ಕಾದಂಬರಿ: ನೆರಳು…ಕಿರಣ 29
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..
ಬೆಳಗ್ಗೆ ಎಚ್ಚರವಾದ ಭಾಗ್ಯಳಿಗೆ ದಿನಕ್ಕಿಂತ ತಡವಾಗಿದೆ ಎನ್ನಿಸಿತು. ಗೋಡೆಯ ಮೇಲಿನ ಗಡಿಯಾರದ ಕಡೆ ದೃಷ್ಟಿ ಹರಿಸಿದಳು. “ಓ ಆಗಲೇ ಆರುಗಂಟೆಯಾಗಿದೆ. ಇಷ್ಟೊತ್ತಿಗೆ ಅಪ್ಪ ಮಕ್ಕಳ ವಾಕಿಂಗ್, ಸ್ನಾನ ಪೂಜೆ ಎಲ್ಲವೂ ಮುಗಿದಿರುತ್ತದೆ. ಒಮ್ಮೊಮ್ಮೆ ನನಗೇಕೆ ಹೀಗಾಗುತ್ತದೆ. ಎಷ್ಟೋ ಸಾರಿ ಇವರಿಗೆ ಹೇಳಿದ್ದಿದೆ. ಒಂದೆವೇಳೆ ಮಾಮೂಲಿ ವೇಳೆಗೆ ಏಳದಿದ್ದರೆ ದಯವಿಟ್ಟು ಎಬ್ಬಿಸಿಬಿಡಿ ಅಂತ. ಕಿವಿಯ ಮೇಲೇ ಹಾಕಿಕೊಳ್ಳುವುದಿಲ್ಲ. “ಬಿಡು ಭಾಗ್ಯಾ, ತಲೆ ಹೋಗುವಂತಹದ್ದೇನಿದೆ, ನಾಣಜ್ಜ ಅಮ್ಮ ಇದ್ದಾರೆ ನೋಡಿಕೊಳ್ಳುತ್ತಾರೆ. ಮಿಕ್ಕ ಕೆಲಸಗಳಿಗೆ ಪಕ್ಕದ ಮನೆಯ ಜನರಿಲ್ಲವೇ ಸಹಾಯಕ್ಕೆ. ನನ್ನ ರಾಣಿ ಆರಾಮವಾಗಿರಬೇಕು” ಎಂದು ಕೆನ್ನೆ ಹಿಂಡಿ ಪ್ರೀತಿ ತೋರಿಸುತ್ತಿದ್ದರು. ಹುಂ ಇವೆಲ್ಲವೂ ಸರಿಯೇ, ಆದರೆ ಆ ಲೆಕ್ಕಾಚಾರಗಳು, ತನ್ನದೇ ನಡೆಯಬೇಕೆಂಬ ಧೋರಣೆ, ಯಾರ ಮಾತಿಗೂ ಸೊಪ್ಪು ಹಾಕದ ಸರದಾರ ನನ್ನ ಗಂಡ. ಎಂದುಕೊಳ್ಳುತ್ತಾ ಹಾಸಿಗೆ, ಹೊದಿಕೆಗಳನ್ನು ಸರಿಪಡಿಸಿ ತಾನೂ ಒಪ್ಪ ಓರಣ ಮಾಡಿಕೊಂಡು ಮೆತ್ತಗೆ ಕೆಳಗಿಳಿದು ಬಂದಳು.
ಪುಣ್ಯಕ್ಕೆ ಹಾಲಿನಲ್ಲಿ, ವೆರಾಂಡಾದಲ್ಲಿ ಯಾರೂ ಇರಲಿಲ್ಲ. ಸರಸರನೆ ಹಿತ್ತಲಿಗೆ ನಡೆದು ಪ್ರಾತಃವಿಧಿಗಳನ್ನು ಮುಗಿಸಿ ಬಂದಳು. ಮಡಿ ಬಟ್ಟೆಗಳನ್ನು ತೆಗೆದುಕೊಂಡು ಸ್ನಾನವನ್ನೂ ಮುಗಿಸಿ ಬರುವಷ್ಟರಲ್ಲಿ ಜೋಯಿಸರು ದೇವಸ್ಥಾನದ ಪೂಜಾಕೈಂಕರ್ಯಕ್ಕೆ ಹೋಗಿಯಾಗಿತ್ತು. ಗಂಡ ಶ್ರೀನಿವಾಸ ಎಲ್ಲಿಯೂ ಕಾಣಿಸಲಿಲ್ಲ. ಅವರೂ ದೇವಸ್ಥಾನಕ್ಕೆ ಹೋದರೇ? ಎಷ್ಟೋ ಸಾರಿ ಹೋದದ್ದಿದೆ. ಹಾಗೆ ಹೋಗಿದ್ದರೆ ಹೇಳುತ್ತಿದ್ದರು. ಏನೋ ನೆನ್ನೆಯ ಪ್ರಕರಣವಾದ ಮೇಲೆ ಹೆಚ್ಚಿಗೆ ಮಾತುಕತೆಯೇ ಆಗಲಿಲ್ಲವಲ್ಲ. ಮರೆತಿರಬಹುದು. ಎಂದುಕೊಂಡು ಪೂಜಾ ರೂಮಿಗೆ ಹೋದಳು.
ಊದುಕಡ್ಡಿ, ಕರ್ಪೂರ, ತುಪ್ಪದ ದೀಪದ ಘಮಲು ಮೂಗಿಗೆ ತಾಕಿತ್ತು. ಆಗ ತಾನೇ ಪೂಜೆ ಮುಗಿದಿದ್ದರಿಂದ ಸುವಾಸನೆ ದೇವರ ಕೋಣೆಯನ್ನೆಲ್ಲ ಆವರಿಸಿತ್ತು. ಆಯಾ ದಿವಸಕ್ಕೆ ತಕ್ಕಂತೆ ರಂಗೋಲಿ ಪೀಠವನ್ನು ಸಿಂಗರಿಸಿತ್ತು. ಹೂವಿನ ಅಲಂಕಾರ, ಉರಿಯುತ್ತಿದ್ದ ನಂದಾದೀಪಗಳು, ಶಾಂತವಾದ ವಾತಾವರಣ ಭಾಗ್ಯಳಿಗೆ ಹಿತವಾದ ಅನುಭವವನ್ನು ಉಂಟು ಮಾಡಿತ್ತು. ದೀಪಗಳಿಗೆ ಅರಿಸಿನ ಕುಂಕುಮವಿಟ್ಟು, ದೇವರಿಗೆ ಒಂದೆರಡು ಹೂಗಳನ್ನಿಟ್ಟು, ಮಾಂಗಲ್ಯಕ್ಕೆ ಪೂಜೆಮಾಡಿಕೊಂಡು ಕಣ್ಣಿಗೊತ್ತಿಕೊಂಡು ಒಂದೆರಡು ಶ್ಲೋಕಗಳನ್ನು ಹೇಳಿ ದೇವರಿಗೆ ಸಾಷ್ಟಾಂಗ ನಮಸ್ಕರಿಸಿ ಅಡುಗೆ ಮನೆಗೆ ಬಂದಳು.
ಅವಳು ಬಂದದ್ದನ್ನು ಕಂಡು ಸೀತಮ್ಮ “ನಾರಣಪ್ಪಾ ಭಾಗ್ಯಳಿಗೆ ಕಷಾಯ ಮಾಡಿದ್ದೀರಾ?” ಎಂದು ಕೇಳಿದರು. ಮಾಡಿದ್ದೇನೆ ತಾಯಿ, ಅವರು ಬಂದಾಗಿನಿಂದಲೂ ನನಗೆ ಕಂಪನಿಯಾಗಿದ್ದಾರೆ, ಆದ್ದರಿಂದ ನಾನು ಮರೆಯುತ್ತೇನೆಯೇ, ರೆಡಿಯಿದೆ ತೊಗೋಳ್ಳಿ” ಎಂದು ಒಂದು ಲೋಟಕ್ಕೆ ಹಾಕಿ ಭಾಗ್ಯಳ ಕೈಗಿತ್ತರು.
ಸೀತಮ್ಮ “ಭಾಗ್ಯಾ ಕಷಾಯ ಕುಡಿದು ಲೋಟವನ್ನಿಟ್ಟು ಬಾ, ನಾರಣಪ್ಪ ಅಡುಗೆ ಮುಗಿಸಲಿ. ನಿಮ್ಮ ಮಾವ ಹಿಂದಿರುಗುವಷ್ಟರಲ್ಲಿ ಒಂದೆರಡು ದೇವರನಾಮಗಳನ್ನು ಹಾಡೋಣ” ಎಂದು ಹೊರ ನಡೆದರು.
ಹಿಂದಿನ ದಿನದ ಪ್ರಸಂಗವನ್ನು ಮತ್ತೆ ಕೆದಕದೆ ನಾನು ತಡವಾಗಿ ಎದ್ದಿದ್ದರೂ ಅದರ ಬಗ್ಗೆಯೂ ಚಕಾರವೆತ್ತದೆ ಗಮನವನ್ನು ಬೇರೆಕಡೆಗೆ ತಿರುಗಿಸಲು ಅತ್ತೆಯವರು ಮಾಡುತ್ತಿದ್ದ ಪ್ರಯತ್ನವನ್ನು ಕಂಡು ಅವರ ಬಗ್ಗೆ ಗೌರವ ಇಮ್ಮಡಿಸಿತು.
ಕಷಾಯ ಕುಡಿದು ಲೋಟವನ್ನು ತೊಳೆಯಲು ಇರಿಸಿ ಕೈ ತೊಳೆದುಕೊಂಡು ತಡಮಾಡದೆ ಹಾಲಿಗೆ ಬಂದಳು ಭಾಗ್ಯ. ಹಾಲಿನಲ್ಲಿ ಹಾಸಿದ್ದ ಜಮಖಾನೆಯ ಮೇಲೆ ಆಸೀನರಾಗಿ ತಂಬೂರಿ ಹಿಡಿದು ಶೃತಿ ಸರಿಮಾಡುತ್ತಿದ್ದ ಅತ್ತೆಯನ್ನು ನೋಡಿದಳು. ಸ್ವಲ್ಪ ದೂರದಲ್ಲಿ ಅವರಿಗೆದುರಾಗಿ ಕುಳಿತುಕೊಳ್ಳುತ್ತಾ “ಅತ್ತೇ ಇವರೆಲ್ಲೋ ಕಾಣಿಸುತ್ತಿಲ್ಲವಲ್ಲ, ಮಾವಯ್ಯನವರೊಡನೆ ದೇವಸ್ಥಾನಕ್ಕೆ ಹೋದರೇ?” ಎಂದು ಕೇಳಿದರು.
“ಓ ಮರೆತೆ ನೋಡು, ಸುಬ್ಬುವಿನ ತಂದೆ ದೈವಾಧೀನರಾದರಂತೆ, ಅವರ ಊರು ಇಲ್ಲೇ ತಾವರೇಕೆರೆ. ಶೀನನ ಪ್ರೆಂಡ್ಸ್ ಎಲ್ಲರೂ ಸೇರಿ ಒಂದು ವ್ಯಾನ್ ಮಾಡಿಕೊಂಡು ಬೆಳ್ಳಂಬೆಳಗ್ಗೇನೆ ಮನೆಯ ಹತ್ತಿರ ಬಂದಿದ್ದರು. ಶೀನು “ಭಾಗ್ಯ ಇನ್ನೂ ಮಲಗಿದ್ದಾಳೆ, ಎಬ್ಬಿಸಿ ಈ ಸುದ್ಧಿ ಹೇಳುವುದು ಬೇಡ. ನೀವೇ ಆಮೇಲೆ ನಿಧಾನವಾಗಿ ತಿಳಿಸಿ.” ಎಂದು ಅವರುಗಳ ಜೊತೆಯಲ್ಲಿ ಹೋದ. ಬರುವುದು ಸಂಜೆಯಾಗುತ್ತದೆ..” ಎಂದರು ಸೀತಮ್ಮ.
ಸರಿಯೆಂದು ಭಾಗ್ಯ ತನ್ನ ಅತ್ತೆಯವರೊಂದಿಗೆ ದಾಸರ ಪದಗಳು “ದಾರಿ ಯಾವುದಯ್ಯಾ ವೈಕುಂಠಕೆ, ತಲ್ಲಣಿಸದಿರು ಕಂಡ್ಯಾ ತಾಳು ಮನವೇ, ಸದಾ ಎನ್ನ ಹೃದಯದಲ್ಲಿ ವಾಸ ಮಾಡೋ ಶ್ರೀಹರೀ, ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ, ಹೀಗೆ ಒಂದಾದ ಮೇಲೊಂದರಂತೆ ಹಾಡುತ್ತಾ ಹೋದವರಿಗೆ ಅಡುಗೆ ಕೆಲಸ ಮುಗಿಸಿ ಬಂದ ನಾರಣಪ್ಪನ ಆಗಮನವಾಗಲೀ, ದೇವಸ್ಥಾನದಿಂದ ಹಿಂದಿರುಗಿದ ಜೋಯಿಸರಾಗಲೀ ಗಮನಕ್ಕೇ ಬರಲಿಲ್ಲ. ಇವರಿಬ್ಬರ ಜುಗಲಬಂದಿ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣಿಸದಿದ್ದಾಗ ಜೋಯಿಸರೇ ಚಪ್ಪಳೆ ತಟ್ಟಿ “ವಾವ್ ! ಬಹಳ ದಿವಸಗಳ ನಂತರ ಹಾಡಿದರೂ ಸೀತು ನಿನ್ನ ಗಾಯನದಲ್ಲಿ ಎಳ್ಳಷ್ಟೂ ದೋಷ ಕಂಡುಬರಲಿಲ್ಲ. ಇನ್ನು ನನ್ನ ಮುದ್ದು ಸೊಸೆಕಡೆ ಬೊಟ್ಟು ಮಾಡಿ ತೋರಿಸುವ ಹಾಗೇ ಇಲ್ಲ. ಏನು ಇದ್ದಕ್ಕಿದ್ದಂತೆ ಈ ಕಚೇರಿ?”ಎಂದು ಕೇಳುತ್ತಾ ಅವರಿಬ್ಬರನ್ನೂ ವಾಸ್ತವಕ್ಕೆ ಕರೆತಂದರು.
“ಅರೇ ! ನೀವು ಯಾವಾಗ ಬಂದಿರಿ? ನಾರಾಣಪ್ಪ ನೀನು ಅಡುಗೆ?” ಎಂದರು ಸೀತಮ್ಮ.
“ಹೂಂ ಅಡುಗೆ ಕೆಲಸ ಮುಗಿಸಿ ನಾನಿಲ್ಲಿಗೆ ಬಂದು ಸುಮಾರು ಹೊತ್ತಾಯಿತು, ಯಜಮಾನರು ಬಂದಾಗಲೇ ನಾನು ನಿಮ್ಮನ್ನು ಎಚ್ಚರಿಸಬೇಕಂದುಕೊಂಡೆ. ಅವರೇ ಬೇಡವೆಂದರು. ಕಣ್ಮುಚ್ಚಿ ಹಾಡುತ್ತಾ ತಲ್ಲೀನರಾದವರಿಗೆ ಹೇಗೆ ಗೊತ್ತಾಗಬೇಕು. ಏನಾದರಾಗಲೀ ನಿಮ್ಮಿಬ್ಬರ ಗಾಯನ ಅದ್ಭುತವಾಗಿತ್ತು. ಮನಸ್ಸು ಶಾಂತವಾಯಿತು. ಯಾವಾಗಲಾದರೊಮ್ಮೆ ಹೀಗೆ ಹಾಡಿ ಅಮ್ಮ. ‘ಹಳೆಬೇರು ಹೊಸಚಿಗುರು ಕೂಡಿರಲು ಮರ ಸೊಗಸು’ ಹಾಗೇ ದಿವ್ಯವಾಗಿತ್ತು” ಎಂದು ಮನತುಂಬಿ ಹೊಗಳಿದರು ನಾರಣಪ್ಪ.
“ಆಯಿತು ಮಹಾರಾಯ, ಊಟಕ್ಕೆ ಸಿದ್ಧಮಾಡು” ಎಂದು ಹೇಳುತ್ತಾ ಬಟ್ಟೆ ಬದಲಾಯಿಸಲು ತಮ್ಮ ರೂಮನ್ನು ಹೊಕ್ಕರು ಜೋಯಿಸರು. ಬಾಗ್ಯ ಅತ್ತೆಯ ಕೈಯಲ್ಲಿದ್ದ ತಂಬೂರಿಯನ್ನು ತೆಗೆದು ಸ್ವಸ್ಥಾನದಲ್ಲಿಟ್ಟು ತಾನು ಒಳ ನಡೆದಳು.
ಎಲ್ಲರೂ ಊಟ ಮಾಡಿದ ಮೇಲೆ “ಸೀತೂ ಗೌರಿಯಮ್ಮ ದೇವಸ್ಥಾನಕ್ಕೆ ಬಂದಿದ್ದರು. ಶ್ರೀನಿವಾಸ ಅವರಲ್ಲಿಗೆ ಹೋಗಿದ್ದಾಗ ಹೇಳಲು ಮರೆತ ಕೆಲವು ವಿಷಯಗಳಿದ್ದವಂತೆ. ಅದಕ್ಕೇ ಈದಿನ ಅದೇ ಮಾರ್ಗವಾಗಿ ಹೋಗಬೇಕಾಗಿದ್ದುದರಿಂದ ಹೋಗುವಾಗ ನೆನಪಿಗೆ ಬಂತಂತೆ, ಅದನ್ನು ಹೇಳಲೆಂದೇ ನನಲ್ಲಿಗೆ ಬಂದರು. ಅದೇನು ಹೇಳಿ ಎಂದೆ. ನೀವು ತಂದೆ ಮಗನಿಗೆ ಅನುಕೂಲವಾದ ಶುಭದಿನವನ್ನು ಗೊತ್ತುಮಾಡಿ ನಿಮ್ಮ ಮನೆದೇವರ ಪೂಜೆ, ಗಣಪತಿಯ ಪೂಜೆ, ನವಗ್ರಹ ಶಾಂತಿ, ಶಾರದಾ ಪೂಜೆ ಎಲ್ಲವನ್ನೂ ಸಾಂಗವಾಗಿ ಮಾಡಿಸಿ ಮ್ಯೂಸಿಕ್ ಕ್ಲಾಸ್‌ಗೆ ಶ್ರೀಕಾರ ಹಾಕಬೇಕೆಂಬುದು ನನ್ನ ಬಯಕೆ ಎಂದರು. ನಾನು ಅದಕ್ಕೇನು ಶ್ರೀನಿವಾಸನನ್ನು ಕೇಳಿ ಶ್ರಾವಣ ಮಾಸ ಪ್ರಾರಂಭವಾಗುತ್ತಿದ್ದಂತೆ ಮಾಡಿಸಿದರಾಯಿತು ಬಿಡಿ ಎಂದೆ.” ಎಂದರು ಜೋಯಿಸರು.
“ಅಲ್ಲಾ ಮಾವಯ್ಯಾ, ನನಗೆ ಪಾಠ ಹೇಳಿಕೊಡಲು ಪ್ರಾರಂಭಿಸುವಾಗ ಶಾರದಾಪೂಜೆ ಒಂದನ್ನೇ ಮಾಡಿದ್ದರು. ಈಗ ಇಷ್ಟೆಲ್ಲಾ ?” ಎಂದುನ ಕೇಳಿದರು ಭಾಗ್ಯ.
“ಅವರು ನಡೆಸಿಕೊಂಡು ಬರುತ್ತಿದ್ದ ಸಂಗೀತಶಾಲೆಯ ಸಂಪೂರ್ಣ ಜವಾಬ್ದಾರಿಯನ್ನು ನಿನಗೆ ವರ್ಗಾಯಿಸುತ್ತಿದ್ದಾರಲ್ಲಮ್ಮಾ, ಅದು ಎಂದೆಂದಿಗೂ ನಿಲ್ಲದೆ ನಡೆದುಕೊಂಡು ಹೋಗಲೆಂಬ ಅಭಿಲಾಷೆಯಿರಬಹುದು. ಅವರ ತಮ್ಮನ ಮಗ ಸೊಸೆಯಿಂದ ಇದನ್ನು ನಿಭಾಯಿಸಲಾಗುತ್ತಿಲ್ಲ ಎಂಬ ವ್ಯಥೆಯಿತ್ತು. ಈಗ ಹಾಗಾಗಬಾರದೆಂದು ದೇವರುಗಳ ಮೊರೆಹೋಗಿದ್ದಾರೆ. ಮಾಡೋಣ ಬಿಡು, ಕೆಟ್ಟದ್ದೇನಲ್ಲವಲ್ಲಾ. ಪೂಜೆ ತಾನೇ. ಶ್ರೀನಿವಾಸನಿಗೂ ಪ್ರಿಯವಾದದ್ದೇ. ವಿಚಾರಮಾಡಿ ಹೇಳಿದರಾಯಿತು” ಎಂದರು ಜೋಯಿಸರು.
ಈ ಸಂಗತಿಯನ್ನು ಕೇಳಿ ಸೀತಮ್ಮನವರಿಗೆ ಮನದಲ್ಲಿ ಹಿಗ್ಗುಂಟಾಯಿತು. ಮಗನ ಮದುವೆಯ ಸಂದರ್ಭದಲ್ಲಿ ಮನೆದೇವರ ಪೂಜೆ, ಹೋಮ ಹವನ, ಅದೂ ಇದೂ ಅಂತ ನಡೆಸಿದ್ದು. ಅನಂತರ ಮನೆಯಲ್ಲಿ ಮತ್ತೊಮ್ಮೆ ಮಾಡಿಲ್ಲ. ಕಾರಣವೇನೇ ಇರಲಿ ಪೂಜೆ ನಡೆದು ಒಳ್ಳೆಯದಾಗಲಿ ಎಂದುಕೊಂಡರು.
ಅತ್ತೆ ಮಾವ ಇಬ್ಬರು ಹೊರ ಅಂಗಳಕ್ಕೆ ಹೋದನಂತರ ಆ ದಿನದ ನ್ಯೂಸ್‌ಪೇಪರ್ ತಿರುವಿ ಹಾಕಿದ ಭಾಗ್ಯ ಅದನ್ನಲ್ಲೇ ಇಟ್ಟು ಹಿತ್ತಲ ಕಡೆಯಿದ್ದ ಕೈತೋಟದ ಕಡೆಗೆ ನಡೆದಳು. ಸಪೋಟ, ತೆಂಗು, ಬಾಳೆ, ಸೀಬೆ, ಪಪಾಯಿ ಗಿಡಗಳಿಗೆ ಪಾತಿಮಾಡಿ ನೀರು ಹಾಕಲಾಗಿತ್ತು. ಪಡವಲಕಾಯಿ, ಹಾಗಲಕಾಯಿ, ಕುಂಬಳ, ಸೌತೆ ಬಳ್ಳಿಗಳನ್ನು ಚಪ್ಪರಕ್ಕೆ ಹಬ್ಬಿಸಲಾಗಿದೆ. ಬೆಂಡಾಗಿದ್ದ ಕಡ್ಡಿಗಳನ್ನು ತೆಗೆದು ಭದ್ರವಾದ ಕಲ್ಲಿನಕಂಬಗಳನ್ನು ನಿಲ್ಲಿಸಲಾಗಿದೆ. ಬದನೆ, ಬೆಂಡೆ, ಹುರುಳಿಕಾಯಿ, ಮೆಣಸಿನ ಗಿಡಗಳಿಗೂ ಪಾತಿಗಳನ್ನು ಮಾಡಲಾಗಿದೆ. ಹೂಗಿಡಗಳಾದ ಮಲ್ಲಿಗೆ, ಕನಕಾಂಬರ, ಶ್ಯಾವಂತಿಗೆ, ಕಾಕಡ, ಗುಲಾಬಿ, ದಾಸವಾಳ, ಕಣಗಿಲೆ, ಅಬ್ಬಾ ! ಎಲ್ಲವೂ ನಳನಳಿಸಿವೆ. ಖಾಲಿಯಾಗಿದ್ದ ಸೊಪ್ಪಿನ ಮಡಿಗಳಲ್ಲಿದ್ದ ಕಳೆತೆಗೆದು ಮಣ್ಣು ಸಡಲಿಸಿ ಗೊಬ್ಬರ ಹಾಕಿದಂತೆ ಕಾಣಿಸುತ್ತಿದೆ. ಅರೆ ಇವೆಲ್ಲವನ್ನೂ ನಾನೇ ಮಾಡಿಸಬೇಕೆಂದಿದ್ದೆ. ನೆಂಟರುಗಳ ಆಗಮನದಿಂದ ಇತ್ತಕಡೆ ಹೆಚ್ಚು ಗಮನ ಹರಿಸಲಾಗಿರಲಿಲ್ಲ. ಇಷ್ಟೊಂದು ಅಚ್ಚುಕಟ್ಟಾಗಿ ಕೆಲಸ ಮಾಡಿದವರಾರು? ಪಕ್ಕದ ಮನೆಯವರಾ, ಅಥವಾ ನಾಣಜ್ಜ ಮಾಡಿದರಾ ಎಂದು ಆಲೋಚಿಸುತ್ತಿರುವಾಗಲೇ “ಅಮ್ಮಾ ಭಾಗ್ಯಮ್ಮಾ, ಈ ಉರಿಬಿಸಿಲಲ್ಲಿ ಏನು ಮಾಡುತ್ತಿದ್ದೀರಾ?” ಎಂದು ಕೇಳುತ್ತಾ ಬಂದರು ನಾರಾಣಪ್ಪ.
“ನಾಣಜ್ಜಾ ನಾನು ನಿಮ್ಮ ಬಳಿ ಹಿತ್ತಲಲ್ಲಿ ಮಾಡಿಸಬೇಕೆಂದಿದ್ದ ಕೆಲಸಗಳ ಬಗ್ಗೆ ಹೇಳಿದ್ದೆ. ಈಗ ಬಂದು ನೋಡಿದರೆ ಅವೆಲ್ಲವನ್ನೂ ಅಚ್ಚುಕಟ್ಟಾಗಿ ಪೂರ್ತಿಮಾಡಿಯಾಗಿದೆ. ಅದ್ಯಾವ ಘಳಿಗೆಯಲ್ಲಿ ಮಾಡಿಸಿದಿರಿ ನಾಣಜ್ಜ?” ಎಂದು ಕೇಳಿದಳು ಭಾಗ್ಯ.
“ಅಮ್ಮಾ ನೀವು ನೋಡಿದಂತೆ ನನಗೆಲ್ಲಿ ಪುರುಸೊತ್ತು ಇತ್ತಮ್ಮ. ನೀವು ಏನೇನು ಮಾಡಬೇಕೆಂದು ನನ್ನ ಬಳಿ ಹೇಳಿದ್ದಿರಲ್ಲ, ಅದನ್ನು ಪಕ್ಕದ ಮನೆಯ ಭೀಮಣ್ಣನಿಗೆ ಹೇಳಿದ್ದೆ ಅಷ್ಟೆ. ನಾನೂ ಇದನ್ನು ಗಮನಿಸಿದ್ದು ನೆನ್ನೇನೇ.”
“ಈ ಕಡೆ ನೋಡಲಿಲ್ಲವೇ? ಖಾಲಿಯಾಗಿದ್ದ ಸೊಪ್ಪಿನ ಮಡಿಗಳನ್ನೂ ಒಪ್ಪ ಮಾಡಿದ್ದಾರೆ. ಕಸಕಡ್ಡಿ ತೆಗೆದು ಮಣ್ಣು ಕೆದರಿ ಗೊಬ್ಬರ ಬೆರೆಸಿ ನೀರನ್ನು ಚಿಮುಕಿಸಿ ಸಿದ್ಧಪಡಿಸಿದ್ದಾರೆ. ಸೊಪ್ಪಿನ ಬೀಜಗಳನ್ನು ನನಗೆ ಕೊಟ್ಟಿದ್ದಾರೆ. ಅವನ್ನು ನೀವೇ ಹಾಕಬೇಕಂತೆ. ಬನ್ನಿ ಸಂಜೆಗೆ ಹಾಕುವಿರಂತೆ.” ಎಂದರು ನಾರಣಪ್ಪ.
“ಇಷ್ಟೆಲ್ಲಾ ಮಾಡಿದ್ದಾರೆ ಅವರೇ ಹಾಕಬಹುದಿತ್ತಲ್ಲಾ” ಎಂದಳು ಭಾಗ್ಯ.
“ಇಲ್ಲ ಭಾಗ್ಯಮ್ಮ, ಇದೇನೂ ಹೊಸದಲ್ಲವಲ್ಲಾ. ನಿಮ್ಮ ಕೈಲಿ ಸಸಿ ನೆಡಿಸುವುದು, ಬೀಜ ಬಿತ್ತಿಸುವುದು, ಬಹಳ ಚೆನ್ನಾಗಿ, ಸೊಂಪಾಗಿ ಬೆಳೆಯುತ್ತೇಂತ ಅವರುಗಳ ನಂಬಿಕೆ.” ಎಂದರು ನಾರಣಪ್ಪ.
“ಹೂಂ ಎಲ್ಲವೂ ಶುಭವಾಗುತ್ತೆ, ಸೊಂಪಾಗಿ ಬೆಳೆಯುತ್ತೆ. ಆಗಬೇಕಾದ ಒಂದನ್ನು ಬಿಟ್ಟು” ಎಂದು ಗೊಣಗಿಕೊಂಡಳು.” ಭಾಗ್ಯ.
“ಏನೆಂದಿರಿ ಭಾಗ್ಯಮ್ಮ” ಎಂದು ಕೇಳಿದರು ನಾರಣಪ್ಪ.
“ಏನಿಲ್ಲ ನಾಣಜ್ಜ, ಸಂಜೆಯೇ ಹಾಕೋಣ ಎಂದೆ” ಎಂದಳು ಭಾಗ್ಯ.
“ಅದನ್ನೇ ನಾನೂ ಹೇಳಿದ್ದು. ಈಗ ಕೈಕಾಲು ತೊಳೆದುಕೊಂಡು ಒಳಕ್ಕೆ ನಡೆಯಿರಿ” ಎಂದೆನ್ನುತ್ತಾ ತಾನೂ ಕೈಕಾಲು ತೊಳೆದು ಒಳನಡೆದರು ನಾರಣಪ್ಪ. ಭಾಗ್ಯಳೂ ಹಿಂಬಾಲಿಸಿದಳು.
ಹಿತ್ತಲಿನಿಂದ ನಾರಣಪ್ಪನೊಡನೆ ಒಳಗೆ ಬಂದ ಭಾಗ್ಯಳಿಗೆ ಮಾವ ತಮ್ಮ ಖಾಸಗಿ ಕೋಣೆಯಲ್ಲಿ ಯಾರೊಡನೆಯೋ ಮಾತನಾಡುತ್ತಿರುವುದು ಕೇಳಿಸಿತು. ಅತ್ತೆ ಅವರ ರೂಮಿಗೆ ಹೋಗಿದ್ದಾರೆಂಬುದನ್ನು ಅರಿತವಳೇ ಇನ್ನು ಸಂಜೆಯವರೆಗೆ ಏನೂ ಕೆಲಸವಿಲ್ಲ. ನೆನ್ನೆ ಮಾವ ಕೊಟ್ಟಿದ್ದನ್ನು ಸುಮ್ಮನೆ ತೆರೆದು ನೋಡಿದ್ದೆ. ಇವತ್ತು ಸರಿಯಾಗಿ ಗಮನಿಸೋಣವೆಂದು ತನ್ನ ರೂಮಿಗೆ ಬಂದಳು.
ಕಪಾಟಿನಲ್ಲಿದ್ದ ಗಂಟನ್ನು ನಿಧಾನವಾಗಿ ತೆಗೆದು ಒಂದು ಕಟ್ಟನ್ನೆತ್ತಿಕೊಂಡು ಮತ್ತೆಲ್ಲವನ್ನೂ ಅಲ್ಲಿಯೇ ಇಟ್ಟಳು. ಹಾಸಿದ್ದ ಮಂದಲಿಗೆಯ ಮೇಲೆ ಕಟ್ಟನ್ನು ಬಿಡಿಸಿಟ್ಟಳು. ಪ್ರತಿ ಪುಟದಲ್ಲೂ ಸಂಖ್ಯೆ ನಮೂದಿಸಿದ್ದರಿಂದ ಓದಲು ಅನುಕೂಲವಾಯಿತು. ಮಾವ ಮತ್ತು ತನ್ನ ಗಂಡ ಹೇಳಿದಂತೆ ಅದೊಂದು ಅತ್ಯಮೂಲ್ಯವಾದ ಮಾಹಿತಿಗಳನ್ನೊಳಗೊಂಡ ಲೇಖನಗಳೆಂದು ತಿಳಿಯಿತು. ಆಯುರ್ವೇದದ ರೂಪುರೇಷೆಗಳನ್ನು ವಿವರಿಸಿದ್ದರು. ಯಾರಿಗೇ ಆಗಲಿ ಬೇರೆ ಯಾವ ದೊಡ್ಡ ತೊಂದರೆಗಳಿಲ್ಲದಿದ್ದರೆ ಈಗ ನಾನು ಸೂಚಿಸಿರುವ ಔಷಧವನ್ನು ತಯಾರಿಸಿ ತೆಗೆದುಕೊಳ್ಳಬಹುದು ಎಂದು ಉಲ್ಲೇಖಿಸಲಾಗಿತ್ತು. ಅವುಗಳಿಂದ ಅಡ್ಡಪರಿಣಾಮಗಳಿಲ್ಲ. ಆದರೂ ಕೆಲವರ ದೇಹಕ್ಕೆ ಒಗ್ಗದಿದ್ದರೆ ಮುಂದುವರಿಸುವುದು ಬೇಡವೆಂಬ ಎಚ್ಚರಿಕೆಯನ್ನೂ ಇತ್ತಿದ್ದರು.
ದಿನನಿತ್ಯ ನಾವು ಮಾಡಿಕೊಂಡು ಕುಡಿಯುವ ಕಷಾಯಗಳನ್ನು ಋತುಮಾನಕ್ಕೆ ಅನುಸಾರವಾಗಿ ಬರೆದಿಟ್ಟಿದ್ದರು. ಅವುಗಳ ವೈಜ್ಞಾನಿಕ ಹೆಸರುಗಳು, ಜನರ ನಿತ್ಯ ಬಳಕೆಯ ಹೆಸರುಗಳನ್ನು ನಮೂದಿಸಿದ್ದರು. ನೆಗಡಿ, ಕೆಮ್ಮು, ಅರೆತಲೆನೋವು, ಹೊಟ್ಟೆಯ ತೊಂದರೆಗಳು, ಕೀಲುನೋವು ಇತ್ಯಾದಿಗಳಿಗೆ, ಚರ್ಮವ್ಯಾಧಿಗಳಾದ ಕಜ್ಜಿ, ತುರುಕೆ, ಹುಳುಕಡ್ಡಿ, ಮೊಡವೆ ಇತ್ಯಾದಿಗಳಿಗೆ, ಮೂಗೇಟು, ಬಾವು, ಇತ್ಯಾದಿಗಳು, ಅಷ್ಟೇ ಏಕೆ ಬಳಸುವ ಆಹಾರ ಕ್ರಮಗಳ ಬಗ್ಗೆ, ಏಕಾದಶಿಯ ಉಪವಾಸದ ನಂತರ ಸೇವಿಸುವ ಪದಾರ್ಥಗಳ ಹೆಸರುಗಳು, ಅವುಗಳನ್ನು ಸೇವಿಸುವುದರಿಂದಾಗುವ ಉಪಯೋಗಗಳು, ಹಬ್ಬಹರಿದಿನಗಳಲ್ಲಿ ಊಟದಲ್ಲಿ ವಿಶೇಷತೆ, ಅವುಗಳ ವೈಜ್ಞಾನಿಕ ಕಾರಣಗಳು, ಒಂದೇ ಎರಡೇ ಹತ್ತು ಹಲವಾರು ಸಂಗತಿಗಳ ಬಗ್ಗೆ ಕೂಲಂಕುಷವಾಗಿ ಉದಾಹರಣೆಗಳ ಮೂಲಕ ವಿವರಿಸಿ, ಔಷಧಗಳ ಪ್ರಮಾಣ, ಸೇವಿಸಬೇಕಾದ ಅವಧಿ, ವಸ್ತುಗಳ ಬಳಕೆ ಎಲ್ಲವನ್ನೂ ಯಾವ ಗೊಂದಲ ಗೋಜುಗಳಿಲ್ಲದೆ ಸರಳ ನಿರೂಪಣೆಯೊಂದಿಗೆ ಸ್ಪಷ್ಟ ಪಡಿಸಲಾಗಿತ್ತು.
ವೇಗವಾಗಿ ಓದಿ ಮುಗಿಸಿದ ಕೂಡಲೇ ಇದನ್ನು ಕ್ರಮವಾಗಿ ಬರೆದಿಡಲೇಬೇಕು, ಒಂದನ್ನು ಮುಗಿಸಿದ ನಂತರ ಮತ್ತೊಂದನ್ನು ಕೈಗೆತ್ತಿಕೊಳ್ಳಬೇಕು. ಹೇಗೂ ನನ್ನ ಮ್ಯೂಸಿಕ್‌ಕ್ಲಾಸ್ ಪ್ರಾರಂಭವಾಗಲು ಇನ್ನೂ ಇಪ್ಪತ್ತು ದಿನಗಳಾದರೂ ಆಗುತ್ತೆ. ಅಷ್ಟರಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನಾದರೂ ಮಾಡಿಮುಗಿಸಬೇಕು. ಹಾಳೆಗಳು ಬಣ್ಣ ಕಳೆದುಕೊಂಡು ಜೀರ್ಣಾವಸ್ಥೆಗೆ ತಲುಪುವ ಮುನ್ನ ಮಧ್ಯೆ ಮಧ್ಯೆ ಬಿಡುವು ಮಾಡಕೊಂಡು ಆದಷ್ಟು ವೇಗವಾಗಿ ಕೆಲಸವನ್ನು ಪೂರ್ತಿಗೊಳಿಸಬೇಕು ಎಂದುಕೊಂಡಳು. ಅಷ್ಟರಲ್ಲಿ ಕೆಳಗಿನಿಂದ ಅತ್ತೆಯವರು ಕರೆದದ್ದು ಕೇಳಿಸಿತು. ಲಗುಬಗೆಯಿಂದ ಅವೆಲ್ಲವನ್ನೂ ಮತ್ತೆ ಜೋಡಿಸಿಟ್ಟುಕಟ್ಟಿ ಕಪಾಟಿನಲ್ಲಿ ಎತ್ತಿಟ್ಟು ಕೆಳಗಿಳಿದು ಬಂದಳು.
“ಮಲಗಿದ್ದೆಯಾ ಭಾಗ್ಯಾ? ನಾನು ಕೂಗಿದ್ದು ತೊಂದರೆಯಾಯ್ತಾ?” ಎಂದು ಕೇಳಿದರು.
“ಇಲ್ಲಾತ್ತೆ ಮಾವನವರು ಕೊಟ್ಟಿದ್ದ ಕಡತಗಳಲ್ಲಿ ಒಂದನ್ನು ತೆಗೆದು ನೋಡುತ್ತಿದ್ದೆ. ಟೈಂ ಹೋದದ್ದೇ ಗೊತ್ತಾಗಲಿಲ್ಲ.” ಎಂದು ಮಾವನವರ ಬಗ್ಗೆ ಕೇಳಿದಳು.
“ಅವರಾಗಲೇ ದೇವಸ್ಥಾನಕ್ಕೆ ಹೋದರು. ನೀನೂ ಕೈಕಾಲುಮುಖ ತೊಳೆದು, ತಲೆ ಬಾಚಿಕೊಂಡು ಬಾ, ಭಜನೆ ಮಾಡೋಣ. ಏನಾದರೂ ತಿನ್ನುತ್ತೀಯೇನು? ಹರಳಿಟ್ಟು ಇದೆ” ಎಂದರು. “ಏನೂ ಬೇಡ ಅತ್ತೆ,” ಎಂದು ಅವರ ಆಣತಿಯಂತೆ ಸಿದ್ಧವಾಗಿ ಬಂದು ಒಂದೆರಡು ಭಜನೆಗಳನ್ನು ಹಾಡಿ ನಂತರ ಅತ್ತೆಯ ಜೊತೆಯಲ್ಲೇ ಮನೆಯಿಂದ ಸ್ವಲ್ಪ ದೂರವಿದ್ದ ಆಂಜನೇಯನ ಗುಡಿಗೆ ಹೋಗಿ ಬಂದಳು ಭಾಗ್ಯ.
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : http://surahonne.com/?p=35801
–ಬಿ.ಆರ್.ನಾಗರತ್ನ, ಮೈಸೂರು
ಸೂಪರ್
ಸೂಪರ್. ನಿಮ್ಮ ಬರವಣಿಗೆ ಹೀಗೇ ಮುಂದುವರಿಯಲಿ
ಧನ್ಯವಾದಗಳು ಪೂರ್ಣಿಮಾ ಮೇಡಂ.
ಅತ್ತೆ , ಸೊಸೆಯರ ಸಂಗೀತ ಜುಗಲ್ಬಂದಿ, ಭಾಗ್ಯಳಿಗೆ, ಔಷಧ ಮಾಹಿತಿಗಳ ಹಳೆ ಕಡತ, ಮನೆ ಹೊರಗಿನ ಕೆಲಸಗಳ ಬಗೆಗೆ ಇರುವ ಆಸಕ್ತಿ, ಅಚ್ಚುಕಟ್ಟುತನ ಎಲ್ಲವೂ ಇಷ್ಟವಾಯ್ತು. ಎಲ್ಲಕ್ಕಿಂತಲೂ, ತಮ್ಮ ಸರಳ , ಸಹಜ ಬರವಣಿಗೆ ಇನ್ನೂ ಇಷ್ಟವಾಯ್ತು… ನಾಗರತ್ನ ಮೇಡಂ… ಧನ್ಯವಾದಗಳು.
ಧನ್ಯವಾದಗಳು ಶಂಕರಿ ಮೇಡಂ..
ಓದಿ.. ತಮ್ಮ..ಅಭಿಪ್ರಾಯ ಅನಿಸಿಕೆ.. ಪ್ರೋತ್ಸಹನುಡಿಗಳು…ನಮಗೆ.. ಸ್ಫೂರ್ತಿ… ಧನ್ಯವಾದಗಳು ಮೇಡಂ…
ಹೊಂದಿಕೊಂಡು ಸಾಗುವ ಸಂಸಾರ ಸುಂದರ
ಧನ್ಯವಾದಗಳು ನಯನ ಮೇಡಂ.
ಸತ್ಸಂಪ್ರದಯಾಗಳ ಸರಳ ನಿರೂಪಣೆಯೊಂದಿಗೆ ಸುಂದರವಾಗಿ ಮುಂದುವರೆಯುತ್ತಿದೆ ಕಾದಂಬರಿ.