ಪ್ರೀತಿಯ ಕರೆ ಕೇಳಿ ..

Share Button

ಪ್ರತಿವರ್ಷ ಬೇಸಿಗೆಯಲ್ಲಿ ಸ್ಕಾಟ್‌ಲ್ಯಾಂಡಿನಲ್ಲಿ ನೆಲಸಿದ್ದ ಮಗನ ಮನೆಗೆ ಭೇಟಿ ನೀಡುವುದು ವಾಡಿಕೆ ಆಗಿ ಹೋಗಿತ್ತು. ಮೊಮ್ಮಕ್ಕಳ ಪ್ರೀತಿಯ ಕರೆಗೆ ಓಗೊಡದಿರಲು ಹೇಗೆ ತಾನೇ ಸಾಧ್ಯವಾದೀತು? ಕೊವಿಡ್ -19 ಮಹಾಶಯನ ಉಪಟಳದಿಂದ ಎರಡು ವರ್ಷ ಎಲ್ಲಿಗೂ ಹೋಗಲಾಗಿರಲಿಲ್ಲ. ಮೇ 2020 ರಲ್ಲಿ ಮಾಡಿಸಿದ್ದ ಟಿಕೆಟ್ ಅಗಸ್ಟ್ 2022 ರ ತನಕ ಮುಂದೂಡಲಾಗಿ, ಕೊನೆಗೆ ಅಗಸ್ಟ್ ಮೊದಲನೇ ವಾರದಲ್ಲಿ ಸ್ಕಾಟ್‌ಲ್ಯಾಂಡಿಗೆ ಬಂದಿಳಿದೆ. ನಾನು ಮಗನ ಊರು ತಲುಪಿದಾಗ ಸಂಜೆ ಐದೂವರೆಯಾಗಿತ್ತು. ಪ್ರತಿ ಬಾರಿ ವಿಮಾನ ನಿಲ್ದಾಣದಿಂದ ಹೊರಬರುವಾಗ ಚಳಿಯಿಂದ ನಡುಗುತ್ತಾ ಕಾರು ಹತ್ತುತ್ತಿದ್ದೆ. ಆದರೆ ಈ ಬಾರಿ, ಅಚ್ಚರಿಯೆನಿಸುವಂತೆ ಸದಾ ಚಳಿ, ಮಳೆ, ಹಿಮಪಾತವಾಗುವ ನಾಡಿನಲ್ಲಿ, ಬೆಚ್ಚನೆಯ ವಾತಾವರಣವಿತ್ತು. ಬಹುಶಃ, ಸೂರ್ಯನಿಗೂ ಪೂರ್ವ ದಿಕ್ಕಿನೆಡೆ ಮುಖ ಮಾಡಿ ಬೋರಾಗಿತ್ತೇನೋ, ಪಾಶ್ಚಿಮಾತ್ಯ ರಾಷ್ಟ್ರಗಳನ್ನು ಮಾತನಾಡಿಸಲು ಉತ್ಸಾಹದಿಂದ ಮೆರವಣಿಗೆ ಹೊರಟ ಹಾಗಿತ್ತು. ಸೂರ್ಯನಿಗಾಗಿ ಕಾದು ಕುಳಿತವರು, ಇಂದು ಬಿಸಿಲಿನ ಶಾಖಕ್ಕೆ ಕಂಗೆಟ್ಟಿದ್ದರು. ಹಾಲು ಬಿಳುಪಿನ ಮುಖಗಳೆಲ್ಲಾ ಕೆಂಪಗಾಗಿ ಬಾಡಿ ಹೋಗಿದ್ದವು. ಸಿಟಿ ಸೆಂಟರ್‌ನ ರಸ್ತೆಯ ಎರಡೂ ಬದಿಗಳಲ್ಲಿ ನಳನಳಿಸುತ್ತಿದ್ದ ಹೂವಿನ ಹಾಸುಗಳು ಒಣಗಿ ಹೋಗಿದ್ದವು. ಹಚ್ಚ ಹಸಿರು ಹೊದ್ದು ಮಲಗಿರುತ್ತಿದ್ದ ಮೈದಾನಗಳೆಲ್ಲಾ ಕಂದು ಬಣ್ಣಕ್ಕೆ ತಿರುಗಿ, ಜೋಲುಮೋರೆ ಮಾಡಿದ್ದವು.

ಈ ವರ್ಷ, ಸೂರ್ಯ ಪೂರ್ವದಿಂದ ಪಶ್ಚಿಮಕ್ಕೆ ಧಾವಿಸಿ ಬಂದ ಹಾಗಿತ್ತು. ನೀಲ ಆಗಸದಲ್ಲಿ ತೇಲುವ ಬಿಳಿ ಮೋಡಗಳು. ದಿನದಿಂದ ದಿನಕ್ಕೆ ತಾಪಮಾನ ಹೆಚ್ಚುತ್ತಿತ್ತು. ಇಂಗ್ಲೆಂಡಿನಲ್ಲಿ ನಲವತ್ತು ಡಿಗ್ರಿ ಸೆಲ್ಸಿಯಸ್ ತಲುಪಿದ್ದರೆ, ಸ್ಕಾಟ್‌ಲ್ಯಾಂಡಿನಲ್ಲಿ ಮೂವತ್ತು ಡಿಗ್ರಿ ದಾಟಿತ್ತು. ನದಿಗಳು ನಿಧಾನವಾಗಿ ಬತ್ತುತ್ತಿದ್ದವು. ಕಾರ್ಪೊರೇಷನ್‌ನವರು ಟಿ.ವಿ. ಮಾಧ್ಯಮದ ಮೂಲಕ – ‘ರಬ್ಬರ್ ಪೈಪ್‌ಗಳ ಮೂಲಕ ಗಿಡಗಳಿಗೆ ನೀರು ಹಾಕುವುದಾಗಲೀ, ಕಾರು ತೊಳೆಯುವುದಾಗಲೀ ಮಾಡಬೇಡಿ. ನೀರನ್ನು ಪೋಲು ಮಾಡಬೇಡಿ, ಮಿತವಾಗಿ ಬಳಸಿ’ – ಎಂದು ಪದೇ ಪದೇ ಪ್ರಕಟಣೆ ಹೊರಡಿಸುತ್ತಿದ್ದರು. ಬಿಸಿಲಿನ ನಾಡಿನಿಂದ ಬಂದವಳಾದರೂ, ಇಲ್ಲಿನ ವಾತಾವರಣ ನನಗೆ ದಿಗಿಲು ಹುಟ್ಟಿಸುವಂತಿತ್ತು. ಕಾರಣ, ಇಲ್ಲಿನ ಬಿಸಿಲು ಚುರುಕು ಮುಟ್ಟಿಸುವಂತಿತ್ತು. ನಮ್ಮ್ಮೂರಿನ ಬಿಸಿಲಿಗೆ ಇಂತಹ ಪ್ರಖರತೆ, ಧಗೆ ಖಂಡಿತಾ ಇಲ್ಲ. ಜೊತೆಗೆ, ಇವರಿಗೆ ಕಿಡಕಿ ತೆಗೆಯುವ ಪರಿಪಾಠವೇ ಇಲ್ಲ, ಮನೆಯೊಳಗೆ ಫ್ಯಾನ್ ಇಲ್ಲವೇ ಇಲ್ಲ.

ಸೂರ್ಯ ಸ್ನಾನ ಮಾಡಲು, ಬೇಸಿಗೆಯಲ್ಲಿ ಬೇರೆ ಬೇರೆ ದೇಶಗಳ ಸಮುದ್ರ ತೀರಗಳಲ್ಲಿ ಅಡ್ಡಾಗುವ ಜನ ಇವರು. ಆದರಿಂದು, ತಮ್ಮ ಸಮುದ್ರದ ಕಿನಾರೆಗಳಲ್ಲೇ ಇವರು ಸೂರ್ಯ ಸ್ನಾನ ಮಾಡಲು ಸಜ್ಜಾಗುತ್ತಿದ್ದಾರೆ. ತಣ್ಣಗೆ ಕೊರೆಯುವ ಸ್ಕಾಟ್‌ಲ್ಯಾಂಡಿನ ಸಮುದ್ರದ ನೀರೂ, ರವಿಯ ಶಾಖಕ್ಕೆ ಬೆಚ್ಚಗಾಗಿದೆ. ಇಡೀ ಜಗತ್ತಿನಲ್ಲಿ ಕೇಳಿಸುತ್ತಿರುವ ಕೂಗು ಒಂದೇ -‘ಹವಾಮಾನ ಬದಲಾಗುತ್ತಿದೆ, ತಾಪಮಾನ ಏರಿಕೆಯಾಗುತ್ತಿದೆ.’

ಬದಲಾಗುತ್ತಿರುವ ಹವಾಮಾನದ ಜೊತೆಜೊತೆಗೇ ಮೊಮ್ಮಕ್ಕಳ ಮನಸ್ಥಿತಿಯೂ ಬದಲಾಗಿತ್ತು. ಮರುದಿನ, ಬೆಳಿಗ್ಗೆ ಎದ್ದವಳೇ, ಸಂಭ್ರಮದಿಂದ ಅಡಿಗೆ ಮನೆಗೆ ಹೊರಟೆ. ಬಾಲ್ಯದಿಂದಲೂ, ಅವರು ಇಷ್ಟಪಡುತ್ತಿದ್ದ ಮಸಾಲೆ ರೊಟ್ಟಿ, ಕಾಯಿ ಚಟ್ನಿ ಮಾಡಿದೆ. ಮಗ ಸೊಸೆ, ಏಳು ಗಂಟೆಗೇ ಆತುರಾತುರವಾಗಿ ಕಾಫಿ ಕುಡಿದು ಆಸ್ಪತ್ರೆಗೆ ಹೊರಟರು. ಗಂಟೆ ಎಂಟಾದರೂ ಮೊಮ್ಮಕ್ಕಳು ಏಳುವ ಸೂಚನೆ ಇಲ್ಲ. ಇಬ್ಬರೂ, ಅವರವರದೇ ಆದ ಸುಸಜ್ಜಿತವಾದ ಕೊಠಡಿಗಳಲ್ಲಿ ಮಲಗಿದ್ದರು. ಅವರನ್ನು ಎಬ್ಬಿಸಲು ಹೊರಟರೆ, ಹಿರಿಯವಳು -‘ಅಜ್ಜಿ, ನಮಗೆ ಶಾಲೆಗೆ ರಜೆ ಇದೆ ಮಲಗಲು ಬಿಡಿ, ಪ್ಲೀಸ್’. ಎಂದಳು. ಕಿರಿಯವಳು -‘ನಾನು ಬೆಳಿಗ್ಗೆ ತಿಂಡಿ ತಿನ್ನಲ್ಲ, ಒಟ್ಟಿಗೇ ಹನ್ನೊಂದು ಗಂಟೆಗೆ ಬ್ರಂಚ್ ಮಾಡ್ತೀನಿ’ ಎಂದಳು (ತಿಂಡಿ ಮತ್ತು ಊಟ). ಬಾಗಿಲು ತಟ್ಟಿ ಒಳಗೆ ಬನ್ನಿ ಎಂಬ ಎಚ್ಚರಿಕೆಯನ್ನೂ ನೀಡಿದಳು. (ಟಾಯ್ಲೆಟ್ ಹೊರತು ಪಡಿಸಿ ಉಳಿದ ರೂಮಿನ ಬಾಗಿಲುಗಳಿಗೆ ಚಿಲಕ ಇರುವುದಿಲ್ಲ) ಹತ್ತು ಗಂಟೆಯವರೆಗೂ ಕಾದು, ಕೊನೆಗೆ ಒಬ್ಬಳೇ ಕುಳಿತು ಆರಿದ ರೊಟ್ಟಿ ತಿಂದೆ. ಸದಾ -‘ಅಜ್ಜಿ, ತಾತ ಎಂದು ಜಪಿಸುತ್ತಿದ್ದವರು, ಈಗ ಐ ಪ್ಯಾಡ್, ಮೊಬೈಲಿನಲ್ಲಿ ಕಳೆದು ಹೋಗಿದ್ದರು.’ ಕಿರಿಯ ಮೊಮ್ಮಗಳು ಡಯಟ್ ಹೆಸರಿನಲ್ಲಿ ಕ್ಯಾರೆಟ್, ಸೌತೇಕಾಯಿ ಹೋಳುಗಳನ್ನು ಮೆಲ್ಲುತ್ತಿದ್ದಳು. ಹಿರಿಯವಳು, ಸ್ಯಾಂಡ್‌ವಿಚ್ ಮಾಡಿಕೊಳ್ಳುತ್ತಿದ್ದಳು. ನಾನು ಮಾಡಿದ ಮಸಾಲೆ ರೊಟ್ಟಿ, ಕಾಯಿಚಟ್ನಿ ಅನಾಥವಾಗಿದ್ದವು.

ಹವಾಮಾನ ಬದಲಾದಂತೆ, ಮೊಮ್ಮಕ್ಕಳ ಉಡುಪು, ಆಹಾರ ಪದ್ದತಿ, ವರ್ತನೆ ಎಲ್ಲಾ ಬದಲಾಗಿತ್ತು. ಇಬ್ಬರೂ ಹದಿಹರೆಯದವರು. ಅವರದು ಬಾಲ್ಯ ಮತ್ತು ಪ್ರೌಢಾವಸ್ಥೆಯ ನಡುವಿನ ಸಂಕ್ರಮಣದ ಅವಧಿಯಾಗಿತ್ತು. ಒಂದೆಡೆ ಸ್ಥಾಪಿತವಾದ ಎಲ್ಲಾ ಸಾಮಾಜಿಕ ಮೌಲ್ಯಗಳನ್ನು ವಿರೋಧಿಸುವ ಮನಸ್ಥಿತಿ, ಮತ್ತೊಂದೆಡೆ ಸ್ವತಂತ್ರವಾಗಿ ಬೆಳೆಯುವ ಹಂಬಲ. ಹಿರಿಯವಳು ‘ವೀಗನ್’ ಆಹಾರ ಪದ್ಧತಿಗೆ ಶರಣಾಗಿದ್ದಳು, ಅಪ್ಪಟ ಸಸ್ಯಾಹಾರಿಗಳು. – ಪ್ರಾಣಿಜನ್ಯ ಆಹಾರವನ್ನು ತಿನ್ನುವುದಿಲ್ಲ, ಡೈರಿ ಅಥವಾ ಪೌಲ್ಟ್ರಿಯಿಂದ ಉತ್ಪಾದಿಸುವ ಯಾವುದೇ ಆಹಾರ ವರ್ಜ್ಯ. ಇವರು ಸಸ್ಯಾಹಾರಿಗಳಿಗಿಂತ ಒಂದು ಹೆಜ್ಜೆ ಮುಂದು, ಪ್ರಾಣಿಹಿಂಸೆ ಸಲ್ಲದು ಎನ್ನುವ ಸಿದ್ಧಾಂತವನ್ನು ಅಕ್ಷರಶಃ ಪಾಲಿಸುವವರು. ಹಾಗಾಗಿ, ನಾನು ಮಾಡಿದ ತಿನಿಸುಗಳನ್ನು ತಿನ್ನುವ ಮೊದಲು ನೂರೆಂಟು ಪ್ರಶ್ನೆಗಳನ್ನು ಹಾಕುತ್ತಿದ್ದಳು.

ಕಿರಿಯವಳು ಬಾರ್ಬಿ ಗೊಂಬೆಯಂತೆ ಸಪೂರವಾಗುವ ಕನಸನ್ನು ಹೊತ್ತವಳು. ನಾನು ಅಡುಗೆ ಮಾಡುವಾಗ ಕಢಿಮೆ ಎಣ್ಣೆ ಹಾಕಿ ಎಂದು ಸದಾ ಎಚ್ಚರಿಕೆ ನೀಡುತ್ತಿದ್ದಳು. ಮಾಲ್‌ಗೆ ಹೋಗಿ ಕಡಿಮೆ ಕ್ಯಾಲರಿ ಇರುವ ಪದಾರ್ಥಗಳನ್ನು ಕೊಂಡು ತರುತ್ತಿದ್ದಳು. ಅವಳ ಡ್ರೆಸ್ಸಿಂಗ್ ಟೇಬಲ್ ಮುಂದೆ ಹತ್ತು ಹಲವು ಕ್ರೀಮ್‌ಗಳು, ಪರ್‌ಫ್ಯೂಮ್‌ಗಳು ತುಂಬಿ ತುಳುಕುತ್ತಿದ್ದವು. ಬ್ಯೂಟಿ ಪಾರ್ಲರ್‌ನಿಂದ ಬಂದ ಕಿರಿಯ ಮೊಮ್ಮಗಳ ಗುಂಗುರು ಗುಂಗುರು ಕೂದಲು ನೇರವಾಗಿ ಭುಜದ ಮೇಲೆ ಇಳಿ ಬಿದ್ದಿತ್ತು. ಕೂದಲು ನೇರವಾಗಿರುವುದು ಈಗಿನ ಫ್ಯಾಷನ್ ಅಂತೆ. ನಮ್ಮ ಕಾಲದಲ್ಲಿ, ನೇರವಾದ ಕೂದಲನ್ನು ಗುಂಗುರು ಮಾಡಿ ಮುಖದ ಮೇಲೆ ಇಳಿಬಿಡುತ್ತಿದ್ದುದು ನೆನಪಿದೆ.

ಸಂಜೆ ಮಗನ ಜೊತೆ, ಹತ್ತಿರದಲ್ಲಿದ್ದ ಸಮುದ್ರ ತೀರಕ್ಕೆ ಹೋದೆ. ಅಲ್ಲಿ ನಾ ಕಂಡದ್ದು – ಬಿಸಿಲಿನ ತಾಪಕ್ಕೆ ಹೊಂದುವಂತೆ ತುಂಡುಡುಗೆ ಧರಿಸಿ ಅಡ್ಡಾಡುವ ಹದಿಹರೆಯದವರು, ಕೈಲೊಂದು ನೀರಿನ ಬಾಟಲಿಯನ್ನು ಹಿಡಿದು ಓಡುವ ತರುಣ, ತರುಣಿಯರು, ನೀರಿನ ಜೊತೆಗೆ ಹಣ್ಣು ಮತ್ತು ಸ್ಯಾಂಡ್‌ವಿಚ್ ಅನ್ನು ಬ್ಯಾಗಿನಲ್ಲಿ ಹಾಕಿಕೊಂಡು, ಗುಂಪು ಗುಂಪಾಗಿ ಕುಳಿತು ಹರಟೆ ಹೊಡೆಯುತ್ತಿರುವ ಹಿರಿಯ ನಾಗರೀಕರು, ನಾಯಿಗಳನ್ನು ಹಿಡಿದುಕೊಂಡು, ನಾಯಿ ಮಾಡಿದ ಮಲವನ್ನು ಮರೆಯದೇ ಪ್ಲಾಸ್ಟಿಕ್ ಚೀಲವೊಂದರಲ್ಲಿ ಬಾಚಿ, ಅಲ್ಲಲ್ಲಿ ಇಟ್ಟಿರುವ ನಾಯಿ ಕಸದ ಬುಟ್ಟಿಗಳಿಗೆ ಹಾಕುತ್ತಾ ಸಾಗುವ ಶ್ವಾನಪ್ರಿಯರು. ರವಿಯ ಬದಲಾದ ವೇಳಾಪಟ್ಟಿಯಿಂದ ಸೃಷ್ಟಿಯಾದ ದೃಶ್ಯಗಳಿವು.

ಬದಲಾದ ಹವಾಮಾನ ಕಂಡು ಸ್ವಲ್ಪವೂ ಗೊಣಗದೆ, ಪಾಶ್ಚಾತ್ಯರು, ತಮ್ಮದೇ ಆದ ರೀತಿಯಲ್ಲಿ ಸಂಭ್ರಮಿಸುವುದನ್ನು ಕಂಡು ಬೆರಗಾದೆ. ಸಮುದ್ರ ತೀರದಲ್ಲಿ, ಮೊಟ್ಟೆಯೊಡೆದು ಹೊರಬರಲು ಹೋರಾಟ ನಡೆಸುತ್ತಿದ್ದ ಆಮೆಯ ಮರಿಗಳನ್ನು ಕಂಡೆ. ಹೌದಲ್ಲ, ತಂದೆ ತಾಯಿ ಹೊದಿಸಿದ ಕವಚವನ್ನು ಮಕ್ಕಳು ಕಿತ್ತೊಗೆಯಲಿ ಬಿಡಿ. ಅರಳುತ್ತಿರುವ ಕನಸುಗಳ ಹಿಂದೆ ಹೋಗಲಿ ಬಿಡಿ. ಹಕ್ಕಿಗಳ ಹಾಗೆ ಹಾರಲಿ ಬಿಡಿ. ಬೆಳೆಯುತ್ತಿರುವ ಮೊಮ್ಮಕ್ಕಳ ಭಾವನೆಗಳನ್ನು ಆದರಿಸಬೇಕಲ್ಲವೇ?

ರಾತ್ರಿ ಮನೆಗೆ ಹಿಂತಿರುಗಿದಾಗ, ಮೊಮ್ಮಗಳು ಓಡುತ್ತಾ ಬಂದು, ‘ಅಜ್ಜಿ, ನನ್ನ ಪಿ.ಯು.ಸಿ. ಫಲಿತಾಂಶ ಬಂದಿದೆ. ಎಲ್ಲದರಲ್ಲೂ ಎ ಗ್ರೇಡ್ ಬಂದಿದೆ.’ ಎಂದು ಒಂದೇ ಉಸಿರಿನಲ್ಲಿ ಹೇಳಿದಾಗ, ನನಗೆ ಸ್ವರ್ಗ ಒಂದೇ ಗೇಣು ದೂರದಲ್ಲಿರುವ ಭಾವ. ಕಿರಿಯವಳು, ತನ್ನ ಗೆಳತಿಗೆ, ಗೂಗಲ್ ತೆರೆದು, ಪತ್ರಿಕೆಗಳಲ್ಲಿ ಪ್ರಕಟವಾದ ನನ್ನ ಲೇಖನಗಳನ್ನು ಹೆಮ್ಮೆಯಿಂದ ತೋರಿಸುತ್ತಿದ್ದಳು. ಇಂತಹ ಪ್ರೀತಿ, ಮಮತೆಯನ್ನು ಇನ್ನೆಲ್ಲಿ ಕಾಣಲು ಸಾಧ್ಯ?

-ಡಾ.ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ

6 Responses

  1. ತಮ್ಮ ಅನುಭವದ ಅಭಿವ್ಯಕ್ತಿ ಸೂಪರ್ ಮೇಡಂ

  2. ನಯನ ಬಜಕೂಡ್ಲು says:

    ಚೆನ್ನಾಗಿದೆ

  3. ಶಂಕರಿ ಶರ್ಮ says:

    ಸ್ಕಾಟ್ಲ್ಯಾಂಡಿನಲ್ಲಿ ತಮ್ಮ ಪ್ರೀತಿಯ ಮೊಮ್ಮಕ್ಕಳೊಡನಿರುವ ಆತ್ಮೀಯ ಸಂಬಂಧ, ಅಲ್ಲಿಯ ಹವಾಮಾನ ವೈಪರೀತ್ಯದಿಂದ ಬದಲಾದ ನಿಸರ್ಗ ನೋಟ ಎಲ್ಲವೂ ತಮ್ಮ ಆತ್ಮೀಯ, ಸರಳ ನಿರೂಪಣೆಯೊಂದಿಗೆ ಮನಮುಟ್ಟಿತು.

  4. ವಂದನೆಗಳು ಶಂಕರಿ ಶರ್ಮಾ ರವರಿಗೆ

  5. Padmini Hegde says:

    ಬಿಸಿಯ ಕಹಿ, ಪ್ರೀತಿಯ ಸಿಹಿ ಎರಡೂ ಅನುಭವ ನವಿರಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: