ಚಟ ಎಂಬ ವಿಷ
ನಾಲ್ಕಾರು ವರುಷಗಳ ನಂತರ ಭೇಟಿಯಾದ ಗೆಳತಿಯರಾದ ವೈದೇಹಿ ಮತ್ತು ಶಾರದೆಯರು ಊಟ ಮುಗಿಸಿ ಉಂಡ ಬಾಯಿಗೆ ಒಗ್ಗರಣೆ ಎಂಬಂತೆ ಖಾರದ ಕಡ್ಲೇಕಾಯಿ ಬೀಜವನ್ನು ಬಾಯಿಗೆಸೆದುಕೊಳ್ಳುತ್ತಾ ಟಿವಿಯ ಮುಂದೆ ಕುಳಿತಿದ್ದಾಗ, ಟಿವಿಯ ನ್ಯೂಸ್ ಚಾನ್ನೆಲ್ಲಿನಲ್ಲಿ ಸುದ್ದಿ ಬಿತ್ತರಗೊಳ್ಳುತಿತ್ತು. –“ಮೇ ತಿಂಗಳ 31ನೇ ತಾರೀಳು ವಿಶ್ವ ತಂಬಾಕು ನಿಷೇಧದ ದಿನವಾದ ಕಾರಣ, ರಾಜ್ಯ ಸರ್ಕಾರ, ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಕೆಳಕಂಡ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ . . . .”
ಸುಮಾರು 45-46 ವಯೋಮಾನದ ಆಸುಪಾಸಿನಲ್ಲಿದ್ದ ಗೆಳತಿಯರು, ತಮ್ಮ ಸ್ನೇಹ, ಕಾಲೇಜು ದಿನಗಳಿಂದ ಪ್ರಾರಂಭಗೊಂಡರೂ, ಇಂದಿಗೂ ಉಳಿಸಿಕೊಂಡು ಬಂದಿದ್ದಾರೆ. ಸಾಂಸಾರಿಕ ಜವಾಬ್ದಾರಿಗಳಿಂದ ಇತ್ತೀಚೆಗೆ ಭೇಟಿಯಾಗುವುದು ಅಪರೂಪವಾದರೂ ಅದೇ ಆತ್ಮೀಯತೆ, ಅಭಿಮಾನ, ಸಲುಗೆ ಉಳಿದಿದೆ.
ಟಿವಿಯ ಪ್ರಕಟನೆ ನೋಡಿದ ಶಾರದ ತಟ್ಟನೆ ಹೇಳಿದಳು – ”ತಂಬಾಕು ಎಂದ ತಕ್ಷಣ ನಮ್ಮ ಯಜಮಾನರ ಸಿಗರೇಟಿನ ಪ್ರಕರಣ ನೆನಪಿಗೆ ಬರುತ್ತದೆ.”
”ಏನೇ ಅದು, ವಿವರವಾಗಿ ಹೇಳು” – ಎಂದಳು ವೈದೇಹಿ.
ಬೇಡ ಬಿಡೆ, ಅದೇ ಒಂದು ಕಥೆಯಾಗಿ ಬಿಡುತ್ತದೆ. ಮುಂಚೇನೇ ವಯಸ್ಸಾದವರು ಸೇರಿದರೆ ಬರೀ ಹಳೇ ಪುರಾಣಾನಾ ಮಾತನಾಡುತ್ತಿರುತ್ತಾರೆ ಎಂದು ಮಕ್ಕಳು ಆಡಿಕೊಳ್ಳುತ್ವೆ. ಅದಕ್ಕೇ ನಾನು ಈ ನಡುವೆ, ಹಿಂದಿನ ವಿಚಾರಗಳನ್ನು ಆಡೋಕ್ಕೇ ಹೋಗೋಲ್ಲ.
ಪರ್ವಾಗಿಲ್ಲ ಶಾರದ. ಅದು ಮಕ್ಕಳೊಂದಿಗೆ ಇರಲಿ. ನಮ್ಮಗಳಿಗೆ ಹಿಂದಿನ ನೆನಪುಗಳು ಒಂದು ರೀತಿಯ ಜೀವನೋತ್ಸಾಹವನ್ನು ನವೀಕರಿಸಿದಂತೆ ಮಾಡುತ್ತವೆ. ನೀನು ಈಗ, ವಿಶ್ವ ತಂಬಾಕು ದಿನದ ಅಂಗವಾಗಿ ನಿಮ್ಮೆಜಮಾನರ ಸಿಗರೇಟಿನ ಕಥೆಯನ್ನು ಹೇಳಲೇ ಬೇಕು, ನಾನು ಕೇಳಲೇ ಬೇಕು. ಹೇಗೂ ಇಂದು ಸಂಜೆಯವರೆಗೂ ಪೂರ್ತಿ ನಮ್ಮ ದಿನ, ಹೂಂ, ಶುರು ಹಚ್ಚಿಕೋ – ಎಂದಳು ವೈದೇಹಿ.
ಶಾರದ ಹೇಳತೊಡಗಿದಳು.
ನಿನಗೇ ಗೊತ್ತಿರುವಂತೆ ನಮ್ಮ ತವರು ಮನೆಯದು ಅತ್ಯಂತ ಸಂಪ್ರದಾಯ ಬದ್ಧ ಕುಟುಂಬ. ಅಮ್ಮನ ಸ್ನೇಹಿತರೊಬ್ಬರ ಮಧ್ಯಸ್ಥಿಕೆಯಿಂದ ನನ್ನ ಮದುವೆ ವಿಕಾಸರೊಂದಿಗೆ ನಿಶ್ಚಯವಾಯಿತು. ನಮ್ಮಗಳ ಮದುವೇ ಸಮಯಕ್ಕಾಗಲೇ ಹಿರಿಯರೊಪ್ಪಿದ ನಂತರ ಹುಡುಗ-ಹುಡುಗಿ ಮಾತನಾಡುವುದು, ಒಟ್ಟೊಟ್ಟಿಗೇ ಓಡಾಡುವುದು ಪ್ರಾರಂಭವಾಗಿತ್ತು. ಮೂರು ತಿಂಗಳ ನಂತರ ಮದುವೆಯ ಲಗ್ನ ನಿಶ್ಚಯವಾಗಿತ್ತು. ನಾವಿಬ್ಬರೂ ವಾರಕ್ಕೆ ಒಂದೆರಡು ದಿನ ಸಂಜೆ ಒಂದೆರಡು ಗಂಟೆಗಳ ಕಾಲ ಒಟ್ಟಿಗೇ ಕಳೆಯುತ್ತಿದ್ದೆವು. ಕೆರೆಯ ದಂಡೆಯಲ್ಲಿ ಕುಳಿತು ಹರಟೆ ಹೊಡೆದು, ನಂತರ ಎಲ್ಲಿಯಾದರೂ ಕಾಫಿ ಕುಡಿದು ಮನೆ ಸೇರುತ್ತಿದ್ದೆವು. ದಿನಗಳು ತುಂಬಾ ಅಂದೆ ತುಂಬಾ ಸುಂದರವಾಗಿದ್ದವು. ಇನ್ನೇನು ಮದುವೆಗೆ ಒಂದು ತಿಂಗಳು ಬಾಕಿಯಿತ್ತು. ಒಂದು ದಿನ ನಮ್ಮ ತಿರುಗಾಟ ಮುಗಿಸಿ ಮನೆಗೆ ಬರುವಾಗ, ಅಲ್ಲೇ ಪಕ್ಕದ ಬೀದಿಯಲ್ಲಿದ್ದ ನಮ್ಮ ಸೋದರತ್ತೆ, – ಶಾರದಾ, ಬಾ ಮನೆಗೆ, ಕಾಫಿ ಕುಡಿದು ಹೋಗುವೆಯಂತೆ, ನಿನ್ನೊಂದಿಗೆ ಸ್ವಲ್ಪ ಮಾತನಾಡುವುದಿತ್ತು – ಎಂದು ಕರೆದರು. ಒಳಗೆ ಹೋಗಿ ಕುಳಿತಾಗ, ಅವರ ಮುಖ ಚಿಂತಕ್ರಾಂತವಾಗಿತ್ತು. ತುಂಬಾ ದುಗುಡದಿಂದ ಹೇಳಿದರು. – ಶಾರದಾ, ಒಂದು ವಿಚಾರ ತಿಳಿದು ಬಂತು, ಮದುವೆ ಇನ್ನು ಒಂದು ತಿಂಗಳಿದೆ, ಹೇಗೆ ಹೇಳಬೇಕೋ ತಿಳಿಯುತ್ತಿಲ್ಲ, ನಂತರ ನಿನಗೆ ಅಘಾತವಾಗಬಾರದೆಂದು ಈಗಲೇ ಹೇಳುತ್ತಿದ್ದೇನೆ, ಅಮ್ಮ, ಅಣ್ಣನಿಗೆ ಹೇಗೆ ಹೇಳಬೇಕೋ ತಿಳಿಯುತ್ತಿಲ್ಲ, ಅದಕ್ಕೇ ನಿನಗೇ ಹೇಳುತ್ತಿದ್ದೇನೆ . . . .
ನನಗೆ ಕೈಕಾಲುಗಳು ನಡುಗಳು ಶುರುವಾದವು. – ಅತ್ತೇ, ಪ್ಲೀಸ್, ಏನೇ ಇದ್ದರೂ ಹೇಳಿಬಿಡಿ, ಪರವಾಗಿಲ್ಲ – ಎಂದೆ.
ಎರಡು ಬೆರಳುಗಳನ್ನು ಸೆಗರೇಟ್ ಸೇದುವಂತೆ ತುಟಿಯ ಮೇಲೆ ಇಟ್ಟು, – ವಿಕಾಸನಿಗೆ ಅಗ್ನಿಕಾರ್ಯದ ಚಟವಿದೆಯಂತಲ್ಲಾ ಶಾರದಾ – ಎಂದರು. ನಮ್ಮಗಳ ಮನೆಯಲ್ಲಿ, “ಸಿಗರೇಟ್ ಸೇದುವುದು” ಎಂದು ಬಹಿರಂಗವಾಗಿ ಹೇಳುವುದೂ ಎಷ್ಟು ನಿಷಿದ್ದವಾಗಿತ್ತೆಂದರೆ, ʼಮದ್ಯʼ ಎನ್ನಲು ʼಎಣ್ಣೆʼ ಪದವನ್ನು ಬಳಸುವಂತೆ ʼಅಗ್ನಿಕಾರ್ಯʼ ಎಂದಿದ್ದರು ಅತ್ತೆ.
ನನಗೆ ಭೂಮಿ ಬಾಯಿ ಬಿಡಬಾರದೇ ಎನ್ನುವಂತೆ ಆಗಿತ್ತು. ಸುರಿಯುತ್ತಿದ್ದ ಕಣ್ಣೀರನ್ನು ಒರೆಸಿಕೊಳ್ಳುತ್ತಾ ಮನೆಯ ಕಡೆ ದಾಪುಗಾಲು ಹಾಕಿದೆ. ಮನೆಯಲ್ಲೆಲ್ಲಾ ಅಲ್ಲೋಲ ಕಲ್ಲೋಲ. ಮಧ್ಯಸ್ಥಿಕೆ ವಹಿಸಿದ್ದ ನಮ್ಮಮ್ಮನ ಸ್ನೇಹಿತರು ತುಂಬಾ ಪರಿಚಯಸ್ಥರು ಅಲ್ಲದೆ ನಮ್ಮ ಕುಟುಂಬದ ಬಗ್ಗೆ ಎಲ್ಲಾ ತಿಳಿದವರಾದ್ದರಿಂದ, ಹುಡುಗನಿಗೆ, ಏನಾದರೂ ದುರಭ್ಯಾಸಗಳು, ಚಟಗಳು, ಇರಬಹುದೆನೋ, ವಿಚಾರಿಸಬೇಕೇನೋ, ಎಂಬ ಕಲ್ಪನೆಯೂ ನಮ್ಮ ಮನೆಯಲ್ಲಿ ಯಾರಿಗೂ ಇರಲಿಲ್ಲ. ರಾತ್ರಿ ಎಲ್ಲಾ ಪೂರಾ ಚರ್ಚೆಗಳು, ವಿಚಾರ ವಿನಿಮಯಗಳ ನಂತರ, ಒಂದು ತೀರ್ಮಾನಕ್ಕೆ ಬರಲಾಯಿತು. ಅದರಂತೆ ನಾನು ನಿಧಾನಕ್ಕೆ , ಪ್ರೀತಿಯಿಂದ ವಿಕಾಸರು ಆ ಚಟವನ್ನು ಬಿಡುವಂತೆ ಮಾಡುವುದು. ಮದುವೆಗೆ ಇನ್ನು ಕೇವಲ ಒಂದು ತಿಂಗಳು ಬಾಕಿ ಇರುವುದರಿಂದ ಮದುವೆ ನಿಲ್ಲಿಸುವುದು ಅಸಾಧ್ಯ, ಎಂದು ತೀರ್ಮಾನಿಸಲಾಯಿತು. ಆದರೂ ಎಲ್ಲರ ಮನಗಳಿಗೂ ಒಂದು ರೀತಿಯ ನಿರಾಸೆಯ ಛಾಯೆ ಆವರಿಸಿಕೊಂಡು ಬಿಟ್ಟಿತು.
ವಿಕಾಸರ ಪ್ರೀತಿಯ ಸವಿನುಡಿಗಳಲ್ಲಿ ಮಿಂದೇಳುತ್ತಿದ್ದ ನನಗೆ ಮನಸ್ಸು ಮುದುಡಿದರೂ, ನಾನು ಬೇಡ ಎಂದು ಹೇಳಿದರೆ ಖಂಡಿತಾ ಬಿಟ್ಟುಬಿಡುತ್ತಾರೆ ಎಂಬ ಮಿಥ್ಯಾ ಆತ್ಮವಿಶ್ವಾಸ ಹೃದಯದಲ್ಲಿತ್ತು ಬೆಚ್ಚಗೆ.
ಮುಂದಿನ ಸಲ ವಾಕಿಂಗ್ ಹೋದಾಗ ತಡೆಯಲಾರದೆ ಕೇಳಿ ಬಿಟ್ಟೆ –
ನಿಮಗೆ ಸಿಗರೇಟ್ ಸೇದುವ ದುರಭ್ಯಾಸ ಇದೆಯಂತೆ ಹೌದಾ? ( ಮನದಲ್ಲಿ, ನಮ್ಮ ಸೋದರತ್ತೆಗೇ ಏನೋ ತಪ್ಪಭಿಪ್ರಾಯ ಉಂಟಾಗಿರಬಹುದು, ಇವರು ಇಲ್ಲಾ ಎಂದೇ ಹೇಳುತ್ತಾರೆ ಎಂಬ ಅಚಲ ವಿಶ್ವಾಸವಿತ್ತು.)
ವಿಕಾಸ್ ಹೇಳಿದರು – ಸಿಗರೇಟ್ ಸೇದುವ ಅಭ್ಯಾಸ ಇದೆ, ಆದರೆ ಚಟ ಅಲ್ಲ, ದಿನಕ್ಕೆ ಒಂದೋ, ಎರಡೋ ಸೇದುತ್ತೇನೆ.
ಮತ್ತೇ ನೀವು ನಂಗೆ ಹೇಳಲೇ ಇಲ್ಲ?
ನೀನು ಕೇಳಲಿಲ್ಲ, ನಾನು ಹೇಳಲಿಲ್ಲ.
ಆದ್ರೂ ನೀವು ಮುಂಚೇನೇ ಹೇಳಬೇಕಿತ್ತು.
ಇದೇನು ಸ್ಪೆಷಲ್ ಡಿಗ್ರಿ ತಗೊಂಡಿರೋ ವಿಚಾರನಾ, ಅಥವಾ ಪಿ.ಹೆಚ್ ಡಿ ಸಿಕ್ಕಿರೋ ವಿಚಾರಾನಾ, ಹೆಮ್ಮೆಯಿಂದ ಹೇಳಿಕೊಳ್ಳುವುದಕ್ಕೆ. ನೀನು ಕೇಳಲಿಲ್ಲ, ನಾನು ಹೇಳಲಿಲ್ಲ. ಅಚೀವ್ ಮೆಂಟ್ಸಗಳಾದರೆ ಖುಷಿಯಿಂದ ಹೇಳಿಕೊಳ್ಳುತ್ತಾರೆ, ಎಲ್ಲರೂ ಅಷ್ಟೆ – ಎಂದು ಬಿಟ್ಟರು.
ಅವರ ತರ್ಕಕ್ಕೆ ನನ್ನ ಬಳಿ ಹೇಳಲು ಏನೂ ಉಳಿದಿರಲಿಲ್ಲ. ದುಖಃದಿಂದ ನನ್ನ ಮುಖ ಬಾಡಿ ಹೋಯಿತು. ಮುಂದಿನ ಅವರ ಮಾತುಗಳಿಗೆ ನನ್ನ ನೀರಸ ಪ್ರತಿಕ್ರಿಯೆ ನೋಡಿ,
ಅಷ್ಟೊಂದು ಬೇಜಾರು ಮಾಡ್ಕೋ ಬೇಡ, ಸ್ವಲ್ಪ ದಿನ ಟೈಂ ಕೊಡು, ಮದುವೆಯ ನಂತರ ನಿನಗೆ ನಿಜವಾಗಲೂ ತುಂಬಾ ಇಷ್ಟವಿಲ್ಲ ಎನ್ನುವುದಾದರೆ ಬಿಟ್ಟು ಬಿಡುತ್ತೇನೆ – ಎಂದರು.
ನನ್ನ ಮನಸ್ಸಿಗೆ ಎಷ್ಟೋ ಸಮಾಧಾನವಾಯಿತು.
ಶಾರದಳ ಕಥೆ ಕೇಳುತ್ತಿದ್ದ ವೈದೇಹಿ ಹೇಳಿದಳು – ಗೊತ್ತು ಬಿಡು, ನಾವುಗಳು ಮದುವೆಗೆಂದು ಎರಡು ದಿನಗಳು ಮಂಚೆ ನಿಮ್ಮೂರಿಗೆ ಬಂದಿದ್ದಾಗ, ವಾಕಿಂಗ್ ಹೋಗಿದ್ದಾಗ ನೀನು ಈ ವಿಚಾರ ಹೇಳಿದ್ದೆ. ನನಗಾಗಲೇ ಮದುವೆಯಾಗಿ ಎರಡು ವರುಷಗಳಾಗಿದ್ದವು. ನನ್ನ ಅನುಭವದ ಹಿನ್ನೆಲೆಯಲ್ಲಿ, – ಇಲ್ಲಾ ಶಾರೀ, ಗಂಡಸರು ಹೇಳ್ತಾರೆ ಅಷ್ಟೆ, ಬಿಡೋದಿಲ್ಲಾ, ಅಂದಿದ್ದೆ. ಆದ್ರೆ, ನಿಂಗೆ ವಿಕಾಸ್ ನೀಡಿದ ವಚನದ ಮೇಲೆ ಎಷ್ಟು ವಿಶ್ವಾಸ ಇತ್ತು ಅಂದ್ರೆ, ನಿಂಗೆ ನನ್ಮೇಲೇ ಕೋಪ ಬಂದಿತ್ತು ಅಲ್ವಾ?
ಹೌದು ವೈದೇಹಿ, ನಿಜಕ್ಕೂ ಆಗ ನಿನ್ಮೇಲೆ ಕೋಪ ಬಂದಿತ್ತು. ಬಾಕೀ ಗಂಡಸರು ಹೇಗೋ ಏನೋ, ನನ್ನ ವಿಕಾಸ ಹಾಗೆ ಮಾಡುವುದಿಲ್ಲ ಎಂಬ ಭರವಸೆಯಿತ್ತು.
ಮದುವೆಯಾಯಿತು, ಕಾಶ್ಮೀರಕ್ಕೆ ಹನಿಮೂನ್ ಕೂಡ ಹೋಗಿ ಬಂದೆವು. ಆ ದಿನಗಳಲ್ಲಿ ವಿಕಾಸ್ ಒಮ್ಮೆ ಕೂಡ ಸಿಗರೇಟ್ ಸೇದಲಿಲ್ಲ(ಬಹುಶಃ ನನ್ನೆದುರಿಗೆ). ನಂಗೆ ತುಂಬಾ ಖುಷಿಯಾಯಿತು. ಊರಿಗೆ ಹಿಂದಿರುಗಿದ ನಾಲ್ಕಾರು ದಿನಗಳ ನಂತರ ವಿಷಯವನ್ನೆತ್ತಿದೆ.
ನೀವು ಈಗಾಗ್ಲೇ ನಂಗೆ ಮಾತು ಕೊಟ್ಟಿರುವಂತೆ ದಯವಿಟ್ಟು ಸಿಗರೇಟು ಸೇದಬಾರದು, ನನಗೆ ಅದನ್ನು ಅರಗಿಸಿಕೊಳ್ಳುವುದಕ್ಕೇ ಆಗುತ್ತಿಲ್ಲ, ಪ್ಲೀಸ್, ಎಂದೆ. ಆಗಲೇ ಕಣ್ಣಲ್ಲಿ ಗಂಗಾ ಯಮುನೆಯರ ಶೇಖರಣೆಯಾಗತೊಡಗಿತ್ತು. ಹೊಸ ಹೆಂಡತಿಯ ಕೋರಿಕೆಗೆ ಕರಗಿ ನೀರಾದ ನನ್ನವರು, ನನ್ನ ತಾಳಿಯನ್ನು ಕೈಲಿ ಹಿಡಿದು, ʼನಾನೇ ಕಟ್ಟಿರುವ ಈ ತಾಳಿಯ ಮೇಲಾಣೆ, ನಾನಿನ್ನು ಸಿಗರೇಟು ಸೇದುವುದಿಲ್ಲʼ – ಎಂದರು.
ಹೃದಯ ಗರಿಗೆದರಿ ಹಾರಾಡಿತು. ಇಡೀ ಸಿಗರೇಟಾಯಣವನ್ನು ಒಂದು ಕೆಟ್ಟ ಕನಸಿನಂತೆ ಮರೆತುಬಿಟ್ಟೆ. ನನ್ನವರ ಆಶ್ವಾಸನೆ, ನನ್ನ ಸುಂದರ ವೈವಾಹಿಕ ಜೀವನಕ್ಕೆ ಒಂದು ಅಡಿಗಲ್ಲೆಂದೆನಿಸಿತು.
ಎರಡು ವರುಷಗಳ ನಂತರ ಮಗಳು ಹುಟ್ಟಿದಳು. ಮಗು ಸ್ವಲ್ಪ ದೊಡ್ಡವಳಾಗಿ ನಡೆಯುವಂತಾದಾಗ, ನಾನು ಹೊಲಿಗೆ ತರಗತಿಗೆ ಸೇರಿಕೊಂಡೆ. ಆಗೆಲ್ಲಾ ಎಲ್ಲೂ ಒಬ್ಬಳೇ ಮನೆಯಿಂದ ಆಚೆ ಕಾಲಿಡುತ್ತಿರಲಿಲ್ಲ. ಈಗ ಕ್ಲಾಸಿಗೆ ಸೇರಿಕೊಂಡ ನಂತರ ಒಮ್ಮೆ ವಿಕಾಸ್ ಕೆಲಸ ಮಾಡುತ್ತಿದ್ದ ಕಛೇರಿಯ ಪಕ್ಕದ ಬೀದಿಯಲ್ಲಿದ್ದ ಮಾರ್ಕೆಟ್ಟಿಗೆ ಹೊಲಿಗೆ ಸಲಕರಣೆಗಳನ್ನು ತರಲು ಗೆಳತಿಯೊಂದಿಗೆ ಹೋದಾಗ, ದುತ್ತೆಂದು ಎದುರಿಗೆ, ಸ್ನೇಹಿತನೊಂದಿಗೆ ಬಾಯಲ್ಲಿ ಸಿಗರೇಟ್ ಕಚ್ಚಿ ಹಿಡಿದು ಬರುತ್ತಿದ್ದರು ವಿಕಾಸ್. ನನ್ನ ಸ್ಥಿತಿ ಹೇಗಾಗಿರಬೇಡ, ನೀನೇ ಊಹಿಸು ವೈದೇಹಿ.
ನಿನ್ನ ಸ್ಥಿತಿಯೊಂದಿಗೆ, ಅವರ ಸ್ಥಿತಿಯೂ ಹೇಗಾಗಿರಬಹದೆಂದು ಊಹಿಸಿದರೆ ಭಯವಾಗುತ್ತೆ ಶಾರೀ.
ನಂತರ ಅತ್ತಾಯಿತು, ಕೋಪ ಮಾಡಿದ್ದಾಯಿತು. ಇನ್ನೂ ದು:ಖದ ಸಂಗತಿ ಎಂದರೆ, – ಹೌದಾ, ನಾನು ತಾಳಿಯ ಮೇಲೆ ಆಣೆಯಿಟ್ಟಿದ್ದೆನಾ? ʼ – ಎಂದದ್ದು.
ನಂತರದ ದಿನಗಳು ಹಾಗೇ ಕಳೆಯಿತು.
3-4 ವರ್ಷಗಳಲ್ಲೇ, ನಮ್ಮ ಮಾವನವರು, ತಮ್ಮ 58 ನೆಯ ವಯಸ್ಸಿಗೇ ಅನಿಯಂತ್ರಿತ ಮಧುಮೇಹಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ತೀರಿಕೊಂಡು ಬಿಟ್ಟರು. ನಾವುಗಳು ಇನ್ನೂ ಚಿಕ್ಕವರು. ಈಗಿನಷ್ಟು ಆಗ ಮಧುಮೇಹದ ಬಗ್ಗೆ ಜಾಗೃತಿಯಿರಲಿಲ್ಲ. ಅವರು ತೀರಿಕೊಂಡ ದಿನದ ಬೆಳಗ್ಗೆ ಹಿರಿಯ ಡಾಕ್ಟರೊಬ್ಬರು ತಮ್ಮ ವಿದ್ಯಾರ್ಥಿಗಳೊಂದಿಗೆ ರೌಂಡ್ಸ್ ಬಂದಿದ್ದರು. ಅವರು ವಿದ್ಯಾರ್ಥಿಗಳಿಗೆ ವಿವರಿಸುತ್ತಿದ್ದರು.
ʼಮಧುಮೇಹ ಖಾಯಿಲೆ, ಜೊತೆಗೆ ಸಿಗರೇಟಿನ ದುರಭ್ಯಾಸದಿಂದಾಗಿ ಇಷ್ಟು ಚಿಕ್ಕ ವಯಸ್ಸಿಗೇ ಶಾಸಕೋಶ, ಜಠರ, ಮೂತ್ರಪಿಂಡಗಳು ವೈಫಲ್ಯಕೊಂಡು ವ್ಯಕ್ತಿ ಕೋಮಾ ತಲುಪಿದ್ದಾರೆ. ʼ (ನಮ್ಮ ಮಾವನವರೂ ಸೆಗರೇಟ್ ಸೇದುತ್ತಿದ್ದರು).ಅದೇ ಸಂಜೆ ಮನೆಯ ಹಿರಿಯರನ್ನು ಕಳೆದುಕೊಂಡು ನಾವುಗಳು ಅನಾಥರಾದೆವು.
ಅಂದು ಆ ಡಾಕ್ಟರ್ ಅವರ ಮಾತುಗಳನ್ನು ಕೇಳಿಸಿಕೊಂಡಿದ್ದ ವಿಕಾಸ್ ಮಾರನೆಯ ದಿನ ನೆನೆನೆಸಿಕೊಂಡು ತುಂಬಾ ಅತ್ತರು. ನಾನು ಅಷ್ಟು ಪರಿಪರಿಯಾಗಿ ಕೇಳಿಕೊಂಡರೂ ಸಿಗರೇಟ್ ಸೇದುವುದನ್ನು ಬಿಡದಿದ್ದ ವಿಕಾಸ ಅಂದು ನೊಂದು ತ್ಯಜಿಸಿದ ಸಿಗರೇಟನ್ನು ಇಂದಿನ ತನಕವೂ ಮುಟ್ಟಿಲ್ಲ. ಅಪರೂಪದ ಅಭ್ಯಾಸ ಎಂದು ಪ್ರಾರಂಭವಾದ ಈ ದುರಭ್ಯಾಸಗಳು ಯಾವಾಗ ಚಟವಾಗಿ ಮಾಪರ್ಡಾಗುತ್ತವೋ ಗೊತ್ತೇ ಆಗುವುದಿಲ್ಲ. ಅವು ಎಷ್ಟು ಗಾಢವಾಗಿ ಅಂಟುಕೊಂಡು ಬಿಡುತ್ತವೆ ಎಂದರೆ, ತಾವುಗಳೇ ಮಾಡಿದ ಆಣೆ ಪ್ರಮಾಣಗಳಿಗೆ ಬೆಲೆಯೇ ಇರುವುದಿಲ್ಲ. ನನ್ನವರು ಸಿಗರೇಟ್ ಚಟ ಬಿಡಲು ಮನೆಯ ಹಿರಿಯರ ಸಾವಿನಂತಹ ದೊಡ್ಡ ದುರಂತ ಸಂಭವಿಸುವಂತಾದ್ದದ್ದು ತುಂಬಾ ನೋವಾಗುತ್ತದೆ – ಎನ್ನುತ್ತಾ ಮಾತು ನಿಲ್ಲಿಸಿದ ಶಾರದಳ ಕಣ್ಣಂಚುಗಳು ಒದ್ದೆಯಾಗಿತ್ತು.
ಎದ್ದು ಬಂದ ವೈದೇಹಿ, ಸಮಾಧಾನಿಸುವಂತೆ ಗೆಳತಿಯ ಭುಜವನ್ನು ಮೃದುವಾಗಿ ಒತ್ತಿ ಕಾಫಿ ಬಿಸಿ ಮಾಡಿ ತಂದುಕೊಟ್ಟು, -ಹೌದು ಶಾರದ, ಈ ತಂಬಾಕಿನ ಚಟದಿಂದ ಎಷ್ಟೆಷ್ಟು ಸುಖ ಸಂಸಾರಗಳು ನಾಶವಾಗಿವೆಯೋ ತಿಳಿಯದು. ಸಿನಿಮಾ ಥಿಯೇಟರಿಗೆ ಹೋದಾಗ, ಸಿನಿಮಾಕ್ಕೆ ಮುಂಚೆ ತೋರಿಸುವ ತಂಬಾಕಿನ ಚಟದಿಂದ ಉಂಟಾಗಬಹುದಾದ ಬಾಯಿಯ ಕ್ಯಾನ್ಸರಿನ ಡಾಕ್ಯುಮೆಂಟರಿ ನೋಡಿದಾಗ ಹೃದಯ ಹಿಂಡಿದಂತೆ ಆಗುತ್ತೆ.
ಈ ನಡುವೆ ಹೈ ಸೊಸೈಟಿ ಅನ್ನುತ್ತಾ ಹುಡುಗಿಯರೂ ಸಿಗರೇಟ್ ಸೇದುತ್ತಿದ್ದಾರೆ. ಚಿಕ್ಕ ಚಿಕ್ಕ ವಯಸ್ಸಿನ ಯುವ ಪೀಳಿಗೆ ಸೇದುವುದನ್ನು ನೋಡಿದರೂ ಅಷ್ಟೆ, ತುಂಬಾ ಬೇಜಾರಾಗುತ್ತದೆ. ಇದಕ್ಕೆ ನಾವು ಕಂಡುಕೊಳ್ಳಬಹುದಾದ ಪರಿಹಾರ ಅಂದ್ರೆ, ಒಂದೇ.
ಅಮ್ಮಂದಿರು ಮಕ್ಕಳು ಚಟಕ್ಕೆ ಬಲಿಯಾಗದಂತೆ ಚಿಕ್ಕಂದಿನಿಂದಲೇ ಉತ್ತಮ ಸಂಸ್ಕಾರ, ಮಾಹಿತಿ, ಉಂಟಾಗುವ ದುಷ್ಪರಿಣಾಮಗಳನ್ನು ತಿಳಿ ಹೇಳಿ, ಬಾಹ್ಯದ ಒತ್ತಡಗಳಿಗೆ ಮಣಿಯದಂತೆ ಬೆಳೆಸಿ, ಮಕ್ಕಳ ಅಪ್ಪಂದಿರು ಅಥವಾ ಹಿರಿಯ ಸದಸ್ಯರುಗಳು ಯಾರೂ ತಂಬಾಕಿನ ಉತ್ಪನ್ನಗಳ ದಾಸರಾಗದಂತೆ ತಿಳಿಹೇಳುವುದರಿಂದ, ನೋಡಿಕೊಳ್ಳುವುದರಿಂದ ಪ್ರಾರಂಭಿಸಬೇಕು ಅಲ್ವಾ, ಏನಂತೀಯ?
ಓಕೆ, ಡನ್. ಅದಕ್ಕೇ ಮನೆಯೇ ಮೊದಲ ಪಾಠಶಾಲೆ ಅಂತ ಹೇಳುವುದು. ಅಂತೂ ಇಂದು ನಾವುಗಳೂ ಈ ದೃಢ ನಿರ್ಧಾರದೊಂದಿಗೆ ವಿಶ್ವ ತಂಬಾಕು ನಿಷೇಧ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದೆವು ಅಲ್ವಾ, ಎನ್ನುತ್ತಾ, ಗೆಳತಿಯರಿಬ್ಬರೂ ಭಾವುಕ ವಾತಾವರಣದಿಂದ ಹೊರಬಂದರು.
–ಪದ್ಮಾ ಆನಂದ್
ವಿಶ್ವ ತಂಬಾಕು ದಿನ ದ ವಿಶೇಷ ಲೇಖನ.. ಬಹಳ ಮಹತ್ವದ ವಿಚಾರಗಳನ್ನು…ಇಬ್ಬರು….ಗೆಳತಿಯರು ನಡುವೆ ಸಂಭಾಷಣೆ ಯ ಮೂಲಕ ಬಹಳ ಸೊಗಸಾಗಿ…ಪಡಿಮೂಡಿಸಿದ್ದಾರೆ..ಅಭಿನಂದನೆಗಳು…
ಧನ್ಯವಾದಗಳು.
ಉತ್ತಮ ಸಂದೇಶವುಳ್ಳ ಬರಹ
ಧನ್ಯವಾದಗಳು
ಲೇಖನವನ್ನು ಪ್ರಕಟಿಸಿದ್ದಕ್ಕಾಗಿ “ಸುರಹೊನ್ನೆ” ಗೆ ಧನ್ಯವಾದಗಳು.
ವಿಶ್ವ ತಂಬಾಕು ದಿನಕ್ಕಾಗಿ, ಅದರಿಂದಾಗುವ ಅನಾಹುತಗಳನ್ನು ಕಥಾರೂಪದಲ್ಲಿ ಹೆಣೆದ ಪರಿ ನಿಜಕ್ಕೂ ಖುಶಿಕೊಟ್ಟಿತು.. ಧನ್ಯವಾದಗಳು ಮೇಡಂ.
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ವಂದನೆಗಳು