ಅಂತರಾಷ್ಟ್ರೀಯ ಯೋಗ ದಿನಾಚರಣೆ

Share Button


ಜೂನ್ 21 ಎಂದರೆ ಏನೋ ಒಂದು ರೀತಿಯಲ್ಲಿ ಮೈಮನಗಳಿಗೆ ರೋಮಾಂಚನವಾಗುತ್ತದೆ!. ಏಕೆಂದರೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ. ಸಾಂಕೇತಿಕವಾಗಿ ಈ ದಿನವನ್ನು ಯೋಗ ದಿನಾಚರಣೆ ಎಂದು ಆಚರಿಸುತ್ತೇವೆ. ಆದರೆ ವರ್ಷಪೂರ್ತಿ ಯೋಗ ಮಾಡುತ್ತಾ, ತಮ್ಮ ಜೀವನ ಶೈಲಿಯನ್ನೇ ಬದಲಾಯಿಸಿಕೊಂಡ ಲಕ್ಷಾಂತರ ಮಂದಿ ಇದ್ದಾರೆ. ಅವರು ತಮ್ಮ ಜೊತೆಯಲ್ಲಿ ಇತರರಿಗೂ ಕೂಡ ಯೋಗದ ಮಹತ್ವವನ್ನು ಸಾರುತ್ತಿದ್ದಾರೆ. ಇದರಿಂದಾಗಿ ಯೋಗ ಮಾಡುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದ್ದಾರೆ. 

2015 ಜೂನ್ 21ರಂದು ಚೊಚ್ಚಲ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಣೆಗೆ ಬಂತು. ಅವತ್ತಿನಿಂದ ಇವತ್ತಿನವರೆಗೆ ಯೋಗ ಮಾಡಿದವರಿಗೆಲ್ಲ ಯೋಗ ಯೋಗ ಎನ್ನುವಂತಾಗಿದೆ!.  

9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಇವತ್ತು ಆಚರಿಸುತ್ತಿದ್ದೇವೆ. “ಯೋಗ” ಎಂದರೆ ಕೂಡಿಸುವುದು ಎಂದರ್ಥ. ರಾಜಯೋಗವೂ…… ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಮತ್ತು ಸಮಾಧಿ. ಈ ರೀತಿ 8 ಉಪ ಪ್ರಕಾರಗಳು ಇರುತ್ತವೆ. ಇದನ್ನೇ “ಅಷ್ಟಾಂಗ ಯೋಗ”  ಎನ್ನುವುದು. 

ಈ ಯೋಗ ಮಾಡುವುದಕ್ಕೇ ಯಾವ ಲಿಂಗ, ಧರ್ಮ, ವಯಸ್ಸು, ಜಾತಿ…… ಬಡವ, ಶ್ರೀಮಂತರು ಎಂಬ ಭೇದ ಭಾವವಿಲ್ಲದೆ ಎಲ್ಲರೂ ಕೂಡ ಒಟ್ಟಾಗಿ ಒಂದೆಡೆ ಸೇರಿ ಯೋಗ ಮಾಡಿ ಅದರ ಸಂಪೂರ್ಣ ಸವಲತ್ತುಗಳನ್ನು ಹಂತ ಹಂತವಾಗಿ ಪಡೆಯುವುದೇ ಆಗಿದೆ. ಆಧ್ಯಾತ್ಮ ಚಿಂತನೆಯ ಜೊತೆಗೆ ಯೋಗ ಕೂಡ ಸೇರುತ್ತಾ ಹೋಗುತ್ತದೆ. ಹೆಸರಿಗೆ ಮಾತ್ರ ಯೋಗ. ಇದರಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಎಲ್ಲವೂ ಕೂಡ ಅಡಗಿದೆ. ಮುಂಜಾನೆ ಬೇಗ ಎದ್ದು, ನಿತ್ಯಾದಿಕರ್ಮಗಳನ್ನು ಮುಗಿಸಿ, ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಂಡು, ಯೋಗ ಮಾಡಲು ಪ್ರಾರಂಭಿಸಿದರೆ ಅದು ಖಂಡಿತವಾಗಿಯೂ ಸಿದ್ದಿಸುತ್ತದೆ. ವಿಶ್ವದಲ್ಲಿಯೇ “ಯೋಗ ನಗರ” ಎಂದು ನಮ್ಮ ಮೈಸೂರು ಪ್ರಖ್ಯಾತಿ ಹೊಂದಿದೆ. ಇದೊಂದು ಹೆಮ್ಮೆಯ ವಿಷಯ. ಸಾಂಸ್ಕೃತಿಕವಾಗಿ….. ಪಾರಂಪರಿಕವಾಗಿ….. ನಮ್ಮ ಮೈಸೂರು ಯೋಗ ನಗರವಾಗಿ ಈಗ ಪ್ರಜ್ವಲಿಸುತ್ತಿದೆ!.

225 ವರ್ಷಗಳ ಹಿಂದೆಯೇ ಯೋಗಕ್ಕೆ ಮಹಾರಾಜರ ಸಂಪೂರ್ಣ ಪ್ರೋತ್ಸಾಹ ಇತ್ತು. ಅಂದಿನಿಂದಲೇ ಅದು ಬೆಳಕಿಗೆ ಬಂದಿತು. ಅಂತರಾಷ್ಟ್ರೀಯ ಯೋಗ ದಿನಾಚರಣೆ ಆದ ಬಳಿಕ ನಮ್ಮ ಮೈಸೂರು ಎರಡು ಗಿನ್ನಿಸ್ ದಾಖಲೆಯನ್ನು ನಿರ್ಮಿಸಿದೆ!. ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಮೈಸೂರು ನಗರಕ್ಕೆ ಆಗಮಿಸಿ ಇಲ್ಲಿನ ಜನರೊಟ್ಟಿಗೆ ಯೋಗ ಮಾಡಿ ಪ್ರೋತ್ಸಾಹ ಮಾಡಿದ್ದಾರೆ. ಇದರಿಂದಾಗಿ ಮೈಸೂರು ಮತ್ತಷ್ಟು ಜಗತ್ಪ್ರಸಿದ್ಧವಾಯಿತು.  

ಇವತ್ತಿನ ಯಾಂತ್ರಿಕ ಯುಗದಲ್ಲಿ ಸದಾ ಏನಾದರೊಂದು  ಒತ್ತಡದ ಸುಳಿಯಲ್ಲಿ ನಾವು ಸಿಲುಕಿರುತ್ತೇವೆ. ಈ ಒತ್ತಡ ಎನ್ನುವುದು ನಮ್ಮ ಜೊತೆ ಸಹ ಜೀವನ ನಡೆಸಿ ಬಿಡುತ್ತಿದೆ!. ಅದು ನಮಗೊತ್ತಿಲ್ಲದೆ ನಮ್ಮ ಜೀವನದಲ್ಲಿ ಪರಕಾಯ ಪ್ರವೇಶ ಮಾಡಿಬಿಟ್ಟಿದೆ. ಅದರಿಂದ ಹೊರ ಬರಲಾಗದೆ ಅನೇಕರು ದುರಂತಗಳಲ್ಲಿ ಅಂತ್ಯವಾಗುತ್ತಿದ್ದಾರೆ. ಇಂತಹ ಸಮಯದಲ್ಲಿ  ನಾವು ಯಾವ ನಿರ್ಧಾರ ತೆಗೆದುಕೊಳ್ಳುತ್ತೇವೋ ಅದು ಮುಖ್ಯವಾಗುತ್ತದೆ.

ಸದೃಢ ಆರೋಗ್ಯಕ್ಕಾಗಿ ಮಾನಸಿಕ ಸ್ಥಿಮಿತ ಕಳೆದುಕೊಳ್ಳದೆ ಯೋಗಕ್ಕೆ ಮೊರೆ ಹೋದರೆ ಅವರ ಸಮಸ್ಯೆ ಪರಿಹಾರವಾಗುತ್ತದೆ. ಯೋಗ ಮಾಡುವುದರಿಂದ ಮಹಿಳೆಯರ…… ಪುರುಸರ….. ಮಕ್ಕಳ….. ಅನೇಕ ಮಾರಕ ರೋಗಗಳು ಕೂಡ ಗುಣವಾಗಿವೆ.            ಇಲ್ಲಿ ನಾವು ಮುಖ್ಯವಾಗಿ ಮಾಡಬೇಕಾದದ್ದು ಏನೆಂದರೆ ಬೆಳಿಗ್ಗೆ ಬೇಗ ಎದ್ದು ಸಾಮೂಹಿಕವಾಗಿ ಯೋಗದಲ್ಲಿ ಪಾಲ್ಗೊಳ್ಳುವುದು. ಒಂದೇ ದಿನ ಎಲ್ಲವನ್ನು ಕಲಿತು ಬಿಡುತ್ತೇವೆ ಎಂಬ ಭಾವನೆ ಇಟ್ಟುಕೊಂಡು ಹೋಗಲೇಬಾರದು!.

ಯೋಗ ಒಂದು ಸಮುದ್ರದ ರೀತಿ. ಅಲ್ಲಿ ಬರುವ ಆಸನಗಳು ಸಾವಿರಾರು ಇವೆ.  ನಮ್ಮ ಪೂರ್ವಿಕರು ನಡೆಸುತ್ತಿದ್ದ ಜೀವನಕ್ಕೂ…… ನಾವು ಈಗ ನಡೆಸುತ್ತಿರುವ ಜೀವನಕ್ಕೂ……. ಅಜಗಜಾಂತರ ವ್ಯತ್ಯಾಸವಿದೆ!. ಪೂರ್ವಿಕರು ಏಕೆ…. ಕಳೆದ 20 ವರ್ಷಗಳಿಂದ ನಮ್ಮ ಜೀವನ ವ್ಯವಸ್ಥೆ ತುಂಬಾ ಅವ್ಯವಸ್ಥೆಯಿಂದ ಕೂಡಿದೆ. ಇಲ್ಲಿ ಮುಖ್ಯವಾಗಿ ಜೀವನಶೈಲಿ ಮಹತ್ವ ಪಡೆಯುತ್ತದೆ. ಯಾವುದೇ ಆಡಂಬರಗಳಿಲ್ಲದೆ ಸರಳ, ಸುಂದರವಾಗಿ, ಪಾಲಿಗೆ ಬಂದದ್ದು ಪಂಚಾಮೃತ ಎಂದು ತಿಳಿದು, ಗತಿಸಿ ಹೋದ ಕಾಲವನ್ನು ಚಿಂತಿಸದೆ……. ಮುಂದೆ ಬರುವ ಕಾಲವನ್ನು ಕಾಲದ ಬಗ್ಗೆ ಯೋಚಿಸದೆ…..  ಪ್ರಸ್ತುತ ಕಾಲದ ಮಹತ್ವವನ್ನು ಅರಿತು…….. ಸಂತೋಷದಿಂದ ಇರುತ್ತಿದ್ದರು. 

ಈಗ ಸಿಕ್ಕಿದ್ದನ್ನೆಲ್ಲಾ ಕೊಂಡುಕೊಳ್ಳುವ ಬೇಕು ಎನ್ನುವ ಸಂಸ್ಕೃತಿ, ಸ್ವಾರ್ಥ ಮನೋಭಾವ, ನಾನು ನನ್ನದೆಂಬ ಭಾವ, ದುರ್ಬಲರಿಗೆ ಸಹಾಯದ ನೆರವು ನೀಡದ ಕೈಗಳು…….. ಹೀಗೆ ಇವೆಲ್ಲವುಗಳಿಂದ ನಾವು ನಮ್ಮತನವನ್ನು ಕಳೆದುಕೊಂಡಿದ್ದೇವೆ.           ಅದರಿಂದಾಗಿ ಆ ಒಂದು ಬದಲಾವಣೆ ಇಂದು ಅನೇಕ ರೂಪ ಪಡೆದುಕೊಂಡಿವೆ!. ಇದಕ್ಕೆ ಶೀಘ್ರ ಪರಿಹಾರ ಎಂದರೆ ಯೋಗವನ್ನು ನಮ್ಮ ಜೀವನದಲ್ಲಿ ಒಂದು ಭಾಗವಾಗಿ ಅಳವಡಿಸಿಕೊಳ್ಳುವುದು ಆಗಿದೆ. 

ಮಕ್ಕಳಿಗೆ ಯೋಗ ಶಿಕ್ಷಣ ಪರಿಣಾಮಕಾರಿಯಾಗಿದ್ದು  ಓದಲು ತುಂಬಾ ನೆರವಾಗುತ್ತದೆ. ಜ್ಞಾಪಕ ಶಕ್ತಿಯು ಕೂಡ ವೃದ್ಧಿಸುತ್ತದೆ. ಯೋಗ ಮಾಡುವುದರಿಂದ ನಮಗೆ ಉತ್ತಮ ಸಂಸ್ಕಾರ ನಮ್ಮಗರಿವಿಲ್ಲದೆ ನಮ್ಮ ಜೊತೆ ಸದಾ ಇರುತ್ತದೆ. ಯೋಗ ಕೇಂದ್ರಗಳು ಪ್ರತಿಯೊಂದು ಬಡಾವಣೆಗಳಲ್ಲೂ ಇದ್ದೇ ಇರುತ್ತವೆ. ಅಲ್ಲದೆ ಗ್ರಾಮೀಣ ಪ್ರದೇಶದಲ್ಲೂ ಕೂಡ ಯೋಗ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. 

ಗ್ರಾಮೀಣ ಭಾಗದಲ್ಲಿ ವಾಸಿಸುವವರು ಒಂದಲ್ಲ ಒಂದು ರೀತಿಯಲ್ಲಿ ತಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು ಇರುವುದೇ ಒಂದು ಯೋಗ!. ಅದನ್ನು ಮೀರಿ ಮತ್ತಷ್ಟು ಆರೋಗ್ಯ ಸುಧಾರಿಸಬೇಕಾದರೆ ಈ ಯೋಗವನ್ನು ನಾವು ಹಂತ ಹಂತವಾಗಿ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅದರಿಂದಾಗಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲು ಪ್ರಾರಂಭವಾದಾಗಿನಿಂದ ಆಬಾಲರುದ್ದರಾದಿಯಾಗಿ ಯೋಗ ಮಾಡುವವರ ಸಂಖ್ಯೆ ಹೆಚ್ಚುತ್ತಲೆ ಇದೆ.

ರೋಗ ಮುಕ್ತ….. ಆರೋಗ್ಯ ಪೂರ್ಣ…… ಜೀವನ ಬೇಕಾದರೆ ನಾವು ಮೊದಲು ಯೋಗಕ್ಕೆ ದಾಸನಾಗಲೇಬೇಕು. ಹಲವು ಮಾರಕ ರೋಗಗಳು ಸಹ ಯೋಗದಿಂದಾಗಿ ನಿರ್ಮೂಲನವಾಗಿದ್ದು  ಉಂಟು. ಅದರಿಂದಾಗಿ ಯೋಗ ಹಲವು ಕಾಯಿಲೆಗಳಿಗೆ ರಾಮಬಾಣದಂತಾಗಿದೆ.ಮುಂದುವರಿದಂತೆ……. ವೈಜ್ಞಾನಿಕವಾಗಿ ಸಾಂಪ್ರದಾಯಿಕವಾಗಿ ಯೋಗ ಕಲಿಕೆ ಅದರಲ್ಲೂ ಮೈಸೂರಿನಲ್ಲಿ ಹೆಚ್ಚಿದೆ. ಇದರಿಂದಾಗಿ ವಿಶ್ವದಲ್ಲಿಯೇ ಮೈಸೂರು ಪ್ರಮುಖ ಯೋಗದ ತಾಣವಾಗಿದೆ.

ಮುಮ್ಮಡಿ ಕೃಷ್ಣರಾಜ ಒಡೆಯರ್ ರಚಿಸಿರುವ ವಿದ್ವತ್ಪೂರ್ಣ ಪುಸ್ತಕ ವಾದ “ಶ್ರೀ ತತ್ವ ನಿಧಿ”ಯಲ್ಲಿ ಯೋಗಾಸನ ಕುರಿತಂತೆ 122 ಆಸನಗಳ ವಿವರಗಳು ಇಲ್ಲಿ ದಾಖಲಾಗಿವೆ. ಅವತ್ತಿನಿಂದಲೂ ಈ ಯೋಗ ಎನ್ನುವುದು ತನ್ನ ಪ್ರಕೃತಿಯಿಂದ  ಗಟ್ಟಿಯಾಗಿ ನೆಲೆ ನಿಂತಿವೆ. 

ಯೋಗ ಫೆಡರೇಶನ್ ಆಫ್ ಮೈಸೂರ್, ಪತಂಜಲಿ ಯೋಗ ಶಿಕ್ಷಣ ಸಮಿತಿ, ಭಾರತ್ ಸ್ವಾಭಿಮಾನ ಟ್ರಸ್ಟ್ ಹಾಗೂ ಪತಂಜಲಿ ಯೋಗ ಸಮಿತಿ, ಮೈಸೂರು ಯೋಗ ಒಕ್ಕೂಟ, ಮೈಸೂರು ಯೋಗ ಸ್ಪೋರ್ಟ್ಸ್ ಫೌಂಡೇಶನ್, ಜಿ ಎಸ್ ಎಸ್ ಸಂಸ್ಥೆ, ಯೋಗಿಕ್ ರಿಸರ್ಚ್ ಫೌಂಡೇಶನ್………. ಹೀಗೆ ಹೇಳುತ್ತಾ ಹೋದರೆ ಉದ್ದನೆಯ ಪಟ್ಟಿ ಬೆಳೆಯುತ್ತದೆ! ಇವರೆಲ್ಲರೂ ಒಟ್ಟಾಗಿ ಸೇರಿ ಉದ್ಯಾನ ನಗರಿ ಮೈಸೂರಿನ ಅರಮನೆಯ ಆವರಣದಲ್ಲಿ 10,000ಕ್ಕೂ ಹೆಚ್ಚು ಯೋಗ ಬಂಧುಗಳನ್ನು ಒಟ್ಟಾಗಿ ಸೇರಿಸುವ ಮೂಲಕ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. 

ಮುಂದುವರಿದು ರಾಜ್ಯದ ಎಲ್ಲಾ ಪದವಿ- ಕಾಲೇಜುಗಳು ಯೋಗ ದಿನಾಚರಣೆಯನ್ನು ಕಡ್ಡಾಯವಾಗಿ ಆಚರಿಸಬೇಕು ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ರಾಜ್ಯದ ಎಲ್ಲಾ ಖಾಸಗಿ ಹಾಗೂ ಸರ್ಕಾರಿ ಕಾಲೇಜುಗಳೆಲ್ಲಾ ಯೋಗ ಮಾಡಲು ತಿಳಿಸಿದೆ. ಜೊತೆಗೆ ಅದರ ಮಹತ್ವ ಮತ್ತು ಪ್ರಯೋಜನ ಕುರಿತಾಗಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಇದೊಂದು ಸ್ವಾಗತರ ವಿಷಯ.

ಇದೇ ರೀತಿ ಹಲವು ಶಾಲಾ ಕಾಲೇಜುಗಳಲ್ಲಿ ಯೋಗಕ್ಕಾಗಿ ಪ್ರತಿದಿನ ಒಂದು ತರಗತಿಯನ್ನು ಮೀಸಲಿಟ್ಟಿದ್ದಾರೆ. ಅಥವಾ ವಾರಕ್ಕೆ ಎರಡು ಮೂರು ದಿನ ಇದ್ದೇ ಇರುತ್ತದೆ. ಅದರಿಂದಾಗಿ ನಾವು ಪ್ರಾಥಮಿಕದಿಂದಲೇ ಯೋಗಾಭ್ಯಾಸಕ್ಕೆ ಸಂಬಂಧಪಟ್ಟಂತೆ ಪುಸ್ತಕಗಳು…… ಯೋಗ ಶಿಕ್ಷಕರನ್ನು….. ನೇಮಿಸುವುದರ ಮೂಲಕ ಹಲವು ಕಡೆ ಸರ್ಕಾರ ಕ್ರಮ ಕೈಗೊಂಡಿದೆ. ಅದು ಎಲ್ಲಾ ಕಡೆ ವಿಸ್ತರಿಸಬೇಕು. 

ಜೊತೆಗೆ ತಂದೆ-ತಾಯಿಗಳು ಕೂಡ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡು ತಮ್ಮ ಮಕ್ಕಳು ಯೋಗ ಮಾಡುವುದಕ್ಕೇ ಮನಸ್ಸನ್ನು ಬದಲಾಯಿಸಿ, ತಾವು ಕೂಡ ಅವರೊಟ್ಟಿಗೆ ಸೇರಿ ಬೆಳಿಗ್ಗೆ ಯೋಗ ಮಾಡುವುದರಿಂದ ಅದರ ಸಂಪೂರ್ಣ ಉಪಯೋಗ ಇಬ್ಬರಿಗೂ ಸಿಗುತ್ತದೆ.ಅಲ್ಲಿ ಕೇವಲ ಯೋಗ ಮಾಡುವುದಲ್ಲದೆ ಇನ್ನಿತರ ಚಟುವಟಿಕೆಗಳನ್ನು ಮಾಡುವುದರಿಂದ ಉತ್ತಮ ಸಂಸ್ಕಾರ ಸಿಗುತ್ತದೆ. ಅಲ್ಲಿ ಪ್ರವಚನ….. ಹಾಡುಗಳು…. ಚಾರಣ…. ಆಧ್ಯಾತ್ಮದ  ಕುರಿತಾಗಿ ಭಾಷಣ….. ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಚಿಂತನೆಗೆ ಹಚ್ಚುವಂತಹ ಮನಸ್ಸು…… ಪ್ರಫುಲ್ಲಗೊಳಿಸುವಂತಹ ಅವತ್ತಿನ ವಾತಾವರಣ….. ಸುಸ್ಥಿತಿಯಲ್ಲಿಡಲು ಯೋಗ ನೆರವಾಗುತ್ತದೆ. ಯೋಗ ಮಾಡದ ದಿನಕ್ಕೂ, ಯೋಗ ಮಾಡಿದ ದಿನಕ್ಕೂ ವ್ಯತ್ಯಾಸ ಇರುತ್ತದೆ. ಅದು ಯೋಗ ಮಾಡಿದವರಿಗೆ ಗೊತ್ತಾಗುತ್ತದೆ!.

ಜೂನ್ 21 ಹೇಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆ ಎನ್ನುತ್ತೇವೆ, ಅದೇ ರೀತಿ ಇದೇ ದಿನ ವಿಶ್ವ ಸಂಗೀತ ದಿನವೂ ಕೂಡ ಆಗಿದೆ!. 

ಇದರಿಂದಾಗಿ ಯೋಗ ಮತ್ತು ಸಂಗೀತ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಯೋಗ ಯಾವ ರೀತಿ ಉಪಯೋಗಕ್ಕೆ ಬರುತ್ತದೆ, ಅದೇ ರೀತಿ ಸಂಗೀತವೂ ಕೂಡ ಪರಿಣಾಮಕಾರಿಯಾಗಿ ನಮ್ಮ ಮನಸ್ಸಿಗೆ ನಾಟುತ್ತದೆ. ಸಂಗೀತ ಚಿಕಿತ್ಸೆಯೂ ಕೂಡ ಹಲವು ರೋಗಗಳಿಗೆ ರಾಮಬಾಣ ಆಗಿದೆ.ಅದರಿಂದಾಗಿ ಬನ್ನಿ ನಾವು ಇವತ್ತಿನಿಂದಲಾದರೂ ಯೋಗವನ್ನು ಮಾಡುವುದರ ಮೂಲಕ ನಮ್ಮ ಆರೋಗ್ಯ ಕಾಪಾಡಿಕೊಳ್ಳೋಣ.

ಯೋಗ ಮಾಡಿ ಅದರ ಸಂಪೂರ್ಣ ಸವಲತ್ತುಗಳನ್ನು ಪಡೆಯೋಣ. ಎಷ್ಟೋ ಜನ ದುಡ್ಡು ಕೊಟ್ಟು ಯೋಗಾಸನ ಕಲಿಯುವವರು ಇದ್ದಾರೆ. ಆದರೆ ನಗರ ಪ್ರದೇಶ ಗ್ರಾಮೀಣ ಪ್ರದೇಶಗಳಲ್ಲಿ ಪತಂಜಲಿ ಯೋಗ ಶಿಕ್ಷಣದಂತಹ ಅನೇಕ ಸಂಸ್ಥೆಗಳು ಮುಂದೆ ಬಂದು ಉಚಿತವಾಗಿ ಯೋಗ ಹೇಳಿಕೊಡುತ್ತಿವೆ.

ಯೋಗ ಕಲಿತು ಆರೋಗ್ಯ ಪೂರ್ಣವಾಗಿ ಬದುಕಿ, ಸದೃಢ ಸಮಾಜಕ್ಕೆ ಏನಾದರೂ ಒಂದು ಕೊಡುಗೆ ನೀಡೋಣ. ಎಲ್ಲರಿಗೂ ಒಳಿತಾಗಲಿ.

-ಕಾಳಿಹುಂಡಿ ಶಿವಕುಮಾರ್ ಮೈಸೂರು.

4 Responses

  1. ಮಾಹಿತಿಪೂರ್ಣ ಲೇಖನ ಚೆನ್ನಾಗಿದೆ… ಸಾರ್..ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು

  2. ನಯನ ಬಜಕೂಡ್ಲು says:

    ಸಾಕಷ್ಟು ಉತ್ತಮ ಮಾಹಿತಿಗಳನ್ನೊಳಗೊಂಡ ಲೇಖನ. ಚೆನ್ನಾಗಿದೆ.

  3. Anonymous says:

    Useful

  4. ಶಂಕರಿ ಶರ್ಮ says:

    ದೈಹಿಕ ಹಾಗೂ ಮಾನಸಿಕ ಆರೋಗ್ಯದ ಸ್ಥಿರತೆಗೆ ಯೋಗದ ಕೊಡುಗೆ ಅಪಾರ. ಸಕಾಲಿಕ ಮಾಹಿತಿಪೂರ್ಣ ಲೇಖನ ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: