ವಾಟ್ಸಾಪ್ ಕಥೆ 23 : ಪೂಜ್ಯ ಭಾವನೆ.
ತಂದೆಯೊಬ್ಬ ಮಗನ ಕೈಹಿಡಿದು ದೇವಾಲಯಕ್ಕೆ ನಡೆದಿದ್ದ. ದೇವಾಲಯದ ಮಹಾದ್ವಾರದ ಬಳಿ ಎರಡೂ ಕಡೆಗಳಲ್ಲಿ ಕಲ್ಲಿನಲ್ಲಿ ಕಡೆದಿದ್ದ ಸಿಂಹಗಳಿದ್ದವು. ಅವುಗಳ ಆಕಾರವನ್ನು ಕಂಡು ಚಿಕ್ಕ ಹುಡುಗ ಬೆದರಿದ. ‘ಅಪ್ಪಾ ನಡೆ ವಾಪಸ್ಸು ಹೋಗೋಣ’ವೆಂದು ಹಠಮಾಡಿದ ತಂದೆಯು ಅವನನ್ನು ಸಮಾಧಾನಪಡಿಸಿ ”ಏಕೆ ಮಗೂ?” ಎಂದು ಪ್ರಶ್ನಿಸಿದ. ಆ ಹುಡುಗ ”ಅಪ್ಪಾ ಆ ಸಿಂಹಗಳು ನಮ್ಮನ್ನು ಕೊಂದುಬಿಡಬಹುದು. ಅದಕ್ಕೆ ನನಗೆ ತುಂಬ ಭಯವಾಗಿದೆ’ ಎಂದ.
ತಂದೆಯು ಮಗನಿಗೆ ತಿಳಿಸಿಹೇಳುತ್ತಾ ”ಅವು ಕಲ್ಲಿನಿಂದ ಕೆತ್ತಿದ ಸಿಂಹಗಳು. ಅಲಂಕಾರಕ್ಕಾಗಿ ಬಾಗಿಲಲ್ಲಿ ನಿಲ್ಲಿಸಲಾಗಿದೆ. ಅವುಗಳಿಗೆ ಜೀವವಿಲ್ಲ. ಅವುಗಳು ನಮ್ಮನ್ನೇನೂ ಮಾಡಲಾರವು” ಎಂದು ಧೈರ್ಯ ತುಂಬಿದ. ಹುಡುಗ ತಂದೆಯ ಮಾತಿನಿಂದ ಸಮಾಧಾನಹೊಂದಿ ಅವನೊಡನೆ ದೇವಾಲಯದೊಳಕ್ಕೆ ಪ್ರವೇಶಿಸಿದ. ಒಳಗೆ ಪೂಜೆಮಾಡಿ ಅಲಂಕಾರ ಮಾಡಿದ್ದ ದೇವರ ಮೂರ್ತಿಯನ್ನು ನೋಡಿ ಅವನಪ್ಪನಂತೆ ಕೈಮುಗಿದ. ಅವನ ಮನಸ್ಸಿನಲ್ಲಿ ಒಂದು ಅನುಮಾನ ಮೂಡಿತು. ‘ಅಪ್ಪಾ ಬಾಗಿಲಲ್ಲಿ ನಿಲ್ಲಿಸಿದ್ದ ಸಿಂಹಗಳೇನೋ ಕಲ್ಲಿನವು ಜೀವವಿಲ್ಲದವು. ಇಲ್ಲಿ ನೋಡಿದರೆ ಭಗವಂತನ ಮೂರ್ತಿಯೂ ಕಲ್ಲಿನಿಂದಲೇ ಮಾಡಲಾಗಿದೆ. ದೇವರನ್ನು ನಾವು ಕೈಮುಗಿದು ನಮಗೆ ಒಳ್ಳೆಯದನ್ನು ಮಾಡೆಂದು ಪ್ರಾರ್ಥಿಸುತ್ತೇವಲ್ಲಾ. ಕಲ್ಲಿನಿಂದ ಮಾಡಿದ ದೇವರು ಹೇಗೆ ನಮಗೆ ಒಳ್ಳೆಯದನ್ನು ಮಾಡಬಲ್ಲ? ಹೇಗೆ ನಮಗೆ ಕೇಳಿದ್ದನ್ನು ಕೊಡಬಲ್ಲ?”
ತಂದೆಗೆ ಉತ್ತರಕೊಡಲು ಸಂದಿಗ್ಧವಾಯಿತು. ಅಲ್ಲಿ ಒಬ್ಬರು ಹಿರಿಯರು ಕುಳಿತಿದ್ದರು. ಅವರು ಇವರಿಬ್ಬರ ಸಂಭಾಷಣೆಯನ್ನು ಆಲಿಸುತ್ತಿದ್ದರು. ಅವರು ಮಗುವನ್ನು ಕುರಿತು ‘ಹೌದು ಮಗೂ, ನೀನು ಹೇಳುವುದು ಸತ್ಯವಾದದ್ದೇ. ಆದರೆ ದೇವರ ಮೂರ್ತಿಯನ್ನು ಗುಡಿಯಲ್ಲಿ ಸ್ಥಾಪನೆ ಮಾಡುವಾಗ ಪ್ರತಿಷ್ಠಾಪನೆ ಎಂದು ಮಾಡುತ್ತೇವೆ. ಮೂರ್ತಿಯನ್ನು ಕೂಡ್ರಿಸಿ ಅದಕ್ಕೆ ಮಂತ್ರಗಳ ಮೂಲಕ ದೈವತ್ವವನ್ನು ಆಹ್ವಾನಿಸುತ್ತೇವೆ. ನಮ್ಮೆಲ್ಲರಲ್ಲಿರುವ ನಂಬಿಕೆಯೇ ಆ ದೈವತ್ವ. ಪೂಜೆಮಾಡಿ ಅಗೋಚರ ಶಕ್ತಿಯಿರುವ ಭಗವಂತನೆಂದು ಆರಾಧಿಸುತ್ತೇವೆ. ಅಂದಿನಿಂದ ಅದು ಬರಿಯ ಕಲ್ಲಾಗಿರುವುದಿಲ್ಲ. ಅದು ಪೂಜ್ಯವಾಗಿ ದೇವರೆಂದು ಕರೆಯಲ್ಪಡುತ್ತದೆ. ಹಾಗೆಯೇ ಒಂದು ಮುಖ್ಯವಾದ ವಿಷಯ. ಪ್ರತಿಯೊಬ್ಬ ಮನುಷ್ಯನಲ್ಲಿಯೂ ದೇವರ ಅಂಶವಿದ್ದೇ ಇದೆ. ಅದೇ ಆತ್ಮ ಅಥವಾ ದೈವತ್ವ. ನಮ್ಮ ನಡೆ, ನುಡಿ, ಆಚರಣೆಗಳಲ್ಲಿ ದೈವತ್ವವನ್ನು ಅಳವಡಿಸಿಕೊಂಡರೆ ನಮ್ಮೊಳಗೇ ದೇವರನ್ನು ಇರಿಸಿಕೊಳ್ಳುವ ಸಾಮರ್ಥ್ಯ ಬಂದುಬಿಡುತ್ತದೆ. ಆಗ ದೇವರು ಗುಡಿಯಲ್ಲಲ್ಲ ನಮ್ಮಲ್ಲಿಯೇ ಕಾಣಿಸುತ್ತಾನೆ. ಎಲ್ಲಿಗೂ ನಾವು ಅವನನ್ನು ಹುಡುಕಿಕೊಂಡು ಹೋಗಬೇಕಾಗಿಲ್ಲ. ಅದನ್ನು ಸಾಧಿಸುವವರೆಗೆ ನಾವು ಗುಡಿಯಲ್ಲಿರುವ ಕಲ್ಲಿನ ಮುರ್ತಿರೂಪದ ದೇವರಲ್ಲಿಯೇ ಪೂಜ್ಯ ಭಾವನೆಯಿಟ್ಟು ಆರಾಧಿಸಬೇಕು’ ಎಂದು ಮಗುವಿನ ತಲೆಯನ್ನು ಸವರಿದರು.
ಮಗುವಿಗೆ ಹಿರಿಯರ ವಿವರಣೆಯಿಂದ ಸಮಾಧಾನವಾಯಿತು. ಮತ್ತೊಮ್ಮೆ ದೇವರಿಗೆ ನಮಸ್ಕಾರ ಮಾಡಿ ತಂದೆಯ ಕೈಹಿಡಿದು ಮನೆಯ ಕಡೆಗೆ ಹೊರಟಿತು.
–ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
ಬಹಳ ಅರ್ಥಗರ್ಭಿತವಾಗಿದೆ ಕಥೆ
ತುಂಬಾ ಮನಃಸ್ಪರ್ಶಿ ಕಥೆ ಸೋದರಿ. ಚಿತ್ರವಂತೂ ತುಂಬಾ ಮುದ್ದಾಗಿದೆ. ಬಹುಮುಖ ಪ್ರತಿಭೆಯ ತುಂಬಿದ ಕೊಡ ನೀವು.
ಧನ್ಯವಾದಗಳು ನಯನ ಮೇಡಂ
ಧನ್ಯವಾದಗಳು ಸೋದರಿ ಸುಜಾತಾ..
ವಾಟ್ಸಪ್ ಕಥೆಗಳು ತುಂಬಾ ಚೆನ್ನಾಗಿವೆ ವಂದನೆಗಳು ಸಹೋದರಿ
ಧನ್ಯವಾದಗಳು ವಿಜಯಾ ಮೇಡಂ
ಮಗುವಿನ ಮನಸ್ಸಿನ ಸಂಶಯವನ್ನು ಮಾತ್ರವಲ್ಲ ಓದುಗರ ಸಂಶಯವನ್ನೂ ನಿವಾರಿಸಿದ ಸರಳ, ಸುಂದರ ಕಥೆಯ ಜೊತೆಗೆ ಎಂದಿನಂತೆ ಚಂದದ ಚಿತ್ರ… ಧನ್ಯವಾದಗಳು ನಾಗರತ್ನ ಮೇಡಂ.
ಬರೆಹಕ್ಕೆ ಪ್ರತಿ ಕ್ರಿಯೆ ಬಂದಾಗ ಏನೋ ಧನ್ಯತಾಭಾವ..ಧನ್ಯವಾದಗಳು ಶಂಕರಿ ಮೇಡಂ
ಮಗುವಿನ ಪ್ರಶ್ನೆ, ನಮಗೂ ಹೌದಲ್ವಾ ಅನ್ನಿಸಿದರೂ, ಹಿರಿಯರ ನುಡಿಗಳಿಂದ ಮಗುವಿನೊಂದಿಗೆ ನಮಗೂ ಸಮಾಧಾನವಾಯಿತು. ಚಂದದ ಚಿತ್ರದೊಂದಿಗಿನ ಸುಂದರ ಕಥೆ.