ಕಾದಂಬರಿ: ನೆರಳು…ಕಿರಣ 10
–ಹಿಂದಿನ ಸಂಚಿಕೆಯಿಂದ ಮುಂದುವರಿದುದು…..
“ನನಗೇನೂ ಬೇಡಿ, ರೆಡಿಯಾಗಿದ್ದರೆ ಹೊರಡೋಣ ಬನ್ನಿ, ಅವತ್ತು ನಿಲ್ಲಿಸಿದ್ದೆನಲ್ಲಾ ರಸ್ತೆಯ ತಿರುವಿನಲ್ಲಿ ಮರದ ಹತ್ತಿರ ಅಲ್ಲಿ ಕಾರಿನ ಬಳಿ ಇರುತ್ತೇನೆ” ಎಂದು ನಿಲ್ಲದೆ ಹೊರಟುಹೋದನು. ನಂಜುಂಡನನ್ನು ಕಳುಹಿಸಿ ಒಳಬಂದ ಕೇಶವಯ್ಯ “ಭಟ್ಟರೇ ಗಾಡಿ ಕಳುಹಿಸಿದ್ದಾರೆ ನಡೆಯಿರಿ, ಹೋಗಿ ಬಂದುಬಿಡೋಣ.” ಎಂದು ಅಲ್ಲಿಯೇ ಕುರ್ಚಿಯ ಮೇಲಿದ್ದ ಶಾಲನ್ನು ತೆಗೆದುಕೊಂಡು ಹೆಗಲಮೇಲೆ ಹೊದ್ದು ನಡೆದರು. ಮಿಕ್ಕವರೂ ಮಕ್ಕಳಿಗೆ ಎಚ್ಚರಿಕೆ ಹೇಳಿ ಅವರನ್ನು ಹಿಂಬಾಲಿಸಿದರು. ಸುಬ್ಬು ಅವರೆಲ್ಲರನ್ನೂ ಕಳುಹಿಸಿ ಮುಂಭಾಗಿಲನ್ನು ಭದ್ರಪಡಿಸಿದ. ಹೊರಬಂದು ಮನೆಯಿಂದ ಸ್ವಲ್ಪ ದೂರದಲ್ಲಿ ನಿಲ್ಲಿಸಿದ್ದ ಕಾರಿನ ಹತ್ತಿರ ನಂಜುಂಡ ನಿಂತಿರುವುದನ್ನು ಕಂಡು ಅಲ್ಲಿಗೆ ಹೋದರು.
“ಕಾರಿನ ಬಾಗಿಲನ್ನು ತೆರೆಯುತ್ತಾ ನಂಜುಂಡ ಬನ್ನಿ, ಬನ್ನಿಯಮ್ಮಾ ಕುಳಿತುಕೊಳ್ಳಿ” ಎಂದು ಎಲ್ಲರನ್ನೂ ಕುಳ್ಳಿರಿಸಿದನು. ದಾರಿಯಲ್ಲಿ ಯಾರೊಬ್ಬರೂ ತುಟಿಬಿಚ್ಚಲಿಲ್ಲ. ಅವರವರ ಆಲೋಚನೆಯಲ್ಲಿ ಮುಳುಗಿದ್ದರು. ಜೋಯಿಸರ ಮನೆಯಿದ್ದ ಬಾಣಸವಾಡಿ ತಲುಪಿದಾಗ ಇನ್ನೂ ನಾಲ್ಕು ಗಂಟೆಯೂ ಆಗಿರಲಿಲ್ಲ. “ಬೇಗನೆ ಬಂದ ಹಾಗಾಯಿತಲ್ಲವೇ? ಕೇಶವಣ್ಣಾ” ಎಂದಳು ಲಕ್ಷ್ಮಿ.
‘ಹೂ..ಈ ಹೊತ್ತಿನಲ್ಲಿ ಅಷ್ಟೇನೂ ಟ್ರಾಫಿಕ್ ಇರುವುದಿಲ್ಲ. ಅಲ್ಲದೆ ನಂಜುಂಡನಿಗೆ ಬೆಂಗಳೂರಿನ ಗಲ್ಲಿಗಳ ಪರಿಚಯ ಚೆನ್ನಾಗಿದೆ. ನಾನೇ ನಿಮ್ಮನ್ನು ಕರೆತಂದಿದ್ದರೂ ಇಷ್ಟು ಬೇಗ ತಲುಪುತ್ತಿರಲಿಲ್ಲ. ಏಕೆಂದರೆ ಯಾವಾಗಲೋ ಒಂದೆರಡು ಬಾರಿ ಅದೂ ಬಹಳ ಹಿಂದೆ ಬಂದಿದ್ದೆ. ದಾರಿ ಚೆನ್ನಾಗಿ ನೆನಪಿದೆ. ಆದರೆ ರಿಕ್ಷಾ ಚಾಲಕರ ಮರ್ಜಿ ಹಿಡಿದು ಬರಬೇಕಿತ್ತು. ಹೋಗಲಿ ಬಿಡಿ ಬೇಗನೆ ಬಂದೆವಲ್ಲ” ಎಂದು ಹೇಳುತ್ತಾ ಕಾರಿನಿಂದ ಇಳಿದರು ಕೇಶವಯ್ಯ. ಮಿಕ್ಕವರು ಅವರನ್ನು ಅನುಸರಿಸಿದರು.
ಅವರ ಮನೆಯ ಗೇಟಿನ ಬಳಿಯಲ್ಲಿಯೇ ನಿಂತಿದ್ದ ಜೋಯಿಸರ ಮಗ ಶ್ರೀನಿವಾಸ ಅವರೆಲ್ಲರನ್ನೂ ಬಹಳ ಆದರದಿಂದ ಬರಮಾಡಿಕೊಂಡನು. ಎರಡಂತಸ್ಥಿನ ಮನೆ. ಗೇಟಿನಿಂದ ಒಳಬಂದಾಗ ಕಂಡಿದ್ದು ಕಾಂಪೌಂಡಿನ ವಿಶಾಲವಾದ ಜಾಗ. ಗೋಡೆಯ ಅಂಚಿನಲ್ಲಿ ಸಾಲಾಗಿ ಬೆಳೆದಿದ್ದ ದಾಸವಾಳ, ಶಂಖಪುಷ್ಪ, ಕಣಿಗಲೆ, ಮರುಗ, ಪಚ್ಚೆತೆನೆ, ಡೇರೆ, ಗುಲಾಬಿ ಗಿಡಗಳು, ಮಧ್ಯದಲ್ಲಿ ಮಲ್ಲಿಗೆಯ ಅಂಬು ಕಾಣಿಸಿದವು. ತಲೆಬಾಗಿಲಿಗೆ ಎದುರಾಗಿ ಎರಡೂ ಪಕ್ಕದಲ್ಲಿ ಉದ್ದನೆಯ ಕಟ್ಟೆ, ಅದರ ಮೇಲೆ ನೀರು ತುಂಬಿದ್ದ ಕೊಳಗಗಳು, ಚೊಂಬು ಇದ್ದವು. ಎಲ್ಲರೂ ಅಲ್ಲಿ ಕೈಕಾಲು ತೊಳೆದುಕೊಂಡರು. ಮುಂದಕ್ಕೆ ನಡೆದರೆ ಅಲ್ಲಿ ಒಂದು ಪುಟ್ಟದಾದ ಅಂಗಳ, ಮಧ್ಯದಲ್ಲಿ ತುಳಸೀಕಟ್ಟೆಯಿತ್ತು. ಅಲ್ಲಿಯೇ ನಿಂತಿದ್ದ ಜೋಯಿಸರು ದಂಪತಿಗಳನ್ನು ಕಂಡು ಎಲ್ಲರೂ ನಮಸ್ಕರಿಸಿದರು. ಅವರಿಬ್ಬರೂ ಪ್ರತಿವಂದಿಸಿದರು. “ನಮ್ಮ ಹುಡುಗ ನಿಮ್ಮನ್ನು ಜೋಪಾನವಾಗಿ ಕರೆತಂದ ತಾನೇ?” ಎಂದು ವಿಚಾರಿಸಿದರು ಜೋಯಿಸರು.
“ತೊಂದರೆ ಏನೂ ಇಲ್ಲ ಜೋಯಿಸರೇ, ನಾವು ನಿರೀಕ್ಷಿಸಿದ್ದಕ್ಕಿಂತ ಬೇಗನೇ ಕರೆತಂದ” ಎಂದರು ಕೇಶವಯ್ಯ.
‘ನೀವು ನಮ್ಮ ಮನೆಯನ್ನು ನೋಡಿದ್ದಿರಲ್ಲವೇ? ಕೇಶವಯ್ಯಾ” ಎಂದು ಜೊಯಿಸರು ಕೇಳಿದರು.
‘ಓ..ನೋಡದೇ ಏನು, ಆದರೆ ಇತ್ತೀಚೆಗೆ ಬಹಳ ಬದಲಾವಣೆಗಳಾಗಿವೆ. ಮನೆಯ ಮುಂದೆ ಬಹಳ ಮರಗಿಡಗಳಿದ್ದಂತೆ ನೆನಪು” ಎಂದರು.
“ಹೌದು, ನಮ್ಮಪ್ಪ, ಅವರಪ್ಪ, ಅಷ್ಟೇ ಏಕೆ ಮುತ್ತಜ್ಜನವರು ಎಲ್ಲ ಸೇರಿ ಇದ್ದಬದ್ದ ಗಿಡಗಳನ್ನೆಲ್ಲಾ ಹಾಕಿ ಅವುಗಳು ಬೆಳೆದು ಹೆಮ್ಮರಗಳಾಗಿದ್ದವು. ಅವುಗಳ ಬೇರಿನಿಂದ ಮನೆಗೇ ಧಕ್ಕೆ ತರುವ ಹಂತಕ್ಕೆ ಮುಟ್ಟಿತ್ತು. ಅವುಗಳನ್ನು ಕಡಿಯುವುದಿರಲಿ ಅವರಿದ್ದಾಗ ಒಂದು ಕೊಂಬೆಯನ್ನೂ ಕತ್ತರಿಸುವಂತಿರಲಿಲ್ಲ. ಅವೇ ಒಣಗಿ ಬಿದ್ದಾಗಷ್ಟೇ ಎತ್ತಿ ಹಾಕುವುದಿತ್ತು. ಅವರೆಲ್ಲರೂ ಹೋದಮೇಲೆ ನನ್ನ ಕೈಯಿಗೆ ಯಜಮಾನಿಕೆ ಸಿಕ್ಕಿತು. ಮೊದಲು ಕಾಡಿನಂತಿದ್ದ ಮರಗಳಿಗೆ ಮೋಕ್ಷ, ನಂತರ ತಾತಾರಾಯನ ಕಾಲದಲ್ಲಿದ್ದು ಬಳಸಿಬಳಸೀ ಆಕಾರ ಕಳೆದುಕೊಂಡಿದ್ದರೂ ಬಿಸಾಡದೆ ಶೇಖರಿಸಿಟ್ಟಿದ್ದ ಪಾತ್ರೆಗಳಿಗೆ ಮೋಕ್ಷ, ತದನಂತರ ಕೈಕಾಲು ಮುರಿದುಕೊಂಡು ಶೋಚನೀಯ ಪರಿಸ್ಥಿತಿಯಲ್ಲಿದ್ದ ಕುರ್ಚಿ, ಮೇಜು, ಮಂಚ, ಮರದ ಸಂದೂಕಗಳಿಗೆ ಮೋಕ್ಷ ಕೊಟ್ಟದ್ದಾಯ್ತು. ನಮಗೆ ಅನುಕೂಲವಾಗುವಂತೆ ರಿಪೇರಿ ಮಾಡಿಸಿ ಸುಣ್ಣಬಣ್ಣ ಹೊಡೆಸಿ ಪಿತೃಗಳಿಗೆ ತರ್ಪಣ ಬಿಟ್ಟೆ. ಬನ್ನಿ” ಎಂದು ಎಲ್ಲರನ್ನೂ ಒಳಕ್ಕೆ ಬರಮಾಡಿಕೊಂಡರು.
ವೆರಾಂಡ ದಾಟಿಹೋದಾಗ ಸಿಕ್ಕಿದ್ದೇ ನಡುಮನೆ. ಜೋಡಿ ಕಂಬಗಳನ್ನೊಳಗೊಂಡು ವಿಶಾಲವಾಗಿತ್ತು. ಒಂದು ಕಡೆ ಸುಂದರವಾಗಿ ಕೆತ್ತಿದ ಜೋಕಾಲಿ ತೂಗಾಡುತ್ತಿತ್ತು. ಅದರಲ್ಲಿ ಅರಾಮವಾಗಿ ಒಬ್ಬರು ಮಲಗುವಷ್ಟು ವಿಶಾಲವಾಗಿತ್ತು. ಅದಕ್ಕೆ ಹಾಕಿದ್ದ ಕಬ್ಬಿಣದ ಸರಪಳಿ ಮೇಲಿನ ಕೊಕ್ಕೆಯಿಂದ ಸಿಕ್ಕಿಸಿ ಇಳಿದುಬಂದಿತ್ತು. ಮತ್ತೊಂದು ಕಡೆ ಹಾಸಿದ್ದ ಜಮಖಾನೆ, ಅದರ ಎರಡು ಬದಿಯಲ್ಲಿ ಮರದ ಸೋಫಾ, ಅಕ್ಕಪಕ್ಕದಲ್ಲಿ ಕೆಲವು ಕುರ್ಚಿಗಳು, ಒಂದು ಈಜೀಛೇರು, ಅವುಗಳ ಮುಂದಿರಿಸಿದ್ದ ದೊಡ್ಡ ಟೀಪಾಯಿ ಎಲ್ಲವೂ ಬೆಲೆಬಾಳುವ ಮರದಿಂದ ಮಾಡಿದ್ದವು. ಕಿರುಗಣ್ಣಿಂದ ಎಲ್ಲವನ್ನೂ ಗಮನಿಸುತ್ತಲೇ ಎಲ್ಲರಿಗಿಂತ ಹಿಂದೆ ಬರುತ್ತಿದ್ದ ಲಕ್ಷ್ಮಿಗೆ ಕಂಡದ್ದು ನಡುಮನೆಗೆ ಹೊಂದಿಕೊಂಡಂತ್ತಿದ್ದ ನಾಲ್ಕು ಕೊಠಡಿಗಳಿದ್ದವು. ಮಹಡಿಮೇಲಕ್ಕೆ ವೆರಾಂಡದಿಂದಲೇ ಮೆಟ್ಟಿಲುಗಳಿದ್ದವು. ಇನ್ನು ಅಡುಗೆ ಕೋಣೆ, ಊಟದ್ದು, ದೇವರದ್ದು, ಹಿತ್ತಲು, ಹಸುಗಳಿಗಾಗಿ ಬೇರೆ ಕೊಟ್ಟಿಗೆ. ಸಾಕಷ್ಟು ದೊಡ್ಡದೇ. ಹಾಗೆ ನೋಡಿದರೆ ನಾವು ಇರುವ ಮನೆಯೂ ಚಿಕ್ಕದೇನಲ್ಲ. ಆದರೆ ಮಹಡಿಯಿಲ್ಲ. ಮನೆಯಮುಂದೆ ಹೆಚ್ಚು ಜಾಗವಿಲ್ಲ. ಇಷ್ಟೆಲ್ಲಾ ಗುಡಿಸಿ ಸ್ವಚ್ಛವಾಗಿಡಲು ಯಾರಾದರು ಆಲುಕಾಳು ಇರಬಹುದು ಎಂದು ಯೋಚಿಸುವಷ್ಟರಲ್ಲಿ “ ಲಕ್ಷ್ಮಮ್ಮಾ ಬನ್ನೀ” ಎಂದು ಕರೆದ ಸೀತಮ್ಮನವರ ಕರೆಗೆ ಎಚ್ಚೆತ್ತು ಲಗುಬಗೆಯಿಂದ ಗಂಡಸರೆಲ್ಲರಿಗಿಂತ ಸ್ವಲ್ಪ ದೂರದಲ್ಲಿ ಕುಳಿತಿದ್ದ ರಾಧಮ್ಮನವರ ಪಕ್ಕದಲ್ಲಿ ಹೋಗಿ ಕುಳಿತಳು ಲಕ್ಷ್ಮಿ.
ಲೋಕಾಭಿರಾಮವಾಗಿ ಒಂದೆರಡು ಮಾತುಗಳಾದ ನಂತರ “ಸುತ್ತಿ ಬಳಸಿ ಮಾತನಾಡುವ ಅಭ್ಯಾಸ ನನಗಿಲ್ಲ ಭಟ್ಟರೇ, ಎರಡೂ ಕಡೆ ಒಪ್ಪಿಗೆಯಾದ ಮೇಲೆ ಕೇಶವಯ್ಯನವರ ಹತ್ತಿರ ನಾನೊಂದು ಸಲಹೆ ಕೊಟ್ಟಿದ್ದೆ. ತಪ್ಪು ತಿಳಿಯಬೇಡಿ, ಠೇಂಕಾರದಿಂದಾಗಲೀ, ಹಮ್ಮಿನಿಂದಾಗಲೀ ಹೇಳಿಲ್ಲ. ನಮ್ಮ ಮನೆತನದಲ್ಲಿ ಇತ್ತೀಚೆಗೆ ಮಕ್ಕಳ ಸಂಖ್ಯೆ ಕಡಿಮೆ, ಬೆರಳೆಣಿಕೆಯಂತಾಗಿದೆ. ಹಾಗೆಂದು ಜನಿಸಿಲ್ಲವೆಂದಲ್ಲ.. ಸಾಲುಸಾಲಾಗಿ ಹುಟ್ಟಿದ್ದರೂ ಉಳಿದವುಗಳ ಸಂಖ್ಯೆ ಬಗ್ಗೆ ನಾನು ಹೇಳುತ್ತಿರುವುದು. ನಾವೇನು ಕೋಟೀಶ್ವರರಲ್ಲ. ಆದರೂ ಕಷ್ಟಸುಖಗಳನ್ನು ಅರಿತು ಬಾಳುತ್ತಿದ್ದೇವೆ. ನಮ್ಮ ಮನೆಗೆ ಬರುವ ಹೆಣ್ಣುಮಗಳು ಮಹಾಲಕ್ಷ್ಮಿಯಾಗಿ ಬರಲೆಂದೇ ನಮ್ಮ ಬಯಕೆ. ಇದರ ಹೊರತು ಹೆಣ್ಣು ಕೊಟ್ಟವರನ್ನು ಹಿಂಡಿ ಹಿಪ್ಪೆಕಾಯಿ ಮಾಡುವ ಉದ್ದೇಶವಿಲ್ಲ. ಅದಕ್ಕಾಗಿ ನಾನುಕೊಟ್ಟ ಸಲಹೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಹೇಳಿ?” ಎಂದು ಕೇಳಿದರು ಜೋಯಿಸರು.
ಕೇಶವಯ್ಯ ಭಟ್ಟರ ಮುಖನೋಡಿ ಸಂಜ್ಞೆ ಮಾಡಿದರು. ಇಂಗಿತವನ್ನರಿತ ಅವರು “ಜೋಯಿಸರೇ, ನಿಮ್ಮಂತಹ ಸುಸಂಸ್ಕೃತ ಸಜ್ಜನಸಂಪನ್ನರಾದ ಕುಟುಂಬಕ್ಕೆ ನನ್ನ ಮಗಳನ್ನು ಕೇಳಿರುವುದೇ ನಮ್ಮ ಸುಕೃತ. ಆದರೆ ಮದುವೆ ಮಾತ್ರ ಶಾಸ್ತ್ರೋಕ್ತವಾಗಿ ನಮ್ಮ ಶಕ್ತ್ಯಾನುಸಾರ ಮಾಡಿ ಧಾರೆ ಎರೆದು ನಮ್ಮ ಮಗಳನ್ನು ನಿಮ್ಮ ಮನೆಗೆ ಕೊಡುತ್ತೇವೆ. ನೀವೂ ತಪ್ಪು ತಿಳಿಯಬೇಡಿ. ಇದು ನಮ್ಮ ಕಳಕಳಿಯ ಮನವಿ” ಎಂದು ಹೇಳಿದರು.
‘ಆಯಿತು ನಿಮ್ಮಿಷ್ಟ. ಕೆಲವು ಲಗ್ನದ ದಿನಾಂಕಗಳನ್ನು ಗುರುತು ಹಾಕಿದ್ದೇನೆ. ನೋಡಿ ಇವುಗಳಲ್ಲಿ ನಿಮಗೆ ಯಾವುದು ಸೂಕ್ತವೆನ್ನಿದ್ದನ್ನು ಮನೆಯವರೊಡನೆ ಚರ್ಚಿಸಿ ಹೇಳಿಕಳುಹಿಸಿ. ನಾವು ನಿಮ್ಮ ಮನಗೇ ಬಂದು ತಾಂಬೂಲ ಬದಲಾಯಿಸಿಕೊಂಡು ನಿಶ್ಚಯ ಮಾಡಿಕೊಂಡುಬಿಡುತ್ತೇವೆ. ಹುಡುಗನಿಗೆ ನಿಮಗನ್ನಿಸಿದ್ದನ್ನು ನೀವು ಕೊಡಿ, ಹುಡುಗಿಗೆ ನಮಗನ್ನಿಸಿದ್ದನ್ನು ನಾವು ಕೊಡುತ್ತೇವೆ. ಸೂಕ್ತವಾದ ದಿನಾಂಕವನ್ನು ನೀವು ತಿಳಿಸಿದರೆ ನಾನೊಂದು ಸ್ಥಳವನ್ನು ಸೂಚಿಸುತ್ತೇನೆ, ನಿಮಗೆ ಅದು ಅನುಕೂಲವಾಗುತ್ತೆ. ನನ್ನಿಂದ ಇಷ್ಟಾದರೂ ಸಹಾಯ ಮಾಡಲು ಬಿಡಿ ಭಟ್ಟರೇ” ಎಂದರು ಜೋಯಿಸರು.
“ಜೋಯಿಸರೇ ಶ್ರೀರಾಮ ಕಲ್ಯಾಣ ಮಂಟಪ ತಾನೇ?” ಎಂದು ಕೇಳಿದರು ಕೇಶವಯ್ಯ.
“ಅದರ ಬಾಡಿಗೆ ಹೆಚ್ಚೆಂದು ಬಹಳ ಜನ ಹೇಳುವುದನ್ನು ಕೇಳಿದ್ದೇನೆ. ಅದು ನಮ್ಮ ಕೈಯಲ್ಲಿ ಆಗಲಿಕ್ಕಿಲ್ಲ, ದಯವಿಟ್ಟು ಕ್ಷಮಿಸಿ ಜೋಯಿಸರೇ” ಎಂದರು ಭಟ್ಟರು.
“ಹೆದರಬೇಡಿ ಭಟ್ಟರೇ, ಆ ಕಲ್ಯಾಣ ಮಂಟಪವನ್ನು ಜೋಯಿಸರ ಮುತ್ತಜ್ಜ ಕಟ್ಟಿಸಿಕೊಟ್ಟಿರುವುದು. ಅವರ ಮನೆತನದಲ್ಲಿ ಯಾರದ್ದೇ ಕಲ್ಯಾಣವಿದ್ದರೂ ಅವರಿಗೆ ಅಲ್ಲಿ ಯಾವುದೇ ರೀತಿಯ ಶುಲ್ಕವಿಲ್ಲ. ಇಷ್ಟಪಟ್ಟರೆ ಸಂಪ್ರದಾಯದಂತೆ ನಿಮ್ಮ ಮಗಳ ಮದುವೆಯನ್ನು ಅಲ್ಲಿಯೇ ಮಾಡಿ. ಊಟೋಪಚಾರ ನೀಡಿ ಕಳುಹಿಸಿಕೊಡುತ್ತಾರೆ. ಹೆಚ್ಚನ ಖರ್ಚಿಲ್ಲದೆ, ಆಯಾಸವಿಲ್ಲದೆ ಮಾಡಬಹುದು. ಯೋಚಿಸಿ. ಮಿಕ್ಕ ವಿಷಯಗಳನ್ನು ಕೂಲಂಕುಷವಾಗಿ ತಿಳಿಸುತ್ತೇನೆ.” ಎಂದು ಭಟ್ಟರಿಗೆ ಅಭಯ ನೀಡಿದರು ಕೇಶವಯ್ಯನವರು.
“ಹಾಗಿದ್ದರೆ ಈ ಬಗ್ಗೆ ಚರ್ಚಿಸಿ ನಿರ್ಣಯಿಸೋಣ ಕೇಶವಣ್ಣಾ. ಎಂಥಹ ಸುಲಭ ಮಾರ್ಗವನ್ನು ತೋರಿಸಿದಿರಿ ಜೋಯಿಸರೇ. ನಮಸ್ಕಾರಗಳು.” ಎಂದು ಕೈಮುಗಿದರು ಭಟ್ಟರ ಪತ್ನಿ ಲಕ್ಷ್ಮಮ್ಮ. ಅದನ್ನು ಗಮನಿಸಿದ ಜೋಯಿಸರು ಬೀಗರಿಗಿಂತ ಬೀಗಿತ್ತಿಯೇ ಜಾಣೆ, ಧೈರ್ಯಸ್ಥೆ ಇದ್ದ ಹಾಗಿದೆ. ಎಂದುಕೊಂಡವರೇ ‘ಹಾ, ಈಗ ಎಲ್ಲವೂ ಸಂಪನ್ನವಾಯಿತಲ್ಲಾ. ಸ್ವಲ್ಪ ಬಾಯಿ ಸಿಹಿ ಮಾಡಿಕೊಳ್ಳಬಹುದಲ್ಲಾ?” ಎಂದರು ಜೋಯಿಸರು.
ಗಂಡನ ಮಾತು ಕೇಳಿಸಿಕೊಂಡ ಸೀತಮ್ಮನವರು ಎದ್ದು ಒಳಕ್ಕೆ ಹೋದರು. ಸ್ವಲ್ಪ ಹೊತ್ತಿನಲ್ಲೇ ಹೊರಬಂದು ಅವರೆಲ್ಲರನ್ನೂ ಊಟದ ಮನೆಗೆ ಆಹ್ವಾನಿಸಿದರು. ಇತ್ತ ರಾಧಮ್ಮ, ಲಕ್ಷ್ಮಿ ತಾವು ತಂದಿದ್ದ ಹಣ್ಣ್ಣುಹಂಪಲು, ಅಡಿಕೆ, ವೀಳ್ಯದೆಲೆ ಮೇಲಿಟ್ಟು ಹೂವನ್ನು ಒಂದು ತಟ್ಟೆಯಲ್ಲಿ ಜೋಡಿಸಿಟ್ಟುಕೊಂಡು ಕ್ಯಯಲ್ಲಿ ಹಿಡಿದು ಸೀತಮ್ಮನವರ ಹಿಂದೆ ಹೋದರು. ಸೀತಮ್ಮ ಅವರೆಲ್ಲರನ್ನು ಊಟದ ಮನೆಯಲ್ಲಿ ಬಿಟ್ಟು ಅಡುಗೆ ಮನೆಯಕಡೆ ನಡೆದರು. ಈ ಇಬ್ಬರೂ ಅವರನ್ನು ಹಿಂಬಾಲಿಸಿದರು. ಅವರನ್ನು ಕಂಡ ಸೀತಮ್ಮನವರು “ಇದೇನು ನೀವು ತಿಂಡಿಗೆ ಕೂಡದೆ ಇಲ್ಲಿ?” ಎಂದರು.
“ ಸಂಕೋಚ ಬೇಡ, ನಾವೆಲ್ಲ ಆಮೇಲೆ ಕೂಡೋಣ ಎಂದು ಹೇಳುತ್ತಾ” ಅವರು ನೀಡಿದ ಫಲತಾಂಬೂಲದ ತಟ್ಟೆಯನ್ನು ತೆಗೆದುಕೊಂಡರು.
“ಅಮ್ಮಾ ಬಡಿಸಲೇ?” ಎಂಬ ಧ್ವನಿ ಕೇಳಿ ಇಬ್ಬರೂ ಆಕಡೆಗೆ ನೋಡಿದರು. ಸುಮಾರು ಮೂವತ್ತೈದು ವರ್ಷದ ಆಸುಪಾಸಿನ ವ್ಯಕ್ತಿ, ಎಣ್ಣೆಗೆಂಪು ಬಣ್ಣ, ಎತ್ತರವಾಗಿದ್ದ, ದಷ್ಟಪುಷ್ಟವಾಗಿದ್ದ ವ್ಯಕ್ತಿಯನ್ನು ಕಂಡರು. ಉಟ್ಟಿದ್ದ ಪಂಚೆಯನ್ನು ಎತ್ತಿಕಟ್ಟಿದ್ದ, ಬಟ್ಟೆಯಿಂದ ಹೊಲೆದಿದ್ದ ಬನಿಯನ್ ಮೈಮೇಲೆ, ಹೆಗಲಮೇಲೆ ಒಂದು ಚೌಕವಿತ್ತು. ಸೊಂಟಕ್ಕೆ ಬಿಗಿಯಾಗಿ ಕಟ್ಟಿದ್ದ ಕೆಂಪುವಸ್ತ್ರ. ಕೊರಳಲ್ಲಿ ಕಪ್ಪುದಾರ, ಅದರೊಡನೆ ಬೆಳ್ಳಿಯ ವೆಂಕಟರಮಣನ ಚಿತ್ರವಿರುವ ಡಾಲರ್ ಎದೆಯಮೇಲೆ ರಾರಾಜಿಸುತ್ತಿತ್ತು. ಎಡಗೈಯಲ್ಲೊಂದು ತಾಮ್ರದ ಬಳೆ, ದೇವರಿಗೆ ಮುಡಿ ಕೊಟ್ಟು ಬಂದಂತಿದ್ದ ತಲೆ. ಇವರ್‍ಯಾರು ಎಂದು ಕೇಳುವಷ್ಟರಲ್ಲೇ ಸೀತಮ್ಮನವರು “ನಾನೊಬ್ಬಳು, ನಿಮಗೆ ಇವರ ಪರಿಚಯ ಮಾಡಿಸಲಿಲ್ಲ. ಇವರ ಹೆಸರು ನಾರಣಪ್ಪ. ನಮ್ಮ ಮಾವನವರು ತಮ್ಮ ಪೂಜಾಕಾರ್ಯಕ್ಕೆ ಸಹಾಯಕರಾಗಿ ಕರೆತಂದ ಮಾಣಿ. ಈಗ ನಮ್ಮ ಮನೆಯಲ್ಲಿಯ ಒಬ್ಬ ಸದಸ್ಯರಾಗಿದ್ದಾರೆ. ನಮಗೆಲ್ಲಾ ಹೊತ್ತುಹೊತ್ತಿಗೆ ರುಚಿಯಾಗಿ, ಶುಚಿಯಾಗಿ ಅಡುಗೆಗಳನ್ನು ಮಾಡಿ ಬಡಿಸುವ ಭಟ್ಟರಾಗಿ, ನಮ್ಮೆಲ್ಲ ನೆಚ್ಚಿನ ಭಂಟರಾಗಿದ್ದಾರೆ.” ಎಂದರು.
“ಅಮ್ಮಾ..ಸಾಕುಮಾಡಿ ನನ್ನ ಹೊಗಳಿಕೆಯನ್ನು, ನೀವೂ ಹಾಗೇ ನನ್ನನ್ನು ನೋಡಿಕೊಂಡಿದ್ದೀರಿ. ನಾನು ಇದ್ದೇನಮ್ಮ.” ಎಂದು ವಿನಯವಂತಿಕೆ ಪ್ರದರ್ಶಿಸುತ್ತಾ ರಾಧಮ್ಮ, ಲಕ್ಷ್ಮಿಗೆ ನಮಸ್ಕಾರ ಹೇಳಿದರು ನಾರಣಪ್ಪ. “ಇಬ್ಬರಲ್ಲಿ ಯಾರ ಮಗಳು?” ಎಂದು ಕೇಳಿದರು. “ನೋಡಿ ಇಲ್ಲಿದ್ದಾರಲ್ಲಾ ಸುಂದರ ಹೆಣ್ಣುಮಗಳು ಇವರ ಹೆಸರು ಲಕ್ಷ್ಮಿ, ಇವರ ಮಗಳು ಭಾಗ್ಯಾ ಎಂದು ಹೆಸರು” ಎಂದು ನಗುತ್ತಾ ಹೇಳಿದರು ರಾಧಮ್ಮ.
ಲಕ್ಷ್ಮಿಯ ಕಡೆಗೆ ನೋಡಿದ ನಾರಣಪ್ಪ ಮನಸ್ಸಿನಲ್ಲಿ ಸುಂದರವಾಗಿದ್ದಾರೆ. ಮುಖದಲ್ಲಿ ಎಂತಹ ತೇಜಸ್ಸು, ಗಾಂಭೀರ್ಯ, ನಿಲುವು ನೋಡಿದರೆ ದಾಷ್ಟಿಕ ಹೆಣ್ಣುಮಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಇವರಿಗೆ ಮದುವೆಗೆ ಬಂದಿರುವ ಮಗಳಿದ್ದಾಳೆಂದರೆ ನಂಬುವಂತೆಯೇ ಇಲ್ಲ, ಈಗಲೂ ಹಸೆಮಣೆಯಮೇಲೆ ಕೂಡಿಸುವ ಹಾಗಿದ್ದಾರೆ. ಒಳ್ಳೆಯದಾಗಲಿ ಎಂದು ಅಂದುಕೊಂಡರು.
“ಎಲ್ಲರು ಕೈತೊಳೆದು ಬಂದಾಯಿತು, ಎಲ್ಲಿದ್ದೀ ಮಾರಾಯ” ಎಂದು ಕೂಗಿದರು ಜೋಯಿಸರು. ಕರೆಕೇಳಿ “ಬಂದೇ” ಎನ್ನುತ್ತಾ ತಮ್ಮ ಕೆಲಸದ ಕಡೆ ಗಮನಿಸಲು ಊಟದ ಮನೆಯೆಡೆಗೆ ಪಾತ್ರೆಗಳನ್ನು ಹಿಡಿದು ಹೆಜ್ಜೆ ಹಾಕಿದರು. ನಾರಣಪ್ಪ ಆಕಡೆಗೆ ಹೋದಕೂಡಲೇ “ಅವರದ್ದೆಲ್ಲ ತಿಂಡಿ ಮುಗಿಯುವಷ್ಟರಲ್ಲಿ ನಮ್ಮ ಮನೆಯನ್ನು ಒಂದು ಸುತ್ತು ಹಾಕಿಸುತ್ತೇನೆ” ಎಂದು ಇಬ್ಬರನ್ನೂ ಕರೆದುಕೊಂಡು ಹೋದರು ಸೀತಮ್ಮ. “ಹಿರಿಯರಿಂದ ನಮಗೆ ಬಂದ ಮನೆ, ಅದಕ್ಕೆ ನಮ್ಮವರು ಒಂದು ಹೊಸ ರೂಪ ಕೊಟ್ಟಿದ್ದಾರೆ. ಇಗ ನಾನು ನಿಂತಿರುವ ಮನೆಯೇ ಅಡುಗೆ ಮನೆ, ಸೌದೆಒಲೆ, ಇದ್ದಿಲುಒಲೆ, ಜೊತೆಗೆ ಸೀಮೆಯೆಣ್ಣೆ ಸ್ಟೌ ಇಟ್ಟುಕೊಳ್ಳುವಂತೆ ಅನುಕೂಲ ಮಾಡಿಸಿದ್ದಾರೆ. ಹೊಗೆ ಹೊರಗೆಲ್ಲ ಹರಡಿಕೊಳ್ಳದಂತೆ ವಿಶೇಷ ಸೌಲಭ್ಯ ಒದಗಿಸಿಕೊಟ್ಟಿದ್ದಾರೆ. ಇಲ್ಲಿ ಪಕ್ಕದಲ್ಲೇ ಉಗ್ರಾಣದ ಕೋಣೆ, ಅಲ್ಲಿ ಮೊದಲು ಜಾಕಾಯಿ ಪೆಟ್ಟಿಗೆಗಳ ಸಾಲೇ ಇದ್ದವು. ಅವುಗಳೊಳಗೆ ಸಾಮಾನುಗಳು. ಒಂದು ಕಿಟಕಿಯೂ ಇರಲಿಲ್ಲ. ಕತ್ತಲೋಕತ್ತಲು. ಕೈಯಲ್ಲಿ ದೀಪ ಹಿಡಿದೇ ಅಲ್ಲಿಗೆ ಕಾಲಿಕ್ಕಬೇಕಿತ್ತು. ಈಗ ನಮ್ಮನೆಯವರು ಅವುಗಳಿಗೆಲ್ಲ ಮೋಕ್ಷ ದೊರಕಿಸಿ, ಕಿಟಕಿಯನ್ನೂ ಇಡಿಸಿ, ಸಾಮಾನುಗಳನ್ನು ತುಂಬಿಟ್ಟುಕೊಳ್ಳಲು ಸಾಲಾಗಿ ಗೂಡುಗಳನ್ನು ಮಾಡಿಸಿದ್ದಾರೆ. ನಾನು ಅವುಗಳಿಗೆ ಬಾಗಿಲುಗಳನ್ನು ಹಾಕಿಸಿ ಮುಚ್ಚಲ್ಪಡುವಂತೆ ಮಾಡಿಸಿಕೊಂಡಿದ್ದೇನೆ. ಈ ಕೋಣೆ ತುಂಬಾ ದೊಡ್ಡದಿತ್ತು. ಅದಕ್ಕೆ ಮಧ್ಯೆ ಒಂದು ಗೋಡೆ ಹಾಕಿ ಆಕಡೆ ಒಂದು ಬಾಗಿಲನ್ನಿಡಿಸಿದ್ದಾರೆ. ಅಲ್ಲಿ ಮಡಿಬಟ್ಟೆಗಳನ್ನು ಹರವಿಹಾಕುವುದಕ್ಕೆ ವ್ಯವಸ್ಥೆ ಮಾಡಿದ್ದಾರೆ. ಹೊರಗೆ ಹಿತ್ತಲು, ಅದೇ ನೋಡಿ ಬಚ್ಚಲುಮನೆ. ದೂರದಲ್ಲಿ ಕಾಣಿಸುವುದೇ ಶೌಚಾಲಯ.
ಆ ಮೂಲೆಯಲ್ಲಿ ಕಾಣುವ ಕೋಣೆ ನಮ್ಮ ಮೂರುದಿನ ರಜವಿದ್ದಾಗ ಕಳೆಯುವ ತಾಣ. ಅಲ್ಲಿಯೇ ಸ್ನಾನಕ್ಕೆಲ್ಲಾ ವ್ಯವಸ್ಥೆಯಿದೆ. ಮೊದಲಿರಲಿಲ್ಲ. ಹೊರಗಿನ ವೆರಾಂಡಾದಿಂದ ಮಹಡಿ ಮೇಲಕ್ಕೆ ಹೋಗಿ ಅಲ್ಲಿ ಒಂದು ಚಿಕ್ಕ ಕೋಣೆಯಲ್ಲಿ ಬಿಡಾರ ಹೂಡಬೇಕಿತ್ತು. ಗಂಡಸರೆಲ್ಲಾ ತಮ್ಮ ಪೂಜೆ, ಊಟಗಳನ್ನು ಮುಗಿಸಿದ ಮೇಲೆ ನಾವು ಕೆಳಗಿಳಿದು ಬಂದು ಹೊರಗಿನಿಂದ ಹಿತ್ತಲಿಗೆ ಹೋಗಲು ಜಾಗವಿದೆ. ಹಾಗೆ ಬಂದು ಹಿರಿಯರು ಹಾಕುವ ನೀರಿಗೆ ಕಾದು ನಂತರ ಊಟ. ಕಾಯ್ದು ಸಾಕಾಗಿ ಹೋಗುತ್ತಿತ್ತು. ನಮ್ಮ ತಾಯಿಯ ಮನೆಯಲ್ಲಿ ಬೇರೆಯೇ ಅನುಕೂಲವಿತ್ತು. ಇಲ್ಲಿಗೆ ಬಂದಾಗ ನನಗೆ ಬಹಳ ಹಿಂಸೆಯಾಗುತ್ತಿತ್ತು. ಅದೇನು ರೀತಿಯೋ, ಬಸಿರು ಬಾಣಂತನದಲ್ಲಿ ಇವಕ್ಕೆಲ್ಲ ಮುಕ್ತಿ ಸಿಗುತ್ತಿತ್ತು. ನನಗೂ ಮೂರು ಹೆರಿಗೆ. ಆದರೆ ದಕ್ಕಿದ್ದು ಶ್ರೀನಿವಾಸನೊಬ್ಬನೇ. ಇನ್ನು ನಡುಮನೆ ನೋಡಿದಿರಲ್ಲ. ಅಲ್ಲಿಗೆ ಹೊಂದಿಕೊಂಡಂತೆ ನಾಲ್ಕು ಕೋಣೆಗಳಿವೆ. ಒಂದನ್ನು ಜೋಯಿಸರು ತಮ್ಮ ಖಾಸಗಿ ಕೋಣೆಯಾಗಿ ಬಳಸುತ್ತಾರೆ. ಬಂದು ಹೋಗುವವರಿಗೆ ಜ್ಯೋತಿಷ್ಯ ಹೇಳುವುದು, ತಾಯಿತ ಮಾಡಿಕೊಡುವುದು, ಜಾತಕ ಇತ್ಯಾದಿ ಕೆಲಸಗಳಿಗಾಗಿ. ಮಹಡಿ ಮೇಲೆ ದೊಡ್ಡ ಹಾಲು, ಒಂದು ರೂಮಿದೆ. ಪ್ರತ್ಯೇಕವಾಗಿದ್ದ ರೂಮನ್ನು ಹಾಗೇ ಬಿಟ್ಟಿದ್ದಾರೆ. ಇನ್ನೊಂದು ಸಂಗತಿ ಹೇಳುವುದು ಮರೆತಿದ್ದೆ ಈ ಮನೆಗೆ ಹೊಂದಿಕೊಂಡಂತೆ ಪಕ್ಕದಲ್ಲಿರುವ ಮನೆಯೂ ನಮ್ಮದೇ. ಅಲ್ಲಿ ಜಾನುವಾರುಗಳನ್ನು ಕಟ್ಟಲು ಪ್ರತ್ಯೇಕವಾಗಿಟ್ಟಿದ್ದಾರೆ. ಅವುಗಳ ಉಸ್ತುವಾರಿ ನೋಡಿಕೊಳ್ಳುವವರಿಗೆ ಅಲ್ಲಿ ಪುಟ್ಟ ಮನೆಯೂ ಇದೆ. ಅವರುಗಳೇ ನಮ್ಮ ಮನೆಯ ಕಸಮುಸುರೆ ಮಾಡಿಕೊಡುತ್ತಾರೆ. ಊಟದ ಮನೆಯ ಪಕ್ಕದಲ್ಲಿ ಪೂಜಾಕೋಣೆ. ಅಡುಗೆ ಮನೆ, ಉಗ್ರಾಣ, ಬಟ್ಟೆ ಹರವುವ ಕೋಣೆ ಇವುಗಳ ಉಸ್ತುವಾರಿಯನ್ನು ನಾರಣಪ್ಪ ನೋಡಿಕೊಳ್ಳುತ್ತಾನೆ. ಮನೆಯ ಪರಿಚಯ ಹೇಳಿದಮೇಲೆ ನಮ್ಮ ಜಮೀನಿನ ಬಗ್ಗೆ ಸ್ವಂತದ್ದೇನಿಲ್ಲ. ಆದರೆ ದೇವಸ್ಥಾನಕ್ಕೆ ಉಂಬಳಿ ಬಿಟ್ಟದ್ದು. ಅದರ ಉತ್ಪನ್ನ ನಮಗೇ ಬರುತ್ತದೆ. ದೇವಸ್ಥಾನದ ಪೂಜಾಕಾರ್ಯಕ್ಕಾಗಿ ನಮಗಿಷ್ಟೆಂದು ಸಂಬಳ ನೀಡುತ್ತಾರೆ. ನಮ್ಮ ಮಗನೂ ಅಪ್ಪನಂತೆ ವೇದಶಾಸ್ತ್ರ ಪಾರಂಗತನಾಗಿದ್ದಾನೆ. ಜಮೀನು ಮತ್ತು ಪೂಜಾಕಾರ್ಯಗಳೆರಡನ್ನೂ ನಿಭಾಯಿಸಿಕೊಂಡು ಹೋಗುತ್ತಿದ್ದಾನೆ. ಅವನಲ್ಲಿ ಯಾವ ದುಶ್ಚಟಗಳೂ ಇಲ್ಲ. ನಾವೂ ಕೆಲವು ಕಡೆ ಸಂಬಂಧಗಳನ್ನು ನೋಡಿದೆವು. ನಮಗೆ ಸರಿಬರಲಿಲ್ಲ. ಮೇಲಾಗಿ ಕೆಲವರು ನಮ್ಮ ಮನೆಗೆ ಹೆಣ್ಣುಕೊಡಲು ಹಿಂದೇಟು ಹಾಕುತ್ತಾರೆಂಬ ಮಾತುಗಳನ್ನು ಕೇಳಿದೆವು. ನಮ್ಮಲ್ಲಿ ವಿಪರೀತ ಮಡಿಹುಡಿ, ಸಂಪ್ರದಾಯ, ಹಾಗೇ ಹೀಗೇ ಎಂದು ಅಪಪ್ರಚಾರ. ಆದರೆ ಅದೆಲ್ಲಾ ಪೂಜೆ ಮಾಡುವ ಸಮಯದಲ್ಲಿ , ಹಬ್ಬಹರಿದಿನಗಳಲ್ಲಿ ಮಾತ್ರ. ಅದು ಬಿಟ್ಟರೆ ಅತಿಯಾದ ಹೇರಿಕೆ, ಒತ್ತಾಯವಿಲ್ಲ. ಅದನ್ನೆಲ್ಲಾ ಅವರಿಗೆ ವಿವರಿಸುವ ಅಗತ್ಯವಿಲ್ಲ ಎಂಬುದು ನಮ್ಮವರ ಅಭಿಪ್ರಾಯ. ಕಷ್ಟಸುಖಗಳನ್ನು ಅರಿತವರ ಮನೆಯಿಂದ ಹೆಣ್ಣುತರುವ ಅಭಿಲಾಷೆ. ನಮಗೆ ಭಟ್ಟರ ವಿಷಯ ತಿಳಿದು ಮುಂದುವರಿದೆವು. ಅದಕ್ಕೆ ಕೇಶವಯ್ಯ, ರಾಧಮ್ಮ ನಮಗೆ ನೆರವಾದರು. ನೀವೂ ಪ್ರತಿರೊಧ ತೋರಲಿಲ್ಲ. ಲಕ್ಷ್ಮಮ್ಮನವರೇ ನಿಮ್ಮ ಮಗಳು ಇಲ್ಲಿ ಸುಖವಾಗಿರುತ್ತಾಳೆಂಬ ನಂಬಿಕೆ ಬಂದರೆ ನೀವು.”. ಅವರ ಮಾತನ್ನು ಅರ್ಧದಲ್ಲೇ ತಡೆಯುತ್ತಾ ರಾಧಮ್ಮ “ಛೇ..ಛೇ.. ಎಂಥಹ ಮಾತನಾಡ್ತೀರಾ ಸೀತಮ್ಮ, ಲಕ್ಷ್ಮಿ, ಭಟ್ಟರ ಅದೃಷ್ಟ. ಅವರೇ ಹುಡುಕಿದ್ದರೂ ಇಂತಹ ಸಂಬಂಧ ಸಿಗುತ್ತಿತ್ತೋ ಇಲ್ಲವೋ, ಹಾಗೇ ಇನ್ನೊಂದು ಮಾತು, ಲಕ್ಷ್ಮೀ ಮತ್ತು ಭಟ್ಟರ ಮಗಳನ್ನು ಸೊಸೆಯಾಗಿ ಪಡೆಯಲು ನೀವೂ ಅದೃಷ್ಟ ಮಾಡಿದ್ದೀರಿ. ಅವಳು ಶುದ್ಧ ಅಪರಂಜಿ. ಈಗ ಉಳಿದೆಲ್ಲವನ್ನೂ ಬಿಟ್ಟು ಒಳ್ಳೆಯ ಮನಸ್ಸಿನಿಂದ ಮಗುವನ್ನು ಮನೆತುಂಬಿಸಿಕೊಳ್ಳುವ ಬಗ್ಗೆ ಆಲೋಚಿಸಿ, ಅಲ್ಲವೇ ಲಕ್ಷ್ಮೀ?” ಎಂದರು.
“ಸೀತೂ, ನಿಮ್ಮಗಳ ಮಾತು ಮುಗಿಯಲಿಲ್ಲವೇ? ಅವರುಗಳಿಗೆ ಬರಿಯ ಮಾತಿನಲ್ಲೇ ಹೊಟ್ಟೆ ತುಂಬಿಸುತ್ತೀಯಾ ಹೇಗೆ?” ಎಂದು ಕೂಗಿದರು ಜೋಯಿಸರು. “ಬನ್ನಿ” ಎಂದು ತಾವೇ ಮುಂದಾಗಿ ನಿಂತು ನಾರಣಪ್ಪನ ಕಡೆಯಿಂದ ಉಪಚರಿಸಿದರು ಸೀತಮ್ಮ. ತುಪ್ಪವನ್ನು ಧಾರಾಳವಾಗಿ ಬಳಸಿ, ದ್ರಾಕ್ಷಿ ಗೋಡಂಬಿಗಳೊಡನೆ ಚಿರೋಟಿರವೆಯಿಂದ ತಯಾರಿಸಿದ ಕೇಸರಿಬಾತ್, ತರಕಾರಿ ಹಾಕಿ ತಯಾರಿಸಿದ್ದ ಉಪ್ಪಿಟ್ಟು, ರಸಬಾಳೆ ಹಣ್ಣು, ಕಾಫಿ ಅಬ್ಬಾ ! ಒಂದಕ್ಕಿಂತ ಒಂದು ರುಚಿಯಾಗಿದ್ದವು. ಲಕ್ಷ್ಮಿಯಂತೂ ಅವರಿವರ ಮಾತು ಕೇಳಿ ಹಿಂದೆ ಸರಿದಿದ್ದರೆ ಎಂಥಹ ಮನೆಯ ಸಂಬಂಧವನ್ನು ಕಳೆದುಕೊಳ್ಳುತ್ತಿದ್ದೆವಲ್ಲಾ ಎಂದುಕೊಂಡಳು. ಅಷ್ಟೇ ಅಲ್ಲ, ಪಕ್ಕದಲ್ಲಿ ಕುಳಿತಿದ್ದ ರಾಧಮ್ಮನಕಡೆ ಕೃತಜ್ಞತೆಯಿಂದ ನೋಡಿದಳು. ಎಲ್ಲ ಉಪಚಾರ ಮಾತುಕತೆಗಳು ಮುಗಿದು ಹೊರಟು ನಿಂತಾಗ ಇಬ್ಬರೂ ಮುತ್ತೈದೆಯರಿಗೆ ಕುಂಕುಮವಿತ್ತು ತಾಂಬೂಲ ನೀಡಿದ ಸೀತಮ್ಮನವರು ಇಬ್ಬರ ಕೈಗೂ ನಾಲ್ಕು ಬಟ್ಟಲುಗಳ ಒಂದೊಂದು ಟಿಫನ್‌ಬಾಕ್ಸ್‌ನ್ನು ನೀಡಿದರು. ಅದನ್ನು ನೋಡಿದ ಇಬ್ಬರೂ ಆಶ್ಚರ್ಯದಿಂದ “ಇದೇನು ಸೀತಮ್ಮನೋರೆ” ಎಂದು ಕೇಳಿದರು.
“ಏನಿಲ್ಲ ಇದೊಂದು ಸಂಪ್ರದಾಯ ಅಂದುಕೊಳ್ಳಬೇಡಿ. ಮಕ್ಕಳಿಗಾಗಿ ಸ್ವಲ್ಪ ತಿಂಡಿ. ಬೇಡವೆನ್ನಬೇಡಿ. ನಾವುಗಳು ನಿಮ್ಮ ಮನೆಗೆ ಬಂದಾಗ ಬಾಕ್ಸ್ ಹಿಂದಿರುಗಿಸಿದರಾಯ್ತು.” ಎಂದರು ಸೀತಮ್ಮ.
“ರಾಧಾ, ಒಂದು ಗಾದೆ ಕೇಳಿದ್ದೀಯಾ? ‘ಉಂಡೂ ಹೋದ, ಕೊಂಡೂ ಹೋದ’ ಅಂತ. ಈಗ ಗಾದೆ ಅನ್ವಯಿಸುತ್ತೆ. ನೋಡು ಆದರೆ ಅದು ನಮಗಲ್ಲ, ಮಕ್ಕಳಿಗೆ ನೆನಪಿರಲಿ” ಎಂದು ಚಟಾಕಿ ಹಾರಿಸಿದರು ಕೇಶವಯ್ಯ. ಮತ್ತೊಮ್ಮೆ ಎಲ್ಲರಿಗೂ ವಂದಿಸುತ್ತಾ ಹೊರಡಲು ಸಿದ್ಧವಾದರು. ಅಷ್ಟರಲ್ಲಿ ಜೋಯಿಸರ ಮಗ ಶ್ರೀನಿವಾಸ ಕಾಣಿಸಿಕೊಂಡ. ಅದನ್ನು ನೋಡಿದ ಕೇಶವಯ್ಯ “ಏನಪ್ಪಾ ನಾವು ಬಂದಾಗ ಕಾಣಿಸಿಕೊಂಡ ಪುಣ್ಯಾತ್ಮ ಈಗ ಪ್ರತ್ಯಕ್ಷವಾಗಿದ್ದೀ” ಎಂದರು.
“ಹೂಂ ಕೇಶುಮಾಮ, ಹಿರಿಯರು ಮಾತನಾಡುವಾಗ ನಾನು ಮಧ್ಯದಲ್ಲಿ ತಲೆ ತೂರಿಸುವುದು ಬೇಡವೆಂದು ಕಾಣಿಸಿಕೊಳ್ಳಲಿಲ್ಲ. ಅಲ್ಲದೆ ನನ್ನ ಒಪ್ಪಿಗೆಯನ್ನು ಹೇಳಿಬಿಟ್ಟಿದ್ದೇನಲ್ಲ. ಇನ್ನೇನಿದ್ದರೂ ಹಿರಿಯರ ಜವಾಬ್ದಾರಿ” ಎಂದು ಹೇಳಿ ನಮಸ್ಕರಿಸಿ ಅವರನ್ನು ಬೀಳ್ಕೊಟ್ಟನು. ಶ್ರೀನಿವಾಸನ ಮಾತಿಗೆ ಭಟ್ಟರು ಮನದಲ್ಲೇ “ಅಪ್ಪನು ಹಾಕುವ ಗೆರೆ ದಾಟುವಂಥ ಮಗನಲ್ಲ.” ಎಂದುಕೊಂಡರು. ಯಥಾಪ್ರಕಾರ ಜೋಯಿಸರ ಶಿಷ್ಯ ನಂಜುಂಡನ ಕಾರಿನಲ್ಲೇ ಎಲ್ಲರೂ ಕುಳಿತು ಮನೆಯ ಹಾದಿ ಹಿಡಿದರು. ಏಳು ಗಂಟೆಗೆಲ್ಲಾ ಮನೆ ತಲುಪಿದರು. ಎಲ್ಲರೂ ಕಾರಿನಿಂದಿಳಿದ ಮೇಲೆ ಭಟ್ಟರು ನಂಜುಂಡನ ಕೈಯಿಗೆ ಅವನು ಬೇಡವೆಂದರೂ ಕೇಳದೆ ಐವತ್ತರ ನೋಟೊಂದನ್ನು ತುರುಕಿದರು ಹಾಗೂ ವಂದನೆ ಹೇಳಿದರು. ಅದನ್ನು ಗಮನಿಸಿದ ಕೇಶವಯ್ಯ “ಒಳ್ಳೆಯ ಕೆಲಸ ಮಾಡಿದಿರಿ ಭಟ್ಟರೇ, ನಾನೇ ಕೊಡಬೇಕೆಂದುಕೊಂಡಿದ್ದೆ. ಏಕೆಂದರೆ ಎಷ್ಟಾಯಿತೆಂದು ಕೇಳುವ ಹಾಗಿಲ್ಲ. ಜೋಯಿಸರು ತಿಳಿದರೆ ಬೇಸರಮಾಡಿಕೊಳ್ಳುತ್ತಾರೆ. ಹಾಗೇ ಕಳುಹಿಸಿದರೆ ನಮ್ಮ ಮನಸ್ಸಿಗೆ ಪಿಚ್ಚೆನ್ನಿಸುತ್ತದೆ” ಎಂದು ಹೇಳಿ ಮನೆಯ ಕಡೆ ಹೆಜ್ಜೆ ಹಾಕಿದರು.
ಅವರ ಸದ್ದು ಕೇಳಿದ ಸುಬ್ಬಣ್ಣ ಅಂಗಡಿಯಿಂದ ಬೇಗ ಒಳಗೆ ಹೋಗಿ ಮುಂಭಾಗಿಲನ್ನು ತೆರೆದನು. “ಬನ್ನಿ, ಎಲ್ಲರಿಗೂ ಸ್ವಾಗತ, ಹೋದ ಕೆಲಸವೆಲ್ಲವೂ ಸಂಪನ್ನವಾಯಿತೇ?” ಎಂದು ಕೇಳಿದನು. ಅವನ ಮಾತಿಗೆ ಭಟ್ಟರು ನಗುತ್ತಾ “ಸುಬ್ಬಣ್ಣ ಅದ್ಯಾವ ಮಾಯದಲ್ಲಿ ನಾವು ಬರುವುದನ್ನು ನೋಡಿದೆಯೋ? ಥಟ್ಟಂತ ಬಾಗಿಲು ತೆರೆದೆ” ಎಂದರು.
“ಅಯ್ಯೋ ಭಟ್ಟರೇ, ಅಲ್ಲಿ ನೋಡಿ ಅಂಗಡಿಯಿಂದ ಕಂಡ ತಕ್ಷಣ ಒಳಗೋಡಿದ್ದಾನೆ. ಮನೆಯೊಳಗಿನ ಕೋಣೆಯಲ್ಲಿ ತಾನೇ ಅವನ ಅಂಗಡಿಯಿರುವುದು. ವ್ಯಾಪಾರಕ್ಕೆ ಯಾರು ಬರುತ್ತಾರೆಂದು ಗಮನಿಸದಿದ್ದರೂ ಮನೆಗೆ ಯಾರು ಬರುತ್ತಾರೆಂಬುದನ್ನು ನೋಡಿರುತ್ತಾನೆ. ಹುಡುಗಾಟಿಕೆ. ತುಂಬಾ ಗಂಭೀರಳಾದ ಹುಡುಗಿಯನ್ನು ತಂದು ಕಟ್ಟಬೇಕು ಇವನಿಗೆ, ಆಗ ಗೊತ್ತಾಗುತ್ತೆ” ಎಂದು ಕಿಚಾಯಿಸಿದರು ಕೇಶವಯ್ಯ.
“ಅಯ್ಯೋ ದೇವಾ, ಈ ನನ್ನ ಜನ್ಮದಾತರಿಗೆ ಒಳ್ಳೆಯ ಬುದ್ಧಿ ಕೊಡಪ್ಪಾ” ಎಂದು ಕೈಮುಗಿದು ಅಂಗಡಿಯ ಕಡೆ ನಡೆದ ಸುಬ್ಬಣ್ಣ. ಒಳಗೆ ಬಂದ ಲಕ್ಷ್ಮಿ “ರಾಧಕ್ಕಾ ನಾವಿನ್ನು ಬರೋಣವೇ?” ಎಂದಳು.
“ಹೊರಟೇ ಬಿಟ್ಟಿರಾ? ಸ್ವಲ್ಪ ಹೊತ್ತು ಇದ್ದು ಹೋಗಬಹುದಾಗಿತ್ತು.” ಎಂದರು ರಾಧಮ್ಮ.
“ಇಲ್ಲ ರಾಧಕ್ಕಾ ಮಧ್ಯಾನ್ಹ ಮನೆ ಬಿಟ್ಟಿದ್ದು, ಸಂಜೆಯ ದೀಪ ಹಚ್ಚಿಲ್ಲ. ಇವರ ಸಂಧ್ಯಾವಂದನೆಗೂ ಚುಟ್ಟಿಯಾಯಿತು. ಇನ್ನೂ ತಡವಾಗುವುದು ಬೇಡಾಂತ” ಎಂದಳು ಲಕ್ಷ್ಮಿ.
ಆಯಿತು ಲಕ್ಷ್ಮಮ್ಮ ನೀವು ಹೋಗಿಬನ್ನಿ, ಜೋಯಿಸರು ಕೊಟ್ಟಿರುವ ದಿನಾಂಕಗಳನ್ನು ಗಮನಿಸಿ, ಮಗಳು ಭಾಗ್ಯಳ ನೀರುನಿಡಿಯ ದಿನ ನೋಡಿಕೊಂಡು ಇಬ್ಬರೂ ಮಾತನಾಡಿಕೊಂಡು ನನಗೆ ಹೇಳಿ. ಹಾಗೇ ಅವರು ಹೇಳಿದಂತೆ ಕಲ್ಯಾಣಮಂಟಪ ಮದುವೆದಿನಗಳಲ್ಲಿ ಯಾವಾಗ ಖಾಲಿಯಿದೆ ಎಂಬುದನ್ನೂ ವಿಚಾರಿಸಿ ನೋಡುತ್ತೇನೆ. ಸರಿ ಎನ್ನಿಸಿದರೆ ಹಾಗೇ ಮಾಡುವಿರಂತೆ. ಹೆಚ್ಚು ತಾಪತ್ರಯ ಮಾಡಿಕೊಳ್ಳಬೇಡಿ. ಅರ್ಥವಾಯಿತೇ?” ಎಂದು ಹೇಳಿದರು ಕೇಶವಯ್ಯ.
“ಬನ್ನಿ ಮಕ್ಕಳೇ” ಎಂದು ಕರೆದರು ಭಟ್ಟರು. ರಾಧಮ್ಮ “ಶಾಂತಾ, ಸಂಜೆ ದೇವರದೀಪ ಹಚ್ಚಿದೆಯಾ? ಸುಬ್ಬು ಸಂಧ್ಯಾವಂದನೆ ಮಾಡಿದನಾ? ಬಾ ಅವರಿಗೆ ಕುಂಕುಮ ಕೊಡು” ಎಂದು ತಮ್ಮ ಮಗಳನ್ನು ಕರೆದರು.
“ಅಮ್ಮಾ ಭಾಗ್ಯಕ್ಕನೇ ಹೇಳಿ ನನ್ನಕೈಯಲ್ಲಿ ದೀಪ ಹಚ್ಚಿಸಿದರು. ಸುಬ್ಬು ಸಂಧ್ಯಾವಂದನೆಯನ್ನೂ ಮಾಡಿದ” ಎಂದು ಹೇಳುತ್ತಾ ರೂಮಿನಿಂದ ಹೊರಬಂದಳು ಶಾಂತಾ. ಅವಳ ಹಿಂದೆಯೇ ಎಲ್ಲರೂ ಬಂದರು.
ರಾಧಮ್ಮ ಶಾಂತಳು ದೇವರ ಮನೆಯಿಂದ ಕುಂಕುಮದ ಭರಣಿ ತರುವಷ್ಟರಲ್ಲಿ ಜೋಯಿಸರ ಮನೆಯಲ್ಲಿ ಕೊಟ್ಟಿದ್ದ ತಿಂಡಿಯ ಡಬ್ಬಿಗಳನ್ನು ಹಿಡಿದುಕೊಂಡು ಹೊರಬಂದರು.
“ಅರೇ ರಾಧಕ್ಕಾ ಇದೇನು? ಎರಡೂ ಡಬ್ಬಿಗಳನ್ನು ಹಿಡಿದುಕೊಂಡು ಬಂದಿದ್ದೀರಿ, ಒಂದನ್ನು ಕೊಡಿ, ಇನ್ನೊಂದು ನಿಮ್ಮ ಮನೆಗೇ ಮರೆತಿರಾ” ಎಂದಳು ಲಕ್ಷ್ಮಿ.
“ಹ್ಹಾ ಮರೆತಿಲ್ಲ ಲಕ್ಷ್ಮಿ, ಇಬ್ಬರು ಮಕ್ಕಳಿಗೆ ಸಾಕಷ್ಟು ತೆಗೆದಿಟ್ಟುಕೊಂಡೇ ಉಳಿದದ್ದನ್ನು ತಂದಿದ್ದೇನೆ. ಮಕ್ಕಳಿಗೆ ಹಂಚು, ಇವರಿಬ್ಬರು ಎಷ್ಟು ತಿನ್ನುತ್ತಾರೆ.” ಎಂದು ಹೇಳುತ್ತಾ ಎರಡೂ ಡಬ್ಬಿಗಳನ್ನೂ ಲಕ್ಷ್ಮಿಯ ಕೈಯಿಗೆ ಕೊಟ್ಟರು ರಾಧಮ್ಮ. ಅವರ ಮಾತಿಗೆ ದಂಪತಿಗಳಿಬ್ಬರೂ ನಗುತ್ತಾ ಚೀಲವನ್ನು ತೆಗೆದುಕೊಂಡರು. ಶಾಂತಳು ಕೊಟ್ಟ ಕುಂಕುಮ ಇಟ್ಟುಕೊಂಡು ಎಲ್ಲರಿಗೂ ವಂದನೆಗಳನ್ನು ಹೇಳಿ ತಮ್ಮ ಮಕ್ಕಳೊಡನೆ ಭಟ್ಟರು ಮತ್ತು ಲಕ್ಷ್ಮಿ ಮನೆಯತ್ತ ಹೊರಟರು.
ಅವರುಗಳೆಲ್ಲ ಹೋದಮೇಲೆ ಬಾಗಿಲು ಭದ್ರಪಡಿಸಿಕೊಂಡು ಬಂದ ಕೇಶವಯ್ಯ “ರಾಧಾ, ಭಟ್ಟರು ಬಹಳ ಬದಲಾಗಿದ್ದಾರೆ ಕಣೆ. ಸನ್ನೆ, ಸೂಕ್ಷ್ಮಗಳನ್ನೆಲ್ಲ ಅರಿತುಕೊಂಡು ನಡೆಯುವ ಮಟ್ಟ ಮುಟ್ಟಿದ್ದಾರೆಂಬುದು ಜೋಯಿಸರ ಮನೆಯಲ್ಲಿ ನಡೆದ ಮಾತುಕತೆಗೆ ಕೊಟ್ಟ ಉತ್ತರ, ಅವರ ಮನೆಯಿಂದ ಹಿಂದಿರುಗಿ ಬಂದಾಗ ನಾನು ಕೊಡಬೇಕೆಂದಿದ್ದ ಭಕ್ಷೀಸನ್ನು ನಂಜುಂಡನಿಗೆ ಮುಂದಾಗಿ ಅವರೇ ಕೊಟ್ಟದ್ದು, ಲಕ್ಷ್ಮಮ್ಮನ ಗರಡಿಯಲ್ಲಿ ತರಬೇತಿ ಚೆನ್ನಾಗಿಯೇ ಆಗಿದೆ” ಎಂದರು. ಗಂಡನ ಮಾತಿಗೆ ರಾಧಮ್ಮ “ನಿಮಗೀಗ ಕಾಣಿಸಿತೇ, ತುಂಬಾ ಒಳ್ಳೆಯ ಹೆಂಗಸು, ಜಾಣೆ, ತನ್ನ ಸಂಸಾರವನ್ನು ಅಂಗೈಯಲ್ಲಿಟ್ಟು ಕಾಪಾಡಿಕೊಂಡು ಬರುತ್ತಿದ್ದಾರೆ. ನಮಗೆ ಮೊದಲಿಂದಲೂ ಹೊಂದಿಕೊಂಡಿರುವ ಕುಟುಂಬ, ಮಕ್ಕಳೂ ಅಷ್ಟೇ, ನಾವುಗಳೆಂದರೆ ಜೀವ ಬಿಡುತ್ತವೆ” ಎಂದರು.
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : http://surahonne.com/?p=35015
(ಮುಂದುವರಿಯುವುದು)
–ಬಿ.ಆರ್,ನಾಗರತ್ನ, ಮೈಸೂರು
ಸ್ವಲ್ಪ ಹಿಂದೆ ಸಂಸ್ಕೃತಿ, ಸಂಪ್ರದಾಯ ಹೇಗಿತ್ತು ಅನ್ನುವುದನ್ನು ಸವಿಸ್ತಾರವಾಗಿ ಪರಿಚಯ ಮಾಡಿಸುತ್ತ ಓದಿನ ಖುಷಿ ನೀಡುತ್ತಾ ಸಾಗುತ್ತಿದೆ ಕಾದಂಬರಿ.
ಹಿಂದಿನ ಸಂಪ್ರದಾಯ, ಸಂಸ್ಕೃತಿ, ಆಚಾರ, ವಿಚಾರಗಳನ್ನು ಕಣ್ಮುಂದೆ ತರುತ್ತಿರುವ ಸಾಂಸಾರಿಕ ಕಥೆ ಬಹಳ ಚೆನ್ನಾಗಿ ಮೂಡಿಬರುತ್ತಿದೆ. ಧನ್ಯವಾದಗಳು ನಾಗರತ್ನ ಮೇಡಂ ಅವರಿಗೆ.
ಧನ್ಯವಾದಗಳು ನಯನ ಮತ್ತು ಶಂಕರಿ ಮೇಡಂ ಅವರಿಗೆ
ಓದುತ್ತಿದ್ದರೆ ಸನ್ನಿವೇಶಗಳು ಕಣ್ಣ ಮುಂದೆಯೇ ನಡೆಯುತ್ತಿದೆಯೇನೋ ಎಂಬಂತಹ ಪರಿಣಾಮಕಾರಿಯಾದ ನಿರೂಪಣೆ. ಅಭಿನಂದನೆಗಳು ಗೆಳತಿ ನಾಗರತ್ನ ಅವರಿಗೆ.
ಧನ್ಯವಾದಗಳು ಪದ್ಮಾ ಮೇಡಂ
ನಿರೂಪಣೆ ಬಹಳ ಇಷ್ಟ ಆಯ್ತು, ಎಲ್ಲಾ ಕಣ್ಣು ಮುಂದೆಯೇ ನಡೆಯುತ್ತಿದೆಯೇನೋ, ಎನ್ನುವ ಹಾಗೆ ಭಾಸವಾಯಿತು