ಅವಿಸ್ಮರಣೀಯ ಅಮೆರಿಕ-ಎಳೆ 15
(ಕಳೆದ ವಾರದ ಸಂಚಿಕೆಯಿಂದ ಮುಂದುವರಿದುದು…)
ಬದುಕಿನ ಬಲೆಯೊಳಗೆ…
ಅಮೆರಿಕದಲ್ಲಿ ನಾನು ಗಮನಿಸಿದಂತೆ ವಾರಾಂತ್ಯದ ಎರಡು ದಿನಗಳ ರಜೆಯನ್ನು ಯಾರೂ ಮನೆಯೊಳಗೆ ಕಳೆಯುವುದಿಲ್ಲ. ಶುಕ್ರವಾರದಂದು ಸಂಜೆಯೇ ಕುಟುಂಬ ಸಮೇತ ಮನೆಯಿಂದ ಹೊರಟು ಬಿಡುತ್ತಾರೆ. ಪ್ರತಿಯೊಬ್ಬರೂ ಸ್ವಂತ ವಾಹನಗಳನ್ನು ಹೊಂದಿರುವುದರಿಂದ ಅಕ್ಕಪಕ್ಕದ ಪ್ರವಾಸೀ ತಾಣಗಳಿಗೆ, ಸಮುದ್ರ ತೀರಗಳಿಗೆ, ಬೆಟ್ಟ ಗುಡ್ಡಗಳನ್ನು ಏರಲು, ಕಾಡಿನೊಳಗೆ ಡೇರೆ ಹಾಕಿ ಅಲ್ಲೇ ಬಹಳ ಖುಷಿಯಿಂದ ಸಮಯ ಕಳೆಯಲು, ಇಲ್ಲವಾದರೆ, ಹಗಲು ಹೊತ್ತಿನಲ್ಲಿ, ಸಮುದ್ರ ತೀರದಲ್ಲಿ ಉದ್ದದ ಗಾಳವನ್ನು ಇಳಿಬಿಟ್ಟು, ಗಂಟೆಗಟ್ಟಲೆ ಅಲ್ಲಾಡದೆ ಕುಳಿತು, ಸಿಕ್ಕಿದ ಒಂದೆರಡು ಮೀನುಗಳನ್ನು ನೋಡಿ ಖುಷಿ ಪಡಲು ಬಿಡುವಿನ ದಿನಗಳನ್ನು ಉಪಯೋಗಿಸುವರು. ಈ ತರದ ಹವ್ಯಾಸಗಳನ್ನು ನೋಡುವಾಗ ನಮಗೆ ನಿಜವಾಗಿಯೂ ಆಶ್ಚರ್ಯವಾಗುತ್ತದೆ. ನಗು ಬರುತ್ತದೆ. ಹೆಚ್ಚಿನ ಮನೆಗಳ ಹಿಂಭಾಗದಲ್ಲಿ, ಬಸ್ಸು ಗಾತ್ರದ ದೊಡ್ಡದಾದ ವಾಹನ(Recreational Vehicle) ಅಥವ ಪುಟ್ಟ ದೋಣಿಗಳನ್ನೂ ಕಾಣಬಹುದು. ಕೆಲವು ಕಾರುಗಳ ಬೆನ್ನ ಮೇಲೆಯೇ ಏರಿ ಕುಳಿತಿದ್ದವು ಒಂದೆರಡು ದೋಣಿಗಳು! ನನಗೋ ಆಶ್ಚರ್ಯ.. ನೀರಿಲ್ಲದಲ್ಲಿ ಈ ದೋಣಿ ಯಾಕಪ್ಪ ಎಂದು! ಕುತೂಹಲದಿಂದ ಮಗಳಲ್ಲಿ ಕೇಳಿದಾಗ, ರಜಾ ದಿನಗಳಲ್ಲಿ ತಮ್ಮ ಸ್ವಂತ ಉಪಯೋಗಕ್ಕಾಗಿ ಇರಿಸಿಕೊಂಡಿರುವರೆಂದು ತಿಳಿಯಿತು. ಇಲ್ಲಿ ವಿಹಾರತಾಣಗಳು ಸಹಿತ ಎಲ್ಲಾ ಸ್ಥಳಗಳೂ ಬಹಳ ಅನುಕೂಲಕರವಾಗಿ, ಅಚ್ಚುಕಟ್ಟಾಗಿರುತ್ತವೆ. ದೊಡ್ಡ, ಸಣ್ಣ ಸರೋವರಗಳು ವರ್ಷ ಪೂರ್ತಿ ಸ್ವಚ್ಛ ನೀರಿನಿಂದ ತುಂಬಿರುವುದರಿಂದ, ಈ ಬಲು ಹಗುರವಾದ ಅದರೆ ಅಷ್ಟೇ ಗಟ್ಟಿಮುಟ್ಟಾದ ಫೈಬರ್ ದೋಣಿಗಳಲ್ಲಿ, ಅವರೇ ಹುಟ್ಟು ಹಾಕಿ ಜಲವಿಹಾರವನ್ನು ನಡೆಸುತ್ತಾರೆ. ದೀರ್ಘ ರಜೆಗಳಲ್ಲಿ ನೂರಾರು ಮೈಲು ದೂರದ ಪ್ರವಾಸೀ ತಾಣಗಳಿಗೆ ಹೋಗುವರು. ಹೀಗೆ ಯಾವಾಗಲೂ ಮನಸೋಇಚ್ಛೆ ವಿಲಾಸೀ ಜೀವನ ನಡೆಸುವುದನ್ನು ಕಾಣುವಾಗ ನಮ್ಮಂತಹವರಿಗೆ ಗಾಬರಿಯಾಗುವುದು ಸಹಜ. ನಾನು ಗಮನಿಸಿದಂತೆ, ನಮ್ಮಲ್ಲಿರುವಂತೆ, ಪಟ್ಟಣದಲ್ಲಿ ಯಾವುದೇ ಬ್ಯಾಂಕುಗಳೂ ಇದ್ದಂತಿರಲಿಲ್ಲ. ಹಾಗಾದರೆ ಇಲ್ಲಿ ಕೆಲಸದಿಂದ ನಿವೃತ್ತಿ ಹೊಂದಿದ ಬಳಿಕ ಅವರ ಜೀವನ ಹೇಗಿರುತ್ತದೆ? ಅವರ ಜೀವನ ಭದ್ರತೆಗೆ ಏನಿರುತ್ತದೆ ಎನ್ನುವ ಕುತೂಹಲ ಆಗಾಗ ಉಂಟಾಗುತ್ತಿತ್ತು. ಇಲ್ಲಿ, ಕೆಲಸವಿಲ್ಲದವರು ಅಥವಾ ತೀರಾ ಬಡವರು ಇಲ್ಲವೆಂದೇನೂ ಇಲ್ಲ.. ಆದರೆ ಅವರ ಸಂಖ್ಯೆ ತೀರಾ ಕಡಿಮೆಯಷ್ಟೆ.
ನಾನು ರಸ್ತೆ ಪಕ್ಕದ ಕಾಲುದಾರಿಯಲ್ಲಿ ನಡೆದು ಹೋಗುತ್ತಿರುವಾಗ, ದಿನಾಲೂ ಒಂದೇ ಕಡೆ ಹಲವಾರು ದಿನ ಒಂದು ದೊಡ್ಡ ಹಳೆಯದಾದ R.V. ನಿಂತಿರುತ್ತಿತ್ತು. ಇನ್ನು ಕೆಲವು ಕಡೆ ತುಂಬಾ ಮೂಟೆ ತುಂಬಿಸಿದ್ದ ಹಳೆಯದಾದ ಕಾರು, ಬೈಕ್ ಗಳು ದಿನಗಟ್ಟಲೆ ರಸ್ತೆ ಪಕ್ಕ ನಿಂತಿರುವುದು ಕಾಣಸಿಗುತ್ತಿದ್ದವು. ಇವುಗಳು ವಸತಿ ಸಮುಚ್ಚಯದ ಬಳಿಯ ರಸ್ತೆ ಪಕ್ಕದಲ್ಲಿ ಇರುತ್ತಿದ್ದುವು. ನನಗೋ ಕುತೂಹಲ, ಇದ್ಯಾಕೆ ಎಷ್ಟು ದಿನಗಳಾದರೂ ಅಲ್ಲಿಂದ ಕದಲಲಿಲ್ಲವೆಂದು. ಅದರ ಬಗ್ಗೆ ತಿಳಿದಾಗ, ಮನೆ ಮಾರು ಇಲ್ಲದ ಅಲ್ಲಿಯ ಬಡವರ ಬವಣೆಯ ಮುಖವೊಂದು ಅನಾವರಣಗೊಂಡಿತು.. ಮನಸ್ಸು ಮೂಕವಾಯಿತು..
ಅಮೆರಿಕವು ಶ್ರೀಮಂತ ದೇಶವಂತೂ ನಿಜ..ಹಾಗೆಯೇ ಅಲ್ಲಿ ಶ್ರೀಮಂತರು ಮಾತ್ರ ವಾಸಿಸಲು ಅರ್ಹರು ಎಂದೆನಿಸುತ್ತದೆ ನನಗೆ. ವೃತ್ತಿಯಲ್ಲಿರುವವರು ತಮ್ಮ ಆದಾಯದ ಸುಮಾರು10% ರಿಂದ 37% ರಷ್ಟನ್ನು ತೆರಿಗೆಗಾಗಿಯೇ ಪಾವತಿಸಬೇಕಾಗುತ್ತದೆ. ಆದರೆ, ಇದು ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಿರುತ್ತದೆ. ನಾವಿದ್ದ ಕ್ಯಾಲಿಫೋರ್ನಿಯ ರಾಜ್ಯದಲ್ಲಿ ಅತ್ಯಂತ ಹೆಚ್ಚು ತೆರಿಗೆಯಿರುವುದು ತಿಳಿಯಿತು(ಸುಮಾರು 30%). ಹಾಗೆಯೇ, ಪ್ರತಿಯೊಂದು ವಸ್ತುವೂ ದುಬಾರಿ. ಆದ್ದರಿಂದಲೇ ಕೈಯಲ್ಲಿ ಸಾಕಷ್ಟು ಡಾಲರ್ ಓಡಾಡಿದರೆ ಮಾತ್ರ ಜೀವಿಸಲು ಸಾಧ್ಯ. ಪಾವತಿಸಬೇಕಾದ ದುಬಾರಿ ತೆರಿಗೆಗಳು, ದುಬಾರಿ ವೈದ್ಯಕೀಯ ಸೌಲಭ್ಯ, ಹೀಗೆ ಎಲ್ಲವೂ ಅತ್ಯಂತ ಹೆಚ್ಚು ಹಣವನ್ನು ಬೇಡುತ್ತವೆ. ಅಲ್ಲಿಯೇ ಹಲವಾರು ವರ್ಷಗಳಿಂದ ಇದ್ದು, ಯಾವುದೋ ಸಂಕಷ್ಟಕ್ಕೆ ಒಳಗಾಗಿ, ಇದ್ದುದನ್ನೆಲ್ಲಾ ಕಳೆದುಕೊಂಡವರು, ನೌಕರಿ ಇಲ್ಲದವರು, ಅಲ್ಲಿಯ ಪ್ರಜೆ ಇರಬಹುದು ಅಥವಾ ಬೇರೆ ದೇಶದವರಾದರೆ ಅವರಲ್ಲಿ ಹಿಂದಿರುಗಿ ಹೋಗಲೂ ಕಾಸಿಲ್ಲದವರು ಈ ಸ್ಥಿತಿಗೆ ತಲಪುತ್ತಾರೆ. ಯಾವುದೋ ಸಣ್ಣ ಊರಿನ ಒಳ ರಸ್ತೆ ಪಕ್ಕದಲ್ಲಿ ವಾಹನವನ್ನು ನಿಲ್ಲಿಸಿ ಅದರೊಳಗೆ ವಾಸಿಸುತ್ತಾರೆ. ಪೋಲೀಸರೇನಾದರೂ ಗಮನಿಸುವರೆಂಬ ಸಂಶಯವಾದರೆ, ಅಲ್ಲಿಂದ ಬೇರೆ ಕಡೆಗೆ ಸ್ಥಳ ಬದಲಾಯಿಸುತ್ತಾರೆ. ಇನ್ನೊಂದು ಗಮನಕ್ಕೆ ಬರುವ ವಿಷಯವೆಂದರೆ ಅವರೊಡನೆ ಅವರ ಕುಟುಂಬವಿರುವುದಿಲ್ಲ.. ಅವರು ಒಬ್ಬಂಟಿಯಾಗಿರುವರು.
ಇನ್ನು, ಇಲ್ಲಿಯ ನೌಕರರು ತಮ್ಮ ವೇತನದಿಂದ, ನಮ್ಮಲ್ಲಿಯ EPF ನಂತೆ ಉಳಿತಾಯ ಮಾಡುವ ಅವಕಾಶವಿದೆ.. ಇದು ನಿವೃತ್ತಿಯ ನಂತರದ ಜೀವನಕ್ಕೆ ಭದ್ರತೆಯನ್ನು ಒದಗಿಸುವುದೂ ನಿಜ. 401K ಎಂಬುದು ಇದರಲ್ಲಿ ಬಹು ಮುಖ್ಯವಾಗಿ ಚಾಲ್ತಿಯಲ್ಲಿರುವ ಯೋಜನೆ. ತಮ್ಮ ವೇತನದ ಸ್ವಲ್ಪ ಭಾಗವನ್ನು ಇದರಲ್ಲಿ ತೊಡಗಿಸಿಕೊಳ್ಳಬಹುದು.. ಇದಕ್ಕೆ ತೆರಿಗೆ ಇರುವುದಿಲ್ಲ. ಅಷ್ಟೇ ಮೊತ್ತವನ್ನು ಕಂಪೆನಿಯೂ ಹೂಡುವುದಾದರೂ, ಅದಕ್ಕೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಫ್ಲೋರಿಡಾವು ಅಮೆರಿಕದವರು ನಿವೃತ್ತಿಯ ಬಳಿಕ ವಾಸಿಸಲು ಇಷ್ಟ ಪಡುವ ಅತ್ಯಂತ ಸುರಕ್ಷಿತ, ಸುಂದರ ಪ್ರದೇಶವಾಗಿದೆ. ಅದಕ್ಕೆ ಕಾರಣ ಹಲವಾರು.. ಉತ್ತಮ ಹವಾಮಾನ, ಅತ್ಯಂತ ಕಡಿಮೆಯ ತೆರಿಗೆ ಪದ್ಧತಿ, ಅತ್ಯಂತ ಕಡಿಮೆ ಜೀವನ ನಿರ್ವಹಣಾ ವೆಚ್ಚ ಇತ್ಯಾದಿಗಳು ಮುಖ್ಯ ಪಾತ್ರ ವಹಿಸುತ್ತವೆ. ಆದ್ದರಿಂದಲೇ ಫ್ಲೋರಿಡಾದಲ್ಲಿ 65ವರ್ಷ ವಯಸ್ಸಿಗಿಂತ ಮೇಲ್ಪಟ್ಟವರ ಸಂಖ್ಯೆ ಅತ್ಯಧಿಕ! 1920ರಿಂದಲೇ ಪ್ರಾರಂಭವಾದ CCRCs (Continuing Care Retirement Communities) ಅಂದರೆ, ಸಮುದಾಯ ಕೇಂದ್ರಗಳು, ನಿವೃತ್ತಿಯ ನಂತರದ ಆರೋಗ್ಯ ಹಾಗೂ ಜೀವನದ ಭದ್ರತೆಗಳನ್ನು ನೋಡಿಕೊಳ್ಳುತ್ತವೆ… ಅಂದರೆ, ಪಾವತಿ ಮೂಲಕ ನಡೆಯುವ ವೃದ್ಧಾಶ್ರಮಗಳು ಎನ್ನಬಹುದೇನೋ.
ಇನ್ನು, ಇಲ್ಲಿ ಗಮನಕ್ಕೆ ಬರುವ ಮುಖ್ಯವಾದ ಇನ್ನೊಂದು ಅಂಶವೆಂದರೆ, ವಿಚಿತ್ರವಾದ ಕುಟುಂಬ ಜೀವನ ಪದ್ಧತಿ. ನಮ್ಮ ಚಿಕ್ಕಂದಿನಲ್ಲಿ, ಅವಿಭಕ್ತ ಕುಟುಂಬದಲ್ಲಿ ಬೆಳೆದ ನಮಗೆ, ಈಗಿನ ದಿನಗಳಲ್ಲಿ ಅವು ಕಾಣಸಿಗುವುದೇ ಅಪರೂಪ…ಹೆತ್ತವರು ಮತ್ತು ಮಕ್ಕಳು ಮಾತ್ರವಿರುವ ಚಿಕ್ಕ ಕುಟುಂಬಗಳಲ್ಲಿ ಈಗ ನಾವಿರುವೆವು. ಆದರೆ ಅಲ್ಲಿ ಅದೆಷ್ಟೋ ವರ್ಷಗಳ ಹಿಂದೆಯೇ ರೂಢಿಯಾಗಿ ಬಿಟ್ಟ ಪದ್ಧತಿಯು ನಮ್ಮನ್ನು ಅರೆಕ್ಷಣ ಬೆಚ್ಚಿಬೀಳಿಸುತ್ತದೆ. ತಾಯಿಯಾದವಳು ತನ್ನ ಹೆರಿಗೆ, ಪುಟ್ಟ ಮಗುವಿನ ಆರೈಕೆಗೆಂದು ತನ್ನ ತಾಯಿಯ ನೆರವನ್ನು ಯಾಚಿಸುವುದಿಲ್ಲ. ಹೆರಿಗೆಯಾದ ನಾಲ್ಕೇ ದಿನಗಳಲ್ಲಿ ತನ್ನೆಲ್ಲಾ ಕೆಲಸಗಳ ಜೊತೆಗೆ ವೃತ್ತಿಗೂ ಹಾಜರಾಗುವುದು ಆಶ್ಚರ್ಯವೆನಿಸುತ್ತದೆ. ಮಗುವನ್ನು ಮೈಗೆ ಕಟ್ಟಿಕೊಂಡು ನಡೆದಾಡುತ್ತಾಳೆ…ತನ್ನ ಕಾರಲ್ಲಿ ಕುಳ್ಳಿರಿಸಿಕೊಂಡು ಎಲ್ಲಿ ಬೇಕೆಂದರಲ್ಲಿ ಓಡಾಡುತ್ತಾಳೆ. ನನಗಂತೂ ಇಂತಹದನ್ನು ಮೊದಲ ಬಾರಿಗೆ ಕಂಡಾಗ ತುಂಬಾ ಬೇಸರ ಹಾಗೂ ಆಶ್ಚರ್ಯವಾಯ್ತು. ನಮ್ಮ ರೀತಿ, ನೀತಿ, ಮಗಳ ಸಹಾಯಕ್ಕಾಗಿ ನಾನು ಅಲ್ಲಿಗೆ ಬಂದಿರುವುದು ತಿಳಿದ ಅಲ್ಲಿಯ ಮಹಿಳೆಯೊಬ್ಬಳು ಸಂತಸದಿಂದ ಭಾವುಕಳಾದುದು ನೆನಪಿಗೆ ಬರುತ್ತಿದೆ. ಅವರು ತಮ್ಮ ಮಕ್ಕಳನ್ನು ಪ್ರೀತಿಯಿಂದ ಚೆನ್ನಾಗಿ ನೋಡಿಕೊಂಡರೂ, ಮಕ್ಕಳು ಸುಮಾರು ಹದಿನೈದನೇ ವಯಸ್ಸಿಗೆ ಬಂದಾಗ, ಅವರು ಸ್ವಾವಲಂಬನೆಯ ಜೀವನ ನಡೆಸಲು ಅಭ್ಯಾಸವನ್ನು ಮಾಡಿಸುವರು. ತಮ್ಮ ವಿದ್ಯಾಭ್ಯಾಸ ಮತ್ತು ಇತರ ಖರ್ಚುಗಳಿಗೆ ಮಕ್ಕಳು ಪೋಷಕರ ಮೇಲೆ ಅವಲಂಬಿತವಾಗಿರುವುದಿಲ್ಲ. ಹೋಟೇಲ್, ಬಾರ್, ಹೀಗೆ ಎಲ್ಲಾದರೂ ಅವಕಾಶ ಕಲ್ಪಿಸಿಕೊಂಡು, ದುಡಿದು ಪ್ರತ್ಯೇಕವಾಗಿ ಇದ್ದು ಜೀವಿಸುವುದು ಅಭ್ಯಾಸವಾಗಿಬಿಟ್ಟಿರುತ್ತದೆ. ನಾವು ಹೋಗಿದ್ದ ಹೋಟೇಲ್ ಒಂದರಲ್ಲಿ ಇಂತಹ ಒಬ್ಬ ಬಾಲಕ ತಿಂಡಿ ತಂದಿಟ್ಟು, ಮೇಜು ಒರಸಿ, ಕೆಲಸ ಮುಗಿಸಿದ ಬಳಿಕ ಪಕ್ಕದ ಖಾಲಿ ಮೇಜಿನ ಬಳಿ ಕುಳಿತು ದಪ್ಪನೆಯ ಪುಸ್ತಕವನ್ನು ಓದುತ್ತಿದ್ದುದು ಗಮನಕ್ಕೆ ಬಂತು. ತಂದೆ ತಾಯಿಯ ಮಮತೆಯ ಆಸರೆ ಇಲ್ಲದೆ ವಿದ್ಯಾಭ್ಯಾಸ ಮಾಡುತ್ತಿದ್ದ ಬಾಲಕನ ಬಗ್ಗೆ ಕರುಣೆಯುಂಟಾಗಿ, ಮನದ ಮೂಲೆಯಲ್ಲಿ ನೋವಿನ ಅಲೆ ಎದ್ದುದರ ಜೊತೆಗೇ ಅವನ ಆತ್ಮಾಭಿಮಾನಕ್ಕೆ ಮೆಚ್ಚುಗೆಯೆನ್ನಿಸಿದ್ದೂ ಹೌದು. ಅದಕ್ಕಾಗಿಯೇ ವರ್ಷಕ್ಕೊಮ್ಮೆ, ಅಮ್ಮನ ದಿನ, ಅಪ್ಪನ ದಿನ ಆಚರಿಸಿ, ಅವರಲ್ಲಿಗೆ ಹೋಗಿ ಏನಾದರೂ ಉಡುಗೊರೆ ನೀಡಿ, ಮಾತನಾಡಿಸಿಕೊಂಡು ಬರುವ ಪದ್ಧತಿ ಪ್ರಾರಂಭವಾಯಿತು ಎನಿಸುತ್ತದೆ. ಈ ಆಚರಣೆಯು ಇಂದು ನಮ್ಮನ್ನೂ ಸೇರಿ, ವಿಶ್ವವಿಡೀ ವ್ಯಾಪಿಸಿರುವುದು ಸುಳ್ಳಲ್ಲ.
ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ : http://surahonne.com/?p=35036
ಮುಂದುವರಿಯುವುದು….
-ಶಂಕರಿ ಶರ್ಮ, ಪುತ್ತೂರು,
ಎಂದಿನಂತೆ ಪ್ರವಾಸ ಕಥನ ಓದಿಸಿ ಕೊಂಡು ಹೋಯಿತು. ಧನ್ಯವಾದಗಳು ಮೇಡಂ
ಪ್ರೀತಿಯ ಸಹೃದಯೀ ಸ್ಪಂದನೆಗೆ ಕೃತಜ್ಞತೆಗಳು.. ನಾಗರತ್ನ ಮೇಡಂ.
Very nice.
ಧನ್ಯವಾದಗಳು ನಯನಾ ಮೇಡಂ.
ದೂರದ ಬೆಟ್ಟದ ಕಂದಕಗಳನ್ನೂ ಗುರುತಿಸಿದ್ದು ಮೆಚ್ಚುಗೆಯಾಯಿತು.