ಹೊಂಗೆ
ನನ್ನ ಬಾಲ್ಯದಲ್ಲೆಂದೋ
ಚಿಕ್ಕ ಗಿಡವಾಗಿದ್ದ
ನಮ್ಮ ಮನೆಯ ಮುಂದಿನ ಹೊಂಗೆ
ಇಂದು ನಾ ಮುದಿಯಾಗಿದ್ದರೂ
ಗ್ರೀಷ್ಮದ ಛಳಿಗೆ
ಮೈ ನಡುಗಿ ನಡೆವಾಗ
ಆಯ ತಪ್ಪಿದರೂ
ಈ ಹೊಂಗೆ
ಪ್ರತಿ ವಸಂತದಲ್ಲೂ
ಕಾಯಕವೆಂಬಂತೆ
ಚಿಗುರಿ, ಎಳೆ ಹಸಿರು ಎಲೆಗಳಿಂದ
ಮೈದುಂಬಿ ನಳನಳಿಸುವ ಪರಿ
ಎನಗೆ ಎಲ್ಲಿಲ್ಲದ ಸೋಜಿಗ!
ಹೊಂಗೆಯೊಂದಿಗೇ ಬೆಳೆದ ನನಗೆ
ಈಗ ವಸಂತ ಒಂದು ಮಾಸ ಮಾತ್ರ
ವರುಷ ಕಳೆದಂತೆಲ್ಲ
ಚಿಗುರುವುದಿರಲಿ
ಅಳಿಯದೇ ಉಳಿದಿರುವುದೇ ಸಾಧನೆ
ಈ ಸಾಧನೆಗೇ ಏನೆಲ್ಲ ತಯಾರಿ!
ಓದು, ಬರಹ,
ಬಗೆ ಬಗೆಯ ಊಟ ಉಪಚಾರ
ಆಕಾಶವೇ ತಲೆಮೇಲೆ ಬಿದ್ದಂತೆ
ನೌಕರಿಯ ತಾಕಲಾಟ, ಪೀಕಲಾಟ
ಹೆಂಡತಿ, ಮಕ್ಕಳು, ಮನೆ ಮಠ
ನೆಂಟರು ಇಷ್ಟರು ಎಂದೆಲ್ಲ
ಹೆಣಗಾಡಿದರೂ
ಕಳೆದ ವಸಂತದ ಕ್ಷಣಗಳೆಷ್ಟು?
ಬರೀ ಬೆರಳೆಣಿಕೆಯಷ್ಟು!
ಈ ಹೊಂಗೆಗೋ
ಪ್ರತೀ ವರುಷಕ್ಕೊಮ್ಮೆ ವಸಂತ
ಅದೇ ಚಿಗುರು,
ಅದೇ ತಂಗಾಳಿ
ಅದೇ ನೆರಳು
ಅದಕ್ಕೇನು ತಯಾರಿ?
ಒಂದು ದಿನ ನೀರುಣಿಸಲಿಲ್ಲ
ಮಳೆ ಬಂದಾಗ ನೀರು
ಮನೆಯ ಮುಂದೆ ಅದಕ್ಕೆಂದು
ಕಟ್ಟಿಸಿದ ಸಿಮೆಂಟಿನ ಕಟ್ಟೆ ಅದರ ಸುತ್ತ
ಅಕ್ಕ ಪಕ್ಕದ ಜಾಗದಲಿ
ಹೊಂಗೆ ನೀಡುವ ನೆರಳಲಿ
ಕಾರು ನಿಲ್ಲಿಸಲು ಸಿಮೆಂಟಿನ ನೆಲ
ಕಟ್ಟೆಯಲಿ ಇದ್ದ ಅಲ್ಪ ಜಾಗದಲಿ
ಬಿದ್ದ ಮಳೆಯ ನೀರನಷ್ಟೇ ಹೀರಿ
ಪ್ರತಿ ವಸಂತಕೆ ಚಿಗುರುವ
ಹೂವು ಕಾಯ ನೋಡಿ ಸುಖಿಸಿದರೂ
ಕಾಯಿ ಕೆಳಗುದುರಿ
ಕಾರಿನ ಮೇಲೆ ಅಂಟಿನ ಕಲೆಯಾಗುವುದೆಂದು
ಹಪಹಪಿಸುವ ನಾವು
ಹೊಂಗೆಯಂತೆ
ಪ್ರತೀ ವರುಷದಲ್ಲೂ
ಚಿಗುರಲು ಸಾಧ್ಯವೆ?
ಪ್ರಕೃತಿಯದೆಲ್ಲವನು ಹೀರಿ
ಏನನ್ನೂ ಹಿಂದಿರುಗಿಸದ
ಮನುಜನೆಡೆಯಲಿ
ಹೊಂಗೆಯ ವಸಂತ
ಎಷ್ಟು ದಿನವೋ
ಭಗವಂತನೇ ಬಲ್ಲ.
-ಎಂ.ಆರ್. ಆನಂದ, ಮೈಸೂರು
ಹೊಂಗೆ ಹೂಗಳ ನರುಗಂಪು ಹಬ್ಬುತ್ತಿರುವ ಈ ಸಮಯಕ್ಕೆ ಸಕಾಲಿಕವಾದ ಚೆಂದದ ಕವನ.
ವಾವ್ ..ಹೊಂಗೆಯ ಮರದೊಡನೆ..ಬದುಕು ಬವಣೆಯ ..ಹೋಲಿಕೆ..ಅದರೊಡನೆ ಭಗವಂತನ …ಸೃಷ್ಟಿಯ ವೈಖರಿ..ಅರ್ಥಪೂರ್ಣ ವಾದ ಕವನ..ಧನ್ಯವಾದಗಳು ಸಾರ್
ಚಂದದ ಕವನ
ಹೊಂಗೆಯ ಬಾಳಿನೊಂದಿಗೆ ಮನುಜನ ಬಾಳಿನ ಹೋಲಿಕೆ ಕವನದಲ್ಲಿ ಚೆನ್ನಾಗಿ ಮೂಡಿಬಂದಿದೆ
ಹೌದು! ಹೊಂಗೆಯ ವಸಂತ ಎಷ್ಟು ದಿನವೋ ಭಗವಂತನೇ ಬಲ್ಲ! ಕವನದ ನಡಿಗೆ ಚೆನ್ನಾಗಿದೆ.
ಮನೆಯ ಮುಂದಿನ ಹೊಂಗೆ ಬಾಳ ಭಾಗವಾಗಿರುವುದ ಬಿಂಬಿಸುವ ಸುಂದರ ಕವನ.