ತ್ಯಾಗ ಪುರುಷ ಶಿಬಿ
ದಾನಗಳಲ್ಲಿ ಹಲವಾರು ವಿಧ, ಅನ್ನದಾನ, ವಸ್ತ್ರದಾನ, ಗೋದಾನ, ಭೂದಾನ ಹೀಗೆ, ಚರ-ಆಚರ ವಸ್ತುಗಳಲ್ಲಿ ವಿಶೇಷವಾದವುಗಳು, ಉಳ್ಳವರು ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ವಿಹೀನರಿಗೆ ದಾನ ಮಾಡಬೇಕಾದುದು ಧರ್ಮ, ದಾನ ಮಾಡುವಾಗ ಸಮಯ, ಸಂದರ್ಭ, ಪಾತ್ರವರಿತು ದಾನಮಾಡಬೇಕು. ಉದಾ: ಹಸಿದು ಬಂದವನಿಗೆ ಅನ್ನವನ್ನು ನೀಡಬೇಕೇ ಹೊರತು ವಸ್ತ್ರದಾನವೋ ಗೋದಾನವೋ ಭೂದಾನವೋ ನೀಡಿದರೆ ಅವನ ಹಸಿವು ಹಿಂಗುವುದಿಲ್ಲ. ಸುಲಭವೂ ಶ್ರೇಷ್ಠವೂ ಆದ ಅನ್ನದಾನವು ಪುಣ್ಯಪ್ರದ. ಅನ್ನದಾನ ನಡೆಯುತ್ತಿರುವಲ್ಲಿ ಅನ್ನಪೂರ್ಣೇ ನೆಲೆಸುತ್ತಾಳೆ ಎಂಬ ನಂಬಿಕೆ. ಹಸಿವು ನೀಗಿದ ಮೇಲೆ ಮತ್ತೆ ಮಾನ ಮುಚ್ಚಲು ಬೇಕಾದ ವಸ್ತ್ರದಾನ. ಕೆಲವು ಹಬ್ಬಗಳಲ್ಲಿ, ಪೂಜೆ-ಪುನಸ್ಕಾರಗಳಲ್ಲಿ, ಮದುವೆ ಮುಂಜಿಗಳಲ್ಲಿ, ಹೋಮ ಯಾಗಗಳಲ್ಲಿ ಅವರವರ ಶಕ್ತಿ, ಭಕ್ತಿಗೆ ಹೊಂದಿಕೊಂಡು ಮಾಡುತ್ತಾರೆ. ಹಾಗೆಯೇ ಗೋದಾನ’ವೂ ಅತ್ಯಂತ ಶ್ರೇಷ್ಠ.
ಎಲ್ಲಾ ತೂಕಕ್ಕಿಂತ ಗೋವಿನ ತೂಕವೇ (ಮೌಲ್ಯ) ಅಧಿಕ ಎಂಬುದು ಆಪಸ್ತಂಭ ಮುನಿಯ ಚರಿತ್ರೆಯಿಂದ ತಿಳಿದಿದ್ದೇವೆ. ಆಪಸ್ತಂಭನ ತೂಕಕ್ಕೆ ಸಮತೂಕವಾಗಿ ಬೆಸ್ತರಿಗೆ (ಮುನಿಯ ಮಾತಿನಂತೆ) ಕೊಡಲು ಹೊರಟ, `ನಾಭಾಗ’ ರಾಜನ ಧನ-ಕನಕ, ವಸ್ತ್ರ, ವೈಡೂರ್ಯ ಯಾವುದೆಲ್ಲ ಹಾಕಿ ತೂಗಿದರೂ ಅವನ ತೂಕಕ್ಕೆ ಸಮವಾಗದೇ ಕೊನೆಗೆ ಲೋಮಶ ಮುನಿಯ ಮಾತಿನಂತೆ ಒಂದು ಗೋವನ್ನು ಇಡಲಾಗಿ ಅದು ಸಮತೂಕವಾಯಿತು ಎಂಬ ಕಥೆಯನ್ನು ಇದೇ ಅಂಕಣದಲ್ಲಿ ಹಿಂದೆ ಬರೆದಿರುತ್ತೇನೆ.
ಇನ್ನು ಭೂದಾನ….! ಇದು ಹಿಂದಿನ ರಾಜರುಗಳ ಕಾಲದಲ್ಲಿ ಅಧಿಕ ವ್ಯಾಪ್ತಿಯಲ್ಲಿತ್ತು. ಯಾವುದಾದರೂ ಸಂಸ್ಥೆಗೆ, ದೇವಸ್ಥಾನಕ್ಕೆ, ಪುರಸ್ಕಾರ ರೂಪವಾಗಿ, ಧರ್ಮಕಾರ್ಯಕ್ಕಾಗಿ ದಾನ, ಉಂಬಳಿ ಬಿಡುವುದು ನಡೆಯುತ್ತಿತ್ತು, ಇನ್ನೊಂದು ವಿಶೇಷ ದಾನವೆಂದರೆ ‘ನೇತ್ರದಾನ! ಜೀವಿತದಲ್ಲಿರುವಾಗ ನೇತ್ರವನ್ನು ದಾನ ಮಾಡುತ್ತೇನೆಂದು ಬರಹದ ಮೂಲಕ ಯಾವುದಾದರೂ ಮೆಡಿಕಲ್ ಕಾಲೇಜಿಗೋ, ನೇತ್ರ ಚಿಕಿತ್ಸಾಲಯ, ನೇತ್ರ ಬ್ಯಾಂಕ್‌ಗೂ ವಾಗ್ದಾನ ಮಾಡಿದರೆ; ಮರಣಾನಂತರ ನಿಯಮಿತಾವಧಿಯೊಳಗೆ ಕಣ್ಣು ಕಿತ್ತು ಕೊಂಡೊಯ್ಯುತ್ತಾರೆ. ಇನ್ನು… `ಕನ್ಯಾದಾನ’ವೆಂಬುದು ಹೆಣ್ಣು ಹೆತ್ತವರು ತಮ್ಮ ಪುತ್ರಿಯರನ್ನು ಮುಂದಿನ ಸತ್-ಸಂತಾನಕ್ಕಾಗಿ ಯೋಗ್ಯ ವರನಿಗೆ ಮದುವೆ ಮಾಡಿಕೊಡುವಂತಾದ್ದು. ಇದು ಒಂದು ರೀತಿಯಲ್ಲಿ ಮೂಲಭೂತವಾದ (ಕ್ರಿಯೆ) ದಾನ.
ಮೇಲಿನ ದಾನಗಳೆಲ್ಲ ಉಳ್ಳವರು ಯಾರೂ ಮಾಡಲು ಶಕ್ಯವಾದವುಗಳು. ಆದರೆ ಇದಕ್ಕಿಂತ ಭಿನ್ನವಾದ ದಾನವಿದೆ. ಅದು ತ್ಯಾಗರೂಪಿ ದಾನ, ಅಂತಹ ದಾನವೇ ನಿಜವಾದ ದಾನವೆಂದು ಪ್ರಾಜ್ಞರ ಅಭಿಮತ. ನಾವು ಯಾವುದಾದರೊಂದು ವಸ್ತುವನ್ನು ದಾನಮಾಡಿದರೆ ಆ ಸ್ಥಾನಕ್ಕೆ ಮಗದೊಂದು ಅಂತಹದೇ ವಸ್ತುವನ್ನು ಪಡೆದುಕೊಂಡು, ಉಪಯೋಗಿಸದೆ ಇರುವಂತಾದ್ದು ತ್ಯಾಗರೂಪಿಯಾಗಿರುತ್ತದೆ. ಇಂತಹ ತ್ಯಾಗ ರೂಪದ ದಾನಿಗಳನ್ನು ನಮ್ಮ ಇತಿಹಾಸದಲ್ಲಿ ಕಾಣುತ್ತೇವೆ. ಉದಾಹರಣೆಗೆ ಕೊಡಗಿನ ಗೌರಮ್ಮನನ್ನು ಇಲ್ಲಿ ಹೆಸರಿಸಬಹುದು. ತನ್ನ ಆಭರಣಗಳನ್ನೆಲ್ಲ ಹರಿಜನೋದ್ಧಾರಕ್ಕಾಗಿ ಗಾಂಧೀಜಿಯವರಿಗೆ ನೀಡಿ ತಾನೆಂದೂ ಆಭರಣ ತೊಡುವುದಿಲ್ಲವೆಂದು ಪ್ರತಿಜ್ಞೆ ಮಾಡಿದ ಇತಿಹಾಸದ ಶ್ರೇಷ್ಠ ಮಹಿಳೆ.
ಇನ್ನು ಇದೆಲ್ಲವುಗಳಿಗಿಂತ ಭಿನ್ನವಾದ, ಕಠಿಣವಾದ, ಸಾಮಾನ್ಯ ಜನರು ಮಾಡಲಾರದ ದಾನವಿದೆ. ಅದುವೇ ಶರೀರಸ್ಥವಾಗಿ ದೇಹದ ಯಾವುದಾದರೂ ಅಂಗವನ್ನೋ ಇಡೀ ದೇಹವನ್ನೋ ಧರ್ಮಕ್ಕಾಗಿ, ಲೋಕ ಕಲ್ಯಾಣಕ್ಕಾಗಿ ದಾನ ಮಾಡಿದವರಿದ್ದಾರೆ. ಈ ನಿಟ್ಟಿನಲ್ಲಿ ಕರ್ಣ, ದಧೀಚಿ, ಬಲಿಚಕ್ರವರ್ತಿ ಮೊದಲಾದವರ ಚರಿತ್ರೆಯನ್ನು ಹಿಂದೆ ಇದೇ ಅಂಕಣದಲ್ಲಿ ಓದಿದ್ದೇವೆ. ಈ ಸಾಲಿಗೆ ಇನ್ನೊಬ್ಬ ರಾಜ ಸೇರುತ್ತಾನೆ ಆತನೇ ”ಶಿಬಿ’ ಚಕ್ರವರ್ತಿ”. ಈತನು ಧರ್ಮಕ್ಕಾಗಿ, ಸತ್ಯಕ್ಕಾಗಿ ತನ್ನ ಪ್ರಾಣ ಏಕೆ? ತನ್ನ ದೇಹದ ಭಾಗವನ್ನು ಖಂಡಖಂಡವಾಗಿ ತುಂಡರಿಸಿ ತಾನೇ ಸ್ವತಃ ತಕ್ಕಡಿಯಲ್ಲಿ ತೂಗಿದವ! ಹೇಗೆಂದು ನೋಡೋಣ.
ಇವನು ಶಿಬಿ ಚಕ್ರವರ್ತಿ, ಚಂದ್ರವಂಶದಲ್ಲಿ ಜನಿಸಿದವ, ಭೋಜಪುರಾಧಿಪತಿ. ಚಂದ್ರವಂಶಕುಲದವನಾದ ಉಶೀನರನ ಮಗ. ಯಯಾತಿಯ ಮಗಳಾದ ‘ಮಾಧವಿ’ ಈತನ ತಾಯಿ, ಈತನ ಮಗ ‘ಗೋಪತಿ’, ವೃಷದರ್ಭ, ಸುವೀರ, ಮದ್ರ, ಕೇಕಯ ಮೊದಲಾದ ಮಕ್ಕಳೂ ಇವನಿಗಿದ್ದರು. ‘ಬೃಹದ್ಧರ್ಭ’ನೆಂಬ ಮಗ ಇನ್ನೊಬ್ಬನಿದ್ದ. ಶಿಬಿಯು ಈತನನ್ನು ಬ್ರಾಹ್ಮಣ್ಯ ರೂಪದಲ್ಲಿ ಬಂದ ಬ್ರಹ್ಮನಿಗರ್ಪಿಸಿದನು.
ಅದೊಂದು ದಿನ ‘ಉಪಜಲ’ವೆಂಬ ನದಿ ತಟದಲ್ಲಿ ಯಜ್ಞ ಮಾಡುತ್ತಿದ್ದ ಶಿಬಿಯ ಬಳಿಗೆ ಪುಟ್ಟ ಪಾರಿವಾಳವೊಂದು ಹಾರಿ ಬಂದು ತೊಡೆಯಲ್ಲಿ ಕುಳಿತು ”ತನ್ನನ್ನು ಗಿಡುಗವೆಂದು ಅಟ್ಟಿಸಿಕೊಂಡು ಬರುತ್ತಿದೆ. ಅದರಿಂದ ರಕ್ಷಿಸು, ಶರಣು ಬಂದವರನ್ನುರಕ್ಷಿಸುವುದು ರಾಜನಾದ ನಿನ್ನ ಕರ್ತವ್ಯ” ಎಂದು ಧರ್ಮದ ಚೌಕಟ್ಟಿನಲ್ಲಿ ಮಾತನಾಡಿತು. ನೋಡಿದರೆ ಮೇಲೊಂದು ಗಿಡಗವೂ ಕುಳಿತು ”ಈ ಪಾರಿವಾಳ ನನ್ನ ಆಹಾರ ಇದನ್ನು ಕಸಿಯುವುದು ರಾಜನಾದ ನಿನ್ನ ಧರ್ಮವಲ್ಲ” ಎಂದು ವಾದಿಸತೊಡಗಿತು. ಈಗ ರಾಜ ಧರ್ಮ ಸಂಕಟದಲ್ಲಿ ಸಿಲುಕಿದ, ಇತ್ತ ಪಾರಿವಾಳವನ್ನು ರಕ್ಷಿಸಬೇಕು. ಅತ್ತ ಗಿಡುಗನ ಆಹಾರವನ್ನೂ ಕೊಡಬೇಕು, ಗಿಡುಗನಾದರೋ ಪಾರಿವಾಳದ ಬದಲಿಗೆ ಬೇರೆ ಮಾಂಸವನ್ನು ಕೊಡುವೆನೆಂದರೆ ಒಲ್ಲೆ ಎಂದಿತು! ರಾಜ ಬೇರೆ ದಾರಿ ಕಾಣದೆ ‘ಪಾರಿವಾಳವನ್ನು ಬಿಟ್ಟು ಬೇರೆ ಏನನ್ನಾದರೂ ಕೇಳು ಕೊಡುವೆ’ನೆಂದ ರಾಜ, ಆದರೆ ಗಿಡುಗ ಕೇಳಿದ್ದೇನು? ಪಾರಿವಾಳದಷ್ಟೇ ತೂಕದ ರಾಜನ ತೊಡೆಯ ಮಾಂಸ!
ರಾಜ ತಡಮಾಡಲಿಲ್ಲ, ತಕ್ಕಡಿಯನ್ನು ತರಿಸಿ ಒಂದು ತಟ್ಟೆಯಲ್ಲಿ ಪಾರಿವಾಳವನ್ನಿರಿಸಿ ಇನ್ನೊಂದರಲ್ಲಿ ತನ್ನ ತೊಡೆಯ ಮಾಂಸವನ್ನು ಕತ್ತರಿಸಿ ಹಾಕಿದ, ತಟ್ಟೆ ಅಲ್ಲಾಡಲಿಲ್ಲ. ಎಷ್ಟು ಮಾಂಸವನ್ನು ಹಾಕಿದರೂ ತಟ್ಟೆ ಮೇಲೇಳಲಿಲ್ಲವೆಂಬ ನೋವು! ತನ್ನ ದೇಹದ ನೋವು ರಾಜನಿಗೆ ದೊಡ್ಡದಾಗಲಿಲ್ಲ, ಧರ್ಮಕ್ಕಾಗಿ ತನ್ನ ಪ್ರಾಣವನ್ನೇ ಅರ್ಪಿಸಲು ಸಿದ್ಧನಾದ ರಾಜ ಹಿಂದುಮುಂದು ನೋಡದೆ ಇನ್ನೊಂದು ತಟ್ಟೆಯಲ್ಲಿ ತಾನೇ ಮಲಗಿದ. ಈಗ ಗಿಡುಗ ರಾಜನ ಮಾಂಸವನ್ನು ಬಯಸಲಿಲ್ಲ, ಬದಲಿಗೆ ಗಿಡುಗ ರೂಪಿಯಾಗಿ ಇಂದ್ರನೂ ಪಾರಿವಾಳ ರೂಪಿಯಾಗಿ ಅಗ್ನಿಯೂ ಕಾಣಿಸಿಕೊಂಡು ತಮ್ಮ ಪರೀಕ್ಷೆಯಲ್ಲಿ ನೀನು ಗೆದ್ದು ಬಿಟ್ಟೆ ಎಂದರು. ರಾಜನ ಕೀರ್ತಿ ಜಗದಗಲ ಪಸರಿಸಿ ‘ಶಿಬಿಯ ನೆನಪು ಚಿರಾಯುವಾಯ್ತು’
–ವಿಜಯಾಸುಬ್ರಹ್ಮಣ್ಯ , ಕುಂಬಳೆ
ಸುರಹೊನ್ನೆಯ ಸಂಪಾದಕಿ ಹೇಮಮಾಲಾ ಹಾಗೂ ಓದುಗ ಬಳಗಕ್ಕೆ ನಮೋ ನಮಃ.
ಎಂದಿನಂತೆ ನಿಮ್ಮ ಪೌರಾಣಿಕ ಕಥೆಗಳಲ್ಲಿ ಈ ಸಾರಿ ಶಿಬಿ ಚಕ್ರವರ್ತಿ ಯ ಕಥೆ ಚೆನ್ನಾಗಿ ಮೂಡಿಬಂದಿದೆ. ಧನ್ಯವಾದಗಳು ಮೇಡಂ
ಶಿಬಿ ಚಕ್ರವರ್ತಿಯ ಕಥೆ ಆಕರ್ಷಕವಾಗಿ ಮೂಡಿಬಂದಿದೆ
ನಾಗರತ್ನ ನಿಮಗೆ ತುಂಬಾ ಕೃತಜ್ಞತೆಗಳು.
ನೈಸ್
ದಾನದ ಶ್ರೇಷ್ಠತೆಯನ್ನು ಸಾರುವ ಶಿಬಿ ಚಕ್ರವರ್ತಿಯ ಪೌರಾಣಿಕ ಕಥೆ ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಅಭಿನಂದನೆಗಳು.
ತನ್ನ ಮೈಯ ಮಾಂಸವನ್ನೇ ದಾನ ಮಾಡಿ ಗೆದ್ದ ಶಿಬಿಯ ಕಥೆ ಬಹಳ ಚೆನ್ನಾಗಿ ಮೂಡಿ ಬಂದಿದೆ ವಿಜಯಕ್ಕಾ.