ಕಾದಂಬರಿ: ನೆರಳು…ಕಿರಣ 40
––ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..
ಈ ಅಂತರದಲ್ಲಿ ರಾಮಣ್ಣನವರ ಮಗ ಮಧು ಭಟ್ಟರ ಮನೆ ಅಂಗಡಿ ಎಲ್ಲದ್ದಕ್ಕೂ ಬೆಲೆ ಕಟ್ಟಿಸಿ ತಾನೇ ಕೊಡುಕೊಳ್ಳಬೇಕೆಂಬ ಅಭಿಲಾಷೆ ವ್ಯಕ್ತಪಡಿಸಿದನು. ಮಗಳ ಮನೆಯನ್ನು ಬಿಟ್ಟು ಹೋಗಲಾರದ ಅನಿವಾರ್ಯತೆ, ಅಗತ್ಯತೆ, ಆವಶ್ಯಕತೆಗಳನ್ನರಿತ ಲಕ್ಷ್ಮಿ ಭಟ್ಟರಿಗೆ ತಿಳಿಯಹೇಳಿ ಅವನ್ನು ಮಾರಲು ಒಪ್ಪಿಸಿದಳು. ನಿರ್ವಾಹವಿಲ್ಲದೆ ಭಟ್ಟರು ಅವುಗಳನ್ನು ಮಾರಿ ಬಂದ ಹಣವನ್ನು ಐದು ಭಾಗಮಾಡಿ ಮಕ್ಕಳಿಗೆಲ್ಲ ಒಂದೊಂದು ಬಾಗವನ್ನು ಹಂಚಿ ತಮ್ಮ ಬಾಗವನ್ನು ಜತನವಾಗಿ ಬ್ಯಾಂಕಿನಲ್ಲಿ ಕಾಪಿಟ್ಟರು.
ಯಾವಾಗಲೂ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದ ಲಕ್ಷ್ಮಿಗೆ ವೃಥಾ ಕಾಲಹರಣ ಮಾಡುವುದು ಇಷ್ಟವಾಗುತ್ತಿರಲಿಲ್ಲ. ಮನೆಯಲ್ಲಿ ಹೇಳಿಕೊಳ್ಳುವಂತಹ ಕೆಲಸವೇನೂ ಅವಳಿಗೆ ಇರುತ್ತಿರಲಿಲ್ಲ. ಮನೆಯ ಹೊರಗಿನ ಕೆಲಸಗಳಿಗೆ ನೆರವಾಗಲು ಪಕ್ಕದ ಮನೆಯವರಿದ್ದರು. ಅಡುಗೆ ಕೆಲಸ ನಾರಣಪ್ಪನಿಗೆ, ಮಗುವಂತೂ ಭಾವನಾಳ ಮನೆ, ರಾಮಣ್ಣನವರ ಮನೆಗಳಿಗೆ ಎಡತಾಕುತ್ತಾ ಎಲ್ಲರೊಡನೆ ಹೊಂದಿಕೊಂಡು ಬೆಳೆಯುತ್ತಿತ್ತು. ಮನೆಯಲ್ಲಿದ್ದಾಗಲೂ ಹೆಚ್ಚು ಕಾಟಕೊಡುತ್ತಿರಲಿಲ್ಲ. ಭಟ್ಟರು ಸುಮ್ಮನೆ ಕೂಡದೆ ಜಮೀನಿನ ಹತ್ತಿರ ಹೋಗಿಬರುವುದು, ನಾರಣಪ್ಪನವರ ಜೊತೆಗೂಡಿ ಸಾಮಾನು ಸರಂಜಾಮು ತಂದುಹಾಕುವುದು, ಮಗಳೇನಾದರೂ ಬ್ಯಾಂಕಿನ ಅಥವ ಹೊರಗಿನ ಕೆಲಸ ಹೇಳಿದರೆ ಮಾಡಿಕೊಡುವುದು, ಆಗಿಂದಾಗ್ಗೆ ಕೇಶವಯ್ಯನವರ ಮನೆಗೆ ಭೇಟಿಕೊಟ್ಟು ಅವರೇನಾದರೂ ಸಹಾಯ ಕೋರಿದರೆ ಮಾಡುತ್ತಾ ಕಾಲವನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದರು. ಭಾಗ್ಯ ತನ್ನ ಸಂಗೀತಪಾಠಗಳ ಜೊತೆಗೆ ಶಾಲಾಮಕ್ಕಳಿಗೆ ಪಠ್ಯವಿಷಯಗಳ ಬಗ್ಗೆಯೂ ಪಾಠ ಹೇಳಲು ಪ್ರಾರಂಭಿಸಿದ್ದಳು. ತಾನೂ ಏನಾದರೂ ಪ್ರಾರಂಭಿಸಬೇಕೆಂದು ತನಗೆ ಮೊದಲಿನಿಂದ ಗೊತ್ತಿರುವ ಕಸೂತಿ, ಹೊಲಿಗೆ, ಕೌದಿಹೊಲಿಯುವುದು, ಹತ್ತಿಯಿಂದ ಹಾರಗಳ ತಯಾರಿಕೆ, ತೋರಣಗಳು, ಹೂಬತ್ತಿ ಹೊಸೆಯುವುದು ಹೀಗೆ ಇವನ್ನೆಲ್ಲ ಮತ್ತೆ ಏಕೆ ಪ್ರಾರಂಭಿಸಬಾರದು. ಹೇಗಿದ್ದರೂ ಸುತ್ತಮುತ್ತಲಿರುವ ಕೆಲವು ಮಹಿಳೆಯರು ಪರಿಚಯವಾಗಿದ್ದಾರೆ. ಇದರಲ್ಲಿ ಆಸಕ್ತಿ ಇರುವವರನ್ನು ಸೇರಿಸಿಕೊಂಡು ನಮ್ಮ ಮನೆಯಲ್ಲೇ ಮಹಡಿಮೇಲಿನ ಕೊಠಡಿಯಲ್ಲಿ ಏಕೆ ಮಾಡಬಾರದೆಂದುಕೊಂಡಳು.
ಒಂದುದಿನ ಮಗಳು ವಿರಾಮವಾಗಿದ್ದಾಗ “ಭಾಗ್ಯಾ ನಾನೊಂದು ಯೋಜನೆ ಸಿದ್ಧಪಡಿಸಿದ್ದೇನೆ. ನೀನು ಒಪ್ಪುವೆಯಾದರೆ ಪ್ರಾರಂಭಿಸಬೇಕೆಂದಿದ್ದೇನೆ” ಎಂದು ಕೇಳಿದಳು ಲಕ್ಷ್ಮಿ.
ತಾಯಿಯ ಮಾತುಗಳನ್ನು ಕೇಳಿದ ಭಾಗ್ಯ ಹೌದು ನಾವುಗಳು ಒಂದಲ್ಲಾ ಒಂದು ರೀತಿಯಲ್ಲಿ ಬಿಜಿಯಾಗಿದ್ದೇವೆ. ಅಮ್ಮ ಪಾಪ ಎಷ್ಟೆಂದು ಒಬ್ಬರೇ ಕಾಲಹರಣ ಮಾಡಲು ಸಾಧ್ಯ. ಅವರು ನಾಲ್ಕು ಜನರೊಡನೆ ಕಲೆತರೆ ಅವರಿಗೂ ಬೇಸರ ಕಳೆಯುತ್ತದೆ. ಕಲಿತ ವಿದ್ಯೆಗೂ ಬೆಲೆಬಂದು ಅವರ ಕೈಯಲ್ಲೂ ನಾಲ್ಕಾರು ಕಾಸು ಬರುವಂತಾಗುತ್ತದೆಂದು “ಅಮ್ಮ ನಿಮ್ಮ ಯೋಜನೆಗೆ ನನ್ನ ಒಪ್ಪಿಗೆಯಿದೆ. ವೆರಾಂಡಾದಿಂದಲೇ ಮಹಡಿಗೆ ಹತ್ತಿಹೋಗಲು ಅನುಕೂಲವಿರುವುದರಿಂದ ಬಂದು ಹೋಗುವವರಿಗಾಗಲೀ, ಮನೆಯಲ್ಲಿದ್ದವರಿಗಾಗಲೀ ತೊಂದರೆಯಾಗದು. ನನಗೆ ಬಿಡುವಾದಾಗ ಮೇಲಿನ ರೂಮನ್ನು ಸ್ವಚ್ಛಮಾಡಿಸಿಕೊಡುತ್ತೇನೆ. ಪ್ರಾರಂಭಿಸುವಿರಂತೆ” ಎಂದು ಹೇಳಿದಳು.
ಮಗಳು ಸಮ್ಮತಿಸಿದ್ದು ಲಕ್ಷ್ಮಿಗೆ ಸಮಾಧಾನವಾಯಿತು. ಜೊತೆಗೆ ನಾನೇ ರೂಮನ್ನು ಸ್ವಚ್ಛಮಾಡಿಕೊಳ್ಳುತ್ತೇನೆಂದು ಹೇಳಬೇಕೆಂದಿದ್ದವಳು ಮನದಲ್ಲೇ ತಡೆದಳು. ಅದು ದಂಪತಿಗಳಿದ್ದ ಖಾಸಾ ರೂಮು. ಅವಳು ಅಲ್ಲಿರುವ ಬೇಕು ಬೇಡಗಳನ್ನು ತೆಗೆಸಿ ಸಿದ್ಧಪಡಿಸಿಕೊಡುವುದೇ ಸರಿಯಾದದ್ದು. ಅವಳಿಗಾದಾಗಲೇ ಮಾಡಿಸಿಕೊಡಲಿ. ಪಾಪ ಅಳಿಯ ದೈವಾಧೀನರಾದ ನಂತರ ಮಡಿಯಾದ ಮಗಳು ಅಲ್ಲಿಗೆ ಹೋಗಿದ್ದನ್ನು ಕಂಡೇ ಇಲ್ಲ. ಕೆಂಪುಸೀರೆಯ ಬದಲು ಬಿಳೀಸೀರೆಯ ಆಯ್ಕೆ ಮಾಡಿಕೊಂಡಿದ್ದಾಳೆ. ಅದೂ ನೀಲಿ ದಪ್ಪ ಅಂಚುಳ್ಳದ್ದು ಸಾದಾ ನೂಲಿನ ಸೀರೆ. ಅದನ್ನು ಕಂಡು ಕೆಲವರು ‘ಆಹಾ ! ಮದರ್ ಥೆರೆಸಾ ತರಹ’ ಎಂದು ಆಡಿಕೊಂಡಿದ್ದೂ, ಕುಟುಕಿದ್ದೂ ಉಂಟು. ಅವಳ ದಿನಚರಿಗಳನ್ನೆಲ್ಲ ಬದಲಾಯಿಸಿಕೊಂಡಿದ್ದಾಳೆ. ಬಹಳ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತಾನೇ ತಂದುಕೊಂಡಿದ್ದಾಳೆ. ಜೋಯಿಸರ ಖಾಸಾ ರೂಮನ್ನು ನಮಗೆ ಸಜ್ಜುಗೊಳಿಸಿಕೊಟ್ಟು ಒಳಗಿನ ಮತ್ತೊಂದು ರೂಮಿನಲ್ಲಿ ತನ್ನ ವಾಸ್ತವ್ಯವನ್ನು ಬದಲಾಯಿಸಿದ್ದಾಳೆ. ಸುಂದರವಾದ ಬೊಂಬೆಯಂತಿದ್ದ ಮಗಳನ್ನು ಈ ರೂಪದಲ್ಲಿ ನೋಡುವ ಸ್ಥಿತಿಯನ್ನು ತಂದೊಡ್ಡಿದ ಭಗವಂತನನ್ನು ಮನದಲ್ಲೇ ದೂಷಿಸುತ್ತಾ ಉಕ್ಕಿಬಂದ ಕಣ್ಣೀರನ್ನು ಮಗಳಿಗೆ ಕಾಣದಂತೆ ಮಾರೆಮಾಚುತ್ತಾ ಆಯಿತೆಂಬಂತೆ ತಲೆಯಾಡಿಸಿ ಆ ಜಾಗದಿಂದ ಸರಿದು ಹೋದಳು ಲಕ್ಷ್ಮಿ.
ತನ್ನ ಹೆತ್ತಮ್ಮನಿಗೆ ಮಾತುಕೊಟ್ಟಂತೆ ಬಿಡುವು ಸಿಕ್ಕಾಗಲೆಲ್ಲ ಒಂದೊಂದೇ ಕೆಲಸವನ್ನು ಕೈಗೆತ್ತಿಕೊಂಡು ಪೂರೈಸುತ್ತಿದ್ದಳು ಭಾಗ್ಯ. ಹಾಗೆ ಮಾಡುತ್ತಿರುವಾಗ ರೂಮಿನಲ್ಲಿದ್ದ ಪುಸ್ತಕಗಳ ರಾಶಿಯತ್ತ ಅವಳ ಗಮನ ಹರಿಯಿತು. ಅವುಗಳಲ್ಲಿ ಬಹುತೇಕ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಪುಸ್ತಕಗಳೇ ಅಧಿಕವಾಗಿದ್ದವು. ಹೂಂ ಇವುಗಳೇ ಅಲ್ಲವೇ ತಲತಲಾಂತರದಿಂದ ಈ ಮನೆತನದವರಿಗೆ ಅನ್ನದ ದಾರಿಮಾಡಿಕೊಟ್ಟವು. ಎಂದುಕೊಂಡು ಭಯಭಕ್ತಿಗಳಿಂದ ಅವುಗಳನ್ನು ಪಕ್ಕಕ್ಕಿಡುತ್ತಾ ಕ್ರಮವಾಗಿ ಜೋಡಿಸುತ್ತಾ, ತೀರಾ ಹಳತಾಗಿದ್ದವುಗಳನ್ನು ಪಕ್ಕಕ್ಕಿಡುತ್ತಾ ಹೋಗುತ್ತಿರುವಾಗ ಒಂದು ದಿನಚರಿ ಕಣ್ಣಿಗೆ ಬಿತ್ತು. ಅರೆ ! ಇದನ್ನು ನಾನ್ಯಾವತ್ತೂ ನೋಡೇ ಇಲ್ಲ. ಯಾರದ್ದಿದು? ಎನ್ನುತ್ತಾ ಕೈಗೆತ್ತಿಕೊಂಡಳು. ಹಾಗೆಯೇ ಪುಟಗಳನ್ನು ತಿರುವಿದಳು. ಓ ! ಇದು ಇವರ ಅಕ್ಷರವೇ, ಇವರು ದಿನಚರಿಯನ್ನು ಬರೆಯುತ್ತಿದ್ದರೇ ಅಥವಾ ಯಾವುದಾದರೂ ಲೆಕ್ಕದ ಒಕ್ಕಣೆಯೇ? ಎಂದುಕೊಳ್ಳುತ್ತಲೇ ಕುತೂಹಲದಿಂದ ಕಣ್ಣಾಡಿಸಿದಳು. ಮೊದಲ ಕೆಲವು ಪುಟಗಳಲ್ಲಿ ಏನನ್ನೂ ಬರೆದಿರಲಿಲ್ಲ. ನಂತರದ ಪುಟಗಳಲ್ಲಿ ಬರೆದು ಬರೆದೂ ಕಾಟುಹಾಕಿದ್ದು, ಮತ್ತೆ ಕೆಲವು ಕಡೆ ಅಸ್ಪಷ್ಟತೆ, ಏಕೋ ಗೊಂದಲಮಯವಾಗಿ ಕಂಡಿತು. ಇರಲಿ ಇದನ್ನು ನಿಧಾನವಾಗಿ ನನ್ನ ರೂಮಿನಲ್ಲಿ ನೋಡಿಕೊಳ್ಳಬಹುದು. ಮಿಕ್ಕವುಗಳನ್ನು ಕಪಾಟಿನಲ್ಲಿರಿಸಿ ಬೇಕೆಲ್ಲವೆಂದೆನ್ನಿಸದವನ್ನು ನೀರುಮನೆಯಲ್ಲಿ ಹಾಕಿದಳು. ದಿನಚರಿಯನ್ನು ಕೈಯಲ್ಲಿ ಹಿಡಿದು ತನ್ನ ರೂಮಿನಲ್ಲಿದ್ದ ಕಪಾಟಿನಲ್ಲಿಟ್ಟು ಬೀಗಹಾಕಿದಳು. ಕೀಯನ್ನು ಖಾಸಾ ಪೆಟ್ಟಿಗೆಯಲ್ಲಿಟ್ಟಳು. ಅದರಲ್ಲಿ ‘ಸಿರಿ’ ಹುಟ್ಟಿದಾಗ ಬರೆದಿದ್ದ ಕುಂಡಲಿಯೂ ಇದ್ದುದರಿಂದ ಜಾಗ್ರತೆ ವಹಿಸಿದ್ದಳು.
ಅಂತೂ ಒಂದುವಾರದ ಸತತ ಪ್ರಯತ್ನದಿಂದ ಮಹಡಿಯ ರೂಮಿನಲ್ಲಿ ಒಟ್ಟಿದ್ದ ಪುಸ್ತಕ, ಬಟ್ಟೆಬರೆಗಳಲ್ಲಿ ಬೇಕಾದದ್ದು, ಬೇಡದ್ದು ವಿಂಗಡಣೆಯಾಗಿ ಒಂದು ಘಟ್ಟ ಮುಟ್ಟಿತು. ನಂತರ ಲಕ್ಷ್ಮಿ ನಾರಣಪ್ಪ ಭಟ್ಟರನ್ನು ಸೇರಿಸಿಕೊಂಡು ಧೂಳುದುಂಬು ತೆಗೆಸಿ ತಮ್ಮ ಕೆಲಸಗಳಿಗೆ ಅನುಕೂಲವಾಗುವಂತೆ ಸಿದ್ಧಗೊಳಿಸಿಕೊಂಡರು. ಪ್ರಚಾರ ಮಾಡಿ ಪ್ರಾರಂಭಿಸುವುದು ಹೇಗೆಂದು ಚಿಂತೆ ವ್ಯಕ್ತಪಡಿಸಿದಾಗ ನಾರಣಪ್ಪ “ಲಕ್ಷ್ಮಮ್ಮ ನಾನೊಂದು ಸಲಹೆ ಕೊಡುತ್ತೇನೆ ನಗಬೇಡಿ” ಎಂದರು.
“ಅಯ್ಯೋ ನಾರಣಪ್ಪ ನಗುವಂತಹದ್ದೇನಿದೆ? ಹೇಳಿ” ಎಂದಳು ಲಕ್ಷ್ಮಿ.
“ಏನಿಲ್ಲ ತ್ರಿಲೋಕ ಸಂಚಾರಿ ನಾರದರಿದ್ದಂತೆ ಸುತ್ತಮುತ್ತಲಿನ ಬಡಾವಣೆಗಳ ಸಂಚಾರಿಯಂತಿರುವ ಗೌರಿಯಮ್ಮನವರ ಕಿವಿಗೆ ಈ ಸಂಗತಿ ಹಾಕಿ, ಅನಂತರ ನೋಡಿ ಅವರ ಪ್ರಚಾರದ ಮುಂದೆ ಮಿಕ್ಕೆಲ್ಲ ಗೌಣ. ಅಲ್ಲದೆ ಅವರಿಗೆ ಈ ಮನೆಯವರೆಂದರೆ ಆಪ್ತತೆ, ಆತ್ಮೀಯತೆಯಿದೆ. ಕಷ್ಟಸುಖಗಳಲ್ಲಿ ಭಾಗಿಯಾಗುತ್ತಾ ಬಂದಿದ್ದಾರೆ. ನಿಮ್ಮ ಯೋಜನೆಗೂ ಬೆಂಬಲ ಕೊಡುತ್ತಾರೆಂದು ನನ್ನ ನಂಬಿಕೆ. ಹೇಳಿ ನೋಡಿ, ಆಗದಿದ್ದರೆ ಮುಂದೆ ಏನಾದರೂ ಯೋಚಿಸೋಣ” ಎಂದರು ನಾರಣಪ್ಪ.
ಅಲ್ಲಿಯೇ ಇದ್ದ ಭಾಗ್ಯ “ಅಮ್ಮಾ ನಾಣಜ್ಜ ಹೇಳೋ ಮಾತಿನಲ್ಲಿ ಹುರುಳಿದೆ. ಏಕೆ ಪ್ರಯತ್ನಿಸಬಾರದು. ಒಂದು ಮಾತು ಹೇಳಿ ನೋಡಿ. ಅವರಿಗೆ ಹೆಣ್ಣು ಮಕ್ಕಳು ಏನಾದರೂ ಮಾಡುತ್ತಾರೆಂದರೆ ಬಹಳ ಖುಷಿ. ತಮ್ಮ ಕೈಲಾದ ಸಹಾಯ ಮಾಡುತ್ತಾರೆ. ನಾನು ಈ ಮಟ್ಟಕ್ಕೆ ಬರಲು, ಹಾಗೇ ಧೈರ್ಯ, ಸ್ಥೈರ್ಯ ಮೈಗೂಡಿಸಿಕೊಳ್ಳಲು ಅವರ ಪಾತ್ರ ಹಿರಿದಾಗಿದೆ.” ಎಂದಳು.
ನಾಣಜ್ಜ ಮತ್ತು ಭಾಗ್ಯಳ ಸಲಹೆಯಂತೆ ಲಕ್ಷ್ಮಿ ಗೌರಿಯಮ್ಮ ಮನೆಗೆ ಬಂದಾಗ ತಮ್ಮ ಅಭಿಲಾಷೆಯನ್ನು ಅವರ ಮುಂದೆ ಹೇಳಿಕೊಂಡು ಅವರಿಂದಾಗುವ ಸಹಾಯವನ್ನು ಅಪೇಕ್ಷಿಸಿದರು. ಒಂದು ವಾರದೊಳಗಾಗಿ ಲಕ್ಷ್ಮಿಯ ನಿರೀಕ್ಷೆಗೂ ಮೀರಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಸಕ್ತಿ ತೋರಿ ನೀವು ಪ್ರಾರಂಭಿಸುವ ಕಾರ್ಯಾಗಾರಕ್ಕೆ ನಾವೆಲ್ಲ ಕೈಜೋಡಿಸುತ್ತೇವೆ ಎಂದು ಭರವಸೆ ನೀಡಿದರು. ಮುಂದೆ ತೊಂದರೆಯಾಗಬಾರದೆಂಬ ಆಲೋಚನೆಯಿಂದ ರಾಮಣ್ಣ ಮಾವನ ಸಲಹೆಯಂತೆ “ಸಿರಿ ಕಸೂತಿ ಸೆಂಟರ್” ಎಂದು ಮೊಮ್ಮಗಳ ಹೆಸರನ್ನಿಟ್ಟು ಲೈಸೆನ್ಸ್ ಮಾಡಿಸಿಕೊಂಡರು ಲಕ್ಷ್ಮಿ. ಪೂಜೆಮಾಡಿ ಪ್ರಾರಂಭಿಸಬೇಕೆಂದು ಒಂದು ಒಳ್ಳೆಯ ದಿನ ಗೊತ್ತುಮಾಡಿಕೊಂಡದ್ದಾಯಿತು. ಎಲ್ಲವೂ ತಯಾರಾದ ಮೇಲೆ ಭಟ್ಟರು ಮತ್ತು ಲಕ್ಷ್ಮಿ “ಭಾಗ್ಯಾ, ನಮ್ಮ ಸಿರಿಪುಟ್ಟಿಯನ್ನು ಶಾಲೆಗೆ ಸೇರಿಸುವ ಮುಂಚೆ ಮಕ್ಕಳ ಮನೆಗೆ ಸೇರಿಸಬೇಕೆಂದಿದ್ದೆ. ಹೊರಗಡೆಯ ಮಕ್ಕಳೊಡನೆ ಬೆರೆಯುವುದನ್ನು ಕಲಿಯಲೆನ್ನುವ ಆಸೆಯಿಂದ. ಅದು ಒಳ್ಳೆಯದೇ. ಇತ್ತ ನಿನ್ನಮ್ಮ ಪುಟ್ಟಿಯ ಹೆಸರಿನಲ್ಲೇ ತನ್ನ ಕಾರ್ಯಾಗಾರ ಪ್ರಾರಂಭಿಸಬೇಕೆಂದು ತಯಾರಿ ನಡೆಸಿದ್ದಾಳೆ. ನಮ್ಮ ಬೀಗರು, ಅಳಿಯಂದಿರು ನಮ್ಮಿಂದ ಕಣ್ಮರೆಯಾಗಿ ಹತ್ತಿರ ಹತ್ತಿರ ಮೂರು ವರ್ಷವಾಯಿತು. ವಾರ್ಷಿಕ ಶ್ರಾದ್ಧಕಾರ್ಯವೊಂದನ್ನು ಹೊರತು ಪಡಿಸಿ ಯಾವುದೇ ಶುಭಕಾರ್ಯವನ್ನೂ ಮಾಡಿಲ್ಲ. ಪುಟ್ಟಿಯ ಹುಟ್ಟುಹಬ್ಬವನ್ನಂತೂ ಆಚರಿಸಲೇ ಇಲ್ಲ. ಆಕೆಯ ನಾಮಕರಣವೂ ಬೇರೆ ಊರಿನಲ್ಲೇ ಆಯಿತು. ಅದೂ ದೇವರ ಸಾನ್ನಿಧ್ಯವೇ ಸರಿ, ಈಗ ಮನೆಯಲ್ಲೊಂದು ಪೂಜೆ ಇಟ್ಟುಕೊಂಡು ಬಂಧು ಬಾಂಧವರನ್ನು, ಆತ್ಮೀಯರನ್ನು ಕರೆದು ಒಂದು ಔತಣ ಏರ್ಪಡಿಸಿದರೆ ಹೇಗೆಂದು ಒಂದು ಆಲೋಚನೆಯಿದೆ. ಗುರು ಹಿರಿಯರ ಅಶೀರ್ವಾದ ಪಡೆದುಕೊಂಡರೆ ಒಳ್ಳೆಯದಲ್ಲವೇ? ನೀನೇನು ಹೇಳುತ್ತೀ? ಒತ್ತಾಯವೇನಿಲ್ಲ” ಎಂದು ಪ್ರಸ್ತಾಪಿಸಿದರು.
ಹೆತ್ತವರ ಮಾತುಗಳನ್ನು ಕೇಳಿ ಭಾಗ್ಯ “ಹೌದು ಜಡಭರತನಂತಾಗಿರುವ ಮನಗಳನ್ನು ಎಚ್ಚರಿಸಲು ಇದೊಂದು ರಹದಾರಿ. ಯಾಕಾಗಬಾರದು? ಪೂಜೆ ಅನ್ನಸಂತರ್ಪಣೆ ಒಳ್ಳಿತೇ” ಎಂದುಕೊಂಡು “ಆಗಲಿ ಅಪ್ಪಾ ಆದರೆ ಅತಿಯಾದ ಜನಜಂಗುಳಿ, ಪ್ರದರ್ಶನ ಬೇಡ” ಎಂದಳು.
“ಆಗಲಿ ಮಗಳೇ, ಹಾಗೇ ಪುಟ್ಟಿಯ ಕುಂಡಲಿಯನ್ನು ತೆಗೆದಿಡು. ಅಳಿಯಂದಿರು ಜಾತಕ ಬರೆಯುತ್ತೇನೆ ಎಂದಿದ್ದರು. ಈಗ ಅವರೇ ಇಲ್ಲ. ಕೇಶವಯ್ಯನವರ ಬಳಿಯಲ್ಲಾದರೂ ಕೊಟ್ಟು ಬರೆಸಿಡೋಣ. ನಂಬಿಕೆಯಿರಲಿ ಬಿಡಲಿ ಮುಂದಕ್ಕೆ ಬೇಕಾಗುತ್ತದೆ. ಲೋಕಾರೂಢಿಗೆ ನಾವು ಬದ್ಧರಾಗಿ ನಡೆಯಬೇಕಲ್ಲ” ಎಂದರು ಭಟ್ಟರು.
“ಹ್ಹ..ಹ್ಹ..ಜಾತಕ, ನೀವು ನೋಡುತ್ತಿದ್ದೀರಲ್ಲಾ ನನ್ನ ವಿಷಯದಲ್ಲಿ, ಮಹಾ ನಕ್ಷತ್ರ, ಮುತ್ತೈದೆ ಸಾವು.. ಹುಟ್ಟಿದ, ಹೊಕ್ಕ ಮನೆಗಳೆರಡೂ ಕಡೆ ಕೀರ್ತಿ ತರುತ್ತಾಳೆಂಬುದನ್ನು. ದಿವ್ಯವಾಗಿದೆ, ಹಾಗೇ ಹೀಗೇ ಎಂದಿದ್ದರು ನೋಡಿದವರು. ಎಲ್ಲಿ ಅಪ್ಪಾ ಅದೆಲ್ಲಾ?” ಎಂದು ನೊಂದು ನುಡಿದಳು ಭಾಗ್ಯ. “ನೀವು ಏನೇ ಸಮಝಾಯಿಷಿ ಕೊಟ್ಟರೂ ನಾನು ನನ್ನ ಮಗಳ ಜಾತಕ ಬರೆಸುವುದಿಲ್ಲ. ಅವಳ ಹಣೆಯಬರಹ ಇದ್ದಂತಾಗಲಿ. ದೇವರ ಮೇಲೆ ಭಾರಹಾಕಿ ಬದುಕನ್ನು ಕಟ್ಟಿಕೊಡುತ್ತೇನೆ.” ಎಂದು ಬಿರುಗಾಳಿಯಂತೆ ತನ್ನ ರೂಮುಹೊಕ್ಕು ಬಾಗಿಲನ್ನು ದಢಾರನೆ ಮುಚ್ಚಿಕೊಂಡಳು ಭಾಗ್ಯ.
ಮಗಳ ಉತ್ತರ ಭಟ್ಟರ ಬಾಯನ್ನು ಕಟ್ಟಿಹಾಕಿತು. ಆದರೂ ತಾವು ಕೊಟ್ಟ ಘಳಿಗೆಗಳಲ್ಲಿ ಏನೋ ತಪ್ಪಾಗಿ ಲೆಕ್ಕಾಚಾರ ಎಡವಟ್ಟಾಗಿರಬಹುದೆಂದು ಮತ್ತೊಮ್ಮೆ ಮಗಳಿಗೆ ತಿಳಿಯ ಹೇಳಲು ಅವಳ ರೂಮಿನೆಡೆಗೆ ಹೊರಟಿದ್ದ ಅವರನ್ನು ಲಕ್ಷ್ಮಿ ತಡೆದಳು. ಹತಾಶೆಯಿಂದ ಕಾಲನ್ನು ಎಳೆದುಕೊಂಡು ತಮ್ಮ ರೂಮಿನೊಳಕ್ಕೆ ಹೋಗಿಬಿಟ್ಟರು. ಇತ್ತ ಬಿರುಸಾಗಿ ರೂಮಿನೊಳಕ್ಕೆ ಬಂದು ಬಾಗಿಲು ಮುಚ್ಚಿಕೊಂಡ ಭಾಗ್ಯ ಅಲ್ಲೇ ಕುಸಿದು ಕುಳಿತಳು. ಮನಸೇಚ್ಛೆ ಅತ್ತು ಹಗುರಾದಳು. ಹಾಗೇ ಆ ದಿನ ಮಹಡಿಯ ಮೇಲಿನ ರೂಮಿನಿಂದ ಹೊತ್ತು ತಂದ ಡೈರಿಯಲ್ಲಿಯ ಬರಹ ನೆನಪಾಯಿತು. ‘ಹೌದು ಅದರಲ್ಲಿ ಬರೆದಿದ್ದ ಒಂದು ಒಕ್ಕಣೆ, ಅಬ್ಬಾ ! ಊಹಿಸಲೂ ಆಗದಿರುವಂಥದ್ದು. ಮಕ್ಕಳಿಲ್ಲದಿದ್ದರೆ ಚಂದವಿತ್ತು. ಹೋಗಲಿ ಎಂದರೆ ಹುಟ್ಟಿದ್ದು ಹೆಣ್ಣೇ ಆಗಬೇಕೇ, ನಮ್ಮ ಹಿಂದಿನವರು ಬರೆದಿಟ್ಟಿರುವ ತಾಮ್ರಪಠದಲ್ಲಿನ ಲಿಪಿಯಂತೆ ಯಾವ ತಲೆಮಾರಿಗೆ ಮೊದಲ ಮಗು ಹೆಣ್ಣಾಗುತ್ತದೆಯೋ ಅದು ವಂಶವನ್ನು ಕೊನೆಗೊಳಿಸಲು ಬಂದದ್ದೇ ಸರಿ. ಆ ದಂಪತಿಗಳಿಗೆ ಮತ್ತೆ ಬೇರೆ ಮಕ್ಕಳಾಗುವುದಿಲ್ಲ. ಆ ಹೆಣ್ಣು ಮಗು ಮಾತ್ರವೇ. ಚೆಲುವಿಕೆಯಲ್ಲಿ ಎರಡು ಮಾತಿಲ್ಲ, ಹಾಗೆ ಬೆಳೆದರೂ ಅದರ ಬದುಕು ಮೂರಾಬಟ್ಟೆಯೇ ಹೌದು. ಅವರು ಹೇಳಿರುವ ನಕ್ಷತ್ರ, ರಾಶಿ, ಸಮಯ ಎಲ್ಲವೂ ನನ್ನ ಮಗಳು ಹುಟ್ಟಿದ ಸಮಯಕ್ಕೆ ತಾಳೆಯಾಗುತ್ತಿದೆ. ಅಲ್ಲದೆ ಅದಕ್ಕೆ ಅಕಾಲಿಕ ಮೃತ್ಯು ಬೇರೆ, ಭಗವಂತಾ ಎಂಥಹ ಪರೀಕ್ಷೆಯನ್ನು ತಂದೊಡ್ಡಿದೆಯಪ್ಪಾ , ನನ್ನ ಕಣ್ಮುಂದೆಯೇ ನನ್ನ ಮಗಳು … ಛೇ..ಛೇ.. ನಮ್ಮಲ್ಲಿ ಇದುವರೆಗೆ ಬರೆದಿರುವ ಜಾತಕಗಳಾವುವೂ ಸುಳ್ಳಾಗಿಯೇ ಇಲ್ಲ.’ ಓದುತ್ತಾ ಹೋದಂತೆಲ್ಲ ಭಾಗ್ಯಳಿಗೆ ಶ್ರೀನಿವಾಸನ ಚಿಂತೆಗೆ ಏನು ಕಾರಣವೆಂಬುದು ಈಗ ಅರಿವಾಗಿತ್ತು. ಈ ಮನೊರೋಗವೇ ಅವರ ಸಾವಿಗೂ ಕಾರಣವಾಯಿತೇ? ಎಂಬ ಅನುಮಾನ ಮೂಡಿತು. ಹಾಗೇ ಓದುವುದನ್ನು ಮುಂದುವರೆಸಿದ್ದಳು. ‘ನನ್ನವಳು ಗರ್ಭ ಧರಿಸಿದ ಆರಂಭದಲ್ಲೇ ಜ್ಯೋತಿಷ್ಯದ ಪ್ರಕಾರ ಲೆಕ್ಕಹಾಕಿ ಎಂಥಹ ಮಗುವೆಂದು ತಿಳಿಯುವ ಪ್ರಯತ್ನವನ್ನು ನಾನು ಮಾಡಲಿಲ್ಲ. ಅಯ್ಯೋ ಎಂಥಹ ಕೆಲಸ ಮಾಡಿಬಿಟ್ಟೆ. ಹಾಗೆ ತಿಳಿದುಕೊಂಡಿದ್ದರೆ ಆರಂಭದಲ್ಲೇ ಆ ಕುಡಿಯನ್ನು ಚವುಟಿಹಾಕಿಬಿಡಬಹುದಿತ್ತು. ಹಾಗೆ ಮಾಡಿದ್ದರೆ ಈ ಸಂಕಟದಿಂದ ಪಾರಾಗುತ್ತಿತ್ತು.’ ಮುಂದಿನ ಬರವಣಿಗೆಯು ಅಸ್ಪಷ್ಟವಾಗಿ ಓದಲಾಗದೆ ನಿಂತುಹೋಗಿತ್ತು.
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : http://surahonne.com/?p=36435
ಮುಂದೇನು ಅನ್ನುವ ಕಾತರ
ಭಾಗ್ಯಳು ತನ್ನ ಬಾಳಿನಲ್ಲಿ ನಡೆದ ದುರಂತವನ್ನು ಮೆಟ್ಟಿ ನಿಲ್ಲುತ್ತಿರುವ ಪರಿ ಮೆಚ್ಚುವಂತಹುದು…ಸೊಗಸಾದ ಕಥಾಹಂದರ. ಧನ್ಯವಾದಗಳು ನಾಗರತ್ನ ಮೇಡಂ.
ಹಾ..ಮೇಡಂ..ಅದೇ..ಕಾದಂಬರಿಯ.. ಜೀವಾಳ..ನಿಮ್ಮ.. ಸಹೃದಯ..ಪ್ರತಿ ಕ್ರಿಯೆಗೆ..ಧನ್ಯವಾದಗಳು..
ಕುತೂಹಲ ಭರಿತ ತಿರುವುಗಳೊಂದಿಗೆ ಕಾದಂಬರಿ ಮುಂದುವರೆಯುತ್ತಿದೆ. ಭಾಗ್ಯ ಜೀವನವನ್ನು ಎದುರಿಸುವ ರೀತಿಗೆ ಹೆಮ್ಮೆ ಎನಿಸಿದರೂ ಅವಳಿಗೆ ಎದುರಾದ ಸಂಕಷ್ಟಗಳಿಗೆ ಮನ ಮರುಗುತ್ತದೆ.
ಧನ್ಯವಾದಗಳು…ಪದ್ಮಾ..ಮೇಡಂ
.