ಈ ಕೂಸು ನಮಗಿರಲಿ..
ಬೆಳಗ್ಗೆ ಐದುಗಂಟೆಗೆ ಎದ್ದು ಮನೆಗೆಲಸ ಮುಗಿಸಿ ಮಕ್ಕಳಿಬ್ಬರನ್ನೂ ಶಾಲೆಗೆ ತಯಾರುಮಾಡಿ ಕಳಿಸಿದ ಗೋಪಾಲ ತನ್ನ ಸ್ನಾನಪಾನಾದಿಗಳನ್ನು ಮುಗಿಸಿ ತಿಂಡಿ ತಂದು ಮಧ್ಯಾನ್ಹದ ಬುತ್ತಿ ಕಟ್ಟಿಕೊಂಡು ಅಂಗಡಿ ಬಾಗಿಲು ತೆರೆಯಲು ಸಿದ್ಧನಾಗುತ್ತಿದ್ದ.
ಇದ್ದ ಒಂದು ಕೋಣೆಯ ಮಂಚದ ಮೇಲೆ ಹಸುಗೂಸೊಂದನ್ನು ಮಲಗಿಸಿಕೊಂಡು ಮಲಗಿದ್ದ ಹಸಿಬಾಣಂತಿ ಕೌಸಲ್ಯಾ ಅಲ್ಲಿಂದಲೇ ಗಂಡನ ಚಲನವಲನಗಳನ್ನು ಗಮನಿಸುತ್ತಿದ್ದಳು. ಈಗ ನನ್ನನ್ನು ಕೂಗಬಹುದು. ಏನಾದರೂ ಹೇಳಬಹುದು, ”ನಿನಗೆಂದು ಗಂಜಿ ಮಾಡಿಟ್ಟಿದ್ದೇನೆ, ಕೂಸಿಗೆ ಹಾಲು ಕಾಯಿಸಿ ಒಲೆಯ ಮೇಲಿಟ್ಟಿದ್ದೇನೆ” ಎಂದೆಲ್ಲಾ ಬಯಸಿದ್ದಳು. ಊಹುಂ, ತಮ್ಮಿಬ್ಬರ ಇರುವಿಕೆಯನ್ನೇ ಮರೆತವನಂತೆ ಬಟ್ಟೆಧರಿಸಿ ಬಾಗಿಲನ್ನು ತೆರೆದು ಹೊರಕ್ಕೆ ಹೋದ ಸದ್ದು ಕೇಳಿಸಿತು. ಹಿಂದೆಯೇ ಗಾಡಿ ಸ್ಟಾರ್ಟ್ ಮಾಡಿದ ಶಬ್ಧವೂ ಕೇಳಿಸಿದಾಗ ಉಮ್ಮಳಿಸಿ ಬಂದ ದುಃಖವನ್ನು ಹತ್ತಿಕ್ಕುತ್ತಾ ಹೇಗೋ ಮೇಲೆದ್ದಳು. ಹಾಗೆಯೇ ತಟ್ಟಾಡುತ್ತಲೇ ಬಾತ್‌ರೂಮಿಗೆ ಹೋಗಿ ಪ್ರಾತಃವಿಧಿಗಳನ್ನು ಪೂರೈಸಿ, ಮುಖ ತೊಳೆದು ದೇವರ ಪಟಕ್ಕೊಂದು ನಮಸ್ಕಾರ ಹಾಕಿ ಅಡುಗೆ ಮನೆ ಪ್ರವೇಶಿಸಿದಳು. ಅಲ್ಲಿದ್ದ ಪಾತ್ರೆಗಳ ಮುಚ್ಚಳವನ್ನು ತೆರೆದಳು. ಅಚ್ಚರಿಯಿಂದ ಮತ್ತೆ ಮತ್ತೆ ಪರಿಶೀಲಿಸಿದಳು. ಒಂದರಲ್ಲಿ ಹದವಾಗಿ ಹುರಿದ ರವೆಯಿಂದ ಮಾಡಿದ ಗಂಜಿಯ ವಾಸನೆ ಮೂಗಿಗೆ ಬಂದಿತು. ಮತ್ತೊಂದರಲ್ಲಿ ಕಾಯಿಸಿದ ನೀರು, ಮಗದೊಂದರಲ್ಲಿ ಕಾಯಿಸಿಟ್ಟಿದ್ದ ಹಾಲು. ಮಧ್ಯಾನ್ಹದ ಊಟಕ್ಕೆ ಅನ್ನ ಮತ್ತು ಮೆಣಸಿನ ಸಾರು ಎಲ್ಲವೂ ಇದ್ದವು. ಹಾಗಾದರೆ ಇವರಿಗೆ ನನ್ನ ಮತ್ತು ಮಗುವಿನ ಮೇಲಿದ್ದ ಸಿಟ್ಟು ಇಳಿದಂತೆ ಕಾಣಿಸುತ್ತದೆ. ಎಂದಾಯ್ತು ಎಂದುಕೊಂಡು ಒಂದು ಲೋಟಕ್ಕೆ ಗಂಜಿಯನ್ನು ಹಾಕಿಕೊಂಡು ಕುಡಿದಳು. ನೀರನ್ನು ಕುಡಿದು ಲೋಟವನ್ನು ಕೆಳಗಿಡುವಷ್ಟರಲ್ಲಿ ಮಗುವು ಅತ್ತ ಸದ್ದು ಕೇಳಿಸಿತು.
ತಕ್ಷಣ ಕಾಯಿಸಿಟ್ಟಿದ್ದ ಹಾಲನ್ನು ಲೋಟಕ್ಕೆ ಬಗ್ಗಿಸಿಕೊಂಡು ಅಲ್ಲಿಯೇ ಇದ್ದ ಒಳಲೆಯನ್ನು ನೀರಿನಲ್ಲಿ ತೊಳೆದು ಕೈಗೆತ್ತಿಕೊಂಡು ಕೋಣೆಗೆ ಬಂದಳು. ಅಳುತ್ತಿದ್ದ ಮಗುವನ್ನು ಎತ್ತಿ ಹೆಗಲಮೇಲೆ ಮಲಗಿಸಿಕೊಂಡು ಅದರ ಒದ್ದೆಯಾಗಿದ್ದ ಬಟ್ಟೆ ಬದಲಾಯಿಸಿದಳು. ಕಾಲಿನಮೇಲೆ ಅದನ್ನು ಮಲಗಿಸಿಕೊಂಡು ಒಳಲೆಯಿಂದ ಗುಟುಕುಗುಟುಕಾಗಿ ಹಾಲನ್ನು ಕುಡಿಸತೊಡಗಿದಳು. ಹಾಲು ಒಳಗೆ ಹೋಗುತ್ತಿದ್ದಂತೆ ಅಳು ನಿಲ್ಲಿಸಿದ ಮಗು ಚಪ್ಪರಿಸಿಕೊಂಡು ಕುಡಿಯಲಾರಂಭಿಸಿತು. ಹಾಗೇ ಕಾಲಮೇಲೆ ಮಲಗಿದ್ದ ಕೂಸನ್ನೇ ದಿಟ್ಟಿಸಿ ನೋಡಿದಳು ಕೌಸಲ್ಯಾ. ಕೇವಲ ಹದಿನೈದು ದಿವಸಗಳ ಮಗು. ಹೆಚ್ಚಿನ ಉಪಚಾರವೇ ಇಲ್ಲದಿದ್ದರೂ ಹೇಗೆ ಕಳಕಳಿಯಾಗಿದೆ. ತಿದ್ದಿ ತೀಡಿದಂತಹ ಹುಬ್ಬುಗಳು, ನೀಳವಾದ ಮೂಗು, ಹಾಲಿನ ಬಣ್ಣ, ಉಬ್ಬಿದ ಗಲ್ಲ, ತಲೆಯತುಂಬ ದಟ್ಟವಾದ ಕಪ್ಪು ಕೂದಲು. ಎಂಥಹ ಚೆಲುವು!ಈಗಾಗಲೇ ತನಗಿರುವ ಇಬ್ಬರು ಮಕ್ಕಳೂ ಚೆಲುವಿನಲ್ಲಿ ಕಡಿಮೆಯೇನಿಲ್ಲ. ಆದರು ಈ ಕಂದ ಅವರಿಗಿಂತಲೂ ಸ್ವಲ್ಪ ಹೆಚ್ಚೇ.
ಹಾಗೆಯೇ ಅವಳ ಮನಸ್ಸಿನಾಳದಲ್ಲಿ ಹತ್ತು ವರ್ಷ ಹಿಂದಿನ ದಿನಗಳಿಗೆ ಸರಿದುಹೋದಳು. ಮೈಸೂರಿನ ಒಂಟಿಕೊಪ್ಪಲು ಬಡಾವಣೆಯಲ್ಲಿ ಪ್ರೈಮರಿ ಶಾಲೆಯ ಮಾಸ್ತರಾಗಿದ್ದ ರಾಮಣ್ಣ ಅವರ ಪತ್ನಿ ಸೀತಮ್ಮನವರ ಮೂವರು ಮಕ್ಕಳಲ್ಲಿ ಇವಳೇ ಕಿರಿಯವಳು. ನೋಡಲು ಸಹಜ ಸುಂದರಿ. ಓದಿನಲ್ಲಿಯೂ ಚುರುಕಾಗಿದ್ದಳು. ಎಸ್.ಎಸ್.ಎಲ್.ಸಿ., ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ತೇರ್ಗಡೆಯಾಗಿದ್ದಳು. ತಾನೂ ಅಪ್ಪನಂತೆ ಶಾಲಾ ಮಾಸ್ತರಳಾಗಬೇಕೆಂಬ ಹಂಬಲ. ಇದನ್ನು ಮನಗಂಡ ರಾಮಣ್ಣ ಅವಳನ್ನು ಟಿ.ಸಿ.ಎಚ್. ಕೋರ್ಸಿಗೆ ದಾಖಲಿಸಿದರು. ಕಷ್ಟಪಟ್ಟು ಓದಿ ಅದರಲ್ಲಿಯೂ ಉತ್ತಮ ಅಂಕಗಳನ್ನು ಗಳಿಸಿ ಪಾಸಾಗಿದ್ದಳು. ನಂತರ ಅವಳಿಗೆ ಸರ್ಕಾರಿ ಪ್ರಾಥಮಿಕ ಬಾಲಿಕೆಯರ ಶಾಲೆಯಲ್ಲಿ ಕೆಲಸವೂ ಸಿಕ್ಕಿತು. ತನ್ನ ವಿದ್ಯಾಭ್ಯಾಸವನ್ನು ಅಷ್ಟಕ್ಕೇ ನಿಲ್ಲಿಸದೇ ದೂರಶಿಕ್ಷಣ ಪಡೆದು ಪದವೀಧರಳೂ ಆದಳು.
ಮೈಸೂರಿನಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಗೋಪಾಲ ಎಂಬ ವರನೊಡನೆ ಅವಳ ವಿವಾಹವೂ ಆಯಿತು. ಗೋಪಾಲ ತನ್ನ ಹೆತ್ತವರನ್ನು ಚಿಕ್ಕಂದಿನಲ್ಲೇ ಕಳೆದುಕೊಂಡಿದ್ದರಿಂದ ಅಜ್ಜಿಯ ಆಸರೆಯಲ್ಲಿ ಬೆಳೆದಿದ್ದ. ಆಕೆಯೇ ಅವನನ್ನು ಸಾಕಿ ಸಲಹಿ ತಕ್ಕಮಟ್ಟಿಗೆ ವಿದ್ಯಾಭ್ಯಾಸವನ್ನೂ ಕೊಡಿಸಿದ್ದಳು. ಒಂದು ನೆಲೆ ಕಲ್ಪಿಸಿದ್ದಳು. ಮೊಮ್ಮಗನಿಗೆ ಮಡದಿಯಾಗಿ ಬಂದ ಕೌಸಲ್ಯಳನ್ನು ಬಹಳ ಅಕ್ಕರೆಯಿಂದ ನೋಡಿಕೊಂಡಳು. ಆಕೆಯ ಎರಡು ಮಕ್ಕಳ ಬಾಣಂತನವನ್ನೂ ತವರಿನವರಿಗೆ ಬಿಡದೆ ಅಜ್ಜಿ ತಾನೇ ಮಾಡಿದ್ದಳು. ಇತ್ತೇಚೆಗಷ್ಟೇ ಅವರು ಕಾಲವಾಗಿದ್ದರು. ಕೌಸಲ್ಯಳ ಕೆಲಸವು ಮೈಸೂರಿನ ಸುತ್ತಮುತ್ತಲ ಶಾಲೆಗಳಲ್ಲಿಯೇ ನಡೆದು ಇಬ್ಬರು ಮಕ್ಕಳನ್ನು ನೋಡಿಕೊಳ್ಳಲು ಸಹಾಯವಾಗಿತ್ತು. ಇದರಲ್ಲಿ ಗೋಪಾಲನ ಸಂಬಂಧಿಯೊಬ್ಬರ ನೆರವೂ ಒದಗಿತ್ತು. ಅಂತೂ ಗೋಪಾಲ. ಕೌಸಲ್ಯಾರ ಕುಂಟುಂಬ ನೆಮ್ಮದಿಯಿಂದಿತ್ತು.
ಗೋಪಾಲ ಕೆಲಸ ಮಾಡುತ್ತಿದ್ದ ಖಾಸಗಿ ಕಂಪೆನಿ ಕಾರಣಾಂತರಗಳಿಂದ ಲಾಕೌಟಾಯಿತು. ಇದರಿಂದ ಆತ ಬೇರೇನಾದರೂ ಉದ್ಯೋಗ ಹುಡುಕಿಕೊಳ್ಳಬೇಕಾಯಿತು. ಆಗ ಆತ ತನಗೆ ಹಿಂದಿನ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಕಾಲದಲ್ಲಿ ಉಳಿಸಿಕೊಂಡ ಹಣ, ಕಂಪೆನಿಯವರು ಟರ್ಮಿನೇಟ್ ಮಾಡಿದಾಗ ನೀಡಿದ ಹಣ ಎಲ್ಲವನ್ನೂ ಒಟ್ಟುಗೂಡಿಸಿ ಬಂಡವಾಳ ಮಾಡಿಕೊಂಡು ಒಂದು ಚಿಕ್ಕ ಅಂಗಡಿಯನ್ನು ತೆರೆದ. ಇದ್ದ ಮನೆ ಬಿಟ್ಟು ಚಿಕ್ಕದೊಂದು ಮನೆಯನ್ನು ಬಾಡಿಗೆಗೆ ಹಿಡಿದು ವೆಚ್ಚ ಕಡಿಮೆ ಮಾಡಿದರು. ಅಂಗಡಿಯಿದ್ದದ್ದು ಹೊಸ ಬಡಾವಣೆಯಾದ್ದರಿಂದ ನಿರೀಕ್ಷಿತ ಮಟ್ಟದಲ್ಲಿ ವ್ಯಾಪಾರ ಆಗುತ್ತಿರಲಿಲ್ಲ. ಆದರೂ ದೈನಂದಿನ ಖರ್ಚುವೆಚ್ಚಕ್ಕೆ ಮೋಸವಿರಲಿಲ್ಲ. ಹೇಗೋ ಹೊಂದಿಸಿಕೊಂಡು ಸಂಸಾರ ನಡೆಸಿಕೊಂಡು ಹೋಗುತ್ತಿದ್ದರು.
ಈ ಅಂತರದಲ್ಲಿ ಕೌಸಲ್ಯಾ ಮತ್ತೆ ಗರ್ಭಿಣಿಯಾಗಿದ್ದಳು. ಇದು ದಂಪತಿಗಳಿಗೆ ಬೇಡದ ಅತಿಥಿಯಾಗಿತ್ತು. ತುಂಬ ಯೋಚಿಸಿ ಬಸಿರನ್ನು ನಿವಾರಿಸಿಕೊಂಡು ಅಷ್ಟಕ್ಕೇ ಸಂತಾನ ನಿಯಂತ್ರಣ ಆಪರೇಷನ್ ಮಾಡಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು. ಆಗ ವಿಷಯ ತಿಳಿದ ಕೌಸಲ್ಯಾಳ ಅತ್ತಿಗೆ ಕೌಸಲ್ಯಾ,” ನೀನು ಆ ಮಗುವನ್ನು ತೆಗೆಸಲು ಹೋಗಬೇಡ. ನನ್ನ ಅಣ್ಣನಿಗೆ ಮದುವೆಯಾಗಿ ಹನ್ನೆರಡು ವರ್ಷಗಳಾದರೂ ಮಕ್ಕಳಾಗಿಲ್ಲ. ಅವರು ಮಾಡದ ಪೂಜೆಗಳಿಲ್ಲ. ಬೇಡದ ದೇವರುಗಳಿಲ್ಲ. ಹೋಗದೇ ಇರುವ ವೈದ್ಯರುಗಳಿಲ್ಲ. ಎಲ್ಲವೂ ವ್ಯರ್ಥವಾಗಿವೆ. ಸದ್ಯಕ್ಕೆ ಎಲ್ಲ ಪ್ರಯತ್ನಗಳನ್ನೂ ಕೈಬಿಟ್ಟು ನಿರಾಶರಾಗಿದ್ದಾರೆ. ನೀನು ಮನಸ್ಸು ಮಾಡಿ ಈ ಮಗುವನ್ನುಳಿಸಿ ಅವರಿಗೆ ಸಾಕಿಕೊಳ್ಳಲು ನೀಡಬಹುದು. ಈ ಬಗ್ಗೆ ನಾನಾಗಲೇ ಅಣ್ಣ, ಅತ್ತಿಗೆಯೊಂದಿಗೆ ಚರ್ಚಿಸಿದ್ದೇನೆ. ಅವರುಗಳು ಸಂತೋಷದಿಂದ ಒಪ್ಪಿದ್ದಾರೆ. ನೀನೂ ಗೋಪಾಲನೊಡನೆ ಆದಷ್ಟು ಬೇಗ ಮಾತನಾಡಿ ನಿರ್ಧಾರ ತಿಳಿಸು. ನಿನ್ನ ಗಂಡನೆನಾದರೂ ಒಪ್ಪದಿದ್ದ ಪಕ್ಷದಲ್ಲಿ ತಡವಾದರೆ ಕಷ್ಟವಾದೀತು. ಅಲ್ಲದೆ ಅವರು ಆರ್ಥಿಕವಾಗಿಯೂ ನಿಮಗೆ ಸಹಾಯ ಮಾಡಬಹುದು” ಎಂಬ ಮಾತನ್ನೂ ಸೇರಿಸಿದಳು. ತನ್ನ ಅತ್ತಿಗೆಯ ಮಾತುಗಳನ್ನು ಕೌಸಲ್ಯಾ ಗೋಪಾಲನಿಗೆ ಹೇಳಿದಳು. ಈ ವ್ಯವಸ್ಥೆ ಗೋಪಾಲನಿಗೆ ಅಷ್ಟಾಗಿ ಇಷ್ಟವಾಗಲಿಲ್ಲ. ತನ್ನವಳ ತವರಿನ ಸೋದರ ಸಂಬಂದಿ, ಅವರೇ ಮುಂದಾಗಿ ಬಂದಿದ್ದಾರೆ. ಅವರಿಗೆ ಕೊಟ್ಟರೂ ತಮ್ಮಗೆ ಹುಟ್ಟುವ ಮಗನೋ/ಮಗಳೋ ತಮ್ಮ ಕಣ್ಮುಂದೆಯೇ ಇರುತ್ತದೆ ಎಂಬ ದೂರದಾಸೆಯಿಂದ ಒಪ್ಪಿಗೆಯನ್ನಿತ್ತ.
ಸಮ್ಮತಿಯ ಮುದ್ರೆ ದೊರಕಿತೆಂದು ಕೌಸಲ್ಯಾಳ ಅತ್ತಿಗೆ ಸಂತಸದಿಂದ ತನ್ನ ತವರಿಗೆ ಸುದ್ಧಿ ಮುಟ್ಟಿಸಿದಳು. ಮುಂದಿನ ದಿನಗಳಲ್ಲಿ ನಡೆದಿದ್ದೆಲ್ಲ ಒಂದು ಕನಸಿನಂತೆ ನಡೆದುಹೋಯಿತು. ಮೈಸೂರಿನ ಸಮೀಪದ ಹಳ್ಳಿಯೊಂದರಲ್ಲೇ ಇದ್ದ ಕೌಸಲ್ಯಳ ಅತ್ತಿಗೆಯ ಕಡೆಯವರು ವಾರಕ್ಕೆ ಒಮ್ಮೆಯಾದರೂ ಬಂದು ಹೋಗುತ್ತಿದ್ದರು. ಅವರು ರೈತಾಪಿ ಕುಟುಂಬದವರಾದ್ದರಿಂದ ಮೈಸೂರಿಗೆ ಬರುವಾಗಲೆಲ್ಲ ಚೀಲದಲ್ಲಿ ತಾಜಾತರಕಾರಿ, ಹಣ್ಣುಹಂಪಲು ಯಥೇಚ್ಛವಾಗಿ ತರುತ್ತಿದ್ದರು. ಕೌಸಲ್ಯಳಿಗಂತೂ ರಾಜೋಪಚಾರವೇ ನಡೆಯಿತು.
ದಿನ ತುಂಬಿ ಕೌಸಲ್ಯಾಳನ್ನು ಅವಳ ಅಣ್ಣ ಅತ್ತಿಗೆ ಬಂದು ತಮ್ಮ ಮನೆಗೆ ಕರೆದುಕೊಂಡು ಹೋದರು. ಒಂದು ಶುಭ ಘಳಿಗೆಯಲ್ಲಿ ಆಕೆ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮನೀಡಿದಳು. ವಿಷಯ ತಿಳಿಸಿದ ನಂತರ ಕೌಸಲ್ಯಳ ಅತ್ತಿಗೆಯ ಮನೆಯವರು ಇತ್ತಕಡೆ ಬರಲೇ ಇಲ್ಲ. ಒತ್ತಾಯಿಸಿ ವಿಚಾರಿಸಿದಾಗ ಸುಗ್ಗಿಕಾಲ, ಕೈತುಂಬ ಕೆಲಸ, ಆಳುಕಾಳುಗಳನ್ನೆಲ್ಲ ಗಮನಿಸಿಕೊಳ್ಳಬೇಕಾದ ಕೆಲಸ, ಸ್ವಲ್ಪ ಕಾಲಾವಕಾಶ ಬೇಕು ಎಂದುತ್ತರ ಬಂತು.
ಮೊದಲೇ ನಿರ್ಧರಿಸಿದಂತೆ ಕೌಸಲ್ಯಾ ಫ್ಯಾಮಿಲಿ ಪ್ಲ್ಯಾನಿಂಗ್ ಆಪರೇಷನ್ ಮಾಡಿಸಿಕೊಂಡು ಮನೆಗೆ ಹೋಗೋಣವೆಂದು ಆಸ್ಪತ್ರೆಯಲ್ಲೇ ಕೆಲವು ದಿನ ಉಳಿದಳು. ಅವಳನ್ನು ನೋಡಲು ತಪ್ಪದೇ ಬರುತ್ತಿದ್ದ ಗಂಡ ಗೋಪಾಲನೂ ಕೌಸಲ್ಯಳ ಅತ್ತಿಗೆ ಮನೆಯವರು ಹೇಳುತ್ತಿದ್ದ ಸಬೂಬುಗಳಿಂದ ಬೇಸತ್ತು ಕಿಡಿಕಾರತೊಡಗಿದ. ಕೌಸಲ್ಯಾ ತನ್ನ ಅಣ್ಣನ ಕಡೆಯಿಂದ ಅವರಿಗೆ ಗಂಡನಿಗೆ ಗೊತ್ತಾಗದಂತೆ ಫೋನು ಮಾಡಿಸಿದ್ದಳು. ಅವರಿಂದ ಭರವಸೆಯ ಯಾವ ಪ್ರತ್ಯುತ್ತರ ಬಾರದೆ ತುಂಬ ನೊಂದಳು. ಅತ್ತತ್ತು ಕಣ್ಣುಗಳು ಊದಿಕೊಂಡವು. ಅವಳ ಚಿಂತೆಯಿಂದ ಮಗುವಿಗೆ ಹಾಲೂಡುತ್ತಿದ್ದ ತುಂಬಿದ ಎದೆ ಬತ್ತಿ ಹೋದಂತಾಯಿತು. ದೈಹಿಕ ಮತ್ತು ಮಾನಸಿಕ ಒತ್ತಡಗಳಿಂದ ಕುಗ್ಗಿಹೋದಳು. ಸಿಟ್ಟಿನಿಂದ ಗೋಪಾಲ ಆಕೆಯನ್ನು ಆಸ್ಪತ್ರೆಯಿಂದ ಅವರಣ್ಣನ ಮನೆಗೆ ಕಳಿಸದೇ ತನ್ನ ಮನೆಗೆ ನೇರವಾಗಿ ಕರೆತಂದಿದ್ದ. ”ಅರಿಷಿನ ಕೂಳಿಗೆ ಆಸೆಪಟ್ಟು ವರುಷದ ಕೂಳನ್ನು ಕಳೆದುಕೊಂಡಂತಾಯಿತು ನಮ್ಮ ಕತೆ. ನಾವಿರುವ ಪರಿಸ್ಥಿತಿಯಲ್ಲಿ ಇದೊಂದು ಹೆಚ್ಚಿನ ಹೊರೆ” ಎಂದು ಮಗುವಿನ ಮೇಲೂ ಬೇಸರಮಾಡಿಕೊಂಡ.
ಮನೆಗೆ ಬಂದ ಕೌಸಲ್ಯಾಳಿಗೆ ಅದೊಂದು ಜೈಲಿನಂತೆ ಕಾಣಿಸಿತು. ಗಂಡನಿಂದ ಮಾತಿಲ್ಲ. ಕತೆಯಿಲ್ಲ, ಉಂಡೆಯಾ, ಬಿಟ್ಟೆಯಾ ಎಂಬ ಒಂದು ಸೊಲ್ಲೂ ಇಲ್ಲ. ಕೌಸಲ್ಯಾಳಿಗೆ ಏನಪ್ಪಾ ಮುಂದೆ ಗತಿ? ಎಂದು ಚಿಂತೆಯಾಯಿತು.
ಆಕೆಯ ಅಣ್ಣನಿಗೆ ಚಂದವಾಗಿದ್ದ ತನ್ನ ತಂಗಿಯ ಸಂಸಾರ ಹೀಗೆ ಆಗಿದ್ದನ್ನು ಕಂಡು ತುಂಬ ನೋವಾಗಿತ್ತು. ಅತ್ತಿಗೆಯಂತೂ ನನ್ನಿಂದ ತಾನೇ ಇಷ್ಟೆಲ್ಲಾ ಆಗಿದ್ದು, ಮಗುವನ್ನು ನಮಗೇ ಕೊಟ್ಟುಬಿಡು ಎಂದಳು. ಅದನ್ನು ಕೇಳಿದ ಕೌಸಲ್ಯಾ ಈಗಾಗಲೇ ಅಣ್ಣ ಅತ್ತಿಗೆಗೆ ಮೂರು ಮಕ್ಕಳಿದ್ದಾರೆ. ಅವರುಗಳೇ ಅವರಿಗೆ ಸಾಕಾಗಿದೆ. ಈ ಹೆಚ್ಚಿದ ಹೊರೆಯನ್ನು ಅವರಿಗೆ ಹೊರಿಸುವುದು ತರವಲ್ಲ ಎಂದು ಆಲೋಚಿಸಿದಳು. ಈ ವಿಷಯ ಗೋಪಾಲನ ವರೆಗೆ ಹೋಗಲೇ ಇಲ್ಲ.
ಗೋಪಾಲ ಕೆಟ್ಟವನೇನಲ್ಲ. ಅವನು ಹೇಳಿದಂತೆ ಈಗಿನ ಪರಿಸ್ಥಿತಿಯಲ್ಲಿ ಹೊಸದಾಗಿ ಹೆಚ್ಚಿನ ಜವಾಬ್ದಾರಿ ಹೊರಲು ಅವನು ಸಿದ್ಧವಾಗಿರಲಿಲ್ಲ. ಅಲ್ಲದೆ ಅವರು ಆಸೆ ಹುಟ್ಟಿಸಿ ಇಕ್ಕಟ್ಟಿಗೆ ಸಿಕ್ಕಿಸಿದ್ದು ಅವನ ಕೋಪಕ್ಕೆ ಕಾರಣವಾಗಿತ್ತು. ಕಾಲಕ್ರಮೇಣ ಸರಿಹೋಗಬಹುದು ಎಂದುಕೊಂಡರು.
ಇಷ್ಟೆಲ್ಲ ನಡೆದಿದ್ದರೂ ಗೋಪಾಲ ತನ್ನಿಬ್ಬರು ಮಕ್ಕಳ ಬಗ್ಗೆ ಕಾಳಜಿ ಮರೆತಿರಲಿಲ್ಲ. ಯಥಾರೀತಿ ಅಂಗಡಿಯನ್ನು ನೋಡಿಕೊಳ್ಳುತ್ತಿದ್ದ. ಆತ ಪ್ರತಿದಿನ ಅಂಗಡಿಗೆ ಹೋದಮೇಲೆ ಕೌಸಲ್ಯಾ ತಾನೇ ಕಷ್ಟಪಟ್ಟು ಎದ್ದು ಕೈಯಲ್ಲಾದುದ್ದನ್ನು ಮಾಡಿಕೊಂಡು ದಿನ ದೂಡುತ್ತಿದ್ದಳು. ಗಂಡ ತನ್ನೊಡನೆ ಮಾತುಕತೆಯಾಡದಿದ್ದರೂ ತಾವು ಹೊರಗೆ ಹೋಗುವುದರೊಳಗೆ ಇಷ್ಟೆಲ್ಲಾ ಅಣಿಗೊಳಿಸಿದ್ದಾರೆಂದರೆ ಅವರಿಗೂ ಇದರಲ್ಲಿ ನನ್ನದೇನೂ ತಪ್ಪಿಲ್ಲವೆಂಬುದು ತಿಳಿದಿದೆ ಎಂದುಕೊಂಡು ಸಮಾಧಾಪಟ್ಟು ಮಗುವನ್ನೆತ್ತಿ ಹಾಸಿಗೆಯ ಮೇಲೆ ಮಲಗಿಸಿದಳು.
ಮನೆಯ ಸುತ್ತ ಕಣ್ಣಾಡಿಸಿದಳು. ಗಂಡ, ಮಕ್ಕಳು ತಮ್ಮತಮ್ಮ ಜವಾಬ್ದಾರಿಯನ್ನರಿತು ನಡೆಯುತ್ತಿರುವುದನ್ನು ಕಂಡು ಹೃದಯ ತುಂಬಿಬಂತು. ಗೋಪಾಲ ಮೊದಲಿನಿಂದಲೂ ಅಚ್ಚುಕಟ್ಟು. ಮಕ್ಕಳಿಬ್ಬರಿಗೂ ಅದನ್ನೇ ಕಲಿಸಿದ್ದ. ಮಕ್ಕಳಿಗೆ ಮನೆಗೆ ಪುಟ್ಟ ಪಾಪ ಬಂದದ್ದು ಹಿಗ್ಗೋಹಿಗ್ಗು. ಆದರೆ ಅವರಪ್ಪನ ಬಿಗಿಮುಖ ನೋಡಿ ಏನೂ ಅರ್ಥವಾಗುತ್ತಿರಲಿಲ್ಲ. ತಮ್ಮತಮ್ಮಲ್ಲೇ ಮೆಲುಮಾತಿನಲ್ಲಿ ಸಂಭಾಷಿಸುತ್ತಾ ಅಪ್ಪ ಹೇಳಿದಂತೆ ನಡೆಯುತ್ತಿದ್ದರು. ಆಗಾಗ್ಗೆ ಮಗುವನ್ನು ತಮ್ಮದೇ ರೀತಿಯಲ್ಲಿ ರಮಿಸುತ್ತಿದ್ದರು.
ಹೀಗೆ ಆಲೋಚಿಸುತ್ತಿದ್ದಾಗ ಹೊರಗೆ ಕಾಲಿಂಗ್‌ಬೆಲ್ಲಿನ ಸದ್ದು ಕೇಳಿಬಂತು. ಗಂಡ, ಮಕ್ಕಳು ಬರುವ ಹೊತ್ತಲ್ಲ ಯಾರಿರಬಹುದೆಂದು ಶಂಕೆಯಿಂದಲೇ ಬಾಗಿಲು ತೆರೆದಳು ಕೌಸಲ್ಯಾ. ಅವಳ ಅಣ್ಣ, ಅತ್ತಿಗೆ. ಸಂತಸದಿಂದ ಬರಮಾಡಿಕೊಂಡಳು. ಅವರಿಬ್ಬರೂ ಒಳಬಂದವರೇ ”ಕೌಸಲ್ಯಾ, ಇದು ನೋಡು ಬಾಣಂತಿಲೇಹ್ಯ, ಹಸುವಿನ ತುಪ್ಪ, ಅಡಿಕೆ, ಎಲೆ, ಸುಣ್ಣ, ಜಾಕಾಯಿ, ಕೊಬ್ಬರಿ, ಸಕ್ಕರೆ, ಎಲ್ಲವನ್ನೂ ಸೇರಿಸಿ ಕುಟ್ಟಿ ಮಾಡಿರುವ ಪುಡಿ. ತಿಂಡಿ ಊಟವಾದ ಬಳಿಕ ಒಂದು ಲೋಟ ನೀರಿಗೆ ಒಂದು ಚಮಚದಷ್ಟು ಹಾಕಿಕೊಂಡು ಕುಡಿ ಇದರಿಂದ ಬಾಣಂತಿಯರಿಗೆ ಹಾಲು ಉತ್ಪತ್ತಿಯಾಗುತ್ತಂತೆ, ನಮ್ಮ ಮನೆ ಪಕ್ಕದಲ್ಲಿದ್ದಾರಲ್ಲಾ ಪಂಡಿತರು ಹೇಳಿದ್ದಾರೆ. ಇದು ನೋಡು ಮನೆಯಲ್ಲೇ ಬೇಯಿಸಿ ತೆಗೆದ ಹರಳೆಣ್ಣೆ, ಮೈಯ ಅರಿಷಿಣ” ಹೀಗೆ ಒಂದೊಂದೇ ವಸ್ತುಗಳನ್ನು ಚೀಲದಿಂದ ತೆಗೆದು ಈಚೆಗೆ ಇಡುತ್ತಿದ್ದ ಅಣ್ಣ, ಅತ್ತಿಗೆಯರನ್ನು ತದೇಕದೃಷ್ಟಿಯಿಂದ ನೋಡುತ್ತಾ ”ಇದೇನು ನಿಮ್ಮಿಬ್ಬರ ಹೊಸ ರೀತಿ?” ಎಂದಳು ಕೌಸಲ್ಯಾ.
”ಹೂಂ ಹೆತ್ತವರು ಗತಿಸಿದ ಮೇಲೆ ನಿನ್ನ ಬಾಣಂತನವನ್ನು ನಾವುಗಳೇ ಮಾಡಬೇಕಾಗಿತ್ತು. ಆದರೆ ಗೋಪಾಲನ ಅಜ್ಜಿಯವರು ಅದಕ್ಕೆ ಅವಕಾಶವನ್ನೇ ಕೊಡಲಿಲ್ಲ. ಈಗ ನೋಡಿದರೆ ನಿನ್ನನ್ನು ಈಸ್ಥಿತಿಗೆ ತಂದವರು ನಾವೇ. ಇದರಿಂದ ನೀನು ಎಷ್ಟು ಒದ್ದಾಡುತ್ತಿದ್ದೀ ಎಂಬುದು ನಮಗೆ ಗೊತ್ತು. ಹಾಗೆಂದು ನಿನ್ನನ್ನು ನಮ್ಮ ಮನೆಗೆ ಕರೆದುಕೊಂಡು ಹೋಗಲು ಆಗದ ಅಸಹಾಯಕ ಪರಿಸ್ಥಿತಿಯಾಗಿದೆ. ಆದದ್ದು ಆಗಿ ಹೋಯಿತು. ನೀನು ಮಾತ್ರಾ ಉದಾಸೀನ ಮಾಡದೆ ನಿನ್ನ ಆರೈಕೆಯನ್ನು ನೀನೇ ಮಾಡಿಕೊಳ್ಳಬೇಕು. ನಾವುಗಳು ಮಾಡಿದ ತಪ್ಪಿಗೆ ಆ ಕೂಸು ಏನು ತಪ್ಪು ಮಾಡಿತ್ತು. ಹದಿನೈದು ದಿನಗಳ ಹಸೀಬಾಣಂತಿ, ಮೇಲಾಗಿ ಆಪರೇಷನ್ ಆಗಿದೆ. ನಿನ್ನ ಕೆಲಸದ ರಜೆ ಮುಗಿಯುವಷ್ಟರಲ್ಲಿ ಈ ಗುಂಗಿನಿಂದ ಹೊರಗಡೆ ಬಾ. ಕೆಲಸಕ್ಕೆ ಹೋಗುವಾಗ ಕೂಸನ್ನು ನಮ್ಮ ಮನೆಯಲ್ಲಿ ಬಿಟ್ಟು ಹೋಗು. ನಾವು ನೋಡಿಕೊಳ್ಳುತ್ತೇವೆ ಇದನ್ನು ನಮಗೇ ಕೊಡು ಎಂದರೆ ನೀನು ಕೇಳುತ್ತಿಲ್ಲ. ಹೀಗಾಯಿತಲ್ಲಾ ಎಂದು ಗೋಪಾಲನ ಸಿಟ್ಟು ಮಾಯವಾಗುತ್ತಿಲ್ಲ. ಏನು ಮಾಡೋಣವೆಂದು ಗೊತ್ತಾಗುತ್ತಿಲ್ಲ, ಅವರು ಹೀಗೆ ಮಾತಿಗೆ ತಪ್ಪುತ್ತಾರೆಂದು ನಮಗೇನು ಗೊತ್ತಿತ್ತು? ನಾನು ಅವರಲ್ಲಿಗೇ ಹೋಗಿ ಚೆನ್ನಾಗಿ ಜಗಳ ಮಾಡಿಬಂದೆ. ಏನೂ ಪ್ರಯೋಜನವಾಗಲಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿಬಿಡು” ಎಂದು ಅಲವತ್ತುಕೊಂಡ ಅತ್ತಿಗೆಯನ್ನು ಕಂಡು ಮರುಕವಾಯಿತು.
”ಅತ್ತಿಗೆ ನೀವು ದಯವಿಟ್ಟು ಅದನ್ನೇ ಮತ್ತೆ ಹೇಳಬೇಡಿ. ಆದರೆ ಮೊದಲಲ್ಲಿ ಅಷ್ಟೆಲ್ಲ ಸಂತೋಷದಿಂದ ಒಪ್ಪಿದವರು ಈಗೇಕೆ ಈರೀತಿಯ ಮೌನ?. ಅದೇ ನನಗೆ ಅರ್ಥವಾಗುಇತ್ತಿಲ್ಲ. ಅವರು ಹಾಗೆ ಮೋಸ ಮಾಡಿದರೆಂದು ನಾವು ಈ ಕೂಸನ್ನು ಬೀದಿಗೆ ಬಿಸಾಡುವುದಿಲ್ಲ. ನನ್ನ ಗಂಡನಲ್ಲೂ ಬದಲಾವಣೆ ಗೋಚರಿಸುತ್ತಿದೆ” ಎಂದು ಆದಿನ ಬೆಳಗಿನಿಂದ ಕಂಡಿದ್ದ ಬೆಳವಣಿಗೆಗಳ ಬಗ್ಗೆ ತಿಳಿಸಿದಳು.
ಅದೆಲ್ಲ ಕೇಳಿದ ಕೌಸಲ್ಯಳ ಅಣ್ಣ, ಅತ್ತಿಗೆ ”ಹೌದಾ ನೀನು ಹೇಳಿದ್ದು ನಿಜವಾದರೆ ಇನ್ನು ಚಿಂತೆಯಿಲ್ಲ. ನಾವು ಯಾವಾಗಲೂ ನಿಮ್ಮ ಸಂಸಾರಕ್ಕೆ ಒತ್ತಾಸೆಯಾಗಿರುತ್ತೇವೆ”ಎಂದರು.
”ಅದನ್ನು ಒತ್ತಟ್ಟಿಗಿಡಿ, ಅವರುಗಳು ಮಗು ಬೇಡವೆನ್ನಲು ನಿಜ ಕಾರಣವೇನು ಹೇಳಿ ಅತ್ತಿಗೆ. ಅವರ ಮನೆಯಲ್ಲೇನಾದರೂ ಸಿಹಿ ಸುದ್ಧಿಯೇ?”
”ಅವೆಲ್ಲಾ ಏನೂ ಇಲ್ಲ. ನಾನು ಹೇಳಿದ್ದು ಕೇಳಿ ನೀನು ಬೇಸರಿಸಬಾರದು. ಹಾಗಿದ್ದರೆ ಹೇಳುತ್ತೇನೆ. ಅವರಿಗೆ ಗಂಡುಮಗು ಬೇಕಿತ್ತಂತೆ. ಹೆಣ್ಣುಮಗುವೆಂದು ಸುದ್ಧಿಕೇಳಿದ ನಂತರ ಅವರ ಅಭಿಪ್ರಾಯ ಬದಲಾಯ್ತು. ಮೊದಲೇ ನಾವೊಂದು ಕರಾರುಪತ್ರ ಮಾಡಿಕೊಳ್ಳದೆ ಇದಕ್ಕೆ ಒಪ್ಪಿಕೊಂಡದ್ದು ತಪ್ಪಾಯಿತು”ಎಂದಳು ಕೌಸಲ್ಯಾ.
”ಓ ! ಈಗ ನಿಮಗೆ ಗೊತ್ತಾಯಿತೇ? ನನಗಾಗಲೇ ಅದರ ವಾಸನೆ ಬಂದದ್ದಕ್ಕೇ ಹೀಗೆ ಮಾಡಿದ್ದು” ಎನ್ನುತ್ತಾ ಮನೆಯೊಳಕ್ಕೆ ಬಂದ ಗೋಪಾಲ. ಅಣ್ಣ ಅತ್ತಿಗೆಗೆ ಬಾಗಿಲು ತೆರೆದ ಕೌಸಲ್ಯಾ ಆನಂದದಲ್ಲಿ ಮುಂಭಾಗಿಲ ಚಿಲಕವನ್ನು ಹಾಕೇ ಇರಲಿಲ್ಲ. ಏಕಾಏಕಿ ಗೋಪಾಲ ಒಳಬರಲು ಸಾಧ್ಯವಾಯಿತು. ಅಚ್ಚರಿಯೂ ಆಯಿತು. ಮುಂದೇನಾಗುವುದೋ ಎಂದು ಉಸಿರು ಬಿಗಿಹಿಡಿದು ಅಣ್ಣಅತ್ತಿಗೆಯರ ಕಡೆ ನೋಡಿದಳು ಕೌಸಲ್ಯಾ. ಗೋಪಾಲ ತನ್ನ ಭಾವನ ಪಕ್ಕದಲ್ಲೇ ಕುಳಿತು ಹಾಗೇ ಕಣ್ಣಾಡಿಸಿದ. ”ಅಲ್ಲಾ ಇದೇನು ಇಷ್ಟೊಂದು ಸಾಮಾನುಗಳನ್ನು ಹರಿಡಿದ್ದೀರಿ?” ಎಂದು ಕೇಳಿದ.
”ಏನು ಮಾಡಲಿ ಭಾವ, ನೀವು ಆಸ್ಪತ್ರೆಯಿಂದ ನೇರವಾಗಿ ಮಗು ಬಾಣಂತಿಯನ್ನು ನಿಮ್ಮ ಮನೆಗೇ ಕರೆತಂದಿರಿ. ವಿಧಿಯಿಲ್ಲದೆ ನಾವು ಬಾಣಂತಿಗೆ ಅಗತ್ಯವಿರುವ ಕೆಲವು ಸಾಮಾನುಗಳನ್ನು ಇಲ್ಲಿಗೇ ತಂದುಕೊಡೋಣವೆಂದು ಬಂದೆವು. ಆದದ್ದನ್ನು ಮರೆತು ನಮ್ಮನ್ನು ಕ್ಷಮಿಸಿ” ಎಂದು ಕೌಸಲ್ಯಳ ಅಣ್ಣ ಕೇಳಿಕೊಂಡರು.
”ಹೂ ಇದರಲ್ಲಿ ನಿಮ್ಮಗಳದ್ದೇನು ತಪ್ಪು. ಇಷ್ಟೆಲ್ಲ ರಾಮಾಯಣ ಆಗಲು ಕಾರಣ ಅವರು. ನಮ್ಮ ನಿಮ್ಮನ್ನು ಬಾಣಗಳನ್ನಾಗಿ ಮಾಡಿಕೊಂಡರು, ಈಗ ಕೂಸು ಇಂಥದ್ದೇ ಇರಬೇಕಿತ್ತು ಎಂದು ಕೇಳಿದಾಗ ನನಗೆ ಕೋಪ ಬಂದಿತ್ತು. ಅವರುಗಳ ಏಟಿಗೆ ನಾವು ಬಲಿಯಾದೆವು. ಒಂದು ಕ್ಷಣ ಅವರ ಮಾತಿನಿಂದ ಎಚ್ಚರವಹಿಸದೆ ನಂಬಿದ್ದಕ್ಕೆ ಇಂತಹ ಪರಿಸ್ಥಿತಿ ಉಂಟಾಯಿತು. ನಾವೊಂದು ಕರಾರು ಮಾಡಿಕೊಳ್ಳದೆ ತಪ್ಪು ಮಾಡಿದೆವು. ನಮ್ಮ ತಪ್ಪಿಗೆ ಆ ಹಸುಗೂಸು ಏನು ಮಾಡೀತು? ಸಿಟ್ಟಿನಿಂದ ಇದುವರೆಗೆ ನಿಮ್ಮನ್ನು ಕಂದನನ್ನು ಕಡೆಗಣಿಸಿದ್ದಕ್ಕೆ ನೀವೇ ನನ್ನನ್ನು ಕ್ಷಮಿಸಿಬಿಡಿ” ಎಂದು ಕೈ ಮುಗಿದ ಗೋಪಾಲ.
”ಹಾಂ. ಹಾಗೇ ಇನ್ನೊಂದು ಮುಖ್ಯ ವಿಷಯ. ನಾನು ಅಂಗಡಿ ಇಟ್ಟಿರುವ ಕಟ್ಟಡದ ಮಾಲೀಕರು ಅದಕ್ಕೆ ಹೊಂದಿಕೊಂಡಿರುವ ಮನೆಯನ್ನು ನನಗೇ ಬಿಟ್ಟುಕೊಡುತ್ತಾರಂತೆ. ಕೌಸಲ್ಯಾ ರಜೆ ಮುಗಿದು ಶಾಲೆಗೆ ಹೋಗಲು ಪ್ರಾರಂಭಿಸಿದ ಮೇಲೆ ಮನೆ, ಅಂಗಡಿ ಎರಡನ್ನೂ ನೋಡಿಕೊಳ್ಳಲು ನನಗೆ ತುಂಬ ಅನುಕೂಲವಾಗುತ್ತದೆ. ದೊಡ್ಡ ಮಕ್ಕಳಿಗೂ ಶಾಲೆ ಹತ್ತಿರವಾಗುತ್ತದೆ. ನೀವು ಏನುಹೇಳುತ್ತೀರಾ? ”ಎಂದು ಕೇಳಿದ.
ಏನೋ ಹೇಳಲು ಹೊರಟ ಕೌಸಲ್ಯಾಳ ಭುಜವನ್ನು ಅವಳ ಅತ್ತಿಗೆ ಒತ್ತಿ ಸುಮ್ಮನಿರುವಂತೆ ಸನ್ನೆಮಾಡಿ ”ಹಾಗೇ ಆಗಲಿ. ಅದು ನಮ್ಮ ಮನೆಗೂ ಸಮೀಪವಾಗಿದೆ. ಅನುಕೂಲವೇ ಆಯಿತು. ಅವರಿಗೆ ಒಪ್ಪಿಗೆಯೆಂದು ತಿಳಿಸಿಬಿಡಿ. ನೀವೆಲ್ಲ ಮನೆಯ ಸಾಮಾನು ಸಾಗಿಸಿ ಸ್ವಚ್ಛಮಾಡಿ ಸಿದ್ಧವಾಗುವವರೆಗೂ ಕೂಸು ಮತ್ತು ಕೌಸಲ್ಯಳನ್ನು ನಮ್ಮ ಮನೆಯಲ್ಲಿಟ್ಟುಕೊಂಡಿರುತ್ತೇವೆ. ಒಪ್ಪಿಗೆ ತಾನೇ?” ಎಂದರು.
ಅಷ್ಟರಲ್ಲಿ ಕೂಸು ಎಚ್ಚರವಾಗಿ ಅಳತೊಡಗಿತು. ಕೌಸಲ್ಯ ಲಗುಬಗೆಯಿಂದ ಅದನ್ನೆತ್ತಿಕೊಂಡು ಬಂದಳು. ಅದನ್ನು ಅವಳ ಕೈಯಿಂದ ತಾನು ಎತ್ತಿಕೊಂಡು ಈ ಕೂಸು ನಮಗೇ ಇರಲಿ ಕೌಸಲ್ಯಾ, ನನ್ನ ವರ್ತನೆಗೆ ಕ್ಷಮೆಯಿರಲಿ ಎಂದ ಗೋಪಾಲ.
ಹಸುಗೂಸು ತನಗೆ ಎಲ್ಲವೂ ಅರ್ಥವಾಯಿತೋ ಎನ್ನುವಂತೆ ಅಳು ನಿಲ್ಲಿಸಿ ಬೊಚ್ಚಬಾಯಿ ತೆಗೆದು ಮಂದಹಾಸ ಬೀರಿತು.
-ಬಿ.ಆರ್.ನಾಗರತ್ನ
ಸುಂದರ ಕಥಾಹಂದರ ಹೊಂದಿರುವ, ಮನುಷ್ಯ ಸಹಜ ವರ್ತನೆಗಳ ಬಿಂಬಿಸುವ ಸುಖಾಂತ್ಯದ ಕಥೆ ಸೊಗಸಾಗಿ ಮೂಡಿ ಬಂದಿದೆ. ಅಭಿನಂದನೆಗಳು ಗೆಳತಿ ನಾಗರತ್ನ.
ತಂದೆ ತಾಯಿ ಮತ್ತು ಮಗುವಿನ ನಡುವಿನ ಅನುಬಂಧವನ್ನು ಯಾರಿಂದ ಅಳೆಯಲಾದೀತು
ಹೆಣ್ಣೆಂದು ಅಸಡ್ಡೆ ತೋರುವ ಲೋಕದ ನಡೆ ಯಾವ ಕಾಲಕ್ಕೂ ಬದಲಾಗದೇನೋ…? ಚೆನ್ನಾಗಿದೆ ಕಥೆ
ಧನ್ಯವಾದಗಳು ಸಾಹಿತ್ಯ ಸಹೃದಯರಿಗೆ
ಸೊಗಸಾಗಿದೆ ಕಥೆ.
ಕಥಾಹಂದರ ಚೆನ್ನಾಗಿದೆ
ಚಂದದ ಕಥೆ…
ಧನ್ಯವಾದಗಳು ಗೆಳತಿಯರೇ.. ನಿಮ್ಮ ಪ್ರತಿಕ್ರಿಯೆ ಪ್ರೋತ್ಸಾಹವೇ ನನ್ನ ಬರವಣಿಗೆಗೆ ಬೆನ್ನೆಲುಬು.
ಕಥೆ ಬಹಳ ಚೆನ್ನಾಗಿದೆ. ಅಚ್ಚ ಕನ್ನಡವನ್ನು ಸ್ವಚ್ಚವಾಗಿ ಮುತ್ತಿನಂತೆ ಪೋಣಿಸಿದ್ದೀರಿ. ಕಥೆಯ ಸಾರಾಂಶವೂ ಸೊಗಸಾಗಿ ನೀತಿಯುಕ್ತವಾಗಿದೆ.