ಕಾದಂಬರಿ: ನೆರಳು…ಕಿರಣ 43

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..
ಒಂದೊಳ್ಳೆಯ ದಿನ ‘ಸಿರಿ’ ಮತ್ತು ‘ಶ್ರೀಧರ’ ಅವರಿಚ್ಚೆಯಂತೆ ಸತಿಪತಿಗಳಾದರು. ಸರ್ಕಾರಿ ಹುದ್ದೆಯನ್ನು ಸೇರಿದರೆ ಊರಿಂದೂರಿಗೆ ವರ್ಗಾವಣೆ ತಪ್ಪಿದ್ದಲ್ಲ ಎಂದರಿತ ಅವರಿಬ್ಬರೂ ತಮ್ಮಲ್ಲೇ ಚರ್ಚಿಸಿ ಒಂದು ಪುಟ್ಟದಾದ ಖಾಸಗಿ ಕ್ಲಿನಿಕ್ ತೆರೆದರು. ಜೊತೆಗೆ ಬೇರೆಬೇರೆ ಆಸ್ಪತ್ರೆಗಳಿಗೆ ಕನ್ಸಲ್ಟೇಷನ್ನಿಗೆ ಹೋಗಿ ಬರುತ್ತಿದ್ದರು. ಮನೆಯ ಪರಿಸ್ಥಿತಿಯನ್ನರಿತು ಅದರಂತೆ ಏರ್ಪಾಡುಗಳನ್ನು ಮಾಡಿಕೊಂಡು ಸಮಯ ಸಿಕ್ಕಾಗಲೆಲ್ಲ ಹವ್ಯಾಸವಾಗಿ ಬೆಳೆಸಿಕೊಂಡಿದ್ದ ವೀಣಾವಾದನವನ್ನೂ ಬಿಡದೆ ಅಭ್ಯಾಸ ಮಾಡುತ್ತಾ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸುತ್ತಿದ್ದಳು ಸಿರಿ. ಹೆಚ್ಚು ತಿಕ್ಕಾಟವಿಲ್ಲದೆ ತನಗನ್ನಿಸಿದ್ದನ್ನು ಸಾಧಿಸಿ ನೆಲೆನಿಂತ ಮಗಳ ಬಗ್ಗೆ ಭಾಗ್ಯಳಿಗೆ ಹೆಮ್ಮೆ ಎನಿಸಿತ್ತು. ಅದಕ್ಕೂ ಮಿಗಿಲಾಗಿ ವಿವಾಹವಾಗಿ ವರ್ಷ ತುಂಬುವುದರೊಳಗಾಗಿ ಮೊಮ್ಮಗಳನ್ನೂ ಅವಳ ಮಡಿಲಿಗೆ ಹಾಕಿದ್ದಳು. ಇದರಿಂದ ಇನ್ನೂ ಹೆಚ್ಚಿನ ಸಂತಸವಾಗಿತ್ತು.

ಇತ್ತ ಲಕ್ಷ್ಮಿ , ಭಟ್ಟರು, ನಾಣಜ್ಜ ವೃದ್ಧರ ಸಾಲಿಗೆ ಸೇರ್ಪಡೆಯಾಗಿದ್ದರೂ ಸಣ್ಣಪುಟ್ಟ ತೊಂದರೆಗಳನ್ನು ಬಿಟ್ಟರೆ ಆರೋಗ್ಯವಾಗಿದ್ದರು. ಹೇಳಿಕೊಳ್ಳುವಂತಹ ಖಾಯಿಲೆಗಳೇನೂ ಹತ್ತಿರ ಸುಳಿದಿರಲಿಲ್ಲ. ಹೀಗಾಗಿ ಅವರು ತಮ್ಮತಮ್ಮ ಕೆಲಸಗಳನ್ನು ಮಾಡಿಕೊಳ್ಳುತ್ತಾ ಮನೆಯ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದರು. ಕಾಲಚಕ್ರ ಸರಿಯುತ್ತಾ ಇದ್ದಂತೆ ಡಾ.ಸಿರಿಯ ಮಗಳು ‘ರಶ್ಮಿ’ ಎಲ್ಲರ ಮುದ್ದಿನ ಕಣ್ಮಣಿಯಾಗಿ ಬೆಳೆಯುತ್ತಿದ್ದಳು. ತನ್ನ ಅಜ್ಜಿಯಂತೆ ಚಿಕ್ಕಂದಿನಿಂದಲೇ ಸಂಗೀತದ ಬಗ್ಗೆ ಒಲವು ಮೂಡಿಸಿಕೊಂಡಿದ್ದಳು. ಅಜ್ಜಿಯನ್ನು ಮೀರಿಸುವಷ್ಟರ ಮಟ್ಟಿಗೆ ಅದರಲ್ಲಿ ಸಾಧನೆಗೈದು ಕೇವಲ ಹದಿನೆಂಟನೆಯ ವಯಸ್ಸಿಗೇ ಸಂಗೀತ ಕಛೇರಿ ನಡೆಸಿ ಸೈ ಎನ್ನಿಸಿಕೊಂಡಳು. ಜೊತೆಗೆ ಮುತ್ತಜ್ಜಿಯ ಕಸೂತಿ ಕಲೆ ಅವಳನ್ನು ಹೆಚ್ಚು ಆಕರ್ಷಿಸಿತು. ಕಾಲಕ್ಕೆ ತಕ್ಕಂತೆ ಅದನ್ನು ಉಪಯೋಗಿಸಲು ಅನುಕೂಲವಾಗುವಂತೆ ಫ್ಯಾಷನ್ ಡಿಸೈನಿಂಗ್ ಕೋರ್ಸಿನಲ್ಲಿ ತರಬೇತಿ ಪಡೆದಳು. ವರ್ಷದ ಹಿಂದೆಯೇ ಅವರ ಪಕ್ಕದ ಮನೆಯಲ್ಲಿ ವಾಸವಿದ್ದ ಒಕ್ಕಲಿನವರು ಮನೆಯನ್ನು ಖಾಲಿಮಾಡಿ ತಮ್ಮ ಹೊಲವಿದ್ದ ಜಾಗದಲ್ಲೇ ಹೊಸಮನೆ ಕಟ್ಟಿಕೊಂಡು ಹೋಗಿದ್ದರು. ಹೈನುಗಾರಿಕೆಯನ್ನೂ ಅಲ್ಲಿಯೇ ಮುಂದುವರಿಸಿದ್ದರು. ಖಾಲಿಯಾಗಿದ್ದ ಮನೆಯನ್ನು ತನ್ನ ವಶಕ್ಕೆ ತೆಗೆದುಕೊಂಡು ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಲು ಕೈಗೆತ್ತಿಕೊಂಡಳು. ಮನೆಯ ಹಿರಿಯರೆಲ್ಲರ ಸಮ್ಮತಿ ಪಡೆದು ಆ ಮನೆಯನ್ನು ಆಧುನಿಕ ರೀತಿಯಲ್ಲಿ ನವೀಕರಿಸಿ ಅಲ್ಲಿಗೆ “ಸಿರಿ ಕಸೂತಿ ಸೆಂಟರ್” ಅನ್ನು ಸ್ಥಳಾಂತರಿಸಿದಳು. ಮುತ್ತಜ್ಜಿಗೆ ವಿಶ್ರಾಂತಿ ನೀಡಿ ಅದರ ಜವಾಬ್ದಾರಿಯನ್ನು ತಾನೇ ವಹಿಸಿಕೊಂಡಳು . ಹಾಗೇ ಅಜ್ಜಿಯು ನಡೆಸುತ್ತಿದ್ದ ಸಂಗೀತಕಲಾ ಶಾಲೆಗೆ ಬೆಂಗಾವಲಾಗಿ ನಿಂತಳು.

ಜ್ಯೋತಿಷ್ಯದ ಅಂಧ ವಿಶ್ವಾಸದ ಬಗ್ಗೆ ವಿರೋಧವಿತ್ತೇ ವಿನಃ ಪೂಜಾಕಾರ್ಯಗಳಲ್ಲಿ, ಆಚಾರ ವಿಚಾರಗಳಲ್ಲಿ ಅಸಹನೆ ಹೊಂದಿರದ ಭಾಗ್ಯ ತನ್ನಪ್ಪ ಭಟ್ಟರಿಗೆ ನೂರು ವರ್ಷವಾದಾಗ ಶತಮಾನೋತ್ಸವದ ಸಂಭ್ರಮಾಚರಣೆ ಆಚರಿಸಲು ನಿರ್ಧರಿಸಿದಳು. ಎಲ್ಲರಿಗೂ ಇದು ಒಪ್ಪಿತವಾಗಿತ್ತು. ಅದರ ಸಿದ್ಧತೆಗಳನ್ನು ನಡೆಸುತ್ತಿದ್ದಾಗಲೇ ರಶ್ಮಿಯು ತನ್ನ ಬಾಳಸಂಗಾತಿಯನ್ನು ಆಯ್ಕೆಮಾಡಿಕೊಂಡಿರುವ ಸುದ್ಧಿಯನ್ನು ಬಹಿರಂಗಪಡಿಸಿದಳು. ಎಲ್ಲರಿಗೂ ಅಚ್ಚರಿ ! ಹುಡುಗನ್ಯಾರೆಂದು ವಿಚಾರಿಸಿದಾಗ ಮತ್ತಷ್ಟು ಆಶ್ಚರ್ಯವಾಯಿತು. ಆತ ಸೀತಮ್ಮನವರ ತವರಿನ ಕಡೆಯ ಸಂಬಂಧದ ಹುಡುಗ ‘ಗೌತಮ್’. ಇಂಜಿನಿಯರಿಂಗ್ ಮುಗಿಸಿ ತನ್ನದೇ ಸ್ವಂತ ಉದ್ಯಮವೊಂದನ್ನು ಬೆಂಗಳೂರಿನಲ್ಲಿಯೇ ನಡೆಸುತ್ತಿದ್ದ. ಆಗಾಗ್ಗೆ ಮನೆಗೂ ಬಂದು ಹೋಗುತ್ತಿದ್ದ. ಅವರಿಬ್ಬರೂ ಮದುವೆಯಾಗಲು ನಿರ್ಧರಿಸಿದ್ದಾರೆಂಬ ಕಲ್ಪನೆ ಯಾರಿಗೂ ಇರಲಿಲ್ಲ. ಈಗ ವಿಷಯ ತಿಳಿದು ಎಲ್ಲರಿಗೂ ಒಪ್ಪಿಗೆಯಾಯಿತು. ಲಕ್ಷ್ಮಿಮತ್ತು ಭಟ್ಟರು ಮಾತ್ರ “ನೀನೂ ನಿನ್ನಮ್ಮನಂತೆ ಸರಳ ವಿವಾಹವಾಗುತ್ತೇನೆ ಅನ್ನಬೇಡ ಕೂಸೇ. ನೀನು ಆರಿಸಿಕೊಂಡಿರುವ ಹುಡುಗನ ಮನೆಯವರು ಈ ಮನೆಯವರಿಗಿಂತಲೂ ಆಚಾರ, ವಿಚಾರ, ಸಂಪ್ರದಾಯಗಳಲ್ಲಿ ಒಂದು ಕೈ ಮೇಲೇ. ಆದ್ದರಿಂದ ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದು ಸಂಗಾತಿಗಳಾಗಿ” ಎಂದು ತಮ್ಮ ತಮ್ಮ ಮನದಿಚ್ಚೆಯನ್ನು ತಿಳಿಸಿದರು.

“ಅಯ್ಯೋ ! ಮುತ್ತಜ್ಜ, ಮುತ್ತಜ್ಜಿ ಗಾಭರಿಯಾಗಬೇಡಿ. ನಾನೇನೂ ಅಮ್ಮನಂತೆ ಸರಳ ವಿವಾಹವಾಗುವುದಿಲ್ಲ. ಅಜ್ಜಿ, ಚಿಕ್ಕಜ್ಜಿಯರು ಮದುವೆಯಾದರಲ್ಲ ಅದೇ ಛತ್ರದಲ್ಲಿ -ಅದೇ ನಮ್ಮ ವಂಶದವರದ್ದೇ- ಶ್ರೀರಾಮ ಕಲ್ಯಾಣ ಮಂಟಪದಲ್ಲೇ ಮದುವೆ ನೆರವೇರುತ್ತದೆ. ಮುತ್ತಜ್ಜನ ಶತಮಾನದ ಸಂಭ್ರಮದಲ್ಲಿ ನಮ್ಮ ನಿಶ್ಚಿತಾರ್ಥ ಸರೀನಾ? ಹಾಗೇ ನನ್ನದೊಂದು ಕಂಡೀಷನ್ ಹಾಕಿದ್ದೆ,  ಅದಕ್ಕವರು ಒಪ್ಪಿದ್ದಾರೆ ಗೊತ್ತಾ” ಎಂದಳು ರಶ್ಮಿ.

“ಕಂಡೀಷನ್ನೇ ಏನದು ಕೂಸೇ?” ಎಂದು ಆತುರದಿಂದ ಪ್ರಶ್ನಿಸಿದರು.

“ಹ್ಹ ಹ್ಹ ಹೆದರಬೇಡಿ, ಜಾತಕದ ಸುದ್ಧಿ ಎತ್ತಬಾರದು, ಹಾಗೇನಾದರೂ ಮಾಡಿದರೆ ನನ್ನ ಭಾಗ್ಯಜ್ಜಿಯು ಭದ್ರಕಾಳಿಯ ಅವತಾರ ತಾಳುತ್ತಾರೆ ಎಂದೆ ಅಷ್ಟೇ. ಅದಕ್ಕವರು ಪಾಪ ಸಹಜವಾದದ್ದೇ, ಹೆಸರಿನ ಬಲದಿಂದ ಶುಭಗಳಿಗೆಯಲ್ಲಿ ಮದುವೆ ಮಾಡಿದರಾಯ್ತೆಂದರು.” ಎಂದು ಹೇಳಿದಳು.

ಇಷ್ಟೆಲ್ಲಾ ಕಲಾಪವನ್ನು ಅಲ್ಲಿಯೇ ಮರೆಯಲ್ಲಿದ್ದ ಭಾಗ್ಯ ಕೇಳಿಸಿಕೊಂಡವಳೇ “ಬಹಳ ದೊಡ್ಡವಳಾಗಿಬಿಟ್ಟೆ” ಎಂದು ಮೊಮ್ಮಗಳ ಕಿವಿಹಿಡಿದು ಹುಸುಮುನಿಸು ತೋರಿದಳು.

ನಂತರ ರಶ್ಮಿಯ ಅಭಿಲಾಷೆಯಂತೆಯೇ ಭಟ್ಟರ ಶತಮಾನೋತ್ಸವ ಸಮಾರಂಭದೊಡನೆ ಅವಳ ನಿಶ್ಚಿತಾರ್ಥವೂ ನಡೆದು ನಂತರ ಮದುವೆಯ ಕಾರ್ಯವು ಯಾವುದೇ ಅಡಚಣೆಯಿಲ್ಲದಂತೆ ನೆರವೇರಿತು. ಇದರಿಂದ ಹೆಚ್ಚು ಸಂತೋಷಪಟ್ಟವರೆಂದರೆ ಭಟ್ಟರು, ಲಕ್ಷ್ಮಿ, ನಾಣಜ್ಜ. ಜೇನುಗೂಡಿನಂತೆ ಎಲ್ಲರೂ ಒಂದೇ ಸೂರಿನಡಿಯಲ್ಲಿ ಬದುಕು ಸಾಗಿಸುತ್ತಿದ್ದರು. ಮೊದಲಿನಂತೆ ರಾತ್ರಿಯ ಊಟದ ಸಮಯದಲ್ಲಿ ಎಲ್ಲರೂ ಒಟ್ಟುಗೂಡುತ್ತಿದ್ದರು. ಅಂದಿನ ಆಗುಹೋಗುಗಳನ್ನು, ಆದ ಅನುಭವಗಳನ್ನು ಹಂಚಿಕೊಳ್ಳುವ ಪರಿಪಾಠ ಮುಂದುವರಿಯಿತು. ಇದನ್ನೆಲ್ಲ ವೀಕ್ಷಿಸಿದ ನಾಣಜ್ಜ “ಭಗವಂತಾ ಈ ಮನೆಯ ಕತ್ತಲು ಸರಿದು ಬೆಳಕು ಮೂಡಿದೆ. ಮತ್ತೆ ಮೊದಲಿನಂತೆ ಹುರುಪು, ಉತ್ಸಾಹ ಮೂಡಿದೆ. ಇದು ನೂರಾರು ಕಾಲ ಹೀಗೇ ಸಾಗುತ್ತಲೇ ಇರುವಂತೆ ಮಾಡು ತಂದೆ” ಎಂದು ಪ್ರಾರ್ಥನೆ ಸಲ್ಲಿಸಿದರು.

ವಯೋಸಹಜವಾಗಿ ಲಕ್ಷ್ಮಿ, ಭಟ್ಟರು ಶ್ರೀಹರಿಯ ಪಾದ ಸೇರಿದರು. ಅವರಿಬ್ಬರ ನಿರ್ಗಮನದಿಂದ ಜರ್ಝಿತರಾದ ನಾಣಜ್ಜನ ಆರೋಗ್ಯದಲ್ಲೂ ಏರುಪೇರಾಗತೊಡಗಿತು. ಅವರು ಏನನ್ನೋ ನಿರ್ಧರಿಸಿದಂತೆ “ಭಾಗ್ಯಮ್ಮಾ ನಾನು ನನ್ನ ಕೊನೆಯ ದಿನಗಳನ್ನು ಕಾಶಿಕ್ಷೇತ್ರದಲ್ಲಿ ಕಳೆದು ಅಲ್ಲಿಯೇ ಹರಿಪಾದವನ್ನು ಸೇರಬೇಕೆಂಬಾಸೆ. ದಯವಿಟ್ಟು ನನ್ನನ್ನು ಕಳುಹಿಸಿಕೊಡಮ್ಮಾ” ಎಂದು ಕೋರಿದರು.

ಹೆತ್ತವರಾರೆಂಬುದನ್ನೇ ತಿಳಿಯದೆ ಯಾರದ್ದೋ ಮೂಲಕ ಈ ಮನೆಯನ್ನು ಸೇರಿ ಮುಪ್ಪಿನವರೆಗೂ ಮನೆಯವರೆಲ್ಲರಿಗೂ ತುತ್ತುಣ್ಣಿಸಿ, ಕಷ್ಟಸುಖದಲ್ಲಿ ಭಾಗಿಯಾದ ನಾಣಜ್ಜ ಯಾವತ್ತೂ ಏನನ್ನೂ ಬಯಸದ, ಯಾವ ಅಪೇಕ್ಷೆಯನ್ನೂ ಮುಂದಿಡದೆ ಈದಿನ ತನ್ನ ಮುಂದೆ ಸಲ್ಲಿಸಿದ ಕೋರಿಕೆ ಕೇಳಿ ಭಾಗ್ಯಳ ಮನಸ್ಸು ಆರ್ದ್ರವಾಯಿತು. ಅವರನ್ನು ದೂರಮಾಡಿಕೊಳ್ಳುವ ಮನಸ್ಸಿಲ್ಲದಿದ್ದರೂ ಕೋರಿಕೆಯನ್ನು ನಿರಾಕರಿಸಲಾರದೆ ಮಗಳು, ಅಳಿಯನಿಗೆ ವಿಷಯ ತಿಳಿಸಿ ಕಾಶಿಯಲ್ಲಿ ಇರಲು ಎಲ್ಲ ವ್ಯವಸ್ಥೆಯನ್ನೂ ಮಾಡಿಸಿ ನಾಣಜ್ಜನನ್ನು ಕಳುಹಿಸಿಕೊಟ್ಟಳು. ನಂತರದ ಕೆಲವೇ ದಿನಗಳಲ್ಲಿ ಅವರ ದೇಹಾಂತವಾದ ಸುದ್ಧಿ ತಿಳಿದು ಮಗಳು ಅಳಿಯನ ಜೊತೆಗೂಡಿ ಕಾಶಿಗೆ ತೆರಳಿ ಅವರಿಗೆ ಕರ್ಮಾಂತರಗಳನ್ನು ನೆರವೇರಿಸಿ ಬಂದಳು.

ಒಬ್ಬರಾದ ನಂತರ ಒಬ್ಬರಂತೆ ಎಲ್ಲ ಆತ್ಮೀಯರೂ ಕಾಲವಾದ ಮೇಲೆ ಭಾಗ್ಯಳಿಗೆ ತಾನು ಒಂಟಿಯಾದೆನೆಂಬ ಹಪಾಹಪಿಕೆ ಪ್ರಾರಂಭವಾಯಿತು. ಅಷ್ಟರಲ್ಲಿ ಮೊಮ್ಮಗಳು ರಶ್ಮಿ ಮುದ್ದಾದ ಗಂಡುಮಗುವಿನ ತಾಯಿಯಾಗಿ ಮನೆಗೆ ಮತ್ತೊಂದು ಬೆಳಕನ್ನು ಹೊತ್ತು ತಂದಳು. ಅದೇ ಭಾಗ್ಯಳ ಮುದ್ದಿನ ಮುಮ್ಮಗು.

“ಅಜ್ಜೀ..ಅಜ್ಜೀ.. ಇದೇನು ಕೂತಲ್ಲೇ ಕಣ್ಮುಚ್ಚಿ ಕನಸು ಕಾಣುತ್ತಿದ್ದೀರಿ” ಎಂದು ಭುಜ ಹಿಡಿದು ಅಲುಗಿಸಿದಳು ರಶ್ಮಿ. ತಡಬಡಾಯಿಸಿಕೊಂಡು ತನ್ನ ಆಲೋಚನಾ ಸರಣಿಯಿಂದ ಎಚ್ಚೆತ್ತ ಭಾಗ್ಯ ವಾಸ್ತವಕ್ಕೆ ಬಂದವಳೇ “ಓ..ಯಾಕೊ ಜೊಂಪು ಹತ್ತಿಬಿಟ್ಟಿತ್ತು ಪುಟ್ಟೀ. ಹಾಲು ಮಾಡಿ ತಂದೆಯಾ?” ಎಂದು ಮೊಮ್ಮಗಳನ್ನು ಕೇಳಿದಳು.

“ಹ್ಹ..ಹ್ಹ..ಹಾಲುಯಮಾಡಿ ಕುಡಿಸಿದ್ದೂ ಆಯಿತು, ಅವನು ಮಲಗಿ ನಿದ್ದೆಮಾಡಿದ್ದೂ ಆಯಿತು. ಏನು ನಿನಗೆ ತಾತನ ನೆನಪಾಯಿತೇ?.. ಎಲ್ಲೋ ಆಳದಲ್ಲಿ ಮುಳುಗಿಹೋದಂತಿದೆ?” ಎಂದು ಕೇಳಿದಳು ರಶ್ಮಿ.

“ಹೂಂ.. ಮರೆತಿದ್ದರೆ ತಾನೇ ನೆನಪಿಸಿಕೊಳ್ಳುವುದು. ನನ್ನ ಅಂತರಂಗದಲ್ಲಿ ಕಿಚ್ಚನ್ನು ಹೊತ್ತಿಸಿ ಬೆಂಬಿಡದೆ ಕುಳಿತಿದ್ದಾರೆ. ಯಾವ ಮಗು ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ ಅಕಾಲ ಮೃತ್ಯುವಿಗೆ ತುತ್ತಾಗುತ್ತಾಳೆಂದು ಚಿಂತಾಕ್ರಾಂತರಾಗಿ ಕೊರಗಿ ಕೊರಗಿ ಕೊನೆಯುಸುರೆಳೆದರೋ ಅವಳೇ ಇವತ್ತು ಈ ಮನೆಯನ್ನು ಬೆಳಗಿ, ಲೋಕಕ್ಕೂ ಬೆಳಕಾಗಿ ಸಮಾಜಸೇವೆ ಮಾಡುತ್ತಿದ್ದಾಳೆ. ಇಂತಹ ಸುಖದ ದಿನಗಳನ್ನು ಅನುಭವಿಸಲು ಬದುಕಿರದೆ ಕುರುಡು ನಂಬಿಕೆಯ ಬೇರು ಹಿಡಿದು ಆತ್ಮಸ್ಥೈರ್ಯ ಕಳೆದುಕೊಂಡು ಜೀವವನ್ನೇ ಕೊನೆಗಾಣಿಕೊಂಡರಲ್ಲಾ. ಅದರ ಬಿಸಿಯನ್ನು ಎಲ್ಲಿಯೂ ಯಾರಮುಂದೆಯೂ ಪ್ರದರ್ಶಿಸದೆ ನನ್ನ ಅಂತರಂಗದಲ್ಲೇ ಬಚ್ಚಿಟ್ಟುಕೊಂಡು ಬಂದದ್ದೆಲ್ಲಾ ಬರಲಿ ಗೋವಿಂದನ ದಯವೊಂದಿರಲಿ ಎಂದು ಇಲ್ಲಿಯವರೆಗೆ ನಡೆಯುತ್ತಾ ನೂರರ ಅಂಚನ್ನು ಮುಟ್ಟುತ್ತಿದ್ದೇನೆ. ನಾನೆಂದೂ ಅವರಂತೆ ಗ್ರಹಗತಿಗಳ ಲೆಕ್ಕಾಚಾರದ- ಅಲ್ಲಲ್ಲ ತಪ್ಪಾದ ಲೆಕ್ಕಾಚಾರದ ಬಾಲ ಹಿಡಿದು ಹೋದವಳಲ್ಲ. ಅದಕ್ಕೆ ಪುಸೊತ್ತಿಲ್ಲದಂತೆ ನನ್ನನ್ನು ನಾನು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡೆ. ನಾನು ಸಾಧಿಸಲು ಬಯಸಿ ಆಗದಿರುವುದನ್ನು ನನ್ನ ಮಗಳು, ಮೊಮ್ಮಗಳು ಸಾಧಿಸಿದ್ದನ್ನು ಕಣ್ತುಂಬ ಕಂಡು ಜೀವನ ಸಾರ್ಥಕವಾಯಿತು ಎಂದುಕೊಂಡಿದ್ದೇನೆ.”

“ಏನಜ್ಜೀ ..ಏನೋ ಗೊಣಗುಟ್ಟುತ್ತಿದ್ದಂಗಿತ್ತು” ಕೇಳಿದಳು ರಶ್ಮಿ.

“ಏನಿಲ್ಲ ಕೂಸೇ..ನೀನು ತಾತನ ನೆನಪಾಯಿತೇ ಎಂದೆಯಲ್ಲಾ..ಹೂಂ ನೆನಪಿಗಿಂತ ಅವರ ‘ನೆರಳು’ ನನ್ನನ್ನು ಬೆಂಬಿಡದೆ ಹಿಂಬಾಲಿಸುತ್ತಲೇ ಇದೆ.” ಎಂದು ನಿಡಿದಾದ ನಿಟ್ಟುಸಿರು ಬಿಟ್ಟು ತಾನು ಎತ್ತಿಟ್ಟು ಬಂದಿದ್ದ ಬತ್ತಿ ಹೊಸೆಯುವ ಕಾಯಕಕ್ಕೆ ಮರಳಿದಳು ಭಾಗ್ಯಮ್ಮ.

“ಎಲ್ಲದರಲ್ಲೂ ಜಾಣೆ, ಒಮ್ಮೊಮ್ಮೆ ಮಾತ್ರ ತುಸು ಕೋಣೆ ಎನ್ನುವಂತೆ ಈ ಅಜ್ಜಿ. ಏನು ಹೇಳುತ್ತಾಳೋ ನನಗೆ ಅರ್ಥವೇ ಆಗುವುದಿಲ್ಲ” ಎಂದುಕೊಂಡು ಮಗು ಮಲಗಿದ್ದ ತೊಟ್ಟಿಲತ್ತ ತೆರಳಿದಳು ರಶ್ಮಿ.

ಮುಗಿಯಿತು

12 Responses

  1. Hema says:

    ನಾಲ್ಕೈದು ತಲೆಮಾರುಗಳ ಆಚಾರ-ವಿಚಾರಗಳನ್ನು ಪೋಣಿಸಿಕೊಂಡು, ಸುಲಲಿತವಾಗಿ ಬಂದ ಕಾದಂಬರಿಯ ಓಘ, ಆಶಯ ಮತ್ತು ಸಂದೇಶ ಸೊಗಸಾಗಿದ್ದುವು. ಅಭಿನಂದನೆಗಳು ಮೇಡಂ.

  2. Vijayasubrahmanya says:

    ಚೆನ್ನಾಗಿತ್ತು ಮೇಡಂ ಕಾದಂಬರಿ ನೆರಳು.
    ಶೀರ್ಷಿಕೆಗೆ ತಕ್ಕಂತೆ ಮುಕ್ತಾಯ..

  3. ಧನ್ಯವಾದಗಳು… ಗೆಳತಿ.. ಹೇಮಾ

  4. Anonymous says:

    ಸುಂದರವಾದ ಮಧುರ ಸಂಬಂಧಗಳ ಮಾಲೆ. ಪ್ರೀತಿ ಮಮತೆಯ ಸಂಸಾರದ ಆತ್ಮೀಯತೆ ಒಗ್ಗೂಡಿ ಗಳಿಸಿದ ಸಾಧನೆ ಬದುಕಿನ ಸಾರ್ಥಕತೆಯ ಮದ್ಯದಲ್ಲಿ ಸದಾ ಹಿಂಬಾಲಿಸುವ ಆತ್ಮೀಯರ ನೆನಪುಗಳ ನೆರಳು ಕಾದಂಬರಿಯ ಹೆಸರಿಗೆ ತಕ್ಕಂತಿದೆ ಲೇಖಕಿಯ ಸರಳವಾದ ಸಹಜವಾದ ಶೈಲಿ ಓದುಗರ ಮೆಚ್ಚಿಗೆಗೆ ಪಾತ್ರವಾಗುವುದರಲ್ಲಿ ಸಂಶಯವಿಲ್ಲ. ಅಭಿನಂದನೆಗಳು ನಾಗರತ್ನ

  5. ನಯನ ಬಜಕೂಡ್ಲು says:

    ಬಹಳ ಸುಂದರವಾಗಿ ಮೂಡಿ ಬಂತು ಕಾದಂಬರಿ

  6. ಶಂಕರಿ ಶರ್ಮ says:

    ,ಕುಟುಂಬ ಬಾಂದವರೊಳಗಿನ ಪರಿಶುದ್ಧ ಅನುಪಮ ಪ್ರೀತಿ, ನಂಬಿಕೆ, ಪರಸ್ಪರ ಸಂಸ್ಕಾರಯುತ ಅನುಬಂಧಗಳು ತುಂಬಿದ ಸರಳ ಸುಂದರ ನಿರೂಪಣೆಯ ಮನಮುಟ್ಟುವ ಕಿರು ಕಾದಂಬರಿ… ಧನ್ಯವಾದಗಳು ಮೇಡಂ.

  7. ಧನ್ಯವಾದಗಳು… ವಿಜಯಾ.. ಮೇಡಂ.. ಹಾಗೂ…ಅಭಿಮಾನಿ… ದೇವರು..

  8. ಧನ್ಯವಾದಗಳು.. ನಯನಮೇಡಂ..ಮತ್ತು ಶಂಕರಿ.. ಮೇಡಂ… ಅದು..ಕಿರು..ಕಾದಂಬರಿ.. ಅಲ್ಲ ಇನ್ನೂರ…ಎಂಬತ್ತು.. ಪುಟಗಳಿವೆ..ಮೇಡಂ..

  9. Padmini Hegde says:

    ಸಂಗೀತ, ಜ್ಯೋತಿಷ್ಯ, ಕಂದಾಚಾರ, ಉನ್ನತ ವಿದ್ಯಾಬ್ಯಾಸ, ಕಸೂತಿ, ಕೈತೋಟ ಹೀಗೆ ವಿಸ್ತಾರವಾದ ಸೆಟಿಂಗ್‌ ತೆಗೆದುಕೊಂಡು ವೈಯಕ್ತಿಕ ಜೀವನದ ಸುಳಿಗಳನ್ನು ಹೆಣೆದ ಒನಪಿನ ನಡಿಗೆಯ ಓಘದ ಕಾದಂಬರಿ!

  10. ಹೃತ್ಪರ್ವಕ ಧನ್ಯವಾದಗಳು ಪದ್ಮಿನಿ ಮೇಡಂ

  11. ಭಾರತಿ ಎಂ ಎಸ್ says:

    ಒಂದು ಸಂಪ್ರದಾಯ ಕುಟುಂಬದಲ್ಲಿ ಸಾಮಾನ್ಯವಾಗಿ ನಡೆಯುವ ಆಗುಹೋಗುಗಳನ್ನು ಪರಿಚಯಿಸುವ ಮತ್ತು ಆ ಸಮಯಕ್ಕೆ ಸರಿಯಾದ ನಿರ್ಧಾರ ಕೈಗೊಳ್ಳುವ ಸಂದರ್ಭ ಸೊಗಸಾಗಿ ಮೂಡಿ ಬಂದಿದೆ, ಹೆಣ್ಣು ಮಕ್ಕಳ ಬದುಕು ,ಮನೆಯ ಚೌಕಟ್ಟಿನಲ್ಲಿ ನಿರ್ವಹಣೆ ಮಾಡಬೇಕಾದ ಪರಿಸ್ಥಿತಿಗಳ ನಿರೂಪಣೆ ಮುಂದಿನ ತಲೆಮಾರಿಗೆ ದೀವಿಗೆ ಆಗಿದೆ, ಇತೀಚೆಗೆ ಕಾದಂಬರಿಗಳು ಒಂದು ಲಯ, ಸೌಜನ್ಯತೆ ಕಳೆದುಕೊಳ್ಳುತ್ತಿದೆ ಎಂದು ಭಾವಿಸುವವರಿಗೆ ಇದೊಂದು ಮರಳುಗಾಡಿನಲ್ಲಿ ಓಯಸಿಸ್ ನಂತೆ ನೆರಳು ನಿಲ್ಲುತ್ತದೆ.ನಿಮಗೆ ಅಭಿನಂದನೆಗಳು ಮೇಡಂ.

  12. ಧನ್ಯವಾದಗಳು ಎಂ ಎಸ್.ಭಾರತಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: