂದಿನ ಕಾಲದಲ್ಲಿ ತುಂಬಾನೇ ಗೌರವ ಮತ್ತು ಮನ್ನಣೆಗಳು ಸಿಗುತ್ತಿದ್ದವು. ಅಷ್ಟೇ ಏಕೆ? ಸಂಪಾದನೆ ಮಾಡಿ ಹೆಂಡತಿ ಮಕ್ಕಳನ್ನು ಸಾಕುವ ಹೊಣೆಯರಿತವನೇ ನಿಜವಾದ ಗಂಡಸು ಅಂತಾನೂ ತಿಳಿದಿದ್ದರು. ‘ಉದ್ಯೋಗಂ ಪುರುಷ ಲಕ್ಷಣಂ’ಅನ್ನೋ ಸೂಕ್ತಿ ಸಂಸ್ಕೃತದಲ್ಲಿ ಇತ್ತಲ್ಲ; ಅದು ನೆನಪಾಗುವುದು. ನಾವೀಗ ಅದನ್ನು ಬದಲಿಸಿ, ‘ಉದ್ಯೋಗಂ ಮಾನುಷ ಲಕ್ಷಣಂ’ ಎನ್ನಬೇಕು. ಏಕೆಂದರೆ ಉದ್ಯೋಗವು ಕೇವಲ ಪುರುಷರ ಸ್ವತ್ತಲ್ಲ. ಮಹಿಳೆಯೂ ದುಡಿಯುತ್ತಾಳೆ. ಆ ಕಾಲದಿಂದಲೂ ಆಕೆ ಮನೆಯ ಒಳಗೆ ಮತ್ತು ಹೊರಗೆ ದುಡಿದವಳೇ! ಅವಳ ದುಡಿಮೆಗೆ ಬೆಲೆ ಕಟ್ಟಿ ಸಂಬಳ ಅಂತ ಕೊಡುತ್ತಿರಲಿಲ್ಲ. ಇಷ್ಟಕೂ ಆಕೆಯ ದುಡಿಮೆ ಬೆಲೆ ಕಟ್ಟಲಾಗದ್ದು. ಹಾಗಾಗಿ ಅದು ಅಮೂಲ್ಯ.
ಉದ್ಯೋಗದ ಅರ್ಥ ಮತ್ತು ಸ್ವರೂಪಗಳೇ ಬದಲಾಗಿರುವ ಈ ಆಧುನಿಕ ನಾಗರಿಕ ಜಗತ್ತಿನ ಮೊದಲ ಲಕ್ಷಣ: ಸಮಾನತೆ. ಎಲ್ಲ ಬಗೆಯ ತರತಮಗಳನ್ನು ಕೈ ಬಿಟ್ಟು, ಸಮ ಸಮಾಜವನ್ನು ನಿರ್ಮಿಸುವುದರತ್ತ ಹೊರಟಿದ್ದೇವೆ. ಈ ನಿಟ್ಟಿನಲ್ಲಿ ಮಹಿಳೆಯೂ ವಿದ್ಯಾವಂತಳಾಗಿ ಉದ್ಯೋಗಸ್ಥಳಾಗಿ ಆರ್ಥಿಕ ಸ್ವಾವಲಂಬಿಯಾಗಿದ್ದಾಳೆ. ಹೀಗಾಗಿ ಸಂಪಾದನೆ ಎಂಬುದರ ಪರಿಕಲ್ಪನೆ ಬದಲಾಗಿದೆ. ಹಣ ಸಂಪಾದನೆ ಲೌಕಿಕ ಜಗತ್ತಿನ ಅನಿವಾರ್ಯವೂ ಆಗಿದೆ. ಸಂಪಾದಿಸುತ್ತಿರುವ ತನಕ ಮನೆಯಲ್ಲಿ ಗೌರವ, ಸಂಬಂಧಿಕರಲ್ಲಿ ಮರ್ಯಾದೆ, ಸ್ನೇಹಿತರ ವಲಯದಲ್ಲಿ ಘನತೆ, ದೇಶದ ದೃಷ್ಟಿಯಲ್ಲಿ ಹೆಮ್ಮೆಯ ತೆರಿಗೆದಾರ. ಸಂಪಾದನೆ ನಿಂತು ಇನ್ನೊಬ್ಬರ ಆಶ್ರಯದಲ್ಲಿ ಬೀಳಬೇಕಾಗಿ ಬಂದರೆ ಅದೊಂದು ದುರ್ದೆಸೆ. ಕ್ರಮೇಣ ಅಂಥವರಿಗೆ ಸಮಾಜದಲ್ಲಿ ಮನ್ನಣೆ ಸಿಗದು. ಅನ್ನಕ್ಕೆ ದಂಡ; ಭೂಮಿಗೆ ಭಾರ ಎಂಬಂತೆ. ಏಕೆಂದರೆ ಹಣ ಸಂಪಾದನೆಯ ಮೇಲೆಯೇ ನಮ್ಮ ಸಮಾಜವು ವ್ಯಕ್ತಿಯ ಔನ್ನತ್ಯವನ್ನು ಅಳೆಯುವುದು!
