ಕಾದಂಬರಿ: ನೆರಳು…ಕಿರಣ 27
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..
ಹಿರಿಯರು ಹೇಳಿದ ಮಾತುಗಳೇ ಕಿವಿಯಲ್ಲಿ ಪ್ರತಿಧ್ವನಿಸತೊಡಗಿದವು. ಹೂಂ ಎಷ್ಟು ಯೋಚಿಸಿದರೂ ಅಷ್ಟೇ, ಯಾವಾಗ ಲಭ್ಯವಿದೆಯೋ ಆಗಲೇ ಆಗಲಿ. ಮುಂದೇನು ಮಾಡಬೇಕೆಂಬುದರ ಕಡೆಗೆ ಗಮನ ಹರಿಸೋಣ ಎಂದುಕೊಳ್ಳುತ್ತಿದ್ದಂತೆ ಆಕೆಯ ಗುರುಗಳಾದ ಗೌರಿಯಮ್ಮ ಹೇಳಿದ ಮಾತುಗಳು ನೆನಪಿಗೆ ಬಂದವು. “ಭಾಗ್ಯಾ, ನಿಮ್ಮ ಮನೆಯಲ್ಲಿ ಸಂಗೀತ ಕಛೇರಿ ನಡೆಸಲು ಹೊರಗೆ ಹೋಗುವುದನ್ನು ಒಪ್ಪಿಸುವುದು ಕಷ್ಟಸಾಧ್ಯ ಎನ್ನಿಸುತ್ತದೆ. ಅದಕ್ಕೇ ನಾನೊಂದು ತೀರ್ಮಾನಕ್ಕೆ ಬಂದಿದ್ದೇನೆ. ನಾನು ಪ್ರಾರಂಭಿಸಿದ ಸಂಗೀತಶಾಲೆಯನ್ನು ನೀನೇ ಮುಂದುವರೆಸಿ ನಡೆಸಿಕೊಂಡು ಹೋಗು. ಅದಕ್ಕೆ ಶಿಷ್ಯರನ್ನು ಒದಗಿಸುವ ಜವಾಬ್ದಾರಿ ನನ್ನದು. ಅಲ್ಲದೆ ಅದನ್ನು ನಡೆಸಿಕೊಂಡು ಬರುತ್ತಿದ್ದ ನನ್ನ ತಮ್ಮನ ಮಗ, ಅವನ ಹೆಂಡತಿ ವಾದ್ಯಗಳನ್ನು ನುಡಿಸುವುದನ್ನು ಕಲಿಸುವುದರಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳುತ್ತಿದ್ದಾರೆ. ನಮ್ಮ ಮನೆಗೇನೂ ನೀನು ಬರಬೇಕಾಗಿಲ್ಲ. ನಿಮ್ಮ ಮನೆಯಲ್ಲೇ ಪ್ರಾರಂಭಿಸಿ ಕಲಿಸು. ಕಲಿತ ವಿದ್ಯೆಯನ್ನು ಸಾರ್ಥಕ ಪಡಿಸಿಕೋ.” ಎಂದಿದ್ದರು. ಆಗ ಭಾಗ್ಯ “ಮೇಡಂ, ನಮ್ಮ ಮನೆಯಲ್ಲಿ ಸಂಗೀತ ಕಛೇರಿ ಮಾಡುವುದನ್ನು ಒಪ್ಪುವುದಿಲ್ಲವೆಂದು ಖಚಿತವಾಗಿ ಹೇಳುತ್ತಿದ್ದೀರಲ್ಲ ಹೇಗೆ? ಕಾರಣ ತಿಳಿದಿದ್ದರೆ ಹೇಳಿ ಬಲವಂತವೇನಿಲ್ಲ” ಎಂದಿದ್ದಳು.
ಆಗ “ ಹೂಂ.. ಇದರ ಬಗ್ಗೆ ನಿಮ್ಮ ಅತ್ತೆಯವರ ಹತ್ತಿರ ಪ್ರಸ್ತಾಪ ಮಾಡಿದಾಗ ಅವರಿಂದ ತಿಳಿದುಬಂದ ಸಂಗತಿಯಿದು. ಅವರು “ಗೌರಿಯಮ್ಮಾ, ನಮ್ಮವರ ಮುತ್ತಾತ ಸಂಗೀತ, ಜ್ಯೋತಿಷ್ಯ, ವಾದ್ಯಸಂಗೀತ ಎಲ್ಲದರಲ್ಲೂ ಪ್ರಖಾಂಡ ಪಂಡಿತರಾಗಿದ್ದರಂತೆ. ದೈವದತ್ತವಾಗಿ ಪ್ರಾಪ್ತಿಯಾಗಿದ್ದ ಜ್ಞಾನವನ್ನು ಬಲಪಡಿಸಿಕೊಂಡು ಸುತ್ತಮುತ್ತೆಲ್ಲ ಪ್ರಸಿದ್ಧರಾಗಿದ್ದರಂತೆ. ಅವರನ್ನು ಕೈಹಿಡಿದ ಪತ್ನಿಯೂ ಅಷ್ಟೇ ಪಂಡಿತೆ. ಅವರ ಸಂಗೀತ ಕಚೇರಿಗಳಲ್ಲಿ ಅವರ ಪತ್ನಿಯ ಸಾಥ್ ಇದ್ದೇ ಇರುತ್ತಿತ್ತಂತೆ. ಆಗಿನ ಕಾಲದಲ್ಲಿ ಒಂದು ಸಾರಿ ಕಾರ್ಯನಿಮಿತ್ತ ಬೇರೆ ಊರಿಗೆ ಹೋಗಿದ್ದ ಮುತ್ತಾತನವರು ಹಿಂದಿರುಗಿ ಬರುವುದು ತಡವಾಯಿತು. ಅದಕ್ಕೆ ಮೊದಲೇ ನಿಗದಿಯಾಗಿದ್ದ ಸಂಗೀತ ಕಛೇರಿ ಇವರು ಬಾರದಿದ್ದುದರಿಂದ ನಿಂತುಹೋಗುವ ಹಂತಕ್ಕೆ ಬಂದಿತಂತೆ, ಆಗ ಅದನ್ನು ಅಯೋಜಿಸಿದವರು ಮುತ್ತಾತನವರ ಹೆಂಡತಿಯನ್ನು ಒತ್ತಾಯದಿಂದ ಒಪ್ಪಿಸಿ ಪಕ್ಕವಾದ್ಯದವರ ನೆರವಿನಿಂದ ಅಚ್ಚುಕಟ್ಟಾಗಿ ಕಛೇರಿಯನ್ನು ನಡೆಸಿಬಿಟ್ಟರಂತೆ.
ಮನೆಗೆ ಹಿಂದಿರುಗಿದ ಮುತ್ತಾತನವರು ವಿಷಯ ತಿಳಿದು “ನನ್ನ ಅನುಮತಿಯಿಲ್ಲದೆ ನೀನು ಕಛೇರಿಯನ್ನು ನಡೆಸಿಕೊಟ್ಟಿದ್ದು ಅಕ್ಷಮ್ಯ ಅಪರಾಧ” ಎಂದು ಕೂಗಾಡಿದರಂತೆ. ಅತ್ತೂ ಕರೆದೂ ಕ್ಷಮೆ ಕೇಳಿಕೊಂಡರೂ ಜಗ್ಗಲಿಲ್ಲವಂತೆ. ಮನೆಯಲ್ಲಿನ ಹಿರಿಯರು ಎಷ್ಟು ಸಮಧಾನ ಹೇಳಿದರೂ ಬಗ್ಗದೇ ತಮ್ಮ ಹೆಂಡತಿಯ ಹತ್ತಿರ ಮಾತನಾಡುವುದನ್ನೇ ಬಿಟ್ಟುಬಿಟ್ಟರಂತೆ. ಅದನ್ನೇ ಅವರು ಸಾಯುವವರೆಗೂ ಸಾಧಿಸಿದರಂತೆ. ಪಾಪ ಆ ಸಾಧ್ವಿ ಇಪ್ಪತ್ತೆರಡು ವರ್ಷಗಳ ಕಾಲ ಅದೇ ಕೊರಗಿನಲ್ಲಿದ್ದು ಜೀವ ಬಿಟ್ಟರಂತೆ. ಅಂದಿನಿಂದ ಅ ಮನೆತನದಲ್ಲಿನ ಯಾವ ಹೆಣ್ಣುಮಗಳೂ ಸಂಗೀತ ಕಛೇರಿ ನಡೆಸಿಲ್ಲ. ಇದು ಮನೆತನಕ್ಕೆ ಅಂಟಿದ ಶಾಪದಂತೆ ಮುಂದುವರೆದಿದೆ. ನನ್ನ ಮಗ ನನ್ನವರ ಮುತ್ತಾತನ ಪೂರ್ತಿ ಗುಣಗಳನ್ನು ಆವಾಹನೆ ಮಾಡಿಕೊಳ್ಳದಿದ್ದರೂ ಬಹುತೇಕ ಹೋಲುತ್ತಾನೆ. ಅಂದರೆ ಶೀಘ್ರ ಮುಂಗೋಪಿ, ತನ್ನದೇ ನಿರ್ಧಾರದಂತೆ ನಡೆಯಬೇಕೆಂಬ ಹಠ. ಆದ್ದರಿಂದ ವಿಷಯವನ್ನು ಕೆದಕಿ ಉಪದ್ರವವನ್ನು ಮೈಮೇಲೆ ಎಳೆದುಕೊಳ್ಳುವುದು ಬೇಡ. ಇದರಿಂದ ನನ್ನ ಸೊಸೆಗೆ ತೊಂದರೆಯಾದೀತು. ಅನಿವಾರ್ಯ ಇರುವುದು ಒಬ್ಬನೇಮಗ. ಅವನ ಗುಣಗಳನ್ನು ಅರಿತವರು ನಾವು ಅವನಿಗೆ ವಿರುದ್ಧವಾಗಿ ಹೋಗುವ ಧೈರ್ಯವಿಲ್ಲ. ಅತ್ಯಂತ ಪ್ರತಿಭಾವಂತೆಯಾದ ನನ್ನ ಸೊಸೆಗೆ ಅನ್ಯಾಯ ಮಾಡುತ್ತಿದ್ದೀವೇನೋ ಎಂದೆನ್ನಿಸುತ್ತದೆ. ಮನೆ ಪಾಠಗಳನ್ನು ಪ್ರಾರಂಭಿಸಲು ಅಡ್ಡಿಪಡಿಸಲಾರ ಎನ್ನಿಸುತ್ತದೆ. ಅದೂ ಪ್ರಸ್ತಾಪ ನಿಮ್ಮ ಮುಖಾಂತರವೇ ಬರಬೇಕು. ಇದೇ ನಮ್ಮ ಅಭಿಲಾಷೆ.” ಎಂದು ಹೇಳಿದರು ಸೀತಮ್ಮ. ಅದಕ್ಕೇ ನಾನು ಹೇಳಿದ್ದು. ಈ ಗಡಿಬಿಡಿಯೆಲ್ಲಾ ಮುಗಿಯಲಿ ಸಮಯ ನೋಡಿಕೊಂಡು ಕೇಳುತ್ತೇನೆ” ಎಂದಿದ್ದರು ಗೌರಿಯಮ್ಮ.
“ಓ ! ಇಷ್ಟೆಲ್ಲಾ ಹಿನ್ನೆಲೆಯಿದೆಯಾ? ನನಗೇನೂ ತಿಳಿದಿಲ್ಲ ಮೇಡಂ, ಅವರಿಗೆ ಮೂರು ಜನ ಮಕ್ಕಳಿದ್ದರೆಂದು ಕೇಳಿದ ನೆನಪು” ಎಂದಿದ್ದಳು ಭಾಗ್ಯ.
“ಹೌದು ಅವರೆಲ್ಲ ಈ ಪ್ರಸಂಗ ನಡೆಯುವ ಮುನ್ನ ಹುಟ್ಟಿದವರು.”
“ಬೇಡಪ್ಪಾ ಬೇಡ, ಆ ಸುದ್ಧಿಯೇ ಬೇಡ, ನನಗೆಷ್ಟು ಅನುಕೂಲ ಮಾಡಿಕೊಡುತ್ತಾರೆಯೋ ಅಷ್ಟೇ ನನಗೆ ಸಾಕು. ಮೊದಲು ಮನೆ ಕುಟುಂಬ, ನಂತರ ಮಿಕ್ಕದ್ದು ಎಂದುಕೊಂಡಿದ್ದೆ. ಹಾಗೇ ನಿರಾಳವಾಗಿದ್ದು ಅದನ್ನು ಪ್ರಸ್ತಾಪ ಮಾಡಲು ಗೌರಿಯಮ್ಮನವರನ್ನು ಒಪ್ಪಿಸಿ ನಿಶ್ಚಿಂತೆಯಿಂದಿದ್ದೆ. ಈಗಲೂ ಈ ತರಲೆ ಯೋಚನೆಗಳನ್ನು ಒತ್ತಟ್ಟಿಗೆ ಸರಿಸಿಬಿಡೋಣ. ಪಾಲಿಗೆ ಬಂದಷ್ಟೇ ಪಂಚಾಮೃತವೆಂದು ಸ್ವೀಕರಿಸೋಣ” ಎಂಬ ನಿರ್ಧಾರದೊಂದಿಗೆ ನಿದ್ರಾದೇವತೆಯನ್ನು ಆಹ್ವಾನಿಸಿದಳು ಭಾಗ್ಯ.
ಬೆಳಗ್ಗೆ ಹಿರಿಯಜ್ಜ ನಸುಕಿನಲ್ಲಿಯೇ ಎದ್ದವರೇ ಪ್ರಾತಃವಿಧಿಗಳನ್ನು ಮುಗಿಸಿ ಸ್ನಾನ, ಪೂಜೆ ಮುಗಿಸುವಷ್ಟರಲ್ಲಿ ಅಡುಗೆ ಸಿದ್ಧವಾಯಿತು. ಹಿಂದಿನ ರಾತ್ರಿಯೇ ಹಿರಿಯಜ್ಜ ಪ್ರಯಾಣದ ದಿವಸವಾದ್ದರಿಂದ ಊಟ ಸರಳವಾಗಿರಲಿ ಎಂದು ಅಪ್ಪಣೆ ಕೊಡಿಸಿದ್ದರು. ಮಿಕ್ಕವರೂ ಅವರ ಮಾತನ್ನು ಅನುಮೋದಿಸಿದ್ದರಿಂದ ತೊವ್ವೆ, ತಿಳಿಸಾರು, ಪಲ್ಯ, ಹುರುಳಿ ಹಪ್ಪಳ, ಉಪ್ಪಿನಕಾಯಿ, ಅನ್ನ, ಮೊಸರು. ಸೀತಮ್ಮನವರ ಆಹ್ವಾನದ ಮೇರೆಗೆ ಅವರ ಅಣ್ಣನ ಮಗನೂ ಬಂದಿದ್ದವನು ವ್ಯಾನ್ ತಂದಿದ್ದರಿಂದ ರೈಲು, ಬಸ್ಸುಗಳಿಗಾಗಿ ಕಾಯುವುದಿರಲಿಲ್ಲ. ಆದ್ದರಿಂದ ಆತಂಕವಿಲ್ಲದೆ ಸಾವಕಾಶವಾಗಿ ಊಟ ಮುಗಿಸಿ, ತಾಂಬೂಲ ಮೆದ್ದಾದ ಮೇಲೆ ಹಿರಿಯಜ್ಜ “ಭಾಗ್ಯಮ್ಮಾ, ನಿಮ್ಮಗಳದ್ದೆಲ್ಲಾ ಊಟವಾಯಿತೇನಮ್ಮಾ?” ಎಂದು ಕೇಳಿದರು.
ಅವರ ಮಾತನ್ನು ಕೇಳಿಸಿಕೊಂಡ ಸೀತಮ್ಮನವರು “ಭಾಗ್ಯಾ, ಮಿಕ್ಕ ಕೆಲಸಗಳನ್ನು ನಾರಾಣಪ್ಪ ನೋಡಿಕೊಳ್ಳುತ್ತಾರೆ. ಅವರು ಹೊರಟರೂಂತ ಕಾಣುತ್ತದೆ ಕಳುಹಿಸಿ ಬರೋಣ” ಎಂದರು.
ಒಂದು ದೊಡ್ಡ ಹರಿವಾಣದಲ್ಲಿ ಎಲೆ ಅಡಿಕೆ, ಹೂ, ಹಣ್ಣುಗಳು, ಒಂದು ರೇಷಿಮೆಯ ಸೀರೆ, ಕಣ, ಇಟ್ಟು ಭಾಗ್ಯಳನ್ನು ಕೂಡಿಸಿ ಸೀತಮ್ಮನ ಅಣ್ಣನ ಮಗನ ಹೆಂಡತಿಯ ಕೈಯಿಂದ ಅವಳಿಗೆ ಅರಿಶಿಣ ಕುಂಕುಮವಿಟ್ಟು ಹೂಮುಡಿಸಿ ಮಡಿಲು ತುಂಬಿಸುವಂತೆ ಹೇಳಿದರು ಹಿರಿಯಜ್ಜ.
“ಇದೆಲ್ಲಾ ಯಾಕಜ್ಜಾ ನನಗೆ ನಿಮ್ಮ ಆಶೀರ್ವಾದವೊಂದಿದ್ದರೆ ಸಾಕು”ಎಂದಳು ಭಾಗ್ಯ.
“ಆಶೀರ್ವಾದ ಯಾವಾಗಲೂ ಇರುತ್ತದೆ. ಆದರೆ ಚಿಕ್ಕ ವಯಸ್ಸಿಗೇ ಇಷ್ಟು ಒಳ್ಳೆಯ ಸಾಧನೆ ಮಾಡಿದ್ದೀಯೆ. ಆ ಖುಷಿಗೆ ನನ್ನ ಕಡೆಯಿಂದ ಒಂದು ಚಿಕ್ಕ ಉಡುಗೊರೆ. ನಿನಗೇನೂ ಕೊರತೆಯಿಲ್ಲ ಅದು ನನಗೂ ಗೊತ್ತು. ಇರಲಿ ನೀನು ಕಲಿತ ವಿದ್ಯೆಯನ್ನು ನಾಲ್ಕು ಜನರಿಗೆ ಹಂಚು. ಇನ್ನೂ ಹೆಚ್ಚಿನದನ್ನು ಸಾಧಿಸು. ಮುಂದೆ ಕಲಿಯುವವರಿಗಾಗಿ ಹೇಳಿಕೊಡುವುದಷ್ಟೆ ಅಲ್ಲ ರಾಗಗಳ ಬಗ್ಗೆ ಬರೆದಿಡು. ಶಿಷ್ಯರನ್ನು ತಯಾರು ಮಾಡು. ಸಾರ್ಥಕತೆಯನ್ನು ಪಡೆ.” ಎಂದು ತುಂಬು ಹೃದಯದಿಂದ ಅಶೀರ್ವಾದ ಮಾಡಿದರು. ಭಾಗ್ಯಳು ಅವರಿಗೆ ಕಾಲುಮುಟ್ಟಿ ನಮಸ್ಕರಿಸಿದಳು. ಇತರ ಹಿರಿಯರಿಗೂ ನಮಸ್ಕರಿಸಿದಳು. ಹೆಣ್ಣು ಮಕ್ಕಳಿಗೆ ಅರಿಸಿನ, ಕುಂಕುಮ ತಾಂಬೂಲವನ್ನಿತ್ತಳು.
ಅವರೆಲ್ಲರನ್ನೂ ಬೀಳ್ಕೊಂಡು ಮನೆಯವರೊಡನೆ ಒಳಕ್ಕೆ ಬಂದ ಭಾಗ್ಯಳಿಗೆ ಯಾರ ಬಾಯಲ್ಲೂ ಹಿರಿಯಜ್ಜನ ಮೂಲಕ ಸಂಗೀತ ತರಗತಿಯನ್ನು ನಡೆಸುವ ಬಗ್ಗೆ ಹೇಳಿದ್ದೇ ಸುದ್ಧಿ. ಅಪ್ಪಿತಪ್ಪಿಯೂ ಕಛೇರಿ ಮಾಡುವ ಬಗ್ಗೆ ಅವರೂ ಹೇಳಲಿಲ್ಲ, ಮನೆಯವರ ಬಾಯಲ್ಲಿಯೂ ಸುಳಿಯಲಿಲ್ಲ. ಹಿಂದಿನ ಪ್ರಸಂಗ, ಅದಕ್ಕೆ ಕಾರಣಕರ್ತನಾದ ಆ ಪುರುಷ ಮತ್ತೊಮ್ಮೆ ಅವತರಿಸಿ ಬಂದಿದ್ದಾನೆಂಬ ನಂಬಿಕೆಯಿರಬೇಕು. ಅವ್ವಯ್ಯಾ ನೆನಪಿಸಿಕೊಂಡರೇ ಭಯ. ಎಂದು ಮನದಲ್ಲಿಯೇ ಅಂದುಕೊಳ್ಳುತ್ತಾ ಬಿಟ್ಟ ಕೆಲಸವೇನಾಗಿದೆಯೆಂದು ನೋಡಲು ಅಡುಗೆ ಮನೆಯತ್ತ ಹೆಜ್ಜೆ ಹಾಕಿದಳು.
ಒಳಕ್ಕೆ ಬಂದ ಭಾಗ್ಯಳನ್ನು ಕಂಡು ನಾರಾಣಪ್ಪ “ಭಾಗ್ಯಮ್ಮಾ ಎಲ್ಲ ಕೆಲಸ ಮುಗಿದಿದೆ. ಒಂದು ವಾರದಿಂದ ಬೇಡ ಎಂದರೂ ಕೇಳದೆ ನನ್ನೊಡನೆ ಅಡುಗೆ ಮನೆ ಸೇರಿ ಸಾಕಾಗಿದ್ದೀರಿ. ಹೋಗಿ ವಿಶ್ರಾಂತಿ ತೊಗೋಳ್ಳಿ. ನಾಲ್ಕು ಗಂಟೆಯವರೆಗೆ ಅಡುಗೆ ಮನೆಯ ಬಾಗಿಲು ಬಂದ್” ಎಂದು ಹೇಳಿ ಆ ದಿನದ ಪೇಪರ್ ಕೈಯಲ್ಲಿ ಹಿಡಿದು ತಮ್ಮ ಕೊಠಡಿಯತ್ತ ಹೋಗಲು ತಿರುಗಿದರು.
ವಿಧಿಯಿಲ್ಲದೆ ಭಾಗ್ಯ ಅಲ್ಲಿಂದ ಹೊರಬಂದಳು. ಹಾಲಿನಲ್ಲಿ ಹಾಸಿದ್ದ ಜಮಖಾನೆಯ ಮೇಲೆ ಅತ್ತೆ ಹಿರಿಯಜ್ಜ ಕೊಟ್ಟಿದ್ದ ಹರಿವಾಣದಲ್ಲಿದ್ದ ಹಣ್ಣುಗಳನ್ನು ತೆಗೆದು ಇರಿಸುತ್ತಿದ್ದರು. ಮಾವ ಜೋಕಾಲಿಯ ಮೇಲೆ ಕುಳಿತು ಯಾವುದೋ ಪುಸ್ತಕ ನೋಡುತ್ತಿದ್ದರು. ಗಂಡನೆಲ್ಲೂ ಕಾಣಿಸಲಿಲ್ಲ. ಎಲ್ಲಿ ಹೋದರೂ..ರೂಮಿಗೇನಾದರೂ ..ಊಹೂ.. ಇಷ್ಟು ಹೊತ್ತಿನಲ್ಲಿ ಅವರಿಗೆ ಮಲಗುವ ಅಭ್ಯಾಸವಿಲ್ಲ.
“ಓ ಭಾಗ್ಯ, ತೊಗೋ ಈ ಸೀರೆ, ಅಂಚು ಹೊಲಿದು ಬ್ಲೌಸ್ ಸಿದ್ಧಪಡಿಸಿಕೋ. ಯಾವಾಗಲಾದರು ಉಡಲು ಆಗುತ್ತದೆ. ಹೂಂ.ಹಬ್ಬಹರಿದಿನಗಳಲ್ಲಿ ಮಾತ್ರ ಯಥಾಪ್ರಕಾರ ಹದಿನಾರು ಗಜ, ಈ ಹಿರಿಯರ ತಲೆಗಳೇ ಹೀಗೆ. ಮಣಭಾರ ಹೊತ್ತುಕೊಂಡು ಓಡಾಡಿದವರಿಗೇ ಗೊತ್ತು ಅದರ ಪಾಡು. ಹಗುರಾಗಿರೋದಾದ್ರೂ ತಂದಿದ್ರೆ ಚಂದಿತ್ತು.” ಎಂದರು ಸೀತಮ್ಮ.
“ಹೋಗಲಿ ಬಿಡಿ ಅತ್ತೆ, ಹಿರಿಯರು ಪ್ರೀತಿಯಿಂದ ಆಶೀರ್ವಾದ ಮಾಡಿ ಕೊಟ್ಟಿದ್ದಾರೆ. ಮದುವೆಯಲ್ಲಿ ಕೊಟ್ಟ ಸೀರೆಗಳು ಬಣ್ಣ ಕುಂದಿವೆ. ಉಟ್ಟುಕೊಳ್ಳೋಣ.” ಎಂದು ಸೀರೆಯನ್ನು ಕೈಗೆ ತೆಗೆದುಕೊಂಡಳು ಭಾಗ್ಯ.
“ಹಾ..ಭಾಗ್ಯಾ ನೀನು ಒಳಗೆ ಹೋಗಿದ್ದಾಗ ಗೌರಿಯಮ್ಮ ಅವರ ಶಿಷ್ಯನನ್ನು ಕಳಿಸಿದ್ದರು. ಶೀನ ಹೋಗಿರುವುದು ಬಹುಶಃ ಮ್ಯೂಸಿಕ್ ಕ್ಲಾಸ್ ಬಗ್ಗೆ ಮಾತನಾಡಲಿರಬಹುದು. ಅವರು ಮನೆಗೆ ಬಂದಿದ್ದ ನೆಂಟರಿಷ್ಟರೆಲ್ಲ ಹಿಂತಿರುಗಿ ಹೋಗುವುದನ್ನು ಕಾಯುತ್ತಿದ್ದರೆನ್ನಿಸುತ್ತದೆ. ನೋಡಿ ಹೇಳಿ ಕಳುಹಿಸಿದ್ದಾರೆ. ಸುಖಾ ಸುಮ್ಮನೆ ಕಾಲ ಕಳೆಯುವ ಜಾಯಮಾನದವರಲ್ಲ. ಅವರು ನಡೆಸಿಕೊಂಡು ಬರುತ್ತಿದ್ದ ಸಂಗೀತ ಶಾಲೆಯನ್ನು ಇದುವರೆಗೆ ಅವರ ತಮ್ಮನ ಮಗ, ಸೊಸೆ ಮುಂದುವರಿಸಿಕೊಂಡು ಬರುತ್ತಿದ್ದರು. ಅದು ನಿನಗೂ ಗೊತ್ತು. ಅದನ್ನವರು ನಿನಗೆ ಒಪ್ಪಿಸಲು ಸಿದ್ಧರಾಗಿದ್ದಾರೆ. ಅವರುಗಳಿಗೆ ವಾದ್ಯ ಸಂಗೀತ ಕಲಿಯಲು ಬರುವವರೇ ಹೆಚ್ಚಾಗಿದ್ದು ಓಕಲ್ ಸಂಗೀತ ಕಲಿಸಲು ಸಮಯ ಸಾಕಾಗುತ್ತಿಲ್ಲ. ಮಿಗಿಲಾಗಿ ಅದರಲ್ಲಿ ಒಲವೂ ಕಡಿಮೆಯಾಗಿದೆಯಂತೆ. ಅದಕ್ಕೆ ಇಲ್ಲೇ ನಮ್ಮ ಮನೆಯಲ್ಲಿಯೆ ಪ್ರಾರಂಭಿಸಬೇಕೆಂಬುದು ಗೌರಿಯಮ್ಮನವರ ಅಭಿಲಾಷೆ. ನನ್ನ ಹತ್ತಿರ ಹೇಳಿದ್ದರು. ಈಗ ಅದೇ ವಿಷಯ ಕೇಳಲು ಇರಬೇಕು ಬಹುಶಃ ಶೀನಿ ಒಪ್ಪುತ್ತಾನೆನ್ನಿಸುತ್ತದೆ.” ಎಂದರು.
ಗೌರಿಯಮ್ಮನ ಬಾಯಿಂzಲೇ ಇದನ್ನು ಕೇಳಿದ್ದ ಭಾಗ್ಯ ಹೊರಗಡೆ ಅದನ್ನು ತೋರಗೊಡದೆ “ಹೌದೇ ! ಅತ್ತೇ, ಅವರು ಒಪ್ಪಿದರೆ ಖಂಡಿತಾ ನಡೆಸಿಕೊಂಡು ಹೋಗುತ್ತೇನೆ. ಈ ಊರಿನಲ್ಲಿದ್ದಾರಲ್ಲಾ ಮಾವಯ್ಯನವರ ದೊಡ್ಡಪ್ಪನವರು ಸಂಗೀತ ಪರೀಕ್ಷೆ ಮುಗಿದಾಗಿನಿಂದ, ಯಾವಾಗ ರಿಸಲ್ಟ್ ಬರಬಹುದು? ಮುಂದೇನು ಮಾಡುತ್ತೀ? ಕೆಲಸಕ್ಕೆ ಹೋಗ್ತೀಯಾ? ಎಂದೆಲ್ಲಾ ಪ್ರಶ್ನೆಗಳನ್ನು ಕೇಳುತ್ತಿದ್ದರು. ಇಗ ಇಷ್ಟೊಂದು ದಿನವಾಯ್ತು ಅವರು ಪೂಜೇಲೂ ಕಾಣಿಸಲಿಲ್ಲ, ಮನೆಗೂ ಬಂದಿಲ್ಲ. ಏಕೆ ಅನಾರೋಗ್ಯವೇನಾದರೂ ಕಾಡಿತ್ತೇ” ಎಂದಳು ಭಾಗ್ಯ.
ಅಲ್ಲಿಯೇ ಇದ್ದ ಜೋಯಿಸರು “ಮಗೂ ಭಾಗ್ಯಾ, ಅವರಿಗೇನೂ ಆಗಿಲ್ಲ. ಒಂದು ಗುಂಪಿನ ಜೊತೆಯಲ್ಲಿ ಉತ್ತರಭಾರತದ ಪ್ರವಾಸ ಹೋಗಿದ್ದಾರೆ. ಹಿಂತಿರುಗಿ ಬಂದಮೇಲೆ ಪ್ರಸಾದ ಹಿಡಿದುಕೊಂಡು ಬರುತ್ತಾರೆ ಯೋಚಿಸಬೇಡ. ಆದರೆ ಅವರ ಮುಂದೆ ಯಾವ ವಿಷಯವನ್ನು ಕೇಳಿದರೂ ಬಾಯಿ ಬಿಡಬೇಡ. ಹಿರಿಯರನ್ನು ಕೇಳಿ ಎಂದುಬಿಡು. ಇಲ್ಲದ ಸಂಗತಿಗೆ ಬಣ್ಣಕಟ್ಟಿ ಹೇಳುವುದು ಅವರ ಸ್ವಭಾವ. ಶೀನಿ ಅವರನ್ನು ಎಷ್ಟೇ ತೆಗಳಿದರೂ ಅವರ ಮಾತಿಗೆ ಸ್ವಲ್ಪ ಯೋಚಿಸುವುದು ಹೆಚ್ಚು.” ಎಂದರು.
ಮದುವೆಯಾಗಿ ಬಂದಾಗಿನಿಂದ ಆಗಾಗ್ಗೆ ಎಡತಾಕುತ್ತಿದ್ದ ಆ ತಾತ ಅಧಿಕ ಪ್ರಸಂಗಿ. ಮಾವ ಹೇಳಿದಂತೆ ಗಂಡನು ಅವರ ಮಾತುಗಳನ್ನು ಗಮನವಿಟ್ಟು ಕೇಳಿ ಅದನ್ನು ಅರ್ಥೈಸಿಕೊಳ್ಳುತ್ತಿದ್ದ ರೀತಿ ಎಲ್ಲವನ್ನೂ ಗಮನಿಸಿದ್ದಳು. ಎಚ್ಚರಿಕೆ ವಹಿಸುವುದು ನನಗೇ ಹಿತ ಎಂದುಕೊಂಡು “ಹಾಗೇ ಆಗಲಿ ಮಾವಾ” ಎಂದಳು ಭಾಗ್ಯ.
“ಭಾಗ್ಯಮ್ಮಾ ಇಲ್ನೋಡು, ನನ್ನ ಮುತ್ತಾತ ಸಂಗೀತದಲ್ಲಿನ ರಾಗಗಳ ಬಗ್ಗೆ ಬಹಳಷ್ಟು ಅಧ್ಯಯನ ಮಾಡಿರುವ ಬಗ್ಗೆ ಮಾಹಿತಿಗಳಿವೆ. ಕೀರ್ತನೆಗಳು, ಭಕ್ತಿಗೀತೆಗಳು, ಸಂಪ್ರದಾಯದ ಹಾಡುಗಳು, ಭಜನೆಗಳು, ಪೌರಾಣಿಕ ಹರಿಕಥೆಗಳು, ಒಂದೇ ಎರಡೇ ಸಾಕಷ್ಟು ಸಂಗ್ರಹವಿದೆ. ಇವನ್ನೆಲ್ಲ ಸರಿಯಾಗಿ ಪರಿಶೀಲಿಸಿ ಸಕ್ರಮವಾಗಿ ಬರೆದು ನಿನ್ನ ಗುರುಗಳಾದ ಗೌರಿಯಮ್ಮನವರಿಗೆ ತೋರಿಸು. ನಾನೂ ನನ್ನ ಗುರುಗಳಾದ ರಾಘವೇಂದ್ರರಿಗೆ ತೋರಿಸಿ ಅವರ ಮಾರ್ಗದರ್ಶನ ಪಡೆದು ಪುಸ್ತಕ ಮಾಡಿಸೋಣ. ಯಾರಿಗಾದರೂ ಉಪಯೋಗವಾಗುತ್ತದೆ. ಇದೋ ನೋಡು, ಅವರು ಆಯುರ್ವೇದ ಪಂಡಿತರೂ ಆಗಿದ್ದರು. ಆ ತಳಹದಿಯ ಮೇಲೆ ಸರಳವಾಗಿ ಸಾಮಾನ್ಯ ಜನರಿಗೂ ಉಪಯೋಗವಾಗುವ ಮನೆಮದ್ದುಗಳನ್ನು ಉಪಯೋಗಿಸುವ ವಿಧಾನ, ಬಳಸುವ ಅವಧಿ, ಎಲ್ಲವನ್ನೂ ದಾಖಲಿಸಿದ್ದಾರೆ. ಇನ್ನು ಹಬ್ಬಹರಿದಿನಗಳ ಬಗ್ಗೆ ಅಭ್ಯಾಸ ಮಾಡಿ ಬಹಳ ವಿವರವಾಗಿ ಬರೆದ ಲೇಖನಗಳಿವೆ. ಪುಸ್ತಕದ ಕೈಬರಹಗಳು ತುಂಬ ಹಳೆಯದಾಗಿರುವುದರಿಂದ ಜೋಪಾನವಾಗಿ ನೋಡಬೇಕು. ನಾನೇ ಮಾಡಬೇಕೆಂಬ ಹಂಬಲವಿದ್ದರೂ ಸಾಧ್ಯವಾಗಲಿಲ್ಲ. ನಿನ್ನ ಬುದ್ಧಿಮತ್ತೆ ನೋಡಿದ ನನಗೆ ಇದು ನಿನ್ನಿಂದ ಸಾಧ್ಯವಾಗುತ್ತದೆಂದು ತೆಗೆದಿಟ್ಟೆ.” ಎಂದು ಹಾಳೆಗಳ ಕಟ್ಟುಗಳು ಪ್ರತಿಯೊಂದನ್ನೂ ದಾರದಿಂದ ಸುತ್ತಿ ಬಟ್ಟೆಯಲ್ಲಿ ಇಟ್ಟು ಗಂಟಿಕ್ಕಿದ್ದನ್ನು ಭಾಗ್ಯಳ ಕೈಗಿಟ್ಟು “ಇವನ್ನು ಜತನವಾಗಿ ಕಾಪಾಡಿಕೊಂಡು ಬಂದಿದ್ದೇನೆ, ನಿಧಾನವಾಗಿ ಬಿಡಿಸಿ ಓದಿ ನಾನು ಹೇಳಿದ್ದನ್ನು ಮಾಡು ಭಾಗ್ಯಮ್ಮಾ. ಅವಸರವೇನಿಲ್ಲ.” ಎಂದರು.
“ಹಳೆಯ ಕಾಲದ ಬರಹ ನಿನಗೆ ಅರ್ಥವಾಗುತ್ತಾ ಭಾಗ್ಯಾ” ಎಂದು ಕೇಳಿದರು ಸೀತಮ್ಮ.
“ ಓ ಎಂಥಹ ಬರಹವಾದರೂ ಓದುತ್ತೇನೆ ಅತ್ತೆ, ಸ್ವಲ್ಪ ನಿಧಾನವಾಗುತ್ತದೆ. ನನಗೆ ಇಂತಹ ಕೆಲಸಗಳೆಂದರೆ ಬಹಳ ಇಷ್ಟ.” ಎಂದು ಬಹಳ ಆಸಕ್ತಿಯೊಡನೆ ಗಂಟುಗಳನ್ನು ಎತ್ತಿಕೊಂಡು, ಅತ್ತೆಯವರು ಕೊಟ್ಟ ಸೀರೆಯನ್ನೂ ಹಿಡಿದುಕೊಂಡು ತನ್ನ ರೂಮಿನ ಕಡೆಗೆ ನಡೆದಳು ಭಾಗ್ಯ.
“ಅಬ್ಬಾ ಈ ಹುಡುಗಿಯ ಬಾಯಲ್ಲಿ ಬರಲ್ಲಾ ಅನ್ನುವ ಮಾತೇ ಇಲ್ಲವಲ್ಲಾ,” ಎಂದು ಮನದಲ್ಲಿಯೇ ಅಂದುಕೊಂಡು ಪ್ರತ್ಯೇಕಿಸಿದ್ದ ಹಣ್ಣುಗಳನ್ನು ಎತ್ತಿಕೊಂಡು ಒಳಗಿರಿಸಲು ಹೋದರು ಸೀತಮ್ಮ.
(ಮುಂದುವರಿಯುವುದು)
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : http://surahonne.com/?p=35798
–ಬಿ.ಆರ್.ನಾಗರತ್ನ, ಮೈಸೂರು
Beautiful story
ಧನ್ಯವಾದಗಳು ನಯನ ಮೇಡಂ..
ಹಳೆಯ ಕಾಲದ ನೆನಪು..
ಬಹುಮುಖ ಪ್ರತಿಭೆ ಭಾಗ್ಯಳ ಪಾತ್ರ ಬಹಳ ಇಷ್ಟವಾಯ್ತು. ಸ್ನಿಗ್ಧ ಜಲದ ಹರಿವಿನಂತೆ ಸಾಗುತ್ತಿರುವ ಕಥಾ ಸರಣಿಯು ಬಹಳ ಚೆನ್ನಾಗಿದೆ .. ಧನ್ಯವಾದಗಳು ಮೇಡಂ.
ಧನ್ಯವಾದಗಳು ಸುಧಾ ಮೇಡಂ.
ಕಾದಂಬರಿ ಚೆನ್ನಾಗಿ ಸಾಗುತ್ತಿದೆ. ತಂಗಿ.
ಧನ್ಯವಾದಗಳು ಅಕ್ಕ.
ಧನ್ಯವಾದಗಳು ಶಂಕರಿ ಮೇಡಂ
ಕಾದಂಬರಿ ಚೆನ್ನಾಗಿ ಸಾಗುತ್ತಿದೆ
ಧನ್ಯವಾದಗಳು ಪದ್ಮಿನಿ ಮೇಡಂ.
ಕಾದಂಬರಿ ಕುತೂಹಲಭರಿತ ತಿರುವುಗಳನ್ನು ಪಡೆದುಕೊಳ್ಳುತ್ತಿರುವುದು ಓದುವ ಆಸಕ್ತಿಯನ್ನು ಕೆರಳಿಸುತ್ತಿದೆ. ಅಭಿನಂದನೆಗಳು ಗೆಳತಿ ನಾಗರತ್ನ ಅವರಿಗೆ.