ಪರೀಕ್ಷೆಯೆಂಬ ಪೆಡಂಭೂತ.
ಮಧ್ಯಮ ವರ್ಗದ ಕುಟುಂಬಗಳಲ್ಲಿ ತಂದೆತಾಯಿಗಳು ತಮ್ಮ ಮಕ್ಕಳು ಓದಿ ವಿದ್ಯಾವಂತರಾಗಲಿ ಎಂದು ಬಯಸುವುದು ಸಹಜ. ಅವರಿಗೆ ಮುಂದೆ ಮಕ್ಕಳಿಗೆ ಜೀವನದಲ್ಲಿ ಒಂದು ಭದ್ರತೆ ಇದರಿಂದಾಗಿ ಸಿಗುತ್ತದೆ ಎಂಬ ಆಲೋಚನೆ. ಹೆಣ್ಣುಮಕ್ಕಳಿಗೆ ವಿದ್ಯಾವಂತ ವರ ದೊರಕಬಹುದೆಂಬ ಆಸೆ. ಆದರೆ ಮನೆಯಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದರೆ ಅವರನ್ನೆಲ್ಲ ವಿದ್ಯಾಭ್ಯಾಸ ಮಾಡಿಸಲು ಪೋಷಕರು ಅಪಾರ ತ್ಯಾಗ ಮಾಡಬೇಕಾಗುತ್ತದೆ. ಮಕ್ಕಳಿಗೆ ತಾವು ಒಂದು ವರ್ಷ ನಾಪಾಸಾದರೆ ಆ ವರ್ಷದ ವಿದ್ಯಾಭ್ಯಾಸದ ಖರ್ಚು ಅಪ್ಪನಿಗೆ ಭಾರವಾಗುತ್ತದೆಂಬ ಅರಿವು. ಮನೆಯ ಪರಿಸ್ಥಿತಿ ಅರಿತ ಮಕ್ಕಳಂತೆ ನಾನೂ ಓದುವುದರಲ್ಲಿ ಬಹಳ ಆಸಕ್ತಿಯಿದ್ದವಳು. ಹಾಗಾಗಿ ಶಾಲಾ ಪ್ರಾರಂಭವಾದ ದಿನದಿಂದಲೇ ಓದಲು ಆರಂಭಿಸುತ್ತಿದ್ದೆ. ಹೀಗಾಗಿ ನನ್ನಪ್ಪನಿಗೂ ಮೊದಲನೆಯ ಮಗಳಾದ ನನ್ನ ಬಗ್ಗೆ ಮಮತೆ ಹೆಚ್ಚು. ಶಾಲೆ, ಕಾಲೇಜು ವ್ಯಾಸಂಗದ ದಿನಗಳಲ್ಲಿ ಚಕ್ಕರ್ ಹಾಕುವುದಾಗಲೀ, ಸುಳ್ಳು ಕಾರಣಗಳನ್ನು ಕೊಟ್ಟು ರಜೆ ಪಡೆಯುವುದಾಗಲಿ ಮಾಡುತ್ತಿರಲಿಲ್ಲ. ಜೊತೆಗೆ ಅಧ್ಯಾಪಕರ ಬಗ್ಗೆ ತುಂಬ ಗೌರವ ಹೊಂದಿದ್ದಂಥವಳು. ಪಠ್ಯೇತರ ಚಟುವಟಿಕೆಗಳಲ್ಲಿಯೂ ನನಗೆ ಹೆಚ್ಚಿನ ಆಸಕ್ತಿ. ಇದೆಲ್ಲದರ ನಡುವೆ ನನಗೇಕೋ ಗೊತ್ತಿಲ್ಲ ಪರೀಕ್ಷೆಯೆಂದರೆ ಒಂದು ರೀತಿಯ ಅವ್ಯಕ್ತ ಭಯ ಹುಟ್ಟುತ್ತಿತ್ತು. ಅದಕ್ಕೆ ಈಗಲೂ ಸಮರ್ಪಕ ಉತ್ತರ ನನಗೆ ದೊರಕಿಲ್ಲ. ಈ ಕಾಲದಲ್ಲಿ ನಮ್ಮ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದೀಜೀರವರು ‘ಪರೀಕ್ಷಾ ಪೆ ಚರ್ಚಾ’ ಎಂದು ವಿದ್ಯಾರ್ಥಿಗಳೊಡನೆ ನೇರವಾಗಿ ಸಂವಾದ ನಡೆಸಿ ಅವರಲ್ಲಿ ಪರೀಕ್ಷಾಭಯವನ್ನು ನಿವಾರಣೆ ಮಾಡುವ ಪ್ರಯತ್ನ ಮಾಡುತ್ತಾರೆ. ಅವರು ಹೇಳುವಂತೆ ಪರೀಕ್ಷೆಯ ಅಂಕಗಳೇ ಜೀವನದ ಅಂತಿಮ ಗುರಿಯಲ್ಲ. ಬದುಕಿನಲ್ಲಿ ಬಹಳಷ್ಟು ಸಾಧನೆ ಮಾಡುವುದೇ ಮುಖ್ಯ. ಆದರೆ ನಮಗೆ ಮತ್ತು ನನ್ನ ಪೋಷಕರಿಗೆ ಪರೀಕ್ಷೆ ಪಾಸಾಗುವುದೇ ಬಹಳ ಮುಖ್ಯವಾಗಿತ್ತು. ಅದಕ್ಕಾಗಿ ನಾನು ಮಾಡಿಕೊಳ್ಳುತ್ತಿದ್ದ ತಯಾರಿಗೇನೂ ಕೊರತೆಯಿರಲಿಲ್ಲ. ಆದರೂ ನನ್ನ ನಿರೀಕ್ಷೆಗೂ ಮೀರಿ ಪ್ರತಿ ಸಾರಿಯೂ ಪರೀಕ್ಷೆಯಲ್ಲಿ ಏನಾದರೊಂದು ಎಡವಟ್ಟಾಗುತ್ತಿತ್ತು.
ನಾನು ಏಳನೆಯ ತರಗತಿಯಲ್ಲಿ ಓದುವಾಗ ಮೊದಲ ಬಾರಿಗೆ ಡಿಸ್ಟ್ರಿಕ್ಟ್ ಲೆವೆಲ್ ಪರೀಕ್ಷೆ ನಡೆಯಿತು. ಅದೇ ನನ್ನ ಮೊದಲ ಅನುಭವ. ನಾವು ಓದುತ್ತಿದ್ದುದು ಸರ್ಕಾರಿ ಶಾಲೆಯಲ್ಲಿ. ನಮಗೆ ಐದನೆಯ ತರಗತಿಯಿಂದ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಯುತ್ತಿದ್ದೆವು. ಅಲ್ಲಿಯವರೆಗೆ ನಮಗೆ ಭಾಷೆಯ ಬಗ್ಗೆ ಯಾವುದೇ ಒಡನಾಟವಿರಲಿಲ್ಲ. ನಾನು ಚೆನ್ನಾಗಿಯೇ ಓದಿ ತಯಾರಾಗಿ ಪರೀಕ್ಷೆಗೆ ಹೋಗಿದ್ದೆ. ಪ್ರಶ್ನೆಪತ್ರಿಕೆಯನ್ನು ಹಂಚಿದರು. ಓದಿ ನೋಡಿದರೆ ನಾನು ತಯಾರಾಗಿದ್ದ ಪ್ರಶ್ನೆಗಳೇ ಬಂದಿದ್ದವು. ಸಂತೋಷದಿಂದ ಉತ್ತರಗಳನ್ನು ಬರೆಯತೊಡಗಿದೆ. ಕೊಟ್ಟಿದ್ದ ಮೊದಲ ಉತ್ತರ ಪತ್ರಿಕೆ ಸಾಲದೆ ಬಂದಿದ್ದರಿಂದ ಅಡೀಶನಲ್ ಷೀಟ್ ಪಡೆದು ಉತ್ತರ ಬರೆಯುವುದನ್ನು ಮುಂದುವರೆಸಿದೆ. ಪೂರ್ತಿ ಬರೆದಿದ್ದ ಮೊದಲ ಹಾಳೆಗಳನ್ನು ಡೆಸ್ಕಿನ ಮೇಲಿಟ್ಟು ಅದರ ಮೇಲೆ ನನ್ನ ಜಾಮಿಟ್ರಿಬಾಕ್ಸ್ ಇಟ್ಟಿದ್ದೆ, ಕೊನೆಯ ಉತ್ತರವನ್ನು ಬರೆದನಂತರ ಎಲ್ಲ ಹಾಳೆಗಳನ್ನು ಒಟ್ಟಿಗೆ ಕ್ರಮವಾಗಿ ಜೋಡಿಸಿ ಟ್ಯಾಗ್ ಕಟ್ಟಲು ಹೋದೆ. ನನ್ನ ಮೊದಲ ಉತ್ತರ ಪತ್ರಿಕೆಯ ಹಾಳೆಗಳು ನಾನಿಟ್ಟ ಕಡೆಯಲ್ಲಿರಲಿಲ್ಲ. ಗಾಭರಿಯಾಗಿ ಕೈಕಾಲುಗಳಲ್ಲಿ ಬೆವರು ಬಂತು, ಗಂಟಲು ಒಣಗಿದಂತಾಯ್ತು. ಅಕ್ಕಪಕ್ಕದಲ್ಲಿ ಬಿದ್ದಿರಬಹುದೆಂದು ಬಗ್ಗಿ ನೋಡಿ ಹುಡುಕಾಡುತ್ತಿದ್ದೆ.
ನನ್ನ ಪರದಾಟ ಕಂಡು ಇನ್ವಿಜಿಲೇಟರ್ ಆಗಿದ್ದವರು ಬಂದು ಏನಮ್ಮಾ ಎಂದರು. ನಾನು ಸಾರ್ ನಾನು ಉತ್ತರ ಬರೆದಿಟ್ಟಿದ್ದ ಮೊದಲ ಉತ್ತರ ಪತ್ರಿಕೆಯ ಪುಸ್ತಕವೇ ಕಾಣುತ್ತಿಲ್ಲ ಎಂದು ಗೊಣಗಿದೆ. ನನ್ನ ಕಣ್ಣುಗಳು ಆಗಲೇ ಹನಿಗೂಡಿದ್ದವು. ಆ ಇನ್ವಿಜಿಲೇಟರ್ ತುಂಬಾ ಶಾಂತವಾಗಿ ನಿನ್ನ ಉತ್ತರ ಪತ್ರಿಕೆ ಎಲ್ಲೂ ಹೋಗಿಲ್ಲ. ನಾನೇ ನಿನ್ನ ಪಕ್ಕದ ನಂಬರಿನ ಹುಡುಗನ ಹತ್ತಿರ ಕೊಟ್ಟಿದ್ದೇನೆ. ಅವನು ನೋಡಿಕೊಂಡು ಬರೆಯುತ್ತಿದ್ದಾನೆ. ಈಗ ತಂದುಕೊಡುತ್ತೇನೆ. ಸುಮ್ಮನೆ ಗದ್ದಲವೆಬ್ಬಿಸಬೇಡ. ಅವನ್ಯಾರು ಗೊತ್ತೇನಮ್ಮ. ನಮ್ಮ ಹೆಡ್‌ಮಾಸ್ಟರ್ ಮಗ. ಒಂದೊಂದು ತರಗತಿಯಲ್ಲೂ ಎರೆಡೆರಡು ವರ್ಷ ಓದುತ್ತಾ ಈಗ ಏಳನೆಯ ತರಗತಿಗೆ ಬಂದಿದ್ದಾನೆ. ಹೇಗಾದರೂ ಅವನನ್ನು ಪಾಸು ಮಾಡಿಸಬೇಕೆಂದು ಹೆಡ್‌ಮಾಸ್ಟರ್ ಹೇಳಿದ್ದಾರೆ. ಮರ್ಯಾದೆ ಪ್ರಶ್ನೆ. ದಯವಿಟ್ಟು ಸುಮ್ಮನಿರು. ಎಂದು ನನ್ನ ಉತ್ತರ ಪತ್ರಿಕೆಯ ಮೊದಲ ಪುಸ್ತಕವನ್ನು ತಂದುಕೊಟ್ಟು ಈಗ ಟ್ಯಾಗ್ ಹಾಕಿ ಎಲ್ಲವನ್ನೂ ಕಟ್ಟಿಕೊಡು ಎಂದು ನನ್ನಿಂದ ಪೂರ್ಣ ಪ್ರಮಾಣದ ಉತ್ತರ ಷೀಟುಗಳನ್ನು ಪಡೆದುಕೊಂಡರು. ನಾನು ಪರೀಕ್ಷಾ ಕೊಠಡಿಯಿಂದ ಹೊರಕ್ಕೆ ಹೊರಡುವಾಗ ಪಕ್ಕದ ಹುಡುಗನತ್ತ ದೃಷ್ಟಿ ಹಾಯಿಸಿದೆ. ಅವನು ಆಗಲೇ ಪ್ರೌಢ ವಯಸ್ಸಿನವನಂತೆ ಕಾಣುತ್ತಿದ್ದ. ಈ ವಿಷಯ ಇನ್ವಿಜಿಲೇಟರ್ ರವರ ಕೃಪೆಯಿಂದ ಹೊರೆಗೆಬರಲಿಲ್ಲ. ಮುಂದಿನ ದಿನಗಳಲ್ಲಿ ನಾನು ಬರೆದು ಪೂರ್ಣವಾದ ಹಾಳೆಗಳನ್ನು ಎಲ್ಲಿಯೂ ಪಕ್ಕದಲ್ಲಿಡದೆ ಎಚ್ಚರದಿಂದ ಬರೆಯುವ ಹಾಳೆಯ ಕೆಳಗೇ ಇಟ್ಟು ಉತ್ತರ ಬರೆದೆ. ಆದರೆ ನಮ್ಮ ರೂಮಿನ ಇನ್ವಿಜಿಲೇಟರ್ ಮುಲಾಜಿಲ್ಲದೆ ತಾವೇ ಬಂದು ಕೇಳಿ ಅವುಗಳನ್ನು ತೆಗೆದುಕೊಂಡು ಹೆಡ್‌ಮಾಸ್ಟರ್ ಮಗನಿಗೆ ನಕಲು ಮಾಡಲು ಕೊಟ್ಟು ಕೊನೆಯಲ್ಲಿ ನನಗೆ ಹಿಂದಕ್ಕೆ ತಂದುಕೊಡುತ್ತಿದ್ದರು. ನನ್ನ ಮನಸ್ಸಿನಲ್ಲಿ ಕಷ್ಟಪಟ್ಟು ಓದಿ ತಯಾರಾಗಿ ಬಂದು ಉತ್ತರ ಬರೆಯುವವರಿಗೆ ಇದರಿಂದ ಅನ್ಯಾಯವಲ್ಲವೇ? ಎನ್ನಿಸುತ್ತಿತ್ತು. ಆದರೆ ಪ್ರಶ್ನಿಸಲು ಧೈರ್ಯ ಸಾಲದೆ ಸುಮ್ಮನಾದೆ. ಫಲಿತಾಂಶ ಬಂದಾಗ ಉತ್ತಮ ಅಂಕಗಳೊಂದಿಗೆ ನಾನು ಹೈಸ್ಕೂಲ್ ಸೇರಿದೆ. ಹೆಡ್‌ಮಾಸ್ಟರ್ ಮಗನೂ ಜೀವನಾಂಶದಷ್ಟು ಅಂಕಗಳನ್ನು ಪಡೆದು ಹೈಸ್ಕೂಲಿಗೆ ಹೋದ. ಪಾಪ ಕಾಪಿ ಮಾಡುವುದರಲ್ಲೂ ಜಾಣನಲ್ಲ.
ಹೈಸ್ಕೂಲಿನಲ್ಲಿ ಹೊಸ ಸ್ಕೀಮ್‌ನಂತೆ ಮೊದಲ ಭಾಷೆ 1 ನೆಯ ಪಾರ್ಟ್, ಎರಡನೆಯ ಭಾಷೆ ಇಂಗ್ಲಿಷ್ 2 ನೆಯ ಪಾರ್ಟ್, ಕೋರ್ ಸಬ್ಜೆಕ್ಟ್ಸ್ 1, ಸಾಮಾನ್ಯ ವಿಜ್ಞಾನ, 2, ಸಾಮಾನ್ಯ ಗಣಿತ, 3 ಸೋಷಿಯಲ್ ಸ್ಟಡೀಸ್ ಮೂರೂ ಸೇರಿ 3 ನೆಯ ಪಾರ್ಟ್, ಐಚ್ಛಿಕ ವಿಷಯಗಳು 4 ನೆಯ ಪಾರ್ಟ್. ನಾನು ಫಿಸಿಕ್ಸ್, ಕೆಮಿಸ್ಟ್ರಿ. ಬಯಾಲಜಿ ಆಯ್ಕೆ ಮಾಡಿಕೊಂಡಿದ್ದೆ. ಪಾಸೆಂದರೆ ನಾಲ್ಕೂ ಪಾರ್ಟ್‌ಗಳಲ್ಲಿ ಪಾಸಾಗಬೇಕಾಗಿತ್ತು. ನಾನು ಎಂದಿನಂತೆ ಮನಸ್ಸಿಟ್ಟು ತಯಾರಿ ಮಾಡಿ ಪರೀಕ್ಷೆ ಬರೆದಿದ್ದೆ. ನನ್ನ ರಿಸಲ್ಟ್ ಬಂದಾಗ ನಾನು ಮೂರನೆಯ ಪಾರ್ಟ್‌ನಲ್ಲಿ ಫೇಲ್ ಎಂದಿತ್ತು. ಅಂಕಪಟ್ಟಿ ನೋಡಿದಾಗ ನನಗೇ ಆಶ್ಚರ್ಯ. ಸಾಮಾನ್ಯ ಗಣಿತದಲ್ಲಿ ನನಗೆ ಕೇವಲ 8 ಅಂಕಗಳು ಬಂದಿದ್ದವು. ನಾನು ಅತ್ಯುತ್ತಮವಲ್ಲದಿದ್ದರೂ 50-60 ಅಂಕಗಳು ಬರಬಹುದೆಂಬಂತೆ ಬರೆದಿದ್ದೆ. ಯಾವ ಮಹಾರಾಯನೋ ನನಗೆ 8 ಅಂಕ ಕೊಟ್ಟು ನಾಪಾಸು ಮಾಡಿದ್ದ. ನಮ್ಮ ಮನೆಯಲ್ಲಿ ಪೋಷಕರು ಚೆನ್ನಾಗಿ ಪೂಜೆಮಾಡಿ ಮತ್ತೊಂದು ಸಾರಿ ಕಟ್ಟಿ ಪಾಸುಮಾಡು ಎಂದರು. ರೀವ್ಯಾಲ್ಯೂವೇಷನ್ ಸುದ್ದಿಯೇ ಎತ್ತಲಿಲ್ಲ. ಏಳನೆಯ ತರಗತಿಯ ಇನ್ವಿಜಿಲೇಟರ್‌ನಂತೆ ಯಾರಾದರೂ ನನ್ನ ಉತ್ತರ ಪತ್ರಿಕೆಯನ್ನು ಅದಲುಬದಲು ಮಾಡಿರಬಹುದೆಂದು ನನ್ನ ಊಹೆ. ನನ್ನ ಗೋಳನ್ನು ಯಾರೂ ಕಿವಿಗೆ ಹಾಕಿಕೊಳ್ಳಲೇ ಇಲ್ಲ. ಒಂದು ವಿಷಯದಲ್ಲಿ ನಾಪಾಸಾದದ್ದಕ್ಕೆ ಮೂರನೆಯ ಪಾರ್ಟ್ ಮೂರೂ ವಿಷಯಗಳನ್ನು ಮತ್ತೆ ಓದಿ ಬರೆದೆನು. ಪಾಸಾದೆ. ಆದರೆ ಅನ್ಯಾಯವಾಗಿ ಒಂದು ವರ್ಷ ಕಳೆದುಕೊಂಡೆನಲ್ಲಾ ಎಂಬ ದುಃಖ ಈಗಲೂ ಕಾಡುತ್ತದೆ.
ಮುಂದೆ ನಮಗೆ ಒಂದು ವರ್ಷದ ಪಿ.ಯು.ಸಿ. ಆ ವರ್ಷದಲ್ಲಿ ನಾನು ಕಾಲೇಜಿನ ಚರ್ಚಾಸ್ಫರ್ಧೆ, ಆಶುಭಾಷಣ ಸ್ಫರ್ಧೆ, ಪ್ರಬಂಧ ರಚನೆ ಸ್ಫರ್ಧೆ, ಆಟಪಾಟಗಳು ಎಲ್ಲದರಲ್ಲೂ ಭಾಗವಹಿಸಿ ಬಹುಮಾನಗಳನ್ನು ಗೆದ್ದಿದ್ದೆ. ನನ್ನ ಸ್ನೇಹವರ್ಗವೂ ದೊಡ್ಡದಿತ್ತು. ಇಷ್ಟೆಲ್ಲ ಸಾಧನೆ ಮಾಡಿದ್ದರೂ ಪರೀಕ್ಷೆಯ ಪೆಡಂಭೂತ ಮಾತ್ರ ನನ್ನನ್ನು ಕಾಡಿತ್ತು. ಪರೀಕ್ಷೆಗೆ ತಯಾರಿ ಚೆನ್ನಾಗಿತ್ತು. ಆತ್ಮವಿಶ್ವಾಸದಿಂದ ಮೊದಲ ದಿನ ಪರೀಕ್ಷೆ ಕೊಠಡಿಗೆ ಹೋಗಿ ಕುಳಿತೆ. ನನ್ನ ಬೆಂಚಿನಲ್ಲಿ ಇಬ್ಬರಿಗೆ ಅವಕಾಶವಿತ್ತು. ಇನ್ನೊಬ್ಬ ಪರೀಕ್ಷಾರ್ಥಿ ಕಾರಣಾಂತರದಿಂದ ಗೈರುಹಾಜರಾಗಿದ್ದ. ಒಬ್ಬಳೇ ಆದ್ದರಿಂದ ನಿರ್ಭೀತಿಯಿಂದ ಉತ್ತರಗಳನ್ನು ಬರೆದೆ. ಡೆಸ್ಕಿನ ಮೇಲೆ ನಾವು ಕೂಡುವ ಜಾಗದಲ್ಲಿ ನಮ್ಮ ರಿಜಿಸ್ಟರ್ ನಂಬರ್ ಬರೆದಿದ್ದರು. ನಾನು ಎಲ್ಲವೂ ಸಮರ್ಪಕವೆಂದು ಉತ್ತರ ಪತ್ರಿಕೆಯನ್ನು ಬರೆದು ಇನ್ವಿಜಿಲೇಟರ್ ಕಡೆಗೆ ಕೊಡುವಾಗ ಅವರು ನನ್ನ ಹೆಸರು ಮತ್ತು ರಿಜಿಸ್ಟರ್ ನಂಬರ್ ಪರಿಶೀಲನೆ ಮಾಡಿದರು. ನಾನು ಕುಳಿತಿದ್ದದ್ದು ಪರಿಪಾಟಾಗಿ ಗೈರುಹಾಜರಾಗಿದ್ದ ಅಭ್ಯರ್ಥಿಯ ಸ್ಥಳದಲ್ಲಿ. ಉತ್ತರ ಪತ್ರಿಕೆಯಲ್ಲಿ ನಾನು ಕುಳಿತಿದ್ದ ಸೀಟಿನ ಮುಂದಿದ್ದ ರಿಜಿಸ್ಟರ್ ನಂಬರ್ ಬರೆದಿದ್ದೆ. ಅವರು ನನ್ನನ್ನು ಎಚ್ಚರಿಸಿ ನನ್ನ ಸರಿಯಾದ ನಂಬರ್ ಬರೆಸಿ ಪೂರ್ಣ ಸಹಿ ಹಾಕಿಸಿಕೊಂಡು ಉತ್ತರ ಪತ್ರಿಕೆಯನ್ನು ಪಡೆದುಕೊಂಡರು. ಇಲ್ಲವಾದರೆ ಮತ್ತೆ ನಾನು ಆ ವಿಷಯದಲ್ಲಿ ಗೈರುಹಾಜರೆಂದು ಅಂಕಪಟ್ಟಿಯಲ್ಲಿ ಬರುತ್ತಿತ್ತು. ಮಾರನೆಯ ದಿನದಿಂದ ನನ್ನ ನಂಬರ್ ಬರೆದಿರುವ ಜಾಗದಲ್ಲಿಯೇ ಕುಳಿತು ಪರೀಕ್ಷೆ ಬರೆದು ಅಂತೂ ತೇರ್ಗಡೆಯಾದೆ. ನನಗೇ ಏಕೆ ಹೀಗಾಗುತ್ತದೆ ಎಂಬುದು ನನಗೆ ತಿಳಿಯದು.
ಪಿ.ಯು.ಸಿ.ಯಲ್ಲಿ ವಿಜ್ಞಾನ ವಿದ್ಯಾರ್ಥಿಯಾಗಿದ್ದ ನಾನು ಗಣಿತದ ಸಹವಾಸ ಸಾಕೆಂದು ಪದವಿ ತರಗತಿಯಲ್ಲಿ ಆರ್ಟ್ಸ್ ತೆಗೆದುಕೊಂಡೆ. ಇಲ್ಲಿ ಐಚ್ಛಿಕ ವಿಷಯಗಳಾಗಿ ಕನ್ನಡ, ಸಮಾಜಶಾಸ್ತ್ರ, ರಾಜಕೀಯಶಾಸ್ತ್ರ ಆರಿಸಿಕೊಂಡು ಓದು ಮುಂದುವರಿಸಿದೆ. ಮೊದಲೆರಡು ವರ್ಷಗಳಲ್ಲಿ ಸಾಮಾನ್ಯ ವಿಷಯಗಳಾದ ಪ್ರಥಮ ಮತ್ತು ದ್ವಿತೀಯ ಭಾಷೆಗಳಲ್ಲಿ ಪರೀಕ್ಷೆ ಮುಗಿಸಿ ಮೂರನೆಯ ವರ್ಷದಲ್ಲಿ ಬರೀ ಐಚ್ಛಿಕ ವಿಷಯಗಳನ್ನು ಓದಬೇಕಾಗಿತ್ತು. ನಾನು ಆಯ್ಕೆ ಮಾಡಿಕೊಂಡಿದ್ದ ಮೂರೂ ವಿಷಯಗಳಿಗೆ ಉತ್ತರಗಳನ್ನು ಉದ್ದುದ್ದವಾಗಿ ಬರೆಯುವ ಅಗತ್ಯವಿತ್ತು. ನನ್ನ ಬರವಣಿಗೆ ಅಷ್ಟೊಂದು ವೇಗವಾಗಿರಲಿಲ್ಲ. ಮೂರೂ ವಿಷಯಗಳಿಗೆ ಲೈಬ್ರರಿಯಿಂದ ಬೇರೆ ಬೇರೆ ಲೇಖಕರ ಪುಸ್ತಕಗಳನ್ನು ತಂದು ಓದಿ ನಾನೊಂದು ನೋಟ್ಸ್ ತಯಾರಿಸಿಕೊಂಡಿದ್ದೆ. ಅದನ್ನು ನನ್ನ ಕೆಲವು ಆಪ್ತ ಗೆಳತಿಯರು ಓದಲು ಹಂಚಿಕೊಂಡಿದ್ದರು. ನನ್ನ ನಿಧಾನ ಬರವಣಿಗೆಯಿಂದ ಉತ್ತರಗಳನ್ನು ಸಮರ್ಪಕವಾಗಿ ಬರೆಯಲು ಸಮಯ ಸಾಕಾಗುತ್ತಿರಲಿಲ್ಲ. ಹಾಗಾಗಿ ಅಂಕಗಳು ಸಾಮಾನ್ಯವಾಗಿ ಬಂದು ತೇರ್ಗಡೆಯಾಗಿದ್ದೆ. ನನ್ನ ನೋಟ್ಸನ್ನೇ ಓದಿ ವೇಗವಾಗಿ ಬರೆದ ನನ್ನ ಗೆಳತಿಯರು ನನಗಿಂತ ಹೆಚ್ಚು ಅಂಕ ಪಡೆದಿದ್ದರು. ನೀನೇ ನಮಗೆಲ್ಲ ನೋಟ್ಸ್ ಕೊಟ್ಟು ನಿನಗೇ ಏಕೆ ಕಡಿಮೆ ಅಂಕಗಳು? ಎಂಬ ಅವರ ಪ್ರಶ್ನೆಗೆ ನನ್ನ ಬಳಿ ಉತ್ತರವಿರಲಿಲ್ಲ.
ಬಿ.ಎ., ಪದವಿ ಪಡೆದ ನಂತರ ವಿವಾಹವಾಗಿ ಪತಿಗೃಹಕ್ಕೆ ಹೋದಾಗ ನನ್ನ ಓದಿಗೆ ವಿರಾಮ ಬಿತ್ತು. ನನ್ನ ಪತಿ ಆಗ ಉತ್ತರ ಕರ್ನಾಟಕದ ಗುಲ್ಬರ್ಗಾ, ರಾಯಚೂರುಗಳಲ್ಲಿ ಕೆಲಸ ಮಾಡುತ್ತಿದ್ದರು. ನನ್ನ ಮಗನೂ ಅಲ್ಲಿಯೇ ಜನಿಸಿ ನಾಲ್ಕನೆಯ ತರಗತಿಗೆ ಬಂದಿದ್ದ. ಆಗ ನಾವು ಮತ್ತೆ ಮೈಸೂರಿಗೆ ಹಿಂತಿರುಗಿದೆವು. ಹನ್ನೆರಡು ವರ್ಷದ ನಂತರ ಮತ್ತೆ ಓದಬೇಕೆಂಬ ಆಶಯ ಉದಿಸಿ ಮೈಸೂರು ವಿಶ್ವವಿದ್ಯಾನಿಲಯದ ಅಂಚೆ ತೆರಪಿನ ಶಿಕ್ಷಣದ ಮೂಲಕ ಕನ್ನಡ ಎಂ.ಎ., ಮಾಡಬೇಕೆಂದು ಸೇರಿಕೊಂಡೆ. ಮನೆಯವರೆಲ್ಲರ ಪ್ರೋತ್ಸಾಹವೂ ದೊರೆಯಿತು. ಮನೆಯಲ್ಲಿ ತುಂಬು ಕುಟುಂಬ. ಮನೆಕೆಲಸಗಳೂ ಸಾಕಷ್ಟಿದ್ದವು. ಮಗ ಶಾಲೆಗೆ ಸೇರಿದ್ದ. ಇವೆಲ್ಲವುಗಳ ನಡುವೆಯೇ ಮೊದಲ ವರ್ಷ ಹೇಗೋ ಪಾಸಾಗಿಬಿಟ್ಟೆ. ಎರಡನೆಯ ವರ್ಷಕ್ಕೆ ತಯಾರಿ ಚೆನ್ನಾಗಿಯೆ ಮಾಡಿಕೊಂಡಿದ್ದೆ. ಮೊದಲಿನಿಂದಲೇ ರೆಫೆರೆನ್ಸ್ ಮಾಡಿಕೊಂಡು ಪ್ರತಿ ಪೇಪರಿಗೂ ದೊಡ್ಡ ಪ್ರಮಾಣದ ನೋಟ್ಸ್ ತಯಾರಿಸಿಕೊಂಡೆ. ಜೊತೆಗೆ ಬಹಳ ಹೊತ್ತಿನವರೆಗೆ ಓದುತ್ತಲೂ ಇದ್ದೆ. ನನ್ನ ಜೊತೆಯಲ್ಲಿ ಸಹಪಾಠಿಯಾಗಿ ಇನ್ನೊಬ್ಬ ಸ್ಥಳೀಯ ವಿದ್ಯಾರ್ಥಿ ಇದ್ದಳು. ಆಕೆ ಎಷ್ಟೊ ಸಾರಿ ನಮ್ಮ ಮನೆಗೇ ಬಂದು ಕಂಬೈನ್ಡ್ ಸ್ಟಡಿ ಮಾಡುತ್ತಿದ್ದರು. ಅವರು ತಾಲೂಕು ಮಟ್ಟದಲ್ಲಿ ರಾಜಕೀಯ ಕ್ಷೇತ್ರದಲ್ಲಿಯೂ ಇದ್ದರು. ಹಾಗಾಗಿ ಅವರಿಗೆ ಓಡಾಟ ಬಹಳ. ಅವರು ನನ್ನ ಪೂರ್ಣ ಪ್ರಮಾಣದ ನೋಟ್ಸನ್ನು ಫೈಲು ಸಮೇತ ಓದಿಕೊಡುತ್ತೇನೆಂದು ತಮ್ಮೂರಿಗೆ ತೆಗೆದುಕೊಂಡು ಹೋಗಿದ್ದರು. ಅಲ್ಲೇನೊ ಬೇರೆ ಕೆಲಸ ಕಾರ್ಯಗಳಲ್ಲಿ ಹಿಂದಿರುಗಿ ಬರುವುದು ವಿಳಂಬವಾಯಿತು. ಅಂತೂ ಹಿಂದಕ್ಕೆ ಬಂದಾಗ ನನ್ನ ನೋಟ್ಸಿನ ಫೈಲನ್ನು ಎಲ್ಲಿಯೋ ಇಟ್ಟು ಮರೆತುಬಿಟ್ಟೆ. ಎಷ್ಟು ಹುಡುಕಿದರೂ ಸಿಗಲಿಲ್ಲ ಎಂದು ಕೈ ತಾರಮ್ಮಯ್ಯ ಆಡಿಸಿಬಿಟ್ಟರು. ಅಷ್ಟು ಹೊತ್ತಿಗೆ ಪರೀಕ್ಷೆ ಹತ್ತಿರ ಬಂದಿತ್ತು. ನನಗೆ ಮನಸ್ಸಿಗೆ ತುಂಬ ನೋವಾಯಿತು. ವಿಧಿಯಿಲ್ಲ. ನೋಟ್ಸ್ ತಯಾರಿಸಲು ಅಲ್ಲಲ್ಲಿ ಕೆಲವು ಪಾಯಿಂಟ್ಸ್ ಹಾಕಿಕೊಂಡಿದ್ದ ಹಾಳೆಗಳನ್ನೆಲ್ಲ ಒಟ್ಟಗೂಡಿಸಿ ತತ್ಕಾಲಕ್ಕೆ ತಯಾರಿ ಮಾಡಿಕೊಂಡೆ. ಪರೀಕ್ಷೆಯನ್ನೂ ಬರೆದೆ. ಅಂತೂ ಸೆಕಂಡ್ ಕ್ಲಾಸ್ ಬಂತು. ನನ್ನ ತಯಾರಿ ನೋಡಿದರೆ ಅತ್ಯುತ್ತಮ ಅಂಕ ಪಡೆಯಬಹುದಾಗಿತ್ತು. ಆದರೆ ಒಳ್ಳೆಯ ಸಮಯದಲ್ಲಿ ಆದ ಎಡವಟ್ಟು ನನ್ನನ್ನು ಇಷ್ಟಕ್ಕೆ ತಂದು ನಿಲ್ಲಿಸಿತು. ನನ್ನ ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರಕಲಿಲ್ಲವೆಂಬ ಕೊರಗಿದೆ. ಆದರೆ ಅದೇಕೋ ಪರೀಕ್ಷೆಯೆಂಬ ಪೆಡಂಭೂತ ಎಲ್ಲ ಸಂದರ್ಭಗಳಲ್ಲಿಯೂ ನನಗೆದುರಾಗಿ ನಿಂತಿದ್ದು ನನ್ನ ದುರಾದೃಷ್ಟ.
ನಂತರದ ಬದುಕಿನಲ್ಲೂ ಎಷ್ಟೋ ಹೊಸ ವಿಷಯಗಳನ್ನು ತಿಳಿಯುವ, ಕಲಿಯುವ ಪ್ರಯತ್ನ ಮುಂದುವರೆದಿದೆ. ಆದರೆ ಇನ್ಯಾವ ಪರೀಕ್ಷೆಯನ್ನೂ ಕಟ್ಟುವ ಸಾಹಸಕ್ಕೆ ಕೈ ಹಾಕಿಲ್ಲ. ಬದಲಾಗಿ ಬರವಣಿಗೆಯನ್ನು ಹವ್ಯಾಸವಾಗಿ ಮುಂದುವರಿಸಿಕೊಂಡು ಸಮಾಧಾನ ಪಟ್ಟುಕೊಂಡಿದ್ದೇನೆ.
ಈಗಲೂ ಎಷ್ಟೋ ಬಾರಿ ನನ್ನ ಕನಸಿನಲ್ಲಿ ನನಗಾದ ಪರೀಕ್ಷೆಯೆಂಬ ಪೆಡಂಭೂತದ ಕಹಿ ಅನುಭವಗಳು ಮರುಕಳಿಸಿದಂತಾಗುತ್ತವೆ. ಆಗೆಲ್ಲ ಧಿಗ್ಗೆಂದು ಎಚ್ಚರವಾಗಿಬಿಡುತ್ತದೆ. ನಂತರ ಬರಿ ಕನಸೆಂದು ನೆಮ್ಮದಿಯಾಗುತ್ತದೆ. ನನಗೇ ಹೀಗೇಕೆ? ಉತ್ತರ ಗೊತ್ತಿಲ್ಲ.
-ಬಿ.ಆರ್.ನಾಗರತ್ನ. ಮೈಸೂರು.
ಬಾಲ್ಯದ ವಿಚಿತ್ರ ಅನುಭವಗಳ ಸುಂದರ ಚಿತ್ರಣ.
ಕೆ. ರಮೇಶ್
ಚೆನ್ನಾಗಿದೆ
ಅದೃಷ್ಟ ಕೈಕೊಡುವುದೆಂದರೆ ಇದೇ. ಸುಲಲಿತವಾಗಿ ಓದಿಸಿಕೊಂಡ ಲೇಖನ. ಮೆಚ್ಚುಗೆಯಾಯಿತು.
ಧನ್ಯವಾದಗಳು ನಯನ ಮೇಡಂ ಹಾಗೂಕ.ರಮೇಶ್ ಸರ್
‘ಪೆಡಂಭೂತ’ವನ್ನು ರಸವತ್ತಾಗಿ ವರ್ಣಿಸಿದ್ದೀರಿ. ಎಂದಿನಂತೆ, ಚೆಂದದ ಬರಹ.
ಒಳ್ಳೆಯ ಅನುಭವ
ಧನ್ಯವಾದಗಳು ಪದ್ಮಾಮೇಡಂ..ಶಂಕರಿ ಮೇಡಂಮತ್ತು ಹೇಮಾ ಮತ್ತು ಸುಧಾ ಮೇಡಂ
ನಿಮ್ಮ ಆಪ್ತವಾದ ಅನುಭವ ಕಥನ ಸುಂದರವಾಗಿತ್ತು
ಪರೀಕ್ಷೆಯೆಂಬ ಪೆಡಂಭೂತ ನಿಮಗೆ ಮಾತ್ರವಲ್ಲ ನನಗೂ ಕೂಡಾ ಈಗಲೂ ಕಾಡುತ್ತಿರುತ್ತದೆ…ಕನಸಲ್ಲಿ.!! ಸೊಗಸಾದ ಬರೆಹ.
ಧನ್ಯವಾದಗಳು ಗಾಯತ್ರಿ ಮೇಡಂ..
ತುಂಬಾ ಉತ್ತಮ ಬರಹ…
ಧನ್ಯವಾದಗಳು ಕೃಷ್ಣ ಪ್ರಭಾ ಮೇಡಂ