ಹಿಂದೊಂದು ಕಾಲವಿತ್ತು: ಎಷ್ಟು ಸಂಪಾದಿಸಿದರು? ಎಂಬುದಕಿಂತ ಹೇಗೆ ಸಂಪಾದಿಸಿದರು? ಎಂಬುದು ಅಳತೆಗೋಲಾಗಿತ್ತು. ಅಧರ್ಮದಿಂದ, ಅನೀತಿ ಅಕ್ರಮಗಳಿಂದ ಸಂಪಾದಿಸಿದವರನ್ನು ಸಮಾಜವು ಕೀಳಾಗಿ ನೋಡುತ್ತಿತ್ತು. ಅಂಥವರ ದಾನ ಧರ್ಮಗಳನ್ನು ತೆಗಳುತ್ತಿತ್ತು. ‘ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲ್ವುದೇ ಅಯ್ಯ?’ ಎಂದು ಬಸವಣ್ಣನವರೇ ತಮ್ಮೊಂದು ವಚನದಲ್ಲಿ ಕೇಳಿದ್ದಾರೆ. ‘ನಾಯ ಹಾಲು ನಾಯಂಗಲ್ಲದೇ ಪಂಚಾಮೃತಕ್ಕೆ ಸಲ್ವುದೇ?’ ಎಂದುಪಮಿಸಿ ಪಾಪಿಯ ಸಂಪಾದನೆಯನ್ನು ನಿರಾಕರಿಸುತ್ತಾರೆ.
ಈಗ ಕಾಲ ಬದಲಾಗಿದೆ ಅಂದರೆ ಮೌಲ್ಯಪಲ್ಲಟಗೊಂಡಿದೆ. ನಾವೆಲ್ಲ ನೋಡ ನೋಡುತ್ತಾ ಮೌಲ್ಯಗಳು ಧೂಳೀಪಟಗೊಂಡು, ಅದರ ಜಾಗದಲ್ಲಿ ದೌಷ್ಟ್ಯ ಮತ್ತು ಕ್ರೌರ್ಯಗಳು ತಾಂಡವವಾಡುತ್ತಿವೆ. ಪ್ರಾಮಾಣಿಕವಾಗಿ ಸಂಪಾದಿಸಿದ್ದಕ್ಕೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದೇ ಹೋಗಿದೆ. ಪ್ರಾಮಾಣಿಕತೆಯು ಈಗ ಒಂದು ಮೌಲ್ಯವಾಗಿ ಉಳಿದಿಲ್ಲ ಅಂದರೆ ಮೌಲ್ಯವನ್ನಾಗಿ ಪರಿಗಣಿಸುತ್ತಿಲ್ಲ. ಅಂಥವರನ್ನು ಕೈಲಾಗದವರು ಎಂತಲೋ ದಡ್ಡರು ಎಂತಲೋ ದುಡ್ಡು ಮಾಡಲು ಬರದ ಮೂರ್ಖರು ಎಂತಲೋ ಜರಿದು ದೂರವಿಡುತ್ತಾರೆ.
ಈಗ ಎಲ್ಲವೂ ಸ್ಮಾರ್ಟ್ ಕಾಲ. ಯಾರಿಗೂ ಸಿಕ್ಕಿ ಹಾಕಿಕೊಳ್ಳದ ಹಾಗೆ ವ್ಯವಸ್ಥಿತವಾಗಿ ಮೋಸ ಮತ್ತು ವಂಚನೆಗಳನ್ನು ಮಾಡುವುದು ಹೇಗೆ? ಎಂಬುದನ್ನು ಪರ್ಸನಾಲಿಟಿ ಡೆವಲಪ್‌ಮೆಂಟ್‌ನಂಥ ಕೋರ್ಸುಗಳಲ್ಲಿ ಕಲಿಸುವ ಜಗತ್ತಿನಲ್ಲಿ ಜೀವಿಸಿದ್ದೇವೆ. ನಮ್ಮ ಆಧುನಿಕ ವಿದ್ಯಾಭ್ಯಾಸದಲ್ಲಿ ತೆರಿಗೆ ತಪ್ಪಿಸುವುದು, ಕಾನೂನನ್ನು ವಿಭಿನ್ನವಾಗಿ ಅರ್ಥೈಸಿ, ಅಪರಾಧಿಗಳನ್ನು ಗೆಲ್ಲಿಸುವುದು, ಹ್ಯಾಕಿಂಗನ್ನು ನೈತಿಕಗೊಳಿಸುವುದು ಬುದ್ಧಿವಂತಿಕೆಯ ಲಕ್ಷಣಗಳಾಗಿವೆ. ಎಷ್ಟು ಚೆನ್ನಾಗಿ ಸುಳುಹು ಸಿಗದ ಹಾಗೆ ಕದಿಯುವುದು ಪ್ರತಿಭೆಯ ಪಾಠವಾಗಿ ಹೋಗಿದೆ. ಕಪ್ಪುಹಣವನ್ನು ಬಿಳಿ ಮಾಡಿಕೊಳ್ಳಲು ನೂರಾರು ಕಸರತ್ತುಗಳನ್ನು ಮಾಡುವ ಆಟಗಳುಂಟು. ಇದನ್ನು
ಇನ್‌ವೆಸ್ಟ್‌ಮೆಂಟ್ ಎಂತಲೋ ಆರ್ಥಿಕ ಚಕ್ರ ಮುಂದುವರಿಯಲು ಬೇಕಾದ ಕೀಲೆಣ್ಣೆ ಎಂತಲೋ ಷೇರುಪೇಟೆಯ ಜಾಣತನ ಎಂತಲೋ ಹತ್ತಾರು ಕೋಟಿ ಬಂಡವಾಳ ಹಾಕಿ ಸಿನಿಮ ತೆಗೆದು ನೂರಾರು ಕೋಟಿ ಲಾಭವಾಯಿತು ಎಂದು ತೋರುವ ಮಾಯ್ಕಟ್ಟು, ಕಣ್ಕಟ್ಟು ವಿದ್ಯೆಗಳಿವೆ. ಯಾವುದೇ ಸೈಟು, ಮನೆ, ಕಾರ್ಖಾನೆ ಮುಂತಾದ ಸ್ಥಿರಾಸ್ತಿಗಳನ್ನು ಹೊಂದುವಾಗ ಸರ್ಕಾರ ನಿಗದಿ ಮಾಡಿದ ಮೌಲ್ಯವೊಂದುಂಟು; ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಮೌಲ್ಯವೊಂದುಂಟು! ಮಾರುಕಟ್ಟೆಯ ಮೌಲ್ಯ ಯಾವತ್ತೂ ಸರ್ಕಾರ ನಿಗದಿ ಮಾಡಿರುವ ಕನಿಷ್ಠ ದರಕ್ಕಿಂತ ಹೆಚ್ಚೇ ಇರುತ್ತದೆ. ನೋಂದಣಿ ಮಾಡಿಸುವಾಗ ಇದನ್ನು ಸರಿದೂಗಿಸಲು ಬಿಳಿ ಕಪ್ಪಾಗುತ್ತದೆ; ಕಪ್ಪು ಬಿಳಿಯಾಗುತ್ತದೆ. ತೆರಿಗೆ ವಂಚನೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಇಂಥ ಕಡೆ ಸಂಗ್ರಹವಾಗುವ ಕಪ್ಪುಹಣವನ್ನು ವಿನಿಯೋಗಿಸಲು ಮತ್ತೆ ಅಂಥದೇ ಸರ್ಕಸ್ಸು ನಡೆಯತೊಡಗುತ್ತದೆ. ಇದೆಲ್ಲ ಜನಸಾಮಾನ್ಯರಿಗೂ ಅರ್ಥವಾಗಿ ಸುಮ್ಮನಾಗಿರುವ ಸ್ಥಿತಿ ಮತ್ತು ಸಹಜವಾಗಿ ಸ್ವೀಕರಿಸಿ ಬಿಟ್ಟಿರುವ ಸುಡು ವಾಸ್ತವ ಸತ್ಯಗಳು. ಎಲ್ಲವೂ ಗೊತ್ತಿದ್ದು ಏನೂ ಮಾಡಲಾಗದ ಅಸಹಾಯ ಶೂರರೇ ಎಲ್ಲರೂ ಆಗಿದ್ದಾರೆ. ದುಡ್ಡಿದೆ, ಸಂಪತ್ತಿದೆ ಎಂದರೆ ಅಂಥವರಿಗೆ ಈಗ ಮನ್ನಣೆ; ಹೇಗೆ ಬಂತು? ಏನು ಮಾಡಿದರು? ಎಂಬುದು ಗೌಣ.
ಸಂಪಾದನೆ ಹೆಚ್ಚಾದರೂ ಅದೊಂದು ಶ್ರೀಮಂತರ ಕಾಯಿಲೆಯಾಗಿ ನೆಮ್ಮದಿ ಹಾಳಾಗುತ್ತದೆ; ಸ್ವರ್ಗವೆಂದುಕೊಂಡದ್ದು ನರಕವಾಗಿರುತ್ತದೆ. ಇರುವ ಸಂಪತನ್ನು ಕಾಪಾಡಿಕೊಳ್ಳುವ ಉಮೇದು ಹೆಚ್ಚಾಗುತ್ತದೆ. ಉಳಿಸಿಕೊಳ್ಳಲು ನಾನಾ ವಿಧದಲ್ಲಿ ಪ್ರಯತ್ನಿಸುವಾಗ ಹಲವು ರೀತಿಯ ಅವಕಾಶದ ಬಾಗಿಲುಗಳು ತೆರೆದುಕೊಳ್ಳುತ್ತವೆ. ಅದರೊಳಗೆ ಹೊಕ್ಕು ಮತ್ತೂ ನಿದ್ದೆಗೆಡುವಂತಾಗುತ್ತದೆ. ಇದನ್ನೇ ವಚನಕಾರರು ಬಡತನಕೆ ಉಂಬುವ ಚಿಂತೆ; ಉಂಬುವುದಾದರೆ ಉಡುವ ಚಿಂತೆ; ಉಡಲಾದರೆ ತೊಡುವ ಚಿಂತೆ……ಎಂದು ಅರ್ಥಗರ್ಭಿತವಾಗಿ ವ್ಯಾಖ್ಯಾನಿಸಿದ್ದಾರೆ. ‘ಆಸೆಗೆ ಸತ್ತುದು ಕೋಟಿ; ಆಮಿಷಕ್ಕೆ ಸತ್ತುದು ಕೋಟಿ; ಹೆಣ್ಣು ಹೊನ್ನು ಮಣ್ಣಿಂಗೆ ಸತ್ತುದು ಕೋಟಿ; ಗುಹೇಶ್ವರಾ, ನಿಮಗಾಗಿ ಸತ್ತವರನಾರನೂ ಕಾಣೆ’ ಎಂದಿದ್ದಾರೆ ಅಲ್ಲಮಪ್ರಭುಗಳು.
ಇಡೀ ಲೋಕವೇ ಹಣದ ಬೆನ್ನು ಹತ್ತಿ ಓಡಿ ಓಡಿ ಸುಸ್ತಾಗುತ್ತಿದೆ. ಚೆನ್ನಾಗಿ ಬದುಕಲು ಹಣ ಬೇಕು. ಮೋಜು ಮಸ್ತಿ ಮಾಡಲು ಹಣ ಬೇಕು. ವಿದೇಶಕ್ಕೆ ಹೋಗಿ ಬರಲು ಹಣ ಬೇಕು. ಐಷಾರಾಮಿ ಜೀವನ ನಡೆಸಲು ಹಣ ಬೇಕು.ಹಣವೊಂದಿದ್ದರೆ ಸುಖ ಸೂರೆಗೊಳ್ಳುವುದು. ಸರಿಯೇ. ಇದು ಎಲ್ಲರೂ ಒಪ್ಪುವ ಮಾತು. ಆದರೆ ಹೀಗೆ ಅಕ್ರಮವೋ ಸಕ್ರಮವೋ ಸಂಪಾದನೆ ಮಾಡುತ್ತಲೇ ಇದ್ದರೆ ಕೊನೆಯಾಗುವುದು ಯಾವಾಗ? ಇದಕ್ಕೇನಾದರೂ ಎಂಡಿಂಗು ಅಂತ ಇದೆಯೇ? ಒಂದಷ್ಟು ಲಕ್ಷ, ಒಂದಷ್ಟು ಕೋಟಿ ಸಾಕು ಎಂದು ಮನಸಿಗೆ ಅನಿಸುತ್ತದೆಯೇ? ಎಷ್ಟಿದ್ದರೂ ಇನ್ನೂ ಬೇಕು ಎಂದು ಎನಿಸುವುದಿಲ್ಲವೆ? ನೆಮ್ಮದಿ ಕಳೆದುಕೊಂಡು ಸಂಪಾದಿಸುವುದಾದರೂ ಏತಕ್ಕೆ? ಅರುವತ್ತು, ಎಪ್ಪತ್ತು ವರ್ಷವಾದರೂ ಇನ್ನೂ ಬದುಕಿನ ಸಿದ್ಧತೆ ನಡೆಸುವವರಿದ್ದಾರೆ! ಜೀವನಪೂರ್ತ ಸಂಪಾದಿಸುತ್ತಲೇ ಶ್ರಮಿಸುತ್ತಲೇ ‘ಇನ್ಮೇಲೆ ಬದುಕೋಣ’ ಎಂದುಕೊಳ್ಳುತ್ತಲೇ ಸತ್ತವರಿದ್ದಾರೆ. ಅಂದರೆ ಎಷ್ಟು ಸಂಪಾದಿಸಿ, ಗುಡ್ಡೆ ಹಾಕಿದರೂ ಸಾಕು ಎಂದು ಅನಿಸುವುದೇ ಇಲ್ಲ! ಇದೊಂದು ಸಂಪತ್ತಿನ ಮಾಯೆ. ಅಂತಸ್ತಿಗೆ, ಪ್ರತಿಷ್ಠೆಗೆ ಮತ್ತು ಜಿದ್ದಿಗೆ ಬಿದ್ದು ಸಂಪಾದಿಸಿ ರಾಶಿ ಒಟ್ಟು ಮಾಡಿದ ಮೇಲೆ ಅದನ್ನು ಕಾಯುವ ಸರದಿ! ಇರುವುದನ್ನು ಕಾಪಾಡಿಕೊಳ್ಳುವ ಭರದಿ ನಿದ್ದೆ ಮತ್ತು ನೆಮ್ಮದಿಗೆಟ್ಟು ನಿರಾಳತೆ ಕಳೆದುಕೊಂಡು ಸದಾ ಆತಂಕದಲ್ಲೇ ಬದುಕುವುದಾದರೆ ಅದು ಸಂತಸದ ಮತ್ತು ಯಶಸ್ಸಿನ ಬದುಕು ಎಂದು ಹೇಳಬಹುದೇ? ‘ನರಿ ಸತ್ತು ಹೋಯ್ತು’ ಎಂಬ ಕವಿತೆಯಲಿ ಶಿಶುನಾಳ ಷರೀಫ ಸಾಹೇಬರು ‘ಜುಟ್ಟಾಗಬಾರದು ಹಣ ನಿನ್ನ ತಲೆಗೆ; ಮೆಟ್ಟಾಗಬೇಕು ಕಾಲಿನ ಕೆಳಗೆ’ ಎಂದು ಹಾಡಿದ್ದಾರೆ.
ಹಾಗಾಗಿ, ಸಂಪಾದನೆ ಎಂದರೆ ಹಣ ಮತ್ತು ಸಂಪತ್ತಿನದ್ದಲ್ಲ; ಜ್ಞಾನದ್ದು! ಜ್ಞಾನ ಸಂಪಾದನೆಯನ್ನು ನಮ್ಮ ಭರತಭೂಮಿ ಇನ್ನಿಲ್ಲದಂತೆ ವಿವರಿಸಿದೆ, ವ್ಯಾಖ್ಯಾನಿಸಿದೆ ಮತ್ತು ವಿಶ್ಲೇಷಿಸಿದೆ. ‘ಸತ್ಸಂಗತ್ವೇ ನಿಸ್ಸಂಗತ್ವಂ,ನಿಸ್ಸಂಗತ್ವೇ ನಿರ್ಮೋಹತ್ವಂ, ನಿರ್ಮೋಹತ್ವೇ ನಿಶ್ಚಲತತ್ತ್ವಂ, ನಿಶ್ಚಲತತ್ತ್ವೇ ಜೀವನುಕ್ತಿಃ’ ಎಂದಿದ್ದಾರೆ ಶಂಕರಾಚಾರ್ಯರು. ಸಜ್ಜನರ ಸಂಪರ್ಕದಲ್ಲಿದ್ದರೆ ಧನಾದಿ ವಿಷಯಗಳ ಚಿಂತೆ ತಪ್ಪುವುದು. ಸಂಪಾದನೆ ಎಂದರೆ ಕೇವಲ ಸಂಪತ್ತಿನ ಸಂಗ್ರಹವಲ್ಲ ಎಂಬುದು ಮನವರಿಕೆಯಾಗುವುದು. ಸಜ್ಜನರು ಎಂದರೆ ಜ್ಞಾನದ ನಿಜಸ್ವರೂಪ ಅರಿತವರು. ಹುಟ್ಟಿನಿಂದ ಅಲ್ಲ; ಗುಣದಿಂದ ಸಿರಿವಂತರಾದವರು. ಉಚ್ಚ ವರ್ಣ, ಜಾತಿ, ಕುಲಗಳಲ್ಲಿ ಹುಟ್ಟಿದವರಲ್ಲ; ಬೆಳೆಯುತ್ತ ಬೆಳೆಯುತ್ತ ವ್ಯಕ್ತಿತ್ವವನ್ನು ಹಸನು ಮಾಡಿಕೊಂಡವರು. ಉನ್ನತಾದರ್ಶ ವ್ಯಕ್ತಿತ್ವಗಳನ್ನು ಕಂಡು, ಕೇಳಿ, ಅರಿತು, ಅನುಕರಿಸಲು ಪ್ರಯತ್ನಿಸಿದವರು. ಹೀಗಾಗಿ ಸತ್ಸಂಗವೆಂಬುದು ಏಕಕಾಲಕ್ಕೆ ಸಂಸ್ಕೃತಿ ಪರಂಪರೆಗಳಿಂದ ಕಲಿಯಬೇಕಾದುದನ್ನು ಕಲಿತು ವಿನಯ ವಿವೇಕಗಳನ್ನು ಮೈಗೂಡಿಸಿಕೊಂಡ ಧಾರ್ಮಿಕ, ಆಧ್ಯಾತ್ಮಿಕ ಚಿಂತನಗಳಲ್ಲಿ ಮನ ನೆಟ್ಟವರು ಎಂದು ಅರ್ಥೈಸಬೇಕು. ಇವರಿಂದ ಲೌಕಿಕ ಸಂಪತ್ತಿನ ಚಿಂತೆ ಮಾಯವಾಗಿ, ಒಂದು ಬಗೆಯ ವೈರಾಗ್ಯ ಮೈಗೂಡುವುದು. ಸತ್ಸಂಗವು ನಿಸ್ಸಂಗವನ್ನು ಬೋಧಿಸುತ್ತದೆ. ನಿರ್ಮೋಹವನ್ನು ಕಲಿಸುತ್ತದೆ. ನಿರ್ಮೋಹವಿದ್ದೆಡೆ ನಿಶ್ಚಲತತ್ತ್ವ ನೆಲೆಗೊಳ್ಳುತ್ತದೆ. ಅಜ್ಞಾನದಿಂದಾದ ಮೋಹವು ಹೋದ ಮೇಲೆ ಅಲ್ಲಿ ಶಾಶ್ವತ ಸತ್ಯದ ಜ್ಞಾನ ಉದಯವಾಗುವುದು. ಇಂಥ ಜ್ಞಾನೋದಯವೇ ಜೀವನ್ಮುಕ್ತಿಗೆ ದಾರಿ. ಕೊಟ್ಟ ಕುದುರೆಯನೇರದೆ ಮತ್ತೊಂದು ಕುದುರೆಯ ಬಯಸುವವರೇ ತುಂಬಾ! ಭಗವಂತ ಕೊಟ್ಟಿದ್ದರಲ್ಲಿ ತೃಪ್ತಿ ಪಡದೇ ಹಪಹಪಿಸುವವರೇ ನಿಜವಾದ ಹುಂಬ!! ಎಲ್ಲರೂ ಬದುಕುತ್ತಾರೆ; ಹೇಗೋ ಕಟ್ಟಿಕೊಳ್ಳುತಾರೆ. ಅದಲ್ಲ ಜೀವನ! ತಮ್ಮಿಷ್ಟದಂತೆ ರೂಪಿಸಿಕೊಳ್ಳುವುದು ಜೀವನದ ನಿಜವಾದ ಅರ್ಥ.
ಇದನ್ನೇ ರಾಮಕೃಷ್ಣ ಪರಮಹಂಸರು ‘ಬಂಧಿಸಲ್ಪಟ್ಟ ದೇವರೇ ಮನುಷ್ಯ, ಬಂಧನದಿಂದ ಬಿಡಿಸಿಕೊಂಡ ಮನುಷ್ಯನೇ ದೇವರು’ ಎಂದು ಸುಂದರವಾಗಿ ಹೇಳಿದ್ದಾರೆ. ಲೌಕಿಕ ಬಂಧನಗಳಿಂದ ಬಿಡುಗಡೆ ಹೊಂದುವುದನ್ನೇ ನಾವು ಜೀವನ್ಮುಕ್ತಿ ಎಂದು ತಿಳಿಯಬೇಕು. ಇದಕ್ಕಾಗಿ ಸಾಕ್ಷಿತ್ವವನ್ನು ಅಳವಡಿಸಿಕೊಳ್ಳಬೇಕು. ನನ್ನನೇ ನಾ ಗಮನಿಸುವ ನನ್ನೊಳಗಿನ ಅನ್ಯನನ್ನು ಗುರುತಿಸಿ, ಕೈ ಬಿಡುವ ಪರಿಪಾಠ ಸಾಗಬೇಕು. ಆಗ ಸಾಕ್ಷಿಪ್ರಜ್ಞೆಯು ವೈರಾಗ್ಯವನ್ನು ಅರ್ಥ ಮಾಡಿಸುತ್ತದೆ. ಪರಮಹಂಸರು ಇನ್ನೂ ಮುಂಬರಿದು ಹೇಳುತ್ತಾರೆ: ‘ಅಜ್ಞಾನವೆಂಬ ಮುಳ್ಳನ್ನು ಜ್ಞಾನವೆಂಬ ಮುಳ್ಳಿನಿಂದ ತೆಗೆಯಿರಿ. ಆನಂತರ ಅಜ್ಞಾನದ ಮುಳ್ಳಿನೊಡನೆ ಜ್ಞಾನದ ಮುಳ್ಳನ್ನೂ ಬಿಸಾಡಿರಿ!’ ಎಂಥ ಮಾತಿದು!! ವಿವೇಕ ಎಂಬುದೇನೆಂಬುದನು ಆ ಪದದ ಹಂಗಿಲ್ಲದೆ ಹೇಳುತ್ತದೆ. ಜೊತೆಗೆ ಜ್ಞಾನವೂ ಅಜ್ಞಾನದಷ್ಟೇ ಅಪಾಯಕಾರಿ ಎಂದೂ ಸಾರುತ್ತದೆ.
ಹಣವು ಅಹಂಕಾರವನ್ನು ತರುವಂತೆಯೇ ಜ್ಞಾನವೂ ದುರಭಿಮಾನ ತರುತ್ತದೆ. ತಾನೇ ಶ್ರೇಷ್ಠ ಎಂಬ ಮದವೇರಿ ಕಣ್ಣು ಕುರುಡಾಗುತ್ತದೆ. ಪುರಾಣ ಪುಣ್ಯಕತೆಗಳ ಉದ್ದಕೂ ಇಂಥ ಜ್ಞಾನಾಂಧಕಾರಿಗಳನ್ನು ಕಾಣುತ್ತೇವೆ. ಅವರ ಮೆರೆದಾಟಗಳು ಹೇಗೆ ಅಂತ್ಯಗೊಂಡವು? ಎಂಬುದೇ ಅವುಗಳ ಕಥಾಸಾರವಾಗಿದೆ. ಅಪರಿಮಿತ ಜ್ಞಾನ ಮತ್ತು ತಪಶ್ಶಕ್ತಿಗಳಿಂದ ಋಷಿಮುನಿಗಳಾದವರೇ ಮಾಡಿದ ಅನಾಹುತಗಳನ್ನು ಓದುತ್ತೇವೆ. ಜ್ಞಾನಿಗಳ ನಡುವಿನ ಸ್ಪರ್ಧೆ ಮತ್ತು ಪ್ರತಿಷ್ಠೆಗಳಿಂದಾಗಿ ಸಾಮಾನ್ಯರಿರಲಿ; ರಾಜ ಮಹಾರಾಜರೇ ನುಣ್ಣಗಾಗಿ ನಶಿಸಿ ಹೋಗುತ್ತಾರೆ. ವಸಿಷ್ಠ ಮತ್ತು ವಿಶ್ವಾಮಿತ್ರರ ವೈಯಕ್ತಿಕ ಜಗಳ ಮತ್ತು ಸವಾಲುಗಳನ್ನು ಕವಿ ಹರಿಶ್ಚಂದ್ರನು ‘ಕೋಣನೆರಡುಂ ಹೋರೆ ಗಿಡುವಿಂಗೆ ಮಿತ್ತು’ ಎಂದಿದ್ದಾನೆ. ಎರಡು ಕೋಣಗಳ ಗುದ್ದಾಟದಲ್ಲಿ ಗಿಡವೊಂದು ಸಾಯುವುದು ಎಂದಿದರ ಅರ್ಥ. ತಾನು ತಿಳಿದವನೆಂಬ ಅಹಮಿನಲಿ ಮೆರೆದವರೆಲ್ಲ ಏನಾದರು? ಉರಿದುರಿದು ಬೂದಿಯಾದರು ಅಷ್ಟೇ. ‘ನಾನು ನಾನೆಂಬ ಅಹಂಕಾರ ತಲೆದೋರಿದಲ್ಲಿ ಅಟಮಟ ಕುಟಿಲ ಕುಹಕವೆಂಬ ಬಿರುಗಾಳಿ ಹುಟ್ಟಿತ್ತು. ಆ ಬಿರುಗಾಳಿ ಹುಟ್ಟಲೊಡನೆ ಜ್ಞಾನಜ್ಯೋತಿ ಕೆಟ್ಟಿತ್ತು. ಆ ಜ್ಞಾನಜ್ಯೋತಿ ಕೆಡಲೊಡನೆ ನಾ ಬಲ್ಲೆ ಬಲ್ಲಿದರೆಂಬ ಅರುಹಿರಿಯರೆಲ್ಲರು ತಾಮಸಕ್ಕೊಳಗಾಗಿ ಸೀಮೆದಪ್ಪಿ ಬಟ್ಟೆಗೆಟ್ಟರು ಕಾಣಾ ಗುಹೇಶ್ವರ’ ಎಂದಿದ್ದಾರೆ ಅಲ್ಲಮರು. ಇದನ್ನೇ ಪರಮಹಂಸರು ಇನ್ನಷ್ಟು ಅಡಕವಾಗಿ ಮತ್ತು ಸರಳವಾಗಿ ಹೇಳಿದ್ದಾರೆ. ಜ್ಞಾನವೂ ಮುಳ್ಳೇ ; ಅಜ್ಞಾನವೂ ಮುಳ್ಳೇ! ಜ್ಞಾನ ಬೇಕು, ಅಜ್ಞಾನವ ಅರಿಯಲು! ಅರಿತ ಮೇಲೆ ಎರಡನೂ ಎಸೆದು ವಿವೇಕೋದಯವಾಗಿಸಿಕೊಳ್ಳಬೇಕು. ಏಕೆಂದರೆ ಜ್ಞಾನೋದಯಕಿಂತ ಹೃದಯೋದಯ ಅತಿ ಮುಖ್ಯ. ಈ
ಹೃದಯೋದಯವು ನಮ್ಮಲ್ಲಿ ದಯೆ, ಮರುಕ ಮತ್ತು ವೈಶಾಲ್ಯಗಳಂಥ ಮಾನವೀಯ ಮೌಲ್ಯಗಳನ್ನು ಉದಿಸಿ, ಅರಳಿಸಿ, ಸುತ್ತೆಲ್ಲ ಪಸರಿಸಿ ತಾನಿರುವ ತಾವನ್ನೂ ಸುತ್ತ ಮುತ್ತ ಇರುವುದೆಲ್ಲವನೂ ಸುಗಂಧಗೊಳಿಸಿ ಧನ್ಯಗೊಳ್ಳುವುದು. ವಿದ್ಯಾಬುದ್ಧಿ ಬೇಕು ಲೌಕಿಕಕ್ಕೆ; ಆದರೆ ಈ ಜೀವಾತ್ಮ ನೆಮ್ಮದಿಯಲಿ ನೆಲೆಗೊಳ್ಳಲು ಲೋಕೋತ್ತರ ಮೌಲ್ಯಗಳನ್ನೂ ಮೈಗೂಡಿಸಿಕೊಳ್ಳಬೇಕು.
ಜ್ಞಾನದ ಜಾಗದಲ್ಲಿ ವಿವೇಕವನ್ನೂ ಅಹಮಿನ ಜಾಗದಲ್ಲಿ ವಿನೀತತೆಯನ್ನೂ ಹೊಂದುವ ಸುಲಭ ಮಾರ್ಗವೇ ಭಕ್ತಿಮಾರ್ಗ. ಇದು ಸುಲಭವೂ ಹೌದು ಮತ್ತು ಸರಳವೂ ಹೌದು. ಅಜ್ಞಾನದ ಮುಳ್ಳಿನೊಂದಿಗೇ ಜ್ಞಾನದ ಮುಳ್ಳನ್ನು ಎಸೆಯದಿದ್ದರೆ ಕಡು ಕಷ್ಟ! ಎರಡೂ ಚುಚ್ಚುವ ಮುಳ್ಳೇ; ಅಪಾಯಕಾರಿಯೇ!! ಎರಡರಿಂದ ಒದಗುವ ಎಡರು ತೊಡರುಗಳನ್ನು ಮನಗಂಡು ದೂರವೆಸೆದು ಬದುಕುವುದೇ ನಿಜ ಧಾರ್ಮಿಕತೆ. ಧರ್ಮದ ಹಾದಿಯಲ್ಲಿ ನಡೆವ ಜೀವನವಿಧಾನವೇ ಧಾರ್ಮಿಕವಾದದ್ದು. ಬೆಳಕ ಬೀರಿ ತನ್ನ ಸುಟ್ಟುಕೊಂಡು ಧನ್ಯವಾಗುವ ಬತ್ತಿಯ ತೆರದಿ; ಸೊಡರಿನಲಿ ಖಾಲಿಯಾಗುವ ಎಣ್ಣೆಯ ತೆರದಿ; ಬೆಂಕಿಯಿಂದ ಬೆಳಕಾಗುವ ಪವಾಡದ ಮುದದಿ!
– ಡಾ. ಹೆಚ್ ಎನ್ ಮಂಜುರಾಜ್
ಸತ್ವಪೂರ್ಣವಾದ ಲೇಖನ …ಜ್ಞಾನ ದ ಮುಳ್ಳು.. ಮನಕ್ಕೆ ಮುದಕೊಟ್ಟಿತು..ಸಾರ್..ನಿಮ್ಮ ಜ್ಞಾನ ಕ್ಕೆ ನಮೋನಮ..
ಧನ್ಯವಾದಗಳು ಮೇಡಂ. ನಿಮ್ಮ ನಿರಂತರ ಪ್ರತಿಕ್ರಿಯೆ ಮತ್ತು ಪ್ರೋತ್ಸಾಹಕೆ ನನ್ನ ವಂದನೆಗಳು.
ಧನ್ಯವಾದಗಳು ಸುರಹೊನ್ನೆಯ ಬಳಗಕೆ….
ಶರಣು
ತುಂಬ ಗಂಭೀರ ವ್ಯೆಚಾರಿಕ ಸಕಾಲಿಕ ಸ್ಪಂದನ.ಬದಲಾಗುವ ಕಾಲದೊಂದಿಗೆ ಪಲ್ಲಟಿಸುವ ಜೀವನಕ್ರಮ,ಮೊಲ್ಯಗಳತ್ತ ಗಮನ ಸೆಳೆಯುವ ಲೇಖನ.ನಮ್ಮನ್ನು ನಾವೇ ಸ್ಮಾರ್ಟ್ ಸಕ್ಸಸ್ಫುಲ್ ಅಂದುಕೊಳ್ಳುವ ಜನಸಮೂಹ ತಮ್ಮೊಳಗನ್ನು ಶೋಧಿಸಲು ಪ್ರೇರೇಪಿಸುವ ಬರಹ.ಅಭಿನಂದನೆಗಳು ಲೇಖಕರಿಗೆ ಮತ್ತು ಸುರಹೊನ್ನೆಗೆ.
ಧನ್ಯವಾದಗಳು ಮೇಡಂ, ನಿಮ್ಮ ಓದಿಗೆ ಮತ್ತು ಪ್ರತಿಸ್ಪಂದನಕೆ
ಜೀವನ ಜಂಜಾಟದಲ್ಲಿ ಮೌಲ್ಯಗಳನ್ನು ಗಾಳುಗೆ ತೂರಿದ್ದರೂ, ಭಕ್ತಿಮಾರ್ಗದಿಂದ ಅದನ್ನು ಅರಿಪಡಿಸಿಕೊಳ್ಳುವತ್ತ ದಾರಿದೀಪವಾಗಬಹುದಾದ ಪ್ರಭಾವೀ ಲೇಖನ
ಧನ್ಯವಾದಗಳು ಮೇಡಂ. ಆನಂದರ ಬರೆಹಗಳನ್ನೂ ನಾನಿಲ್ಲಿ ನಿರೀಕ್ಷಿಸುತ್ತಿರುವೆ.
ಬಹಳ ಗಂಭೀರ, ವೈಚಾರಿಕ, ಚಿಂತನಯೋಗ್ಯ ಲೇಖನ.
ಬದುಕಿನ ಗಂಭೀರತೆಯನ್ನು ಸರಳವಾಗಿ ಹೇಳಬಹುದು. ನನಗೆ ಸಾಧ್ಯವಾಗುತ್ತಿಲ್ಲ. ಇದನ್ನು ನನಗೆ ನಾನೇ ಕೇಳಿಕೊಳ್ಳುತ್ತಿರುವ ಪ್ರಶ್ನೆ.
ಪ್ರಯತ್ನಿಸುವೆ. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
ಬಹಳ ಒಳ್ಳೆಯ ಲೇಖನ. ಎಲ್ಲರೂ ತಿಳಿಯಬೇಕಾದ. ವಿಷಯಗಳು. ಈಗ ದುಡ್ಡೇ ದೊಡ್ಡಪ್ಪ. ಮೌಲ್ಯಗಳಿಗೆ ಬೆಲೆಯೂ ಇಲ್ಲ.