ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 5
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..
ಸತ್ಯಾಗ್ರಹಿ-ವಿಜ್ಞಾನಿಗಳು:
1767ರಲ್ಲಿ ಈಸ್ಟ್ ಇಂಡಿಯಾ ಕಂಪೆನಿ “Survey of India” ಎಂಬ ಸಂಸ್ಥೆಯನ್ನು ಆರಂಭಿಸಿತ್ತು. ಇಲ್ಲಿ ಗಣಿತಜ್ಞರಾಗಿ ನೇಮಕ ಆಗಿದ್ದವರು ರಾಧಾನಾಥ ಸಿಕ್ದರ್. ಈ ಸಂಸ್ಥೆಯು ಕಂಪೆನಿಯ ವಶದಲ್ಲಿದ್ದ ಭಾರತ ಉಪಖಂಡದ ಎಲ್ಲಾ ಭಾಗದ ಎಲ್ಲಾ ದತ್ತಾಂಶಗಳನ್ನು ಸಂಗ್ರಹಿಸಿತು. ಈ ಸಂಸ್ಥೆಯಲ್ಲಿ ಕಷ್ಟಪಟ್ಟು ದುಡಿದ ಭಾರತೀಯರನ್ನು ಬ್ರಿಟಿಷ್ ಮ್ಯಾಜಿಸ್ಟ್ರೇಟ್ “ಪಹರಿ ಕೂಲಿ”ಗಳು ಎಂದು ಅವಮರ್ಯಾದಿಸಿದಾಗ ಸಿಕ್ದರ್ ಅದನ್ನು ವಿರೋಧಿಸುವ ಧೈರ್ಯ ತೋರಿದರು. ಅದನ್ನು ಅಪರಾಧ ಎಂದು ಪರಿಗಣಿಸಿ ಮ್ಯಾಜಿಸ್ಟ್ರೇಟ್ ಸಿಕ್ದರ್ ಅವರಿಗೆ 200 ದಂಡ ವಿಧಿಸಿದರೆ ಸಿಕ್ದರ್ ಅವರ ಜೊತೆಗಾರರು ತಮ್ಮ ಘನತೆಯನ್ನು ಎತ್ತಿಹಿಡಿದ ಪ್ರಸಂಗ ಇದು ಎಂದು ಸಂಭ್ರಮಿಸಿದರು!
ಪ್ರಮಥನಾಥ ಬೋಸ್ “ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ” ಸಂಸ್ಥೆಯಲ್ಲಿ ಗ್ರೇಡೆಡ್ ಅಧಿಕಾರಿಯಾಗಿ 1880ರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಅವರು ಪ್ರತಿಭಾ ವಿದ್ಯಾರ್ಥಿವೇತನ ಪಡೆದು ಲಂಡನ್ನಿನ “ರಾಯಲ್ ಸ್ಕೂಲ್ ಆಫ್ ಮೈನ್ಸ್” ನಲ್ಲಿ ವಿದ್ಯಾಭ್ಯಾಸ ಮಾಡಿದವರು; ರಸಾಯನಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಭೂಗೋಳ ಶಾಸ್ತ್ರಗಳನ್ನು ಕರತಲಾಮಲಕ ಮಾಡಿಕೊಂಡಿದ್ದ ವೃತ್ತಿಪರ ಪ್ರತಿಭಾವಂತ ಭೂಗರ್ಭಶಾಸ್ತ್ರಜ್ಞರಾಗಿದ್ದರು. ಜಿಯೋಲಾಜಿಕಲ್ ಸರ್ವೇಗೆ ಸಂಬಂಧಿಸಿದಂತೆ 13 ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದರು. ಆದರೂ ಪದೋನ್ನತಿಯನ್ನು ಕೊಡುವ ಸಂದರ್ಭದಲ್ಲಿ ಅವರಿಗೆ ಡೈರೆಕ್ಟರ್ ಹುದ್ದೆಯನ್ನು ಕೊಡದೆ ಸರ್ಕಾರ ಅವರಿಗಿಂತ 10 ವರ್ಷ ಕಿರಿಯನಾದ ಬ್ರಿಟಿಷ್ ಅಧಿಕಾರಿಯನ್ನು ಡೈರೆಕ್ಟರ್ ಮಾಡಿತು. ಇದನ್ನು ಪ್ರತಿಭಟಿಸಿ ಬೋಸರು 1904ರಲ್ಲಿ ರಾಜೀನಾಮೆ ಕೊಟ್ಟು ಹೊರಬಂದರು.
ಭಾರತೀಯರ ಆಶ್ಚರ್ಯಕಾರಕ ಬೌದ್ಧಿಕ ಸಾಮರ್ಥ್ಯವನ್ನು ಜಗತ್ತಿಗೆ ಪ್ರಕಟಪಡಿಸಿದ ಮೊದಲ ಸತ್ಯಾಗ್ರಹಿ ಜಗದೀಶ ಚಂದ್ರ ಬೋಸ್. ಅವರು 1884ರಲ್ಲಿ ತಮ್ಮ ಅತ್ಯುನ್ನತ ವಿದ್ಯಾಭ್ಯಾಸವನ್ನು ಲಂಡನ್ನಿನಲ್ಲಿ ಭೌತವಿಜ್ಞಾನ ಕ್ಷೇತ್ರದಲ್ಲಿ ಪೂರ್ಣಗೊಳಿಸಿ ಭಾರತಕ್ಕೆ ಹಿಂತಿರುಗಿದರು. ಅವರು ಭೌತಶಾಸ್ತ್ರವನ್ನು ಬೋಧಿಸುವ ಇಚ್ಛೆಯನ್ನು ಹೊಂದಿದ್ದರು. ಆಗ ಶೈಕ್ಷಣಿಕ ಕ್ಷೇತ್ರದಲ್ಲಿ “ಇಂಪೀರಿಯಲ್ ಸರ್ವೀಸ್”, “ಪ್ರಾವಿನ್ಷಿಯಲ್ ಸರ್ವೀಸ್” ಎಂಬ ಎರಡು ವರ್ಗೀಕರಣವಿತ್ತು. ಮೊದಲಿನದು ಯೂರೋಪಿಯನ್ನರಿಗೆ ಅದರಲ್ಲೂ ಬ್ರಿಟಿಷರಿಗೆ, ಎರಡನೆಯದು ಭಾರತೀಯರಿಗೆ ಮೀಸಲಾಗಿತ್ತು. ಯೂರೋಪಿಯನ್ನರಿಗೆ ಕೊಡುತ್ತಿದ್ದ 2\3ರಷ್ಟು ಸಂಬಳವನ್ನು ಮಾತ್ರ ಭಾರತೀಯರಿಗೆ ಕೊಡುತ್ತಿದ್ದರು.
ಲಾರ್ಡ್ ರಿಪ್ಪನ್ನರ ಪ್ರಭಾವದಿಂದಾಗಿ ಬೋಸರು ಇಂಪೀರಿಯಲ್ ಸರ್ವೀಸಿನ ವಿಭಾಗಕ್ಕೆ ಆಯ್ಕೆಯಾದರು. ಕಾಲೇಜಿನ ಪ್ರಿನ್ಸಿಪಾಲ್ ಅವರನ್ನು ಆ ವಿಭಾಗದ ಅಡಿಯಲ್ಲಿ ಸೇರಿಸಿಕೊಳ್ಳಲು ನಿರಾಕರಿಸಿದರು. ಆ ವಿಭಾಗದಲ್ಲಿ ಮೇಲ್ದರ್ಜೆಗೆ ಏರಿಸಿದ ಭಾರತೀಯರಿಗಾಗಿ ಇರುವ ಹುದ್ದೆ ಖಾಲಿ ಇಲ್ಲ ಎಂದರು. ತಮ್ಮ ಸರಿ ಸಮಾನವಾಗಿ ಭಾರತೀಯರನ್ನು ಕಾಣುವ ಅಭ್ಯಾಸ ತನಗಿಲ್ಲ; ಅವರಿಂದ ತಲೆಬಾಗಿ ತೋರುವ ಗೌರವಾದರ ಪಡೆಯುವುದು ತನಗೆ ಅಭ್ಯಾಸವಾಗಿಬಿಟ್ಟಿದೆ; ಪ್ರಾವಿನ್ಷಿಯಲ್ ವಿಭಾಗದಲ್ಲಿ ಕೆಲಸ ಮಾಡಿ ಮೇಲ್ದರ್ಜೆಗೆ ಉನ್ನತಿಯನ್ನು ಪಡೆಯಬಹುದು ಅಷ್ಟೇ ಎಂದು ಸ್ಪಷ್ಟವಾಗಿ ಮುಖಕ್ಕೆ ಹೊಡೆದಂತೆ ಹೇಳಿದರು.
ರಿಪ್ಪನ್ನರ ಒತ್ತಾಯಕ್ಕೆ ಮಣಿದು ಪ್ರಿನ್ಸಿಪಾಲರು ಬೋಸರನ್ನು ಇಂಪೀರಿಯಲ್ ವಿಭಾಗದಲ್ಲಿ ನೇಮಕ ಮಾಡಿಕೊಂಡರೂ ಅದು ತಾತ್ಕಾಲಿಕ ಹುದ್ದೆ ಎಂದು ಇಂಪೀರಿಯಲ್ ವಿಭಾಗದವರಿಗೆ ಕೊಡುತ್ತಿದ್ದ 1\2ದಷ್ಟು ಸಂಬಳವನ್ನು ನಿಗದಿ ಮಾಡಿದರು. ಬೋಸರು ಕೆಲಸ ಮಾಡಲು ಒಪ್ಪಿಕೊಂಡರು, ಸಂಬಳವನ್ನು ತೆಗೆದುಕೊಳ್ಳಲು ನಿರಾಕರಿಸಿದರು. ಮೂರು ವರ್ಷಗಳ ಕಾಲ ಸಂಬಳವನ್ನು ಪಡೆಯದೆ ಭಾರತೀಯ ಪ್ರಾಧ್ಯಾಪಕರ ಘನತೆಯನ್ನು ಎತ್ತಿಹಿಡಿದರು. ಈ ಹೊಸ ರೀತಿಯ ಪ್ರತಿಭಟನೆಗೆ ಮಣಿದು ಆಡಳಿತ ಮಂಡಳಿ ವೇತನ ತಾರತಮ್ಯವನ್ನು ಕೈಬಿಟ್ಟಿತು.
1902ರಲ್ಲಿ ಸರ್ ರೊನಾಲ್ಡ್ ರಾಸ್ ಮಲೇರಿಯಾ ರೋಗದ ಪ್ರಸಾರಕ್ಕೆ ಕಾರಣವಾಗುವ ಪರೋಪಜೀವಿಯನ್ನು ಪತ್ತೆ ಹಚ್ಚಿದುದಕ್ಕೆ ನೋಬಲ್ ಪ್ರಶಸ್ತಿ ಪಡೆದರು. ಈ ಸಂಶೋಧನೆ ಸಾಧ್ಯವಾದದ್ದು ಕಿಶೋರಿ ಮೋಹನ್ ಬಂದೋಪಾಧ್ಯಾಯರು ಒದಗಿಸಿದ ರಕ್ದದ ಸ್ಯಾಂಪಲ್ ಗಳ ವಿಶ್ಲೇಷಣಾ ಮಾಹಿತಿಯಿಂದಾಗಿತ್ತು. ರಾಸ್ ನೋಬೆಲ್ ಪ್ರಶಸ್ತಿ ಪಡೆದ ಸಂದರ್ಭದಲ್ಲಾಗಲಿ, 1923ರಲ್ಲಿ ಮಲೇರಿಯಾಗೆ ಸಂಬಂಧಿಸಿದಂತೆ ತಮ್ಮ ನೆನಪುಗಳನ್ನು ದೀರ್ಘವಾಗಿ ಪ್ರಕಟಿಸಿದ ಸಂದರ್ಭದಲ್ಲಾಗಲೀ ಬಂದೋಪಾಧ್ಯಾಯರನ್ನು ಸ್ಮರಿಸಿ ಕೃತಜ್ಞತೆಯನ್ನು ಹೇಳಲಿಲ್ಲ. 1927ರಲ್ಲಿ ರಾಸ್ ಪ್ರೆಸಿಡೆನ್ಸಿಯ ಜನರಲ್ ಹಾಸ್ಪಿಟಲ್‌ಗೆ ಬಂದಾಗ ಅವರನ್ನು ನೋಡಲು ಬಂದೋಪಾಧ್ಯಾಯರಿಗೆ ಆಹ್ವಾನ ನೀಡಿದರು. ಬಂದೋಪಾಧ್ಯಾಯರು ಅದನ್ನು ತಿರಸ್ಕರಿಸಿ ರಾಸ್ ಅವರ ಕೃತಘ್ನತೆಯನ್ನು ಪ್ರತಿಭಟಿಸಿದರು.
ಈ ಲೇಖನ ಸರಣಿಯ ಹಿಂದಿನ ಭಾಗ ಇಲ್ಲಿದೆ: http://surahonne.com/?p=35749
(ಮುಂದುವರಿಯುವುದು)
-ಪದ್ಮಿನಿ ಹೆಗಡೆ
Very nice
ಅಬಭ್ಭಾ ಎಷ್ಟು ವಿಚಾರಗಳನ್ನು…ಸಂಗ್ರಹಿಸಿ ದ್ದೀರಾ ಮೇಡಂ ಧನ್ಯವಾದಗಳು.
ಸಂಗ್ರಹಯೋಗ್ಯ ಉತ್ತಮ ಬರೆಹ.
ಈ ಲೇಖನ ಓಡಿದಂತೆ ಮೈ ಎಲ್ಲಾ ಕೋಪದಿಂದ ಮೈ ನವೀರೇಲಿ ಕುಧಿ ಯು ತ್ತದೆ
ಧನ್ಯವಾದಗಳು ಮೇಡಂ
Many many thanks for the encouraging beautiful response from Nayana Bajakudlu Madam, Nagaratna B.R. Madam, Shankari Sharma Madam, K Ramesh Sir!