ಹೊಂದಿಕೊಂಡು ಬಾಳು ಮಗೂ
ಅಂದು ನಮ್ಮ ಪಕ್ಕದ ಅಪಾರ್ಟ್‌ಮೆಂಟಿನಲ್ಲಿ ವಾಸವಾಗಿದ್ದ ಮಾನಸ, ಅಜಿತ್ ದಂಪತಿಗಳ ಮಗ, ಸೊಸೆ, ಮೊಮ್ಮಕ್ಕಳು ವಿದೇಶಕ್ಕೆ ಹಿಂದಿರುಗಿದ್ದರು. ಹದಿನೈದು ದಿನದಿಂದ ಸಂಭ್ರಮದಲ್ಲಿ ತೇಲಾಡುತ್ತಿದ್ದ ಮನೆ ಬಿಕೋ ಎನ್ನುತ್ತಿತ್ತು. ಅಜಿತ್ ಹೊರಗೆ ತಿರುಗಾಡಲು ಹೋಗಿದ್ದರು. ನಾನು ಮಾನಸ ಜೊತೆ ಹರಟಲು, ಅವರ ಮನೆಗೆ ಹೋದೆ. ಬಾಗಿಲು ಅರೆಬರೆ ತೆರೆದಿತ್ತು. ಮಾನಸ ಸ್ಥಿತಪ್ರಜ್ಞಳಂತೆ ಕುಳಿತಿದ್ದಳು. ನನ್ನನ್ನು ನೋಡಿ ಅವಳು ಮಂದಹಾಸ ಬೀರಿದಳು. ‘ಯಾಕೆ, ಅವರನ್ನೆಲ್ಲಾ ಕಳುಹಿಸಿ ಬೇಸರವಾಯಿತಾ?’ ಎಂದೆ. ‘ಇಲ್ಲ, ನನ್ನ ಮೊಮ್ಮಗಳು ಕೇಳಿದ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದೆ. ನೀನು ಸ್ತ್ರೀವಾದಿ, ಅವಳ ಪ್ರಶ್ನೆಗೆ ನಿನ್ನ ಬಳಿ ಉತ್ತರ ಸಿಗಬಹುದೇನೋ’, ಎಂದಳು. ‘ಹೇಳು ಮಾನಸ, ಆ ಪುಟ್ಟ ಹುಡುಗಿ, ನಿನ್ನನ್ನು ಗೊಂದಲಕ್ಕೀಡು ಮಾಡುವಂತಹ ಅದೆಂತಾ ಪ್ರಶ್ನೆ ಕೇಳಿತು?’ ಎಂದೆ. ಅವಳು ದೀರ್ಘವಾದ ಉಸಿರು ತೆಗೆದುಕೊಂಡು ತನ್ನ ಮಾತು ಆರಂಭಿಸಿದಳು –
‘ನಿನ್ನೆ ಸಂಜೆ ಮೇಧಾ ಕೇಳಿದ ಪ್ರಶ್ನೆಯಿಂದ ನಾನು ದಿಗ್ಭ್ರಾಂತಳಾದೆ. ಅಜ್ಜಿ, ತಾತ ಯಾಕೆ ಸಣ್ಣ ಸಣ್ಣ ವಿಷಯಕ್ಕೂ ನಿನ್ನ ಮೇಲೆ ರೇಗಾಡುತ್ತಾರೆ? ನಾನು ಇಲ್ಲಿಗೆ ಬಂದ ದಿನದಿಂದ ಗಮನಿಸುತ್ತಿದ್ದೇನೆ. ನೀನು ಎಲ್ಲರಿಗಿಂತ ಮುಂಚಿತವಾಗಿ ಏಳುತ್ತೀಯ. ಎಲ್ಲರ ಬೇಕು ಬೇಡಗಳನ್ನು ಪೂರೈಸುತ್ತೀಯ. ಇಡೀ ದಿನ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿರುತ್ತೀಯ. ಸದಾ ಗಂಡ, ಮಕ್ಕಳು, ಮೊಮ್ಮಕ್ಕಳು ಎಂದು ಜಪಿಸುತ್ತಿರುತ್ತೀಯ. ನಿನ್ನ ತಪ್ಪಿಲ್ಲದಿದ್ದರೂ, ತಾತ ಯಾಕೆ ನಿನ್ನ ಮೇಲೆ ಕೂಗಾಡುತ್ತಾರೆ? ನೀನು ಸುಮ್ಮನಿದ್ದು ಬಿಡುತ್ತೀಯ, ನೀನ್ಯಾಕೆ ಅವರ ಅಪವಾದಗಳಿಗೆ ಜವಾಬು ಕೊಡುವುದಿಲ್ಲ? ಹದಿನಾಲ್ಕು ವರ್ಷದ ಮೊಮ್ಮಗಳು ಮೇಧಾಳ ಮಾತಿಗೆ ಏನೆಂದು ಉತ್ತರಿಸಲಿ? ಮಾನಸ ಅಂತರ್ಮುಖಿಯಾದಳು. ಸ್ವಲ್ಪ ಹೊತ್ತಿನ ನಂತರ ತನ್ನ ಮಾತು ಮುಂದುವರೆಸಿದಳು – ‘ಇಂದು ಮುಂಜಾನೆ, ಕೆಲಸದ ಹುಡುಗಿ ನೀರು ತುಂಬಿದ ಬಕೆಟ್ ಎತ್ತುವಾಗ, ಅದು ಕೆಳಗೆ ಬಿದ್ದು ಒಡೆದು ಹೋಯಿತು. ಆಗ ಪತಿರಾಯನ ಕೆಂಗಣ್ಣು ನನ್ನ ಮೇಲಿತ್ತು. ಅದೇ ಸಮಯಕ್ಕೆ ಬಂದ ಸ್ಥಳೀಯ ಪತ್ರಿಕೆಯ ಹುಡುಗ ಮಾಸಿಕ ಬಿಲ್ ನೀಡಿದ. ನಾನು ಹಣ ನೀಡಲು ಹೋದಾಗ, ಮತ್ತೆ ನನ್ನನ್ನು ದುರು ದುರು ನೋಡಿದರು. ಕಾರಣ ಆ ಹುಡುಗ, ವಾರಕ್ಕೆರಡು ಬಾರಿಯಾದರೂ ಪತ್ರಿಕೆ ಹಾಕುತ್ತಿರಲಿಲ್ಲ. ಈ ಗದ್ದಲದಲ್ಲಿ ಪಲ್ಯಕ್ಕೆ ಸ್ವಲ್ಪ ಉಪ್ಪು ಜಾಸ್ತಿಯಾಗಿತ್ತು. ‘ಮೊಬೈಲ್‌ನಲ್ಲಿ ಮಾತಾಡುತ್ತಾ ಮೈಮರೆತುಬಿಡುತ್ತೀಯ, ಏನು ಮಾಡ್ತಾ ಇದ್ದೀಯ ಎನ್ನುವ ಪ್ರಜ್ಞೆ ಇರಲ್ಲ’. ಆ ದಿನ, ಮಗ, ವಿದೇಶಕ್ಕೆ ಪಯಣ ಬೆಳೆಸುವನಿದ್ದುದರಿಂದ, ಅಕ್ಕ ತಂಗಿಯರು ಮೇಲಿಂದ ಮೇಲೆ ಪೋನ್ ಮಾಡುತ್ತಿದ್ದರು.’
ಮಾನಸ ಮುಂದುವರೆಸಿದಳು, ‘ನನಗೆ ನನ್ನ ಬಾಲ್ಯದ ನೆನಪಾಯಿತು. ಅಪ್ಪ ವೀರಭದ್ರನ ಅವತಾರ. ಬಹಳಷ್ಟು ಮಂದಿ ಅಪ್ಪಂದಿರು ಹಾಗೇ ಇದ್ದ ನೆನಪು. ನಾನೂ ಅಮ್ಮನನ್ನು ಕೇಳುತ್ತಿದ್ದೆ, ‘ಅಪ್ಪ ಕೂಗಾಡಿದಾಗ, ನೀನು ಯಾಕೆ ಕಣ್ಣಲ್ಲಿ ನೀರು ತುಂಬಿಕೊಂಡು ಮೌನಕ್ಕೆ ಶರಣಾಗುತ್ತೀಯಾ? ಕಣ್ಣೀರು ಹೊರಗೆ ತುಳುಕದ ಹಾಗೆ ಯಾಕೆ ಜಾಗರೂಕತೆ ವಹಿಸುತ್ತೀಯಾ? ಆಗೆಲ್ಲ ಅಮ್ಮ ಹೇಳುತ್ತಿದ್ದಳು; ‘ಗಂಡಸರು ಬಿಸಿಲಲ್ಲಿ ಹೊರಗೆ ತಿರುಗಾಡಿ, ದುಡಿದು ಹೈರಾಣಾಗಿ ಮನೆಗೆ ಬರುತ್ತಾರೆ. ಅವರು ಗಳಿಸಿದ್ದನ್ನು, ನಾವು ಆರಾಮವಾಗಿ ಮನೆಯ ನೆರಳಲ್ಲಿ ಕುಳಿತು ಉಣ್ಣುತ್ತೇವೆ. ಅವರ ಮಾನಸಿಕ ಒತ್ತಡಗಳು ಯಾರಿಗೆ ಗೊತ್ತು? ಗಂಡಸರು ಅಂದರೆ ಹೀಗೆಯೆ, ಗುಡುಗುತ್ತಾರೆ, ಆರ್ಭಟಿಸುತ್ತಾರೆ, ಗುಡುಗು ಸಿಡಿಲಿನ ನಂತರ ಬರುವುದು ಮಳೆಯೇ ಅಲ್ಲವೇ?’ ಅಬ್ಬಾ, ಅಮ್ಮನ ಸಹನೆಗೆ ಮಿತಿಯೇ ಇಲ್ಲವೇ? ಅಮ್ಮನೂ ಮನೆಯಲ್ಲಿ ಸುಮ್ಮನೆ ಕೂರುವ ಜಾಯಮಾನದವಳಲ್ಲ. ಹಗಲೂ ರಾತ್ರಿ ದುಡಿಯುತ್ತಾಳೆ. ಅವಳಿಗೆ ಬಿಡುವೆಂಬುದೇ ಇಲ್ಲ. ಗಂಡಸು ಮನೆಯ ಯಜಮಾನ, ಅವನ ಮಾತೇ ವೇದವಾಕ್ಯ, ಅವನೇ ಮನೆಯೊಡೆಯ ಎಂಬ ಲೋಕದಲ್ಲಿ ಬದುಕಿದ್ದ ಹೆಣ್ಣು.
ಒಮ್ಮೆ ದೊಡ್ಡಮ್ಮನ ಮನೆಗೆ ಹೋದಾಗ ನಡೆದ ಘಟನೆ, ನನ್ನನ್ನು ಧೃತಿಗೆಡಿಸಿತ್ತು. ಸ್ವಲ್ಪ ಕೆಂಪಾಗಿ ಸುಟ್ಟಿದ್ದ ರೊಟ್ಟಿಯನ್ನು ಕಂಡು, ಕೆಂಡಾಮಂಡಲವಾದ ದೊಡ್ಡಪ್ಪ, ಊಟದ ತಟ್ಟೆಯನ್ನೇ ಎತ್ತಿ ಬೀಸಿ ಹೊರನಡೆದಿದ್ದರು. ಊಟದ ಮನೆ ತುಂಬಾ ಪಲ್ಯ, ಚಟ್ನಿಪುಡಿಗಳು ಚೆಲ್ಲಾಡಿದ್ದವು. ತಲೆ ಬಗ್ಗಿಸಿದ, ದೊಡ್ಡಮ್ಮ ಎಲ್ಲವನ್ನೂ ಸ್ವಚ್ಛಗೊಳಿಸಿ ಎಂದಿನಂತೆ ಮೌನ ವಹಿಸಿದ್ದಳು. ಅದಕ್ಕೇ ಇರಬಹುದೇನೋ, ‘ಹೆಂಚಿನ ಮೇಲಿನ ಮೊದಲ ರೊಟ್ಟಿ/ಚಪಾತಿ/ದೋಸೆ ಗಂಡಸರಿಗೆ ಬಡಿಸುವಂತಿಲ್ಲ ಎಂಬ ಅಲಿಖಿತ ನಿಯಮವೊಂದು ಅಡಿಗೆ ಮನೆಯಲ್ಲಿ ಜಾರಿಯಲ್ಲಿತ್ತು. ಗಂಡಸರು ಪಡಸಾಲೆಯಲ್ಲಿರುವಾಗ ಹೆಂಗಸರು ಅಡಿಗೆ ಮನೆಯಲ್ಲಿಯೇ ಇರಬೇಕಿತ್ತು. ಮನೆಗೆ ಯಾರಾದರೂ ಗಂಡಸರು ಬಂದರೆ, ಅಡಿಗೆ ಮನೆಯ ಬಾಗಿಲಿನಿಂದ, ತುಸು ಕತ್ತು ಹೊರಗೆ ಚಾಚಿ, ಅವರ ಯೋಗಕ್ಷೇಮ ವಿಚಾರಿಸಬೇಕಿತ್ತು. ಗಂಡಸರ ಮುಂದೆ ಹೆಂಗಸರು ಕೂರುವ ಹಾಗಿರಲಿಲ್ಲ. ಇಂತಹ ಹತ್ತು ಹಲವು ಕಟ್ಟುಪಾಡುಗಳು ಇದ್ದವು. ಸಾಮಾನ್ಯವಾಗಿ ಹೆಣ್ಣು ಮಕ್ಕಳು – ತರಕಾರಿ ಬಿಡಿಸುತ್ತಲೋ, ದೋಸೆಗೆ ಹಿಟ್ಟು ರುಬ್ಬುತ್ತಲೋ, ರೊಟ್ಟಿ ಮಾಡುತ್ತಲೋ ಕಾಲ ಕಳೆಯುತ್ತಿದ್ದರು. ಇನ್ನು ಹುಡುಗಿಯರು ಹಿತ್ತಲಲ್ಲಿ ಹಬ್ಬಿದ ಮಲ್ಲಿಗೆ ಗಿಡದಿಂದ ಹೂ ಬಿಡಿಸಿ ಮಾಲೆ ಮಾಡುತ್ತಲೊ, ದೇವರ ಪೂಜೆಗೆ ಅಣಿಮಾಡುತ್ತಲೋ, ಕಸೂತಿ ಹಾಕುತ್ತಲೋ, ಪುಟ್ಟ ಮಕ್ಕಳನ್ನು ಆಟ ಆಡಿಸುತ್ತಲೋ ಕಾಲ ಕಳೆಯುತ್ತಿದ್ದರು. ಎಸ್.ಎಸ್.ಎಲ್.ಸಿ. ಆದ ತಕ್ಷಣ ಹೆಣ್ಣು ಮಕ್ಕಳ ಮದುವೆ ಮಾಡಿ ಬಿಡುತ್ತಿದ್ದರು. ಹೆಚ್ಚು ಓದಿದ ಹೆಣ್ಣು ಮಕ್ಕಳು ನೆಟ್ಟಗೆ ಸಂಸಾರ ಮಾಡುವುದಿಲ್ಲ ಎಂಬ ಭಾವ ಅವರದ್ದು. ಹಣ ಖರ್ಚು ಮಾಡಿ ಓದಿಸಿದರೆ, ಪಕ್ಕದ ಮನೆಯ ಮುಂದಿರುವ ತೆಂಗಿನ ಮರಕ್ಕೆ ನೀರೆರೆದಂತೆ – ಎಂಬ ಅನಿಸಿಕೆ. ಓದಿದ ಹೆಣ್ಣಿಗೆ, ಅವಳಿಗಿಂತ ಹೆಚ್ಚು ಓದಿದ ಗಂಡನ್ನೇ ಆರಿಸಬೇಕು, ಜೊತೆಗೇ ಹೆಚ್ಚು ವರದಕ್ಷಿಣೆಯನ್ನೂ ಕೊಡಬೇಕಾದೀತೆಂಬ ಆತಂಕ. ಗೃಹಕೃತ್ಯ ನಿರ್ವಹಿಸಲು ಹೆಣ್ಣಿಗೆ, ಹೆಚ್ಚಿನ ಓದು ಅನಾವಶ್ಯಕ ಎಂಬ ಭಾವನೆ ಅವರದಾಗಿತ್ತ್ತು.’
ಮಾನಸ ನನ್ನ ಇರುವನ್ನೇ ಮರೆತಂತಿದ್ದಳು. ಅಂದು ತನ್ನ ಮನದಲ್ಲಿದ್ದ ಎಲ್ಲಾ ವಿಚಾರಗಳನ್ನು ಹೊರಹಾಕುತ್ತಿದ್ದಳು -‘ನಮ್ಮ ಮನೆಯಲ್ಲಿ ಅಪ್ಪ ತುಸು ಆಧುನಿಕ ಮನೋಭಾವದವರು. ಬದುಕಿನಲ್ಲಿ ಏನಾದರೂ ಏರು ಪೇರಾದg, ಹೆಣ್ಣು ತನ್ನ ಕಾಲಮೇಲೆ ತಾನು ನಿಂತುಕೊಳ್ಳಬೇಕು, ಯಾರ ಮೇಲೂ ಅವಲಂಬಿತಳಾಗಬಾರದು ಎಂಬ ನಿಲುವು ಅವರದು. ಹಾಗಾಗಿ ತಮ್ಮ ಹೆಣ್ಣುಮಕ್ಕಳಿಗೆ ಕಾಲೇಜು ಶಿಕ್ಷಣ ಕೊಡಿಸಿದರು. ಕಾಲಕ್ರಮೇಣ, ಕೆಲವರು ಮನೆಯ ಹೊರಗಡೆ ಕೆಲಸ ಆರಂಭಿಸಿದರು. ಮೊದಲ ಬಾರಿಗೆ ಉದ್ಯೋಗ ಅರಸಿ, ಮನೆಯ ಹೊಸ್ತಿಲು ದಾಟಿದ ಹೆಣ್ಣು – ಕೆಲಸ ಪಡೆದದ್ದು ಎರಡು ಕ್ಷೇತ್ರಗಳಲ್ಲಿ – ಶಿಕ್ಷಣ ಇಲಾಖೆಯಲ್ಲಿ ಅಥವಾ ಆರೋಗ್ಯ ಇಲಾಖೆಯಲ್ಲಿ – ಎರಡೂ ಸೇವಾ ಕ್ಷೇತ್ರಗಳೇ. ಸ್ನಾತಕೋತ್ತರ ಪದವಿ ಪಡೆದ ನಾನು -ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿ ಪಡೆದೆ. ಮದುವೆಯ ನಂತರ ಎರಡೂ ಜವಾಬ್ದಾರಿ ಹೊರುವುದು ತುಸು ಕಷ್ಟವೇ ಆಯಿತು. ಒಂದೆಡೆ ಮನೆಯ ಕೆಲಸದ ಒತ್ತಡ, ಇನ್ನೊಂದೆಡೆ ಕಾಲೇಜಿನ ಕೆಲಸದ ಒತ್ತಡ. ಮನೆಯ ಕೆಲಸಗಳಲ್ಲಿ ಗಂಡನೇನಾದರು ಕೈ ಜೋಡಿಸಿದರೆ ಸಮಾಜ ಅವನನ್ನು ‘ಹೆಂಡತಿಯ ಗುಲಾಮ’ ಎಂದು ಅಣಕಿಸುವುದು. ಇನ್ನು ಮಕ್ಕಳ ಜವಾಬ್ದಾರಿ, ಅತ್ತೆ ಮಾವಂದಿರ ಆರೈಕೆ ಹೊತ್ತ ಹೆಣ್ಣು ತುಸು ಗಟ್ಟಿಯಾಗಿ ಮಾತನಾಡಿದರೆ, -‘ನಾಲ್ಕು ಕಾಸು ಸಂಪಾದಿಸುತ್ತೀಯಾ ಅಂತ ಸೊಕ್ಕು’ ಎಂಬ ಹೀಯಾಳಿಕೆ. ಇನ್ನು ಕಛೇರಿಯಲ್ಲಿಯಾದರೋ – ‘ಏನಪ್ಪಾ, ಈ ಹೆಂಗಸರಿಗೆ ಯಾವ ಕೆಲಸವನ್ನೂ ಹೇಳುವಂತಿಲ್ಲ. ಸದಾ ಗಂಡ, ಮಕ್ಕಳು, ಮನೆಗೆಲಸ ಅಂತ ನೆಪ ಹೇಳಿ ಜಾರಿಕೊಳ್ಳುತ್ತಾರೆ’ – ಎಂಬ ಮಾತುಗಳು. ಹೀಗೆ ಎರಡೂ ಕಡೆ ಕೆಲಸ ನಿರ್ವಹಿಸುವ ಹೆಣ್ಣಿಗೆ, ಕೆಲವೇ ವರ್ಷಗಳಲ್ಲಿ ರಕ್ತದೊತ್ತಡ ಹೆಚ್ಚುವುದು ಖಚಿತ.
‘ದುಡಿಯುವ ಹೆಣ್ಣಿಗೆ ಆರ್ಥಿಕ ಸ್ವಾತಂತ್ರ್ಯ ಇರುವುದು’ – ಎಂದು ಯಾವ ಮಹಾನುಭಾವ ಹೇಳಿದನೋ ನಾ ಬೇರೆ ಕಾಣೆ. ಹೆಂಡತಿಯು ತನ್ನ ವಸ್ತುವಾದ ಮೇಲೆ, ಅವಳ ಸಂಪಾದನೆಯ ಮೇಲೆ ತನ್ನ ಹಕ್ಕು ಇದೆಯಲ್ಲವೇ ಎಂಬುದು ಗಂಡಂದಿರ ವಾದ. ಉದಾರ ಮನೋಭಾವದಿಂದ ಅವಳ ಖರ್ಚಿಗಷ್ಟು ಹಣ ಕೊಟ್ಟು, ಸೈಟು, ಮನೆ, ಕಾರು ಕೊಳ್ಳುವ ನೆವದಲ್ಲಿ, ಅವಳ ಬ್ಯಾಂಕ್ ಬ್ಯಾಲೆನ್ಸ್ ಮಿನಿಮಮ್ ಇರುವ ಹಾಗೆ ನೋಡಿಕೊಳ್ಳುವ ಜಾಣತನ ಅವರದು. ಅವಳೇನಾದರೂ ತನ್ನ ದುಡಿಮೆಯ ಫಲವನ್ನು ಕೇಳಿದರೆ, ಅಂದೇ ಮನೆಯಲ್ಲಿ ಜ್ವಾಲಾಮುಖಿ, ಭೂಕಂಪ, ಪ್ರವಾಹ – ಎಲ್ಲಾ ಪ್ರಕೃತಿ ವಿಕೋಪಗಳೂ ಒಟ್ಟಿಗೇ ಸಂಭವಿಸುವುವು. ಪತಿರಾಯ ಗೆಳೆಯರ ಮುಂದೆ ಹೇಳುವ ಪ್ರವರ – ‘ಉದ್ಯೋಗಸ್ಥ ಹೆಣ್ಣಿನ ಕೈ ಹಿಡಿದವನ ಪಾಡು ಹೇಳುವ ಹಾಗಿಲ್ಲ. ಕಛೇರಿಯಲ್ಲಿ ದುಡಿದು ಸುಸ್ತಾಗಿ ಮನೆಗೆ ಬಂದರೆ, ಬೀಗ ಹಾಕಿದ ಮನೆ, ಬೆಳಿಗ್ಗೆ ಹೊರಡುವ ಆತುರದಲ್ಲಿ ಚಲ್ಲಾಪಿಲ್ಲಿಯಾದ ವಸ್ತುಗಳಿಂದ ಅಸ್ತವ್ಯಸ್ತವಾದ ಮನೆ, ಆರಿ ತಣ್ಣಗಾದ ಅಡುಗೆ, ಸೋತು ದಣಿದ ಮುಖ ಹೊತ್ತು ಬರುವ ಪತ್ನಿ, ಕಾಂಪೌಂಡಿನಲ್ಲಿ ಬ್ಯಾಗು ಎಸೆದು ಆಟಕ್ಕೆಂದು ಹೋಗಿರುವ ಮಕ್ಕಳು – ಅಬ್ಬಾ, ಸಾಕಪ್ಪಾ ಸಾಕು, ಮನೆಗೆ ಯಾಕಾದರೂ ಬಂದೆನೋ?’.
ಹೆಣ್ಣಾದ ನಾನು, ಮನೆಗೆ ಬಂದ ತಕ್ಷಣ, ಸೆರಗು ಸೊಂಟಕ್ಕೆ ಸಿಕ್ಕಿಸಿ ಮನೆಗೆಲಸದಲ್ಲಿ ಮುಳುಗುತ್ತಿದ್ದೆ. ಮಕ್ಕಳ ಓದು, ರಾತ್ರಿಯ ಅಡುಗೆಯ ಜೊತೆಗೇ ಮಾರನೆಯ ದಿನದ ತಿಂಡಿಗೆ ಅಣಿ ಮಾಡುವುದು ಇತ್ಯಾದಿ ಕೆಲಸಗಳಲ್ಲಿ ದಿನ ಕಳೆದದ್ದೇ ಗೊತ್ತಾಗುತ್ತಿರಲಿಲ್ಲ. ‘ಅತ್ತ ದರಿ, ಇತ್ತ ಪುಲಿ’-ಎನ್ನುವ ಗಾದೆ ಮಾತಿನಂತೆ ಬದುಕು ಸವೆಸುತ್ತಿದ್ದೆ. ಹೀಗೆಯೇ ನಿವೃತ್ತಿಯೂ ಆಯಿತು, ಮಕ್ಕಳ ಮದುವೆಯೂ ಆಯಿತು. ವಿದೇಶದಲ್ಲಿ ನೆಲಸಿದ್ದ ಮಗನ ಮನೆಗೆ ಹೋದಾಗ, ಅವರ ಬದುಕಿನ ಶೈಲಿ ನೋಡಿ ಮನಸ್ಸಿಗೆ ನೆಮ್ಮದಿ ಆಯಿತು. ಇಬ್ಬರೂ ವೈದ್ಯರು, ಗೃಹಕೃತ್ಯದ ಜವಾಬ್ದಾರಿಯನ್ನು ಸಮನಾಗಿ ನಿರ್ವಹಿಸುತ್ತಿದ್ದರು, ಮಗನಿಗೆ, ಉದ್ಯೋಗಸ್ಥ ಮಹಿಳೆಯರ ಒತ್ತಡಗಳನ್ನು ಪರಿಚಯಿಸುತ್ತಲೇ ಬೆಳೆಸಿದ್ದೆ. ಇವರ ನಡುವಿನ ಬಾಂಧವ್ಯ ಉತ್ತಮ ಮಿತ್ರರಂತಿತ್ತು. ಏನೇ ಬಿನ್ನಾಭಿಪ್ರಾಯಗಳಿದ್ದರೂ, ಇಬ್ಬರೂ ಒಟ್ಟಿಗೇ ಕುಳಿತು ಚರ್ಚಿಸುತ್ತಿದ್ದರು.’
ಮಾನಸಳ ಮಾತುಗಳು ಸ್ವಗತದಂತೆ ತೋರುತ್ತಿದ್ದವು -‘ಸಿಟ್ಟು ಬಂದಾಗ, ನಿನ್ನನ್ನು ಕತ್ತರಿಸಿ ಹಾಕಿಬಿಡುತ್ತೀನಿ’ ಎಂದು ಅಮ್ಮನ ಮೇಲೆ ಆರ್ಭಟಿಸುತ್ತಿದ್ದ ಅಪ್ಪ. ಅಮ್ಮ ಅಂದಿನ ಪರಿಸ್ಥಿತಿಗೆ ತನ್ನ ಮನಸ್ಥಿತಿಯನ್ನು ಹೊಂದಿಸಿಕೊಂಡು ಬಾಳುತ್ತಿದ್ದಳು. ನನ್ನ ಪತಿಯಾದರೋ, ಒಲವೇ ಜೀವನ ಸಾಕ್ಷಾತ್ಕಾರ .. ಎಂದು ಹಾಡುತ್ತಲೇ, ಹೆಂಡತಿ ತನ್ನ ನೆರಳಿನಂತಿರಬೇಕೆಂದು ಬಯಸಿದವನು. ಗಂಡಸಿನ ದರ್ಪವನ್ನು ತೋರಿಸುತ್ತಾ ಬೀಗುವವನು. ‘ಇಲ್ಲವಾದರೆ, ನಮ್ಮ ಬೆನ್ನ ಮೇಲೆಯೇ ಸವಾರಿ ಮಾಡಿಯಾರು’ ಎಂಬ ಎಚ್ಚರಿಕೆಯಲ್ಲೇ ಹೆಂಡತಿಗೆ ಲಗಾಮು ಹಾಕಿದವನು. ಆದರೆ ಕಾಲೇಜು ಶಿಕ್ಷಣ ಪಡೆದ ನನ್ನನ್ನು – ಹಲವು ಪ್ರಶ್ನೆಗಳು ಕಾಡತೊಡಗಿದ್ದವು. ಇಬ್ಬರೂ ಹೊರಗೆ ದುಡಿಯುವಾಗ, ಮನೆಕೆಲಸದಲ್ಲಿ ಗಂಡನೂ ಕೈ ಜೋಡಿಸಬಾರದೇಕೆ? ದುಡಿಯುವ ಹೆಣ್ಣಿಗೆ ಆರ್ಥಿಕ ಸ್ವಾತಂತ್ರ್ಯ ಏಕಿಲ್ಲ? ಪ್ರಮುಖವಾದ ಕೌಟುಂಬಿಕ ನಿರ್ಧಾರಗಳನ್ನು ತೆಗೆದುಕೊಳ್ಳುವವನು ಗಂಡೇ ಏಕೆ? ಹೆಣ್ಣನ್ನೂ ಗೌರವದಿಂದ ಆದರಿಸುವ, ಅವಳ ಅಭಿಪ್ರಾಯಗಳನ್ನೂ ವಿಶ್ವಾಸದಿಂದ ಆಲಿಸುವ ಕಾಲ ಎಂದು ಬಂದೀತು? ಹೀಗೆ ಹತ್ತು ಹಲವು ಸಂದೇಹಗಳು ಮೂಡುತ್ತಿದ್ದವು. ನಾನೆಂದೂ, ನನ್ನ ಅನಿಸಿಕೆಗಳನ್ನು ಎಲ್ಲರ ಮುಂದೆ ಗಟ್ಟಿಯಾಗಿ ಹೇಳಿದ್ದಿಲ್ಲ.’ ಅಪ್ಪನ ನಡವಳಿಕೆಯನ್ನು, ಅಮ್ಮನ ಪರಿಸ್ಥಿತಿಯನ್ನೂ ಗಮನಿಸುತ್ತಲೇ ಬೆಳೆದ ಮಗ ಹೆಂಡತಿಯನ್ನು ಗೆಳತಿಯಂತೆ ಕಾಣುತ್ತಾನೆ. ಅವರಲ್ಲಿ ಪರಸ್ಪರ ಪ್ರೀತಿಯೊಂದಿಗೇ, ಗೌರವ ವಿಶ್ವಾಸ ಮೂಡಿರುವುದನ್ನು ಕಂಡ ನನ್ನ ಮನಸ್ಸಿಗೆ ತೃಪ್ತಿಯಾಗಿತ್ತು.’
‘ಈಗ ಹೇಳು ಗೆಳತೀ, ನನ್ನ ಮೊಮ್ಮಗಳ ಪ್ರಶ್ನೆಗೆ ಉತ್ತರ ಹುಡುಕಿದೆನಾ? ಅವಳ ಪ್ರಶ್ನೆ, ನನ್ನನ್ನು ದೀರ್ಘವಾದ ಚಿಂತನೆಗೆ ದೂಡಿತ್ತು. ಮದುವೆಯ ನಂತರ, ಎಲ್ಲರೂ ಹೆಣ್ಣಿಗೆ ಹೇಳುವ ಮಾತು ಏನು ಗೊತ್ತಾ? ಎಲ್ಲರನ್ನೂ ಪ್ರೀತಿಯಿಂದ ಕಾಣು ಎಂದಲ್ಲ, ಬದಲಿಗೆ ಎಲ್ಲರ ಜೊತೆ ಹೊಂದಿಕೊಂಡು ಹೋಗು. ಅಂದರೆ ಎಲ್ಲ ನೋವನ್ನು ನುಂಗುತ್ತಾ, ನಗು ನಗುತ್ತಲೇ ಬಾಳು ಎಂದೇ? ಈ ಮಾತಿನ ಅರ್ಥ ನನಗಿನ್ನೂ ಆಗಿಲ್ಲ ಗೆಳತಿ.’ ಮಾನಸಳ ಮಾತುಗಳು ನನ್ನ ಮನಸ್ಸಿನಲ್ಲೂ ಬಿರುಗಾಳಿಯನ್ನು ಉಂಟುಮಾಡಿದ್ದವು. ನನಗೂ ಗೊತ್ತಾಗುತ್ತಿಲ್ಲ – ‘ಹೊಂದಿಕೊಂಡು ಬಾಳು’ ಎಂದರೇನು?
-ಡಾ.ಗಾಯತ್ರಿದೇವಿ ಸಜ್ಜನ್
ಮೇಡಂ ಎಲ್ಲಾ ಹೆಣ್ಣು ಮಕ್ಕಳ ಕಥೆ ಹೇಳಿದ್ದೀರಿ…ತುಂಬಾ ಮನಸ್ಸಿಗೆ ತಟ್ಟಿತು.. ಗಂಡಿನ ಅಹಂಕಾರದ ಬಿಸಿ ಮನೆ, ಆಫೀಸ್ ಎರಡೂ ಕಡೆ ಸಹಿಸಿ ಕೊಳ್ಳಬೇಕು..ತಿರುಗಿ ಬಿದ್ದರೆ ಆಗುವ ಅಪಮಾನ,ಹಿಂಸೆಗಳು ಅಷ್ಟಿಷ್ಟಲ್ಲ..ಇಂದಿನ ಪೀಳಿಗೆಯವರನ್ನು ನೋಡಿದಾಗ ಸ್ವಲ್ಪ ಸಮಾಧಾನ ವೆನಿಸುತ್ತೆ..ನಿಧಾನವಾಗಿಯಾದರೂ ಬದಲಾವಣೆ ಗಾಳಿ ಬೀಸಲಿ…
ಅರ್ಥಪೂರ್ಣ ವಾದ ಲೇಖನ ಬಹಳ ಚೆನ್ನಾಗಿದೆ ಮೇಡಂ.ಕಾಲಕ್ಕೆ ತಕ್ಕಂತೆಯೇ ಬದಲಾವಣೆ ಆಗುತ್ತಿವೆ…ಆದರೆ ನಿರೀಕ್ಷಿಸಿದ ಷ್ಷು ಆಗುತ್ತಿಲ್ಲ..
ವಂದನೆಗಳ
ನಿಮ್ಮ ಅನಿಸಿಕೆ ಸರಿ
ಯಾವ ಕಾಲಕ್ಕೂ ಉತ್ತರ ದೊರೆಯದ ಪ್ರಶ್ನೆ. Beautiful article
ತುಂಬಾ ಅದ್ಭುತ ಬರಹ
ಆಗಿನ ಕಾಲದಲ್ಲಿ ಹೆಣ್ಣನ್ನು ಕೀಳಾಗಿ ಕಾಣುತ್ತಿದ್ದರು
ಸ್ವಾತಂತ್ರ್ಯ ಅನ್ನುವುದು ಬರೀ ಕನಸಿನ ಮಾತು
ಕಾಲಕ್ರಮೇಣ ಸ್ವತಂತ್ರ್ಯ ಸಿಕ್ಕಿದರೂ ಕೂಡ
ಇವತ್ತಿನ ಕಾಲಕ್ಕೂ ಹೆಣ್ಣಿಗೆ ರಕ್ಷಣೆ ಇಲ್ಲದಂತಾಗಿದೆ
ಒಟ್ಟಿನಲ್ಲಿ ಎಂದಿದ್ದರೂ ಯಾವುದೋ ಒಂದು ವಿಧದಲ್ಲಿ ಪೂರ್ತಿ ಖುಷಿ, ಸಂತೋಷ ಗಳು ಹೆದರಿಕೆ ಯ ಜೊತೆ ಯಲ್ಲೇ ಇರುತ್ತದೆ
ಹೆಣ್ಣು ಮಕ್ಕಳು ಮನೆಯಲ್ಲಿ ಖಂಡಿತ ಸ್ವತಂತ್ರ್ಯರು ಅದು ಸ್ವಲ್ಪ ವರ್ಷ ಗಳ ಕಾಲ ಅಷ್ಟೇ
ಇಂದಿನ ಕಾಲದಲ್ಲಿ
ಹೊರಗಿನ ಪ್ರಪಂಚ ತುಂಬಾ ಭಯಾನಕ ವಾದುದು
ಸ್ವಲ್ಪ ಸಮಾಧಾನಕರ ವಿಷಯ ವೇನೆಂದರೆ
ಹೆಣ್ಣನ್ನು ಅರ್ಥ ಮಾಡಿಕೊಳ್ಳುವ, ಅವರ
ಮಾತನ್ನು ಕೇಳಿಸಿಕೊಳ್ಳುವ ತಾಳ್ಮೆ ಆ ದೇವರು ಗಂಡಿನ ಕುಲಕ್ಕೆ ನೀಡಿದ್ದಾನೆ
ಆದರೆ ಹೆಣ್ಣಿಗೆ ಜವಾಬ್ದಾರಿಗಳ ಒತ್ತಡ ವಿರುವುದರಿಂದ ತಾಳ್ಮೆ ಯು ಮಾಯವಾಗಿ
ದೇಹಕ್ಕೂ, ಮನಸ್ಸಿಗೂ, ಆಯಾಸ ವೇ ಜಾಸ್ತಿ
ಪ್ರತಿ ಕಾಲಕ್ಕೂ ಯಾವುದಾದರೂ ಒಂದು ರೀತಿಯಲ್ಲಿ ಹೆಣ್ಣಿಗೆ ಶಾಶ್ವತ ಸುಖ, ನೆಮ್ಮದಿಗಳು ಬರಿಯ ಕನಸು
ನಿಮ್ಮ ಬರಹಗಳು ಪ್ರತಿ ಮಹಿಳೆಯರ ಮನಸ್ಸಿನ ಆಳದ ಮಾತಾಗಿದೆ
ಅಧ್ಭುತ ಸಾಲುಗಳು
ನನಗೆ ಕಥೆ ಗಳೆಂದರೆ ತುಂಬಾ ಇಷ್ಟ ❤
ಎಲ್ಲಾ ನಿರ್ದೇನಗಳು ಹೆಣ್ಣಿಗೆ ಮಾತ್ರವೇ ಹೊರತು ಗಂಡಿಗಲ್ಲ
ನನ್ನ ಮನದಾಳದ ಮಾತುಗಳನ್ನು ಕೇಳಿಸಿಕೊಂಡಿದ್ದ ಕ್ಕೆ ಧನ್ಯವಾದಗಳು ಸಹೋದರಿ
ಹೌದು ಮೇಡಂ…ಹೊಂದಿಕೊಂಡು ಹೋಗುವುದು, ಸಹನಾಮೂರ್ತಿಯಾಗಿರುವುದು, ತಾಳ್ಮೆಯೇ ಸಾಕಾರವೆತ್ತಂತಿರುವುದು ..ಇವೆಲ್ಲಾ ಸಮಾಜವು ಮಹಿಳೆಗೆ ತಾನೇ ಇತ್ತ ವಿಶೇಷವಾದ ಗುಣಗಳು.. ನೀನು ಹೀಗೇ ಇರು ಎಂದು! ಆತ್ಮವಿಮರ್ಷೆಗೆ ಹಚ್ಚಬಹುದಾದಂತಹ ಒಳ್ಳೆಯ ಬರಹ…
story of the present and past. hope it will change in future. we can feel the changes but it is a long way to go.
very nicely told story.
ಹೆಣ್ಣಿನ ಬವಣೆಯ ಮೂರು ತಲೆಮಾರುಗಳ ಚಿತ್ರಣ ಮನವನ್ನು ಚಿಂತನೆಗೆ ಹಚ್ಚುವಂತಿದೆ. ಮನೆಯಲ್ಲಿ ಸಕಾರಾತ್ಮಕ ಬದಲಾವಣೆಯಾಗುತ್ತಿದ್ದರೂ ಮನೆಯಿಂದ ಹೊರಗಡೆ ಬೇರೆಯದೇ ರೀತಿಯಲ್ಲಿ ಹೆಣ್ಣು ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿದೆ. ಚಂದದ ಲೇಖನ.