ಅಲೆಮಾರಿಯ ಸ್ವಗತ

Share Button


ಕಣ್ತೆರೆದಾಗ ಕಂಡಿದ್ದು ಸುತ್ತ ಇದ್ದ ಕತ್ತಲು. ಭಯದಿಂದ ದನಿಯೇ ಹೊರಡದಂತಾಗಿತ್ತು. ನಿಧಾನವಾಗಿ ಸುತ್ತಲಿದ್ದ ಎಲ್ಲವೂ ಕಾಣುವಂತಾಗಿದ್ದು ಬೆಳಕು ಮೂಡಿದಾಗಲೇ. ಬೆಚ್ಚಗಿದ್ದ ಗೂಡಿನೊಳಗೆ ನಾನಿದ್ದೆ. ಅಮ್ಮ ತಂದು ಬಾಯಿಗಿಟ್ಟ ಆಹಾರವನ್ನು ಗುಟುಕರಿಸಿದಾಗ ಹಸಿವು ಅಡಗಿ ನಿದ್ದೆ ಸೆಳೆದಿತ್ತು. ಕಣ್ಮುಚ್ಚಿದ್ದೆ. ಮತ್ತೆ ಕಣ್ಣು ತೆರೆದಾಗ ಬೆಳಕು ಮಾಯವಾಗಿತ್ತು. ಮತ್ತದೇ ಕತ್ತಲು. ಮನದೊಳಗೆ ಏನೋ ಭಯ. ನನ್ನ ಜೊತೆಯಲ್ಲಿದ್ದ ಇತರರನ್ನೂ ನೋಡಿದೆ. ಅವರದ್ದೂ ಅದೇ ಸ್ಥಿತಿ. ನಾವೆಲ್ಲರೂ ಒಂದೇ ಗೂಡಿನಲ್ಲಿ ವಾಸವಾಗಿದ್ದೆವು. ಬೆಳಕಾದಾಗ ಮತ್ತೆ ಅಮ್ಮನಿತ್ತ ಗುಟುಕು ಹೊಟ್ಟೆಗೆ ಸೇರಿತ್ತು. ಕೆಲವು ದಿನಗಳವರೆಗೆ ಹೀಗೇ ನಡೆದಿತ್ತು. ಅದೊಂದು ದಿನ ನನಗೇ ಅರಿವಿಲ್ಲದಂತೆ ಗಂಟಲಿನಿಂದ ನನ್ನ ದನಿ ಹೊರಬಂದಿತ್ತು. ಅಷ್ಟಕ್ಕೇ ಆಹಾರವನ್ನು ಕೊಡುತ್ತಿದ್ದ ಅಮ್ಮನಿಗೆ ಕೋಪ ಬಂದಿತ್ತು.

