‘ಭೂಮಿ ಹುಣ್ಣಿಮೆ ಎಂಬ ನಿಸರ್ಗಾರಾಧನೆಯ ಹಬ್ಬ’
‘ಭಾರತದಲ್ಲಿ ಸಂಪ್ರದಾಯದುದ್ದಕ್ಕೂ ಭೂಮಿಯನ್ನು ಹೆಣ್ಣಿಗೆ ಹೋಲಿಸಲಾಗಿದೆ. ಹೆಣ್ಣು ,ಭೂಮಿಯಂತೆ ಸಹನಾಮಯಿ ಎಂದು ಕೊಂಡಾಡಲಾಗುತ್ತದೆ. ಹೆಣ್ಣನ್ನು ಸಮಾಜದಲ್ಲಿ ಗೌರವಿಸುವಂತೆ, ಧಾರ್ಮಿಕವಾಗಿ ಭೂಮಿಯನ್ನು ಪೂಜಿಸಲಾಗುತ್ತದೆ. ಪ್ರಕೃತಿಯನ್ನು ”ಭೂತಾಯಿ” ಎಂದು ಸಂಭೋದಿಸಲಾಗುತ್ತದೆ. ಅಂತಹ ನಿಸರ್ಗಾರಾಧನೆಯ ಪ್ರಮುಖ ಹಬ್ಬವೇ ”ಭೂಮಿ ಹುಣ್ಣಿಮೆ”.ಭಾದ್ರಪದ ಮಾಸದ ಹುಣ್ಣಿಮೆಯಂದು ಆಚರಿಸುವ ಈ ಹಬ್ಬಕ್ಕೆ ”ಶೀಗೇ ಹುಣ್ಣಿಮೆ” ಎಂದು ಕರೆಯುವುದಿದೆ.
ವರ್ಷವಿಡೀ ಅನ್ನ ನೀಡುವ ಭೂಮಿ ತಾಯಿಯನ್ನು ರೈತರು ಪೂಜಿಸಿ ಆರಾಧಿಸುತ್ತಾರೆ. ಬೆಳೆಯ ತುಂಬಾ ಹಾಲು ತುಂಬಿ ಬಲಿಯುವ ಹಂತದಲ್ಲಿ ಸಂಭವಿಸುವ ಈ ಹಬ್ಬ ,ಭೂ ತಾಯಿಗೆ ಅರ್ಪಿಸುವ ಸೀಮಂತ ಶಾಸ್ತ್ರ. ಮನೆ ಮಗಳೊಬ್ಬಳು ಗರ್ಭವತಿಯಾಗದಾಗ ಸಂಭ್ರಮಿಸುವಂತೆ, ರೈತ ಸಮುದಾಯದವರೆಲ್ಲರು ಭೂತಾಯಿಯ ಸೀಮಂತಕ್ಕೆ ಸಿದ್ದಗೊಳ್ಳುತ್ತಾರೆ. ಭೂತಾಯಿಯ ಬಸಿರಿನ ಬಯಕೆಗಳನ್ನೆಲ್ಲ ಈಡೇರಿಸಿ ಆ ಮೂಲಕ ಭೂತಾಯಿಯು ಸಂತುಷ್ಟಳಾಗಿ ಉತ್ತಮ ಫಲ ನೀಡಲೆಂದು ಪ್ರಾರ್ಥಿಸಿಕೊಳ್ಳುತ್ತಾರೆ.
ಫಸಲು ತುಂಬಿದ ಭತ್ತದಗದ್ದೆ, ಕಬ್ಬಿನಗದ್ದೆ,ಅಡಿಕೆ ತೋಟಗಳಲ್ಲಿ ಆಯಕಟ್ಟಿನ ಸ್ಥಳವನ್ನು ಆಯ್ದುಕೊಂಡು ಸ್ವಚ್ಛಗೊಳಿಸಿ,ಸಗಣಿಯಿಂದ ಸಾರಿಸಿ,ರಂಗೋಲಿಯ ಚಿತ್ರಗಳಿಂದ ಶೃಂಗರಿಸಲಾಗುತ್ತದೆ. ಮಾವಿನ ಎಲೆ, ಬಾಳೆಕಂದು,ಹಣ್ಣಡಿಕೆ,ಹೂಗಳಿಂದ ಅಲಂಕರಿಸಲಾಗುತ್ತದೆ. ತೋರಣದ ಇಕ್ಕೆಲಗಳಲ್ಲಿ ತುಳಸಿ,ಚೆಂಡುಹೂವಿನ ಗಿಡಗಳನ್ನು ನೆಟ್ಟು ಪೂಜೆಗೆ ಅಣಿಗೊಳಿಸಲಾಗುತ್ತದೆ.
ಇದು ಪ್ರಕೃತಿಯನ್ನು ಆರಾಧಿಸುವ ಹಬ್ಬ. ಹುಣ್ಣಿಮೆಯ ಬೆಳದಿಂಗಳ ರಾತ್ರಿಯಲ್ಲಿ ಮಹಿಳೆಯರು ಮನೆಯನ್ನೆಲ್ಲ ಸ್ವಚ್ಛಗೊಳಿಸುತ್ತಾರೆ. ರಾತ್ರಿ ಪೂರ್ತಿ ಎಚ್ಚರವಿದ್ದೇ ಆಚರಿಸುವ ಹಬ್ಬವಿದು.ಅಕಸ್ಮಾತ್ ನಿದ್ರಿಸಿದರೆ ಫಲಭರಿತ ತೆನೆಗಳೆಲ್ಲಾ ಜೊಳ್ಳಾಗುತ್ತದೆಂಬ ನಂಬಿಕೆ ಇದೆ.ಭೂತಾಯಿಗೆ ಅವಳ ಮಡಿಲಿನಲ್ಲಿ ಬೆಳೆದ ೧೦೧ ತರಹದ ಬಗೆಬಗೆಯ ಸೊಪ್ಪನ್ನು ಹುಡುಕಿ,ಕೊಯ್ದು, ಆರಿಸಿ ಬೆರಕೆ ಸೊಪ್ಪಿನ ಪಲ್ಯ ತಯಾರಿಸಲಾಗುತ್ತದೆ. ಅಕ್ಕಿ,ಹೆಸರುಬೇಳೆ, ಅಮಟೆಕಾಯಿ, ವಿವಿಧ ಸೊಪ್ಪಿಗಳಿಂದ ಭೂಮಿಗೆ ಅರಚಲು”ಅಚ್ಚಂಬ್ಲಿ” ಯನ್ನು ತಯಾರಿಸಲಾಗುತ್ತದೆ.
ಚುಮುಗುಡುವ ಚಳಿಯಲ್ಲಿ, ಇಬ್ಬನಿ ತೊಟ್ಟಿಕ್ಕುತ್ತಿರುವ ನೀರವ ನಸುಕಿನಲ್ಲಿ ಭೂತಾಯಿಗೆ ಪೂಜೆ ಸಲ್ಲಿಸಲು ಜಮೀನಿಗೆ ತೆರಳುತ್ತಾರೆ.ಮೈತುಂಬ ಹಸಿರು ಹೊದ್ದು, ತಲೆಯ ಮೇಲೆ ಬಂಗಾರದ ತೆನೆಗಳ ಕಿರೀಟ ಧರಿಸಿ, ಬೆಳ್ಳಿಯಂತೆ ಹೊಳೆಯುವ ಇಬ್ಬನಿಯ ಹನಿಯನ್ನು ಒಡವೆಯಂತೆ ಪಸರಿಸಿಕೊಂಡು ಕಂಗೊಳಿಸುವ ಭೂಮಿಗೆ ಅರಿಶಿನ, ಕುಂಕುಮ,ಬಳೆದಾರ,ಕನ್ನಡಿಯನ್ನು ಬಾಗೀನ ರೂಪದಲ್ಲಿ ಅರ್ಪಿಸಿ, ಬಸುರಿಗೆ ಸೀಮಂತ ಮಾಡುವಂತೆ ಮಡಿಲು ತುಂಬುತ್ತಾರೆ.
ಭೂಮಿಯ ಬಸುರಿನ ಬಯಕೆ ಈಡೇರಿಸಲು ತಯಾರಿಸಿದ ಬೆರಕೆ ಸೊಪ್ಪಿನ ಪಲ್ಯ, ಕೊಟ್ಟೆ ಕಡಬನ್ನು ಜಮೀನಿನಲ್ಲಿ ಹೂತಿಡುತ್ತಾರೆ. ಅಚ್ಚಂಬ್ಲಿಯನ್ನು ಭೂಮಿಗೆ ಎರಚಲಾಗುತ್ತದೆ.ಒಟ್ಟಾರೆಯಾಗಿ ವರ್ಷವಿಡೀ ಅವಳ ಕೈ ತುತ್ತು ತಿಂದು, ಅವಳಿಗೆ ಪೂಜೆ ಸಲ್ಲಿಸಿ, ಭೂತಾಯಿಯನ್ನು ಆರಾಧಿಸಿ, ಭೂಮಿಹುಣ್ಣಿಮೆಯನ್ನು ಆಚರಿಸುವ ಮೂಲಕ ಅವಳಿಗೆ ಕೃತಜ್ಞತೆ ಸಲ್ಲಿಸಿದ ಸಾರ್ಥಕ ಭಾವ ರೈತರದ್ದು..!
– ಕವನ.ಬಿ.ಎಸ್ ,ತೀರ್ಥಹಳ್ಳಿ
ಉತ್ತಮ ಮಾಹಿತಿಯುಳ್ಳ ಲೇಖನ ಚೆನ್ನಾಗಿದೆ . ಧನ್ಯವಾದಗಳು
ಒಂದು ಒಳ್ಳೆಯ ಆಚರಣೆಯ ಬಗ್ಗೆ ಚಿಕ್ಕದಾಗಿ ಚೆನ್ನಾಗಿ ತಿಳಿಸಿದ್ದೀರಿ
ಉತ್ತಮವಾದ ಲೇಖನ.
ಕಣ್ಮರೆಯಾಗುತ್ತಿರುವ ಒಂದು ಪದ್ದತಿಯನ್ನು ಬಹಳ ಚೆನ್ನಾಗಿ ಪರಿಚಯಿಸಿದ್ದೀರಿ.
ಚೆಂದದ ಬರಹ.
ನಮಗರಿಯದ ವಿಶೇಷವಾದ ಭೂಮಿ ಪೂಜೆಯ ಲೇಖನ ಆಸಕ್ತಿದಾಯಕವಾಗಿದೆ.