ಮುಗ್ಧ ಮಗುವಿಗೂ ಮೊಬೈಲ್ ಫೋನು ಬೇಕಾ?
ಪ್ರತಿವರ್ಷ ಕಣ್ಣಿನ ಪರೀಕ್ಷೆ ಮಾಡಿಸುವುದು ನನ್ನ ಅಭ್ಯಾಸ. ಅಂತೆಯೇ ಈ ವರ್ಷದ ಕಣ್ಣಿನ ತಪಾಸಣೆಗೆ ಹೋದೆ. ಬೆಳಿಗ್ಗೆ ಹತ್ತು ಗಂಟೆಯ ಸಮಯ. ಆಗಲೇ ಕೆಲವರು ಅಲ್ಲಿ ಬಂದಿದ್ದರು. ಸ್ಥಿತಿವಂತರ ಹಾಗೆ ಕಾಣುವ ಒಂದು ಕುಟುಂಬವೂ ಅಲ್ಲಿತ್ತು. ತಾಯಿ, ಮಗಳು ಅಳಿಯ ಮತ್ತು ಎರಡು ವರ್ಷ ಇನ್ನೂ ತುಂಬದ ಕಂದ. ಮಗು ಮುದ್ದಾಗಿತ್ತು. ಬಹಳ ಚೂಟಿಯಾಗಿತ್ತು. ಮಗುವನ್ನು ಬಿಟ್ಟು ಎಲ್ಲರೂ ಕನ್ನಡಕಧಾರಿಗಳು. ಹಾಗಾಗಿ ಎಲ್ಲರೂ ಬಂದಿದ್ದರು. ಮಗು ತಂದೆಯ ತೊಡೆಯ ಮೇಲೆ ಕುಳಿತಿತ್ತು. ಅದರ ಅಮ್ಮ ಮತ್ತು ಅಜ್ಜಿ ಡಾಕ್ಟರ್ ಹತ್ತಿರ ತಪಾಸಣೆಗೆಂದು ಹೋಗಿದ್ದರು. ಮಗುವಿನ ಕೈ ಅಪ್ಪನ ಕೈಯ ಆಧಾರದಲ್ಲಿ ಮೊಬೈಲ್ ಫೋನು ಹಿಡಿದಿತ್ತು. ಅಪ್ಪ ಅದರಲ್ಲಿರುವ ಎಲ್ಲಾ ಫೋಟೋಗಳನ್ನು ಮಗುವಿಗೆ ತೋರಿಸಿ, ಇದು ಯಾರು? ಇದು ಯಾರು? ಎಂದು ಪ್ರಶ್ನೆ ಮಾಡುತ್ತಿದ್ದ. ಮಗು ತನ್ನ ಮುದ್ದಾದ ಬಾಲಭಾಷೆಯಲ್ಲಿ ಅಪ್ಪ, ಅಮ್ಮ, ಅಜ್ಜಿ, ಮಾಮ ಎಂದೆಲ್ಲಾ ಹೇಳುತ್ತಿತ್ತು. ಪರಿಚಯ ಇಲ್ಲದ ಮುಖಕ್ಕೆ ಗೊತ್ತಿಲ್ಲ ಮಾಮ ಎನ್ನುತ್ತಿತ್ತು. ಹೀಗೇ ಇದು ಸಾಗುತ್ತಿತ್ತು. ಒಮ್ಮೊಮ್ಮೆ ಆ ಮುದ್ದು ಮುಖದಲ್ಲಿ ಅದೇನೋ ಅಸಹನೆ ಕಾಣಿಸುತ್ತಿತ್ತು. ತಾನೇ ಸ್ಕ್ರೋಲ್ ಮಾಡುತ್ತಿತ್ತು. ಅಂತೂ ಅರ್ಧಗಂಟೆ ಸುಮಾರು ಇದೇ ನಡೆಯಿತು. ನಗು ದುಃಖದಲ್ಲಿ ಒಂದು ಗಂಭೀರ ಕಳೆ ಬೇರೆ ಮನೆ ಮಾಡಿತ್ತು. ಆಗಾಗ ಹುಬ್ಬುಗಳು ಕೋಪ ಬಂದ ರೀತಿಯಲ್ಲಿ ಕುಗ್ಗುತ್ತಿದ್ದವು.
ಇಷ್ಟರಲ್ಲಿ ಅಪ್ಪನನ್ನು ಕಣ್ಣಿನ ತಪಾಸಣೆಗೆ ಕರೆದರು. ಅಜ್ಜಿಯದು ಮುಗಿದು ವಾಪಾಸು ಬಂದರು. ಅಪ್ಪನನ್ನು ಹೋಗಲು ಬಿಡುವುದಕ್ಕೆ ಮಗುವಿನ ತಕರಾರು. ಆಗ ಮಾಡಿದ ಉಪಾಯವೇನು ಗೊತ್ತೆ? ಅಪ್ಪ ತನ್ನ ಮೊಬೈಲ್ ಫೋನನ್ನು ಅಜ್ಜಿಯ ಕೈಗಿಟ್ಟು, ಮಗುವನ್ನೂ ಕೊಟ್ಟು, ಅದನ್ನು ನೋಡುತ್ತಿರು ಎಂದು ಹೋದರು. ಮತ್ತೆ ಮಗು ಅಜ್ಜಿಯ ಮಡಿಲನ್ನು ಸೇರಿ ಪುನಃ ಮೊಬೈಲ್ ಫೋನ್ ವೀಕ್ಷಣೆಗೆ ಶುರುಹಚ್ಚಿಕೊಂಡಿತು. ಇದೇ ರೀತಿ ನಾನು ಮಗುವು ಮೊಬೈಲ್ ಫೋನ್ ಜೊತೆ ಇದ್ದುದನ್ನು ಸುಮಾರು ಒಂದೂವರೆ ಗಂಟೆಗಳ ಕಾಲ ನೋಡಿದೆ. ನನ್ನ ಮನಸಿನಲ್ಲಿ ಅನೇಕ ವಿಷಯಗಳು ಹಾದುಹೋದವು. ಮೊಬೈಲ್ ಫೋನನ್ನು ನೋಡುವುದು ಪುಟ್ಟ ಮಗುವಿಗೆ ಒಳ್ಳೆಯದೇ? ಹಾನಿಕಾರಕವಲ್ಲವೇ? ಯಾವ ರೀತಿಯ ದುಷ್ಪರಿಣಾಮಗಳಾಗಬಹುದು? ಹೀಗೆ ಹುಡುಕಾಟದಲ್ಲಿ ತೊಡಗಿತು ನನ್ನ ಮಿದುಳು.
ಎರಡು ತಲೆಮಾರುಗಳ ಹಿಂದೆ ಮಕ್ಕಳ ಆಟಗಳೇ ಬಹಳ ಸರಳ, ವ್ಯಾಯಾಮ ಭರಿತ ಮತ್ತು ಆತಂಕ, ಉದ್ವೇಗಗಳಿಲ್ಲದ ಚಟುವಟಿಕೆಗಳು. ಪುಟ್ಟ ಮಕ್ಕಳಿಗೂ ಪರಿಸರದ ಪರಿಚಯವಾಗುತ್ತಿತ್ತು. ಹೊರಗಿನ ಗಾಳಿಯನ್ನು ಸೇವಿಸುತ್ತಾ ಗುಬ್ಬಚ್ಚಿ, ಕಾಗೆಗಳನ್ನು ನೋಡುತ್ತಾ ಹಸಿರಿನ ಮಧ್ಯೆ ಸಂತೋಷಪಡುವ ಮಗು. ಪ್ರಾಣಿ ಪಕ್ಷಿಗಳನ್ನು ಗಮನಿಸುತ್ತಾ ಪ್ರಕೃತಿಯ ಬಗ್ಗೆ ತಿಳಿಯುತ್ತಿತ್ತು ಪುಟ್ಟ ಕಂದಮ್ಮ. ಆಸಕ್ತಿಯನ್ನೂ ಬೆಳೆಸಿಕೊಳ್ಳುತ್ತಿತ್ತು. ಇದು ಮುಂದೆ ಪ್ರಕೃತಿಯ ರಕ್ಷಣೆಗೆ ಬಹಳ ಸಹಾಯಕವಾಗುತ್ತಿತ್ತು. ಈಗಿನ ಕಾಲದಲ್ಲಿ ಬಹುಮಹಡಿ ಕಟ್ಟಡದಲ್ಲಿರುವ ಮಗುವಿಗೆ ಇದು ಸಾಧ್ಯವಿಲ್ಲ. ಪ್ರಕೃತಿಯ ಹತ್ತಿರಕ್ಕೇ ಹೋಗದ ಮಗುವಿಗೆ ಅದರ ರಕ್ಷಣೆಯ ಬಗ್ಗೆ ಹೇಗೆ ಕಾಳಜಿ ಬರುತ್ತದೆ? ಕತೆ ಹೇಳುವ ಅಜ್ಜಿ ತಾತಂದಿರೂ ಈಗ ಬಹಳ ವಿರಳ. ಇದರಿಂದ ಪರಿಸರದ ಬಗ್ಗೆ ಒಳ್ಳೆಯ ಭಾವನೆಗಳು ಮತ್ತು ಸ್ಪಂದಿಸುವಿಕೆಯನ್ನು ನಿರೀಕ್ಷಿಸುವುದು ಕಷ್ಟ. ಮಗುವಿಗೆ ಟಿವಿಯಲ್ಲಿ ಇದನ್ನೆಲ್ಲಾ ತೋರಿಸಿದರೂ ಪ್ರತ್ಯಕ್ಷ ಅನುಭವವಿಲ್ಲದೆ ಪರಿಸರ ಪ್ರೀತಿ ಕಷ್ಟವೆನಿಸುತ್ತದೆ. ಇನ್ನು ಮನೆಯ ಒಳಗೂ ಹಿಂದೆ ಮಗುವನ್ನು ಆಟ ಆಡಿಸುವ ರೀತಿಯೇ ಬೇರೆ ಇತ್ತು. ಪುಟ್ಟ ಮಗು ಚತುಷ್ಪಾದಿಯಂತೆ ನೆಲಕ್ಕೆ ಕೈ ಊರಿ, ಮಂಡಿಗಳನ್ನು ಊರಿದಾಗ ಯಾರಾದರೂ ಆನೆ ಬಂತೊಂದಾನೆ, ಏರಿ ಮೇಲೊಂದಾನೆ ಎಂದರೆ ಹಾಗೇ ಮೈಯನ್ನು ತೂಗುತ್ತಿತ್ತು. ಇದೊಂದು ಒಳ್ಳೆಯ ವ್ಯಾಯಾಮ. ‘ಗೋವಿಂದ’ ಎಂದರೆ ಕೈಗಳನ್ನು ಎತ್ತಿ ನಮಸ್ಕಾರ ಮಾಡುತ್ತಿತ್ತು. ತಾರಮ್ಮೆಯ್ಯ ತಾತಾ ಗೊಂಬೆ ಎಂದರೆ ಕೈಗಳನ್ನು ತಿರುಗಿಸುತ್ತಿತ್ತು. ವ್ಯಾಯಾಮಕ್ಕೆ ಎಂತಹ ಸರಳ ಆಟಗಳು. ಈಗ ಇವೆಲ್ಲಾ ಮಾಯವಾಗಿವೆ ಎಂದು ನನ್ನ ಭಾವನೆ. ಇಂತಹ ಸಂಸ್ಕೃತಿಯೇ ಕಾಣೆಯಾಗುತ್ತಿದೆಯಲ್ಲ ಎಂದು ದುಃಖವಾಗುತ್ತದೆ. ಇಂತಹ ಆಟಗಳು ಕೂಡು ಕುಟುಂಬದಲ್ಲಿದ್ದ ಅಜ್ಜಿ ತಾತಂದಿರಿಗೂ ಆಹ್ಲಾದದಾಯಕವಾಗಿರುತ್ತಿತ್ತು.
ಈಗ ಮೊಬೈಲ್ ಫೋನ್ ಇಲ್ಲದೆ ಜೀವನವೇ ಇಲ್ಲ ಎನ್ನುವ ಹಂತಕ್ಕೆ ನಾವು ತಲುಪಿಬಿಟ್ಟಿದ್ದೇವೆ. ಹೌದು, ಇದರಿಂದ ಅನೇಕ ಉಪಯೋಗಗಳಿವೆ ಎನ್ನುವುದು ತಿಳಿದೇ ಇದೆ. ಆದರೆ ಕೆಟ್ಟ ಪರಿಣಾಮಗಳೂ ಅನೇಕ ಇವೆ. ಹಾರ್ವರ್ಡ್ ಆರೋಗ್ಯ ಪ್ರಕಟಣೆ (ಹಾರ್ವರ್ಡ್ ಹೆಲ್ತ್ ಪಬ್ಲಿಷಿಂಗ್) 2015 ರ ಪ್ರಕಾರ ಒಂದು ವರ್ಷ ತುಂಬದ ಮಗು ಕೂಡ ಮೊಬೈಲ್ ಫೋನ್ ನೋಡುತ್ತದೆ. ಇದು ಶೇಕಡ 44 ರಷ್ಟಿದೆ. ಇನ್ನು ಎರಡು ವರ್ಷದ ಮಕ್ಕಳಲ್ಲಿ ಶೇಕಡ 77 ರಷ್ಟು ಮೊಬೈಲ್ ನೋಡುತ್ತವೆ. ಇದಕ್ಕೆ ಕಾರಣಗಳೂ ಇವೆ. ಮುಖ್ಯವಾಗಿ ತಂದೆತಾಯಿಯರೇ ಈ ಅಭ್ಯಾಸ ಮಾಡಿಸುತ್ತಾರೆ. ತಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸುವಾಗ ಮಗು ಸುಮ್ಮನೆ ಇರಲೆಂದು ಕೈಗೆ ಫೋನಿಡುತ್ತಾರೆ (70%). ಇಲ್ಲಿಂದ ಚಟ ಪ್ರಾರಂಭವಾಗುತ್ತದೆ. ಹೊರಗಡೆ ಹೋದಾಗ ಗಲಾಟೆ ಮಾಡದೆ ಇರಲಿ ಎಂದು ಮಗುವಿಗೆ ಕೊಡುತ್ತಾರೆ (60%). ಇನ್ನು ಮಗು ನಿದ್ರೆ ಮಾಡುವ ಸಮಯದಲ್ಲೂ ಕೈಗಿಡುತ್ತಾರೆ (29%). ತಾವು ಏನಾದರೂ ಕೆಲಸ ಮೇಲೆ ಹೊರಗೆ ಹೋದಾಗಲೂ ಮಗುವಿನ ಕೈಯಲ್ಲಿ ಕೊಡುತ್ತಾರೆ (58%).
ಇದೆಲ್ಲದರ ಪರಿಣಾಮಗಳು ಅನೇಕ. ಮಗುವಿನ ಮಿದುಳು ಬೆಳೆದು ವಿಕಾಸವಾಗಬೇಕಾದರೆ ದೊಡ್ಡವರ ಸಂವಹನ ಮತ್ತು ಪರಸ್ಪರ ಪ್ರಕ್ರಿಯೆಗಳು ಅತಿ ಮುಖ್ಯ. ಏಕಮುಖಿಯಾಗಿ ಫೋನನ್ನು ನೋಡುತ್ತ ಮಗು ಕುಳಿತರೆ ಇದು ಸಾಧ್ಯವೇ ಇಲ್ಲ. ಮೊಬೈಲ್ ಫೋನಿನ ಮೇಲೆ ವಿಷಕಾರಿ, ರೋಗತರುವ ಕೀಟಾಣುಗಳು ಬಹಳ ಬಹಳ ಹೆಚ್ಚಿನ ಸಂಖ್ಯೆಯಲ್ಲಿರುತ್ತವೆ. ಮಗು ಇದನ್ನು ಮುಟ್ಟಿ ಬಾಯೊಳಗೆ ಕೈಯಿಡಬಹುದು. ಮೊಬೈಲ್ ಫೋನನ್ನೇ ಬಾಯಿಗಿಡಬಹುದು. ಚಿಕ್ಕ ಬ್ಯಾಟರಿಯನ್ನು ತೆಗೆದರಂತೂ ಅಪಾಯ. ಒಂದು ಮಗು ಕೆಲಸಮಯದ ಹಿಂದೆ ಬ್ಯಾಟರಿ ನುಂಗಿ ಜೀವ ಕಳೆದುಕೊಂಡಿತು. ಒಂದು ಕಡೆ ಫೋನು ಹಿಡಿದು ಮಗು ಕುಳಿತರೆ ಅದರ ಚಟುವಟಿಕೆಗಳೆಲ್ಲಾ ಕುಂಠಿತವಾಗುತ್ತದೆ. ತೂಕ ಜಾಸ್ತಿಯಾಗಬಹುದು, ತೆವಳುವುದು, ನಿಲ್ಲುವುದು ಮತ್ತು ನಡೆಯುವುದು ಇವೆಲ್ಲಾ ಕಡಿಮೆಯಾಗುತ್ತದೆ. ವ್ಯಾಯಾಮ ಕಡಿಮೆಯಾಗುತ್ತದೆ. ಇದಲ್ಲದೆ ಎಲ್ಲರೊಡನೆ ಕೂಡಿ ಬೆರೆಯದೆ ಸಂವಹನದ ಕೊರತೆಯುಂಟಾಗುತ್ತದೆ. ಇದರಿಂದ ಮಾನಸಿಕ ಮತ್ತು ಭಾವನಾತ್ಮಕ ಬೆಳವಣಿಗೆ ಸರಿಯಾಗಿ ಆಗುವುದಿಲ್ಲ. ಎಲ್ಲರೊಡನೆ ಬೆರೆಯುವುದನ್ನು ಕಲಿಯಲಾಗುವುದಿಲ್ಲ. ಬುದ್ಧಿಮಟ್ಟ ಕಡಿಮೆಯಾಗಬಹುದು. ನಿದ್ರೆ ಸರಿಯಾಗಿ ಬಾರದೆ ಇರಬಹುದು. ಮಾನಸಿಕ ತೊಂದರೆಗಳು ಕಾಣಿಸಬಹುದು. ಮೊಬೈಲ್ ಫೋನಿನ ಎಲೆಕ್ಟ್ರೋಮ್ಯಾಗ್ನೆಟಿಕ್ ವಿಕಿರಣಗಳಿಂದ ಮಿದುಳಿನ ಗಡ್ಡೆ ಬರಬಹುದು. ಕಣ್ಣಿನ ದೃಷ್ಟಿ ಕುಂಠಿತವಾಗಬಹುದು. ಕಣ್ಣಿನಿಂದ ನೀರು ಒಸರುವಿಕೆ ಮತ್ತು ಕಣ್ಣು ಮಿಟುಕಿಸುವುದು ಆಗಬಹುದು.
ಒಟ್ಟಿನಲ್ಲಿ ಮಗು ಇಷ್ಟೆಲ್ಲ ಕೆಟ್ಟ ಪರಿಣಾಮಗಳನ್ನು ಅನುಭವಿಸಬೇಕಾಗಬಹುದು. ದಿನದಲ್ಲಿ ಹದಿನೈದು-ಇಪ್ಪತ್ತು ನಿಮಿಷ ಫೋನನ್ನು ೫ ವರ್ಷದ ಮಗು ನೋಡಿದರೆ ಅಷ್ಟು ಪರಿಣಾಮ ಇರುವುದಿಲ್ಲ. ತಂದೆತಾಯಿಗಳು ಈ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಮಕ್ಕಳನ್ನು ನೋಡಿಕೊಳ್ಳಬೇಕು.
-ಡಾ.ಎಸ್. ಸುಧಾ
ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಮೊಬೈಲ್ ಕೊಡುವುದು…ಅದಿಲ್ಲದೇ ಊಟವೇ ಮಾಡುವುದಿಲ್ಲ ಎಂದು ಹೇಳುವುದು..ಕೆಲವು ತಾಯಂದಿರ ಉವಾಚಗಳ ಅದರಿಂದ ಏನೇನು ಅನಾಹುತ ಅನಾರೋಗ್ಯ ಕ್ಕೆಡೆಯಾಗುತ್ತದೆಂಬ ಪರಿವೆಯೇ ಇರುವುದಿಲ್ಲ..ಜಾಗ್ರತೆ ಮೂಡಿಸುವಂತ ಲೇಖನ ಧನ್ಯವಾದಗಳು ಮೇಡಂ.
ಧನ್ಯವಾದಗಳು
ಇವತ್ತಿನ ವಾಸ್ತವವನ್ನು ಬಹಳ ಚೆನ್ನಾಗಿ ವಿವರಿಸಿದ್ದೀರಿ. ಮಾಹಿತಿಪೂರ್ಣ ಬರಹ
ಧನ್ಯವಾದಗಳು.
ಸಕಾಲಿಕವಾಗಿ ಎಚ್ಚರಿಸಿದ್ದೀರಿ. ಇಂದಿನ ಜನಾಂಗ ಎಚ್ಚೆತ್ತುಕೊಳ್ಳ ಬೇಕಿದೆ ಅಷ್ಟೆ. ಮನಶಾಸ್ರ್ತಜ್ಞರ ಪ್ರಕಾರ ಟಿವಿ/ಮೊಬೈಲ್ ಪರದೆಯೊಂದಿಗೆ ಮಗುವನ್ನು ಬಿಡುವುದು ಅತ್ಯಂತ ಕೆಟ್ಟದಾದ ʼಬೇಬಿಸಿಟ್ಟಿಂಗ್ʼ ಎಂಬುದು. ಜಾಗೃತಿ ಮೂಡಿಸುವ ಲೇಖನಕ್ಕಾಗಿ ಅಭಿನಂದನೆಗಳು
ಮೆಚ್ಚುಗೆಯ ನುಡಿಗಾಗಿ ಧನ್ಯವಾದಗಳು
ನಿಮ್ಮ ಲೇಖನ ಸಕಾಲಿಕವಾಗಿ ಮೂಡಿ ಬಂದಿದೆ . ಉತ್ತಮ ಚಿಂತನೆ ಈಗಿನ ಪರಿಸ್ಥಿತಿಗೆ . ಡಾ.ಸುಧಾ ಇವರಿಗೆ ವಂದನೆಗಳು.
ನಮಸ್ಕಾರ. ಅನೇಕ ಧನ್ಯವಾದಗಳು
ಮೊಬೈಲ್ ಎಂಬ ಮಾಯಾಸುರ ಮಕ್ಕಳ ಆರೋಗ್ಯವನ್ನು ಹಾಳುಮಾಡುವ ಬಗ್ಗೆ ಎಚ್ಚರಿಸುವ ಸಕಾಲಿಕ ಲೇಖನ ಬಹಳ ಚೆನ್ನಾಗಿದೆ ಮೇಡಂ.
ನಮಸ್ಕಾರ. ಪರಿಣಾಮ ತಿಳಿಸಿದ್ದೇನೆ. ಮೆಚ್ಚುಗೆಗೆ ಧನ್ಯವಾದಗಳು.