ಯಾಕಮ್ಮ ನನ್ನ ಮೇಲೆ ಕೋಪ?-ನಾನು ಕೇಳಿದ್ದೆ. ನನ್ನ ಮಕ್ಕಳ ನಡುವೆ ನೀನೇಕೆ ಇರಬೇಕು? ನಾನು ನಿನ್ನ ಅಮ್ಮನಲ್ಲ, ನಡಿ ಹೊರಗೆ.-ಅವಳೆಂದಳು. ಅಮ್ಮನಲ್ಲವೇ? ಚಿಕ್ಕಮ್ಮನಿರಬೇಕು ಎಂದು ಭಾವಿಸಿ -ಚಿಕ್ಕಮ್ಮಾ, ಚಿಕ್ಕಮ್ಮಾ, ನಾನಿಲ್ಲೇ ಇರ್‍ತೀನಿ ಇವರೆಲ್ಲರಜೊತೆಗೆ-ಎಂದೆ. ಇಲ್ಲಿದ್ರೆ ನಿನಗೆ ಊಟ ಯಾರು ಕೊಡ್ತಾರೆ? ನನ್ನ ಮಕ್ಕಳಿಗೆ ತಂದುಕೊಡೋದೇ ನನಗೆ ಕಷ್ಟವಾಗಿದೆ, ನೀನು ಪರಪುಟ್ಟ, ನೀನೀಗಲೇ ಇಲ್ಲಿಂದ ಹೊರಟುಬಿಡು-ಎನ್ನುತ್ತ ನನ್ನನ್ನು ಗೂಡಿನಿಂದ ಹೊರಹಾಕಿದಳು. ವಿಧಿಯಿಲ್ಲದೆ ನಾನು ಗೂಡಿನಿಂದ ಹೊರಬಂದೆ. ಇಷ್ಟಕ್ಕೂ ನಾನು ಮಾಡಿದ ತಪ್ಪೇನು ಎನ್ನುವುದೇ ನನಗೆ ತಿಳಿಯಲಿಲ್ಲ. ನನಗೆ ತಿಳಿದಂತೆ ನನ್ನ ಜೊತೆಯಲ್ಲಿದ್ದ ಎಲ್ಲರೂ ಕಾ ಕಾ ಎಂದಾಗ ನಾನು ಮಾತ್ರ ಕ್ವಿಕ್ ಕ್ವಿಕ್ ಎಂದಿದ್ದೆ. ನನ್ನ ದನಿಯೇ ನನಗೆ ಮುಳುವಾಗಿತ್ತು. ಹಾರುತ್ತ ಹೋಗಿ ಮರವೊಂದರ ಕೊಂಬೆಯಲ್ಲಿ ಎಲೆಗಳ ನಡುವೆ ಅಡಗಿ ಕುಳಿತೆ. ಅಂದಿನಿಂದ ನನ್ನ ಅಲೆಮಾರಿಯ ಬದುಕು ಪ್ರಾರಂಭವಾಯಿತು.

ಹಗಲು ಹುಳುಹುಪ್ಪಟೆಗಳನ್ನು ಹುಡುಕಿ ತಿಂದು ರಾತ್ರಿಯಲ್ಲಿ ಅಲ್ಲೇ ಮಲಗುತ್ತಿದ್ದೆ. ಚೈತ್ರದ ಸಮಯ, ಮಾವಿನ ಚಿಗುರುಗಳು ಮನವನ್ನು ಸೆಳೆಯುವಂತಿದ್ದವು. ಮಾವು, ಸಂಪಿಗೆ ಮುಂತಾದ ಮರಗಳ ಕೊಂಬೆಗಳಲ್ಲಿನ ದಟ್ಟವಾದ ಎಲೆಗಳ ನಡುವೆ ಆಶ್ರಯವಂತೂ ಸಿಕ್ಕಿತ್ತು. ಆಹಾರಕ್ಕೆ ಮಾತ್ರ ಪರದಾಟವೇ. ಆಹಾರವನ್ನು ಹುಡುಕುತ್ತಾ ಹುಡುಕುತ್ತಾ ನಾನು ದೂರದೂರದವರೆಗೆ ಅಲೆಯುತ್ತ ಸಾಗುತ್ತಿದ್ದೆ. ಇದ್ದಕ್ಕಿದ್ದಂತೆ ಮೈಮೇಲೆ ನೀರಿನ ಹನಿಗಳು ಉದುರತೊಡಗಿದ್ದವು. ಮೊದಲು ಹಿತವೆನಿಸಿದರೂ ನಂತರ ಭಯವೆನಿಸಿತು. ಮತ್ತೆ ಬಿಸಿಲನ್ನು ಕಂಡಾಗಲೇ ನನ್ನ ಭಯ ದೂರವಾಗಿದ್ದು. ಒಮ್ಮೆಲೇ ಹೀಗೆ ನೀರು ಸುರಿಯಲಾರಂಭಿಸಿದರೆ ಏನು ಮಾಡುವುದು ಎನ್ನುವ ಪ್ರಶ್ನೆ ಕಾಡತೊಡಗಿತು. ಆಕಾಶದಲ್ಲಿ ಕಾರ್ಮೋಡಗಳು ದಟ್ಟೈಸಲಾರಂಭಿಸಿದಾಗ ನಾನು ಇರುವ ಸ್ಥಳವನ್ನು ತೊರೆದು ಬಿಸಿಲಿರುವ ಸ್ಥಳವನ್ನು ಸೇರಿದ್ದೆ. ಅಂತೂ ನಾನು ಹುಟ್ಟಿದ ಸ್ಥಳದಿಂದ ಬಹುದೂರ ಬಂದುಬಿಟ್ಟಿದ್ದೆ. ಹೀಗೇ ಅದೆಷ್ಟು ಸಮಯ ಕಳೆಯಿತೋ, ನನಗೆ ನಾನು ಹುಟ್ಟಿದ ಆ ಪರಿಸರ ಮತ್ತೆ ಮತ್ತೆ ನೆನಪಾಗತೊಡಗಿತು. ಒಂದು ಚೈತ್ರದಲ್ಲಿ ಮತ್ತೆ ಅಲ್ಲಿಗೇ ಬಂದಿದ್ದೆ. ಆಶ್ಚರ್ಯ! ಅಲ್ಲೊಂದು ಇಲ್ಲೊಂದು ಎಂಬಂತೆ ವಿರಳವಾಗಿದ್ದ ಮರಗಳನ್ನು ನೋಡಿದಾಗ ಇಲ್ಲಿದ್ದ ಮರಗಳೆಲ್ಲಾ ಏನಾದವು ಎನ್ನಿಸಿತ್ತು. ಅಂತೂ ಕಷ್ಟಪಟ್ಟು ಬಹಳ ಮರಗಳಿದ್ದ ಒಂದು ಸ್ಥಳವನ್ನು ಹುಡುಕಿ ಅಜ್ಞಾತವಾಗಿ ಜೀವಿಸತೊಡಗಿದೆ. ಇದೊಂದು ಜಾಗ ಹಸಿರಿನಿಂದ ಕೂಡಿತ್ತು. ಆಹಾರವೂ ಸಾಕಷ್ಟು ಸಿಗುತ್ತಿತ್ತು. ಬೇಸರ ಕಳೆಯಲೆಂದು ದೂರದವರೆಗೆ ಹೋಗಿ ಮತ್ತೆ ಸಂಜೆಗೆ ಹಿಂದಿರುಗಿ ಬರುತ್ತಿದ್ದೆ. ಕೆಲವು ದಿನಗಳು ಹೀಗೇ ಕಳೆದವು. ಅದೊಂದು ದಿನ ಹೀಗೇ ದೂರಕ್ಕೆ ಸಾಗಿ ಮತ್ತೊಂದು ಮರವನ್ನು ತಲುಪಿದ್ದೆ. ಆಗಲೇ ಎಲ್ಲಿಂದಲೋ ಕುಹುಕುಹೂ ಕುಹುಕುಹೂ ಎನ್ನುವ ಸದ್ದು ಕೇಳಿಬಂತು. ನಾನು ಶಬ್ದ ಬಂದ ದಿಕ್ಕಿನತ್ತ ಹಾರಿದ್ದೆ. ಅಲ್ಲಿನ ಕೊಂಬೆಯೊಂದರಲ್ಲಿ ಅವನು ಕುಳಿತು ದನಿ ಹರಿಸಿದ್ದ. ನನ್ನನ್ನು ಕಂಡೊಡನೆ ಅವನ ಕಣ್ಣುಗಳಲ್ಲಿ ವಿಶೇಷ ಬೆಳಕೊಂದು ಮೂಡಿದಂತೆ ನನಗೆ ಭಾಸವಾಯಿತು. ಆ ಕ್ಷಣಕ್ಕೆ ನಾನು ಒಂಟಿಯಲ್ಲ ಎನ್ನುವ ಭಾವನೆ ನನ್ನ ಮನದಲ್ಲಿ ಮೂಡಿತ್ತು. ಇಬ್ಬರೂ ಆಹಾರವನ್ನರಸುತ್ತ ದೂರ ಸಾಗಿ ಮತ್ತೆ ನಮ್ಮ ಸ್ಥಳಗಳಿಗೆ ಹಿಂದಿರುಗಿ ಬರುತ್ತಿದ್ದೆವು. ದಿನಗಳು ಸರಿದಂತೆ ನಮ್ಮ ಸಾಮೀಪ್ಯವೂ ಘನಿಷ್ಠವಾಯಿತು. ಅದೊಂದು ದಿನ ನಾನು ಎಂದಿನಂತೆ ಬೆಳಗಿನ ಹೊತ್ತಿನಲ್ಲೇ ಆ ಮರವನ್ನು ತಲುಪಿದ್ದೆ. ಆದರೆ ನನ್ನ ನಿರೀಕ್ಷೆಯಂತೆ ಅವನು ಅಲ್ಲಿ ಇರಲೇ‌ಇಲ್ಲ. ಬಹಳ ಹೊತ್ತು ಅವನಿಗಾಗಿ ಕಾದು ಅಲ್ಲೇ ಕುಳಿತೆ. ಸಂಜೆಯಾಯಿತು, ಆದರೆ ಅವನ ಸುಳಿವೇ ಇಲ್ಲ. ಅವನು ಎಲ್ಲಿಗೆ ಹೋದನೋ, ತಿಳಿಯಲೇ‌ಇಲ್ಲ. ಕೊನೆಗೂ ಅವನು ಬರಲೇ‌ಇಲ್ಲ. ನಾನು ನಿರಾಶೆಯಿಂದ ನನ್ನ ಸ್ವಸ್ಥಾನಕ್ಕೆ ಮರಳಿದ್ದೆ. ಮರುದಿನವೂ ಇದೇ ಪುನರಾವರ್ತನೆಯಾಯಿತು. ವಾರ ಕಳೆದರೂ ಅವನು ಮಾತ್ರ ಇತ್ತ ಸುಳಿಯಲೇ‌ಇಲ್ಲ. ನನ್ನನ್ನು ಅನಾಥಭಾವ ಕಾಡಿತ್ತು. ಚಿಕ್ಕಮ್ಮನ ತುತ್ತು ತಪ್ಪಿದಮೇಲೆ ಇವನನ್ನು ಭೇಟಿಯಾಗುವವರೆಗೆ ನನಗೆ ಆತ್ಮೀಯರ ಒಡನಾಟವೇ ಇಲ್ಲದಂತಾಗಿತ್ತು. ಇದೇ ಚಿಂತೆಯಲ್ಲಿ ದೂರ ಸಾಗಿದ್ದೆ.

ಹೆಣ್ಣು ಕೋಗಿಲೆ (ಕಪ್ಪು) ಮತ್ತು ಗಂಡು ಕೋಗಿಲೆ

ಆಯಾಸವೆನಿಸಿ ಅಲ್ಲೇ ಮರದ ಕೊಂಬೆಯೊಂದರ ಮೇಲೆ ಕುಳಿತು ದಣ ವಾರಿಸಿಕೊಳ್ಳುತ್ತಿದ್ದಾಗಲೇ ಕ್ವಿಕ್ ಕ್ವಿಕ್ ದನಿ ಕೇಳಿಬಂತು. ಪಕ್ಕದ ಮರದ ಕೊಂಬೆಯತ್ತ ದೃಷ್ಟಿ ಹರಿಸಿದೆ. ನನ್ನನ್ನು ತನ್ನ ಸಮೀಪಕ್ಕೆ ಕರೆದವಳು ನನ್ನಜ್ಜಿಯಾಗಿದ್ದಳು! ಆ ಮರಳುಗಾಡನಿಂದ ಇಲ್ಲಿಗೆ ಬರೋದ್ರಲ್ಲಿ ಸಾಕಾಯ್ತು, ನೀನು ಹೇಗಿದ್ದೀಯಾ? ಎಂದವಳು ಕೇಳಿದಾಗ ನಾನು ನನ್ನ ಕಥೆಯನ್ನೆಲ್ಲಾ ವಿಸ್ತಾರವಾಗಿ ಅವಳಿಗೆ ತಿಳಿಸುತ್ತ, ನನ್ನ ಗೆಳೆಯ ಬಾರದಿದ್ದನ್ನೂ ತಿಳಿಸಿದೆ. ಅವಳಿಗೂ ಬಹಳ ಖೇದವೆನಿಸಿತು. ಎಲ್ಲ ಹೆಣ್ಣುಜೀವಿಗಳ ಕಥೇನೂ ಒಂದೇ ನೋಡು. ಏನಾಗಬೇಕೆಂದು ಬಯಸುತ್ತೇವೋ ಅದನ್ನು ಬಿಟ್ಟು ಉಳಿದ ಎಲ್ಲವೂ ಆಗುತ್ತವೆ. ಬೇಸರ ಪಡಬೇಡ. ಸಹನೆಯೇ ನಮ್ಮ ಬದುಕಿನ ಆಧಾರ. ನಾನೂ ಕಷ್ಟಗಳನ್ನು ಕಂಡವಳೇ. ಜೀವನವನ್ನ ಬಂದಂತೆ ಅನುಭವಿಸಬೇಕು. ಪರಾಶ್ರಯದಲ್ಲಿರೋ ನಾವು ಎಲ್ಲವನ್ನೂ ಬಯಸುವಂತಿಲ್ಲ. ಸುಖವಂತೂ ನಮಗೆ ಮರೀಚಿಕೆಯೇ. ಏನ್ಮಾಡೋದು ಹೇಳು. ಅದ್ಸರಿ, ನೀನು ಮುಂದೇನು ಮಾಡಬೇಕು ಅಂತಿದ್ದೀಯಾ?-ಎಂದು ಅವಳು ಕೇಳಿದಾಗ ನನಗೆ ಅಳು ಒತ್ತರಿಸಿ ಬಂದಿತ್ತು. ಏನು ಮಾಡಬೇಕೋ ಗೊತ್ತಿಲ್ಲ ಅಜ್ಜಿ, ಈಗ ನಾನು ಗೂಡು ಕಟ್ಟಬೇಕು, ಅದರಲ್ಲಿ ನನ್ನ ಮೊಟ್ಟೆಗಳನ್ನಿಟ್ಟು ಮರಿಗಳನ್ನು ಬೆಳೆಸಬೇಕು, ಹೇಗೆ ಮಾಡುವುದೋ, ಏನೋ-ಬಿಕ್ಕುತ್ತಲೇ ನಾನು ನನ್ನ ಅಳಲನ್ನು ತೋಡಿಕೊಂಡಿದ್ದೆ. ಅಯ್ಯೋ ಹೌದೇನೇ? ಗೂಡುಕಟ್ಟೋ ಅಷ್ಟು ಸಮಯ ಎಲ್ಲಿದೆ? ಒಂದ್ಕೆಲಸ ಮಾಡು, ಈಗಾಗಲೇ ಇರೋ ಗೂಡಿನಲ್ಲಿ ನಿನ್ನ ಮೊಟ್ಟೆಗಳನ್ನ ಇಟ್ಬಿಡು. ನೀನು ಒಳಗೆ ಹೋಗ್ಬೇಡ, ಅಲ್ಲೇ ಹತ್ರ ಇದ್ದು ಕಾಯ್ತಾ ಇರು, ಅಷ್ಟೇ.-ಅವಳೆಂದಳು. ಅದು ಯಾರ ಗೂಡೋ ಏನೋ, ಆ ಹಕ್ಕಿ ಬಂದು ಇದ್ಯಾವ್ದೋ ಮೊಟ್ಟೆ ಇದೆ ಅಂತ ಏನಾದ್ರೂ ಮಾಡಿದ್ರೆ ನನ್ನ ಮಕ್ಕಳ ಗತಿ ಏನು?-ನಾನು ಮುಗ್ಧತೆಯಿಂದ ಕೇಳಿದೆ. ನೋಡು, ಅಲ್ಲೇ ನಮ್ ಬುದ್ಧಿವಂತಿಕೆಯನ್ನು ಉಪಯೋಗಿಸಬೇಕು. ಈಗಾಗಲೇ ಇರೋ ಅದರ ಮೊಟ್ಟೆಗಳ ಜೊತೆಗೆ ನಿನ್ನ ಮೊಟ್ಟೆಗಳೂ ಸೇರಿದ್ರೆ ಅದಕ್ಕೇನು ತಿಳಿಯತ್ತೆ? ಜಾಸ್ತಿ ಮಾತಾಡ್ಬೇಡ. ಈಗಲೇ ಹೋಗಿ ಮೊಟ್ಟೆಗಳಿರೋ ಗೂಡನ್ನು ಹುಡುಕು, ಹೋಗು-ಎಂದು ಅವಳೆಂದಾಗ ನಾನು ನಿರುತ್ತರಳಾಗಿದ್ದೆ.

ಸರ್ರನೆ ಹೋಗಿ ಎಲ್ಲ ಮರಗಳನ್ನೂ ಗಮನಿಸಿದೆ. ಅಲ್ಲೇ ಒಂದು ಹುಲ್ಲಿನ ಗೂಡು ದೃಷ್ಟಿಗೆ ಕಾಣ ಸಿತು. ಹೆದರುತ್ತಲೇ ನಿಧಾನವಾಗಿ ಹತ್ತಿರಕ್ಕೆ ಹೋಗಿ ನೋಡಿದೆ. ಅದರೊಳಗೆ ಆಗಲೇ ನಾಲ್ಕು ಮೊಟ್ಟೆಗಳಿದ್ದವು. ಅತ್ತಿತ್ತ ನೋಡಿದೆ, ಯಾರೂ ಕಾಣಲಿಲ್ಲ. ಇದೇ ಸರಿಯಾದ ಸಮಯ ಎಂದು ಭಾವಿಸಿ ಇನ್ನೇನು ಅಲ್ಲೇ ನನ್ನ ಮೊಟ್ಟೆಗಳನ್ನಿಡಬೇಕು, ಆಗಲೇ ಅನ್ನಿಸಿತ್ತು, ಈ ನಾಲ್ಕು ಮೊಟ್ಟೆಗಳೊಂದಿಗೆ ಇನ್ನೆರಡು ಮೊಟ್ಟೆಗಳಿರುವುದನ್ನು ಆ ಹಕ್ಕಿ ಗಮನಿಸಿಬಿಟ್ಟರೆ! ಎನ್ನಿಸಿ ಆತಂಕವಾಯಿತು. ಹೆಚ್ಚು ಯೋಚಿಸುತ್ತ ಅಲ್ಲಿ ನಿಲ್ಲುವಂತಿರಲಿಲ್ಲ. ಅದೇನಾಯಿತೋ, ಆವೇಶ ಬಂದವರಂತೆ ನಾನು ಆ ಎರಡು ಮೊಟ್ಟೆಗಳನ್ನು ಅಲ್ಲಿಂದ ಜಾರಿಸಿ ನೆಲಕ್ಕೆ ಉರುಳಿಸಿಬಿಟ್ಟೆ. ಬಿದ್ದ ರಭಸಕ್ಕೆ ಅವು ಒಡೆದು ಮಣ್ಣಿನಲ್ಲಿ ಸೇರಿಹೋದವು. ಈಗ ನಿರಾತಂಕವಾಗಿ ನನ್ನ ಎರಡು ಮೊಟ್ಟೆಗಳನ್ನಿಟ್ಟು ಮೆಲ್ಲನೆ ಗೂಡಿನಿಂದ ಹೊರಬಂದೆ. ನನ್ನ ಜೀವದ ಕುಡಿಗಳನ್ನು ಬಿಟ್ಟು ದೂರ ಹೋಗಲು ಮನಸ್ಸಾಗಲಿಲ್ಲ. ಅಲ್ಲೇ ಪಕ್ಕದ ಮರದ ಕೊಂಬೆಯ ಮೇಲೆ ಕುಳಿತು ಗೂಡಿನತ್ತ ನೋಡುತ್ತಿದ್ದೆ. ಮನದೊಳಗೆ ಏನೋ ಕೋಲಾಹಲ, ನಾನು ಮೊಟ್ಟೆಗಳನ್ನು ನಾಶ ಮಾಡಿದ್ದು ಸರಿಯೆನಿಸಲಿಲ್ಲ, ಆದರೂ ನನಗೆ ಬೇರೆ ದಾರಿಯೇ ಇರಲಿಲ್ಲವಲ್ಲ, ಇದೇ ಕೊರಗಿನಲ್ಲಿ ಹಸಿವೂ ಕಾಣಲಿಲ್ಲ. ಅದೇ ವೇಳೆಗೆ ಎಲ್ಲಿಂದಲೋ ಹಾರಿಬಂದ ಕಾಗೆಯೊಂದು ಗೂಡನ್ನು ಪ್ರವೇಶಿಸಿ ಆ ಎಲ್ಲ ಮೊಟ್ಟೆಗಳ ಮೇಲೆ ಕುಳಿತು ಕಾವು ಕೊಡಲಾರಂಭಿಸಿತು. ನಾನು ಯಾರಿಗೂ ಅನುಮಾನ ಬಾರದಂತೆ ಗೂಡಿನ ಸುತ್ತಮುತ್ತ ಸುಳಿದಾಡುತ್ತಿದ್ದೆ. ಆದರೆ ನನ್ನ ಮರಿಗಳನ್ನು ನೋಡುವ ಭಾಗ್ಯ ನನಗೆ ಲಭಿಸಲೇ‌ಇಲ್ಲ. ಅಷ್ಟರಲ್ಲೇ ಮಳೆಹನಿಗಳು ಸುರಿಯಲಾರಂಭಿಸಿದವು. ನಾನು ಅಲ್ಲಿಂದ ದೂರದ ಸ್ಥಳಕ್ಕೆ ಹೊರಟೇಬಿಟ್ಟೆ.

ಬಿಸಿಲಿಗೆ ಮೈಯೊಡ್ಡಿದ ನಂತರ ನಾನು ಯೋಚಿಸತೊಡಗಿದೆ- ಈ ವೇಳೆಗೆ ನನ್ನ ಮರಿಗಳು ಮೊಟ್ಟೆಯಿಂದ ಹೊರಬಂದಿರಬಹುದು-ಎಂದು. ಅದರೊಂದಿಗೇ ನಾನು ಅನುಭವಿಸಿದ ಒಂಟಿತನ ಮತ್ತು ಖಿನ್ನತೆಗಳ ನೆನಪಾಗತೊಡಗಿತ್ತು. ಹೌದು, ನನ್ನಮ್ಮ ನನ್ನನ್ನೇಕೆ ಹಾಗೆ ಬಿಟ್ಟುಹೋದಳೆಂಬ ಪ್ರಶ್ನೆಗೆ ಉತ್ತರ ಸಿಕ್ಕಿತ್ತು. ಅವಳೂ ನನ್ನಂತೆಯೇ ಏನೇನೋ ಕಷ್ಟಗಳನ್ನು ಅನುಭವಿಸಿದ್ದಿರಬಹುದು. ಆದರೂ ನಮ್ಮದು ಏನು ಜನ್ಮವೋ. ಬಾಲ್ಯದಲ್ಲಿ ಹೆತ್ತವರ ಸಾಮೀಪ್ಯವಿಲ್ಲ, ಹುಟ್ಟಿದೊಡನೆ ಪರಪುಟ್ಟನೆಂಬ ಹಣೆಪಟ್ಟ. ತುತ್ತಿಗೂ ಕತ್ತರಿ. ಈಗೀಗ ಮರಗಳೇ ಇಲ್ಲವಾದ್ದರಿಂದ ನೆಲೆಯೂ ಇಲ್ಲ. ಚೈತ್ರದಲ್ಲೂ ಚಿಗುರುಗಳ ಅಭಾವ. ಇರುವುದಾದರೂ ಎಲ್ಲಿ? ತಿನ್ನುವುದಾದರೂ ಏನನ್ನು? ವರ್ಷದಿಂದ ವರ್ಷಕ್ಕೆ ಬದುಕು ದುರ್ಭರವೆನಿಸುವಂತಾಗಿದೆ. ಯಾರ ಪ್ರೀತಿಯೂ ಇಲ್ಲ. ನಮ್ಮ ದನಿಯನ್ನು ಕೇಳುವವರೇ ಇಲ್ಲ. ನಮ್ಮ ಕಷ್ಟವನ್ನು ಅರ್ಥಮಾಡಿಕೊಳ್ಳುವವರೂ ಇಲ್ಲ. ಮೊದಲೇ ಸಂಕೋಚ ಮತ್ತು ನಾಚಿಕೆಯ ಸ್ವಭಾವದ ನಮಗೆ ಮುಖ ಮರೆಸಿ ಬದುಕುವುದೇ ಅಭ್ಯಾಸವಾಗಿದೆ. ಹೇಳಿ, ಯಾವ ತಪ್ಪಿಗೆ ನಮಗೆ ಈ ಶಿಕ್ಷೆ?
ಯಾವ ತಪ್ಪಿಗೆ ನಮಗೆ ಈ ಶಿಕ್ಷೆ?


-ಲಲಿತ ಎಸ್

8 Responses

  1. Hema says:

    ಕೋಗಿಲೆಯ ಸ್ವಗತರೂಪದ ಲೇಖನ ಬಹಳ ಇಷ್ಟವಾಯಿತು. ವಾಸ್ತವಕ್ಕೆ ಕನ್ನಡಿ ಹಿಡಿದ ಬರಹ

  2. ಉತ್ತಮ ಲೇಖನ ಸೊಗಸಾದ ನಿರೂಪಣೆ ಅಭಿನಂದನೆಗಳು ಗೆಳತಿ ಲಲಿತಾ

  3. ನಯನ ಬಜಕೂಡ್ಲು says:

    ಚೆನ್ನಾಗಿದೆ

  4. Padmini Hegde says:

    ಆತ್ಮೀಯವಾದ ನಿರೂಪಣೆ!

  5. ಶಂಕರಿ ಶರ್ಮ says:

    ಪರಪುಟ್ಟ ಕೋಗಿಲೆಯ ಸ್ವಗತ ಬಹಳ ಚೆನ್ನಾಗಿದೆ ಮೇಡಂ…ಅಯ್ಯೋ ಪಾಪ ಎನಿಸಿತು!

  6. Padma Anand says:

    ಪ್ರಕೃತಿಯಲ್ಲಿ ಪರಕಾಯ ಪ್ರವೇಶ ಮಾಡಿ ನಿರೂಪಿಸಿದ ನಿರೂಪಣೆ ಭಾವಪೂರ್ಣವಾಗಿದೆ. ಅಭಿನಂದನೆಗಳು.

  7. Anonymous says:

    thanks to all of you for encouraging words

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: