ಸದಾಚಾರ ಸಂಪನ್ನ ‘ಸಂದೀಪ’ ಮಹರ್ಷಿ

Spread the love
Share Button

ಪೂರ್ವಕಾಲದಲ್ಲಿ ಎಂತೆಂತಹ ತಪಃಶಕ್ತಿಯ ಮಹರ್ಷಿಗಳಿದ್ದರು! ಹಾಗೆಯೇ ಅವರಿಗೆ ತಕ್ಕುದಾದ ಶಿಷ್ಯರು| ಶಿಷ್ಯನಾದವನು ಗುರುವಿನ ಆದೇಶ ಪಾಲಿಸುವುದೇನು! ಗುರುವಿಗಾಗಿ ಏನೇ ಕಷ್ಟ ಬಂದರೂ ಸ್ವತಃ ಅನುಭವಿಸಲು ರೆಡಿಯಾಗಿದ್ದರು. ಯಾವ ತ್ಯಾಗಕ್ಕೂ ಸಿದ್ಧನಾಗಿರುತ್ತಿದ್ದರು. ಗುರುವಿನ ಕೋರಿಕೆ ಈಡೇರಿಸಲೋಸುಗ ತನ್ನ ಹೆಬ್ಬೆರಳನ್ನೇ ದಕ್ಷಿಣೆ ರೂಪವಾಗಿ ನೀಡಿದ ಏಕಲವ್ಯನ ದೃಷ್ಟಾಂತ ಓದಿದ್ದೇವೆ. ಗುರು ದ್ರೋಣಾಚಾರ್ಯರಿಗೆ ಏಕಲವ್ಯನು ನೇರ ಶಿಷ್ಯನೇನು ಅಲ್ಲ. ಪರೋಕ್ಷವಾಗಿ ಆತನು ಪಾಠ ಹೇಳಿಸಿಕೊಂಡು ದ್ರೋಣಾಚಾರ್ಯರನ್ನು ತನ್ನ ಆರಾಧ್ಯ ಗುರು, ಪ್ರತ್ಯಕ್ಷ ದೇವರೆಂದು ನಂಬಿದವನು, ಹೀಗಿರುತ್ತಾ ತನ್ನ ಹೆಬ್ಬರಳೇಕೆ; ಗುರು ಬಯಸಿದ್ದರೆ ತನ್ನ ಯಾವುದೇ ಅಂಗವನ್ನೂ ಅಥವಾ ಸರ್ವವನ್ನೂ ದಕ್ಷಿಣೆ ಕೊಡುವುದಕ್ಕೆ ತಯಾರಿದ್ದನವ.

ಇಂದಿನ ಮಕ್ಕಳಲ್ಲಿ ಗುರುಗಳ ಮೇಲಿನ ಭಕ್ತಿ ಕರಗುತ್ತಾ ಬಂದು ಈಗ ಎಲ್ಲಿಗೆ ಬಂದು ಮುಟ್ಟಿದೆ ಎಂದ್ರೆ… ಗುರುಗಳೇ ಶಿಷ್ಯರಿಗೆ ಹೆದರುವ ಸ್ಥಿತಿ! ನಿರ್ಭಯವಾಗಿ ಪಾಠ ಮಾಡುವ ಹಾಗಿಲ್ಲ! ಪಾಠ ಮಾಡಿದರೂ ಸರಿಯಾಗಿ ತರಗತಿಯಿಂದ ಹೊರಗೆ ಹೋದೇನು ಎಂಬ ವಿಶ್ವಾಸವಿಲ್ಲ! ತರಗತಿಯಲ್ಲಿ ಏನಾದರೂ ಸಣ್ಣ ಶಿಕ್ಷೆ ಕೊಟ್ಟಿತೂಂದ್ರೆ ಆತ ಹೊರಗೆ ದಾರಿ ನಡೆಯುವ ಹಾಗೂ ಇಲ್ಲ! ಗುರು – ಶಿಷ್ಯರ ಸಂಬಂಧ ಎಂದ್ರೆ ಭಕ್ತಿ – ಭಾವ, ಆತ್ಮೀಯತೆ ಹೋಗಲಿ ಒಂದು ರೀತಿಯ ಭಯದ ವಾತಾವರಣ ಸೃಷ್ಟಿಯಾಗುತ್ತಿದೆ. ಅದೇನೆ ಇರಲಿ, ಅದಕ್ಕೆ ಕಾಲವೇ ಪರಿಹಾರ ತರಬೇಕು.

ಒಬ್ಬ ತ್ಯಾಗರೂಪಿ ಶಿಷ್ಯ. ‘ಶಾಂತಿ’ ಮಹರ್ಷಿಯನ್ನು ಹಿಂದಿನ ಬಾರಿ ಪರಿಚಯಿಸಿಕೊಂಡಿದ್ದೇವೆ. ಅದಕ್ಕೂ ಒಂದು ಪಟ್ಟು ಸಂಯಮಿ, ಕಷ್ಟಸಹಿಷ್ಣು, ಸಹನಶೀಲನನ್ನು ಈ ಬಾರಿ ತಿಳಿಯೋಣ, ಕುಷ್ಠರೋಗಿಯಾದ ಗುರುವಿಗಾಗಿ ಕಷ್ಟ ತಾಳಿದವ. ದಾದಿಯಂತೆ ಶುಶ್ರೂಷೆ ಮಾಡಿದವ, ಗುರುವಿನ ಹೊಟ್ಟೆ ತುಂಬಿಸಲು ಭಿಕ್ಷೆ ಬೇಡಿದವ, ಇದೆಲ್ಲದಕ್ಕೂ ಮಿಗಿಲಾಗಿ ಇಂತಹ ಸನ್ನಿವೇಶದಲ್ಲೂ ಗುರುವಿನಿಂದ ನಿಷ್ಠುರ ಸಹಿಸಿದವ.  ಈ ಎಲ್ಲಾ ಪ್ರತಿಕೂಲ ವಾತಾವರಣದಲ್ಲೂ ಸಂಯಮ ತಪ್ಪದೆ ಸದಾಚಾರದಿಂದಿದ್ದ ‘ಸಂದೀಪ’ನೇ ಈ ಪುರಾಣ ಪುರುಷ ರತ್ನ, ಇವರ ಸದ್ವರ್ತನೆಯಿಂದ ಗುರುವಿಗೆ  ಒಳಿತಾಯಿತು.

ಹಿಂದೆ ವೇದಧರ್ಮನೆಂಬ ಒಬ್ಬ ಋಷಿಯಿದ್ದ. ಎಲ್ಲರಂತ ಆತನೂ ಒಂದು ಶಿಷ್ಯ ಸಮೂಹವನ್ನಿರಿಸಿಕೊಂಡು ಪಾಠ ಹೇಳಿ ಕೊಡುತ್ತಿದ್ದ, ಹೀಗಿರಲು ಅವನಿಗೆ ಅನಾರೋಗ್ಯ ಕಾಡಿತು. ಆತನು ಕುಷ್ಠರೋಗಿಯಾದ. ಆತನಿಗೆ ತನ್ನ ಶೇಷಾಯುಷ್ಯವನ್ನು ಕಾಶಿಯಲ್ಲಿ ಹೋಗಿ ಕಳೆಯಬೇಕೆಂಬ ಮನಸ್ಸಾಯಿತು. ಈ ರೀತಿಯಾಗಿ ಚಿಂತಿಸಿದವನು ಶಿಷ್ಯರನ್ನುದ್ದೇಶಿಸಿ ಹೇಳಿದ ‘ಮಕ್ಕಳೇ’ ನನ್ನ ಪೂರ್ವಕರ್ಮ ಫಲದಿಂದ ನನಗೀ ಮಹಾರೋಗ ಕಾಡಿದೆ.  ಇದನ್ನು ಅನುಭವಿಸದೇ ವಿಧಿಯಿಲ್ಲ. ನನ್ನ ಮುಂದಿನ ಜೀವಿತವನ್ನು ನಾನು ಕಾಶಿಗೆ ಹೋಗಿ ವಿಶ್ವೇಶ್ವರನ ಸನ್ನಿಧಿಯಲ್ಲಿ ಕಳೆಯಬೇಕೆಂದು ತೀರ್ಮಾನಿಸಿದ್ದೇನೆ. ನನ್ನೊಂದಿಗೆ ನನ್ನ ಸೇವೆ ಮಾಡಲು ಯಾರು ಬರುತ್ತೀರಿ?’ ಎಂದು ಕೇಳಿದ.

ಯಾರೊಬ್ಬರೂ ಉತ್ತರಿಸಲಿಲ್ಲ. ಎಲ್ಲರೂ ಮುಖ ಮುಖ ನೋಡುತ್ತಾ ತಲೆ ಕೆಳಗೆ ಹಾಕಿದರು. ಆದರೆ ಅವರಲ್ಲೊಬ್ಬನು ಮಾತ್ರ ಎದ್ದು ನಿಂತು ‘ಗುರುಗಳೇ, ನಿಮ್ಮ ಸೇವೆಗೆ ನಾನು ಬರುತ್ತೇನೆ’ ಎಂದು ಆಗ ವೇದಧರ್ಮರು ‘ಮಗೂ ನನ್ನ ಮೈಮೇಲೆ ಈಗೀಗ ಸಣ್ಣ ಸಣ್ಣ ಹುಣ್ಣುಗಳಾಗಲು ಪ್ರಾರಂಭಗೊಂಡಿದೆ. ಅದಿನ್ನು ಉಲ್ಬಣಿಸಬಹುದು. ಅವುಗಳಲ್ಲಿ ಕೀವು ಬರಬಹುದು. ನನ್ನ ಶುಶ್ರೂಷೆ ಮಾಡುವುದರ ಜೊತೆಗೆ ನನಗಾಗಿ ಭಿಕ್ಷೆ ಎತ್ತಿ ಆಹಾರ ತರಬೇಕು, ಕಾಲಿಗೆ ಪ್ರಯಾಣಿಸುವಾಗ ನನಗೆ ನಡೆಯಲಾಗದಿದ್ದಲ್ಲಿ ನನ್ನನ್ನು ಎತ್ತಿ ಕೊಂಡೊಯ್ಯಬೇಕಾಗಬಹುದು. ಇದೆಲ್ಲ ನಿನ್ನಿಂದ ಸಾಧ್ಯವೇ?” ಎಂದರು. ಆಗ ಸಂದೀಪನು ‘ಗುರುಗಳೇ, ನಿಮ್ಮ ಸೇವೆ ಮಾಡುವ ಅವಕಾಶ ನನಗೆ ದೊರೆಯಿತಲ್ಲ. ಅದು ನನ್ನ ಪೂರ್ವ ಪುಣ್ಯ ಫಲ ಎಂದಣಿಸುತ್ತೇನೆ. ನಿಮ್ಮ ಸೇವಾ ಕೈಂಕರ್ಯದಲ್ಲಿ ನನಗಾವ ಅಸಮಾಧಾನವೂ ಇಲ್ಲ. ನಿಶ್ಚಿಂತರಾಗಿರಿ’ ಎಂದನವ.

ಸಂದೀಪನ ಮಾತಿಂದ ವೇದಧರ್ಮರಿಗೆ ಒಳಗೊಳಗೇ ಸಂತಸವಾಯ್ತು. ಮುಂದೆ ಅವರು ಆತನ ಜತೆಗೂಡಿ ಕಾಶಿಗೆ ಪ್ರಯಾಣ ಬೆಳೆಸಿದರು. ನಡೆದು ಸೋತಾಗ ಕೆಲವೊಮ್ಮೆ ಅವರನ್ನು ಹೆಗಲಲ್ಲಿ ಕುಳ್ಳಿರಿಸಿಕೊಂಡು ನಡೆಯಬೇಕಾಯ್ತು. ಕಾಶಿಯಲ್ಲಿ ಒಂದು ಮುರುಕು ಛತ್ರದಲ್ಲಿ ಅವರ ಬಿಡಾರ ಸಾಗಿತು, ಸಂದೀಪ ನಿತ್ಯವೂ ಅವರಿವರ ಮನೆಗಳಿಗೆ ತೆರಳಿ ಭಿಕ್ಷೆ ಎತ್ತಿ ಗುರುಗಳ ಹೊಟ್ಟೆ ತುಂಬಿಸುತ್ತಿದ್ದ. ಶಿಷ್ಯನ ಮೇಲೆ ವೇದಧರ್ಮದ ಮನೋಸ್ಥಿತಿ ಯಾವಾಗಲೂ ಒಂದೇ ತೆರನಾಗಿ ಇರುತ್ತಿರಲಿಲ್ಲ. ಕೆಲವೊಮ್ಮೆ ಆಹಾರ ಚೆನ್ನಾಗಿಲ್ಲವೆಂದು ಎಸೆದು ಮತ್ತೆ ಹಸಿವೆಯೆಂದು ಪೀಡಿಸುವುದು, ಹುಣ್ಣುಗಳ ಆರೈಕೆ ಸರಿಯಾಗಿ ಮಾಡಿಲ್ಲವೆಂದು ರೇಗುವುದು, ಹುಣ್ಣುಗಳಿಗೆ ಮುತ್ತುವ ನೋಣಗಳನ್ನು ಓಡಿಸಲಿಲ್ಲವೆಂದು ಬೈಯ್ಯುವುದು ಹೀಗೆಲ್ಲ ನಿಷ್ಠುರವಾಗಿ ನಡೆದುಕೊಳ್ಳುತ್ತಿದ್ದರು, ಏನೇ ಆದರೂ ಸಂದೀಪ ಸಂಯಮ ತಪ್ಪುತ್ತಿರಲಿಲ್ಲ. ಊಟ – ನಿದ್ರೆ ಸರಿಯಾಗಿ ಇಲ್ಲದಿದ್ದರೂ ವಿಚಲಿತನಾಗದೆ ಗುರುಗಳ ಸೇವೆ ತನ್ನ ಕರ್ತವ್ಯವೆಂದು ಭಕ್ತಿ ಪೂರ್ವಕವಾಗಿ ಮಾಡುತ್ತಿದ್ದ.

ಹೀಗೇ ಕೆಲದಿನ ಕಳೆಯಲು ಸಂದೀಪನ ನಿಷ್ಠಾವಂತ ನಿರಂತರ ಸೇವೆಯನ್ನು ಕಂಡ ವಿಶ್ವೇಶ್ವರನು ಪ್ರತ್ಯಕ್ಷನಾಗಿ ‘ಮಗೂ, ನಿನಗೇನು ವರ ಬೇಕು? ಕೇಳಿಕೋ’ ಎಂದ. ಶಿವನನ್ನು ಕಂಡ ಉತ್ಸಾಹ ಸಂದೀಪನಿಗೆ ಆತ ‘ದೇವಾ, ಗುರುಗಳಲ್ಲಿ ವಿಚಾರಿಸಿ ತಿಳಿಸುತ್ತೇನೆ’ ಎಂದವ ತಕ್ಷಣವೇ ಅತೀ ಸಂತೋಷದಿಂದ ‘ಗುರುಗಳೇ ನನಗೆ ಕಾಶಿ ವಿಶ್ವೇಶ್ವರನು ಒಲಿದು; ಏನು ವರಬೇಕು? ಎಂದು ಕೇಳುತ್ತಿದ್ದಾನೆ. ನಿಮ್ಮ ವ್ಯಾಧಿ ಶೀಘ್ರ ಗುಣವಾಗಲಿ ಎಂದು ಬೇಡಿಕೊಳ್ಳುತ್ತೇನೆ’ ಎಂದ. ಗುರುಗಳಿಗೆ ಸಿಟ್ಟು ಬಂತು. ‘ಏನು..? ನನ್ನ ವ್ಯಾಧಿ ಗುಣವಾಗಲಿ ಎಂದು ಬೇಡಿಕೊಳ್ಳುತ್ತೀಯೇ? ನನ್ನ ಕರ್ಮಫಲ ನಾನು ಅನುಭವಿಸಿಯೇ ತೀರಬೇಕು, ನನಗಾರ ಹಂಗೂ ಬೇಕಾಗಿಲ್ಲ ನನ್ನ ಪರವಾಗಿ ಏನೂ ಕೇಳಿಕೊಳ್ಳಬೇಡ’ ಎಂದು ನಿಷ್ಟುರವಾಗಿ ನುಡಿದ ವೇದಧರ್ಮ, ‘ಕಾಶಿ ವಿಶ್ವನಾಥನ ಕರುಣೆ ಬೇಡದಿದ್ದರೆ ಈತನು ಇಲ್ಲಿಗೆ ಬರುವ ಸಾಹಸ ಯಾಕೆ ಬೇಕಿತ್ತು! ಎಂದು ಬೇರೆ ಯಾರೇ ಆದರೂ ಹೇಳುತ್ತಿದ್ದರು. ಆದರೆ ಸಂದೀಪ ಶಾಂತ ಚಿತ್ತನಾಗಿ ಗುರುಗಳು ತಿಳಿಸಿದುದನ್ನು ವಿಶ್ವೇಶ್ವರನಿಗೆ ಒಪ್ಪಿಸಿದ. ವಿಶ್ವನಾಥ ಅದೃಶ್ಯನಾದ. ಈ ಸುದ್ದಿ ವಿಶ್ವನಾಥನಿಂದ ವಿಷ್ಣುವಿಗೆ ತಲುಪಿತು.

ಹೀಗಿರಲು ಒಂದು ದಿನ ವಿಷ್ಣುವು ಧರೆಗಿಳಿದು ಸಂದೀಪನ ಮುಂದೆ ಬಂದು ‘ಮಗೂ, ಕುಷ್ಠರೋಗಿಯಾದ ಈ ನಿನ್ನ ಗುರುವಿನ ಸೇವೆ ಆರೈಕೆ, ಭಿಕ್ಷೆ ಬೇಡಿ ತಂದು ಉಣಿಸುವ ಈ ಪರಿಯಾದ ಕೈಂಕರ್ಯವನ್ನು ನೋಡಿ ಮೆಚ್ಚಿಕೊಂಡಿದ್ದೇನೆ. ನಿನಗೇನು ವರ ಬೇಕು ಕೇಳು ಕೊಡುತ್ತೇನೆ” ಎಂದ. ಆಗ ಸಂದೀಪನು “ದೇವಾ….. ನನ್ನ ಮನಸ್ಸಿನಲ್ಲಿ ಗುರು ಭಕ್ತಿಯು ಅಚಲವಾಗಿರಲಿ, ನಾನು ಎಂದೂ ಹೀಗೆ ಗುರುಸೇವೆ ಮಾಡುವಂತೆ ಅನುಗ್ರಹಿಸು, ಬೇರೇನೂ ನಾನು ಬೇಡಲಾರೆ’ ಎಂದ. ಈ ಶಿಷ್ಯನಾದವನ ಮಾತು, ಮನಸ್ಸು ಪ್ರಾಮಾಣಿಕತೆಯನ್ನೂ, ಶಾಂತತೆಯನ್ನೂ ಕಂಡ ವಿಷ್ಣು ಬೆರಗಾಗಿ ಹೋದ. ಲಕ್ಷ್ಮೀಪತಿ ‘ತಥಾಸ್ತು’ ಎಂದು ಹೇಳಿ ಮಾಯವಾದನು.  ಭಕ್ತನಾದವನು ಏನೂ ಕೇಳಿಕೊಳ್ಳದೆ ಹೋದರೂ ಆತನಿಗೆ  ಹೇಗೆ ಕರುಣಿಸಬೇಕು, ಯಾವುದರಿಂದ ಸುಖಿಯಾದಾನು ಎಂಬುದು ದೇವನಿಗೆ ತಿಳಿಯದೇನು?  ಆ ಕ್ಷಣದಿಂದಲೇ ವೇದವರ್ಮನ ಮೈಮೇಲಿದ್ದ ಕುಷ್ಠದ ಹುಣ್ಣುಗಳೆಲ್ಲ ಮಾಯವಾಗಿ ಅವನ ರೂಪ ಮೊದಲಿನಂತಾಯಿತು.ಆರೋಗ್ಯದ ಮೂರ್ತಿವೆತ್ತ ಗುರುಗಳನ್ನು ನೋಡಿ ಸಂದೀಪನಿಗೆ ಪರಮಾನಂದವಾಯಿತು. ಬರೆ ಪುಸ್ತಕ, ಶಾಸ್ತ್ರ, ಓದು ವಿದ್ಯೆಯಲ್ಲ. ಮಾನವೀಯತೆಯಲ್ಲಿ ದೇವತ್ವವನ್ನು ಕಾಣುವುದೇ ನಿಜವಾದ ವಿದ್ಯೆ. ಈಗ ನೀನು ಪರಿಪೂರ್ಣ ಪಾರಂಗತನಾಗಿದ್ದೇಯೆ, ಇನ್ನು ನೀನು ಮನೆಗೆ ತೆರಳಬಹುದು ಎಂದು ಬೀಳ್ಕೊಟ್ಟನು ಗುರು. ಸದಾಚಾರ ಸಂಪನ್ನ ಸಂದೀಪನಿಂದಾಗಿ, ವೇದವರ್ಮರಿಗೂ ಒಳಿತಾಯಿತು. ಶಿಷ್ಯನ ಮೂಲಕ ಗುರುವಿಗೆ ಒಳಿತಾದ ನಿದರ್ಶನವು ವಿಶೇಷವಾದುದು.

-ವಿಜಯಾ ಸುಬ್ರಹ್ಮಣ್ಯ, ಕುಂಬಳೆ

5 Responses

 1. ಅಬ್ಭಾ…ಎಂಥಹ ಗುರು ಭಕ್ತಿ… ಮರೆತು ಹೋಗುತ್ತಿರುವ…ಪೌರಾಣಿಕ ಕಥೆಗಳನ್ನು… ಮತ್ತೆ ನೆನಪಿಸಿಕೊಳ್ಳುವಂತೆ…ಮಾಡುವ… ನಿಮಗೆ ಧನ್ಯವಾದಗಳು ಮೇಡಂ.

 2. ನಯನ ಬಜಕೂಡ್ಲು says:

  ತುಂಬಾ ಚೆನ್ನಾಗಿದೆ. ಉತ್ತಮ ಸಂದೇಶವಿದೆ. ಗುರು ಭಕ್ತಿ ಅನ್ನುವುದನ್ನು ಇವತ್ತು ಗಹನವಾಗಿ ಹುಡುಕಾಡಿದರು ಸಿಗದೇನೋ.

 3. . ಶಂಕರಿ ಶರ್ಮ says:

  ಬಹಳ ಒಳ್ಳೆಯ ಸಂದೇಶ ಹೊತ್ತ ಅತ್ಯಪೂರ್ವ ಶಿಷ್ಯ ಸಂದೀಪನ ಕಥೆ ತುಂಬಾ ಚೆನ್ನಾಗಿದೆ ವಿಜಯಕ್ಕಾ.

 4. Vijayasubrahmanya says:

  ಅಡ್ಮಿನರ್ ಹೇಮಮಾಲಾ ಹಾಗೂ ಓದುಗರಿಗೆ ಧನ್ಯವಾದಗಳು.

 5. ಅಬ್ಬ ಎಂತಹ ಗುರುಭಕ್ತಿ
  ಉತ್ತಮವಾದ ನಿರೂಪಣೆ

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: