ಸಮ್ಮಿಲನ
ಜಾಹ್ನವೀ ಅಕ್ಕಾ, ಪ್ಲೀಸ್ ಬೇಗ ಬನ್ನಿ, ಬೇಗ ಬನ್ನೀ . . . ಎಂದು ಮನೆಕೆಲಸದಾಕೆ ಹೇಮಾ ಗಾಭರಿಯಿಂದ ಕೂಗುತ್ತಾ ಬಾಗಿಲಲ್ಲಿ ಬಂದು ನಿಂತಿದ್ದಳು.
ಆಗ ತಾನೆ ತನ್ನ ಬೆಳಗಿನ ವೀಡಿಯೋ ಕಾಲ್ ಮೀಟಿಂಗ್ ಮುಗಿಸಿ ಕಾಫಿ, ಸ್ಯಾಂಡ್ ವಿಚ್ ಗಳನ್ನು ಹಿಡಿದು ಕುಳಿತಿದ್ದ ಜಾಹ್ನವಿ ಕೇಳಿದಳು –
ಏನಾಯಿತು ಹೇಮಾ,
ಅದೇ ಮುಂದಿನ ಬೀದಿಯಲ್ಲಿ ಇರುವ ಅಜ್ಜಿ ತಾತನ ಮನೆಯ ಅಜ್ಜಿ ಆತ್ಮಹತ್ಯೆ ಮಾಡ್ಕೊಳ್ಳೊಕ್ಕೆ ಹೋಗಿ ಬಿದ್ದು ಬಿಟ್ಟವ್ರೆ,, ಡಾಕಟ್ರು ಬಂದವ್ರೆ, ತಾತ ಏನೂ ತೊಚದೆ ಸುಮ್ಮನೆ ಅಳುತ್ತಾ ಕುಂತವ್ರೆ. .
ತಡೀ ಬಂದೆ – ಎನ್ನುತ್ತಾ ಜಾಹ್ನವಿ ತಕ್ಷಣ ಬೀಗದ ಕೈ ಮತ್ತು ಮೊಬೈಲುಗಳನ್ನು ತೆಗೆದುಕೊಂಡು ಹೇಮಳೊಂದಿಗೆ ಅಜ್ಜಿ ತಾತ ಇಬ್ಬರೇ ಇದ್ದ ಮನೆಗೆ ಬಂದಳು.
ಇತರರಿಗೆ ಸಹಾಯ ಹಸ್ತ ನೀಡುವಲ್ಲಿ ಸಂತೃಪ್ತಿಯನ್ನು ಕಾಣುತಿದ್ದ ಜಾಹ್ನವಿ ಡಾಕ್ಟರೊಂದಿಗೆ ಮಾತನಾಡಿದಾಗ ಅವರು ಹೇಳಿದರು
“ಇಲ್ಲಾ, ಇನ್ನೂ ಅವರು ಪ್ರಯತ್ನಿಸುತ್ತಿದ್ದಾಗಲೇ ಆಯತಪ್ಪಿ ಹಾಸಿಗೆಯ ಮೇಲೆ ಬಿದ್ದ ಪರಿಣಾಮವಾಗಿ ಹೆಚ್ಚಿನ ಪೆಟ್ಟೇನೂ ಆಗಿಲ್ಲ. ಆದರೆ ಇಬ್ಬರಿಗೂ ವಯಸ್ಸಾಗಿರುವುದರಿಂದ ತುಂಬಾ ಗಾಭರಿಯಾಗಿದ್ದಾರೆ. ದಯವಿಟ್ಟು ನೀವು ಕಾರಣವನ್ನು ವಿಚಾರಿಸಿ ಸಮಾಧಾನ ಹೇಳಿರಿ. ಅಜ್ಜಿಯವರಿಗೆ ಅವರ ಮನೋಒತ್ತಡ ತಹಬದಿಗೆ ಬರಲೆಂದು ಒಂದು ನಿದ್ರೆಯ ಮಾತ್ರೆಯನ್ನು ನೀಡಿದ್ದೇನೆ. ಅವರು ಚೆನ್ನಾಗಿ ನಿದ್ರೆ ಮಾಡಲಿ – ಎನ್ನುತ್ತಾ ಹೊರಟರು.
ಅಲ್ಲೇ ಅಡುಗೆ ಮನೆಗೆ ನುಗ್ಗಿ ಒಂದು ಲೋಟ ಹಾಲು ಬಗ್ಗಿಸಿಕೊಂಡು ಬಂದು ಆಗಲೇ ಕಣ್ಣು ಮುಚ್ಚಲು ಹವಣಿಸುತ್ತಿದ್ದ ಅಜ್ಜಿಯನ್ನು ಅನುನಯಿಸಿ ಹಾಲು ಕುಡಿಸಿದಾಗ ಮಗುವಂತೆ ಮಲಗಿದ ಅಜ್ಜಿಗೆ ಹೊದ್ದಿಗೆ ಹೊದೆಸಿ ತಾತನನ್ನು ಮಾತನಾಡಿಸಿದಳು ಜಾಹ್ನವಿ .
ಜಾಹ್ನವಿ ಬಂದು ಪರಿಸ್ಥಿತಿಯನ್ನು ನಿಭಾಯಿಸಿದ್ದರಿಂದಲೂ ಡಾಕ್ಟರ್ ಏನೂ ಭಯವಿಲ್ಲ ಎಂದು ಹೇಳಿದ್ದರಿಂದಲೂ ಸ್ವಲ್ಪ ಸಮಾಧಾನ ಹೊಂದಿದ ಅಜ್ಜ ಕಾರಣವನ್ನು ವಿವರಿಸಿದರು.
ನೋಡಮ್ಮಾ ಜಾಹ್ನವಿ , ನಾಲ್ಕು ವರ್ಷಗಳ ನಂತರ ಮುಂದಿನ ವಾರ ನನ್ನ ಮಗ, ಸೊಸೆ, ನಾವಿಬ್ಬರು ನೋಡಿಯೇ ಇಲ್ಲದ ಎರಡು ವರ್ಷದ ಮೊಮ್ಮಗು ಅಮೆರಿಕೆಯಿಂದ ಬರಬೇಕಿತ್ತು. ಇಂದು ಬೆಳಗ್ಗೆ ಮಗ ಫೋನ್ ಮಾಡಿ ಆಫೀಸಿನಲ್ಲಿ ಒತ್ತಡ ಇರುವುದರಿಂದ ಬರಲಾಗುವುದಿಲ್ಲವೆಂದು ತಿಳಿಸಿದ. ನಮಗಿಬ್ಬರಿಗೂ ತುಂಬಾ ನಿರಾಶೆಯಾಯಿತು. ನೀನೂ ಮುಂಚೆ ಅಮೆರಿಕೆಯಲ್ಲಿಯೇ ಇದ್ದವಳು, ನಿಮ್ಮ ಅತ್ತೆ, ಮಾವ, ಅಪ್ಪನನ್ನು ನೋಡಿಕೊಳ್ಳಲು ಇಲ್ಲೇ ಬಂದು ಕೆಲಸ ಮಾಡುತ್ತಿಲ್ಲವೇ, ನಾವೂ ಕೊನೆಗಾಲದಲ್ಲಿ ಮಕ್ಕಳು, ಮೊಮ್ಮಕ್ಕಳು ಅವರ ಸಂಸಾರದೊಂದಿಗೆ ಸುಖವಾಗಿ, ನೆಮ್ಮದಿಯಿಂದ ಇರಬೇಕೂಂತ ಕಷ್ಟಪಟ್ಟು ಓದಿಸಿ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ದೂರದೂರಿಗೆ ಕಳಿಹಿಸಿದರೆ, ನಮಗೆ ಒಂದು ಮಾತೂ ತಿಳಿಸದೆ ಅಲ್ಲೇ ಮದುವೆಯೂ ಆಗಿ, ಅಲ್ಲಿಯ ನಾಗರೀಕ ಸ್ಥಾನಮಾನಗಳನ್ನೂ ತೆಗೆದುಕೊಂಡು ಸೆಟಲ್ ಆಗಿಬಿಟ್ಟ ಮಗ. ಎಲ್ಲ ನಿರಾಶೆಗಳನ್ನೂ ನುಂಗಿಕೊಂಡು ಎಲ್ಲೋ ಚೆನ್ನಾಗಿರಲಿ ಎಂದು ನಾವು ಕಾಲ ಕಳೆಯುತ್ತಿದ್ದೇವೆ. ಆದರೂ ಕೊನೆಯಪಕ್ಷ ವಷರ್ಕ್ಕೊಂದು ಬಾರಿಯೋ, ಎರಡು ವರ್ಷಕ್ಕೊಮ್ಮೆಯಾದರೂ ಬಂದು ಹೋಗಿ ಮಾಡುವುದಿಲ್ಲ. ಮೊಮ್ಮಗುವನ್ನಂತೂ ನೋಡಿಯೇ ಇಲ್ಲ. ಇದು ಮೂರನೆಯ ಸಲ, ಹೀಗೆ ಬರುತ್ತೀನೆಂದು ಹೇಳಿ ಕಾನ್ಯಲ್ ಮಾಡುತ್ತಿರುವುದು. ಅವಳಿಗೇನು, ನನಗೂ ನಿರಾಶೆ ತಾಳಲು ಆಗುತ್ತಿಲ್ಲ, ಇಬ್ಬರೂ ಒಟ್ಟಿಗೆ ಹೋಗಿ ಬಿಡಬೇಕು ಅಷ್ಟೆ – ಎನ್ನುತ್ತಾ ತಾತ ಬಿಕ್ಕಿ ಬಿಕ್ಕಿ ಅಳತೊಡಗಿದರು.
ತಾತ, ನೀವು ಹೇಳುವುದೇನೋ ಸರಿ, ಆದರೆ ಅಲ್ಲಿ ಅವರ ಪರಿಸ್ಥಿತಿ ಹೇಗಿದೆಯೋ ಗೊತ್ತಿಲ್ಲ. ಇಬ್ಬರೂ ಮುಕ್ತವಾಗಿ ಮಾತನಾಡಿ ಅದೃಷ್ಟವಶಾತ್, ನನಗೂ ನನ್ನ ಪತಿಗೂ ಹಿಂದಿರುಗಿ ಬರುವ ಅವಕಾಶ ಒದಗಿ ಬಂತು. ಅಲ್ಲಿರುವ ಮಕ್ಕಳಿಗೂ ತಂದೆ ತಾಯಿಯ ಚಿಂತೆ ತುಂಬಾ ಕಾಡುತ್ತಿರುತ್ತದೆ. ಆದರೆ ಕೆಲವೊಮ್ಮೆ ಪರಿಸ್ಥಿತಿಯ ಕೈಗೊಂಬೆಯಾಗಿಬಿಡಬೇಕಾಗುತ್ತದೆ. ನನಗೆ ನಿಮ್ಮ ಮಗನ ಫೋನ್ ನಂಬರ್ ಕೊಡಿ, ವಿಚಾರಿಸುತ್ತೇನೆ.
ನೀನು ʼಹೀಗಾಯಿತುʼ ಎಂದು ಹೇಳಿದರೆ ಅವನು ಅಲ್ಲಿ ಗಾಭರಿಯಾಗುತ್ತಾನೆ, ಬೇಡಮ್ಮಾ ಇರಲಿ ಬಿಡು, ನಮ್ಮ ಹಣೆಬರಹ ನಾವೇ ಅನುಭವಿಸುತ್ತೇವೆ.
ಇಲ್ಲಾ ತಾತ, ನಾನೂ ಅಲ್ಲಿದ್ದೆನಾದ್ದರಿಂದ ಅಲ್ಲಿರುವವರ ಪರಿಸ್ಥಿತಿಯ ಒತ್ತಡಗಳ ಅರಿವು ನನಗೆ ಸಾಕಷ್ಟು ಇದೆ. ನಿಮ್ಮ ಅಭಿಮಾನಕ್ಕೆ ಭಂಗ ಬರುವಂತೆ ಅಥವಾ ನಿಮ್ಮ ಮಗನಿಗೆ ಗಾಭರಿಯಾಗುವಂತೆ ನಾನು ಮಾತನಾಡುವುದಿಲ್ಲ, ನಂಬಿಕೆಯಿದ್ದರೆ ಫೋನ್ ನಂಬರ್ ಕೊಡಿ.
ಅಯ್ಯೋ, ನಿನ್ನ ಬಗ್ಗೆ ಈ ಮೊಹಲ್ಲಾದಲ್ಲಿ ಯಾರಿಗೆ ಗೊತ್ತಿಲ್ಲ? ಎಲ್ಲರಿಗೂ ಅಚ್ಚುಮೆಚ್ಚಿನವಳು ನೀನು. ಹಿರಿಯರಿಗೆ ಒಳ್ಳೆಯ ಮಗಳಾಗಿ, ಸೊಸೆಯಾಗಿ, ಗಂಡನಿಗೆ ಒತ್ತಾಸೆಯಾದ ಹೆಂಡತಿ, ಒಳ್ಳೆಯ ತಾಯಿ, ನೆರೆಹೊರೆಯವರ ಕಷ್ಟಸುಖಗಳಿಗೆ ಸ್ಪಂದಿಸುವ ನಿನ್ನ ಬಗ್ಗೆ ನಮಗೆಲ್ಲರಿಗೂ ಹೆಮ್ಮೆಯಿದೆ. ಅಲ್ಲೇ ಡೈರಿಯಲ್ಲಿ ಮಗನ, ಸೊಸೆಯ, ಅವರ ಮನೆಯ, ಎಲ್ಲಾ ನಂಬರುಗಳನ್ನೂ ಬರೆದಿಟ್ಟಿದ್ದೇನೆ, ತೆಗೆದುಕೋ.
ತಾತನಿಗೆ ಧೈರ್ಯದ ಮಾತುಗಳನ್ನು ಹೇಳಿ, ಮಧ್ಯಾನ್ಹ ಮತ್ತು ರಾತ್ರಿಯ ಊಟಗಳನ್ನು ತಾನೇ ತಂದುಕೊಡುವುದಾಗ ತಿಳಿಸಿ ಮನೆಗೆ ಬಂದ ಜಾಹ್ನವಿ ಅವರ ಮಗನ ವಾಟ್ಸಪ್ಪಿನಲ್ಲಿ, ತನ್ನ ಕಿರುಪರಿಚಯವನ್ನು ಮಾಡಿಕೊಂಡು, ತುರ್ತಾಗಿ ಮಾತನಾಡಬೇಕಾಗಿದೆ, ಕರೆಮಾಡಿ ಎಂದು ಸಂದೇಶ ಕಳುಹಿಸಿದಳು.
ಸಂದೇಶ ಹೋದ ಹತ್ತು ನಿಮಿಷಗಳಲ್ಲೇ ಆಗ ಅಮೆರಿಕೆಯಲ್ಲಿ ಮಧ್ಯರಾತ್ರಿಯಾದರೂ ಮಗನಿಂದ ಕಾಲ್ ಬಂತು. ಮಗ ಹೇಳಿದ,
ನಮಸ್ಕಾರ ಜಾಹ್ನವಿವರೆ, ನಿಮ್ಮ ಮತ್ತು ನಮ್ಮ ಕಾಮನ್ ಫ್ರಂಡ್ ಆದ ಗಿರೀಶರಿಂದ ನಿಮ್ಮ ಬಗ್ಗೆ, ನಿಮ್ಮ ಒಳ್ಳೆಯ ವ್ಯಕ್ತಿತ್ವದ ಬಗ್ಗೆ ನನಗೆ ತಿಳಿದಿದೆ. ಈಗ ಸಧ್ಯಕ್ಕೆ ನೀವು ನಮ್ಮ ತಂದೆ ತಾಯಿ ಇರುವ ಪಕ್ಕದ ಬೀದಿಯಲ್ಲಿ ಇರುವುದೂ ಗೊತ್ತು. ಹೇಳಿ, ಏನು ವಿಷಯ, ಎನಿಥಿಂಗ್ ಸೀರಿಯಸ್?
ಜಾಹ್ನವಿ ಹೇಳಿದಳು – ನಮಸ್ಕಾರ, ನೀವೇ ವಿಷಯ ಎತ್ತಿದ್ದು ನನ್ನ ಕೆಲಸ ಹಗುರವಾಯಿತು. ನನ್ನನ್ನು ತಪ್ಪು ತಿಳಿಯಬೇಡಿ, ನಿಮ್ಮ ಕೌಟುಂಬಿಕ ವಿಷಯದಲ್ಲಿ ತಲೆ ಹಾಕುತ್ತಿದ್ದೇನೆಂದು. ಅದೃಷ್ಟವಶಾತ್ ನನಗೆ ಇಲ್ಲಿ ಇರುವವರ ಮನಸ್ಥಿತಿ, ಅಲ್ಲಿ ಇರುವವರ ಪರಿಸ್ಥಿತಿ ಎರಡರ ಪರಿಚವೂ ಇರುವುದರಿಂದ ಸಾಧ್ಯವಾದರೆ ಸಹಾಯ ಮಾಡುವಾಸೆ.
ಹೌದು, ಹೌದು ಜಾಹ್ನವಿ , ಗಿರೀಶ ನಿಮ್ಮ ಬಗ್ಗೆ ತುಂಬಾ ಒಳ್ಳೆಯ ಅಭಿಪ್ರಾಯ ಕೊಟ್ಟಿದ್ದಾನೆ, ಹೇಳಿ ಜಾಹ್ನವಿ , ಹೇಳಿ.
ನೀವ್ಯಾಕೆ ನಿಮ್ಮ ಭಾರತದ ಪ್ರವಾಸವನ್ನು ರದ್ದು ಮಾಡಿದಿರಿ?
ಇದ್ದಕ್ಕಿದಂತೆ ನಮ್ಮ ಕಂಪನಿಯಲ್ಲಿ ಲೇ-ಆಫ್, ಅಂದರೆ ನಿಮಗೆ ತಿಳಿದಿರುವಂತೆ, ಕೆಲಸದಿಂದ ತೆಗೆದು ಹಾಕುವ ಪ್ರಕ್ರಿಯೆ ಶುರುವಾದದ್ದು, ಜಾಸ್ತಿಯಾಗಿಬಿಟ್ಟಿದೆ. ಇಂತಹ ಸಮಯದಲ್ಲಿ ಹೇಗೆ ಬರಲಿ? ಈ ವಿಷಯಗಳನ್ನೆಲ್ಲಾ ಅಮ್ಮ, ಅಪ್ಪನಿಗೆ ಹೇಳಲಾರೆ
ನಿಮ್ಮ ಹೆಂಡತಿ ಮತ್ತು ಮಗುವಾದರೂ ಬರಬಹುದಲ್ಲ?
ವ್ಹಾಟ್, ನಮ್ಮ ಅಮ್ಮ ಅಪ್ಪನ ಜೊತೆ, ನನ್ನ ಹೆಂಡತಿ ಮಗುವಿನೊಂದಿಗೆ ನಾನು ಇಲ್ಲದೆ ಬಂದು ಇರುವುದಾ? ನಾನು ಊಹಿಸಲೂ ಸಾಧ್ಯವಿಲ್ಲ.
ಊಹಿಸಲೂ ಬೇಕು, ಸಾಧ್ಯಗೊಳಿಸಲೂ ಬೇಕು. ದಯವಿಟ್ಟು ಕ್ಷಮಿಸಿ, ನಿಮ್ಮ ತಾಯಿ ನಿರಾಶೆ ತಾಳಲಾರದೆ ಇಂದು ಆತ್ಮಹತ್ಯೆಗೆ ಪ್ರಯತ್ನಿಸಿದರು. ಗಾಭರಿಯಾಗಬೇಡಿ, ದೇವರ ದಯೆಯಿಂದ ಅನಾಹುತ ತಪ್ಪಿದೆ. ಯಾಕೆ ನಿಮ್ಮ ಹೆಂಡತಿ ಮತ್ತು ಮಗು ಬಂದಿರಬಾರದು? ಹಿಂದಿನ ದಿನಗಳ ಕೂಡು ಕುಟುಂಬಗಳನ್ನು ನೆನೆಸಿಕೊಳ್ಳಿ, ಜೀವನಪೂರ್ತಿ ಒಟ್ಟಿಗೆ ಇರುತ್ತಿರಲಿಲ್ಲವೆ? ಅವರುಗಳು ಬರುವುದರಿಂದ ಎರಡು ರೀತಿಯ ಪ್ರಯೋಜನ ಇರುತ್ತದೆ. ಈಗ ನೀವುಗಳು, ನಿಮ್ಮ ಕಾರಣಕ್ಕಾಗಿ ಬರದಿದ್ದರೂ ಅವರ ಮನಸ್ಸಿನಲ್ಲಿ ಸೊಸೆ ಬರಲು ಬಿಡುವುದಿಲ್ಲ ಎಂಬ ಭಾವ ಸಾಮಾನ್ಯವಾಗಿ ಇರುತ್ತದೆ. ಸೊಸೆಯ ಮೇಲೂ ಬೇಸರ, ಮಗ ಸೊಸೆಯ ಕೈಗೊಂಬೆ ಎಂದು ಮಗನ ಮೇಲೂ ಬೇಸರ ಇದ್ದು ಒಂಟಿತನದ ಅನಾಥಪ್ರಜ್ಞೆಯಿಂದ ಹಿರಿಯಜೀವಗಳು ನರಳುತ್ತಿವೆ. ಅಕಸ್ಮಾತ್ ಇಂದೇನಾದರೂ ಅನಾಹುತವಾಗಿದ್ದರೆ ನೀವು ಜೀವನಪೂರ್ತಿ ಅಪರಾಧೀ ಪ್ರಜ್ಞೆಯಿಂದ ನರಳುತ್ತಿದ್ದಿರಿ. ಸೊಸೆ ಮತ್ತು ಮೊಮ್ಮಗು ಬಂದರೆ ಅಷ್ಟರ ಮಟ್ಟಿಗಾದರೂ ಅವರಿಗೆ ಸಮಾಧಾನ ಸಿಗುತ್ತದೆ. ಅಲ್ಲದೆ ಸೊಸೆಯೊಂದಿಗೆ ಇರುವ ಅಂತರ ಕೂಡ ಕಡಿಮೆಯಾಗಬಹುದು
ಅತ್ತ ಕಡೆಯಿಂದ – ನಾಟ್ ಎ ಬ್ಯಾಡ್ ಐಡಿಯಾ – ಎಂಬ ಉದ್ಗಾರ ಕೇಳಿಬಂತು. ಮುಂದುವರೆದು – ನನ್ನ ಹೆಂಡತಿಯೊಂದಿಗೆ ಮಾತನಾಡುತ್ತೇನೆ, ಮತ್ತೆ ನಿಮ್ಮನ್ನು ಸಂಪರ್ಕಿಸುತ್ತೇನೆ.
ನಾಳೆ ನಿಮ್ಮ ಹೆಂಡತಿಗೂ ನನ್ನ ಜೊತೆ ಮಾತನಾಡಲು ತಿಳಿಸಿ ಯಾವುದೇ ರೀತಿಯ ತೊಂದರೆಯೂ ಬರುವುದಿಲ್ಲ, ಬಂದರೂ ನಾನು ಒತ್ತಾಸೆಯಾಗಿ ನಿಲ್ಲುತ್ತೇನೆ.
ನಿಮ್ಮ ಸಹಾಯಕ್ಕೆ ಧನ್ಯವಾದಗಳು.
ಕರೆ ಕಟ್ ಆಯಿತು.
ಮುಂದಿನದೆಲ್ಲಾ ಸರಾಗವಾಗಿ ನಡೆಯಿತು. ಎಲ್ಲವನ್ನೂ ಸರಪ್ರೈಸ್ ಆಗಿ ಇಡಲಾಯಿತು.
ಮನೆಯ ಮುಂದೆ ಟ್ಯಾಕ್ಸಿ ಬಂದು ನಿಂತಿತು. ಒಳಬಂದ ಸೊಸೆ ಅತ್ತೆ ಮಾವನ ಕಾಲಿಗೆ ನಮಸ್ಕರಿಸಿ, ಅವರ ಮಡಿಲಿನಲ್ಲಿ ಮೊಮ್ಮಗುವನ್ನು ಕೂಡಿಸಿ ಕೇಳಿದಳು –
ಅವರ ಆಫೀಸಿನ ಒತ್ತಡದಿಂದ ಪ್ರೋಗ್ರಾಂ ಕಾನ್ಸಲ್ ಮಾಡುವಂತಾಗಿತ್ತು. ಆದರೆ ನಮಗೆ, ಮಗುವನ್ನು ನಿಮಗೆ ತೋರಿಸಬೇಕಿತ್ತು, ನನಗೂ ನಿಮ್ಮನ್ನು ನೋಡಬೇಕೆನಿಸಿಸತ್ತು. ಅದಕ್ಕೇ ನಾವಿಬ್ಬರೇ ಬಂದು ಬಿಟ್ಟೆವು. ಇನ್ನು ಮುಂದೆ ಹೀಗೆಯೇ, ಇಬ್ಬರೂ ಬರಲು ಶತಾಯಗತಾಯ ಪ್ರಯತ್ನಿಸುತ್ತೇವೆ, ಅಕಸ್ಮಾತ್ ಸಾಧ್ಯವಾಗದಿದ್ದರೆ ಯಾರಿಗೆ ಸಾಧ್ಯವೋ ಅವರೇ ಬಂದುಬಿಡುತ್ತೇವೆ.
ಅಜ್ಜಿ ಮತ್ತು ತಾತನ ಕಣ್ಣುಗಳಲ್ಲಿ ಸಾವಿರ ಕ್ಯಾಂಡಲ್ಲಿನ ಸಂತೋಷದ ಬೆಳಕು ಚಿಮ್ಮಿತು.
ಸೊಸೆ ಮತ್ತು ಮೊಮ್ಮಗುವಿನೊಂದಿಗೆ ಮೂರುವಾರಗಳನ್ನು ಅತ್ಯಂತ ಸಂತಸದಿಂದ ಕಳೆದ ಅಜ್ಜಿ ತಾತ, ಹದಿನೈದು ವರ್ಷಗಳು ಚಿಕ್ಕವರಾದಂತಾದರು.
ಅವರುಗಳು ಊರಿಗೆ ಹೊರಟ ನಂತರ ಜಾನ್ಹವಿಗೆ ಹೇಳಿದರು – ನಮಗೂ ಬದಲಾಗಿರುವ ಕಾಲದ ಅರಿವು ಒಂದಷ್ಟು ಇದೆ. ಆದರೆ ಪೂರ್ತಿಯಾಗಿ ಬಿಟ್ಟು ಬದುಕಲು ಸಾಧ್ಯವಾಗದು. ಇಷ್ಟು, ಆಗಾಗ್ಗೆ ಬಂದು ಒಂದು ಮುಷ್ಠಿ ಅಭಿಮಾನ, ಅಂತ:ಕರಣ, ಒಂದು ಮುಷ್ಠಿ ಪ್ರೀತಿ ವಿಶ್ವಾಸಗಳನ್ನು ನೀಡುತ್ತಿದ್ದರೆ ಅದರ ನಿರೀಕ್ಷೆಯಲ್ಲಿ, ನೆನಪಿನಲ್ಲಿ ಈ ದಿನಗಳನ್ನು ನೆಮ್ಮದಿಯಾಗಿ ಕಳೆಯುತ್ತೇವೆ.
ಜಾಹ್ನವಿಯ ಮುಖದಲ್ಲಿ ತೃಪ್ತಿಯ ಭಾವ ಮೂಡಿತು.
-ಪದ್ಮಾ ಆನಂದ್ , ಮೈಸೂರು
ಸಕಾಲಿಕ, ಮನಮಿಡಿಯುವ ಕಥೆ.
ಮೆಚ್ವಿ ಪ್ರಕಟಿಸಿದ್ದಕ್ಕಾಗಿ ಆತ್ಮೀಯ ಹೇಮಮಾಲಾ, ನಿಮಗಿದೋ ವಂದನೆಗಳು.
ಮನಮಿಡಿಯುವ ಕತೆ.
ಧನ್ಯವಾದಗಳು
ಪ್ರಕಟಿಸಿದ “ಸುರಹೊನ್ನೆ,” ಗೆ ಧನ್ಯವಾದಗಳು.
ಕುತೂಹಲ ಭರಿತ ದಾರಾವಾಹಿ.
ಧನ್ಯವಾದಗಳು.
ಇಂದಿನ ಪರಿಸ್ಥಿತಿಯನ್ನು ಬಹಳ ಸುಂದರವಾಗಿ ಕತೆಯ ರೂಪದಲ್ಲಿ ಬರೆಯಲಾಗಿದೆ. ಕತೆಯ ಅಂತ್ಯ ತುಂಬಾ ಚೆನ್ನಾಗಿದೆ
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
ವರ್ತಮಾನಕಾಲದ ಸಂಗತಿ..ಸ್ಪಂದಿಸುವ ಗುಣ..ಮನಮುಟ್ಟುವಂತೆ ಇದೆ..ನೆರವಿನ ಹಸ್ತ…ಹಿರಿಯರಿಗೆ ಬದುಕಿನಲ್ಲಿ… ಭರವಸೆ ಕೊಡುವುದರಿಂದ ಆಗುವ ಸಾರ್ಥಕತೆ..ಕಥೆ..ಚೆನ್ನಾಗಿ ಮೂಡಿಬಂದಿದೆ… ಅಭಿನಂದನೆಗಳು ಪದ್ಮಾ ಮೇಡಂ
.
ನಿಮ್ಮ ಸಕಸರಾತ್ಮಕ ವಿಶ್ಲೇಷಣೆ ಹಾಗೂ ಮೆಚ್ಚುಗೆಗೆ ಧನ್ಯವಾದಗಳು..
ನೆರೆಹೊರೆಯವರ ಕಷ್ಟ ಸುಖಗಳಿಗೆ ಸ್ಪಂದಿಸುವ ಜಾಹ್ನವಿಯು ಅಜ್ಜ, ಅಜ್ಜಿ ಕುಟುಂಬಕ್ಕೆ ಮಾಡಿದ ನೆರವು ಅತ್ಯಂತ ಸೂಕ್ತವಾಗಿದ್ದು ,ಕಥೆ ಸುಖಾಂತವಾಗಲು ಕಾರಣವಾಯಿತು. ಚಂದದ ಚೊಕ್ಕ ಕಥೆ..ಪದ್ಮಾ ಮೇಡಂ.
ತಮ್ಮ ಮೆಚ್ಚುಗೆಯ ನುಡಿಗಳಿಗೆ ವಂದನೆಗಳು.
ಸಕಾಲಿಕವಾದ ಮನ ಮಿಡಿಯುವ ಕಥೆ
ಹಿಂದಿನವರ ಹಾಗೂ ಇಂದಿನವರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಪರಿಸ್ಥಿತಿಯನ್ನು ತಿಳಿಗೊಳಿಸುವ ಕಥೆ
ತಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು.