ಸುಜ್ಞಾನಿ ಸೂತಪುರಾಣಿಕರು

Spread the love
Share Button

ಬ್ರಾಹ್ಮಣ ಎಂಬುದು ಒಂದು ಜಾತಿಯಲ್ಲ. ಅದೊಂದು ನಿಷ್ಠೆ, ತಿಳುವಳಿಕೆ, ಅಪಾರ ಎಂಬುದಾಗಿ ಪುರಾಣಕಾಲದಲ್ಲಿಯೇ ತಿಳಿಯಲಾಗಿತ್ತು. ಕ್ಷತ್ರಿಯ ರಾಜನಾದ ವಿಶ್ವರಥ ತಪಸ್ಸು ಮಾಡಿ ಸಿದ್ದಿ ಪಡೆದು ಬ್ರಹ್ಮರ್ಷಿಯಾಗಿ ವಿಶ್ವಾಮಿತ್ರನೆನಿಸಿಕೊಂಡಿದ್ದನ್ನು ಕೇಳಿದ್ದೇವೆ. ಒಬ್ಬ ಬೇಡರವನು ತಪಸ್ಸನ್ನಾಚರಿಸಿ ವಾಲ್ಮೀಕಿ ಮಹರ್ಷಿಯಾಗಿ ಲೋಕ ವಿಖ್ಯಾತವಾದ ರಾಮಾಯಣವೆಂಬ ಮಹಾಗ್ರಂಥವೊಂದನ್ನು ಬರೆದು ಅಮರನಾದುದು ನಮಗೆಲ್ಲ ತಿಳಿದ ವಿಚಾರ. ದೃತರಾಷ್ಟ್ರನ ಮಂತ್ರಿಯೂ ಗಾಡಿ ನಡೆಸುವವನೂ ಆಗಿದ್ದ ‘ಗವಲ್ಲಣ’ನ ಮಗ ಸಂಜಯನನ್ನು ಮಹಾಭಾರತ ಓದಿದವರು ಮರೆಯುವುದುಂಟೇ? ಈ ಸಂಜಯನೂ ಸೂತಪುತ್ರನೆಂದು ತಿಳಿದು ಬರುತ್ತದೆ. ಹುಟ್ಟುಕುರುಡನಾದ ದೃತರಾಷ್ಟ್ರನಿಗೆ ಈತನು ವಿಶೇಷ ಚಕ್ಷುವಿನಂತೆ ಕೆಲಸ ಮಾಡಿದವ! ಕುರುಕ್ಷೇತ್ರದಲ್ಲಿ ನಡೆದ ಹದಿನೆಂಟು ದಿನಗಳ ಯುದ್ಧ ವಿವರಣೆಯನ್ನು ಅರಮನೆಯಲ್ಲಿ ಅಂಧರಾಜನ ಬಳಿಯೇ ಇದ್ದುಕೊಂಡು ಸವಿವರವಾಗಿ (ಈಗಿನ ಭಾಷೆಯಲ್ಲಿ ಕಮೆಂಟ್ರಿ) ನೀಡಿದವ ಸಂಜಯ! ಹಾಗೆಯೇ ಇನ್ನೊಬ್ಬನಿದ್ದಾನೆ. ದೃತರಾಷ್ಟ್ರನಿಗೆ ಮಹಾಭಾರತ ಯುದ್ಧಕ್ಕೆ ಮೊದಲು ನೀತಿಬೋಧನೆ ಮಾಡಿದವ. ಈತನು ಗುಣಶೀಲನೂ ಸದ್ಗುಣ ಸಂಪನ್ನನೂ ಆತ್ಮಜ್ಞಾನಿಯೂ ಹರಿಭಕ್ತನು ಆಗಿದ್ದವ ದಾಸಿಯ ಮಗ ವಿದುರ! ಇವರೆಲ್ಲ ಹುಟ್ಟಿನಿಂದ ಬ್ರಾಹ್ಮಣರಲ್ಲದಿದ್ದರೂ ತಮ್ಮ ಗುಣನಡತೆಯಿಂದ, ತಪಃಶಕ್ತಿಯಿಂದ, ದಿವ್ಯಜ್ಞಾನದಿಂದ ಬ್ರಾಹ್ಮಣತ್ವವನ್ನು ತನ್ನೊಳಗೆ ಹುದುಗಿಸಿಕೊಂಡವರು!

ಈ ಅಂಕಣದಲ್ಲಿ ಇನ್ನೊಬ್ಬ ಸೂತಪುತ್ರ ಬ್ರಹ್ಮರ್ಷಿಯನ್ನು ತನ್ನ ರಸಭರಿತವಾದ ಮಾತುಗಳಿಂದ ನೈಮಿಷಾರಣ್ಯದ ಋಷಿಗಳಿಗೆ ಇತಿಹಾಸ-ಪುರಾಣಗಳನ್ನು ತಿಳಿಹೇಳಿದವನನ್ನೂ ಅರಿತುಕೊಳ್ಳಲಿದ್ದೇವೆ. ಬ್ರಾಹ್ಮಣ ಸ್ತ್ರೀಯರಲ್ಲಿ ಕ್ಷತ್ರಿಯರಿಗೆ ಹುಟ್ಟಿದ ಸಂತತಿಯನ್ನು ‘ಸೂತರು’ ಎನ್ನುತ್ತಾರೆ. ಇವನ ತಂದೆ ಒಬ್ಬ ಸೂತ, ಹೆಸರೇ ಸೂಚಿಸುವಂತೆ ಈತನು ಋಷಿಗಳಿಗೆ ಪುರಾಣೇತಿಹಾಸವನ್ನು ಹೇಳಿ ಮನದಟ್ಟು ಮಾಡಿದ ಕಾರಣ ‘ಸೂತಪುರಾಣಿಕ’ ಎನಿಸಿಕೊಂಡನು. ಇವನಿಗೆ ‘ರೋಮಹರ್ಷಣ’ ಎಂಬ ಇನ್ನೊಂದು ಹೆಸರೂ ಇದೆ. ಅದು ಹೇಗೆ ? ಕೆಲವರ ಮಾತನ್ನೊಮ್ಮೆ ಆಲಿಸಿದರೆ ಇನ್ನೂ ಅವರ ಮಾತನ್ನೊಮ್ಮೆ ಆಲಿಸಿದರೆ, ಇನ್ನೂ ಅವರ ಮಾತನ್ನ್ನು ಕೇಳೋಣವೆಂಬ ಹಂಬಲವಾಗುತ್ತದೆ. ವಿದ್ಯಾಸಂಪನ್ನರಾದರೆ ಅವರು ನೀಡುವ ವ್ಯಾಖ್ಯಾನ, ಭಾಷಣಗಳಾನ್ನೆಲ್ಲ ಮತ್ತಷ್ಟು ಕೇಳಬೇಕೆಂಬಾಸೆ. ಶಾಲಾ-ಕಾಲೇಜುಗಳಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಾಪಕರುಗಳಿರುತ್ತಾರೆ. ಅವರ ಪಾಠ ಕೇಳುವುದೆಂದರೆ ಮಕ್ಕಳಿಗೆ ಎಲ್ಲಿಲ್ಲದ ಸಂತೋಷ, ಉತ್ಸಾಹ, ಅಂತಹವರ ಪಾಠಕ್ಕಂತೂ ಮಕ್ಕಳು ತಪ್ಪಿಸುವುದೇ ಇಲ್ಲ.  ರಸಭರಿತವಾದ ಮತುಗಳಿಂದ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸುತ್ತಾರೆ. ಅಂತೆಯೇ, ಸೂತಪುರಾಣಿಕರಿಗೂ ಆ ದಿವ್ಯವೂ ವಿಶೇಷವೂ ಆದ ಚೈತನ್ಯವಿತ್ತು. ಅವರ ಪುರಾಣಪ್ರವಚನದಿಂದ ನೈಮಿಷಾರಣ್ಯದ ಋಷಿಗಳಿಗೆ ಕುತೂಹಲವೂ ಉತ್ಸಾಹವೂ ಉಂಟಾಗಿ ಕೇಳುತ್ತಾ ಕೇಳುತ್ತಾ ಅವರ ದೇಹದ ರೋಮಗಳೆಲ್ಲ ಸೆಟೆದು ನಿಂತು ಹರ್ಷವುಂಟಾಗುತ್ತಿತ್ತಂತೆ. ಅದಕ್ಕಾಗಿ ಸೂತಪುರಾಣಿಕರಿಗೆ ‘ರೋಮಹರ್ಷಣ’ ಎಂಬ ಹೆಸರನ್ನೂ ನೀಡಿದರಂತೆ.

ಪಾಂಡವ-ಕೌರವರೊಳಗಿನ ಯುದ್ದವನ್ನು ನೋಡಲಾರದೆ ಬಲರಾಮ ತೀರ್ಥಯಾತ್ರೆಗೆ ಹೊರಡುತ್ತಾನೆ. ಹೀಗೆ ಬರುತ್ತಾ   ನೈಮಿಷಾರಣ್ಯಕ್ಕೆ ಬಂದು ಸೇರುತ್ತಾನೆ. ಅಲ್ಲಿ ಋಷಿಗಳೆಲ್ಲರು ಸೇರಿ ‘ಸತ್ರಯಾಗ’ವೆಂಬ ಮಹಾಯಾಗವನ್ನು ಮಾಡುತ್ತಿದ್ದರು. ಯಾವುದೇ ಹೋಮ-ಹವನಾದಿಗಳನ್ನು ಮಾಡುವಾಗ ಬ್ರಹ್ಮತ್ವಕ್ಕೆ ಬ್ರಾಹ್ಮಣೋತ್ತಮರನ್ನು ಕೂರಿಸುವ ಪದ್ಧತಿ, ಪ್ರಸ್ತುತ ಈ ಯಾಗದಲ್ಲಿ ಮುನಿಗಳೆಲ್ಲ ಸೇರಿ ‘ರೋಮಹರ್ಷಣ’ನಿಗೆ ಬ್ರಹ್ಮಾಸನವನ್ನು ಕೊಟ್ಟಿದರು. ಈ ಆಸನದಲ್ಲಿ ಕುಳಿತವರು ಯಾರೂ ಬಂದರೂ ಎಂತಹವರಿಗೂ ಪ್ರತ್ಯುತ್ಥಾನ ಮಾಡಬೇಕಾದುದಿಲ್ಲ. ಹೀಗಿರುತ್ತಾ ಬಲರಾಮ ಯಜ್ಞಶಾಲೆಗೆ ಬರುತ್ತಾನೆ. ಮೇಲಿನ ನಿಯಮ ಅವನಿಗೆ ತಿಳಿಯದು. ತಾನು ಆಗಮಿಸಿದಾಗ ಅಲ್ಲಿದ್ದ ಉಳಿದವರೆಲ್ಲ ಎದ್ದು ನಿಂತರೂ ರೋಮಹರ್ಷಣ ಮಾತ್ರ ಎದ್ದು ನಿಲ್ಲದಿರಲು ಬಲರಾಮನಿಗೆ ಅಸಾಧ್ಯ ಸಿಟ್ಟು ಬಂತು. ರೋಮಹರ್ಷಣನು ದರ್ಪದಿಂದಲೇ ತನಗೆ ನೀಡಬೇಕಾದ ಗೌರವ ನೀಡಲಿಲ್ಲವೆಂದು ಬಗೆದು, ಒಂದು ದರ್ಭೆಯ ಹುಲ್ಲನ್ನು ಮಂತ್ರಿಸಿ ರೋಮಹರ್ಷಣನ ಮೈಮೇಲೆ ಹಾಕಿ ಅವನನ್ನು ಕೊಂದು ಬಿಟ್ಟ. ತಮ್ಮ ಬ್ರಹ್ಮಾಸನವನ್ನು ಸ್ವೀಕರಿಸಿದ ಮುನಿಯ ಪ್ರಾಣಹೋಗಲು, ಮುನಿಗಳು ಬಲರಾಮನಿಗೆ ವಿಷಯವನ್ನು ಕೂಲಂಕುಶವಾಗಿ ತಿಳಿಸಿದರು. ಮುಂದೆ ಮುನಿಗಳೆಲ್ಲರ ಪ್ರಾರ್ಥನೆಯಂತೆ ವೇದಗಳು ಸಾರುವ ‘ಆತ್ಮವೈವತ್ರನಾಮಾಸಿ’ ಎಂಬ ವಾಕ್ಯವನ್ನಾಧರಿಸಿ ರೋಮಹರ್ಷಣನ ಮಗನಾದ ಉಗ್ರಶ್ರವನಿಗೆ ತಂದೆಯ ಸ್ಥಾನ ಮತ್ತು ಶಕ್ತಿಯನ್ನನುಗ್ರಹಿಸಿದನು.

ಭಗವದ್ಗೀತೆಯ ಮಹಾತ್ಮ ಮೊದಲಾದ ಕೆಲವು ಪುರಾಣ ಸ್ತೋತ್ರಗಳಲ್ಲಿ “ಸೂತ ಉವಾಚ” (ಸೂತ ಪುರಾಣಿಕರು ಹೇಳಿದರು) ಎಂದು ಹೇಳಿಕೆಯನ್ನು ಕಾಣುತ್ತೇವೆ. ಇದುವೇ ನೈಮಿಷಾರಣ್ಯದಲ್ಲಿ ಋಷಿಗಳಿಗೆ ಸೂತಪುರಾಣಿಕರು ಪುರಾಣ ಬೋಧಿಸಿದ ದೃಷ್ಟಾಂತ.

-ವಿಜಯಾಸುಬ್ರಹ್ಮಣ್ಯ . ಕುಂಬಳೆ

7 Responses

 1. ನಾಗರತ್ನ ಬಿ. ಆರ್ says:

  ಎಂದಿನಂತೆ ಪೌರಾಣಿಕ ಕಥೆ ಓದಿ ಸಿಕೊಂಡು ಹೋಯಿತು. ನಿಮ್ಮ ಜೀವನ ಚರಿತ್ರೆ ಯ ಪುಸ್ತಕ ಬಿಡುಗಡೆ ಯಾಗುವ ಸಂಗತಿ ನನಗೆ ಬಹಳ ಸಂತಸ ತಂದಿದೆ… ಶುಭವಾಗಲಿ ಮೇಡಂ.

 2. ಕೆ. ರಮೇಶ್ says:

  ಚೆನ್ನಾಗಿ ದೇ ಮೇಡಂ.

 3. Anonymous says:

  ಧನ್ಯವಾದಗಳು ಅಡ್ಮಿನರ್ ಹೇಮಮಾಲಾ ಹಾಗೂ ಓದುಗರಿಗೆ.

 4. ನಯನ ಬಜಕೂಡ್ಲು says:

  ಹೀಗೊಂದು ಕಥೆ ಇರುವುದು ಗೊತ್ತಿರಲಿಲ್ಲ. ಚೆನ್ನಾಗಿದೆ

 5. . ಶಂಕರಿ ಶರ್ಮ says:

  ಹೊಸದಾದ ಕಥೆಯೊಂದು ಬಹಳ ಸೊಗಸಾಗಿ ಅನಾವರಣಗೊಂಡಿದೆ. ಧನ್ಯವಾದಗಳು ವಿಜಯಕ್ಕಾ. ನಾನು ಈ ವರೆಗೆ ಸೂತ ಉವಾಚ ಎಂದರೆ ವಿದುರನೇ ಹೇಳುವುದು ಎಂದು ತಿಳಿದಿದ್ದೆ.

 6. Padma Anand says:

  ಕುತೂಹಲ ತಣಿಸಿದ ಸೂತಪುರಾಣಿಕರ ಮತ್ತಿತರ ಪೌರಾಣಿಕ ಮಾಹಿತಿಗಳು ಆಸಕ್ತಿದಾಯಕವಾಗಿದ್ದವು. ಅಭಿನಂದನೆಗಳು.

 7. Mittur Nanajappa Ramprasad says:

  ಸೂತ ಪುರಾಣಿಕರು
  ಜನುಮದಿಂದ ಗುರುತಿಸಲಾಗದು ದೈವಿಕ ವ್ಯಕ್ತಿತ್ವವ/
  ಸಾಧನೆಯಲ್ಲಿ ಸ್ವರೂಪಿಸುವುದು ಆತ್ಮದ ಚೇತನವು/
  ಜನುಮದಿಂದ ಗುರುತಿಸಲಾಗದು ದೈವಿಕ ವ್ಯಕ್ತಿತ್ವವ/
  ನಿರ್ವಹಣೆಯಲ್ಲಿ ನಿರೂಪಿಸುವುದು ಆತ್ಮದ ಚೈತನ್ಯವು/

  ವರ್ಣ ಭೇದಗಳಲ್ಲಿ ಸಮಾಜವು ವಿಭಿನ್ನವಾಗಿರುವುದೇಕೆ/
  ಆಲೋಚಿಸಿದರೆ ಅರಿವಾಗುವುದು ವರ್ಣಗಳ ಪರಾಧೀನತೆ
  ಮೇಲುಕೀಳೆಂಬ ಭಿನ್ನ ಭಾವನೆಗಳಲ್ಲಿ ಹೊಡೆದಾಟವೇಕೆ/
  ವಿವೇಚಿಸಿದರೆ ವಿವೇಕವಾಗುವುದು ವರ್ಣಗಳ ಪಾರತಂತ್ರ್ಯತೆ/

  ಜಾತಿಮತಗಳ ಜಂಜಾಟದಲ್ಲಿ ಬದುಕಿನಲ್ಲಿ ಜಾಲಾಡಿಸುವೆವು ನಿರರ್ಥಕದಲ್ಲಿ/
  ಶಿಕ್ಷಿತರು ಅಶಿಕ್ಷಿತರು ಸಮಾನತೆಯಲ್ಲಿ ಕಾದಾಡುವೆವು ವರ್ಣ ವೈಮನಸ್ಯಗಳಲ್ಲಿ/
  ಯಾವ ಕೀರ್ತಿಗೆ ಯಶಸ್ಸಿಗೆ ಜೀವನದಲ್ಲಿ ತೊಳಲಾಡುವೆವು ನಿಷ್ಪ್ರಯೋಜಕದಲ್ಲಿ/
  ಜ್ಞಾನಿಗಳು ಅಜ್ಞಾನಿಗಳು ಸಮೀಕರಣದಲ್ಲಿ ತರ್ಕಿಸುವೆವು ಜಾತಿ ತಾರತಮ್ಯಗಳಲ್ಲಿ/

  ಸೂತಪುರಾಣಿಕರು ಅರ್ಹರಾದರು ವೈಯುಕ್ತಿಕ ಸದ್ಗುಣ ಸದಾಚಾರಗಳಲ್ಲಿ
  ವಿಶ್ವರಥ ಮಹಾರಾಜ ವಿಶ್ವಾಮಿತ್ರನಾದ ತಪಸ್ಸುಗಳ ಕೇಂದ್ರೀಕರಣಗಳಲ್ಲಿ
  ಸೂತಪುರಾಣಿಕರು ಯೋಗ್ಯರಾದರು ವ್ಯಕ್ತಿಗತ ಸದ್ಬಾವ ಶಿಷ್ಟಾಚಾರಗಳಲ್ಲಿ/
  ಜನಿಸಿ ಬೇಡನಾಗಿ ವಾಲ್ಮೀಕಿಯಾದರು ಏಕಚಿತ್ತತೆಯ ಆಳವಾದ ಧ್ಯಾನಗಳಲ್ಲಿ/

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: